"ಭಾವನೆಗಳಿಗೆ
ಮೌಲ್ಯ ನಿರ್ಧಾರವಾಗುವುದಿಲ್ಲ. ಬದಲಾಗಿ ಅದು ನಿಯಂತ್ರಣಕ್ಕೆ ಒಳಪಡಬೇಕು"
ಅದೊಂದು ಕಾರ್ಯಕ್ರಮದಲ್ಲಿ ಮಧ್ಯಾಹ್ನ ಬ್ರಾಹ್ಮಣರೆಲ್ಲ.....ಹೆಚ್ಚಿನವರು ಸಂಭಂಧಿಗಳೇ ಊಟಕ್ಕೆ ಕುಳಿತಿದ್ದರು. ಯಥಾ ಪ್ರಕಾರ ಎಲ್ಲವೂ ಬಡಿಸಿಯಾದನಂತರ ಯಜಮಾನ ಊಟ ಅರಂಭಿಸುವುದಕ್ಕೆ ಭಿನ್ನವಿಸಿದರು. ಸರಿ ಎಲ್ಲರೂ ಹಸ್ತೋದಕ ತೆಗೆದುಕೊಳ್ಳುವುದಕ್ಕೆ ಕೈ ಯಲ್ಲಿ ನೀರು ತೆಗೆದುಕೊಂಡರು. ಭಗವಂತನನ್ನು ಪ್ರಾರ್ಥಿಸಿ ಚಿತ್ರಾವತಿಯನ್ನು ಇಟ್ಟು ಇನ್ನೇನು ಊಟ ಆರಂಭಿಸಬೇಕು ಎನ್ನುವಾಗ ನನ್ನ ಪಕ್ಕದಲ್ಲಿ ಕುಳಿತವರನ್ನು ನೋಡಿ ಪುರೋಹಿತರೊಬ್ಬರು ಹೇಳಿದರು "ನೀವು ಕನ್ನಡ ಜಿಲ್ಲೆಯವರಾ? ಕೈ ನೀರು ತೆಗೆದು ಚಿತ್ರಾವತಿ ಇಡಲಿಲ್ಲ. " ದಕ್ಷಿಣ ಕನ್ನಡದವರನ್ನು ಹಾಗೇಕೆ ಪ್ರತ್ಯೇಕಿಸಿದರು ಎಂಬುದು ಆಶ್ಚರ್ಯವಾಗಿತ್ತು. ಅದರಲ್ಲಿ ಅದೊಂದು ರೀತಿಯ ಅಹಂ ಕಂಡಿತು. ನೋಡುವುದಕ್ಕೆ ವಯೋವೃದ್ಧರು. ಆದರೂ ಎಲ್ಲರೆದುರು ವರ್ತಿಸುವಾಗ ಕೆಲವೊಂದು ಸದಾಚಾರವನ್ನು ಪಾಲಿಸುವುದು ಉಚಿತ ಅಂತ ನನ್ನ ಅನಿಸಿಕೆ. ಹಿರಿಯರು ಅವರು ಹೇಳುವುದಕ್ಕೆ ಅವಕಾಶ ಇದ್ದರೂ ಸಾರಾ ಸಗಟಾಗಿ ಇನ್ನೊಬ್ಬರ ಅರ್ಹತೆಯನ್ನು ಕೀಳಾಗಿ ಕಾಣುವುದು ಸರಿಯಲ್ಲ. ನಾನು ಮೆತ್ತಗೆ ಹೇಳಿದೆ, ನಾನೂ ದಕ್ಷಿಣ ಕನ್ನಡದವನೇ. ನಾನು ಅದಾಗಲೇ ಚಿತ್ರಾವತಿಯನ್ನು ಇರಿಸಿ ಅನ್ನಂ ಬ್ರಹ್ಮನನ್ನು ಪ್ರಾರ್ಥಿಸಿ ಪ್ರಾಣ ಅಪಾನ ಮುಗಿಸಿ ಊಟ ಆರಂಭಿಸಿದ್ದೆ. ಅಷ್ಟಕ್ಕೆ ಅವರು ಸುಮ್ಮನಾಗಲಿಲ್ಲ. " ನೀವು ಇಲ್ಲಿಯದನ್ನು ನೋಡಿ ಅನುಸರಿಸಿದ್ದಿರಬಹುದು. " ದಕ್ಷಿಣ ಕನ್ನಡದವರು ಆಚಾರ ಹೀನರು ಎಂದು ಅವರು ತೋರಿಸಿದ್ದು ಅದೂ ಸಹ ಸಾರ್ವಜನಿಕವಾಗಿ ನನಗೆ ತೀವ್ರ ಅಸಮಾಧಾನವನ್ನು ತಂದಿತ್ತು. ಹಾಗಂತ ನಾನು ಮಾತಿಗೆ ಮಾತು ಬೆಳಸಿ ಊಟದ ಎದುರು ಚರ್ಚಿಸುವುದು ಹಿತ ಅನ್ನಿಸಲಿಲ್ಲ. ಅವರನ್ನು ಅವಮಾನಿಸಿದಂತೆ ಆದರೆ, ಹಿರಿಯರು ಪುರೋಹಿತರು , ಊಟ ಬಿಟ್ಟೆದ್ದರೆ ಅಂತ, ನಾನು ಹೇಳಿದೆ ನನಗೆ ಬಾಲ್ಯದಲ್ಲೇ ಉಪದೇಶವಾಗಿತ್ತು ಸ್ವಾಮಿ. ಒಂದೊಂದು ಕಡೆಯ ದೇಶಾಚಾರ ಒಂದೋಂದು ವಿಧ. ಅದನ್ನು ಹೋಲಿಸಿ ತಮ್ಮದು ಉತ್ಕೃಷ್ಟ ಅಂತ ಬಿಂಬಿಸುವುದು ಸರಿಯಲ್ಲ...( ನಾನು "ಸರಿಯಲ್ಲ" ಎಂದು ಒತ್ತಿ ಹೇಳಿದೆ. ನನ್ನ ಲೆಕ್ಕದಲ್ಲಿ ಸರಿಯಲ್ಲ ಎಂದರೆ ಮೂರ್ಖತನ ಎಂಬ ಸ್ವರವೇ ವ್ಯಕ್ತವಾಗಿತ್ತು. ) ಇದೊಂದು ಕೇವಲ ಘಟನೆ. ಇಲ್ಲಿ ಯಾವ ಅನ್ಯಧರ್ಮವೂ ಭೇದವನ್ನು ತೋರಿಸಿಲ್ಲ. ಆದರೂ ಇದೊಂದು ಭಿನ್ನತೆಯನ್ನು ತೋರಿಸಿತ್ತು.
ಮನುಷ್ಯ ಅಚಾರ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿ ಕೊಂಡು ತಮ್ಮ ಆಚಾರಕ್ಕೆ ಅಪಚಾರ ಎಸಗುತ್ತಾನೆ. ಆಚಾರ ಎಂಬುದು ಪ್ರದೇಶಕ್ಕೆ ಹೊಂದಿಕೊಂಡು ವಿಭಿನ್ನವಾಗಿರುವುದು ಹೊಸತೇನಲ್ಲ. ಅದರಲ್ಲಿ ಯಾವುದೂ ಹೆಚ್ಚು ಉತ್ಕೃಷ್ಟವೂ ಅಲ್ಲ. ಮತ್ತೊಂದು ಹೀನವೂ ಅಲ್ಲ. ಕರಾವಳಿಯಲ್ಲಿ ಕಲ್ಪವೃಕ್ಷ ಬೆಳೆದು ಕೊಡುವ ಫಲಕ್ಕೂ ಮಲೆನಾಡು ಬಯಲು ಸೀಮೆಯಲ್ಲಿ ಬೆಳೆಯುವ ಫಲಕ್ಕೂ ಗುಣದಲ್ಲಿ ಆಗಾಧ ವೆತ್ಯಾಸ ಇರುತ್ತದೆ. ಹಾಗಂತ ಅದು ತೆಂಗಿನ ಕಾಯಿ ಅಲ್ಲ ಎಂದನಿಸುವುದೇ? ಯಾವುದೋ ದೇಶದಲ್ಲಿ ಬ್ರಾಹ್ಮಣನಾಗಿ ಹುಟ್ಟಿದವನು ಬ್ರಾಹ್ಮಣನಲ್ಲದೇ ಇರುತ್ತಾನೆಯೇ? ಅಷ್ಟಕ್ಕೂ ಬ್ರಾಹ್ಮಣ ಎಂದರೆ ಅದೊಂದು ಧಾರ್ಮಿಕ ಜೀವನ ಶೈಲಿ. ಕೇವಲ ಬ್ರಾಹ್ಮಣ ವರ್ಗದಲ್ಲೇ ಈ ಬಗೆಯಲ್ಲಿ ತಮ್ಮ ಉತ್ಕೃಷ್ಟತೆಯನ್ನು ಗುರುತಿಸಿ ತಮ್ಮ ಬೆನ್ನನ್ನು ತಟ್ಟುತ್ತಾ ಇರುವುದಾದರೆ ಸಾರ್ವತ್ರಿಕ ಧರ್ಮದಲ್ಲಿರುವ ಭಿನ್ನತೆಯನ್ನು ನಾವು ಹೇಗೆ ಸ್ವೀಕರಿಸಬಹುದು. ಆಚಾರ ವಿಚಾರಗಳ ಮೂಲ ತಾತ್ಪರ್ಯ ಕಾಣುವಾಗ ಎಲ್ಲದರ ಉದ್ದೇಶ ಒಂದೇ. ನಾವು ಇನ್ನೊಬ್ಬನ ಹಾದಿಯನ್ನು ನೋಡುತ್ತ ಹೆಜ್ಜೆ ಇರಿಸಿದರೆ ನಮ್ಮ ಹಾದಿಯಲ್ಲಿರುವ ಸೆಗಣಿಯನ್ನು ನೋಡದೇ ತುಳಿದು ಬಿಡುತ್ತೇವೆ. ಧರ್ಮ ಎಂದರೆ ಏನು ಎಂಬುದರ ಆಳ ತಿಳಿಯುವುದೇ ಜೀವನ ಆಯುಷ್ಯಮಾನದಲ್ಲಿ ಸಾಧ್ಯವಾಗುವುದಿಲ್ಲ. ಆದರೂ ಧರ್ಮ ಸೂಕ್ಷ್ಮ ಸ್ವಲ್ಪವಾದರೂ ಅರಿವಿದ್ದರೆ ನಾವು ಧರ್ಮಾನುಯಾಯಿ ಎನ್ನುವುದಕ್ಕೆ ಅರ್ಥವಿದ್ದೀತು.
ನಾವು ಜಾತಿ ಧರ್ಮದ ಬಗ್ಗೆ ಯೋಚಿಸುವಷ್ಟು ಭಗವಂತನಾದ ಪರಮಾತ್ಮನ ಬಗ್ಗೆ ಯೋಚಿಸುವುದಿಲ್ಲ. ಇಲ್ಲಿಂದಲೇ ನಮ್ಮ ಸಮಸ್ಯೆಗಳು ಆರಂಭವಾಗುವುದು. ಇವುಗಳು ನಮ್ಮಲ್ಲಿ ಅಸಮಾನತೆಯನ್ನೇ ಪ್ರಚೋದಿಸುತ್ತವೆ. ಆಗ ಪರಮಾತ್ಮನ ಭಾಷೆ ಅರ್ಥವಿಸುವುದಕ್ಕೆ ಕಠಿಣವೆನಿಸಿಬಿಡುತ್ತದೆ. ಭಗಂತನ ಭಾಷೆ ಅರ್ಥವಾದರೆ ಈ ಬಗೆಯ ಪ್ರತ್ಯೇಕತೆ, ತಾತ್ಸಾರ, ತಾನು ಉತ್ಕೃಷ್ಟ ಎಂಬ ಮನೋಭಾವ ಯಾವುದು ಇರುವುದಿಲ್ಲ. ಭಗವಂತ ಭಾಷೆ ಅರ್ಥವಿಸುವುದು ಕಷ್ಟ. ಹಾಗಾಗಿ ಅದರ ಬಗ್ಗೆ ಯೋಚಿಸುವುದಕ್ಕಿಂತಲೂ ಜಾತಿ ಧರ್ಮದಲ್ಲೇ ಸುರಕ್ಷತೆಯನ್ನು ಕಾಣುತ್ತೇವೆ.
