ಮೊನ್ನೆ ಒಂದು ದಿನ ಯಾವುದೋ ವಾರ್ತಾ ವಾಹಿನಿಯಲ್ಲಿ ಮಹಿಳೆಯೊಬ್ಬಳು ಬಿಸಿ ಬಿಸಿ ವಾದ ಮಂಡಿಸುತ್ತಿದ್ದಳು. ಶಬರಿ ಮಲೆ ಕ್ಷೇತ್ರದಲ್ಲಿ ಮಹಿಳೆಯರಿಗೂ ಪ್ರವೇಶ ಒದಗಿಸಬೇಕು. ಆ ಮೂಲಕ ಭಾರತದ ಉಚ್ಚನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ಈ ಮೂಲಕ ಭಾರತದ ಸಂವಿಧಾನವನ್ನೂ ಕಾನೂನನ್ನು ಗೌರವಿಸಬೇಕು. ಮಹಿಳೆಯ ಮಾತಿಗೆ ಸರ್ವಥಾ ಆಕ್ಷೇಪವಿಲ್ಲ. ಸ್ವತಃ ಈ ಮಹಿಳೆ ತಮ್ಮ ನಿತ್ಯ ಜೀವನದಲ್ಲಿ ಎಷ್ಟು ಕಾನೂನನ್ನು ಗೌರವಿಸುತ್ತಾರೆ ಎಂಬುದನ್ನು ಆತ್ಮ ವಂಚನೆಯಿಲ್ಲದ ಅವಲೋಕಿಸಿ ಈ ಮಾತನ್ನು ಆಡಿದ್ದರೆ ಅದಕ್ಕೆ ಪೂರ್ಣ ಸಹಮತವಿದೆ. ಕಾನೂನನ್ನು ಸಂವಿಧಾನವನ್ನು ಭಾರತದ ನಾಗರೀಕನಾದವನು ಒಪ್ಪಿಕೊಳ್ಳಲೇಬೇಕು. ಶಬರಿ ಮಲೆ ಕ್ಷೇತ್ರದ ಪ್ರವೇಶದ ಬಗೆಗಿನ ಚರ್ಚೆ ಒತ್ತಟ್ಟಿಗಿರಲಿ. ಆದರೆ ನಾವು ಕಾನೂನನ್ನು ಎಲ್ಲಿ ಹೇಗೆ ಎಷ್ಟು ಗೌರವಿಸುತ್ತೇವೆ ಎಂದು ಪರಾಂಬರಿಸಿದರೆ ವಿಚಿತ್ರವೆನಿಸುತ್ತದೆ.
ಒಂದು ದಿನ ಸಿಗ್ನಲ್ ಒಂದರಲ್ಲಿ ಎಡಬಾಗಕ್ಕೆ ತಿರುವು ಮುಕ್ತವಿಲ್ಲದೇ ಇದ್ದುದರಿಂದ ಹಸುರು ದೀಪ ಬೆಳಗುವುದಕ್ಕೆ ಕಾಯುತ್ತಾ ನಿಂತಿದ್ದೆ. ಹಿಂದಿನಿಂದ ಒಂದೇ ಸವನೆ ಹಾರನ್ ಕೇಳಿದಾಗ ಹಿಂದಿರುಗಿ ನೋಡಿದೆ. ಮಹಿಳೆಯೊಬ್ಬರು ತಮ್ಮ ದ್ವಿಚಕ್ರ ವಾಹನವನ್ನು ಮುಂದೆ ಚಲಾಯಿಸುವುದಕ್ಕೆ ನನ್ನ ವಾಹನ ತುಸು ಜರಗಿಸುವಂತೆ ಕೇಳಿಕೊಂಡರು. ನಾನು ಕೇಳಿದರೂ ಕೇಳಿಸದಂತೆ ಸುಮ್ಮನೆ ನಿಂತೆ. ಆಕೆ ನಂತರ ಹಾರನ್ ಮಾಡುವುದನ್ನು ಬಿಟ್ಟು ಸಾರ್...ಅಂಕಲ್ ಎನ್ನುತ್ತಾ ಅಸಹನೆಯಿಂದಲೇ ಕೇಳಿಕೊಂಡಳು. ನಾನು ಆ ಕಡೆಗೆ ಗಮನವೇ ಕೊಡದೆ ನನ್ನ ಪಾಡಿಗೆ ಇದ್ದೆ. ನಂತರ ಅಕೆ ಅದು ಹೇಗೋ ಸ್ವಲ್ಪ ಜಾಗ ಮಾಡಿಕೊಂಡು ಕೆಂಪು ದೀಪ ಇನ್ನೂ ಉರಿಯುತ್ತಿದ್ದಂತೆ ಮುಂದೆ ವಾಹನ ಓಡಿಸಿದಳು. ಮಹಿಳೆಯನ್ನು ಕಂಡರೆ ಸುಶಿಕ್ಷಿತ ಮಹಿಳೆಯಂತೆ ಭಾಸವಾಯಿತು. ಇಂತಹ ಅನುಭವಗಳು ಹೊಸದೇನಲ್ಲ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಇದು ವಿಚಿತ್ರವಾಗಿ ವಿಪರ್ಯಾಸವಾಗಿ ಭಾಸವಾಗುತ್ತದೆ. ಖಡ್ಡಾಯವಾಗಿ ಪಾಲನೆ ಮಾಡಲೇಬೇಕಾದಂತಹ ಕಾನೂನನ್ನು ಇಲ್ಲಿ ಉಲ್ಲಂಘನೆ ಮಾಡಿವುದು ಮಾತ್ರವಲ್ಲ ಅದನ್ನು ಅವಹೇಳನ ಮಾಡಲಾಗುತ್ತದೆ. ರಸ್ತೆ ಬದಿಯಲ್ಲಿ ಪೋಲೀ ಸ್ ಇದ್ದಲ್ಲಿ ಮಾತ್ರವೇ ರಸ್ತೆ ನಿಯಮಗಳನ್ನು ಪಾಲಿಸುವಂತಹ ರೀತಿಯನ್ನು ಕಾಣುತ್ತೇವೆ. ಕೊನೆಯಲ್ಲಿ ಇಂತಹ ವ್ಯಕ್ತಿಗಳೇ ಉಚ್ಚನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು ಎನ್ನುವುದನ್ನೂ ಕಾಣಬಹುದು.
