Thursday, August 18, 2022

ಹೀಗೂ ಒಂದು ಅನುಭವ.

 ಇದು ನಡೆದು ಬಹಳ ದಿನವಾಗಿತ್ತು.  ಅದು ಕೆನರಾ ಬ್ಯಾಂಕ್ ನ ಕಛೇರಿ. ಅದರ ತಿಂಗಳ ಆಡಿಟ್ ಕೆಲಸಕ್ಕೆ ನಾನು ಹೋಗುತ್ತಿದ್ದೆ.  ಅಂದು ಸ್ವಲ್ಪ ಹಣ ಬ್ಯಾಂಕ್ ಖಾತೆಯಿಂದ ತೆಗೆಯಬೇಕಿತ್ತು.  ಬ್ಯಾಂಕ್ ಪಕ್ಕದಲ್ಲೇ ಇದ್ದ ಎಟಿಎಂ ಗೆ ಹೋದೆ. ಹೊತ್ತು ಮಧ್ಯಾಹ್ನವಾಗಿತ್ತು. ಎಟಿಎಂ ಬಾಗಿಲ ಬಳಿಗೆ ಬರುವಾಗ ಒಳಗೆ ವೃದ್ದೆಯೊಬ್ಬಳಿದ್ದಳು. ಸರಿ ಹೊರಗೆ ಕಾಯುತ್ತಿದ್ದೆ. ಬೇರೆ ಯಾರೂ ಇರಲಿಲ್ಲ. ಬಹಳ ಹೊತ್ತಾಯಿತು, ವೃದ್ದೆ ಹೊರಗೆ ಬರುತ್ತಿಲ್ಲ. ಎಟಿಎಂ ಯಂತ್ರವನ್ನು ನೋಡುತ್ತಾ ಇದ್ದಾಳೆ. ಇನ್ನು ತಡವಾಗುತ್ತದೆ ಎಂದುಕೊಂಡು ನಿಧಾನವಾಗಿ ಬಾಗಿಲು ತಳ್ಳಿ "ಏನಮ್ಮಾ? ಆಯ್ತಾ?" ಎಂದು ಕೇಳಿದೆ.  ವಯಸ್ಸಾದ ವೃದ್ಧೆಯಾದರೂ ಅಮ್ಮ ಎಂದು ಕರೆಯುವುದು ನನ್ನ ರೀತಿ. ಅಜ್ಜಿ ಎಂದು ಕರೆಯಬಹುದು. ಆದರೆ ಹಾಗೆ ಕರೆಯುವುದು ವೃದ್ಧೆಯ ಆತ್ಮಬಲವನ್ನು ಕುಗ್ಗಿಸಿದಂತೆ ನನಗೆ ಭಾಸವಾಗುತ್ತದೆ. ವಯಸ್ಸಾಗುತ್ತದೆ.  ಪ್ರತಿಕ್ಷಣ ಕಳೆದಂತೆ ನಾವು ವೃದ್ದರಾಗುತ್ತೇವೆ. ಅಜ್ಜಿ ಎಂದು ಕರೆದಾಗ ಕೆಲವೊಮ್ಮೆ ವಯಸ್ಸಾಯಿತು. ನಾವು ಅಶಕ್ತರಾಗುತ್ತಿದ್ದೇವೆ ಎಂಬ ಮನೋಭಾವದಿಂದ ಸಹಜವಾಗಿ  ಆತ್ಮ ಬಲ ಕುಂಠಿತವಾಗುತ್ತದೆ. 

ವೃದ್ದೆ ತಿರುಗಿ ನೋಡಿ ಅಸಹಾಯಕ ದೃಷ್ಟಿಯಿಂದ ನೋಡಿದಳು. ಯಾಕೋ ಹಣ ಬರುತ್ತಿಲ್ಲ. ಎಂದು ಅಲವತ್ತುಕೊಂಡಳು. ನಾನು ನೋಡಬಹುದೇ ಎಂದು ಕೇಳಿದಾಗ ಎಟಿಎಂ ಕಾರ್ಡ್ ಕೈಗಿತ್ತಳು. ನಾನು ಕಾರ್ಡ್ ಯಂತ್ರದೊಳಗೆ ತಳ್ಳಿ ನೋಡಿದರೆ, ಕಾರ್ಡ್ ಬ್ಲಾಕ್ ಆಗಿತ್ತು!  

ಅಮ್ಮಾ  ನೀವು ಪಿನ್ ನಂಬರ್ ತಪ್ಪಾಗಿ ಒತ್ತಿದ್ದೀರಾ ಬ್ಲಾಕ್ ಅಗಿದೆ.  ಆಕೆ ಗಾಬರಿಯಿಂದ ನೋಡಿದಳು. ಏನು ಮಾಡಲಿ ಅಂತ ನನ್ನನ್ನು ಕೇಳಿದಳು. ನಾನು ಹೇಳಿದೆ ಅಮ್ಮ ಮನೆಯಲ್ಲಿ ಬೇರೆ ಮಕ್ಕಳು ಯಾರು ಇಲ್ಲವೇ? ಯಾರನ್ನಾದರೂ ಕರೆದುಕೊಂಡು ಬರಬೇಕು. ಆಕೆ ಒಂದು ಮಾತು ಆಡಲಿಲ್ಲ.ಹಾಗೆ ಗಾಬರಿಯಿಂದ ನೋಡಿದಳು. ನಾನು ಬ್ಯಾಂಕ್ ಗೆ ಹೋಗಿ ಕೇಳುವಂತೆ ಹೇಳಿದೆ. ಆಕೆ ಮತ್ತೂ ಗಾಬರಿಯಿಂದ ನೋಡುತ್ತಿದ್ದಳು. ನಾನು ಆಕೆಯನ್ನು ಕರೆದುಕೊಂಡು ಅಲ್ಲೆ ಇದ್ದ ಬ್ಯಾಂಕ್ ಶಾಖೆಯ ಒಳಗೆ ಹೋದೆ. ಅದೇ ಬ್ಯಾಂಕ್ ನ ಆಡಿಟ್ ಮಾಡುವುದರಿಂದ ಎಲ್ಲರ  ಪರಿಚಯ ಇತ್ತು. ನಾನು ಹೋಗಿ ಅದನ್ನು ಸರಿ ಮಾಡಿಕೊಡುವಂತೆ ಹೇಳಿ ವೃದ್ಧೆಯ ಅಸಹಾಯಕತೆಯನ್ನು ವಿವರಿಸಿದೆ. ಬ್ಯಾಂಕ್ ಸಿಬ್ಬಂದಿ ಗೌರವಯುತವಾಗಿ ಕಾರ್ಡ್ ಬ್ಲಾಕ್ ಅದುದನ್ನು ನಿವಾರಿಸಿ ಮತ್ತೊಮ್ಮೆ ಪರೀಕ್ಷಿಸುವಂತೆ ಹೇಳಿದರು. ಹಾಗೆ ಎಟಿಎಂ ಗೆ ಬಂದು ಅದರ ಪಿನ್ ಬದಲಿಸಿ ಆಕೆಗೆ ಎಷ್ಟು ಹಣ ಬೇಕು ಎಂದು ಕೇಳಿದಾಗ ಸಾವಿರ ರೂಪಾಯಿ ತೆಗೆದು ಆಕೆಯ ಕೈಗೆ ಇತ್ತೆ. ಆಕೆ ವೃದ್ದಾಪ್ಯ ವೇತನ ಬಂದಿದಾ ನೋಡುವುದಕ್ಕೆ ಹೇಳಿದಳು.  ನೋಡಿದಾಗ ಅದೂ ಬಂದಿತ್ತು. ಅಕೆಗೆ ಸಂತೋಷವಾಯಿತು. ಆಕೆಯ ಖಾತೆಯಲ್ಲಿ ಸುಮಾರು ಎಂಭತ್ತು ಸಾವಿರ ಹಣವಿತ್ತು. ನಾನು ಕೇಳಿದೆ ಅಮ್ಮ  ಯಾಕೆ ಯಾರನ್ನೂ ಕರೆದು ತರಲಿಲ್ಲ. ಹೀಗೆ ಒಬ್ಬರೆ ಬಂದರೆ ಕೆಲವೊಮ್ಮೆ ತೊಂದರೆ ಅನುಭವಿಸಬೇಕಾಗುತ್ತದೆ. ಎಲ್ಲರೂ ಒಳ್ಳೆಯವರಲ್ಲ. 

