ನಾವು ಬಾಲ್ಯದಲ್ಲಿ ಭಜನೆ ಕಲಿಯುವಾಗ ಒಂದು ಸಲ ಭಜನೆಯಲ್ಲಿ ಬ್ರಹ್ಮ ಎಂಬ ಶಬ್ದ ಬಂತು. ನಾನು ಅದನ್ನು ತಪ್ಪಾಗಿ ಬ್ರಮ್ಮ ಎಂದು ಉಚ್ಚರಿಸುತ್ತಿದ್ದೆ. ಅದನ್ನು ಕೇಳಿದ ನನ್ನಜ್ಜ ಅದನ್ನು ತಿದ್ದುವುದಕ್ಕೆ ಯತ್ನಿಸಿದರು. ಬ್ರಮ್ಮ ಅಲ್ಲ ಬ್ರಹ್ಮಾ...ಅಂತ ಒತ್ತಿ ಹೇಳಿದರು. ಮೊದಲಿಗೆ ನನಗೆ ಬ್ರಮ್ಮ ಮತ್ತು ಬ್ರಹ್ಮಕ್ಕೆ ವೆತ್ಯಾಸವೇ ತಿಳಿಯಲಿಲ್ಲ. ಆ ವಯಸ್ಸು ಅಂತಹದು. ಶಾಲೆಯಲ್ಲಿ ಅಧ್ಯಾಪಕರು ಏನು ಹೇಳುತ್ತಾರೋ ಅಥವಾ ನಾವು ಏನು ಕೇಳುತ್ತೇವೋ ಅದೇ ವೇದವಾಕ್ಯವಾಗಿ ಸ್ಥಿರವಾಗಿಬಿಡುತ್ತದೆ. ಬ್ರಮ್ಮ.. ಪದೇ ಪದೇ ಒತ್ತಿ ಹೇಳಿದೆ. ಅಜ್ಜ ಅಕ್ಷರದ ಸ್ವರಗಳನ್ನು ಬಿಡಿಸಿ ಒಂದೋಂದಾಗಿ ಹೇಳಿದಾಗ ಕೆಲವೊಮ್ಮೆ ಸರಿಯಾದರೂ ಅಕ್ಷರಗಳನ್ನು ಜೋಡಿಸಿ ಶಬ್ದ ಉಚ್ಚರಿಸುವಾಗ ಅದು ಬ್ರಮ್ಮವಾಗಿ ತಪ್ಪು ಉಚ್ಚಾರವೇ ಬಂದು ಬಿಡುತ್ತಿತ್ತು. ಮುಖ್ಯವಾಗಿ ನನಗೆ ತಪ್ಪು ಏನು ಎಂದು ಅರ್ಥವಾಗುವಲ್ಲಿ ಅರ್ಧ ದಿನ ಕಳೆದು ಹೋಗಿತ್ತು. ಅಜ್ಜ ಹಟ ಬಿಡಲಿಲ್ಲ. ನಾನು ಸರಿಯಾಗಿ ಉಚ್ಚರಿಸುವ ತನಕ ಕುಳಿತಲ್ಲಿಂದ ಏಳುವುದಕ್ಕೆ ಬಿಡಲಿಲ್ಲ. ಬ್ರಹ್ಮ ಎಂಬುದು ಬ್ರಹ್ಮ ಸಮಸ್ಯೆಯಾಗಿ ಕೆಲವೊಮ್ಮೆ ಕಣ್ಣೀರು ಒತ್ತರಿಸಿ ಬಂತು ಅಜ್ಜ ಮತ್ತೂ ಅದನ್ನೆ ತಿದ್ದುವುದಕ್ಕೆ ಯತ್ನಿಸಿದರು.
ನಮ್ಮಜ್ಜ ವೇದ ಮೂರ್ತಿಗಳು. ಋಗ್ವೇದದ ಎಂಟು ಅಷ್ಟಕವೂ ಅವರ ನಾಲಿಗೆ ತುದಿಯಲ್ಲಿ ಕುಣಿದಾಡುತ್ತಿತ್ತು. ಸರಸ್ವತಿ ವರ ಪುತ್ರ. ಆ ಕಾಲದಲ್ಲಿ ಪುಸ್ತಕ ಇಲ್ಲದೆ ಗುರುಗಳಿಂದ ಬಾಯ್ದೆರೆಯಾಗಿ ಉಪದೇಶಗೊಂಡ ಮಂತ್ರವಿದ್ಯೆ ಅದು ಪರಿಶುದ್ಧವಾಗಿತ್ತು. ಮಂತ್ರದ ಉಚ್ಚಾರಗಳು ಅದರ ಸ್ಪಷ್ಟತೆ ಅದಕ್ಕೆ ಸಾಕ್ಷಿಯಾಗಿತ್ತು. ಪುಸ್ತಕ ಓದಿ ಮಂತ್ರ ಕಲಿತರೆ ನಿಮ್ಮದೃಷ್ಟಿಯೂ ನಿಮ್ಮ ಗ್ರಹಿಕೆಯೂ ನಿಮ್ಮನ್ನು ವಂಚಿಸಬಹುದು. ಆದರೆ ಬಾಯ್ದೆರೆಯಾಗಿ ಗುರು ಹೇಳುವುದನ್ನು ಅನುಸರಿಸಿ ಪಠಿಸಿದಾಗ ನಾವು ಏನು ಹೇಳುತ್ತೇವೆ ಗುರುಗಳು ಆಗಲೇ ಅದನ್ನು ಕೇಳುತ್ತಾರೆ. ತಪ್ಪುಗಳು ಬೇಗನೆ ಸರಿಯಾಗುತ್ತವೆ. ಅಥವಾ ತಪ್ಪುಗಳನ್ನು ಕಲಿಯುವ ಸಂಭವ ಕಡಿಮೆ. ನಾವು ಕಲಿಕೆಯಲ್ಲಿ ತಪ್ಪನ್ನು ಉಚ್ಚರಿಸಿದರೆ ಅದುವೇ ಶಾಶ್ವತವಾಗಿಬಿಡುತ್ತದೆ. ಸರಸ್ವತಿ ಅದನ್ನೇ ಅನುಗ್ರಹಿಸಿಬಿಡುತ್ತಾಳೆ. ಮಂತ್ರ ಗುರೂಪದೇಶ ಇಲ್ಲದೆ ಉಚ್ಚರಿಸುವುದು ಸಾಧ್ಯವಿಲ್ಲ. ಗುರು ಅನುಗ್ರಹ ಇಲ್ಲದೇ ಉಚ್ಚರಿಸುವುದೂ ಅಪರಾಧ. ಇದು ಅಜ್ಜ ಹೇಳುತ್ತಿದ್ದ ನುಡಿಮುತ್ತುಗಳು. ಅಜ್ಜನದ್ದು ಸ್ಪಟಿಕದಂತೆ ಸ್ಫುಟವಾಗಿ ಸ್ವಚ್ಛವಾಗಿ ನಿಸ್ಸಂದೇಹದ ಉಚ್ಚಾರ. ಮಂತ್ರ ಉಚ್ಚರಿಸುವ ಕ್ರಮವೇ ಹಾಗೆ. ಹಾಗಾಗಿ ನಾವು ಹೀಗೆ ಸಹಜವಾಗಿ ಮಾತನಾಡುವಾಗ ಅಕ್ಷರಗಳನ್ನು ತಪ್ಪಾಗಿ ಉಚ್ಚರಿಸಿದರೆ ’ಹ’ ದ ಬದಲು ’ಅ’ ಪ್ರಾಣಾಕ್ಷರವನ್ನು ಹಗುರವಾಗಿ ಉಚ್ಚರಿಸಿದರೆ ಅಜ್ಜ ಸಹಿಸುತ್ತಿರಲಿಲ್ಲ. ಅದನ್ನು ಸರಿಯಾಗಿ ಉಚ್ಚರಿಸುವ ತನಕ ಅವರು ನಮ್ಮನ್ನು ಬಿಡುತ್ತಿರಲಿಲ್ಲ. ಮಂತ್ರೋಚ್ಚಾರಣೆಯಲ್ಲಿ ಇದ್ದ ಶ್ರದ್ದೆ ಅದು ಸಹಜ ಮಾತಿನ ಪ್ರತೀ ಶಬ್ದದಲ್ಲೂ ವ್ಯಕ್ತವಾಗುತ್ತಿತ್ತು. ಈಗಲೂ ನನಗೆ ಅರಿವಿಲ್ಲದೇ ಆ ಸ್ವಭಾವ ನನ್ನಲ್ಲೂ ಜಾಗೃತವಾಗಿದೆ. ಅದಕ್ಕೆ ಕಾರಣ ನನ್ನಜ್ಜನ ಮಂತ್ರೋಪದೇಶ.
ಬ್ರಹ್ಮ ಮತ್ತು ಬ್ರಮ್ಮ ಇದಕ್ಕೆ ವೆತ್ಯಾಸ ತಿಳಿಯದ ನಾನು ಸ್ಪಷ್ಟ ಉಚ್ಚಾರಕ್ಕೆ ಹೆಣಗಾಡಿದೆ. ಕೊನೆಗೆ ಅಜ್ಜ ಬ್ರಮ್ಮ ಎಂದು ಬರೆಯುವುದಕ್ಕೆ ಹೇಳಿದರು. ನಂತರ ಬ್ರಹ್ಮ ಎಂಬ ಶಬ್ದವನ್ನು ಬ್ರ್ +ಅ+ಹ್+ಮ. ಇದು ಕೇಳುವುದಕ್ಕೆ ಬಹಳ ಸುಲಭವಾದ ಶಬ್ದ. ಆದರೆ ಸರಿಯಾಗಿ ಕಲಿತವರು ಇಂದಿಗೂ ಇದನ್ನು ತಪ್ಪಾಗಿ ಉಚ್ಚರಿಸುವುದನ್ನು ಕೇಳಿ ಇರಿಸು ಮುರಿಸು ಅನುಭವಿಸಿದ್ದೇನೆ. ಬ್ರಹ್ಮ ಎಂದು ಹೇಳುವಾಗ ಹಲವು ಸಲ ಬ್ರ ಭ್ರ ಆಗಿ ಮಹಾ ಪ್ರಾಣವಾಗಿಬಿಡುತ್ತದೆ. ಇಲ್ಲ ಮ ಶಬ್ದಕ್ಕೆ ಒತ್ತು ಬಂದು ಹ ಉಚ್ಚಾರ ವ್ಯಯವಾಗಿಬಿಡುತ್ತದೆ. ನಿಜಕ್ಕೂ ನನ್ನ ಸತ್ವವನ್ನೇ ಹೀರಿದ ಶಬ್ದವಾಗಿತ್ತು. ಕೇವಲ ಎರಡಕ್ಷರದ ಶಬ್ದ ಅದೆಷ್ಟು ಕಠಿಣ? ಬ್ರಹ್ಮ ಅಥವಾ ಬ್ರಾಹ್ಮಣ ಎರಡೂ ಉಚ್ಚರಿಸುವುದೇ ಇಷ್ಟು ಕಷ್ಟವಾದರೆ....ಅದೇ ತತ್ವದಲ್ಲಿ ಬದುಕುವುದು ಎಷ್ಟು ಕಷ್ಟವಾಗಬೇಡ? ಇಲ್ಲಿ ಬ್ರ ಸರಿಯಾಗುವಾಗ ಹ್ಮ ಸರಿಯಾಗದೆ ತೊಂದರೆ ಕೊಡುತ್ತಿತ್ತು. ಅಜ್ಜ ಬಿಡುವುದೇ ಇಲ್ಲ ಹತ್ತು ಸಲ ಬಿಟ್ಟು ನೂರಾರು ಸಲ ಉಚ್ಚರಿಸಿ, ಯಾವುದೋ ಶಬ್ದದ ಜತೆಗೆ ಸೇರಿಸಿ ಉಚ್ಚರಿಸುವಂತೆ ತೋರಿಸಿದರು. ಇಲ್ಲ ಸರಿಯಾಗಲೇ ಇಲ್ಲ. ಮುಖ್ಯವಾಗಿ ಉಚ್ಚಾರ ವೆತ್ಯಾಸ ತಿಳಿಯುವುದೇ ಕಷ್ಟವಾಗಿತ್ತು. ಬ್ರಹ್ಮ ಎಂದರೆ ದೊಡ್ಡದು...