Sunday, October 30, 2022

ಬೋಳಂಗಳದ ಸವಾರಿ ಸೇವೆ

  ಆದಿನ ನಮ್ಮೂರಿನ ಪೈವಳಿಕೆ ಬೋಳಂಗಳದ ನೇಮಕ್ಕೆ ಹೋಗಿ ಮತ್ತೆ ಉಪ್ಪಳ ಪೇಟೆಗೆ ಹೋಗಿ ಬರುವುದಕ್ಕೆ ತಡವಾಗಿಬಿಟ್ಟಿತು. ಹಾಗೆ ರಾತ್ರಿ ತಡವಾಗಿ ಉಪ್ಪಳದಿಂದ ಬಂದೆ. ಮನೆಗೆ ಬರುತ್ತಿದ್ದಂತೆ ಮನೆಯಲ್ಲಿ ನನ್ನನ್ನುಕಾಣುವುದಕ್ಕೆ ಬೋಳಂಗಳದಿಂದ ಬಂದಿದ್ದರು ಎಂದು ಹೇಳಿದರು. ನನಗೆ ಆಶ್ಚರ್ಯವಾಯಿತು. ಯಾಕಪ್ಪಾ ಏನಾಯಿತು? ಆಗಲೇ ರಾತ್ರಿ ಒಂಭತ್ತಾಗಿತ್ತು. ಇನ್ನೇನು ಕೈಕಾಲು ತೊಳೆಯೋಣವೆಂದು ಅಂಗಳಕ್ಕೆ ಇಳಿದರೆ ಅದೇ ಬೋಳಂಗಳದ ಆಡಳಿತ ವರ್ಗದಲ್ಲಿದ್ದ ಬಲ್ಲಾಳರು ಬಂದಿದ್ದರು. ಅದಾಗಲೇ ಏಳು ಘಂಟೆಯಿಂದ ನನ್ನನ್ನು ಇದಿರು ನೋಡುತ್ತಿದ್ದರು.  ಬಂದವರ ಮುಖದಲ್ಲಿ ಬಹಳ ಹತಾಶೆಯ ಭಾವವಿತ್ತು. ನಾನಂತು ಬೋಳಂಗಳದ ದೈವವನ್ನು ನಂಬಿಕೊಂಡಿದ್ದವನೇ ಹೊರತು ಅಲ್ಲಿಯ ಯಾವ ಕಾರ್ಯ ಕೆಲಸಗಳ ಜವಾಬ್ದಾರನಾಗಿರಲಿಲ್ಲ. ಹಾಗಾಗಿ ನನಗೆ ಬಹಳ ಅಚ್ಚರಿಯಾಯಿತು. ಪ್ರತಿ ಬಾರಿ ಉತ್ಸವಕ್ಕೆ ಹೋಗಿ ನಮಸ್ಕರಿಸಿ ಹರಿಕೆಸಲ್ಲಿಸಿ ಪ್ರಸಾದ ತರುವಷ್ಟಕ್ಕೆ ಸೀಮಿತ. 

ಬೋಳಂಗಳ, ಹೆಸರೇ ಹೇಳುವಂತೆ ಬೋಳು ಬೋಳಾದ ಅಂಗಳ. ನಮ್ಮ ಮನೆಯಿಂದ ಒಂದು ಹರ ದಾರಿಯಲ್ಲಿ ವಿಶಾಲವಾದ ಬಯಲು ಪ್ರದೇಶ. ಬಹಳ ವಿಸ್ತಾರವಾದ ಮೈದಾನ,  ಸುತ್ತಲು ಪ್ರಾಕೃತಿಕ ಕ್ರೀಡಾಂಗಣದಂತೆ ಎತ್ತರದ ಗುಡ್ಡಗಳು. ಮೈದಾನದ ಒಂದು ತುದಿಯಲ್ಲಿ  ಒಂದೆರಡು ಬೃಹದಾಕಾರದ ಮರಗಳು. ಅದರ ನೆರಳಿನಲ್ಲಿ ಎಂಬಂತೆ ಬೋಳಂಗಳ ದೈವದ ಗುಡಿ. ನಿತ್ಯದಲ್ಲಿ ಹಗಲಿನಹೊತ್ತಿನಲ್ಲೂ ಜಾತಿ ಧರ್ಮ ಭೇದವಿಲ್ಲದೆ ಜನ ಅಲ್ಲಿಗೆ ಹೋಗುವುದಕ್ಕೆ ಭಯ ಪಡುತ್ತಿದ್ದರು. ದೂರದಲ್ಲೇ ನಿಂತು ನಮಸ್ಕರಿಸುವುದಷ್ಟೇ ಕೆಲಸ.  ನಮ್ಮ ಪೈವಳಿಕೆ ಗ್ರಾಮದಲ್ಲಿ ಮೂರು ಪ್ರಧಾನ ದೈವ ವಿದೆ. ಒಂದು ಅಣ್ಣ ದೈವ ಇನ್ನೊಂದು ತಮ್ಮ ದೈವ ಮತ್ತೊಂದು ಅಕ್ಕ ಅಂದರೆ ಉಳ್ಳಾಳ್ತಿ ದೈವ. ಇದರಲ್ಲಿ ಉಳ್ಳಾಳ್ತಿ ದೈವ ಪೈವಳಿಕೆ ಗ್ರಾಮದೇವತೆ. ವರ್ಷಕ್ಕೊಮ್ಮೆ ಎಲ್ಲ ಕ್ಷೇತ್ರದಲ್ಲು ವರ್ಷಾವಧಿ ನೇಮ (ಉತ್ಸವ) ಭಕ್ತಿ ಗೌರವದಿಂದ ನಡೆಯುತ್ತದೆ. ಅದರಲ್ಲಿ ತಮ್ಮ ದೈವದ ಸ್ಥಾನವೇ ಬೋಳಂಗಳ. ಮತಭೇದವಿಲ್ಲದೆ ಭಯ ಭಕ್ತಿಯಿಂದ ಕಾಣುವ ದೈವ ಸ್ಥಾನ. 

ಬೋಳಂಗಳ ನೇಮ ಪ್ರತಿ ವರ್ಷವೂ ಆಗುವಾಗ ಮೊದಲ ರಾತ್ರಿ ಬೋಳಂಗಳದಿಂದ ಒಂದಷ್ಟು ದೂರವೇ ಇರುವ ಪೈವಳಿಕೆ ಚಿತ್ತಾರಿ ಚಾವಡಿಯಲ್ಲಿದ್ದ ಉಳ್ಳಾಳ್ತಿ ದೈವ ಇಲ್ಲಿನ ಉತ್ಸವಕ್ಕೆ ಬರುವುದು ವಾಡಿಕೆ. ರಾ
ತ್ರಿ ಸಿಡಿ ಮದ್ದು ವಾದ್ಯ ಢೋಲಿನೊಂದಿಗೆ  ಮೆರವಣಿಗೆ ಬರುತ್ತದೆ. ಮೊದಲೆಲ್ಲ ರಾತ್ರಿ ಬಹಳ ಹೊತ್ತಾಗುವಾಗ ವಾದ್ಯ ಡೋಲಿನ ಸದ್ದಿಗೆ ನಾವು ಭಯದಿಂದ ಎದ್ದು ಕುಳಿತುಕೊಳ್ಳುತ್ತಿದ್ದೆವು. ಅಲ್ಲಲ್ಲಿ ತೋರಣ ಕಟ್ಟಿ ಆ ದೈವವನ್ನು ಸ್ಥಳೀಯರು ಸ್ವಾಗತಿಸುತ್ತಿದ್ದರು. ನಮ್ಮ ಮನೆಯ ಹತ್ತಿರವೇ ಇದ್ದ ಕಾಜಿ ಕಟ್ಟೆ ವಾಸ್ತವದಲ್ಲಿ ಇದನ್ನೇ ಕಾಯರ್ ಕಟ್ಟೆ ಎಂದು ಕರೆಯುತ್ತಾರೆ. ಅಲ್ಲಿ ಉಳ್ಳಾಳ್ತಿ ದೈವ ಬಳೆ ಧರಿಸಿ ತಮ್ಮನ ಉತ್ಸವಕ್ಕೆ ಬರುವುದು ವಾಡಿಕೆ. ಹಾಗೆ ಬಂದ ದೈವದ ಕಿರೀಟ ಖಡ್ಗ ಇನ್ನು ಏನೇನೋ ಭಂಡಾರದ ವಸ್ತು ರೂಪದಲ್ಲೆ ಬರುವ ಉಳ್ಳಾಳ್ತಿಯನ್ನು ಬ್ರಾಹ್ಮಣರೊಬ್ಬರು ಹೊತ್ತು ತರುತ್ತಾರೆ. ಜತೆಗೆ ದರ್ಶನ ಪಾದ್ರಿ ಪೂಜಾರಿ ಇನ್ನಿತರ ಪರಿವಾರದವರು ಜತೆಗೆ ಇರುತ್ತಾರೆ.  ಹೀಗೆ ಸಂಭ್ರದಿಂದ ಬಂದ ಉಳ್ಳಾಳ್ತಿ ಮರುದಿನ ಸಾಯಂಕಾಲ ನೇಮ ಸಮಾಪ್ತಿಯಾಗುತ್ತಿದ್ದಂತೆ ಹಿಂತಿರುಗಿ ಹೋಗುವುದು ಪದ್ದತಿ. 

ಆದಿನ ಬಂದ ದೈವ ಹಿಂದಿರುಗಿ ಹೋಗುವುದಕ್ಕೆ  ದೈವವನ್ನು ಹೊರುವುದಕ್ಕೆ ಬ್ರಾಹ್ಮಣ ವ್ಯಕ್ತಿ ಯಾರೂ ಸಿಗಲಿಲ್ಲ. ಯಾವಾಗಲು ಕೊಂಡೊಯ್ಯುತ್ತಿದ್ದ ವ್ಯಕ್ತಿ ಕಾರಣಾಂತರದಿಂದ ಬರಲಿಲ್ಲ. ಅದು ಏನಾಯಿತು ಎನ್ನುವುದಕ್ಕಿಂತ ಅದಕ್ಕೆ ಪರಿಹಾರವಾಗಿ ನನ್ನ ಬಳಿಗೆ ಅ ರಾತ್ರಿ ಬಂದು ಬಿಟ್ಟರು. ನಾನು ಮೊದಲಿಗೆ ಸುತರಾಂ ಒಪ್ಪಿಕೊಳ್ಳಲಿಲ್ಲ. ಮುಖ್ಯವಾಗಿ ಆದಿನ ಬಿಡುವಿಲ್ಲದ ಕೆಲಸದಿಂದ ಬಹಳ ದಣಿದಿದ್ದೆ. ಇನ್ನೊಂದು ಅದಕ್ಕೆ ಅರ್ಹ ವ್ಯಕ್ತಿ ನಾನಲ್ಲ ಎಂಬ ಅಂತರಂಗದ ಭಾವವೂ ಕಾರಣ. ನಾನು ಬ್ರಾಹ್ಮಣನಾದರೂ ನನ್ನ ಬ್ರಾಹ್ಮಣ್ಯದ ಪರೀಕ್ಷೆ ಆರೀತಿಯಾಗುವುದು, ಇನ್ನೊಂದು ನನ್ನ ಧರ್ಮ ಆಚರಣೆ ಏನುಂಟು ಅದು ಕೇವಲ ಖಾಸಗಿಯಾಗಿ ನನಗೆ ಸಂಭಂಧಿಸಿದ್ದು. ಅದು ಸಾರ್ವಜನಿಕವಾಗುವುದಕ್ಕೆ ಇಷ್ಟವಿರಲಿಲ್ಲ. ನಾನು ಬರುವುದೇ ಇಲ್ಲ. ಅಲ್ಲೇ ಹತ್ತಿರದಲ್ಲೇ ಇದ್ದ ಇನ್ನೊಬ್ಬರನ್ನು ಉಲ್ಲೇಖಿಸಿ ಹೇಳಿದೆ. ನಿಜಕ್ಕೂ ಇನ್ನೊಬ್ಬರ ಬಗ್ಗೆ ನನಗೆ ಗೌರವ ಇತ್ತು. ಅದಕ್ಕೆ ಅವರು ಹೇಳಿದರು,   "ಸ್ವಲ್ಪ ಕ್ರಮದಲ್ಲಿ ಇರುವವರು ಆಗಬೇಕು ಹಾಗೆ ಇಲ್ಲಿಗೆ ಬಂದದ್ದು. " ನನ್ನಲ್ಲಿ ಅಂತಹ ವೈಶಿಷ್ಟ್ಯತೆ ಏನಿದೆಯೋ ಅಂತ ಅಚ್ಚರಿಯಾಯಿತು.  ತಕ್ಕ ಮಟ್ಟಿಗೆ ನನ್ನದೇ ಮಿತಿಯೊಳಗೆ ಇದ್ದದ್ದು ಬಿಟ್ಟರೆ ಮತ್ತೇನೂ ಇರಲಿಲ್ಲ. 


  ಬ್ರಾಹ್ಮಣ್ಯ ಅಸ್ತಿತ್ವ ಅತ್ಯಂತ ಚರ್ಚಿತ ವಿಷಯ. ಇದು ಅವಶ್ಯಕತೆ ಬೀಳುವಾಗ ಗೌರವಿಸಲ್ಪಡುತ್ತದೆ. ಮತ್ತೆ ಅದೇ ಕಡೆಗಣನೆ. ಏನೇನೋ ವಾದಗಳು. ಹಲವರು ಸಾರ್ವಜನಿಕವಾಗಿ ತೆಗಳುತ್ತಾರೆ, ತಮಗೆ ತಿಳಿದಂತೆ ವಿಮರ್ಶೆ ಮಾಡುತ್ತಾರೆ. ಇರಲಿ ಅದು ವೈಯಕ್ತಿ ಸ್ವಾತಂತ್ರ್ಯ. ಆದರೆ ಅವರವರ ಕಾರ್ಯಗಳಿಗಾಗುವಾಗ ಪರಿಶುದ್ದ ಬ್ರಾಹ್ಮಣ್ಯದ ಶರಣು ಹೋಗುತ್ತಾರೆ. ಈಗಿನ ಹಲವು ರಾಜಕೀಯ ನಾಯಕರ ರೀತಿ ಇದು.   ಬ್ರಾಹ್ಮಣರ ಪ್ರತಿಯೊಂದನ್ನು ಕಟುವಾಗಿ ವಿಮರ್ಶಿಸುವಾಗ ತನ್ನ ಮನೆಯ ಕಾರ್ಯಕ್ಕೆ ಬ್ರಾಹ್ಮಣರು ಬೇಡ ಎನ್ನುವ ಆತ್ಮ ಸ್ಥೈರ್ಯ  ಇರುವುದೇ ಇಲ್ಲ.  ಆಗ ಬ್ರಾಹ್ಮಣರು ಪರಿಶುದ್ದರಾಗಿಬಿಡುತ್ತಾರೆ.  ಆದರೆ ಅದೆಲ್ಲ ರಹಸ್ಯ. ಅದು ಅಪ್ರಸ್ತುತ.  ಹೋಗಲಿ ಮನೆಗೆ ಬಂದವರು ಈ ವರ್ಗಕ್ಕೆ ಸೇರಿದವರಲ್ಲ. ದಿನವೂ ಮುಖ ನೋಡಿ ಸೌಹಾರ್ದದಿಂದ ವ್ಯವಹರಿಸುವವರು. ಕೊನೆಗೆ ಅವರ ಮಾತಿಗೆ ಒಪ್ಪಿದೆ. ಮತ್ತೆ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ಬರಿಗಾಲಲ್ಲೇ ಬೋಳಂಗಳಕ್ಕೆ ಹೋದೆ. ನನ್ನನ್ನು ಬರವಿನ ನಿರೀಕ್ಷೆಯಲ್ಲಿ  ಅಲ್ಲಿ ಹಲವರು ನಿಂತಿದ್ದರು. ನಾನು ಬಂದದ್ದು ದೊಡ್ಡ ಭಾರವನ್ನು ಇಳಿಸಿದಂತೆ ಅವರ ಭಾವ. ಆ ಭಾರ ನನ್ನ ಮೇಲೆ ರವಾನೆಯಾಗಿದೆ ಎಂಬುದು ಮತ್ತೊಂದು. 


ಮೊದಲಿಗೆ ದೈವದ ಖಡ್ಗ ಕಿರೀಟ ಪ್ರಭಾವಳಿ ಇನ್ನೇನು ಇತ್ತೋ ನನಗೆ ಅದರ ಅರಿವಿಲ್ಲ. ಯಾವಾಗಲೂ ಜಾತ್ರೆಯ ಸಮಯ ದೂರದಿಂದ ಭಯದಿಂದ ನಮಸ್ಕರಿಸಿ ಹೋಗುವ ದೈವ ನನ್ನಕೈಯಲ್ಲಿತ್ತು. ಬಾಲ್ಯದಿಂದಲೂ ನನಗೆ ಅರಿವು ಬಂದ ದಿನದಿಂದಲೂ ದೈವ ಭೂತ ಎಂದರೆ ಭಯ ಪಟ್ಟು ನೋಡುತ್ತಿದ್ದದ್ದು ಅಂದು ನನ್ನ ಕೈಯಲ್ಲಿ. ಒಂದು ವಿಚಿತ್ರ ಅನುಭವ.  ಆ ಕತ್ತಲೆಯಲ್ಲಿ ದೀವಟಿಗೆ ದೀಪದ ಬೆಳಕಿನಲ್ಲಿ ಬರಿಗಾಲಲ್ಲಿ ಅವರೊಂದಿಗೆ ಪೈವಳಿಕೆ ಚಿತ್ತಾರಿ ಚಾವಡಿ ಕಡೆ ಹೊತ್ತು ಸಾಗುವಾಗ, ಅದುವರೆಗೆ ಇದ್ದ ದಣಿವು ಮರೆತು ಹೋಯಿತು. ಚಾವಡಿಯಲ್ಲಿ ಇರಿಸಿ ಅಲ್ಲಿ ಪೂಜೆ ಸಲ್ಲಿಸಿ ಪುನಃ ಹಿಂತಿರುಗುವಾಗ ರಾತ್ರಿ ಹನ್ನೊಂದು ಘಂಟೆಯಾಗಿತ್ತು. ಹೀಗೆ ಅನಿರೀಕ್ಷಿತವಾಗಿ ಒಂದು ಭೂತದ ಸೇವೆ ದೈವದ ಸೇವೆ ಆಯಾಚಿತವಾಗಿ ನನ್ನ ಕೈಯಿಂದ ನೆರವೇರಿತು. 


ಇತ್ತೀಚೆಗೆ ನಮ್ಮಊರಿನ ಭೂತಗಳು ಹೆಚ್ಚು ಸದ್ದು ಮಾಡುತ್ತವೆ. ಅದರ ಮಹಿಮೆ ಕಥೆಗಳ ಬಗ್ಗೆ ಹಲವರಿಗೆ ಕುತೂಹಲ ಮೂಡಿದೆ. ಕಾಂತಾರ ಚಲನ ಚಿತ್ರ ನೋಡುವಾಗ ನಾನು ಒಂದು ದಿನ ಹೊತ್ತುಕೊಂಡಿದ್ದೆ  ಎಂಬ ಆ ಘಟನೆ ಮತ್ತೆ ನೆನಪಿಗೆ ಬಂತು. ಆ ದಿನ ನನಗೆ ಆ ಕಾರ್ಯ ಅಷ್ಟು ಗಂಭೀರ ಅಂತ ಅನ್ನಿಸಲೇ ಇಲ್ಲ. ಆದರೆ ಈಗ ಯೋಚಿಸುವಾಗ ಎಂತಹಾ ಒಂದು ಅದ್ಭುತ ಕಾರ್ಯ ನನ್ನಿಂದ ಆಗಿ ಹೋಗಿದೆ. ಈಗ ನಾನು ಬೇಕೆಂದರೂ ಅದು ಮಾಡುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಅವಕಾಶವೂ ಇರಲಾರದು. ಹೀಗೆ ಆಯಾಚಿತವಾಗಿ ಬಂದ ಒಂದು ಅವಕಾಶ ಬದುಕಿನ ಶ್ರೇಷ್ಠದಿನಗಳಲ್ಲಿ ಒಂದಾಗಿ ದಾಖಲಾಗಿರುವುದು ಸತ್ಯ. 


