Monday, December 20, 2021

ಉಪ್ಪಳ ಬಾಯಾರ್ ಬಸ್ಸುಗಳು

 

ಉಪ್ಪಳದಿಂದ ಬಾಯಾರು ನಮ್ಮ ಊರು ಎಂದು ಅಭಿಮಾನದಿಂದ ಹೇಳುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಒಂದು ಇಲ್ಲಿನ ಖಾಸಗೀ ಬಸ್ಸುಗಳು. ಬಾಲ್ಯದಲ್ಲಿ ಉಪ್ಪಳದಿಂದ ಬಾಯಾರಿಗೆ ಕೇವಲ ನಾಲ್ಕು ಬಿಳಿ ಬಣ್ಣದ ಶಂಕರ್ ವಿಟ್ಠಲ್ ಬಸ್ಸುಗಳು ಸಂಚರಿಸುತ್ತಿದ್ದವು.  ಎಲ್ಲವೂ ಒಂದೇ ಬಾಗಿಲಿನ ಬಸ್ಸುಗಳು. ಕುರ್ಚಿಪಳ್ಳ ವಿಟ್ಲ ಪುತ್ತೂರು ಮಂಗಳೂರು ಒಂದು ಕಾಸರಗೋಡು. ಒಂದು ಬಸ್ಸು ತಪ್ಪಿಸಿಕೊಂಡರೆ ಮತ್ತೆ ಬಸ್ಸು ಬರುವುದಕ್ಕೆ ತಾಸುಗಟ್ಟಲೆ ಕಾಯಬೇಕಾದ ಪರಿಸ್ಥಿತಿ.  ಬಸ್ಸಲ್ಲಿ ಸಂಚರಿಸುವಾಗ  ಹೆಚ್ಚಾಗಿ ನಾವು ಡ್ರೈವರ್ ಪಕ್ಕದ ಉದ್ದ ಸೀಟಿನಲ್ಲೇ ಕುಳಿತುಕೊಳ್ಳುತ್ತಿದ್ದೆವು. ಇಲ್ಲಿ ಕುಳಿತರೆ  ಬಸ್ಸಿನ ಎದುರು ಆಚೆ ಈಚೆ ನೋಡುವುದಕ್ಕೆ ಮಾತ್ರವಲ್ಲದೇ ಡ್ರೈವರ್ ಬಸ್ಸು ಚಲಾಯಿಸುವುದನ್ನು ನೋಡುವುದಕ್ಕೆ ಸಾಧ್ಯವಾಗುತ್ತದೆ. ಜನ ಭರ್ತಿಯಾದರೆ ಒಂದೇ ಬಾಗಿಲು  ಅದು ಹಿಂದೆ ಇರುವುದರಿಂದ ಬಹಳ ಕಷ್ಟವಾಗುತ್ತಿತ್ತು. ಬಾಗಲಿ ಬಳಿ ಬರುವಾಗ ಕೆಲವೊಮ್ಮೆ ನಮ್ಮ ನಿಲ್ದಾಣ ಕಳೆದು ಮತ್ತೊಂದು ನಿಲ್ದಾಣಕ್ಕೆ ಬಸ್ಸು ಮುಟ್ಟಿಯಾಗುತ್ತಿತ್ತು.  ಶಂಕರ್ ವಿಟ್ಠಲ್ ಬಸ್ಸೆಂದರೆ  ಬಿಸ್ಕಿಟ್ ಡಬ್ಬಿಯ  ಬಣ್ಣದ  ಬಸ್ಸುಗಳು. ಆಗ ಕಾಯರ್ ಕಟ್ಟೆಯ ಶಾಲಾ ಪ್ರವಾಸಕ್ಕೆಂದು ಬಂದ ಬಣ್ಣ ಬಣ್ಣದ ಭಾರತ್ ಬಸ್ಸು ನೋಡಿ ಆಶ್ಚರ್ಯಗೊಂಡಿದ್ದೆವು.  ನಮ್ಮೂರ ರಸ್ತೆಯಲ್ಲಿ ಬಣ್ಣ ಬಣ್ಣದ ಬಸ್ ಯಾವಾಗ ಸಂಚರಿಸುತ್ತದೋ ಎಂದು  ನಿರೀಕ್ಷೆಯಲ್ಲಿದ್ದೆವು. ಸಹಜವಾಗಿ ಬಣ್ಣದ  ಬಸ್ಸುಗಳನ್ನು ನೋಡಬೇಕಿದ್ದರೆ ಉಪ್ಪಳಕ್ಕೆ ಬರಬೇಕಿತ್ತು. ಇಲ್ಲ ಮಂಗಳೂರಿಗೆ ಹೋಗಬೇಕಿತ್ತು. ಮಂಗಳೂರಿಗೆ ಹೋದರೆ ಎರಡು ಬಾಗಿಲಿನ ಅದ್ಭುತ ಬಣ್ಣ ಬಣ್ಣದ ಬಸ್ಸುಗನ್ನುಕಾಣಬಹುದಿತ್ತು.

