ಹೆಸರು ಕೇಳಿದರೆ ಹಲವರಿಗೆ ಅನ್ನಿಸಬಹುದು ಏನಿದರಲ್ಲಿ ವೈಶಿಷ್ಟ್ಯ. ಮೇಲು ನೋಟಕ್ಕೆ ಏನೂ ಇಲ್ಲದಿರಬಹುದು. ಕೆಲವೊಂದು ವಿಚಾರಗಳು, ವ್ಯಕ್ತಿಗಳು ವಸ್ತುಗಳು ವ್ಯಕ್ತಿ ರೀತಿಯಲ್ಲಿ ವೈಶಿಷ್ಟ್ಯ ಎನಿಸುವುದುಂಟು. ಒಬ್ಬರಿಗೇ ಏನೂ ಅಲ್ಲದಿರಬಹುದು , ಯಾರೋ ಒಬ್ಬರಿಗೆ ಅದುವೇ ಸರ್ವಸ್ವವಾಗಿಬಿಡುತ್ತದೆ. ಬದುಕಿನ ಅಮೂಲ್ಯಗಳಲ್ಲಿ ಒಂದಾಗಿರುತ್ತದೆ.
ಎರಡು ದಶಕಗಳ ಕೆಳಗೆ ಊರಲ್ಲಿ ನಮಗೊಂದು ಚಿಕ್ಕ ಉದ್ಯಮವಿತ್ತು. ಸುಸಂಸ್ಕೃತವಾಗಿ ಹೇಳುವುದೆಂದರೆ ಗೃಹ ಕೈಗಾರಿಕೆ. ಹೌದು, ನಮ್ಮ ಸಂಸಾರ ಜೀವನದ ತೊಟ್ಟಿಲು ತೂಗಿಕೊಂಡದ್ದೇ ಈ ಉದ್ಯಮದ ಆಧಾರದಲ್ಲಿ. ಅದು ಮನೆಯಲ್ಲೇ ಚಕ್ಕುಲಿ ಮಾಡಿ ಮಾರಾಟ ಮಾಡುವ ಉದ್ಯಮ. ಇಂದಿಗೂ ಅದರ ಹೆಸರಿನ ಪಳೆಯುಳಿಕೆ ಸಾಕಷ್ಟು ನೆನಪಿನಲ್ಲಿದೆ. ಇದರ ಕಥೆಗಳನ್ನು ಹೇಳಿಕೊಂಡರೆ ಅಲ್ಲಿ ಬಿ. ಆರ್. ಬೇಕರಿ ಹೆಸರು ಬಂದೇ ಬರಬೇಕು. ಅದು ಬಂದರೆ ರಾಜೀವಣ್ಣನ ಹೆಸರು ಬರಬೇಕು.