ಬೋಳಂಗಳದ ಬಗ್ಗೆ ಬಹಳ ಹಿಂದೆ ಬರೆದ ಲೇಖನ ಇಲ್ಲಿದೆ. 

ಬೋಳಂಗಳ




Tuesday, October 25, 2022

ದೈವದ ಅರಿವು

 

       ಕಾಂತಾರ ಚಲನ ಚಿತ್ರ ಎಷ್ಟು ಜನ ನೋಡಿಲ್ಲ? ನಾಯಕ ಕನಸಿನಿಂದ ಪ್ರಚೋದನೆಗೊಳ್ಳುತ್ತಾನೆ. ಭೂತ ಅಂದರೆ ದೈವ ಪ್ರತ್ಯಕ್ಷವಾಗುತ್ತದೆ. ಎಲ್ಲವೂ ನೈಜ ಘಟನೆ ಎಂಬಂತೆ  ಭಾಸವಾಗುತ್ತದೆ. ಇಲ್ಲೂ ಒಂದು ಅಧ್ಯಾತ್ಮದ ಸಂದೇಶವಿದೆ. ಭಗವಂತ ಅಥವಾ  ದೇವರು ಅದು ಎಲ್ಲೂ ಕಾಣಿಸುವುದಿಲ್ಲ. ಅದು ನಮ್ಮ ಅನುಭವ ಮಾತ್ರ. ಕನಸಿನಂತೆ  ಮನಸ್ಸು ಅನುಭವಿಸುತ್ತದೆ. ಅದರೆ ಅದು ಸತ್ಯವಾಗಿರುವುದಿಲ್ಲ.  ನಾವು ಕಾಣುವ ಕನಸು,  ಇದು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ತಮಗೆ ಬೇಕಾದ ಕನಸು ಯಾರೂ ಎಂದಿಗೂ ಕಾಣುವುದಕ್ಕೆ ಸಾಧ್ಯವಿಲ್ಲ. ಹಾಗಾದರೆ ಈ ಕನಸನ್ನು ತೋರಿಸುವವನು ಯಾರು? ಅದೇ ರೀತಿ ನಮ್ಮ ಭಯ. ಮನಸ್ಸು ಭಯಗೊಳ್ಳುತ್ತದೆ. ನಾಯಕನೂ ಭೂತ ಕಂಡು ಬೆಚ್ಚಿ ಬೀಳುತ್ತಾನೆ. ವಾಸ್ತವದಲ್ಲಿ ಅಲ್ಲಿ ಭೂತ ಕಣ್ಣೆದುರಿಗೆ ಇರುವುದಿಲ್ಲ. ಅದೊಂದು ದಿವ್ಯ ಅನುಭವ ಮಾತ್ರ.


          ಭಗವಂತನ ಅಸ್ತಿತ್ವ ಇರುವುದು ನಮ್ಮ ಅನುಭವದಲ್ಲಿ. ಯಾವುದೇ ಅನುಭವವಾಗಿರಬಹುದು. ಪ್ರತ್ಯಕ್ಷವಾಗಿ ದೇವರು ಎಂದೂ ಕಾಣಿಸಲಾರ. ಒಂದು ವೇಳೆ ಕಾಣಿಸಿದರೆ ಅವನು  ಭಗವಂತನಾಗಲಾರ. ನಮಗಾದ ಅನುಭವವನ್ನು ನಾವು ಹೇಳುತ್ತೇವೆ. ಬಿಸಿಯಾದ ಕಬ್ಬಿಣದ ಬಿಸಿಯ ಅನುಭವವಾಗಬೇಕಿದ್ದರೆ ಮುಟ್ಟಿ ನೋಡಬೇಕು.  ವಿದ್ಯುತ್ ಹರಿವ ತಂತಿ ಅದರಲ್ಲಿರುವ ವಿದ್ಯುತ್ತಿನ ಅರಿವಾಗಬೇಕಾದರೆ ಅದನ್ನು ಮುಟ್ಟಿ ನೋಡಬೇಕು. ಇಲ್ಲ ವಿದ್ಯುತ್ ಉಪಯೋಗಿಸುವ ಉಪಕರಣದ ಸಂಪರ್ಕಕ್ಕೆ ಆ ತಂತಿ ಸಿಕ್ಕಿಬಿಡಬೇಕು. ಯಾರೋ ಹೇಳುತ್ತಾರೆ ಅದರಲ್ಲಿ ವಿದ್ಯುತ್ ಇದೆ. ಅದು ಅವರ ಅನುಭವ. ಮನುಷ್ಯ ತನ್ನೊಳಗಿನ ದೇವರನ್ನು ಸ್ವತಃ ಅರಿತಾಗ ತಾನೂ ದೇವರಾಗುತ್ತಾನೆ.

            ಕಾಂತಾರ ನೋಡಿದಾಗ ಹಳೆಯ ಪ್ರವಚನ ಬಹಳಷ್ಟು ನೆನಪಾಯಿತು. ಪ್ರವಚನದಲ್ಲಿ ದೈವತ್ವ ಅಥವಾ ದೇವರನ್ನು ಅನುಭವಕ್ಕೆ ಸಮೀಕರಿಸುತ್ತಾರೆ. ದೇವರು ಎಂದಿಗೂ ಬರುವುದಿಲ್ಲ. ಬಂದ ಅನುಭವ ಮಾತ್ರ ನಮ್ಮದಾಗುತ್ತದೆ. ಆ ಅನುಭವ ಅರಿಯ ಬೇಕಿದ್ದರೆ ಮನಸ್ಸು ಎಲ್ಲವನ್ನು ಮೀರಿ ನಿಲ್ಲಬೇಕು. ಕತ್ತಲೆಯ ಕೋಣೆಯೊಳಗೆ ಹೋಕ್ಕಿದಾಗ, ಬಲ್ಬನ್ನು ಎಲ್ಲರೂ  ತೋರಿಸಬಹುದು. ಬಲ್ಪು ನೋಡಿದರೆ ಬೆಳಕು ಸಿಗುವುದಿಲ್ಲ. ಬಲ್ಬ್ ತೋರಿಸಿದಂತೆ ಅದರ ಸ್ವಿಚ್ ನ್ನು ತೋರಿಸಬೇಕು. ಬಲ್ಪ್ ಎಲ್ಲರೂ ತೋರಬಹುದು, ಆದರೆ ಸ್ವಿಚ್ ನ್ನು  ತೋರಿಸುವರು ಇರುವುದಿಲ್ಲ. ಸ್ವಿಚ್ ಹಾಕಿದರೆ ಬಲ್ಪು ಉರಿಯುತ್ತದೆ. ಆಗ ವಿದ್ಯುತ್ ಇರಬೇಕು. ಅಂದರೆ ಯೋಗ ಇರಬೇಕು. ಅದಕ್ಕೇ ದೈವ ದರ್ಶನದ ಹಾದಿ ಅತ್ಯಂತ ದುರ್ಗಮ.

