ಯಾವ ಸೀಟು ಖಾಲಿ ಇದೆ ಎಂದು ಬಸ್ ಹತ್ತಿದ ಕೂಡಲೇ ನೋಡುವುದಕ್ಕೆ ತೊಡಗುತ್ತೇವೆ. ಖಾಲಿ ಇದ್ದರೆ ಅಲ್ಲಿ ಬೇರೆ ಯಾರು ಕುಳಿತಿದ್ದಾರೆ ಎಂದು ಗಮನಿಸುತ್ತೇವೆ.ಅಲ್ಲಿ ಮೊದಲೇ ಕುಳಿತಿರುವ ವ್ಯಕ್ತಿ ಹೇಗಿದ್ದಾನೆ ಎಂದು ನೋಡುತ್ತೇವೆ. ನೋಡಿದಾಗ ಸ್ವಚ್ಛವಿಲ್ಲದ ಮೈಯೆಲ್ಲಾ ಕೊಳೆ ಇದ್ದುಕೊಂಡು ಮಲೀನ ವಸ್ತ್ರವೋ ಉಟ್ಟಿದ್ದರೆ, ಅಥವಾ ಮದ್ಯ ಸೇವಿಸಿ ವಾಸನೆ ಬರುತ್ತಿದ್ದರೆ, ಹೀಗೆ ನಮಗೆ ಅಸಹ್ಯವೆನಿಸುವ ಸ್ಥಿತಿಯಲ್ಲಿದ್ದರೆ ಆ ಸೀಟನ್ನು ಬಿಟ್ಟು ಮತ್ತೊಂದು ಸೀಟನ್ನು ಹಿಡಿಯುತ್ತೇವೆ. ಬೇರೆ ಯಾವ ಸೀಟು ಖಾಲಿ ಇಲ್ಲದೇ ಅದೊಂದೇ ಇದ್ದರೆ ಅನಿವಾರ್ಯ ಎನಿಸಿದರೆ ಕುಳಿತು ಬಿಡುತ್ತೇವೆ. ಅದೂ ಆ ಮಲೀನ ವ್ಯಕ್ತಿಯನ್ನು ಆದಷ್ಟು ಸ್ಪರ್ಶಿಸದೇ ಕುಳಿತು ಬಿಡುತ್ತೇವೆ. ಅದೂ ಸಾಧ್ಯವಾಗದಿದ್ದರೆ ಎದ್ದು ನಿಂತು ಬಿಡುತ್ತೇವೆ. ಯಾಕೆಂದರೆ ಇದು ವ್ಯಕ್ತಿಯ ಮೂಲಭೂತವಾದ ಸ್ವಾತಂತ್ರ್ಯ. ಹಲವು ಸಲ ಈ ಮೂಲಭೂತವಾದ ಸ್ವಾತಂತ್ರ್ಯ ಉಪಯೋಗಿಸುವುದೂ ಅಸ್ಪೃಶ್ಯತೆ ಎನಿಸಲ್ಪಟ್ಟರೆ ಹೇಗಿರಬಹುದು? ಈ ಚಿಂತನೆ ಮೇಲ್ನೋಟಕ್ಕೆ ಅಸ್ಪೃಶ್ಯತೆಯನ್ನು ಒಪ್ಪಿಕೊಳ್ಳುವಂತೆ ಅನಿಸಬಹುದು.
