Thursday, January 26, 2023

ಪವಿತ್ರ ಪುಷ್ಪ!!!

         
ರಾತ್ರಿ ಬೆಂಗಳೂರಿನಿಂದ  ಹೊರಟ  ಸುಗಮ ಟೂರಿಸ್ಟ್  ಮುಂಜಾನೆ ಐದೂ ವರೆಗೆ ಕೊಪ್ಪದ ಬಸ್ಸು ನಿಲಾಣಕ್ಕೆ  ಬಂದು ನಿಂತಿತು.  ಮಲೆನಾಡಿನ ಮಂಜು ಮುಸುಕಿದ ವಾತಾವರಣ ಆಹ್ಲಾದಮಯವಾಗಿತ್ತು. ಪಕ್ಕದ ಕಿಟಿಕಿ ಗಾಜು ತೆರೆದು ಸ್ವಚ್ಛಗಾಳಿಗೆ ಮುಖ ಒಡ್ಡಿದೆ. ಇನ್ನು ಮುಂದಿನ ವಾಟರ್ ಟಾಂಕ್ ಬಸ್ ಸ್ಟಾಪ್ ಗೆ ಬಸ್ಸು ಹೊರಡಬೇಕಿತ್ತು. ಬಸ್ ಕ್ಲೀನರ್ ಬೆಂಗಳೂರಿನಿಂದ ಬಂದ ಪಾರ್ಸಲ್ ಮೂಟೆಗಳನ್ನು ಎಳೆದು ಎಳೆದು ಹಾಕುತ್ತಿದ್ದ. ಬಸ್ಸಿನ ಗರ್ಭದಲ್ಲಿ ಎಷ್ಟೊಂದು ವಸ್ತುಗಳಿವೆ ಆಶ್ಚರ್ಯವಾಯಿತು. ದೊಡ್ಡದಾದ ಹೂವಿನ ಮೂಟೆಗಳನ್ನು ಎತ್ತಿ ಹೊರಗಿಟ್ಟ.  ಇನ್ನೇನು ಬಸ್ಸು ಹೊರಡುವುದರಲ್ಲಿತ್ತು. ಅಲ್ಲೇ ಇದ್ದ ಬೀದಿ ನಾಯಿ ತನ್ನ ಅನ್ವೇಷಣೆಯನ್ನು ಆರಂಭಿಸಿ ಹೂವಿನ ಮೂಟೆಯನ್ನು ಸ್ಕ್ಯಾನ್ ಮಾಡುತ್ತಾ ಇತ್ತು. ಮುಂದೆ ನಾನು ಯೋಚಿಸಿದಂತೆ ಯಥಾ ಪ್ರಕಾರ ತನ್ನ ಒಂದು ಕಾಲು ಎತ್ತಿ ಅಪವಿತ್ರಃ ಪವಿತ್ರೋವಾ...... ಅಂತ ಪ್ರೋಕ್ಷಣೆ ಮಾಡಿ ಮತ್ತೊಮ್ಮೆ ಮೂಸಿ ಹೊರಟು ಹೊಯಿತು. ತುಸು ಹೊತ್ತಿನಲ್ಲೇ ಅದರ ವಾರಸುದಾರ ಅಂಗಡಿಯಾತ ದ್ವಿಚಕ್ರದಲ್ಲಿ ಆ ಪವಿತ್ರವಾದ ಹೂವಿನ ಮೂಟೆಯನ್ನು ಹೊತ್ತು ಕೊಂಡು ಹೋದ.  ನಾನು ಬಸ್ಸಿನೊಳಗೇ ಇದನ್ನು ನೋಡುತ್ತಿದ್ದೆ. ಅದೇನು ಕರ್ಮವೋ ನನಗೆ ಇಂತಹ ಮಾದರೀ  ದೃಶ್ಯಗಳೇ ಅಗಾಗ ಕಣ್ಣಿಗೆ ಬೀಳುತ್ತಾ ಇರುತ್ತವೆ. ಮೊಬೈಲ್ ತೆಗೆದು ಫೋಟೋ ತೆಗೆಯೋಣ ಎಂದರೆ ಇದು ಕ್ಷಣ ಮಾತ್ರದಲ್ಲೇ ನಡೆದು ಹೋಯಿತು.

ಸಾಂದರ್ಭಿಕ ಚಿತ್ರ

ಮತ್ತೆ ಯೋಚನೆಗೆ ವಸ್ತು ಸಿಕ್ಕಿತು.  ಆ ಹೂವಿನ ಭಾಗ್ಯವೋ ಅದನ್ನು ಕೊಂಡುಕೊಳ್ಳುವವರ ಪುಣ್ಯ ಫಲವೋ ದೇವರೇ ಎನ್ನುವಂತಾಯಿತು. ಅದೇ ಹೂವು...ಎಲ್ಲಿಗೆಲ್ಲ ಹೋಗಿ ಈ ಸಿಂಚನವನ್ನು ಪೂರ್ಣಗೊಳಿಸಿಬಿಡುತ್ತದೋ ಎಂದು ಯೋಚಿಸುತ್ತಾ ವಸ್ತು ಸ್ಥಿತಿಯ ವಿಡಂಬನೆಗೆ ಆತಂಕ ಪಟ್ಟೆ.  ಸಹಜವಾಗಿ ನಮಗೊಂದು ಭಾವನೆಯಿದೆ. ದುಡ್ಡು  ಕೊಟ್ಟರೆ ಅದಕ್ಕೆ ಮಾತ್ರ ಮೌಲ್ಯ ....ಉಳಿದೆಲ್ಲವೂ ಅದರ ಎದುರು ಅಪಮೌಲ್ಯದ ವಸ್ತುಗಳಾಗಿಬಿಡುತ್ತವೆ. ಕೊಪ್ಪದಂತಹ ಮಲೆನಾಡಿನ ಊರಿನಲ್ಲಿ ಸಹಜವಾಗಿ ಅರಳುವ ಹೂವಿಗೆ ಬರಗಾಲವೇ? ಇನ್ನು ಈ ಊರಿಗೆ ದೊಡ್ಡ ವಸತಿ ಸಮುಚ್ಚಯಗಳು ಬರಲಿಲ್ಲ. ಹಾಗಾಗಿ ಸುಂದರವಾಗಿದೆ ಎಂದು ಕೊಂಡರೂ ನಮ್ಮ ಜನರ ಮನೋಭಾವ ಆಧುನೀಕತೆಯನ್ನೇ ಅಪ್ಪಿಕೊಳ್ಳುವ ತವಕದಲ್ಲಿದೆ. ಒಂದೆರಡು ಹೂವು ಗಿಡಗಳನ್ನು ಬೆಳೆಸಲಾಗದ ಮನೆ ಕೊಪ್ಪದಲ್ಲಿ ಇರಲಾರದು. ಎಲ್ಲಾ ಮನೆಯ ಅಂಗಳದಲ್ಲಿ ಒಂದಿಷ್ಟು ಹೂವು ಅರಳಿ ನಳ ನಳಿಸುತ್ತದೆ. ಜನರಿಗೆ ಅದರ ಮೇಲೆ ವಿಶ್ವಾಸವೂ ಇಲ್ಲ. ಗೌರವವೂ ಇಲ್ಲ. ಹೀಗೆ ಶ್ವಾನ ಪ್ರೋಕ್ಷಣೆಯಲ್ಲಿ ಪವಿತ್ರಗೊಂಡ ಹೂವನ್ನು ದೇವರ ಮುಡಿಗೆ ಅರ್ಪಿಸುತ್ತಾರೆ. ಕೊನೆಗೆ ತೀರ್ಥಕ್ಕೂ ಮುಳುಗಿಸಿ.....ಯೋಚಿಸುವಾಗ ಅದರ ಗಂಭೀರತೆ ಅರಿವಾಗುತ್ತದೆ. ಹೊರಗೆ ಅಲಂಕಾರಕ್ಕೂ ಉಪಯೋಗಿಸುವುದಕ್ಕೆ ಯೋಚಿಸಬೇಕಾದ ಹೂವನ್ನು ದುಡ್ಡು ಕೊಟ್ಟು ಖರೀದಿಸಿ ದೇವರ ತಲೆ ಮೇಲೆ ಇಟ್ಟು ಕೈ ಮುಗಿವ ಮೌಢ್ಯಕ್ಕೆ ಏನು ಎನ್ನಬೇಕು? ಬೆಂಗಳೂರಿನಂತಹ ನಗರದಲ್ಲಿ ಹೂವು ಬೆಳೆಯಲಾಗದ ಅಸಹಾಯಕ ಮನೆಗಳು ಬೇಕಾದಷ್ಟಿವೆ. ( ಆದರೂ ಒಪ್ಪಿಕೊಳ್ಳತಕ್ಕದ್ದಲ್ಲ), ಕೊಪ್ಪದಂತಹ ಊರಿನಲ್ಲಿ ಅಲ್ಲೇ ಬೆಳೆಯುವ ಹೂವಿಗೆ ಬರಗಾಲವೇ? ಬರಗಾಲವಲ್ಲ. ನಮ್ಮ ಸೋಮಾರಿತನ, ನಮ್ಮ ಮೌಢ್ಯ ಇದಕ್ಕೆ ಉತ್ತರಿಸುತ್ತದೆ.   ಕೊನೇ ಪಕ್ಷ ದೇವರ ಪೂಜೆಗಾದರೂ....ಅಲ್ಲೇ ಬೆಳೆದ ಹೂವನ್ನು ಸುಲಭದಲ್ಲೇ ಉಪಯೋಗಿಸಬಹುದು. ಸಹಜವಾಗಿ ಸುಂದರ  ಪಕೃತಿಯ  ಸಂಕೇತವಾಗುತ್ತದೆ. ಮನೆಯಂಗಳದಲ್ಲಿ ಹೂವು ಇಲ್ಲ ಎಂದುಕೊಂಡರು, ಹತ್ತಿರದ ತೋಟ ಗುಡ್ಡಕಾಡಿಗೆ ಇಳಿದರೆ ಮಹಾ ಲಕ್ಷಾರ್ಚನೆಗೆ ಬೇಕಾದ ಹೂವು ಸಂಗ್ರಹಿಸಬಹುದು. ನಮ್ಮ ಬಾಲ್ಯದಲ್ಲಿ ಮನೆಯ ಅಥವಾ ಊರ ದೇವಸ್ಥಾನದ ವಿಶೇಷ ಪೂಜೆಗೆ  ಗುಡ್ಡ ತೋಟ ಹೋಗಿ ಕೇಪುಳ ( ಕಾಡು ಹೂವು) ಕೊಯ್ದು ತರುತ್ತಿದ್ದ ದಿನಗಳು ನೆನಪಾಯಿತು. ಅದೇನು ಸಂಭ್ರಮ. ಮನೆ ಮನೆ ಹೋಗಿ ಹೂವು ತುಳಸಿ ಸಂಗ್ರಹಿಸುತ್ತಿದ್ದದ್ದು ನೆನಪಾಯಿತು. ಛೇ ಮನುಷ್ಯ ತಾನು ಅಪವಿತ್ರವಾಗುವುದಲ್ಲ ದೇವರನ್ನೂ ನಂಬಿಕೆಯನ್ನೂ ಅಪವಿತ್ರಗೊಳಿಸುತ್ತಿದ್ದಾನೆ. 

