Thursday, August 4, 2022

ಹುಳಿ ಮರ ಮತ್ತು.....ಪದವಿನ ಮಾರ್ಗ


 

ಏಳು ವರ್ಷದ ಬಾಲಕನಾಗಿದ್ದಾಗ ಒಂದು ಘಟನೆ ಈಗಲೂ ನೆನಪಾಗುತ್ತದೆ. ಏಳು ವರ್ಷ ವಯಸ್ಸಿನ ನೆನಪಿನಲ್ಲಿರುವುದಕ್ಕೆ ಕಾರಣ ಆಗ ನಾನಿನ್ನೂ ಎರಡನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ನಮ್ಮ ಮನೆ ಪೈವಳಿಕೆಯ  ಕಾಯರ್ ಕಟ್ಟೆಯಲ್ಲಿತ್ತು. ಆಗಲೇ ನಾನು ಏಕಾಂಗಿಯಾಗಿ ಅಕ್ಕ ಪಕ್ಕದದಲ್ಲೆ ಇದ್ದ ಬಾಯಾರು, ಉಪ್ಪಳಕ್ಕೆ ಬಸ್ಸಿನಲ್ಲಿ ಹೋಗುತ್ತಿದ್ದೆ. ಬಸ್ಸಿನಲ್ಲಿ ಹೆಚ್ಚಿನ ಕಂಡಕ್ಟರ್ ಡ್ರೈವರ್ ಗಳು ನಮಗೆಲ್ಲ ಪರಿಚಯ ಇದ್ದುದರಿಂದ ಇದೊಂದು ಸಹಜ ಕೆಲಸವಾಗಿತ್ತು. ಇಂತಹ ಒಂದು ದಿನ ನಾನು ಸಾಯಂಕಾಲ ಕಾಯರ್ ಕಟ್ಟೆಯಿಂದ ನಾಲ್ಕು ಕಿಲೋ ಮೀಟರ್ ದೂರದ ಬಾಯರು ಪದವಿಗೆ ಹೋಗಬೇಕಿತ್ತು. ಆಗ ಎರಡು ಮೂರು ಶಂಕರ್ ವಿಟ್ಠಲ್ ಬಸ್ಸು ಬಿಟ್ಟರೆ ಬೇರೆ ಯಾವ ವಾಹನ ಸೌಕರ್ಯವೂ ಇಲ್ಲ. ಎಲ್ಲೋ ಕೆಲವೊಮ್ಮೆ ಕಪ್ಪು ಬಿಳಿ ಬಣ್ಣದ ಅಂಬಾಸಿಡರ್ ಕಾರು ಓಡಾಡುವುದು ಬಿಟ್ಟರೆ ಸಂಚರಿಸುವುದಕ್ಕೆ ಶಂಕರ್ ವಿಟ್ಠಲ್ ಬಸ್ಸೇ ಗತಿ. ಹಲವು ವ್ಯಾಪಾರದವರು ಎತ್ತಿನಗಾಡಿ ಉಪಯೋಗಿಸುತ್ತಿದ್ದರು. ಇನ್ನು ಶಂಕರ್ ವಿಟ್ಠಲ್ ಬಸ್ಸು ಬೆಳಗ್ಗೆ ಒಂದೆರಡು ಓಡಿದರೆ ನಂತರ ಮಧ್ಯಾಹ್ನ ನಂತರ ಸಾಯಂಕಾಲ ಬಿಟ್ಟರೆ ಬಸ್ಸುಗಳು