Saturday, March 26, 2022

ಶೇಡಿಗುಡ್ಡ....ಮಂಗಳೂರು

    ಪುಟ್ಟ ಮಗು ಒಂದು ಮೊದಲಬಾರಿಗೆ ಮಾವನೊಂದಿಗೆ ಸೈಕಲ್ ಏರಿ ಕುಳಿತು ಸಂಭ್ರಮಿಸುತ್ತಿತ್ತು. ಒಂದೆಡೆ ಭಯ ಆದರೂ ಮಾವನಲ್ಲಿ ಒಂದು ವಿಶ್ವಾಸ. ಸೈಕಲ್ ಸೀಟಿನ ಮುಂಭಾದ ಸರಳಲ್ಲಿ ಒಂದು ಚಿಕ್ಕ ಬಟ್ಟೆ ತುಂಡು ಹಾಕಿ ಮಾವ ಅಲ್ಲಿ ಕೂರಿಸಿದ್ದರು. ಭಯದಿಂದ ಸೈಕಲ್ ಹ್ಯಾಂಡಲ್ ಹಿಡಿದು ಎದುರಲ್ಲಿ ತಿರುಗುವ ಚಕ್ರವನ್ನು ಹಿಂದೆ ಸರಿಯುವ ರಸ್ತೆಯನ್ನೂ ನೋಡುತ್ತ ಅವ್ಯಕ್ತವಾದ ಅನಂದವನ್ನು ಅನುಭವಿಸುತ್ತಿತ್ತು. ಕೆಲವೊಮ್ಮೆ ಭಯದಿಂದ ಹ್ಯಾಂಡಲ್ ಗಟ್ಟಿ ಹಿಡಿದಾಗ ಹ್ಯಾಂಡಲ್ ಗಟ್ಟಿ ಹಿಡಿಯಬೇಡ ಎಂದು ಮಾವ ನಯವಾಗಿ ಗದರುತ್ತಿದ್ದರು.







     ಸೈಕಲ್ ಕುಂಟಿಕಾನ ಬಿಜೈ ಲಾಲ್ ಬಾಗ್ ದಾಟಿ ಶೇಡಿಗುಡ್ಡಕ್ಕೆ ಬಂತು. ಅಲ್ಲಿ ಒಂದು ಕಡೆ ಸೈಕಲ್ ನಿಲ್ಲಿಸಿ ಮಗುವನ್ನು ಕೆಳಗಿಳಿಸಿ ರಸ್ತೆಯ ಮತ್ತೊಂದು ಬದಿ ಇರುವ ಅಂಗಡಿಗೆ ಮಗುವನ್ನು ಕೈ ಹಿಡಿದು ನಡೆಸಿಕೊಂಡು ರಸ್ತೆ ದಾಟಿದರು. ರಸ್ತೆ ದಾಟುವಾಗ ರಸ್ತೆಯ ನಡುವೆ ಇರುವ ವಿಭಾಜಕದ ಮೇಲೆ ಸ್ವಲ್ಪ ಹೊತ್ತು ನಿಂತು ಮತ್ತೊಂದು ಕಡೆಯಿಂದ ಬರುವ ವಾಹನ ಇಲ್ಲದಾಗುವ ತನಕವೂ ಕಾದು ರಸ್ತೆ ದಾಟಿದರು.  ಇದು ಸರಿ ಸುಮಾರು ಐವತ್ತು ವರ್ಷದ ಹಿಂದಿನ ಕಥೆ. ಮೊದಲು ಮಂಗಳೂರಿನಲ್ಲಿ ವಿಭಾಜಕ ಇದ್ದ ರಸ್ತೆ ಇದ್ದದ್ದು ಶೇಡಿಗುಡ್ಡೆಯಲ್ಲಿ ಮಾತ್ರ.  ಆ ಪುಟ್ಟ ಮಗು ನಾನೇ ಆಗಿದ್ದೆ. ಆಗ ಪಿ ವಿ ಎಸ್ ಬಹು ಅಂತಸ್ತಿನ ಕಟ್ಟಡವೂ ಇರಲಿಲ್ಲ. ಅಲ್ಲೊಂದು ಪುಟ್ಟ ಅಂಗಡಿ ಇದ್ದ ನೆನಪು. ಮೊನ್ನೆ ಮೊನ್ನೆ ಶೇಡಿಗುಡ್ಡದಲ್ಲಿ ಹೀಗೆ ಹೆಜ್ಜೆ ಹಾಕುತ್ತಾ ಹೋದ ಹಾಗೆ ಹಿಂದಿನ ದಿನ ನೆನಪಾಯಿತು. ನಾನು ಊರಿಗೆ ಹೋದಾಗಲೆಲ್ಲ ಹೀಗೆ ಮಂಗಳೂರಿನ ನಗರವನ್ನು ಕಾಲು ನಡಿಗೆಯಲ್ಲಿ ಸುತ್ತಾಡುವುದರಲ್ಲಿ ಏನೋ ಒಂದು ಸುಖವನ್ನು ಕಾಣುತ್ತೇನೆ. ಹಾಗೆ ಲಾಲ್ ಭಾಗ್ ನಿಂದ ಹಂಪನ ಕಟ್ಟೆಯವರೆಗೂ ನೆಡೆದುಕೊಂಡೇ ಹೋದೆ.  ಆ ರಸ್ತೆಯಲ್ಲಿ ಏದುಸಿರುಬಿಡುತ್ತಾ ಸೈಕಲ್ ತುಳಿಯುತ್ತಿದ್ದ ದಿನಗಳು ನೆನಪಾಗುತ್ತದೆ.

