ರಮ ಹರೇ ರಾಮ ರಾಮ ಹರೇ ರಾಮ|
ರಾಮ ಹರೆ ಜಯ ರಾಮಹರೆ|
ರಾಮ ಹರೆ ಜಯ ರಾಮಹರೆ|
ದಶರಥ ನಂದನ ರಾಮ | ಕೌಸಲ್ಯಾತ್ಮಜ ರಾಮಾ|
ಇನಕುಲವಾರಿಧಿ ರಾಮಾ | ಸೀತಾವಲ್ಲಭರಾಮ ||ರಾಮ ಹರೆ ||
ಧರಣೀ ಪತಿ ಶ್ರೀರಾಮ | ಪುರುಷೋತ್ತಮ ಶ್ರೀರಾಮ |
ರಘುಪತಿ ರಾಘವ ರಾಮಾ | ನಿತ್ಯ ಪೂಜಿತ ರಾಮ || ರಾಮ ಹರೆ ||
ಇದು ನಾನು ರಚಿಸಿದ ಭಜನೆ. ಇದು ಇನ್ನೊಂದಿಷ್ಟು ಉದ್ದವಿದೆ. ಆಗಾಗ ಇದನ್ನು ಗುನುಗುನಿಸುತ್ತಾ ಇರುವುದು ಮನಸ್ಸಿಗೆ ಒಂದು ನೆಮ್ಮದಿಯನ್ನು ಕೊಡುತ್ತದೆ. ನನ್ನದೊಂದು ಸ್ವಭಾವವೆಂದರೆ ನನ್ನದೇ ಸ್ವಂತ ವಸ್ತುಗಳನ್ನು ಹೊಂದುವುದು. ನನಗೆ ಬೇಕಾದ ಆಹಾರವನ್ನು ನಾನೇ ತಯಾರಿಸುವುದು. ಹಾಗೆ ನನಗೆ ಪ್ರಿಯವಾದ ದೈವನಾಮಸ್ಮರಣೆಗೂ ನಾನೇ ಸ್ವತಃ ಒಂದು ಭಜನೆ ರಚಿಸಿದ್ದೆ. ಇದು ಕೇವಲ ಖಾಸಗೀ ಉಪಯೋಗಕ್ಕೆ. ಯಾಕೆಂದರೆ ರಾಮ ನೆಂದರೆ ಪುರಾಣದಲ್ಲಿ ನನಗೆ ಅತ್ಯಂತ ಪ್ರಿಯವಾದ ಪಾತ್ರ. ಅದೆಷ್ಟು ಸರಳ? ಅದೆಷ್ಟು ಸುಂದರ. ? ರಾಮ ರಾಮ..ಧೀಮಂತ ರಾಮನ ಶ್ರೀಮಂತ ವ್ಯಕ್ತಿತ್ವ.
ಈಚೆಗೆ ಉತ್ತರ ಭಾರತ ಪ್ರವಾಸದಲ್ಲಿ ಮೊದಲಿಗೆ ಹೊದ ಕ್ಷೇತ್ರ ಅಯೋಧ್ಯೆ. ರಾಮ ಜನ್ಮ ಭೂಮಿಯ ರಾಮ ರಾಜ್ಯದ ಪವಿತ್ರ ಸ್ಥಳ. ಲಕ್ನೋ ನಗರದಿಂದ ಅಯೋಧ್ಯೆಗೆ ಐದಾರು ಘಂಟೆಗಳ ಪ್ರಯಾಣವಿದೆ. ಉದ್ದಕ್ಕು ರಾಷ್ಟ್ರೀಯ ಹೆದ್ದಾರಿ. ಇಲ್ಲಿನ ಹಾಗೆ ಏರಿಳಿವ ಗುಡ್ಡ ಪ್ರದೇಶಗಳಿಲ್ಲ. ಸಮತಟ್ಟಾದ ಭೂಮಿ. ಲಕ್ನೋದಿಂದ ಫೈಜ಼ಾ ಬಾದ್ ರಸ್ತೆಯಲ್ಲಿ ಸಾಗಿದರೆ ಮೊದಲಿಗೆ ಬರೀ ಬರಡು ಭೂಮಿ ಕಾಣ ಸಿಗುತ್ತದೆ. ಅಷ್ಟೇನು ಆಕರ್ಷಣೀಯವಲ್ಲದ ಬರಡು ಭೂಮಿ. ಆದರೆ ಆಯೋಧ್ಯೆ ಹತ್ತಿರ ತಲುಪುತ್ತಿದ್ದಂತೆ ರಸ್ತೆಯ ಇಕ್ಕೆಲದಲ್ಲಿ ಹಸುರು ಕಂಗೊಳಿಸುವುದಕ್ಕೆ ಆರಂಭವಾಗುತ್ತದೆ. ಬಹುಶಃ ರಾಮ ಜನ್ಮ ಭೂಮಿಯ ಮಹಿಮೆ ಇರಬೇಕು. ಅಯೋಧ್ಯೆ ಸಣ್ಣ ನಗರವೇ ಆದರೂ ಅದು ಹಳ್ಳಿಯ ಸೊಗಡನ್ನೇ ಹೊಂದಿದೆ.
