Wednesday, December 21, 2022

ಯಾತ್ರಾ ಸನ್ನಾಹ

ನಮ್ಮ ಮನೆಯಿಂದ ಹಿರಿಯರೆಲ್ಲ ಸೇರಿ ಕಾಶಿ ಯಾತ್ರೆಗೆ ಹೊರಡುವ ಸಿದ್ದತೆ ಮಾಡುತ್ತಿದ್ದೇವೆ. ಕಾಶಿ ಯಾತ್ರೆ ಎಂದರೆ ಹಿಂದುಗಳ ಜೀವನದ ಒಂದು ಗುರಿ ಎಂದರೂ ತಪ್ಪಲ್ಲ. ಮುಖ್ಯವಾಗಿ ನಮ್ಮ ಅಮ್ಮನಿಗೆ ಕಾಶಿಯನ್ನು ಕಾಣಬೇಕು, ಅಯೋಧ್ಯೆಗೆ ಹೋಗಿ ಬರಬೇಕು ಹೀಗೆ ಹಂಬಲ ಉಂಟಾಗಿ ಬಹಳ ವರ್ಷಗಳೇ ಕಳೆದುವು. ಆದರೆ ಅದಕ್ಕೆ ಸಮಯಾವಕಾಶ ಕೂಡಿಬರಲಿಲ್ಲ. ವೃದ್ದರಾದ ಅಮ್ಮನನ್ನು ಮಾತ್ರ ಕಳುಹಿಸುವುದು ಸಾಧ್ಯವಿಲ್ಲದೇ ಇರುವುದರಿಂದ ಅದು ಈ ವರೆಗೆ ಸಾಧ್ಯವಾಗದೇ ಹೋಯಿತು.  ಇದೀಗ ರಾಷ್ಟ್ರ ಜಾಗೃತಿ ಸಂಸ್ಥೆಯವರು ಅದಕ್ಕೆ ಒಂದಷ್ಟು ಅನುಕೂಲವನ್ನು ಒದಗಿಸಿ, ಆ ಸದವಕಾಶದಿಂದ ಹೋಗಿ ಬರುವ ಸಿದ್ದತೆ ನಡೆಯುತ್ತಾ ಇದೆ.  ಹೊರಡುವುದಕ್ಕೆ ಇನ್ನೆರಡು ತಿಂಗಳು ಇದೆ.  ಯಾವುದೇ ದೇವಸ್ಥಾನಗಳಿಗೆ ಅದೂ ಜನಸಂದಣಿಯ ನಡುವೆ ಹೋಗುವುದು ನನಗೆ ತೀರಾ ಇಷ್ಟವಿಲ್ಲದ ಕೆಲಸ. ಹಾಗಾಗಿ ಹಲವು ತೀರ್ಥ ಕ್ಷೇತ್ರ ದರ್ಶನದಿಂದ ಬಹಳ ದೂರವೇ ಉಳಿದಿದ್ದೇನೆ. ಇತ್ತೀಚೆಗೆ ಮಂತ್ರಾಲಯ ದರ್ಶನ ಮಾಡಿದ್ದೆ. ಅದೂ ಮುಂಜಾನೆ ಹೆಚ್ಚು ಜನರೂ ಯಾರೂ ಇಲ್ಲದೆ ಇದ್ದಕಾರಣ ಅದೊಂದು ಅಹ್ಲಾದಮಯವಾಗಿತ್ತು.  