ಆಕೆಯ ಕಥೆ ಹೇಳಿದಳು. ಆಕೆಯದ್ದೂ ಒಂದು ಕಥೆ. 

ಆಕೆಗೆ ವಯಸ್ಸಾದ ಮಗನಿದ್ದ. ಮಗಳೂ ಇದ್ದಾಳೆ. ಮಗನಿಗೆ ಮಗಳಿಗೆ ಮಕ್ಕಳಾಗಿ ಮೊಮ್ಮಕ್ಕಳ ಅಜ್ಜಿಯವಳು. ಇಷ್ಟೆಲ್ಲಾ ಇದ್ದರೂ ಆಕೆ ಕರೆದು ತರಲಿಲ್ಲ. ಕಾರಣ ಇಷ್ಟೆ ಆಕೆಯ ಬ್ಯಾಂಕ್ ನಲ್ಲಿ ಎಷ್ಟು ದುಡ್ಡಿದೆ ಎಂದು ಅವರಿಗೆಲ್ಲ ತಿಳಿಯುವುದು ಆಕೆಗೆ ಇಷ್ಟವಿರಲಿಲ್ಲ. ಒಂದು ವೇಳೆ ಅದು ತಿಳಿದರೆ ಮಗನೂ ಮಗಳೂ ಅದನ್ನು ಏನೋ ಕಷ್ಟ ಹೇಳಿ ಅದನ್ನು ಕಸಿದುಕೊಂಡು ಬಿಡುತ್ತಿದ್ದರು. ಇನ್ನು ಮಗ ಆತನ ಬಗ್ಗೆ ಹೇಳದಿರುವುದೇ ಉತ್ತಮ. ಆಕೆ ಆ ಪ್ರದೇಶದ ಪುಡಿ ರೌಡಿ. ಅಬ್ಭಾ ಎಂದುಕೊಂಡೆ. ಯಾವುದೇ ತಾಯಿಗಾದರೂ ತನ್ನ ಮಗ ರೌಡಿ ಎನ್ನುವಾಗ ಆತಂಕವಾಗುತ್ತದೆ. ಆಕೆಯ ಮೊಗದಲ್ಲೂ ಅದನ್ನು ಗುರುತಿಸಿದೆ. ಯಾವುದೆ ಹೆಣ್ಣಾದರೂ ತನ್ನ ಮಗ ರೌಡಿಯಾಗಲಿ ಎಂದು ಹೆರುವುದಿಲ್ಲ. ಅದೆಲ್ಲ ಪುರಾಣಕಾಲದ ಕಥೆಗಳು. ಮಹಿಷಾಸುರನನ್ನು ಆತನ ತಾಯಿ ತಪಸ್ಸು ಮಾಡಿ ವರ ಬೇಡಿ ಹೆತ್ತಿದ್ದಳು. ಈಕೆಯ ಮಗ ರೌಡಿ. ಆತನ ಕೈಕಾಲು ಮುರಿದು ಗಾಯಗೊಂಡಾಗ ಮಾತ್ರವೇ ಆತನನ್ನು ಮನೆಯಲ್ಲಿ ಕಾಣುತ್ತಾಳೆ. ಆಕೆ ಎಂದಳು ಹಲವು ಸಲ ಆತನಿಗೆ ಹಾಗೇ ಏನಾದರೂ ಆಗಲಿ ಮನೆಯಲ್ಲಾದರೂ ಬಿದ್ದುಕೊಂಡಿರುತ್ತಾನೆ , ಊರಿಗೆ ಯಾಕೆ ತೊಂದರೆ? ಅಂತ ಭಾವಿಸಿದ್ದು ಇದೆ. ಛೇ...ತಾಯಿಯಾಗಿ ಆಕೆಯ ನೋವು ಎಂಬುದು ಅರ್ಥವಾಗಬೇಕದರೆ ಸ್ವತಃ ಅದನ್ನು ಅನುಭವಿಸಬೇಕು. ಆತ ಶಾಲೆಗೆ ಹೋಗುವಾಗ ಕಷ್ಟ ಪಟ್ಟು ಕಲಿಸಿದ್ದೆ. ಆದರೆ ಆತ ವಿದ್ಯೆ ಕಲಿಯಬೇಕಲ್ಲ. ಬೇಡದೆ ಇದ್ದ ಸಹವಾಸ ಮಾಡಿದ ಈಗ ಸಂಪೂರ್ಣ ಕೆಟ್ಟು ಹೋಗಿದ್ದಾನೆ. ಮನೆಯಲ್ಲಿ ಇರುವುದೇ ಅಪರೂಪ. ಇನ್ನು ತನ್ನ ಬಳಿಯಲ್ಲಿ ಬ್ಯಾಂಕ್ ಖಾತೆ ಇದೆ ಎಂದು ತಿಳಿದರೆ ಆತ ಪೀಡಿಸುತ್ತಾನೆ. ಮನೆಯಲ್ಲಿದ್ದ ಮೊಮ್ಮಕ್ಕಳೋ ಅವರು ಅವರಮ್ಮ ಹೇಳಿದಂತೆ ಕೇಳುವವರು. ಅವರದೂ ಒಂದು ಬದುಕು. ಹಲವು ಸಲ ತನ್ನ ವೃದ್ದಾಪ್ಯ ವೇತನವೇ ಅವರ ಹೊಟ್ಟೆ ತುಂಬಿಸುವುದು. 

