Monday, March 6, 2023

ಮುಂಜಾನೆಯ ಕರೆ


ಇದನ್ನು ಯಾರು ಎಷ್ಟು ಓದುತ್ತಾರೋ ಗೊತ್ತಿಲ್ಲ. ಆದರೆ ಈ ಅನುಭವ ಹಿಡಿದಿಡುವುದು ಅಸಾಧ್ಯ.....

             ಮೊನ್ನೆ ಮುಂಜಾನೆ ಇನ್ನೇನು ಐದು ಘಂಟೆ ಆಗುತ್ತದೆ ಎನ್ನುವಾಗ ದೂರದ ಮಿತ್ತನೊಬ್ಬ   ಕರೆ ಮಾಡಿದ.  ಅದು ವೀಡಿಯೋ ಕರೆ. ಆ ಹೊತ್ತಿಗೆ ಯಾವ ಕರೆಯೂ ಸ್ವೀಕರಿಸುವುದಿಲ್ಲ. ಆದರೆ ಎಂದೂ ಕರೆಯದ ಮಿತ್ರ  ಆ ದಿನ ಕರೆ ಮಾಡಿದ್ದ. ವೆತ್ಯಾಸ ಇಷ್ಟೇ ಮನೆಯಲ್ಲೇ ಇರುವ ಮಗನ ಕರೆಗಿಂತಲೂ ದೂರದಲ್ಲಿರುವ ಮಗಳ ಕರೆ ಹಲವು ಸಲ ಆಪ್ಯಾಯಮಾನವಾಗುತ್ತದೆ. ಹಾಗಾಗಿ ಅಪರೂಪದ ಮಿತ್ರನ ವೀಡಿಯೊ ಕರೆಗೆ ಸ್ಪಂದಿಸಿದೆ.  ಆತ ಆಗತಾನೇ ಎದ್ದಿದ್ದ. ಎದ್ದವನಿಗೆ ಯೋಗಾಭ್ಯಾಸದ ಯಾವುದೊ ಸಮಸ್ಯೆಗೆ ನನ್ನಲ್ಲಿ ಚರ್ಚಿಸಬೇಕಿತ್ತು. ನಾನು ಎಚ್ಚರದಲ್ಲಿರುತ್ತೇನೆ ಎಂಬ ಭರವಸೆಯಲ್ಲೇ ಕರೆ ಮಾಡಿದ್ದ. ಆದರೆ ಆತನ ನಿರೀಕ್ಷೆಗೆ ಮೀರಿ ನನ್ನಿಂದ ಸ್ಪಂದನೆ ತನ್ನಿಂತಾನೇ ಆತನಿಗೆ ಲಭ್ಯವಾಯಿತು. ನನ್ನ ಮುಖವನ್ನು ನೋಡಿದವನೇ ಉದ್ಗಾರ ತೆಗೆದ, ಆತನ ಭಾವೋದ್ವೇಗ ಒಂದು ಸಲ ನನ್ನನ್ನು ಅಚ್ಚರಿಗೆ ತಳ್ಳಿತು. ಆತನೆಂದ " ಏನು ರಾಜಣ್ಣ...ಇಷ್ಟೊತ್ತಿಗೆ ಸ್ನಾನ ಆಗಿ ಇಷ್ಟು ಫ್ರೆಶ್ ಆಗಿದ್ದೀರಾ?" ನಂಬುವುದಕ್ಕೆ ಆತನಿಗೆ ಸಾಧ್ಯವಾಗಲಿಲ್ಲ.  ಸಾಮನ್ಯವಾಗಿ ಮನೆಯಲ್ಲಿ ಏನಾದರೂ ವಿಶೇಷವಾಗಿ ಹಬ್ಬ ಹರಿದಿನ ಇದ್ದರೆ ಅಷ್ಟು ಮುಂಜಾನೆ ಸ್ನಾನ ಮಾಡುವುದು ವಾಡಿಕೆ.  ಸ್ನಾನ ಮಾಡಿ ಭಸ್ಮಧಾರಣೆ ಮಾಡಿ ಆಗಿನ ವಾಸ್ತವದ ರೂಪದಲ್ಲಿ ನಾನು ಆತನಿಗೆ ಗೋಚರಿಸುತ್ತಾ ಇದ್ದೆ.  ಆತ ಕೇಳಿದ "ಇನ್ನೂ ಐದು ಆಗಿಲ್ಲ ಅಷ್ಟೊತ್ತಿಗೆ ಸ್ನಾನ ಮಾಡಿ ಇಷ್ಟು ಉತ್ಸಾಹದಲ್ಲಿ ಇರುತ್ತೀರಲ್ಲ. " ಆತನಿಗೆ ಮತ್ತೆ ಮಾತು ಹೊರಡಲಿಲ್ಲ. ಮತ್ತೆ ಆತನ ಸಮಸ್ಯೆಗೆ ನನಗೆ ತಿಳಿದ ಪರಿಹಾರ ಹೇಳಿ ಕರೆ ನಿಲ್ಲಿಸಿದೆ. ಮುಂಜಾನೆಯ ನನ್ನ ಅಮೂಲ್ಯ ಸಮಯ ಜಾರಿಹೋಗುತ್ತಿತ್ತು.  ಹೀಗೆ ಮುಂಜಾನೆಯ ಎಚ್ಚರ ಎಂಬುದು ನನಗೆ ಹಳೆಯದಾಗಿ ವರ್ಷ ಹಲವು ಸಂದಿತು. ಈಗ ಯಾರಾದರೂ ಅದರ ಬಗ್ಗೆ ಹೇಳಿದರೆ ನನಗೇ ಅಚ್ಚರಿಯಾಗುತ್ತದೆ.  ಜಗತ್ತಿನಲ್ಲಿ ಉತ್ತಮವಾಗಿರುವುದೆಲ್ಲವೂ ಅಚ್ಚರಿಯಾಗುವುದು ಅದು ವೈಶಿಷ್ಟ್ಯವಾಗಿ ಬದಲಾಗುವುದು ನಾವು ಪ್ರಕೃತಿಯಿಂದ ದೂರಾದ ಸಂಕೇತ. ಮುಂಜಾನೆ ಮಿತ್ರ ಕರೆ ಮಾಡಿದ, ಅಚ್ಚರಿ ದಿಗ್ಭ್ರಮೆ ವ್ಯಕ್ತ ಪಡಿಸಿದ. ಆದರೆ ನಾನೂ ಅದರಂತೆ ಮುಂಜಾನೆ ದಿಗ್ಭ್ರಮೆಗೆ ಒಳಗಾಗುವುದು ನನಗೆ ವಿಶೇಷವಾಗಿ ಉಳಿದಿಲ್ಲ.