     ಮಂಗಳೂರು ನಗರದಲ್ಲಿ ಮೊದಲು ವಿಭಾಜಕದ ರಸ್ತೆ ಇದ್ದದ್ದು ಶೇಡಿಗುಡ್ಡದಲ್ಲಿ. ಒಂದು ಬದಿ ದೊಡ್ಡಗುಡ್ಡ ಇರುವುದರಿಂದಲೇ ಇದಕ್ಕೆ ಶೇಡಿ ಗುಡ್ಡ ಎಂದು ಹೆಸರು ಬಂದಿರಬೇಕು. ಎರಡು  ಬಸ್ ಕಂಪೆನಿಗಳ ಕೇಂದ್ರ ಇಲ್ಲೇ ಇತ್ತು. ಒಂದು ಸಿ. ಪಿ. ಸಿ ಬಸ್ಸ್ ಇನ್ನೊಂದು ಶ್ರೀ ಕೃಷ್ಣಾ ಮೋಟರ್ಸ್ ಎಂಬ ಸಂಸ್ಥೆಯ ಬಸ್ . ಲಾಲ್ ಭಾಗ್ ನಿಂದ ಶೇಡಿಗುಡ್ಡದವರೆಗೂ ತೀರ ಅಗಲ ಕಿರಿದಾದ ರಸ್ತೆ ಅಲ್ಲಿಗೆ ತಲುಪಿದಾಗ ಅಗಲವಾಗುತ್ತದೆ.