        ಮದುವೆ ಅಥವಾ ಇನ್ನಿತರ ಪವಿತ್ರ ಕಾರ್ಯಗಳಿಗೆ ಉಚಿತವಾಗಿ ಸಿಗುವ ಪಕೃತಿಯ ಪ್ರಸಾದ ಕೈಯಳತೆ ದೂರದಲ್ಲೇ ಲಭ್ಯವಿದೆ. ನಮಗೆ ದುಡ್ಡುಕೊಟ್ಟರಷ್ಟೇ ತೃಪ್ತಿ ಎಂದಾದರೆ ಅದು ಮೂರ್ಖತನ, ಢಂಬಾಚಾರ ಎನ್ನಬೇಕು. ದುಡ್ಡುಕೊಟ್ಟು ದುಬಾರಿಯ ಸೇವಂತಿಗೆ ಮಲ್ಲಿಗೆ ರೋಜಾ ಹೂವುಗಳೇ ದೇವರಿಗೆ  ಪ್ರಿಯ ಎಂದು ತಿಳಿದರೆ ನಮ್ಮ ದೇವರಿಗೆ ನಾವೇ ಮೌಲ್ಯ ಕಲ್ಪಿಸಿದಂತೆ.  ಎಂತಹ ಅನಿವಾರ್ಯ ಸಂದರ್ಭಗಳಲ್ಲೂ ನಮ್ಮ ಕಾರ್ಯ ನಮ್ಮ ಭಾವನೆಗಳು ನಮ್ಮ ಮನಸ್ಸು  ಪವಿತ್ರವಾಗಿರಬೇಕು.  ನಾವು ನಮ್ಮ ಅರ್ಹತೆಯಲ್ಲಿ ವಿವೇಚಿಸದೇ ಕುಳಿಕೊಳ್ಳದೇ ಇದ್ದರೆ...ಅಲ್ಲಿ ಶ್ವಾನ ಬಂದು ಕುಳಿತು ಬಿಡುತ್ತದೆ.  


Sunday, January 22, 2023

ಕಾಶೀ ಯಾತ್ರ ಸನ್ನಾಹ - ೩ ಎಚ್ಚರ ಅಥವಾ ಜಾಗರಣೆ...


ಮನೆಯ ತಾಯಿ ಬೆಳಗ್ಗೆ ಎದ್ದು ಅಡುಗೆ ಕೋಣೆಯಲ್ಲಿ ಬೆಳಗಿನ ಉಪಾಹಾರಕ್ಕೆ ತಯಾರಿ ಮಾಡುತ್ತಾಳೆ. ಮನೆಯ ಬಹುತೇಕ ಮಂದಿಗಳು ನಿದ್ದೆಯಲ್ಲೇ ಜಾರಿರುತ್ತಾರೆ. ಹಲವುಸಲ ಅಪ್ಪನೂ ಈ ಪಾತ್ರ ನಿರ್ವಹಿಸುತ್ತಾರೆ. ಮನೆಯವರಿಗೆ ಎಲ್ಲರಿಗೂ ತಿಳಿದಿರುತ್ತದೆ ಈಗ ಉಪಾಹಾರ ಸಿದ್ದವಾಗುತ್ತದೆ. ಅರೆ ಪ್ರಜ್ಞಾವಸ್ಥೆಯಲ್ಲಿಯೂ ಉಸಿರು ಅಡುಗೆ ಘಮ ಘಮಿಸುವಿಕೆಗೆ ಅರಳುತ್ತದೆ. ಆದರೆ ಎಚ್ಚರವಾಗುವುದಿಲ್ಲ. ಎಚ್ಚರದ ಅರಿವಿದ್ದರೂ ಆಲಸ್ಯ ಬಿಡುವುದಿಲ್ಲ. ಅಡುಗೆ ಸಿದ್ದವಾದಾಗ ಎದ್ದರಾದೀತು ಎಂದು ಅರೆ ಪ್ರಜ್ಞಾವಸ್ಥೆಯನ್ನೇ ದೇಹ ಮನಸ್ಸು ಅಂಗೀಕರಿಸುತ್ತದೆ.  ಕೊನೆಗೆ ಎದ್ದು ನಿದ್ದೆ ಬಿಡುವಾಗ ಹಸಿವಿನ ಅರಿವಾಗುತ್ತದೆ. ಯಾವ ತಿಂಡಿಯಾದರೂ ಕುತೂಹಲ ಹಂಬಲ ತಟ್ಟೆ ಎದುರು ಕುಳಿತಾಗ ತಣಿಯುತ್ತದೆ. ಹಲವು ಸಲ ತಮ್ಮ ಆಶೆ ಚಪಲವನ್ನೂ ಒಪ್ಪಿಸಿ ಹೀಗೆ ಆಗಬೇಕಿತ್ತು ಎಂದು ಬೇಡಿಕೆ ಸಲ್ಲಿಸಿಯಾಗುತ್ತದೆ. ತಾಯಿ ಸ್ನೇಹ ಪ್ರೀತಿಯಿಂದ ಎಲ್ಲವನ್ನು ಸಿದ್ದ ಪಡಿಸಿ ಹೇಗಾಗಿರಬಹುದು ಎಂಬ ನಿರೀಕ್ಷೆಯಲ್ಲಿರುತ್ತಾಳೆ. ಪರಬ್ರಹ್ಮನಿಗೂ ಹುಟ್ಟಿಸಿದ ಮನುಷ್ಯ ಪ್ರಾಣಿಗಳನ್ನು ಒಂದೇ ರೀತಿ ಜೀವ ಕೊಡುವುದಕ್ಕೆ ಸಾಧ್ಯವಿರುವುದಿಲ್ಲ, ಹಾಗೆ ಅಡುಗೆಯೂ ಇಂದು ಇದ್ದ ಹಾಗೆ ನಾಳೆ ಇರುವುದಿಲ್ಲ. ಇದೆಲ್ಲ ದಿನಚರಿಯ ಒಂದು ಅಂಗ....ಆದರೆ ವೈಶಿಷ್ಟ್ಯ ಏನಿದೆ. ಬೆಳಗ್ಗೆ ಜಾಗೃತಳಾಗಿ ಎದ್ದು ನಿಲ್ಲುವ ತಾಯಿಯ ಎಚ್ಚರ ಅಥವಾ ಜಾಗೃತಿ ಎಲ್ಲರ ಹಸಿವನ್ನು ತಣಿಸಿಬಿಡುತ್ತದೆ. ಒಂದು ದಿನ ನಿದ್ರಿಸುವುದನ್ನು ಬಿಟ್ಟು ತಾಯಿ ಏನು ಮಾಡುತ್ತಾಳೆ ಎಂದು ಗಮನಿಸಿ. ಆಕೆಯ ಕೆಲಸಕ್ಕೆ ನೆರವಾಗುವ ಔದಾರ್ಯ ಏನೂ ಬೇಡ, ಸುಮ್ಮನೇ ಆಕೆಯ ಕೆಲಸವನ್ನು ಗಮನಿಸಿದರೆ ಸಾಕು....ಆಕೆಯಲ್ಲಿ ಉತ್ಸಾಹ ಪುಟಿದೇಳುತ್ತದೆ. ಆಕೆಯ ಕೆಲಸದ ವೈಶಿಷ್ಟ್ಯವನ್ನು ಕಂಡರೆ ಸಾಕು ಉತ್ಸಾಹ ಅದಮ್ಯ ಸ್ಥಿತಿಗೆ ತಲಪುತ್ತದೆ. ಅದಕ್ಕೆ ಬೇಕಾಗಿರುವುದು ಒಂದೇ ನಾವು ಎಚ್ಚರವಾಗುವುದು...ಅಥವಾ ಜಾಗೃತರಾಗುವುದು. 

