ಕಾಯರ್ ಕಟ್ಟೆ ಹೈಸ್ಕೂಲು ನಮ್ಮ ಹತ್ತನೆ ತರಗತಿಯ ಬ್ಯಾಚ್ ಮುಗಿವವರೆಗೆ ಉತ್ತಮವಾಗಿತ್ತು. ಅದೊಂದು ಸ್ವರ್ಣ ಯುಗ . ಮಕ್ಕಳ ಪಾಲಿಗೂ ಗುರುಗಳ ಪಾಲಿಗೂ ಅದು ಸುವರ್ಣ ಯುಗ. ಅನಂತರ ಒಂದು ಸಲ ಮಾಸ್ತರೊಬ್ಬರು ಸಿಕ್ಕಿದಾಗ, ಈಗ ಶಿಸ್ತು ಸಭ್ಯತೆ ಎಲ್ಲ ಹೋಗಿದೆ. ಈಗ ಕೇವಲ ಸಂಬಳ ಸಿಗುತ್ತದಲ್ಲಾ ಎಂಬ ಜೀವನ ನಿರ್ವಹಣೆ ಮಾತ್ರ ಎದುರಿಗೆ ಇರುತ್ತದೆ. ಅದು ಹೇಗೂ ಇರಲಿ, ಆಗಿನ ಅಧ್ಯಾಪಕ ವೃಂದವನ್ನು ಸ್ಮರಿಸುವಾಗ ನಾನು ಈಗ ಉಪಯೋಗಿಸಿವ ಒಂದೊಂದು ಅಕ್ಷರವೂ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತದೆ.
ಮೂರು ವರ್ಷ ಶಾಲೆ ಬಿಟ್ಟು ಆನಂತರ ಆರನೇ ತರಗತಿಗೆ ಸೇರಿದಾಗ ನಾನು ದಡ್ಡರ ಸಾಲಿನಲ್ಲೇ ಗುರುತಿಸಲ್ಪಟ್ಟೆ. ಕರ್ನಾಟಕದಿಂದ ಬಂದು ಇಲ್ಲಿ ಸೇರುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಇರುತ್ತಿತ್ತು. ಅದರಲ್ಲಿ ನಾನು ತೇರ್ಗಡೆಯಾಗಿದ್ದೆ ಎನ್ನುವುದಕ್ಕಿಂತ ನನ್ನನ್ನು ಕಷ್ಟದಲ್ಲಿ ಪಾಸ್ ಮಾಡಿದ್ದರು. ಇವುಗಳಿಂದ ಒಂದು ರೀತಿಯ ಕೀಳರಿಮೆ ಇದ್ದರೂ ಅನಿವಾರ್ಯ ಎಂದುಕೊಂಡು ಮುಂದೆ ಹೆಜ್ಜೆ ಇಟ್ಟೆ. ಆಗ ಶಾಲೆಗೆ ಸೇರುವಾಗ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಅಚ್ಚುತ ಶೆಣೈಯವರು ಒಂದು ಮಾತು ಹೇಳಿದರು. ನಾನು ಬಾಲ್ಯದಿಂದಲೇ ಅವರು ಹೆಡ್ ಮಾಸ್ತರ್ ಎಂದು ಅವರನ್ನು ಕಂಡವ. ಹೆಡ್ ಮಾಸ್ತರ್ ಎಂಬ ವ್ಯಕ್ತಿಚಿತ್ರ ಎಂಬುದು ಇದ್ದರೆ ಮೊದಲಿಗೆ ಬರುವ ಮುಖ ಇವರದ್ದು. ಅವರು ಆಫೀಸ್ ರೂಮಿಗೆ ಕರೆದು ಹೇಳಿದರು, "ಎಸ್ ಎಸ್ ಎಲ್ ಸಿ ಯಲ್ಲಿ ಫಸ್ಟ್ ಕ್ಲಾಸ್ ತೆಗೆದು ಹೋಗಬೇಕು." ಆದರೆ ನನಗೆ ಭರವಸೆ ಇರಲಿಲ್ಲ. ವಿದ್ಯಾಭ್ಯಾಸದಿಂದ ಬಹಳ ದೂರ ಇದ್ದ ನಾನು ಎಲ್ಲರ ಒತ್ತಾಸೆಗೆ ಸೇರಿದ್ದೆ. ಅಚ್ಯುತ ಶೆಣೈ ಬಹಳ ಶಿಸ್ತುಬದ್ದ ಅಧ್ಯಾಪಕರು. ಅವರ ಮಾತುಗಳು ಭಾಷಣಗಳು ಕೇಳುವುದೇ ಒಂದು ಖುಷಿ. ಇವರೂ ಒಂದು ಬಾರಿ ಖಾಲಿ ಪಿರಿಯಡ್ ಗೆ ಕ್ಲಾಸ್ ತೆಗೆದುಕೊಳ್ಳುವುದಕ್ಕೆ ಬಂದಿದ್ದರು. ಅಂದು ಇವರು