ನಮಗೆ ಬೇಕಾದ ಆಹಾರ, ನಮಗೆ ಬೇಕಾದ ವ್ಯವಹಾರ , ನಮಗೆ ಬೇಕಾದ ಬಟ್ಟೆ ಬಂಗಾರ ಎಲ್ಲವನ್ನು ಬೇಕಾದಂತೆ ತೊಡುವ ಸ್ವಾತಂತ್ರ್ಯ ನಮಗಿದೆ. ಹಾಗೆ ನಮ್ಮನ್ನು ಯಾರು ಮುಟ್ಟಬಹುದು, ಯಾರು ಮುಟ್ಟಬಾರದು ಎಂಬ ನಿರ್ಧಾರವೂ ನಮ್ಮ ಮೂಲಭೂತ ಸ್ವಾತಂತ್ರ್ಯ. ನಮ್ಮ ಕೈ ಹಿಡಿದ ಹೆಂಡತಿಯಾದರೂ ಆಕೆಗೆ ಇಷ್ಟವಿಲ್ಲದೇ ಇದ್ದಾಗ ಮುಟ್ಟಿದರೆ ಸಿಡಿಮಿಡಿಗೊಳ್ಳುವುದಿಲ್ಲವೇ? ಇದು ವ್ಯಕ್ತಿ ಸ್ವಾತಂತ್ರ್ಯ. ಆದರೆ ಇಂದು ಅಸ್ಪೃಶ್ಯತೆ ಎಂಬ ವಾದ ಮೂಲಭೂತವಾದ ಸ್ವಾತಂತ್ರ್ಯದ ಪರಿಧಿಯನ್ನು ದಾಟುವಂತೆ ಭಾಸವಾಗುತ್ತದೆ. ನಮಗೆ ನಾವು ಸಸ್ಯಾಹಾರಿಗಳಾದರೆ ಅದೂ ಅಪಹಾಸ್ಯಕ್ಕೆ ಎರವಾಗುತ್ತದೆ. ಬಿಳಿ ಪಂಚೆ ಉಟ್ಟುಕೊಂಡು ಶಲ್ಯ ಹೊದ್ದುಕೊಂಡು ಮುಖಕ್ಕೆ ತಿಲಕವೋ ಭಸ್ಮವೋ ಬಳಿದುಕೊಂಡು ಬಂದರೆ ಅದೂ ಅಪಹಾಸ್ಯ ಮಾತ್ರವಲ್ಲ ನಿಯಮ ಬಾಹಿರವೂ ಆಗಿಬಿಡುತ್ತದೆ. ಯಾಕೆ ಇವುಗಳೆಲ್ಲ ಹಕ್ಕು ಬಾಧ್ಯತೆಯ ಉಲ್ಲಂಘನೆಯಾವುದಿಲ್ಲ?
ನಮ್ಮ ಸಮ್ಮತಿ ಇಲ್ಲದೇ ನಮ್ಮನ್ನು ಸ್ಪರ್ಶಿಸುವ ಅಧಿಕಾರ ಒಬ್ಬನಿಗೂ ಇಲ್ಲ. ಜನಜಂಗುಳಿ ಇದ್ದಾಗ ನಾವು ನಮ್ಮನ್ನು ಸ್ಪರ್ಶಿಸಿದರೂ ಆಗಬಹುದು ಎಂದು ಒಪ್ಪಿಕೊಂಡು ಜನಜಂಗುಳಿಯೊಳಗೆ ನುಸುಳಬಹುದು. ಅದಿಲ್ಲದೇ ನನ್ನನ್ನು ಯಾರೂ ಮುಟ್ಟುವುದು ನನಗಿಷ್ಟವಿಲ್ಲ ಎಂದು ಏಕಾಂತದಲ್ಲಿ ಕುಳಿತರೆ ಅದು ಅಸ್ಪೃಶ್ಯತೆ ಎನಿಸಬಹುದೇ? ಹೀಗೆ ಜಿಜ್ಞಾಸೆ ಹುಟ್ಟಿಕೊಳ್ಳುತ್ತದೆ. ನನಗೆ ಎಂದಲ್ಲ ಹಲವರಿಗೂ ಅದೊಂದು ರೀತಿಯ ಸ್ವಭಾವ ಪ್ರಜ್ಞೆ ಇರುತ್ತದೆ. ಗಲೀಜು ಇದ್ದರೆ ನಮ್ಮವರೇ ಆದರೂ ನಾವು ಮುಟ್ಟುವುದಕ್ಕೆ ಹಿಂಜರಿಯುತ್ತೇವೆ. ಮಕ್ಕಳೋ ಆತ್ಮೀಯರೋ ಇನ್ನಾರೋ ಆದರೆ ಹೋಗಿ ಸ್ನಾನ ಮಾಡಿ ಬಾ ಅಂತ ಗದರುತ್ತೇವೆ. ಯಾಕೆ ಈ ಹೇಸಿಕೆ ಎಂಬ ಅನಿಸಿಕೆ ಅಪರಾಧವಾಗುತ್ತದೆ?
