Sunday, October 30, 2022

ಬೋಳಂಗಳದ ಸವಾರಿ ಸೇವೆ

  ಆದಿನ ನಮ್ಮೂರಿನ ಪೈವಳಿಕೆ ಬೋಳಂಗಳದ ನೇಮಕ್ಕೆ ಹೋಗಿ ಮತ್ತೆ ಉಪ್ಪಳ ಪೇಟೆಗೆ ಹೋಗಿ ಬರುವುದಕ್ಕೆ ತಡವಾಗಿಬಿಟ್ಟಿತು. ಹಾಗೆ ರಾತ್ರಿ ತಡವಾಗಿ ಉಪ್ಪಳದಿಂದ ಬಂದೆ. ಮನೆಗೆ ಬರುತ್ತಿದ್ದಂತೆ ಮನೆಯಲ್ಲಿ ನನ್ನನ್ನುಕಾಣುವುದಕ್ಕೆ ಬೋಳಂಗಳದಿಂದ ಬಂದಿದ್ದರು ಎಂದು ಹೇಳಿದರು. ನನಗೆ ಆಶ್ಚರ್ಯವಾಯಿತು. ಯಾಕಪ್ಪಾ ಏನಾಯಿತು? ಆಗಲೇ ರಾತ್ರಿ ಒಂಭತ್ತಾಗಿತ್ತು. ಇನ್ನೇನು ಕೈಕಾಲು ತೊಳೆಯೋಣವೆಂದು ಅಂಗಳಕ್ಕೆ ಇಳಿದರೆ ಅದೇ ಬೋಳಂಗಳದ ಆಡಳಿತ ವರ್ಗದಲ್ಲಿದ್ದ ಬಲ್ಲಾಳರು ಬಂದಿದ್ದರು. ಅದಾಗಲೇ ಏಳು ಘಂಟೆಯಿಂದ ನನ್ನನ್ನು ಇದಿರು ನೋಡುತ್ತಿದ್ದರು.  ಬಂದವರ ಮುಖದಲ್ಲಿ ಬಹಳ ಹತಾಶೆಯ ಭಾವವಿತ್ತು. ನಾನಂತು ಬೋಳಂಗಳದ ದೈವವನ್ನು ನಂಬಿಕೊಂಡಿದ್ದವನೇ ಹೊರತು ಅಲ್ಲಿಯ ಯಾವ ಕಾರ್ಯ ಕೆಲಸಗಳ ಜವಾಬ್ದಾರನಾಗಿರಲಿಲ್ಲ. ಹಾಗಾಗಿ ನನಗೆ ಬಹಳ ಅಚ್ಚರಿಯಾಯಿತು. ಪ್ರತಿ ಬಾರಿ ಉತ್ಸವಕ್ಕೆ ಹೋಗಿ ನಮಸ್ಕರಿಸಿ ಹರಿಕೆಸಲ್ಲಿಸಿ ಪ್ರಸಾದ ತರುವಷ್ಟಕ್ಕೆ ಸೀಮಿತ. 