ಸಾರ್ವಜನಿಕವಾಗಿ ಧೂಮಪಾನ ಮಾಡಬಾರದು. ಶಿಕ್ಷಾರ್ಹ ಅಪರಾಧ. ಈ ಕಾನೂನು ಎಷ್ಟು ಗೌರವಿಸಲ್ಪಟ್ಟಿದೆ? ರಸ್ತೆ ಬದಿಯಲ್ಲಿ ನಿಂತು ಕೈಯಲ್ಲಿ ಸಿಗರೇಟ್ ಉರಿಸಿ ಹೊಗೆ ಬಿಡುತ್ತಾ ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸಬೇಕು ಎನ್ನುತ್ತಾ ತಾವು ಕಾನೂನಿನ ಪಾಲಕರಂತೆ ಹೇಳುವುದು ಎಷ್ಟರ ಮಟ್ಟಿಗೆ ಸರಿ?
ನಿನ್ನೆ ತಾನೆ ದೀಪಾವಳಿ ಕಳೆಯಿತು. ಹಗಲು ರಾತ್ರಿ ಎನ್ನದೆ ಕಿವಿ ಬಿರಿದು ಹೋಗುವಂತೆ ಪಟಾಕಿ ಸುಡು ಮದ್ದನ್ನು ಉರಿಸಿದ್ದಾಯಿತು. ಎಂಟು ಘಂಟೆಯಿಂದ ಹತ್ತರ ತನಕ ಮಾತ್ರ ಪಟಾಕಿ ಉರಿಸಬಹುದು ಎಂಬ ಸುಪ್ರೀಂ ಕೋರ್ಟು ತೀರ್ಪು ಗೌರವಿಸಬೇಕೆಂಬುದು ಮರೆತು ಹೋಯಿತು. ಊರು ಹೊತ್ತಿ ಉರಿಯಲಿ, ಮನೆ ಮಂದಿ ತಿನ್ನುವುದಕ್ಕೆ ಆಹಾರವಿಲ್ಲದೇ ಉಡುವುದಕ್ಕೆ ಬಟ್ಟೆಯಿಲ್ಲದೇ ಹೋಗಲಿ ಪಟಾಕಿಯಂತು ಸುಡಲೇಬೇಕೆಂಬ ಭಾವನೆ ಜನರಲ್ಲಿದೆ. ರಾತ್ರಿ ಹನ್ನೆರಡು ಕಳೆದರೂ ಕೇಳುವ ಪಟಾಕಿ ಸದ್ದಿಗೆ ಅದೆಷ್ಟು ಜನರು ಹೃದ್ರೋಗಿಗಳು ಪುಟ್ಟ ಕಂದಮ್ಮಗಳು ವಯೋ ವೃದ್ಧರು ಸಂಕಟ ಪಡುವುದು ಕಾಣುವುದಿಲ್ಲ. ಪಟಾಕಿ ಜ್ವಾಲೆಗೆ ಶಾಶ್ವತವಾಗಿ ಕುರುಡರಾಗಿ ಹೋದಂತಹ ಅದೆಷ್ಟೋ ಮಕ್ಕಳು ಇದ್ದಾರೆ. ಪ್ರತಿ ವರ್ಷವೂ ಕಣ್ಣು ಕಳೆದುಕೊಂಡು ಅಂಗಹೀನರಾಗುವುದನ್ನು ಕಾಣುತ್ತೇವೆ. ಆದರೂ ಪಟಾಕಿ ಸದ್ದು ಮಾತ್ರ ಕೇಳುತ್ತಲೇ ಇರುತ್ತದೆ. ನಾವು ರೂಪಿಸುವ ಕಾನೂನೇ ಹಾಗಿರುತ್ತದೆ. ಸಂಪೂರ್ಣ ನಿಷೇಧಿಸಬೇಕಾದುದನ್ನು ಸ್ವಲ್ಪ ನಿಷೇಧಿಸಿ ಮೀಸೆ ಹೊಕ್ಕಿಸುವುದಕ್ಕೆ ಅವಕಾಶ ಮಾಡಿಬಿಡುತ್ತೇವೆ. ಕಾನೂನು ಉಲ್ಲಂಘನೆಗೆ ಅದಷ್ಟೇ ಸಾಕಾಗುತ್ತದೆ.