ಮಾಡಿದ ಲೆಕ್ಕದ ಪಾಠ ಮರೆಯುವುದಕ್ಕಿಲ್ಲ. ಹೀಗೆ ಯಾವುದೇ ವಿಷಯದ ಪಾಠಕ್ಕೂ ಒಂದೊಂದು ಕ್ಲಾಸ್ ಗೆ ಹೋಗುವುದು ಇವರ ಗುಣ. ಹೈಸ್ಕೂಲು ಜೀವನದ ಕೊನೆಯ ಹಂತ ಎಂಬಂತೆ ಎಸ್ ಎಸ್ ಎಲ್ ಸಿ ಯಲ್ಲಿ ಫಲಿತಾಂಶ ನೋಡುವುದಕ್ಕೆ ಹೋಗಿದ್ದೆ. ಫಲಿತಾಂಶ ಮೊದಲೇ ಗೊತ್ತಿತ್ತು. ಆದರೂ ಅದೊಂದು ಸಂತಸ. ಭಾರತ ಗೆದ್ದ ಕ್ರಿಕೇಟ್ ಪಂದ್ಯದ ಮುಖ್ಯಾಂಶ ಕಂಡಂತೆ. ಪಲಿತಾಂಶ ಆಫೀಸ್ ಕೋಣೆಯ ಹೊರಗೆ ನೇತು ಹಾಕಿದ್ದರು. ನಿರೀಕ್ಷೆಯಂತೆ ಪಸ್ಟ್ ಕ್ಲಾಸ್ ತೆಗೆದ ಇಪ್ಪತ್ತೈದು ವಿದ್ಯಾರ್ಥಿಗಳ ಸಾಲಿನಲ್ಲಿ ನನ್ನ ಹೆಸರಿತ್ತು. !! ನಾನು ಫಲಿತಾಂಶ ನೋಡಿ ಆಫೀಸ್ ಕೋಣೆಯ ಒಳಗೆ ಅಚ್ಚುತ ಶೆಣೈ ಕುಳಿತುಕೊಳ್ಳುತ್ತಿದ್ದ ಜಾಗವನ್ನು ನೋಡಿದೆ. ಐದು ವರ್ಷದ ಹಿಂದಿನ ಮಾತು ನೆನಪಾಗಿತ್ತು. ಆಗ ಬಹುಶಃ ಅವರು ಇರಬೇಕಿತ್ತು. ಆಗ ನಿಜಕ್ಕೂ ಧನ್ಯನಾಗಿದ್ದೆ. ಆ ಶಾಲೆ ಶುದ್ದ ಸಂಸ್ಕಾರವನ್ನು ಈ ರೀತಿಯಲ್ಲಿ ನೀಡಿತ್ತು.
ಹೀಗೆ ಹಲವು ಅಧ್ಯಾಪಕರು ಒಂದೊಂದು ವಿಧದಲ್ಲಿ ಸ್ಮರಣೆಗೆ ಬರುತ್ತಾರೆ. ಇದರಲ್ಲಿ ಅದ್ಭುತ ವ್ಯಕ್ತಿತ್ವದ ಮುದ್ರೆಯನ್ನು ಒತ್ತಿದವರು ಮುಖ್ಯೋಪಾಧ್ಯಾಯರಾಗಿದ್ದ ಗುರು ಎಂದು ಕರೆಸಿಕೊಳ್ಳುತ್ತಿದ್ದ ಶ್ರೀ ಗುರು ರಂಗಯ್ಯ ಬಲ್ಲಾಳರು. ಅದ್ಭುತ ಜ್ಞಾನ ಸಂಪತ್ತು. ಪಠ್ಯೆತರ ಚಟುವಟಿಕೆಯಲ್ಲಿ ಬತ್ತದ ಉತ್ಸಾಹ. ಇವರ ಅವಧಿಯಲ್ಲೇ ಶಾಲೆ ರಜತ ಮಹೋತ್ಸವವನ್ನು ಆಚರಿಸಿತ್ತು. ಯಕ್ಷಗಾನದಲ್ಲಿ ಅತೀವ ಆಸಕ್ತರಾಗಿರುವ ಇವರು ಮಕ್ಕಳಿಂದ ಸುಂದರ ಯಕ್ಷಗಾನವನ್ನು ಆಡಿಸಿ ನೋಡಿ ಖುಷಿ ಪಡುತ್ತಿದ್ದರು. ನನ್ನ ಎಸ್ ಎಸ್ ಎಲ್ ಸಿ ಅಂಕ ಪಟ್ಟಿಯಲ್ಲಿ ಇವರ ಸಹಿ ಇದೆ. ಶ್ರೀ ಬಲ್ಲಾಳರದ್ದು ವಿಶಿಷ್ಟ ವ್ಯಕ್ತಿತ್ವ. ಈ ಶಾಲೆಯ ಹೆಚ್ಚಿನ ಎಲ್ಲಅಧ್ಯಾಪಕರದ್ದು ಊರಿನವರೇ ಆಗಿದ್ದುದರಿಂದ ನನಗೆ ಶಾಲೆಗೆ ಹೋಗುವ ಮೊದಲೇ ಪರಿಚಯವಿತ್ತು. ಇವರೂ ಸಹ ಪೂರ್ವ ಪರಿಚಿತರು. ಶಾಲೆಯ ಸೂಚನಾ ಫಲಕದ ವೃತ್ತ ಪತ್ರಿಕೆಗೆ ನನ್ನನ್ನೇ ಸಂಪಾದಕರನ್ನಾಗಿ ಮಾಡಿದ್ದರು. ಅದೂ ಒಂಭತ್ತನೇ ತರಗತಿಯಲ್ಲಿರುವಾಗ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ತೋರಿಸುವುದಕ್ಕೆ, ಬರವಣಿಗೆ ಚಿತ್ರಕಲೆ ಇತ್ಯಾದಿಯನ್ನು ತೋರಿಸುವುದಕ್ಕೆ ಇದೊಂದು ಮಾಧ್ಯಮ. ವಿದ್ಯಾರ್ಥಿಗಳು ತಮ್ಮದೇ ಕಾಗದದಲ್ಲಿ ಬರೆದು ಯಾ ಚಿತ್ರಿಸಿ ತಂದವುಗಳನ್ನು ಸಂಗ್ರಹಿಸಿ ಈ ಸೂಚನಾ ಫಲಕದಲ್ಲಿ ಜೋಡಿಸುವ ಕೆಲಸ ನನ್ನದು. ಇದರಲ್ಲು ಉತ್ತಮವಾದವುಗಳ ಆಯ್ಕೆ ಇತ್ತು. ಈ ಕೆಲಸಕ್ಕೆ ಸಾಮಾನ್ಯವಾಗಿ ಹತ್ತನೇ ತರಗತಿಯವರನ್ನೇ ಆಯ್ಕೆ ಮಾಡಲಾಗುತ್ತಿತ್ತು. ಆದರೆ ಮೊದಲ ಬಾರಿ ಒಂಭತ್ತನೆ ತರಗತಿಯಲ್ಲಿದ್ದ ನನ್ನನ್ನು ಆಯ್ಕೆ ಮಾಡಿದ್ದರು. ಆಗಿನಿಂದ ಸಿಕ್ಕಿದ ಬರವಣಿಗೆಯ ಪ್ರೇರಣೆ ಇದುವರೆಗೂ ಸುಪ್ತವಾಗಿ ಮುಂದುವರೆದಿದೆ. ಶ್ರೀ ಬಲ್ಲಾಳರು ಬಿಡುವಿನ ಸಮಯದಲ್ಲಿ ಇವರು ನಮ್ಮೊಂದಿಗೆ ಕ್ರಿಕೆಟ್, ವಾಲಿ ಬಾಲ್ ಆಡುವುದಕ್ಕೆ ಮಕ್ಕಳಂತೆ ಜತೆಯಾಗುತ್ತಿದ್ದರು. ಆಟದಲ್ಲಿ ಬಹಳ ಗಂಭೀರವಾಗಿ ತಲ್ಲೀನರಾಗುತ್ತಿದ್ದರು. ಇಂತಹ ಭಾಗ್ಯ ಯಾರಿಗೆ ಉಂಟು? ಹಲವು ವಿಷಯಗಳಲ್ಲಿ ಇವರನ್ನು ಮರೆಯುವಂತೇ ಇಲ್ಲ. ಒಂದು ಸಲ ಶಾಲಾ ಜವಾನ ( ಪೀಯೋನ್) ಗೈರು ಹಾಜರಾಗಿದ್ದಾಗ ಕ್ಲಾಸ್ ಕ್ಲಾಸ್ ಗೆ ನೋಟೀಸು ಕೊಡುವುದಕ್ಕೆ ನನ್ನನ್ನೇ ಕಳುಹಿಸಿದ್ದರು. ಅದೊಂದು ದೊಡ್ಡ ಹಿರಿಮೆಯಾಗಿ ಕಂಡಿತ್ತು. ಮಕ್ಕಳೊಂದಿಗೆ ಮಕ್ಕಳಂತೆ ಮಿತ್ರರಂತೆ ಇವರು ಬೆರೆಯುತ್ತಿದ್ದ ರೀತಿ ಅನನ್ಯ. ಬಿಡುವಿನ ಪಿರಿಯಡ್ ನಲ್ಲಿ ಯಾವುದಾದರೊಂದು ವಿಷಯಕ್ಕೆ ಪಾಠವನ್ನು ವಿಶೇಷವಾಗಿ ತೆಗೆದುಕೊಳ್ಳುತ್ತಿದ್ದರು. ಹಾಗೇ ಒಂದು ಸಲ ಹತ್ತನೆ ತರಗತಿಯಲ್ಲಿ ಒಂದು ಇಂಗ್ಲೀಷ್ ಪಾಠವನ್ನು ಮಾಡಿದ್ದರು. ಕನ್ನಡ ಭಾಷೆಯ ಒಂದೇ ಒಂದು ಶಬ್ದವನ್ನೂ ಬಳಸದೆ ಸಂಪೂರ್ಣ ಇಂಗ್ಲೀಷ್ ಭಾಷೆಯಲ್ಲೇ ಮನ ಮುಟ್ಟುವಂತೆ ಇವರು ಪಾಠ ಮಾಡಿದ್ದನ್ನು ಮರೆಯುವ ಹಾಗಿಲ್ಲ. ಪಾಠದ ಸನ್ನಿವೇಶಗಳನ್ನು ಸ್ವತಹ ಅಭಿನಯಿಸಿ ಮಕ್ಕಳಿಗೆ ಅರ್ಥವಾಗುವಂತೆ ಪಾಠ ಮಾಡಿದ್ದರು. ಇದೊಂದು ಮರೆಯಲಾಗದ ಅನುಭವ. ಇವರ ಅವಧಿಯಲ್ಲಿ ನಾವು ವಿದ್ಯಾರ್ಥಿಗಳಾಗಿದ್ದೇವೆ ಎನ್ನುವುದೇ ಒಂದು ಹಿರಿಮೆ.