ಇತ್ತೀಚೆಗೆ ನಮ್ಮ ಕಾಶೀ ಯಾತ್ರೆಯ ಪೂರ್ವ ಸಿದ್ದತೆಯಲ್ಲಿ ನಮ್ಮ ಯಾತ್ರಿಕರ ಸಭೆಗೆ (ಝೂಮ್ ಮೀಟಿಂಗ್) ಶ್ರೀ ಗೋಪಾಲ್ ನಾಗರಕಟ್ಟೆ ಯವರು ಅತಿಥಿಗಳಾಗಿ ಬಂದಿದ್ದರು. ವಾಸ್ತವದಲ್ಲಿ ನನಗೆ ಈ ಸಭೆಯಲ್ಲಿ ಬಹುತೇಕ ಎಲ್ಲರೂ ಅಪರಿಚಿತರೇ, ಸಭೆಗೆ ಹಾಜರಿರುವ ಎಲ್ಲರನ್ನೂ ನಾನು ಮುಖತಃ ನೋಡಿಯೇ ಇಲ್ಲ. ಹಾಗಾಗಿ ಈ ಮಹನೀಯರ ಬಗ್ಗೆಯೂ ಹೆಚ್ಚು ಅರಿವಿರಲಿಲ್ಲ. ಇವರು ಅಯೋಧ್ಯೆಯಲ್ಲಿ ರಾಮ ಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣದ ಹೊಣೆ ಹೊತ್ತ ಪ್ರಮುಖ ವ್ಯಕ್ತಿಗಳು. ನಮ್ಮ ಯಾತ್ರೆಯಲ್ಲಿ ಆಯೋಧ್ಯೆಯ ಯಾತ್ರೆಯೂ ಒಂದು ಬಹು ಮುಖ್ಯವಾಗಿರುವುದರಿಂದ ಇವರ ಮಾತುಗಳು ಬಹಳ ಪ್ರಾಮುಖ್ಯವೆನಿಸಿತ್ತು. ಇವರು ಕೆಲವೇ ಕೆಲವು ನಿಮಿಷಗಳಷ್ಟು ಸಿಕ್ಕ ಅವಕಾಶದಲ್ಲಿ ಬಹಳಷ್ಟು ಮಾಹಿತಿಗಳನ್ನು ಮನೆ ಮಂದಿಗೆ ಹೇಳುವಂತೆ ಬಹಳ ಉತ್ಸಾಹದಿಂದ ವಿವರಿಸಿಬಿಟ್ಟರು. ಮಾತ್ರವಲ್ಲ ನಮ್ಮನ್ನೆಲ್ಲಾ ಬಹಳ ಆಸಕ್ತಿ ಪೂರ್ಣವಾಗಿ ಅಯೋಧ್ಯೆಗೆ ಬರುವಂತೆ ಭಿನ್ನವಿಸಿಕೊಂಡ ರೀತಿ....ಮುಂದೆ ನಮ್ಮ ಯಾತ್ರೆಯಲ್ಲಿ ಅಲ್ಲಿನ ಸಿದ್ದತೆ ಹೇಗಿರಬಹುದು ಎಂಬ ಕುತೂಹಲ ಹುಟ್ಟಿಕೊಂಡಿತು. ಯಾತ್ರೆಯ ಸಂಘಟನಾತ್ಮಕ ಬೆಳವಣಿಗೆ ಮತ್ತು ಅದರ ನಿರ್ವಹಣೆ ನಿಜಕ್ಕೂ ವಿಚಿತ್ರವೆನಿಸಿತ್ತು. ಅತ್ಯಂತ ವೈಶಿಷ್ಟ್ಯವೆನಿಸಿತ್ತು. ಮತ್ತು ಒಂದು ಬಗೆಯ ಆತ್ಮವಿಶ್ವಾಸದ ಜಾಗೃತಿಯನ್ನು ಮೂಡಿಸಿತ್ತು. ಶ್ರೀ ಗೋಪಾಲ್ ನಾಗರಕಟ್ಟೆಯವರ ಮಾತುಗಳನ್ನು ಕೇಳಿದಾಗ ಮನೆಯ ತಾಯಿ ಎದ್ದು ಅಡುಗೆ ಮಾಡುವಂತೆ ಭಾಸವಾಯಿತು ಎಂದರೆ ಅತಿಶಯ ಎನಿಸಲಿಲ್ಲ. ಯಾಕೆಂದರೆ ಸರಿ ಸುಮಾರು ಇನ್ನೂರು ಜನಗಳು ಯಾತ್ರೆಯಲ್ಲಿ ಭಾಗವಹಿಸುವಾಗ ಆ ಸಿದ್ಧತೆ ಅದೇನು ಸಣ್ಣ ವಿಷಯವಂತೂ ಖಂಡಿತ ಅಲ್ಲ. ಸಾಮಾನ್ಯವಾಗಿ ಕಲ್ಪನೆಗೆ ನಿಲುಕದ ವ್ಯವಸ್ಥೆ ಇದು. ಇದರಲ್ಲಿ ಒಂದು ಚಿಕ್ಕ ಮೊಳೆಯಂತೆ ನಾನೂ ಒಂದು ಅಂಗವಾಗಿರುವುದು ಒಂದು ವಿಸ್ಮಯ ಸಂಗತಿ. ಮನೆಯ ತಾಯಿ ಎದ್ದು ಅಡುಗೆ ಮಾಡುತ್ತಿದ್ದಾರೆ, ನಾವು ಎಚ್ಚರಗೊಂಡು ಅಲ್ಲಿಗೆ ಗಮನ ಹರಿಸುವುದೊಂದೆ ಉಳಿದಿದೆ. ಜಾಗೃತಿ ಎಂಬುದು ಅರ್ಥಪೂರ್ಣವಾಗುವುದು ಇಂತಹ ವಿಚಾರಗಳಿಂದ. ನಾವೇನೂ ಮಾಡಬೇಕಾದದ್ದಿಲ್ಲ. ಕೇವಲ ಎಚ್ಚರಗೊಳ್ಳಬೇಕು. ಅದು ಅವರ ಉತ್ಸಾಹವನ್ನು ನೂರ್ಮಡಿಗೊಳ್ಳಿಸುತ್ತದೆ. ಇದು ಅವರ ಮಾತಿನ ಅಂತರಂಗ ಮತ್ತು ಬಹಿರಂಗದಲ್ಲಿ ಧ್ವನಿಯುಕ್ತವಾಗಿ ಕಂಡುಬಂತು. ಮಾಡಿದ ಅಡುಗೆಯಾಲಿ ಹುಳಿಖಾರ ವೆತ್ಯಾಸ ಅವರವರ ಅಭಿರುಚಿಗೆ ಹಿತವೊ ಅಹಿತವೋ ಆಗಬಹುದು...ಆದರೆ ನಮ್ಮ ಮನೆಯ ಅಡುಗೆ ಮನೆ ಮತ್ತು ವ್ಯಕ್ತಿ ಎಂಬುದು ಗಮನಾರ್ಹವಾಗುವಾಗ ಎಲ್ಲ ಕೊರತೆಗಳೂ ನಗಣ್ಯವಾಗಬಹುದು ಎಂದನಿಸುತ್ತದೆ. 

ಸಾಮಾನ್ಯವಾಗಿ ಯಾವುದೇ ಮನೆಗೆ ಅತಿಥಿಗಳಾಗಿ ಹೋದಾಗ....ಅಲ್ಲಿ ಹೊಟ್ಟೆತುಂಬ ಬಿರಿಯುವಂತೆ ಬೇಡ ಬೇಡ ಎಂದರೂ ಊಟ ಉಪಚಾರ ಮಾಡಬಹುದು. ಆದರೆ ಮುಖದಲ್ಲಿ ಪ್ರಸನ್ನತೆ, ಬಾಯಿತುಂಬ ಸೌಹಾರ್ದತೆಯ ಮಾತು ಇಲ್ಲ ಎಂದರೆ ಹೊಟ್ಟೆತುಂಬುವ ಊಟ ಎಂಬುದು ಬಾಹ್ಯ ಆಡಂಬರವಾಗುತ್ತದೆ. ಹಾಗಾಗಿ ಶ್ರೀ ನಾಗರಕಟ್ಟೆಯವರ ಮಾತುಗಳು ಅಪರಿಚಿತ ಜಾಗದ ಅನುಭವಕ್ಕೆ ಸ್ಫೂರ್ತಿಯನ್ನು ಉಕ್ಕಿಸುವಲ್ಲಿ ಸಂದೇಹವಿಲ್ಲ.

ನಮ್ಮ ಸುತ್ತಲೂ ಹೀಗೆ ಸತ್ಕಾರ್ಯವನ್ನು ಮಾಡುವವರು ಕೆಲವರಿದ್ದರೆ,  ಅದರ ಫಲ ಉಣ್ಣುವವರು ಹಲವರಿರುತ್ತಾರೆ. ಇದು ಸಹಜ. ಜೇನು ಹುಳಕ್ಕೂ ಅರಿವಿರುವುದಿಲ್ಲ ತಾನೇನೂ ಮಾಡುತ್ತಿದ್ದೇನೆ ಎಂದು. ಒಂದು ವೇಳೆ ಅದು ಸಿಹಿ ಸಂಗ್ರಹಿಸದೇ ಇರುತ್ತಿದ್ದರೆ......ಅದು ಕೇವಲ ಒಂದು ಹುಳುವಾಗಿ ನಿಕೃಷ್ಟವಾಗಿಬಿಡುತ್ತಿತ್ತು. ಹೀಗೆ ನಮ್ಮನ್ನು ಎಚ್ಚರಿಸುವವರು ನಮ್ಮ ಸುತ್ತಮುತ್ತ ಹಲವರಿರುತ್ತಾರೆ....ನಾವು ನಿದ್ದೆ ಬಿಟ್ಟು ಏಳಬೇಕು ನಿಜ.....ಆದರೆ ಅದೂ ಅಸಾಧ್ಯವಾದಾಗ ಅದರ ಅರಿವಾದರೂ ಇರಬೇಕು. ಆ ಅರಿವಿನಲ್ಲಿ ಅವರ ಕಾರ್ಯವನ್ನು ಹೊಗಳಬೇಕೆಂದೇನೂ ಇಲ್ಲ ....ತೆಗಳದೇ ಇದ್ದರೆ ಅದೇ ದೊಡ್ಡ ಕೃತಜ್ಞತೆ. ಎಚ್ಚರಗೊಳಿಸುವುದು ಎಲ್ಲರಿಗೂ ಸಾಧ್ಯವಾಗುವ ಕೆಲಸವಲ್ಲ ಅದರ ಅರ್ಹತೆ ಕೆಲವರಿಗೆ ಮಾತ್ರವೇ ಇರುತ್ತದೆ. ನಾವು ಒಳ್ಳೆಯದನ್ನು ಕಂಡಾಗ ಬಿಡದೆ ಹೊಗಳಲೇ ಬೇಕು. ಹಾಗಂತ ಕೆಟ್ಟದನ್ನು ಕಂಡಾಗ ತೆಗಳುವುದನ್ನೂ ಬಿಟ್ಟು  ಸುಮ್ಮನಿದ್ದು ಬಿಡಬೇಕು.   ಸತ್ಕಾರ್ಯದಲ್ಲಿ ಹಲವು ಸಲ ಜೇನು ಹುಳು ಕಡಿದಂತೆ ಎರಡೂ ಇರುತ್ತದೆ.  ತೆಗಳುತ್ತಾ ಇದ್ದರೆ ಒಳ್ಳೆಯದರ ಅಭಾವ ತನ್ನಿಂತಾನೆ ಸೃಷ್ಟಿಯಾಗುತ್ತದೆ.  ತಪ್ಪು ಹೇಳಬೇಕು , ಅದರ ಅರಿವು ಉಂಟಾಗಬೇಕು ನಿಜ. ತಪ್ಪು ಹೇಳುವುದು ಇದೆಲ್ಲವು ಉತ್ತಮ ಪರಿಣಾಮವನ್ನು ಉಂಟು ಮಾಡುತ್ತದೋ ಎಂಬ ಗಮನವೂ ಜತೆಯಲ್ಲೇ ಇರಬೇಕು. ಕೇವಲ ತಪ್ಪು ಹೇಳುವುದಷ್ಟೇ ಇದ್ದರೆ ತಪ್ಪು ಹೇಳುವ ಔಚಿತ್ಯವಾದರೂ ಏನು? 