ಬೇಜವಾಬ್ದಾರಿ ಸಂಸಾರ. ಅದನ್ನು ಕಟ್ಟಿಕೊಂಡು ಬದುಕಬೇಕಾದ ಅನಿವಾರ್ಯತೆ. ನಾನು ಆಕೆಯನ್ನು ಕರೆದುಕೊಂಡು ಪುನಃ ಬ್ಯಾಂಕ್ ನೊಳಗೆ ಹೋದೆ. ಆಕೆಯಲ್ಲಿ ಕೇಳಿದೆ ನಿನಗೆ ತಿಂಗಳಿಗೆ ಎಷ್ಟಾದರು ಹತ್ತು ಸಾವಿರಕ್ಕಿಂತ ಹೆಚ್ಚು ಖರ್ಚು ಬರುವುದಿಲ್ಲ. ಉಳಿದ ದುಡ್ಡನ್ನು ಫಿಕ್ಸೆಡ್ ಡಿಪಾಸಿಟ್ ಇಡುವಂತೆ ಹೇಳಿದೆ.  ಅದೆಲ್ಲ ತನಗೆ ಗೊತ್ತಿಲ್ಲ ಎಂದು ಅಮಾಯಕಳಾಗಿ ಹೇಳಿದಳು. ನಾನು ಬ್ಯಾಂಕ್ ನವರಲ್ಲಿ ಐವತ್ತು ಸಾವಿರ ಎಫ್ ಡಿ ಮಾಡುವಂತೆ ಹೇಳಿದೆ. ಆಕೆಯಲ್ಲಿ ಹೇಳಿದೆ, ಇನ್ನುಆಕೆಯ ಖಾತೆಯಲ್ಲಿ ಎಷ್ಟು ದುಡ್ಡಿದೆ ಎಂದು ಮನೆ ಮಂದಿಗೆ ತಿಳಿಯಲಾಗದು. ಅದನ್ನು ಎಟಿಎಂ ನಲ್ಲಿ ಪಡೆಯುವುದಕ್ಕೂ ಸಾಧ್ಯವಾಗದು. ತೀರ ಆವಶ್ಯಕತೆ ಬಿದ್ದರೆ ಬ್ಯಾಂಕ್ ಬಂದು ಹೇಳಿದರೆ ಅವರು ಅದನ್ನು ಒದಗಿಸಿಕೊಡುತ್ತಾರೆ ಎಂದು ಹೇಳಿದೆ. ಬ್ಯಾಂಕ್ ನವರು ಆಕೆಯಿಂದ ಬೇಕಾದ ಸಹಿಯನ್ನು ಪಡೆದು ಐವತ್ತು ಸಾವಿರ ಆಕೆಯ ಹೆಸರಲ್ಲಿ ಫಿಕ್ಶೆಡ್ ಡಿಪಾಸಿಟ್ ಇಟ್ಟರು.  ಏನೋ ಒಂದಷ್ಟು ಹೆಚ್ಚು ಬಡ್ಡಿ ಬ್ಯಾಂಕ್ ಖಾತೆಗೆ ಬಂದು ಬೀಳುತ್ತದೆ.  

ಇದೆಲ್ಲ ಆಕೆಗೆ ವಿವರಿಸಿ ಹೇಳಿ ಅಂದು ತೆರಳಿದ್ದೆ. ಇಂದು ಅದೇ ಬ್ಯಾಂಕ್ ಗೆ ಹೋದಾಗ ಅದೇ ವೃದ್ದೆ ಸಿಕ್ಕಿದಳು. ಆಕೆಯೇ ಕರೆದು ಪ್ರೀತಿಯಿಂದ ಮಾತನಾಡಿಸಿದಳು. ಅದರನಂತರ ಮತ್ತಷ್ಟು ಹಣ ಫಿಕ್ಸೆಡ್ ಡಿಪಾಸಿಟ್ ಗೆ ಹಾಕಿ ಈಗ ಎರಡು ಲಕ್ಷದಷ್ಟು ಹಣ ಉಳಿತಾಯದಲ್ಲಿತ್ತು. ಆಕೆ ಹೇಳಿದಳು ಎಲ್ಲ ನಿಮ್ಮ ಉಪದೇಶ. ಆ ಉಪಕಾರ ಎಂದಿಗು ಮರೆಯಲ್ಲ. ಈಗ ನನ್ನ ಖಾತೆಯಲ್ಲಿ ಎಷ್ಟಿದೆ ಎಂದು ಮಕ್ಕಳಿಗೆ ಮೊಮ್ಮಕ್ಕಳಿಗೆ ಗೊತ್ತಾಗುವುದಿಲ್ಲ. ಅವರನ್ನು ಕರೆದುಕೊಂಡೇ ಬರುತ್ತೇನೆ. ಖಾತೆಯಲ್ಲಿ ದುಡ್ದು ಇರುವುದಿಲ್ಲ ಎನ್ನುವಾಗ ಅವರು ಕಸಿದುಕೊಳ್ಳುವುದು ಸಾಧ್ಯವಾಗುವುದಿಲ್ಲ. 

ಆಕೆ ಹೀಗೆ ಹೇಳುವಾಗ ಆಕೆಯ ಮುಖದಲ್ಲಿ ಒಂದು ಕೃತಜ್ಜತೆ ಇದ್ದರೆ, ನನ್ನ ಮುಖದಲ್ಲಿ ಒಂದು ಧನ್ಯತೆ ಇತ್ತು.  ಆಕೆಯ ಫೋಟೊ ಹಾಕುವ ಅಂತ ಇತ್ತು. ಆದರೆ ಅದೂ ಆಕೆಗೆ ತೊಂದರೆಯಾಗಬಹುದು ಎಂದು ಸುಮ್ಮನಾದೆ. 




Monday, August 15, 2022

ಕೆಸುವಿನ ದಂಟಿನ ಪಲ್ಯ

 ಕೆಸುವು ಯಾರಿಗೆ ಗೊತ್ತಿಲ್ಲ ಹೇಳಿ. ಮಲೆನಾಡು ಕರಾವಳಿ ಜಿಲ್ಲೆಗಳಲ್ಲಿ ಹೇರಳವಾಗಿ ಎಲ್ಲೆಂದರಲ್ಲಿ ಸಿಗುತ್ತದೆ. ಇದರ ಹಲವಾರು ಉಪಯೋಗಗಳು ಅಡುಗೆಯಲ್ಲಿ ಬಳಕೆಯಾಗುತ್ತವೆ. ಕೆಸುವಿನ ಎಲೆಯ ಪತ್ರೋಡೆ ಅತ್ಯಂತ ಜನಪ್ರಿಯ ತಿಂಡಿ. ಪತ್ರೋಡೆ ಸವಿಗೆ ಮನಸೋಲದವರಿಲ್ಲ. ಒಂದು ವೇಳೆ ತುರಿಸುತ್ತಿದ್ದರೂ ಲೆಕ್ಕವೇ ಇಲ್ಲ ಎಂಬಂತೆ ತಿಂದೇ ಶುದ್ದ ಅಂತ ತಿಂದು ಬಿಡುವವರು. ಇಲ್ಲಿ ಇಗ ಕೆಸುವಿನ ದಂಟಿನ ಪಲ್ಯದ ಬಗ್ಗೆ  ಹೇಳುತ್ತೇನೆ. ಕೆಸುವಿನ ದಂಟು ಕೂಡ ಹಲವಾರು ವಿಧದಲ್ಲಿ ಬಳಕೆಯಾಗುತ್ತಿದೆ. ಇದರ ಸಾಸಿವೆ ರಸಾಯನ ಸಾರು ಸಾಂಬಾರು...ಇದರ ಪಲ್ಯ ಅದೂ ಬಹಳ ಸುಲಭ ಮತ್ತು ಬೇಗನೇ ಕೇವಲ ಹತ್ತು ನಿಮಿಷದಲ್ಲಿ ತಯಾರಿಸಬಹುದು. ಮೊದಲಿಗೆ ಕೆಸುವನ್ನು ಉದ್ದಕ್ಕೆ ಕತ್ತರಿಸಬೇಕು. ಇದರ ಸಿಪ್ಪೆ ತೆಗಿಯುವ ಅಗತ್ಯವಿಲ್ಲ.  



ಹಾಗೆ ಅದನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ಉಪ್ಪು ಹುಳಿ ಮೆಣಸಿನ ಪುಡಿ ಅರಶಿನ ಪುಡಿ ಬೆಲ್ಲ ಹಾಕಿ ಬೇಯುವುದಕ್ಕೆ ಇಡಿ. ಕೇವಲ ಐದಾರು ನಿಮಿಷದಲ್ಲಿ ಇದು ಬೆಂದು ಬಿಡುತ್ತದೆ. ಹುಳಿ ಮೆಣಸು  ಸಾಕಷ್ಟು ಹಾಕಬೇಕು.  ನೀರು ಹಾಕುವ ಅವಶ್ಯಕತೆ ಇಲ್ಲ. ಐದಾರು ನಿಮಿಷಗಳಲ್ಲಿ ಬೆಂದು ಬಿಡುತ್ತದೆ. 