ಮಹಮ್ಮದ್ ಮಾಸ್ತರ್ ಬಗ್ಗೆ ಈ ಮೊದಲು ಬರೆದಿದ್ದೆ. ಆರನೇ ತರಗತಿಯಲ್ಲಿ ಕ್ಲಾಸ್ ಟೀಚರ್ ಆಗಿದ್ದ ವಾಸುದೇವ ಶೆಟ್ಟರು ಎಲ್ಲಾ ಪಾಠಗಳ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಅದರಂತೆ ಇವರಿಗೆ ನಾನು ಅತ್ಯಂತ ಹತ್ತಿರವಾಗಿದ್ದೆ. ಶಾಲೆಯ ಬಿಟ್ಟುಳಿದ ಚಟುವಟಿಕೆಗಳಲ್ಲಿ ನನ್ನನ್ನು ಆಸಕ್ತಿಯಿಂದ ಸೇರಿಸುತ್ತಿದ್ದರು. ಅವರ ನೇತೃತ್ವದಲ್ಲಿ ರಜತ ಮಹೋತ್ಸವದ ತುಳು ನಾಟಕದಲ್ಲಿ ಮುಖ್ಯ ಪಾತ್ರವನ್ನು ನನಗೆ ನೀಡಿದ್ದರು. ಇನ್ನು ಆರನೇ ತರಗತಿಯಲ್ಲಿ ವಿಜ್ಞಾನದ ವಿಷಯಕ್ಕೆ ಟೀಚರ್ ಆಗಿ ಬಂದವರು ಪ್ರಭಾವತಿ ಟೀಚರ್. ಮೇಲೆ ಹೇಳಿದ ನಾರಾಯಣ ಭಟ್ಟರ ಶ್ರೀಮತಿ ಇವರು. ಇವರು ಮಕ್ಕಳಿಗೆ ಹೇಳುವ ಪಾಠದ ರೀತಿ ಹೇಗಿತ್ತು ಎಂದರೆ ಅಲ್ಲಿ ಮಮತೆ ವಿಶ್ವಾಸ ತುಂಬುವಂತಿತ್ತು. ಚೆನ್ನಾಗಿ ಅರ್ಥ ಮಾಡಿಸುತ್ತಿದ್ದರು. ಇವರ ತಾಳ್ಮೆ ಉಲ್ಲೇಖಾರ್ಹ. ಬೇರೆ ತರಗತಿಗೆ ಲೆಕ್ಕವನ್ನೂ ತೆಗೆದುಕೊಳ್ಳುತ್ತಿದ್ದ ಇವರಲ್ಲಿ ಹಲವು ಸಲ ಲೆಕ್ಕ ಪಾಠದ ಬಗೆಗಿನ ಸಂಶಯವನ್ನು ವೈಯಕ್ತಿಕವಾಗಿ ಕೇಳಿ ಪರಿಹರಿಸಿಕೊಂಡಿದ್ದೇನೆ. ಹತ್ತಿರ ಕುಳಿತುಕೊಳ್ಳಿಸಿ ಒಂದೊಂದೆ ಹೇಳುತ್ತಿದ್ದರೆ ಅದೊಂದು ದಿವ್ಯ ಅನುಭವ. ಇನ್ನು ಆರನೇ ತರಗತಿಯಲ್ಲಿ ಹಿಂದಿ ಪಾಠಕ್ಕೆ ಬಂದ ಹಿಂದಿ ಪಂಡಿತರು, ವೆಂಕಟ್ರಮಣ ಮಯ್ಯ...ಮಯ್ಯರು ಅಂತಲೇ ಕರೆಸಿಕೊಳ್ಳುತ್ತಿದ್ದ ಇವರ ಹಿಂದಿ ವ್ಯಾಕರಣ ಅಧ್ಬುತವಾಗಿತ್ತು. ಇಂದು ನಾನು ಹಿಂದಿಯಲ್ಲಿ ವ್ಯವಹರಿಸುತ್ತಿದ್ದರೆ ಇವರ ಯೋಗ ದಾನ ಬಹಳ ದೊಡ್ಡದು. ಅದರಂತೆ ಏಳನೇ ತರಗತಿಗೆ ಇದೇ ಅಧ್ಯಾಪಕರು ಇದ್ದರು, ವೆತ್ಯಾಸವೆಂದರೆ ಹಿಂದಿಗೆ ಗಂಗಾಧರ್ ಮಾಸ್ತರ್ ಎಂಬ ಮಲಯಾಳಿ ಅಧ್ಯಾಪಕರಿದ್ದರು. ಇವರು ಅರ್ಧ ಮಲಯಾಳ ಹಾಗು ಕನ್ನಡದಲ್ಲಿ ಪಾಠ ಮಾಡಿದರೂ ಅದು ಸುಂದರವಾಗಿತ್ತು. ಇವರ ಅಧ್ಯಾಪನೆಯಲ್ಲಿ ಹಿಂದಿಯಲ್ಲಿ ಐವತ್ತಕ್ಕೆ ಐವತ್ತು ಅಂಕ ಪಡೆದದ್ದು ನನ್ನ ಹಿರಿಮೆ.
ಇನ್ನು ಏಳು ಮುಗಿಸಿ ಎಂಟನೆ ತರಗತಿಗೆ ಸೇರಿದಾಗ ನಾವೆಲ್ಲ ಪ್ರೌಢರಾಗಿ ನಿಜವಾಗಿ ಹಸ್ಕೂಲ್ ವಿದ್ಯಾರ್ಥಿಗಳಾಗಿದ್ದೆವು. ಪ್ರೌಢ ಎಂದರೆ ಅದು ಬಾಲ್ಯಕ್ಕೂ ಯೌವನಕ್ಕೂ ಇರುವ ಸೇತುವೆ. ಇತ್ತ ಬಾಲ್ಯವೂ ಬಿಟ್ಟಿಲ್ಲ ಅತ್ತ ಯೌವನವೂ ಇಲ್ಲದ ಸ್ಥಿತಿ. ಇಲ್ಲಿ ಎಲ್ಲ ವಿಷಯಕ್ಕೂ ಬೇರೆ ಬೇರೆ ಅಧ್ಯಾಪಕರು. ಕನ್ನಡಕ್ಕೆ ಕನ್ನಡ ಪಂಡಿತ ಸುಬ್ಬಣ್ಣ ಮಾಸ್ತರ್. ರಾಗವಾಗಿ ರಾಘವಾಂಕ, ನಾರಣಪ್ಪ ಮುಂತಾದವರ ಹಳೆಕನ್ನಡ ಪದ್ಯಗಳನ್ನು ಹೇಳುತ್ತಿದ್ದ ಇವರದ್ದು ವ್ಯಾಕರಣ ಪಾಠ ಅದ್ಭುತವಾಗಿತ್ತು. ಮಾತ್ರಾಗಣ ಅಕ್ಷರಗಣಗಳು ಈಗಲೂ ನೆನಪಾಗುತ್ತವೆ. ಯಾವುದೇ ಪದ್ಯ ಪಾಠ ಮಾಡಿದ ನಂತರ ಅದನ್ನು ಹೇಳುವುದಕ್ಕೆ ನನ್ನಲ್ಲಿ ಹೇಳುತ್ತಿದ್ದರು. ರಾಜಕುಮಾರ್ ಒಂದು ಸಲ ರಾಗವಾಗಿ ಹೇಳಿಬಿಡು. ನಾನು ಎದ್ದು ನಿಂತು ಗಂಭೀರವಾಗಿ ಸ್ಪಷ್ಟ ಉಚ್ಚಾರದಲ್ಲಿ ಪದ್ಯಗಳನ್ನು ಹೇಳುತ್ತಿದ್ದೆ. ನನಗೆ ವೇದ ಮಂತ್ರದ ಪಠಣದಿಂದ ಅಕ್ಷರದ ಸ್ಪಷ್ಟ ಉಚ್ಚಾರ ಕರಗತವಾಗಿತ್ತು.
