Thursday, November 29, 2018

ಅಮ್ಮಾ ಎಂದರೆ...




ಬಾಲ್ಯದಲ್ಲಿನ  ಒಂದು ಘಟನೆ ನೆನಪಾಗುತ್ತದೆ.  ನಾವಾಗ ಪೈವಳಿಕೆ ಲಾಲ್ ಭಾಗ್ ನ ಬಾಡಿಗೆ ಮನೆಯಲ್ಲಿದ್ದೆವು. ಬಾಡಿಗೆ  ಮೆನೆ ಎಂದರೆ ಒಂದೇ ಕೊಣೆಯ ಮನೆ. ಅದಕ್ಕೆ ಹೊಂದಿಕೊಂಡು ಶಿಥಿಲವಾದ ಜೋಪಡಿಯಂತೆ ಇನ್ನೊಂದು ಮಾಡು ಇತ್ತು. ಅದನ್ನು ಮನೆ ಎಂದು ಕರೆಯುವುದು ಕಷ್ಟ. ಮನೆ ಎಂದು ಅಂದುಕೊಂಡರೆ ಸುಖ.  ನಮ್ಮ ಮನೆಯ ಒಂದಷ್ಟು ದೂರ ಶಾನುಭೋಗರ ಮನೆ. ಅವರ ಹೆಸರೇನು ಎಂದು ನೆನಪಿಲ್ಲ. ಹೆಸರಿಗಿಂತಲೂ ಶ್ಯಾನು ಭೋಗರ ಮನೆ ಎಂದೇ ಚಿರ ಪರಿಚಿತ.  ರಸ್ತೆಯ ಪಕ್ಕದಲ್ಲೇ ಇರುವ ಮನೆ ನಮ್ಮ ಮನೆಯಿಂದ ಒಂದಷ್ಟು ದೂರವೇ ಇತ್ತು. ಇಂದು ಆ ಮನೆಯ  ಪಕ್ಕದಲ್ಲಿ ಸಾಗುವಾಗ ಆ ವಯೋ ವೃದ್ಧ ಶ್ಯಾನುಭೋಗರ ನೆನಪಾಗುತ್ತದೆ.  ಅಲ್ಲಿಯ ಹಟ್ಟಿ(ಕೊಟ್ಟಿಗೆ)ಯಲ್ಲಿ ಬಹಳಷ್ಟು ದನಗಳಿದ್ದುವು.  ಅಲ್ಲಿಂದ ನಮ್ಮಮ್ಮ ಒಂದು ಕರುವನ್ನು ಕೊಂಡು ತಂದರು.   ಆಗ ಮನೆಯಲ್ಲಿ ಚಕ್ಕುಲಿ ವ್ಯಾಪಾರವಿತ್ತು. ಚಕ್ಕುಲಿಗೆ ಹಾಕುವ ಅಕ್ಕಿ ತೊಳೆದ ಕಲಗಚ್ಚು ನಾವು ಎಸೆಯುತ್ತಿದ್ದೆವು. ಆ ಕಲಗಚ್ಚನ್ನು ಕೊಡುವುದಕ್ಕಾಗಿಯೇ ಹಸು ಕರುವನ್ನು ತಂದಿದ್ದೆವು. ತಂದ ಕರುವನ್ನು ಕಟ್ಟುವುದಕ್ಕೆ ಹಟ್ಟಿ ಇಲ್ಲ. ಮನೆಯಲ್ಲಿ ಜಾಗವೂ ಇರಲಿಲ್ಲ. ಎದುರು ಇದ್ದ ಪುಟ್ಟ ಜಗಲಿಯಲ್ಲಿ ಕಟ್ಟುತ್ತಿದ್ದೆವು. ಅದೆಷ್ಟು ಸಂಭ್ರಮ? ಆಗೆಲ್ಲ  ಪುಟ್ಟ ಕರುವಿನ ಜತೆಯೇ ಮಲಗುತ್ತಿದ್ದೆವು.  ಆ ಕರುವನ್ನು ಬೆಳಗ್ಗೆ ಮೇಯುವುದಕ್ಕಾಗಿ ಹೊರಗೆ ಬಿಟ್ಟು ಬಿಡುತ್ತಿದ್ದೆವು. ಅಲ್ಲಿ ಸುತ್ತ ಮುತ್ತಲಿನವರೆಲ್ಲ ಹೀಗೆ ತಮ್ಮ ಹಸುಗಳನ್ನು ಬಿಟ್ಟು ಬಿಡುತ್ತಿದ್ದರು. . ಹತ್ತಿರದಲ್ಲೇ ಇದ್ದ ಬೋಳಂಗಳ ಮೈದಾನಿನ ಹುಲ್ಲುಗಾವಲಿಗೆ ಈ ದನಗಳೆಲ್ಲ ಹಿಂಡು ಹಿಂಡಾಗಿ ಹೋಗುತ್ತಿದ್ದವು.  ಬೋಳಂಗಳ ಹುಲ್ಲುಗಾವಲು ಹಸುಗಳ ಡೈನಿಂಗ್ ಟೇಬಲ್ ಇದ್ದಂತೆ.  ಸಾಯಂಕಾಲವಾಗುತ್ತಿದ್ದಂತೇ ಹೊಟ್ಟೆ ತುಂಬಿಸಿಕೊಂಡ ದನಗಳು ಮನೆಗೆ ವಾಪಾಸಾಗುತ್ತಿದ್ದವು.  ಅದೆಲ್ಲ ಭಾವನಾತ್ಮಕ ಸುಂದರ ದೃಶ್ಯಗಳು.

ನಮ್ಮ ಪುಟ್ಟ ಕರು, ಕೊಂಡು ತಂದ ಆರಂಭದ ಒಂದೆರಡು ವಾರ ಮನೆಗೆ ಬರುತ್ತಿರಲಿಲ್ಲ. ಆಗ ನಾವು ಅದನ್ನು ಹುಡುಕಿಕೊಂಡು ಹೋಗಿ ತರಬೇಕಾಗುತ್ತಿತ್ತು. ಒಂದು ದಿನ ಸಾಯಂಕಾಲ ನಾವು ಹೋದಾಗ ತಡವಾಗಿಬಿಟ್ಟಿತು. ಸಂಜೆ ಕತ್ತಲಾವರಿಸಿತ್ತು.  ಒಂದು ರೀತಿಯ ಆತಂಕ. ಆ ಪುಟ್ಟ ಕರು ಎಲ್ಲಿ ಹೋಗಿರಬಹುದು? ಯಾರಾದರೂ ಕದ್ದು ಒಯ್ದಿರಬಹುದೇ? ಈಗಿನಂತೆ ಅಂದು ದನಗಳ್ಳರ ಹಾವಳಿ ಇರಲಿಲ್ಲ. ಆದರೂ ನಮ್ಮ ಕರು ಎಲ್ಲಿ ಹೋಯಿತು?  ಬೋಳಂಗಳದ ಮೈದಾನು ಶಾಲಾ ಮೈದಾನು ಹೀಗೆ ಎಲ್ಲ ಕಡೆ ಹುಡುಕಿದೆ. ಕರು ಸಿಗಲಿಲ್ಲ. ಕೊನೆಯಲ್ಲಿ ಶಾನುಭೋಗರ ಮನೆಗೆ ಹೋದೆ. ಕೊನೆಯ ಪ್ರಯತ್ನವದು.  ಅಲ್ಲಿ ಮನೆಯ ಅಮ್ಮ ಹಟ್ಟಿಯ ಬಾಗಿಲು ತೆಗೆದು ತೋರಿಸಿದರು. ನಮ್ಮ ಪುಟ್ಟ ಗಂಗಮ್ಮ ತಾಯಿಯ ಜತೆಯಲ್ಲಿ ನಿಂತಿತ್ತು. ತಾಯಿ ಕರುವಿನ ಮೈ ನೆಕ್ಕುತ್ತಿತ್ತು.   ಛೇ...ಎಂತಹ ಸುಂದರ ದೃಶ್ಯವದು?   ಬೆಳಗ್ಗೆ ಕರುವನ್ನು  ಬಿಟ್ಟರೆ  ಅಲ್ಲಿ ಬರುತ್ತಿದ್ದ ದನದ ಹಿಂಡಿನ ಜತೆ ಅದು ತನ್ನ ತಾಯಿಯನ್ನು ಅರಸಿಕೊಳ್ಳುತ್ತಿತ್ತು. ಕಾಣುವುದಕ್ಕೆಲ್ಲ ಒಂದೇ ರೀತಿ ಇರುತ್ತಿದ್ದ ಕಪ್ಪು ಬಣ್ಣದ ದನಗಳ ನಡುವೆ ಅದಕ್ಕೆ ಅದರ ತಾಯಿ ಸಿಗುತ್ತಿತ್ತು. ಅದೆಷ್ಟೋ ಕರುಗಳನ್ನು ಹಾಕಿದ್ದ ಅ ಮಹಾ ಹಸು ತನ್ನ ಕಂದನನ್ನು ನೆಕ್ಕುತ್ತಾ ಇತ್ತು.  ನಿಜಕ್ಕೂ ಅದು ನಮ ಆಶ್ಚರ್ಯದ ಸಂಗತಿಯಾಗಿತ್ತು. ಹುಲ್ಲು ಮೇಯಲು ಹೋದ ಕರು ತಾಯಿಯನ್ನು ಹುಡುಕಿ  ಮತ್ತೆ ಪುನಃ ಸಾಯಂಕಾಲ ತಾಯಿ ಜತೆಯಲ್ಲೇ ಪೂರ್ವಾಶ್ರಮಕ್ಕೆ ಬರುತ್ತಿತ್ತು.  ತಾಯಿಯ ಜತೆ ಇದ್ದ ಹಸುಕರುವನ್ನು ತರುವುದಕ್ಕೆ ಮನಸ್ಸಾಗುತ್ತಿರಲಿಲ್ಲ. ಆದರೆ ತರದೇ ಬೇರೆ ವಿಧಿ ಇರಲಿಲ್ಲ. ಕೈಯಲ್ಲಿದ್ದ ಹಗ್ಗವನ್ನು ಹಸುವಿನ ಕೊರಳಿಗೆ ಬಿಗಿಯುತ್ತಿದ್ದಂತೆ ಅದು ವಿಧಿ ಇಲ್ಲದೆ ನಮ್ಮನ್ನು ಅನುಸರಿಸುತ್ತಿತ್ತು.  ಆ ಕರು ದೊಡ್ಡದಾಗಿ  ಹಸುವಾಗಿ ಹಲವು ಸಲ ಕರು ಹಾಕುವ ವರೆಗೂ ನಮ್ಮ ಜತೆಯಲ್ಲೇ ಇತ್ತು.  ಬಾಲ್ಯದ ನಮ್ಮ ಶರೀರ ಒಂದಷ್ಟು ದಿನ ಆ ಹಾಲನ್ನೇ ಹೀರಿ ಬೆಳೆದಿತ್ತು. 

ಆಗತಾನೇ ಹುಟ್ಟಿದ ಮಗು ತಾಯಿಯನ್ನು ಕಳೆದುಕೊಳ್ಳುತ್ತದೆ. ಆ ಮಗು ಒಂದೇ ಸವನೆ ಅಳುತ್ತದೆ. ಮನೆಯವರು ಎಷ್ಟೇ ದುಡ್ಡು ಕೊಟ್ಟು ಹಾಲು ತಂದು ಬಾಟಲಿಗೆ ಹಾಕಿ ಕೊಟ್ಟರೂ ಮಗು ಕುಡಿಯುವುದಿಲ್ಲ. ಅಳು ನಿಲ್ಲಿಸುವುದಿಲ್ಲ. ಪಕ್ಕದ ಮನೆಯ   ಹೆಂಗಸು ಮನೆಯೊಳಗಿನ  ಸಮಸ್ಯೆ ತಿಳಿದು ಬರುತ್ತಾಳೆ. ಪುಟ್ಟ ಶಿಶುವಿಗೆ ತನ್ನ ಎದೆ ಹಾಲನ್ನು ಕುಡಿಸುತ್ತಾಳೆ ಮಗು ಅಳು ನಿಲ್ಲಿಸುತ್ತದೆ. ಆ ತೊಟ್ಟು ಹಾಲಿನ ಮೌಲ್ಯ ಮಗುವಿಗೂ ತಿಳಿಯುವುದಿಲ್ಲ. ಕೊಟ್ಟ ಹೆಂಗಸೂ ಲೆಕ್ಕ ಹಾಕುವುದಿಲ್ಲ. ಲೆಕ್ಕವಿಲ್ಲದೇ ಇದ್ದರೆ ಎನಂತೆ?   ಅದಕ್ಕೆ ಮೌಲ್ಯವೂ ಇಲ್ಲವೇ?  ವಾಸ್ತವದಲ್ಲಿ ಮೌಲ್ಯ ನೋಡದೇ ಇದ್ದರೂ ಮೌಲ್ಯವನ್ನು ತಿಳಿಯುವ ಆವಶ್ಯಕತೆಯೂ  ಇರುವುದಿಲ್ಲ.  ಆ ಅವಶ್ಯಕತೆ ಒದಗಿ ಬಂದರೆ ಅದು ಆತ್ಮ ಸಾಕ್ಷಿ.  ಈ ಘಟನೆ ಮಿತ್ರನ ಮನೆಯಲ್ಲಿ ಕಣ್ಣಾರೆ ಕಂಡಿದ್ದೆ. ತಾಯಿ ಮಗು ಈ ಪ್ರಪಂಚ ಕಂಡ ಅತ್ಯಂತ ನಿಗೂಢ ಸಂಬಂಧ.