ಆನಂತರ ಎಣ್ಣೆ ಒಣ ಮೆಣಸು ಸಾಸಿವೆ ಹಾಕಿ ಒಗ್ಗರಣೆ ಹಾ



ಕಬೇಕು. ಕೊನೆಯಲ್ಲಿ ಒಂದೆರಡು ಬೆಳ್ಳುಳ್ಳಿ ಎಸಳು ಹಾಕಿ ಕೆಂಪಗೆ ಕಾಯಿಸಿ ಪಲ್ಯಕ್ಕೆ ಹಾಕಿದರೆ ಹತ್ತು ನಿಮಿಷದಲ್ಲಿ ರುಚಿಯಾದ ಪಲ್ಯ ಸಿದ್ದ. ಅನ್ನ ದೋಸೆ ಇಡ್ಲಿಯೊಂದಿಗೆ ಸವಿಯುವುದೇ ಮಜ. 

Wednesday, August 10, 2022

ಲಾಡು ಎಂಬ ಚಿನ್ನದುಂಡೆ…!


ಲಡ್ಡು ಅಥವಾ ಲಾಡುನಮ್ಮೂರಿನ ಅತ್ಯಂತ ಜನಪ್ರಿಯ ಸಿಹಿತಿಂಡಿ. ಸಮಾರಂಭದ ಘನತೆಯನ್ನು ಹೆಚ್ಚಿಸುವ ಈ ಸಿಹಿ ಮುದ್ದೆ ಅತ್ತ ತಿರುಪತಿ ತಿಮ್ಮಪ್ಪನವರೆಗೂ ಜನಪ್ರಿಯ. ಆದರೆ ನಮ್ಮೂರಿನ ಲಡ್ಡು ಅದು ಬಹಳ ಬಹಳ ನೆನಪಲ್ಲಿ ಉಳಿದು ಬಿಟ್ಟು ಅಚ್ಚು ಮೆಚ್ಚಿನ ಸಿಹಿತಿಂಡಿಯಾಗಿ ಇನ್ನೂ ಅಭಿಮಾನವನ್ನು ಉಳಿಸಿಕೊಂಡಿದೆ.



ನಮ್ಮಜ್ಜ ನನ್ನ ಸೋದರ ಮಾವ ಅದ್ಭುತ ಎನ್ನಿಸುವ ಬಾಣಸಿಗರು. ಅಪ್ರತಿಮ ಪ್ರತಿಭಾವಂತರು. ಇದು ಸಹಜವಾಗಿ ನಮ್ಮಲ್ಲಿ ರಕ್ತಗತವಾಗಿ ಬಂದ ಕಲೆ. ನನ್ನಲ್ಲೂ ತೀರ ಕ್ಷೀಣವಾಗಿ ಉಳಿದುಕೊಂಡು ನನ್ನ ಸಿಹಿ ಸ್ವಾದದ ಹಸಿವನ್ನು ನೀಗಿಸುತ್ತದೆ. ಅಜ್ಜ ಸೋದರ ಮಾವ ಮಾಡುತ್ತಿದ್ದ ಲಡ್ಡು ಆ ರೀತಿ ಮಾಡುವವರು ಇಂದು ಬಹಳ ಕಡಿಮೆ. ಈಗ ಲಡ್ಡು ಸಿಗುತ್ತದೆ ಅದರಲ್ಲಿ ಕಟ್ಟುವುದಕ್ಕೆ ಸುಲಭವಾಗುವಮ್ತೆ ಸಕ್ಕರೆಯ ಅಂಶವೇ  ಲೆಕ್ಕಕ್ಕಿಂತ ಹೆಚ್ಚಾಗಿ ಇರಿಸುತ್ತಾರೆ. ಇನ್ನು ಬೇಕರಿ ಅಥವಾ ಅಂಗಡಿಯಲ್ಲಿ ಲಡ್ಡು ತೂಕ ಮಾಡಿ ಕೊಡುವುದರಿಂದ ಸಕ್ಕರೆಯನ್ನು ಮತ್ತೂ ಹೆಚ್ಚಾಗಿ ಹಾಕುತ್ತಾರೆ. ಕಾರಣ ಇಷ್ಟೇ ನಲ್ವತ್ತು ರೂಪಾಯಿಯ ಸಕ್ಕರೆ ಇನ್ನೂರು ರುಪಾಯಿಗೆ ಮಾರಾಟ ಮಾಡಿ ಜನರನ್ನು ಮೂರ್ಖರನ್ನಾಗಿಸುತ್ತಾರೆ!! ಈ ಲಡ್ಡು ಒಂದೆರಡು ತಿನ್ನುವಾಗಲೇ ಮತ್ತೆ ತಿನ್ನುವ ಮನಸ್ಸಾಗುವುದಿಲ್ಲ.ಆದರೆ ನಮ್ಮಜ್ಜನ ಪಾಕ....ಅಬ್ಬ ಒಂದು ಸಲ ಐದಾರು ಲಡ್ಡು ಸವಿದಿದ್ದೇನೆ.

ನನ್ನ ಬಾಲ್ಯದ ಒಂದು ಘಟನೆ, ಅದು ಪೈವಳಿಕೆ ಕಾಯರ್ ಕಟ್ಟೆಯ ಹೈಸ್ಕೂಲು. ಬಹುಶಃ ಆ ಕಾಲದಲ್ಲಿ ಅಂದರೆ ಎಪ್ಪತ್ತು ಎಂಭತ್ತರ ದಶಕದವರೆಗೂ ಜಿಲ್ಲೆಗೆ ಖ್ಯಾತಿಯನ್ನು ಹೊಂದಿತ್ತು. ಅದಾಗ ನಾನಿನ್ನೂ ಮೊದಲ ತರಗತಿಯಲ್ಲಿ ಮತ್ತೊಂದು ಶಾಲೆಗೆ ಹೋಗುತ್ತಿದ್ದೆ. ಕಾಯರ್ ಕಟ್ಟೆ ಹೈಸ್ಕೂಲು ಕೇವಲ ಹೈಸ್ಕೂಲು ಆಗಿ ಆರನೇ ತರಗತಿಯಿಂದ ಆರಂಭವಾಗುತ್ತಿತ್ತು

. ನಮ್ಮ ಮನೆ ಕಾಯರ್ ಕಟ್ಟೆ ಹೈಸ್ಕೂಲು ಬಳಿಯಲ್ಲೇ ಇತ್ತು. ಮೈಲು ದೂರದಿಂದ ಮಕ್ಕಳು ಶಾಲೆಗೆ ಬರುತ್ತಿದ್ದರು. ದೂರದ ಪೆರ್ಮುದೆ ಧರ್ಮತ್ತಡ್ಕ ಇತ್ತ ಹತ್ತು ಮೈಲಿ ದೂರದ  ಉಪ್ಪಳದಿಂದಲೂ ಮಕ್ಕಳು ಆ ಶಾಲೆಗೆ ಬರುತ್ತಿದ್ದರು.  ಅದೊಂದು ಸುಮಾರು ದೂರದವರೆಗೂ ಇದ್ದ ಒಂದೇ  ಹೈಸ್ಕೂಲು ಎಂದಾದರೆ,  ಇನ್ನೊಂದು ಇಲ್ಲಿ ಸಿಗುತ್ತಿದ್ದ ಶಿಕ್ಷಣ. ಮುಂದೆ ನನ್ನ ಹೈಸ್ಕೂಲು ಜೀವನವೂ ಇಲ್ಲೆ ಕಳೆದುಹೋದದ್ದು ನನ್ನ ಪಾಲಿಗೆ  ಒಂದು ಸ್ಮರಣೀಯ  ಇತಿಹಾಸ.ದೂರದಿಂದ ಬರುತ್ತಿದ್ದ ಮಕ್ಕಳು ಹಲವರು ನಮ್ಮ ಮನೆಯಲ್ಲೇ ಮಧ್ಯಾಹ್ನದ ಊಟದ ಬುತ್ತಿಯನ್ನು ಇಟ್ಟು ಬಿಡುವಿನ ವೇಳೆಯಲ್ಲಿ ಊಟಕ್ಕೆ ಬರುತ್ತಿದ್ದರು.