ರಾಮ, ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ , ದಾಸ ವರೇಣ್ಯರು ಹಾಡಿದಂತೆ ರಾಮ ಎಂಬ ಶಬ್ದ ಮೊದಲು ಹುಟ್ಟಿತಂತೆ. ನಾರಾಯಣದ ’ರಾ" ಮಹೇಶ್ವರನ ’ಮ’ ಜತೆಯಾಗಿ ಸೇರಿದರೆ ಮತ್ತೇನಾಗಬಹುದು. ವಿಶ್ವವೇ ಒಂದಾದಂತೆ. ಆ ಹೆಸರಿಗೆ ಒಪ್ಪುವಂತೆ ಆ ಹೆಸರೇ ಹೇಳುವಂತೆ ತಕ್ಕವನಾಗಿ ರಾಮನಾಗಿ ಭಗವಂತ ಅವತರಿಸಿದ. ಪುತ್ರಕಾಮೇಷ್ಠಿಯಾಗದಲ್ಲಿ ದಶರಥನ ಬೊಗಸೆಯಲ್ಲಿ ಇದಂ ಪಾಯಸಂ ದೇವನಿರ್ಮಿತಂ ಎನ್ನುವಂತೆ ಪಾಯಸದ ಬಟ್ಟಲು ಬಂದು ನಿಂತಿತು. ಮೂರೂ ಪತ್ನಿಯರಿಗೂ ಹಂಚಿದ ದಶರಥ ಮೊದಲಾಗಿ ರಾಮನನ್ನು ಕಂಡ. ತಂದೆಯಾದರೆ ದಶರಥನಂತಾಗಬೇಕು. ಮಕ್ಕಳಾಗದ ದಶರಥನಿಗೆ ಋಷಿಶಾಪ ಸಾಯುವ ಕಾಲಕ್ಕೆ ಮಕ್ಕಳು ಹತ್ತಿರ ಇರದಿರಲಿ. ಶಾಪವೂ ವರದಂತೆ ರಾಮ ಲಕ್ಷ್ಮಣ ಭರತ ಶತ್ರುಘ್ನ ಹುಟ್ಟಿಕೊಂಡಾರು.
ಅಯೋಧ್ಯೆಗೆ ಹೆಜ್ಜೆ ಇಟ್ಟ ಒಡನೆ ರಾಮಾಯಣದ ಹಲವು ಕಥೆಗಳು ಸ್ಮೃತಿ ಪಟಲದಲ್ಲೆ ತೇಲಿ ಹೋದವು. ಸತ್ಯಕ್ಕೆ ಅನ್ವರ್ಥವಾದ ಹರಿಶ್ಚಂದ್ರನ ಕಥೆ. ರಘುವಂಶದ ದೀಲೀಪ ಮಾಂಧಾತರ ಕಥೆ ಭಾವನಾತ್ಮಕವಾಗಿ ಸುತ್ತುವ ಶಬರಿಯ ಕಥೆಯಂತೂ ಮೊನ್ನೆ ಗಾಢವಾಗಿ ನೆನಪಿಗೆ ಬಂದು ಬಿಟ್ಟಿತು. ಅದೊಂದು ಆಧ್ಯಾತ್ಮದ ಅಂತಾರಾತ್ಮದ ಸ್ಪರ್ಶದ ಕಥೆ. ಅದಕ್ಕೆ ಮುಖ್ಯ ಕಾರಣ, ಅಯೋಧ್ಯೆಗೆ ಹೋದ ಒಡನೆ ಇಲ್ಲಿನ ಜನ ಕೊಟ್ಟ ಅತಿಥ್ಯ. ಹಸಿ ಹೊಟ್ಟೆಗೆ ಅವರು ಕೊಟ್ಟ ಆಹಾರ ಅದು ಯಾವ ರೂಪದಲ್ಲೇ ಇರಲಿ ಅದನ್ನು ಮರೆಯುವಂತೆ ಇಲ್ಲ. ಸತ್ಯಕ್ಕೆ ಹರಿಶ್ಚಂದ್ರನ ನೆನಪಾಗುವಂತೆ ಅದೇಕೊ ನಾವೆಷ್ಟು ಸತ್ಯ ನುಡಿದರೂ ಸತ್ಯವೆಂದರೆ ನಮಗೆ ಹರಿಶ್ಚಂದ್ರನ ನೆನಪೇ ಆಗುತದೆ. ಕಾಯುವಿಕೆಗ ಶಬರಿಯ ನೆನಪಾಗುತ್ತದೆ. ಸೇವಾ ಮನೋಭಾವಕ್ಕೆ ಅಳಿಲಿನ ನೆನಪಾಗುತ್ತದೆ. ರಾಮಾಯಣದಲ್ಲಿ ಕಂಡು ಬರುವ ಈ ಸಣ್ಣ ಪುಟ್ಟ ಪಾತ್ರಗಳು ಅಗಾಧವಾದ ಪರಿಣಾಮವನ್ನು ಬೀರುತ್ತದೆ. ಶಬರಿ ಬರೀ ಕಾಯುವುದರಲ್ಲೇ ಜನ್ಮ ಸವೆಸಿದಳು. ರಾಮ ಬಂದೇ ಬರುತ್ತಾನೆ ಎಂದು ಕಾಯುತ್ತಾ ಇದ್ದಳು. ಬಹುಶಃ ಇಲ್ಲಿನ ಜನರೂ ನಮ್ಮಂತೆ ಯಾರಾದರೂ ಬಂದೇ ಬರುತ್ತಾರೆ ಎಂದು ಕಾಯುತ್ತಿದ್ದರೋ ಹೀಗೆ ಇವರ ಆತಿಥ್ಯ ಕಾಣುವಾಗ ಅನಿಸಿದ್ದು ಸುಳ್ಳಲ್ಲ. ಶಬರಿಯ ರಕ್ತ ಗುಣ, ಶಬರಿಯ ಕಥೆ ಇವರಿಗೆ ರಕ್ತಗತವಾದಂತೆ ಭಾಸವಾಯಿತು. ಹಾಗಾಗಿ
ಶಬರಿ ರಾಮನ ಎದುರಿಗೆ ಹಣ್ಣನ್ನು ಇಟ್ಟು ಸತ್ಕರಿಸುತ್ತಾಳೆ. ಆಕೆಯಲ್ಲಿ ಭಕ್ತಿಯಲ್ಲದೆ ಬೇರೆ ಎನೂ ಇಲ್ಲದ ದಯನೀಯ ಸ್ಥಿತಿ. ಶಿಥಿಲವಾದ ದೇಹ. ಮಂದವಾದ ದೃಷ್ಟಿ ಅಲ್ಲೂ ರಾಮನ ಆಕಾರ ಅಸ್ಪಷ್ಟವಾದರೂ ಹೃದಯದಲ್ಲಿ ಸಂಪೂರ್ಣ ರಾಮನೇ ನೆಲೆ ನಿಲ್ಲಿಸಿದ ಶಬರಿಯ ವ್ಯಕ್ತಿತ್ವ ಭಾವನೆಗೆ ಸೆರಗು ಹೊದ್ದಂತೆ. ಶಬರಿಯಂಥವಳನ್ನೂ ರಾಮ ಅರಸಿ ಹೋದ ಎಂದರೆ ಆಕೆ ಎಂಥವಳಿರಬೇಕು? ಆಕೆ ಕೊಟ್ಟ ಹಣ್ಣಾದರೂ...ತಾನು ರುಚಿ ನೋಡಿ ಅದನ್ನೇ ರಾಮನಿಗೆ ತಿನ್ನಿಸಿದಳು. ರಾಮ ಸ್ವೀಕರಿಸಿದ. ಅಲ್ಲಿ ಶಬರಿಯ ಭಕ್ತಿ ವಿಜ್ರಂಭಿಸಿತು. ರಾಮ ನಿಜಕ್ಕೂ ಶರಣಾಗಿ ಹೋದ. ಶಬರಿಯ ಆತಿಥ್ಯದ ರೂಪ ಅದು. ಎಲ್ಲವೂ ಭಗವಂತನಿಗೆ ಸಮರ್ಪಿತ. ರಾಮ ಶಬರಿಯ ಹಣ್ಣು ಉಚ್ಚಿಷ್ಠ ಎಂದು ಬಗೆಯಲಿಲ್ಲ. ಆಕೆಯ ಶ್ರದ್ಧೆ ಭಕ್ತಿಗೆ ಮಾರು ಹೋದ. ಆಕೆಯ ಕೈಯನ್ನು ನೋಡಲಿಲ್ಲ. ಹೃದಯವನ್ನು ನೋಡಿದ. ನನ್ನಲ್ಲೂ ಒಂದು ಕ್ಷಣ ರಾಮ ಆವೇಶಗೊಂಡನೋ ಎಂದು ಹೇಳಿದರೆ ಅಹಂಕಾರವಾದೀತು...