ಕಾಶೀ ಎಂದರೆ ನಮ್ಮ ಸಂಸ್ಕೃತಿಯಲ್ಲಿ ಪ್ರಧಾನ ಎಂಬ ಪ್ರತೀತಿ ಇದೆ. ಕ್ರಿಕೇಟ್ ನಲ್ಲಿ  ಲಾರ್ಡ್ಸ್ ಕ್ರೀಡಾಂಗಣವನ್ನುಕ್ರಿಕೇಟ್ ಕಾಶಿ ಎನ್ನುವಂತೆ ಕಾಶಿ ಎಂದರೆ ನಮ್ಮ ಆದಿಯೂ ಅಂತ್ಯವೂ ಹೀಗೆ ಆದ್ಯಂತವಾಗಿ ಕಾಶಿಯನ್ನು ಪರಿಗಣಿಸುತ್ತಾರೆ. ಕಾಶಿ ಎಂಬುದು ಪ್ರಧಾನವಾಗುವಾಗ ಕಾಶಿ ಎಂಬ ಹೆಸರೆ ಆದಿ ಮತ್ತು ಅಂತ್ಯವನ್ನು ನಿರ್ದೇಶಿಸುತ್ತದೆ. ಹೀಗೆ ಕಾಶಿ ಎಂಬುದು ಪ್ರಧಾನವಾಗಿರುವಾಗ ಅಲ್ಲಿಗೆ ಹೋಗುವ ಯಾತ್ರೆಗೂ ಇದು ಅನ್ವಯವಾಗುತ್ತದೆ. ಮನುಷ್ಯನಲ್ಲಿ ಮನಸ್ಸು ಎಂಬುದು ಪ್ರಧಾನವಾಗಿ ಮನಸ್ಸೇ ಕಾಶಿಯಾಗಿರುತ್ತದೆ. ಮನಸ್ಸು ಕಾಶಿಯಾಗುವಾಗ ಅಲ್ಲಿ ಪರಮೇಶ್ವರನೇ ಸರ್ವವ್ಯಾಪಕವಾಗಬೇಕು. ಮನಸ್ಸಿನಲ್ಲಿ ಈಶ್ವರನೇ ತುಂಬಿಕೊಳ್ಳುವಾಗ ಅಲ್ಲಿ ಬೇರೆ ಚಿಂತನೆಗೆ ಅವಕಾಶವೇ ಇರುವುದಿಲ್ಲ. ಈ ಯಾತ್ರೆಯಲ್ಲಿ ಯಾರೆಲ್ಲ ಇದ್ದಾರೋ ತಿಳಿದಿಲ್ಲ. ಬರುವ ಜನಗಳಲ್ಲಿ ಬಹುಮಂದಿಯ ಪರಿಚಯವೇ ಇಲ್ಲ. ಯಾವ ಜಾತಿಯೋ ಯಾವ ಧರ್ಮವೋ ಯಾವ ಯೋಚನೆಯೂ ಇಲ್ಲದೆ ಅಲ್ಲಿ ಕೇವಲ ಈಶ್ವರ ಮಾತ್ರ ತುಂಬಿಕೊಳ್ಳುವಾಗ ಬೇರೆ ಎಲ್ಲವೂ ಶೂನ್ಯವಾಗುತ್ತದೆ. ಪರಮೇಶ್ವರನ ಉಗಮ ಸ್ಥಾನವೇ ಶೂನ್ಯ. ಹಾಗಾಗಿ ಕಾಶೀ ಯಾತ್ರೆ ಎಂಬುದು ಶೂನ್ಯದಿಂದ ಶೂನ್ಯದತ್ತ ಎಂಬರ್ಥದಲ್ಲಿ ಅರ್ಥಪೂರ್ಣವಾಗುತ್ತದೆ. ಸಂಚಾಲಕತ್ವ ಮೊದಲೇ ಸಾರಿಯಾಗಿದೆ ಇಲ್ಲಿ ಮೇಲು ಕೀಳು ಜಾತಿಧರ್ಮ ಯಾವುದೂ ಇಲ್ಲ ಭಕ್ತಿ ಶ್ರದ್ದೆಯೇ ಸಮಾನತೆಯ ದ್ಯೋತಕವಾಗಬೇಕು.  ಅಂತರಂಗಕ್ಕೆ ಇಳಿದನಂತರವೇ ಸಮಾನತೆಯ ಅರಿವಾಗುತ್ತದೆ ಹೊರತು ದೂರದಿಂದ ನೋಡಿದರೆ ಇದು ಗೋಚರಿಸುವುದಿಲ್ಲ.  ಜಾತಿ ಭೇದ ಎಂಬುದು ವೆತ್ಯಸ್ತವಾದ ಬದುಕಿನ ಶೈಲಿಯಲ್ಲಿ ಇರುವುದಿಲ್ಲ. ಸಂಸ್ಕೃತಿಯಲ್ಲಿ ಇರುವುದಿಲ್ಲ. ಮತ್ತೊಂದು ಧರ್ಮವನ್ನು ಅಥವಾ ವ್ಯಕ್ತಿಯನ್ನು ನಿಂದಿಸುವಾಗ ಈ ಭೇದ ಎಂಬುದು ಹುಟ್ಟಿಕೊಳ್ಳುತ್ತದೆ.  ಪರ ನಿಂದನೆ ಇದ್ದಲ್ಲಿ ಯಾವ ಜಾತ್ಯಾತೀತ ಮನೋಭಾವವು ಜೀವಂತ ಇರುವುದಕ್ಕೆ ಸಾಧ್ಯವಿಲ್ಲ. ಮನಸ್ಸಿನಲ್ಲಿ ಕಾಶಿ ವಿಶ್ವನಾಥನೇ ಸರ್ವವ್ಯಾಪಕವಾಗಿರುವಾಗ ಇಂತಹ ಋಣಾತ್ಮಕ ಅಂಶಗಳಿಗೆ ಜಾಗವಿರುವುದಿಲ್ಲ. ಅಥವಾ ಇಂತಹ ಋಣಾತ್ಮಕ ಅಂಶಗಳು ಮನಸ್ಸಿನಲ್ಲಿದರೆ ಅಲ್ಲಿ ಈಶ್ವರ ನೆಲೆಯಾಗುವುದಕ್ಕೆ ಸಾಧ್ಯವಿಲ್ಲ. ಕಾಶೀ ಯಾತ್ರೆಯ ಪ್ರತಿ ಅಂಗದಲ್ಲೂ ಈಶ್ವರ ನೆಲೆಯಾಗಿದ್ದರೆ ಮಾತ್ರ ಕಾಶಿ ಯಾತ್ರೆ ಎಂಬುದು ಜೀವನದ ಮೋಕ್ಷ ಸಾಧನೆಗೆ ದ್ಯೋತಕವಾಗಿ ಅರ್ಥಪೂರ್ಣವಾದೀತು. ಇರುವೆಯ ಸಾಲುಗಳು ಒಟ್ಟಾಗಿ ಒಂದು ಗುರಿಯತ್ತ ಸಂಚರಿಸುತ್ತವೆ. ಮತ್ತು ಅವುಗಳಲ್ಲಿ ಯಾವ ಭೇದವು ಇರುವುದಿಲ್ಲ ಒಂದರ ಹಿಂದೆ ಒಂದು ಸೆಳೆಯಲ್ಪಟ್ಟು ಮುಂದಕ್ಕೆ ಸಂಚರಿಸುವಂತೆ ಕಾಶೀ ಯಾತ್ರೆ ಸಮಗ್ರವಾಗಿ ಸಾಮೂಹಿಕವಾಗಿ ಪರಮಾತ್ಮ ಗಮ್ಯವನ್ನೇ ಸಾರುತ್ತದೆ. 