ನಿಜಕ್ಕೂ ನನಗೆ ಅದು ದೊಡ್ಡದಾಗಿ ಬ್ರಹ್ಮ ಸಮಸ್ಯೆಯೇ ಎದುರಾಗಿಬಿಟ್ಟಿತು. ಬ್ರಹ್ಮ ...ಬ್ರಾಹ್ಮಣ...ಹೀಗೆ ಬ್ರಾಹ್ಮಣನಾಗಿ ಇರುವುದು ಎಷ್ಟು ಕಷ್ಟವೋ ಅದನ್ನು ಉಚ್ಚರಿಸುವುದೂ ಅಷ್ಟೇ ಕಷ್ಟ ಎಂದು ಭಾಸವಾಯಿತು. ಕೊನೆಗೂ ನಾನು ಬ್ರಹ್ಮ ಎಂಬ ಸ್ಪಷ್ಟ ಉಚ್ಚಾರದಲ್ಲಿ ಅದನ್ನು ಹೇಳಿದಾಗ ಹೊತ್ತು ಸಂಜೆಯಾಗಿತ್ತು. ಪೂರ್ಣ ಶಬ್ದದ ಬ್ರಹ್ಮಾ ಎಂಬ ಉಚ್ಚಾರಕ್ಕೆ ಇಡೀದಿನ ತೆಗೆದುಕೊಂಡೆ. ಅಂದಿನಿಂದ ನಾನು ಶಬ್ದೋಚ್ಚಾರದಲ್ಲಿ ಹೆಚ್ಚು ಜಾಗರೂಕನಾದೆ. ಮೊದಲಿಗೆ ಬರೆದ ಅಕ್ಷರಗಳನ್ನು ಅರ್ಥವಿಸತೊಡಗಿದೆ. ಅಜ್ಜನು ಅದೇ ರೀತಿ, ಹೊರಗೆ ಎಷ್ಟೇ ಕಲಿಯಲ್ಲಿ ಅವರಲ್ಲಿ ಶಿಷ್ಯರಾಗುವಾಗ ಅವರು ಅಕ್ಷರ ಮಾಲೆಯಿಂದ ತೊಡಗುತ್ತಾರೆ. ಇದು ಸಿರಿಯಾದ ಶಿಕ್ಷಣ ಕ್ರಮ. ಮಂಗಳೂರಲ್ಲಿರುವಾಗ ನಗರದಲ್ಲಿ ದೊಡ್ಡ ಅಧಿಕಾರಿಯಾಗಿದ್ದವರು ಅವರ ಬಳಿ ಶ್ಲೋಕ ಕಲಿಯಲು ಬಂದರಂತೆ, ಇವರು ಶುರುವಿಗೆ ಅವರ ಉಚ್ಚಾರ ನೋಡಿ ಆ ಆ ಈಈ ಕ ಖ ಗ ಹೇಳಿಸುವುದಕ್ಕೆ ಪ್ರಯತ್ನ ಪಟ್ಟರು. ಶಾಲೆಯಲ್ಲಿ ಅಧ್ಯಾಪಿಕೆಯರು....ಮೊದಲಿಗೆ ನನಗೆ ಗುರುಗಳಾಗಿ ಸ್ತ್ರೀಯರೇ ಇದ್ದರು. ಅವರು ತಪ್ಪಾಗಿ ಉಚ್ಚರಿಸುವುದನ್ನು ಕೇಳಿ ಹಲವುಸಲ ಇರಿಸು ಮುರಿಸು ಅನುಭವಿಸಿದ್ದೇನೆ. ಆದರೆ ಏನು ಟೀಚರ್ ಗೆ ನಾನು ಹೇಳುವುದಕ್ಕೆ ಸಾಧ್ಯವೇ? ಗುರು ಹೇಗಿದ್ದರೂ ಗುರು. ಅದು ಪ್ರಶ್ನಾತೀತ ಸ್ಥಾನ. ಅಲ್ಲಿ ನಾವು ಕಲಿಯಬೇಕಾದ ಜ್ಞಾನವಷ್ಟೇ ಪ್ರಧಾನ. ಗುರುವಿನ ವೈಯಕ್ತಿಕವಲ್ಲ. ಗುರುವಿನಲ್ಲಿ ನಾವು ಅರಿಯಬೇಕಾದ ಜ್ಞಾನವಿದ್ದರೆ ಅದೇ ಸರ್ವಸ್ವ. ಉಳಿದವುಗಳೆಲ್ಲ ಕ್ಷುಲ್ಲಕ. ಗುರುವಿನ ತಪ್ಪು ಪ್ರಮಾದಗಳೇನಿದ್ದರೂ ಅದು ಅವರ ಖಾಸಗೀತನದ ಲಾಭನಷ್ಟಗಳು. ಅದು ಅವರಿಗೇ ಮೀಸಲು! ಅಜ್ಜನ ಗುರು ಸ್ಥಾನದ ಬಗ್ಗೆ ನನಗಿದ್ದ ಭಾವನೆಗಳು ಇದು. ಅಜ್ಜ ಪ್ರಥಮದಿಂದ ಹೇಳುತ್ತಿದ್ದುದೇ ಹೀಗೆ, ನನ್ನನ್ನು ನೋಡಬೇಡ, ವಿದ್ಯೆಯನ್ನು ನೋಡು. ಜ್ಞಾನಾರ್ಥಗಳಿಗೆ ಗುರುವೇ ಪ್ರಥಮ ಗುರುವೇ ಅಂತಿಮ.
ಬಾಲ್ಯದಲ್ಲೇ ನನಗೆ ಬ್ರಹ್ಮೋಪದೇಶವಾಯಿತು. ಅಜ್ಜನಿಂದಲೇ ಬ್ರಹ್ಮೋಪದೇಶ,ಜತೆಗೆ ಸಂಧ್ಯಾವಂದನೆ, ಒಂದಷ್ಟು ವೇದೋಪದೇಶವಾಯಿತು.ವೇದಾಧ್ಯಯನದ ಮೊದಲು ನನಗೆ ಅಕ್ಷರಾಭ್ಯಾಸ ಪುನಃ ಮಾಡಿಸಿದರು. ಆ ಸಮಯದಲ್ಲಿ ಉಚ್ಚಾರದ ಬಗ್ಗೆ ಅದೇ ಅಜ್ಜನಿಂದ ಶಭಾಶ್ ಗಿರಿಯನ್ನೂ ಪಡೆದಿದ್ದೆ. ಯಾಕೆಂದರೆ ಉಚ್ಚಾರದ ಬಗ್ಗೆ ನನಗಿದ್ದ ಆಸಕ್ತಿ. ಅದುವರೆಗೆ ನಾನು ಶಾಲೆಯಲ್ಲಿ ಕಲಿತದ್ದು ಏನೂ ಅಲ್ಲ ಎಂಬ ಭಾವನೆ ಬಂದಿತ್ತು. ಕಾರಣ ಮಂತ್ರೋಚ್ಚಾರ ಅಷ್ಟು ಕಠಿಣವಾಗಿತ್ತು ಎಂದರೆ ನೆಟ್ಟಗೆ ಬಾಗದೆ ಕುಳಿತು ಮಂತ್ರ ಹೇಳುವಾಗ ಅದು ನಾಭಿಯಿಂದ ಸ್ವರ ಹೊರಡಬೇಕು. ಹೀಗೆ ಮಂತ್ರ ಉರು ಹೊಡೆದ ನಂತರ ಅದರ ಪಾಠ ಆದನಂತರ ಸುಸ್ತಾಗಿಬಿಡುತ್ತಿತ್ತು. ನಿಜಕ್ಕೂ ಮಂತ್ರೋಚ್ಚಾರ ಅದು ಸುಸ್ಪಷ್ಟವಾಗಿ ಸ್ಫಟಿಕದ ಉಚ್ಚಾರ ಇರಬೇಕು. ಅಕ್ಷರ ಉಚ್ಚಾರದಲ್ಲಿ ಗೊಂದಲ ಅನುಮಾನಗಳಿರಬಾರದು. ಎಲ್ಲಿ ಸ್ವರ ಭಾರ ಬೇಕೋ ಅಲ್ಲಿ ಸ್ಪಷ್ಟವಾಗಿ ಅದನ್ನು ಉಚ್ಚರಿಸಬೇಕು. ಉಚ್ಚಾರದಲ್ಲಿ ಅತೀ ಸಣ್ಣ ಸೂಕ್ಷ್ಮ ತಪ್ಪಾದರೂ ಅಜ್ಜ ಹುಡುಕಿ ತೆಗೆದು ಎಚ್ಚರಿಸುತ್ತಿದ್ದರು. ಸ್ವತಃ ಅಜ್ಜನ ಮಂತ್ರೋಚ್ಚಾರವೂ ಹಾಗೆ. ನೂರು ಜನ ವೈದಿಕ ಪುರೋಹಿತರು ಮಂತ್ರ ಹೇಳಿದರೂ ಅಜ್ಜನ ಮಂತ್ರೋಚ್ಚಾರ ವಿಶೇಷವಾಗಿ ಗಮನಕ್ಕೆ ಬರುತ್ತಿತ್ತು. ಅಷ್ಟು ಸ್ಪಷ್ಟವಾದ ಉಚ್ಚಾರ. ಆಗ ಅದೆಲ್ಲ ಅಷ್ಟು ಗಂಭೀರ ಅನ್ನಿಸುತ್ತಿರಲಿಲ್ಲ. ಆದರೆ ಈಗ ಅದನ್ನೆಲ್ಲ ಯೋಚಿಸುತ್ತಿದ್ದಂತೆ ಅದೆಷ್ಟು ಪವಿತ್ರವಾದ ಪ್ರತಿಭೆ ಅದು ಅಂತ ಗೌರವ ಮೂಡುತ್ತದೆ.
