ರಾತ್ರಿ ಬೆಂಗಳೂರಿನಿಂದ ಹೊರಟ ಸುಗಮ ಟೂರಿಸ್ಟ್ ಮುಂಜಾನೆ ಐದೂ ವರೆಗೆ ಕೊಪ್ಪದ ಬಸ್ಸು ನಿಲಾಣಕ್ಕೆ ಬಂದು ನಿಂತಿತು. ಮಲೆನಾಡಿನ ಮಂಜು ಮುಸುಕಿದ ವಾತಾವರಣ ಆಹ್ಲಾದಮಯವಾಗಿತ್ತು. ಪಕ್ಕದ ಕಿಟಿಕಿ ಗಾಜು ತೆರೆದು ಸ್ವಚ್ಛಗಾಳಿಗೆ ಮುಖ ಒಡ್ಡಿದೆ. ಇನ್ನು ಮುಂದಿನ ವಾಟರ್ ಟಾಂಕ್ ಬಸ್ ಸ್ಟಾಪ್ ಗೆ ಬಸ್ಸು ಹೊರಡಬೇಕಿತ್ತು. ಬಸ್ ಕ್ಲೀನರ್ ಬೆಂಗಳೂರಿನಿಂದ ಬಂದ ಪಾರ್ಸಲ್ ಮೂಟೆಗಳನ್ನು ಎಳೆದು ಎಳೆದು ಹಾಕುತ್ತಿದ್ದ. ಬಸ್ಸಿನ ಗರ್ಭದಲ್ಲಿ ಎಷ್ಟೊಂದು ವಸ್ತುಗಳಿವೆ ಆಶ್ಚರ್ಯವಾಯಿತು. ದೊಡ್ಡದಾದ ಹೂವಿನ ಮೂಟೆಗಳನ್ನು ಎತ್ತಿ ಹೊರಗಿಟ್ಟ. ಇನ್ನೇನು ಬಸ್ಸು ಹೊರಡುವುದರಲ್ಲಿತ್ತು. ಅಲ್ಲೇ ಇದ್ದ ಬೀದಿ ನಾಯಿ ತನ್ನ ಅನ್ವೇಷಣೆಯನ್ನು ಆರಂಭಿಸಿ ಹೂವಿನ ಮೂಟೆಯನ್ನು ಸ್ಕ್ಯಾನ್ ಮಾಡುತ್ತಾ ಇತ್ತು. ಮುಂದೆ ನಾನು ಯೋಚಿಸಿದಂತೆ ಯಥಾ ಪ್ರಕಾರ ತನ್ನ ಒಂದು ಕಾಲು ಎತ್ತಿ ಅಪವಿತ್ರಃ ಪವಿತ್ರೋವಾ...... ಅಂತ ಪ್ರೋಕ್ಷಣೆ ಮಾಡಿ ಮತ್ತೊಮ್ಮೆ ಮೂಸಿ ಹೊರಟು ಹೊಯಿತು. ತುಸು ಹೊತ್ತಿನಲ್ಲೇ ಅದರ ವಾರಸುದಾರ ಅಂಗಡಿಯಾತ ದ್ವಿಚಕ್ರದಲ್ಲಿ ಆ ಪವಿತ್ರವಾದ ಹೂವಿನ ಮೂಟೆಯನ್ನು ಹೊತ್ತು ಕೊಂಡು ಹೋದ. ನಾನು ಬಸ್ಸಿನೊಳಗೇ ಇದನ್ನು ನೋಡುತ್ತಿದ್ದೆ. ಅದೇನು ಕರ್ಮವೋ ನನಗೆ ಇಂತಹ ಮಾದರೀ ದೃಶ್ಯಗಳೇ ಅಗಾಗ ಕಣ್ಣಿಗೆ ಬೀಳುತ್ತಾ ಇರುತ್ತವೆ. ಮೊಬೈಲ್ ತೆಗೆದು ಫೋಟೋ ತೆಗೆಯೋಣ ಎಂದರೆ ಇದು ಕ್ಷಣ ಮಾತ್ರದಲ್ಲೇ ನಡೆದು ಹೋಯಿತು.