ಬೋಳಂಗಳ, ಹೆಸರೇ ಹೇಳುವಂತೆ ಬೋಳು ಬೋಳಾದ ಅಂಗಳ. ನಮ್ಮ ಮನೆಯಿಂದ ಒಂದು ಹರ ದಾರಿಯಲ್ಲಿ ವಿಶಾಲವಾದ ಬಯಲು ಪ್ರದೇಶ. ಬಹಳ ವಿಸ್ತಾರವಾದ ಮೈದಾನ,  ಸುತ್ತಲು ಪ್ರಾಕೃತಿಕ ಕ್ರೀಡಾಂಗಣದಂತೆ ಎತ್ತರದ ಗುಡ್ಡಗಳು. ಮೈದಾನದ ಒಂದು ತುದಿಯಲ್ಲಿ  ಒಂದೆರಡು ಬೃಹದಾಕಾರದ ಮರಗಳು. ಅದರ ನೆರಳಿನಲ್ಲಿ ಎಂಬಂತೆ ಬೋಳಂಗಳ ದೈವದ ಗುಡಿ. ನಿತ್ಯದಲ್ಲಿ ಹಗಲಿನಹೊತ್ತಿನಲ್ಲೂ ಜಾತಿ ಧರ್ಮ ಭೇದವಿಲ್ಲದೆ ಜನ ಅಲ್ಲಿಗೆ ಹೋಗುವುದಕ್ಕೆ ಭಯ ಪಡುತ್ತಿದ್ದರು. ದೂರದಲ್ಲೇ ನಿಂತು ನಮಸ್ಕರಿಸುವುದಷ್ಟೇ ಕೆಲಸ.  ನಮ್ಮ ಪೈವಳಿಕೆ ಗ್ರಾಮದಲ್ಲಿ ಮೂರು ಪ್ರಧಾನ ದೈವ ವಿದೆ. ಒಂದು ಅಣ್ಣ ದೈವ ಇನ್ನೊಂದು ತಮ್ಮ ದೈವ ಮತ್ತೊಂದು ಅಕ್ಕ ಅಂದರೆ ಉಳ್ಳಾಳ್ತಿ ದೈವ. ಇದರಲ್ಲಿ ಉಳ್ಳಾಳ್ತಿ ದೈವ ಪೈವಳಿಕೆ ಗ್ರಾಮದೇವತೆ. ವರ್ಷಕ್ಕೊಮ್ಮೆ ಎಲ್ಲ ಕ್ಷೇತ್ರದಲ್ಲು ವರ್ಷಾವಧಿ ನೇಮ (ಉತ್ಸವ) ಭಕ್ತಿ ಗೌರವದಿಂದ ನಡೆಯುತ್ತದೆ. ಅದರಲ್ಲಿ ತಮ್ಮ ದೈವದ ಸ್ಥಾನವೇ ಬೋಳಂಗಳ. ಮತಭೇದವಿಲ್ಲದೆ ಭಯ ಭಕ್ತಿಯಿಂದ ಕಾಣುವ ದೈವ ಸ್ಥಾನ. 

ಬೋಳಂಗಳ ನೇಮ ಪ್ರತಿ ವರ್ಷವೂ ಆಗುವಾಗ ಮೊದಲ ರಾತ್ರಿ ಬೋಳಂಗಳದಿಂದ ಒಂದಷ್ಟು ದೂರವೇ ಇರುವ ಪೈವಳಿಕೆ ಚಿತ್ತಾರಿ ಚಾವಡಿಯಲ್ಲಿದ್ದ ಉಳ್ಳಾಳ್ತಿ ದೈವ ಇಲ್ಲಿನ ಉತ್ಸವಕ್ಕೆ ಬರುವುದು ವಾಡಿಕೆ. ರಾ
ತ್ರಿ ಸಿಡಿ ಮದ್ದು ವಾದ್ಯ ಢೋಲಿನೊಂದಿಗೆ  ಮೆರವಣಿಗೆ ಬರುತ್ತದೆ. ಮೊದಲೆಲ್ಲ ರಾತ್ರಿ ಬಹಳ ಹೊತ್ತಾಗುವಾಗ ವಾದ್ಯ ಡೋಲಿನ ಸದ್ದಿಗೆ ನಾವು ಭಯದಿಂದ ಎದ್ದು ಕುಳಿತುಕೊಳ್ಳುತ್ತಿದ್ದೆವು. ಅಲ್ಲಲ್ಲಿ ತೋರಣ ಕಟ್ಟಿ ಆ ದೈವವನ್ನು ಸ್ಥಳೀಯರು ಸ್ವಾಗತಿಸುತ್ತಿದ್ದರು. ನಮ್ಮ ಮನೆಯ ಹತ್ತಿರವೇ ಇದ್ದ ಕಾಜಿ ಕಟ್ಟೆ ವಾಸ್ತವದಲ್ಲಿ ಇದನ್ನೇ ಕಾಯರ್ ಕಟ್ಟೆ ಎಂದು ಕರೆಯುತ್ತಾರೆ. ಅಲ್ಲಿ ಉಳ್ಳಾಳ್ತಿ ದೈವ ಬಳೆ ಧರಿಸಿ ತಮ್ಮನ ಉತ್ಸವಕ್ಕೆ ಬರುವುದು ವಾಡಿಕೆ. ಹಾಗೆ ಬಂದ ದೈವದ ಕಿರೀಟ ಖಡ್ಗ ಇನ್ನು ಏನೇನೋ ಭಂಡಾರದ ವಸ್ತು ರೂಪದಲ್ಲೆ ಬರುವ ಉಳ್ಳಾಳ್ತಿಯನ್ನು ಬ್ರಾಹ್ಮಣರೊಬ್ಬರು ಹೊತ್ತು ತರುತ್ತಾರೆ. ಜತೆಗೆ ದರ್ಶನ ಪಾದ್ರಿ ಪೂಜಾರಿ ಇನ್ನಿತರ ಪರಿವಾರದವರು ಜತೆಗೆ ಇರುತ್ತಾರೆ.  ಹೀಗೆ ಸಂಭ್ರದಿಂದ ಬಂದ ಉಳ್ಳಾಳ್ತಿ ಮರುದಿನ ಸಾಯಂಕಾಲ ನೇಮ ಸಮಾಪ್ತಿಯಾಗುತ್ತಿದ್ದಂತೆ ಹಿಂತಿರುಗಿ ಹೋಗುವುದು ಪದ್ದತಿ. 

