ವೃದ್ದೆ ತಿರುಗಿ ನೋಡಿ ಅಸಹಾಯಕ ದೃಷ್ಟಿಯಿಂದ ನೋಡಿದಳು. ಯಾಕೋ ಹಣ ಬರುತ್ತಿಲ್ಲ. ಎಂದು ಅಲವತ್ತುಕೊಂಡಳು. ನಾನು ನೋಡಬಹುದೇ ಎಂದು ಕೇಳಿದಾಗ ಎಟಿಎಂ ಕಾರ್ಡ್ ಕೈಗಿತ್ತಳು. ನಾನು ಕಾರ್ಡ್ ಯಂತ್ರದೊಳಗೆ ತಳ್ಳಿ ನೋಡಿದರೆ, ಕಾರ್ಡ್ ಬ್ಲಾಕ್ ಆಗಿತ್ತು!
ಅಮ್ಮಾ ನೀವು ಪಿನ್ ನಂಬರ್ ತಪ್ಪಾಗಿ ಒತ್ತಿದ್ದೀರಾ ಬ್ಲಾಕ್ ಅಗಿದೆ. ಆಕೆ ಗಾಬರಿಯಿಂದ ನೋಡಿದಳು. ಏನು ಮಾಡಲಿ ಅಂತ ನನ್ನನ್ನು ಕೇಳಿದಳು. ನಾನು ಹೇಳಿದೆ ಅಮ್ಮ ಮನೆಯಲ್ಲಿ ಬೇರೆ ಮಕ್ಕಳು ಯಾರು ಇಲ್ಲವೇ? ಯಾರನ್ನಾದರೂ ಕರೆದುಕೊಂಡು ಬರಬೇಕು. ಆಕೆ ಒಂದು ಮಾತು ಆಡಲಿಲ್ಲ.ಹಾಗೆ ಗಾಬರಿಯಿಂದ ನೋಡಿದಳು. ನಾನು ಬ್ಯಾಂಕ್ ಗೆ ಹೋಗಿ ಕೇಳುವಂತೆ ಹೇಳಿದೆ. ಆಕೆ ಮತ್ತೂ ಗಾಬರಿಯಿಂದ ನೋಡುತ್ತಿದ್ದಳು. ನಾನು ಆಕೆಯನ್ನು ಕರೆದುಕೊಂಡು ಅಲ್ಲೆ ಇದ್ದ ಬ್ಯಾಂಕ್ ಶಾಖೆಯ ಒಳಗೆ ಹೋದೆ. ಅದೇ ಬ್ಯಾಂಕ್ ನ ಆಡಿಟ್ ಮಾಡುವುದರಿಂದ ಎಲ್ಲರ ಪರಿಚಯ ಇತ್ತು. ನಾನು ಹೋಗಿ ಅದನ್ನು ಸರಿ ಮಾಡಿಕೊಡುವಂತೆ ಹೇಳಿ ವೃದ್ಧೆಯ ಅಸಹಾಯಕತೆಯನ್ನು ವಿವರಿಸಿದೆ. ಬ್ಯಾಂಕ್ ಸಿಬ್ಬಂದಿ ಗೌರವಯುತವಾಗಿ ಕಾರ್ಡ್ ಬ್ಲಾಕ್ ಅದುದನ್ನು ನಿವಾರಿಸಿ ಮತ್ತೊಮ್ಮೆ ಪರೀಕ್ಷಿಸುವಂತೆ ಹೇಳಿದರು. ಹಾಗೆ ಎಟಿಎಂ ಗೆ ಬಂದು ಅದರ ಪಿನ್ ಬದಲಿಸಿ ಆಕೆಗೆ ಎಷ್ಟು ಹಣ ಬೇಕು ಎಂದು ಕೇಳಿದಾಗ ಸಾವಿರ ರೂಪಾಯಿ ತೆಗೆದು ಆಕೆಯ ಕೈಗೆ ಇತ್ತೆ. ಆಕೆ ವೃದ್ದಾಪ್ಯ ವೇತನ ಬಂದಿದಾ ನೋಡುವುದಕ್ಕೆ ಹೇಳಿದಳು. ನೋಡಿದಾಗ ಅದೂ ಬಂದಿತ್ತು. ಅಕೆಗೆ ಸಂತೋಷವಾಯಿತು. ಆಕೆಯ ಖಾತೆಯಲ್ಲಿ ಸುಮಾರು ಎಂಭತ್ತು ಸಾವಿರ ಹಣವಿತ್ತು. ನಾನು ಕೇಳಿದೆ ಅಮ್ಮ ಯಾಕೆ ಯಾರನ್ನೂ ಕರೆದು ತರಲಿಲ್ಲ. ಹೀಗೆ ಒಬ್ಬರೆ ಬಂದರೆ ಕೆಲವೊಮ್ಮೆ ತೊಂದರೆ ಅನುಭವಿಸಬೇಕಾಗುತ್ತದೆ. ಎಲ್ಲರೂ ಒಳ್ಳೆಯವರಲ್ಲ.
ಆಕೆಯ ಕಥೆ ಹೇಳಿದಳು. ಆಕೆಯದ್ದೂ ಒಂದು ಕಥೆ.
ಆಕೆಗೆ ವಯಸ್ಸಾದ ಮಗನಿದ್ದ. ಮಗಳೂ ಇದ್ದಾಳೆ. ಮಗನಿಗೆ ಮಗಳಿಗೆ ಮಕ್ಕಳಾಗಿ ಮೊಮ್ಮಕ್ಕಳ ಅಜ್ಜಿಯವಳು. ಇಷ್ಟೆಲ್ಲಾ ಇದ್ದರೂ ಆಕೆ ಕರೆದು ತರಲಿಲ್ಲ. ಕಾರಣ ಇಷ್ಟೆ ಆಕೆಯ ಬ್ಯಾಂಕ್ ನಲ್ಲಿ ಎಷ್ಟು ದುಡ್ಡಿದೆ ಎಂದು ಅವರಿಗೆಲ್ಲ ತಿಳಿಯುವುದು ಆಕೆಗೆ ಇಷ್ಟವಿರಲಿಲ್ಲ. ಒಂದು ವೇಳೆ ಅದು ತಿಳಿದರೆ ಮಗನೂ ಮಗಳೂ ಅದನ್ನು ಏನೋ ಕಷ್ಟ ಹೇಳಿ ಅದನ್ನು ಕಸಿದುಕೊಂಡು ಬಿಡುತ್ತಿದ್ದರು. ಇನ್ನು ಮಗ ಆತನ ಬಗ್ಗೆ ಹೇಳದಿರುವುದೇ ಉತ್ತಮ. ಆಕೆ ಆ ಪ್ರದೇಶದ ಪುಡಿ ರೌಡಿ. ಅಬ್ಭಾ ಎಂದುಕೊಂಡೆ. ಯಾವುದೇ ತಾಯಿಗಾದರೂ ತನ್ನ ಮಗ ರೌಡಿ ಎನ್ನುವಾಗ ಆತಂಕವಾಗುತ್ತದೆ. ಆಕೆಯ ಮೊಗದಲ್ಲೂ ಅದನ್ನು ಗುರುತಿಸಿದೆ. ಯಾವುದೆ ಹೆಣ್ಣಾದರೂ ತನ್ನ ಮಗ ರೌಡಿಯಾಗಲಿ ಎಂದು ಹೆರುವುದಿಲ್ಲ. ಅದೆಲ್ಲ ಪುರಾಣಕಾಲದ ಕಥೆಗಳು. ಮಹಿಷಾಸುರನನ್ನು ಆತನ ತಾಯಿ ತಪಸ್ಸು ಮಾಡಿ ವರ ಬೇಡಿ ಹೆತ್ತಿದ್ದಳು. ಈಕೆಯ ಮಗ ರೌಡಿ. ಆತನ ಕೈಕಾಲು ಮುರಿದು ಗಾಯಗೊಂಡಾಗ ಮಾತ್ರವೇ ಆತನನ್ನು ಮನೆಯಲ್ಲಿ ಕಾಣುತ್ತಾಳೆ. ಆಕೆ ಎಂದಳು ಹಲವು ಸಲ ಆತನಿಗೆ ಹಾಗೇ ಏನಾದರೂ ಆಗಲಿ ಮನೆಯಲ್ಲಾದರೂ ಬಿದ್ದುಕೊಂಡಿರುತ್ತಾನೆ , ಊರಿಗೆ ಯಾಕೆ ತೊಂದರೆ? ಅಂತ ಭಾವಿಸಿದ್ದು ಇದೆ. ಛೇ...