Tuesday, October 18, 2022

ಯಾವುದು ಸತ್ಯ?


    ಸತ್ಯ ಎನ್ನುವಾಗ  ಸತ್ಯ ಹರಿಶ್ಚಂದ್ರ ಮಾತ್ರಾ ಯಾಕೆ ನೆನಪಾಗುತ್ತಾನೆ? ಸತ್ಯದ ಮಾತೆತ್ತುವಾಗ ಸತ್ಯಹರಿಶ್ಚಂದ್ರನ ಹೆಸರೇ ಯಾಕೆ ಅನ್ವರ್ಥವಾಗುತ್ತದೆ. ಯಕ್ಷಗಾನ ಅರ್ಥಗಾರಿಕೆಯಲ್ಲಿ ಹೀಗೊಂದು ಜಿಜ್ಞಾಸೆ ವಿದ್ವಾಂಸರು ಮಾಡಿದ್ದನ್ನು ಕೇಳಿದ್ದೇನೆ. ಬಹಳ ಸ್ವಾರಸ್ಯವಾಗುತ್ತದೆ. ಲೋಕದಲ್ಲಿ ಅತ್ಯಂತ ಸತ್ಯವಂತ ಯಾರು ಎಂದು ದೇವೇಂದ್ರ     ನಾಕಲೋಕದಲ್ಲಿ ಪ್ರಶ್ನಿಸುತ್ತಾನೆ. ಎದ್ದು ನಿಂತ ವಸಿಷ್ಠ ಮುನಿಗಳು ಹೇಳುತ್ತಾರೆ ಅತ್ಯಂತ ಸತ್ಯವಂತ ಅದು ಮಹಾರಾಜ ಹರಿಶ್ಚಂದ್ರ.  ಇಲ್ಲಿ ಅಂತರಂಗದಲ್ಲಿ ಮತ್ತೊಂದು ಪ್ರಶ್ನೆ ಉದ್ಭವವಾಗುತ್ತದೆ. ಅತ್ಯಂತ ಸತ್ಯವಂತರ ಪಟ್ಟಿಯಲ್ಲಿ ವಸಿಷ್ಠರು ತಮ್ಮ ಹೆಸರು ಯಾಕೆ ಹೇಳುವುದಿಲ್ಲ? ವಸಿಷ್ಠರು ಸುಳ್ಳು ಹೇಳಿರಬಹುದೇ? ವಸಿಷ್ಠರ ಉತ್ತರಕ್ಕೆ ವಿಶ್ವಾಮಿತ್ರ ಕನಲಿ ಕೆಂಡವಾಗುತ್ತಾರೆ. ವಸಿಷ್ಠರು ಹಾಲು ಎಂದರೆ ನೀರು ಎನ್ನುವ ವಿಶ್ವಾಮಿತ್ರರು  ಹರಿಶ್ಚಂದ್ರನನ್ನು ಸುಳ್ಳುಗಾರನನ್ನಾಗಿ ಮಾಡುವ ಪ್ರತಿಜ್ಞೆ ತೊಡುತ್ತಾರೆ.  ವಸಿಷ್ಠರು ಒಂದು ವೇಳೆ ವಿಶ್ವಾಮಿತ್ರರ ಹೆಸರನ್ನು ಹೇಳಿದ್ದರೆ?  