Sunday, January 22, 2023

ಕಾಶೀ ಯಾತ್ರ ಸನ್ನಾಹ - ೩ ಎಚ್ಚರ ಅಥವಾ ಜಾಗರಣೆ...


ಮನೆಯ ತಾಯಿ ಬೆಳಗ್ಗೆ ಎದ್ದು ಅಡುಗೆ ಕೋಣೆಯಲ್ಲಿ ಬೆಳಗಿನ ಉಪಾಹಾರಕ್ಕೆ ತಯಾರಿ ಮಾಡುತ್ತಾಳೆ. ಮನೆಯ ಬಹುತೇಕ ಮಂದಿಗಳು ನಿದ್ದೆಯಲ್ಲೇ ಜಾರಿರುತ್ತಾರೆ. ಹಲವುಸಲ ಅಪ್ಪನೂ ಈ ಪಾತ್ರ ನಿರ್ವಹಿಸುತ್ತಾರೆ. ಮನೆಯವರಿಗೆ ಎಲ್ಲರಿಗೂ ತಿಳಿದಿರುತ್ತದೆ ಈಗ ಉಪಾಹಾರ ಸಿದ್ದವಾಗುತ್ತದೆ. ಅರೆ ಪ್ರಜ್ಞಾವಸ್ಥೆಯಲ್ಲಿಯೂ ಉಸಿರು ಅಡುಗೆ ಘಮ ಘಮಿಸುವಿಕೆಗೆ ಅರಳುತ್ತದೆ. ಆದರೆ ಎಚ್ಚರವಾಗುವುದಿಲ್ಲ. ಎಚ್ಚರದ ಅರಿವಿದ್ದರೂ ಆಲಸ್ಯ ಬಿಡುವುದಿಲ್ಲ. ಅಡುಗೆ ಸಿದ್ದವಾದಾಗ ಎದ್ದರಾದೀತು ಎಂದು ಅರೆ ಪ್ರಜ್ಞಾವಸ್ಥೆಯನ್ನೇ ದೇಹ ಮನಸ್ಸು ಅಂಗೀಕರಿಸುತ್ತದೆ.  ಕೊನೆಗೆ ಎದ್ದು ನಿದ್ದೆ ಬಿಡುವಾಗ ಹಸಿವಿನ ಅರಿವಾಗುತ್ತದೆ. ಯಾವ ತಿಂಡಿಯಾದರೂ ಕುತೂಹಲ ಹಂಬಲ ತಟ್ಟೆ ಎದುರು ಕುಳಿತಾಗ ತಣಿಯುತ್ತದೆ. ಹಲವು ಸಲ ತಮ್ಮ ಆಶೆ ಚಪಲವನ್ನೂ ಒಪ್ಪಿಸಿ ಹೀಗೆ ಆಗಬೇಕಿತ್ತು ಎಂದು ಬೇಡಿಕೆ ಸಲ್ಲಿಸಿಯಾಗುತ್ತದೆ. ತಾಯಿ ಸ್ನೇಹ ಪ್ರೀತಿಯಿಂದ ಎಲ್ಲವನ್ನು ಸಿದ್ದ ಪಡಿಸಿ ಹೇಗಾಗಿರಬಹುದು ಎಂಬ ನಿರೀಕ್ಷೆಯಲ್ಲಿರುತ್ತಾಳೆ. ಪರಬ್ರಹ್ಮನಿಗೂ ಹುಟ್ಟಿಸಿದ ಮನುಷ್ಯ ಪ್ರಾಣಿಗಳನ್ನು ಒಂದೇ ರೀತಿ ಜೀವ ಕೊಡುವುದಕ್ಕೆ ಸಾಧ್ಯವಿರುವುದಿಲ್ಲ, ಹಾಗೆ ಅಡುಗೆಯೂ ಇಂದು ಇದ್ದ ಹಾಗೆ ನಾಳೆ ಇರುವುದಿಲ್ಲ. ಇದೆಲ್ಲ ದಿನಚರಿಯ ಒಂದು ಅಂಗ....