Wednesday, August 10, 2022

ಲಾಡು ಎಂಬ ಚಿನ್ನದುಂಡೆ…!


ಲಡ್ಡು ಅಥವಾ ಲಾಡುನಮ್ಮೂರಿನ ಅತ್ಯಂತ ಜನಪ್ರಿಯ ಸಿಹಿತಿಂಡಿ. ಸಮಾರಂಭದ ಘನತೆಯನ್ನು ಹೆಚ್ಚಿಸುವ ಈ ಸಿಹಿ ಮುದ್ದೆ ಅತ್ತ ತಿರುಪತಿ ತಿಮ್ಮಪ್ಪನವರೆಗೂ ಜನಪ್ರಿಯ. ಆದರೆ ನಮ್ಮೂರಿನ ಲಡ್ಡು ಅದು ಬಹಳ ಬಹಳ ನೆನಪಲ್ಲಿ ಉಳಿದು ಬಿಟ್ಟು ಅಚ್ಚು ಮೆಚ್ಚಿನ ಸಿಹಿತಿಂಡಿಯಾಗಿ ಇನ್ನೂ ಅಭಿಮಾನವನ್ನು ಉಳಿಸಿಕೊಂಡಿದೆ.



ನಮ್ಮಜ್ಜ ನನ್ನ ಸೋದರ ಮಾವ ಅದ್ಭುತ ಎನ್ನಿಸುವ ಬಾಣಸಿಗರು. ಅಪ್ರತಿಮ ಪ್ರತಿಭಾವಂತರು. ಇದು ಸಹಜವಾಗಿ ನಮ್ಮಲ್ಲಿ ರಕ್ತಗತವಾಗಿ ಬಂದ ಕಲೆ. ನನ್ನಲ್ಲೂ ತೀರ ಕ್ಷೀಣವಾಗಿ ಉಳಿದುಕೊಂಡು ನನ್ನ ಸಿಹಿ ಸ್ವಾದದ ಹಸಿವನ್ನು ನೀಗಿಸುತ್ತದೆ. ಅಜ್ಜ ಸೋದರ ಮಾವ ಮಾಡುತ್ತಿದ್ದ ಲಡ್ಡು ಆ ರೀತಿ ಮಾಡುವವರು ಇಂದು ಬಹಳ ಕಡಿಮೆ. ಈಗ ಲಡ್ಡು ಸಿಗುತ್ತದೆ ಅದರಲ್ಲಿ ಕಟ್ಟುವುದಕ್ಕೆ ಸುಲಭವಾಗುವಮ್ತೆ ಸಕ್ಕರೆಯ ಅಂಶವೇ  ಲೆಕ್ಕಕ್ಕಿಂತ ಹೆಚ್ಚಾಗಿ ಇರಿಸುತ್ತಾರೆ. ಇನ್ನು ಬೇಕರಿ ಅಥವಾ ಅಂಗಡಿಯಲ್ಲಿ ಲಡ್ಡು ತೂಕ ಮಾಡಿ ಕೊಡುವುದರಿಂದ ಸಕ್ಕರೆಯನ್ನು ಮತ್ತೂ ಹೆಚ್ಚಾಗಿ ಹಾಕುತ್ತಾರೆ. ಕಾರಣ ಇಷ್ಟೇ ನಲ್ವತ್ತು ರೂಪಾಯಿಯ ಸಕ್ಕರೆ ಇನ್ನೂರು ರುಪಾಯಿಗೆ ಮಾರಾಟ ಮಾಡಿ ಜನರನ್ನು ಮೂರ್ಖರನ್ನಾಗಿಸುತ್ತಾರೆ!! ಈ ಲಡ್ಡು ಒಂದೆರಡು ತಿನ್ನುವಾಗಲೇ ಮತ್ತೆ ತಿನ್ನುವ ಮನಸ್ಸಾಗುವುದಿಲ್ಲ.ಆದರೆ ನಮ್ಮಜ್ಜನ ಪಾಕ....ಅಬ್ಬ ಒಂದು ಸಲ ಐದಾರು ಲಡ್ಡು ಸವಿದಿದ್ದೇನೆ.