     ಶೇಡಿಗುಡ್ಡದ ಮತ್ತೊಂದು ತುದಿ ನವಭಾರತ ವೃತ್ತ. ನವಭಾರತ, ಈ ಹೆಸರು ಯಾಕೆ ಬಂತು ಎಂದು ಹಲವರಿಗೆ ತಿಳಿಯದಿರಬಹುದು. ಮೊದಲು ಮಂಗಳೂರಿನಿಂದ ಒಂದು ಪ್ರಸಿದ್ಧ ದಿನ ಪತ್ರಿಕೆ ಪ್ರಸಾರವಾಗುತ್ತಿತ್ತು. ಅದರೆ ಕಛೇರಿ ಇದ್ದದ್ದು ಇದೇ ವೃತ್ತದಲ್ಲಿ. ನವ ಭಾರತ ಪತ್ರಿಕೆ, ಆಗ ನಮ್ಮ ಶಾಲೆಯ ಹಲವು ಅಧ್ಯಾಪಕರ ಕಂಕುಳಲ್ಲಿ ರಾರಾಜಿಸುತ್ತಿದ್ದ ಪತ್ರಿಕೆ. ಆನಂತರ ಉದಯವಾಣಿ ಆರಂಭವಾಗಿ, ಅದರ ಮುದ್ರಣ ಸೌಂದರ್ಯಕ್ಕೆ ಅಥವಾ ಇನ್ನೇನೋ ಕಾರಣಕ್ಕೆ ಈ ಪತ್ರಿಕೆ ಜಾಹೀರಾತು ಇಲ್ಲದೆ ಮುಚ್ಚಲ್ಪಟ್ಟಿತು. ನನಗಿನ್ನೂ ನೆನಪಿನಲ್ಲಿದೆ ಜಾಹೀರಾತು ಇಲ್ಲದೇ ಒಂದೊಂದು ಪುಟ ಹಾಗೇ ಖಾಲಿಯಾಗಿ ಪ್ರಕಟವಾಗುತ್ತಿತ್ತು.  ಕ್ರಮೇಣ ಇಲ್ಲಿ ದೊಡ್ಡ ಸರ್ಕಲ್ ನಿರ್ಮಾಣವಾಯಿತು, ಅದರೊತ್ತಿಗೆ ರಾಂ ಭವನ್ ಕಾಂಪ್ಲೆಕ್ಸ್ ಎದ್ದು ನಿಂತಿತು.

     ಪಿ. ವಿ. ಎಸ್. ಬಿಲ್ಡಿಂಗ್, ನಮ್ಮ ಬಾಲ್ಯದಲ್ಲಿ ಇದು ಕಟ್ಟುವುದಕ್ಕೆ ಆರಂಭಿಸಿದ್ದರು. ಇದು ಬೆಳೆದು ಬೆಳೆದು ಹತ್ತು ಅಂತಸ್ತಾಗುವಾಗ, ಅಲ್ಲೇ ಬಸ್ಸಿನಲ್ಲಿ ಕುಳಿತು ಸಂಚರಿಸುವಾಗ ತಲೆ ಹೊರಗೆ ಹಾಕಿ ಕಟ್ಟಡದ ತುದಿಕಾಣದೇ  ಓಹ್ ಅಂತ ಉದ್ಗಾರ ತೆಗೆದು ಅಚ್ಚರಿ ಪಡುತ್ತಿದ್ದದ್ದು ನೆನಪಿದೆ. ಒಂದು ಸಲ ಕಟ್ಟಡ ದ ಬುಡದಲ್ಲಿ ನಿಂತು ತುದಿಗೆ ನೋಡಿ ಒಂದು ಸಲ ತುದಿಯ ವರೆಗೆ ಹತ್ತಬೇಕಿತ್ತು ಎಂಬ ಬಯಕೆ ಮೂಡಿದ್ದು ಸತ್ಯ. ಇದುವರೆಗೂ ಆ ಬಯಕೆ ಬಯಕೆಯಾಗಿಯೇ ಇದೆ. ಮಂಗಳೂರಿನ ಮೊದಲ ಅತ್ಯಂತ ದೊಡ್ಡ ಕಟ್ಟಡ ಈ ಪಿ ವಿ ಎಸ್ ಬಿಲ್ಡಿಂಗ್.  ಒಂದು ಬಾರಿ ಇಲ್ಲೇ  ಬೆಸೆಂಟ್ ಕಾಲೇಜ್ ನಿಂದ ಶೇಡಿಗುಡ್ಡ ಸೇರುವ ಜಾಗದಲ್ಲಿ ರಸ್ತೆ ಕುಸಿದಿತ್ತು. ಪತ್ರಿಕೆಯವರು ಅದರ ಫೋಟೋ ತೆಗೆಯುತ್ತಿದ್ದಾಗ ನಾನು ಅದೇ ಸಮಯದಲ್ಲಿ ಸೈಕಲ್ ನಲ್ಲಿ ಅಲ್ಲೇ ಸಂಚರಿಸುತ್ತಿದ್ದೆ. ಮರುದಿನ ಉದಯವಾಣಿ ಪತ್ರಿಕೆಯಲ್ಲಿ ಆ ಫೋಟೊ ಅಚ್ಚಾಗಿ ಅದರಲ್ಲಿ ನಾನು ಸೈಕಲ್ ಮೇಲೆ ಇದ್ದ ಚಿತ್ರ ಅಸ್ಪಷ್ಟವಾಗಿ ಬಂದಿತ್ತು.