ಆದರೆ ವೈಶಿಷ್ಟ್ಯ ಏನಿದೆ. ಬೆಳಗ್ಗೆ ಜಾಗೃತಳಾಗಿ ಎದ್ದು ನಿಲ್ಲುವ ತಾಯಿಯ ಎಚ್ಚರ ಅಥವಾ ಜಾಗೃತಿ ಎಲ್ಲರ ಹಸಿವನ್ನು ತಣಿಸಿಬಿಡುತ್ತದೆ. ಒಂದು ದಿನ ನಿದ್ರಿಸುವುದನ್ನು ಬಿಟ್ಟು ತಾಯಿ ಏನು ಮಾಡುತ್ತಾಳೆ ಎಂದು ಗಮನಿಸಿ. ಆಕೆಯ ಕೆಲಸಕ್ಕೆ ನೆರವಾಗುವ ಔದಾರ್ಯ ಏನೂ ಬೇಡ, ಸುಮ್ಮನೇ ಆಕೆಯ ಕೆಲಸವನ್ನು ಗಮನಿಸಿದರೆ ಸಾಕು....ಆಕೆಯಲ್ಲಿ ಉತ್ಸಾಹ ಪುಟಿದೇಳುತ್ತದೆ. ಆಕೆಯ ಕೆಲಸದ ವೈಶಿಷ್ಟ್ಯವನ್ನು ಕಂಡರೆ ಸಾಕು ಉತ್ಸಾಹ ಅದಮ್ಯ ಸ್ಥಿತಿಗೆ ತಲಪುತ್ತದೆ. ಅದಕ್ಕೆ ಬೇಕಾಗಿರುವುದು ಒಂದೇ ನಾವು ಎಚ್ಚರವಾಗುವುದು...ಅಥವಾ ಜಾಗೃತರಾಗುವುದು. 

ಇತ್ತೀಚೆಗೆ ನಮ್ಮ ಕಾಶೀ ಯಾತ್ರೆಯ ಪೂರ್ವ ಸಿದ್ದತೆಯಲ್ಲಿ ನಮ್ಮ ಯಾತ್ರಿಕರ ಸಭೆಗೆ (ಝೂಮ್ ಮೀಟಿಂಗ್) ಶ್ರೀ ಗೋಪಾಲ್ ನಾಗರಕಟ್ಟೆ ಯವರು ಅತಿಥಿಗಳಾಗಿ ಬಂದಿದ್ದರು. ವಾಸ್ತವದಲ್ಲಿ ನನಗೆ ಈ ಸಭೆಯಲ್ಲಿ ಬಹುತೇಕ ಎಲ್ಲರೂ ಅಪರಿಚಿತರೇ, ಸಭೆಗೆ ಹಾಜರಿರುವ ಎಲ್ಲರನ್ನೂ ನಾನು ಮುಖತಃ ನೋಡಿಯೇ ಇಲ್ಲ. ಹಾಗಾಗಿ ಈ ಮಹನೀಯರ ಬಗ್ಗೆಯೂ ಹೆಚ್ಚು ಅರಿವಿರಲಿಲ್ಲ. ಇವರು ಅಯೋಧ್ಯೆಯಲ್ಲಿ ರಾಮ ಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣದ ಹೊಣೆ ಹೊತ್ತ ಪ್ರಮುಖ ವ್ಯಕ್ತಿಗಳು. ನಮ್ಮ ಯಾತ್ರೆಯಲ್ಲಿ ಆಯೋಧ್ಯೆಯ ಯಾತ್ರೆಯೂ ಒಂದು ಬಹು ಮುಖ್ಯವಾಗಿರುವುದರಿಂದ ಇವರ ಮಾತುಗಳು ಬಹಳ ಪ್ರಾಮುಖ್ಯವೆನಿಸಿತ್ತು. ಇವರು ಕೆಲವೇ ಕೆಲವು ನಿಮಿಷಗಳಷ್ಟು ಸಿಕ್ಕ ಅವಕಾಶದಲ್ಲಿ ಬಹಳಷ್ಟು ಮಾಹಿತಿಗಳನ್ನು ಮನೆ ಮಂದಿಗೆ ಹೇಳುವಂತೆ ಬಹಳ ಉತ್ಸಾಹದಿಂದ ವಿವರಿಸಿಬಿಟ್ಟರು. ಮಾತ್ರವಲ್ಲ ನಮ್ಮನ್ನೆಲ್ಲಾ ಬಹಳ ಆಸಕ್ತಿ ಪೂರ್ಣವಾಗಿ ಅಯೋಧ್ಯೆಗೆ ಬರುವಂತೆ ಭಿನ್ನವಿಸಿಕೊಂಡ ರೀತಿ....