ತಾಯಿಯಾಗಿ ಆಕೆಯ ನೋವು ಎಂಬುದು ಅರ್ಥವಾಗಬೇಕದರೆ ಸ್ವತಃ ಅದನ್ನು ಅನುಭವಿಸಬೇಕು. ಆತ ಶಾಲೆಗೆ ಹೋಗುವಾಗ ಕಷ್ಟ ಪಟ್ಟು ಕಲಿಸಿದ್ದೆ. ಆದರೆ ಆತ ವಿದ್ಯೆ ಕಲಿಯಬೇಕಲ್ಲ. ಬೇಡದೆ ಇದ್ದ ಸಹವಾಸ ಮಾಡಿದ ಈಗ ಸಂಪೂರ್ಣ ಕೆಟ್ಟು ಹೋಗಿದ್ದಾನೆ. ಮನೆಯಲ್ಲಿ ಇರುವುದೇ ಅಪರೂಪ. ಇನ್ನು ತನ್ನ ಬಳಿಯಲ್ಲಿ ಬ್ಯಾಂಕ್ ಖಾತೆ ಇದೆ ಎಂದು ತಿಳಿದರೆ ಆತ ಪೀಡಿಸುತ್ತಾನೆ. ಮನೆಯಲ್ಲಿದ್ದ ಮೊಮ್ಮಕ್ಕಳೋ ಅವರು ಅವರಮ್ಮ ಹೇಳಿದಂತೆ ಕೇಳುವವರು. ಅವರದೂ ಒಂದು ಬದುಕು. ಹಲವು ಸಲ ತನ್ನ ವೃದ್ದಾಪ್ಯ ವೇತನವೇ ಅವರ ಹೊಟ್ಟೆ ತುಂಬಿಸುವುದು.
ಬೇಜವಾಬ್ದಾರಿ ಸಂಸಾರ. ಅದನ್ನು ಕಟ್ಟಿಕೊಂಡು ಬದುಕಬೇಕಾದ ಅನಿವಾರ್ಯತೆ. ನಾನು ಆಕೆಯನ್ನು ಕರೆದುಕೊಂಡು ಪುನಃ ಬ್ಯಾಂಕ್ ನೊಳಗೆ ಹೋದೆ. ಆಕೆಯಲ್ಲಿ ಕೇಳಿದೆ ನಿನಗೆ ತಿಂಗಳಿಗೆ ಎಷ್ಟಾದರು ಹತ್ತು ಸಾವಿರಕ್ಕಿಂತ ಹೆಚ್ಚು ಖರ್ಚು ಬರುವುದಿಲ್ಲ. ಉಳಿದ ದುಡ್ಡನ್ನು ಫಿಕ್ಸೆಡ್ ಡಿಪಾಸಿಟ್ ಇಡುವಂತೆ ಹೇಳಿದೆ. ಅದೆಲ್ಲ ತನಗೆ ಗೊತ್ತಿಲ್ಲ ಎಂದು ಅಮಾಯಕಳಾಗಿ ಹೇಳಿದಳು. ನಾನು ಬ್ಯಾಂಕ್ ನವರಲ್ಲಿ ಐವತ್ತು ಸಾವಿರ ಎಫ್ ಡಿ ಮಾಡುವಂತೆ ಹೇಳಿದೆ. ಆಕೆಯಲ್ಲಿ ಹೇಳಿದೆ, ಇನ್ನುಆಕೆಯ ಖಾತೆಯಲ್ಲಿ ಎಷ್ಟು ದುಡ್ಡಿದೆ ಎಂದು ಮನೆ ಮಂದಿಗೆ ತಿಳಿಯಲಾಗದು. ಅದನ್ನು ಎಟಿಎಂ ನಲ್ಲಿ ಪಡೆಯುವುದಕ್ಕೂ ಸಾಧ್ಯವಾಗದು. ತೀರ ಆವಶ್ಯಕತೆ ಬಿದ್ದರೆ ಬ್ಯಾಂಕ್ ಬಂದು ಹೇಳಿದರೆ ಅವರು ಅದನ್ನು ಒದಗಿಸಿಕೊಡುತ್ತಾರೆ ಎಂದು ಹೇಳಿದೆ. ಬ್ಯಾಂಕ್ ನವರು ಆಕೆಯಿಂದ ಬೇಕಾದ ಸಹಿಯನ್ನು ಪಡೆದು ಐವತ್ತು ಸಾವಿರ ಆಕೆಯ ಹೆಸರಲ್ಲಿ ಫಿಕ್ಶೆಡ್ ಡಿಪಾಸಿಟ್ ಇಟ್ಟರು. ಏನೋ ಒಂದಷ್ಟು ಹೆಚ್ಚು ಬಡ್ಡಿ ಬ್ಯಾಂಕ್ ಖಾತೆಗೆ ಬಂದು ಬೀಳುತ್ತದೆ.
ಇದೆಲ್ಲ ಆಕೆಗೆ ವಿವರಿಸಿ ಹೇಳಿ ಅಂದು ತೆರಳಿದ್ದೆ. ಇಂದು ಅದೇ ಬ್ಯಾಂಕ್ ಗೆ ಹೋದಾಗ ಅದೇ ವೃದ್ದೆ ಸಿಕ್ಕಿದಳು. ಆಕೆಯೇ ಕರೆದು ಪ್ರೀತಿಯಿಂದ ಮಾತನಾಡಿಸಿದಳು. ಅದರನಂತರ ಮತ್ತಷ್ಟು ಹಣ ಫಿಕ್ಸೆಡ್ ಡಿಪಾಸಿಟ್ ಗೆ ಹಾಕಿ ಈಗ ಎರಡು ಲಕ್ಷದಷ್ಟು ಹಣ ಉಳಿತಾಯದಲ್ಲಿತ್ತು. ಆಕೆ ಹೇಳಿದಳು ಎಲ್ಲ ನಿಮ್ಮ ಉಪದೇಶ. ಆ ಉಪಕಾರ ಎಂದಿಗು ಮರೆಯಲ್ಲ. ಈಗ ನನ್ನ ಖಾತೆಯಲ್ಲಿ ಎಷ್ಟಿದೆ ಎಂದು ಮಕ್ಕಳಿಗೆ ಮೊಮ್ಮಕ್ಕಳಿಗೆ ಗೊತ್ತಾಗುವುದಿಲ್ಲ. ಅವರನ್ನು ಕರೆದುಕೊಂಡೇ ಬರುತ್ತೇನೆ. ಖಾತೆಯಲ್ಲಿ ದುಡ್ದು ಇರುವುದಿಲ್ಲ ಎನ್ನುವಾಗ ಅವರು ಕಸಿದುಕೊಳ್ಳುವುದು ಸಾಧ್ಯವಾಗುವುದಿಲ್ಲ.
ಆಕೆ ಹೀಗೆ ಹೇಳುವಾಗ ಆಕೆಯ ಮುಖದಲ್ಲಿ ಒಂದು ಕೃತಜ್ಜತೆ ಇದ್ದರೆ, ನನ್ನ ಮುಖದಲ್ಲಿ ಒಂದು ಧನ್ಯತೆ ಇತ್ತು. ಆಕೆಯ ಫೋಟೊ ಹಾಕುವ ಅಂತ ಇತ್ತು. ಆದರೆ ಅದೂ ಆಕೆಗೆ ತೊಂದರೆಯಾಗಬಹುದು ಎಂದು ಸುಮ್ಮನಾದೆ.
No comments:
Post a Comment