ಜಯನಗರಕ್ಕೆ ಹೋಗುವುದಕ್ಕೆ ಅಪ್ಪ ಮಗನನ್ನು ಜತೆಗೆ ಕರೆದ. ಮಗ ಕಾರು ರಸ್ತೆಗೆ ಇಳಿಸಿ ಮೊಬೈಲ್ ತೆಗೆದು ಗೂಗಲ್ ನಕ್ಷೆ ಹಾಕಿ ನೋಡಿದ. ಅಪ್ಪ ವಾಡಿಕೆಯಂತೆ ಹೇಳಿದ, ಜಯನಗರ ಏನು ನಮಗೆ ತಿಳಿಯದ ಜಾಗವೇ? ಎಲ್ಲಿ ವಾಹನ ದಟ್ಟನೆ ? ಯಾವುದು ಹತ್ತಿರ ? ಎಲ್ಲವು ತಿಳಿದಿರುವಾಗ ಈ ಮ್ಯಾಪ್ ಯಾಕೆ? ಆಗ ಮಗ ಹೇಳಿದ ಈಗ ಕಾಲ ಬದಲಾಗಿದೆ. ನಾವು ತಂತ್ರಜ್ಜಾನ ಉಪಯೋಗಿಸಬೇಕು. ನಿಮ್ಮ ಕಾಲದಲ್ಲಿದ್ದ ಹಾಗೆ ರಸ್ತೆ ಈಗ ಇಲ್ಲ. ಹೀಗೆ ಅಪ್ಪನ ಮಾತು ಕೇಳದೆ ಗೂಗಲ್ ಅಮ್ಮನ ಮಾತಿಗೆ ಮಗ ಕಿವಿಯಗಲಿಸಿದ.
ನಮ್ಮ ಮನೆಯ ಬೀದಿಯಲ್ಲೇ ಒಂದು ದೊಡ್ಡ ಸಂಸಾರವಿದೆ. ಕೆಲವು ವರ್ಷದ ಕೆಳಗೆ ಹೆಣ್ಣೊಬ್ಬಳು ಆ ಮನೆಯ ಮಗನನ್ನು ಮದುವೆಯಾಗಿ ಬರುತ್ತಾಳೆ. ಸರಿ ಸುಮಾರು ನನ್ನ ಮಗನ ವಯಸ್ಸು. ಬಹಳ ಸಿರಿವಂತ ಮನೆಯ ಹೆಣ್ಣು ಮಗಳಾದರು ಆಕೆ ನೋಡುವುದಕ್ಕೆ ಬಹಳ ಸಾಧು. ಮುಂಜಾನೆ ಆಕೆ ಮನೆ ಸ್ವಚ್ಛ ಮಾಡುವುದು, ಅದು ಇದು ಕೆಲಸ ಅಂತ ಓಡಾಡುವುದು ನಮ್ಮ ಮನೆಗೆ ಕಾಣುತ್ತಿತ್ತು. ಹಲವು ಸಲ ನಮ್ಮ ಮನೆಗೆ ನೋಡಿ ಕಿರುನಗು ಬೀರುತ್ತಿದ್ದಳು. ಎಲ್ಲೋ ಮೊಳಕೆಯೊಡೆದ ಬೀಜ ಇನ್ನೊಂದೆಡೆ ಬೆಳೆದು ಗಿಡವಾಗಿ ಬದುಕು ಕಂಡಂತೆ ಆಕೆ ಅದುವರೆಗೆ ತಾನು ಬೆಳೆದ ತಾಯಿ ಮನೆಯ ಮಡಿಲನ್ನು ಬಿಟ್ಟು ಇಲ್ಲಿ ಬಂದಿದ್ದಳು. ಹೆಣ್ಣೆಂದರೆ ಹಾಗೇ ಅಲ್ಲವೇ? ಕಂಡು ಕೇಳರಿಯದ ಜಾಗದಲ್ಲಿ ತನ್ನ ಬದುಕನ್ನು ಕಾಣುವ ಕಲೆಯನ್ನು ಹೆಣ್ಣಿಗೆ ದೇವರು ಕರುಣಿಸಿದ್ದಾನೆ. ಸದಾ ಚುರುಕಾಗಿ ಇದ್ದ ಸುಂದರ ಹೆಣ್ಣು ಮಗಳು ಕೆಲ ಸಮಯದಲ್ಲೇ ಮಗುವನ್ನು ಹೆತ್ತು ತಾಯಿಯಾದಳು. ಪುಟ್ಟ ಮಗು ನಮ್ಮ ಮನೆ ಎದುರೇ ಬೆಳೆಯುತ್ತಿತ್ತು. ಸ್ವಲ್ಪ ಶ್ರೀಮಂತ ಸಂಸಾರ. ಸ್ವಂತ ವ್ಯಾಪಾರ, ದೊಡ್ಡ ಮನೆಯಲ್ಲಿ ಹಲವು ಬಾಡಿಗೆ ಮನೆಗಳೂ ಇದ್ದು ತಕ್ಕ ಮಟ್ಟಿಗೆ ಶ್ರೀಮಂತ ಕುಟುಂಬ. ಹೆಣ್ಣು ಸುಖವಾಗಿದ್ದಾಳೆ ಎಂದು ಅಂದುಕೊಂಡರೆ, ಕೆಲವು ಸಮಯದಿಂದ ಆಕೆ ಕಾಣುತ್ತಿಲ್ಲ. ನಗು ಮುಖದ ತರುಣಿಗೆ ಇದ್ದಕ್ಕಿದ್ದಂತೆ ಏನಾಯಿತು? ಇಷ್ಟೇ ಹೆತ್ತ ಮಗುವನ್ನು ಬಿಟ್ಟು ದೂರ ಹೋದ ಆಕೆ ವಿಚ್ಛೇದನದ ಹಾದಿ ಹಿಡಿದದ್ದು ಆಘಾತಕರ ಸುದ್ದಿ.