 

ಪುತ್ತೂರು ಕುರ್ಚಿಪ್ಪಳ್ಳ (ಉಪ್ಪಳ) ನಡುವೆ ಓಡುತ್ತಿದ್ದ ಶಂಕರ್ ವಿಟ್ಠಲ್


ಶಂಕರ್ ವಿಟ್ಠಲ್ ಬಸ್ಸು  ಆಗ ಅದೊಂದು ಅದ್ಭುತ ಪ್ರಪಂಚ. ಪೀರ್ ಸಾಹೇಬರು, ಮಹಾಬಲ ಶೆಟ್ರು ಗೋಪಾಲಣ್ಣ, ಮಣಿಯಾಣಿ ಈ ಡ್ರೈವರ್ ಗಳು ಮಹಾ ಪುರುಷರಂತೆ ದೊಡ್ಡ ಹೀರೋ ನಂತೆ ಕಾಣುತ್ತಿದ್ದೆವು. ಸಾಮಾನ್ಯವಾಗಿ ಡ್ರೈವರ್ ಹೆಸರೇ ಬಸ್ಸಿಗೆ ಇರುತ್ತಿತ್ತು. ಈ ಡ್ರೈವರ್ ಗಳೋ ಬಹಳ ಸ್ನೇಹಪರರು. ಮಕ್ಕಳ ಬಗ್ಗೆ ಅಕ್ಕರೆ. ಅದರಲ್ಲೂ ಪೀರು ಸಾಹೇಬರು ಒರಟು ಮಾತನಾಡಿದರೂ ಬಹಳ ಸಜ್ಜನ ವ್ಯಕ್ತಿ. ನಾವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರಬೇಕಾದರೆ ಬಸ್ಸು ಬರುವಾಗ ರಸ್ತೆಯ ಅಂಚಿನಲ್ಲಿದ್ದರೆ ಬಸ್ಸು ನಿಲ್ಲಿಸಿ ದೂರ ನಿಲ್ಲುವಂತೆ ಹೇಳುತ್ತಿದ್ದರು. ಈಗಿನ ಗಡಿಬಿಡಿಯ ಚಾಲಕರಿಗೆ ಇದಕ್ಕೆ ಪುರುಸೊತ್ತೆಲ್ಲಿದೆ. ಹಲವು ಸಲ ದೂರದ ವಿಟ್ಲ ಪುತ್ತೂರಲ್ಲಿ ಯಾರಿಗಾದರೂ ಏನಾದರೂ ಕೊಡಬೇಕಿದ್ದರೆ  ಅದನ್ನು ಕಟ್ಟಿ ಇವರಲ್ಲಿ ಕೊಟ್ಟರೆ ಸುರಕ್ಷಿತವಾಗಿ ಯಾರಿಗೆ ಸೇರಬೇಕೋ ಅವರಿಗೆ ಖರ್ಚಿಲ್ಲದೇ ಸೇರುತ್ತಿತ್ತು. ಈಗಲೂ ಅಲ್ಲೊಂದು ಇಲ್ಲೊಂದು ಈ ಬಗೆಯವರು ಇದ್ದಾರೆ.  ನನಗೆ ಈಗಲೂ ಉಪ್ಪಳ ಬಾಯಾರು ರಸ್ತೆಯ ತಿರುವುಗಳನ್ನು ನೋಡುವಾಗ ಗೋಪಾಲಣ್ಣ ಮಹಾಬಲ ಶೆಟ್ರು ಸಾಯಿಬರು ಬಸ್ಸು ತಿರುಗಿಸುತ್ತಿದ್ದದ್ದು ನೆನಪಿಗೆ ಬರುತ್ತದೆ. ಇವರೆಲ್ಲಾ ಒಂದೂ ಅವಗಢಕ್ಕೆ(ಆಕ್ಸಿಡೆಂಟ್) ಕಾರಣರಾದವರಲ್ಲ. ವಾಹನಗಳು ಕಡಿಮೆ ಇದ್ದರೂ ಇವರ ಚಾಲನೆಗೆ ಪ್ರಶಸ್ತಿ ಸಲ್ಲಬೇಕಿದೆ. ಪವರ್ ಸ್ಟೇರಿಂಗ್ ಇಲ್ಲದ ಆ ಹಳೆಯ ಬಸ್ಸುಗಳನ್ನು ಕಡಿದಾದ ತಿರುವು ರಸ್ತೆಯಲ್ಲಿ ಚಲಾಯಿಸುವುದು ಅಷ್ಟು ಸುಲಭವಲ್ಲ. ಬಾಲ್ಯದಲ್ಲಿ ಲಾರೀ ಮೂತಿಯ ಶಂಕರ್ ವಿಠಲ್ ಬಸ್ಸು ಸಂಚರಿಸುತ್ತಿದ್ದ ನೆನಪು ಈಗಲೂ ಇದೆ.