ಸಾಂದರ್ಭಿಕ ಚಿತ್ರ |
ಮತ್ತೆ ಯೋಚನೆಗೆ ವಸ್ತು ಸಿಕ್ಕಿತು. ಆ ಹೂವಿನ ಭಾಗ್ಯವೋ ಅದನ್ನು ಕೊಂಡುಕೊಳ್ಳುವವರ ಪುಣ್ಯ ಫಲವೋ ದೇವರೇ ಎನ್ನುವಂತಾಯಿತು. ಅದೇ ಹೂವು...ಎಲ್ಲಿಗೆಲ್ಲ ಹೋಗಿ ಈ ಸಿಂಚನವನ್ನು ಪೂರ್ಣಗೊಳಿಸಿಬಿಡುತ್ತದೋ ಎಂದು ಯೋಚಿಸುತ್ತಾ ವಸ್ತು ಸ್ಥಿತಿಯ ವಿಡಂಬನೆಗೆ ಆತಂಕ ಪಟ್ಟೆ. ಸಹಜವಾಗಿ ನಮಗೊಂದು ಭಾವನೆಯಿದೆ. ದುಡ್ಡು ಕೊಟ್ಟರೆ ಅದಕ್ಕೆ ಮಾತ್ರ ಮೌಲ್ಯ ....ಉಳಿದೆಲ್ಲವೂ ಅದರ ಎದುರು ಅಪಮೌಲ್ಯದ ವಸ್ತುಗಳಾಗಿಬಿಡುತ್ತವೆ. ಕೊಪ್ಪದಂತಹ ಮಲೆನಾಡಿನ ಊರಿನಲ್ಲಿ ಸಹಜವಾಗಿ ಅರಳುವ ಹೂವಿಗೆ ಬರಗಾಲವೇ? ಇನ್ನು ಈ ಊರಿಗೆ ದೊಡ್ಡ ವಸತಿ ಸಮುಚ್ಚಯಗಳು ಬರಲಿಲ್ಲ. ಹಾಗಾಗಿ ಸುಂದರವಾಗಿದೆ ಎಂದು ಕೊಂಡರೂ ನಮ್ಮ ಜನರ ಮನೋಭಾವ ಆಧುನೀಕತೆಯನ್ನೇ ಅಪ್ಪಿಕೊಳ್ಳುವ ತವಕದಲ್ಲಿದೆ. ಒಂದೆರಡು ಹೂವು ಗಿಡಗಳನ್ನು ಬೆಳೆಸಲಾಗದ ಮನೆ ಕೊಪ್ಪದಲ್ಲಿ ಇರಲಾರದು. ಎಲ್ಲಾ ಮನೆಯ ಅಂಗಳದಲ್ಲಿ ಒಂದಿಷ್ಟು ಹೂವು ಅರಳಿ ನಳ ನಳಿಸುತ್ತದೆ. ಜನರಿಗೆ ಅದರ ಮೇಲೆ ವಿಶ್ವಾಸವೂ ಇಲ್ಲ. ಗೌರವವೂ ಇಲ್ಲ. ಹೀಗೆ ಶ್ವಾನ ಪ್ರೋಕ್ಷಣೆಯಲ್ಲಿ ಪವಿತ್ರಗೊಂಡ ಹೂವನ್ನು ದೇವರ ಮುಡಿಗೆ ಅರ್ಪಿಸುತ್ತಾರೆ. ಕೊನೆಗೆ ತೀರ್ಥಕ್ಕೂ ಮುಳುಗಿಸಿ.....ಯೋಚಿಸುವಾಗ ಅದರ ಗಂಭೀರತೆ ಅರಿವಾಗುತ್ತದೆ. ಹೊರಗೆ ಅಲಂಕಾರಕ್ಕೂ ಉಪಯೋಗಿಸುವುದಕ್ಕೆ ಯೋಚಿಸಬೇಕಾದ ಹೂವನ್ನು ದುಡ್ಡು ಕೊಟ್ಟು ಖರೀದಿಸಿ ದೇವರ ತಲೆ ಮೇಲೆ ಇಟ್ಟು ಕೈ ಮುಗಿವ ಮೌಢ್ಯಕ್ಕೆ ಏನು ಎನ್ನಬೇಕು? ಬೆಂಗಳೂರಿನಂತಹ ನಗರದಲ್ಲಿ ಹೂವು ಬೆಳೆಯಲಾಗದ ಅಸಹಾಯಕ ಮನೆಗಳು ಬೇಕಾದಷ್ಟಿವೆ. ( ಆದರೂ ಒಪ್ಪಿಕೊಳ್ಳತಕ್ಕದ್ದಲ್ಲ), ಕೊಪ್ಪದಂತಹ ಊರಿನಲ್ಲಿ ಅಲ್ಲೇ ಬೆಳೆಯುವ ಹೂವಿಗೆ ಬರಗಾಲವೇ? ಬರಗಾಲವಲ್ಲ. ನಮ್ಮ ಸೋಮಾರಿತನ, ನಮ್ಮ ಮೌಢ್ಯ ಇದಕ್ಕೆ ಉತ್ತರಿಸುತ್ತದೆ. ಕೊನೇ ಪಕ್ಷ ದೇವರ ಪೂಜೆಗಾದರೂ....