                       ಮಿತ್ರನ ಅಚ್ಚರಿಬಗ್ಗೆ ನನಗೇ ಅಚ್ಚರಿಯಾಗಿತ್ತು. ಅಚ್ಚರಿ ಪಡುವಂತಹುದು ಏನಿದೆ? ಇರಬಹುದು, ನಮಗೆ ಕಾಣದೇ ಇರುವುದು ಕಾಣುವಾಗ ಅಚ್ಚರಿ ಎನಿಸುತ್ತದೆ. ಮುಂಜಾನೆ ಪರಿಶುದ್ದವಾಗಿ ಇರುವುದೂ ನಾನೊಬ್ಬನೇ ಎನಲ್ಲ? ಇದೂ ಒಂದು ಅಚ್ಚರಿಯಾಗುತ್ತದೆ.  ಮಿತ್ರನ ಪತ್ರಿಕ್ರಿಯೆಯ ಬಗ್ಗೆ ನಂತರ ಯೋಚಿಸಿದೆ, ಹೌದಲ್ಲ...ನಾನು ಸಹಜತೆಯಿಂದ ಅಸಹಜತೆಗೆ ಜಾರಿದೆನಾಇರಬಹುದೋ ಏನೋ? ಪ್ರಾಮಾಣಿಕತೆ ಸತ್ಯ ಎಲ್ಲವೂ ಅಪರೂಪವಾಗಿರುವಾಗ ಹಲವು ಸಲ ಇದು ಕಂಡರೆ ಅಚ್ಚರಿಯ ವಿಷಯವಾಗುತ್ತದೆ. ಕರ್ತವ್ಯ ನಿರ್ವಹಣೆಯೂ ಅಚ್ಚರಿಯ ವಿಷಯವಾಗುತದೆ. ನಮ್ಮದಲ್ಲದೇ ಇರುವ ವಸ್ತು ಬಯಸದೇ ಇದ್ದರೂ ಅದು ಅಚ್ಚರಿಯಾಗುತ್ತದೆ. ಎಲ್ಲೋ ಕಳೆದು ಹೋದ ವಸ್ತು ಪ್ರಾಮಾಣಿಕವಾಗಿ ತಂದು ಒಪ್ಪಿಸಿದರೆ ಕೃತಜ್ಞತೆಯಿಂದ ಸ್ಮರಿಸಿ ಧನ್ಯತೆಯನ್ನು ತಿಳಿಸುವುದು ಸಭ್ಯತೆ. ಆದರೆ ಯೋಚಿಸಿ ನಮಗೆ ಹೀಗೆ ಹೇಳುವ ಪ್ರೇರಣೆಯಾವುದು, ಸಮಾಜದಲ್ಲಿ ಪ್ರಾಮಾಣಿಕತೆ ಎಂಬುದು ವಿರಳವಾಗಿ ಗೋಚರವಾಗುವಾಗ.  ಬಸ್ ನಿರ್ವಾಹಕ, ಅಥವಾ ಅಂಗಡಿಯವನು ಕೊಡಬೇಕಾದ ದುಡ್ಡನ್ನು ನಾವು ಮರೆತು ಹೋದಾಗ ನೆನಪಿಸಿ ಕೊಟ್ಟರೆ ಅದು ವಿಶೇಷವಾಗುತ್ತದೆ. ಅದು ವಿಚಿತ್ರವಾಗುತ್ತದೆ.

             ವಾಸ್ತವದಲ್ಲಿ ನನಗಿದು ಸಹಜ ಸ್ಥಿತಿ. ಯಾರೂ ನನಗೆ ಮುಂಜಾನೆ ನಾಲ್ಕುಘಂಟೆಗೆ ಏಳು, ಸ್ನಾನ ಮಾಡು ಎಂದು ಕೋಲು ಹಿಡಿದು ನಿಲ್ಲುವುದಿಲ್ಲ. ನನಗೆ ನಿದ್ದೆ ಬಾರದಿರುವ ಖಾಯಿಲೆಯೂ ಇಲ್ಲ. ಆದರೂ ಎದ್ದುಬಿಡುವುದು ಸಹಜ ಜೀವನದ ಒಂದು ಭಾಗವದು. ಅದನ್ನು ಉಲ್ಲೇಖಿಸುವಾಗ, ಹಲವು ಸಲ ವಿಚಿತ್ರ ಎನಿಸುತ್ತದೆ. ವಾಸ್ತವದಲ್ಲಿ ಪ್ರಕೃತಿ ಇರಬೇಕಾದ ಸ್ವಭಾವ ಹೀಗೆ. ಅದು ವೈಶಿಷ್ಟ್ಯವಾಗುವಾಗ ಕೆಲವೊಮ್ಮೆ ಇರುಸು ಮುರುಸಾಗುತ್ತದೆ. ನಾನೇ ಏನೋ ಅಸಹಜ ಎನ್ನುವಂತಾಗುತ್ತದೆ. ನಾನು ನಾಲ್ಕಕ್ಕೆ ನಿದ್ದೆ ಬಿಟ್ಟು ಏಳುತ್ತೇನೆ ಎಂದು ಹೇಳಿದರೆ ಅಷ್ಟು ಬೇಗ ಎದ್ದು ಏನು ಮಾಡುವುದು? ಇದು ಕೆಲವರು ಕೇಳುವ ಪ್ರಶ್ನೆ.ಹಲವರಿಗೆ ಇದು ಉತ್ತರ ಇಲ್ಲದ ಪ್ರಶ್ನೆಯಾಗುತ್ತದೆ. ಇದಕ್ಕೆಲ್ಲ ಹೊಗಳಿಕೆಯನ್ನು ಕೇಳುವುದೆಂದರೆ ನಮ್ಮ ಜೀವನ ಕ್ರಮಕ್ಕೆ ವಿರುದ್ಧವಾದ ಪ್ರವೃತ್ತಿ. ಹೊಗಳಿಕೆಯನ್ನು ಆ ಜೀವನ ಕ್ರಮ ಬಯಸುವುದೇ ಇಲ್ಲ. ಬಯಸಿದರೆ ಅದು ಪ್ರದರ್ಶನದ ವಸ್ತುವಾಗುತ್ತದೆ. ಆಗ ನಾವು ಏನು ದಿವ್ಯತೆಯನ್ನು ಇಲ್ಲಿ ಅನುಭವಿಸುತ್ತಿದ್ದೇವೆಯೋ ಅದು ಪರಿಪೂರ್ಣವಾಗುವುದಿಲ್ಲ. ಹೊಗಳಿಕೆ ನಿಜಕ್ಕೂ ಇಷ್ಟವಾಗುವ ವಿಷಯವೇ. ಹಲವು ಸಲ ಅದು ಸಿಗದೇ ಇದ್ದರೆ ಭ್ರಮನಿರಸನವಾಗುವುದೂ ಇರುತ್ತದೆ. ಹೊಗಳಿಕೆಯನ್ನು  ಬಯಸಿದಾಗ ಮಾತ್ರ ಭ್ರಮನಿರಸನವಾಗುವುದು.