ನಿತ್ಯ ಮನೆಯಲ್ಲೇ ಮುಂಜಾನೆ ಎದ್ದು ಒಂದು ದಿನವೂ ಬಿಡದೇ ಬ್ರಾಹ್ಮೀ ಮುಹೂರ್ತದಲ್ಲಿ ಸಂಧ್ಯಾವಂದನೆ ಮತ್ತು  ತಾಸು ಪ್ರಾಣವಾಯುವಿನ ಏರಿಳಿತಕ್ಕೆ ತಲ್ಲೀನನಾಗಿ  ಏಕಾಂತ  ಧ್ಯಾನ ಮಾಡುವಾಗ ನಿಜವಾದ ಪರಮಾತ್ಮ ದರ್ಶನದ ಅನುಭವವಾಗುತ್ತದೆ. ಆ ಅನುಭವದಲ್ಲಿ ಅದನ್ನು ದಿನವೂ ಬಿಡದೆ ನಿಷ್ಠೆಯಿಂದ ಪಾಲಿಸಿಕೊಂಡು ಬಂದು ಬಿಟ್ಟಿದ್ದೇನೆ.  ಹಾಗಾಗಿ ದೇವಸ್ಥಾನ ದರ್ಶನ ಎಂಬುದು ಆ ನಂತರ ಉಳಿದುಕೊಂಡು ಯಾಕೋ ಅದರತ್ತ ಪ್ರಚೋದನೆಯೇ ಇಲ್ಲವಾಗುತ್ತದೆ. ಮನೆಯಲ್ಲಿ ಮನದಲ್ಲಿ ದೇವರ ದರ್ಶನವಾಗುವಾಗ ಎಲ್ಲದರಿಂದಲು ಅದು ಉತ್ಕೃಷ್ಠ ಎಂಬ ಭಾವನೆ ಬೆಳೆದು ಬಂದು ಬಿಟ್ಟಿದೆ. ಸತ್ಕಾರ್ಯಗಳು ಮನದಲ್ಲಿ ಹುಟ್ಟಿ ಮನೆಯಲ್ಲಿ ಮೊದಲು ಆಚರಿಸಲ್ಪಡಬೇಕು.  ನಿತ್ಯಕರ್ಮದಲ್ಲಿ ಮನೆಯಲ್ಲೇ ಆರಾಧಿಸುವ ದೇವರ ಮಹಿಮೆ ಅನುಗ್ರಹ ಅತ್ಯಂತ ಉತ್ಕೃಷ್ಟವಾಗಿರುತ್ತದೆ.  ಆದರೂ   ಹಲವು ಸಲ ಅನಿವಾರ್ಯವಾಗುವಾಗ ಜೀವನದ ಅಂಗ ಎಂದು ಹೋಗುವುದು ಇದೆ. ನಿಜಕ್ಕಾದರೆ ಜಾತ್ರೆ ಸಮಾರಂಭಕ್ಕಿಂತಲೂ ವಿಶೇಷವಲ್ಲದ ದಿನದಲ್ಲಿ ಅದೂ ಯಾರೂ ಹೋಗದಿರುವ ದೇವಸ್ಥಾನಗಳಿಗೆ ಹೋಗುವುದು ನನಗಿಷ್ಟ. ಈಗ ಕಾಶಿ ಎಂದರೆ ಕೇಳಬೇಕೆ? ಭಾರತ ದೇಶಕ್ಕೊಂದೇ ಕಾಶಿ....ಕುತೂಹಲ ಇದ್ದೇ ಇರುತ್ತದೆ. ತಾಯಿಗೆ ಕಾಶಿ ದರ್ಶನ ಮಾಡಿಸುವ ಕರ್ತವ್ಯ ಪ್ರಜ್ಞೆಯೂ ಜತೆಯಾಗಿರುತ್ತದೆ.

