Sunday, March 26, 2023

ಹಾಸ್ಯಾಭಿನಯದ ಇನ್ನೊಸೆಂಟ್

         


ನೀವು ಎಂಭತ್ತರ ದಶಕದಲ್ಲಿ ಮಲಯಾಳಂ ಸಿನಿಮಾ ನೋಡುವ ಹವ್ಯಾಸವನ್ನು ಬೆಳೆಸಿದ್ದರೆ, ಮಲಯಾಳಂ ಸಿನಿಮಾದ ಅಭಿರುಚಿ ಅಂಟಿಸಿಕೊಂಡಿದ್ದರೆ ಒಬ್ಬ ನಟನನ್ನು ಖಂಡಿತಾ ಮರೆಯುವುದಕ್ಕೆ ಸಾಧ್ಯವಿಲ್ಲ. ಅದು ಯಾವುದೋ ಮೆಗಾಸ್ಟಾರ್ ಅಲ್ಲ. ಕೇವಲ ನಮ್ಮ ನಿಮ್ಮಂತೆ ಜನ ಸಾಮಾನ್ಯನ ಅಭಿವ್ಯಕ್ತಿ ಸ್ವರೂಪವನ್ನೇ ಹೊಂದಿದ ಇನ್ನೊಸೆಂಟ್....ನಿನ್ನೆ ಬಂದ ವಾರ್ತೆಯಲ್ಲಿ ಅತ್ಯಂತ ಹೆಚ್ಚು ಮನಕಲಕಿದ ವಾರ್ತೆ ಎಂದರೆ ಇವರು ಇಹಲೋಕ ತ್ಯಜಿಸಿ ಒಂದು ಅದ್ಭುತ ಪ್ರತಿಭೆಗೆ ಪೂರ್ಣವಿರಾಮ ಚುಕ್ಕಿಸಿದ್ದು. ಇನ್ನೊಸೆಂಟ್  ಹೆಸರೇ ಒಂದು ವಿಚಿತ್ರ. ವಿನ್ಸಂಟ್ ಇದ್ದದ್ದು ಇನ್ನೋಸೆಂಟ್ ಆಯಿತೋ ಎನೋ. ಯಾಕೆಂದರೆ ಇವರು ನಿರ್ವಹಿಸಿದ ಪಾತ್ರಗಳಲ್ಲಿ ಒಂದು ಮುಗ್ಧ ಸ್ಪರ್ಶ ಸದಾ ಇರುತ್ತಿತ್ತು. ಇವರೇ ಹೇಳುವಂತೆ ನಾನು ಹೆಸರಿನಿಂದ ಮಾತ್ರ ಇನ್ನೋಸೆಂಟ್...ಅಷ್ಟು ಇನ್ನೊಸೆಂಟ್ ಅಲ್ಲ. 

        ನಮ್ಮ ಬಾಲ್ಯದಲ್ಲಿ ಮಲಯಾಳಂ ಸಿನಿಮಾ ಎಂದರೆ .....ಸಾರ್ವತ್ರಿಕವಾಗಿ ಒಂದು ಹೇಳಲಾಗದ ಕೆಟ್ಟ ಅಭಿಪ್ರಾಯವಿತ್ತು. ಮಂಗಳೂರಲ್ಲಿ ಮಲಯಾಳಂ ಸಿನಿಮಾ ಎಂದರೆ ಒಂದು ....ವ್ಯಂಗ್ಯ ನಗುವಿತ್ತು. ಆ ನಗುವಿನ ಹಿನ್ನೆಲೆ ಏನೇ ಇರಲಿ ಕಪ್ಪಿನ ಹಿಂದೆ ಬಿಳಿ ಇರುವಂತೆ ಮಲಯಾಳಂ ನಲ್ಲಿ ಆಗಲೂ ಅದ್ಭುತ ಎನಿಸುವಂತಹ ಪ್ರಶಸ್ತಿಯ ಮಾನದಂಡದಲ್ಲಿ ನೋಡಿದರೆ ದೇಶಾದ್ಯಂತ ಸಂಚಲನ ಉಂಟುಮಾಡುವ ಸಿನಿಮಾಗಳು ಬರುತ್ತಿತ್ತು. ಅಡೂರ್, ಅರವಿಂದನ್, ಹೀಗೆ ಅದ್ಭುತ ಎನ್ನಿಸುವ ನಿರ್ದೇಶಕರುಗಳು ಪ್ರಶಸ್ತಿಯ ಕ್ಷೇಟ್ರದ ಸರ್ವಸ್ವಾಮ್ಯವನ್ನು ಶ್ತಾಪಿಸಿದ್ದರು.  ಅದು ಕೇವಲ ಕಲಾತ್ಮಕ ಸಿನಿಮಾಗಳಾದರೆ, ಜನ ಸಾಮಾನ್ಯನಿಗೆ ಹುಚ್ಚು ಹಿಡಿಸಿ ಗಲ್ಲಾಪೆಟ್ತಿಎಗೆಯನ್ನು ಸೂರೆಗೈದ ಕಡಿಮೆ ಬಜೆಟ್ ನ ಸಿನಿಮಾಗಳ ಒಂದು ವಿಶಿಷ್ಟ ವಲಯವೇ ನಿರ್ಮಾಣವಾಗಿತ್ತು. ಒಂದರ್ಥದಲ್ಲಿ ಎಂಭತ್ತರ ದಶಕ ಎಂದರೆ  ಮಲಯಾಳಂ ಸಿನಿಮಾದ ಸುವರ್ಣ ಯುಗ .ಆ ಯುಗದಲ್ಲಿ ಹಲವರ ಯೋಗದಾನ ಇದ್ದರೆ ಅದರಲ್ಲಿ ನಿನ್ನೆ ಅಗಲಿದ ಇನ್ನೊಸೆಂಟ್ ನವರದ್ದು  ಒಂದು ಪ್ರಮುಖ ಯೋಗದಾನವಿದೆ. 