ಉಪ್ಪಳ....ನಮ್ಮ ಪೈವಳಿಕೆಗೆ ಸಂಬಂಧಿಸಿದರೆ ಪೇಟೆ ಎನ್ನಬೇಕು. ರಾಷ್ಟ್ರೀಯ ಹೆದ್ದಾರಿಯ ಒಂದು ತಿರುವು ಇಲ್ಲೇ ಇರುತ್ತದೆ. ಈಗ ಬಿಡಿ ಚತುಷ್ಪಥವಾಗಿ ಪರಿಚಯ ಸಿಗದಷ್ಟು ಬದಲಾಗಿದೆ. ಉಪ್ಪಳಕ್ಕೆ ಟಿಕೇಟ್ ತೆಗೆದು ಬಸ್ ಹತ್ತಿದರೆ....ಉಪ್ಪಳ ದಾಟಿ ಬಂದ್ಯೋಡು ಕುಂಬಳೆ ಮುಟ್ಟಿದರೂ ಅರಿವಾಗುವುದಿಲ್ಲ.ಹೀಗಿದ್ದ ಪುಟ್ಟ ಪೇಟೆಯ ರೈಲ್ವೇ ಸ್ಟೇಶನ್ ರಸ್ತೆ ಇದೆ. ಆ ಪೇಟೆಯ ಜೀವಾಳವೇ ಈ ರಸ್ತೆ. ಈಗ ಗತಕಾಲದ ನೆನಪುಗಳನ್ನು ಮಾತ್ರ ಹೊತ್ತು ಕುಳಿತಿದೆ. ಆ ರಸ್ತೆಯಲ್ಲಿ ಕೆಲವೇ ಕೆಲವು ಅಂಗಡಿಗಳಲ್ಲಿ ರಾಜೀವಣ್ಣನ ಬೇಕರಿಯೂ ಒಂದು. ಬಾಲ್ಯದಲ್ಲಿ ಮೊದಲು ಬೇಕರಿಯನ್ನು ನೋಡಿದ್ದರೆ ಅದು ಈ ಬೇಕರಿಗೆ ಸಲ್ಲುತ್ತದೆ. ಆಗ ಉಪ್ಫಳದಲ್ಲಿ ಬಸ್ಸು ಇಳಿದರೆ ಈ ಬೇಕರಿಯ ಬ್ರೆಡ್ ಸುಡುವ ಘಂ ಪರಿಮಳ ಮೂಗಿಗೆ ಬಡಿದು ಹಸಿವನ್ನು ಎಬ್ಬಿಸುತ್ತಿತ್ತು. ಹಾಗೆ ನೋಡಿದರೆ ನಾವೆಲ್ಲ ಬ್ರೇಡ್ ಬಿಸ್ಕತ್ ಬಗೆ ಬಗೆಯ ಸಿಹಿತಿಂಡಿಗಳ ಪರಿಚಯವಾಗಿದ್ದರೆ ಅದು ಈ ಬೇಕರಿಯಿಂದ. ಈ ಬೇಕರಿಯ ಎದುರು ನಿಂತುಕೊಂಡು ಜೋಲ್ಲು ಸುರಿಸಿ ಉಗುಳು ನುಂಗಿಕೊಂಡ ದಿನಗಳಿಗೆ ಲೆಕ್ಕವಿಲ್ಲ. ಲಡ್ಡು ಜಿಲೇಬಿ ಹಲುವಾ ಛೇ ಒಂದು ತುಂಡು ಸಿಕ್ಕರೆ ಸಾಕು ಎಂದನಿಸುತ್ತಿತ್ತು. ಈ ಬೇಕರಿಯೊಡನೆ ನಮ್ಮ ಸಂಭಂಧ ಹುಟ್ಟಿಕೊಂಡದ್ದೇ ನಮ್ಮ ಚಕ್ಕುಲಿ ಉದ್ಯಮದಿಂದ.