         ಹತ್ತು ವರ್ಷಗಳ ಹಿಂದೆ ಮಲಯಾಳಂ ಸಿನಿಮಾ ಒಂದು ನೋಡಿದ್ದು ಈಗ ನನಗೆ ನೆನಪಾಗುತ್ತಿದೆ. ಮಲಯಾಳಂ ನ ಖ್ಯಾತ ಹಾಸ್ಯ ನಟ ನಟಿಸಿ ನಿರ್ಮಿಸಿ ನಿರ್ದೇಶಿಸಿ ಪ್ರಧಾನ ನಟನಾಗಿ ನಟಿಸಿದ್ದ ಮಲಯಾಳಂ ಸಿನಿಮ "ಅದಾಮಿಂದೆ ಮಗನ್ ಅಬು."    ಪ್ರಧಾನವಾಗಿ ಇದು ಮುಸ್ಲಿಂ ಕಥಾ ಹಂದರ ಇರುವ ಸಿನಿಮ. ಆ ಕಾಲದಲ್ಲಿ ಅದಕ್ಕೆ ರಾಷ್ಟ್ರ ಪ್ರಶಸ್ತಿ ಪುರಸ್ಕಾರವೂ ಲಭ್ಯವಾಗಿತ್ತು.  ಅದು  ಈಗ ನನಗೆ ನೆನಪಾವುವುದಕ್ಕೆ ಕಾರಣ  ಆ ಸಿನಿಮಾದಲ್ಲಿ ಕಥಾನಾಯಕ ವಯೋವೃದ್ದ ಪತ್ನಿ ಸಹಿತ ಹಜ್ ಗೆ  ಯಾತ್ರೆ ಹೋಗಲು ಹಂಬಲಿಸುತ್ತಾನೆ.  ಹಿಂದುಗಳಿಗೆ ಕಾಶಿ ಹೇಗೋ ಮುಸ್ಲಿಂ ರಿಗೆ ಹಜ್ಅಥವಾ ಮೆಕ್ಕಾ. ತೀರಾ ಬಡವನಾದ ಆತ ಅತ್ತರ್ ವ್ಯಾಪಾರಿ. ಆತ ಹಜ್ ಗೆ ಹೋಗಲು ಸಿದ್ದತೆ ನಡೆಸುವುದು ನಿಜಕ್ಕೂ ಮನಮುಟ್ಟುವಂತೆ ಚಿತ್ರಿಸಲಾಗಿದೆ. ಈ ಸಿದ್ದತೆಯೇ ಸಿನಿಮಾದ ಕಥೆ. ಹಜ್ ಯಾತ್ರೆ ಎಂದರೆ ಅದು ಜೀವನದ ಗುರಿ. ಹೊರಡುವಾಗ ಹಿಂತಿರುಗಿ ಬರುವ ಹಂಬಲ  ಕೆಳೆದುಕೊಂಡು ಹೊರಡಬೇಕು. ಈ ಸಿನಿಮಾದಲ್ಲಿ ಅದನ್ನು ಎಳೆ ಎಳೆಯಾಗಿ ತೋರಿಸಲಾಗಿದೆ.   ಆತ ಮೊದಲಿಗೆ ತನ್ನ ಮನೆಯಲ್ಲಿದ್ದ ಸಾಕುವ ಹಸುವನ್ನು ಮಾರಾಟ ಮಾಡುತ್ತಾನೆ. ಆತನ ಪತ್ನಿಗೆ ಅದು ಜೀವಾಳವೇ ಆಗಿರುತ್ತದೆ. ಮನೆಯಲ್ಲಿ ಬೇರೆ ಯಾರೂ ಇಲ್ಲದಿರುವುದರಿಂದ ಆಕೆಗೆ ಅದು ಬಂಧುವಿನಂತೆ ಇರುತ್ತದೆ. ಅದನ್ನು ಮಾರಾಟ ಮಾಡುವಾಗ ಆಕೆ ( ನಟಿ ಜರಿನಾ ವಹಾಬ್) ಬಹಳ ಸಂಕಟ ಅನುಭವಿಸುತ್ತಾಳೆ. ಆದರೆ ಅವರಿಗೆ ಅದು ಅನಿವಾರ್ಯ.  ಹತ್ತಿರದ ನಗರಕ್ಕೆ ಹೋಗಿ ಪಾಸ್ ಪೋರ್ಟ್ ಅರ್ಜಿ ಹಾಕಿ ಪಡೆಯುತ್ತಾರೆ.  