ಅದೊಂದು ದಿನ, ಆ ಶಾಲೆಯ ಹತ್ತನೆ ತರಗತಿಯ ಶಿಕ್ಷಣವರ್ಷದ ಕೊಟ್ಟ ಕೊನೆಯ ದಿನ. ಹತ್ತನೆ ತರಗತಿಯ ಮಕ್ಕಳಿಗೆ ವಿದಾಯ ಹೇಳುವ ಸೆಂಡ್ ಅಫ್ ಮೀಟಿಂಗ್.  ಟೀಪಾರ್ಟಿ….ನನಗೆ ಮೀಟಿಂಗ್ ಅಂದರೆ ಏನೆಂದೇ ತಿಳಿಯದು. ಟೀ ಪಾರ್ಟಿ ಎಂದರೆ ಒಂದು ಹೊಸ ವಿಷಯ. ಅದು ಹೇಗಿರಬಹುದು ಎಂಬ ಕುತೂಹಲ.  ಹಾಗಾಗಿ  ಸಾಯಂಕಾಲ ನಾನು ಪುಟ್ಟ ಬಾಲಕ ಶಾಲೆಯ ಜಗಲಿಯಲ್ಲಿ ಕುಳಿತು ಅಲ್ಲಿನ ಚಟುವಟಿಕೆಗಳನ್ನು ನೋಡುತ್ತಿದ್ದೆ. ಆವಾಗ ಆ ಶಾಲೆಯ ಜಗಲಿ ಎಂದರೆ ನಮಗೆಲ್ಲಾ ಪಕ್ಕದ ಮನೆಯಂತೆ. ಅಲ್ಲಿನ ಅಧ್ಯಾಪಕ ವೃಂದ. ಅಚ್ಚುತ ಶೆಣೈ ಮುಖ್ಯೋಪಾಧ್ಯಾಯರಾದರೆ, ಶಾಂಭಟ್ಟ ಮಾಸ್ತರ್, ಮೂಡಿತ್ತಾಯ ಮಾಸ್ತರ್, ಹೀಗೆ ಘನವೆತ್ತ ಅಧ್ಯಾಪಕವೃಂದ.  ಹೆಚ್ಚಿನವರು ಅಲ್ಲೇ ಇದ್ದ  ನಮ್ಮಜ್ಜನ ಹೋಟೇಲಿಗೆ ಊಟ ತಿಂಡಿಗೆ ಉಪಾಹಾರಕ್ಕೆ ಬರುತ್ತಿದ್ದರು.

            ಆಗ ಸಾಯಂಕಾಲ. ಟಿಪಾರ್ಟಿ ಶಾಲೆಯ ಒಳಗೆ ನಡೆಯುತ್ತಿದ್ದರೆ, ಹೊರಗೆ ಶಾಲೆಯ ಆವರಣದಲ್ಲಿ ಫೋಟೋ ತೆಗೆಯುವ ಸಿದ್ಧತೆ ನಡೆಯುತ್ತಿತ್ತು. ಎಲ್ಲಿಂದಲೋ ಬಂದ ಸ್ಟುಡಿಯೋದವರು ಒಂದು ಸಲ ಆಕಾಶ ನೋಡಿ ಇನ್ನೊಂದು ಕಡೆ ಕ್ಯಾಮರ ಇಟ್ಟು ಸಿದ್ದತೆಯಲ್ಲಿ ತೊಡಗಿದ್ದರು. ಶಾಲೆಯ ಒಳಗೆ ಸಡಗರದಲ್ಲಿ ವಿದಾಯ ಸಭೆ ನಡೆಯುತ್ತಿತ್ತು. ಅಂತೂ ಅದೊಂದು ವಿಚಿತ್ರ ಸನ್ನಿವೇಶವಾಗಿ ಅದು ಜೀವನದ ಮೊದಲ ಅನುಭವವಾಗಿತ್ತು. ಸಭೆಯ ಕೊನೆಯಲ್ಲಿ ಟೀ ಪಾರ್ಟಿ ಆರಂಭವಾಗಿಯೇ ಬಿಟ್ಟಿತು. ಒಳಗೆ ತಿಂಡಿ ಪಾನಿಯ ಗಡಿಬಿಡಿಯಲ್ಲಿ ಕೊಂಡು ಹೋಗುವುದು ಕಂಡು ಬರುತ್ತಿತ್ತು. ನಾನಿನ್ನೂ ದೂರದ ಜಗಲಿಯಲ್ಲಿ ಅದನ್ನೇಲ್ಲಾ ನೋಡುತ್ತಾ ನಿಂತಿದ್ದೆ. ಟೀ ಪಾರ್ಟಿ ಅಂದರೆ ಇಷ್ಟೇ….ಅದರಲ್ಲೂ ಲಾಡಿನ ಡಬ್ಬ ಹಿಡಿದು ಸೋಂಪಣ್ಣ ಅತ್ತಿತ್ತ ಓಡಾಡುತ್ತಿದ್ದರು. ಸೋಂಪಣ್ಣ ಆ ಶಾಲೆಯ ಫ್ಯೂನ್ ವಾಚ್ ಮನ್ ಹೀಗೆ ಎಲ್ಲವೂ ಆಗಿದ್ದ ವೃದ್ಧ. ಸದಾ ತಲೆಯಲ್ಲಿ ಒಂದು ಬಿಳಿ ಟೊಪ್ಪಿ ಇಟ್ಟು ಕೊಂಡು  ಘಂಟೆ ಬಡಿಯುವುದು ಶಾಲೆಯ ಮುಖ್ಯೋಪಾಧ್ಯಾಯರಿಗೆ ಚಹ ಪಾನೀಯ ತರುವುದು, ಅಂಚೆ ಕಛೇರಿಗೆ ಹೋಗಿ ಬರುವುದು ಎಲ್ಲ ಮಾಡುತ್ತಿದ್ದರು. ಅವರು ಚಹ ಕೊಂಡೊಯ್ಯುತ್ತಿದ್ದುದು ನಮ್ಮ ಹೋಟೇಲಿನಿಂದಲೇ, ಒಂದು ಸ್ಟೀಲ್ ಪಾತ್ರೆ ಅದಕ್ಕಾಗಿ ಹಿಡಿದುಕೊಂಡು ಬರುತ್ತಿದ್ದರು. ಆ ಶಾಲೆಗೆ ಹೋಗದೇ ಇದ್ದರೂ ಸೋಂಪಣ್ಣ ನಮಗೆ ಬಹಳ ಪರಿಚಯದ ವ್ಯಕ್ತಿ ಎಂದು ಬೇರೆ ಹೇಳಬೇಕಿಲ್ಲ.



