ಬೀದಿಯ ಕೊನೆಯಲ್ಲೊಂದು ಬೀದಿ ದೀಪವಿದೆ. ಅದು ಸಾರ್ವಜನಿಕ ಬೀದಿ ದೀಪ ...ಹೀಗೆ ಹೇಳುವುದಕ್ಕೆ ಕಾರಣ ಅದರ ನಿಯಂತ್ರಣ ಸ್ವಿಚ್ ಅದರ ಕೆಳಗೆ ಇದೆ. ಈ ಬೀದಿ ದೀಪಕ್ಕೆ ಕಂಬ ಇಲ್ಲ...ಪಕ್ಕದ ಮನೆಯ ಗೋಡೆಗೆ ನೇತು ಹಾಕಲಾಗಿದೆ. ಅದಕ್ಕೆ ಸೂಕ್ತ ಕಾರಣಗಳು ಹಲವಿದೆ. ಬೀದಿಯ ಕೊನೆಯಲ್ಲಿ ಇರುವುದರಿಂದ ಅಷ್ಟಾದರೂ ಸರಕಾರ ಹಾಕಿದೆಯಲ್ಲ ಎಂದು ತೃಪ್ತಿ. ಇದರ ಸ್ವಿಚ್ ಅಲ್ಲೇ ಇರುವುದರಿಂದ ಇದನ್ನು ಬೇಕಾದಾಗ ಹಾಕಬಹುದು ಅಥವಾ ನಂದಿಸಬಹುದು. ಹಲವು ಸಲ ಅನ್ನಿಸುತ್ತದೆ ಇದಕ್ಕೆ ಸ್ವಿಚ್ ಅಗತ್ಯವೇ ಇಲ್ಲವೆನೋ....... ಉಳಿದ ದೀಪ ಸೂರ್ಯ ಮೂಡುವ ಮೊದಲೇ ಆರಿದರೆ ಇದು ಬಿಸಿಲು ಬರುವ ತನಕವೂ ಉರಿಯುತ್ತಾ ಇರುತ್ತದೆ. ಕತ್ತಲಾಗುವ ಮೊದಲೇ ಬೆಳಗುತ್ತದೆ. ಇದು ಉಚಿತ. ಯಾಕಂದರೆ ನಮ್ಮಲ್ಲಿ ಉಚಿತ ಎಂಬುದರ ಸುಖ ಅತಿ ದೊಡ್ಡದು. ಉಚಿತ ಎಂಬುದು ಸಿಗುವಾಗ ಆಗುವ ನಷ್ಟದ ಬಗ್ಗೆ ಯೋಚಿಸುವುದಿಲ್ಲ. ಉಚಿತ ಹಾಕುವ ಭಂಡವಾಳ ಏನೂ ಎಂಬುದು ಯೋಚನೆಗೆ ಬರುವುದಿಲ್ಲ. ಅಂತೂ ಉಚಿತ. ಉಚಿತವಗಿ ವಿದ್ಯುತ್ ಬಂದರೆ ಮತ್ತೆ ಸ್ವಿಚ್ ಅಗತ್ಯವಾದರೂ ಏನು? ಹೇಗಿದ್ದರೂ ಉಚಿತ ಎಂಬ ಉಡಾಫೆ ಇದ್ದೇ ಇರುತ್ತದೆ. ಉಚಿತವನ್ನು ಅನುಭವವಿಸುವನೇ ಜಾಣ. ಉಚಿತ ನೀರು ಇದ್ದರೆ ಅದಕ್ಕೆ ಟ್ಯಾಪ್ ನ ಅವಶ್ಯಕತೆ ಇಲ್ಲ. ಉಚಿತ ವಿದ್ಯುತ್ ಇದ್ದರೆ ....ಯಾವ ಮನೆಯಲ್ಲೂ ಸ್ವಿಚ್ ಇರಲಾರದು ಎನ್ನಿಸುತ್ತದೆ. ರಾತ್ರೆ ಮಲಗುವಾಗ ತೊಂದರೆಯಾದರೂ ಉಚಿತ ಅಲ್ವ ಅಂತ ..