ಆತ ಅಲ್ಲಿ ಇಲ್ಲಿ ಮಾಡಿದ ಸಾಲಗಳನ್ನು ನೆನಪು ಮಾಡಿಕೊಂಡು ಚಿಕ್ಕಾಸೂ ಬಾಕಿ ಇಲ್ಲದೇ ತೀರಿಸುತ್ತಾನೆ.  ಹಜ್ ಗೆ ಹೋಗಬೇಕಾದರೆ ಎಲ್ಲರ ಋಣವನ್ನೂ ತೀರಿಸಿ ಹೋಗಬೇಕು. ಇಷ್ಟು ಮಾತ್ರವಲ್ಲ, ಕಾರಣಾಂತರದಿಂದ ಯಾರಲ್ಲೋ ಜಗಳವಾಡಿ ಏನೋ ವೈಷಮ್ಯ ಬೆಳೆದಿರುತ್ತದೆ. ಈತನ ನೆರೆ ಮನೆಯವನಾಗಿದ್ದವನು ಯಾವುದೋ ಕಾಲದಲ್ಲಿ ಇವರಲ್ಲಿ ಜಗಳಮಾಡಿ ದೂರ ಹೋಗಿದ್ದ. ಆತನನ್ನು ಹುಡುಕಿ ಆತನ ಮನೆಗೆ ಹೋಗಿ ಆ ವೈಷಮ್ಯವನ್ನು ಮರೆಯುವಂತೆ ಅದಕ್ಕೆ ಪರಿಹಾರವನ್ನು ಕಾಣುವುದಕ್ಕೆ ತೊಡಗುತ್ತಾನೆ. ಇದು ನಿಜಕ್ಕೂ ಭಾವನಾತ್ಮಕವಾಗಿರುತ್ತದೆ. ಇಷ್ಟೇ ಅಲ್ಲ ಹೋಗುವುದಕ್ಕೆ ಮತ್ತಷ್ಟು ಹಣದ ಅವಶ್ಯಕತೆ ಇರುತ್ತದೆ. ಮನೆಯ ಅಂಗಳದಲ್ಲಿರುವ ಹಲಸಿನ ಮರವನ್ನು ಮರದ ವ್ಯಾಪಾರಿಗೆ ಕೊಡುತ್ತಾನೆ. ಮರದ ವ್ಯಾಪಾರಿಯೂ ಅಷ್ಟೇ..ಮರ ಬೇಕಾಗಿಲ್ಲ ಹಣ ನೀನೆ ಇಟ್ಟುಕೋ ಎಂದರೂ ಈತ ಒಪ್ಪಿಕೊಳ್ಳುವುದಿಲ್ಲ. ಮರವನ್ನು ಕಡಿದು ಕೊಂಡೊಯ್ಯುವಂತೆ ಹೇಳುತ್ತಾನೆ. ತನಗೆ ಸಮಯ ಬಂದಾಗ ಕೊಂಡೊಯ್ಯುತ್ತೇನೆ ಎಂದುಕೊಂಡಿದ್ದ ವ್ಯಾಪಾರಿ ಒಂದು ದಿನ ಮರೆವನ್ನು ಕಡಿಯಲು ಮುಂದಾಗುತ್ತಾನೆ. ಆಗ ಮರದ ಒಳಗೆ ಸಂಪೂರ್ಣ ಟೊಳ್ಳಾಗಿರುತ್ತದೆ.  ಛೇ ಹೀಗಾಯಿತಲ್ಲ ಎಂದು ಅಬು ಮಮ್ಮಲ ಮರುಗುತ್ತಾನೆ. ವ್ಯಾಪಾರಿ ಪರವಾಗಿಲ್ಲ ನೀವು ಹೋಗಿ, ನೀವು ನನಗೆ ಮೋಸ ಮಾಡಿಲ್ಲ,   ಎಂದರೂ ಕೇಳದೆ, ನಿನಗೆ ಮೋಸಮಾಡಿ ಆ ಹಣವನ್ನು ಹಜ್ ಯಾತ್ರೆಗೆ ಉಪಯೋಗಿಸುವುದು ಸೂಕ್ತವಲ್ಲ. ಅದರ ಪಾವಿತ್ರ್ಯತೆ ಇಲ್ಲವಾಗುತ್ತದೆ ಎಂದು ಆ ಹಣವನ್ನು ಹಿಂದಿರುಗಿಸಿ  ಹಜ್ ಯಾತ್ರೆಗೆ ಹೋಗುವ ಬಯಕೆಯನ್ನು ಬಿಟ್ಟುಬಿಡುತ್ತಾನೆ. ಈ ಉದಾತ್ತವಾದ ತತ್ವ ನನಗೆ ನಿಜಕ್ಕೂ ಇಷ್ಟವಾಗುತ್ತದೆ. 

            ಕಾಶೀಯಾತ್ರೆಯ ಪಾವಿತ್ರ್ಯತೆಯ ಗಂಭೀರತೆ ಅರಿವಾಗುತ್ತಿದ್ದಂತೆ ಆತ್ಮ ಗಹನವಾದ ಪ್ರಶ್ನೆಗಳನ್ನು ಮಾಡುತ್ತಾ ಹೋಗುತ್ತದೆ. ಯಾರು ಹೇಗೂ  ಹೋಗಿ ಬರಬಹುದು. ಆದರೆ ಆತ್ಮ ವಂಚನೆ ಎಂಬುದು ಎಲ್ಲಕ್ಕಿಂತ ದೊಡ್ಡ ವಂಚನೆ. ಯಾರಿಗೋ ವಂಚಿಸಿದ ಹಣವಾಗಲಿ ಸಂಪತ್ತಾಗಲೀ ಇಲ್ಲಿಗೆ ಬಳಕೆಯಾಗಬಾರದು. ಯಾರಲ್ಲೋ ಇದ್ದ ವೈಷಮ್ಯವನ್ನು ಬಿಡುವ ಪ್ರಯತ್ನವನ್ನಾದರೂ ಮುಕ್ತ ಮನಸ್ಸಿನಿಂದ ಮಾಡಬೇಕು.   ನ್ಯಾಯವಾದ ಸ್ವಂತ ದುಡಿಮೆಯಿಂದ ಹೋಗಿಬರುವ ನಿಷ್ಠೆಯನ್ನು ಹೊಂದಬೇಕು.  ಧನ ಸಂಪತ್ತು ಹೇಗೋ ಸಂಪಾದಿಸುತ್ತಾರೆ. ಆದರೆ ವೈಷಮ್ಯ ಅದನ್ನು ದೂರ ಮಾಡುವುದು ಬಹಳ ಕಷ್ಟ.  ನೀರು ಭೂಮಿ ಗಾಳಿ ಹೀಗೆ ಪಂಚಭೂತಗಳನ್ನು ಎಲ್ಲಾ ಪ್ರಾಣಿ ಪಕ್ಷಿಯೊಂದಿಗೆ ಮನುಷ್ಯ ಸಮಾನವಾಗಿ ಅನುಭವಿಸುವಾಗ ಇಲ್ಲಿ ಯಾರೂ ಕನಿಷ್ಠರಲ್ಲ. ಎಲ್ಲರೂ ಶ್ರೇಷ್ಠರೆ. ಇನ್ನೊಬ್ಬರನ್ನು ಕನಿಷ್ಠ ಎಂದು ಕೀಳಾಗಿ ಕಾಣುವವನೇ ಸ್ವತಃ ಮನಸ್ಸಿನಲ್ಲಿ ಕೀಳು ಭಾವನೆಯನ್ನು ಹೊಂದಿರುತ್ತಾನೆ. ಕಾಶೀ ಯಾತ್ರಿಕನ ಒಂದು ಬೆರಳು ಹಿಡಿದು ಆಧರಿಸಿದರೂ ಕಾಶೀ ಯಾತ್ರೆಯ ಪುಣ್ಯ ಲಭಿಸುತ್ತದೆ. 