ಆಗ ಚಕ್ಕುಲಿಯ ಚೀಲ ಹೆಗಲಿಗೆ ನೇತಾಡಿಸಿ ಅಂಗಡಿ ಅಂಗಡಿ ಅಲೆಯುತ್ತಿದ್ದೆವು. ಪ್ರತಿ ಅಂಗಡಿಗೆ ಹೋಗಿ ಬೇಕಿದ್ದರೆ ಚೀಲದಿಂದ ಒಂದೊಂದಾಗಿ ಎಣಿಸಿ ಕೊಡುವುದು. ಅಂಗಡಿಯವರು ಅದನ್ನು ಅಲ್ಲಿ ಭರಣಿಗೆ ತುಂಬಿಸಿ ಮಾರಟಕ್ಕೆ ಇಡುವುದು. ವ್ಯಾಪಾರವೂ ಅಷ್ಟಕ್ಕಷ್ಟೆ, ಹತ್ತು ಸಲ ಹತ್ತಿ ಇಳಿಯಬೇಕು. ಎಷ್ಟೋ ಸಲ ಚೀಲದಲ್ಲಿ ಹಾಗೇ ಉಳಿದು ಮನೆಗೆ ವಾಪಾಸಾಗುತ್ತಿತ್ತು. ಆಂತಹ ಸಮಯದಲ್ಲಿ ನಮ್ಮ ಅತಿ ದೊಡ್ಡ ಗ್ರಾಹಕರೆಂದರೆ ಈ ರಾಜೀವಣ್ಣ. ಉಳಿದ ಚಕ್ಕುಲಿ ಎಲ್ಲವನ್ನು ಅಲ್ಲಿ ಕೊಟ್ಟು ಚೀಲ ಬರಿದಾಗಿಸಿ ದುಡ್ಡು ಜೇಬಲ್ಲಿ ಇಟ್ಟು ಬರುವಾಗ ಕೈಯಲ್ಲಿದ್ದ ಹೊರೆ ಇಳಿಸಿದ ಅನುಭವವಾದರೆ, ಅಂದು ಗಂಜಿ ಊಟಮಾಡಬಹುದು ಎನ್ನುವ ನಿರೀಕ್ಷೆ ಬೇರೆ. ಅಂದು ನಾವು ಉಪ್ಪಳದಲ್ಲಿಎಲ್ಲಿಯೂ ಚಕ್ಕುಲಿ ಮಾರಾಟ ಮಾಡುವ ಹಾಗಿರಲಿಲ್ಲ. ಎಷ್ಟಿದ್ದರೂ ಇಲ್ಲಿಗೆ ತನ್ನಿ ಅಂತ ರಾಜೀವಣ್ಣ ಹೇಳುತ್ತಿದ್ದರು. ಉಳಿದ ಕಡೆ ಬಿಡಿ ಬಿಡಿಯಾಗಿ ಮಾರಾಟ ಮಾಡುತ್ತಿದ್ದರೆ ಇಲ್ಲಿ ಅದನ್ನು ಪ್ಯಾಕ್ ಮಾಡಿಕೊಡಬೇಕಿತ್ತು. ಅದಕ್ಕೆ ತಕ್ಕ ಹಾಗೇ ಪ್ಲಾಸ್ಟಿಕ್ ತೊಟ್ಟೆಗಳನ್ನು ರಾಜೀವಣ್ಣನೇ ಮಂಗಳೂರಿನಿಂದ ತರಿಸುತ್ತಿದ್ದರು. ಚಕ್ಕುಲಿ ಅಲ್ಲಿಗೆ ಕೊಂಡೊಯ್ದು ಅಲ್ಲಿ ಕುಳಿತು ಅದನ್ನು ಪ್ಯಾಕ್ ಮಾಡಿ ಕೊಡುತ್ತಿದ್ದ ದಿನಗಳು ಈಗಲೂ ನೆನಪಾಗುತ್ತದೆ. ಇತ್ತೀಚೇಗೆ ಒಂದು ಸಲ ಊರಿಗೆ ಹೋದಾಗ ರೈಲ್ವೇಸ್ಟೇಶನ್ ರಸ್ತೆಯಲ್ಲೇ ನಡೆದು ಕೊಂಡು ಹೋದೆ. ಹಳೆಯ ನೆನಪುಗಳು ಒಂದೊಂದಾಗಿ ಮರುಕಳಿಸುತ್ತಿತ್ತು. ಹಾಗೆ ಹೋದಾಗ ಬಿ ಆರ್ ಬೇಕರಿ ಇದ್ದ ಜಾಗದ ಎದುರು ನಿಂತು ಕ್ಷಣಕಾಲ ಮೌನಿಯಾದೆ. ಆ ಹಳೆಯ ಕಟ್ಟಡ ಈಗ ಇಲ್ಲ. ಪಾಳು ಬಿದ್ದು ಹೋಗಿತ್ತು. ಬೇಕರಿ ಎಂದೋ ಮುಚ್ಚಿ ಹೋಗಿತ್ತು. ಎಲ್ಲವೂ ಬದಲಾದ ಹಾಗೇ ಅದೂ ಬದಲಾಗಿ ಹೋಗಿತ್ತು. ಅದನ್ನು ನೋಡಿ ಹೃದಯ ಭಾರವಾಗಿತ್ತು. ಅದೇ ಜಾಗದಲ್ಲಿ ನಿಂತುಕೊಂಡು ನಮ್ಮ ಬಾಲ್ಯವನ್ನು ಕಟ್ಟಿಕೊಳ್ಳುತ್ತಿದ್ದ ದಿನಗಳು ಮರೆಯಲು ಸಾಧ್ಯವೇ?
