ಮುಷ್ಕರಗಳು, ಬಂದ್ ಗಳು ನಮ್ಮ ಕೇರಳಿಗರಿಗೆ ಹೊಸತಲ್ಲ. ಅದೊಂದು ಇಲ್ಲ ಎಂದರೆ ಇಲ್ಲಿ ಜೀವನವೇ ಇಲ್ಲವೇನೋ ಎನ್ನಿಸುವಷ್ಟು ಜನ ಅದಕ್ಕೆ ಮುಷ್ಕರದ ನಡುವಿನ ಹೋರಾಟಕ್ಕೆ ಒಗ್ಗಿಕೊಂಡಿದ್ದಾರೆ. ಬಾಲ್ಯದಲ್ಲಿ ನಮಗಂತು ಇದೊಂದು ಮಾಸಿಕದ ಪರ್ವಗಳಂತೆ. ಕೆಲವೊಮ್ಮೆ ಬಸ್ ಮುಷ್ಕರ ಶುರುವಾದರೆ ಒಂದು ವಾರಗಳ ತನಕ ಇರುತ್ತಿತ್ತು. ಪುಟ್ಟ ಜೀಪಿನಲ್ಲಿ ಒಂದಕ್ಕೆ ಎರಡು ಪಟ್ಟು ದುಡ್ಡು ತೆತ್ತು ಕಣ್ಣು ಮುಚ್ಚಿ ಕುಳಿತಂತೆ ಗೂಡಿನೊಳಗೆ ಮುಖಕ್ಕೆ ಮುಖ ತಾಗಿಸಿ ಕುಳಿತು ಪ್ರಯಾಣಿಸುವ ದಿನಗಳು ಇಂದಿಗೂ ನೆನಪಾಗಿ ಛೇ ಅದೆಷ್ಟು ಸುಂದರ ಅಂತ ಅನ್ನಿಸಿಬಿಡುತ್ತದೆ. ಆ ಕಷ್ಟಗಳಲ್ಲೂ ಇದ್ದ ಸುಖ ಸೌಂದರ್ಯ ಮರೆಯುವುದಕ್ಕಿಲ್ಲ. ಉಪ್ಪಳದಿಂದ ಪೈವಳಿಕೆ ಬಾಯಾರಿಗೆ ಹತ್ತು ಹನ್ನೆರಡು ಕಿಲೋಮೀಟರ್ ದೂರವಾದರೂ ಬೆಂಗಳೂರಿನಿಂದ ಮಂಗಳೂರಿಗೆ ಹೋದಾಗ ಸಿಗದ ಅನುಭವ ಇಲ್ಲಿ ಸಿಕ್ಕಿಬಿಡುತ್ತಿತ್ತು. ಪರಿಚಯ ಇಲ್ಲದ ಮುಖಗಳೇ ಇಲ್ಲಿ ಇಲ್ಲ. ಬೆಂಗಳೂರಲ್ಲಾದರೆ ಒಮ್ಮೆ ನೋಡಿದ ಮುಖವನ್ನು ಮತ್ತೊಮ್ಮೆ ಜನ್ಮದಲ್ಲಿ ನೋಡುತ್ತೇವೆ ಎಂಬ ಭರವಸೆ ಇಲ್ಲ. ಅಷ್ಟೂ ಅಪರಿಚಿತರು. ಒಂದು ವೇಳೆ ಪರಿಚಯ ಇದ್ದರೂ ಸಂಬಂಧವೇ ಇಲ್ಲದಂತೆ ಮುಖ ಮುದುಡಿಸಿ ಮೌನ ಸನ್ಯಾಸಿಗಳಾಗಿಬಿಡುತ್ತೇವೆ. ಜತೆಗೆ ಮೊಬೈಲ್ ಇದ್ದರೆ ಮುಗಿಯಿತು. ಬೇರೆ ಪ್ರಪಂಚ ಇಲ್ಲ. ಇದರೆ ನಡುವೆ ಉಪ್ಪಳದ ಜೀವನ ನೆನಪಾಗುವಾಗ.....