ಕಾನೂನು ಪಾಲನೆ ಮಾಡುವವನು ಹಳ್ಳಿಗಮಾರನೋ ಎಂಬಂತೆ ನೋಡುತ್ತಾರೆ. ಕಾನೂನು ಉಲ್ಲಂಘನೆ ಮಾಡಿದವನು ಅತಿ ಬುದ್ದಿವಂತ ನಾಗರೀಕನಂತೆ ಕಾಣುತ್ತಾರೆ. ರಸ್ತೆ ಬದಿಗೆ ಪೋಲಿಸ್ ನಿಂತಿದ್ದರೆ ಮಾತ್ರ ತಲೆಗೆ ಹೆಲ್ಮೆಟ್, ಭುಜ ಸೀಟ್ ಬೆಲ್ಟ್ ಬೇಕು. ಕೆಲವು ಪೋಲೀಸರೇ ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸುತ್ತಾ ಕಾನೂನು ಪಾಲನೆ ಮಾಡುವುದನ್ನು ಕಾಣುತ್ತೇವೆ. ಇಲ್ಲೆಲ್ಲೂ ಗೌರವ ಕಾಣದ ಕಾನೂನು ಶಬರಿಮಲೆ ವಿಷಯ ಬರುವಾಗ ಗೌರವಿಸಲೇ ಬೇಕಾದ ಅನಿವಾರ್ಯತೆಗೆ ಒಳಗಾಗುತ್ತದೆ. ಮುಖ್ಯವಾಗಿ ನಮ್ಮಲ್ಲಿ ಸಾರ್ವಜನಿಕ ಪ್ರಜ್ಞೆ ಜಾಗೃತವಾಗಬೇಕು. ಪ್ರತಿಯೊಂದು ವಿಷಯಕ್ಕೂ ವಿದೇಶಿಯರನ್ನು ಅನುಕರಿಸುವ ನಾವು ಕಾನೂನು ಪಾಲನೆಯಲ್ಲಿ ಮಾತ್ರ ವಿದೇಶಿ ಸಂಸ್ಕಾರವನ್ನು ವಿರೋಧಿಸುತ್ತೇವೆ.
ಕಾನೂನು ಎಂಬುದು ಬೇಕಾದಂತೆ ಉಪಯೋಗಿಸಿಕೊಳ್ಳುವ ಬೇಕಾದಲ್ಲಿ ಅನುಕೂಲ ಒದಗಿಸುವ ವಸ್ತುವಾಗಿ ಬಳಸಲ್ಪಡುತ್ತದೆ. ಭಾರತ ಸಂವಿಧಾನದ ನೂರೆಂಟು ಕಾನೂನುಗಳನ್ನು ಪೂರ್ಣವಾಗಿ ದುರ್ಬಳಕೆ ಮಾಡಿಕೊಂಡು ಕೆಲವೊಂದು ಕಾನೂನನ್ನು ತಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತೇವೆ. ಸ್ತ್ರೀಯರನ್ನು ರಕ್ಷಿಸಬೇಕಾದಂತಹ ವರದಕ್ಷಿಣೆ ವಿರೋಧಿ ಕಾನೂನು ಅಮಾಯ ಪುರಷರ ಬದುಕನ್ನೂ ನಾಶ ಮಾಡುವಲ್ಲಿಯೂ ಬಳಸಲ್ಪಡುತ್ತದೆ. ಕಾನೂನು ಸಂವಿಧಾನ ಗೌರವಿಸಲ್ಪಡಲೇಬೇಕು. ಅದು ಕೇವಲ ಅಂಬೇಡ್ಕರ್ ಬರೆದಿದ್ದಾರೆ ಎಂಬ ಒಂದು ಕಾರಣಕ್ಕೆ ಗೌರವಿಸಿದರೆ ಸಾಲದು. ಅದು ಯಾರೇ ಬರೆದಿರಲಿ ಭಾರತೀಯ ಸಂವಿಧಾನ ಪ್ರಜಾಪ್ರಭುತ್ವದ ಸ್ವತಂತ್ರ ಭಾರತದ ಸಂಕೇತವಾಗಿ ಗೌರವಿಸಲ್ಪಡಬೇಕು. ಕಾನೂನನ್ನು ಗೌರವಿಸಲೇ ಬೇಕು ಎಂಬ ಖಡ್ಡಾಯ ಕಾನೂನನ್ನು ರೂಪಿಸಬೇಕಾದ ಆನಿವಾರ್ಯತೆ ಇದೆ.
No comments:
Post a Comment