 

ಆಗಿನ ಕಾಲದಲ್ಲಿ ಬಸ್ಸುಗಳು ನಿಧಾನವಾಗಿ ಸಂಚರಿಸುತ್ತಿದ್ದವು ಬಸ್ ತುಂಬಿದ್ದರೆ ಉಪ್ಪಳದಿಂದ ಬಾಯಾರು ತಲಪುವುದಕ್ಕೆ ಒಂದು ತಾಸಿಗಿಂತಲೂ ಹೆಚ್ಚು ತೆಗೆದುಕೊಂಡ ಉದಾಹರಣೆಗಳು ಸಾಕಷ್ಟು ಇವೆ. ಆರು ಘಂಟೆಗೆ ಬರಬೇಕಾದ ಬಸ್ಸು ಏಳಾದರೂ ಬರುತ್ತಿರಲಿಲ್ಲ.  ನಮ್ಮ ಕಾಯರ್ ಕಟ್ಟೆಯ ಮಾಣಿಪ್ಪಾಡಿ ಗುಡ್ಡೆಯಲ್ಲಿ ನಿಂತರೆ ದೂರದ ಕನ್ಯಾನದಿಂದ ಬರುವ ಶಂಕರ್ ವಿಟ್ಟಲ್ ಬಸ್ಸು ಕಾಣುತ್ತಿತ್ತು. ಅಲ್ಲಿಂದ ಓಟ ಹಿಡಿದು ಚಪ್ಪಲಿ ಹೆಗಲಿಗೆ ಕಟ್ಟಿ ಪಂಚೆ ತಲೆಗೆ ಮುಂಡಾಸು ಸುತ್ತಿ ಬರೀ ಚಡ್ಡಿಯಲ್ಲೇ ಓಡುತ್ತಾ ಬಂದು   ಕಾಯರ್ ಕಟ್ಟೆಯಲ್ಲಿ ಬಸ್ಸು ಹತ್ತುವವರನ್ನು ಎಷ್ಟೋ ಸಲ ಕಂಡಿದ್ದೇನೆ. 