ಆದಿನ ಬಂದ ದೈವ ಹಿಂದಿರುಗಿ ಹೋಗುವುದಕ್ಕೆ  ದೈವವನ್ನು ಹೊರುವುದಕ್ಕೆ ಬ್ರಾಹ್ಮಣ ವ್ಯಕ್ತಿ ಯಾರೂ ಸಿಗಲಿಲ್ಲ. ಯಾವಾಗಲು ಕೊಂಡೊಯ್ಯುತ್ತಿದ್ದ ವ್ಯಕ್ತಿ ಕಾರಣಾಂತರದಿಂದ ಬರಲಿಲ್ಲ. ಅದು ಏನಾಯಿತು ಎನ್ನುವುದಕ್ಕಿಂತ ಅದಕ್ಕೆ ಪರಿಹಾರವಾಗಿ ನನ್ನ ಬಳಿಗೆ ಅ ರಾತ್ರಿ ಬಂದು ಬಿಟ್ಟರು. ನಾನು ಮೊದಲಿಗೆ ಸುತರಾಂ ಒಪ್ಪಿಕೊಳ್ಳಲಿಲ್ಲ. ಮುಖ್ಯವಾಗಿ ಆದಿನ ಬಿಡುವಿಲ್ಲದ ಕೆಲಸದಿಂದ ಬಹಳ ದಣಿದಿದ್ದೆ. ಇನ್ನೊಂದು ಅದಕ್ಕೆ ಅರ್ಹ ವ್ಯಕ್ತಿ ನಾನಲ್ಲ ಎಂಬ ಅಂತರಂಗದ ಭಾವವೂ ಕಾರಣ. ನಾನು ಬ್ರಾಹ್ಮಣನಾದರೂ ನನ್ನ ಬ್ರಾಹ್ಮಣ್ಯದ ಪರೀಕ್ಷೆ ಆರೀತಿಯಾಗುವುದು, ಇನ್ನೊಂದು ನನ್ನ ಧರ್ಮ ಆಚರಣೆ ಏನುಂಟು ಅದು ಕೇವಲ ಖಾಸಗಿಯಾಗಿ ನನಗೆ ಸಂಭಂಧಿಸಿದ್ದು. ಅದು ಸಾರ್ವಜನಿಕವಾಗುವುದಕ್ಕೆ ಇಷ್ಟವಿರಲಿಲ್ಲ. ನಾನು ಬರುವುದೇ ಇಲ್ಲ. ಅಲ್ಲೇ ಹತ್ತಿರದಲ್ಲೇ ಇದ್ದ ಇನ್ನೊಬ್ಬರನ್ನು ಉಲ್ಲೇಖಿಸಿ ಹೇಳಿದೆ. ನಿಜಕ್ಕೂ ಇನ್ನೊಬ್ಬರ ಬಗ್ಗೆ ನನಗೆ ಗೌರವ ಇತ್ತು. ಅದಕ್ಕೆ ಅವರು ಹೇಳಿದರು,   "ಸ್ವಲ್ಪ ಕ್ರಮದಲ್ಲಿ ಇರುವವರು ಆಗಬೇಕು ಹಾಗೆ ಇಲ್ಲಿಗೆ ಬಂದದ್ದು. " ನನ್ನಲ್ಲಿ ಅಂತಹ ವೈಶಿಷ್ಟ್ಯತೆ ಏನಿದೆಯೋ ಅಂತ ಅಚ್ಚರಿಯಾಯಿತು.  ತಕ್ಕ ಮಟ್ಟಿಗೆ ನನ್ನದೇ ಮಿತಿಯೊಳಗೆ ಇದ್ದದ್ದು ಬಿಟ್ಟರೆ ಮತ್ತೇನೂ ಇರಲಿಲ್ಲ. 