ಮುಂದೆ ನಮ್ಮ ಯಾತ್ರೆಯಲ್ಲಿ ಅಲ್ಲಿನ ಸಿದ್ದತೆ ಹೇಗಿರಬಹುದು ಎಂಬ ಕುತೂಹಲ ಹುಟ್ಟಿಕೊಂಡಿತು. ಯಾತ್ರೆಯ ಸಂಘಟನಾತ್ಮಕ ಬೆಳವಣಿಗೆ ಮತ್ತು ಅದರ ನಿರ್ವಹಣೆ ನಿಜಕ್ಕೂ ವಿಚಿತ್ರವೆನಿಸಿತ್ತು. ಅತ್ಯಂತ ವೈಶಿಷ್ಟ್ಯವೆನಿಸಿತ್ತು. ಮತ್ತು ಒಂದು ಬಗೆಯ ಆತ್ಮವಿಶ್ವಾಸದ ಜಾಗೃತಿಯನ್ನು ಮೂಡಿಸಿತ್ತು. ಶ್ರೀ ಗೋಪಾಲ್ ನಾಗರಕಟ್ಟೆಯವರ ಮಾತುಗಳನ್ನು ಕೇಳಿದಾಗ ಮನೆಯ ತಾಯಿ ಎದ್ದು ಅಡುಗೆ ಮಾಡುವಂತೆ ಭಾಸವಾಯಿತು ಎಂದರೆ ಅತಿಶಯ ಎನಿಸಲಿಲ್ಲ. ಯಾಕೆಂದರೆ ಸರಿ ಸುಮಾರು ಇನ್ನೂರು ಜನಗಳು ಯಾತ್ರೆಯಲ್ಲಿ ಭಾಗವಹಿಸುವಾಗ ಆ ಸಿದ್ಧತೆ ಅದೇನು ಸಣ್ಣ ವಿಷಯವಂತೂ ಖಂಡಿತ ಅಲ್ಲ. ಸಾಮಾನ್ಯವಾಗಿ ಕಲ್ಪನೆಗೆ ನಿಲುಕದ ವ್ಯವಸ್ಥೆ ಇದು. ಇದರಲ್ಲಿ ಒಂದು ಚಿಕ್ಕ ಮೊಳೆಯಂತೆ ನಾನೂ ಒಂದು ಅಂಗವಾಗಿರುವುದು ಒಂದು ವಿಸ್ಮಯ ಸಂಗತಿ. ಮನೆಯ ತಾಯಿ ಎದ್ದು ಅಡುಗೆ ಮಾಡುತ್ತಿದ್ದಾರೆ, ನಾವು ಎಚ್ಚರಗೊಂಡು ಅಲ್ಲಿಗೆ ಗಮನ ಹರಿಸುವುದೊಂದೆ ಉಳಿದಿದೆ. ಜಾಗೃತಿ ಎಂಬುದು ಅರ್ಥಪೂರ್ಣವಾಗುವುದು ಇಂತಹ ವಿಚಾರಗಳಿಂದ. ನಾವೇನೂ ಮಾಡಬೇಕಾದದ್ದಿಲ್ಲ. ಕೇವಲ ಎಚ್ಚರಗೊಳ್ಳಬೇಕು. ಅದು ಅವರ ಉತ್ಸಾಹವನ್ನು ನೂರ್ಮಡಿಗೊಳ್ಳಿಸುತ್ತದೆ. ಇದು ಅವರ ಮಾತಿನ ಅಂತರಂಗ ಮತ್ತು ಬಹಿರಂಗದಲ್ಲಿ ಧ್ವನಿಯುಕ್ತವಾಗಿ ಕಂಡುಬಂತು. ಮಾಡಿದ ಅಡುಗೆಯಾಲಿ ಹುಳಿಖಾರ ವೆತ್ಯಾಸ ಅವರವರ ಅಭಿರುಚಿಗೆ ಹಿತವೊ ಅಹಿತವೋ ಆಗಬಹುದು...ಆದರೆ ನಮ್ಮ ಮನೆಯ ಅಡುಗೆ ಮನೆ ಮತ್ತು ವ್ಯಕ್ತಿ ಎಂಬುದು ಗಮನಾರ್ಹವಾಗುವಾಗ ಎಲ್ಲ ಕೊರತೆಗಳೂ ನಗಣ್ಯವಾಗಬಹುದು ಎಂದನಿಸುತ್ತದೆ. 