     ಮೊದಲೆಲ್ಲ ಸಿಟಿ ಬಸ್ ಗಳು ಇಲ್ಲೇ ಎರಡು ಭಾಗದಲ್ಲೂ ಸಂಚರಿಸಿ ಹಂಪನಕಟ್ಟೆಗೆ ಹೋಗುತ್ತಿದ್ದವು. ನಗರ ಬೆಳೆಯುತ್ತಿದ್ದಂತೆ ಬದಲಾಗುತ್ತಾ ಬದಲಾಗುತ್ತ ಈಗ ಶೇಡಿಗುಡ್ಡವೂ ರೂಪವನ್ನು ಬದಲಾಯಿಸಿಕೊಂಡಿದೆ.  ಶೇಡಿಗುಡ್ಡ, ಮಂಗಳೂರಿನ ಹಲವು ಸ್ಥಳಗಳಂತೆ ಇಲ್ಲೂ ನನ್ನ ಬಾಲ್ಯದ ನೆನಪುಗಳು ಹಲವಾರಿದೆ. ಲಲಿತ ಕಲಾ ಸದನ ಹತ್ತಿರದಲ್ಲೇ ಇರುವುದರಿಂದ ಅಪ್ಪನ ಜತೆಗೆ ಅಲ್ಲಿಗೆ ಹೋಗುತ್ತಿದ್ದ ನೆನಪು ಅಸ್ಪಷ್ಟವಾಗಿ ಇದೆ. ಲಲಿತ ಕಲಾಸದನ ಅಂದು ಹಲವು ಶ್ರೇಷ್ಠ ಕಲಾವಿದರ ಚಟುವಟಿಕೆಯ ಕೇಂದ್ರವಾಗಿತ್ತು.  ಯಕ್ಷಗಾನದ ಹಿರಿಯ ಕಲಾವಿದ ಶ್ರೀ ಸೂರಿಕುಮೇರಿ ಗೋವಿಂದ ಭಟ್ಟರ ಭೇಟಿಯ ಸಮಯದಲ್ಲೂ ಇದನ್ನು ಹೇಳಿದ್ದರು. ಆಗ ಹಿರಿಯ ಸಂಗೀತ ಗುರುಗಳಾದ ರಾಜಣ್ಣಯ್ಯರ್ ( ನನ್ನ ಅಪ್ಪನ ಅಣ್ಣ ಅಂತ ಹಿರಿಯರು ಹೇಳುತ್ತಿದ್ದರು) ಗೋವಿಂದ ಭಟ್ಟರ ಗುರುಗಳಾಗಿದ್ದರು.

     ಮಧುರವಾದ ಹಲವು ನೆನಪುಗಳನ್ನು ತರುವ ಶೇಡಿಗುಡ್ಡದಲ್ಲೇ ಸಂಚರಿಸುವುದೆಂದರೆ ಹಲವು ನೆನಪುಗಳ ಪೆಟ್ಟಿಗೆ ಯ ಮುಚ್ಚಳವನ್ನು ತೆರೆದ ಅನುಭವವಾಗುತ್ತದೆ.

  

No comments:

Post a Comment