ಛೇ ಅದು ಮುಗಿದು ಹೋದ ಸಿನಿಮಾ ಕಥೆಯಾ ಅಂತ ಅನ್ನಿಸಿಬಿಡುತ್ತದೆ. ನಮ್ಮ ಉಪ್ಪಳದ ಜನರಿಗೊಂದು ಸ್ವಭಾವ ಇದೆ, ಕೇರಳದಲ್ಲಿ ಮುಷ್ಕರ ಬಂದ್ ಆದರೆ ಅತ್ತ ಕರ್ನಾಟಕಕ್ಕೆ ಓಡಿ ಬಿಡುವುದು, ಅಲ್ಲಿ ಯಾವ ಕೆಲಸ ಇದೆ ಅಥವಾ ಊರು ಸುತ್ತುವುದಕ್ಕೆ ಹೋಗಿ ಬಿಡುವುದು. ಹೀಗೆ ಬಂದ್ ಅನುಭವವಾಗದಂತೆ ಜೀವನ ಕಳೆಯುವವರೂ ಆಗ ಇದ್ದರು. ಈ ಬಂದ್ ನ ನಡುವೆ ಒಂದು ವಿಪರ್ಯಾಸವೆಂದರೆ ಅದು ನಮ್ಮ ಶೆಟ್ಟರ ಶಂಕರ್ ವಿಠಲ್ ಬಸ್ಸು. ಮುಂಜಾನೆ ಆರು ಗಂಟೆಗೆ ಉಪ್ಪಳ ಬಿಡುವ ಬಸ್ಸು ಪುನಃ ತವರಿಗೆ ವಾಪಾಸಾಗುವುದು ಸಂಜೆ ಆರಕ್ಕೆ. ಹೀಗಾಗಿ ಎಂತಹ ಬಂದ್ ಇದ್ದರೂ ಶೆಟ್ಟರ ಬಸ್ಸಿಗೆ ಬಾಧಕ ಇರುತ್ತಿರಲಿಲ್ಲ. ಕೆಲವೊಮ್ಮೆ ನಮ್ಮ ಮುಷ್ಕರ ಬಾಂಧವರಿಗೆ ಈ ಬಸ್ಸನ್ನೂ ನಿಲ್ಲಿಸುವ ಹಟ ಬರುತ್ತಿತ್ತು. ಆಗ ನಮಗೆಲ್ಲ ಅನ್ನಿಸುತ್ತಿತ್ತು ಛೇ ಬಡಪಾಯಿ ಶೆಟ್ಟರ ಬಸ್ಸು.
ಉಪ್ಪಳ ಕೇರಳದ ತುತ್ತ ತುದಿಯಲ್ಲಿರುವ ಕರ್ನಾಟಕಕ್ಕೆ ತಾಗಿಕೊಂಡಿರುವ ಕರ್ನಾಟಕ ಬೇಕೋ ಕೇರಳ ಸಾಕೋ ಈ ದ್ವಂದ್ವದಲ್ಲೆ ಹಗಲು ರಾತ್ರಿಯ ನಿರೀಕ್ಷೆಯಲ್ಲಿ ದಿನಗಳನ್ನು ಕಳೆಯುವ ಊರು. ಉಪ್ಪಳದವರಿಗೆ ಪ್ರಾಮಾಣಿಕವಾಗಿ ಕೇಳಿದರೆ ಅವರು ಎರಡನ್ನೂ ಅಪ್ಪಿಕೊಳ್ಳುವ ವಿಶಾಲ ಹೃದಯವನ್ನು ತೋರಿಸುತ್ತಾರೆ. ಕೇರಳವೂ ಚಂದ...ಮಲಯಾಳಂ ನ ಸೊಗಸು ಕೇರಳದ ಸಂಸ್ಕಾರ ಒಂದೆಡೆಯಾದರೆ, ಅಚ್ಚ ಕನ್ನಡದ ಭಾಷಾ ಮೆರುಗಿನ ಸಂವಹನ ಇನ್ನೊಂದೆಡೆ. ಏನು ಬೇಕೆಂದರೂ ಹತ್ತಿರದ ಮಂಗಳೂರ್ರಿಗೆ ಹೋಗುವಾಗ , ಕೆಲವೊಂದಕ್ಕೆ ಕರ್ನಾಟಕವನ್ನು ಅಪ್ಪಿದರೆ ಇನ್ನು ಕೆಲವದಕ್ಕೆ ಕೇರಳವೇ ಇರಲಿ ಅಂತ ಸಂತುಷ್ಟರಾಗಿಬಿಡುತ್ತಾರೆ. ಪುಟ್ಟ ಮಗುವಿನಲ್ಲಿ ಅಪ್ಪ ಬೇಕೋ ಅಮ್ಮ ಬೇಕೋ ಎಂದು ಕೇಳಿದರೆ ಯಾರನ್ನು ಬೇಕು ಅಂತ ಹೇಳಬೇಕು? ಅಪ್ಪ ಹೊರಗೆ ಹೋಗುವಾಗ ಆ ಅಪ್ಪನ ಹೆಗಲಿಗೆ ಜೋತು ಬಿದ್ದು ಹೋದರೆ, ಈ ಅಪ್ಪ ಯಾವಾಗಲೂ ಮನೆಯಲ್ಲಿರಬಾರದೇ ಅಂತ ಸುತ್ತದೆ. ಅಪ್ಪನೇ ಬೇಕು ಎನ್ನುವಾಗ ಅಮ್ಮನ ಅಕ್ಕರೆಯ ಪ್ರೀತಿಯ ಆರೈಕೆಯ ಸೆಳೆತ ಇನ್ನೊಂದೆಡೆ. ಇಬ್ಬರು ಮನೆಯಲ್ಲಿದ್ದರೆ ಅದೆಂತಹ ಸೊಗಸು. ಹಾಗೆ ಅತ್ತ ಕೇರಳ ಇತ್ತ ಕರ್ನಾಟಕ ಎರಡು ಅಪ್ಪ ಅಮ್ಮನಂತೆ ನಡುವಲ್ಲಿ ನಮ್ಮ ಕೈ ಹಿಡಿದು ಎಳೆದು ತಬ್ಬಿಕೊಳ್ಳುತ್ತಿದ್ದರೆ ಈ ಉಪ್ಪಳದ ಪರಿಸರಕ್ಕೆ ಮಾರುಹೋಗಬೇಕು.
ನಮ್ಮ ಉಪ್ಪಳ ಮತ್ತು ಸುತ್ತ ಮುತ್ತಲಿನ ಊರುಗಳ ಒಂದು ವಿಶೇಷತೆ ಎಂದರೆ, ಅದು ಎನೂ ಇಲ್ಲದ ಎಲ್ಲವೂ ಇರುವ ಒಂದು ವಿಶಿಷ್ಟ ಪರಿಸರವನ್ನು ಹೊಂದಿದೆ. ಅತ್ತ ಕೇರಳವೂ ಅಲ್ಲದ ಇತ್ತ ಕರ್ನಾಟಕವೂ ಅಲ್ಲದ ಒಂದು ವೈವಿಧ್ಯತೆ ಇಲ್ಲಿದ್ದರೆ, ಕನ್ನಡ ಮಲಯಾಳಂ ಜತೆಗೆ ಹಿಂದಿ ಉರ್ದು ಕೊಂಕಣಿ ಇದೆಲ್ಲದಕ್ಕೆ ಸಂವಹನವಾಗಿ ತುಳು ಹೀಗೆ ವೈವಿಧ್ಯ ಮಯ ಸಂಸ್ಕಾರ ಇಲ್ಲಿದ್ದರೆ , ಹಿಂದಿನ ಇಲ್ಲಿನ ಜೀವನ ಆ ದಿನಗಳು ನಿಜಕ್ಕೂ ಒಂದು ಅಹ್ಲಾದಮಯ ನೆನಪುಗಳು ಇಲ್ಲಿ ಸುತ್ತಿಕೊಂಡುಬಿಟ್ಟಿದೆ. ಅತ್ತ ಹಳ್ಳಿಯೂ ಅಲ್ಲದ ಇತ್ತ ನಗರವೂ ಅಲ್ಲದ ಸುಂದರ ಕಡಲಿನ ತಡಿಯಲ್ಲಿರುವ ಇಲ್ಲಿನ ಪ್ರಾಕೃತಿಕ ಸೌಂದರ್ಯದ ಜತೆಗೆ ದಶಕ ಪೂರ್ವದ ದಿನಗಳ ಸ್ಮರಣೆಗಳು ಅದಕ್ಕೊಂದು ಮೆರುಗನ್ನು ಕೊಟ್ಟಂತೆ. ಅವುಗಳನ್ನು ಸ್ಮರಿಸುವುದೇ ಒಂದು ಸುಂದರ ಅನುಭವ.
ಇನ್ನು ಶೆಟ್ಟರ ಬಸ್ಸು, ಬಾಲ್ಯದಲ್ಲಿ ನಮಗೆಲ್ಲ ಬೆಳಗಾಯ್ತು ಮತ್ತು ಸಾಯಂಕಾಲವಾಯ್ತ ಎಂದು ಗೊತ್ತಾಗಿಬಿಡುತ್ತಿದ್ದದ್ದು ಶೆಟ್ರ ಬಸ್ಸಿನ ಸಂಚಾರದಲ್ಲಿ. ಶೆಟ್ರ ಬಸ್ಸು ಬೆಳಗ್ಗೆ ಆರು ಘಂಟೆಗೆ ಕುರ್ಚಿಪಳ್ಳ (ಉಪ್ಪಳ) ದಿಂದ ಪುತ್ತೂರು ಮಂಗಳೂರಿಗೆ ಹೋಗುವಾಗ ಬೆಳಗಾಯ್ತು ಎಂದು ಹಿರಿಯರು ಸಿಹಿನಿದ್ದೆಯಲ್ಲಿದ್ದ ನಮ್ಮನ್ನು ಎಚ್ಚರಿಸುತ್ತಿದ್ದರು. ಇನ್ನು ಸಾಯಂಕಾಲ ಅದೇ ಬಸ್ಸು ಮಂಗಳೂರಿನಿಂದ ಪುತ್ತೂರಿಗೆ ಬಂದು ಅಲ್ಲಿಂದ ಉಪ್ಪಳಕ್ಕೆ ಹಿಂದಿರುಗಿ ಬರುವಾಗ ಸಾಯಂಕಾಲ ಆರು ಘಂಟೆಯಾಗುತ್ತಿತ್ತು. ಆಗ ಹಿರಿಯರು ಕತ್ತಲಾಯ್ತು ಕೈ ಕಾಲು ತೊಳೆದು ಭಜನೆ ಮಾಡುವಂತೆ ಹೇಳುತ್ತಿದ್ದರು. ಇದರ ನಡುವೆ ದಿನದಲ್ಲಿ ಆ ಬಸ್ಸನ್ನು ಕಾಣುವುದಕ್ಕಿರಲಿಲ್ಲ. ಬೆಳಗ್ಗೆ ಹಾಲಿನ ತಂಬಿಗೆ ಹಿಡಿದುಕೊಂಡು ಹಾಲು ಇರುವ ಮನೆಗೆ ಹೋಗಿ ಬರುತ್ತಿದ್ದರೆ ಆ ಹಾಲಿನ ಮಧುರ ನೆನಪು ಶೆಟ್ಟರ ಬಸ್ಸಿನೊಂದಿಗೆ ಬೆಸೆದುಕೊಂಡಂತೆ ಇದೆ.
ಶೆಟ್ರ ಬಸ್ಸು ಶಂಕರ್ ವಿಠಲ್ ಕಂಪೆನಿಯ ಬಸ್ಸಾದರೂ ಅದನ್ನು ಊರವರು ಕರೆಯುತ್ತಿದ್ದದ್ದು ಶೆಟ್ರ ಬಸ್ಸು. ಅದರಲ್ಲಿ ಕಂಡಕ್ಟರ್ ಚಕ್ಕರ್ ಇತ್ಯಾದಿ ಇದ್ದರೂ ಬಸ್ಸು ಡ್ರೈವರ್ ಹೆಸರಲ್ಲೇ ಕರೆಯಲ್ಪಡುತ್ತಿದ್ದದ್ದು ವಿಚಿತ್ರ. ಅದೇ ರೀತಿ ಕುರ್ಚಿಪ್ಪಳ್ಳ ಪುತ್ತೂರು ನಡುವೆ ಓಡುವ ಫೀರು ಸಾಯಿಬರ ಬಸ್ಸು, ವಿಟ್ಲ ಪೆರ್ಮುದೇ ಹೋಗುವ ಗೋಪಾಲಣ್ಣನ ಬಸ್ಸು ಇವೆಲ್ಲ ಮಂಗಳೂರಿನಲ್ಲಿದ್ದ ಶಂಕರ್ ವಿಟ್ಠಲ್ ಕಂಪೆನಿಯ ಬಸ್ಸುಗಳು.