Saturday, January 21, 2023

ಉಚಿತ....ಇದು ಔಚಿತ್ಯವನ್ನು ಮೀರಿಸುತ್ತದೆ


 ಬೀದಿಯ ಕೊನೆಯಲ್ಲೊಂದು ಬೀದಿ ದೀಪವಿದೆ. ಅದು ಸಾರ್ವಜನಿಕ ಬೀದಿ ದೀಪ ...ಹೀಗೆ ಹೇಳುವುದಕ್ಕೆ ಕಾರಣ ಅದರ ನಿಯಂತ್ರಣ ಸ್ವಿಚ್ ಅದರ ಕೆಳಗೆ ಇದೆ.  ಈ ಬೀದಿ ದೀಪಕ್ಕೆ ಕಂಬ ಇಲ್ಲ...ಪಕ್ಕದ ಮನೆಯ ಗೋಡೆಗೆ ನೇತು ಹಾಕಲಾಗಿದೆ. ಅದಕ್ಕೆ ಸೂಕ್ತ ಕಾರಣಗಳು ಹಲವಿದೆ. ಬೀದಿಯ ಕೊನೆಯಲ್ಲಿ ಇರುವುದರಿಂದ ಅಷ್ಟಾದರೂ ಸರಕಾರ ಹಾಕಿದೆಯಲ್ಲ ಎಂದು ತೃಪ್ತಿ. ಇದರ ಸ್ವಿಚ್ ಅಲ್ಲೇ  ಇರುವುದರಿಂದ ಇದನ್ನು ಬೇಕಾದಾಗ  ಹಾಕಬಹುದು ಅಥವಾ ನಂದಿಸಬಹುದು.  ಹಲವು ಸಲ ಅನ್ನಿಸುತ್ತದೆ ಇದಕ್ಕೆ ಸ್ವಿಚ್ ಅಗತ್ಯವೇ ಇಲ್ಲವೆನೋ....... ಉಳಿದ ದೀಪ ಸೂರ್ಯ ಮೂಡುವ ಮೊದಲೇ ಆರಿದರೆ ಇದು ಬಿಸಿಲು ಬರುವ ತನಕವೂ ಉರಿಯುತ್ತಾ ಇರುತ್ತದೆ. ಕತ್ತಲಾಗುವ ಮೊದಲೇ ಬೆಳಗುತ್ತದೆ. ಇದು ಉಚಿತ.     ಯಾಕಂದರೆ ನಮ್ಮಲ್ಲಿ ಉಚಿತ ಎಂಬುದರ ಸುಖ ಅತಿ ದೊಡ್ಡದು. ಉಚಿತ ಎಂಬುದು ಸಿಗುವಾಗ ಆಗುವ ನಷ್ಟದ ಬಗ್ಗೆ ಯೋಚಿಸುವುದಿಲ್ಲ. ಉಚಿತ ಹಾಕುವ ಭಂಡವಾಳ ಏನೂ ಎಂಬುದು ಯೋಚನೆಗೆ ಬರುವುದಿಲ್ಲ. ಅಂತೂ ಉಚಿತ. ಉಚಿತವಗಿ ವಿದ್ಯುತ್ ಬಂದರೆ ಮತ್ತೆ ಸ್ವಿಚ್ ಅಗತ್ಯವಾದರೂ ಏನು? ಹೇಗಿದ್ದರೂ ಉಚಿತ ಎಂಬ ಉಡಾಫೆ ಇದ್ದೇ ಇರುತ್ತದೆ. ಉಚಿತವನ್ನು ಅನುಭವವಿಸುವನೇ ಜಾಣ. ಉಚಿತ ನೀರು ಇದ್ದರೆ ಅದಕ್ಕೆ ಟ್ಯಾಪ್ ನ ಅವಶ್ಯಕತೆ ಇಲ್ಲ. ಉಚಿತ ವಿದ್ಯುತ್ ಇದ್ದರೆ ....ಯಾವ ಮನೆಯಲ್ಲೂ ಸ್ವಿಚ್ ಇರಲಾರದು ಎನ್ನಿಸುತ್ತದೆ. ರಾತ್ರೆ ಮಲಗುವಾಗ ತೊಂದರೆಯಾದರೂ ಉಚಿತ ಅಲ್ವ ಅಂತ ..ಭಾವನೆ ಇರಬಹುದು. ಇಲ್ಲೆಲ್ಲ ಉಚಿತದ ಭಂಡವಾಳ ಏನು ಎಂದು ಯೋಚಿಸುವುದಿಲ್ಲ.    ಉಚಿತ ಆದರೂ ಅದು ಮಿತಿ ಮೀರಿದಾಗ ಸಂತುಲನೆ ನಷ್ಟವಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಇರುವುದಿಲ್ಲ. ಯೋಚಿಸುವ ಪ್ರಕೃತಿ ಎಲ್ಲವನ್ನೂ ಉಚಿತವಾಗಿ ಕೊಡುತ್ತದೆ ಎಂದು ಭಾಸವಾಗುತ್ತದೆ. ಸೂರ್ಯನ ಬೆಳಕು ...ಗಾಳಿ ಮಳೆ...ಎಷ್ಟು ಬೇಕಾದರೂ ಅನುಭವಿಸಬಹುದು. ಉಚಿತ ಎಂದರು ಇದನ್ನು ಪೂರ್ಣವಾಗಿ ಅನುಭವಿಸುವುದಕ್ಕೆ ಸಾಧ್ಯವೇ? ಅನುಭವಿಸಿದರೂ ಅದು ಉಚಿತ ಎಂದು ಹೇಳುವುದಕ್ಕಾಗುತ್ತದೆಯೇ? ಪ್ರಕೃತಿ ಯಾವುದನ್ನೂ ಉಚಿತವಾಗಿ ಕೊಡುವುದಿಲ್ಲ. ಪ್ರಕೃತಿಗೆ ಕೊಡುವ ಮೌಲ್ಯವನ್ನು ಕೊಡದೇ ಇದ್ದರೆ ಅದು ಉಚಿತವಾಗಿ ವಾಗಿ ಸಿಗುವುದಿಲ್ಲ. ಆದರೆ ಈ ಜ್ಞಾನ ನಮಗೆ ಲಭ್ಯವಾಗುವುದಿಲ್ಲ. ನಾವಂತು ಯಾವುದು ಉಚಿತ ಇದೆ ಎಂಬುದರ ಹಿಂದೆ ಹೋಗುತ್ತೇವೆ. ಮೊದಲು ದೂರವಾಣಿಯ ಕರೆಗಳಿಗೆ ದುಡ್ದುಕೊಡುತ್ತಿದ್ದೆವು. ಈಗ ಎಲ್ಲವೂ ಉಚಿತ. ಹಾಗಂತ ಈ ಉಚಿತಕ್ಕೂ ನಾವು ಮೌಲ್ಯವನ್ನು ಕೊಡುತ್ತಿದ್ದೇವೆ ....ಒಂದು ನಮ್ಮ ಕಿವಿ ನಮ್ಮ ನಾಲಿಗೆ...ಇನ್ನೊಂದು ನಮ್ಮ ಅತ್ಯಮೂಲ್ಯವಾದ ಸಮಯ. ಆದರೆ ಇದೆಲ್ಲದರ ಯೋಚನೆ ನಮಗಿಲ್ಲ ಉಚಿತ ಅಲ್ವಾ...ನಾಲಗೆ ಕಿವಿ ಯಾವುದರ ಮೇಲೂ ನಮ್ಮ ನಿಯಂತ್ರಣ ಇರುವುದಿಲ್ಲ. 


ಸಾರ್ವಜನಿಕ ಇಚ್ಛಾಶಕ್ತಿ ಅದು ಕೇವಲ ಪ್ರಧಾನಿಗೆ ಅಥವಾ ಇನ್ನಾರಿಗೋ ಇರಬೇಕೆಂದು ನಾವು ಕಟುವಾಗಿ ವಿಮರ್ಶಿಸುತ್ತೇವೆ. ಉಚಿತದ ಮೋಹಮಾತ್ರ ನಮ್ಮನ್ನು ಬಿಟ್ಟು ಹೋಗುವುದಿಲ್ಲ.  ಉಚಿತ ಇದೆ ಎಂದು ಉಪಯೋಗಿಸಬಾರದು. ನಿಜಕ್ಕು ಉಚಿತ ಎಂದರೆ ಏನು ?   ಔಚಿತ್ಯ....ಆವಶ್ಯಕ ಇಷ್ಟೇ ಅರ್ಥವನ್ನು ಕೊಡುತ್ತದೆ. ಇದನ್ನು ಮೀರಿದರೆ ಅದು ಉಚಿತ ಹೇಗಾಗುತ್ತದೆ?  




Sunday, January 1, 2023

ಸಂಕಲ್ಪ ಶುದ್ದಿ

                 ಹತ್ತಿರದ  ಸಂಭಂಧಿಗಳೊಬ್ಬರು ವಾರಣಾಸಿಗೆ ಯಾತ್ರೆ ಹೋಗುತ್ತಾರೆ ಎಂದು ತಿಳಿದುಬಂತು. ಆಗ ನನ್ನಮ್ಮ ಹಲವು ವರ್ಷಗಳಿಂದ ಕಾಶಿಗೆ ಹೋಗುವುದಕ್ಕೆ  ಹಂಬಲಿಸುವುದು ನೆನಪಿಗೆ ಬಂತು. ಅವರು ಹೋಗುತ್ತಾರೆ ಎಂದು ಮೊದಲೇ  ತಿಳಿದಿದ್ದರೆ ಅಮ್ಮನನ್ನು ಕಳುಹಿಸಬಹುದಾಗಿತ್ತು. ಆದರೆ ಅವರಾಗಲೇ ಎಲ್ಲವನ್ನು ನಿಗದಿ ಪಡಿಸಿಯಾಗಿತ್ತು. ಕೊನೆಗೆ ಅವರ ಮುಖಾಂತರ ಅವರು ಹೋಗುವ ವಿವರ ಪಡೆದ ನಂತರ ರಾಷ್ಟ್ರ ಜಾಗ್ರತಿಯಾನದ ಅಂಗವಾಗಿ  ಆಯೋಜಿಸುವ ಪ್ರವಾಸ ಎಂದು ತಿಳಿದು ಬಂತು. ಮೊದಲಿಗೆ ಇದರ ರೂಪು ರೇಷೆಯ ಬಗ್ಗೆ ಏನೂ ಅರಿವಿರಲಿಲ್ಲ. ಆದರೆ ಇವರ ಪೂರ್ವಭಾವಿ ಸಭೆಗೆ ಹಾಜರಾದ ಮೇಲೆ ಸ್ಥೂಲವಾದ ಪರಿಚಯವಾಯಿತು. ಮೊದಲೂ ಏನೋ ಎಂದು ತಿಳಿದುಕೊಂಡಿದ್ದೆ. ಯವುದೋ  ಪ್ರವಾಸದ ಪ್ಯಾಕೆಜ್  ಇರಬಹುದು ಎಂಬ ಕಲ್ಪನೆಯಲ್ಲಿದ್ದ ನನಗೆ ಇದರ ಧ್ಯೇಯ ಉದ್ದೆಶ ಸಂಕಲ್ಪ ಶುದ್ದಿ ತಿಳಿದುಈ ಬಗೆಯ ಕಲ್ಪನೆ ಆಶ್ಚರ್ಯವನ್ನು ಉಂಟುಮಾಡಿತು. ನಿಜಕ್ಕೂ ಇದು ಕೇವಲ ರಾಷ್ಟ್ರ ಜಾಗೃತಿ ಅಭಿಯಾನವಲ್ಲ ಜೀವನದ ಪರಮಾರ್ಥವಾದ ಆತ್ಮ ಜಾಗೃತಿ ಅಭಿಯಾನ. ಜಾಗೃತಿ ಎಂದರೆ ಎಚ್ಚರಿಸುವುದು. ಮರೆವನ್ನು ಜ್ಞಾಪಿಸುವುದು. ನಾವು ನಮ್ಮನ್ನು ನಿದ್ರಿಸುವವರನ್ನು ನೋಡುವುದಕ್ಕಿಂತಲೂ ಎಚ್ಚರಿಸುವವರತ್ತ ದೃಷ್ಟಿ ಹರಿಸಬೇಕು.  ಬದುಕಿನ ಪರಮಾರ್ಥ ಅರ್ಥವಾದರೆ ಈ ಧ್ಯೇಯೋದ್ದೇಶದ ಸಂಕಲ್ಪ ಶುದ್ದಿಯ ಅರಿವಾಗುತ್ತದೆ.  ಇದು ಕೇವಲ ಪ್ರವಾಸವಲ್ಲ, ಇದೊಂದು ಯಾತ್ರೆ , ಜೀವನ ಯಾತ್ರೆ. ಮನುಷ್ಯನ ಹುಟ್ಟು ಒಂದು ಯಾತ್ರೆಯ ಆರಂಭ. ಆನಂತರ ಇದು ಯಾತ್ರೆ ಎಂದು ತಿಳಿಯದೆ ಮುಂದೆ ಹೋಗವುದು. ಗಮ್ಯವಲ್ಲದ ಕಡೆಗೆ ಹೋಗುವುದು. ಆದರೆ ಗಮ್ಯದ ಅರಿವಾಗುವುದು ಎಂದರೆ ಎಚ್ಚರವಾಗುವುದು ಎಂದರೆ ಎಚ್ಚರವಾಗುವುದು ಎಂದರ್ಥ. ಪ್ರಕೃತಿ ಪರಿಸರ ನಮ್ಮನ್ನು ಸದಾ ಎಚ್ಚರಿಸುತ್ತದೆ. ನಾವು ಎದ್ದೇಳಬೇಕು. ಈ ಜಾಗೃತಿ ಎಂದರೆ ಅದು ಪ್ರಕೃತಿಯ ಕೆಲಸ. 