ನನ್ನ ಬಾಲ್ಯದ ಒಂದು ಘಟನೆ, ಅದು ಪೈವಳಿಕೆ ಕಾಯರ್ ಕಟ್ಟೆಯ ಹೈಸ್ಕೂಲು. ಬಹುಶಃ ಆ ಕಾಲದಲ್ಲಿ ಅಂದರೆ ಎಪ್ಪತ್ತು ಎಂಭತ್ತರ ದಶಕದವರೆಗೂ ಜಿಲ್ಲೆಗೆ ಖ್ಯಾತಿಯನ್ನು ಹೊಂದಿತ್ತು. ಅದಾಗ ನಾನಿನ್ನೂ ಮೊದಲ ತರಗತಿಯಲ್ಲಿ ಮತ್ತೊಂದು ಶಾಲೆಗೆ ಹೋಗುತ್ತಿದ್ದೆ. ಕಾಯರ್ ಕಟ್ಟೆ ಹೈಸ್ಕೂಲು ಕೇವಲ ಹೈಸ್ಕೂಲು ಆಗಿ ಆರನೇ ತರಗತಿಯಿಂದ ಆರಂಭವಾಗುತ್ತಿತ್ತು

. ನಮ್ಮ ಮನೆ ಕಾಯರ್ ಕಟ್ಟೆ ಹೈಸ್ಕೂಲು ಬಳಿಯಲ್ಲೇ ಇತ್ತು. ಮೈಲು ದೂರದಿಂದ ಮಕ್ಕಳು ಶಾಲೆಗೆ ಬರುತ್ತಿದ್ದರು. ದೂರದ ಪೆರ್ಮುದೆ ಧರ್ಮತ್ತಡ್ಕ ಇತ್ತ ಹತ್ತು ಮೈಲಿ ದೂರದ  ಉಪ್ಪಳದಿಂದಲೂ ಮಕ್ಕಳು ಆ ಶಾಲೆಗೆ ಬರುತ್ತಿದ್ದರು.  ಅದೊಂದು ಸುಮಾರು ದೂರದವರೆಗೂ ಇದ್ದ ಒಂದೇ  ಹೈಸ್ಕೂಲು ಎಂದಾದರೆ,  ಇನ್ನೊಂದು ಇಲ್ಲಿ ಸಿಗುತ್ತಿದ್ದ ಶಿಕ್ಷಣ. ಮುಂದೆ ನನ್ನ ಹೈಸ್ಕೂಲು ಜೀವನವೂ ಇಲ್ಲೆ ಕಳೆದುಹೋದದ್ದು ನನ್ನ ಪಾಲಿಗೆ  ಒಂದು ಸ್ಮರಣೀಯ  ಇತಿಹಾಸ.ದೂರದಿಂದ ಬರುತ್ತಿದ್ದ ಮಕ್ಕಳು ಹಲವರು ನಮ್ಮ ಮನೆಯಲ್ಲೇ ಮಧ್ಯಾಹ್ನದ ಊಟದ ಬುತ್ತಿಯನ್ನು ಇಟ್ಟು ಬಿಡುವಿನ ವೇಳೆಯಲ್ಲಿ ಊಟಕ್ಕೆ ಬರುತ್ತಿದ್ದರು.