             ವಿಶಿಷ್ಟ ಅನುಭವಗಳೇ ಜೀವನದ ಉತ್ಸಾಹವನ್ನು ಹೆಚ್ಚಿಸುತ್ತದೆ. ಹಲವು ಸಲ ಈ ಅನುಭವಗಳು ಮರೆತು ಹೋಗುತ್ತದೆ. ಈ ಉತ್ಸಾಹವನ್ನು ಹೆಚ್ಚಿಸುವುದಕ್ಕಾಗಿ, ಅದರಲ್ಲಿ ಚೈತನ್ಯವನ್ನು ಉತ್ಪಾದಿಸುವುದಕ್ಕೆ ನಾನು ಬರವಣಿಗೆಯನ್ನು ಆರಂಭಿಸಿದೆ. ಏನೇ ಆದರೂ ಬರೆಯಬೇಕು. ಹಲವು ಸಲ ಇದೊಂದು ಹುಚ್ಚು ಅಂತ ಅನ್ನಿಸಿಕೊಂಡದ್ದು ಇದೆ. ಹಲವರು ಬಹಿರಂಗವಾಗಿ ಹೇಳುವುದಕ್ಕೆ ಸಂಕೋಚ ಪಡುವುದನ್ನು ಮುಕ್ತವಾಗಿ ಬರೆದುಕೊಂಡು ಯಾವುದೇ ಭಾವನೆ ಇಲ್ಲದೆ ಪ್ರಕಟಿಸಿದ್ದೇನೆ. ಅದೊಂದು ಮನಸ್ಸಿ ತೃಪ್ತಿಯನ್ನು ಕೊಡುವ ಕಾಯಕ. ಅದರ ಪ್ರತಿಕ್ರಿಯೆ ಬರುವಾಗ ಕ್ಷಣಕಾಲ ಸಂತೋಷವಾದರೂ ನಂತರ ಅದು ದಿನವೂ ತಿನ್ನುವ ಆಹಾರದ ಸಾಲಿಗೆ ಸೇರಿಬಿಡುತ್ತದೆ. ಈ ಬರವಣಿಗೆ ಹವ್ಯಾಸ, ನನಗೆ ಅದೊಂದು ಸಖನಿದ್ದಂತೆ. ಹಲವು ಸಲ ನಮ್ಮ ಕೋಣೆಯ ಗೋಡೆಗಳು ನಮಗೆ ಕಿವಿಯಾಗುತ್ತವೆ. ಗೋಡೆಗೂ ಕಿವಿ ಇದೆ ಅಂತ ಹೇಳುವಾಗ ಆ ಕಿವಿಯನ್ನು ನಾವೇ ಬಳಸಿಕೊಂಡರೆ ಹೇಗೆ? ಹಾಗಾಗಿ ಬರೆಯುತ್ತೇನೆ. ಯಾರಾದರೂ ಓದಲೇಬೇಕು ಎನ್ನುವ ಹಂಬಲ ಇರುವುದಿಲ್ಲ.  ಪ್ರಕಟಿಸುವ ಉದ್ದೇಶ ಓದುವುದಕ್ಕೆ, ಇಲ್ಲವಾದರೆ ಮನೆಯಲ್ಲೇ ಮನದಲ್ಲೇ ಅದನ್ನು ಹುದುಗಿಸಿ ಇಡಬಹುದು. ಈ ಹವ್ಯಾಸದ ಮುಖ್ಯ ಕಾರಣ ಇದು ನನ್ನ ಮನಸ್ಸನ್ನು ತೆರೆಯುವುದಕ್ಕಿರುವ ಏಕ ಮಾಧ್ಯಮ. ಕಾರಣಸತ್ಯ ಹೇಳಬೇಕೆಂದರೆ ನನ್ನ ಮನೆಯಲ್ಲೇ ಇದನ್ನು ಓದುವವರು ಇಲ್ಲವೇ ಇಲ್ಲ ಎನ್ನಬೇಕು. ಅವರಿಗೇನು ದ್ವೇಷವಿಲ್ಲ. ಓದಬಾರದು ಎನ್ನುವ ಹಟವು ಇಲ್ಲ. ಅವರಿಗೆ ಅದು ಆಸಕ್ತಿಯ ವಿಚಾರವೂ ಅಲ್ಲ. ಒಂದು ವೇಳೆ ನನ್ನ ಯಾವುದಾದರೂ ಲೇಖನ ತೋರಿಸಬೇಕೆಂದು ಇದ್ದರೆ ಅದನ್ನು ನಾನೇ ಸ್ವತಹ ಓದಿ ಹೇಳಬೇಕು. ಓದುವುದು ನನಗೂ ಕೆಲವೊಮ್ಮೆ ಸುಸ್ತು ಎನಿಸುತ್ತದೆ. ಅವರಿಗೆ ಕೇಳಿ ಬಾಯಿ ಆಕಳಿಕೆ ಬರುತ್ತದೆ.  ವಾಸ್ತವದಲ್ಲಿ ನಾನು ಸ್ವಲ್ಪ ವಾಚಾಳಿ. ಮಾತನಾಡುತ್ತಾ ಇರಬೇಕು. ನಾನು ಮೌನಿಯಾದರೆ ಅದು ಅಸಹಜ ಸ್ವಭಾವ. ಮನೆ ಮಂದಿಗೆಲ್ಲ ನನ್ನ   ತತ್ವ ಜ್ಞಾನಗಳು ಕೇಳಿ ಕೇಳಿ ಸಾಕಾಗಿ ಹೋಗಿದೆಯಾ ಅಂತ ನನಗನ್ನಿಸಿದಾಗ  ನನಗೆ ನನ್ನಷ್ಟಕ್ಕೆ ಬರೆಯುವುದು ಸುಲಭ ಆಯ್ಕೆ. ಬೇರೆ ನಿರ್ವಾಹವಿಲ್ಲ. ಬಹುಶಃ ಜಗತ್ತಿನ ಮಹಾ ಚಿಂತಕ ತತ್ವಜ್ಞಾನಿ ಸಾಕ್ರೆಟೀಸ್ಹೆಂಡತಿ ಅವನ ಮಾತು ಕೇಳುತ್ತಿದ್ದರೆ, ಆತ ತತ್ವ ಜ್ಞಾನಿಯಾಗುತ್ತಿರಲಿಲ್ಲ. ಆತನ ತತ್ವಗಳು ನಮಗೆ ಸಿಗುತ್ತಲೇ ಇರಲಿಲ್ಲ. ಹಾಗಾಗಿ ನನ್ನ ಮಟ್ಟಿಗೆ ಬರೆಯುವುದು ಅನಿವಾರ್ಯ. ನನ್ನ ಏಕಾಂಗಿತನದ ಬಾಧೆಗೆ ವಾಚಾಳಿತನಕ್ಕೆ ಇದಕ್ಕಿಂತ ಮಿಗಿಲಾದ ಔಷದ ಇಲ್ಲ. ಇದೊಂದು ವ್ಯಾಧಿ ಅಂತ ಪರಿಗಣಿಸುವವರಿಗೆ ಇದನ್ನು ಔಷಧ ಎಂದು ಉಲ್ಲೇಖಿಸಿದ್ದೇನೆ.