ಇಲ್ಲಿ ಇಂಗ್ಲೀಷ್ ಮತ್ತು ಲೆಕ್ಕದ ಪಾಠಕ್ಕೆ ಬಂದವರು ನಾಗೇಶ್ ಅಂಗಿತ್ತಾಯ ಮಾಸ್ತರು. ಇವರ ಮತ್ತು ನನ್ನ ಈ ಸಂಪರ್ಕ ಎಸ್ ಎಸ್ ಎಲ್ ಸಿ ತನಕವು ಅಬಾಧಿತವಾಗಿ ಮುಂದುವರೆದಿತ್ತು. ವಿಜ್ಞಾನದ ವಿಷಯಕ್ಕೆ , ರಸಾಯನ ಶಾಸ್ತ್ರಕ್ಕೆ ರಾಂಭಟ್ಟ ಮಾಸರ್, ಎರಡೂ ಕೈಗಳಲ್ಲಿ ಏಕಪ್ರಕಾರವಾಗಿ ಬೋರ್ಡ್ ನಲ್ಲಿ ಬರೆಯುತ್ತಿದ್ದ ಇವರ ಚಾಣಾಕ್ಷತೆ ವಿಸ್ಮಯವಾಗಿತ್ತು. ನಮ್ಮ ಯಾವ ಸಂಶಯವಿದ್ದರೂ ಶಾಲೆಯ ಪ್ರಯೋಗ ಶಾಲೆಗೆ ಕರೆಸಿ ಹೇಳಿಕೊಡುತ್ತಿದ್ದರು. ಪ್ರಯೋಗ ಶಾಲೆಯ ಉಸ್ತುವಾರಿ ಇವರದ್ದೇ ಆಗಿತ್ತು. ಇನ್ನು ಭೌತ ಶಾಸ್ತ್ರಕ್ಕೆ ಶ್ರೀನಿವಾಸ ಮಾಸ್ತರ್. ದೂರದಿಂದ ಸಂಬಂಧಿಯಾಗಿ ಮೊದಲೇ ಪರಿಚಯ ಇದ್ದ ಇವರ ಪಾಠ ಪರಿಚಯವಾಗಿದ್ದು ಎಂಟನೇ ತರಗತಿಯಲ್ಲಿ ಆನಂತರ ಹತ್ತನೆ ತರಗತಿಯವರೆಗೂ ಮುಂದುವರೆದು ಹತ್ತನೇ ತರಗತಿಯಲ್ಲಿ ಕ್ಲಾಸ್ ಮಾಸ್ತರ್ ಆಗಿದ್ದರು. ಶ್ರೀನಿವಾಸ ಮಾಸ್ತರ್, ಒಂದು ಅದ್ಭುತ ವ್ಯಕ್ತಿತ್ವ. ಬಹಳ ಸಾಂತ್ವನ ಚಿತ್ತದಲ್ಲಿ ಮೆತ್ತಗೆ ಮಾತನಾಡುತ್ತಿದ್ದ ಇವರ ಮಾತು ಬಹಳ ಬುದ್ದಿವಂತಿಕೆಯಿಂದ ಕೂಡಿರುತ್ತಿತ್ತು. ಮಕ್ಕಳ ತಂಟೆ ಕಿರಿ ಕಿರಿಯ ಸಂದರ್ಭಗಳಲ್ಲಿ ಇವರು ಮಕ್ಕಳನ್ನು ತನಿಖೆ ಮಾಡುವಾಗ ಅದೊಂದು ವಿಡಂಬನೆಯಿಂದ ನಮಗೆಲ್ಲ ಮನರಂಜನೆಯನ್ನು ಕೊಡುತ್ತಿತ್ತು. ಬುದ್ದಿವಂತಿಕೆಯ ಪ್ರಶ್ನೆಗಳು ಇಕ್ಕಟ್ಟಿನಲ್ಲಿ ಸಿಲುಕಿಸುವ ರೀತಿ ವಿಶಿಷ್ಟವಾಗಿರುತ್ತಿತ್ತು. ಇವರು ಸಿಟ್ಟಾಗಿದ್ದನ್ನು ಕಾಣುವುದಕ್ಕೆ ಸಾಧ್ಯವಿರಲಿಲ್ಲ. ಅವರು ತರಗತಿಯಲ್ಲಿ ಹೆಜ್ಜೆ ಇಡುತ್ತಿದ್ದರೆ ಅದು ಬೆಕ್ಕಿನ ಹೆಜ್ಜೆಯಂತೆ ಗೊತ್ತೇ ಆಗುತ್ತಿರಲಿಲ್ಲ. ಹತ್ತಿರ ಬಂದು ಹೆಗಲಿಗೆ ಕೈ ಹಾಕಿ ಮಾತನಾಡುತ್ತಿದ್ದರು. ಅತ್ಯಂತ ಸ್ನೇಹಮಯಿ. ಅತ್ಯಂತ ಚಾಣಾಕ್ಷ. ಯಾವುದೇ ಸಮಸ್ಯೆಗಳನ್ನು ಇವರು ನೀವಾರಿಸುತ್ತಿದ್ದ ರೀತಿ ಅದ್ಭುತ. ಶಾಲಾ ಜೀವನ ಮುಗಿದರೂ ಇವರ ಸಂಪರ್ಕ ಮುಂದುವರೆದಿತ್ತು. ನನ್ನ ಸ್ಕೂಟರ್ ನಲ್ಲಿ ಎಷ್ಟೋ ಸಲ ಇವರನ್ನು ಕರೆದುಕೊಂಡು ಹೋದ ಹಿರಿಮೆ ನನ್ನದು.
