"ಭಾವನೆಗಳ ಭಾರವನ್ನು ಅಳೆಯುವ ತಕ್ಕಡಿ ಇನ್ನೂ ಬಂದಿಲ್ಲ.ಆದರೆ ಹೃದಯ ಅದರ ಭಾರವನ್ನು ಅಳೆಯಲು ಹವಣಿಸುತ್ತದೆ."
ಚಂದ್ರಮಾವ ನನ್ನ ಸೋದರ ಮಾವ. ಸದಾ ಅಕ್ಕರೆಯಲ್ಲಿ ನನ್ನ ಕಂಡವರು. ರಾಜಕುಮಾರ, ನನ್ನ ಮಾವ ನನಗಿಟ್ಟ ಹೆಸರು. ಮಗುವಾಗಿದ್ದಾಗ ನನ್ನ ಅಪ್ಪ ಯಾರು ಎಂದು ಕೇಳಿದರೆ ನಾನು ಪೆದ್ದು ಪೆದ್ದಾಗಿ ಚಂದಮಾಮ ತೊದಲುತ್ತಿದ್ದೆ. ಮಾವನೊಡನಿದ್ದ ಆತ್ಮೀಯತೆಯದು. ಮಾವ ಉಂಡ ತಟ್ಟೆಯಲ್ಲಿ ತುತ್ತು ಅನ್ನ ತಿಂದ ನೆನಪು ಈಗಲೂ ಇದೆ. ತನ್ನ ತಟ್ಟೆಯಿಂದಲೇ ತುತ್ತು ಅನ್ನ ತಿನ್ನಿಸುತ್ತಿದ್ದ ನನ್ನ ಮಾವನ ಪ್ರೀತಿ ನೆನಪಾದಾಗಲೆಲ್ಲ ಹೃದಯ ತುಂಬಿ ಕಣ್ಣಾಲಿಗಳು ತೇವವಾಗುತ್ತದೆ. ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಸಂಭಂಧವೆಂದರೆ ಭಾವನಾತ್ಮಕ ಸಂಬಂಧ, ಏನು ಕಳಚಿದರೂ ಭಾವನೆಗಳು ಕಳಚಿಹೋಗುವುದಿಲ್ಲ. ಅದು ರಕ್ತಗತವಾಗಿ ಧಮನಿಯಿಂದ ಹೃದಯಕ್ಕೆ ಹರಿಯುತ್ತಾ ಇರುತ್ತದೆ. ಹೆಚ್ಚು ಕಮ್ಮಿ ಭಾವನಾತ್ಮಕವಾಗಿ ಮಾವನಗುಣಗಳನ್ನೇ ಅನುಕರಿಸುತ್ತಿದ್ದ ನನ್ನನ್ನು ಮಾವ ಹೇಳುತ್ತಿದ್ದರು ರಾಜಾ ಪ್ರತ್ಯಕ್ಷ ದೇವತಾ. ಸ್ವಂತ ಮಕ್ಕಳಲ್ಲೂ ತೋರದ ವಿಶ್ವಾಸ ಸಲುಗೆಯನ್ನು ಕಂಡು ಬೆಳೆದವನು ನಾನು. ಎದೆಯೆತ್ತರಕ್ಕೆ ಬೆಳೆದು ಸ್ವತಂತ್ರವಾದ ಬದುಕು ನಾನು ಕಟ್ಟಿಕೊಂಡಾಗ ಮಾವನ ಕಿಶೆಯಿಂದ ಜಾರಿಹೋದ ಅಡಿಕೆಯಂತಾದೆ. ಮಾವನ ಮುಷ್ಠಿ ಸಾಲದಾಯಿತು. ನಾನು ಬೆಳೆದಂತೆಲ್ಲಾ ಮಾವ ಅಭಿಮಾನಿಸುತ್ತಿದ್ದರು. ಆದರೂ ನಾನು ಬೇರೆಯೇ ಆದಾಗ ಭಾವನಾತ್ಮಕವಾಗಿ ಮಾವನೂ ನಲುಗಿರಬಹುದು. ಕಂಡಾಗಲೆಲ್ಲ ಕೈ ಹಿಡಿದರೆ, ಕಣ್ಣಿನಿಂದ ತೊಟ್ಟಿಕ್ಕಿದ ನೀರು ಕೈಯಲ್ಲಿ ಗತ ನೆನಪಿನ ಚಿತ್ತಾರವನ್ನು ಬಿಡಿಸುತ್ತಿತ್ತು. ಚಂದ ಮಾಮ ನನ್ನ ಪಾಲಿಗೆ ಬಾನ ಚಂದಿರನೇ ಆಗಿದ್ದ. ಈ ಮಾವನ ನೆನಪು ಮೊನ್ನೆ ಒತ್ತೊತ್ತಿ ಬಂತು. ಪ್ರತಿಯೋರ್ವ ತಂದೆಗೂ ಇದೇ ಭಾವನೆಗಳು ತುಂಬಿ ಬರಬಹುದು.