ಮಂಗಳೂರಿನ ಮಿಲಾಗ್ರಿಸ್ ಹತ್ತಿರದ ಬಸ್ ಸ್ಟಾಪ್ ನಲ್ಲಿ ತಲಪಾಡಿಗೆ ಹೋಗುವ  ನಲ್ವತ್ತೆರಡು ನಂಬರ್ ಬಸ್ ಕಾಯುತ್ತಾ   ನಿಂತಿದ್ದೆ.  ಅದು ಎಪ್ಪತ್ತರ ದಶಕದ ಸಮಯ.  ಊರಿಗೆ ಅಂದರೆ ಪೈವಳಿಕೆಗೆ ಹೋಗಬೇಕೆಂದರೆ ತಲಪಾಡಿಗೆ ಹೋಗಿ ಅಲ್ಲಿಂದ ಬೇರೆ ಬಸ್ಸು ಹಿಡಿದು ಹೋಗಬೇಕಿತ್ತು.  ಆಗ ತಲಪಾಡಿಗೆ ಹೋಗುವ ಬಸ್ ಗಳು ಈಗಿನಂತೆ ಲೈಟ್ ಹೌಸ್ ಹಿಲ್ ಗುಡ್ಡ ಹತ್ತಿ ಹೋಗುತ್ತಿರಲಿಲ್ಲ. ಬದಲಿಗೆ ಕೆಳಗಿನಿಂದ ಅರವಿಂದ್ ಮೋಟಾರ್ಸ್ ಪಕ್ಕದಲ್ಲೇ ಹೋಗಿ ಜ್ಯೋತಿ ವೃತ್ತ ಸೇರುತ್ತಿತ್ತು.  ಸಾಮಾನ್ಯವಾಗಿ ಸ್ಟೇಟ್ ಬ್ಯಾಂಕ್ ಹೋಗಿ ಅಲ್ಲಿಂದಲೇ ಬಸ್ ಹಿಡಿಯುವ ನಾನು ಅಂದು ಮಿಲಾಗ್ರಿಸ್ ಬಳಿ ನಿಂತಿದ್ದೆ. ನಾವು ಸಣ್ಣ ಮಕ್ಕಳು ಮನೆಯಿಂದ ಹೊರಡುವಾಗಲೇ ಬಸ್ ಹೊರಡುವಲ್ಲಿಂದ ಅಂದರೆ ಸ್ಟೇಟ್ ಬ್ಯಾಂಕ್ ನಿಂದ ಬಸ್ಸು ಹಿಡಿಯುವಂತೆ ಹೇಳುತ್ತಿದ್ದರು. ಅದೇ ನಾವು ಹಿರಿಯವರೊಂದಿಗೆ ಬಂದರೆ ಅವರು ಎಲ್ಲೆಂದರಲ್ಲಿ ಹತ್ತಿಕೊಂಡು ಹೋಗುವುದನ್ನು ಕಂಡು ನಾನೂ ದೊಡ್ಡವನಾಗಿದ್ದೇನೆ ಎಂಬ ಭ್ರಮೆಯಲ್ಲಿ ಸ್ಟೇಟ್ ಬ್ಯಾಂಕ್ ಹೋಗದೇ ಇಲ್ಲಿ ಕಾದು ಕುಳಿತಿದ್ದೆ. ತುಸು ಹೊತ್ತಿನಲ್ಲೇ ನಲ್ವತ್ತೆರಡು ನಂಬರ್ ನ ಸಿಟಿ ಬಸ್ ಬಂತು.  ಬಸ್ ಬಹಳಷ್ಟು ಖಾಲಿ ಇದ್ದದ್ದು ನೋಡಿ ಸಂತೋಷವಾಯಿತು. ಕಿಟಿಕಿ ಪಕ್ಕದ ಸೀಟ್ ನಲ್ಲಿ ಕುಳಿತೆ. ಬಸ್ ನಗರ ಬಿಟ್ಟು  ನೇತ್ರಾವತಿ ಹೊಳೆ ದಾಟಿದರೂ ಬಸ್ ಬಹಳಷ್ಟು ಖಾಲಿಯಾಗಿಯೇ ಇತ್ತು. ಆಗ ಬಸ್ ನಲ್ಲಿ ಕೆಲವರು, ಕೇರಳ ಬಂದ್  ನ ಬಗ್ಗೆ ಮಾತನಾಡುತ್ತಿದ್ದರು. ಹೌದು,  ಅಂದು ಕೇರಳ ಬಂದ್, ಮತ್ತು  ಬಸ್ ಸ್ಟ್ರೈಕು. ತಲಪಾಡಿಯಿಂದ ಆಕಡೆ ಹೋಗುವುದಕ್ಕೆ  ಬಸ್ಸುಗಳು ವಾಹನಗಳು ಇರಲಿಲ್ಲ. ಅಷ್ಟರವೆರೆಗೂ ಖುಷಿಯಲ್ಲಿದ್ದ ನನಗೆ ಗಾಬರಿ ಶುರುವಾಯಿತು. ಅರೇ ತಲಪಾಡಿಯಿಂದ ಮುಂದೆ ಹೇಗೆ? ಕೋಟೇ ಕಾರು ಬೀರಿ ಕಳೆದು ತಲಪಾಡಿ ಹತ್ತಿರವಾಗುತ್ತಿದ್ದಂತೆ ಬಸ್  ಇರಲಪ್ಪಾ ಅಂತ ಬೇಡಿಕೊಂಡೆ. 

ಬಸ್ ತಲಪಾಡಿಗೆ ಬಂದು ತಲಪಿದಾಗ ಆಕಾಶವೇ ಕಳಚಿ ಬಿದ್ದಂತಾಯಿತು. ಊಹಿಸಿದಂತೆ ಅತ್ತ ಕೇರಳಕ್ಕೆ ಹೋಗುವ ಬಸ್ಸು ಇರಲಿಲ್ಲ. ಬಸ್ಸು ಇಳಿದು ಸುತ್ತ ಮುತ್ತ ನೋಡಿದೆ. ಅದಾಗಲೇ ಬಿಸಿಲು ಪ್ರಖರವಾಗಿತ್ತು. ಏನು ಮಾಡುವ? ನಡೆಯದೆ ಬೇರೆ ವಿಧಿ ಇರಲಿಲ್ಲ. ಯೋಚಿಸಿದಷ್ಟು ಮತ್ತೂ ಹೊತ್ತು ತಡವಾಗುವುದೇ ವಿನಾ ಸಮಸ್ಯೆ ಪರಿಹಾರವಾಗುವುದಿಲ್ಲ. ತಲಪಾಡಿಯಿಂದ ಪೈವಳಿಕೆ ಕಡೆಗೆ ನಡೆಯುವುದಕ್ಕೆ ಶುರು ಮಾಡಿದೆ.  ಅದು ದೂರ ಸರಿ ಸುಮಾರು ಇಪ್ಪತ್ತು ಕಿಲೋಮೀಟರ್. ಚಿಕ್ಕ ಬಾಲಕ ನಾನು. ರಸ್ತೆಯಲ್ಲಿ ವಾಹನ ಸಂಚಾರವೇ ಇಲ್ಲ. ಅಕ್ಕ ಪಕ್ಕದಲ್ಲಿ ಅಂಗಡಿಗಳೂ ಇರಲಿಲ್ಲ. ರಸ್ತೆಯಲ್ಲಿ ಅಲ್ಲಲ್ಲಿ ಕಲ್ಲು ಮರ ಅಡ್ಡವಿರಿಸಿದ್ದರು.   ತುಸು ದೂರ ನಡೆಯುವಷ್ಟರಲ್ಲಿ ಬಾಯಾರಿಕೆಯಾಗುವುದಕ್ಕೆ ಆರಂಭಿಸಿತು.   ಅಂಗಡಿ ಹೋಟೇಲು ಇಲ್ಲವಾದರೆ ನೀರು ಎಲ್ಲಿಂದ? ಈಗಿನಂತೆ ನೀರಿನ ಬಾಟಲ್ ಜಮಾನವಲ್ಲ.  ಒಂದು ತಾಸು ನಡೆದಾದ ಮೇಲೆ ರಸ್ತೆಯಿಂದ ಬಹುದೂರ ಒಂದು ಗೂಡಂಗಡಿ ಕಂಡು ಅತ್ತ ಹೋದರೆ ಅದು ಮುಸ್ಲಿಂ ಬ್ಯಾರಿಯ ಅಂಗಡಿ. ಸಣ್ಣ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದ. ನಾನು ಬಾಳೆ ಹಣ್ಣು ತೆಗೆದುಕೊಂಡು, ನೀರು ಇದೆಯಾ ಅಂತ ಕೇಳಿದರೆ ಆತ ಹಿಂದೆ ಮನೆಯ ಕಡೆ ಕೈ ತೋರಿಸಿದ.  ಅಂಗಡಿಯ ಹಿಂದೆ ಅವನದ್ದೇ ಮನೆ ಇತ್ತು. ಅಲ್ಲಿ ನೀರು ಕೇಳಿದೆ. ಮನೆಯಾಕೆ ವೃದ್ದೆ ತಂಬಿಗೆಯಲ್ಲಿ ನೀರು ತಂದಿಟ್ಟಳು ಒಂದೆರಡು ಲೋಟ ನೀರು ಕುಡಿದು ಬಾಳೆಹಣ್ಣು ತಿನ್ನುತ್ತಿದ್ದಂತೆ ದಣಿವಾರಿಸಿತು. ಈಗ ಆ ಅಂಗಡಿಯೂ ಇಲ್ಲ. ಆ ಮನೆಯೂ ಇಲ್ಲ. ಆದರೂ ಆ ಹಾದಿಯಲ್ಲಿ ಹೋಗುತ್ತಿರಬೇಕಾದರೆ ಆ ಘಟನೆ ನೆನಪಾಗುತ್ತದೆ. ಆ ಉರಿ ಬಿಸಿಲಲ್ಲಿ ಕುಡಿದ ತಂಬಿಗೆ ನೀರು ಅದು ಇಂದೂ ಹೃದಯದಲ್ಲಿ ತೇವವನ್ನು ಉಳಿಸಿಕೊಂಡಿದೆ.  ಈ ಘಟನೆಗೂ ಉಳಿದ ಘಟನೆಗೂ ಏನೂ ಹೊಂದಿಕೆ ಇಲ್ಲ. ಆದರೂ ಬಿಸಿಲ  ಝಳಕ್ಕೆ ತಂಪೆರೆದ ಆ ಹೆಣ್ಣನ್ನು ನಾನು ಮರೆಯಲಾರೆ.

ಅಂದು ಬಾಯಾರಿಕೆಗೆ ನೀರು ಎಲ್ಲಿಂದ ಬಂತು? ಹೇಗೆ ಸಿಕ್ಕಿತು ? ನೀರಿನ ಮೂಲದ ಬಗ್ಗೆ ಮನಸ್ಸು ಯೋಚಿಸಲಿಲ್ಲ. ಒಣಗಿದ ಗಂಟಲಿಗೆ ಸುರಿದ ನೀರು ಜಗತ್ತಿನ ಎಲ್ಲ ಸುಖವನ್ನೂ ನೀಡಿತ್ತು. ಈಗ ಅಲ್ಲೇನಿಂತು,   ಮಿನರಲ್ ವಾಟರ್,  ಎಳನೀರೋ ದುಡ್ಡು ಕೊಟ್ಟು ಕುಡಿಯಬಹುದು. ಅದರೂ ಅಂದು ಸಿಕ್ಕಿದುದರ ಮೌಲ್ಯ ಅದನ್ನು ಸ್ವಯಂ ನಾನೇ ನಿರ್ಧರಿಸಬೇಕು. ಇದನ್ನೇ ಆತ್ಮ ಸಾಕ್ಷಿ ಎನ್ನುವುದು.  ಇದು ಕೇವಲ ನನ್ನ ಅನುಭವಕ್ಕೆ ಸೀಮಿತ.