ನನ್ನ ಪರಿಚಯಸ್ಥ
ಮತ್ತೊಬ್ಬಳು ತರುಣಿ, ಉತ್ತಮ
ವಿದ್ಯಾವಂತೆ, ಉದ್ಯೋಗದಲ್ಲಿದ್ದವಳು, ಪ್ರೇಮಿಸಿ ಮದುವೆಯಾದಳು.
ಮದುವೆಗೆ ಸರಿಸುಮಾರು ಮೂವತ್ತು ಲಕ್ಷದಷ್ಟು ಖರ್ಚಾಯಿತು. ಅದಕ್ಕೂ ಕಾರಣಗಳು ಹಲವು. ಮದುವೆಯಾಗಿ ಒಂದು
ವರ್ಷಕ್ಕೇ ವಿಚ್ಚೇದನವಾಯಿತು. ಮದುವೆಗೆ ಮಾಡಿದ ಸಾಲ ಇನ್ನೂ ಸಂದಾಯ ಮಾಡುವುದಕ್ಕೆ ಬಾಕಿ ಇದೆ. ಯಾವ
ಸ್ಮರಣೆಗೆ ಆ ಸಾಲ ತೀರಿಸಬೇಕು?
ಮನೆಯಲ್ಲಿ ನಮ್ಮ ಹಿರಿಯರು ಉಪಯೋಗಿಸಿದ ಕೊಡೆ ಪೆನ್ನು ಚಪ್ಪಲಿ ಹೀಗೆ ಅಭಿಮಾನದಿಂದ ಅವರ ಸ್ಮರಣೆಗೆ ತೆಗೆದಿರುಸುತ್ತೇವೆ. ಆದರೆ ವಿಚ್ಛೇದನ ಕೊಡುವಾಗ ಮಾನಸಿಕ ಸಂಬಂಧಗಳು ಭಾವಾನಾತ್ಮಕ ತುಡಿತಗಳು ಯಾವುದೂ ವಿಚ್ಛೇದನವನ್ನು ತಡೆಯುವುದಿಲ್ಲ. ಆ ಮಧುರ ನೆನಪುಗಳಿಗೆ ಯಾವ ಗೌರವವೂ ಇಲ್ಲದಂತೆ, ಹಳೆ ಉಡುಪು ಕಿತ್ತೆಸೆದಂತೆ ಬದಲಾಯಿಸಿ ಬಿಡುತ್ತೇವೆ. ನನ್ನ ಮಾವನಿಗೆ ಎರಡೇ ಅಂಗಿ ಇತ್ತು. ಅವರಿಗೆ ಎಂದೂ ಆಯ್ಕೆ ಕಷ್ಟವಾಗುತ್ತಿರಲಿಲ್ಲ. ಅದಲ್ಲದಿದ್ದರೆ ಇದು, ಇದಲ್ಲದಿದ್ದರೆ ಅದು. ನಾವು ಆಯ್ಕೆಯ ಪ್ರಪಂಚಕ್ಕೆ ತೆರೆದುಕೊಂಡಂತೆ ನಮ್ಮ ಭಾವನಾತ್ಮಕ ವಿಚಾರಗಳು ಮೌಲ್ಯವನ್ನು ಕಳೆದುಕೊಂಡಿವೆ. ಆಯ್ಕೆಗಳು ಹಲವಾರಾಗಿ ಬದುಕು ಅತಂತ್ರವಾಗಿದೆ. ವಿಚ್ಛೇದನ, ಅದು ಹಕ್ಕು ಆಗಿರಬಹುದು. ಅದರ ಆಯ್ಕೆ ಸ್ವಾತಂತ್ರ್ಯ ಆಗಿರಬಹುದು. ಅದುವೇ ಒಂದು ಅಸ್ತ್ರವಾಗಿ ಪರಿಹಾರವಾಗಬೇಕಿಲ್ಲ. ನಮ್ಮ ಹಿರಿಯರು ಏನೇ ಕಷ್ಟ ನಷ್ಟ ಹತಾಶೆಗಳಿದ್ದರೂ ಜತೆಯಲ್ಲೇ ಬದುಕಿದರು. ಬದುಕು ಎಂದರೆ ಅದರಿಂದ ಭಿನ್ನವಾಗಿ ಅವರೆಂದೂ ಕಂಡಿಲ್ಲ. ಆದರೆ ನಾವು ನಮ್ಮ ಮಕ್ಕಳಿಗೆ ವಿಚ್ಛೇದನವನ್ನೇ ತೋರಿಸುತ್ತಿದ್ದೇವೆ. ಅಯ್ಕೆಯ ಮುಖಗಳನ್ನು ತೋರಿಸುತ್ತೇವೆ. ಮಕ್ಕಳು ಹಾಗೆ ವಾಹನ ತೆಗೆದುಕೊಂಡಂತೆ ಮತ್ತದನ್ನು ಬದಲಿಸಿದಂತೆ ಗಂಡ ಅಥವಾ ಹೆಂಡತಿಯನ್ನೂ ಬದಲಿಸಿಕೊಳ್ಳುತ್ತಾರೆ. ವಾಹನಕ್ಕೆ ಸವಕಳಿಯ ಲಾಭ ನಷ್ಟವಿದ್ದಂತೆ, ಬದುಕಿನ ಲಾಭ ನಷ್ಟದ ಲೆಕ್ಕಾಚಾರ ಇರುತ್ತದೆ.