ಇರುತ್ತಿರಲಿಲ್ಲ. ಆಗ ಆರುಗಂಟೆಗೆ ಪುತ್ತೂರಿನಿಂದ ಬರುವ ಶೆಟ್ರ ಬಸ್ಸು ಉಪ್ಪಳಕ್ಕೆ ಹೋಗುವ ಕೊನೆಯ ಬಸ್ಸು. ನಾನು ಆದಿನ ಬಾಯಾರು ಪದವಿನಲ್ಲಿ ಅಮ್ಮ ಚೀಲದಲ್ಲಿ ತುಂಬಿಸಿ ಕೊಟ್ಟ ಚಕ್ಕುಲಿಯನ್ನು ಬಾಯರಿನ   ಹೆಂಡದಂಗಡಿಗೆ  ಕೊಟ್ಟು ದುಡ್ಡು ತರಬೇಕಿತ್ತು. ಆದಿನ ಬಾಯಾರು ಪದಿವಿನಲ್ಲಿ ಇಳಿಯಬೇಕಾದರೆ ಶೆಟ್ಟರ ಬಸ್ಸು ಹೋಗಿಯಾಗಿತ್ತು. ಇನ್ನು ನಾಲ್ಕು ಕಿಲೋಮಿಟರ್ ನಡೆಯಬೇಕು. ನಾನು ಪುಟ್ಟ ಬಾಲಕ. ನಿಜಕ್ಕೂ ನನಗೆ ಭಯ ಆಗಿಬಿಟ್ಟಿತು. ಚಕ್ಕುಲಿ ಕೊಟ್ಟು ಖಾಲಿ ಚೀಲ ಹೆಗಲಿಗೆ ಹಾಕಿ ಅಂಗಡಿಯವರು ಕೊಟ್ಟ ಹಣ ಕೈಯಲ್ಲಿ ಹಿಡಿದು ನಡೆಯುವುದಕ್ಕೆ ಆರಂಭಿಸಿದೆ. ಅದಾಗಲೇ ನಸು ಗತ್ತಲೆ ಆವರಿಸುವುದಕ್ಕೆ ತೊಡಗಿತ್ತು. ಆಗ ಪದವಿನಿಂದ ಕಾಯರ್ ಕಟ್ಟೆ ತನಕವೂ ಒಂದು ಮನೆಯೂ ಇಲ್ಲ ಬರೀ ಬಯಲು. ಜನಸಂಚಾರವೂ ಇಲ್ಲ. ಈಗ ಅಲ್ಲಿ ಅಡಿದೂರಕ್ಕೆ ಒಂದು ಮನೆ ಇದೆ. ಬಾಯಾರು ಪದವಿನಿಂದ ಒಂದು ತಿರುವು ಕಳೆದು ರಸ್ತೆ ನೇರವಾಗಿ ಸಾಗುತ್ತದೆ. ಬೀಡಿ ಮಹಮ್ಮದ್ ಬ್ಯಾರಿಯವರ ಕಟ್ಟಡ ಆನಂತರವಾಗಿತ್ತು. ಅಲ್ಲೆ ಬರೀ ಮುಳಿ ಹುಲ್ಲಿನ ಗುಡ್ಡೆ. ತಿರುವಿನ ತುದಿಗೆ ಒಂದು ಹುಣಸೇ ಮರದ ಇತ್ತು. ಅದೊಂದೇ ಮರ ದೊಡ್ಡದಾಗಿ ಬೆಳೆದಿತ್ತು. ಆ ಮರ ಭಯಾನಕವಾಗಿತ್ತು. ಆ ಮರದ ಬಗ್ಗೆ ಭಯ ಹುಟ್ಟುವುದಕ್ಕೆ ಒಂದು ಕಾರಣ ಇದೆ. 

