Friday, August 18, 2023

ಭಾವ ರೂಪಗಳು

            ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲಿ ಇಲ್ಲಿನ ಸಂಸ್ಕಾರ ಸಂಸ್ಕೃತಿ ಜನರ ನಡವಳಿಕೆಗಳು ಎಲ್ಲವೂ ಅಪರಿಚಿತವಾಗಿ ಹೊಸದಾಗಿತ್ತು. ನಮ್ಮ ಒಬ್ಬ ಕಕ್ಷಿದಾರರು ಚಿಕ್ಕಪೇಟೆಯ ಗಲ್ಲಿಯೊಂದರಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ವ್ಯವಹಾರ ನಡೆಸುತ್ತಿದ್ದರು. ಅವರ ಆದಾಯ ತೆರಿಗೆ ಮಾರಾಟ ತೆರಿಗೆ ಕೆಲಸಗಳಿಗೆ ನಾನು ಅಲ್ಲಿಗೆ ಹೋಗಬೇಕಾಗುತ್ತಿತ್ತು. ಮೊದಲಿನ ದಿನ ನಾನು ಹುಡುಕಿಕೊಂಡು ಚಿಕ್ಕಪೇಟೆ ಗಲ್ಲಿಯೊಳಗೆ ನುಗ್ಗಿದೆ. ಚಿಕ್ಕಪೇಟೆ ಸುತ್ತಮುತ್ತಲಿನ ಹಲವಾರು ಪೇಟೆಗಳಿವೆ ಅವುಗಳೆಲ್ಲ ಒಂದು ರೀತಿಯ ಚಕ್ರವ್ಯೂಹದಂತೆ ಭಾಸವಾಗುತ್ತಿತ್ತು. ಒಳ ಹೋದರೆ ಎಲ್ಲಿಂದ ಹೊರಬರಬೇಕು ಎಂದು ತಿಳಿಯುತ್ತಲಿರಲಿಲ್ಲ. ನೋ ಪಾರ್ಕಿಂಗ್ ಏಕ ಮುಖ ರಸ್ತೆಗಳು. ಸಂದಿಗೊಂದಿಯ ಅಗಲ ಕಿರಿದಾದ ರಸ್ತೆಗಳು ವಿಚಿತ್ರ ಅನುಭವವಾಗಿತ್ತು. ಎಲ್ಲೋ ವಾಹನ ನಿಲ್ಲಿಸಿ ವಿಳಾಸ ಹುಡುಕುತ್ತಾ ಹೋದರೆ ಮತ್ತೆ ಎಲ್ಲಿ ವಾಹನ ನಿಲ್ಲಿಸಿದ ಜಾಗ ಮರೆತು ಹೋಗಿ ಅದನ್ನು ಹುಡುಕುವುದು ಒಂದು ಕೆಲಸ. ಕೆಲವೊಮ್ಮೆ ಅಲ್ಲಿಂದಲೂ ಟ್ರಾಫಿಕ್ ಪೋಲೀಸರು ಎತ್ತಿಕೊಂಡು ಹೋಗುತ್ತಿದ್ದರು. ಇನ್ನು ಸಂದಿಗೊಂದಿಯಲ್ಲಿರುವ ಮನೆಗಳು ಅದರಲ್ಲಿ ವಾಸಿಸುವ ನೂರಾರು ಕುಟುಂಬಗಳು, ಮನೆ ಯಾವುದು ಜಗಲಿಯಾವುದು ಪಕ್ಕದ ಮನೆಯಾವುದು ಎಂದು ಅರಿವಾಗುತ್ತಿರಲಿಲ್ಲ. ಇಲ್ಲೇ ಶಾಶ್ವತ ಜೀವನವನ್ನು ನಡೆಸುವವರ ಸಹನೆ ಜೀವನ ಶೈಲಿ ಅಚ್ಚರಿಯಾಗುತ್ತಿತ್ತು.  