ನನ್ನ ಮಗ ಹರ್ಷ ಹೆಗಲಹತ್ತಿ ಆಟವಾಡುತ್ತಿದ್ದವನು , ಹೆಗಲನ್ನು ಒತ್ತರಿಸಿ ಬೆಳೆದು ನಿಂತು ಈಗ ಮೆಚ್ಚಿದ ಹೆಣ್ಣಿನ ಹಾರಕ್ಕೆ ಕೊರಳೊಡ್ಡುವುದಕ್ಕೆ ಮಂಟಪದಲ್ಲಿ ಅಂತರ್ಪಟದ ಹಿಂದೆ ನಿಂತುಕೊಂಡಿದ್ದ. ಮೊನ್ನೆ ಮೊನ್ನೆ ಎಂಬಂತೆ ಕಳೆದ ಆತನ ಬಾಲ್ಯದ ನೆನಪಿನೊಂದಿಗೆ ನನ್ನ ಮಾವನೊಡನೆ ಕಳೆದ ಬಾಲ್ಯ ನೆನಪಾಯಿತು. ಈಗ ನನ್ನ ಜೇಬಿನಲ್ಲಿದ್ದ ಅಡಿಕೆ ಮರವಾಗಿ ಬೆಳೆದು ನಿಂತಿದೆ. ತಿಳಿಯದೇ ನಾವೆಲ್ಲ ಪ್ರಕೃತಿಯ ವೃತ್ತದ ಭಾಗವಾಗಿದ್ದೇವೆ. ಮನುಷ್ಯನ ಜೀವನ ಚಕ್ರವೂ ಅದೇ ರೀತಿ, ಹುಟ್ಟಿದಾಗ ಎದೆ ಮೆಲೆ ಹೆಜ್ಜೆ ಇಟ್ಟು ಪಾದದ ಬಲ ಪರೀಕ್ಷಿಸುವ ಮಗು ಬೆಳೆದು ದೊಡ್ಡದಾಗುತ್ತಿದ್ದಂತೆ ಮಡಿಲು ತೊರೆದು ನಿಂತುಕೊಂಡೆ ಎಂದು ಕೇ ಕೆ ಹಾಕಿ ನಗುತ್ತದೆ. ತೊದಲು ಮಾತಿಗೆ ಮುಗ್ದ ನಗುವಿಗೆ ಹೆತ್ತಕರುಳು ಕೂಡ ನಗುತ್ತದೆ. ಎಲ್ಲರ ಅನುಭವವೂ ಇದೇ ಆಗಿರಬಹುದು. ಆದರೂ ಹೊಸದು ಸಿಗುವ ಹಳೆಯದು ಕಳೆದುಕೊಂಡ ಅನುಭವ.