ರಾಮಾಯಣ ಬರೆದ ವಾಲ್ಮೀಕಿಯ ಕಥೆ ಯಾರಿಗೆ ಗೊತ್ತಿಲ್ಲ?  ರಾಮ ನಾಮ ಸಾಕ್ಷಾತ್ಕಾರದಲ್ಲಿ ಆತ್ಮ ಸಾಕ್ಷಿಯನ್ನು ಕಂಡ ಪುಣ್ಯಾತ್ಮ.  ಕಾಡಿನಲ್ಲಿ ಅತ್ತಿತ್ತ ಹೋಗುವವರನ್ನು ಹಿಂಸಿಸಿ ಸಂಪತ್ತನ್ನು ಸೂರೆ ಹೊಡೆದು ಮನೆಯಲ್ಲಿ ಹೆಂಡತಿ ಮಕ್ಕಳಿಗೆ ತಂದು ಕೊಡುತ್ತಿದ್ದ.  ಗಂಡ ಎಲ್ಲಿಂದ ಹೇಗೆ ತಂದೆ?  ಎಂದು ಹೆಂಡತಿ ಕೇಳಲಿಲ್ಲ. ಮಕ್ಕಳು ಅಪ್ಪ ಏನು ಮಾಡುತ್ತಾನೆ ಎಂದೂ ನೋಡಲಿಲ್ಲ. ಬಂದದ್ದನ್ನು ಉಂಡು ಸುಖವಾಗಿದ್ದರು. ಕೊನೆಯಲ್ಲಿ ನಾರದ ಮುನಿಗಳು ಬರುತ್ತಾರೆ. ಮತ್ತೆ ಗೊತ್ತೇ ಇದೆ. ತಾನು ತನ್ನ ಹೆಂಡತಿ ಮಕ್ಕಳಿಗಾಗಿ ದರೋಡೆ ಮಾಡಿದ್ದರೂ ಸಿಕ್ಕಿದ ಸಂಪತ್ತಿನಲ್ಲಿ ಪಾಲು ಪಡೆಯುವ ಹೆಂಡತಿ ಗಳಿಸಿದ ಪಾಪಕ್ಕೆ ಕೇವಲ ತನ್ನೇನ್ನೇ ಹೊಣೆಯಾಗಿಸುತ್ತಾಳೆ. ಪಾಪದ ಉರುಳು ತನ್ನ ಕೊರಳನ್ನು ಮಾತ್ರ ಬಿಗಿಯುತ್ತದೆ. ಅದನ್ನು ಕಟ್ಟಿದ ಮರವೋ ಗೆಲ್ಲೋ ಯಾವುದಕ್ಕೂ ಪಾಪಾಭೀತಿ ಇರುವುದಿಲ್ಲ.  ನಾರದನಿಂದ ಜ್ಞಾನೋದಯವಾಗುತ್ತದೆ.  ಆತ್ಮ ಸಾಕ್ಷಿ ಜಾಗೃತವಾಗುತ್ತದೆ. ವ್ಯಾವಹಾರಿಕ ಪ್ರಪಂಚದ ಸತ್ಯ ಇದು. ಎಲ್ಲ ಸಂಭಂಧಗಳಲ್ಲಿ  ವ್ಯವಹಾರ ನೈಪುಣ್ಯತೆ ಮಾತ್ರವೇ ಇರುತ್ತದೆ.  ಎಲ್ಲ ಸಂಬಂಧಗಳೂ ಈ  ಒಂದು ಪರಿಧಿಯೊಳಗೇ ವ್ಯವಹರಿಸುತ್ತದೆ. ಆದರೂ ತಾಯಿ ಮಗುವಿನ ಸಂಬಂಧ ಈ ವ್ಯವಹಾರಗಳನ್ನೆಲ್ಲ ಮೀರಿ ನಿಲ್ಲುವಂತೆ ಭಾಸವಾಗುತ್ತದೆ.  ಅಲ್ಲಿ ವ್ಯಾವಹಾರಿಕ ಮೌಲ್ಯವಿರುವುದಿಲ್ಲ. ಮಲಗಿದಲ್ಲೇ ಮಲ ವಿಸರ್ಜಿಸಿದ ಮಗುವನ್ನಾಗಲೀ ಮನುಷ್ಯನನ್ನೇ ಆಗಲಿ ತಾಯಿಯಾದವಳು ಹೇಸಿಗೆ ಪಟ್ಟುಕೊಳ್ಳುವುದಿಲ್ಲ. ಸಾಯೋವರೆಗೂ ತನ್ನ ಜೀವ ಭಾವದ ಭಾಗವಾಗಿ ಆ ಮಗುವನ್ನು ಕಾಣುತ್ತಾಳೆ.  ಹಾಗಾಗಿ ಏನೇ ಆದರೂ ಪ್ರತಿಯೊಬ್ಬನಿಗೂ ತಾಯಿ ಮುಂದೆ ನಿಂತಾಗ “ಆತ್ಮಸಾಕ್ಷಿ” ಜಾಗ್ರತವಾಗುತ್ತದೆ.  ಅಮ್ಮನ್ನ ಕಣ್ಣೀರನ್ನು ಕಂಡೇ  ಆಟದ ಕಡು ದುರುಳ ಮಹಿಷಾಸುರ ಸ್ವರ್ಗಲೋಕಕ್ಕೆ ಧಾಳಿ ಇಡುತ್ತಾನೆ. ಅಮ್ಮ ಎಂದರೆ ಅದು ತುಲನೆ ಮಾಡಲಾಗದ ವಸ್ತು, ಕಲ್ಪಿಸಲಾಗದ ಕಲ್ಪನೆ. ನಿಲುಕಲಾರದ ಭಾವ.


Wednesday, November 21, 2018

ಆರಾಧಿಸುವೆ ಮದನಾರಿ....

"ಆರಾಧಿಸುವೆ ಮದನಾರಿ ಆದರಿಸೂ ನೀ ದಯೆ ತೋರಿ...", ಈ ಜನಪ್ರಿಯ ಗೀತೆಯನ್ನು ಇತ್ತೀಚೆಗೆ   ರಿಯಾಲಿ
ಟಿ ಶೋ ಒಂದರಲ್ಲಿ ಗಾಯಕನೊಬ್ಬ ಹಾಡಿದ. ಹಾಡು ಮುಗಿಯುತ್ತಿದ್ದಂತೆ ಕಿವಿಗಡಚಿಕ್ಕುವಂತೆ ಚಪ್ಪಾಳ ಶಿಳ್ಳೆ ಮೊಳಗಿತು. ಜನಪ್ರಿಯವಾದ ಹಾಡೆಂದರೆ ಟಿ. ವಿ ಯಲ್ಲಿ ಇದು ಸಾಮಾನ್ಯ. ಕೆಲವೊಮ್ಮೆ ಈ ಚಪ್ಪಾಳೆ ದೃಶ್ಯವನ್ನು ಮಾತ್ರಾ ಚಿತ್ರೀಕರಿಸಿ ಅದನ್ನು ಬೇಕಾದಲ್ಲಿಗೆ ಜೋಡಿಸಿ ಪ್ರಸಾರ ಮಾಡುತ್ತಾರೆ. ಇದನ್ನು ತಿಳಿಯದ ಪ್ರೇಕ್ಷಕ ಮೂರ್ಖನಾಗುತ್ತಾನೆ. ಹೀಗಿದ್ದರೂ ಈ ಹಾಡು ಅತ್ಯಂತ ಸರ್ವಾಂಗ ಸುಂದರ ಅನುಮಾನವಿಲ್ಲ.  ಇದು ಹೆಸರಾಂತ ಚಲನಚಿತ್ರ "ಬಬ್ರುವಾಹನ" ಚಿತ್ರದ ಜನಪ್ರಿಯ ಗೀತೆ. ಹಿನ್ನೆಲೆಯಲ್ಲೂ ಮುನ್ನೆಲೆಯಲ್ಲೂ ಅಂದರೆ ಚಿತ್ರದಲ್ಲೂ ಡಾ| ರಾಜ್ ಕುಮಾರ್ ಹಾಡಿದ್ದಾರೆ. ಅಧ್ಬುತವಾಗಿ ಚಿತ್ರಿಸಲ್ಪಟ್ಟ ಈ ಗೀತೆ ಅಂದು ಬಹಳ ಜನಪ್ರಿಯವಾಗಿತ್ತು.  ಈದೀಗ ಯುವ ಗಾಯಕನೊಬ್ಬ ಸುಂದರವಾಗಿ ಹಾಡಿದ. ಸಹಜವಾಗಿ ಕಾರ್ಯಕ್ರಮದ ನಿರ್ಹಾಕಿ ಕೇಕೆ ಹಾಕಿ ಅಭಿನಂದನೆ ಸಲ್ಲಿಸುತ್ತಾಳೆ. ಜತೆಗೆ ಅಲ್ಲಿದ್ದ ತೀರ್ಪುಗಾರರೂ ತಮ್ಮ ಅಭಿಪ್ರಾಯವನ್ನು ಹರಿಯಬಿಡುತ್ತಾರೆ. ಆದರೆ,

ಆರಾಧಿಸುವೆ ಮದನಾರಿ ಎಂಬ ಹಾಡು... ವರನಟ, ಪದ್ಮಭೂಷಣ   ಡಾ . ರಾಜ್ ಕುಮಾರ್ ಎಂದು  ಒಂದಷ್ಟು ಹೊಗಳಿಕೆ ಹಿರಿಯ ನಟನಿಗೆ ಸಲ್ಲಿಸುತ್ತಾಳೆ. ಒಂದು ಐದಾರು ಸಲವಾದರೂ ರಾಜ್ ಕುಮಾರ್ ಎಂದು ಹೊಗಳುತ್ತಾಳೆ.  ರಾಜ್ ನಟಿಸಿರುವ ಬಬ್ರುವಾಹನ  ಚಲನ ಚಿತ್ರ ಎಂಬುದಾಗಿಯೂ ಹೊಗಳುತ್ತಾಳೆ. ಜನಪ್ರಿಯ ನಟನ ಹೆಸರು ಹೇಳಿದಂತೆಲ್ಲ ಮತ್ತೆ ಚಪ್ಪಾಳೆಯ ಸುರಿಮಳೆ.  ಈ ಯಥಾವತ್ ಚಪ್ಪಾಳೆಯೂ ಪ್ರತ್ಯೇಕವಾಗಿ ಚಿತ್ರಿಕರಿಸಿರುವುದು ಹಲವು ಸಲ ವ್ಯಕ್ತವಾಗುತ್ತದೆ. ಇರಲಿ  ಇದರ ಬಗ್ಗೆ ಆಕ್ಷೇಪವೇನಿಲ್ಲ. ಹೊಗಳ ಬೇಕಾದ ವಿಷಯಗಳು ಹೊಗಳಲೇಬೇಕು. ಪ್ರಶಂಸಾರ್ಹವಾದ ವಿಚಾರಗಳನ್ನು ಮುಕ್ತವಾಗಿ ಪ್ರಶಂಸಿಸುವುದು ಪ್ರಾಮಾಣಿಕತೆಯ ಲಕ್ಷಣ. ಆದರೆ ಒಂದು ವಿಚಾರದ ಬಗ್ಗೆ ಹೊಗಳುವಾಗ ಆ ವಿಚಾರದ ಬಗ್ಗೆ ಗಹನವಾಗಿ ತಿಳಿದುಕೊಳ್ಳಬೇಕು. ಮತ್ತು ಅದಕ್ಕೆ ಪ್ರಾಮಾಣಿಕವಾದ ನ್ಯಾಯವನ್ನು ಒದಗಿಸಬೇಕು. ಇಲ್ಲವಾದರೆ ನಮ್ಮ ಹೊಗಳಿಗೆ ಎಂಬುದು ಪೂರ್ವಾಗ್ರಹ ಪ್ರೇರಿತವಾಗಿ ಯಾವುದೋ ಒಂದು ಸ್ವಾರ್ಥದಿಂದ ಕೂಡಿರುತ್ತದೆ ಎಂಬುದೇ ಸತ್ಯ.

ಈ ಮದನಾರಿ ಹಾಡನ್ನು ಶ್ರೀ ಡಾಕ್ಟರ್ ರಾಜ್ ರವರು ಅಧ್ಬುತವಾಗಿ ಸುಂದರವಾಗಿ ಹಾಡಿದ್ದಾರೆ ಅನುಮಾನವೇ ಇಲ್ಲ. ಇಂದಿಗೂ ಆ ಹಾಡನ್ನು ಕೇಳುವಾಗ ತುಂಬ ಸಂತೋಷವಾಗುತ್ತದೆ. ಆದರೆ ಹೊಗಳಿಕೆ ಎಂಬುದು ಕೇವಲ ರಾಜ್ ಕುಮಾರ್ ಗೆ ಮಾತ್ರ ಮೀಸಲಾಗಿರಿಸಿದರೆ ಆ ಹಾಡಿಗೆ ಸಂಪೂರ್ಣ ನ್ಯಾಯ ಸಲ್ಲುವುದಿಲ್ಲ.   ಈ ಹಾಡನ್ನು ರಚಿಸಿದವರು ಶ್ರೀ  ಹುಣಸೂರು ಕೃಷ್ಣ ಮೂರ್ತಿಯಾದರೆ ಈ ಹಾಡನ್ನು ಸಂಗೀತ ನೀಡಿ ಸಂಯೋಜಿಸಿದವರು ಪ್ರಸಿದ್ದ ಸಂಗೀತ ನಿರ್ದೇಶ ಟಿ. ಜಿ. ಲಿಂಗಪ್ಪ ಅವರು.  ಅಲ್ಲಿ ಸೇರಿದ ಅಷ್ಟು ಜನ ತೀರ್ಪುಗಾರರಾಗಲಿ, ಕಾರ್ಯಕ್ರಮದ ನಿರ್ವಾಹಕಿಯಾಗಲಿ ಇತರರೇ ಆಗಲಿ ಒಂದೇ ಒಂದು ಸಲವೂ ಹಾಡಿನ ಸಂಗೀತ ನಿರ್ದೇಶಿಸಿದ ಟಿ. ಜಿ ಲಿಂಗಪ್ಪ ಅವರ ಹೆಸರನ್ನು ಹೇಳಲಿಲ್ಲ. ಮಾತ್ರವಲ್ಲ ಹಾಡನ್ನು ರಚಿಸಿದ ಕವಿ ಹುಣಸೂರು ಅವರ ಹೆಸರನ್ನೂ ಹೇಳಲಿಲ್ಲ. ಇನ್ನೊಂದು ಪ್ರಮುಖ ಅಂಶವೆಂದರೆ ಅಲ್ಲಿ ಸೇರಿರುವವರು ಅಷ್ಟೂ ಮಂದಿ ಸ್ವತಃ ಗಾಯಕರು ಮತ್ತು ಸಂಗೀತಗಾರರೂ ಆಗಿರುತ್ತಾರೆ. ಹಾಗಾದರೆ ಇವರ ಹೊಗಳಿಕೆಯ ಹಿಂದೆ ಒಂದು ಸ್ವಾರ್ಥವಿದೆ ಎಂದರೆ ಅದನ್ನು ತಪ್ಪು ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಸ್ವತಹ ಕಲಾವಿದರೇ ಹೀಗೆ ಪೂರ್ವಾಗ್ರಹ ಪ್ರೇರಿತರಾಗಿ ವರ್ತಿಸಿದರೆ ಅವರು ಅನುಸರಿಸುವ ಆರಾಧಿಸುವ ಕಲಾಮಾತೆಗೆ ಗೌರವ ಸಲ್ಲಿಸಿದಂತಾಗುವುದೇ?