ಹಾಗೆ ಒಂದು ದಿನ ಬಾರ್ ಹುಡುಕಿಕೊಂಡು ಹೋದೆ. ಕೊನೆಗೊಮ್ಮೆ ಸಿಕ್ಕಿ ಬಾರ್ ನೊಳಗೆ ಹೋದೆ. ಬೆಳಗ್ಗೆಯೇ  ಸಾಕಷ್ಟು ಜನ  ತೀರ್ಥ ಸೇವನೆ ಮಾಡುತ್ತಿದ್ದರು. ಬೆಂಗಳೂರಲ್ಲಿ ಇದಕ್ಕೆ ಸಮಯ ನಿಗದಿ ಇರುವುದಿಲ್ಲ. ಜೀವನದ ಸರ್ವಸ್ವವೇ ಅದಾಗಿರುತ್ತದೆ. ಅದೆಲ್ಲ ವೈಯಕ್ತಿಕ. ಬಾರ್ ನ ಮ್ಯಾನೆಜರ್ ಕ್ಯಾಶಿಯರ್ ಎಲ್ಲ ಒಬ್ಬನೇ. ನನಗೆ ಅಚ್ಚರಿಯಾದದ್ದು, ಗ್ರಾಹಕರು ಖಬಾಬ್ ಆಮ್ಲೇಟ್ ಆರ್ಡರ್ ಮಾಡಿದಾಗ  ಈತ ಕೂಗಿ ಹೇಳುತ್ತಿದ್ದ... ಭಟ್ರೆ ಒಂದು ಕಬಾಬ್....... ಭಟ್ರೆ ಒಂದು ಆಮ್ಲೇಟ್.  ನಮ್ಮೂರಿನ ಹೋಟೇಲಿನಲ್ಲಿ ಗೋಳಿಬಜೆಗೆ ಆರ್ಡರ್ ಮಾಡಿದಂತೆ ಇಲ್ಲಿ ಖಬಾಬ್ ಗೆ ಆರ್ಡರ್ ಮಾಡುತ್ತಿದ್ದರು.    ಅರೇ  ಯಾವ ಭಟ್ರು ಇಲ್ಲಿ ಇದನ್ನೆಲ್ಲ ಮಾಡ್ತಾರೆ? ಆಶ್ಚರ್ಯ. ಅಡುಗೆ ಕೋಣೆ ನೋಡುವ ಮನಸ್ಸಾದರೂ ನೋಡುವ ಬಗೆ ಹೇಗೆ? ಇನ್ನು ಆ ರಣರಂಗದ   ವಾತಾವರಣ ಹೇಗಿರುತ್ತದೆಯೋ ಅಂತ ಅಂಜಿಕೆ. ಕೊನೆಗೊಮ್ಮೆ ಭಟ್ಟರು ಹೊರಬಂದರು. ನೋಡಿದರೆ ನನ್ನ ಕಲ್ಪನೆಯ ನನ್ನೂರಿನ ಭಟ್ಟರಿಗೂ ಈ ಭಟ್ಟರಿಗೂ ಅಜಗಜಾಂತರ ವೆತ್ಯಾಸ. ನಾನು ಮತ್ತೆ ಮ್ಯಾನೆಜರ್ ನಲ್ಲಿ ಕೇಳಿದೆ ಇದು ಭಟ್ರಾ?  ಆತ ನಗುತ್ತಾ ಹೇಳಿದ...ಸಾರ್ ಇಲ್ಲಿ ಆಡುಗೆ ಯಾರು ಮಾಡಿದರೂ ಅವರನ್ನು ಭಟ್ರೆ ಅಂತ ಕರೆಯುವುದು.  ಅದು ಜಾತಿ ಸೂಚಕವಲ್ಲ. ಬಹುಶಃ ಇದು ಜಾತಿನಿಂದನೆ ಎಂಬ ಕಾನೂನಿಗೆ ಅನ್ವಯವಾಗುತ್ತಿಲ್ಲ ಕಾಣಬೇಕು. ಇಲ್ಲ ಅಸಲಿ  ಭಟ್ರುಗಳು ಇದನ್ನು ನೋಡುವ ಸಂಭವ ಕಡಿಮೆ.  ಹೀಗಾಗಿ ಇದು ಇನ್ನೂ ಕೇಸ್ ಆಗಿಲ್ಲ.  ಕೇಸ್ ಆಗಬೇಕೋ ಬೇಡವೋ ಎಂಬುದು ನನ್ನ ವಿಷಯವಲ್ಲ. ನಾನು ವಾಸ್ತವದ ವಿಚಾರಗಳನ್ನು ನನ್ನದೇ ವಿವೇಚನೆಯಲ್ಲಿ ನೋಡುವ ಜಾಯಮಾನದವನು.  ನಮ್ಮಗಳ  ಮನಸ್ಸಿನಲ್ಲಿ ಮೊದಲು ನ್ಯಾಯಾನ್ಯಾಯ ತೀರ್ಮಾನವಾಗಬೇಕು. ಆನಂತರ ನ್ಯಾಯಾಲಯ. ಹೇಗೂ ಇರಲಿ. 