        ರಾಮ್ ಜೀ ರಾವ್ ಸ್ಪೀಕಿಂಕ್....ನಮ್ಮಲ್ಲಿ ಮಲಯಾಳಂ ಸಿನಿಮಾವನ್ನು ಹೀಗಳೆಯುತ್ತಿದ್ದವರಿಗೆಲ್ಲ ಮನೆಗೆ ಕರೆತಂದು ವಿಡಿಯೋ ಕ್ಯಾಸೆಟ್ ಹಾಕಿ ತೋರಿಸುತ್ತಿದ್ದ ಸಿನಿಮ ಇದು. ಹಲವು ಭಾಷೆಗಳಿಗೆ ತರ್ಜುಮೆಯಾದ ಆ ಕಾಲದ ಸೂಪರ್ ಹಿಟ್ ಸಿನಿಮ. ಮಲಯಾಳಂ ಸಿನಿಮಾರಂಗದಲ್ಲಿ ಒಂದು ಕ್ರಾಂತಿಯನ್ನೇ ಆವಿಷ್ಕರಿಸಿದ ಸಿನಿಮಾ ಇದು. ಯಾವುದೇ ಸ್ಟಾರ್ ನಟರು ಇಲ್ಲದೆ ಸಾಧಾ ಸೀದ ನಟರೇ ಇದರಲ್ಲಿದ್ದು ಸಿದ್ದಿಕ್ ಲಾಲ್ ಎಂಬ ನಿರ್ದೇಶಕ ದ್ವಯರ ದಕ್ಷ ನಿರ್ದೇಶನದಲ್ಲಿ ಬಂದ ಸಿನಿಮಾ ಇದು. ಇದು ಕನ್ನಡದಲ್ಲೂ ಹಿಂದಿಯಲ್ಲೂ ರಿಮೇಕ್ ಆಗಿತ್ತು. ಅದರಲ್ಲಿ ಊರ್ವಶಿ ಥಿಯೇಟರ್ ನ ಮಾಲಿಕ ನಾಗಿರುವ ಒಬ್ಬ ಮುಗ್ದ ಸ್ವರೂಪದ  ಇನ್ನೊಸೆಂಟ್ ಪಾತ್ರ ಅದೆಷ್ಟು ಹುಚ್ಚು ಹಿಡಿಸಿತ್ತೆಂದರೆ ಆ ಹಾಸ್ಯ ಸಂಭಾಷಣೆಗಳು ಒಂದು ಹೊಸ ಹಾಸ್ಯದ ಮಜಲನ್ನೇ ಸೃಷ್ಟಿ ಮಾಡಿತ್ತು. ನಗುವುದನ್ನೂ ಅಳುವುದನ್ನೂ ಅರಿಯದ ಭಾವನಾರಹಿತರಿಗೆ ಈ ಸಿನಿಮಾ ತೋರಿಸಿದರೆ ಒಂದು ವಾರ ಆ ಸಿನಿಮಾದ ಹ್ಯಾಂಗ್ ಓವರ್ ನಲ್ಲೇ ಇದ್ದು ಬಿಡುತ್ತಾರೆ. ಇನ್ನೊಸೆಂಟ್ ಇದರಲ್ಲಿ ಕಮಾಲ್ ಮಾಡಿ ಬಿಡುತ್ತಾರೆ. ಆ ವಿಚಿತ್ರ ಮ್ಯಾನರಿಸಂ ನ ಅಭಿನಯ ..ಆಗ ನಾನು ಒಂದು ನೂರಕ್ಕೂ ಮಿಕ್ಕಿ ಈ ಸಿನಿಮಾವನ್ನು ನೋಡಿದ್ದೇನೆ. ಈಗಲೂ ಟಿವಿಯಲ್ಲಿ ಬಂದರೆ ಒಂದಷ್ಟು ಹೊತ್ತು ಈ ಸಿನಿಮಾವನ್ನು ನೋಡದೇ ಇರಲಾಗುವುದಿಲ್ಲ. 

    ಇನ್ನೊಸೆಂಟ್ ಅಭಿನಯದ ಸಿನಿಮಾಗಳ ಪಟ್ಟಿ ಮಾಡಿದರೆ ಪುಟಗಳೇ ಪರ್ಯಾಪ್ತವಾಗಲಾರದು. ಅದೆಷ್ಟು ಸಿನಿಮಾಗಳು? ಹೆಚ್ಚಾಗಿ ನವಿರು ಹಾಸ್ಯದ ಪಾತ್ರಗಳು. ಅಭಿನಯದ ಒಂದು ರೀತಿ ವಿಚಿತ್ರವಾಗಿದ್ದರೆ, ಇವರು ಒಪ್ಪಿಸುವ ಸಂಭಾಷಣೆಗಳು ಇರಿಂಜಾಲಕುಡದ ಮಣ್ಣಿನ ಭಾಷೆಯ ಶೈಲಿ.  ಕೇರಳದ ಸಾಂಸ್ಕೃತಿಕ ನಗರಿಯಾದ ತ್ರಿಶ್ಯೂರ್ ಜಿಲ್ಲೆಯ ಇರಿಂಜಾಲ ಕುಡದ ಒಂದು ಮಹಾನ್ ಪ್ರತಿಭೆ ಇನ್ನೊಸೆಂಟ್. ಇವರ ಅಭಿನಯ ಎಂದರೆ ನೀವು ಗಮನ ಇಟ್ಟು ಪ್ರತೀ ಇಂಚು ಇಂಚು ದೃಶ್ಯವನ್ನು ಗಮನಿಸುತ್ತ ಇರಬೇಕು. ಒಂದು ವೇಳೆ ತಪ್ಪಿದರೆ ಅದ್ಭುತ ಎನ್ನಿಸುವಂತಹ ಹಾಸ್ಯ ಅಭಿನಯವನ್ನು ಕೆಳೆದುಕೊಳ್ಳೂತ್ತೀರಿ. ಅಷ್ಟೂ ಸೂಕ್ಷ್ಮ ಸಂವೇದನೆಯ ಅಭಿನಯ ಮರ್ಮ ಇವರಿಗೆ ದೈವದತ್ತ. 

        ಆಕಾಲದಲ್ಲಿ ಹಲವು ಬೇರೆ ಭಾಷೆಯ ಸಿನಿಮಾಗಳ ಹುಚ್ಚು ಹಿಡಿಸಿಕೊಂಡು ಓಹ್ ಇದುವೆ ಸೂಪರ್ ಆಕ್ಟಿಂಗ್ ಅಂತ ತಿಳಿದುಕೊಂಡವನು, ಒಂದು ಸಲ ಈ ಮಲಯಾಳಂ ಸಿನಿಮಾ ನೋಡಿ...ಛೇ ಅಭಿನಯ ಎಂದರೆ ಇದು...ಎಂದು ಅಭಿರುಚಿಯನ್ನೇ ಬದಲಿಸಿಕೊಂಡು ಈಗಲೂ ಅದೇ ಅಭಿರುಚಿಯಲ್ಲಿ ಸಿನಿಮಾಗಳನ್ನು ನೋಡುತ್ತಿದ್ದೇನೆ. ಅದಕ್ಕೆ ಕಾರಣ ಈ ಇನ್ನೊಸೆಂಟ್ ನಂತಹ ಪೋಷಕ ನಟರು. 

        ಮಲಯಾಳಂ ಚಿತ್ರರಂಗದಲ್ಲಿ ಅದೆಷ್ಟೋ ತಾರಾಮೌಲ್ಯದ ಸ್ಟಾರ್ ಗಳು ಇರಬಹುದು. ಆದರೆ ಅಲ್ಲಿನ ನಿಜವಾದ ಜೀವಾಳ ಇರುವುದು ಈ ಪೋಷಕನಟರ ಕೊಡುಗೆಯಲ್ಲಿ. ಇನ್ನೊಸೆಂಟ್, ಜಗದಿ, ಶಂಕರಾಡಿ, ತಿಲಕನ್, ಮಮ್ಮುಕೋಯ, ಮಾಳಾ ಅರವಿಂದನ್, ಒಡುವಿಲ್ ಉಣ್ಣಿಕೃಷ್ಣನ್, ಕುದುರೆವಟ್ಟಂ ಪಪ್ಪು ಹೀಗೆ ಅದ್ಭುತ ಪ್ರತಿಭೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಲ್ಲಿ ಯಾವುದೇ ವಶೀಲಿ ನಡೆಯುವುದಿಲ್ಲ. ಪ್ರತಿಭೆ ಇದ್ದರೆ ಮಾತ್ರ ಚಲಾವಣೆಯಲ್ಲಿರುವುದಕ್ಕೆ ಸಾಧ್ಯ. ಪಾತ್ರಕ್ಕೆ ಒಪ್ಪುವಂತಹ ನಟರನ್ನು ಆಯ್ಕೆ ಮಾಡಿ ಅವರಿಂದ ಪಾತ್ರಕ್ಕೆ ತಕ್ಕಂತೆ ಅಭಿನಯವನ್ನು ಹೊರತೆಗೆಯುವ ನಿರ್ದೇಶಕರ ದಂಡು ಇಲ್ಲಿದೆ. ಹಾಗಾಗಿ ಇನ್ನೊಸೆಂಟ್ ಎಂಬ ಪ್ರತಿಭೆ ಇಲ್ಲಿ ಮೆರೆದದ್ದು ಅತಿಶಯ ಎನಿಸುವುದಿಲ್ಲ. ಇದಕ್ಕೆ ಅವರು ಅಭಿನಯಿಸಿದ ಒಂದೊಂದು ಸಿನಿಮಾಗಳೇ ಸಾಕ್ಷಿ. ಅದರಲ್ಲು ಸತ್ಯನ್ ಅಂತಿಕಾಡ್, ಪ್ರಿಯದರ್ಶನ್, ಕಮಲ್, ಸಿದ್ದಿಕ್ ಲಾಲ್ ಮುಂತಾದ ಪ್ರಸಿದ್ಧ ನಿರ್ದೇಶಕರ ಖಾಯಂ ನಟ , ಅವರ ಎಲ್ಲಾ ಸಿನಿಮಾಗಳಲ್ಲೂ ಒಂದಲ್ಲ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟ ಎಂದರೆ ಅದು ಇನ್ನೊಸೆಂಟ್.