ಒಬ್ಬ ಗಾಯಕ ಒಂದು ಹಾಡನ್ನು ಹಾಡುತ್ತಾನೆ ಎಂದಾದರೆ ಆ ಹಾಡಿನ ಹಿಂದೆ ಹಲವರ ಪರಿಶ್ರಮವಿರುತ್ತದೆ. ಎಲ್ಲರನ್ನೂ ಸ್ಮರಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಆ ಹಾಡಿನ ಸಂಗೀತವನ್ನು ಸಂಯೋಜನೆ ಮಾಡಿ ನಿರ್ದೇಶಿಸಿದ ಕಲಾವಿದನಿಗೆ ಒಂದು ಗೌರವ ಸಲ್ಲಿಸದೇ ಇರುವುದು ನ್ಯಾಯವೆನಿಸುವುದಿಲ್ಲ. ಯಾರೋ ಓರ್ವ ಸಾಮಾನ್ಯ ಮನುಷ್ಯ ಕೇಳುಗನಾದವನು  ಹೀಗೆ ಮಾಡಿದರೆ ಮನ್ನಿಸಬಹುದು ಆದರೆ, ಸ್ವತಃ ಕಲಾವಿದರಾಗಿರುವ ವ್ಯಕ್ತಿಗಳು ಹೀಗೆ ವರ್ತಿಸುವುದು ಸರಿಯಲ್ಲ. 

ಒಂದು ಹಾಡಿಗೆ ಸಂಬಂಧಿಸಿದಂತೆ ಸಂಗೀತ ನಿರ್ದೇಶಕ ಮತ್ತು ಹಾಡನ್ನು ಬರೆದ ಕವಿ ತಂದೆ ತಾಯಿ ಸ್ಥಾನದಲ್ಲಿರುತ್ತಾರೆ. ಆನಂತರದ  ಮಗುವಿನ  ಸ್ಥಾನ ಗಾಯಕನಿಗೆ.  ಮಗು ತನ್ನ ಹೆತ್ತವರನ್ನು ಹೇಗೆ ಶಾಶ್ವತ ಗೊಳಿಸುತ್ತದೆಯೋ ಹಾಗೆ ಗಾಯಕ . ಆ ಹಾಡನ್ನು ಸುಂದರವಾಗಿ ಹಾಡಿ ಅಪ್ಪ ಅಮ್ಮನ ಹೆಸರನ್ನು ಶಾಶ್ವತಗೊಳಿಸಬೇಕು. ಆದರೆ ಇಲ್ಲಿ ಮಗುವನ್ನು ಹೊಗಳಿ ಅಟ್ಟಕ್ಕೇರಿಸಿದರೆ ಹುಟ್ಟಿಗೆ ಕಾರಣವಾದ ಅಪ್ಪ ಅಮ್ಮನನ್ನೇ ಮರೆತುಬಿಡುತ್ತಾರೆ. ಅಲ್ಲಿ ಹಾಡಿದ ಸ್ಪರ್ಧಿಯಾದ ಗಾಯಕನೊಬ್ಬ ತನಗೊದಗಿದ ಆ ಅವಕಾಶಕ್ಕೆ ತನ್ನ ಅಪ್ಪ ಅಮ್ಮನನ್ನು ಸ್ಮರಿಸುವಾಗ ತಾನು ಹಾಡಿದ ಹಾಡಿನ ನೈಜ ಅಪ್ಪ ಅಮ್ಮನನ್ನು ಮರೆತಿರುತ್ತಾನೆ.  ಯಾಕೆಂದರೆ ಗಾಯಕನನ್ನು ಹೊಗಳಿದರೆ ಪ್ರೇಕ್ಷಕನ ಭಾವನೆ ಕೆರಳುತ್ತದೆ. ಪ್ರೇಕ್ಷಕ ಹುಚ್ಚೆದ್ದು ಕೆರಳಿದರೆ ಕಾರ್ಯಕ್ರಮ ಯಶಸ್ವಿಯಾದಂತೆ. ವಾಸ್ತವದಲ್ಲಿ ಇವರು ಆ ಗಾಯಕ ರಾಜ್ ಕುಮಾರ್  ಪ್ರತಿಭೆಗೂ ಗೌರವ ಸಲ್ಲಿಸಿದಂತಾಗುವುದಿಲ್ಲ. ಆದರ ಪರಿಜ್ಞಾನ ಅವರಿಗಿಲ್ಲ ಎಂದು ವಿಷಾದಿಸಬೇಕಾಗುತ್ತದೆ. 

ಆರಾಧಿಸುವೇ ಮದನಾರಿ ಎಂಬ ಹಾಡಿನ ರಚನೆ ಸುಂದರವಾದ ಕನ್ನಡ ಕಾವ್ಯಸೃಷ್ಟಿಯಂತೆ ಮೂಡಿ ಬಂದಿರುತ್ತದೆ.  ಅದರ ಪ್ರತಿಯೊಂದು ಶಬ್ದಗಳ ಅರ್ಥ ಆಳ ವಿಸ್ತಾರವನ್ನು ಅ ಶಬ್ದಗಳನ್ನು ಸುಂದರವಾಗಿ ಉಪಯೋಗಿಸಿ ಹಾಡನ್ನು ಶ್ರೀಮಂತ ಗಾನವಾಗುವಂತೆ ಮಾಡಿದ್ದನ್ನು ನಾವು ಸ್ಮರಿಸಲೇಬೇಕು.  ಕವಿಯ ಸೌಂದರ್ಯ ಪ್ರಜ್ಞೆ ರಸಿಕತೆ ಪ್ರತೀ ಪದದಲ್ಲೂ ವ್ಯಕ್ತವಾಗುತ್ತದೆ. " ಮೈದೋರಿ ಮುಂದೆ ಸಹಕರಿಸು ಆ ಮಾರನುರವಣೇ ಪರಿಹರಿಸು" ಎಂಬ ವಾಕ್ಯವಿದೆ. ಅಲ್ಲಿ ಸೇರಿದ ಏಷ್ಟು ಮಂದಿಗೆ ಈ ವಾಕ್ಯದ ಅರ್ಥವನ್ನು ವಿವರಿಸುವುದಕ್ಕೆ ಸಾಧ್ಯವಿದೆಯೋ ದೇವರೆ ಬಲ್ಲ. ಅಷ್ಟಿದೆ ಕನ್ನಡ ಭಾಷಾ ಜ್ಞಾನ. "ಆ ಮಾರನುರವಣೇ ..." ಎಂದರೆ ಅರ್ಥವೇನು? ಈ ರೀತಿಯ ಪದಗಳ ಅರ್ಥ ಸೂಕ್ಷ್ಮವನ್ನು ಅರಿತರೆ ಆ ಕವಿಯ ಶ್ರಮವೂ ಪ್ರತಿಭೆಯೂ ಅರ್ಥವಾಗಬಹುದು.  ಆ ಪ್ರತಿಭೆಗೆ ತಕ್ಕ ಮನ್ನಣೆಯೂ ಸಿಗಬಹುದು. ಆದರೆ ಕೇವಲ ಭಾಷಾಭಿಮಾನ ಇದ್ದರೆ ಸಾಲದು.  ಅದನ್ನು ಅರ್ಥವಿಸುವ ಭಾಷಾಜ್ಞಾನವೂ ಇರಬೇಕು.ಕನ್ನಡ ಸರಳ ಸುಂದರ ಭಾಷೆ, ಅದರ ಸೌಂದರ್ಯ ಅರ್ಥವಾಗಬೇಕಾದರೆ ಅದನ್ನು ತುಸುವಾದರು ಇಂತಹ ಪದಗಳನ್ನು ಹಾಡುಗಳನ್ನು  ಅರ್ಥವಿಸುವಷ್ಟು ಕನ್ನಡ ಭಾಷೆ ಗೊತ್ತಿರಬೇಕು.   ಅದರಂತೆ ಈ ಹಾಡಿನ ಅಂಗುಲ ಅಂಗುಲದುದ್ದಕ್ಕೂ ಬೆಸೆಯುವ ಸಂಗೀತ ಅದೆಷ್ಟು ಶ್ರೀಮಂತವಾಗಿದೆ ಎಂದರೆ ಅದನ್ನು ರಸಿಕನಾದವನು ಅರ್ಥವಿಸಿಯಾನು. ಕೇವಲ ಪೂರ್ವಾಗ್ರಹದಿಂದ ನಮ್ಮ ಅಭಿಮಾನವನ್ನು ಒತ್ತೆ ಇಡುವ ಅರಸಿಕರಿಗೆ ಇದು ಅರ್ಥವಾಗಲಾರದು. ಇಂದಿಗೂ ಆ ಹಾಡು ಪ್ರತಿಸಲ ಕೇಳುವುದಕ್ಕೆ ಮನಸ್ಸು ಬಯಸುತ್ತಿದ್ದರೆ ಅದಕ್ಕೆ ಮುಖ್ಯವಾಗಿ ಹಾಡಿನ ಸಂಗೀತ ಮತ್ತು ರಚನೆಯೇ ಕಾರಣ. ಆನಂತರದ ಗೌರವ ಗಾಯಕನಿಗೆ  ಸಲ್ಲಿಕೆಯಾಗುತ್ತದೆ.

ನಮ್ಮಲ್ಲಿ ಪ್ರತಿಭೆಯಿದೆ ಜ್ಞಾನವಿದೆ. ಅದನ್ನು ಅನುಭವಿಸುವ ರಸಿಕತೆಯೂ ಇದೆ. ಆದರೆ ಇದೆಲ್ಲವೂ ಗ್ರಹಿಸಿಕೊಳ್ಳಬೇಕಾದರೆ ಪೂರ್ವಾಗ್ರಹ ಪೀಡಿತ ಮನಸ್ಸನ್ನು ಶುದ್ದೀಕರಿಸಿಕೊಳ್ಳಬೇಕಾಗಿದೆ.  ಕೊನೆಯಲ್ಲಿ ಒಂದು ಪ್ರಶ್ನೆ   "ಮೈದೋರಿ ಮುಂದೆ ಸಹಕರಿಸು ಆ ಮಾರನುರವಣೇ ಪರಿಹರಿಸು"  ಎಂಬ ವಾಕ್ಯಾರ್ಥ  ಹೇಳಬಹುದೇ?


Saturday, November 10, 2018

ಕಾನೂನು ಪಾಲನೆ ಇದು ಯಾವಾಗ?


ಮೊನ್ನೆ ಒಂದು ದಿನ ಯಾವುದೋ ವಾರ್ತಾ ವಾಹಿನಿಯಲ್ಲಿ ಮಹಿಳೆಯೊಬ್ಬಳು ಬಿಸಿ ಬಿಸಿ ವಾದ ಮಂಡಿಸುತ್ತಿದ್ದಳು. ಶಬರಿ ಮಲೆ ಕ್ಷೇತ್ರದಲ್ಲಿ ಮಹಿಳೆಯರಿಗೂ ಪ್ರವೇಶ ಒದಗಿಸಬೇಕು. ಆ ಮೂಲಕ ಭಾರತದ ಉಚ್ಚನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ಈ ಮೂಲಕ ಭಾರತದ ಸಂವಿಧಾನವನ್ನೂ ಕಾನೂನನ್ನು ಗೌರವಿಸಬೇಕು. ಮಹಿಳೆಯ ಮಾತಿಗೆ ಸರ್ವಥಾ ಆಕ್ಷೇಪವಿಲ್ಲ. ಸ್ವತಃ ಈ ಮಹಿಳೆ ತಮ್ಮ ನಿತ್ಯ ಜೀವನದಲ್ಲಿ ಎಷ್ಟು ಕಾನೂನನ್ನು ಗೌರವಿಸುತ್ತಾರೆ ಎಂಬುದನ್ನು ಆತ್ಮ ವಂಚನೆಯಿಲ್ಲದ ಅವಲೋಕಿಸಿ ಈ ಮಾತನ್ನು ಆಡಿದ್ದರೆ  ಅದಕ್ಕೆ ಪೂರ್ಣ ಸಹಮತವಿದೆ.  ಕಾನೂನನ್ನು ಸಂವಿಧಾನವನ್ನು  ಭಾರತದ ನಾಗರೀಕನಾದವನು  ಒಪ್ಪಿಕೊಳ್ಳಲೇಬೇಕು. ಶಬರಿ ಮಲೆ ಕ್ಷೇತ್ರದ ಪ್ರವೇಶದ ಬಗೆಗಿನ ಚರ್ಚೆ ಒತ್ತಟ್ಟಿಗಿರಲಿ. ಆದರೆ ನಾವು ಕಾನೂನನ್ನು ಎಲ್ಲಿ ಹೇಗೆ ಎಷ್ಟು ಗೌರವಿಸುತ್ತೇವೆ ಎಂದು ಪರಾಂಬರಿಸಿದರೆ ವಿಚಿತ್ರವೆನಿಸುತ್ತದೆ. 