                ಕಾಮರೂಪಿ ಶಿವನ ಸ್ಥಾನವೇ ಕಾಶಿ. ಕಾ ಎಂದರೆ ಕಾಮ ಜತೆಯಲ್ಲಿ ಸೇರುವುದೇ ಶಿವ.  ಅದೇ  ಕಾಮನನ್ನು ಜಯಿಸಿದವನು ಕಾಮ ಇವನೆದುರು ಬಂದಾಗ ಅದೇ ಸುಟ್ಟು ನಾಶವಾಯಿತು.  ಹಾಗಾಗಿಯೆ ಕಾಶಿಗೆ ಬಂದಾಗ ನಮ್ಮ ಆಶೆಗಳನ್ನು ತ್ಯಾಗ ಮಾಡಬೇಕು. ಯಾಕೆಂದರೆ ಕಾಮಕ್ಕೂ ಶಿವನಿಗೂ ಜತೆಯಾಗುವುದಿಲ್ಲ. ಅಲ್ಲಿ ಕಾಮರೂಪಿಯನ್ನು ಮಾತ್ರವೇ ಕಾಮಿಸಬೇಕು. ಕಾಮರೂಪಿಯ ಎದುರು ನಮ್ಮ ಕಾಮನೆಗಳು ಶೂನ್ಯವಾಗಬೇಕು. ಶೂನ್ಯದಲ್ಲೆ ಎಲ್ಲವನ್ನೂ ಕಂಡ ಪೂರ್ವಜರು ಅಲ್ಲಿ ಕಾಮವನ್ನೂ ಕಳೆದು ಶೂನ್ಯವನ್ನು ಮಾತ್ರ ಗುರುತಿಸಿದ್ದರು. ಅಲ್ಲಿ ನಮ್ಮ ಆಶೆಗಳನ್ನು ಕಳೆದು ದಿಗಂಬರ ಚಿತ್ತವಾಗಿರಬೇಕು. ಅದು ಸುಲಭವಲ್ಲ. ಕಾಮನೆಗಳು ಶೂನ್ಯವಾದಾಗ ಕಾಮರೂಪಿಯ ದರ್ಶನವಾಗುತ್ತದೆ. ಹಾಗಾಗಿಯೇ ಕಾಶೀ ಯಾತ್ರೆ ಎಂಬುದು ಬದುಕಿನ ಪರಮಾರ್ಥವಾಗುತ್ತದೆ. ಅಲ್ಲಿ ಅದಕ್ಕಿಂತ ಉತ್ಕೃಷ್ಟತೆ ಯಾವುದಕ್ಕೂ ಲಭ್ಯವಾಗುವುದಿಲ್ಲ. ಪರಮ ಉತ್ಕೃಷ್ಟತೆಯೆ ಕಾಶಿಯ ಶಿವನ ಸಾನಿಧ್ಯ. ಕಾಶಿಗೆ ಹೋಗುವುದೆಂದರೆ ಅದೊಂದು ವಾನ ಪ್ರಸ್ಥ. ನಮ್ಮ ಆಶೆಗಳನ್ನು ಅಂದರೆ ಕಾಮನೆಗಳನ್ನು ಕಳೆಯುವುದಕ್ಕಿರುವ ಏಕ ಮಾತ್ರ ಕ್ಷೇತ್ರವೇ ಕಾಶಿ. 

        ಒಂದು ಸಲ ನಾನು ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ಕೊಟ್ಟಿದ್ದೆ. ಮಧ್ಯಾಹ್ನ ನಾನು ಪಯಣಿಸಿದ ಬಸ್ಸು ಅಲ್ಲಿಗೆ ತಲಪುವುದಕ್ಕೆ ತುಸು ವಿಳಂಬವಾಯಿತು. ಕೊನೆಯ ನಿಲ್ದಾಣದಲ್ಲಿ ಇಳಿಯ ಬೇಕಾದರೆ ಎಲ್ಲರಿಗೂ ಆತಂಕ ಗಡಿಬಿಡಿ. ಎಲ್ಲರಿಗೂ ಆತುರ. ಇನ್ನೇನು ದರ್ಶನದ ಸಮಯ ಮೀರುವ ಹೊತ್ತು. ಹಾಗಾಗಿ ಗಡಿಬಿಡಿಯಿಂದ ದರ್ಶನದ ಸರದಿಯಲ್ಲಿ ನಿಂತುಕೊಂಡರು. ಸರದಿಯಲ್ಲಿ ನಿಲ್ಲುವಾಗಲೂ ತವಕ ಆತಂಕ ಸರದಿಯಲ್ಲಿ  ಯಾವಾಗ ಮುಂದೆ ಸರಿಯುವುದಿಲ್ಲ ಎಂಬ ತುಡಿತ. ಸರದಿಯನ್ನು ಒತ್ತರಿಸಿ ಮುಂದೆ ಹೋಗುವ ತುಡಿತ.  ನಾವು ಮುಂದೆ ಹೋಗಬೇಕು. ಮುಂದೆ ಹೋಗದಿರುವುದಕ್ಕೆ ಸಾಧ್ಯವಿಲ್ಲ. ಹಾಗೆಂದು ಎದುರಿದ್ದ ವ್ಯಕ್ತಿಯನ್ನು ಹಿಂದಿಕ್ಕುವುದಕ್ಕೆ ನಾವು ಮುಂದೆ ಹೋಗುವುದಲ್ಲ.  ನಾನು ಬಸ್ ಇಳಿಯುವಾಗಲೇ ಯೋಚಿಸಿದ್ದೆ ದರ್ಶನದ ಯೋಗ ಇದ್ದರೆ ಸಾಧ್ಯವಾಗುತ್ತದೆ. ಹಾಗಾಗಿ ಆತಂಕವಿರಲಿಲ್ಲ. ನನ್ನ ಹಿಂದಿರುವವರಿಗೆ ನನ್ನನ್ನು ಹಿಂದಿಕ್ಕಿ ಮುಂದುವರೆಯುವ ತವಕ. ಹಾಗೂ ಹೀಗು ಗರ್ಭಗುಡಿಯ ಎದುರು ದೇವರ ದರ್ಶನಕ್ಕೆ ನಿಂತಾಯಿತು. ಅಲ್ಲಿ ಪ್ರದಕ್ಷಿಣೆ ಬರುವಾಗಲೂ ದೇವರ ದರ್ಶನದಲ್ಲೂ ನಿಲ್ಲದ ಅವಸರ. ಅದಾಗಲೇ ಭೋಜನದ ಸಮಯ ಮೀರುವುದರಲ್ಲಿತ್ತು!   ಊಟವಾದರೆ ಮನೆಯಲ್ಲಿ ಇದ್ದೇ ಇರುತ್ತದೆ. ದೇವರ ದರ್ಶನ ?  ಅಂತ್ಯವಿಲ್ಲದ ಧಾವಂತ.  ತೀರ್ಥ ಪ್ರಸಾದ ಕೊಳ್ಳುವಾಲೂ ಅವಸರ. ಹಾಗೂ ಹೀಗೂ ದರ್ಶನವಾಗಿ ಪ್ರಸಾದ ಪಡೆದು ಭೋಜನ ಶಾಲೆಗೆ ದೌಡಾಯಿಸುವುದು ನಂತರ  ಅಲ್ಲಿ ಕುಳಿತುಕೊಳ್ಳುವುದಕ್ಕೆ ಅವಸರ.  