         ಒಂದು ಕತ್ತೆಗೆ ಒಂದು ಬಡಿಗೆ ಕಟ್ಟಿ ಬಡಿಗೆಯ ತುದಿಗೆ ಹುಲ್ಲನ್ನು ಕಟ್ಟಿದ ಚಿತ್ರವನ್ನು ಕಂಡಿರಬಹುದು. ಅದು ಕತ್ತೆ. ಅದಕ್ಕೆ ಬುದ್ದಿಯ ಅರಿವಿಲ್ಲ. ಒಂದು ನಾಯಿಗೂ ಇದೇ ರೀತಿ ಒಂದು ಬಡಿಗೆಯನ್ನು ಕಟ್ಟಿ ಅದರ ತುದಿಗೆ ಏನಾದರೂ ತಿನಿಸು ಇಟ್ಟರೆ, ಕತ್ತೆಯಾಗಲೀ ನಾಯಿಯಾಗಲೀ ಅದನ್ನು ತಿನ್ನುವುದಕ್ಕೋಸ್ಕರ ಬಡಿಗೆಯ ತುದಿಯನ್ನೇ ನೋಡುತ್ತಾ ಮುಂದೆ ಮುಂದೆ ಹೋಗುತ್ತದೆ. ವಾಸ್ತವದಲ್ಲಿ ಈ ತಿನಿಸನ್ನು ನಾನೇ ದೂರ ತಳ್ಳುತ್ತಾ ಇದ್ದೇನೆ ಎಂದು ಅದಕ್ಕೆ ಅರಿವಿರುವುದಿಲ್ಲ ! ಅದು ಮುಂದೆ ಹೋದಂತೆಲ್ಲಾ ತಿನ್ನುವ ಆಹಾರ ಮುಂದಕ್ಕೆ ಸೆಳೆಯಲ್ಪಡುತ್ತದೆ. ಇದೂ ಅಷ್ಟೇ ಆ ಸೆಳೆತಕ್ಕೆ ಒಳಗಾಗುತ್ತದೆ. ವಾಸ್ತವದಲ್ಲಿ ಅಲ್ಲಿರುವ ಆಹಾರವನ್ನು ಅದೇ ಹಿಡಿದುಕೊಂಡಿರುತ್ತದೆ.   ಹೀಗೆ  ಭಗವಂತ ಅಥವಾ ಪರಮಾತ್ಮ ನಮ್ಮೊಳಗೆ ಇರುತ್ತಾನೆ. ನಾವು ಎಲ್ಲೋ ಹುಡುಕುತ್ತಾ ಮುಂದೆ ಮುಂದೆ ಹೋಗುತ್ತಾ ಇರುತ್ತೇವೆ. ನಾವು ಮುಂದೆ ಮುಂದೆ ಹೋದಂತೆ ದೇವರೂ ಮುಂದೆ ಮುಂದೆ ಕೈಗೆ ಕಣ್ಣಿಗೆ ಸಿಗದಂತೆ  ಹೋಗುತ್ತಾನೆ. ನಮ್ಮ ಅಂತರಾತ್ಮದಲ್ಲಿರುವ  ಪರಮಾತ್ಮನನ್ನು ನಾವು ಗುರುತಿಸುವುದಿಲ್ಲ. ಹೊರಗೆಲ್ಲೋ ಹುಡುಕುತ್ತೇವೆ ಹಿಂಬಾಲಿಸುತ್ತೇವೆ, ಕತ್ತೆ ನಾಯಿಯಂತೆ ಅರಿವಿಲ್ಲದೆ.  ಕಾಂತಾರದ ನಾಯಕನಿಗೂ ಇದೇ ಅನುಭವ. ಕೊನೆಗೆ ಆತ ದೇವರಾಗುವುದು . ಇದೇ ಅನುಭವದಲ್ಲಿ. ಆಗಲೇ ನಾಯಕ ಬಂದು ಹೇಳುತ್ತಾನೆ ನಾನು ಪರಿಶುಧ್ದಿಯಾದೆ. ಮಳೆಯಿಂದ ನೀರಲ್ಲಿ‌ಮುಳುಗಿ ಶುಧ್ದವಾಗುವುದು ಬೇರೆ,  ಅಂತರಂಗದಿಂದ ಶುದ್ಧವಾಗುವುದು ಪರಿಪೂರ್ಣತೆ. ದೇಹಕ್ಕೆ ನೀರೆರೆದು ಸ್ನಾನ ಮಾಡಿದರೆ ದೇಹ ಶುದ್ದೀಕರಣವಾಯಿತು. ತಂಬಿಗೆಯನ್ನು ಹೊರಗಿಂದ ತೊಳೆದು ಇಟ್ಟಂತೆ, ಅದರಲ್ಲಿ ಹಾಲು ಹಾಕಬೇಕಾದರೆ ಪಾತ್ರೆಯನ್ನು ಒಳಗಿನಿಂದ ತೊಳೆಯಬೇಕು. ಪರಿಶುದ್ದತೆ ಎಂದರೆ ದೈವ ಸಾನ್ನಿಧ್ಯ.

         ನಾಯಕ ತನ್ನೊಳಗಿನ ದೇವರನ್ನು ಕಂಡಾಗ ಆತ ದೈವವೇ ಆಗಿ ಬದಲಾಗುತ್ತಾನೆ. ದೈವತ್ವ ಅದು ಹೊರಗೆಲ್ಲೂ ಇರುವುದಿಲ್ಲ. ಯಾವ ದೇವಾಲಯದಲ್ಲೂ ಇರುವುದಿಲ್ಲ. ಅದು ನಮ್ಮೊಳಗೆ ಇರುತ್ತದೆ. ಹೊರಗೆಲ್ಲ ಇರುವುದು ಬಡಿಗೆ ಅಂದರೆ ಮಾಧ್ಯಮ. ನಾವು ಅದನ್ನು ಗುರುತಿಸದೇ ಇದ್ದರೆ ಜೀವನ ಪರ್ಯಂತ ದೇವರ ದರ್ಶನವಾಗುವುದಕ್ಕೆ ಸಾಧ್ಯವಿಲ್ಲ. ಇದುವೆ ಅಂತರಂಗ ದರ್ಶನ. ತನ್ನ ಬಗಲಲ್ಲೇ ಪರಮಾತ್ಮನಿದ್ದರೂ ಅದನ್ನು ಗುರಿತಿಸದವನು ಹೊರಗೆಲ್ಲೋ ಹುಡುಕಿ ಸಿಗದೆ ಆದಾಗ ತನಗೆ ಹೇಳಿಕೊಳ್ಳುವುದು ಕಲಿಯುಗದಲ್ಲಿ ದೇವರು ಕಾಣುವುದಿಲ್ಲ. ತನ್ನ ಅನುಭವ ಏನಿದೆಯೋ ಅದೇ ಎಲ್ಲರ ಅನುಭವ ಎಂದು ತಿಳಿದುಕೊಳ್ಳುವುದು.

            ಕಾಡಿನಲ್ಲಿದ್ದ ಮಂಗನನ್ನು ಬಲವಂತದಿಂದ ಹಿಡಿದು ತಂದು ಮನುಷ್ಯ ಕಟ್ಟಿ ಹಾಕುತ್ತಾನೆ.  ಒಂದು ದಿನ ಮನುಷ್ಯ ಕರುಣೆ ತೋರಿ ಬಂಧ ಮುಕ್ತ ಗೊಳಿಸಿ ಮಂಗನನ್ನು ಕಾಡಿಗೆ ಬಿಟ್ಟು ಬಿಡಬಹುದು. ಆದರೆ ಉಳಿದ ಮಂಗಗಳು ಆವಾಗ ಅದನ್ನು ಸೇರಿಸುವುದಿಲ್ಲ. ಹೊಡೆದು ಕೊಂದು ಹಾಕಿಬಿಡುವ ಪ್ರಮೇಯವೂ ಇರುತ್ತದೆ. ಯಾಕೆಂದರೆ ಅದುವರೆಗೆ ಆ ಮಂಗ ಮನುಷ್ಯನ ಸಹವಾಸದಲ್ಲಿತ್ತು!   ಮನುಷ್ಯನ ಸಹವಾಸ ಎಷ್ಟು ಕೆಟ್ಟದು ಎಂದು ಪ್ರಾಣಿಗಳು ಈ ಮೂಲಕ ತೋರಿಸಿಕೊಡುತ್ತವೆ.  ಜಗತ್ತಿನಲ್ಲಿ ಮನುಷ್ಯನಷ್ಟು ಸುಳ್ಳು ಹೇಳುವ ಪ್ರಾಣಿ ಇನ್ನೊಂದಿಲ್ಲ. ಕಾಗೆ ಒಂದು ಅಗುಳು ಕಂಡರೆ ಮಾತ್ರ ತನ್ನ ಬಳಗವನ್ನು ಕರೆಯುತ್ತದೆ. ಅದು ಎಂದಿಗೂ ಸುಳ್ಳು ಹೇಳುವುದಿಲ್ಲ. ಪ್ರಾಣಿ ಪಕ್ಷಿಗಳು ಎಂದಿಗೂ ಸುಳ್ಳು ಹೇಳುವುದಿಲ್ಲ. ಮನುಷ್ಯ ಮಾತ್ರ ಸುಳ್ಳು ಹೇಳುತ್ತಾನೆ. ಯಾಕೆಂದರೆ ಸತ್ಯದಿಂದ ದೂರವಾಗುವುದನ್ನು ಆತ ಕಾಣುತ್ತಾನೆ. ಸತ್ಯ ಅಂದರೆ ಏನು ಅದೇ ಭಗವಂತ. ದೇವರಿಗೆ ಏನೇನೋ ಅಲಂಕಾರ ಮಾಡಿ ಚಿನ್ನ ಬೆಳ್ಳಿಯ ಕವಚ ಪ್ರಭಾವಳಿ ಹೀಗೆ ಆಡಂಬರದಿಂದ ಭಗವಂತನನ್ನು ಕಾಣುತ್ತೇವೆ. ನಾವು ನಿಜಕ್ಕೂ ಭಗವಂತನನ್ನು ಕಾಣುವುದಿಲ್ಲ. ಕೇವಲ ಆಡಂಬರವನ್ನುಕಂಡು ಅನುಭವಿಸುತ್ತೇವೆ.  ನಮ್ಮ ಮನಸ್ಸಿಗೆ ನಾವು ಸುಳ್ಳನ್ನೇ ಹೇಳಿಬಿಡುತ್ತೇವೆ.  ಪ್ರವಚನ ಒಂದರಲ್ಲಿ ವಿದ್ವಾಂಸರು ಹೇಳಿದ ಮಾತು, ವರ್ಷಕ್ಕೊಮ್ಮೆ ಗಣೇಶನನ್ನು ತಂದು ಕೂರಿಸುತ್ತೇವೆ. ಪೂಜೆ ಮಾಡುತ್ತೇವೆ. ಆದರೆ ಕೊನೆಗೆ ನೀರಿಗೆ ಹಾಕುವಾಗ ಕೇಕೆ ಹಾಕಿ ಕುಣಿದು ಕುಪ್ಪಳಿಸುತ್ತೇವೆ. ನಿಜಕ್ಕು ಇದು ಯಾಕೆ ಎಂದೆ ಅರಿವಾಗುವುದಿಲ್ಲ. ಯಾಕೆ ನಾವು ದೇವರಿಂದ ದೂರವಾಗುವುದನ್ನು ಸಂಭ್ರಮಿಸುತ್ತೇವೆ?
ಪೂಜೆಗೆ ಸ್ನಾನ‌ ಮಾಡಿ ಮಡಿಉಟ್ಟು ತಯಾರಾಗುತ್ತೇವೆ. ಆದರೆ ಮನಸ್ಸು!!  ಆ ಪೂಜೆಯನ್ನು ಮುಗಿಸಿ ಮಡಿಯನ್ನು ಕಳಚಿ ಸಹಜ ಸ್ಥಿತಿಗೆ ಬರಲು ಹಾತೊರೆಯುತ್ತದೆ. ಪರಿಶುಧ್ದತೆ ಎಂಬುದೇ ಅಸಹಜವಾಗಿ ಭಾಸವಾಗುತ್ತದೆ. ಪರಿಶುಧ್ದತೆ ಎಂಬುದೇ ಪರಮಾತ್ಮ. ಪರಿಶುದ್ಧ ಮನಸ್ಸು ಅದರ ಸಂಕೇತ.