             ಹಲವು ಸಲ ನನ್ನ ಮಗಳು (ತಮ್ಮನ ಮಗಳು) ಸದಾ ನನಗೆ ಚೊರೆ ಹೊಡೆಯುವ ನನ್ನ ಹವ್ಯಾಸಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸುವ ಈಕೆಗೆ ನಾನು ಅಪ್ಪನಲ್ಲದೇ ಇರಬಹುದು ಆದರೆ ಅದಕ್ಕಿಂತಲೂ ಮಿಗಿಲಾದ ಪಿತೃ ಸಂಭಂಧವಿದೆ. ಅವಳು ಹೇಳುತ್ತಾಳೆ, ನಿಮ್ಮ ಅನುಭವವನ್ನೆಲ್ಲಾ ಪಡೆದುಕೊಳ್ಳಬೇಕು. ಅದನ್ನು ಅನುಭವಿಸಬೇಕು, ಆದರೆ ನಿಮ್ಮ ಹಾದಿಯನ್ನು ಹಿಡಿಯುವುದು ಕಷ್ಟವಾಗುತ್ತದೆ. ಅದು ಯಾವ ಪ್ರೇರೇಪಣೆ? ಅದು ನಿಮಗೆ ಎಲ್ಲಿಂದ ಸಿಗುತ್ತದೆ? ಮನೆಯ ಗಡಿಯಾರಕ್ಕಾದರೂ ಬ್ಯಾಟರಿಯನ್ನು ನಾವು ನೆನಪಿಸಿ ತಪ್ಪದೇ ಇಡಬೇಕು...ಈ ದಿನಚರಿಗೆ ಅದು ಎಲ್ಲಿಂದ ಬ್ಯಾಟರಿ ಲಭ್ಯವಾಗುತ್ತದೆ.? ನನ್ನ ಉತ್ತರ ಒಂದೇ ...ಈ ಜೀವನಾನುಭವಗಳೇ ನನಗೆ ಬ್ಯಾಟರಿ. ಇದೇ ನನ್ನ ಮುಂಜಾನೆಯ ಕರೆ. ಮುಂಜಾನೆ ಸ್ನಾನ ಮಾಡಿ ನಾಲ್ಕೂ ವರೆಯ ಬ್ರಾಹ್ಮೀ ಮುಹೂರ್ತಕ್ಕೆ ನಾನು ಸಂಧ್ಯಾ ಜಪಕ್ಕೆ ಕುಳಿತು ಬಿಡುತ್ತೇನೆ. ಸೂರ್ಯನಿಗೆ ಅರ್ಘ್ಯದಾನ ಮಾಡಿ ಪದ್ಮಾಸನ ಬಲಿದು ನೆಟ್ಟಗೆ ಧ್ಯಾನಕ್ಕೆ ಕುಳಿತರೆ ಮತ್ತೆ ಸುತ್ತಲಿನ ಪರಿವೆ ಇರುವುದಿಲ್ಲ. ಮೂಲಾಧಾರದಿಂದ ಶಿರೋಧಾರಕ್ಕೆ ಹರಿವ ಚೈತನ್ಯದ ಚಿಲುಮೆಗೆ ಮನಸ್ಸು ಒಡ್ಡಿ ಎಲ್ಲವನ್ನು ಮರೆಯುತ್ತೇನೆ. ಹೀಗೆ ಕಂಪಿಸದೇ ಕುಳಿತುಕೊಳ್ಳುವುದನ್ನು ಒಂದು ದಿನ ಅರ್ಧ ತಾಸು ನಿಂತಲ್ಲೆ ನಿಂತು ಮಗಳು ನೋಡುತ್ತಾಳೆ. ಆಕೆ ನೋಡುವುದು ನನ್ನಲ್ಲಿ ಏನಾದರೂ ಕಂಪನ ಬರಬಹುದೇ? ಇಲ್ಲ ಒಂದಿಷ್ಟೂ ಕಂಪಿಸದೇ ಇರುವುದು ಆಕೆಗೆ ಬಹಳ ಅಚ್ಚರಿಯಾಗುತ್ತದೆ. ಹಲವು ಸಲ ಆಕೆ ನನ್ನ ಅನುಭವವನ್ನು ಕೇಳುತ್ತಾಳೆ. ಧ್ಯಾನದಲ್ಲಿ ತಲ್ಲೀನನಾಗಿರುವಾಗ ಅಂಗಾಂಗವೆಲ್ಲ ಹಿತವಾಗಿ ಬೆವರುತ್ತದೆ. ಆಕೆಗೆ ಅದನ್ನು ಹೇಳಿದರೆ ಆಕೆಯ ಕಂಪನ ನಿಂತು ಬಿಡುತ್ತದೆ. ಆಕೆ ಕಲ್ಲಾಗುತ್ತಾಳೆ.

             ಹೌದು, ಮಗಳಿಗೆ ಹೇಳುವಂತೆ ಇದೊಂದು ಪುನರ್ಜನ್ಮದಂತೆ. ಯಾರಲ್ಲೇ ಆಗಲಿ ಗಾಢವಾದ ಧ್ಯಾನದ ಆನಂದವನ್ನು ವರ್ಣಿಸುವುದಕ್ಕೆ ಹೇಳಿದರೆ ಅದನ್ನು ಪರಿಪೂರ್ಣವಾಗಿ ವಿವರಿಸುವುದಕ್ಕೆ ಸಾಧ್ಯವಿಲ್ಲ. ಸುಂದರ ಹೆಣ್ಣಿನ ಸೌಂದರ್ಯವನ್ನು ಅಂಗುಲ ಅಂಗುಲವಾಗಿ ವರ್ಣಿಸಬಹುದು. ಪರಮಾತ್ಮನ ಮೂರ್ತಿ ಎದುರಿಗೆ ಪ್ರತ್ಯಕ್ಷವಾದರೂ ವಿವರಿಸಬಹುದೇನೋ....ಆದರೆ ಯೋಗಾನುಭವ ಅದರಲ್ಲೂ ಧ್ಯಾನಾನುಭವದ ವಿವರಣೆ ಸಾಧ್ಯವಾಗುವುದಿಲ್ಲ.