ಭಾವನೆ ಇರಬಹುದು. ಇಲ್ಲೆಲ್ಲ ಉಚಿತದ ಭಂಡವಾಳ ಏನು ಎಂದು ಯೋಚಿಸುವುದಿಲ್ಲ. ಉಚಿತ ಆದರೂ ಅದು ಮಿತಿ ಮೀರಿದಾಗ ಸಂತುಲನೆ ನಷ್ಟವಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಇರುವುದಿಲ್ಲ. ಯೋಚಿಸುವ ಪ್ರಕೃತಿ ಎಲ್ಲವನ್ನೂ ಉಚಿತವಾಗಿ ಕೊಡುತ್ತದೆ ಎಂದು ಭಾಸವಾಗುತ್ತದೆ. ಸೂರ್ಯನ ಬೆಳಕು ...ಗಾಳಿ ಮಳೆ...ಎಷ್ಟು ಬೇಕಾದರೂ ಅನುಭವಿಸಬಹುದು. ಉಚಿತ ಎಂದರು ಇದನ್ನು ಪೂರ್ಣವಾಗಿ ಅನುಭವಿಸುವುದಕ್ಕೆ ಸಾಧ್ಯವೇ? ಅನುಭವಿಸಿದರೂ ಅದು ಉಚಿತ ಎಂದು ಹೇಳುವುದಕ್ಕಾಗುತ್ತದೆಯೇ? ಪ್ರಕೃತಿ ಯಾವುದನ್ನೂ ಉಚಿತವಾಗಿ ಕೊಡುವುದಿಲ್ಲ. ಪ್ರಕೃತಿಗೆ ಕೊಡುವ ಮೌಲ್ಯವನ್ನು ಕೊಡದೇ ಇದ್ದರೆ ಅದು ಉಚಿತವಾಗಿ ವಾಗಿ ಸಿಗುವುದಿಲ್ಲ. ಆದರೆ ಈ ಜ್ಞಾನ ನಮಗೆ ಲಭ್ಯವಾಗುವುದಿಲ್ಲ. ನಾವಂತು ಯಾವುದು ಉಚಿತ ಇದೆ ಎಂಬುದರ ಹಿಂದೆ ಹೋಗುತ್ತೇವೆ. ಮೊದಲು ದೂರವಾಣಿಯ ಕರೆಗಳಿಗೆ ದುಡ್ದುಕೊಡುತ್ತಿದ್ದೆವು. ಈಗ ಎಲ್ಲವೂ ಉಚಿತ. ಹಾಗಂತ ಈ ಉಚಿತಕ್ಕೂ ನಾವು ಮೌಲ್ಯವನ್ನು ಕೊಡುತ್ತಿದ್ದೇವೆ ....ಒಂದು ನಮ್ಮ ಕಿವಿ ನಮ್ಮ ನಾಲಿಗೆ...ಇನ್ನೊಂದು ನಮ್ಮ ಅತ್ಯಮೂಲ್ಯವಾದ ಸಮಯ. ಆದರೆ ಇದೆಲ್ಲದರ ಯೋಚನೆ ನಮಗಿಲ್ಲ ಉಚಿತ ಅಲ್ವಾ...ನಾಲಗೆ ಕಿವಿ ಯಾವುದರ ಮೇಲೂ ನಮ್ಮ ನಿಯಂತ್ರಣ ಇರುವುದಿಲ್ಲ.
ಸಾರ್ವಜನಿಕ ಇಚ್ಛಾಶಕ್ತಿ ಅದು ಕೇವಲ ಪ್ರಧಾನಿಗೆ ಅಥವಾ ಇನ್ನಾರಿಗೋ ಇರಬೇಕೆಂದು ನಾವು ಕಟುವಾಗಿ ವಿಮರ್ಶಿಸುತ್ತೇವೆ. ಉಚಿತದ ಮೋಹಮಾತ್ರ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಉಚಿತ ಇದೆ ಎಂದು ಉಪಯೋಗಿಸಬಾರದು. ನಿಜಕ್ಕು ಉಚಿತ ಎಂದರೆ ಏನು ? ಔಚಿತ್ಯ....ಆವಶ್ಯಕ ಇಷ್ಟೇ ಅರ್ಥವನ್ನು ಕೊಡುತ್ತದೆ. ಇದನ್ನು ಮೀರಿದರೆ ಅದು ಉಚಿತ ಹೇಗಾಗುತ್ತದೆ?
No comments:
Post a Comment