             ಎಲ್ಲರೂ ತಿಂಡಿ ತೀರ್ಥ ಸವಿಯುತ್ತಿದ್ದರೆ ಇನ್ನು ಅಲ್ಲಿ ನಿಲ್ಲುವುದಕ್ಕೆ ಮನಸ್ಸಾಗಲಿಲ್ಲ. ಹಾಗೆ ಜಗಲಿಯಲ್ಲೆ ಮುಂದಕ್ಕೆ ಬಂದು ಹೆಬ್ಬಾಗಿಲ ಹೊರಗೆ ಬರುತ್ತೇನೆ. ಇನ್ನೇನು ಹೊರ ಬರಬೇಕಾದರೆ ಸೋಂಪಣ್ಣ ಚಪ್ಪಾಳೆ ತಟ್ಟಿ ಕರೆಯುತ್ತಾರೆ. ಕೈಯಲ್ಲಿ ಬಾಳೆ ಎಲೆ ತುಂಡು ಇದೆ. ಅದರಲ್ಲಿ ಲಡ್ಡು ಅವಲಕ್ಕಿ ತಂದು ನನ್ನ ಕೈಗೆ ಇಡುತ್ತಾರೆ. ಕಣ್ಣು ಅರಳುತ್ತದೆ. ಚಿನ್ನದ ಬಣ್ಣದ ಲಡ್ಡು.ಬಾಯಲ್ಲಿ ನೀರು ತೊಟ್ಟಿಕ್ಕುತ್ತದೆ. ಅದುವರೆಗೆ ಹೋಟೇಲಿನಲ್ಲಿ ಅಂಗಡಿಯಲ್ಲಿ ಬರಣಿಯಲ್ಲಿ ಸುಂದರಾವಾಗಿ ಇಟ್ಟ ಲಡ್ಡನ್ನಷ್ಟೇ ಕಂಡಿರುವುದು. ಕೊಂಡುಕೊಳ್ಳುವುದಕ್ಕೆ ಹಣವೆಲ್ಲಿದೆ? ಒಂದು ವೇಳೆ ಮನೆಯಲ್ಲಿ ತಂದರು ಕೆಲವಷ್ಟು ಕಾಳುಗಳನ್ನಷ್ಟೇ ಕೈಯಲ್ಲಿಡುತ್ತಿದ್ದರು. ಇದೀಗ ಇಡೀ ಲಡ್ಡು ನನ್ನದೆ. ಅಲ್ಲೆ ಬಾಗಿಲ ಬಳಿಯ ಚಿಟ್ಟೆಯ ಮೇಲೆ ಕುಳಿತು ಲಾಡನ್ನು ಸವಿಯುತ್ತಿದ್ದರೆ ಕನಸೇ ಇದು? ಆಗಿನ ಭಾವನೆಗಳು ಈಗ ಅಳೆಯುವುದಕ್ಕೆ ಸಾಧ್ಯವಿಲ್ಲ. ಆದರೆ ಜೀವನದಲ್ಲಿ ಮೊದಲು ಒಂದು ಲಾಡು ಸವಿದ ಅನುಭವ ಮರೆಯುವುದಕ್ಕಿಲ್ಲ. ಆನಂತರ ನಾನು ಹತ್ತನೆಯ ತರಗತಿ ಮುಗಿಸಿ ಹೈಸ್ಕೂಲು ಅಧ್ಯಯನ ಅದೇ ನನ್ನ ಮೆಚ್ಚಿನ ಕಾಯರ್ ಕಟ್ಟೆ ಹೈಸ್ಕೂಲ್ ನಲ್ಲಿ ಮುಗಿಸಿ ಭಾವನಾತ್ಮಕವವಾಗಿ ವಿದಾಯ ಹೇಳುವಾಗ ಈ ಸೋಂಪಣ್ಣನ ನೆನಪಾಗಿತ್ತು. ಅದಿನವೂ ಲಡ್ಡು ಸವಿದಾಗ ಅದೇ ಸವಿ ಸಿಗಬಹುದೇ ಎಂದು ಮನಸ್ಸು ತಡಕಾಡಿತ್ತು.  ಆನಂತರ ಅದೆಷ್ಟೋ ಲಡ್ಡು ಸವಿದಿದ್ದೇನೆ. ಈಗಲೂ ಸ್ವತಃ ಮಾಡಿ ಸವಿಯುತ್ತೇನೆ. ಆದರೆ ಅಂದಿನ ನೆನಪು ಭಾವನಾತ್ಮಕವಾಗಿ ಅಂಟಿಕೊಂಡುಬಿಟ್ಟಿದೆ. ಅದನ್ನು ಕೈಗೆ ತಂದಿತ್ತ ಸೋಂಪಣ್ಣ ಎಂಬ ಸಜ್ಜನಿಕೆಯ ವ್ಯಕ್ತಿಯೂ ಅದೇ ನೆನಪನ್ನು ಬಿತ್ತನೆ ಮಾಡಿ ಹೋಗಿದ್ದಾರೆ. ಸೋಂಪಣ್ಣ ಆನಂತರದ ನಮ್ಮ ಮನೆ ಲಾಲ್ ಭಾಗ್ ನ ಪಕ್ಕದಲ್ಲೇ ಮನೆ ಮಾಡಿದ್ದರು. ಆದರೆ ಅವರು ನಿವೃತ್ತಿ ಹೊಂದಿದ ಮೇಲೆ ಊರು ಬಿಟ್ಟರೂ ಆ ಮನೆ ಹಾಗೇ ಉಳಿಯಿತು. ಈಗ ಅದರ ಯಜಮಾನ ಬೇರೆಯಾದರೂ ಆ ಮನೆಯ ಅಲ್ಪಸ್ವಲ್ಪ ಅವಶೇಷ ಉಳಿದಿದೆ. ಮತ್ತೆ ಆ ಸೋಂಪಣ್ಣ ಮತ್ತು ಆ ಲಡ್ಡು ಎಂಬ ಚಿನ್ನದುಂಡೆ ನೆನಪಾಗುತ್ತಿದೆ.

 

 

 

 

 

 

 

 

 

 

 

 

 

.

 

Thursday, August 4, 2022

ಹುಳಿ ಮರ ಮತ್ತು.....ಪದವಿನ ಮಾರ್ಗ


 