ಮನುಷ್ಯ ಜೀವನದಲ್ಲಿ ಗೃಹಸ್ಥ ಜೀವನವೆಂಬುದು ಪರಮಾತ್ಮನಿಗೆ ಹತ್ತಿರವಾಗುವ ಹಂತ. ಕರ್ಮಾಂಗದಲ್ಲಿ ಕರ್ತೃತ್ವದ ಅವಕಾಶ ಒದಗಿಬರುತ್ತದೆ. ಗೃಹಸ್ಥನಾಗಿ ಹಲವು ಕರ್ಮಗಳಿಗೆ ಪವಿತ್ರಪಾಣಿಯಾಗುತ್ತಾನೆ. ಗೃಹಸ್ಥ ಜೀವನವೆಂದರೆ ಒಂದು ರೀತಿಯ ಅಗ್ನಿ ಪ್ರವೇಶದಂತೆ. ಅಗ್ನಿ ಎಲ್ಲವನ್ನೂ ಪರಿಶುದ್ಧಗೊಳಿಸುತ್ತದೆ. ಸಂಸಾರದ ರಸಗಳೆಲ್ಲವೂ ಅಗ್ನಿ ಪರೀಕ್ಷೆಗಳಂತೆ ವ್ಯಕ್ತಿತ್ವವನ್ನು ಪಕ್ವಗೊಳಿಸುತ್ತಾ ಪರಮಾತ್ಮ ಸಾನ್ನಿಧ್ಯ ಒದಗಿಬರುತ್ತದೆ. ಎದುರಾಗುವ ಸವಾಲುಗಳು ಅಗ್ನಿಯಂತೆ. ಅದರಲ್ಲಿ ಪರಿಪಕ್ವವಾಗಿ ಬದುಕನ್ನು ಸಾರ್ಥಕವಾಗಿಸಬೇಕು. ಅಗ್ನಿ ಸಾಕ್ಷಿ ಎನ್ನುವುದೇ ಹಾಗೆ. ನಮ್ಮ ಬದುಕು ಪ್ರಜ್ವಲಿಸಬೇಕಾದರೆ ನಮ್ಮ ದೇಹಾಗ್ನಿ ಸದಾ ಜೀವಂತವಾಗಿರಬೇಕು. ಕೈ ಮೇಲೆ ಕೈ ಇರಿಸಿ ಭಾಷೆ ಕೊಟ್ಟು ವಾಗ್ದಾನ ಮಾಡುವಾಗಲೂ ಕೈಯಲ್ಲಿರುವ ಅಗ್ನಿ ಸಾಕ್ಷಿಯಾಗುತ್ತದೆ. ಇಲ್ಲೂ ನವ ವಧುವಿನ ಕೈ ಮೇಲೆ ಕೈ ಇರಿಸಿ ಧರ್ಮೇಚ ಅರ್ಥೇಚ ಎಂದು ತ್ರಿಕರಣ ಪೂರ್ವಕಾಗಿ ಹೇಳಿ ಗೃಹಸ್ಥಾಶ್ರಮದೆಡೆಗೆ ಹರ್ಷನ ಹೆಜ್ಚೆ ನೋಡಿ ನಾನೂ ಹರ್ಷಿತನಾದೆ. ಎದುರಿನ ಹೋಮಕುಂಡದ ಅಗ್ನಿಗೆ ಸಂಕೇತವಾಗಿ ಅಂಗೈ ಅಗ್ನಿಯ ಬಿಸಿ ನವ ವಧುವಿಗೆ ಧೈರ್ಯವನ್ನು ತುಂಬುವುದು ಆಕೆಯ ಮಂದಸ್ಮಿತವೇ ಸಾರಿ ಹೇಳುತ್ತಿತ್ತು.
ಅಂತರ್ಪಟ ಸರಿದಾಗ ಗಂಡು ಹೆಣ್ಣು ತಮ್ಮ ಕೈಯಲ್ಲಿರುವ ಜೀರಿಗೆ ಬೆಲ್ಲವನ್ನು ಪರಸ್ಪರ ಕೆನ್ನೆಗೆ ಹಚ್ಚಿಕೊಳ್ಳಬೇಕು. ಮಲೆನಾಡ ಸಂಪ್ರದಾಯ. ಯಾರು ಜೀರಿಗೆ ಬೆಲ್ಲ ಮೊದಲು ಹಚ್ಚುತ್ತಾರೋ ಅವರೇ ಮುಂದೆ ಎಲ್ಲದರಲ್ಲೂ ಗೆಲುವನ್ನು ಕಾಣುತ್ತಾರೆ ಎಂಬುದು ವಾಡಿಕೆಯಲ್ಲಿರುವ ಮಾತು. ನಾನು ಹರ್ಷನ ಕಿವಿಯಲ್ಲಿ ಹೇಳಿದೆ ಯಾರು ಮೊದಲು ಹಚ್ಚುತ್ತಾರೊ ಅವರ ಮಾತು ಹೆಚ್ಚು ನಡೆಯುತ್ತದೆ. ಆತ ಮೆಲುದನಿಯಲ್ಲೇ ಹೇಳಿದ ಅವಳೇ ಮೊದಲು ಹಚ್ಚಲಿ. ನಿಜವಾಗಿಯೂ ಅದು ಶುದ್ದಾಂತಃಕರಣದ ಮಾತು . ಸಂಸಾರದಲ್ಲಿ ಯಾರು ಸೋಲುತ್ತಾರೋ ಅವರೇ ಗೆಲ್ಲುತ್ತಾರೆ. ಕೌಟುಂಬಿಕ ಜೀವನದ ಸಿದ್ಧಾಂತ ಇದು. ಅದನ್ನು ನಾನು ಬಲವಾಗಿ ನಂಬಿದವ. ಇಲ್ಲಿ ಸೋಲು ಗೆಲುವು ನಿರ್ಣಯಿಸಲ್ಪಡುವುದಿಲ್ಲ. ಯಾರು ಸೋಲುತ್ತಾನೋ ಆತ ಗೆಲುವಿನ ನಗೆ ಬೀರುತ್ತಾನೆ. ಕೈ ಹಿಡಿವ ಹೆಣ್ಣಿನ ಗೆಲುವಲ್ಲೇ ಮಗನ ಗೆಲುವು ಅದು ತನ್ನ ಸೋಲು ಅಲ್ಲ ಎಂಬುದನ್ನು ಮಗ ಪ್ರತಿಪಾದಿಸಿ ಬಿಟ್ಟ.