ಆದರೆ ಅಲ್ಲಿನ ಜನ ಸಾಮಾನ್ಯನಲ್ಲಿ ಶಬರಿಯನ್ನು ಕಂಡದ್ದು ಸತ್ಯ. ಪರಮ ಭಕ್ತನ ಪ್ರಾಮಾಣಿಕತೆ ಎಂದರೆ ತನಗೇನಿದೆಯೋ ತನ್ನಲ್ಲಿ ಏನಿದೆಯೋ ಅದು ಭಗವಂತನಿಗೆ. ಅದುವೇ ಉತ್ಕೃಷ್ಟ. ಹಾಗೆ ತಾವೇನು ತಿನ್ನುತ್ತಿದ್ದೇವೆಯೋ ಅದರಲ್ಲಿ ಉತ್ಕೃಷ್ಟವನ್ನು ಹೆಕ್ಕಿ ನಮ್ಮ ತಟ್ಟೇಗೆ ಇಕ್ಕಿದರು. ಅದರಲ್ಲು ಕಲ್ಲು ಕಂಡರೆ ಅದು ನಮ್ಮ ಅಹಂಕಾರವಾದೀತು. ಶಬರಿಯ ಆತಿಥ್ಯ ನಮಗೆ ದೊರಕಿತು. ಇವರ ಆತೀಥ್ಯದಲ್ಲಿ ಶಬರಿಯೇ ಪ್ರತ್ಯಕ್ಷವಾದಳು. ಆದರೆ ನಾವು ರಾಮನಾಗಿ ಬದಲಾಗುವ ಅಗತ್ಯವಿತ್ತು. ಬದಲಾಗಿದ್ದೇವೋ ಇಲ್ಲವೋ ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ರಾಮನಂತೆ ನಾವಾಗದೇ ಇದ್ದರೂ ರಾಮನ ಆದರ್ಶದ ಒಂದು ಸೂಕ್ಷ್ಮ ತರಂಗವಾದರೂ ನಮಗೆ ಸೋಕಬೇಕು. ಅದು ಅಯೋಧ್ಯೆಯ ಮಣ್ಣಿನಗುಣವಾಗಬೇಕು. ಅಲ್ಲಿನ ಗಾಳಿಯ ಕಂಪಾಗಬೇಕು. ಅವರು ತಿನ್ನುವುದನ್ನು ನಮಗೆ ಕೊಡುವಾಗ ನಾವು ಅದನ್ನು ಹೀನವಾಗಿ ಕಂಡರೆ ನೋಯುವ ಮನಸ್ಸಿನ ಬೇಗುದಿ ಹೇಗಿರಬಹುದು? ತಿನ್ನುವ ಆಹಾರ ಅಮೃತವಾಗಬೇಕಾದರೆ ಹೃದಯದಲ್ಲಿ ಅಮೃತವಿರಬೇಕು. ದೇಹದ ನಂಜಾದರೂ ಕರಗಿ ಹೋದೀತು, ಮನಸ್ಸಿನ ನಂಜು ಕರಗುವುದಕ್ಕಿಲ್ಲ. ಹಿರಣ್ಯ ಕಶ್ಯಪು ಕಯಾದುವಿನ ಕೈಯಲ್ಲಿ ವಿಷದ ಪಾತ್ರೆಯನ್ನು ಕೊಟ್ಟು ಪ್ರಹ್ಲಾದನಿಗೆ ಕೊಡುವಂತೆ ಹೇಳಿದ. ತಾಯಿ ಕಯಾದುವಿನ ಹೃದಯದ ಅಮೃತ ಬೆಸೆಯುವಾಗಲೋ ಇಲ್ಲ ಪ್ರಹ್ಲಾದನ ಹೃದಯದಲ್ಲಿ ಭಗವಾನ್ ಸ್ವರೂಪಿ ಅಮೃತ ಇದ್ದುದರಿಂದಲೋ ಕುಡಿದ ವಿಷ ವಿಷವಾಗಲೇ ಇಲ್ಲ . ಯಾಕೆ ಅಮೃತವಾಯಿತು? ಅಲ್ಲಿ ಭಗವಂತನಿದ್ದ. ಭಗವಂತನಿಗೆ ಅಮೃತವೂ ಒಂದೇ ವಿಷವೂ ಒಂದೇ. ಮೂರ್ಖ ದಾನವ ಹಿರಣ್ಯ ಕಶ್ಯಪುಗೆ ಅದು ಅರಿವಾಗಲೇ ಇಲ್ಲ. ಆ ಜ್ಞಾನ ಪ್ರಚೋದನೆಗೆ ಅವನಲ್ಲಿ ದುರಹಂಕಾರವೇ ತುಂಬಿತ್ತು. ಒಂದು ವೇಳೆ ಅಯೋಧ್ಯೆಯಲ್ಲಿ ಸಿಕ್ಕಿದ ಆಹಾರವನ್ನು ನಾವು ದುರಹಂಕಾರದಲ್ಲಿ ತಳ್ಳಿ ಎಸೆದು ಅಮೃತ ಅರಸಿ ಸೇವಿಸಿದರೂ ಅದು ಅಮೃತವಾಗಬಹುದೇ? ಇಲ್ಲ ಮನಸ್ಸಿನ ನಂಜು ಕರಗುವುದೇ ಇಲ್ಲ. ಮತ್ತೊಮ್ಮೆ ಶಬರಿ ನೆನಪಾಗುತ್ತಾಳೆ. ಆಕೆಯ ಉಚ್ಛಿಷ್ಟ ಫಲ ನೆನಪಾಗುತ್ತದೆ. ರಾಮನ ಆದರ್ಶ ನೆನಪಾಗುತ್ತದೆ. ಇದು ಅಯೋಧ್ಯೆಯ ಪ್ರಚೋದನೆ. ಇಲ್ಲಿ ಹೆಜ್ಜೆ ಊರುವಾಗ ನಮ್ಮ ದುರಹಂಕಾರಗಳು ಮಾಯವಾಗಬೇಕು. ಇಲ್ಲಿನ ಗಾಳಿ ಸೇವಿಸುವಾಗ ನಮ್ಮೊಳಗಿನ ವಿಷಗಾಳಿ ಬತ್ತಿ ಹೋಗಬೇಕು. ಇಲ್ಲವಾದರೆ ಇಲ್ಲಿ ಹೆಜ್ಜೆ ಊರುವುದಕ್ಕೆ ನಮಗೆ ಯಾವ ಹಕ್ಕೂ ಇರುವುದಿಲ್ಲ. ಇಲ್ಲಿನ ಜನ ಶಬರಿಗಳಾಗುತ್ತಾರೆ. ಇವರ ನರ ನರದಲ್ಲೂ ಶಬರಿಯ ಪ್ರಭಾವ ಹರಿಯುತ್ತಿದೆಯೋ ಎಂಬ ಭಾವನೆ ವ್ಯಕ್ತವಾಗುತ್ತದೆ. ರಾಮಾಯಣದ ವಾಕ್ಯ ಕೇಳಿದ್ದು ನೆನಪಾಗುತ್ತದೆ, ಪುರದ ಪುಣ್ಯಂ ಪುರುಷ ರೂಪಿಂದ ಪೋಗುತಿದೆ. ರಾಮ ಅಯೋಧ್ಯೆಯಿಂದ ಹೊರಡುವಾಗ ಅಯೋಧ್ಯಾ ನಗರವೇ ಹಿಂದೆ ಬಂದಿತ್ತು. ಎಂತಹಾ ರಾಮ? ಎಂತಹಾ ಪ್ರಜೆಗಳು? ಆಯೋಧ್ಯೆಯಲ್ಲಿ ಸಿಕ್ಕಿದ ಆತಿಥ್ಯ ಅತಿಶಯವಲ್ಲ ಅನ್ನಿಸಿತ್ತು. ಬಸ್ ಹತ್ತಿ ಹೋಗುವಾಗ ನಮ್ಮ ಹಿಂದೆ ಇದ್ದದ್ದು ಧೂಳು ಮಾತ್ರ.