ಸಾಮಾನ್ಯವಾಗಿ ಯಾವುದೇ ಮನೆಗೆ ಅತಿಥಿಗಳಾಗಿ ಹೋದಾಗ....ಅಲ್ಲಿ ಹೊಟ್ಟೆತುಂಬ ಬಿರಿಯುವಂತೆ ಬೇಡ ಬೇಡ ಎಂದರೂ ಊಟ ಉಪಚಾರ ಮಾಡಬಹುದು. ಆದರೆ ಮುಖದಲ್ಲಿ ಪ್ರಸನ್ನತೆ, ಬಾಯಿತುಂಬ ಸೌಹಾರ್ದತೆಯ ಮಾತು ಇಲ್ಲ ಎಂದರೆ ಹೊಟ್ಟೆತುಂಬುವ ಊಟ ಎಂಬುದು ಬಾಹ್ಯ ಆಡಂಬರವಾಗುತ್ತದೆ. ಹಾಗಾಗಿ ಶ್ರೀ ನಾಗರಕಟ್ಟೆಯವರ ಮಾತುಗಳು ಅಪರಿಚಿತ ಜಾಗದ ಅನುಭವಕ್ಕೆ ಸ್ಫೂರ್ತಿಯನ್ನು ಉಕ್ಕಿಸುವಲ್ಲಿ ಸಂದೇಹವಿಲ್ಲ.

ನಮ್ಮ ಸುತ್ತಲೂ ಹೀಗೆ ಸತ್ಕಾರ್ಯವನ್ನು ಮಾಡುವವರು ಕೆಲವರಿದ್ದರೆ,  ಅದರ ಫಲ ಉಣ್ಣುವವರು ಹಲವರಿರುತ್ತಾರೆ. ಇದು ಸಹಜ. ಜೇನು ಹುಳಕ್ಕೂ ಅರಿವಿರುವುದಿಲ್ಲ ತಾನೇನೂ ಮಾಡುತ್ತಿದ್ದೇನೆ ಎಂದು. ಒಂದು ವೇಳೆ ಅದು ಸಿಹಿ ಸಂಗ್ರಹಿಸದೇ ಇರುತ್ತಿದ್ದರೆ......ಅದು ಕೇವಲ ಒಂದು ಹುಳುವಾಗಿ ನಿಕೃಷ್ಟವಾಗಿಬಿಡುತ್ತಿತ್ತು. ಹೀಗೆ ನಮ್ಮನ್ನು ಎಚ್ಚರಿಸುವವರು ನಮ್ಮ ಸುತ್ತಮುತ್ತ ಹಲವರಿರುತ್ತಾರೆ....ನಾವು ನಿದ್ದೆ ಬಿಟ್ಟು ಏಳಬೇಕು ನಿಜ.....ಆದರೆ ಅದೂ ಅಸಾಧ್ಯವಾದಾಗ ಅದರ ಅರಿವಾದರೂ ಇರಬೇಕು. ಆ ಅರಿವಿನಲ್ಲಿ ಅವರ ಕಾರ್ಯವನ್ನು ಹೊಗಳಬೇಕೆಂದೇನೂ ಇಲ್ಲ ....ತೆಗಳದೇ ಇದ್ದರೆ ಅದೇ ದೊಡ್ಡ ಕೃತಜ್ಞತೆ. ಎಚ್ಚರಗೊಳಿಸುವುದು ಎಲ್ಲರಿಗೂ ಸಾಧ್ಯವಾಗುವ ಕೆಲಸವಲ್ಲ ಅದರ ಅರ್ಹತೆ ಕೆಲವರಿಗೆ ಮಾತ್ರವೇ ಇರುತ್ತದೆ. ನಾವು ಒಳ್ಳೆಯದನ್ನು ಕಂಡಾಗ ಬಿಡದೆ ಹೊಗಳಲೇ ಬೇಕು. ಹಾಗಂತ ಕೆಟ್ಟದನ್ನು ಕಂಡಾಗ ತೆಗಳುವುದನ್ನೂ ಬಿಟ್ಟು  ಸುಮ್ಮನಿದ್ದು ಬಿಡಬೇಕು.   ಸತ್ಕಾರ್ಯದಲ್ಲಿ ಹಲವು ಸಲ ಜೇನು ಹುಳು ಕಡಿದಂತೆ ಎರಡೂ ಇರುತ್ತದೆ.  ತೆಗಳುತ್ತಾ ಇದ್ದರೆ ಒಳ್ಳೆಯದರ ಅಭಾವ ತನ್ನಿಂತಾನೆ ಸೃಷ್ಟಿಯಾಗುತ್ತದೆ.  ತಪ್ಪು ಹೇಳಬೇಕು , ಅದರ ಅರಿವು ಉಂಟಾಗಬೇಕು ನಿಜ. ತಪ್ಪು ಹೇಳುವುದು ಇದೆಲ್ಲವು ಉತ್ತಮ ಪರಿಣಾಮವನ್ನು ಉಂಟು ಮಾಡುತ್ತದೋ ಎಂಬ ಗಮನವೂ ಜತೆಯಲ್ಲೇ ಇರಬೇಕು. ಕೇವಲ ತಪ್ಪು ಹೇಳುವುದಷ್ಟೇ ಇದ್ದರೆ ತಪ್ಪು ಹೇಳುವ ಔಚಿತ್ಯವಾದರೂ ಏನು? 