ಏಳು ವರ್ಷದ ಬಾಲಕನಾಗಿದ್ದಾಗ ಒಂದು ಘಟನೆ ಈಗಲೂ ನೆನಪಾಗುತ್ತದೆ. ಏಳು ವರ್ಷ ವಯಸ್ಸಿನ ನೆನಪಿನಲ್ಲಿರುವುದಕ್ಕೆ ಕಾರಣ ಆಗ ನಾನಿನ್ನೂ ಎರಡನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ನಮ್ಮ ಮನೆ ಪೈವಳಿಕೆಯ  ಕಾಯರ್ ಕಟ್ಟೆಯಲ್ಲಿತ್ತು. ಆಗಲೇ ನಾನು ಏಕಾಂಗಿಯಾಗಿ ಅಕ್ಕ ಪಕ್ಕದದಲ್ಲೆ ಇದ್ದ ಬಾಯಾರು, ಉಪ್ಪಳಕ್ಕೆ ಬಸ್ಸಿನಲ್ಲಿ ಹೋಗುತ್ತಿದ್ದೆ. ಬಸ್ಸಿನಲ್ಲಿ ಹೆಚ್ಚಿನ ಕಂಡಕ್ಟರ್ ಡ್ರೈವರ್ ಗಳು ನಮಗೆಲ್ಲ ಪರಿಚಯ ಇದ್ದುದರಿಂದ ಇದೊಂದು ಸಹಜ ಕೆಲಸವಾಗಿತ್ತು. ಇಂತಹ ಒಂದು ದಿನ ನಾನು ಸಾಯಂಕಾಲ ಕಾಯರ್ ಕಟ್ಟೆಯಿಂದ ನಾಲ್ಕು ಕಿಲೋ ಮೀಟರ್ ದೂರದ ಬಾಯರು ಪದವಿಗೆ ಹೋಗಬೇಕಿತ್ತು. ಆಗ ಎರಡು ಮೂರು ಶಂಕರ್ ವಿಟ್ಠಲ್ ಬಸ್ಸು ಬಿಟ್ಟರೆ ಬೇರೆ ಯಾವ ವಾಹನ ಸೌಕರ್ಯವೂ ಇಲ್ಲ. ಎಲ್ಲೋ ಕೆಲವೊಮ್ಮೆ ಕಪ್ಪು ಬಿಳಿ ಬಣ್ಣದ ಅಂಬಾಸಿಡರ್ ಕಾರು ಓಡಾಡುವುದು ಬಿಟ್ಟರೆ ಸಂಚರಿಸುವುದಕ್ಕೆ ಶಂಕರ್ ವಿಟ್ಠಲ್ ಬಸ್ಸೇ ಗತಿ. ಹಲವು ವ್ಯಾಪಾರದವರು ಎತ್ತಿನಗಾಡಿ ಉಪಯೋಗಿಸುತ್ತಿದ್ದರು. ಇನ್ನು ಶಂಕರ್ ವಿಟ್ಠಲ್ ಬಸ್ಸು ಬೆಳಗ್ಗೆ ಒಂದೆರಡು ಓಡಿದರೆ ನಂತರ ಮಧ್ಯಾಹ್ನ ನಂತರ ಸಾಯಂಕಾಲ ಬಿಟ್ಟರೆ ಬಸ್ಸುಗಳು ಇರುತ್ತಿರಲಿಲ್ಲ. ಆಗ ಆರುಗಂಟೆಗೆ ಪುತ್ತೂರಿನಿಂದ ಬರುವ ಶೆಟ್ರ ಬಸ್ಸು ಉಪ್ಪಳಕ್ಕೆ ಹೋಗುವ ಕೊನೆಯ ಬಸ್ಸು. ನಾನು ಆದಿನ ಬಾಯಾರು ಪದವಿನಲ್ಲಿ ಅಮ್ಮ ಚೀಲದಲ್ಲಿ ತುಂಬಿಸಿ ಕೊಟ್ಟ ಚಕ್ಕುಲಿಯನ್ನು ಬಾಯರಿನ   ಹೆಂಡದಂಗಡಿಗೆ  ಕೊಟ್ಟು ದುಡ್ಡು ತರಬೇಕಿತ್ತು. ಆದಿನ ಬಾಯಾರು ಪದಿವಿನಲ್ಲಿ ಇಳಿಯಬೇಕಾದರೆ ಶೆಟ್ಟರ ಬಸ್ಸು ಹೋಗಿಯಾಗಿತ್ತು. ಇನ್ನು ನಾಲ್ಕು ಕಿಲೋಮಿಟರ್ ನಡೆಯಬೇಕು. ನಾನು ಪುಟ್ಟ ಬಾಲಕ. ನಿಜಕ್ಕೂ ನನಗೆ ಭಯ ಆಗಿಬಿಟ್ಟಿತು. ಚಕ್ಕುಲಿ ಕೊಟ್ಟು ಖಾಲಿ ಚೀಲ ಹೆಗಲಿಗೆ ಹಾಕಿ ಅಂಗಡಿಯವರು ಕೊಟ್ಟ ಹಣ ಕೈಯಲ್ಲಿ ಹಿಡಿದು ನಡೆಯುವುದಕ್ಕೆ ಆರಂಭಿಸಿದೆ. ಅದಾಗಲೇ ನಸು ಗತ್ತಲೆ ಆವರಿಸುವುದಕ್ಕೆ ತೊಡಗಿತ್ತು. ಆಗ ಪದವಿನಿಂದ ಕಾಯರ್ ಕಟ್ಟೆ ತನಕವೂ ಒಂದು ಮನೆಯೂ ಇಲ್ಲ ಬರೀ ಬಯಲು. ಜನಸಂಚಾರವೂ ಇಲ್ಲ. ಈಗ ಅಲ್ಲಿ ಅಡಿದೂರಕ್ಕೆ ಒಂದು ಮನೆ ಇದೆ. ಬಾಯಾರು ಪದವಿನಿಂದ ಒಂದು ತಿರುವು ಕಳೆದು ರಸ್ತೆ ನೇರವಾಗಿ ಸಾಗುತ್ತದೆ. ಬೀಡಿ ಮಹಮ್ಮದ್ ಬ್ಯಾರಿಯವರ ಕಟ್ಟಡ ಆನಂತರವಾಗಿತ್ತು. ಅಲ್ಲೆ ಬರೀ ಮುಳಿ ಹುಲ್ಲಿನ ಗುಡ್ಡೆ. ತಿರುವಿನ ತುದಿಗೆ ಒಂದು ಹುಣಸೇ ಮರದ ಇತ್ತು. ಅದೊಂದೇ ಮರ ದೊಡ್ಡದಾಗಿ ಬೆಳೆದಿತ್ತು. ಆ ಮರ ಭಯಾನಕವಾಗಿತ್ತು. ಆ ಮರದ ಬಗ್ಗೆ ಭಯ ಹುಟ್ಟುವುದಕ್ಕೆ ಒಂದು ಕಾರಣ ಇದೆ. 

 

ಹುಣಸೇ ಹಣ್ಣಿನ ಮರ, ನಮ್ಮೂರಲ್ಲಿ ಹುಳಿ ಮರ ಅಂತಲೇ ಹೇಳುವುದು. ಅಲ್ಲಿ ದೆವ್ವ ಇದೆ ಅಂತ ಹೇಳುತ್ತಿರುವುದು ಅದು ಹೇಗೋ ನನ್ನ ಕಿವಿಗೆ ಬಿದ್ದಿತ್ತು. ಮಾತ್ರವಲ್ಲ ಹಿರಿಯರು ಹೇಳುವ ಕಥೆಗಳಲ್ಲಿ ಹುಳಿ ಮರ ಎಂದರೆ ಅಲ್ಲಿ ದೆವ್ವಗಳು ಅಲ್ಲಿ ಇದ್ದೇ ಇರುತ್ತವೆ ಎಂಬ ಕಲ್ಪನೆ. ಬಾಯಾರು ಪದವಿನಿಂದ ನಡೆದುಕೊಂಡೆ ಬಂದೇ. ದೂರದಲ್ಲಿ ಹುಳಿ ಮರ ಕಂಡಿತು. ಒಂದೇ ಒಂದು ಜನ ಸಂಚಾರವಿಲ್ಲ. ಸುತ್ತಮುತ್ತ ಮನೆ ಇಲ್ಲ. ಯಾವುದೇ ವಾಹನ ಸಂಚಾರವೂ ಇಲ್ಲ. ಭಯ ಮತ್ತಷ್ಟು ಹೆಚ್ಚಾಯಿತು. ಇನ್ನೂ ಮುಸ್ಸಂಜೆಯ ನಸು ಬೆಳಕು ಇತ್ತು. ಹುಳಿ ಮರ ಹತ್ತಿರ ಬರುತ್ತಿದ್ದಂತೆ ಅದನ್ನು ಹೇಗೆ ದಾಟಿ ಹೋಗುವುದು ಎಂಬ ಆತಂಕ ಭಯದಲ್ಲಿ ಜೋರಾಗಿ ಅಳು ಬಂದು ಬಿಟ್ಟಿತು. ಜೋರಾಗಿ ಅತ್ತುಬಿಟ್ಟಿ. ಕೇಳುವುದಕ್ಕೆ ಹತ್ತಿರದಲ್ಲಿ ಯಾರೂ ಇಲ್ಲ. ಹಾಗೇ ಅಳುತ್ತಾ ಮರ ಹತ್ತಿರ ಬರುತ್ತಿದ್ದಂತೆ ಓಡತೊಡಗಿದೆ. ಅಲ್ಲಿಂದ ದಾಟಿ ಮುಂದೆ ಬರಬೇಕಾದರೆ ರಸ್ತೆ ಒಂದು ಸಣ್ಣ ತಿರುವು ತೆಗೆದುಕೊಳ್ಳುತ್ತದೆ. ಅಲ್ಲೇ ಕೆಳಗೆ ಇಳಿದು ಹೋದರೆ ಕುರುವೇರಿ. ನಾನು ಅಳುತ್ತಾ ಬರಬೇಕಾದರೆ ನಸು ಕತ್ತಲೆಯಲ್ಲಿ ಯಾರೋ ಬರುವ ಹಾಗೆ ಭಾಸವಾಯಿತು. ನಾನು ಹಾಗೆ ನಿಂತು ಬಿಟ್ಟೆ.

