ಅಂದು ಪುಟ್ಟ ಬಾಲಕ ಪೈವಳಿಕೆ ಶಾಲೆಯ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದೆ. ಆದಿನ ಬಹಳ ಖುಷಿಯಲ್ಲಿ ಶಾಲೆಗೆ ಹೊರಟಿದ್ದೆ. ಹೆಗಲಿಗೆ ನೇತಾಡಿಸಿದ ಬಟ್ಟೆ ಚೀಲದಲ್ಲಿದ್ದ ಸ್ಲೇಟು ಪುಸ್ತಕದ ನಡುವೆ ಇಟ್ಟಿದ್ದ ಸಣ್ಣ ಅಲ್ಯುಮಿನಿಯಂ ತಟ್ಟೆಯನ್ನು ಆಗಾಗ ತಡವಿ ನೋಡಿಕೊಳ್ಳುತ್ತಿದ್ದೆ. . ಕಪ್ಪು ಕಪ್ಪಾದ ತಟ್ಟೆ. ಮನೆಯಲ್ಲಿ ಅದನ್ನು ಅಷ್ಟಾಗಿ ಉಪಯೋಗಿಸುತ್ತಿರಲಿಲ್ಲ. ಆತಟ್ಟೆಯನ್ನು ಮನೆಯಿಂದ ಯಾರಿಗೂ ತಿಳಿಯದಂತೆ ಎತ್ತಿಟ್ಟಿದ್ದೆ. ಆಗ ನನ್ನಂತೆ ಕೆಲವರು ನಮ್ಮ ಮನೆಯಿಂದ ಒಟ್ಟಿಗೇ ಹೋಗುತ್ತಿದ್ದೆವು. ಎಲ್ಲರೂ ನನ್ನಿಂದ ಹಿರಿಯರು. ತಟ್ಟೆಯ ವಿಚಾರ ತಿಳಿದರೆ ಖಂಡಿತ ಬೈಯುತ್ತಾರೆ.
ಆದಿನ ಹನ್ನೊಂದುಘಂಟೆಯಾಗುವುದನ್ನೇ ಕಾಯುತ್ತಿತ್ತು ಮನಸ್ಸು. ಹನ್ನೊಂದು ಎರಡನೇ ಘಂಟೆ ಬಾರಿಸಿದ ಪೀಯೊನ್ ನಮ್ಮ ತರಗತಿಗೆ ಬಂದು ಸಜ್ಜಿಗೆ ತಿನ್ನಲು ಬನ್ನಿ ಎಂದು ಕರೆದ. ಮಕ್ಕಳು ಎಲ್ಲರೂ ತಂದಿದ್ದ ತಟ್ಟೆಯನ್ನು ಎತ್ತಿಕೊಂಡು ಹೊರಟರು. ನಾನೂ ಹೊರಟೆ. ಎರಡು ದಿನ ನನಗೆ ಸಜ್ಜಿಗೆ ಸಿಗಲಿಲ್ಲ. ಕಾರಣ ತಟ್ಟೆ ಇಲ್ಲ. ಅದುವರೆಗೆ ಯಾವುದೋ ಕಾಗದದ ತುಂಡು ತೆಗೆದುಕೊಂಡು ಅದರಲ್ಲೇ ಹಾಕಿಸಿ ತಿನ್ನುತ್ತಿದ್ದೆವು. ಮೊನ್ನೆ ಪೇಪರ್ ಗೆ ಸಜ್ಜಿಗೆ ಬಡಿಸುವುದಿಲ್ಲ ಎಂದು ಹೇಳಿದ ನಂತರ, ತಿನ್ನದೇ ಹಾಗೇ ವಾಪಾಸು ಬಂದಿದ್ದೆ. ಅಂದಿನ ಹಸಿವಿಗೆ ಉತ್ತರವಿರಲೇ ಇಲ್ಲ. ಆದಿನದ ಸಂಭ್ರಮ ಸಜ್ಜಿಗೆ ತಿನ್ನುವುದರಲ್ಲಿತ್ತು. ಎಲ್ಲರ ಜತೆಗೆ ತಾನೂ ತಿನ್ನಬಹುದು ಎನ್ನುವ ಬಯಕೆ ಈಡೇರಿತ್ತು. ಮನೆಯಿಂದ ಕದ್ದು ತಂದಿದ್ದ ತಟ್ಟೆಯಲ್ಲಿ ಸಜ್ಜಿಗೆ ಹಾಕಿ ತಿಂದಾಗ ಜಗತ್ತನ್ನೇ ಗೆದ್ದ ಅನುಭವ ಆ ಪುಟ್ಟ ಮನಸ್ಸಿಗೆ ಆಗಿತ್ತು. ಶಾಲೆಯಲ್ಲಿ ಮಾಡುತ್ತಿದ್ದ ಸಜ್ಜಿಗೆ ತಿನ್ನುವುದಕ್ಕೆ ಮನೆಯಲ್ಲಿ ಬಿಡುತ್ತಿರಲಿಲ್ಲ. ಆದರೆ ನನ್ನ ಹಸಿವಿಗೆ ಉತ್ತರವಾಗಿ ಆ ಸಜ್ಜಿಗೆ ಇರುತ್ತಿತ್ತು. ಆದಿನ ಆ ತಟ್ಟೆಯನ್ನು ಶಾಲೆಯಲ್ಲೇ ಬಿಟ್ಟಿದ್ದೆ. ತರಗತಿಯ ಅಂಚಿಗೆ ಎರಡು ದೊಡ್ಡ ಕಪಾಟು ಇತ್ತು. ಅದರ ಅಡಿಗೆ ತಟ್ಟೆಯನ್ನು ಇಟ್ಟಿದ್ದೆ. ಮನೆಗೆ ಕೊಂಡು ಹೋದರೆ ಪುನಃ ತರುವ ಭರವಸೆ ಇರಲಿಲ್ಲ. ಸಾಯಂಕಾಲ ಮನೆಗೆ ಹೋದಾಗ ಅಮ್ಮನಲ್ಲಿ ತಟ್ಟೆಯನ್ನು ಎತ್ತಿಕೊಂಡು ಹೋದ ವಿಷಯ ಹೇಳಿದೆ. ಪುಟ್ಟ ಬಾಲಕ ನನಗೆ ಮುಚ್ಚಿಡುವುದಕ್ಕೆ ಬರಲಿಲ್ಲ. ಅಮ್ಮ ಯಾಕೋ ಬೈಯಲಿಲ್ಲ. ಬೈಗುಳದ ನಿರೀಕ್ಷೆಯಲ್ಲಿದ್ದೆ. ಆದರೆ ಅಮ್ಮ ಕೇಳಿದರು ಸಜ್ಜಿಗೆ ತಿಂದಿಯಾ ಅಂತ? ಮನೆಯಲ್ಲಿ ಆಕೆಗೆ ಮಾತ್ರ ನನ್ನ ಹಸಿವಿನ ಅರಿವಿತ್ತು. ಹೆತ್ತಮ್ಮ ಅಲ್ಲವೇ? ಏನೂ ಬೈಯಲಿಲ್ಲ.
ಪೈವಳಿಕೆ ನಗರದ ಪ್ರಾಥಮಿಕ ಶಾಲೆ ಮತ್ತು ಬಾಯಾರು ಸಮೀಪ ಇದ್ದ ಗಾಳಿಯಡ್ಕದ ಶಾಲೆಯ ಬಳಿಯಲ್ಲೆ ಹಲವು ಸಲ ನಾನು ಹೋಗುತ್ತಿರುತ್ತೇನೆ. ಒಂದು ಕಾಲದಲ್ಲಿ, ಒಂದರಿಂದ ಎರಡನೆ ತರಗತಿಗೆ ಹೋದ ಪೈವಳಿಕೆ ಶಾಲಾ ದಿನದ ನೆನಪು ಹಾಗು ಗಾಳಿಯಡ್ಕ ಶಾಲೆಯ ಮೂರನೆಯ ತರಗತಿಯ ದಿನಗಳು ನೆನಪಾಗುತ್ತವೆ. ಸುಮಾರು ಎಪ್ಪತರ ದಶಕದ ಆರಂಭದ ದಿನಗಳು ಅವು. ಪೈವಳಿಕೆ ಚಿಕ್ಕ ಹಳ್ಳಿಯಾದರೆ, ಗಾಳಿಯಡ್ಕದ ಶಾಲೆ ಜನ ವಸತಿಯೇ ಇಲ್ಲದ ಗುಡ್ಡದ ಬಯಲಿನಲ್ಲಿ ಇತ್ತು. ಈಗ ಅಲ್ಲಿ ಹಲವು ಜನವಸತಿಗಳಾಗಿ ಹೊಸ ಊರು ಸೃಷ್ಟಿಯಾಗಿದೆ. ಬಾಲ್ಯದಲ್ಲಿ ಅಲ್ಲಿ ಹಗಲಿನಲ್ಲಿ ಸುತ್ತಾಡುವುದಕ್ಕೂ ಭಯ ಪಡಬೇಕಿತ್ತು. ಈಗ ಇಲ್ಲೆಲ್ಲ ಸಂಚರಿಸುವಾಗ ಬಾಲ್ಯದ ಶಾಲಾ ದಿನಗಳು ನೆನಪಾಗುತ್ತವೆ ಎಂಬುದು ಹೌದಾದರೂ ಅಲ್ಲಿಯೂ ನನಗೆ ನೆನಪಿಗೆ ಬರುವುದು, ಈ ಶಾಲೆಯಲ್ಲಿ ಕಲಿತ ವರ್ಣಮಾಲೆಯ ಅಕ್ಷರಗಳಲ್ಲ. ಉರು ಹೊಡೆದ ಮಗ್ಗಿಯಲ್ಲ. ಅಥವಾ ಬಾಲ್ಯದಲ್ಲಿ ಆಡಿದ ಆಟಗಳಲ್ಲ. ಬದಲಿಗೆ ನೆನಪಿಗೆ ಬರುವುದು ಈ ಶಾಲೆಯಲ್ಲಿ ಮಾಡಿ ಬಡಿಸುತ್ತಿದ್ದ’ ಸಜ್ಜಿಗೆ’. ಒಂದು ಬದುಕಿನ ಪುಟಗಳಲ್ಲಿ ಅಳಿಸದ ನೆನಪುಗಳನ್ನು ಉಳಿಸಬೇಕಿದ್ದರೆ ಅದರ ಭಾವನಾತ್ಮಕ ನಂಟು ಅದಾವ ಬಗೆಯದಿರಬಹುದು?