ದೀಪ ಕತ್ತಲೆಯೊಂದಿಗೆ ಹೋರಾಡುತ್ತದೆ. ಹೀಗೆ ಅನಿಸುತ್ತದೆ. ಒಂದು ಸಲ ಕತ್ತಲೆ ದೀಪದಲ್ಲಿ ಕೇಳಿತಂತೆ, ನಿನಗೆ ನನ್ನನ್ನು ಕಂಡರೆ ದ್ವೇಷ ಉಂಟಾ? ದೀಪ ಹೇಳಿತಂತೆ, ನನಗೇಕೆ ದ್ವೇಷ. ನಾನು ಬಂದಾಗ ನೀನೇ ದೂರ ಹೋಗುತ್ತಿರುವೆ. ಅಷ್ಟಕ್ಕೂ ನೀನೆ ನನ್ನ ಸ್ನೇಹಿತ. ಯಾಕೆ ಗೊತ್ತಾ? ನೀನಿದ್ದರೆ ಮಾತ್ರ ನನಗೆ ಬೆಲೆ ಬರುತ್ತದೆ. ನಮ್ಮ ಬದುಕಿನಲ್ಲಿ ಹಲವು ಋಣಾತ್ಮಕ ವಿಚಾರಗಳು ನಮಗೆ ಹೋರಾಟವನ್ನೇ ತೋರಿಸಬಹುದು. ಆದರೆ ಅದನ್ನು ಸ್ವೀಕರಿಸುವ ರೀತಿ ದೀಪ ಕತ್ತಲೆಯೊಡನೆ ತೋರಿಸಿದಂತಿರಬೇಕು.
ಸೂರ್ಯನೊಡನೆ ಒಬ್ಬ ಹೇಳಿದನಂತೆ, ನೀನು ಹೋದ ಕೂಡಲೇ ಕತ್ತಲೆ ಬರುತ್ತದೆ, ನೀನು ಯಾಕೆ ಹೋಗುತ್ತಿರುವೆ. ನಿಂತು ಬಿಡು. ಸೂರ್ಯ ಹೇಳಿದನಂತೆ, ಕತ್ತಲೆ !! ಹಾಗಂದರೆ ಏನು? ಹಾಗೊಂದು ಜಗತ್ತಿನಲ್ಲಿ ಇದೆಯೆ? ತೋರಿಸು ನೋಡೋಣ. ವ್ಯಕ್ತಿ ಸೂರ್ಯನನ್ನು ಕತ್ತಲೆ ಇರುವಲ್ಲಿ ಕರೆದುಕೊಂಡು ಹೋದ. ಆದರೆ ಕತ್ತಲೆ ಎಲ್ಲಿದೆ? ಸೂರ್ಯ ಹೋದಲೆಲ್ಲ ಕತ್ತಲೆ ಇದ್ದರೆ ತಾನೆ? ಪ್ರಪಂಚದಲ್ಲಿ ಕತ್ತಲನ್ನು ಕಾಣದೇ ಇದ್ದವನು ಎಂದರೆ ಸೂರ್ಯ. ಹೀಗೆ ನಮ್ಮ ವ್ಯಕ್ತಿತ್ವದಿಂದ ನಮ್ಮ ವರ್ತನೆಯಿಂದ ನಮಗೆದುರಾಗುವ ಸಮಸ್ಯೆಗಳನ್ನು ನಾವು ನೀವಾರಿಸಿಕೊಳ್ಳಬೇಕು. ವಿಚ್ಛೇದನ ಪರಿಹಾರವಾಗಲಿ ಆದರೆ ಅದು ಅತೃಪ್ತ ಆತ್ಮದ ಪಿಶಾಚಿಯಾಗದಿರಲಿ.