        ಮನುಷ್ಯ ದೇವಸ್ಥಾನಕ್ಕೆ ಬರುವುದು ಮನಸ್ಸಿನ ಶಾಂತಿ ಸಮಾಧಾನ ಪಡೆಯುವುದಕ್ಕೆ. ಜೀವನದ ಪರಿಹರಿಸಲಾಗದ ಕಷ್ಟಗಳ ನಡುವೆ ಒಂದಷ್ಟು ದೈವ ದರ್ಶನದಿಂದ ಎಲ್ಲವನ್ನು ಮರೆತು ನೆಮ್ಮದಿಯನ್ನು ಪಡೆಯುವುದಕ್ಕೆ ದೇವರ ಬಳಿಗೆ ಬಂದರೆ ಅಲ್ಲೂ ನಿಲ್ಲದ ಆತಂಕ ಅವಸರವಾದರೆ ಬರುವ ಉದ್ದೇಶವಾದರೂ ಏನು? ನಿಜಕ್ಕಾದರೆ ಶಾಂತಿ ಸಮಾಧಾನ ಎಂಬುದು ನಮ್ಮ ಪ್ರವೃತ್ತಿಯನ್ನೇ ಹಲವು ಸಲ ಅವಲಂಬಿಸಿರುತ್ತದೆ.  ಇದನ್ನೇ ಸಂಕಲ್ಪ ಶುದ್ದಿ ಎನ್ನುವುದು. ನಾನಂತೂ ಯಾವ ಆತಂಕವೂ ಇಲ್ಲದೆ ದರ್ಶನ ಪ್ರಸಾದ ಪಡೆದು ಕೊನೆಯಲ್ಲಿ ಭೋಜನಪ್ರಸಾದವನ್ನು ಯಾವುದೇ ಅವಸರವಿಲ್ಲದೆ ಮುಗಿಸಿದೆ. ಮನಸ್ಸಿನಲ್ಲಿ ಇದ್ದ ಸಂಕಲ್ಪ ಒಂದೇ ಯೋಗವಿದ್ದರೆ ಎಲ್ಲವೂ ಲಭ್ಯವಾಗುತ್ತದೆ. ಅದು ಇಲ್ಲದಿದ್ದರೆ ಅದಿಲ್ಲ ಎಂದು ಕೊಂಡು ಹೊರಗಿನಿಂದಲೇ ನಮಸ್ಕರಿಸಿ ಬರುತ್ತಿದ್ದೆ. ಅಷ್ಟಕ್ಕೇ ಅಷ್ಟು ದೂರ ಹೋಗಬೇಕೆ ಎನ್ನುವುದೇನೋ ಸತ್ಯ. ಯಾವುದೇ ಆದರೂ ನಮಗೆ ಪಡೆಯುವುದಕ್ಕೆ ಯೋಗ ಎನ್ನುವುದು ಇರಬೇಕು. ನಮ್ಮ ಕರ್ತವ್ಯ ಎನಿದೆಯೋ ಅದನ್ನು ಮಾಡುವುದಷ್ಟೆ ನಮ್ಮ ಕರ್ತ್ಯವ್ಯ.  ಯೋಗ ಎಂದರೆ,  ಅಲಭ್ಯವಾಗಿರುವುದನ್ನು ಹೊಂದುವುದೇ ಯೋಗ.  ಯೋಗ ಎಂದರೆ ಆಯಾಚಿತವಾಗಿ ಲಭ್ಯವಾಗುವುದೇ ಯೋಗ. ಅದನ್ನು ಸೆಳೆದು ಅಥವ ಕೇಳಿ ಪಡೆಯುವಹಾಗಿಲ್ಲ. ಒಂದು ವೇಳೆ ಬಲವಂತದಲ್ಲಿ ನಾವು ಗಳಿಸಿದರೂ ಅದು ಯೋಗವಾಗುವುದಿಲ್ಲ. ಹಾಗಾಗಿ ಭಗವಂತನನ್ನು ಯೋಗೇಶ್ವರ ಎಂದು ಕರೆಯುವುದು. ಯಾರಿಗೆ ಯೋಗ ಇದೆಯೋ ಅವರಿಗೆ ಆತ ಲಭ್ಯವಾಗುತ್ತಾನೆ.  ಇದನ್ನು ತಿಳಿಯದವನು ಹಿಮಾಲಯದಲ್ಲಿ ತಪಸ್ಸಿಗೆ ಕುಳಿತರೂ ಆತನಿಗೆ ನೆಮ್ಮದಿ ಸಾಧ್ಯವಾಗದು.   ಯೋಗವು ಕರ್ಮದಿಂದ ಸಾಧಿಸಲ್ಪಡುವುದಾದರೂ ಕರ್ಮ ಸಂಕಲ್ಪ ಶುದ್ದಿಯಿಂದ ಕೂಡಿರಬೇಕು. ಸಂಕಲ್ಪ ಶುದ್ದಿ ಇಲ್ಲದೇ ಇದ್ದರೆ  ಆತ್ಮ ತೃಪ್ತಿ ಪೂರ್ಣವಾಗಿ ಅನುಭವಿಸುವುದಕ್ಕೆ ಸಾಧ್ಯವಿರುವುದಿಲ್ಲ. ಯಾರೋ ಏನೋ ಮಾಡುತ್ತಾರೆ ನಾವೂ ಮಾಡಿಬಿಡಬೇಕು ಎನ್ನುವ ಹಪ ಹಪಿಕೆ. ಪಕ್ಕದ ಮನೆಯವ ಮದುವೆ ವಿಜ್ರಂಭಣೆಯಿಂದ ಮಾಡಿದ ಎಂದು ಕೊಂಡು ನಾವು ಸ್ಪರ್ಧೆಗೆ ನಿಂತು ಆಡಂಬರದಿಂದ ಮಾಡುವುದಕ್ಕೆ ತೊಡಗಿದರೆ ನಾವು ನಮಗಾಗಿ ಮಾಡುವುದಿಲ್ಲ, ಪರರಿಗೋಸ್ಕರ ಮಾಡುತ್ತಿದ್ದೇವೆ. ಆತ ನೂರು ಜನಕ್ಕೆ ಊಟ ಹಾಕಿದರೆ ನಾವು ಇನ್ನೂರು ಜನಕ್ಕೆ ಊಟಹಾಕುತ್ತೇವೆ. ಇಲ್ಲಿ ಉದ್ದೇಶ ಇನ್ನೂರು ಜನಕ್ಕೆ ಹಾಕುತ್ತಿದ್ದೇವೆ ಎಂಬುದಷ್ಟೆ ಇದ್ದು...ಯಾಕೆ ಹಾಕಬೇಕು ಎಂಬುದು ಸ್ಪಷ್ಟವಾಗುವುದಿಲ್ಲ.  ಹೀಗೆ ಮಾಡುವ ಕರ್ಮದಲ್ಲಿ ಸಂಕಲ್ಪ ಶುದ್ದಿ ಇರುವುದಿಲ್ಲ. ದೇವರ ಮುಂದೆ  ನಿಂತು ಎಲ್ಲರೂ ನೋಡುತ್ತಾರೆ ಎಂದು  ನಾವು ನಮಸ್ಕರಿಸುವುದೂ ಅಭಿನಯವಾಗುತ್ತದೆ. 

         ಪರಮಾತ್ಮನ ಮುಂದೆ ನಾವು ಹಲವು ವೇಷಗಳನ್ನು ತೊಡಬಹುದು. ಧನಿಕನಾದವ ಆಡಂಬರದಲ್ಲಿ ಒಡವೆ ವಸ್ತ್ರ ತೊಡಬಹುದು, ಬಡವನಾದವನು ಏನು ಇಲ್ಲದೇ ಕೇವಲ ಹರುಕು ಬಟ್ಟೆಯಲ್ಲಿ ದೇವರ ಮುಂದೆ ನಿಲ್ಲಬಹುದು. ಆದರೆ ಇಲ್ಲಿ ವೇಷವೆಂಬುದು ಪರಮಾತ್ಮನಿಗಾಗಿ ಅಲ್ಲ, ಅದು ಕೇವಲ ನಮಗಾಗಿ, ನಮ್ಮ ಮನಸ್ಸಿನ ಭಾವನೆಗಾಗಿ. ಹಾಗಾಗಿ ಇಲ್ಲಿ ಸಮೀಕರಿಸಬೇಕಾಗಿರುವುದು ನಮ್ಮ ಭಾವನೆಯನ್ನು ಹೊರತು ದೇವರ ಭಾವನೆಗಳನ್ನಲ್ಲ. ದೇವರು ಭಾವರಹಿತನಾಗಿರುವಾಗ ದೇವರ ಭಾವನವನ್ನು ಹೀಗೆ ಅಂತ  ಕಲ್ಪಿಸುವುದು ನಮ್ಮ ಮನಸ್ಸಿನ ಮೂರ್ಖತನ. ಪರಮಾತ್ಮನಿಗೆ ಯಾವುದು ಸಲ್ಲುವುದಿದ್ದರೂ ಅದು ನಮ್ಮ ಭಾವದಿಂದ. ಅದು ಪರಿಶುದ್ದವಾಗಬೇಕು. ಅಲ್ಲಿ ಮತ್ತೊಬ್ಬರನ್ನು ಸೋಲಿಸುವ ಹಿಂದಿಕ್ಕುವ ಮನೋಭಾವ ಇದ್ದರೆ ಅದು ಸಂಕಲ್ಪ ಶುದ್ದಿಯಾಗುವುದಿಲ್ಲ.  ದನ ಹಾಲು ಕೊಡುವುದು ನಮಗಾಗಿ ಅಲ್ಲ ಕರುವಿಗಾಗಿ. ಬೆಕ್ಕು ಇಲಿಯನ್ನು ಹಿಡಿಯುವುದು ನಮಗಾಗಿ ಅಲ್ಲ ಅದರ ಹಸಿವಿಗಾಗಿ. ಅದು ಪ್ರಕೃತಿ. ನಾವು ಅದರ ಲಾಭವನ್ನು ಪಡೆಯುವಾಗ ಅದು ನಮಗಾಗಿ ಅಲ್ಲ ಎಂಬ ಭಾವ ಇರಬೇಕು. ಆಗ ಅದನ್ನು ಪಡೆಯುವಲ್ಲಿ ನಮಗೆ ಸಂತೃಪ್ತಿ ಇರುತ್ತದೆ. ಸಂತೃಪ್ತಿ ಎಂಬುದು ಶಾಂತಿಯನ್ನು ತರುತ್ತದೆ. 