  ಒಂದು ದಿನ ಸಿಗ್ನಲ್ ಒಂದರಲ್ಲಿ ಎಡಬಾಗಕ್ಕೆ ತಿರುವು ಮುಕ್ತವಿಲ್ಲದೇ ಇದ್ದುದರಿಂದ ಹಸುರು ದೀಪ ಬೆಳಗುವುದಕ್ಕೆ ಕಾಯುತ್ತಾ ನಿಂತಿದ್ದೆ. ಹಿಂದಿನಿಂದ ಒಂದೇ ಸವನೆ ಹಾರನ್ ಕೇಳಿದಾಗ ಹಿಂದಿರುಗಿ ನೋಡಿದೆ. ಮಹಿಳೆಯೊಬ್ಬರು ತಮ್ಮ ದ್ವಿಚಕ್ರ ವಾಹನವನ್ನು ಮುಂದೆ ಚಲಾಯಿಸುವುದಕ್ಕೆ ನನ್ನ ವಾಹನ ತುಸು ಜರಗಿಸುವಂತೆ ಕೇಳಿಕೊಂಡರು. ನಾನು ಕೇಳಿದರೂ ಕೇಳಿಸದಂತೆ ಸುಮ್ಮನೆ ನಿಂತೆ. ಆಕೆ ನಂತರ ಹಾರನ್ ಮಾಡುವುದನ್ನು ಬಿಟ್ಟು  ಸಾರ್...ಅಂಕಲ್ ಎನ್ನುತ್ತಾ  ಅಸಹನೆಯಿಂದಲೇ ಕೇಳಿಕೊಂಡಳು. ನಾನು ಆ ಕಡೆಗೆ ಗಮನವೇ ಕೊಡದೆ ನನ್ನ ಪಾಡಿಗೆ ಇದ್ದೆ. ನಂತರ ಅಕೆ ಅದು ಹೇಗೋ ಸ್ವಲ್ಪ ಜಾಗ ಮಾಡಿಕೊಂಡು ಕೆಂಪು ದೀಪ ಇನ್ನೂ ಉರಿಯುತ್ತಿದ್ದಂತೆ ಮುಂದೆ ವಾಹನ ಓಡಿಸಿದಳು. ಮಹಿಳೆಯನ್ನು ಕಂಡರೆ ಸುಶಿಕ್ಷಿತ ಮಹಿಳೆಯಂತೆ ಭಾಸವಾಯಿತು.  ಇಂತಹ ಅನುಭವಗಳು ಹೊಸದೇನಲ್ಲ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಇದು ವಿಚಿತ್ರವಾಗಿ ವಿಪರ್ಯಾಸವಾಗಿ ಭಾಸವಾಗುತ್ತದೆ.  ಖಡ್ಡಾಯವಾಗಿ ಪಾಲನೆ ಮಾಡಲೇಬೇಕಾದಂತಹ ಕಾನೂನನ್ನು ಇಲ್ಲಿ ಉಲ್ಲಂಘನೆ ಮಾಡಿವುದು ಮಾತ್ರವಲ್ಲ ಅದನ್ನು ಅವಹೇಳನ ಮಾಡಲಾಗುತ್ತದೆ. ರಸ್ತೆ ಬದಿಯಲ್ಲಿ ಪೋಲೀ ಸ್ ಇದ್ದಲ್ಲಿ ಮಾತ್ರವೇ ರಸ್ತೆ ನಿಯಮಗಳನ್ನು ಪಾಲಿಸುವಂತಹ ರೀತಿಯನ್ನು ಕಾಣುತ್ತೇವೆ. ಕೊನೆಯಲ್ಲಿ ಇಂತಹ ವ್ಯಕ್ತಿಗಳೇ ಉಚ್ಚನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು ಎನ್ನುವುದನ್ನೂ ಕಾಣಬಹುದು. 

ಸಾರ್ವಜನಿಕವಾಗಿ ಧೂಮಪಾನ ಮಾಡಬಾರದು. ಶಿಕ್ಷಾರ್ಹ ಅಪರಾಧ. ಈ ಕಾನೂನು ಎಷ್ಟು ಗೌರವಿಸಲ್ಪಟ್ಟಿದೆ? ರಸ್ತೆ ಬದಿಯಲ್ಲಿ ನಿಂತು ಕೈಯಲ್ಲಿ ಸಿಗರೇಟ್ ಉರಿಸಿ ಹೊಗೆ ಬಿಡುತ್ತಾ ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸಬೇಕು ಎನ್ನುತ್ತಾ ತಾವು ಕಾನೂನಿನ ಪಾಲಕರಂತೆ ಹೇಳುವುದು ಎಷ್ಟರ ಮಟ್ಟಿಗೆ ಸರಿ? 

ನಿನ್ನೆ ತಾನೆ ದೀಪಾವಳಿ ಕಳೆಯಿತು. ಹಗಲು ರಾತ್ರಿ ಎನ್ನದೆ ಕಿವಿ ಬಿರಿದು ಹೋಗುವಂತೆ ಪಟಾಕಿ ಸುಡು ಮದ್ದನ್ನು ಉರಿಸಿದ್ದಾಯಿತು. ಎಂಟು ಘಂಟೆಯಿಂದ ಹತ್ತರ ತನಕ ಮಾತ್ರ ಪಟಾಕಿ ಉರಿಸಬಹುದು ಎಂಬ ಸುಪ್ರೀಂ ಕೋರ್ಟು ತೀರ್ಪು ಗೌರವಿಸಬೇಕೆಂಬುದು ಮರೆತು ಹೋಯಿತು.  ಊರು ಹೊತ್ತಿ ಉರಿಯಲಿ, ಮನೆ ಮಂದಿ ತಿನ್ನುವುದಕ್ಕೆ ಆಹಾರವಿಲ್ಲದೇ ಉಡುವುದಕ್ಕೆ ಬಟ್ಟೆಯಿಲ್ಲದೇ ಹೋಗಲಿ ಪಟಾಕಿಯಂತು ಸುಡಲೇಬೇಕೆಂಬ ಭಾವನೆ ಜನರಲ್ಲಿದೆ.  ರಾತ್ರಿ ಹನ್ನೆರಡು ಕಳೆದರೂ ಕೇಳುವ ಪಟಾಕಿ ಸದ್ದಿಗೆ ಅದೆಷ್ಟು ಜನರು ಹೃದ್ರೋಗಿಗಳು ಪುಟ್ಟ ಕಂದಮ್ಮಗಳು ವಯೋ ವೃದ್ಧರು ಸಂಕಟ ಪಡುವುದು ಕಾಣುವುದಿಲ್ಲ.  ಪಟಾಕಿ ಜ್ವಾಲೆಗೆ ಶಾಶ್ವತವಾಗಿ ಕುರುಡರಾಗಿ ಹೋದಂತಹ ಅದೆಷ್ಟೋ ಮಕ್ಕಳು ಇದ್ದಾರೆ. ಪ್ರತಿ ವರ್ಷವೂ ಕಣ್ಣು ಕಳೆದುಕೊಂಡು ಅಂಗಹೀನರಾಗುವುದನ್ನು ಕಾಣುತ್ತೇವೆ. ಆದರೂ ಪಟಾಕಿ ಸದ್ದು ಮಾತ್ರ ಕೇಳುತ್ತಲೇ ಇರುತ್ತದೆ. ನಾವು ರೂಪಿಸುವ ಕಾನೂನೇ ಹಾಗಿರುತ್ತದೆ. ಸಂಪೂರ್ಣ ನಿಷೇಧಿಸಬೇಕಾದುದನ್ನು ಸ್ವಲ್ಪ ನಿಷೇಧಿಸಿ ಮೀಸೆ ಹೊಕ್ಕಿಸುವುದಕ್ಕೆ ಅವಕಾಶ ಮಾಡಿಬಿಡುತ್ತೇವೆ.  ಕಾನೂನು ಉಲ್ಲಂಘನೆಗೆ ಅದಷ್ಟೇ ಸಾಕಾಗುತ್ತದೆ.  

ಕಾನೂನು ಪಾಲನೆ ಮಾಡುವವನು ಹಳ್ಳಿಗಮಾರನೋ ಎಂಬಂತೆ ನೋಡುತ್ತಾರೆ. ಕಾನೂನು ಉಲ್ಲಂಘನೆ ಮಾಡಿದವನು ಅತಿ ಬುದ್ದಿವಂತ ನಾಗರೀಕನಂತೆ ಕಾಣುತ್ತಾರೆ. ರಸ್ತೆ ಬದಿಗೆ ಪೋಲಿಸ್ ನಿಂತಿದ್ದರೆ ಮಾತ್ರ ತಲೆಗೆ ಹೆಲ್ಮೆಟ್, ಭುಜ ಸೀಟ್ ಬೆಲ್ಟ್ ಬೇಕು. ಕೆಲವು ಪೋಲೀಸರೇ ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸುತ್ತಾ  ಕಾನೂನು ಪಾಲನೆ ಮಾಡುವುದನ್ನು ಕಾಣುತ್ತೇವೆ. ಇಲ್ಲೆಲ್ಲೂ ಗೌರವ ಕಾಣದ ಕಾನೂನು ಶಬರಿಮಲೆ ವಿಷಯ ಬರುವಾಗ ಗೌರವಿಸಲೇ ಬೇಕಾದ ಅನಿವಾರ್ಯತೆಗೆ ಒಳಗಾಗುತ್ತದೆ. ಮುಖ್ಯವಾಗಿ ನಮ್ಮಲ್ಲಿ ಸಾರ್ವಜನಿಕ ಪ್ರಜ್ಞೆ ಜಾಗೃತವಾಗಬೇಕು. ಪ್ರತಿಯೊಂದು ವಿಷಯಕ್ಕೂ ವಿದೇಶಿಯರನ್ನು ಅನುಕರಿಸುವ ನಾವು ಕಾನೂನು ಪಾಲನೆಯಲ್ಲಿ ಮಾತ್ರ ವಿದೇಶಿ ಸಂಸ್ಕಾರವನ್ನು ವಿರೋಧಿಸುತ್ತೇವೆ. 

ಕಾನೂನು ಎಂಬುದು ಬೇಕಾದಂತೆ ಉಪಯೋಗಿಸಿಕೊಳ್ಳುವ ಬೇಕಾದಲ್ಲಿ ಅನುಕೂಲ ಒದಗಿಸುವ ವಸ್ತುವಾಗಿ ಬಳಸಲ್ಪಡುತ್ತದೆ.  ಭಾರತ ಸಂವಿಧಾನದ ನೂರೆಂಟು ಕಾನೂನುಗಳನ್ನು ಪೂರ್ಣವಾಗಿ ದುರ್ಬಳಕೆ ಮಾಡಿಕೊಂಡು ಕೆಲವೊಂದು ಕಾನೂನನ್ನು ತಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತೇವೆ. ಸ್ತ್ರೀಯರನ್ನು ರಕ್ಷಿಸಬೇಕಾದಂತಹ ವರದಕ್ಷಿಣೆ ವಿರೋಧಿ ಕಾನೂನು ಅಮಾಯ ಪುರಷರ ಬದುಕನ್ನೂ ನಾಶ ಮಾಡುವಲ್ಲಿಯೂ ಬಳಸಲ್ಪಡುತ್ತದೆ. ಕಾನೂನು ಸಂವಿಧಾನ ಗೌರವಿಸಲ್ಪಡಲೇಬೇಕು.  ಅದು ಕೇವಲ  ಅಂಬೇಡ್ಕರ್ ಬರೆದಿದ್ದಾರೆ ಎಂಬ ಒಂದು ಕಾರಣಕ್ಕೆ ಗೌರವಿಸಿದರೆ ಸಾಲದು. ಅದು ಯಾರೇ ಬರೆದಿರಲಿ ಭಾರತೀಯ ಸಂವಿಧಾನ ಪ್ರಜಾಪ್ರಭುತ್ವದ ಸ್ವತಂತ್ರ ಭಾರತದ ಸಂಕೇತವಾಗಿ ಗೌರವಿಸಲ್ಪಡಬೇಕು. ಕಾನೂನನ್ನು ಗೌರವಿಸಲೇ ಬೇಕು ಎಂಬ ಖಡ್ಡಾಯ ಕಾನೂನನ್ನು ರೂಪಿಸಬೇಕಾದ ಆನಿವಾರ್ಯತೆ ಇದೆ. 