ವೇದ ಮಂತ್ರ ಉಚ್ಚಾರ ಎಂದರೆ ಅದು ಸುಮ್ಮನೇ ಒಲಿಯುವುದಿಲ್ಲ. ಅದರ ಅಕ್ಷರಾಕ್ಷರದ ಉಚ್ಚಾರದಲ್ಲಿ ಸೂಕ್ಷ್ಮವಾದ ಸಂವೇದನೆ ಇರುತ್ತದೆ. ಸ್ವರಭಾರದಲ್ಲಿ ಸಣ್ಣ ವೆತ್ಯಾಸವಾದರೂ ಅದು ಬಹಳ ದೊಡ್ಡ ಪ್ರಮಾದವಾಗುತ್ತದೆ. ಒಂದೊಂದು ಅಕ್ಷರದ ಉಚ್ಚಾರದಲ್ಲಿ ಅರ್ಥ ವೆತ್ಯಾಸಗಳಿರುತ್ತವೆ. ಶಿಸ್ತು ಬದ್ಧ ಮಂತ್ರೋಚ್ಚಾರಕ್ಕೂ ನಿಯಮವಿದೆ. ಮಂತ್ರಕ್ಕೂ ಶ್ಲೋಕಕ್ಕೂ ವೆತ್ಯಾಸವಿದೆ. ವೇದ ಮಂತ್ರವೆಂದರೆ ಅದು ಯಾರೋ ರಚಿಸಿದ್ದಲ್ಲ. ದೇವ ಕಲ್ಪ. ತಾನಾಗಿಯೇ ಋಷಿಗಳು ಕಂಡುಕೊಂಡದ್ದು. ಇದರ ಬಗ್ಗೆ ಯೋಚಿಸುವಾಗ ಹಲವು ಸಲ ಅನ್ನಿಸುವುದುಂಟು ಇದರ ಸೃಷ್ಟಿ ಹೇಗೆ? ಜನಗಣ ಮನ ಬರೆದದ್ದು ರವೀಂದ್ರನಾಥ ಠಾಗೋರರು. ಇತಿಹಾಸದಲ್ಲಿ ಕಲಿತದ್ದು. ಎಲ್ಲದಕ್ಕೂ ಸಾಕ್ಷ್ಯವಿದೆ. ಆದರೆ ಮಂತ್ರ ಅದಕ್ಕೆ ಸಾಕ್ಷ್ಯದ ಜಿಜ್ಞಾಸೆಗಿಂತಲೂ ಇದು ಇಂದು ವಾಸ್ತವವಾಗಿ ನಮ್ಮ ಮುಂದೆ ಇದೆ. ಮಂತ್ರದ ವಿಶಿಷ್ಟತೆ ಅದು.
ಮಂತ್ರ ಹೇಳುವಾಗ ನೆಟ್ಟಗೆ ಬೆನ್ನು ಬಾಗದೇ ಕುಳಿತುಕೊಳ್ಳಬೇಕು. ಸ್ಥಿರವಾದ ನಿಲುವು ಇರಬೇಕು. ಮಂತ್ರ ಉಚ್ಚರಿಸುವಾಗ ಸ್ವರ ಒಳಗಿನ ನಾಭಿಯಿಂದ ಬರಬೇಕು. ಹಾಗೆ ಮಂತ್ರ ಉಚ್ಚರಿಸಿದರೆ ಆತನ ದೇಹಕ್ಕೆ ರೋಗಬಾಧೆಗಳು ಸುಳಿಯುವುದಿಲ್ಲ. ಸುಳಿದರೂ ಅದು ಗಂಭೀರವಾಗುವುದಿಲ್ಲ. ಮಂತ್ರೋಚ್ಚಾರದ ಪ್ರಭಾವ ಅಂತಹುದು. ದೇಹ ಆರೋಗ್ಯವಂತ ಮಾತ್ರವಲ್ಲ. ದೈಹಿಕ ಆಕಾರವೂ ಸಮವಾಗಿರುತ್ತದೆ. ಹೊಟ್ಟೆ ಬೆಳೆಯುವುದಿಲ್ಲ.ಬೆನ್ನು ಬಾಗುವುದಿಲ್ಲ. ಒಂದು ವೇಳೆ ಇದಕ್ಕೆ ವಿಪರೀತವಾಗಿ ಇದ್ದರೆ ಅಲ್ಲಿ ಮಂತ್ರೋಚ್ಚಾರ ಸರಿಯಾಗಿಲ್ಲ ಎಂದೇ ಅರ್ಥ. ಇದು ನನ್ನಜ್ಜ ಹೇಳುತ್ತಿದ್ದ ಮಾತುಗಳು. ಮುಂಜಾನೆಯಿಂದ ಮಧ್ಯಾಹ್ನದ ತನಕ ನೇರ ಕುಳಿತು ವೇದ ಪಾಠ ಮಾಡಿದ ಬಳಿಕ ವೇದಾಧ್ಯಯನದಲ್ಲಿ ಅದನ್ನು ವರ್ಗ ಸಂತೆ...