ಅದೊಂದು ದಿನ, ಆ ಶಾಲೆಯ ಹತ್ತನೆ ತರಗತಿಯ ಶಿಕ್ಷಣವರ್ಷದ ಕೊಟ್ಟ ಕೊನೆಯ ದಿನ. ಹತ್ತನೆ ತರಗತಿಯ ಮಕ್ಕಳಿಗೆ ವಿದಾಯ ಹೇಳುವ ಸೆಂಡ್ ಅಫ್ ಮೀಟಿಂಗ್.  ಟೀಪಾರ್ಟಿ….ನನಗೆ ಮೀಟಿಂಗ್ ಅಂದರೆ ಏನೆಂದೇ ತಿಳಿಯದು. ಟೀ ಪಾರ್ಟಿ ಎಂದರೆ ಒಂದು ಹೊಸ ವಿಷಯ. ಅದು ಹೇಗಿರಬಹುದು ಎಂಬ ಕುತೂಹಲ.  ಹಾಗಾಗಿ  ಸಾಯಂಕಾಲ ನಾನು ಪುಟ್ಟ ಬಾಲಕ ಶಾಲೆಯ ಜಗಲಿಯಲ್ಲಿ ಕುಳಿತು ಅಲ್ಲಿನ ಚಟುವಟಿಕೆಗಳನ್ನು ನೋಡುತ್ತಿದ್ದೆ. ಆವಾಗ ಆ ಶಾಲೆಯ ಜಗಲಿ ಎಂದರೆ ನಮಗೆಲ್ಲಾ ಪಕ್ಕದ ಮನೆಯಂತೆ. ಅಲ್ಲಿನ ಅಧ್ಯಾಪಕ ವೃಂದ. ಅಚ್ಚುತ ಶೆಣೈ ಮುಖ್ಯೋಪಾಧ್ಯಾಯರಾದರೆ, ಶಾಂಭಟ್ಟ ಮಾಸ್ತರ್, ಮೂಡಿತ್ತಾಯ ಮಾಸ್ತರ್, ಹೀಗೆ ಘನವೆತ್ತ ಅಧ್ಯಾಪಕವೃಂದ.  ಹೆಚ್ಚಿನವರು ಅಲ್ಲೇ ಇದ್ದ  ನಮ್ಮಜ್ಜನ ಹೋಟೇಲಿಗೆ ಊಟ ತಿಂಡಿಗೆ ಉಪಾಹಾರಕ್ಕೆ ಬರುತ್ತಿದ್ದರು.

            ಆಗ ಸಾಯಂಕಾಲ. ಟಿಪಾರ್ಟಿ ಶಾಲೆಯ ಒಳಗೆ ನಡೆಯುತ್ತಿದ್ದರೆ, ಹೊರಗೆ ಶಾಲೆಯ ಆವರಣದಲ್ಲಿ ಫೋಟೋ ತೆಗೆಯುವ ಸಿದ್ಧತೆ ನಡೆಯುತ್ತಿತ್ತು. ಎಲ್ಲಿಂದಲೋ ಬಂದ ಸ್ಟುಡಿಯೋದವರು ಒಂದು ಸಲ ಆಕಾಶ ನೋಡಿ ಇನ್ನೊಂದು ಕಡೆ ಕ್ಯಾಮರ ಇಟ್ಟು ಸಿದ್ದತೆಯಲ್ಲಿ ತೊಡಗಿದ್ದರು. ಶಾಲೆಯ ಒಳಗೆ ಸಡಗರದಲ್ಲಿ ವಿದಾಯ ಸಭೆ ನಡೆಯುತ್ತಿತ್ತು. ಅಂತೂ ಅದೊಂದು ವಿಚಿತ್ರ ಸನ್ನಿವೇಶವಾಗಿ ಅದು ಜೀವನದ ಮೊದಲ ಅನುಭವವಾಗಿತ್ತು. ಸಭೆಯ ಕೊನೆಯಲ್ಲಿ ಟೀ ಪಾರ್ಟಿ ಆರಂಭವಾಗಿಯೇ ಬಿಟ್ಟಿತು. ಒಳಗೆ ತಿಂಡಿ ಪಾನಿಯ ಗಡಿಬಿಡಿಯಲ್ಲಿ ಕೊಂಡು ಹೋಗುವುದು ಕಂಡು ಬರುತ್ತಿತ್ತು. ನಾನಿನ್ನೂ ದೂರದ ಜಗಲಿಯಲ್ಲಿ ಅದನ್ನೇಲ್ಲಾ ನೋಡುತ್ತಾ ನಿಂತಿದ್ದೆ. ಟೀ ಪಾರ್ಟಿ ಅಂದರೆ ಇಷ್ಟೇ….ಅದರಲ್ಲೂ ಲಾಡಿನ ಡಬ್ಬ ಹಿಡಿದು ಸೋಂಪಣ್ಣ ಅತ್ತಿತ್ತ ಓಡಾಡುತ್ತಿದ್ದರು. ಸೋಂಪಣ್ಣ ಆ ಶಾಲೆಯ ಫ್ಯೂನ್ ವಾಚ್ ಮನ್ ಹೀಗೆ ಎಲ್ಲವೂ ಆಗಿದ್ದ ವೃದ್ಧ. ಸದಾ ತಲೆಯಲ್ಲಿ ಒಂದು ಬಿಳಿ ಟೊಪ್ಪಿ ಇಟ್ಟು ಕೊಂಡು  ಘಂಟೆ ಬಡಿಯುವುದು ಶಾಲೆಯ ಮುಖ್ಯೋಪಾಧ್ಯಾಯರಿಗೆ ಚಹ ಪಾನೀಯ ತರುವುದು, ಅಂಚೆ ಕಛೇರಿಗೆ ಹೋಗಿ ಬರುವುದು ಎಲ್ಲ ಮಾಡುತ್ತಿದ್ದರು. ಅವರು ಚಹ ಕೊಂಡೊಯ್ಯುತ್ತಿದ್ದುದು ನಮ್ಮ ಹೋಟೇಲಿನಿಂದಲೇ, ಒಂದು ಸ್ಟೀಲ್ ಪಾತ್ರೆ ಅದಕ್ಕಾಗಿ ಹಿಡಿದುಕೊಂಡು ಬರುತ್ತಿದ್ದರು. ಆ ಶಾಲೆಗೆ ಹೋಗದೇ ಇದ್ದರೂ ಸೋಂಪಣ್ಣ ನಮಗೆ ಬಹಳ ಪರಿಚಯದ ವ್ಯಕ್ತಿ ಎಂದು ಬೇರೆ ಹೇಳಬೇಕಿಲ್ಲ.