 

ಹುಣಸೇ ಹಣ್ಣಿನ ಮರ, ನಮ್ಮೂರಲ್ಲಿ ಹುಳಿ ಮರ ಅಂತಲೇ ಹೇಳುವುದು. ಅಲ್ಲಿ ದೆವ್ವ ಇದೆ ಅಂತ ಹೇಳುತ್ತಿರುವುದು ಅದು ಹೇಗೋ ನನ್ನ ಕಿವಿಗೆ ಬಿದ್ದಿತ್ತು. ಮಾತ್ರವಲ್ಲ ಹಿರಿಯರು ಹೇಳುವ ಕಥೆಗಳಲ್ಲಿ ಹುಳಿ ಮರ ಎಂದರೆ ಅಲ್ಲಿ ದೆವ್ವಗಳು ಅಲ್ಲಿ ಇದ್ದೇ ಇರುತ್ತವೆ ಎಂಬ ಕಲ್ಪನೆ. ಬಾಯಾರು ಪದವಿನಿಂದ ನಡೆದುಕೊಂಡೆ ಬಂದೇ. ದೂರದಲ್ಲಿ ಹುಳಿ ಮರ ಕಂಡಿತು. ಒಂದೇ ಒಂದು ಜನ ಸಂಚಾರವಿಲ್ಲ. ಸುತ್ತಮುತ್ತ ಮನೆ ಇಲ್ಲ. ಯಾವುದೇ ವಾಹನ ಸಂಚಾರವೂ ಇಲ್ಲ. ಭಯ ಮತ್ತಷ್ಟು ಹೆಚ್ಚಾಯಿತು. ಇನ್ನೂ ಮುಸ್ಸಂಜೆಯ ನಸು ಬೆಳಕು ಇತ್ತು. ಹುಳಿ ಮರ ಹತ್ತಿರ ಬರುತ್ತಿದ್ದಂತೆ ಅದನ್ನು ಹೇಗೆ ದಾಟಿ ಹೋಗುವುದು ಎಂಬ ಆತಂಕ ಭಯದಲ್ಲಿ ಜೋರಾಗಿ ಅಳು ಬಂದು ಬಿಟ್ಟಿತು. ಜೋರಾಗಿ ಅತ್ತುಬಿಟ್ಟಿ. ಕೇಳುವುದಕ್ಕೆ ಹತ್ತಿರದಲ್ಲಿ ಯಾರೂ ಇಲ್ಲ. ಹಾಗೇ ಅಳುತ್ತಾ ಮರ ಹತ್ತಿರ ಬರುತ್ತಿದ್ದಂತೆ ಓಡತೊಡಗಿದೆ. ಅಲ್ಲಿಂದ ದಾಟಿ ಮುಂದೆ ಬರಬೇಕಾದರೆ ರಸ್ತೆ ಒಂದು ಸಣ್ಣ ತಿರುವು ತೆಗೆದುಕೊಳ್ಳುತ್ತದೆ. ಅಲ್ಲೇ ಕೆಳಗೆ ಇಳಿದು ಹೋದರೆ ಕುರುವೇರಿ. ನಾನು ಅಳುತ್ತಾ ಬರಬೇಕಾದರೆ ನಸು ಕತ್ತಲೆಯಲ್ಲಿ ಯಾರೋ ಬರುವ ಹಾಗೆ ಭಾಸವಾಯಿತು. ನಾನು ಹಾಗೆ ನಿಂತು ಬಿಟ್ಟೆ.

 

ಆ ವ್ಯಕ್ತಿ ಹತ್ತಿರ ಬಂದಾಗ ಗೊತ್ತಾಯಿತು. ಅದೇ ಪರಿಚಯದ ಮುಖ. ಅದು ಬಸ್ ಏಜಂಟ್ ಗೋವಿಂದಣ್ಣ. ಆಗ ಶಂಕರ್ ವಿಟ್ಠಲ್ ಬಸ್ ಗೆ ಬಾಯಾರು ಪದವಿನಲ್ಲಿ ಟಿಕೆಟ್ ಕೊಡುವುದಕ್ಕೆ ಒಬ್ಬರು ಏಜಂಟ್ ಇದ್ದರು. ಅವರೇ ಗೋವಿಂದಣ್ಣ. ಕೊನೆಯಲ್ಲಿ ಹೋದ ಶೆಟ್ರ ಬಸ್ಸಿನಲ್ಲಿ ಟಿಕೆಟ್ ಕೊಟ್ಟು ಅದೇಲ್ಲೋ ಇಳಿದು ಅವರು ವಾಪಾಸು ಬಾಯಾರು ಪದವಿಗೆ ನಡೆದುಕೊಂಡು ಬರುತ್ತಿದ್ದರು. ಅವರಿಗೆ ಅದು ರೂಢಿ. ಅವರು ಬಹಳ ಸಾಧು ಮನುಷ್ಯ. ನನ್ನ ಪರಿಚಯವಿದೆ. ದಿನವೂ ಕಾಣುತ್ತೇನಲ್ಲ? ಹತ್ತಿರ ಬಂದವರೇ ಏನು ಅಂತ ಕೇಳಿದರು.?

 

ನಾನಿನ್ನೂ ನಡುಗುತಿದ್ದೆ. ನನ್ನ ಕಣ್ಣಿಂದ ನೀರು ಹರಿಯುವುದು ಅವರಿಗೆ ಕಂಡಿತು. ಹತ್ತಿರ ಬಂದವರು ಕೈ ಹಿಡಿದು “ಏನಾಯಿತು?”  ಅಂತ ಕೇಳಿದರು.