 

            ಸಾಮಾನ್ಯವಾಗಿ ಧ್ಯಾನ ಎಂಬುದು ದೇಹ ಮನಸ್ಸು ಇಂದ್ರಿಯ ನಿಗ್ರಹದ ಸ್ಥಿತಿಯಾಗಿರುತ್ತದೆ. ಇದು ಗಾಢವಾದಷ್ಟೂ ಪರಿಣಾಮ ಗಾಢವಾಗಿರುತ್ತದೆ.  ಪರಾಕಾಷ್ಠೆ ಎಂಬುದು ನಿರ್ದಿಷ್ಟವಿಲ್ಲ. ಹಿಮಾಲಯ ಪರ್ವತವನ್ನು ಏರಿದ ತೇನಸಿಂಗ್ ಗೆ ಎವರೆಸ್ಟ್ ಏರಿದ ನಂತರ ಮತ್ತಿನ ಎತ್ತರ ಆತನಿಗೆ ಗೋಚರವಾಗಲಿಲ್ಲ. ಹಿಮಾಲಯದ ಎತ್ತರ ಅಳೆದಾಗಿತ್ತು. ಆದರೆ ಧ್ಯಾನದ ಪರಾಕಾಷ್ಠೆ ಆ ಸುಖದ ಔನ್ನತ್ಯ ಅಳೆಯುವುದಕ್ಕೆ ಸಾಧ್ಯವಿಲ್ಲ. ಅದೆಂತಹ ಅನುಭವಗಳು. ಹಲವು ಸಲ ಈ ಅನುಭವಗಳನ್ನು ಒಂದು ಬ್ರಹತ್ ಪುಟಗಳನ್ನಾಗಿ ಪರಿವರ್ತಿಸಬೇಕು ಎಂದು ಭಾವಿಸುತ್ತೇನೆ. ಆದರೆ ಬರೆಯುವುದರಲ್ಲಿ ಸೋತು ಬಿಡುತ್ತೇನೆ. ಹಲವು ಸಲ ನನಗೆ ಏಕಾಗ್ರತೆ ಎಂಬುದು ಸವಾಲಾಗಿತ್ತು. ಸವಾಲು ಮಾತ್ರವಲ್ಲ ಏಕಾಗ್ರತೆಯ ಅಸ್ತಿತ್ವವೇ ಅವಿಶ್ವಾಸವನ್ನು ಹುಟ್ಟಿಸುತ್ತಿತ್ತು. ಹಾಗೊಂದು ಸ್ವಭಾವ ಇರುವುದಕ್ಕೆ ಸಾಧ್ಯವಿಲ್ಲ ಎಂಬ ನಂಬಿಕೆ ಬೆಳೆದಿತ್ತು. ಧ್ಯಾನ ಎಂಬುದು ಆ ಅವಿಶ್ವಾಸವನ್ನು ಕಡಿಮೆ ಮಾಡುತ್ತಾ ಮಾಡುತ್ತಾ ತನ್ನ ಅಸ್ತಿತ್ವದ ನೆಲೆಯನ್ನು ತೋರಿಸಿಬಿಡುತ್ತಿತ್ತು.  ಧ್ಯಾನದ ಹೊಸ ಹೊಸ ಎತ್ತರಗಳು   ಈಗೀಗ ಅರಿವಾಗುತ್ತದೆ. ಆನುಭವಕ್ಕೆ ಮನಸ್ಸನ್ನು ಒಪ್ಪಿಸುವಾಗ ಮುಂಜಾನೆಯ ನಿದ್ದೆ ಏನು...ಲೌಕಿಕವಾದವುಗಳು ಎಲ್ಲವೂ  ಅರ್ಥವನ್ನು ಕಳೆದುಕೊಳ್ಳುತ್ತವೆ. ಮುಂಜಾನೆಯ ಕರೆ ಬಲವಾಗುವುದು ಹೀಗೆ.

             ಧ್ಯಾನ.... ಈ ವಿಷಯ ಬಂದಾಗ ಹಲವರು ಆಸಕ್ತಿಯನ್ನು ಕಳೆದು ಬಿಡುತ್ತಾರೆ. ಯಾವುದೋ ದೇಶದಲ್ಲಿ ನಯಾಗರ ಇದೆ ಎಂದು ಹೇಳಿದರೆ ಹೌದಾ...ಎಂಬುದಷ್ಟಕ್ಕೇ ಸೀಮಿತವಾಗುತ್ತದೆ. ಯಾಕೆಂದರೆಹೋಗುವುದಕ್ಕಿಲ್ಲ ನೋಡುವುದಕ್ಕಿಲ್ಲ. ಧ್ಯಾನ ಬೇಡ ಎನ್ನುವುದಕ್ಕೆ ಆಲಸ್ಯ ಹೇಗೆ ನಿಮಿತ್ತವಾಗುತ್ತದೋ ಹಾಗೆ ಅದು ಬೇಕು ಎನ್ನುವ ಬಯಕೆ ಹುಟ್ಟಬೇಕಾದರೆ ನಿಷ್ಠೆ ಶ್ರದ್ದೆ ಇರಲೇಬೇಕು. ಧ್ಯಾನದ ಬಗ್ಗೆ ವ್ಯಾಖ್ಯಾನಗಳು ಹಲವು ಇರಬಹುದು ಆದರೆ ಅವುಗಳಲ್ಲಿ  ಅನುಭವಗಳಿಂದ ಬಂದವುಗಳು ಕೆಲವೇ ಕೆಲವು.  ನಮ್ಮ ತಾಮಸ ಗುಣಗಳನ್ನು ಕಳೆಯುವ ಮುಂಜಾನೆಯ ಕರೆ.   ಧ್ಯಾನ ಎಂಬುದು ಪ್ರಕೃತಿ ಧರ್ಮ ಅದು ವೈರಾಗ್ಯವಲ್ಲ ಅದು ಸನ್ಯಾಸ ಅಲ್ಲ ಬದುಕನ್ನು ಪ್ರಚೋದಿಸುತ್ತದೆ ಪ್ರಕೃತಿಯೊಂದಿಗಿನ ಸಂಬಂಧವನ್ನು ತಿಳಿಸುತ್ತದೆ. ರೈಲು ಏರುವಾಗ ನಮ್ಮನ್ನು ಬೀಳ್ಕೊಡುವುದಕ್ಕೆ ಹಲವು ಬಂಧು ಮಿತ್ರರು ಬರಬಹುದು. ಆದರೆ ವಿದಾಯ ಹೇಳಿ ರೈಲಿನೊಳಗೆ ನಾವೊಬ್ಬರೇ ಹೋಗುವಂತೆ, ಧ್ಯಾನದ ವರೆಗೆ ಹಲವು ಯೋಚನೆಗಳು ನಮ್ಮನ್ನು ಕಾಡಬಹುದು. ಆನಂತರ ಎಲ್ಲವನ್ನು ಕಳಚಿ ನಾವು ಒಬ್ಬರೇ ಒಳ ಪ್ರವೇಶಿಸಬೇಕು. ಹೀಗೆ ಧ್ಯಾನ ಆರಂಭವಾಗುತ್ತದೆ.