ಒಂಭತ್ತನೆ ತರಗತಿಯಲ್ಲಿ ಕನ್ನಡ ಪಾಠಕ್ಕೆ ಒಂದು ವರ್ಷ ಗಣಪತಿ ಭಟ್ ಮಾಸ್ತರಾಗಿದ್ದರು. ಇವರ ಒಂದು ಕಾಲು ಪೋಲಿಯೋಗ್ರಸ್ಥವಾಗಿಯೋ ಏನೋ ನಡೆಯುವಾಗ ಒಂದಿಷ್ಟು ಕುಂಟುತ್ತಿದ್ದರು. ಅದರೆ ಇವರ ಪಾಠ ಅದು ಕುಂಟುತ್ತಿರಲಿಲ್ಲ. ಅದು ಬಹಳ ಸುಂದರವಾಗಿತ್ತು. ಕಠಿಣವಾಗಿದ್ದ ವ್ಯಾಕರಣಗಳನ್ನು ಸರಳವಾಗಿ ಹೇಳುತ್ತಿದ್ದರು. ಪಠ್ಯದ ಕಥೆಗಳನ್ನು ವಿವರಿಸುತ್ತಿದ್ದ ರೀತಿ ಸುಂದರವಾಗಿತ್ತು. ಗಣಪತಿ ಭಟ್ಟರು ಶಾಲಾ ವಾಚನಾಲಯ ಅಥವ ಲೈಬ್ರರಿಯ ಮೇಲುಸ್ತುವಾರಿಯನ್ನು ವಹಿಸಿದ್ದರು. ಆಗ ನನಗೆ ಕಾದಂಬರಿ ಓದುವ ಹುಚ್ಚು ದಪ್ಪ ದಪ್ಪ ಕಾದಂಬರಿ ತಂದು ಮನೆಯಲ್ಲಿ ಓದುತ್ತಿದ್ದೆ. ಒಬ್ಬ ವಿದ್ಯಾರ್ಥಿಗೆ ಒಂದೇ ಪುಸ್ತಕವನ್ನು ಓದುವುದಕ್ಕೆ ಕೊಡುವುದು ನಿಯಮ. ಆದರೆ ಇವರು ನನಗೆ ಬೇಕಾದಷ್ಟು ಪುಸ್ತಕವನ್ನು ಪ್ರೀತಿಯಿಂದ ಓದುವುದಕ್ಕೆ ಕೊಡುತ್ತಿದ್ದರು. ಓದುವ ಹವ್ಯಾಸ ಹುಟ್ಟುಹಾಕಿದ ಅಧ್ಯಾಪಕರು ಇವರು.
ನಮ್ಮ ಪ್ರೌಢ ಶಾಲಾ ಜೀವನದಲ್ಲಿ ಒಂದು ದಿನ ಹೊಸದಾಗಿ ಒಬ್ಬರು ಮಾಸ್ತರು ಬಂದರು. ಶ್ರೀ ಮಹಾಲಿಂಗೇಶ್ವರ ಭಟ್. ಬದಿಯಡ್ಕ ಸಮೀಪದ ನೀರ್ಚಾಲಿನಿಂದ ಇವರು ಬರುತ್ತಿದ್ದರು. ನಮ್ಮ ಮನೆಯ ಹತ್ತಿರದಲ್ಲೆ ಬಾಡಿಗೆ ರೂಮಿನಲ್ಲಿ ವಾಸವಾಗಿದ್ದ ನಾಗೇಶ ಮಾಸ್ತರ ಜತೆ ವಾಸವಾಗಿದ್ದರು. ಇವರೊಂದು ರೀತಿಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ ಮಾಸ್ತರ್. ಬಹಳ ಖಂಡ ತುಂಡವಾಗಿ ಮಾತನಾಡುತ್ತಿದ್ದ ಇವರ ಇಂಗ್ಲೀಷ್ ಮತ್ತು ಸಮಾಜ ಶಾಸ್ತ್ರದ ಪಾಠ ಬಹಳ ಚೆನ್ನಾಗಿತ್ತು. ಪಾಠ ಮಾಡುವಾಗ ಇವರದೇ ಶೈಲಿಯ ಕೆಲವು ತಂತ್ರಗಾರಿಕೆಗಳು ಇರುತ್ತಿದ್ದವು. ಪಾಠಮಾಡುವಾಗ ನಿದ್ರೆಗೆ ಜಾರುವವರನ್ನು ಬೆಂಚಿನ ತುದಿಯಲ್ಲಿ ಕೂರಿಸಿ ಪಾಠ ಮಾಡುತ್ತಾ ಅತಿಂದ ಇತ್ತ ಓಡಾಡುವಾಗ ಇವರು ಅವರ ಬೆನ್ನು ಸವರಿ ಎಚ್ಚರದಿಂದ ಇಡುತ್ತಿದ್ದರು. ಬಹಳ ಸಭ್ಯತೆಯ ಶಿಸ್ತಿನ ಮನುಷ್ಯ. ಹಾಸ್ಯ ಭರಿತ ಮಾತುಗಳು. ಇವರ ಜತೆ ಮಾತನಾಡುವುದೆಂದರೆ ಅದೊಂದು ಬಗೆಯ ಆನಂದ. ನನ್ನಲ್ಲಿ ಬಹಳ ಅಕ್ಕರೆ ಇವರಿಗೆ.