ನಮ್ಮೂರಿನ ಹಳ್ಳಿಯ ದೇವಸ್ಥಾನಗಳಲ್ಲಿ ಅರ್ಚಕ ನದಿಯಲ್ಲೋ ಕೆರೆಯಲ್ಲೋ ಸ್ನಾನ ಮಾಡಿ, ಅದೇ ಮತ್ತೆ ಯಾರೂ ತನ್ನನ್ನು ಮುಟ್ಟದಂತೆ ಶುದ್ಧಾಚಾರದಿಂದ ಗರ್ಭಗುಡಿಯೊಳಗೆ ಹೋಗುತ್ತಾನೆ. ಆಧುನಿಕ ಜಗತ್ತಿನಲ್ಲಿ, ಸಾರ್ವಜನಿಕ ನಿಯಮದಲ್ಲಿ ಇದೂ ಅಸ್ಪೃಶ್ಯತೆ ಎನಿಸಲ್ಪಡಬಹುದು. ಒಂದು ಗಮನಿಸಬೇಕು. ಇಲ್ಲಿ ಅರ್ಚಕ ತನ್ನ ಮನೆಯವರೇ ಬಂದರೂ ಸಹ ದೂರ ನಿಲ್ಲುವಂತೆ ಹೇಳುತ್ತಾನೆ. ಇಲ್ಲಿ ಜಾತಿಯಿಂದಲೋ ಧರ್ಮದಿಂದಲೋ ದೂರ ಆಗದೇ ಇರಬಹುದು. ಆದರೂ ಬೇರೆ ಧರ್ಮದವನೋ ಅನ್ಯನೋ ಸ್ನಾನ ಮಾಡಿ ಶುಧ್ಧದಲ್ಲಿ ಬಂದರೆ ಮುಟ್ಟಬಹುದೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಇಲ್ಲೂ ಮೂಲಭೂತವಾದ ಸ್ವಾತಂತ್ರ್ಯ ಎಂಬುದಿದೆ. ನಾವು ಸಂಧ್ಯೆಗೋ ಧ್ಯಾನದಲ್ಲೂ ಕುಳಿತಿರಬೇಕಾದರೆ , ನಮ್ಮಲ್ಲಿ ಏಕಾಗ್ರತೆ ಮೂಡಬೇಕಾದರೆ ನಮ್ಮ ಪ್ರಭಾ ವಲಯ ಎಂಬುದೊಂದು ಇದೆ. ಅದರ ಒಳಗೆ ಇನ್ನೊಬ್ಬರು ಅತಿಕ್ರಮಿಸಬಾರದು. ಯೋಗಾಭ್ಯಾಸದಲ್ಲಿ ಈ ನಿಯಮ ಖಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಏಕಾಗ್ರತೆ ಪರಿಪೂರ್ಣವಾಗಿ ಸಿದ್ಧಿಯಾಗುವುದಿಲ್ಲ. ಮನಸ್ಸು ಚಂಚಲವಾಗುತ್ತದೆ. ಸೂಕ್ಷ್ಮವಾಗಿ ನಮ್ಮ ಏಕಾಗ್ರತೆಯನ್ನು ನಾವು ಕಳೆದುಕೊಳ್ಳುತ್ತೇವೆ ಎಂದಿದ್ದರೆ ಅದು ಭಗವಂತನಿಗೆ ಮಾಡಿದ ಅಪಚಾರವಾಗುತ್ತದೆ. ಯಾಕೆಂದರೆ ನಮ್ಮ ಭಾವದಲ್ಲಿ ಪರಮಾತ್ಮ ಎಂಬುದರಲ್ಲಿ ಒಂದು ಪವಿತ್ರತೆ ಇರುತ್ತದೆ. ಇದೆಲ್ಲ ಅಸ್ಪೃಶ್ಯತೆ ಎಂದು ಪರಿಗಣಿಸಿದರೆ ಮೂಲಭೂತವಾದ ಸ್ವಾತಂತ್ರ್ಯ ಎಂಬುದಕ್ಕೆ ಅರ್ಥ ಇರುವುದಿಲ್ಲ.