           ಗಣ್ಯದಲ್ಲೂ ಶೂನ್ಯದಲ್ಲೂ ಭಗವಂತನಿದ್ದಾನೆ. ಹುಣಿಸೇ ಬೀಜ, ಚಿಕ್ಕದಾಗಿ ಬೆರಳ ತುದಿಯ ಗಾತ್ರದಲ್ಲಿರುತ್ತದೆ. ನಮ್ಮೂರಲ್ಲಿ ಇದಕ್ಕೆ ಅಡ್ಡ ಹೆಸರು ಇದೆ ’ಪುಳಿಂಕಟೆ’. ಕೇಳುವುದಕ್ಕೆ ವಿಚಿತ್ರವಾಗಿದೆ. ಕೈಯಲ್ಲಿ ಏನೂ ಇಲ್ಲದಾಗ ಹೇಳುವ ಮಾತುಂಟು....ಕೈಯಲ್ಲಿ ಏನುಂಟು ಪುಳಿಕಂಟೆಯೂ ಇಲ್ಲ. ಅವನಲ್ಲಿ ಎಂತ ಇರುವುದು ಪುಳಿಕಂಟೇಯಾ? ಹೀಗೆ ಏನೂ ಇಲ್ಲದ ಒಂದು ನಿಕೃಷ್ಟ ಸ್ಥಿತಿಯನ್ನು ಇದಕ್ಕೆ ಹೋಲಿಸಿ ಹೇಳುವುದುಂಟು.  ಆ ಹುಣಿಸೆ ಹಣ್ಣಿನ ಒಳಗೆ ಬೀಜ ಇರುತ್ತದೆ. ಬೀಜಕ್ಕೆ ಒಂದು ಸಿಪ್ಪೆ ಇರುತ್ತದೆ. ಆ ಸಿಪ್ಪೆಯನ್ನು ತೆಗೆದು ನೋಡಿದಾಗ ಒಳಗೆ ಒಂದು ತಿರುಳು ಇರುತ್ತದೆ. ಮತ್ತೂ ಅದನ್ನು ಗುದ್ದಿ ತೆರೆದರೆ ಒಳಗೆ ಏನೂ ಇಲ್ಲ. !! ಏನೂ ಇಲ್ಲದ ನಿಕೃಷ್ಟವಾಗಿರುವ ಬೀಜದಲ್ಲಿ ಅಷ್ಟು ದೊಡ್ಡ ಹುಣಿಸೆ ಮರ ಅಲ್ಲಿ ಹುಟ್ಟಿಕೊಳ್ಳುವುದಾದರೂ ಹೇಗೆ? ಪ್ರಕೃತಿ ವಿಸ್ಮಯ.  ಸಮುದ್ರದ ಬದಿಯಲ್ಲಿ ನಿಂತು ನೋಡಿದರೆ ಕಣ್ಣು ಹಾಯುವಷ್ಟು ದೂರವೂ ನೀರು ಬರೇ ನೀರನ್ನೇ ಕಾಣುತ್ತೇವೆ. ನಮ್ಮ ಕಣ್ಣಿಗೆ ಎಟುಕದಷ್ಟೂ ದೂರದಲ್ಲೂ ಇರುವುದು ನೀರು. ಅಷ್ಟು ನೀರು ಬರೀ ಉಪ್ಪು. ನೀರು ಕಾಣುತ್ತದೆ. ಉಪ್ಪು ಕಾಣುವುದೇ ಇಲ್ಲ. ಆದರೂ ಉಪ್ಪ ಇರುವುದರ ಅನುಭವ ಅಗುತ್ತದೆ. ಮತ್ತದನ್ನು ನಾವು ನಂಬುತ್ತೇವೆ. ಕಣ್ಣಿಗೆ ಕಾಣುವ ಈ ಪ್ರಕೃತಿಯನ್ನು ಕಣ್ಣಿಗೆ ಕಾಣಿಸದವನು ಮುಂದೆ ಇಟ್ಟಿದ್ದಾನೆ. ಅಷ್ಟಾಗಿಯೂ ಕಣ್ಣಿಗೆ ಕಾಣಿಸುವುದನ್ನು ಮಾತ್ರ ನಾವು ನಂಬುತ್ತೇವೆ.  ಮತ್ತೆ ಹುಡುಕುತ್ತೇವೆ. ನಿಜಕ್ಕಾದರೆ  ಕಣ್ಣಿಗೆ ಕಾಣದ ಶಕ್ತಿಯಿಂದ ಕಣ್ಣಿಗೆ ಕಾಣುವ ಈ ಪ್ರಪಂಚ ಸೃಷ್ಟಿಯಾಗಿದೆ.
ಕಾಂತಾರದಲ್ಲಿ ಪೋಲೀಸಪ್ಪನೊಬ್ಬನಿದ್ದಾನೆ..ಮೊದಲಿಗೆ ಆತ ಖಳನಂತೆ ಮೇಲೆರಗುತ್ತಾನೆ. ನಂತರ ಭೂತದ ಮಹಿಮೆ ಇಲ್ಲಾ ಭಯದಿಂದ ಸಾತ್ವಿಕನಾಗುತ್ತಾನೆ ಇರಬೇಕು. ಇಲ್ಲೂ ಆತನಿಗೆ ಆಗುವುದು ಅನಭವ. ಆ ಅನುಭವವನ್ನು ದೈವ ಹುಟ್ಟಿಸುತ್ತದೆ. ಭಯ ಭಕ್ತಿಯನ್ನು ಹುಟ್ಟಿಸುತ್ತದೆ, ಭಕ್ತಿ ಸಾತ್ವಿಕತೆಯ ಜ್ಞಾನವನ್ನು ಅರಿವನ್ನೂ ಹುಟ್ಟಿಸುತ್ತದೆ. ಆದರೂ ಭಕ್ತಿ ಎಂದರೇನು ಎಂದು ಯೋಚಿಸುವಂತಾಗುತ್ತದೆ. ಭಕ್ತಿಯ ಬಗ್ಗೆ ಯೋಚಿಸುವಾಗ ಅದು ಮತ್ತಷ್ಟು ವಿಶಾಲವಾಗುತ್ತದೆ.
ಭಯದಿಂದ ಭಕ್ತಿ ಹುಟ್ಟಬಹುದು. ಭಯ ಭಕ್ತಿಯಾಗುವುದು  ಒಂದು ಪರಿವರ್ತನೆ ಯಾಗಬಹುದು, ಆದರೆ ಭಯ ಶಾಶ್ವತವಾದರೆ ಭಕ್ತಿ ಪ್ರಾಮಾಣಿಕವಾಗುವುದಿಲ್ಲ.  ಭಯ ದೂರವಾದಾಗ ಭಕ್ತಿಯೂ ದೂರವಾಗುತ್ತದೆ. ಭಕ್ತಿ ದೂರವಾದರೆ ಮತ್ತೆ ಪರಿವರ್ತನೆಗೆ ಮೌಲ್ಯ ಸಿಗುವುದಿಲ್ಲ. ಪಾಪಭಯ ಇರಬೇಕು ಸತ್ಯ.  ಆದರೆ ಭಕ್ತಿ ಭಯಮುಕ್ತವಾಗಬೇಕು.‌

         ಬೆಟ್ಟ ಗುಡ್ಡಗಳನ್ನು ಹತ್ತುವಾಗ ಉಕ್ಕುವ ಪರಮಾತ್ಮನ‌ ಭಕ್ತಿ ‌ ಬೆಟ್ಟ ಇಳಿದಾಗ ಭಕ್ತಿಯೂ ದೂರವಾಗುವುದನ್ನು ಕಾಣಬಹುದು. ಗುಡಿಯ ಮುಂದೆ ಪ್ರತಿಮೆಯ ಮುಂದೆ ನಿಲ್ಲುವಾಗ ಮಾತ್ರ ಮೂಡಿದ ಭಕ್ಕಿ ಹೊರ ಬಂದಾಗ ತೀರ ವ್ಯಾವಹಾರಿಕವಾಗುತ್ತದೆ. ಹಲವುಸಲ ನಾಗನ‌ ಕಲ್ಲು ನೋಡಿದಾಗ ಹುಟ್ಡುವ ಭಕ್ತಿ ನಿಜವಾದ ನಾಗನನ್ನು ನೋಡಿದಾಗ ಭಯ ಮಾತ್ರವೇ ಉಳಿಯುತ್ತದೆ.  ದೇವರ ಎದುರು ನಿಂತಾಗ ಮಾತ್ರಾ ಪರಮ‌ ಧಾರ್ಮಿಕನಾಗಿ ಧರ್ಮ‌ ಜಾಗೃತವಾಗುತ್ತದೆ. ಹೊರಬಂದಾಗ ಮತ್ತದೇ ವ್ಯವಹಾರ ಸುಳ್ಳನ್ನು ಹೇಳಿಸಿ ವಂಚನೆಯನ್ಯ ಪ್ರಚೋದಿಸುತ್ತದೆ. ಜೀವನ ಎಂದರೆ ವ್ಯಾಪಾರ ಎಂದು ಹೇಳುತ್ತಾರೆ. ವ್ಯಾಪಾರ ಎಂದರೆ ಅಲ್ಲಿ ಸುಳ್ಳು ವಂಚನೆ ಇದ್ದೇ ಇರುತ್ತದೆ. ಲಾಭವಿದ್ದರೆ ಮಾತ್ರ ವ್ಯಾಪಾರ.  ಲೌಕಿಕತೆ ಭಕ್ತಿ ಯನ್ನು ದೂರವಿಡುತ್ತದೆ.  ಭಕ್ತಿ ಪರಿಶುಧ್ಧಿಯನ್ಮು ತಂದು ಪಾವಿತ್ರತೆಯತ್ತ ಒಯ್ಯಬೇಕು. ಮತ್ತೂ ಪಾಪಗಳಿಗೆ ದುರಿತಗಳಿಗೆ ವಶವಾದರೆ ಭಯದಿಂದ ಹುಟ್ಟಿದ ಭಕ್ತಿಯ ಅಗತ್ಯವನ್ನು ಪ್ರಶ್ನಿಸುತ್ತದೆ.

           ದೇವರು ಎಂದರೆ ನಾವು ಭಯವನ್ನು ಹುಟ್ಟಿಸುತ್ತೇವೆ. ದೇವರು ಶಪಿಸಬಹುದು ಎಂಬ ಭಯದಲ್ಲಿ ಹುಟ್ಟಿದ ಭಕ್ತಿ ಕೇವಲ ಭಯವನ್ನು ಮಾತ್ರಾ ಹೆಚ್ಚಿಸಿದರೆ  ಭಕ್ತಿ ಪರಿಪೂರ್ಣವಾಗುವುದಿಲ್ಲ. ಶಪಿಸುವ ದೇವರು ಎಂದೂ ದೇವರಲ್ಲ. ಗೌರವ ಮತ್ತು ಪ್ರೀತಿ ಎರಡೂ ನೋಡುವುದಕ್ಕೆ ಒಂದೇ ಇರಬಹುದು ಅದರೆ ಎರಡಕ್ಕೂ ವೆತ್ಯಾಸವಿದೆ. ಅಮ್ಮನ ಮೇಲೆ ನಮಗೆ ಗೌರವಕ್ಕಿಂತ ಹೆಚ್ಚು ಪ್ರೀತಿ ಇದೆ. ಆ ಪ್ರೀತಿ ಸಲುಗೆಯಾಗಿ ಭಕ್ತಿ ಎಂಬುದು ಇಲ್ಲಿ ಭಯದಿಂದ ಮುಕ್ತವಾಗಿರುತ್ತದೆ. ಭಕ್ಕಿಯ ಭಾವದಲ್ಲಿ ನಮ್ಮೊಳಗಿನ ದೈವದ ಅರಿವಾಗಬೇಕು. ಒಳಗಿನ ದೇವರನ್ನು ಅರಿತಾಗ ಮನುಷ್ಯನೂ ದೇವರಾಗುತ್ತಾನೆ. ಇದೇ ಕಾಂತಾರದ ನವಿರಾದ ತತ್ವ.
ದೇವರು ಸರ್ವಂತರ್ಯಾಮಿ  ಜ್ಞಾನದಲ್ಲೂ ಅಜ್ಞಾನದಲ್ಲೂ ಇರುತ್ತಾನೆ‌ ದೈವದ ಬಗ್ಗೆ ಯೋಚಿಸುವುದೇ ತಪಸ್ಸು.. ದೈವದ ಅರಿವೆ ಗಮ್ಯ.
      ಭಕ್ತಿ ಸ್ತಾಯಿಯಾಗಿ ಉಳಿಯಬೇಕಾದರೆ ಭಯ ದೂರವಾಗಬೇಕು. ಭಕ್ತಿ ಹೆಚ್ಚು ಹೃದಯಸ್ಪರ್ಶಿಯಾಗಬೇಕು. ಭಯವಿಲ್ಲದ ಪರಮಾತ್ಮ ಸ್ನೇಹಿತನಂತೆ ಬಳಿಯಲ್ಲೇ ಇರುತ್ತಾನೆ.

Tuesday, October 18, 2022

ಯಾವುದು ಸತ್ಯ?


    ಸತ್ಯ ಎನ್ನುವಾಗ  ಸತ್ಯ ಹರಿಶ್ಚಂದ್ರ ಮಾತ್ರಾ ಯಾಕೆ ನೆನಪಾಗುತ್ತಾನೆ? ಸತ್ಯದ ಮಾತೆತ್ತುವಾಗ ಸತ್ಯಹರಿಶ್ಚಂದ್ರನ ಹೆಸರೇ ಯಾಕೆ ಅನ್ವರ್ಥವಾಗುತ್ತದೆ. ಯಕ್ಷಗಾನ ಅರ್ಥಗಾರಿಕೆಯಲ್ಲಿ ಹೀಗೊಂದು ಜಿಜ್ಞಾಸೆ ವಿದ್ವಾಂಸರು ಮಾಡಿದ್ದನ್ನು ಕೇಳಿದ್ದೇನೆ. ಬಹಳ ಸ್ವಾರಸ್ಯವಾಗುತ್ತದೆ. ಲೋಕದಲ್ಲಿ ಅತ್ಯಂತ ಸತ್ಯವಂತ ಯಾರು ಎಂದು ದೇವೇಂದ್ರ     ನಾಕಲೋಕದಲ್ಲಿ ಪ್ರಶ್ನಿಸುತ್ತಾನೆ. ಎದ್ದು ನಿಂತ ವಸಿಷ್ಠ ಮುನಿಗಳು ಹೇಳುತ್ತಾರೆ ಅತ್ಯಂತ ಸತ್ಯವಂತ ಅದು ಮಹಾರಾಜ ಹರಿಶ್ಚಂದ್ರ.  ಇಲ್ಲಿ ಅಂತರಂಗದಲ್ಲಿ ಮತ್ತೊಂದು ಪ್ರಶ್ನೆ ಉದ್ಭವವಾಗುತ್ತದೆ. ಅತ್ಯಂತ ಸತ್ಯವಂತರ ಪಟ್ಟಿಯಲ್ಲಿ ವಸಿಷ್ಠರು ತಮ್ಮ ಹೆಸರು ಯಾಕೆ ಹೇಳುವುದಿಲ್ಲ? ವಸಿಷ್ಠರು ಸುಳ್ಳು ಹೇಳಿರಬಹುದೇ? ವಸಿಷ್ಠರ ಉತ್ತರಕ್ಕೆ ವಿಶ್ವಾಮಿತ್ರ ಕನಲಿ ಕೆಂಡವಾಗುತ್ತಾರೆ. ವಸಿಷ್ಠರು ಹಾಲು ಎಂದರೆ ನೀರು ಎನ್ನುವ ವಿಶ್ವಾಮಿತ್ರರು  ಹರಿಶ್ಚಂದ್ರನನ್ನು ಸುಳ್ಳುಗಾರನನ್ನಾಗಿ ಮಾಡುವ ಪ್ರತಿಜ್ಞೆ ತೊಡುತ್ತಾರೆ.  ವಸಿಷ್ಠರು ಒಂದು ವೇಳೆ ವಿಶ್ವಾಮಿತ್ರರ ಹೆಸರನ್ನು ಹೇಳಿದ್ದರೆ?  ಅದನ್ನು ಸತ್ಯ ಎಂದು ಒಪ್ಪಿಕೊಳ್ಳುತ್ತಿದ್ದರೋ ಎನೋ? ಆದರೆ ಹರಿಶ್ಚಂದ್ರನನ್ನು ಸುಳ್ಳುಗಾರನನ್ನಾಗಿ ಮಾಡುವುದರಲ್ಲಿ ಅವರ ಉದ್ದೇಶ ಒಂದೇ ವಸಿಷ್ಠರನ್ನು ಸುಳ್ಳುಗಾರನನ್ನಾಗಿ ಮಾಡುವುದು. ಇಲ್ಲವಾದರೆ ಹರಿಶ್ಚಂದ್ರ ಸತ್ಯವಂತನಾಗಿರುವುದರಲ್ಲಿ ಅವರಿಗೆ ಯಾವ ತೊಂದರೆಯೂ ಇಲ್ಲ. ಹೇಳಿ ಕೇಳಿ ಹರಿಶ್ಚಂದ್ರ ಯಾರು? ಇವರ ಸಂಕಲ್ಪ ದೇವೆಂದ್ರನಾದ ತ್ರಿಶಂಕು , ಸತ್ಯವೃತನ ಮಗ.  ವಸಿಷ್ಠರು ಸತ್ಯವೇ ಹೇಳಿರಬಹುದು. ಆದರೆ ಸತ್ಯ ಯಾವಾಗಲೂ ಪರೀಕ್ಷಿಸಲ್ಪಡಬೇಕು. ಸತ್ಯವನ್ನೇ ಪರೀಕ್ಷಿಸ ಬೇಕು. ಸುಳ್ಳನ್ನು ಪರೀಕ್ಷೆ ಮಾಡಿದರೆ ಏನು ಪ್ರಯೋಜನ? ಚಿನ್ನವನ್ನಷ್ಟೇ ಉಜ್ಜಿ ಉಜ್ಜಿ ಪರೀಕ್ಷೆ ಮಾಡುತ್ತಾರೆ. ಕಬ್ಬಿಣವನ್ನಲ್ಲ. ಯಾಕೆಂದರೆ ಚಿನ್ನವನ್ನು ಉಜ್ಜಿದರೆ, ಉಜ್ಜುವುದರಲ್ಲೆ ಸ್ವಲ್ಪ ಲಾಭವಿದೆ? ವಿಶ್ವಾಮಿತ್ರರ ದೂರದೃಷ್ಟಿ ಅದು. ಮುಂದೊಮ್ಮೆ ಹರಿಶ್ಚಂದ್ರನಿಗೆ ಒಂದು ಅಂಗೀಕಾರವಿರುತ್ತದೆ. ವಿಶ್ವಾಮಿತ್ರನಿಂದ ಪರೀಕ್ಷಿಸಲ್ಪಟ್ಟ ಸತ್ಯ.... ವಸಿಷ್ಠರು ಮೊದಲೇ ಅಂಗೀಕಾರ ನೀಡಿದ್ದರೂ ಅದಕ್ಕೆ ಮೌಲ್ಯವಿರುವುದೇ ಇಲ್ಲ! 