ಶಾಲೆಯಲ್ಲಿ ಕನ್ನಡ ವಿಭಾಗಕ್ಕೆ ಎರಡು ಜನ ಮಹಿಳಾ ಟೀಚರ್ ಗಳು. ಅದರಲ್ಲಿ ಒಬ್ಬರು ಮೇಲೆ ಹೇಳಿದ ಪ್ರಭಾವತಿ ಟೀಚರ್ ಆದರೆ ಇನ್ನೊಬ್ಬರು ಪ್ರೇಮಲತಾ ಟೀಚರ್. ಅದ್ಭುತ ಎನ್ನುವಂತ ಟೀಚರ್ ಇವರು. ನಮ್ಮೊಂದಿಗೆ ಅಕ್ಕರೆಯಿಂದ ಬೆರೆಯುತ್ತಿದ್ದರು. ನಮ್ಮದೇ ಶಾಲೆಯ ಮಲಯಾಳಿ ಟೀಚರ್ ಜತೆ ನಮ್ಮ ಮನೆಯ ಪಕ್ಕದಲ್ಲೆ ಕೆಲವು ಸಲ ವಾಸ್ತವ್ಯ ಹೂಡುತಿದ್ದರು. ಆಗೆಲ್ಲ ನಮಗೆ ಉಚಿತ ಟ್ಯೂಷನ್. ನಾನು ಹತ್ತನೆ ತರಗತಿಯಲ್ಲಿರುವಾಗ ಒಂದು ಸಲ ಆರನೇ ತರಗತಿಯ ಮಕ್ಕಳ ಪರೀಕ್ಷಾ ಪೇಪರ್ ಕೊಟ್ಟು ನೋಡುವುದಕ್ಕೆ ಹೇಳಿದ್ದರು. ನಾನು ತಪ್ಪು ಹುಡುಕಿ ತೋರಿಸಬೇಕಿತ್ತು. ಬಹಳ ಸಾಧು ಸ್ವಭಾವದ ಭಾವನಾತ್ಮಕ ಮನಸ್ಸಿನ ಟೀಚರ್ ಇವರು. ನಮ್ಮ ಮನೆಯಲ್ಲಿ ಮಾಡಿದ ಅಡುಗೆ ತಿಂಡಿಯನ್ನು ಇವರಿಗೆ ತಂದು ಕೊಡುತ್ತಿದ್ದೆ. ಇವರ ಸ್ನೇಹಮಯ ನಡವಳಿಕೆ ಮರೆಯುವುದಕ್ಕಿಲ್ಲ.
ನಮ್ಮ ಶಾಲೆಗೆ ಕೇರಳದ ತಲಶ್ಯೇರಿಯಿಂದ ಡ್ರಾಯಿಂಗ್ ಮಾಸ್ತರ್ ಒಬ್ಬರು ಬಂದಿದ್ದರು. ಇವರ ಹೆಸರು ಕೇಶವನ್. ಹೈಸ್ಕೂಲ್ ಚರಿತ್ರೆಯಲ್ಲಿ ಇವರ ಹೆಸರನ್ನು ಉಲ್ಲೇಖಿಸದೇ ಇದ್ದರೆ ಅದು ಅಪೂರ್ಣವಾಗುತ್ತದೆ. ಅದ್ಭುತ ಹಸ್ತ ಪ್ರತಿಭೆಯ ಕಲಾವಿದರು ಇವರು. ಇವರ ಚಿತ್ರಕಲೆಯ ಪ್ರತಿಭೆ ಅಪಾರ. ಕ್ಷಣ ಮಾತ್ರದಲ್ಲಿ ಇವರು ಬಿಡಿಸುವ ಚಿತ್ರಗಳನ್ನು ನೋಡುವುದೇ ಒಂದು ಹಬ್ಬ. ನಮ್ಮ ಶಾಲೆಯ ರಜತ ಮಹೋತ್ಸವದ ಮಂಟಪವನ್ನು ವಿನ್ಯಾಸಗೊಳಿಸಿದವರು ಇವರು. ದೊಡ್ಡದಾ ಸರಸ್ವತಿಯ ಉಬ್ಬು ಪ್ರತಿಮೆಯನ್ನು ಅದರ ಗೋಡೆಯಲ್ಲಿ ಚಿತ್ರಿಸಿದವರು ಇವರು. ಅನನ್ಯ ಪ್ರತಿಭೆ. ಆದರೆ ಇವರನ್ನು ಕಂಡರೆ ವಿದ್ಯಾರ್ಥಿಗಳಿಗೆ ಅಷ್ಟಕ್ಕಷ್ಟೆ. ಸಿಕ್ಕಾ ಪಟ್ಟೆ ವಿಲಕ್ಷಣ ಸ್ವಭಾವದ ಅಧ್ಯಾಪಕರು. ಮಲಯಾಳ ಬಿಟ್ಟರೆ ಬೇರೆ ಭಾಷೆ ತಿಳಿಯದು. ಎಲ್ಲ ವಿದ್ಯಾರ್ಥಿಗಳ ಜತೆಗೂ ಬೆರೆಯುವಾಗ ಎನೋ ಒಂದು ಸಮಸ್ಯೆ ಎದುರಾಗುತ್ತಿತ್ತು. ಹಲವು ವಿದ್ಯಾರ್ಥಿಗಳಿಗೆ ಹೊಡೆಯುವುದು ಇತ್ಯಾದಿ ...ಆದರೂ ಇವರಿಗೆ ನನ್ನನ್ನು ಕಂಡರೆ ಒಂದು ಅಭಿಮಾನ. ಇವರು ತಂಗಿದ್ದ ರೂಮಿಗೆ ಕರೆಯುತ್ತಿದ್ದರು. ಇವರ ಕಲಾಕೃತಿಗಳನ್ನು ತೋರಿಸುತ್ತಿದ್ದರು. ನನಗೂ ಒಂದಷ್ಟು ಚಿತ್ರಕಲೆಯಲ್ಲಿ ಆಸಕ್ತಿ ಬರುವಂತೆ ಮಾಡಿದ್ದರು. ಶಾಲೆಯ ಎಲ್ಲ ಕೆಲಸಗಳಲ್ಲಿ ನನ್ನನ್ನು ಸೇರಿಸುತ್ತಿದ್ದರು.