 

ಆ ವ್ಯಕ್ತಿ ಹತ್ತಿರ ಬಂದಾಗ ಗೊತ್ತಾಯಿತು. ಅದೇ ಪರಿಚಯದ ಮುಖ. ಅದು ಬಸ್ ಏಜಂಟ್ ಗೋವಿಂದಣ್ಣ. ಆಗ ಶಂಕರ್ ವಿಟ್ಠಲ್ ಬಸ್ ಗೆ ಬಾಯಾರು ಪದವಿನಲ್ಲಿ ಟಿಕೆಟ್ ಕೊಡುವುದಕ್ಕೆ ಒಬ್ಬರು ಏಜಂಟ್ ಇದ್ದರು. ಅವರೇ ಗೋವಿಂದಣ್ಣ. ಕೊನೆಯಲ್ಲಿ ಹೋದ ಶೆಟ್ರ ಬಸ್ಸಿನಲ್ಲಿ ಟಿಕೆಟ್ ಕೊಟ್ಟು ಅದೇಲ್ಲೋ ಇಳಿದು ಅವರು ವಾಪಾಸು ಬಾಯಾರು ಪದವಿಗೆ ನಡೆದುಕೊಂಡು ಬರುತ್ತಿದ್ದರು. ಅವರಿಗೆ ಅದು ರೂಢಿ. ಅವರು ಬಹಳ ಸಾಧು ಮನುಷ್ಯ. ನನ್ನ ಪರಿಚಯವಿದೆ. ದಿನವೂ ಕಾಣುತ್ತೇನಲ್ಲ? ಹತ್ತಿರ ಬಂದವರೇ ಏನು ಅಂತ ಕೇಳಿದರು.?

 

ನಾನಿನ್ನೂ ನಡುಗುತಿದ್ದೆ. ನನ್ನ ಕಣ್ಣಿಂದ ನೀರು ಹರಿಯುವುದು ಅವರಿಗೆ ಕಂಡಿತು. ಹತ್ತಿರ ಬಂದವರು ಕೈ ಹಿಡಿದು “ಏನಾಯಿತು?”  ಅಂತ ಕೇಳಿದರು.

 

            ನಾನು ಶೆಟ್ರ ಬಸ್ಸು ತಪ್ಪಿ ಹೋದದ್ದು ಹೇಳಿದೆ. ನಾನು ಹೆದರಿಕೊಂಡದ್ದು ಅವರಿಗೆ ಗೊತ್ತಾಯಿತು. ಅವರು ಬಾ ಹೋಗೊಣ ಅಂತ ನನ್ನ ಕೈ ಹಿಡಿದು ನನ್ನ ಜತೆ ಬಂದರು. ಅಲ್ಲಿಂದ ಕಾಯರ್ ಕಟ್ಟೆಗೆ ಇನ್ನೂ ದೂರವಿತ್ತು. ಕೆಲವು ತಿರುವು ಕಳೆದರೆ ದೇವಪ್ಪನಾಯಕರ ಮನೆ ಸಿಗುತ್ತದೆ. ಅಲ್ಲೊಂದು ದೊಡ್ಡ ತಿರುವು. ಅದು ಕಳೆದರೆ ಕಾಯರ್ ಕಟ್ಟೇ ಮಸೀದಿ ಮತ್ತೆ ಕೆಲವು ಅಂಗಡಿ ಸಿಗುತ್ತದೆ. ಗೋವಿಂದಣ್ಣ ನನ್ನ ಜತೆ ಅಲ್ಲಿ ತನಕ ಬಂದು ಇನ್ನು ಹೋಗು ಹೆದರ ಬೇಡ ಅಂತ ಹೇಳಿ ವಾಪಾಸು ಬಾಯಾರು ಪದವಿನ ಕಡೆಗೆ ನಡೆದುಕೊಂಡು ಹೋದರು. ಅವರಿಗೆ ನಡೆಯುವುದಕ್ಕೆ ಇನ್ನೂ ದೂರವಿತ್ತು. ಅಲ್ಲಿಂದ ನಮ್ಮ ಮನೆ ಹತ್ತಿರವೇ ಇತ್ತು. ಅಲ್ಲಲ್ಲಿ ಅಂಗಡಿ ಜನಗಳು ಇರುವುದರಿಂದ ನನಗೆ ಮತ್ತೆ ಭಯವಾಗಲಿಲ್ಲ. ನಾನು ಮನೆಗೆ ಬಂದೆ. ಅಮ್ಮ ಮನೆ ಜಗಲಿಯಲ್ಲಿ ನನ್ನ ದಾರಿ ನೋಡುತ್ತಿದ್ದರು. ಪುಟ್ಟ ಬಾಲಕನನ್ನು ಆ ಹೊತ್ತಿನಲ್ಲಿ ಕಳುಹಿಸಿದ ಆತಂಕ ಅವರಲ್ಲಿ ಇತ್ತು. ಆದರೇನು ಮಾಡುವುದು? ಬಡತನ ಎಲ್ಲವನ್ನುಸಹಿಸಿಕೊಳ್ಳುವ ಔಷಧವಾಗಿ ಕೆಲಸ ಮಾಡುತ್ತದೆ.

 

             ಈಗಲೂ ಬಾಯಾರು ಪದವಿಗೆ ಹೋಗುವಾಗ ಆ ಸ್ಥಳ ಸಿಗುತ್ತದೆ. ಈ ಘಟನೆ ನೆನಪಾಗುತ್ತದೆ. ಆನಂತರ ಆ ಜಾಗದಲ್ಲಿ ಅದೆಷ್ಟು ಸಲ ಸಂಚರಿಸಿದ್ದೇನೋ ನೆನಪಿಲ್ಲ. ಆದರೆ ಈ ಘಟನೆ ಮಾತ್ರ ಇನ್ನೂ ನೆನಪಿದೆ. ಆ ಗೋವಿಂದಣ್ಣನನ್ನು ಈಗಲೂ ನೆನಪಿಸಿಕೊಳ್ಳುತ್ತೇನೆ. ಈಗ ಅಂತಹ ವ್ಯಕ್ತಿಗಳು ಸಿಗಬಹುದೇ? ನನಗಾಗಿ ಬಹುದೂರ ನನ್ನ ಜತೆ ನಡೆದುಕೊಂಡು ಬಂದು ನನ್ನನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಿ ಹೋದ ಅವರ ಹೃದಯವಂತಿಕೆ ಎಂದಿಗೂ ಮರೆಯಲಾರೆ.