ರಾಜೀವಣ್ಣ...ದೊಡ್ಡ ಧಡೂತಿಯ ಆಜಾನು ಬಾಹು ವ್ಯಕ್ತಿತ್ವ. ದೊಡ್ಡ ಕನ್ನಡಕ ಅಗಲವಾದ ಮುಖ...ಗಟ್ಟಿಯಾದ ಧ್ವನಿ...ಅಲ್ಲಿ ಸುತ್ತುಮುತ್ತಲೆಲ್ಲ ಕೇಳಿಸುತ್ತಿತ್ತು. ಈಗಲೂ ಅಲ್ಲಿ ಕಾಲಿಟ್ಟರೇ ಅದೇ ಧ್ವನಿ ಕಿವಿಗೆ ಅಪ್ಪಳಿಸಿದಂತಾಗುತ್ತಿದೆ. ಬೇಕರಿಯಲ್ಲಿ ದೇವರ ಫೋಟೋಗಳು ಹಲವಿತ್ತು. ಬೆಳಗ್ಗೆ ಸಾಯಂಕಾಲ ರಾಜೀವಣ್ಣ ಅದಕ್ಕೆ ದೀಪ ಹಚ್ಚುತ್ತಿದ್ದುದನ್ನು ನಾನು ನೋಡುತ್ತಿದ್ದೆ. ದೇವರ ಫೋಟೊದ ಬಳಿಯೇ ಇನ್ನೊಂದು ಫೋಟೋ ಇತ್ತು. ಅದು ಅವರ ಫೋಟೊದಂತೆ ಇತ್ತು. ಬಾಲ್ಯದಲ್ಲಿ ಏನೂ ತಿಳಿಯದೇ ಇದ್ದಾಗ ಇವರ ಫೋಟೋ ಯಾಕೆ ಅಲ್ಲಿಟ್ಟು ಪೂಜೆ ಮಾಡುತ್ತಾರೆ ಎಂದನಿಸಿತ್ತು. ಆದರೆ ಒಂದು ದಿನ ಅವರೇ ಹೇಳಿದ್ದರು ಅದು ಅವರ ಅಪ್ಪನ ಫೋಟೋ ನೋಡುವುದಕ್ಕೆ ಅವರ ಹಾಗೇ ಇತ್ತು. ಅಪ್ಪನ ಮೇಲೇ ಇನ್ನಿಲ್ಲದ ಭಕ್ತಿ. ಅದಕ್ಕೆ ನಮಸ್ಕರಿಸದೆ ಅವರ ವ್ಯವಹಾರ ಆರಂಭವಾಗುತ್ತಿರಲಿಲ್ಲ. ಅವರು ಹೇಳುತ್ತಿದ್ದರು ಬಹಳ ಕಷ್ಟ ಪಟ್ಟು ಜೀವನ ನಡೆಸುತ್ತಿದ್ದರು.