ಅದನ್ನು ಸತ್ಯ ಎಂದು ಒಪ್ಪಿಕೊಳ್ಳುತ್ತಿದ್ದರೋ ಎನೋ? ಆದರೆ ಹರಿಶ್ಚಂದ್ರನನ್ನು ಸುಳ್ಳುಗಾರನನ್ನಾಗಿ ಮಾಡುವುದರಲ್ಲಿ ಅವರ ಉದ್ದೇಶ ಒಂದೇ ವಸಿಷ್ಠರನ್ನು ಸುಳ್ಳುಗಾರನನ್ನಾಗಿ ಮಾಡುವುದು. ಇಲ್ಲವಾದರೆ ಹರಿಶ್ಚಂದ್ರ ಸತ್ಯವಂತನಾಗಿರುವುದರಲ್ಲಿ ಅವರಿಗೆ ಯಾವ ತೊಂದರೆಯೂ ಇಲ್ಲ. ಹೇಳಿ ಕೇಳಿ ಹರಿಶ್ಚಂದ್ರ ಯಾರು? ಇವರ ಸಂಕಲ್ಪ ದೇವೆಂದ್ರನಾದ ತ್ರಿಶಂಕು , ಸತ್ಯವೃತನ ಮಗ.  ವಸಿಷ್ಠರು ಸತ್ಯವೇ ಹೇಳಿರಬಹುದು. ಆದರೆ ಸತ್ಯ ಯಾವಾಗಲೂ ಪರೀಕ್ಷಿಸಲ್ಪಡಬೇಕು. ಸತ್ಯವನ್ನೇ ಪರೀಕ್ಷಿಸ ಬೇಕು. ಸುಳ್ಳನ್ನು ಪರೀಕ್ಷೆ ಮಾಡಿದರೆ ಏನು ಪ್ರಯೋಜನ? ಚಿನ್ನವನ್ನಷ್ಟೇ ಉಜ್ಜಿ ಉಜ್ಜಿ ಪರೀಕ್ಷೆ ಮಾಡುತ್ತಾರೆ. ಕಬ್ಬಿಣವನ್ನಲ್ಲ. ಯಾಕೆಂದರೆ ಚಿನ್ನವನ್ನು ಉಜ್ಜಿದರೆ, ಉಜ್ಜುವುದರಲ್ಲೆ ಸ್ವಲ್ಪ ಲಾಭವಿದೆ? ವಿಶ್ವಾಮಿತ್ರರ ದೂರದೃಷ್ಟಿ ಅದು. ಮುಂದೊಮ್ಮೆ ಹರಿಶ್ಚಂದ್ರನಿಗೆ ಒಂದು ಅಂಗೀಕಾರವಿರುತ್ತದೆ. ವಿಶ್ವಾಮಿತ್ರನಿಂದ ಪರೀಕ್ಷಿಸಲ್ಪಟ್ಟ ಸತ್ಯ.... ವಸಿಷ್ಠರು ಮೊದಲೇ ಅಂಗೀಕಾರ ನೀಡಿದ್ದರೂ ಅದಕ್ಕೆ ಮೌಲ್ಯವಿರುವುದೇ ಇಲ್ಲ! 

    ಹರಿಶ್ಚಂದ್ರ ಮಾತ್ರ ಯಾಕೆ ಸತ್ಯವಂತನಾಗುತ್ತಾನೆ. ಧರ್ಮ ರಾಯ ಯಾಕಲ್ಲ? ವಿಶ್ವಾಮಿತ್ರನ ಜಿಜ್ಞಾಸೆಗೆ ಆಗ ಧರ್ಮರಾಯ ಹುಟ್ಟದೇ ಇದ್ದಿರಬಹುದು. ಆದರೂ ಮಹಾ ಸತ್ಯವಂತ ಧರ್ಮರಾಯನ ಸತ್ಯ ಎಂದಿಗೂ ಪರೀಕ್ಷಿಸಲ್ಪಡುವುದಿಲ್ಲ. ಯಾವ ಮಹಾನುಭಾವನಿಗೂ ಅನುಮಾನ ಉಳಿಯುವುದಿಲ್ಲ. ಯಾಕೆಂದರೆ ಧರ್ಮರಾಯ ಹೇಳಿದ್ದನ್ನು ಸತ್ಯವನ್ನಾಗಿಸುವುದರಲ್ಲಿ ಶ್ರೀಕೃಷ್ಣನೊಬ್ಬನಿದ್ದ. ಇಲ್ಲವಾದರೆ ದ್ರೋಣ ಯಾಕೆ ಮೋಸ ಹೋಗುತ್ತಾನೆ. ತಾನೆ ಕಲಿಸಿದ ಶಿಷ್ಯ ವಂಚಿಸಿರಬಹುದೇ?  ಅಶ್ವತ್ಥಾಮ ಸತ್ತ......ಧರ್ಮರಾಯ ಹೀಗೆ ಹೇಳುವುದರಲ್ಲಿ ಯಕ್ಷಗಾನದಲ್ಲಿ ಮತ್ತೊಂದು ವಿಶ್ಲೇಷಣೆ ಇರಬಹುದು. ಕುರುಕ್ಷೇತ್ರದ ಯುದ್ಧದಲ್ಲಿ ಗುರು ದ್ರೋಣರ ಎದುರಾಳಿ ಪಟ್ಟ ಶಿಷ್ಯ ಅರ್ಜುನ. ದ್ರೋಣರಿಂದ  ಮಗನಿಂದಲೂ ಹೆಚ್ಚು ಮಮಕಾರ  ಅರ್ಜುನನಿಗೆ ಸಿಗುತ್ತದೆ. ಅದೇ ಅರ್ಜುನನ ಎದುರು ವೀರಾವೇಶದಿಂದ ಹೋರಾಡುವ ದ್ರೋಣರಿದ್ದರೆ ಮಗನಂತಹ ಅರ್ಜುನ ಸತ್ತಹಾಗೇ ಅಲ್ಲವೇ?  ಈ ಅರ್ಥದಲ್ಲು ಅಶ್ವತ್ಥಾಮ ಸತ್ತ ಎಂದು ಹೇಳುವುದು ಸಮರ್ಥನೀಯ. ಶ್ರೀ ಕೃಷ್ಣ ಒಂದರಿಂದ ಎಂಟರವರೆಗಿನ ಎಲ್ಲ ಸಂಖ್ಯೆಗಳನ್ನೂ ಎಂಟಾಗಿಸಬಲ್ಲ ತರ್ಕಬುದ್ದಿಯವನು. ಹಾಗಾಗಿ ಧರ್ಮರಾಯನ ಸತ್ಯ ಹೀಗೂ ಸಮರ್ಥಿಸಬಹುದು. ಆದರು ಸತ್ಯ ಯಾಕೆ ಪರೀಕ್ಷಿಸ ಬೇಕು ಎಂಬುದಕ್ಕೆ ದ್ರೋಣರು ಹೆಚ್ಚು ನಿದರ್ಶನವನ್ನೊದಗಿಸುತ್ತಾರೆ. ದ್ರೋಣರು ಎಸಗಿದ ದೊಡ್ಡ ಪ್ರಮಾದ ಎಂದರೆ, ಸತ್ಯ ಯಾವುದು ಎಂದು ಅವರು ಕಂಡುಕೊಳ್ಳದಿರುವುದು. ಸತ್ಯವನ್ನು ಅರಿಯದೇ ಇರುವುದು. ಇದು ಎಲ್ಲರೂ ಮಾಡುವ ತಪ್ಪು.! 