ಕಾಶೀ ಎಂದರೆ ನಮ್ಮ ಸಂಸ್ಕೃತಿಯಲ್ಲಿ ಪ್ರಧಾನ ಎಂಬ ಪ್ರತೀತಿ ಇದೆ. ಕ್ರಿಕೇಟ್ ನಲ್ಲಿ  ಲಾರ್ಡ್ಸ್ ಕ್ರೀಡಾಂಗಣವನ್ನುಕ್ರಿಕೇಟ್ ಕಾಶಿ ಎನ್ನುವಂತೆ ಕಾಶಿ ಎಂದರೆ ನಮ್ಮ ಆದಿಯೂ ಅಂತ್ಯವೂ ಹೀಗೆ ಆದ್ಯಂತವಾಗಿ ಕಾಶಿಯನ್ನು ಪರಿಗಣಿಸುತ್ತಾರೆ. ಕಾಶಿ ಎಂಬುದು ಪ್ರಧಾನವಾಗುವಾಗ ಕಾಶಿ ಎಂಬ ಹೆಸರೆ ಆದಿ ಮತ್ತು ಅಂತ್ಯವನ್ನು ನಿರ್ದೇಶಿಸುತ್ತದೆ. ಹೀಗೆ ಕಾಶಿ ಎಂಬುದು ಪ್ರಧಾನವಾಗಿರುವಾಗ ಅಲ್ಲಿಗೆ ಹೋಗುವ ಯಾತ್ರೆಗೂ ಇದು ಅನ್ವಯವಾಗುತ್ತದೆ. ಮನುಷ್ಯನಲ್ಲಿ ಮನಸ್ಸು ಎಂಬುದು ಪ್ರಧಾನವಾಗಿ ಮನಸ್ಸೇ ಕಾಶಿಯಾಗಿರುತ್ತದೆ. ಮನಸ್ಸು ಕಾಶಿಯಾಗುವಾಗ ಅಲ್ಲಿ ಪರಮೇಶ್ವರನೇ ಸರ್ವವ್ಯಾಪಕವಾಗಬೇಕು. ಮನಸ್ಸಿನಲ್ಲಿ ಈಶ್ವರನೇ ತುಂಬಿಕೊಳ್ಳುವಾಗ ಅಲ್ಲಿ ಬೇರೆ ಚಿಂತನೆಗೆ ಅವಕಾಶವೇ ಇರುವುದಿಲ್ಲ. ಈ ಯಾತ್ರೆಯಲ್ಲಿ ಯಾರೆಲ್ಲ ಇದ್ದಾರೋ ತಿಳಿದಿಲ್ಲ. ಬರುವ ಜನಗಳಲ್ಲಿ ಬಹುಮಂದಿಯ ಪರಿಚಯವೇ ಇಲ್ಲ. ಯಾವ ಜಾತಿಯೋ ಯಾವ ಧರ್ಮವೋ ಯಾವ ಯೋಚನೆಯೂ ಇಲ್ಲದೆ ಅಲ್ಲಿ ಕೇವಲ ಈಶ್ವರ ಮಾತ್ರ ತುಂಬಿಕೊಳ್ಳುವಾಗ ಬೇರೆ ಎಲ್ಲವೂ ಶೂನ್ಯವಾಗುತ್ತದೆ. ಪರಮೇಶ್ವರನ ಉಗಮ ಸ್ಥಾನವೇ ಶೂನ್ಯ. ಹಾಗಾಗಿ ಕಾಶೀ ಯಾತ್ರೆ ಎಂಬುದು ಶೂನ್ಯದಿಂದ ಶೂನ್ಯದತ್ತ ಎಂಬರ್ಥದಲ್ಲಿ ಅರ್ಥಪೂರ್ಣವಾಗುತ್ತದೆ. ಸಂಚಾಲಕತ್ವ ಮೊದಲೇ ಸಾರಿಯಾಗಿದೆ ಇಲ್ಲಿ ಮೇಲು ಕೀಳು ಜಾತಿಧರ್ಮ ಯಾವುದೂ ಇಲ್ಲ ಭಕ್ತಿ ಶ್ರದ್ದೆಯೇ ಸಮಾನತೆಯ ದ್ಯೋತಕವಾಗಬೇಕು.  