ಒಂದು ಸಣ್ಣ ಕಥೆ ಅಂತ ಪರಿಗಣಿಸಿ ಇಲ್ಲ ಯಾವುದೋ ಘಟನೆ ಅಂತ ತೆಗೆದುಕೊಳ್ಳಿ, ಆ ಅಪ್ಪ ಅಮ್ಮ ತಮ್ಮ ಏಕೈಕ ಗಂಡು ಮಗುವನ್ನು ಬಹಳ ಅಕ್ಕರೆಯಿಂದ ಶಿಸ್ತುಬದ್ದವಾಗಿ ಬೆಳೆಸಿದರು. ಆ ಮಗುವಿಗೆ ಬೇಕಾದ ಪೋಷಕಾಹಾರ ಮಾತ್ರವಲ್ಲ ಎಲ್ಲವೂ ನಿದ್ದೆ ಆಹಾರ ಎಲ್ಲವನ್ನು ಶಿಸ್ತು ಬದ್ದವಾಗಿ ನೀಡುತ್ತಾ ಬೆಳೆಸಿದರು. ಅದು ಹೇಗಿತ್ತು ಎಂದರೆ ಮಗು ಬೆಳೆದು ಶಾಲೆಗೆ ಹೋಗುವ ತನಕ ಮಗುವಿಗೆ ಚಾಕಲೇಟ್ ಬಿಸ್ಕತ್ ಎಂಬ ತಿಂಡಿ ಇದೆ ಎಂದೇ ಪರಿಚಯವಿರಲಿಲ್ಲ. ಹೊರಗೆ ಹೋದರೂ ಸಹ ಅದನ್ನು ಮಗುವಿನ ಗಮನಕ್ಕೆ ಬಾರದಂತೆ ಪ್ರಯತ್ನದಿಂದ ಸಾಕಿದರು. ನೆಂಟರಿಷ್ಟರು ಯಾರೇ ಮನೆಗೆ ಬಂದರೂ ಚಾಕಲೇಟ್ ಮುಂತಾದ ಅಂಗಡಿ ತಿಂಡಿಗಳನ್ನು ಮನೆಗೆ ತಾರದಂತೆ ಎಚ್ಚರ ವಹಿಸಿದ್ದರು. ಹೀಗೆ ಮಗು ಕೇವಲ ಮನೆಯ ಆಹಾರ ಮಾತ್ರವಲ್ಲ...ಆ ಮಗುವಿಗೆ ಕೆಟ್ಟ ಶಬ್ದವನ್ನೂ ಕೇಳುವುದಕ್ಕೆ ಆಸ್ಪದ ಕೊಡಲಿಲ್ಲ. ಅಪ್ಪ ಅಮ್ಮ ಸ್ವತಃ ತಾವೂ ಪರಸ್ಪರ ಜಗಳವಾಡದೇ ಜಗಳವಾಡಿದರೂ ಮಗುವಿನ ಗಮನಕ್ಕೆ ಬಾರದಂತೆ ಬಹಲ ಜತನದಿಂದ ಸಲಹಿದರು. ಮಗು ಸುಸಂಸ್ಕೃತವಾಗಿ ಪರಿಶುದ್ದ ಮನಸ್ಸಿನಿಂದ ಬೆಳೆಯಬೇಕು ಎಂಬುದೇ ಅವರ ಉದ್ದೇಶವಾಗಿತ್ತು. ತಮ್ಮ ಮಗು ಸಮಾಜಕ್ಕೆ ಒಂದು ಒಳ್ಳೆಯ ಕೊಡುಗೆಯಾಗಿ ಬೆಳೆಯಬೇಕು ಎಂಬ ಉದಾತ್ತ ಧ್ಯೇಯದೊಂದಿಗೆ ಮಗುವನ್ನು ಬೆಳೆಸಿದರು. ಕೆಟ್ಟದ್ದು ನೋಡದ ಕೆಟ್ಟದ್ದು ಆಡದ ಬೇಡದೇ ಇರುವುದನ್ನು ಸೇವಿಸದ ಆ ಮಗು ಬೆಳೆಯಿತು. ಕೇಳುವುದಕ್ಕೆ ಬಹಳ ಸುಂದರವಿದೆ. ಒಂದು ಆದರ್ಶ ಸಮಾಜ ಹೀಗೆ ರೂಪುಗೊಳ್ಳಬೇಕು ಎಂದನಿಸುತ್ತದೆ. ಅಷ್ಟೇ ಆದರೆ ಸಾಕೆ? ಹಕ್ಕಿ ಗೂಡು ಬಿಟ್ಟು ಹಾರುವ ದಿನ ಬರಲೇ ಬೇಕಲ್ಲ. ಪ್ರಥಮವಾಗಿ ವಿದ್ಯೆ ಕಲಿಯುವುದಕ್ಕೆ ಅಪ್ಪ ಮಗುವನ್ನು ಶಾಲೆಗೆ ಸೇರಿಸಿದ. ಬಹಳ ಎದೆಯುಬ್ಬಿಸಿ ತಾನೇನೊ ಘನ ಕಾರ್ಯಮಾಡಿದ ಸಂತೃಪ್ತಿ ಇತ್ತು. ಶಾಲೆಯ ಅಧ್ಯಾಪಕ ವೃಂದ ಎಲ್ಲರೂ ತನ್ನ ಮಗುವನ್ನು ಹೊಗಳುತ್ತಾರೆ. ಅದನ್ನು ಸಾಕಿ ಸಲಹಿದ ಅಪ್ಪ ಅಮ್ಮನ ಬಗ್ಗೆ ಹೇಳುತ್ತಾರೆ ಎಂದು ನಿರೀಕ್ಷೆಯಲ್ಲೇ ಕಳೆದ. ಇದು ಸಹಜ ತಾನೆ? ಒಂದೂ ಕೆಟ್ಟ ಗುಣಗಳಿರದ ಶುದ್ದ ಸುಸಂಸ್ಕೃತ ಮಗುವನ್ನು ಹೊಗಳದೇ ಇರುವುದಕ್ಕೆ ಸಾಧ್ಯವೇ? ಅದೂ ಈ ಕಾಲದಲ್ಲಿ.