ಭಟ್ಟರು ಎಂಬಂತೆ ಹಲವಾರು ಜಾತಿ ಸೂಚಕ ಶಬ್ದಗಳು ನಮ್ಮೊಳಗೆ ಇವೆ. ಕೆಲವರನ್ನುಹೆಸರು ಹಿಡಿದು ಕರಿಯುವ ಬದಲು ಓ ಶೆಟ್ರೆ, ಓ ಭಟ್ರೆ  ಅಥವಾ ಇನ್ನೊಂದು, ಹಾಗೆ ಕರೆದರೆ ಅವರಿಗೆ ಖುಷಿಯಾಗುತ್ತದೆ. ಅದೇ ಅವರಿಗೆ ಗೌರವ ಸೂಚಕವಾಗಿರುತ್ತದೆ. ಇಲ್ಲಿ ಜಾತಿ ಸೂಚಕ ಅಂತ ಅದಕ್ಕೆ ಮುದ್ರೆ ಒತ್ತುವುದು ನಾವೇ? ಆನಂತರ ಅದಕ್ಕೆ ಬೇಕಾಗಿ ಹೋರಾಡುವುದು ನಾವೇ? ಇಲ್ಲವಾದರೆ ಅದು ಕೇವಲ ಒಂದೆರಡು ಅಕ್ಷರಗಳ ಶಬ್ದಗಳು ಮಾತ್ರ. ಅದಕ್ಕೆ ಕೇಸ್ ವ್ಯಾಜ್ಯ  ಅಂತ ಹೊರಡುವಾಗ ಹಲುವು ಸಲ ನನಗೆ ಅರ್ಥವೇ ಕಾಣುವುದಿಲ್ಲ. ಇನ್ನೂ ಹೇಳುವುದೆಂದರೆ ಈಗಿನ ಜನಾಂಗ, ನಮ್ಮ ಮಕ್ಕಳು ಹೀಗೆ ಇವರಿಗೆಲ್ಲ ಹಲವು ಶಬ್ದಗಳು ತೀರಾ ಅಪರಿಚಿತ. ಎಲ್ಲೋ ಸಣ್ಣ ಪುಟ್ಟ ವರ್ಗಗಳ ಜಾತೀ ಸೂಚಕ ಪದಗಳು, ಅದು ಹಲವು ಸಲ ಅವಹೇಳನ ರೂಪದಲ್ಲೇ ಇರಬಹುದು ಅದರ ಪರಿಚಯವಿರುವುದಿಲ್ಲ. ಎಲ್ಲೋ ಹಾಗೆ ಹೀಗೆ ಕೇಳಿ ಅದನ್ನು ಉಚ್ಚರಿಸಿ ಬಿಟ್ಟರೆ ಈಗ ಅದು ಅಪರಾಧವಾಗಿಬಿಡುತ್ತದೆ. ಈಗೀಗ ಘೋರ ಅಪರಾಧಗಳೂ ಮಕ್ಕಳಾಟಿಕೆಯಂತೆ ಕೆಲವೊಮ್ಮೆ ಹಲವರಿಗೆ  ಭಾಸವಾಗುತ್ತದೆ.  ಹಾಗಿರುವಾಗ ಕೆಲವೆಲ್ಲ ಕರೆಗಳಿಗೆ ನಾವು ಔದಾಸಿನ್ಯ ತೋರಿಸುವುದೇ ಸೂಕ್ತ ಅನ್ನಿಸಬಹುದು.  