ನಾವು ಬಂಧುಗಳನ್ನು ಗುರುತಿಸುವುದಕ್ಕೆ ನಮಗೆ
ಯಾವ ಮಾಧ್ಯಮಗಳೂ ಬೇಡ. ಅಪ್ಪ ಅಮ್ಮನನ್ನು ಕಲ್ಪಿಸುವುದಕ್ಕೆ ನಮಗೆ ಯಾವ ಮೂರ್ತಿಯ ಅವಶ್ಯಕತೆಯೂ ಇರುವುದಿಲ್ಲ.
ಆದರೆ ಭಗವತಂತನನ್ನು ಕಾಣುವುದಕ್ಕೆ ನಮಗೆ ಮೂರ್ತಿಯೋ ಮತ್ತೋಂದೋ ಒಂದು ಮಾಧ್ಯಮದ ಅಗತ್ಯವಿರುತ್ತದೆ.
ಯಾವುದರಲ್ಲೋ ನಾವು ದೇವರನ್ನು ಕಾಣುತ್ತೇವೆ. ಈ ಮಾಧ್ಯಮಗಳು
ನಮಗೆ ಊರುಗೋಲಂತೆ. ಮುಂದೆ ಹೋಗುವುದಕ್ಕೆ ಆಧಾರವಾಗುತ್ತದೆ. ಪರಮಾತ್ಮನ ಭಾಷೆ ಅರ್ಥವಾದರೆ ಈ ಊರುಗೋಲನ್ನು ಬಿಟ್ಟು ನಾವು
ಮುಂದಕ್ಕೆ ಸ್ವತಂತ್ರವಾಗಿ ಹೋಗಬಹುದು. ಅದಕ್ಕೆ ಮೂರ್ತ
ಸ್ವರೂಪವಾಗಿರುವುದೇ ಭಗವದ್ಗೀತೆ. ವಿಪರ್ಯಾಸವೆಂದರೆ ಇದು ಶ್ಲೋಕ ಉರು ಹೊಡೆಯುವುದಕ್ಕಷ್ಟೇ ಸೀಮಿತವಾಗಿ
ಬಿಡುತ್ತದೆ. ಮಂತ್ರ ಶ್ಲೋಕ ಸ್ತುತಿ ಎಲ್ಲವೂ ಅಷ್ಟೇ ಮನಸ್ಸಿನ ಭಾಂಧವ್ಯವೇ ಇಲ್ಲದಂತೆ ನಾಲಿಗೆ ಅನಿಯಂತ್ರಿತವಾಗಿ
ಉಚ್ಚರಿಸುತ್ತವೆ.
ಇದೀಗ ಭಗವದ್ಗೀತೆ ಮತ್ತೊಂದು ರೀತಿಯಲ್ಲಿ ಚರ್ಚೆಗೆ ವಿಷಯವಾಗಿದೆ. ಒಂದಲ್ಲ ಒಂದು ವಿವಾದಗಳೇ ನಮಗೆ ಆಪ್ಯಾಯಮಾನವಾದಂತೆ ಇದೂ ಒಂದು ವಿವಾದ. ಭಗವದ್ಗೀತೆಯ ಬಗ್ಗೆ ಎಲ್ಲರೂ ತಿಳಿಯಬೇಕು. ಅದು ಪರಮಾತ್ಮನ ಭಾಷೆ. ಇದಕ್ಕೆ ಯಾವುದೇ ಮನೋಭಾವದ ಬಂಧನವಿರಬಾರದು. ಭಗವದ್ಗೀತೆ ಪಠ್ಯದ ವಿಷಯವಾಗದೇ ಇದ್ದರೂ ಅದು ಒಂದು ಪಾಠ. ಅದನ್ನು ಮರೆತರೆ ಅದು ಕೇವಲ ಅಧ್ಯಯನವಾಗಬಹುದು. ಮುಂದೆ ವೈದ್ಯನಾಗಬೇಕಾದವನು ಭಾಷೆಯನ್ನೋ ಭೂಮಿ ಶಾಸ್ತ್ರವನ್ನು ಅಧ್ಯಯನ ಮಾಡಿದಂತೆ ಆಗಬಹುದು. ಕೇವಲ ಬಾಯಿ ಪಾಠ. ಮನಸ್ಸಿನ ನಿಯಂತ್ರಣವಿಲ್ಲದ ಬಾಯಿ ಪಾಠ. ಶ್ಲೋಕ ಉರು ಹೊಡೆದರೆ ಅದು ಅಧ್ಯಯನವಾಗದು.