    ಹರಿಶ್ಚಂದ್ರ ಮಾತ್ರ ಯಾಕೆ ಸತ್ಯವಂತನಾಗುತ್ತಾನೆ. ಧರ್ಮ ರಾಯ ಯಾಕಲ್ಲ? ವಿಶ್ವಾಮಿತ್ರನ ಜಿಜ್ಞಾಸೆಗೆ ಆಗ ಧರ್ಮರಾಯ ಹುಟ್ಟದೇ ಇದ್ದಿರಬಹುದು. ಆದರೂ ಮಹಾ ಸತ್ಯವಂತ ಧರ್ಮರಾಯನ ಸತ್ಯ ಎಂದಿಗೂ ಪರೀಕ್ಷಿಸಲ್ಪಡುವುದಿಲ್ಲ. ಯಾವ ಮಹಾನುಭಾವನಿಗೂ ಅನುಮಾನ ಉಳಿಯುವುದಿಲ್ಲ. ಯಾಕೆಂದರೆ ಧರ್ಮರಾಯ ಹೇಳಿದ್ದನ್ನು ಸತ್ಯವನ್ನಾಗಿಸುವುದರಲ್ಲಿ ಶ್ರೀಕೃಷ್ಣನೊಬ್ಬನಿದ್ದ. ಇಲ್ಲವಾದರೆ ದ್ರೋಣ ಯಾಕೆ ಮೋಸ ಹೋಗುತ್ತಾನೆ. ತಾನೆ ಕಲಿಸಿದ ಶಿಷ್ಯ ವಂಚಿಸಿರಬಹುದೇ?  ಅಶ್ವತ್ಥಾಮ ಸತ್ತ......ಧರ್ಮರಾಯ ಹೀಗೆ ಹೇಳುವುದರಲ್ಲಿ ಯಕ್ಷಗಾನದಲ್ಲಿ ಮತ್ತೊಂದು ವಿಶ್ಲೇಷಣೆ ಇರಬಹುದು. ಕುರುಕ್ಷೇತ್ರದ ಯುದ್ಧದಲ್ಲಿ ಗುರು ದ್ರೋಣರ ಎದುರಾಳಿ ಪಟ್ಟ ಶಿಷ್ಯ ಅರ್ಜುನ. ದ್ರೋಣರಿಂದ  ಮಗನಿಂದಲೂ ಹೆಚ್ಚು ಮಮಕಾರ  ಅರ್ಜುನನಿಗೆ ಸಿಗುತ್ತದೆ. ಅದೇ ಅರ್ಜುನನ ಎದುರು ವೀರಾವೇಶದಿಂದ ಹೋರಾಡುವ ದ್ರೋಣರಿದ್ದರೆ ಮಗನಂತಹ ಅರ್ಜುನ ಸತ್ತಹಾಗೇ ಅಲ್ಲವೇ?  ಈ ಅರ್ಥದಲ್ಲು ಅಶ್ವತ್ಥಾಮ ಸತ್ತ ಎಂದು ಹೇಳುವುದು ಸಮರ್ಥನೀಯ. ಶ್ರೀ ಕೃಷ್ಣ ಒಂದರಿಂದ ಎಂಟರವರೆಗಿನ ಎಲ್ಲ ಸಂಖ್ಯೆಗಳನ್ನೂ ಎಂಟಾಗಿಸಬಲ್ಲ ತರ್ಕಬುದ್ದಿಯವನು. ಹಾಗಾಗಿ ಧರ್ಮರಾಯನ ಸತ್ಯ ಹೀಗೂ ಸಮರ್ಥಿಸಬಹುದು. ಆದರು ಸತ್ಯ ಯಾಕೆ ಪರೀಕ್ಷಿಸ ಬೇಕು ಎಂಬುದಕ್ಕೆ ದ್ರೋಣರು ಹೆಚ್ಚು ನಿದರ್ಶನವನ್ನೊದಗಿಸುತ್ತಾರೆ. ದ್ರೋಣರು ಎಸಗಿದ ದೊಡ್ಡ ಪ್ರಮಾದ ಎಂದರೆ, ಸತ್ಯ ಯಾವುದು ಎಂದು ಅವರು ಕಂಡುಕೊಳ್ಳದಿರುವುದು. ಸತ್ಯವನ್ನು ಅರಿಯದೇ ಇರುವುದು. ಇದು ಎಲ್ಲರೂ ಮಾಡುವ ತಪ್ಪು.! 

    ಸತ್ಯವನ್ನು ಎಲ್ಲರೂ ನಂಬಬೇಕು. ಆದರೆ ಎಡವುದು ಸತ್ಯವನ್ನು ಗುರುತಿಸುವುದರಲ್ಲಿ. ಯಾವುದು ಸತ್ಯ?  ಯಾಕೆಂದರೆ ಸುಳ್ಳು ಕೆಲವೊಮ್ಮೆ ಸತ್ಯವಾಗಬೇಕು. ಶ್ರೀಕೃಷ್ಣ ಮಾಡಿ ತೋರಿಸಿದ್ದೇ ಅದು. ಮಹಾ ವಿಷ್ಣುವಿನ ರಾಮ ಮತ್ತು ಕೃಷ್ಣರ ಅವತಾರ ಎರಡನ್ನೂ ಮುಂದೆ ಇಡುವಾಗ ಮನುಷ್ಯ ಅದನ್ನು ವಿವೇಚಿಸಬೇಕು. ಶ್ರೀರಾಮ ತಂದೆಯ ಮಾತನ್ನು ಸತ್ಯವಾಗಿಸುವುದಕ್ಕೆ ಹೊರಟ. ಅದು ಸತ್ಯವೋ ಸುಳ್ಳೋ ಎಂದು ವಿವೇಚನೆಯಾಗಿ ವಿಮರ್ಷೆಯಾಗಲಿ ಮಾಡುತ್ತ ಕಾಲ ಹರಣ ಮಾಡಲಿಲ್ಲ. ಯಾಕೆ ಕಾಲ ಕಳೆದಂತೆ ಸತ್ಯ ಸುಳ್ಳಾಗಬಹುದು, ಸುಳ್ಳು ಸತ್ಯವಾಗಬಹುದು. ಒಂದಂತು ಸತ್ಯ. ಸತ್ಯ ಹೇಳುವುದಕ್ಕಿಂತಲೂ ಸತ್ಯವನ್ನು ಅರಿಯಬೇಕು. ಅದೇ ಸತ್ಯಾನ್ವೇಷಣೆ. ಯಾವುದು ಸತ್ಯ? ಒಂದು ಕಥೆ ಇದೆ. ಕಾಡಿನಲ್ಲಿ ದರೋಡೆಕೋರರಿಂದ ತಪ್ಪಿಸಿಕೊಂಡ ಒಬ್ಬ ಆರ್ತ, ಓಡುತ್ತಾ ಬಂದು ತಪಸ್ಸಿನಲ್ಲಿದ್ದ ಋಷಿಯ ಆಶ್ರಮದಲ್ಲಿ ಅಡಗಿಕೊಳ್ಳುತ್ತಾನೆ. ಬೆನ್ನಟ್ಟಿ ಬಂದ ದರೋಡೆ ಕೋರರು ಋಷಿಯಲ್ಲಿ ವಿಚಾರಿಸುತ್ತಾರೆ. ಋಷಿ ಸತ್ಯವಂತ. ಸತ್ಯವನ್ನೇ ಹೇಳಿಬಿಡುತ್ತಾನೆ. ದರೋಡೆಕೋರರು ಮತ್ತೆ ಏನು ಮಾಡಿದರು ಎಂದು ಬಿಡಿಸಿ ಹೇಳಬೇಕಿಲ್ಲ. ಒಂದು ಸತ್ಯ ಪ್ರಾಣಕ್ಕೆ ಕುತ್ತು ತರುತ್ತದೆ ಎಂದಾದರೆ ಅದು ಸತ್ಯ ಹೇಗಾಗುತ್ತದೆ?  ಶ್ರೀಕೃಷ್ಣ ಮುಂದಿಡುವ ಪ್ರಶ್ನೆ ಇದು. ಸತ್ಯವೆಂಬುದು ಸತ್ ಅಂದರೆ ಒಳ್ಳೆಯದನ್ನು ಮಾಡುವಂತಿರಬೇಕು. ಉದ್ದೇಶ ಸದುದ್ದೇಶವಾಗಿರಬೇಕು. ಸತ್ ಸಂಕಲ್ಪವಾಗಿರಬೇಕು. ಆವಾಗ ಸತ್ಯ ಸತ್ಯವಾಗುತ್ತದೆ. ಸತ್ಯ ಹೇಳುವುದರಿಂದ ನಮಗೆ ಒಳ್ಳೆಯದಾಗದೇ ಇದ್ದರೂ ಮತ್ತೊಬ್ಬರಿಗೆ ಕೆಟ್ಟದಾಗಬಾರದು ಇದು ಜ್ಞಾನಿಗಳು ಹೇಳುವ ಮಾತು. ಆದರೂ ಸತ್ಯ ಅದೆಂದಿಗೂ ಸತ್ಯವಾಗಿಯೇ ಇರುತ್ತದೆ. ಅದು ಬದಲಾಗುವುದಿಲ್ಲ. ಬದಲಾಗುವುದು ನಮ್ಮ ನಂಬಿಕೆ ಮಾತ್ರ. 

Monday, October 3, 2022

"ಅರ್ಘ್ಯ"

 "ಅರ್ಘ್ಯ"  ಎಂದರೇನು? ಇದರ ಶಬ್ದಾರ್ಥ ತಿಳಿದರೆ ಆಶ್ಚರ್ಯವಾಗುತ್ತದೆ. 