ಅಂತರಂಗಕ್ಕೆ ಇಳಿದನಂತರವೇ ಸಮಾನತೆಯ ಅರಿವಾಗುತ್ತದೆ ಹೊರತು ದೂರದಿಂದ ನೋಡಿದರೆ ಇದು ಗೋಚರಿಸುವುದಿಲ್ಲ.  ಜಾತಿ ಭೇದ ಎಂಬುದು ವೆತ್ಯಸ್ತವಾದ ಬದುಕಿನ ಶೈಲಿಯಲ್ಲಿ ಇರುವುದಿಲ್ಲ. ಸಂಸ್ಕೃತಿಯಲ್ಲಿ ಇರುವುದಿಲ್ಲ. ಮತ್ತೊಂದು ಧರ್ಮವನ್ನು ಅಥವಾ ವ್ಯಕ್ತಿಯನ್ನು ನಿಂದಿಸುವಾಗ ಈ ಭೇದ ಎಂಬುದು ಹುಟ್ಟಿಕೊಳ್ಳುತ್ತದೆ.  ಪರ ನಿಂದನೆ ಇದ್ದಲ್ಲಿ ಯಾವ ಜಾತ್ಯಾತೀತ ಮನೋಭಾವವು ಜೀವಂತ ಇರುವುದಕ್ಕೆ ಸಾಧ್ಯವಿಲ್ಲ. ಮನಸ್ಸಿನಲ್ಲಿ ಕಾಶಿ ವಿಶ್ವನಾಥನೇ ಸರ್ವವ್ಯಾಪಕವಾಗಿರುವಾಗ ಇಂತಹ ಋಣಾತ್ಮಕ ಅಂಶಗಳಿಗೆ ಜಾಗವಿರುವುದಿಲ್ಲ. ಅಥವಾ ಇಂತಹ ಋಣಾತ್ಮಕ ಅಂಶಗಳು ಮನಸ್ಸಿನಲ್ಲಿದರೆ ಅಲ್ಲಿ ಈಶ್ವರ ನೆಲೆಯಾಗುವುದಕ್ಕೆ ಸಾಧ್ಯವಿಲ್ಲ. ಕಾಶೀ ಯಾತ್ರೆಯ ಪ್ರತಿ ಅಂಗದಲ್ಲೂ ಈಶ್ವರ ನೆಲೆಯಾಗಿದ್ದರೆ ಮಾತ್ರ ಕಾಶಿ ಯಾತ್ರೆ ಎಂಬುದು ಜೀವನದ ಮೋಕ್ಷ ಸಾಧನೆಗೆ ದ್ಯೋತಕವಾಗಿ ಅರ್ಥಪೂರ್ಣವಾದೀತು. ಇರುವೆಯ ಸಾಲುಗಳು ಒಟ್ಟಾಗಿ ಒಂದು ಗುರಿಯತ್ತ ಸಂಚರಿಸುತ್ತವೆ. ಮತ್ತು ಅವುಗಳಲ್ಲಿ ಯಾವ ಭೇದವು ಇರುವುದಿಲ್ಲ ಒಂದರ ಹಿಂದೆ ಒಂದು ಸೆಳೆಯಲ್ಪಟ್ಟು ಮುಂದಕ್ಕೆ ಸಂಚರಿಸುವಂತೆ ಕಾಶೀ ಯಾತ್ರೆ ಸಮಗ್ರವಾಗಿ ಸಾಮೂಹಿಕವಾಗಿ ಪರಮಾತ್ಮ ಗಮ್ಯವನ್ನೇ ಸಾರುತ್ತದೆ. 


No comments:

Post a Comment