ಸರಿ ಒಂದೆರಡು ದಿನ ಕಳೆಯಿತು. ಒಂದು ದಿನ ಮಗುವನ್ನು ಮಡಿಲಲ್ಲಿ ಕುಳ್ಳಿರಿಸಿ ಮಗುವಿನೊಂದಿ ಅಕ್ಕರೆಯಿಂದ ಕೇಳಿದ ಶಾಲೆಯಲ್ಲಿ ಏನು ಕಲಿಸಿದರು? ಟೀಚರ್ ಏನು ಹೇಳಿದರು? ಟೀಚರ್ ಹೇಳಿ ಕೊಟ್ಟದ್ದು ಎಲ್ಲಾ ಬರುತ್ತದೇಯೆ? ಹೀಗೆ ಕೇಳುತ್ತಾ ಹೋದರೆ ಮಗು ಪ್ರತಿಯೊಂದಕ್ಕು ಸಮರ್ಪಕ ಉತ್ತರವನ್ನೇ ಕೊಡುತ್ತಿತ್ತು. ಆತನಿಗೆ ಬಹಳ ಖುಷಿಯಾಯಿತು. ಹೆಂಡತಿಯನ್ನು ಕರೆದು ಹೇಳಿದ ನೋಡು ಮಗು ಹೀಗೆ ಬೆಳೆಯಬೇಕು ಎಂದು ಹೇಳಿದ. ಅಪ್ಪ ಅಮ್ಮ ಖುಷಿಯಲ್ಲಿದ್ದರೆ ಮಗು ಕೊನೆಯಲ್ಲಿ ಹೇಳಿತು. ತನ್ನದೇ ಭಾಶೆಯಲ್ಲಿ ಹೇಳಿತು. ಎಲ್ಲ ಸರಿ, ಟೀಚರ್ ಹೇಳಿದವುಗಳು ಎಲ್ಲವು ಅರ್ಥವಾಗುತ್ತದೆ. ಆದರೆ ಅಷ್ಟೇ ಅಲ್ಲ ಅವರು ಹೇಳದೇ ಇರುವ ಅರ್ಥವಾಗದೇ ಇರುವದ್ದು ಬೇರೆಯೇ ಇದೆ.
ಇಬ್ಬರಿಗೂ ಆಶ್ಚರ್ಯವಾಯಿತು. ಏನದು? ಮಗು ಮುಗ್ದವಾಗಿ ಹೇಳಿತು. ನಿಜಕ್ಕೂ ಅದು ಆ ಮಗುವಿಗೆ ಗೊತ್ತೇ ಇರಲಿಲ್ಲ...ಬೋ ...ಮಗ ಅಂದರೆ ಏನೂ? ಹಲ್ಕಾ ನನ್ಮಗ ಅಂದರೆ ಏನು? ಹೀಗೆ ಕೇಳುತ್ತಾ ಹೋದರೆ ಅಪ್ಪ ಅಮ್ಮ ಕಲ್ಲಾಗಿ ನಿಂತು ಬಿಟ್ಟರು. ಅದೂ ಕೇಳಲಾಗದ ಶಬ್ದಗಳನ್ನು ಮಗುವಿನ ಬಾಯಲ್ಲಿ ಕೇಳಿದಾಗ ನಿಜಕ್ಕೂ ದಂಗಾಗಿ ಬಿಟ್ಟರು.
ಸಾರಾಂಶ ಇಷ್ಟೇ...ಜಗತ್ತಿನಲ್ಲಿ ಒಳ್ಳೆಯದೇ ತಿಳಿಯಬೇಕು, ಒಳ್ಳೆಯದನ್ನೇ ಕಲಿಯಬೇಕು. ಅದರಲ್ಲೇ ಬೆಳೆಯಬೇಕು ಎಂಬ ಉದ್ದೇಶ ಬಯಕೆ ಎನೋ ಸರಿ. ಸುಸಂಸ್ಕೃತ ವಿಚಾರಗಳು ಮಾತ್ರ ಬೇಕು ಎಂಬುದು ಸತ್ಯ. ಆದರೆ ಕೆಟ್ಟದ್ದು ಯಾವುದು ಅದು ಯಾಕೆ ಕೆಟ್ಟದ್ದು ಎಂಬುದರ ಪರಿಚಯವೂ ಇರಲೇ ಬೇಕಲ್ಲ. ಒಳ್ಳೆಯ ವಿಚಾರಗಳ ಅರಿವಿನೊಂದಿಗೆ ಕೆಟ್ಟ ವಿಚಾರ ತಿಳಿದಿರಬೇಕಾದದ್ದು ಅತ್ಯವಶ್ಯ. ಅದನ್ನು ತೋರಿಸಿ ಅದರ ಅರಿವಿನೊಂದಿಗೆ ಮನುಷ್ಯ ಬೆಳೆಯಬೇಕು. ಇಲ್ಲವಾದರೆ ರಾತ್ರಿ ಕಂಡ ಬಾವಿಗೆ ಹಗಲು ಬೀಳುವಂತಾಗಬಹುದು. ಹಗಲು ಕಂಡ ಬಾವಿಗೆ ರಾತ್ರಿ ಹುಡುಕಿಕೊಂಡು ಹೋಗಿ ಹಾರುವಂತಾಗಬಾರದಲ್ಲ್?
No comments:
Post a Comment