ಚೈತ್ರ ಸುಂದರ ಮುದ್ದಾದ ಹೆಣ್ಣು. ಮೊದಲು ಕಂಡಾಗ ಕಾಲಿಗೆರಗಿದವಳನ್ನು ತೆಲೇ ನೇವರಿಸಿ ಬರಸೆಳೆದಿದ್ದೆ. ನನ್ನ ಮಗ ಬಯಸಿದ ಹೆಣ್ಣು ಮಗಳು. ಈಕೆಯ ನಗುವಿನಲ್ಲಿ ನನ್ನ ಮಗನ ನಗುವಿದೆ. ಮಾಂಗಲ್ಯ ಬಿಗಿದು ಧಾರೆ ಎರೆದು ಆಕೆ ಬಳಿಯಲ್ಲಿ ಕುಳಿತಾಗ ಒಂದು ಜವಾಬ್ದಾರಿ ಪೂರೈಸಿದ ಸಂತಸ.
ಮದುವೆ ಎಂಬುದು ಎಷ್ಟು ಸುಂದರ ಮತ್ತು ಸಂಭ್ರಮವೋ ಅದನ್ನು ನಿಭಾಯಿಸುವುದು ಅಷ್ಟೇ ಶ್ರಮದಾಯಕ. ಮಾನಸಿಕ ಒತ್ತಡ ಬೇಡವೆಂದರೂ ಅಮುಕಿಬಿಡುತ್ತದೆ. ಆದರೆ ಈ ಮದುವೆಯನ್ನು ಒತ್ತಡರಹಿತವಾಗಿ ಅನುಭವಿಸುವುದಕ್ಕೆ ನನ್ನ ಭಾವಂದಿರಾದ ಅರುಣ ಪ್ರಕಾಶ ಮತ್ತು ಮನೆಯವರ ಪರಿಶ್ರಮ ಮನ ಮುಟ್ಟುವ ಹಾಗಿತ್ತು. ಒಂದಿಷ್ಟು ಶ್ರಮವನ್ನೂ ನನ್ನ ಅನುಭವಕ್ಕೆ ಬಾರದಂತೆ ಎಲ್ಲ ಭಾರವನ್ನು ತಮ್ಮ ಹೆಗಲ ಮೇಲೆ ಹೊತ್ತು ನನಗೆ ಒಡಹುಟ್ಟಿದ ಸ್ನೇಹವನ್ನು ತೋರಿದವರು. ಮಾತೃ ಹೃದಯೀ ಅತ್ತೆಯವರೂ ಇಳಿ ವಯಸ್ಸಿನಲ್ಲಿ ನೀಡಿದ ದುಡಿಮೆ ಮರೆಯುವ ಹಾಗಿಲ್ಲ. ಎಲ್ಲದಕ್ಕೂ ಒಂದು ಕಾರಣವೆಂದರೆ ಹರ್ಷ ಎಲ್ಲರ ಮಡಿಲಲ್ಲಿ ಬೆಳೆದ ಮಗು. ಹರ್ಷನ ಪ್ರತಿ ಬೆಳವಣಿಗೆಯಲ್ಲೂ ಭಾಗಿಯಾದವರೂ ಮದುವೆಯಲ್ಲೂ ಸಂಭ್ರಮಿಸಿದರು. ಭಾವಂದಿರ ಜತೆಗೆ ಶಶಿ ಪ್ರಮೀಳ ಭರತು ಮನೆ ಮಂದಿಯೆಲ್ಲರೂ ಇದು ನನ್ನದೇ ಮನೆ ಎಂಬ ಅನುಭವ ತುಂಬುವುದಕ್ಕೆ ಮನಸಾರೆ ಯತ್ನಿಸಿದವರು. ಎಂದಿನಂತೆ ಮನಸ್ಸಿಗೆ ಧೈರ್ಯ ತುಂಬಿ ಜತೆಯಾಗಿ ದಾರಿ ತೋರಿದವರು ತಲಮಕ್ಕಿ ಮನೆಯ ಸುಬ್ಬಣ್ಣ. ಇನ್ನು ದುಡಿಮೆಯಲ್ಲೇ ಸುಖ ಕಾಣುವ ಬಾಲು ಮಾಮನ ಪರಿಶ್ರಮಕ್ಕೆ ಬೆಲೆ ಕಟ್ಟುವುದು ಸಾಧ್ಯವಿಲ್ಲದ ಮಾತು. ಮಿಕ್ಕುಳಿದ ಬಂಧುಗಳ ಯಥಾಶಕ್ತಿ ಪ್ರೋತ್ಸಾಹ ಹರ್ಷನ ಮದುವೆಗೆ ಹರಿದು ಬಂದದ್ದು ಹರ್ಷ ತಂದಿತು.
ಮದುವೆ ಎಂದರೆ ಅದೊಂದು ತಪಸ್ಸಿನ ಅನುಭವ ನೀಡುತ್ತದೆ. ಬಹಳಕಾಲದ ದೀರ್ಘ ತಪಸ್ಸು. ಈ ನಡುವೆ ಒಂಟಿಕಾಲಿನ ಪರೀಕ್ಷಗಳನ್ನ ಸದಾ ಎದುರಿಸಬೇಕಾಗುತ್ತದೆ. ಅದು ಎಲ್ಲರ ಅನುಭವ. ತಪಸ್ಸು ಎಷ್ಟು ಕಠಿಣವಾದರೂ ದೈವ ಸಾಕ್ಷಾತ್ಕಾರವಾಗಬೇಕಾದರೆ ಅದನ್ನು ಆಚರಿಸಲೇ ಬೇಕು. ಅದರಂತೆ ಮದುವೆ. ತಪಸ್ಸು ಮಾಡಿ ಮಾಡಿ ಕೊನೆಗೊಂದು ಮೂಹೂರ್ತದಲ್ಲಿ ದೈವ ಸಾಕ್ಷಾತ್ಕಾರವಾದಂತೆ ಮದುವೆಯಾಗಿ ವಧುವರರು ಚಪ್ಪರದಲ್ಲಿ ನಿಂತಿರುತ್ತಾರೆ. ಹಾಗಾಗಿಯೇ ನವ ವಧುವರರನ್ನು ಭಗವಾನ್ ಸ್ವರೂಪ ಶ್ರೀ ಲಕ್ಷ್ಮೀನಾರಾಯಣನಿಗೆ ಹೋಲಿಸುವುದು.
ಈ ಮದುವೆಗೆ ಶಾಲಾ ದಿನದ ಸಹಪಾಠಿಗಳು ಬೆಂಚು ಮಿತ್ರರೂ ಅತ್ಯಂತ ಪ್ರೀತಿಯಿಂದ ಆಗಮಿಸಿದ್ದು ಬಹಳ ಸಾರ್ಥಕವೆನಿಸಿತ್ತು. ಅಪರೂಪ ಎನ್ನಿಸುವಂತಹ ಮಿತ್ರರ ಆಗಮನ ಆಹ್ಲಾದಮಯವಾಗಿತ್ತು. ನನ್ನ ಕೈಯಲ್ಲೇ ಬೆಳೆದ ನನ್ನ ಮಾವನ ಮಕ್ಕಳ ಸಾನಿಧ್ಯ ನನ್ನ ಮತ್ತು ಮಾವನ ಹೃದಯದ ಸಂಭಂಧವನ್ನು ನೆನಪಿಗೆ ತಂದಿದೆ. ಇದಕ್ಕಿಂತ ಹೆಚ್ಚು ಏನು ಬೇಕು? ಹರ್ಷನ ಮದುವೆ ಹರ್ಷದಲ್ಲೇ ಕಳೆದು ಹರುಷವನ್ನೇ ತಂದಿತು. ಮದುವೆಗಿಂತಲೂ ನಂತರದ ಬದುಕು ಅತ್ಯಂತ ಮಹತ್ವ. ನವ ವಧುವರರ ಮುಂದಿನ ಬದುಕಿ ಶುಭ ಹಾರೈಕೆಗಳು ಶುಭಾಶಿರ್ವಾದಗಳನ್ನು ಹೊತ್ತು ತಂದ ಬಂಧು ಮಿತ್ರರಿಗೆ ಕೃತಜ್ಞತೆಗಳು.
No comments:
Post a Comment