ಆಯೋಧ್ಯೆ ಗಲ್ಲಿ ಗಲ್ಲಿ ಬೀದಿ ಬೀದಿ ಸುತ್ತಬೇಕು ಎಂಬ ಅದಮ್ಯ ಬಯಕೆ ಏನೋ ಇತ್ತು. ಆದರೆ ಅದು ಕೈಗೂಡುವ ಹಾಗಿರಲಿಲ್ಲ. ಆದರೆ ಅಲ್ಲಿನ ಭೂಮಿಯಲ್ಲಿ ನಾವು ಹೆಜ್ಜೆ ಇಟ್ಟ ಎಡೆಯೆಲ್ಲ ಹೆಜ್ಜೆ ಊರುವುದಕ್ಕೆ ಅಂಜಬೇಕು. ಛೇ ಇಲ್ಲೇ ಬಾಲರಾಮನ ಹೆಜ್ಜೆಯ ಸದ್ದು ಅಡಗಿರಬಹುದೇ? ಧೀಮಂತ ಪುರುಷೋತ್ತಮನ ಉಸಿರ ಬಿಸಿ ಆರಿರಬಹುದೇ . ಆ ಗಾಳಿಯ ಆರ್ದ್ರತೆ ಇನ್ನೂ ಹಸಿಯಾಗಿರಬಹುದೇ? ಕಲ್ಪನೆಗಳು ನೂರಾರು. ನಿಜಕ್ಕೂ ಭಾವನಾತ್ಮಕನಾಗಿದ್ದೆ. ಕೇವಲ ಬರಹಗಳಿಗೆ ಸೀಮಿತವಾಗುವ ಭಾವನೆಗಳಲ್ಲ. ಒಂದು ಬಾರಿ ಅಲ್ಲಿನ ಧೂಳಿಗೆ ಮೈ ಬೆಸೆಯುವಾಸೆ ಹೇಗೋ ಹತ್ತಿಕೊಂಡರೂ ಮಂದಿರದ ಒಳಹೋಕ್ಕ ಮೇಲೆ ಸಾಷ್ಟಾಂಗ ನಮಸ್ಕರಿಸಿದೆ. ಕಣ್ಣು ಮುಚ್ಚಿ ದೀರ್ಘವಾದ ಉಸಿರೆಳೆದೆ. ರಾಮ ತುಳಿದ ಹೆಜ್ಜೆಯ ಗಂಧ ಸೇರಬಹುದೇ ಎಂಬ ತವಕ. ಕೊನೆಗೊಮ್ಮೆ ಅಯೋಧ್ಯೆಗೆ ವಿದಾಯ ಹೇಳಲೇ ಬೇಕು. ಪ್ರತಿಯೊಬ್ಬ ಮನುಷ್ಯನೂ ಪ್ರಾಣಿಯೂ ಈ ಭೂಮಿಗೆ ವಿದಾಯ ಹೇಳುವಾಗ ಆಯೋಧ್ಯೆಗೂ ವಿದಾಯ ಹೇಳಲೇ ಬೇಕು. ಪ್ರಖರವಾದ ಸೂರ್ಯ ನಗುತ್ತಿದ್ದ. ಆಕಾಶ ನೋಡಿ ನಾನೆಂದೆ ಮತ್ತೊಮ್ಮೆ ತೋರಿಸುವ ಅನುಗ್ರಹ ಮಾಡು. ಯಾಕೆಂದರೆ ರಾಮ ಸುರ್ಯವಂಶಜ ಇನಕುಲ ವಾರಿಧಿ. ಸೂರ್ಯ ಅಸ್ತಮಿಸಿದರೂ ಮತ್ತೆ ಉದಯಿಸಲೇ ಬೇಕು.
ಭೂಮಿಯ ಮೇಲೆ ಪ್ರಕಾಶವಿದ್ದಂತೆ ಅಂಧಕಾರವೂ ಇರುತ್ತದೆ. ಸೂರ್ಯ ಪ್ರಕಾಶವನ್ನು ಮಾತ್ರ ಸೃಷ್ಟಿಸುವುದಿಲ್ಲ. ಆತ ಅಂತರ್ಧಾನನಾಗಿ ಕತ್ತಲೆಯನ್ನು ಸೃಷ್ಟಿಸುತ್ತಾನೆ. ಭೂಮಿಯಲ್ಲಿ ಕತ್ತಲೆಯನ್ನು ಸೃಷ್ಟಿಸಿ ಮುಳುಗಿಬಿಡುತ್ತಾನೆ. ಕತ್ತಲೆ ಸ್ಥಾಯಿಯಾಗಿದೆಯೋ ಬೆಳಕು ಸ್ಥಾಯಿಯೋ ಹೇಳುವುದು ಕಷ್ಟ. ಯಾವುದೂ ಸ್ಥಿರವಲ್ಲ. ಇದನ್ನು ಕಾಣುವ ನಮ್ಮ ಮನೋಭಾವ ಮತ್ತು ಅದನ್ನು ಸ್ವೀಕರಿಸುವ ರೀತಿಯೇ ಮುಖ್ಯ. ಕತ್ತಲೆಯಿಂದ ಬೆಳಕಿನ ಪ್ರಚೋದನೆಯಂತೂ ಸತ್ಯ. ಪ್ರಚೋದನೆ ಕೆಟ್ಟದೂ ಇರಬಹುದು ಒಳ್ಳೆಯದೂ ಇರಬಹುದು. ಕೆಟ್ಟದು ಎಂದು ದೂರ ಮಾಡುವಂತಿಲ್ಲ. ಕೆಟ್ಟದು ಇದ್ದರೆ ಒಳ್ಳೆಯದರ ಅರಿವಾಗುತ್ತದೆ. ಹಲವು ಸಲ ದುಷ್ಟರಿಂದಲೂ ಸತ್ಪ್ರೇರಣೆ ಲಭ್ಯವಾಗುತ್ತದೆ. ಅವರಂತೆ ನಾವಾಗಬಾರದು ಎಂಬ ಪ್ರಚೋದನೆ ಉಂಟಾದರೆ ಜಗತ್ತಿನಲ್ಲಿ ಕೆಟ್ಟದು ಇರಬಾರದು ಎನ್ನುವ ಹಾಗಿಲ್ಲ. ಹೆಜ್ಜೆ ಇಟ್ಟು ನಡೆದು ಹೋಗುವಾಗ ಕೆಸರು ಸಿಗುತ್ತದೆ. ಅಲ್ಲಿ ಉಟ್ಟ ಬಟ್ಟೆಯನ್ನು ಎತ್ತಿ ಕೆಸರು ತಾಗದಂತೆ ನಿಧಾನಕ್ಕೆ ಹೆಜ್ಜೆ ಇಡುತ್ತೇವೆ. ಕೆಸರು ಎಲ್ಲಿ ಮೆತ್ತಿಕೊಳ್ಳುತ್ತದೋ ಎಂಬ ಭಯ. ಕೆಸರು ಇಲ್ಲಿ ಪರಿಶುದ್ಧಿಯ ಪ್ರಚೋದನೆಯನ್ನು ಜಾಗೃತ ಗೊಳಿಸಿತು. ದುಷ್ಟರೂ ಸತ್ಪ್ರೇರಣೆಗೆ ನಿಮಿತ್ತರಾಗುತ್ತಾರೆ. ದುಷ್ಟತನದ ಅಸ್ತಿತ್ವ ಇರಲೇ ಬೇಕು. ಅದು ನಮ್ಮನ್ನು ಸದಾ ಎಚ್ಚರಿಸುತ್ತದೆ. ಹಾಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ಸುಪ್ರಚೋದನೆಯನ್ನು ಜಾಗೃತ ಗೊಳಿಸಿದರೆ ಕುಸಿದ ಗೋಪುರಗಳು ಆ ಪ್ರಚೋದನೆಯನ್ನು ಜೀವಂತವಾಗಿರಿಸುತ್ತವೆ. ದುಷ್ಟರನ್ನು ಹತ್ತಿರ ಮಾಡುವ, ದುಷ್ಟತನವನ್ನು ದೂರಮಾಡುವ ಸಂದೇಶವನ್ನು ನಾವು ಅರ್ಥವಿಸಬೇಕು. ದುಷ್ಟರಿದ್ದಾರೆ ಎಂದು ಧೃತಿಗೆಡುವ ಅವಶ್ಯಕತೆ ಇಲ್ಲ. ಅದರೊಂದಿಗೆ ಬದುಕಬೇಕು, ಅದೆಲ್ಲವೂ ಉತ್ತಮ ಬದುಕಿನ ನಿರ್ಮಾಣಕ್ಕೆ ಭಗವಂತ ಒಡ್ಡುವ ಪರೀಕ್ಷೆಗಳು.ಆಯೋಧ್ಯೆಯನ್ನು ಕಂಡಾಗ ಒಂದು ಭಾವನೆ ಗಾಢವಾಗಿ ಅಚ್ಚೊತ್ತಿತು. ವಾಸ್ತವದಲ್ಲಿ ನಾವು ತಿರುಳನ್ನು ಕಾಣುವುದಿಲ್ಲ ಬರೀ ಹೊರಕವಚವನ್ನಷ್ಟೇ ಕಾಣುತ್ತಿದ್ದೇವೆ. ಇಂದಿನ ರಾಜಕೀಯ ಇಚ್ಛಾಶಕ್ತಿಯ ರೀತಿ ಇದು. ನಮಗೆ ವಾಲ್ಮೀಕಿ ಬೇಕು, ವಾಲ್ಮೀಕಿ ಬರೆದ ರಾಮಾಯಣದ ಬಗ್ಗೆ ಆಸಕ್ತಿ ಇಲ್ಲ. ರಾಮಾಯಣದ ಬಗ್ಗೆ ಆಸಕ್ತಿ ಇದ್ದರೆ ರಾಮನ ಬಗ್ಗೆ ಆದರ್ಶದ ಬಗ್ಗೆ ಗಂಭೀರವಾಗಿ ಚಿಂತಿಸುವ ಮನೋಭಾವ ಬರುತ್ತಿತ್ತು.