             ಎಲ್ಲರೂ ತಿಂಡಿ ತೀರ್ಥ ಸವಿಯುತ್ತಿದ್ದರೆ ಇನ್ನು ಅಲ್ಲಿ ನಿಲ್ಲುವುದಕ್ಕೆ ಮನಸ್ಸಾಗಲಿಲ್ಲ. ಹಾಗೆ ಜಗಲಿಯಲ್ಲೆ ಮುಂದಕ್ಕೆ ಬಂದು ಹೆಬ್ಬಾಗಿಲ ಹೊರಗೆ ಬರುತ್ತೇನೆ. ಇನ್ನೇನು ಹೊರ ಬರಬೇಕಾದರೆ ಸೋಂಪಣ್ಣ ಚಪ್ಪಾಳೆ ತಟ್ಟಿ ಕರೆಯುತ್ತಾರೆ. ಕೈಯಲ್ಲಿ ಬಾಳೆ ಎಲೆ ತುಂಡು ಇದೆ. ಅದರಲ್ಲಿ ಲಡ್ಡು ಅವಲಕ್ಕಿ ತಂದು ನನ್ನ ಕೈಗೆ ಇಡುತ್ತಾರೆ. ಕಣ್ಣು ಅರಳುತ್ತದೆ. ಚಿನ್ನದ ಬಣ್ಣದ ಲಡ್ಡು.ಬಾಯಲ್ಲಿ ನೀರು ತೊಟ್ಟಿಕ್ಕುತ್ತದೆ. ಅದುವರೆಗೆ ಹೋಟೇಲಿನಲ್ಲಿ ಅಂಗಡಿಯಲ್ಲಿ ಬರಣಿಯಲ್ಲಿ ಸುಂದರಾವಾಗಿ ಇಟ್ಟ ಲಡ್ಡನ್ನಷ್ಟೇ ಕಂಡಿರುವುದು. ಕೊಂಡುಕೊಳ್ಳುವುದಕ್ಕೆ ಹಣವೆಲ್ಲಿದೆ? ಒಂದು ವೇಳೆ ಮನೆಯಲ್ಲಿ ತಂದರು ಕೆಲವಷ್ಟು ಕಾಳುಗಳನ್ನಷ್ಟೇ ಕೈಯಲ್ಲಿಡುತ್ತಿದ್ದರು. ಇದೀಗ ಇಡೀ ಲಡ್ಡು ನನ್ನದೆ. ಅಲ್ಲೆ ಬಾಗಿಲ ಬಳಿಯ ಚಿಟ್ಟೆಯ ಮೇಲೆ ಕುಳಿತು ಲಾಡನ್ನು ಸವಿಯುತ್ತಿದ್ದರೆ ಕನಸೇ ಇದು? ಆಗಿನ ಭಾವನೆಗಳು ಈಗ ಅಳೆಯುವುದಕ್ಕೆ ಸಾಧ್ಯವಿಲ್ಲ. ಆದರೆ ಜೀವನದಲ್ಲಿ ಮೊದಲು ಒಂದು ಲಾಡು ಸವಿದ ಅನುಭವ ಮರೆಯುವುದಕ್ಕಿಲ್ಲ. ಆನಂತರ ನಾನು ಹತ್ತನೆಯ ತರಗತಿ ಮುಗಿಸಿ ಹೈಸ್ಕೂಲು ಅಧ್ಯಯನ ಅದೇ ನನ್ನ ಮೆಚ್ಚಿನ ಕಾಯರ್ ಕಟ್ಟೆ ಹೈಸ್ಕೂಲ್ ನಲ್ಲಿ ಮುಗಿಸಿ ಭಾವನಾತ್ಮಕವವಾಗಿ ವಿದಾಯ ಹೇಳುವಾಗ ಈ ಸೋಂಪಣ್ಣನ ನೆನಪಾಗಿತ್ತು. ಅದಿನವೂ ಲಡ್ಡು ಸವಿದಾಗ ಅದೇ ಸವಿ ಸಿಗಬಹುದೇ ಎಂದು ಮನಸ್ಸು ತಡಕಾಡಿತ್ತು.  ಆನಂತರ ಅದೆಷ್ಟೋ ಲಡ್ಡು ಸವಿದಿದ್ದೇನೆ. ಈಗಲೂ ಸ್ವತಃ ಮಾಡಿ ಸವಿಯುತ್ತೇನೆ. ಆದರೆ ಅಂದಿನ ನೆನಪು ಭಾವನಾತ್ಮಕವಾಗಿ ಅಂಟಿಕೊಂಡುಬಿಟ್ಟಿದೆ. ಅದನ್ನು ಕೈಗೆ ತಂದಿತ್ತ ಸೋಂಪಣ್ಣ ಎಂಬ ಸಜ್ಜನಿಕೆಯ ವ್ಯಕ್ತಿಯೂ ಅದೇ ನೆನಪನ್ನು ಬಿತ್ತನೆ ಮಾಡಿ ಹೋಗಿದ್ದಾರೆ. ಸೋಂಪಣ್ಣ ಆನಂತರದ ನಮ್ಮ ಮನೆ ಲಾಲ್ ಭಾಗ್ ನ ಪಕ್ಕದಲ್ಲೇ ಮನೆ ಮಾಡಿದ್ದರು. ಆದರೆ ಅವರು ನಿವೃತ್ತಿ ಹೊಂದಿದ ಮೇಲೆ ಊರು ಬಿಟ್ಟರೂ ಆ ಮನೆ ಹಾಗೇ ಉಳಿಯಿತು. ಈಗ ಅದರ ಯಜಮಾನ ಬೇರೆಯಾದರೂ ಆ ಮನೆಯ ಅಲ್ಪಸ್ವಲ್ಪ ಅವಶೇಷ ಉಳಿದಿದೆ. ಮತ್ತೆ ಆ ಸೋಂಪಣ್ಣ ಮತ್ತು ಆ ಲಡ್ಡು ಎಂಬ ಚಿನ್ನದುಂಡೆ ನೆನಪಾಗುತ್ತಿದೆ.

 

 

 

 

 

 

 

 

 

 

 

 

 

.

 

No comments:

Post a Comment