             ನನ್ನ ದಿನಚರಿಯಲ್ಲಿ ಮುಂಜಾನೆ ಸ್ನಾನ ಮಾಡಿ ಸಂಧ್ಯಾವಂದನೆಯ ನಡುವೇಯೇ ಧ್ಯಾನಕ್ಕೆ ಸಿದ್ಧವಾಗುತ್ತೇನೆ. ಇದೆಷ್ಟು ಸರಿಯಾದ ಕ್ರಮವೋ ಅರಿವಿಲ್ಲ. ಆದರೆ ಆಗ ಮನಸ್ಸು ಹೆಚ್ಚು ಪ್ರಫುಲ್ಲವಾಗಿ ಎಲ್ಲವನ್ನೂ ಸ್ವೀಕರಿಸುವ ಹಂತದಲ್ಲಿರುತ್ತದೆ.   ನಿಧಾನಗತಿಯ ಉಸಿರಾಟಕ್ಕೆ ದೇಹದ ನರನಾಡಿಗಳಲ್ಲಿ ಹರಿಯುವ ರಕ್ತದ ಚಲನೆ ಅರಿವಾಗಿ ಅದೊಂದು ಕಂಪನದಂತೆ ಭಾಸವಾಗುತ್ತದೆ. ಯಾವುದೋ ಒಂದು ಸೆಳೆತ ಆ ಸೆಳೆತಕ್ಕೆ ದೇಹವೆಲ್ಲ ಶರಣಾದಂತೆ ಭಾಸವಾಗುತ್ತದೆ.   ಏಕಾಗ್ರತೆ ಬೇಗನೆ ಅರಿವಾಗುತ್ತದೆ. ಉಸಿರಾಟದ ಜತೆಗೆ ಮೂಲಾಧಾರದಿಂದ ಸಹಸ್ರಾರದ ವರೆಗಿನ ಕಂಪನ ಸೂಕ್ಷ್ಮವಾಗಿ ಅನುಭವವಾಗುತ್ತಿದ್ದಂತೆ ಮನಸ್ಸು ಅದರಲ್ಲೇ ತಲ್ಲೀನವಾಗಿ ಬಿಡುತ್ತದೆ. ಆ ಸ್ಥಿತಿಯಿಂದ ವಾಸ್ತವಕ್ಕೆ ಬರುವುದಕ್ಕೆ ಮನಸ್ಸಾಗುತ್ತಿಲ್ಲ. ಆ ಹಿತವಾಗದ ಅನುಭವ ಹೇಗಿರುತ್ತದೆ ಎಂದರೆ ಅದನ್ನು ಪೂರ್ಣವಾಗಿ ವಿವರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಓಂ ಕಾರದಿಂದ ತೊಡಗಿ ಉಸಿರಾಟಕ್ಕೆ ಸ್ಪಂದಿಸುತ್ತಾ ಅಂತರಂಗಕ್ಕೆ ಜಾರತೊಡಗಿದಂತೆ ಅದಾವುದೋ ದಿವ್ಯ ರೂಪ ಅಸ್ಪಷ್ಟವಾಗಿ ಗೋಚರವಾದಂತೆ. ಅದಕ್ಕೆ ಆಕಾರವಿರುವುದಿಲ್ಲ. ಏನೂ ಇಲ್ಲದ ಒಂದು ಸ್ಥಿತಿ. ಮನಸ್ಸೆಲ್ಲ ಅದರಲ್ಲಿ ತಲ್ಲೀನವಾಗುತ್ತದೆ. ಜಪ ಮುಗಿದು ಉಪಸ್ಥಾನಗಳು ಮುಗಿದನಂತರ ಇದು ಗಾಢವಾಗುತ್ತಾ ಸಾಗಿ ನಂತರ ಅಲ್ಲಿ ಯಾವ ಮಂತ್ರಗಳೂ ನೆನಪಾಗುವುದಿಲ್ಲ. ಓಂಕಾರವೂ ಸ್ಮರಣೆಗೆ ಬರುವುದಿಲ್ಲ.ಯಾವುದೋ ಒಂದು ಸ್ಥಿತಿಗೆ ಜಾರುತ್ತೇನೆ. ಹಲವು ಸಲ ದೇಹವೆಲ್ಲ ಸೂಕ್ಷ್ಮವಾಗಿ ಬೆವರುತ್ತದೆ. ಹಲವು ಸಲ ಯಾವುದೋ ಅಗ್ನಿ ಪ್ರಜ್ವಲಿಸಿದಂತೆ ಆ ಉಷ್ಣತೆ ಚೈತನ್ಯವಾದಂತೆ, ಆ ಶಕ್ತಿಯನ್ನು ಹಿಡಿದಿಡುವುದಕ್ಕೆ ಸಾಧ್ಯವಾಗುವುಇಲ್ಲ. ಆಸಾಧ್ಯವಾದ ಸಿಟ್ಟು ಬಂದಾಗ ಹೇಗೆ ದೇಹ ಕಂಪಿಸಿ ಕೈಗೆ ಸಿಕ್ಕಿದ ವಸ್ತುವಿನ ಮೇಲೆ ರವಾನೆಯಾಗುತ್ತದೆಯೋ , ಅದೇ ರೀತಿ ಚೈತನ್ಯ ಹೊರ ಹಾಕುವುದಕ್ಕೆ ದೇಹ ಕಾತರಿಸುತ್ತದೆ. ಎದ್ದು ಒಂದು ಹೆಜ್ಜೆ ಇಟ್ಟರೆ ನೂರು ಹೆಜ್ಜೆ ಇಡುವ ಧಾವಂತ ಪ್ರಚೋದನೆಯಾಗುತ್ತದೆ. ಕೊನೆಗೊಮ್ಮೆ ಎಲ್ಲವೂ ತಣ್ಣಗಾಗಿ ವಾಸ್ತವದ ಅರಿವಾಗುತ್ತದೆ. ಆದರೂ ಹುಟ್ಟಿಕೊಂಡ ಚೈತನ್ಯ ಎಲ್ಲೆಲ್ಲಿಗೋ ಸೆಳೆದಂತೆ ಭಾಸವಾಗುತ್ತದೆ. ಮತ್ತೆ ಬಲವಂತವಾಗಿ ವಾಸ್ತವಕ್ಕೆ ಬರುತ್ತೇನೆ. ಬೆಟ್ಟದ ತುದಿಯಲ್ಲಿರುವ ದೇವಾಲಯಕ್ಕೆ ದರ್ಶನಕ್ಕೆ ಹೋದಂತೆ. ಕಷ್ಟ ಪಟ್ಟು ಬೆಟ್ಟ ಹತ್ತಿ ಸರದಿ ನಿಂತು ಗರ್ಭಗುಡಿಯ ಎದುರು ನಿಂತರೆ ಅಲ್ಲಿ ಒಂದು ಕ್ಷಣಮಾತ್ರ ನಿಂತು ಬಿಡುತ್ತೇವೆ. ಅದುವರೆಗೆ ಬೆಟ್ಟ ಹತ್ತಿದ ಸರದಿ ನಿಂತ ಶ್ರಮ ಎಲ್ಲವೂ ಮರೆತು ಒಂದು ಕ್ಷಣ ನಿಂತು ನಂತರ ಸರಿದು ಹೋದಂತೆ ಧ್ಯಾನದಿಂದ ಹೊರಬರುತ್ತೇನೆ.  ಕೇವಲ ಕೆಲವು ಕ್ಷಣಗಳು ಆ ಪರಾಕಾಷ್ಠೆಯ ಅನುಭವದಲ್ಲಿ ಮಗ್ನನಾಗಿದ್ದರೆ ಮತ್ತೆ ವಾಸ್ತವಕ್ಕೆ ಬಂದು ಯಥಾ ಪ್ರಕಾರ ಮರುದಿನದ ಅನುಭವಕ್ಕೆ ದಿನವಿಡೀ ಕಾಯುತ್ತೇನೆ.