ಅಂದರೆ ಮಂತ್ರವನ್ನು ಆವರ್ತಿಸುತ್ತಾ ಉರು ಹೊಡೆದು ಅದನ್ನು ಅಭ್ಯಾಸ ಮಾಡುವುದು ಎಂದು ಹೇಳುತ್ತಾರೆ. ಅಷ್ಟು ಮಾಡಿ ಅದನ್ನು ಗುರುವಿಗೆ ಒಪ್ಪಿಸಿ ಆಶೀರ್ವಾದ ಪಡೆಯಬೇಕು. ಆಗಲೇ ಆ ವಿದ್ಯೆ ಒಲಿದು ಬರುತ್ತದೆ. ಹೀಗೆ ವರ್ಗ ಸಂತೆ ಮಾಡಿ ಊಟಕ್ಕೆ ಕುಳಿತರೆ ನಮ್ಮ ದೊಡ್ಡಮ್ಮ..ಅಂದರೆ ಅಜ್ಜಿ..ನನ್ನ ತಾಯಿಯ ಅಮ್ಮ ನನಗೆ ತುಪ್ಪ ಬಡಿಸುತ್ತಿದ್ದರು. ಮಂತ್ರ ಹೇಳುವುದಕ್ಕೆ ತ್ರಾಣ ಬರಬೇಕಲ್ವ ಎಂದು ಅವರು ಊಟಕ್ಕೆ ತುಪ್ಪವನ್ನು ತಪ್ಪಿಸುತ್ತಿರಲಿಲ್ಲ. ಕುಳಿತು ಹೇಳುವುದಾದರೂ ಮಂತ್ರ ಹೇಳುವುದಕ್ಕೆ ಬಹಳ ಪರಿಶ್ರಮವಿದೆ. ಅದೇ ಮಂತ್ರದ ಶಿಸ್ತು. ಆದರೆ ಬರುತ್ತಾ ಬರುತ್ತಾ ನಾನು ಅದರಿಂದ ದೂರಾಗಿ ಹೋದದ್ದು ಬಹಳಷ್ಟು ಮಂತ್ರಗಳನ್ನು ಮರೆತುಬಿಟ್ಟದ್ದು ಈಗ ನಷ್ಟವನ್ನು ನೆನಪಿಸುವಂತೆ ಮಾಡುತ್ತದೆ. ಮಂತ್ರ ಎಂದರೆ ಸರಸ್ವತಿ. ಒಬ್ಬ ಸಂಗೀತಗಾರ ಸಂಗೀತವನ್ನು ಸ್ವರವನ್ನು ಹೇಗೆ ನಿತ್ಯ ಅಭ್ಯಾಸ ಮಾಡುತ್ತಾನೋ ಅದೇ ರೀತಿ ಬ್ರಾಹ್ಮಣನಾದವನು ಮಂತ್ರವನ್ನು ಸದಾ ಅಭ್ಯಾಸ ಮಾಡುತ್ತಿರಬೇಕು. ಅದುವೇ ಆತ ಸರಸ್ವತಿಯನ್ನು ಆರಾಧಿಸುವ ರೀತಿ. ಅದಿಲ್ಲದೇ ಹೋದರೆ ಸರಸ್ವತಿ ನಾಲಿಗೆಯಿಂದ ದೂರವಾಗಿಬಿಡುತ್ತಾಳೆ. ಮಂತ್ರದ ವಿಷಯದಲ್ಲಂತು ಇದು ಪರಮ ಸತ್ಯ. ಹಾಗಾಗಿ ನಾನು ಕಳೆದುಕೊಂಡದ್ದು ದೊಡ್ಡ ದೈವಾನುಗ್ರಹವನ್ನು. ಕೆಲವು ದಿನಗಳ ಹಿಂದೆ ಅದರ ಗಂಭೀರತೆಯನ್ನು ಗ್ರಹಿಸಿ ಗುರುವಾದ ಅಜ್ಜನನ್ನು ಸ್ಮರಿಸಿ ಶ್ರೀ ರುದ್ರ ಮಂತ್ರವನ್ನು ಪುನಃ ಕರಗತ ಮಾಡಿಕೊಂಡೆ. ಆಗ ಆ ಅಜ್ಜನಿಗೆ ಸಲ್ಲಿಸಿದ ದೊಡ್ಡ ಪ್ರಣಾಮ ಎಂಬಂತೆ ಭಾಸವಾಯಿತು. ಈಗ ನಿಯಮಿತವಾಗಿ ಅಜ್ಜನ ಸ್ಮರಣೆಗೆ ರುದ್ರ ಪಾರಾಯಣ ಮಾಡುತ್ತಿದ್ದೇನೆ.