ಭಗವದ್ಗೀತೆ ಅಧ್ಯಯನವಾಗಬೇಕು ಸತ್ಯ. ಹೇಗೆ? ನಲ್ವತ್ತು ವರ್ಷ ಕಳೆದು ಮಾನಸಿಕವಾಗಿ ಬಲಿಷ್ಠನಾದವನಿಗೇ ಭಗವದ್ಗೀತೆ ಕಬ್ಬಿಣದ ಕಡಲೆಯಂತೆ ಅರ್ಥವಾಗುವುದಿಲ್ಲ. ಯಾವುದೋ ಪ್ರವಚನಕಾರ ಬೇಕಾಗುತ್ತದೆ. ಇನ್ನು ಪ್ರವಚನಕಾರ ಅವನ ಯೋಚನೆಯಷ್ಟನ್ನೇ ವೈಭವೀಕರಿಸಿ ಹೇಳುತ್ತಾನೆ. ಹೀಗಿರುವಾಗ ಇನ್ನು ಶಾಲೆಯ ಮಕ್ಕಳಿಗೆ ಇದು ಕಬ್ಬಿಣದ ಕಡಲೆಯಾದರೆ ಆ ಅಧ್ಯಯನದಿಂದ ಯಾವ ಪ್ರಯೋಜನವಾದೀತು? ಕೇವಲದ ಕಬ್ಬಿಣದ ಕಡಲೆ. ತರಗತಿಗೆ ಗೈರಾಗುವುದಕ್ಕೆ ಒಂದು ಪಾಠ, ಪರೀಕ್ಷೆಯಲ್ಲಿ ಅಂಕಗಳಿಸುವುದಕ್ಕೆ ಒಂದು ಪಾಠ ಇಷ್ಟಕ್ಕೆ ಸೀಮಿತ. ಅಥವ ಉರು ಹೊಡೆದರೆ ನಮ್ಮ ರಾಷ್ಟ್ರಗೀತೆಯಂತೆ ಅದರ ಅರ್ಥ ಎಷ್ಟು ಜನರಿಗೆ ತಿಳಿದಿದೆ? ಜನಗಣ ಮನ ಹಾಡುತ್ತೇವೆ , ಈ ಶ್ರೇಷ್ಠ ಗೀತೆಯ ಅರ್ಥ ಬಗ್ಗೆ ಗಮನ ಹರಿಸದ ನಾವು ಭಗವದ್ಗೀತೆಯತ್ತ ಗಮನ ಹರಿಸಿದ್ದೇವೆ.
ಭಗವದ್ಗೀತೆಯ ಬಗ್ಗೆ ಅಧ್ಯಯನ, ನಿಜಕ್ಕು ಅದ್ಭುತ ಕಲ್ಪನೆ. ಬಾಲ್ಯದಲ್ಲಿ ನಮ್ಮ ಹಿರಿಯರು ಸಣ್ಣ ಒಂದು ನೋಟು ಬುಕ್ ನಂತಹ ಒಂದು ಭಗವದ್ಗೀತೆ ಪುಸ್ತಕವನ್ನು ಮಂಗಳೂರಿನ ನಿತ್ಯಾನಂದ ಗ್ರಂಥಾಲಯದಿಂದ ತಂದಿದ್ದರು. ಆಗ ಅದರ ಮೊದಲ ಎರಡು ಪುಟವನ್ನು ಮಾತ್ರ ಓದುವುದಕ್ಕೆ ಸಾಧ್ಯವಾಗಿದ್ದು. ಆನಂತರ ಓದಲಿಲ್ಲ. ಕಾರಣ ಇಷ್ಟೆ, ಅದು ನಮಗೆ ಅರ್ಥವಾಗುವ ಹಾಗಿಲ್ಲ. ಮನೆಯಲ್ಲೂ ಅದನ್ನು ಅರ್ಥವಿಸಿ ಹೇಳುವಷ್ಟು ಹಿರಿಯರಿಗೂ ತಿಳಿದಿರಬೇಕಲ್ಲ. ನಂತರ ಅದು ದೇವರ ಕೋಣೆಯ ಇತರ ಪುಸ್ತಕದ ಜತೆಗೆ ಪೂಜಿಸಲ್ಪಡುತ್ತಿತ್ತು. ಇದರಲ್ಲಿನ ಶ್ಲೋಕದ ಅರ್ಥ ಏನೋ ಓದಿಬಿಡಬಹುದು. ಆದರೆ ಭಗವದ್ಗೀತೆ ಕೇವಲ ಅಷ್ಟೇ ಆದರೆ ಇಷ್ಟೇಲ್ಲಾ ಹೇಳಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ. ಬಹುಶಃ ಬಹು ಪಾಲು ಪಾಮರೀ ವ್ಯಕ್ತಿಗೆ ಇದು ಅರ್ಥವಾಗುತ್ತಿದ್ದರೆ ಇಂದಿನ ಬಹು ಪಾಲು ಸಮಸ್ಯೆಗಳು ಹುಟ್ಟುತ್ತಲೇ ಇರಲಿಲ್ಲ. ಹಲವು ಸಲ ಇದರ ಅರ್ಥವನ್ನು ಹೇಳಿದರೆ, ಅರಗಿಸಿಕೊಳ್ಳುವ ಪ್ರಾಮಾಣಿಕತೆಯೂ ನಮ್ಮಲ್ಲಿರುವುದಿಲ್ಲ. ನಾವು ಅರೆ ನಾಸ್ತಿಕ ಎಂದಾಗಿಬಿಡುತ್ತೇವೆ. ತತ್ವಮಸೀ ತತ್ವವನ್ನು ಒಬ್ಬೂಬ್ಬರು ಒಂದೊಂದು ರೀತಿಯಲ್ಲಿ ಅರ್ಥವಿಸಿಬಿಡುತ್ತಾರೆ.
ಎಲ್ಲವೂ ನಾನು ಎನ್ನುವ ಪರಮಾತ್ಮ , ಎಲ್ಲದರಲ್ಲೂ ನಾನಿದ್ದೇನೆ
ಪರಮಾತ್ಮ ಒಬ್ಬನೇ ಎಂಬ ತತ್ವವನ್ನು ಸಾರುವ ಭಗವದ್ಗೀತೆಯ ಆಳ ವೈಶಾಲ್ಯತೆಯನ್ನು ಅರಿಯುವ ಪ್ರಯತ್ನವಾಗಬೇಕು.
ಪ್ರಸ್ತುತ ಪರಿಸ್ಥಿತಿಗೆ ಅದು ಅತ್ಯಗತ್ಯ. ಮಂಗಳೂರು ಎಂಬ ಊರಿಗೆ ಹಲವು ಹೆಸರಿದೆ. ಒಂದೊಂದು ಭಾಷೆಯವರು
ಒಂದೊಂದು ಜಾತಿಯವರು ಇದನ್ನು ವಿಭಿನ್ನವಾಗಿ ಕರೆಯುವ ಅತ್ಯಂತ ವಿಶಿಷ್ಟ ನಗರ. ಯಾವ ಹೆಸರಲ್ಲಿ ಕರೆದರೂ
ಅದನ್ನು ಕೇಳಿದಾಗ ನಮ್ಮ ಸ್ಮೃತಿಯಲ್ಲಿ ಮೂಡುವುದು ಒಂದೇ ಅದೇ ಮಂಗಳೂರು. ಎಲ್ಲ ಭಾವಗಳೂ ಕೇಂದ್ರಿಕೃತವಾಗುವುದು
ಒಂದರಲ್ಲೇ, ಹಾಗಿದ್ದರೂ ನಾವು ಧರ್ಮ ಜಾತಿಯ ಬಗ್ಗೆ ಹೆಚ್ಚು ಯೋಚಿಸುತ್ತ
ಭಗವಂತನ ಬಗ್ಗೆ ಯೋಚಿಸುವುದನ್ನೇ ಮರೆತುಬಿಡುತ್ತೇವೆ.