    ಸತ್ಯವನ್ನು ಎಲ್ಲರೂ ನಂಬಬೇಕು. ಆದರೆ ಎಡವುದು ಸತ್ಯವನ್ನು ಗುರುತಿಸುವುದರಲ್ಲಿ. ಯಾವುದು ಸತ್ಯ?  ಯಾಕೆಂದರೆ ಸುಳ್ಳು ಕೆಲವೊಮ್ಮೆ ಸತ್ಯವಾಗಬೇಕು. ಶ್ರೀಕೃಷ್ಣ ಮಾಡಿ ತೋರಿಸಿದ್ದೇ ಅದು. ಮಹಾ ವಿಷ್ಣುವಿನ ರಾಮ ಮತ್ತು ಕೃಷ್ಣರ ಅವತಾರ ಎರಡನ್ನೂ ಮುಂದೆ ಇಡುವಾಗ ಮನುಷ್ಯ ಅದನ್ನು ವಿವೇಚಿಸಬೇಕು. ಶ್ರೀರಾಮ ತಂದೆಯ ಮಾತನ್ನು ಸತ್ಯವಾಗಿಸುವುದಕ್ಕೆ ಹೊರಟ. ಅದು ಸತ್ಯವೋ ಸುಳ್ಳೋ ಎಂದು ವಿವೇಚನೆಯಾಗಿ ವಿಮರ್ಷೆಯಾಗಲಿ ಮಾಡುತ್ತ ಕಾಲ ಹರಣ ಮಾಡಲಿಲ್ಲ. ಯಾಕೆ ಕಾಲ ಕಳೆದಂತೆ ಸತ್ಯ ಸುಳ್ಳಾಗಬಹುದು, ಸುಳ್ಳು ಸತ್ಯವಾಗಬಹುದು. ಒಂದಂತು ಸತ್ಯ. ಸತ್ಯ ಹೇಳುವುದಕ್ಕಿಂತಲೂ ಸತ್ಯವನ್ನು ಅರಿಯಬೇಕು. ಅದೇ ಸತ್ಯಾನ್ವೇಷಣೆ. ಯಾವುದು ಸತ್ಯ? ಒಂದು ಕಥೆ ಇದೆ. ಕಾಡಿನಲ್ಲಿ ದರೋಡೆಕೋರರಿಂದ ತಪ್ಪಿಸಿಕೊಂಡ ಒಬ್ಬ ಆರ್ತ, ಓಡುತ್ತಾ ಬಂದು ತಪಸ್ಸಿನಲ್ಲಿದ್ದ ಋಷಿಯ ಆಶ್ರಮದಲ್ಲಿ ಅಡಗಿಕೊಳ್ಳುತ್ತಾನೆ. ಬೆನ್ನಟ್ಟಿ ಬಂದ ದರೋಡೆ ಕೋರರು ಋಷಿಯಲ್ಲಿ ವಿಚಾರಿಸುತ್ತಾರೆ. ಋಷಿ ಸತ್ಯವಂತ. ಸತ್ಯವನ್ನೇ ಹೇಳಿಬಿಡುತ್ತಾನೆ. ದರೋಡೆಕೋರರು ಮತ್ತೆ ಏನು ಮಾಡಿದರು ಎಂದು ಬಿಡಿಸಿ ಹೇಳಬೇಕಿಲ್ಲ. ಒಂದು ಸತ್ಯ ಪ್ರಾಣಕ್ಕೆ ಕುತ್ತು ತರುತ್ತದೆ ಎಂದಾದರೆ ಅದು ಸತ್ಯ ಹೇಗಾಗುತ್ತದೆ?  ಶ್ರೀಕೃಷ್ಣ ಮುಂದಿಡುವ ಪ್ರಶ್ನೆ ಇದು. ಸತ್ಯವೆಂಬುದು ಸತ್ ಅಂದರೆ ಒಳ್ಳೆಯದನ್ನು ಮಾಡುವಂತಿರಬೇಕು. ಉದ್ದೇಶ ಸದುದ್ದೇಶವಾಗಿರಬೇಕು. ಸತ್ ಸಂಕಲ್ಪವಾಗಿರಬೇಕು. ಆವಾಗ ಸತ್ಯ ಸತ್ಯವಾಗುತ್ತದೆ. ಸತ್ಯ ಹೇಳುವುದರಿಂದ ನಮಗೆ ಒಳ್ಳೆಯದಾಗದೇ ಇದ್ದರೂ ಮತ್ತೊಬ್ಬರಿಗೆ ಕೆಟ್ಟದಾಗಬಾರದು ಇದು ಜ್ಞಾನಿಗಳು ಹೇಳುವ ಮಾತು. ಆದರೂ ಸತ್ಯ ಅದೆಂದಿಗೂ ಸತ್ಯವಾಗಿಯೇ ಇರುತ್ತದೆ. ಅದು ಬದಲಾಗುವುದಿಲ್ಲ. ಬದಲಾಗುವುದು ನಮ್ಮ ನಂಬಿಕೆ ಮಾತ್ರ. 

No comments:

Post a Comment