ಸರಕಾರ ಶಾಲಾ ಮಕ್ಕಳಿಗೆ ಉಚಿತವಾಗಿ ಒದಗಿಸುತ್ತಿದ್ದ ಒಂದು ಬಗೆಯ ಸಜ್ಜಿಗೆ. ಸಜ್ಜಿಗೆ ಎಂದರೆ ಬನ್ಸಿರವೆ ಅಥವಾ ಖಂಡ್ವ ರವೆಯ ಉಪ್ಪಿಟ್ಟು ಖಾರಾ ಬಾತ್ ಅಲ್ಲ. ಗೋಧಿಯನ್ನು ತರಿದು ಮಾಡಿದಂತೆ ಅನಿಸಿದರೂ ಅದು ಯಾವುದೋ ಒಂದು ಬಗೆಯ ಸಜ್ಜಿಗೆ. ಗೋಧಿಯ ಸಿಪ್ಪೆಗಳು ಒಂದಷ್ಟು ಇನ್ನಿತರ ಧಾನ್ಯಗಳ ಪುಡಿಯೂ ಇತ್ತು ಎಂದು ನನ್ನ ನೆನಪು. ಆ ಕಾಲದಲ್ಲಿ ಅಮೇರಿಕದಿಂದ ಉಚಿತವಾಗಿ ಗೋಧಿ ಬರುತ್ತಿತ್ತು. ಅದನ್ನೇ ಸಜ್ಜಿಗೆ ಮಾಡಿ ಸರಕಾರ ಕೊಡುತ್ತಿತ್ತು ಎಂದು ಹೇಳುವುದನ್ನು ಕೇಳಿದ್ದೆ. ಈ ಸಜ್ಜಿಗೆಗೆ ಉಪ್ಪು ಬಿಟ್ಟರೆ ಬೇರೆ ಎನೂ ಇರುತ್ತಿರಲಿಲ್ಲ. ಆದರೂ ಅದರ ಆಕರ್ಷಣೆ ಬಿಡದ ಮೋಹವಾಗಿತ್ತು. ಈ ಸಜ್ಜಿಗೆ ನೆನಪಿಗೆ ಬರುವುದಕ್ಕೆ ಹಲವಾರು ಭಾವನಾತ್ಮಕ ಕಾರಣಗಳಿವೆ. ಮುಖ್ಯವಾಗಿ ಪೈವಳಿಕೆ ಶಾಲೆಯಲ್ಲಿ ನಾವು ಕದ್ದು ಮುಚ್ಚಿ ಮನೆಯವರಿಗೆ ತಿಳಿಯದಂತೆ ಸಜ್ಜಿಗೆ ತಿನ್ನುತ್ತಿದ್ದೆವು. ಶಾಲೆಯಲ್ಲಿ ಸಿಗುತ್ತಿದ್ದ ಈ ಸಜ್ಜಿಗೆ ತಿಂದರೆ ಸಹಜವಾಗಿ ಸಂಪ್ರದಾಯ ಬದ್ದರಾದ ನಮ್ಮ ಮನೆಯಲ್ಲಿ ಬೈಯುತ್ತಿದ್ದರು. ಸರಕಾರಿ ಸಜ್ಜಿಗೆ, ಅಲ್ಲಿ ಯಾರೋ ಮಾಡುತ್ತಾರೆ, ಅದರಲ್ಲಿ ಹುಳ ಎಲ್ಲ ಇರುತ್ತದೆ ಹೀಗೆ ನಮ್ಮನ್ನು ಹೆದರಿಸುತ್ತಿದ್ದರು. ಆದರೂ ನಾವು ಬೆಳಗ್ಗೆ ಶಾಲೆಗೆ ಹೋಗುವಾಗ ತಿನ್ನುವುದಿಲ್ಲ ಎಂದು ಯೋಚಿಸಿದರೂ ಸಜ್ಜಿಗೆ ಮಾಡಿ ಎಲ್ಲರನ್ನು ಕರೆಯುತ್ತಿರಬೇಕಾದರೆ ಸಹಪಾಠಿಗಳ ಜತೆಗೆ ಓಡಿ ಕುಳಿತು ಬಿಡುತ್ತಿದ್ದೆವು. ಮುಖ್ಯ ಕಾರಣ ಆಗ ಬಾಧಿಸುತ್ತಿದ್ದ ಹಸಿವು. ಹಸಿವು ಎಲ್ಲವನ್ನು ಮಾಡಿಸಿಬಿಡುತ್ತದೆ. ಅದೊಂದು ಶಾಲೆ ಕಲಿಸಿದ ಪಾಠ.