ಅಯೋಧ್ಯೆಯ ಪ್ರಚೋದನೆ ಒಂದಾದರೆ ಕಾಶಿಯಲ್ಲಿ ಸೆರಗನ್ನು ಹೊದ್ದುಕೊಂಡ ಗಂಗೆಯ ಪ್ರಚೋದನೆ ಇನ್ನೊಂದು ಬಗೆಯದು. ಕಾಶೀ ವಿಶ್ವನಾಥ ...ಆತ ನಾಥ ಯಾಕೆಂದರೆ ಜತೆಯಲ್ಲೇ ಇದ್ದಾಳೆ ಗಂಗಾ ಮಾತೆ. ಒಂದೆಡೆ ವಿಶ್ವನಾಥನ ಸನ್ನಿಯಲ್ಲಿ ಅನಾಥರು ಸನಾಥರಾದರೆ, ಗಂಗೆಯಲ್ಲಿ ಮಿಂದವರು ಪುನೀತರಾಗುತ್ತಾರೆ. ನಡು ರಾತ್ರಿ ಗಂಗಾತೀರಕ್ಕೆ ಬಂದು ನಿಂತೆ, ಕ್ಷಣ ಹೊತ್ತು ಮೊದಲು ಗಂಗಾರತಿಯಾಗಿ ಸೇರಿದ ಜನರೆಲ್ಲ ಚದುರಿ ಹೊಗಿದ್ದರು. ಪೂಜೆಯ ಪರಿಕರಗಳು ಅವಶೇಷಗಳಾಗಿ ಬಿದ್ದುಕೊಂಡಿತ್ತು. ಅಲ್ಲೊಬ್ಬರು ಇಲ್ಲೊಬ್ಬರು ಗಂಗೆಯಲ್ಲಿ ಮುಳುಗೇಳುತ್ತಿದ್ದರು. ಹರಿಯವ ಗಂಗೆ ಸಮುದ್ರ ಗಂಭೀರೆಯಾಗಿ ಮಂದಸ್ಮಿತೆಯಂತೆ ತಣ್ಣನೇ ಕುಳಿತಂತೆ ಭಾಸವಾಯಿತು. ಒಂದೊಂದೆ ಹೆಜ್ಜೆಇಟ್ಟು ಕೆಳಗಿಳಿದೆ. ಏಕ ಸಂಕಲ್ಪದಿಂದ ಗಂಗೆಯಲ್ಲಿ ಮುಳುಗೆದ್ದೆ. ಹುಟ್ಟಿದ ನಂತರ ಈ ಬಗೆಯ ಸ್ನಾನ ಮಾಡಿದ್ದಿಲ್ಲ. ಅಗಲಿದ ಮಗನನ್ನುತಬ್ಬಿಕೊಳ್ಲುವ ಗಂಗಾ ಮಾತೆ ಇಲ್ಲೂ ತಬ್ಬಿ ಹಿಡಿದಳು. ಒಂದು ಎರಡು ಮೂರು ಹಲವಾರಿ ಬಾರಿ ಮುಳುಗೆದ್ದ. ಚಳಿ ಎನಿಸಲಿಲ್ಲ. ತಾಯಿ ಮಡಿಲ ಬೆಚ್ಚನೆ ಅನುಭವ. ಕೊನೆಯಲ್ಲಿ ಎದ್ದು ನಿಂತೆ ಕೈಯ ಬೊಗಸೆಯಲ್ಲಿ ಗಂಗೆಯನ್ನು ತುಂಬಿಕೊಂಡೆ, ಹುಟ್ಟಿಸಿ ಅಗಲಿ ಹೋದ ಅಪ್ಪ ನನಪಿಗೆ ಬಂದ. ಓ ನನ್ನ ಜನಕನೇ, ಭೂಮಿಗೆ ಬರುವುದಕ್ಕೆ ನಿಮಿತ್ತನಾಗಿ ಹೋದ ತಂದೆಯೇ ಇದೋ ನಿನಗೆ ತರ್ಪಣ. ಮೂರು ಬಾರಿ ಬೊಗಸೆ ಎತ್ತಿ ಎತ್ತಿ ಬಿಟ್ಟು ಬಿಟ್ಟೆ. ಮನಸ್ಸಿನಲ್ಲೇ ನುಡಿದೆ ಇದಕ್ಕಿಂತ ಮಿಕ್ಕಿನದು ನೀನು ಬಯಸಲಾರೆ ಸ್ವೀಕರಿಸು. ಗಂಗೆ ಸ್ವೀಕರಿಸಿದಳು. ಅಪ್ಪನಿಗೆ ಕೊಡುವುದಕ್ಕೆ ಅಮ್ಮನಿಗಲ್ಲದೇ ಬೇರೆ ಯಾರಿಗೆ ಸಾಧ್ಯವಿದೆ? ಇಲ್ಲ. ಆಕೆ ಇದೋ ನಿನ್ನ ಅಪ್ಪನಿಗೆ ಮುಟ್ಟಿಸುವ ಹೊಣೆ ನನ್ನದು ಎಂದಂತೆ ಭಾಸವಾಯಿತು. ಜನ್ಮಾಂತರದ ಪಾಪವೂ ಋಣವೂ ಸಂದಾಯವಾದಂತೆ ಮನಸ್ಸು ಹಗುರವಾಯಿತು.
No comments:
Post a Comment