ಉಪ್ಪಳದಿಂದ ಬಾಯಾರು ವರೆಗೂ ಬಸ್ ಗೆ ಟಿಕೇಟ್ ಕೊಡುವುದಕ್ಕೆ ಅಲ್ಲಲ್ಲಿ ಏಜಂಟ್ ಗಳಿರುತ್ತಿದ್ದರು. ಉಪ್ಪಳದಲ್ಲಿ ಶೆಣೈಯವರು ಏಜಂಟ್ ಆಗಿದ್ದದ್ದು ಬಾಯಾರು ಪದವಿನಲ್ಲಿ ಗೋವಿಂದಣ್ಣ ಏಜಂಟ್ ಆಗಿದ್ದರು. ಪೈವಳಿಕೆ ಜೋಡುಕಲ್ಲು ಹೀಗೆ ಪ್ರತಿಯೊಂದು ಜಾಗದಲ್ಲೂ ಏಜಂಟ್ ಗಳು ಇರುತ್ತಿದ್ದರು.

 ಆಗ ತಿಂಗಳಿಗೊಮ್ಮೆಯೋ ವರ್ಷಕ್ಕೊಮ್ಮೆಯೋ ಬಸ್ಸಿನಲ್ಲಿ ದೂರದ ಮಂಗಳೂರಿಗೆ ಪಯಣಿಸುವುದೆಂದರೆ ಅದೆಷ್ಟು ಸಂಭ್ರಮ. ಸಂಜೆ ಹೋಗಬೇಕಿದ್ದರೆ ಬೆಳಗ್ಗೆಯೇ ಸ್ನಾನ ಮಾಡಿ ಪೌಡರ್  ಬಳಿದು ಕ್ರಾಪ್ ಮಾಡಿ  ಸಜ್ಜಾಗುತ್ತಿದ್ದೆವು.  ಆ ಸಂಭ್ರಮ ಈಗ  ಎಸಿ ಕಾರಲ್ಲಿ ಸಂಚರಿಸಿದರೂ ಸಿಗಲಾರದು. ಬಸ್ಸು ಹತ್ತಿ ಕಿಟಬಳಿಯಲ್ಲಿ ನಿಂತು ಹೊರಗೆ ಬೀಸುವ ಗಾಳಿಗೆ ಮುಖ ಒಡ್ಡಿ ಸಂಚರಿಸುತ್ತಿದ್ದರೆ ದಿಗ್ವಿಜಯದ ಅನುಭವ. ಮಳೆಬಂದರೆ ದಪ್ಪದ ಟರ್ಪಾಲು ಇಳಿಸಿದರೆ ಹೊರಗೆ ಕತ್ತಲೆಯೋ ಬೆಳಕೋ ಎಲ್ಲಿಗೆ ತಲುಪಿತೋ ಒಂದು ತಿಳಿಯುತ್ತಿರಲಿಲ್ಲ. ತೋರು ಬೆರಳಿಂದ ಟರ್ಪಾಲನ್ನು ತುಸು ಎತ್ತಿ ಇಣುಕುತ್ತಿದ್ದದ್ದು ಈಗಲೂ ನೆನಪಿಗೆ ಬರುತ್ತದೆ.