ಒಬ್ಬನನ್ನು ನಾಯಿ ಮಂಗ ಅಥವಾ ಫಟಿಂಗ ಇನ್ನು ಕೆಟ್ಟದಾಗಿ ಹೇಳಬಹುದು. ಅಲ್ಲಿ ಹಲವು ಸಲ ಕರೆಯುವ ಭಾವನೆ ಯಾವುದು ಎಂಬುದೇ ಮುಖ್ಯವಾಗುತ್ತದೆ. ಮುದ್ದಿನಲ್ಲಿ ಸಲುಗೆಯಿಂದ ಇದನ್ನೇಲ್ಲ ಕರೆಯುವುದನ್ನು ನಾವು ಕಂಡು ಸುಮ್ಮನಿರುವುದಿಲ್ಲವೆ? ಯಾಕೆ ಆತ್ಮೀಯತೆಯ ಪರಿಧಿಯದು. ಹಾಗಾಗಿ ಯಾವುದೇ ಶಬ್ದಗಳು ಅವುಗಳ ಬಳಕೆ ಸಂದರ್ಭವೇ ಹೆಚ್ಚು ಪ್ರಧಾನವಾಗಿರುತ್ತವೆ ಹೊರತು ಅವುಗಳ ಜಾತಿಸೂಚಕಗಳಾಗಲಿ, ಅವುಗಳ ಶಬ್ದಾರ್ಥಗಳಾಗಲೀ ಮುಖ್ಯವಾಗುವುದಿಲ್ಲ. ಹಲವು ಸಲ ನಮಗೆ ಬೇಕಾದವರು....ಇಲ್ಲಿ ಬೇಕಾದವರು ಎನ್ನುವುದಕ್ಕೆ ವಿಶಾಲ ಅರ್ಥವಿದೆ. ಅವರು ಕರೆದಾಗ ಈ ಶಬ್ದಗಳ ಪ್ರಾಶಸ್ತ್ಯ ಮೌಲ್ಯ ಲೆಕ್ಕ ಹಾಕಲಾಗುತ್ತದೆ. 

ಶಬ್ದಾರ್ಥಗಳ ಹಿಂದೆ ಹೋದಾಗ ಇಲ್ಲಿ ಕೇವಲ ಕನ್ನಡ ಅಥವಾ ನಮಗೆ ತಿಳಿದ ಭಾಷೆಗೆ ಸೀಮಿತವಾಗಿ ಕರೆ ಇರುವುದಿಲ್ಲ. ಈಗ ನಮ್ಮ ಮನೆ ಮಾತೃ ಭಾಷೆ  ಮರಾಠಿ ಇದೆ. ಯಾರೋ ಒಬ್ಬನನ್ನು ತಾತ್ಸಾರವಾಗಿ ನಮ್ಮದೇ ಭಾಷೆಯಲ್ಲಿ ಆತನ ಜಾತಿಯ ಬಗ್ಗೆ ಅವಹೇಳನವಾಗಿ ಮಾತನಾಡಿದರೆ , ಮನೆಯವರಿಗೆ ಮಾತ್ರವೇ ಅರ್ಥವಾದೀತು. ಯಾರನ್ನು ತಿರಸ್ಕಾರದಿಂದ ಕಂಡಿದ್ದೇವೋ ಅವರಿಗೆ ಅರ್ಥವಾಗುವುದೂ ಇಲ್ಲ, ಅದು ವಿವಾದವಾಗುವುದೂ ಇಲ್ಲ.  ತಾತ್ಪರ್ಯ ಇಷ್ಟೆ ಶಬ್ದಗಳು ನಮಗೆ ಅರ್ಥವಾದಾಗ ಮಾತ್ರ ಅದು ಗಂಭೀರವಾಗುತ್ತದೆ. ಬೈಗುಳಗಳೂ ಅಷ್ಟೇ. ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಇಂತಹ ಸಂಭವ ಬಹಳ ಕಡಿಮೆ. ಯಾಕೆಂದರೆ ಅಲ್ಲಿ ಯಾರಿಗೆ ಯಾವ ಭಾಷೆ ಬರುತ್ತದೆ ಎಂಬುದು ಬ್ರಹ್ಮನಿಗೂ ಊಹಿಸುವುದು ಕಷ್ಟ. 