Tuesday, November 6, 2018

ಸಮಾನತೆ.....



            ಇಂದು ಹೆಣ್ಣು ಗಂಡು ಸಮಾನತೆಗಾಗಿ ಹೋರಾಡುವ ಸನ್ನಿವೇಶಗಳನ್ನು ದಿನ ನಿತ್ಯವೆಂಬಂತೆ ಕಾಣುತ್ತೇವೆ. ಯಾವುದೇ ಮನುಷ್ಯರಿಗಾಗಲೀ ಪ್ರಾಣಿಗಾಗಲೀ ಭೂಮಿಯಲ್ಲಿ ಹುಟ್ಟಿದ ಮೇಲೆ ಬದುಕಿಗಾಗಿ ಹೋರಾಟ ಅನಿವಾರ್ಯ. ಅದು ಕಾಡಿನಲ್ಲಾಗಲೀ ಊರಲ್ಲಾಗಲೀ ಹೋರಾಟ ಇಲ್ಲದ ಬದುಕು ಇಂದು ಕಲ್ಪಿಸುವುದು ಅಸಾಧ್ಯ. ಹಾಗಿರುವಲ್ಲಿ ಗಂಡು ಹೆಣ್ಣು ಮಾಡುವ ಹೋರಾಟ ಇದು ಬದುಕಿಗಾಗಿ ಅಲ್ಲ. ಸಮಾನತೆಗಾಗಿ.  ಇದು ಎಷ್ಟು ಅನಿವಾರ್ಯವೋ ಅದು ವಿಷಯವಲ್ಲ. ಆದರೆ ಕೆಲವು ಅನುಭವಗಳು ಈ ಹೋರಾಟದ ಹಾದಿಯನ್ನು ವಿಸ್ಮಯದಿಂದ ಗಮನಿಸುವಂತೆ ಮಾಡುತ್ತವೆ.  ಸಮಾನತೆ ಅದು ಮನುಷ್ಯನಿಗೆ ಮಾತ್ರವಲ್ಲ, ಭೂಮಿಯಲ್ಲಿ ಹುಟ್ಟುವ ಪ್ರತಿಯೊಂದು ಜೀವಿಗೂ ಅವಶ್ಯಕ. ಯಾಕೆಂದರೆ ಯಾವುದೇ ಜೀವಿಯಾಗಲೀ ಭೂಮಿಯಲ್ಲಿ ಹುಟ್ಟುವುದು ಬದುಕುವುದಕ್ಕಾಗಿಯೇ ಹೊರತು ಸಾಯುವುದಕ್ಕಾಗಿ ಅಲ್ಲ.

            ಅಂದು ಬೆಳಗ್ಗೆ ಪೀಣ್ಯದಲ್ಲಿರುವ ಚಾಲನಾ ಪರವಾನಗಿ ಪರೀಕ್ಷಾ ( driving license test) ಮೈದಾನಿಗೆ ಹೋಗಿದ್ದೆ.  ನನ್ನ ಪತ್ನಿಗೆ ಅಂದು ಚಾಲನ ಪರವಾನಗೀ ಪರೀಕ್ಷೆ ಇತ್ತು. ಒಂದು ಬದಿಯಲ್ಲಿ ಒಂದಷ್ಟು ಬೆಂಚುಗಳನ್ನು ಸಾಲಾಗಿರಿಸಿ ಬಂದವರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದರು. ಸರಿ ನಮ್ಮ ಸರದಿಗಾಗಿ ಅಲ್ಲಿ ನಾವು ಕುಳಿತಿದ್ದೆವು. ಯಾವುದೋ ಪತ್ರಿಕೆ ಹಿಡಿದು ಓದುತ್ತಿದ್ದೆ. ಅದರಲ್ಲೇ ತಲ್ಲೀನನಾಗಿದ್ದ ನನಗೆ ಒಮ್ಮೇಲೆ ಗಾಬರಿಯಾಗುವ ಸ್ಥಿತಿ ಬಂದು. ತರುಣಿಯೊಬ್ಬಳು ಅದೇ ಬೆಂಚ್ ನಲ್ಲಿ ನನ್ನ ಪಕ್ಕವೇ  ಕುಳಿತು ತನ್ನ ಚೂಡಿಯ ಶಾಲನ್ನು ಹಾರಿಸಿದಾಗ ಅದು ರಪ್ಪನೇ ನನ್ನ ಮುಖವನ್ನೂ ಮುಚ್ಚಿತ್ತು. ಗಾಬಾರಿಯಾಗಿ ಒಂದರೆಕ್ಷಣ ಅವಾಕ್ಕಾದೆ.. ಆಕೆಯ ಶಾಲನ್ನು ಆತ್ತ ಸರಿಸಿ ನಾನು ಮತ್ತಷ್ಟು ಸರಿದು ಕುಳಿತೆ. ತುಸು ಹೊತ್ತಿನಲ್ಲೇ ಆಕೆಯ ಜಡೆ ನನ್ನ ಹೆಗಲ ಮೇಲೆ ರಾಚಿತ್ತು.  ಒಂದಷ್ಟು ಅಸಹನೆಗೊಂಡರೂ ಮೌನವಾಗಿಯೇ ಇದ್ದೆ. ಆ ತರುಣಿ ಬೇರೆ ಯಾರೂ ಅಲ್ಲ. ಪ್ರಸಿದ್ದ ಟೀವಿ ಸೀರಿಯಲ್ ನಟಿ. ಇಂದಿಗೂ ಆಕೆಯ ಹೆಸರು ಗೊತ್ತಿಲ್ಲ. ಟೀವಿಯಲ್ಲಿ ಆಕೆಯ ಮುಖವನ್ನು ಅಷ್ಟೊ ಇಷ್ಟೋ ಕಂಡ ನೆನಪು. ಸಾಮಾನ್ಯವಾಗಿ ಸೀರಿಯಲ್ ನಲ್ಲಿ ತಲೆತುಂಬ ಹೂ ಮುಡಿದು ಅಪ್ಪಟ ಗರತಿಯಂತೇ ಕಂಡು ಬರುವ ಈಕೆ ಇಲ್ಲಿ ಅದಕ್ಕೆ ತೀರ ತದ್ವಿರುದ್ದವಾಗಿದ್ದಳು.  ಸಾರ್ವಜನಿಕವಾಗಿ ಹೀಗೆ ವ್ಯಕ್ತಿ ಭೇದವಿಲ್ಲದೇ ತಮ್ಮ ಮೈ ಮೇಲೆ ಬಿದ್ದಂತೆ ವ್ಯವಹರಿಸುವುದು ನನಗಂತೂ ಸಹ್ಯವಾಗಲಿಲ್ಲ

ಇನ್ನೊಂದು ಘಟನೆ, ವ್ಯಕ್ತಿಯೊಬ್ಬರ ಆದಾಯ ತೆರಿಗೆ ಸಲ್ಲಿಸುವ ಕೆಲಸದಲ್ಲಿ ಅವರನ್ನು ಭೇಟಿಯಾಗುವುದಕ್ಕೆ ಬೆಂಗಳೂರಿನ ಜಯನಗರದ ಮನೆಗೆ ಹೋಗಿದ್ದೆ. ವಿಳಾಸ ದಾರಿ ಹೇಳಿ ಅವರು ಅಲ್ಲಿಗೆ ಬರುವಂತೆ ಹೇಳಿದ್ದರು. ಒಂದಷ್ಟು ದಾಖಲಾತಿಗಳನ್ನು ತರುವ ಉದ್ದೇಶದಿಂದ ಅಲ್ಲಿಗೆ ವಿಳಾಸ ಹುಡುಕಿಕೊಂಡು ಅವರ ಮನೆಗೆ ಹೋಗಿದ್ದೆ. ಆ ವ್ಯಕ್ತಿ ಟೀವಿ ಸಿನಿಮಾ ಕ್ಷೇತ್ರದಲ್ಲಿ ದುಡಿಯುವ ಯಾವುದೋ ತಂತ್ರಜ್ಞರಾಗಿದ್ದರು.  ಉತ್ತಮ ಸಂಭಾವಿತ ವ್ಯಕ್ತಿ. ಈ ಮೊದಲೇ ಹಲವು ಸಲ ಭೇಟಿಯಾಗಿದ್ದೆ.  ಅವರ ಮನೆ ಹುಡುಕುತ್ತಾ ಮನೆಯ ಒಳ ಹೊಕ್ಕ ಮೇಲೆ ತಿಳಿದದ್ದು , ಅದು ಅವರ ಮನೆಯಲ್ಲ. ಅಲ್ಲಿ ಯಾವುದೋ ಸೀರಿಯಲ್ ಅಥವಾ ಸಿನಿಮಾ  ಶೂಟಿಂಗ್  ನಡೆಯುತ್ತಿತ್ತು. ಆ ವ್ಯಕ್ತಿ ಶೂಟಿಂಗ್ ಕೆಲಸದ ಗಡಿಬಿಡಿಯಲ್ಲಿ ನಿರತರಾಗಿದ್ದರು. ನನಗೆ   ತುಸು ಹೊತ್ತು ಕಾಯುವಂತೆ ಹೇಳಿ ತನ್ನ ಕೆಲಸದತ್ತ ಹೋದರು. ಶೂಟಿಂಗ್,  ನನಗೆ ಅದು ತೀರ ಹೊಸದು. ಹಾಗಾಗಿ ಸ್ವಲ್ಪ ಕುತೂಹಲದಿಂದಲೆ ಮನೆಯೊಳಗೆ ಒಂದು ಹಾಲ್ ನಲ್ಲಿ ನಡೆಯುತ್ತಿದ್ದ  ಶೂಟಿಂಗ್ ನ್ನು ತನ್ಮಯನಾಗಿ ನೋಡುತ್ತಿದ್ದೆ.   ಅಲ್ಲಿ ಸುತ್ತಲೂ ನನ್ನಂತೆ ಬಹಳ ಮಂದಿ ನಿಂತಿದ್ದರು. ನಾನೂ ಅವರ ಜತೆಯಲ್ಲೇ ನಿಂತು ಶೂಟಿಂಗ್ ನೋಡುತ್ತಿದ್ದರೆ, ಆ ಜನಗಳ ಎಡೆಯಲ್ಲಿ ನನ್ನ ಹೆಗಲ ಮೇಲೆ ಮೃದುವಾದ ಕೈಯೊಂದು ಬಂದು ಬಿತ್ತು. ಗಾಬರಿಯಾಗಿ ತಿರುಗಿ ನೋಡಿದೆ ಒಬ್ಬಳು ತರುಣಿ, ಆಕೆಯೂ ಯಾವುದೋ ನಟೀ ಮಣಿ ಇರಬೇಕು. ಮುಖ ನೋಡಿದೆ. ಪರಿಚಯವೇ ಇಲ್ಲ.  ಅಕೆ ಕಿರುನಗು ಬೀರಿ ಮತ್ತೂ ಶೂಟಿಂಗ್ ನೋಡುತ್ತಾ ಅದರಲ್ಲೆ ಮಗ್ನಳಾಗಿ ಹೋದಳು. ನಾನು ತುಸು ಹಿಂದೆ ಸರಿದು ಆಕೆಗೆ ಮುಂದೆ ಹೋಗುವುದಕ್ಕೆ ಅನುವಾಗುವಂತೆ ಸ್ಥಳ ಬಿಟ್ಟು ಕದಲಿದೆ.  ನಂತರ ಆಕೆ ಅಲ್ಲಿಯ ಕೆಲಸ ಕಾರ್ಯಗಳಲ್ಲಿ ನಿರತಳಾದಳು,

. ಈ ಎರಡು ಘಟನೆ ವಿಚಿತ್ರ ಅನುಭವವನ್ನು ನೀಡಿದ್ದು ಬೇರೆ ವಿಚಾರ. ಆದರೆ ಆ ಸಿನಿಮಾ ಸೀರಿಯಲ್ ಕ್ಷೇತ್ರವನ್ನೇ ಅನುಮಾನದಿಂದ ನೋಡುವಂತೆ ಮಾಡಿದ್ದು ಸುಳ್ಳಲ್ಲ. ಹಾಗೆಂದು ಇಡೀ ಕ್ಷೇತ್ರವನ್ನೇ ಹೇಳುವುದಲ್ಲ. ಇದು ಕೇವಲ ನನಗಾದ ಅನುಭವ. ಈ ಎರಡು ಘಟನೆಯಲ್ಲಿ ಆ ಎರಡು ಹೆಣ್ಣುಗಳಂತೆ ಈ ಅಪರಿಚಿತರಲ್ಲಿ,  ನಾನು ನಡೆದುಕೊಂಡಿದ್ದರೆ, ಇಂದು ಮೀಟೂ ವಿನ ಒಬ್ಬ ಆರೋಪಿ ನಾನಾಗಿ ಹೋಗುತ್ತಿದ್ದೇನೋ ಎಂದು ಅನ್ನಿಸುತ್ತದೆ. ಇಂದು ಮೀಟು ಎಂಬ ಅಭಿಯಾನದಲ್ಲಿ ಮೀಟುತ್ತಾ ಮೀಟುತ್ತಾ ಹೊರಡುವ ಅಪಸ್ವರ ಮನುಷ್ಯ ವಿಕಾರಗಳನ್ನು ತೋರಿಸುತ್ತದೆ. ಯಾವತ್ತೋ  ದೇಹದಲ್ಲಿ ಆದ ಗಾಯ ವಾಸಿಯಾದಂತೆ ಇದ್ದು ಬಹಳ ಸಮಯದ ನಂತರ ಕೀವು ತುಂಬಿ ವೃಣವಾಗುವಂತೆ ಮೀಟು ವಿನಲ್ಲಿನ ಪ್ರಕರಣಗಳು ಮನುಷ್ಯ ಸ್ವಾರ್ಥವನ್ನು ಬಿಂಬಿಸುತ್ತವೆ.  ಅರೋಪದ ಸತ್ಯಾಸತ್ಯದ ಬಗೆಗಿನ ಮಾತಲ್ಲ. ಈ ಅಭಿಯಾನದ ಬಗ್ಗೆಯೂ ಅಲ್ಲ. ಆದರೆ ಗಂಡು ಹೆಣ್ಣು ಎಂಬ ವೆತ್ಯಾಸದ ಬಗೆಗಿನ ಒಂದೆರಡು ವಿಚಾರಗಳು.

ಸಮಾನತೆ  ಸ್ವಾತಂತ್ರ್ಯ ಪ್ರತಿಯೊಬ್ಬರೀಗೂ ಅತ್ಯವಶ್ಯ. ಇದರಲ್ಲಿ ಗಂಡು ಹೆಣ್ಣೆಂಬ ಭೇದವಿಲ್ಲ. ಯಾಕೆಂದರೆ ಶೋಷಣೆ ದೌರ್ಜನ್ಯ ಎಂಬುದು ಎರಡೂ ವರ್ಗದಲ್ಲಿ ಸರ್ವೇ ಸಾಮಾನ್ಯ. ಬೆಳ್ಳಗಿದ್ದವರ ದೇಹದಲ್ಲಿ ಆದ ಗಾಯ ಕಣ್ಣಿಗೆ ರಾಚುವಂತೆ ಗೋಚರಿಸಿದರೆ ಕರಿ ದೇಹದ ಮೇಲಿನ ಗಾಯ ಹುಣ್ಣಾಗಿ ರಕ್ತ ಒಸರಿದರೂ ಕಾಣುವುದಿಲ್ಲ. ಇಷ್ಟೇ ವೆತ್ಯಾಸ.   ದೌರ್ಜನ್ಯ ಶೋಷಣೆಯನ್ನು ಸಹಿಸಿಕೊಂಡು ಏನೂ ಆಗಿಲ್ಲವೆಂಬಂತೆ ಬದುಕುವ ಹಲವರನ್ನು ಕಾಣಬಹುದು. ಇದಕ್ಕೆ ಗಂಡು ಹೆಣ್ಣಿನ ವೆತ್ಯಾಸವಿಲ್ಲ. ದೌರ್ಜನ್ಯದ ರೂಪಗಳು ಬೇರೆ ಬೇರೆ ಇರಬಹುದು. ಆದರೆ ಪರಿಣಾಮ ಮಾತ್ರ ಒಂದೇ, ಸುಖ ಶಾಂತಿಯಿಂದ ಕಳೆಯುವ ಸರ್ವ ಹಕ್ಕನ್ನೂ ಗಳಿಸಿರುವ  ಮನುಷ್ಯ ಅದಿಲ್ಲದೇ ದಿನಗಳ ಬಹುಪಾಲನ್ನೂ ಕಳೆಯುತ್ತಾನೆ. ಡೋಲು ಅಥವಾ ಚೆಂಡೆಗೆ ಕೋಲಿನಿಂದ ಬಡಿಯುವಾಗ ಎಲ್ಲರಿಗೂ ಕಾಣುತ್ತದೆ, ಸ್ವರವೂ ಕೇಳಿಸುತ್ತದೆ. ಮೃದಂಗ ತಬಲೆಗೆ ಬಾರಿಸಿದ ಪೆಟ್ಟು ಕಾಣುವುದೇ ಇಲ್ಲ...ಸ್ವರವೂ ಕೇಳಿಸುವುದಿಲ್ಲ.  ಗಮನ ಹರಿಸಿ ನೋಡಬೇಕಾಗುತ್ತದೆ.   ಇಂದು ಸಮಾನತೆಗಿಂತ ಮನುಷ್ಯನಿಗೆ ಬೇಕಾಗಿರುವುದು ಪ್ರೇಮ ಸೌಹಾರ್ದತೆ ಮಾತ್ರ. ಪ್ರೀತಿ ವಿಶ್ವಾಸ ಸೌಹಾರ್ದತೆ ಇಲ್ಲದ ಜೀವನದಲ್ಲಿ ಯಾವ ಸುಖ ಶಾಂತಿ ನೆಮ್ಮದಿ ಸಿಗಲಾರದು. ಮತ್ತು ಸಿಗುವ ಸಮಾನತೆ ಅದು ಬದುಕಿನ ಸಮಾನತೆಯಾಗಿರುವುದೂ ಇಲ್ಲ.  

ಇಷ್ಟಕ್ಕೂ ಸಮಾನತೆ ಎಂಬುದು ಏನು? ಅದರ ಬಗ್ಗೆ ಖಚಿತವಾದ ನಿರ್ದಿಷ್ಟವಾದ ನಿಲುವು ಇರುವುದಿಲ್ಲ. ಅಸಮತೋಲನವೇ ಪ್ರಕೃತಿಯ ವೈಶಿಷ್ಟ್ಯತೆ.  ಈ ಅಸಮತೋಲನವನ್ನು ಸಮಾನವಾಗಿ ಸ್ವೀಕರಿಸುವುದೇ ಸಮಾನತೆ.  ಆದರೆ ಇಂದು ಎಲ್ಲೆಲ್ಲಿ ಹೇಗೆ ಬೇಕಾದರೆ ಹಾಗೆ ತಮಗೆ ಅನುಕೂಲವಾಗುವಂತೆ ಚಿಂತಿಸುವ ಆಧುನಿಕ ತತ್ವವೇ  ಸಮಾನತೆ.  ಪ್ರತಿಶತ ನೂರರಷ್ಟು ಸಂಪೂರ್ಣ ಒಬ್ಬರ ಹಾಗೆ ಇನ್ನೊಬ್ಬರು ಇರುವುದಕ್ಕೆ ಸಾಧ್ಯವೇ ಇಲ್ಲ. ಹುಟ್ಟಿಸಿದ ಮಗುವಿಗೆ ಹೆತ್ತ ತಾಯಿ ರಕ್ತವನ್ನೇ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಇದು ಅಸಮಾನತೆಯಲ್ಲವೇ ?  ಹುಟ್ಟಿಸಿದ ಪರಮಾತ್ಮನಿಗೂ ಸಮಾನತೆ ಸಾಧ್ಯವಾಗಿಲ್ಲ ಎಂದಾದರೆ ಮನುಷ್ಯ ಅದಕ್ಕೆ ಹೋರಾಡುವುದರಲ್ಲಿ ಅರ್ಥವೇನಿದೆ? ಒಬ್ಬಾತ ಬುದ್ದಿವಂತನೂ ವಿದ್ಯಾವಂತನೂ ಆಗಿ ಬೆಳೆಯುತ್ತಾನೆ. ಆತ ಸಣಕಲ ದೇಹದವನಾಗಿರುತ್ತಾನೆ.  ಇನ್ನೊಬ್ಬ ದೈಹಿಕವಾಗಿ ಗಟ್ಟಿ ಮುಟ್ಟಾಗಿ ಕುಸ್ತಿ ಪಟುವಾಗಿ ಬೆಳೆಯುತ್ತಾನೆ. ಇಬ್ಬರೂ ಸಮಾನರಾಗಿರುವುದಕ್ಕೆ ಸಾಧ್ಯವಿಲ್ಲ.  ಗಂಡು ಗಂಡಿನಲ್ಲಿ ಹೆಣ್ಣು ಹೆಣ್ಣಿನಲ್ಲೇ ಸಮಾನತೆ ಇಲ್ಲ. ಮತ್ತೆ ಗಂಡು ಹೆಣ್ಣಿನ ನಡುವಿನ  ಸಮಾನತೆಯ ಹೋರಾಟ ಯಾವುದಕ್ಕೆ?       ಹಾಗಾಗದರೆ ಸಮಾನತೆ ಬೇಡವೇ? ಅದನ್ನು  ವಿವೇಚನೆಯಿಂದ ಗಳಿಸಬೇಕು.  

ಸಮಾನತೆ ಎಂದರೆ ಧರಿಸುವ ಬಟ್ಟೆಯಿಂದ ಬರುವುದಿಲ್ಲ. ಗಂಡಿನಂತೆ ಹೆಣ್ಣು ಉಡುಗೆ ತೊಟ್ಟರೆ ಸಮಾನತೆ ಸಾಧ್ಯವಾಗುವುದಿಲ್ಲ. ಅಥವಾ ಹೆಣ್ಣಿನಂತೆ ಗಂಡೂ ಆಗುವುದಕ್ಕೆ ಸಾಧ್ಯವಿಲ್ಲ. ಅದೇ ರೀತಿ ಮಾಡುವ ಉದ್ಯೋಗದಲ್ಲಿ ಬರುವುದಿಲ್ಲ. ಹೀಗೆ ಒಬ್ಬರಿಗೆ ಇನ್ನೊಬ್ಬರು ಸಮಾನವಾಗುವುದಕ್ಕೆ ಸಾಧ್ಯವೇ ಇಲ್ಲ. ಪ್ರತಿಯೊಬ್ಬನೂ ತಿಳಿದುಕೊಳ್ಳಬೇಕಾದ ವಿಚಾರವೆಂದರೆ ನನ್ನ ಹಾಗೆ ನಾನೊಬ್ಬನೇ. ಬೇರೆ ಇರುವುದಕ್ಕೆ ಸಾಧ್ಯವಿಲ್ಲ. ರೂಪದಿಂದಲೋ ಭಾವದಿಂದಲೋ ಇನ್ನಾವುದೇ ಗುಣಗಳಿಂದಲೋ ಒಂದೇ ರೀತಿ ಇದ್ದರೆ ಅದು ಸಂಪೂರ್ಣ ಸಮಾನತೆಯಾಗುವುದಿಲ್ಲ.  ಗಂಡು ಅಡುಗೇ ಕೋಣೆ ಹೊಕ್ಕರೆ ಅದು ಸಮಾನತೆಯ ಸಾಧನೆಯೂ ಅಲ್ಲ. ಹೆಣ್ಣು ಉದ್ಯೋಗಿಯಾಗಿ ಮನೆಯಿಂದ ಹೊರ ನಡೆದರೂ ಸಮಾನಾತೆಯಾಗುವುದಿಲ್ಲ. ಬದಲಿಗೆ ಪರಸ್ಪರ ಸಹಕಾರವಿದ್ದಲ್ಲಿ ಯಾವುದೇ ಮಾಡಿದರೂ ಅದು ಸಮಾನತೆಯಾಗುತ್ತದೆ. ಹೆಣ್ಣು ಗಂಡಿನ ಅರ್ಹತೆಗಳೇ ಬೇರೆ. ಇಲ್ಲಿ. ಹಾಗಿರುವಾಗ ಅರ್ಹತೆಯ ಸಮಾನತೆ ಹೇಗೆ ಸಾಧ್ಯವಾಗುತ್ತದೆ.?