 ಹೆಚ್ಚಿನ ಎಲ್ಲ ಡ್ರೈವರ್ ಕಂಡಕ್ಟರ್ ಗಳಿಗೆ ನಮ್ಮ ಪರಿಚಯ ಇರುತ್ತಿತ್ತು. ಒಂದು ಸಲ ರಾತ್ರಿ ಕೊನೆಯ ಬಸ್ಸಿನಲ್ಲಿ ಉಪ್ಪಳದಿಂದ ಬಂದಾಗ ನಿದ್ರೆಗೆ ಜಾರಿದ್ದ ನಮ್ಮನ್ನು  ಪೈವಳಿಕೆ ತಲಪುವಾಗ ಕಂಡಕ್ಟರ್ ಎಬ್ಬಿಸಿ ಇಳಿಸಿದ್ದ ನೆನಪು ಮರೆಯುವುದಕ್ಕಿಲ್ಲ.  ಒಂದು ಸಲ ಶಂಕರ್ ವಿಟ್ಠಲ್ ಬಸ್ಸು ನಮ್ಮ ಮನೆಯಬಳಿಯೇ ಹಾಳಾಗಿ ಎರಡು ದಿನ ಇತ್ತು. ಆಗ ನಮ್ಮ ಮನೆಯಿಂದಲೇ ನೀರು ತಿಂಡಿ ತೆಗೆದುಕೊಂಡು ಕೊಟ್ಟದ್ದು ಒಂದು ಸಂಭ್ರಮ. ಕೆಟ್ಟು ನಿಂತ ಬಸ್ಸಿನಲ್ಲಿ ಕಣ್ಣು ಮುಚ್ಚಾಲೆ ಆಟ ಆಡಿದ್ದು...ಈಗ ಅಂತಹ ಗಮ್ಮತ್ತು ಯಾವ ಮಕ್ಕಳಿಗೆ ಸಿಗಬಹುದು?

  ಹಳ್ಳಿಯ ಬಸ್ಸುಗಳೆಂದರೆ ಗಡಿಯಾರದಂತೆ. ಜನಗಳು ಬೆಳಗಾಗುವುದನ್ನೂ ಹೊತ್ತು ಮಧ್ಯಾಹ್ನವಾಗುವುದನ್ನು ಬಸ್ಸು ಸಂಚಾರದಿಂದ ತಿಳಿಯುತ್ತಿದ್ದರು. ವಾಚ್ ಇಲ್ಲದೇ ಇದ್ದ ಜನಗಳಿಗೆ ಸಮಯ ತೋರಿಸಿಕೊಡುತ್ತಿದ್ದದ್ದು ಶಂಕರ್ ವಿಟ್ಠಲ್ ಬಸ್ಸುಗಳು.

 

ರಾತ್ರಿ ಉಪ್ಪಳದಿಂದ ಹೊರಡುವ ಬಸ್ಸಿನಲ್ಲಿ  ಡ್ರೈವರ್ ಕಂಡಕ್ಟರ್ ಗೆ ಹತ್ತಿರದ ಸತ್ಯನಾರಾಯಣ ಹೋಟೆಲಿನ ಹುಡುಗ ಊಟ ತಂದಿಡುತ್ತಿದ್ದ. ಈಗಿನ ಝೋಮೋಟೊ ಸ್ವೀಜಿ ಪಾರ್ಸೆಲ್ ಗಿಂತಲೂ  ಮೊದಲೇ ಉಪ್ಪಳದ ಸತ್ಯನಾರಾಯಣ ಹೋಟೆಲಿನವರು ಅಂದು ಪಾರ್ಸೆಲ್ ಮಾಡಿ ತೋರಿಸಿದ್ದರು. ಊಟವೂ ಚೆನ್ನಾಗಿ ಕಟ್ಟಿ ಕಳುಹಿಸಿಕೊಡುತ್ತಿದ್ದರು. 