ಶೆಟ್ರ ಬಸ್ಸು ಬೆಳಗ್ಗೆ ಉಪ್ಪಳದಿಂದ ಹೊರಟರೆ ಬಾಯಾರುಕನ್ಯಾನ ವಿಟ್ಲ ಪುತ್ತೂರಿಗೆ ಹೋಗಿ, ಆನಂತರ ಅಲ್ಲಿಂದ ಮಾಣಿ ಬಂಟ್ವಾಳ ಮೂಲಕ ಮಂಗಳೂರಿಗೆ ಹೋಗುತ್ತಿತ್ತು. ಅದರ ಚಾಲಕರಾಗಿದ್ದವರು ಶ್ರೀ ಮಹಾಬಲ ಶೆಟ್ಟರು. ಬೆಳಗ್ಗೆ ಆರು ಘಂಟೆಗೆ ಬಸ್ಸು ಹೋಗುತ್ತಿದ್ದುದರಿಂದ ಪುತ್ತೂರು ಕಡೆಗೆ ಹೋಗುವವರು ಬೆಳಗ್ಗೆ ಸ್ನಾನ ಮಾಡಿ ಪಂಚೆ ವಸ್ತ್ರ ತೊಟ್ಟು ಕುಟುಂಬ ಸಹಿತ ರಸ್ತೆ ಬದಿಯಲ್ಲಿ ಕಾದು ನಿಲ್ಲುತ್ತಿದ್ದದ್ದು ಸಾಮಾನ್ಯವಾಗಿತ್ತು. ಸೂರ್ಯೋದಯದೊಂದಿಗೆ ಇದೊಂದು ನಿತ್ಯ ಕಾಣುವ ದೃಶ್ಯವಾಗಿತ್ತು. ಪಡುಗಡಲಿನ ದಿಕ್ಕಿನಿಂದ ಪೂರ್ವದ ಕಡೆಗೆ ಸೂರ್ಯನಿಗಭಿಮುಖವಾಗಿ ಶೆಟ್ರ ಬಸ್ಸು ಸಂಚರಿಸುತ್ತಿದ್ದರೆ ತನ್ನ ಹಾರನ್ ಶಬ್ದದಿಂದ ಊರವರನ್ನು ಎಚ್ಚರಿಸುತ್ತಾ ಸಾಗುತ್ತಿತ್ತು. ಮಹಾಬಲ ಶೆಟ್ಟರಿಗೆ ಉಪ್ಪಳದಿಂದ ಪುತ್ತೂರು ಮಂಗಳೂರಿನ ತನಕ ಊರವರ ಪರಿಚಯ ವಿರುತ್ತಿತ್ತು. ಬಸ್ಸು ಚಲಾಯಿಸುವುದರೊಂದಿಗೆ ಊರವರ ಸಣ್ಣ ಪುಟ್ಟ ವಸ್ತುಗಳನ್ನು ಒಂದೂರಿನಿಂದ ಇನ್ನೊಂದೂರಿಗೆ ಕೊಂಡೊಯ್ಯುವ ಪಾರ್ಸಲ್ ಸರ್ವೀಸು ಸಹ ಇರಿತ್ತಿತು. ಶೆಟ್ಟರು ಒಂದೂ ಸಹ ಅಪಘಾತ ವಿಲ್ಲದೆ ಚಾಲಕನಾಗಿ ಕೆಲಸ ಮಾಡಿದ ಹಿರಿಮೆಯನ್ನು ಗಳಿಸಿದ್ದರು.