ನಮ್ಮ ಶಾಲೆಯಲ್ಲಿ ಇದ್ದ ಇನ್ನೊಬ್ಬ ಮಾಸ್ತರ್, ರಮೇಶ ಮಾಸ್ತರ್, ಹೆಚ್ಚಾಗಿ ಲೆಕ್ಕದ ಪಾಠವನ್ನೇ ಮಾಡುತಿದ್ದ ಇವರು ನಾವಿರುವಗಲೇ ಇನ್ನೊಂದು ಶಾಲೆಗೆ ಹೆಡ್ ಮಾಸ್ತರ್ ಆಗಿ ವರ್ಗವಾಗಿ ಹೋದರು. ಇವರು ನನಗೆ ಪಾಠಕ್ಕೆ ಇಲ್ಲವಾಗಿದ್ದರೂ ನನ್ನ ಜತೆ ಒಳ್ಳೆ ಸ್ನೇಹದಿಂದ ಬೆರೆಯುತ್ತಿದ್ದರು. ಇವರಲ್ಲು ಹಲವು ಸಲ ನನ್ನ ಲೆಕ್ಕದ ಸಮಸ್ಯೆಗಳನ್ನು ಪರಿಹರಿಸಿಕೊಂಡದ್ದಿದೆ.
ಶಾಲೆಯಲ್ಲಿ ಬಯೋಲಜಿ ಅಂದರೆ ಜೀವ ಶಾಸ್ತ್ರಕ್ಕೆ ಒಬ್ಬರೇ ಒಬ್ಬ ಮಾಸ್ತರ್ ಎಂದರೆ ನೂತಿಲ ಅಬ್ದುಲ್ಲ ಮಾಸ್ತರ್. ಜೀವ ಶಾಸ್ತ್ರಕ್ಕೆ ಜೀವ ತುಂಬುವ ಪಾಠ ಇವರದ್ದು. ಕಂಚಿನ ಕಂಠ. ಕುರ್ಚಿಯಲ್ಲಿ ಕುಳಿತೇ ಪಾಠ ಮಾಡುತ್ತಿದ್ದ ಇವರು ದೂರದಲ್ಲಿ ಕುಳಿತ ವಿದ್ಯಾರ್ಥಿಗೂ ಇವರ ಸ್ವರ ಕೇಳಿಸುತ್ತಿತ್ತು. ಶಾಲೆಯ ಕೊನೆಯ ವರ್ಷದಲ್ಲಿ ಪರೀಕ್ಷೆಗೆ ಹಲವು ದಿನ ಮೊದಲೆ ನಮಗೆ ವಿದಾಯ ಹೇಳಿಯಾಗಿತ್ತು. ಹಳೆಯ ಪ್ರಶ್ನೆ ಪತ್ರಿಕೆಯನ್ನು ಅಭ್ಯಾಸ ಮಾಡುತ್ತಿದ್ದ ನಾನು ಶಾಲೆಯಲ್ಲಿರುವಾಗಲೇ ಇವರಲ್ಲಿ ಒಂದು ಪ್ರಶ್ನೆಯನ್ನು ಕೇಳಿದ್ದೆ. ಆಗ ಅವರಿಗೆ ಅದರ ಉತ್ತರ ತತ್ ಕ್ಷಣಕ್ಕೆ ಹೊಳೆಯಲಿಲ್ಲ. ರಜೆ ಆರಂಭವಾಗಿ ಒಂದು ದಿನ ಹೊರಗೆ ಹೋಟೇಲ್ ಒಂದರಲ್ಲಿ ಸಿಕ್ಕಾಗ ಅದಕ್ಕೆ ಕರೆದು ಉತ್ತರ ಹೇಳಿದ್ದರು. ಅವರ ಬದ್ದತೆ ಮೆಚ್ಚತಕ್ಕದ್ದು.
ಅತ್ಯಂತ ಚಿರಸ್ಮರಣೆಯ ಅಧ್ಯಾಪಕ ವೃಂದವನ್ನು ಪಡೆದ ವಿದ್ಯಾರ್ಥಿ ಜೀವನ ನನ್ನದು. ಗುರು, ಗು ಎಂದರೆ ಕತ್ತಲೆ ರು ಎಂದರೆ ಬೆಳಕು, ಕತ್ತಲೆಯಿಂದ ಬೆಳಕಿನ ಕಡೆಗೆ ಒಯ್ಯುವ ವ್ಯಕ್ತಿ ಎಂದರೆ ಗುರು. ಕತ್ತಲೆಯಿಂದ ನಾವು ಎಷ್ಟು ಬೆಳಕನ್ನು ಕಂಡಿದ್ದೇವೆ ಅದಕ್ಕೆ ಕಾರಣಕರ್ತರು ನಮ್ಮ ಶಾಲೆಯ ಅಧ್ಯಾಪಕ ವೃಂದ. ಈ ಸಂಭಂಧಗಳು ಹಿತವಾಗಿ ಇದ್ದರೆ ಶಾಲಾ ಜೀವನ ಎಂಬುದು ಮರೆಯುವುದಕ್ಕಿಲ್ಲ. ಈಗಲೂ ಶಾಲೆಯ ಪಕ್ಕದಲ್ಲೆ ಹಾದು ಹೋಗುವಾಗ ಒಂದು ದೃಷ್ಟಿ ಅಪ್ರಯತ್ನವಾಗಿ ಅತ್ತ ಸರಿಯುತ್ತದೆ. ಮತ್ತೊಮ್ಮೆ ಆ ದಿನಗಳು ಬರಬಾರದೆ ಎಂದು ಹಪ ಹಪಿಸುತ್ತದೆ.
No comments:
Post a Comment