ಯಾವುದೇ ವಿವಾದಗಳು ಹಲವು ಸಲ ಹುಟ್ಟಿಕೊಳ್ಳುವುದು ನಮ್ಮ ನಡುವಿನ ವಿಶ್ವಾಸದ ಕೊರತೆಯಿಂದ. ನಮ್ಮೊಳಗಿನ ಕೀಳರಿಮೆಯಿಂದ.  ನಾವದನ್ನು ಮೆಟ್ಟಿನಿಂತರೆ ನಮ್ಮ ಮನಸ್ಸು ಶುಚಿಯಾಗಿಬಿಡುತ್ತದೆ. ನಮ್ಮ ಮಾನ ಅವಮಾನಗಳೂ ಯಾರೊ ಒಬ್ಬನು ನಿರ್ಧರಿಸುತ್ತಾನೆ ಎನ್ನುವುದೇ ಕೆಲವು ಸಲ ಅಚ್ಚರಿಯ ವಿಷಯವಾಗುತ್ತದೆ. ಎಲ್ಲೋ ಓದಿದ ನೆನಪು ಯಾವುದೇ ಜಾತಿ ಸೂಚಕಗಳು ಮೇಲೆ ಹೇಳಿದಮ್ತೆ ವೃತ್ತಿಯಿಂದ ಬಂದಿರುತ್ತದೆ.  ವೃತ್ತಿ ಎಂಬುದು ಭಗವಂತ ಬದುಕುವುದಕ್ಕೆ ಕಲ್ಪಿಸಿಕೊಟ್ಟ ಅವಕಾಶ. ಅದನ್ನು ಯಾರೇ ಆಗಲೀ ಕೀಳಾಗಿ ಕಾಣುವುದೆಂದರೆ ಭಗವಂತನಲ್ಲಿ ನಂಬಿಕೆ ಇಟ್ಟವನಿಗೆ ಸೂಕ್ತವಾಗುವುದಿಲ್ಲ. ಆತನ ನಂಬಿಕೆಗೂ ಗೌರವ ಮೌಲ್ಯ ಕೊಡುವುದಿಲ್ಲ. ಪ್ರತಿಯೊಬ್ಬರೂ ಇಲ್ಲಿ ಬದುಕುವುದಕ್ಕಾಗಿ ಹುಟ್ಟಿ ಬರುತ್ತಾರೆ. ಸಾಯುವುದು ಗೊತ್ತಿದ್ದರೂ ಸಾಯುವುದಕ್ಕೆ ಯಾರೂ ಜೀವನ ಮಾಡುವುದಿಲ್ಲ. ಗಾಳಿ ನೀರು ಭೂಮಿ ಎಲ್ಲವು ಸಮಾನವಾಗಿರುವಾಗ ಇಲ್ಲಿ ಅಸಮಾನತೆಯನ್ನು ಗುರುತಿಸುವವನು ಜೀವನಕ್ಕೆ ಅರ್ಹತೆಯನ್ನು ಕಳೆದುಕೊಳ್ಳುತ್ತಾನೆ. 


No comments:

Post a Comment