  ಬ್ರಾಹ್ಮಣ್ಯ ಅಸ್ತಿತ್ವ ಅತ್ಯಂತ ಚರ್ಚಿತ ವಿಷಯ. ಇದು ಅವಶ್ಯಕತೆ ಬೀಳುವಾಗ ಗೌರವಿಸಲ್ಪಡುತ್ತದೆ. ಮತ್ತೆ ಅದೇ ಕಡೆಗಣನೆ. ಏನೇನೋ ವಾದಗಳು. ಹಲವರು ಸಾರ್ವಜನಿಕವಾಗಿ ತೆಗಳುತ್ತಾರೆ, ತಮಗೆ ತಿಳಿದಂತೆ ವಿಮರ್ಶೆ ಮಾಡುತ್ತಾರೆ. ಇರಲಿ ಅದು ವೈಯಕ್ತಿ ಸ್ವಾತಂತ್ರ್ಯ. ಆದರೆ ಅವರವರ ಕಾರ್ಯಗಳಿಗಾಗುವಾಗ ಪರಿಶುದ್ದ ಬ್ರಾಹ್ಮಣ್ಯದ ಶರಣು ಹೋಗುತ್ತಾರೆ. ಈಗಿನ ಹಲವು ರಾಜಕೀಯ ನಾಯಕರ ರೀತಿ ಇದು.   ಬ್ರಾಹ್ಮಣರ ಪ್ರತಿಯೊಂದನ್ನು ಕಟುವಾಗಿ ವಿಮರ್ಶಿಸುವಾಗ ತನ್ನ ಮನೆಯ ಕಾರ್ಯಕ್ಕೆ ಬ್ರಾಹ್ಮಣರು ಬೇಡ ಎನ್ನುವ ಆತ್ಮ ಸ್ಥೈರ್ಯ  ಇರುವುದೇ ಇಲ್ಲ.  ಆಗ ಬ್ರಾಹ್ಮಣರು ಪರಿಶುದ್ದರಾಗಿಬಿಡುತ್ತಾರೆ.  ಆದರೆ ಅದೆಲ್ಲ ರಹಸ್ಯ. ಅದು ಅಪ್ರಸ್ತುತ.  ಹೋಗಲಿ ಮನೆಗೆ ಬಂದವರು ಈ ವರ್ಗಕ್ಕೆ ಸೇರಿದವರಲ್ಲ. ದಿನವೂ ಮುಖ ನೋಡಿ ಸೌಹಾರ್ದದಿಂದ ವ್ಯವಹರಿಸುವವರು. ಕೊನೆಗೆ ಅವರ ಮಾತಿಗೆ ಒಪ್ಪಿದೆ. ಮತ್ತೆ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ಬರಿಗಾಲಲ್ಲೇ ಬೋಳಂಗಳಕ್ಕೆ ಹೋದೆ. ನನ್ನನ್ನು ಬರವಿನ ನಿರೀಕ್ಷೆಯಲ್ಲಿ  ಅಲ್ಲಿ ಹಲವರು ನಿಂತಿದ್ದರು. ನಾನು ಬಂದದ್ದು ದೊಡ್ಡ ಭಾರವನ್ನು ಇಳಿಸಿದಂತೆ ಅವರ ಭಾವ. ಆ ಭಾರ ನನ್ನ ಮೇಲೆ ರವಾನೆಯಾಗಿದೆ ಎಂಬುದು ಮತ್ತೊಂದು. 