ಶೆಟ್ರ ಬಸ್ಸು ಸಾಯಂಕಾಲ ಉಪ್ಪಳದಲ್ಲಿ ಹಾಲ್ಟ್ ಆಗಿ ವಿರಮಿಸುತ್ತಿತ್ತು. ರೈಲ್ವೇ ಸ್ಟೆಶನ್ ರಸ್ತೆಯ ಕೊನೆಯ ತಿರುವಿನಲ್ಲಿ ಬಸ್ಸಿಗಾಗಿ ಒಂದು ಶೆಡ್ ಇತ್ತು. ಅಲ್ಲೆ ಶಂಕರ್ ವಿಠಲ್ ಕಂಪೆನಿಯ ಬ್ರಾಂಚ್ ಆಫೀಸು ಕೂಡಾ ಇರುತ್ತಿತ್ತು. ಹೆಚ್ಚಾಗಿ ಮಂಗಳೂರಿನಿಂದ ಟಯರ್ ಇತ್ಯಾದಿ ಬಿಡಿಭಾಗಗಳು ಶೆಟ್ಟರ ಬಸ್ಸಿನಲ್ಲೇ ಬಂದು ಉಳಿದ ಬಸ್ಸುಗಳು ಅಲ್ಲಿಂದಲೇ ಅದನ್ನು ಏರಿಸಿಕೊಳ್ಳುತ್ತಿದ್ದವು. ಬಹಳ ಇಕ್ಕಟ್ಟಾದ ರಸ್ತೆ. ಹಳೆಯ ಕಟ್ಟಡಗಳು. ಬಹುಶಃ ಹೆಚ್ಚಿನ ಕಟ್ಟಡಗಳು ಬ್ರಿಟೀಷರ ಕಾಲದವುಗಳು. ಅದೇ ವಾಸ್ತು ವಿನ್ಯಾಸವನ್ನು ನೆನಪಿಗೆ ತರುತ್ತಿತ್ತು. ಅಲ್ಲೇ ಇದ್ದ ಪರಿಸರದಲ್ಲಿ ಸಾಯಂಕಾಲದ ಕತ್ತಲೆ ಹೊತ್ತಲ್ಲಿ ಹೋಗುತ್ತಿದ್ದರೆ ತಾಳ ಬಡಿದು ಭಜನೆ ಮಾಡುವ ಶಬ್ದ ಕೇಳುತ್ತಿತ್ತು. ಶೆಟ್ಟರು ಬಸ್ಸಿನ ಒಳಗೆ ಒಬ್ಬರೇ ಕುಳಿತು ತಾಳ ಬಡಿದು ಭಜನೆ ಹೇಳುತ್ತಿದ್ದುದು ಸಾಮಾನ್ಯವಾಗಿತ್ತು. ಆ ನೀರವ ಮೌನದಲ್ಲಿ ಶೆಟ್ಟರು ಮಾಡುವ ಭಜನೆ ಜತೆಗೆ ಟಿಣ್ ಟಿಣ್ ಎನ್ನುವ ತಾಳದ ಸದ್ದು ನನಗೆ ಈಗಲೂ ರೈಲ್ವೇ ಸ್ಟೇಶನ್ ರಸ್ತೆಯಲ್ಲಿ ಹೋದರೆ ಕೇಳಿಸುತ್ತದೆ. ಪರಿಸರ ಕತ್ತಲೆಗೆ ಜಾರುತ್ತಿದ್ದಂತೆ ಶೆಟ್ಟರು ಬಸ್ಸಿನ ಒಳಗೆ ಇದ್ದ ಶ್ರೀಕೃಷ್ಣನ ಫೋಟೋಕ್ಕೆ ದೀಪ ಹಚ್ಚಿ ಸೀಟುಗಳ ಸಂದಿಯಲ್ಲಿ ಕುಳಿತು ಭಜನೆ ಮಾಡುತ್ತಾರೆ. ಅದೆಂತಹಾ ತನ್ಮಯತೆ. ಆ ಕತ್ತಲೆಯ ಮೌನದಲ್ಲಿ...ಆಗೊಮ್ಮೆ ಈಗೊಮ್ಮೆ ರೈಲು ಹೋಗುವುದು ಬಿಟ್ಟರೆ ಅಲ್ಲಿ ಬೇರೆ ಯಾವ ಶಬ್ದವೂ ಇರುವುದಿಲ್ಲ. ಕೆಲವೊಮ್ಮೆ ಇವರ ಭಜನೆಗೆ ಜತೆಗೆ ಧ್ವನಿ ಸೇರಿಸುವುದಕ್ಕೆ ಹತ್ತಿರದ ಮಸೀದಿಯಿಂದ ಬಾಂಗ್ ಕೂಡಾ ಕೇಳಿ ಒಂದು ಮತ ಸೌಹಾರ್ದತೆಯ ಪರಿಮಳ ಆವರಿಸಿಬಿಡುತ್ತದೆ. ಹಲವು ಸಲ ನನಗೆ ಬಸ್ಸಿನ ಒಳಗೊಮ್ಮೆ ಇಣುಕಿ ನೋಡಬೇಕು ಎಂಬ ಕುತೂಹಲ ಇತ್ತು, ಒಂದು ದಿನ ನಿಶ್ಯಬ್ದವಾಗಿ ಹತ್ತಿ ನೋಡಿದ್ದೆ. ಶೆಟ್ಟರು ತನ್ಮಯರಾಗಿ ಒಬ್ಬರೇ ಗಾನ ಯೋಗಿಯಂತೆ ಭಜನೆ ಮಾಡುತಿದ್ದರು. ಆ ಪರಿಸರ ಮತ್ತು ಶೆಟ್ಟರ ಭಜನೆ ನನಗೆ ಈಗಲೂ ನೆನಪಿದೆ. ಅಲ್ಲೆ ಒಂದು ತಮಿಳ ಅಣ್ಣಾಚಿಯ ಕ್ಷೌರದ ಅಂಗಡಿ ಇತ್ತು. ಆ ಅಣ್ಣಾಚಿಯ ಮನೆ ನಮ್ಮ ಪೈವಳಿಕೆಯಲ್ಲೇ ಇತ್ತು. ಆತ ಬಹಳ ಪರಿಚಿತ ಮಾತ್ರವಲ್ಲ ಒಬ್ಬ ಉತ್ತಮ ಮನುಷ್ಯ. ಸಾಮಾನ್ಯವಾಗಿ ನಾನು ಅಲ್ಲಿಗೆ ಕ್ಷೌರಕ್ಕೆ ಹೋಗುತ್ತಿದ್ದೆ. ಹೀಗೆ ಈ ಎರಡು ಸಂಗತಿಗಳು ರೈಲ್ವೇ ಸ್ಟೇಶನ್ ರಸ್ತೆಯ ಆ ತಿರುವಿಗೆ ಬೆಸೆದುಕೊಂಡಿತ್ತು.
ಕೆಲವು ದಿನಗಳ ಹಿಂದೆ ಆ ರಸ್ತೆಯಲ್ಲೆ ನಡೆದುಕೊಂಡು ಹೋಗುವ ಮನಸ್ಸಾಯಿತು. ಉಪ್ಪಳದ ಮೇಲಿನ ಪೇಟೆಯಿಂದ ಹೆಜ್ಜೆ ಇಡುತ್ತಾ ರೈಲ್ವೇ ಸ್ಟೇಶನ್ ರಸ್ತೆಯಲ್ಲಿ ನಡೆಯುತ್ತಾ ಹೋದರೆ ಅದೆಂತಹಾ ಅನುಭವ? ಹಳೆಯ ಘಟನೆಗಳು ವ್ಯಕ್ತಿಗಳು ಒಂದೊಂದಾಗಿ ನೆನಪಾಗುತ್ತಿದ್ದರೆ ಆ ತಿರುವು ಹತ್ತಿರಬರುತ್ತಿದ್ದಂತೆ ಶೆಟ್ಟರ ಬಸ್ಸು ಜತೆಗೆ ಶೆಟ್ಟರ ಭಜನೆ ನೆನಪಾಯಿತು. ಒಂದಷ್ಟು ಹೊತ್ತು ಅಲ್ಲೇ ಮೌನವಾಗಿ ನಿಂತೆ...ಹೌದು ಶೆಟ್ಟರ ಭಜನೆಯ ಧ್ವನಿ ಇನ್ನೂ ಕೇಳುವಂತೆ ಭಾಸವಾಯಿತು. ಶೆಟ್ಟರು ಶ್ರೀಕೃಷ್ಣನ ಪರಮ ಭಕ್ತರು. ಮುಂದೆ ಒಮ್ಮೆ ಅವರಿಗೆ ಸ್ವಂತ ಬಸ್ಸು ಬರುವಾಗ ಅದರ ಹೆಸರು ಕೂಡ ಶ್ರೀ ಕೃಷ್ಣ ಮೋಟರ್ ಸರ್ವೀಸ್ ಅಂತ ಇತ್ತು. ಹಾಗಾಗಿ ಶೆಟ್ಟರು ಮತ್ತು ಭಗವಂತನ ನೆನಪು ಒಟ್ಟಿಗೇ ಆಗುತ್ತಿದ್ದರೆ ಹಳೆಯ ನೆನಪುಗಳಿಗೆ ಜಾರಿದ ಅನುಭವವಾಯಿತು.
No comments:
Post a Comment