ಬುದ್ದಿವಂತನಿಂದ ಬುದ್ದಿಯನ್ನು ಕುಸ್ತಿಪಟು ಪಡೆದುಕೊಂಡು, ಕುಸ್ತಿ ಪಟುವಿನಿಂದ ದೈಹಿಕ ಸಾಮಾರ್ಥ್ಯವನ್ನು ಬುದ್ದಿವಂತನು ಪಡೆದುಕೊಳ್ಳಬೇಕು. ಅದರ ಅರ್ಥ ತನ್ನ ಕೊರತೆಯನ್ನು ಒಪ್ಪಿಕೊಂಡು ಇನ್ನೊಬ್ಬನ ಅರ್ಹತೆಯನ್ನು ಗೌರವಿಸುವುದೇ ಆಗಿದೆ. ಇದನ್ನೇ ಸಮಾನತೆ ಎನ್ನುವುದು.  ಗಂಡು ತನ್ನ ಕೊರತೆಯನ್ನು ಒಪ್ಪಿಕೊಳ್ಳಬೇಕು ಹೆಣ್ಣು ತನ್ನ ಕೊರತೆಯನ್ನು ಒಪ್ಪಿಕೊಳ್ಳಬೇಕು. ತನ್ನಲ್ಲಿರುವ ಯೋಗ್ಯತೆಯನ್ನು ವಿನಿಯೋಗ ಮಾಡಬೇಕು. ಇದನ್ನೆ ಸೌಹಾರ್ದತೆ ಎನ್ನುವುದು. ಸೌಹಾರ್ದವಾಗಿ ಇದ್ದುದನ್ನು ಉಪಯೋಗಿಸುವಾಗ ಪ್ರಕೃತಿಯ ಧರ್ಮ ಪಾಲಿಸಿದಂತಾಗುತ್ತದೆ. ಇಬ್ಬರಲ್ಲಿಯೂ ಹೊಂದಾಣಿಕೆಯ ಸಂತುಲನೆ ಇರುವಾಗ ಸಮಾನತೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಗಂಡು ಹೆಣ್ಣು ಎಂಬುದು ಭೇದವಿಲ್ಲ.  ಗಂಡಾದರೂ ಹೆಣ್ಣಾದರೂ ಅದು ಮನುಷ್ಯ ಜೀವಿ. ಮನುಷ್ಯ ಜೀವಿಗೆ ಮನುಷ್ಯತ್ವ ಅಂದರೆ ಮಾನವೀಯತೆ ಇರಬೇಕಾಗಿರುವುದು ಅತ್ಯಂತ ಅವಶ್ಯ. ಮಾನವೀಯತೆ ಇಲ್ಲದವರು ಮನುಷ್ಯ ಅಂತ ಆನ್ನಿಸಿಕೊಳ್ಳುವುದಾದರೂ ಹೇಗೆ?  ಮಾನವೀಯತೆಯನ್ನು ತಳ್ಳಿ ಹಾಕಿ ಸಿಗುವ ಸಮಾನತೆ ಅದು ಮನುಷ್ಯನಾದವನಿಗೆ ಬೇಕಾಗಿರುವುದಿಲ್ಲ. ತನ್ನಲ್ಲೇನೋ ಊನವಾಗಿದೆ. ತಾನು ವಂಚಿತನಾಗಿದ್ದೇನೆ ಕಳೆದುಕೊಂಡಿದ್ದೇನೆ ಎಂಬ ಭಾವನೆಗಳೇ ಹಲವು ಸಲ ಮನಸ್ಸಿನಲ್ಲಿ ಅತೃಪ್ತಿಯನ್ನು  ಹುಟ್ಟಿಸಿ ಶಾಂತಿಯನ್ನು ಕದಡಿಸುತ್ತದೆ. ಧನಾತ್ಮಕ ಚಿಂತನೆ ಇರುವಲ್ಲಿ ಕಳೆದುಕೊಂಡದ್ದರ ಬಗ್ಗೆ ವಂಚಿಸಲ್ಪಟ್ಟ ಬಗ್ಗೆ ಯೋಚನೆ ಇರುವುದಿಲ್ಲ. ಕಿಂಚಿತ್ತಾದರೂ ಸಿಕ್ಕಿದ ಲಾಭದ ಬಗ್ಗೆ ಮನಸ್ಸು ಯೋಚಿಸುತ್ತದೆ.  ಒಂದಿಷ್ಟು ಸುಖ ಸಂತೋಷಕ್ಕೆ ಮನುಷ್ಯ ಬಹಳಷ್ಟು ಕಷ್ಟಗಳನ್ನೂ ನಷ್ಟಗಳನ್ನೂ ಸಹಿಸಿಕೊಳ್ಳುತ್ತಾನೆ.
ಅಸಮಾನತೆ ಎಂಬುದು ಪ್ರಕೃತಿಯ ಒಂದು ಅಂಗ. ಮಾರ್ಜಾಲ ವ್ಯಾಘ್ರದ ವೆತ್ಯಾಸದಂತೆ ಸಹಜತೆಯಿಂದ ಬದುಕುವುದರಲ್ಲಿ ಪ್ರಕೃತಿ ಧರ್ಮವಿರುತ್ತದೆ.  . ಸಹಜವಾಗಿ ಸೌಹಾರ್ದತೆ ಪ್ರೀತಿಯಿಂದ ಆದನ್ನು ಅನುಭವಿಸುವ ಮನೋಭಾವ ಇರಬೇಕು. ಇಲ್ಲವಾದರೆ ಅದು ಕೇವಲ ಸಮಾನತೆಯಾಗಬಹುದೇ ಹೊರತು ಅದು ಪರಿಪೂರ್ಣ ಬದುಕಾಗುವುದಿಲ್ಲ.  ಸಮಾನತೆ ಎಂದರೆ ಸ್ವಚ್ಛಂದ ಮನಸ್ಸಿನ ಭಾವನೆಯ ಮತ್ತೊಂದು ರೂಪ. ಆ ನಿಟ್ಟಿನಲ್ಲಿ ಒಂದು ಬದುಕನ್ನು ಸ್ವಚ್ಛಂದವಾಗಿ ನಿರಾಳವಾಗಿ ಅನುಭವಿಸಬೇಕಾದರೆ ಸಿಗಬೇಕಾದ ಸಮಾನತೆಯಲ್ಲೂ ಸೌಹಾರ್ದತೆ ಅತ್ಯವಶ್ಯ.

ಬಲ ಇದ್ದವನೇ ದೊಡ್ಡವನು. ಇದು  ಅರಣ್ಯ ನ್ಯಾಯ. ಇದು ನಾಗರೀಕ ಸಮಾಜದಲ್ಲೂ  ಈ ನ್ಯಾಯ ಅನ್ವಯವಾಗುವುದು ವಿಪರ್ಯಾಸ. ಅಸಮಾನತೆಯ ಅನುಭವಕ್ಕೆ ಇದು ಪೂರಕ. ಹಾಗಾಗಿ ಮಹಿಳೆ ಅಬಲೆಯಾಗಿ,   ಶೋಷಿತೆಯಾಗಿ ಸಮಾಜದಲ್ಲಿ ಗುರುತಿಸಲ್ಪಡುತ್ತಾಳೆ.  ನಾಗರೀಕತೆ ಬೆಳೆದರೂ ಸಹ ದೌರ್ಜನ್ಯ ಸುಸಂಸ್ಕೃತ  ಸಮಾಜಕ್ಕೆ ಸವಾಲಾಗಿರುತ್ತದೆ. ದೌರ್ಜನ್ಯದ ರೂಪಗಳು ಹಲವಾರಿದ್ದರೂ ಸಹ ಇಲ್ಲಿ  ಬದುಕಿನ ಸ್ವಾತಂತ್ರ್ಯವೆಂಬುದು ಪ್ರಶ್ನಾರ್ಹವೇ ಆಗಿರುತ್ತದೆ. ಶೋಷಣೆ ಎಂಬ ಧ್ವನಿಯಲ್ಲಿ ಮೊದಲು ಕಾಣುವ ಮುಖ ಮಹಿಳೆಯದ್ದೇ ಆಗಿರುತ್ತದೆ. ಶೋಷಣೆಯ ಕೂಗಿಗೆ ಮಹಿಳೆಯೇ ಮುಖವಾಣಿಯಾಗಿ ಬಿಂಬಿಸಲ್ಪಡುತ್ತದೆ. ಆದರೆ ಇಂದು ದೌರ್ಜನ್ಯ ಎಂಬುದು ಕೇವಲ ಮಹಿಳೆಯರ ಮೇಲೆ ಮಾತ್ರ ನಡೆಯುವುದಲ್ಲ. ದೈಹಿಕವಾಗಿ ಅಬಲೆಯಾಗಿರುವ ಕಾರಣ ಶೋಷಣೆ ಎಂದರೆ ಅದು ಮಹಿಳೆಯರೆ ಮೇಲೆ ಮಾತ್ರ ಆಗುವುದಕ್ಕೆ ಸಾಧ್ಯ ಎಂಬ ಪ್ರತೀತಿ ಇರುತ್ತದೆ. ಆದರೆ ಬಲ ಹೀನತೆ ಎಂಬುದು ಕೇವಲ ದೈಹಿಕ ಸ್ಥಿತಿಗೆ ಸೀಮಿತವಾಗಿರುವುದಲ್ಲ. ಮಾನಸಿಕ ಸ್ಥಿತಿಗೂ ಅನ್ವಯವಾಗುತ್ತದೆ. ಭಾವನಾತ್ಮಕ ಮನಸ್ಸು ದೌರ್ಜನ್ಯಕ್ಕೆ ಮೊದಲ ಎರೆಯಾಗಿಬಿಡುತ್ತದೆ. ಅದಕ್ಕೆ ಗಂಡು ಹೆಣ್ಣಿನ ಭೇದವಿಲ್ಲ.  ಇಂದು ಗಂಡೂ ಸಹ ದೌರ್ಜನ್ಯಕ್ಕೆ ಒಳಗಾಗುವುದು ಸರ್ವೇಸಾಮಾನ್ಯ ಎಂಬಂತಾಗಿದೆ. ದೌರ್ಜನ್ಯ ಎಸಗುವ ನಿಟ್ಟಿನಲ್ಲಿಯೂ ಗಂಡು ಹೆಣ್ಣು ಒಂದು ಸಮಾನತೆಯನ್ನು ಸ್ಥಾಪಿಸಿರುವುದು ವಿಪರ್ಯಾಸವೇ ಸರಿ.  ಈ ಕೌಟುಂಬಿಕ ಸಂಭಂಧಗ ಅಳಿವು ಉಳಿವಿನ ಸಂಘರ್ಷದಲ್ಲಿ ಹಲವು ಹೃದಯಗಳು ಮೌನವಾಗಿವೆ.  

ಇಂದು ಗಂಡು ಹೆಣ್ಣಿನ ಸಮಾನತೆ ಎಂಬುದು ಸಾಮಾಜಿಕ ಬದ್ದತೆಯಾಗಬಹುದು. ಹೆಣ್ಣಿನಲ್ಲಿ ಸಮಾನತೆಗೆ ಬಯಸುವ ತುಡಿತವೂ ಅಧಿಕವಾಗಿರುತ್ತದೆ. ದೈಹಿಕವಾಗಿ ಮಾನಸಿಕವಾಗಿ ಹೆಣ್ಣು ಸರ್ವಶಕ್ತಳು ಎಂದು ಸಮಾಜಕ್ಕೆ ಹಲವು ಸಂದರ್ಭಗಳಲ್ಲಿ ತೋರಿಸಿ ಆಗಿ ಹೋಗಿದೆ. ಹೆಣ್ಣು ಸರ್ವಶಕ್ತಳು ಅನುಮಾನವಿಲ್ಲ. ಭಾರತೀಯ ಸನಾತನ ಸಂಸ್ಕೃತಿಯೇ ಇದನ್ನು ತೋರಿಸಿಕೊಟ್ಟಿರುತ್ತದೆ. ಆದರೂ ಸಮಾನತೆಯ ಸಮರವೆಂಬುದು ನಿರಂತರವಾಗಿ ಹೋರಾಟವನ್ನು ಮುಂದುವರೆಸುತ್ತದೆ. ಅದರ ಅನಿವಾರ್ಯತೆಯೂ ಇರಬಹುದು. ಆದರೆ ತಮಗೆ ಸಿಗುವ ಹಕ್ಕಿಗೆ ಮತ್ತೊಬ್ಬರ ದೌರ್ಜನ್ಯದ ಬೆಲೆಯನ್ನು ಕೊಡುವುದು ನ್ಯಾಯವಲ್ಲ. ಹೆಣ್ಣಿಗಾಗಲೀ ಗಂಡಿಗಾಗಲೀ ದಮನದಿಂದ ಸಿಗುವುವ ಹಕ್ಕು ಸಾರ್ಥಕತೆಯನ್ನು ತರಲಾರದು.
ಪ್ರಕೃತಿಯೇ ವಿಧಿಸಿದ ನಿಯಮಗಳಿಗೆ ಸಮಾನತೆಯ ತೇಪೆ ಹಾಕುವುದು ಸಾಧ್ಯವಾಗದು. ಹುಲಿ ಹುಲಿಯಾಗಿಯೇ ಬದುಕುತ್ತದೆ. ಹಸು ಹಸುವಾಗಿಯೇ ಬದುಕುತ್ತದೆ. ಸಮಾನತೆಯ ಹಕ್ಕು  ಬದುಕುವ ಹಕ್ಕು ಪ್ರತಿಯೊಬ್ಬರಿಗೂ ಇರುತ್ತದೆ. ಮನುಷ್ಯ ತನ್ನ ಮಾನಸಿಕ ಸಂಬಂಧವನ್ನು ಬಲಪಡಿಸಿಕೊಳ್ಳಬೇಕು. ಮಾನಸಿಕ ಸಂಬಂಧ ಬಲಿಷ್ಠವಾದಾಗ ಯಾವ ಸಮಾನತೆಯೂ ಸಹ ಅನಿವಾರ್ಯವಾಗುವುದಿಲ್ಲ. ಕೊಡುಕೊಳ್ಳುವ ವ್ಯವಹಾರವೇ ಪ್ರಪಂಚದ ನಿಯಮ.  ತನ್ನಲ್ಲಿಲ್ಲದೇ ಇರುವುದನ್ನು ಕೊಂಡುಕೊಂಡು ತನ್ನಲ್ಲಿ ಇಲ್ಲದನ್ನು ಕೊಡುವುದೇ ಜೀವನ. ಅದಕ್ಕಾಗಿಯೇ ಇಹಲೋಕ ಜೀವನವನ್ನು ಒಂದು ವ್ಯಾಪಾರವಾಗಿಯೇ ಕಂಡು ಗತಿಸಿದಾಗ ಅವರು ಇಹಲೋಕ ವ್ಯಾಪಾರ ಮುಗಿಸಿದರು ಎನ್ನುವುದು.  ಸಂತುಲನೆಯ ವ್ಯವಹಾರವೇ  ಜೀವನ ಸಾರ್ಥಕತೆಯ ಸಂಕೇತ.