             ಈ ಅನುಭವಗಳು ಮುಂಜಾನೆಯ ಕರೆಗೆ ಪ್ರಚೋದನೆಯನ್ನು ಒದಗಿಸುತ್ತವೆ. ಮುಂಜಾನೆ ಗಾಢವಾದ ನಿದ್ರೆಯಿಂದ ಒಮ್ಮಿಂದೊಮ್ಮೆಲೆ ಎಚ್ಚರಿಸುತ್ತದೆ. ಎದ್ದಕೂಡಲೇ ಸಹಜವಾಗಿ ಇರಬೇಕಾದ ಜಾಡ್ಯದ ಸೂಕ್ಷ್ಮ ಸಂವೇದನೆಯೂ ಇಲ್ಲದೆ ಎಲ್ಲ ಹುರುಪಿನಿಂದ ಮನಸ್ಸು ದೇಹ ಅಣಿಯಾಗುತ್ತದೆ. ನಿಜಕ್ಕೂ ಮುಂಜಾನೆಯ ಕರೆ ಎಂಬುದು ದಿನದ ಆರಂಭದಿಂದ ಅಂತ್ಯದ ತನಕೆ ಮನಸ್ಸನ್ನೂ ಪ್ರಚೋದಿಸುತ್ತಾ ಹೊಸ ಅನುಭವಕ್ಕೆ ಸಾಕ್ಷಿಯಾಗುತ್ತಾ ಮುಂಜಾನೆಯ ದಿವ್ಯತೆಯ ಅನುಭವವನ್ನು ಕೊಡುತ್ತದೆ. 

No comments:

Post a Comment