        ಇನ್ನೊಸೆಂಟ್ ಎಂದರೆ ಹಾಸ್ಯ ಪಾತ್ರಗಳಿಗೆ ಹೆಸರಾದವರು. ಸಿದ್ದಿಕ್ ಲಾಲ್ ನಿರ್ದೇಶನದ  ಕಾಬೂಲಿವಾಲದಲ್ಲಿ ಜಗದಿಯೊಂದಿಗೆ ಕನ್ನಾಸು ಕಡಲಾಸು ಆಗಿ ಗುಜರಿ ಹೆಕ್ಕುವ ಪಾತ್ರದಲ್ಲಿ ವಿಜ್ರಂಭಿಸಿದ ಇನ್ನೊಸೆಂಟ್ ಇನ್ನಿಲ್ಲಎಂದರೆ ನಂಬಲಾಗುತ್ತಿಲ್ಲ. ಅವರ ಅಭಿನಯದ ಪಾತ್ರಗಳನ್ನು ನೋಡಿ ಮನಸ್ಸಿನ ಹಸಿವು ಇನ್ನೂ ಇಂಗಿಲ್ಲ. ಇವರ ಅದ್ಭುತ ಎನಿಸುವಂತಹ ಸಿನಿಮಾಗಳು ಎಂದರೆ, ವಿಯೆಟ್ನಾಂ ಕಾಲನಿ, ಕಾಬೂಲಿವಾಲ, ಪೊನ್ ಮುಟ್ಟ ಇಡುನ್ನ ತಾರಾವು, ವಡಕ್ಕು ನೋಕ್ಕಿ ಯಂತ್ರಂ, ಗಜಕೇಸರಿ ಯೋಗಂ, ಅಳಗೀಯ ರಾವಣನ್, ನಂ ಒನ್ ಸ್ನೇಹತೀರಂ, ಹಿಟ್ಲರ್, ಕ್ರಾನಿಕ್ ಬ್ಯಾಚುಲರ್, ಮೇಘಂ, ನಾಡೋಡಿಕ್ಕಾಟು, ಪಟ್ಟಣ ಪ್ರವೇಶಂ, ಮಣಿಚಿತ್ರತಾಳ್...ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅದರಲ್ಲೂ ಮೋಹನ್ ಲಾಲ್ ರೇವತಿ ಅಭಿನಯದ ಪ್ರಿಯದರ್ಶನ್ ನಿರ್ದೆಶನದ ಕಿಲುಕ್ಕಂ ಚಿತ್ರದ ಕೆಲಸದಾಳುವಿನ ಪಾತ್ರ ಯಾರೂ ಮರೆಯುವುದಕ್ಕೆ ಸಾಧ್ಯವಿಲ್ಲ. ಅದರಲ್ಲೂ ಲಾಟರಿ ಹೊಡೆಯುವ ಅಭಿನಯ ಕಂಡರೆ ನಗದೇ ಇರುವುದಕ್ಕೆ ಸಾಧ್ಯವೇ ಇಲ್ಲ. ಹಾಸ್ಯದ ಪಾತ್ರಗಳಲ್ಲಿ ವಿಜ್ರಂಭಿಸಿದರೂ ಐ ವಿ ಶಶಿ ನಿರ್ದೇಶನದ ಮೋಹನ್ ಲಾಲ್ ಕಥಾನಾಯಕನಾಗಿ ಅಭಿನಯಿಸಿದ ದೇವಾಸುರಂ ಸಿನಿಮಾದಲ್ಲಿನ ವಾರಿಯರ್ ಎಂಬ ಗಂಭೀರ ಪಾತ್ರದಲ್ಲಿ ತಮ್ಮ ಭಾವನಾತ್ಮಕ ಪ್ರತಿಭೆಯನ್ನು ತೋರಿಸಿದ್ದಾರೆ. 

        ಕೇವಲ ಸಿನಿಮಾ ಅಭಿನಯಮಾತ್ರವಲ್ಲ. ಇವರು ಭಾರತದ ಪಾರ್ಲಿಮೆಂಟ್ ಸದಸ್ಯರಾಗಿ ಜನಸೇವೆ ಮಾಡಿದ್ದಾರೆ, ಚುರುಕು ಸ್ವಾರಸ್ಯಕರ ಮಾತುಗಾರಿಕೆಗೆ ಹೆಸರಾದ ಇನ್ನೊಸೆಂಟ್ ಯಾವುದೇ ಕಾರ್ಯಕ್ರಮದಲ್ಲಿ ಭಾಷಣ ಮಾಡಿದರೂ, ಟೀವಿ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಅವರ ಮಾತು ಹಾಸ್ಯಮಯವಾಗಿರುತ್ತದೆ. ವಿಡಂಬನೆಯ ಮಾತುಗಳು ಕೇಳುತ್ತಾ ಇದ್ದರೆ ಅದು ಮುಗಿದು ಹೋದದ್ದೆ ತಿಳಿಯುವುದಿಲ್ಲ. 

        ಅಭಿನಯ ಎಂದರೆ ಇನ್ನೊಸೆಂಟ್. ...ಇನ್ನೊಸೆಂಟ್ ಎಂದರೆ ಅಭಿನಯ.... ಆ ಇನ್ನೊಸೆಂಟ್ ಇಂದು ನಿಶ್ಚಲವಾಗಿ ಮಲಗಿದ್ದಾರೆ ಎಂದರೆ ನಂಬಲಾಗುವುದಿಲ್ಲ, ಇದೂ ಒಂದು ಅಭಿನಯವಾಗಿರಬಹುದೇ ಎಂಬುದು ಇವರ ಅಭಿಮಾನಿಗಳ ಅನಿಸಿಕೆ. ನಿಜಕ್ಕೂ ಒಂದು ದೈವದತ್ತ ಪ್ರತಿಭೆ. ಮಲಯಾಳಂ ಸಿನಿಮದ ಹುಚ್ಚು ಹಿಡಿಸಿದ ಒಬ್ಬ ನಟನಿಗೆ ಒಂದು ಸ್ಮರಣೀಯ ಶ್ರಧ್ದಾಂಜಲಿ ಅರ್ಪಿಸದೇ ಇದ್ದರೆ ನನ್ನ ಹವ್ಯಾಸಗಳಿಗೆ ಮೌಲ್ಯವೇ ಇರಲಾರದು. 


No comments:

Post a Comment