ಇದೀಗ ಭಗವದ್ಗೀತೆ ಒಂದು ಶಿಕ್ಷಣ ವಸ್ತುವಾಗುತ್ತದೆ. ಅದು ಹಾಗಾಗದೀದ್ದರೂ ಅದರಿಂದ ಕಲಿಯುವಂತಹುದು ಬಹಳವಿದೆ. ಇದುವರೆಗೆ ವ್ಯವಹಾರಿಕ ಪ್ರಪಂಚದದ ಜೀವನವನ್ನೇ ಸರ್ವಸ್ವ ಎಂಬ ಭ್ರಮೆಯಲ್ಲಿ ಬದುಕಿದವರಿಗೆ ಇದು ಕೇವಲ ಪುಸ್ತಕವಾಗಿ ಸಾಧ್ಯವಿದ್ದರೆ ಒಂದು ಹೂವು ಇರಿಸಿ ಆರತಿ ಎತ್ತುವುದಕ್ಕಷ್ಟೇ ಸೀಮಿತವಾಗಿತ್ತು. ಇಲ್ಲ ಅದರ ಮೇಲೆ ಕೈ ಇಟ್ಟು ಪ್ರತಿಜ್ಞೆ ಮಾಡುವುದಕ್ಕೆ ಸೀಮಿತವಾಗಿತ್ತು. ಹೆಚ್ಚೆಂದರೆ ಈ ಪ್ರತಿಜ್ಞೆ ಮಾಡುವಾಗ ನಮ್ಮ ಮಕ್ಕಳ ನೆನಪೂ ನಮಗೆ ಆಗುತ್ತಿಲ್ಲ. ಮಕ್ಕಳ ತಲೆಯ ಮೇಲೆ ಕೈಯಿಟ್ಟು ಅಷ್ಟು ಸುಲಭದಲ್ಲಿ ನಾವು ಪ್ರತಿಜ್ಞೆ ಮಾಡಬಹುದೇ? ಇಲ್ಲ. ಅಷ್ಟೊಂದು ಯಾಂತ್ರಿಕತೆಗೆ ಭಗವದ್ಗೀತೆ ಸಾಕ್ಷಿಯಾಗಿತ್ತು.
ನಾನು ನನ್ನದು ಎಂಬ ವ್ಯಾಮೋಹ
ಭಗವದ್ಗೀತೆ ಬರಬೇಕು. ನಮಗೆ ಸಿಗದ ಅವಕಾಶಗಳು ಮುಂದಿನ ಜನಾಂಗ ಸಿಗಬೇಕು. ಅದು ಸ್ವಾಗತಾರ್ಹ. ಆದರೂ
ಅದರ ಶಿಕ್ಷಣ ಸಾಗುವ ದಿಶೆಯಲ್ಲಿ ಸಾಗಬೇಕು. ಕಬ್ಬಿಣದ ಕಡಲೆ ಬಾಯಿಯೊಳಗೆ ತುರುಕಿದಂತಾದರೆ ಅದು ಕೇವಲ
ಪಾಠ ಎನಿಸಿಕೊಳ್ಳುವುದಕ್ಕೂ ಅರ್ಹತೆ ಇಲ್ಲದಂತಾಗುತ್ತದೆ. ಭಗವದ್ಗೀತೆಗೆ ಅರ್ಹತೆ ಇಲ್ಲದಂತೆ ಮಾಡುವ
ಪ್ರವೃತ್ತಿ ನಮ್ಮದಾಗಕೂಡದು. ಭಗವದ್ಗೀತೆ ಕೇವಲ ಪಾರಾಯಣವಲ್ಲ ಅದು ಪಠಣವಾಗಬೇಕು. ಯಾವುದೋ ದೇವಾಲಯದ
ಒಳಗಿರುವ ದೇವರು ಗರ್ಭಗುಡಿಯ ಬಾಗಿಲು ತೆರೆದರೆ ಕಣ್ಣಿಗೆ ಬೀಳಬಹುದು. ಆದರೆ ನಮ್ಮೊಳಗಿನ ದೇವರ ದರ್ಶನವಾಗಬೇಕಾದರೆ
ಅದಕ್ಕೆ ನಿರಂತರ ತಪಸ್ಸು ಬೇಕಾಗುತ್ತದೆ. ಪಾಮರನಿಗೆ
ಅದು ಸಾಧ್ಯವಾಗುವುದಿಲ್ಲ. ನಮ್ಮೊಳಗಿನ ಪಾಮರತ್ವ ತೊಲಗಿ ಒಳಗಿರುವ ಪರಮಾತ್ಮ ದರ್ಶನವಾಗಬೇಕಾದರೆ ಭಗವದ್ಗೀತೆ
ಒಂದು ಪಠ್ಯವಾಗಬೇಕು.
No comments:
Post a Comment