            ನಮ್ಮ ನೆರೆಯ ಮನೆಯಾತ ಹಲವು ವರ್ಷಗಳಿಂದ ಮಾಲಾಧಾರಿಯಾಗಿ ವೃತ ಹಿಡಿದು ಶಬರಿಮಲೆಗೆ ಹೋಗುತ್ತಿದ್ದ. ಅಯ್ಯಪ್ಪನ ಮೇಲೆ ಅಪರಿಮಿತ ಭಕ್ತಿ. ಹೌದು ಭಕ್ತಿ ಎಂದರೆ ವಿರಕ್ತಿಯ ಸಂಕೇತವಾಗಬೇಕು. ವಿರಕ್ತ ಎಂದರೆ ರಕ್ತನಾಗದೇ ಇರುವುದು. ರಕ್ತ ಎಂದರೆ ಆಸಕ್ತಿ. ಯಾವಾಗ ಎಲ್ಲದರಲ್ಲೂ ಆಸಕ್ತಿಯನ್ನು ಕಳೆದುಕೊಳ್ಳುತ್ತೇವೋ ಆಗ ನಾವು ವಿರಕ್ತರಾಗುತ್ತೇವೆ. ಶಬರಿಮಲೆ ಯಾತ್ರೆ ಎಂಬುದು ಎಲ್ಲದರಲ್ಲಿಯೂ ಆಸಕ್ತಿಯನ್ನು ಕಳೆದು ವಿರಕ್ತ ಭಾವವನ್ನು ತರಬೇಕು. ನೆರೆ ಮನೆಯಾತನಿಗೆ ಕೇಳಿದೆ, ಶಬರಿ ಮಲೆಯಲ್ಲಿ ದೇವಾಲಯದ ತುದಿಯಲ್ಲಿ ಒಂದು ಬರೆದಿದ್ದಾರೆ ಏನದು? ಆತನಿಗೆ ತಿಳಿಯಲಿಲ್ಲ. ಅವನಿಗೆ ಅದನ್ನು ಗಮನಿಸುವ ವಿರಕ್ತಿ ಬಂದಕಾರಣ ನೋಡಿಲ್ಲ ಎಂದಲ್ಲ. ಅದು ನೋಡಿ ಅದರ ಅರ್ಥವಾದರೆ ವಿರಕ್ತಿ ಬರಬೇಕು.  ಆತನಿಗೆ ಅದು ಏನು ಎಂಬುದೇ ತಿಳಿದಿಲ್ಲ. ದೇವಾಲಯದ ತುದಿಗೆ ದೊಡ್ಡದಾಗಿ ಬರೆದಿದೆ ’ತತ್ವ ಮಸಿ’. ಏನದು ಎಂದು ಕೇಳಿದೆ ...ಗೊತ್ತಿಲ್ಲ. ಅಷ್ಟು ಬಾರಿ ಹೋದರೂ ತತ್ವಮಸಿ ಎಂದರೆ ಏನು ತಿಳಿಯದಿರುವುದು ತಪ್ಪಲ್ಲ. ಆದರೆ ನಾವು ಏನು ಯಾಕೆ ಮಾಡುತ್ತೇವೆ ಎನ್ನುವ ಸಂಕಲ್ಪ ಇಲ್ಲದೇ ಇರುವುದು ತಪ್ಪು.  ಭಗವದ್ಗೀತೆಯಲ್ಲಿ ಬರುವ ಶಬ್ದವದು. ತತ್ವ ಮಸಿ. ಅದು ಎಲ್ಲವೂ ನೀನೆ. ಅಲ್ಲಿ ಅದು ಎಂಬುದು ಬೇರೆ ಇಲ್ಲ. ಇದನ್ನು ತಿಳಿಯದೇ ಯಾತ್ರೆ ಮಾಡಿದರೆ ಅದರೆ ಪೂರ್ಣಾನುಭವ ಹೊಂದುವುದಕ್ಕೆ ಸಾಧ್ಯವೇ? ಒಂದು ಬಾರಿಯಾದರು ಭಗವದ್ಗೀತೆ ಓದಿದರೆ ಅರಿವಾಗಬಹುದು. ಓದಿದರೆ ಮಾತ್ರವಲ್ಲ ಭಗವದ್ಗೀತೆಯ ಪಠಣವನ್ನು ಕೇಳಿದರೂ ಸಾಕು. ಆದರೆ ನಮ್ಮ ಧರ್ಮ ಯಾವುದನ್ನೂ ಗಂಭೀರವಾಗಿ ಆದೇಶಿಸುವುದಿಲ್ಲ. ಈ ಸೌಮ್ಯ ಸಂದೇಶ ಅರ್ಥವಿಸುವ ಜ್ಞಾನವೂ ಇರುವುದಿಲ್ಲ. ಆಗ ಈ ಜಾಗೃತಿಯ ಅವಶ್ಯಕತೆ ಇರುತ್ತದೆ. ಭಗವದ್ಗೀತೆ...ನಮಗೆ ತಟ್ಟಿ ಪ್ರಮಾಣಮಾಡುವುದಕ್ಕಷ್ಟೇ ಸೀಮಿತ. ಒಳಗೆ ಏನು ಇದೆ ಎಂಬುದರ ಬಗ್ಗೆ ಯೋಚನೆ ಇಲ್ಲ. ಒಳಗೆ ಯಾವುದೋ ಉತ್ತಮವಾದದ್ದು ಇದೆ ಎಂದಷ್ಟೆ ಗೊತ್ತು. ಹಾಗಾಗಿ ಮುಟ್ಟಿ ಪ್ರತಿಜ್ಞೆ ಮಾಡುತ್ತೇವೆ. ವಚನ ಬದ್ದರಾಗುತ್ತೇವೆ. ಒಳಗೆ ಇದ್ದದ್ದು ತಿಳಿದರೆ ಆ ವಚನಕ್ಕೆ ಇನ್ನಷ್ಟು ಸಂಕಲ್ಪ ಶುದ್ದಿ ಒದಗಿಬರುತ್ತದೆ. ನಾವು ಪ್ರಮಾಣ ಮಾಡುವುದು ಎದುರಿದ್ದವನನ್ನು ನಂಬಿಸುವುದಕ್ಕೆ. ಅವನಿಗೆ ನಮ್ಮಲ್ಲಿ ವಿಶ್ವಾಸ ಮೂಡುವುದಕ್ಕೆ. ಎದುರಿದ್ದವನು ತಿಳಿದಿರಬಹುದೇ, ತಿಳಿಯದೇ ಇದ್ದರೆ ನಾವು ಅದನ್ನು ನಮ್ಮ ಸ್ವಾರ್ಥಕ್ಕೊಸ್ಕರ ಬಳಸಿಕೊಳ್ಳುತ್ತಿದ್ದೇವೆ.  ಎದುರಿದ್ದವನಲ್ಲಿ ವಿಶ್ವಾಸ ಮೂಡಿಸುವ ಸ್ವಾರ್ಥ. ಇದು ಆತ್ಮ ವಂಚನೆಯಾಗುತ್ತದೆ. ಇದರಲ್ಲಿ ಸಂಕಲ್ಪ ಶುದ್ದಿ ಇರುವುದಿಲ್ಲ. 

    ಒಂದು ಸಲ ನಾನು ಬೆಂಗಳೂರಿನ ರಸ್ತೆಯೊಂದರಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿರುವಾಗ ಜೋರು ಮಳೆ ಬಂದು ಬಿಟ್ಟಿತು. ಆ ಮಳೆಗೆ ಮುಂದೆ ಹೋಗುವುದಕ್ಕೆ ಸಾಧ್ಯವಾಗದೆ ರಸ್ತೆ ಬದಿಗೆ ನಿಲ್ಲಬೇಕಾಯಿತು. ಆದರೆ ಅಲ್ಲಿ ಒಂದು ಆಸರೆಯೂ ಇಲ್ಲದ. ರಸ್ತೆ ಬದಿಯಲ್ಲಿ ಮನೆಗಳೇನೋ ಇತ್ತು. ಎಲ್ಲವೂ ಆವರಣದ ಒಳಗೆ. ಗೇಟ್ ತೆಗೆದು ಒಳಗೆ ಹೋಗುವುದು ಹೇಗೆ? ನಿಲ್ಲುವುದಕ್ಕೆ ಜಾಗವಿಲ್ಲದೆ ಹಾಗೆ ಒಂದು ಮನೆಯ ಗೇಟ್ ಗೆ ಚಿಕ್ಕ ಮಾಡು ಒಂದಿತ್ತು.  ಅಲ್ಲಿ ಹೋಗಿ ನಿಂತುಕೊಂಡೆ. ಜೋರಾದ ಮಳೆ. ಛೇ ಈ ಮಳೆಗೆ ಸಿಕ್ಕಿ ಹಾಕಿಕೊಂಡೆನಲ್ಲಾ ಎಂದು ಹಪ ಹಪಿಸಿದೆ. ಆ ಮನೆಯ ವೃದ್ದರೊಬ್ಬರಿಗೆ  ನಾನು ನಿಂತಿರುವುದು ಒಳಗಿನಿಂದ ಕಂಡಿತು. ಅವರು ಹೊರಬಂದು ಹೇಳಿದ ಒಳಗೆ ಬನ್ನಿ ಎಂದು ಕರೆದರು. ನಾನೂ ನಿರ್ವಾಹವಿಲ್ಲದೆ ಗೇಟ್ ತೆಗೆದು ಒಳ ಹೋದೆ. ಅವರು ಮನೆಯ ಬಾಗಿಲು ತೆಗೆದು ಕುರ್ಚಿಯೊಂದನ್ನು ತೋರಿಸಿ ಕುಳಿತುಕೊಳ್ಳುವಂತೆ ಹೇಳಿದರು. ನಾನೂ ಅವರಿಗೆ ಅಪರಿಚಿತ, ಅವರೂ ಸಹ ನನಗೆ ಅಪರಿಚಿತರು.  ಅವರು ಮತ್ತೂ ಹೇಳಿದರು, ಕುಳಿತುಕೊಳ್ಳಿ, ಮಳೆ ನಿಂತಮೇಲೆ ಹೋಗಬಹುದು. ಕುಳಿತುಕೊಂಡೆ. ಅವರು ಬಾಯಾರಿಕೆ ಬೇಕಾ ಎಂದು ಕೇಳಿದರು.  ಹದಿನೈದು ನಿಮಿಷ ಬಿಡದೇ ಸುರಿದ ಮಳೆ ನಿಂತ ಮೇಲೆ ಧನ್ಯವಾದ ಹೇಳಿದೆ ಹೊರ ಬರುವಾಗ ಹೇಳಿದೆ ನಾನೂ ಅಪರಿಚಿತ ನೀವು....ಹೀಗೆ ಆಸರೆ ಕೊಡುವುದಕ್ಕೆ ಆತಂಕವಿಲ್ಲವೆ?  ಅವರು ಹೇಳಿದರು, ಹಾಗೇನಿಲ್ಲ, ನಿಮ್ಮನ್ನು ಕಾಣುವಾಗ ಹಾಗೆ ಅನಿಸಲಿಲ್ಲ.  ಈ ಅಪರಿಚಿತತ್ವ ಎಂಬುದು ನನಗೂ ಅವರಿಗೂ ಏಕ ಪ್ರಕಾರ. ಅವರೂ ಕರೆಯಬಾರದಿತ್ತು. ನಾನೂ ಒಳಗೆ ಹೋಗಬಾರದಿತ್ತು.  ಅವರು ಆಸರೆ ಕೊಟ್ಟರು , ಕೇವಲ ಮಳೆಗಷ್ಟೇ ಈ ಆಸರೆಯನ್ನು ನಾನು ಉಪಯೋಗಿಸಬೇಕು. ಅದು ಮೀರಿದರೆ ಅದು ದುರುಪಯೋಗವಾಗುತ್ತದೆ. ಈ ಕಾಶಿ ಯಾತ್ರೆಯೂ ಯಾರದೊ ಆಸರೆಯಲ್ಲಿ ಸಾಧ್ಯವಾಗುತ್ತದೆ. ಈ ಆಸರೆಯ ಭಾವವನ್ನು ಅರ್ಥವಿಸಿಕೊಳ್ಳಬೇಕು. ಅಲ್ಲಿ ನಮ್ಮ ಸ್ವಾರ್ಥ ಸಾಧನೆ, ನಮ್ಮ ಮನೋವಿಕಾರಗಳಿಗೆ ಅವಕಾಶ ಇರಬಾರದು. ಇದ್ದರೆ ಅದು ಆಸರೆಯನ್ನು ನೀಡಿದವನಿಗೆ, ಸತ್ಕರಿಸಿದವನಿಗೆ ವಂಚನೆಯನ್ನು ಮಾಡಿದಂತೆ. ಆತ ಇನ್ನು ಮುಂದೆ ಯಾರಿಗೂ ಆಸರೆಯನ್ನು ಕೊಡದ ಸ್ಥಿತಿಯನ್ನು ನಾವು ನಿರ್ಮಾಣ ಮಾಡಿದಂತೆ. 

         ಯಾವುದೇ ಕಾರ್ಯದಲ್ಲೂ ಒಂದು ಸದುದ್ದೇಶ ಇರಬೇಕು. ಅದನ್ನು ಈಡೇರಿಸುವುದಕ್ಕೆ ಸತ್ಸಂಕಲ್ಪ ಇರಬೇಕು. ಹೀಗೆ ಉದ್ದೇಶಶುದ್ದಿ ಸಂಕಲ್ಪ ಶುದ್ದಿ ಇರುವಾಗ ಇಡುವ ಹೆಜ್ಜೆ ಸ್ಥಿರವಾಗಿರುತ್ತದೆ. ಅಲ್ಲಿ ಅಂಜಿಕೆ ಇರುವುದಿಲ್ಲ.