ಅಜ್ಜ, ನನ್ನ ಮಟ್ಟಿಗೆ ಅದೊಂದು ದೊಡ್ಡವ್ಯಕ್ತಿತ್ವ. ಈಗ ಅದರ ವಿಸ್ತಾರ ಅರಿವಾಗುತ್ತದೆ. ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಸಂಧ್ಯಾವಂದನೆ ನನ್ನ ದಿನದ ಆದ್ಯತೆಯಲ್ಲಿ ಒಂದು. ಎಲ್ಲಕ್ಕೀಂತ ಮೊದಲು ದಿನದ ನಾಂದಿಯೇ ಅಲ್ಲಿಂದ ಆರಂಭವಾಗುತ್ತದೆ. ಮುಂಜಾನೆಯ ಮೌನದಲ್ಲಿ ಶ್ರೀ ಗುರುಭ್ಯೋ ನಮಃ ಹರಿಃ ಓಂ ಎಂದು ಗುರುವನ್ನು ಸ್ಮರಿಸಿ ಸಂಧ್ಯಾವಂದನೆ ಆರಂಭಿಸುವಾಗ ಅಲ್ಲಿ ಗುರುವಿನ ಸ್ಥಾನದಲ್ಲಿ ಅಜ್ಜನನ್ನು ಕಾಣುತ್ತೇನೆ. ಸಂಧ್ಯಾವಂದನೆ ! ಬ್ರಹ್ಮೋಪದೇಶದ ನಂತರ ಅಜ್ಜ ಉಪದೇಶಿಸಿದ ಅನುಷ್ಠಾನ ಕ್ರಿಯೆ. ಓಂ ಕಾರದಲ್ಲಿ ಇಡೀ ವಿಶ್ವವೇ ಆಡಗಿದೆ ಎಂದು ಅಜ್ಜ ಹೇಳುತ್ತಿದ್ದರು. ನಾಭಿಯಿಂದ ಓಂಕಾರ ತೊಡಗಿ ಅದು ಬಾಯ್ದೆರೆಯಾಗಿ ಬಂದಾಗ ಹೃದಯದಲ್ಲಿ ಆಗುವ ಕಂಪನವೇ ದೈವ ಸಾನ್ನಿಧ್ಯ. ಆ ದೈವದ ಉಪಾಸನೆಯೇ ಸಂಧ್ಯಾವಂದನೆ. ಅಜ್ಜ ಹೇಳುತ್ತಿದ್ದ ಮಾತುಗಳಿವು. ಓಂಕಾರ ಅದು ಕೇವಲ ಅಕ್ಷರ ಜೋಡಿಸಿದ ಶಬ್ದವಲ್ಲ, ಅದು ಅಂತಂಗದ ಬಾಗಿಲ ತೆರೆಯುವ ಮಂತ್ರ. ಮುಂಜಾನೆ ಎದ್ದಕೂಡಲೇ ಸ್ನಾನ, ಸಂಧ್ಯಾವಂದನೆ ಎಂದರೆ ಗುರು ಸ್ಮರಣೆ ಮತ್ತು ಪರಮಾತ್ಮ ಸ್ಮರಣೆ ಏಕ ಕಾಲದಲ್ಲಿ ಆಗಿಬಿಡುತ್ತದೆ. ಈಗ ಅನುಭವಿಸುವ ದೈವಾನುಭವಕ್ಕೆ ನನ್ನಜ್ಜನ ಯೋಗದಾನ ಪ್ರಧಾನವಾಗಿಬಿಡುತ್ತದೆ. ಅಪ್ಪ ಅಮ್ಮ ಜನ್ಮದಿಂದ ಲೋಕವನ್ನು ತೋರಿಸಿದರೆ ಗುರುವಾದವನು ಈ ಲೋಕದಲ್ಲಿ ಇಲ್ಲದೇ ಇದ್ದದ್ದನ್ನು ತೋರಿಸುತ್ತಾನೆ. ಅದರ ಮೂಲ ಸ್ವರೂಪವೇ ಸಂಧ್ಯಾವಂದನೆ. ಅದು ಯಾವುದೇ ರೂಪದಲ್ಲಿ ಮಾಡಿದರೂ ಪರಮಾತ್ಮನ ಸರಣೆ ಎಂಬುದು ಸಂಧ್ಯಾವಂದನೆಯಾಗುತ್ತದೆ. ತನ್ನಲ್ಲಿ ಏನಿದೆಯೋ ಅದನ್ನು ಕೊಟ್ಟು ಇಚ್ಛಾ ಕ್ರಿಯಾ ಜ್ಞಾನದ ಮೂಲಕ ಸರ್ವಸ್ವನ್ನೂ ಪರಮಾತ್ಮನಿಗೆ ಸಮರ್ಪಿಸುವುದು, ಸಂಧ್ಯಾವಂದನೆಯಲ್ಲಿ ಆಡಂಬರದ ದರ್ಶನವಿಲ್ಲ. ಯಾವುದೇ ಮೂರ್ತಿ ಪೂಜೆ ಇಲ್ಲ. ಆವಾಹನೆ ಪಾದ್ಯ ನೈವೇದ್ಯ ಪರಿಕರಗಳು ಯಾವುದು ಇಲ್ಲದ ತೀರಾ ಖಾಸಗಿಯಾದ ಒಂದು ಆರಾಧನೆ. ಪರಮಾತ್ಮನ ರೂಪ ನಮ್ಮ ಎಣಿಕೆಯಂತೆ ಕಲ್ಪಿಸಬೇಕು. ಯಾರೋ ಬರೆದಿಟ್ಟ ಚಿತ್ರವೂ ಅಲ್ಲ, ಯಾರೋ ಕೆತ್ತಿಕೊಟ್ಟ ಪ್ರತಿಮೆಯೂ ಅಲ್ಲ, ಅದಕ್ಕೆ ಯಾವುದೇ ಗುಡಿಯೂ ಇಲ್ಲ , ಪ್ರತಿಷ್ಠೆ ಅಭಿಷೇಕ ಯಾವುದೂ ಇಲ್ಲದ ಕೇವಲ ಅಂತರಂಗದ ಅನುಷ್ಠಾನ. ಇದಕ್ಕಿರುವ ಮೌಲ್ಯ ಯಾವ ಯಜ್ಞ ಯಾಗಾದಿಗಳಿಗೂ ಇಲ್ಲ. ಮಾಡುವ ಸರ್ವ ಕರ್ಮ ಫಲಗಳು ಒದಗಿ ಬರಬೇಕಾದರೆ ಸಂಧ್ಯಾವಂದನೆ ಅನುಷ್ಠಾನ ಮೊದಲು ಆಗಬೇಕು. ಅದು ಆಗಬೇಕಾದರೆ ಮೊದಲು ಗುರುವಿನ ಸ್ಮರಣೆಯಾಗಬೇಕು. ಹಾಗಾಗಿ ಎಲ್ಲಕ್ಕಿಂತಲೂ ಮೊದಲು ಈ ಪವಿತ್ರವಾದ ಕರ್ಮವನ್ನು ಬೋಧಿಸಿದ ಅಜ್ಜನ ನೆನಪಾಗುತ್ತದೆ. ಆನಂತರವೇ ದೇವರ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ.