ನನ್ನದೇ
ಮನೆಯಲ್ಲಿ ಸ್ನಾನ ಮಾಡಿ ದೇವರ ಪೂಜೆಗೆ ಅಣಿಯಾಗುವಾಗ ಮನೆಯವರೇ ಆದರೂ
ನನ್ನನ್ನು ಸ್ಪರ್ಶಿವುದನ್ನು ನಾನು ಬಯಸುವುದಿಲ್ಲ. ಏನೋ ಒಂದು ಮಲೀನವಾದ ಭಾವ ಮನಸ್ಸಿಗೆ
ಬಂದು ಬಿಡುತ್ತದೆ. ಪ್ರತಿ ಪೂಜೆಯಲ್ಲಿ ಯಾವುದೇ ಕ್ರಿಯೆಯ ಆರಂಭದಲ್ಲಿ ಮತ್ತು ನಂತರ ಆಚಮನ ಎಂದು
ಆಚರಿಸುತ್ತೇವೆ. ಪರಮಾತ್ಮನ ಸ್ಮರಣೆಯಲ್ಲಿ ಇದನ್ನು ಆಚರಿಸುವ ಉದ್ದೇಶವೆಂದರೆ, ನಮ್ಮನ್ನು
ನಾವು ಪರಿಶುದ್ಧಗೊಳಿಸುವುದು. ಯಾವುದೇ ಪೂಜೆ ಆರಾಧನೆಯ ಆರಂಭವಾಗುವುದೇ ಆಚಮನ ಪ್ರಾಣಾಯಾಮದಿಂದ.
ಯಾಕೆಂದರೆ ಮುಂದಿನ ಕ್ರಿಯೆಗೆ ನಮ್ಮನ್ನು ನಾವು ಶುಚಿಗೊಳಿಸುವುದು. ಸ್ನಾನಾದಿಗಳನ್ನು ಮಾಡಿ
ಸ್ವಚ್ಛವಾಗಿದ್ದರೂ ಸಹ ಅಚಮನ ಪ್ರಾಣಾಯಾಮ ಮಾಡದೇ ಮತ್ತಿನ ಕ್ರಿಯೆ ಅಸಾಧುವಾಗುತ್ತದೆ.
ಪರಮಾತ್ಮನೊಂದಿಗಿನ ನಮ್ಮ ಸಂಬಂಧ ಅತ್ಯಂತ
ಪವಿತ್ರವಾಗಿರಬೇಕಾರುತ್ತದೆ. ಇಲ್ಲಿಯ ಪಾವಿತ್ರ್ಯತೆ
ದೇಹದಿಂದಲೂ ಮನಸ್ಸಿನಿಂದಲೂ ಶುದ್ಧಿಯಾಗಿರಬೇಕೆಂಬುದೇ ಆಗಿರುತ್ತದೆ. ವಾಸ್ತವದಲ್ಲಿ ಪರಮಾತ್ಮ ನಾಮ ಸ್ಮರಣೆಯಿಂದ ನಮ್ಮ
ಜೀವಭಾವವನ್ನು ತೊರೆದು ಪರಿಶುದ್ದಾತ್ಮರಾಗಿ ಮೋಕ್ಷವನ್ನು ಸಾಧಿಸುವುದೇ ಮನುಷ್ಯನ ಜನನದ
ಗುರಿಯಾಗಿರುತ್ತದೆ. ಹುಟ್ಟಿದ ಜೀವಿ ಪರಮಾತ್ಮನಲ್ಲಿ ಐಕ್ಯವಾಗಬೇಕಾದರೆ ಎಲ್ಲಾ ಪಾಪ ಕರ್ಮಂದಿದ
ಮುಕ್ತರಾಗಿ ಶುಚಿಗೊಂಡು ಪಾವನರಾಗಿ ಪರಮಾತ್ಮನನ್ನು ಸೇರಬೇಕು. ಇದನ್ನೇ
ಮೋಕ್ಷ ಎನ್ನುವುದು. ಈ ಪರಿಶುದ್ಧೀ ಭಾವವೇ
ನಮ್ಮನ್ನು ಕಲ್ಮಶವನ್ನು ಸ್ಪರ್ಶಿಸದಂತೆ ತಡೆಯುತ್ತದೆ. ನಾವು ಕಲ್ಮಶರಾಗುವುದೆಂದರೆ ಪಾಪವನ್ನು
ಸುತ್ತಿಕೊಂಡಂತೆ. ಇಲ್ಲೆಲ್ಲ ಇದು ಅಸ್ಪೃಶ್ಯತೆ
ಎಂಬ ದೃಷ್ಟಿಯಿಂದ ಕಾಣಬಹುದೇ ಎಂಬ ಯೋಚನೆ ಸಹಜವಾಗಿ ಬರುತ್ತದೆ.