ಕಾಶೀ ಯಾತ್ರೆಯನ್ನು ಬೇರೆ ಯಾವುದಕ್ಕೂ ಸಮೀಕರಿಸುವುದು ಹೋಲಿಸುವುದು ಖಂಡಿತಾ ಸರಿಯಲ್ಲ. ಆದರೆ ಉದಾತ್ತವಾದ ಧ್ಯೇಯಗಳು ಎಲ್ಲೇ ಇರಲಿ ಅದು ಅನುಸರಣೀಯವಾಗಿರುತ್ತದೆ.  ಧರ್ಮಗಳು ಮನುಷ್ಯನ ಜನ್ಮದಿಂದ ಜತೆಯಾಗಿ ಬೆಳೆದು ಬರುತ್ತದೆ.  ತೆಂಗಿನ ಮರ ತನ್ನಲ್ಲಿ ಮಾವಿನ ಹಣ್ಣು ಇಲ್ಲದಿರುವುದಕ್ಕೆ ಬೇಸರಿಸುವುದಿಲ್ಲ. ಮಾವಿನ ಮರ ಮಾವಿನ ಹಣ್ಣನ್ನೇ ಕೊಡುತ್ತದೆ. ಮಲ್ಲಿಗೆಯ ಬಳ್ಳಿಯಲ್ಲಿ ಮಲ್ಲಿಗೆಯೇ ಅರಳುತ್ತದೆ. ಹೀಗೆ ವೈವಿಧ್ಯಮಯ ಎಂಬುದು ಪ್ರಕೃತಿ ಧರ್ಮ.  ನಾವು ಹುಟ್ಟಿ ಬೆಳೆಯುವ ಧರ್ಮವು ಅದೇ ಬಗೆಯಲ್ಲಿ ಪ್ರಕೃತಿ ಧರ್ಮವೇ ಹೊರದಲ್ಲಿ ಅದರಲ್ಲಿ ಭೇದವಿಲ್ಲ.   ಅದರಲ್ಲಿ ಯಾರು ಭೇದವನ್ನು ಕಾಣುತ್ತಾನೋ ಆತ ಎಂದಿಗೂ ಸ್ವಧರ್ಮಾಚರಣೆಯಲ್ಲಿಯೂ ನೆಮ್ಮದಿಯನ್ನು ಕಾಣಲಾರ.  ಮರಗಿಡ ಪಕ್ಷಿಗಳಿಗಿಲ್ಲದ ಧರ್ಮ ಭೇದ   ಮನುಷ್ಯನಲ್ಲಿ ಯಾಕಿರಬೇಕು?  ಇಂದು ಜಗತ್ತು  ಹಸಿವಿನಿಂದ ತತ್ತರಿಸುವುದಕ್ಕಿಂತಲೂ ಹೆಚ್ಚು ಧರ್ಮಾಂಧತೆಯ ಉರಿಗೆ ತತ್ತರಿಸುತ್ತಿದೆ.  ಹಿಂದೂ ಧರ್ಮದ ಮೂಲ ಸ್ವಭಾವವೇ ಪರಧರ್ಮ ಸಹಿಷ್ಣುತೆ. ಬೇರೆ ಯಾವಧರ್ಮವೂ ಮಾಡಿಕೊಡದ ಅವಕಾಶವನ್ನು ಹಿಂದೂ ಧರ್ಮ ಒದಗಿಸಿದ್ದನ್ನೂ ಚರಿತ್ರೆಯೇ ಹೇಳುತ್ತದೆ.  ಈಗ ಕಾಶಿ ಯಾತ್ರೆ ಸಿದ್ದತೆಯಾಗುವಾಗ ನಾನೆಷ್ಟು ಪ್ರಾಮಾಣಿಕನಾಗಿದ್ದೇನೆ ಎಂದು ಆತ್ಮವಂಚನೆ ಬಿಟ್ಟು ಒರೆಗೆ ಹಚ್ಚಬೇಕಾಗುತ್ತದೆ. ಆಗಈ ಸಿನಿಮಾದ ಅಬುವಿನ ಪಾತ್ರ ನೆನಪಾಗುತ್ತದೆ. ಏನೂ ಇಲ್ಲದ ಆ ಬಡವನಲ್ಲಿ ಇದ್ದದ್ದು ಪ್ರಾಮಾಣಿಕತೆ , ನಿಷ್ಠೆ ಮತ್ತು ಭಗವಂತನ ಮೇಲಿನ ಪ್ರೇಮ.  ಕಾಶೀ ಯಾತ್ರೆಯ ಅನುಭವದ ನಿರೀಕ್ಷೆಯಲ್ಲಿದ್ದೇನೆ.

 


No comments:

Post a Comment