 

            ನಾನು ಶೆಟ್ರ ಬಸ್ಸು ತಪ್ಪಿ ಹೋದದ್ದು ಹೇಳಿದೆ. ನಾನು ಹೆದರಿಕೊಂಡದ್ದು ಅವರಿಗೆ ಗೊತ್ತಾಯಿತು. ಅವರು ಬಾ ಹೋಗೊಣ ಅಂತ ನನ್ನ ಕೈ ಹಿಡಿದು ನನ್ನ ಜತೆ ಬಂದರು. ಅಲ್ಲಿಂದ ಕಾಯರ್ ಕಟ್ಟೆಗೆ ಇನ್ನೂ ದೂರವಿತ್ತು. ಕೆಲವು ತಿರುವು ಕಳೆದರೆ ದೇವಪ್ಪನಾಯಕರ ಮನೆ ಸಿಗುತ್ತದೆ. ಅಲ್ಲೊಂದು ದೊಡ್ಡ ತಿರುವು. ಅದು ಕಳೆದರೆ ಕಾಯರ್ ಕಟ್ಟೇ ಮಸೀದಿ ಮತ್ತೆ ಕೆಲವು ಅಂಗಡಿ ಸಿಗುತ್ತದೆ. ಗೋವಿಂದಣ್ಣ ನನ್ನ ಜತೆ ಅಲ್ಲಿ ತನಕ ಬಂದು ಇನ್ನು ಹೋಗು ಹೆದರ ಬೇಡ ಅಂತ ಹೇಳಿ ವಾಪಾಸು ಬಾಯಾರು ಪದವಿನ ಕಡೆಗೆ ನಡೆದುಕೊಂಡು ಹೋದರು. ಅವರಿಗೆ ನಡೆಯುವುದಕ್ಕೆ ಇನ್ನೂ ದೂರವಿತ್ತು. ಅಲ್ಲಿಂದ ನಮ್ಮ ಮನೆ ಹತ್ತಿರವೇ ಇತ್ತು. ಅಲ್ಲಲ್ಲಿ ಅಂಗಡಿ ಜನಗಳು ಇರುವುದರಿಂದ ನನಗೆ ಮತ್ತೆ ಭಯವಾಗಲಿಲ್ಲ. ನಾನು ಮನೆಗೆ ಬಂದೆ. ಅಮ್ಮ ಮನೆ ಜಗಲಿಯಲ್ಲಿ ನನ್ನ ದಾರಿ ನೋಡುತ್ತಿದ್ದರು. ಪುಟ್ಟ ಬಾಲಕನನ್ನು ಆ ಹೊತ್ತಿನಲ್ಲಿ ಕಳುಹಿಸಿದ ಆತಂಕ ಅವರಲ್ಲಿ ಇತ್ತು. ಆದರೇನು ಮಾಡುವುದು? ಬಡತನ ಎಲ್ಲವನ್ನುಸಹಿಸಿಕೊಳ್ಳುವ ಔಷಧವಾಗಿ ಕೆಲಸ ಮಾಡುತ್ತದೆ.

 

             ಈಗಲೂ ಬಾಯಾರು ಪದವಿಗೆ ಹೋಗುವಾಗ ಆ ಸ್ಥಳ ಸಿಗುತ್ತದೆ. ಈ ಘಟನೆ ನೆನಪಾಗುತ್ತದೆ. ಆನಂತರ ಆ ಜಾಗದಲ್ಲಿ ಅದೆಷ್ಟು ಸಲ ಸಂಚರಿಸಿದ್ದೇನೋ ನೆನಪಿಲ್ಲ. ಆದರೆ ಈ ಘಟನೆ ಮಾತ್ರ ಇನ್ನೂ ನೆನಪಿದೆ. ಆ ಗೋವಿಂದಣ್ಣನನ್ನು ಈಗಲೂ ನೆನಪಿಸಿಕೊಳ್ಳುತ್ತೇನೆ. ಈಗ ಅಂತಹ ವ್ಯಕ್ತಿಗಳು ಸಿಗಬಹುದೇ? ನನಗಾಗಿ ಬಹುದೂರ ನನ್ನ ಜತೆ ನಡೆದುಕೊಂಡು ಬಂದು ನನ್ನನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಿ ಹೋದ ಅವರ ಹೃದಯವಂತಿಕೆ ಎಂದಿಗೂ ಮರೆಯಲಾರೆ.

 

 

           

  

No comments:

Post a Comment