ನಮ್ಮ ಸಂಸ್ಕಾರ ನಮ್ಮ ಆರಾಧನ ಕ್ರಮವೆಂದರೆ ವಿಗ್ರಹಾರಾಧನೆ. ಕಣ್ಣಿಗೆ ವೇದ್ಯವಾಗುವ ಭಾಷೆ ಇದು. ಪ್ರತಿಮೆಯ ರೂಪದಲ್ಲೇ ದೇವರನ್ನು ಸುಲಭದಲ್ಲೇ ಕಾಣುವ ಸಂಸ್ಕಾರ ನಮ್ಮದು. ಆದರೆ ಇದಕ್ಕಿಂತಲೂ ನಮ್ಮ ಭಾವನೆ ಗಾಢವಾಗುವುದು ಅಂತರಂಗದ ದರ್ಶನದಲ್ಲಿ. ಅಲ್ಲಿ ರೂಪವಿಲ್ಲ. ವಾಸ್ತವದಲ್ಲಿ ನಾವು ಕಾಣುವ ರೂಪಗಳು ಯಾರೋ ಬರೆದಿಟ್ಟ ಕೆತ್ತಿಕೊಟ್ಟ ಕಲ್ಪನೆಯ ಕೂಸುಗಳಾದರೆ ಅದಕ್ಕೊಂದು ಮಿತಿ ಅಲ್ಲಿಯೇ ನಿರ್ಣಯವಾಗಿಬಿಡುತ್ತದೆ. ಆದರೆ ಅಂತರಂಗದಲ್ಲಿ ಕಾಣುವ ರೂಪಕ್ಕೆ ನಾವೇ ಕತೃಗಳು. ನಮ್ಮ ಅಂತಃ ಸತ್ವದ ಪರಿಮಿತಿಯ ರೂಪಗಳು. ಅಜ್ಜನ ಉಪದೇಶದ ಸಾರ ಯಾವ ರೂಪದಲ್ಲಿ ಯಾವ ಗಹನಾರ್ಥ ಅಡಕವಾಗಿತ್ತೊ ತಿಳಿಯದು. ಆದರೆ ಅದು ಈಗ ವಾಸ್ತವದ ಸತ್ಯವಾಗಿ ಕಣ್ಣ ಮುಂದೆ ನಿಂತಹಾಗೆ ಭಾಸವಾಗುತ್ತದೆ. ಇಲ್ಲಿನ ಮೊದಲ ಹೆಜ್ಜೆಗೆ ಅಜ್ಜನ ಮಂತ್ರೋಪದೇಶವೇ ಕಾರಣವಾಗುತ್ತದೆ. ದೇವರು ಭಗವಂತ ಎಂದರೆ ಅದೊಂದು ಅರಿವು. ಅರಿವು ಅಂದರೆ ಜ್ಞಾನ. ಗುರುವಿನ ಉಪದೇಶವೇ ಜ್ಞಾನ. ಈ ಜ್ಞಾನದಲ್ಲೇ ಶ್ರೀಕೃಷ್ಣ ದರ್ಶನ. ಹಾಗಾಗಿಯೇ ಜ್ಞಾನ ರೂಪಿ ಭಗವಂತ. ಇಲ್ಲಿ ಜ್ಞಾನ ಎಂಬುದು ನಮ್ಮ ಸಾಮಾರ್ಥ್ಯಕ್ಕೆ ಹೊಂದಿಕೊಂಡಿರುತ್ತದೆ. ಸಮುದ್ರದ ಬದಿಯಲ್ಲಿ ತಂಬಿಗೆ ಹಿಡಿದು ನಿಂತಂತೆ. ನನ್ನಜ್ಜ ಆ ಸಾಗರದ ನೀರನ್ನು ನನ್ನ ಕೈಯ ತಂಬಿಗೆ ತುಂಬಿಸುತ್ತಾ ಇದ್ದಾರೆ. ತಂಬಿಗೆ ತುಂಬಿ ಬರುತ್ತದೆ. ಮತ್ತೆ ತುಳುಕುತ್ತದೆ. ಅದರಲ್ಲಿ ಇದ್ದ ನೀರಷ್ಟೇ ನನಗೆ ಪ್ರಾಪ್ತಿ. ಆದರೆ ಅಜ್ಜನ ಪ್ರಚೋದನೆ ಮತ್ತಷ್ಟು ಸಾಗರದತ್ತ ದೃಷ್ಟಿ ಹಾಯಿಸುವಂತೆ ಮಾಡುತ್ತದೆ. ಅಜ್ಜನ ಮಂತ್ರೋಪದೇಶ ಅದೊಂದು ದಿವ್ಯ ಅನುಭವ.