"ಅರ್ಘ್ಯ" ಒಂದು ಪವಿತ್ರವಾದ ಶಬ್ದ.  ಇದನ್ನು ಸ್ಮರಿಸುವಾಗ ಒಂದು ದಿವ್ಯತೆಯ ಮತ್ತು ಪ್ರಕೃತಿಯ ಸಂಬಂಧದ ಬಗ್ಗೆ ಅನುಭವವಾಗುತ್ತದೆ. ಸಾಮಾನ್ಯವಾಗಿ ಅರ್ಘ್ಯ ಎಂದರೆ, ಬೊಗಸೆಯನ್ನು ಸೇರಿಸಿ ಅದರ ತುಂಬ ನೀರನ್ನು ಮೊಗೆದು ಸೂರ್ಯನಿಗೆ ಅಭಿಮುಖವಾಗಿ ಅರ್ಪಿಸುವುದು. ಇದು ಅರ್ಘ್ಯದ ಕ್ರಿಯೆಯನ್ನಷ್ಟೇ ಹೇಳುತ್ತದೆ. 

ಅರ್ಘ್ಯ  ಎಂದರೆ ಮೌಲ್ಯಯುತವಾದದ್ದು, ಆದರು ಅದೂ  ಅಮೂಲ್ಯವಾದದ್ದು ಎಂದು ಅರ್ಥವಿಸಬೇಕು. ಪರಿಮಿತಿಯೊಳಗೆ  ಮೌಲ್ಯ ಕಟ್ಟಲಾಗದೇ ಇದ್ದದ್ದು, ಹೀಗೆ ಮೌಲ್ಯವನ್ನು ಕಲ್ಪಿಸಲು ಆಸಾಧ್ಯವಾಗಿರುವದ್ದು ಕೇವಲ  ನಮ್ಮ ಬೊಗಸೆಯೊಳಗಿದೆ.  ದಾನ ಮಾಡುವಾಗ ನಮ್ಮ ಬೊಗಸೆ ತುಂಬಿಸಿ ಕೊಡುತ್ತೇವೆ.  ಅದು ಅಮೂಲ್ಯವಾಗಿದೆ ಎಂದೇ ತಿಳಿಯಬೇಕು.  ನಮ್ಮ ಬೊಗಸೆ ಅಮೂಲ್ಯವಾದದದ್ದು.  ಪರೋಕ್ಷವಾಗಿ ಇದನ್ನು ಮೀರಿ ನಾವು ಆಡಂಬರವಾಗಿ ವಿಜ್ರಂಭಣೆಯಿಂದ ಏನು ಆಚರಿಸುತ್ತೇವೆಯೋ ಅದು ಈ ಮೌಲ್ಯವನ್ನು ಸರಿದೂಗಿಸುವುದಿಲ್ಲ. ಭಗಂತನ ಹೆಸರಲ್ಲಿ ವಿನಿಯೋಗಿಸುವ ಯಾವುದೇ ಕ್ರಿಯೆಯಾಗಲಿ ಅದು ಭಕ್ತಿ ಶ್ರಧ್ಧೆಯನ್ನು ಪ್ರತಿನಿಧಿಸುತ್ತದೆ, ಹೊರತು ಯಾವುದೂ ಆಡಂಬರವನ್ನು ಬಿಂಬಿಸುವುದಿಲ್ಲ. ಒಂದು ವೇಳೆ ಅಲ್ಲಿ ಆಡಂಬರ ತಂದರೆ ಅದು ಅರ್ಥಹೀನವಾಗುತ್ತದೆ. ಒಂದು ಬೊಗಸೆ ನೀರು ಪ್ರದಾನ ಮಾಡುವಾಗ , ನನ್ನಲ್ಲಿರುವುದೆಲ್ಲಾ ನಿನ್ನದೇ ಎಂದು ಪ್ರತಿನಿಧೀಕರಿಸುವಂತೆ ಅರ್ಘ್ಯ ದಾನ ಅತ್ಯಂತ ಶ್ರೇಷ್ಠವಾಗುತ್ತದೆ. 

ಧನಿಕನಾಗಲೀ ಬಡವನಾಗಲೀ  ಭಗವಂತನಿಗೆ ಪ್ರಣಾಮವನ್ನು ಕೇವಲ ನಮಸ್ಕರಿಸಿಯೇ ಸಲ್ಲಿಸುತ್ತಾನೆ. ನಮಸ್ಕಾರ,   ಬಡವನ ಕೈ ಒಟ್ಟು ಸೇರಿದರೂ ಅದು ನಮಸ್ಕಾರ, ಧನಿಕನ ಕೈ ಒಟ್ಟು ಸೇರಿದರೆ ಅದು ನಮಸ್ಕಾರ ಇಲ್ಲಿ ಆಡಂಬರದ ಅವಶ್ಯಕತೆಯೇ ಇರುವುದಿಲ್ಲ. 

ಬ್ರಹ್ಮ ಸಂಸ್ಕಾರದಲ್ಲಿ ಸಂಧ್ಯಾವಂದನೆ, ಇನ್ನುಳಿದ ಸಂಸ್ಕಾರದಲ್ಲಿ ನಿತ್ಯ ಕರ್ಮಗಳು,  ಇವುಗಳು ಸರಳವಾಗಿ ಆಚರಣೆಯಲ್ಲಿದ್ದರೆ ಅದು ಉದಾತ್ತವಾಗಿ ಪರಮಾತ್ಮನಲ್ಲಿ ಐಕ್ಯವಾಗುವುದಕ್ಕೆ ಅನುಕೂಲವಾಗುತ್ತದೆ.  ಸಂಧ್ಯಾವಂದನೆ, ಯಾವ ಪರಿಕರವೂ ಇಲ್ಲದೇ ಇದನ್ನು ಶುದ್ದ ಮನಸ್ಸಿನಿಂದ ಆಚರಿಸಬಹುದು. ಇದಕ್ಕೆ ಯಾವುದೇ ದ್ರವ್ಯಗಳ ಆವಶ್ಯಕತೆ ಇರುವುದಿಲ್ಲ. ಯಾವುದೇ ಆಡಂಬರ ಇರುವುದಿಲ್ಲ. ಹಾಗಿದ್ದರೂ ಯಾವುದೇ ಶ್ರೇಷ್ಟ ದೈವ ಉಪಾಸನೆಗಿಂತಲೂ ಸಂಧ್ಯಾವಂದನೆ  ಅತ್ಯಂತ ಶ್ರೇಶ್

 ಅನ್ನ ಆಹಾರ, ವೃತ್ತಿ ಹೀಗೆ ಪ್ರತಿಯೊಂದಕ್ಕೂ ಅನಿವಾರ್ಯ ಎಂಬಂತೆ ನಾವು ಸಮಯವನ್ನು ನಿಗದಿಮಾಡುವ ಮೊದಲು ನಿತ್ಯಕರ್ಮಗಳಿಗೆ ಒಂದಷ್ಟು ಸಮಯವನ್ನು ನಿಗದಿಗೊಳಿಸಬೇಕು. ದಿನದ ಆರಂಭವೇ ನಿತ್ಯಕರ್ಮದಿಂದ ಕೂಡಿ ಶುದ್ದ ಮನಸ್ಸಿನಿಂದ ಅಹಂಕಾರ ವಿಕಾರಗಳನ್ನು ದೂರವಿರಿಸಿದಾಗ ನಮ್ಮೊಳಗಿನ ಪರಮಾತ್ಮ ದರ್ಶನವಾಗುತ್ತದೆ. ಯಾವ ಗುಡಿ ಕ್ಷೇತ್ರಗಳ ಅನಿವಾರ್ಯತೆ ಇಲ್ಲ. ಯಾವ ಧನ ಸಂಪತ್ತು ಆಡಂಬರದ ಅಗತ್ಯವಿರುವುದಿಲ್ಲ. ಕೇವಲ ಭಕ್ತಿ ಮತ್ತು ಶ್ರದ್ಧೆ ಮಾತ್ರ ಇಲ್ಲಿ ಅನಿವಾರ್ಯವಾಗುತ್ತದೆ. ಇದು ಅನಿವಾರ್ಯವಾದಷ್ಟು ಪರಮಾತ್ಮ ಸಾಕ್ಷಾತ್ಕಾರವಾಗುತ್ತದೆ. 


ದ್ವೇಷ, ವೈಷಮ್ಯ ಮತ್ಸರ ಸುಖ ದುಃಖ ದುಮ್ಮಾನ ಅಳು ನಗು  ಈ ಎಲ್ಲಾ ವಿಕಾರಗಳಿಂದ ದೂರಾಗಿ ಪರಿಶುದ್ಧ ಮನಸ್ಸಿನಿಂದ ಪರಮಾತ್ಮನ ಚಿಂತನೆಯಲ್ಲಿದ್ದಾಗ ಧ್ಯಾನ  ಪರಿಪೂರ್ಣವಾಗುತ್ತದೆ. ಧ್ಯಾನವೆಂದರೆ ಅಲ್ಲಿ ನಾವೇ ಪರಮಾತ್ಮವಾಗಿ ಅದ್ವೈತ  ಭಾವದಲ್ಲಿ ತಲ್ಲೀನವಾಗುವ  ಕ್ರಿಯೆ. ಯಾವುದೆ ಯಾಗ ಯಜ್ಞ ಪೂಜೆ ಪುನಸ್ಕಾರಗಳಿಗಿಂತಲೂ ಧ್ಯಾನದಲ್ಲಿ ಪರಮಾತ್ಮ ಸಾನ್ನಿಧ್ಯ ತೀರ ಹತ್ತಿರವಾಗಿರುತ್ತದೆ. ಮತ್ತು ಇದು ಎಲ್ಲಾಅಡಂಬರದಿಂದ ದೂರವಾಗಿ  ಬಹಳ ಸರಳವಾಗಿ ದೇಹ ಮನಸ್ಸು ಮಾತ್ರ ಪ್ರಧಾನವಾಗಿರುವ ದಿವ್ಯ ಕ್ರಿಯಾಯಾಗಿರುತ್ತದೆ. ಧ್ಯಾನ ಚಿತ್ತಹೊಂದಿದ ನಂತರ ಅಲ್ಲಿ ನಂತರ ಯಾವ ಅನಿವಾರ್ಯ ಬಂಧನಗಳೂ ಉಳಿಯುವುದಿಲ್ಲ.