ಮೂರು ನಾಲ್ಕು ಶಂಕರ್ ವಿಟ್ಠಲ್ ಬಸ್ಸು ಓಡುತ್ತಿದ್ದ ರಸ್ತೆಯಲ್ಲಿ ಬಣ್ಣ ಬಣ್ಣದ ಪೆರುವಡಿ ಮೋಟಾರ್ಸ್ ಎಂಬ ಬಸ್ಸು ಕನಿಯಾಲದಿಂದ ತಲಪಾಡಿಗೆ ಹೊಸದಾಗಿ ತನ್ನ ಓಡಾಟ ಆರಂಭಿಸಿತ್ತು. ಅದು ವರೆಗೆ ಮಂಗಳೂರಿಗೆ ಹೋಗುವಾಗ ಉಪ್ಪಳದಲ್ಲಿ ಇಳಿದು ತಲಪಾಡಿಗೆ ಬೇರೆ ಬಸ್ಸು ಹಿಡಿಯಬೇಕಿತ್ತು. ಹೀಗೆ ನಮ್ಮೂರಿಂದ ನೇರವಾಗಿ ತಲಪಾಡಿಗೆ ಬಸ್ಸು ಆರಂಭವಾಗಿದ್ದು ಬಾಲ್ಯದಲ್ಲಿ ಅದರಲ್ಲೆ ಸಂಚರಿಸುವುದೂ ಒಂದು ಸಂಭ್ರಮವಾಗಿತ್ತು. ಕ್ರಮೇಣ ಹಲವಾರು ಹೊಸ ಬಸ್ಸುಗಳು ಬಂದು, ತಾಸಿಗೊಂದು ಬಸ್ಸು ಇದ್ದ ರಸ್ತೆಯಲ್ಲಿ ಐದು ನಿಮಿಷಕ್ಕೊಂದು ಬಸ್ಸು ಸಂಚರಿಸಿ ಬಾಯಾರು ಉಪ್ಪಳ ರಸ್ತೆ ಒಂದು ನಗರ ಸಾರಿಗೆಯಂತೆ ಬದಲಾಗಿಬಿಟ್ಟಿತು.

 ಒಂದು ಕಾಲದಲ್ಲಿ ಜನರ ಜೀವನಾಡಿಯಾಗಿದ್ದ ಶಂಕರ್ ವಿಟ್ಠಲ್ ಬಸ್ಸುಗಳು ಕಾರಣಾಂತರದಿಂದ ಮಾಯವಾಗಿಬಿಟ್ಟಿತು. ರೂಟ್ ಸಹಿತ ಬಸ್ಸುಗಳನ್ನು ಬೇರೆಯವರಿಗೆ ಮಾರಾಟ ಮಾಡಲಾಯಿತು. ಬಸ್ಸುಗಳು ಎಷ್ಟೇ ಬಂದರೂ ಉಪ್ಪಳ ಬಾಯಾರು ಬಸ್ಸುಗಳು ತುಂಬಿದ ಪ್ರಯಾಣಿಕರಿಂದ ಸಂಚರಿಸುತ್ತಿತ್ತು.  ಕ್ರಮೇಣ ದೂರದ ಮಂಗಳೂರಿಗೂ ನೇರ ಬಸ್ಸು ಬಂತು. ತಿಂಗಳಿಗೊಮ್ಮೆ ಆಗುವ ಬಸ್ ಮುಷ್ಕರ, ಅದರೊಡನೆ ಹೋರಾಡುವ ಜನಸಾಮಾನ್ಯ ಅದೊಂದು ಕಾಲ ಎಂದಿದ್ದರೆ  ಕಾಲ ಬದಲಾದಂತೆ ಜನಜೀವನವೂ ಬದಲಾಗಿಬಿಟ್ಟಿತು. ಈಗ ಪ್ರತಿಮನೆಯಲ್ಲೂ ಒಂದೆರಡು ವಾಹನಗಳು ಬಂದಿವೆ. ಬಹಳಷ್ಟು ಮನೆ ಮುಂದೆ ಐಷಾರಾಮಿ ಕಾರುಗಳೂ ರಾರಾಜಿಸುತ್ತವೆ. ಜನಗಳಿಗೆ ಬಸ್ಸು ಅನಿವಾರ್ಯ ಎಂದೆನಿಸುವುದಿಲ್ಲ. ಏನಿದ್ದರು ನಮ್ಮ ಬಾಲ್ಯದ ಉಪ್ಪಳ ಬಾಯಾರು ಪಯಣ ಅದು ಮರೆಯುವುದಕ್ಕಿಲ್ಲ.

 

 

 

 

 


No comments:

Post a Comment