ಅಲ್ಲೇ ಬೆಳೆದ ಹೂವನ್ನು ಸುಲಭದಲ್ಲೇ ಉಪಯೋಗಿಸಬಹುದು. ಸಹಜವಾಗಿ ಸುಂದರ ಪಕೃತಿಯ ಸಂಕೇತವಾಗುತ್ತದೆ. ಮನೆಯಂಗಳದಲ್ಲಿ ಹೂವು ಇಲ್ಲ ಎಂದುಕೊಂಡರು, ಹತ್ತಿರದ ತೋಟ ಗುಡ್ಡಕಾಡಿಗೆ ಇಳಿದರೆ ಮಹಾ ಲಕ್ಷಾರ್ಚನೆಗೆ ಬೇಕಾದ ಹೂವು ಸಂಗ್ರಹಿಸಬಹುದು. ನಮ್ಮ ಬಾಲ್ಯದಲ್ಲಿ ಮನೆಯ ಅಥವಾ ಊರ ದೇವಸ್ಥಾನದ ವಿಶೇಷ ಪೂಜೆಗೆ ಗುಡ್ಡ ತೋಟ ಹೋಗಿ ಕೇಪುಳ ( ಕಾಡು ಹೂವು) ಕೊಯ್ದು ತರುತ್ತಿದ್ದ ದಿನಗಳು ನೆನಪಾಯಿತು. ಅದೇನು ಸಂಭ್ರಮ. ಮನೆ ಮನೆ ಹೋಗಿ ಹೂವು ತುಳಸಿ ಸಂಗ್ರಹಿಸುತ್ತಿದ್ದದ್ದು ನೆನಪಾಯಿತು. ಛೇ ಮನುಷ್ಯ ತಾನು ಅಪವಿತ್ರವಾಗುವುದಲ್ಲ ದೇವರನ್ನೂ ನಂಬಿಕೆಯನ್ನೂ ಅಪವಿತ್ರಗೊಳಿಸುತ್ತಿದ್ದಾನೆ.
ಮದುವೆ ಅಥವಾ ಇನ್ನಿತರ ಪವಿತ್ರ ಕಾರ್ಯಗಳಿಗೆ ಉಚಿತವಾಗಿ ಸಿಗುವ ಪಕೃತಿಯ ಪ್ರಸಾದ ಕೈಯಳತೆ ದೂರದಲ್ಲೇ ಲಭ್ಯವಿದೆ. ನಮಗೆ ದುಡ್ಡುಕೊಟ್ಟರಷ್ಟೇ ತೃಪ್ತಿ ಎಂದಾದರೆ ಅದು ಮೂರ್ಖತನ, ಢಂಬಾಚಾರ ಎನ್ನಬೇಕು. ದುಡ್ಡುಕೊಟ್ಟು ದುಬಾರಿಯ ಸೇವಂತಿಗೆ ಮಲ್ಲಿಗೆ ರೋಜಾ ಹೂವುಗಳೇ ದೇವರಿಗೆ ಪ್ರಿಯ ಎಂದು ತಿಳಿದರೆ ನಮ್ಮ ದೇವರಿಗೆ ನಾವೇ ಮೌಲ್ಯ ಕಲ್ಪಿಸಿದಂತೆ. ಎಂತಹ ಅನಿವಾರ್ಯ ಸಂದರ್ಭಗಳಲ್ಲೂ ನಮ್ಮ ಕಾರ್ಯ ನಮ್ಮ ಭಾವನೆಗಳು ನಮ್ಮ ಮನಸ್ಸು ಪವಿತ್ರವಾಗಿರಬೇಕು. ನಾವು ನಮ್ಮ ಅರ್ಹತೆಯಲ್ಲಿ ವಿವೇಚಿಸದೇ ಕುಳಿಕೊಳ್ಳದೇ ಇದ್ದರೆ...ಅಲ್ಲಿ ಶ್ವಾನ ಬಂದು ಕುಳಿತು ಬಿಡುತ್ತದೆ.
No comments:
Post a Comment