ರಾಜೀವಣ್ಣ ಮತ್ತು ಅವರ ಮಕ್ಕಳ್ಳನ್ನು ಅಲ್ಲಿ ನೋಡಿದ್ದೇನೆ. ಆಗ ಮಕ್ಕಳು ಒಂದಿಷ್ಟು ತಪ್ಪು ಮಾಡಿದ್ದರೂ ಮಕ್ಕಳನ್ನು ಅವರು ಗದರುತ್ತಿದ್ದರು. ಆಗೆಲ್ಲ ಅನಿಸುತ್ತಿತ್ತು ಇಷ್ಟು ವ್ಯಾಪಾರ , ತಕ್ಕ ಶ್ರೀಮಂತಿಗೆ ಎಲ್ಲ ಇದ್ದರೂ ಇವರು ಯಾಕೆ ಗದರುತ್ತಾರೆ ಎಂದು? ಅದಕ್ಕೆ ಮುಖ್ಯ ಕಾರಣ ಅವರು ಕಷ್ಟ ಪಟ್ಟು ನಡೆಸಿದ ಜೀವನ. ಮಕ್ಕಳೂ ಅದೇ ಪರಿಶ್ರಮವನ್ನು ಕಲಿಯಬೇಕು. ಜೀವನದಲ್ಲಿ ನಿಷ್ಠೆ ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎಂಬುದಾಗಿತ್ತು. ನಮ್ಮ ಚಕ್ಕುಲಿ ವ್ಯಾಪಾರಕ್ಕೆ ರಾಜೀವಣ್ಣನ ಕೊಡುಗೆ ಸಾಕಷ್ಟು ಇದೆ. ಆ ಕಾಲದಲ್ಲಿ ನಮ್ಮ ವ್ಯಾಪಾರದ ಮೂಲ ಆಧಾರವೇ ಬಿ ಆರ್ ಬೇಕರಿ. ಈಗ ಅದು ಕೇವಲ ನೆನಪಿಗೆ ಸಂದು ಹೋಗಿದೆ. ಕಾಲ ಬದಲಾಗಿದೆ. ರಾಜೀವಣ್ಣ ಅಗಲಿದ ವಿಚಾರ ಇತ್ತೀಚೆಗಷ್ಟೆ ತಿಳಿಯಿತು.
ಆನಂತರ ಬೇಕರಿ ಉಪ್ಪಳದ ಬಸ್ ಸ್ಟಾಂಡ್ ಹತ್ತಿರಕ್ಕೆ ಸ್ಥಳಾಂತರವಾಯಿತು. ಅದೇ ಹೆಸರಲ್ಲಿ ಯಾರೋ ಅದನ್ನು ನಡೆಸುತ್ತಿದ್ದರು. ಆನಂತರ ಅದರ ಹೆಸರು ಸ್ವಲ್ಪ ಬದಲಾವಣೆಯಾಗಿ ಬೇಕರಿಯೂ ಬದಲಾವಣೆಯಾಯಿತು. ಅಲ್ಲಿದ್ದವರನ್ನು ರಾಜೀವಣ್ಣನ ಬಗ್ಗೆ ಕೇಳುತ್ತಿದ್ದೆ. ಆರಾಮಾವಾಗಿದ್ದಾರೆ ಎಂದು ಹೇಳುತ್ತಿದ್ದರು. ಇತ್ತೀಚೆಗೆ ಹೋಗಲಿಲ್ಲ. ಮೊನ್ನೆ ಮೊನ್ನೆ ವರೆಗೂ ಹೋದ ಹಾಗೆ ನೆನಪು, ಆದರೆ ವರ್ಷಗಳು ಅದೆಷ್ಟು ಬೇಗ ಸಂದು ಹೋಯಿತು. ಮೊನ್ನೆ ಮೊನ್ನೆ ಎಂಬುದು ಕಳೆದು ಐದಾರು ವರ್ಷವಾಯಿತು. ರಾಜೀವಣ್ಣ ಅಗಲಿ ಎಳು ವರ್ಷಗಳೇ ಕಳೆಯಿತು ಎಂದು ಈಗ ತಿಳಿದು ಬಂತು. ಕಳೆದ ದಿನಗಳು ನೆನಪಾಯಿತು. ಬಾಲ್ಯದಲ್ಲಿ ಮಂಗಳೂರಿನ ಮಾವನ ಮನೆಯಿಂದ ನಾನು ಬಸ್ ನಲ್ಲಿ ಬಂದು ಉಪ್ಪಳದಲ್ಲಿ ಇಳಿದರೆ ಮನೆಯಿಂದ ಬಸ್ ಚಾರ್ಜ್ ಗೆ ಕೊಟ್ಟ ದುಡ್ಡು ಖರ್ಚಾಗಿ ಹೋಗುತ್ತಿತ್ತು. ಮತ್ತೆ ಉಪ್ಪಳದಿಂದ ಪೈವಳಿಕೆಗೆ ಹೋಗಬೇಕಾದರೆ ದುಡ್ಡು ಬೇಕು. ಆಗ ನೇರವಾಗಿ ರೈಲ್ವೇ ಸ್ಟೇಶನ್ ರಸ್ತೆಯ ಬಿ ಆರ್ ಬೇಕರಿಗೆ ಹೋಗುತ್ತಿದ್ದೆ. ಬಸ್ ಗೆ ಹಣ ಇಲ್ಲ ಎಂದು ಹೇಳಿ ಅಲ್ಲಿ ಕೇಳಿ ಪಡೆಯುತ್ತಿದ್ದೆ.
ಬಿ ಆರ್ ಬೇಕರಿ ಈಗ ಇಲ್ಲ. ಆದರೆ ಅದರ ಗಾಢವಾದ ನೆನಪುಗಳು ಅಚ್ಚಳಿಯದೇ ಹಾಗೇ ಉಳಿದಿದೆ. ಅದರೊಂದಿಗೆ ರಾಜೀವಣ್ಣನ ವ್ಯಕ್ತಿತ್ವ. ಅಲ್ಲಿಗೆ ಹೋಗಿ ಜಗಲಿಯಲ್ಲಿದ್ದ ಪುಟ್ಟ ಸ್ಟೂಲ್ ನಲ್ಲಿ ಕುಳಿತು ಬೇಕರಿಯ ಕಪಾಟಿನಲ್ಲಿದ್ದ ಸಿಹಿತಿಂಡಿಗಳನ್ನು ನೋಡುತ್ತಾ ಉಗುಳು ನುಂಗುತ್ತಿದ್ದರೆ...ರಾಜೀವಣ್ಣ ಕೈ ಮುಷ್ಠಿಯಲ್ಲಿ ಬಿಳಿ ಬಣ್ಣದ ಮಿಠಾಯಿ ಕಡಲೆ ತಂದು ಸುರಿಯುತ್ತಿದ್ದರು. ಬಾಲ್ಯದ ಆ ಸಿಹಿ ತಿನಿಸಿನ ಸಿಹಿ ಎಂದಿಗೂ ಮಾಸುವುದಿಲ್ಲ. ಒಂದು ಗಾದೆ ಉಂಟು ಐದು ವರ್ಷದ ಮಗುವಾಗಿದ್ದಾಗ ಸಿಗದೇ ಇದ್ದ ಐದು ಪೈಸೆಯ ಚಾಕಲೇಟ್...ಐವತ್ತು ವರ್ಷವಾದಾಗ ಸಿಕ್ಕಿದರೆ ಏನು ಪ್ರಯೋಜನ? ನನ್ನ ಮಟ್ಟಿಗೆ ಹಾಗಲ್ಲ... ಈಗಲೂ ಆ ಮಿಠಾಯಿ ಕಡಲೆ ಸಿಗಬಾರದೇ ಅಂತ ಅನ್ನಿಸುತ್ತದೆ.
ತುಂಬ ತಡವಾಗಿಯಾದರೂ ರಾಜೀವಣ್ಣನಿಗೆ ಒಂದು ನುಡಿ ನಮನ.
No comments:
Post a Comment