ಮೊದಲಿಗೆ ದೈವದ ಖಡ್ಗ ಕಿರೀಟ ಪ್ರಭಾವಳಿ ಇನ್ನೇನು ಇತ್ತೋ ನನಗೆ ಅದರ ಅರಿವಿಲ್ಲ. ಯಾವಾಗಲೂ ಜಾತ್ರೆಯ ಸಮಯ ದೂರದಿಂದ ಭಯದಿಂದ ನಮಸ್ಕರಿಸಿ ಹೋಗುವ ದೈವ ನನ್ನಕೈಯಲ್ಲಿತ್ತು. ಬಾಲ್ಯದಿಂದಲೂ ನನಗೆ ಅರಿವು ಬಂದ ದಿನದಿಂದಲೂ ದೈವ ಭೂತ ಎಂದರೆ ಭಯ ಪಟ್ಟು ನೋಡುತ್ತಿದ್ದದ್ದು ಅಂದು ನನ್ನ ಕೈಯಲ್ಲಿ. ಒಂದು ವಿಚಿತ್ರ ಅನುಭವ.  ಆ ಕತ್ತಲೆಯಲ್ಲಿ ದೀವಟಿಗೆ ದೀಪದ ಬೆಳಕಿನಲ್ಲಿ ಬರಿಗಾಲಲ್ಲಿ ಅವರೊಂದಿಗೆ ಪೈವಳಿಕೆ ಚಿತ್ತಾರಿ ಚಾವಡಿ ಕಡೆ ಹೊತ್ತು ಸಾಗುವಾಗ, ಅದುವರೆಗೆ ಇದ್ದ ದಣಿವು ಮರೆತು ಹೋಯಿತು. ಚಾವಡಿಯಲ್ಲಿ ಇರಿಸಿ ಅಲ್ಲಿ ಪೂಜೆ ಸಲ್ಲಿಸಿ ಪುನಃ ಹಿಂತಿರುಗುವಾಗ ರಾತ್ರಿ ಹನ್ನೊಂದು ಘಂಟೆಯಾಗಿತ್ತು. ಹೀಗೆ ಅನಿರೀಕ್ಷಿತವಾಗಿ ಒಂದು ಭೂತದ ಸೇವೆ ದೈವದ ಸೇವೆ ಆಯಾಚಿತವಾಗಿ ನನ್ನ ಕೈಯಿಂದ ನೆರವೇರಿತು. 


ಇತ್ತೀಚೆಗೆ ನಮ್ಮಊರಿನ ಭೂತಗಳು ಹೆಚ್ಚು ಸದ್ದು ಮಾಡುತ್ತವೆ. ಅದರ ಮಹಿಮೆ ಕಥೆಗಳ ಬಗ್ಗೆ ಹಲವರಿಗೆ ಕುತೂಹಲ ಮೂಡಿದೆ. ಕಾಂತಾರ ಚಲನ ಚಿತ್ರ ನೋಡುವಾಗ ನಾನು ಒಂದು ದಿನ ಹೊತ್ತುಕೊಂಡಿದ್ದೆ  ಎಂಬ ಆ ಘಟನೆ ಮತ್ತೆ ನೆನಪಿಗೆ ಬಂತು. ಆ ದಿನ ನನಗೆ ಆ ಕಾರ್ಯ ಅಷ್ಟು ಗಂಭೀರ ಅಂತ ಅನ್ನಿಸಲೇ ಇಲ್ಲ. ಆದರೆ ಈಗ ಯೋಚಿಸುವಾಗ ಎಂತಹಾ ಒಂದು ಅದ್ಭುತ ಕಾರ್ಯ ನನ್ನಿಂದ ಆಗಿ ಹೋಗಿದೆ. ಈಗ ನಾನು ಬೇಕೆಂದರೂ ಅದು ಮಾಡುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಅವಕಾಶವೂ ಇರಲಾರದು. ಹೀಗೆ ಆಯಾಚಿತವಾಗಿ ಬಂದ ಒಂದು ಅವಕಾಶ ಬದುಕಿನ ಶ್ರೇಷ್ಠದಿನಗಳಲ್ಲಿ ಒಂದಾಗಿ ದಾಖಲಾಗಿರುವುದು ಸತ್ಯ. 


ಬೋಳಂಗಳದ ಬಗ್ಗೆ ಬಹಳ ಹಿಂದೆ ಬರೆದ ಲೇಖನ ಇಲ್ಲಿದೆ. 

ಬೋಳಂಗಳ




No comments:

Post a Comment