ಅಷ್ಟಾಂಗ ಯೋಗದಲ್ಲಿ ಶೌಚವೂ ಒಂದು ಪ್ರಧಾನ ನಿಯಮ. ಯೋಗವೆಂದರೆ ನಮ್ಮನ್ನು ನಾವು ಶುದ್ಧಿಗೊಳಿಸುವುದು. ನಮಗೆ ನಾವು ಪರಿಶುದ್ಧರಾಗಿರಬೇಕು. ಅದು ಕೇವಲ ದೇಹದಿಂದ ಮಾತ್ರ ಇದ್ದರೆ ಸಾಲದು. ನಮ್ಮ ಮನಸ್ಸೂ ಶುದ್ಧವಾಗಿರಬೇಕು. ಪರಿಶುದ್ಧವಾದ ಉಸಿರಿನಿಂದ ದೇಹವೂ ಶುದ್ಧವಾದರೆ, ಸಚ್ಚಿಂತನೆ, ಸದ್ಭಾವನೆ ಮುಂತಾದವುಗಳಿಂದ ಮನಸ್ಸು ಶುದ್ಧವಾಗುತ್ತದೆ.
ಅಸ್ಪ್ರಶ್ಯತೆ, ಜತೆಯಲ್ಲಿ ತಿಂದುಂಡು ಮಲಗಿದರೆ ದೂರವಾಗುವುದಿಲ್ಲ. ಮನಸ್ಸು ಪ್ರಚೋದಿಸಲ್ಪಡಬೇಕು. ಆಗ ತಿಂದುಂಡು ಮಲಗುವುದು ಮುಖ್ಯವಾಗುವುದೇ ಇಲ್ಲ. ಮನಸ್ಸು ಕಲ್ಮಶವಾಗಿದ್ದರೆ ಅಂತರ್ಜಾತಿಯ ವಿವಾಹದಿಂದಲೂ ಅಸ್ಪೃಶ್ಯತೆ ದೂರವಾಗುವುದಿಲ್ಲ. ಹಿಂದೂ ಧರ್ಮದಲ್ಲಿ ವಿವಾಹ ಎಂಬುದು ಒಂದು ಸಂಸ್ಕಾರ ವಿಧಿ. ಸಂಸ್ಕಾರ ಎಂದರೆ ಪರಮಾತ್ಮನ ಬಳಿಗೆ ಹೋಗುವ ಹಾದಿ. ಆ ಹಾದಿಯಲ್ಲಿ ಸಹಧರ್ಮಿಣಿಯಾಗಿ ಬರುವವಳು ತಾನು ನಡೆಯುವ ಧರ್ಮವನ್ನು ಅರಿತು ಅದರಲ್ಲಿ ಜತೆಗೆ ಹೆಜ್ಜೆ ಇಡುವುದಕ್ಕೆ ಸಹಕರಿಸಬೇಕು
ನಾವು
ಸ್ವಚ್ಛವಾಗಿರುವ. ಆದರೆ ಮತ್ತೊಬ್ಬರ ಸ್ವಚ್ಛತೆಯನ್ನು ಅಳೆಯದೇ ಇರೋಣ. ನಮ್ಮಿಂದ
ಯಾರಾದರೂ ಸ್ವಚ್ಛವಾಗಿದ್ದರೆ ಮತ್ಸರಿಸದೇ ಅವರ ಪಾಡಿಗೆ ಬಿಡೋಣ. ತಿನ್ನುವುದರಲ್ಲಿ ಉಣ್ಣುವುದರಲ್ಲಿ
ತೊಡುವುದರಲ್ಲಿ ಅಥವಾ ಸ್ಪರ್ಶಿಸುವುದರಲ್ಲಿ ಮುಕ್ತವಾಗಿದ್ದರೆ ಅಸ್ಪೃಶ್ಯತೆ ದೂರವಾಗದು. ಮನಸ್ಸು ಸ್ವಚ್ಛವಾಗಿರಬೇಕು.
ನಮ್ಮ ನಡೆ ನುಡಿಗಳು ಸ್ವಚ್ಛವಾಗಿ ಶುದ್ಧ ಸಂಸ್ಕಾರ ನೆಲೆ ನಿಲ್ಲಬೇಕು.
No comments:
Post a Comment