ಹಸಿವು ಎಂದರೆ ಬಾಲ್ಯದ ಆ ಹಸಿವಿಗೆ ಅದೊಂದು ಪ್ರಖರತೆ ಇತ್ತು. ಏನು ತಿಂದರೂ ಇಂಗದ ಹಸಿವು. ಬೆಳಗ್ಗೆ ಒಂದಷ್ಟು ತಿಳಿಗಂಜಿಯನ್ನು ತಿಂದು ಅದನ್ನೇ ಬುತ್ತಿ ಪಾತ್ರೆಗೆ ತುಂಬಿಸಿ ತಂದರೆ ಅದಕ್ಕಿಂತ ಈ ಸಜ್ಜಿಗೆಯ ಆಕರ್ಷಣೆ ಸಹಜವಾಗಿ ಅಧಿಕವಾಗಿತ್ತು. ಬಿಸಿ ಬಿಸಿ ಸಜ್ಜಿಗೆಯ ಪರಿಮಳವೇ ಅದ್ಭುತವಾಗಿತ್ತು. ಈಗ ಎಲ್ಲಬಗೆಯ ಪದಾರ್ಥಗಳನ್ನು ಹಾಕಿದ ಉಪ್ಪಿಟ್ಟಿನ ರುಚಿ ಆ ಸಜ್ಜಿಗೆ ಸಮಾನವಲ್ಲ ಅಂತ ಅನ್ನಿಸುತ್ತದೆ. ಬೆಳಗ್ಗೆ ಶಾಲೆ ಆರಂಭವಾಗುತ್ತಿದ್ದಂತೆ ಶಾಲೆಯ ಪಿಯೊನ್ ಅದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಎಲ್ಲಾ ತರಗತಿಯಿಂದ ಹಿರಿಯ ವಿದ್ಯಾರ್ಥಿಗಳನ್ನು ಸಹಾಯಕ್ಕೆ ಕರೆದು ಕೊಂಡು ಹೋಗಿ ಸಜ್ಜಿಗೆ ಪಾಕ ಸಿದ್ದ ಮಾಡಿಸುತ್ತಿದ್ದರು. ಹನ್ನೊಂದು ಘಂಟೆಯಾಗುತ್ತಿದ್ದಂತೆ ಒಂದೊಂದೇ ಕ್ಲಾಸಿನಿಂದ ಮಕ್ಕಳನ್ನು ಕರೆದು ಸಜ್ಜಿಗೆ ಬಡಿಸುತ್ತಿದ್ದರು. ಅವರ ಕರೆಗೆ ಮಕ್ಕಳು ಕಾದಿರುತ್ತಿದ್ದರು. ಸಜ್ಜಿಗೆ ತಿನ್ನುವುದಕ್ಕೆ ತಟ್ಟೆ ಮನೆಯಿಂದ ತರಬೇಕಿತ್ತು. ತಟ್ಟೆ ಇಲ್ಲದೆ ನಾವು ಕೆಲವರು ಕಾಗದದ ಚೂರಲ್ಲೂ ಹಾಕಿಸಿ ತಿನ್ನುತ್ತಿದ್ದೆವು. ಒಂದು ಬಾರಿ ಕಾಗದದಲ್ಲಿ ಸಜ್ಜಿಗೆ ಕೊಡುವುದಿಲ್ಲ ಎಂದಾಗ ನಾನು ಮನೆಯಿಂದ ಹಳೆಯ ಅಲ್ಯುಮಿನಿಯಂ ತಟ್ಟೆಯೊಂದನ್ನು ಯಾರಿಗೂ ತಿಳಿಯದಂತೆ ತೆಗೆದುಕೊಂಡು ಹೋಗಿದ್ದೆ. ಸಜ್ಜಿಗೆಯ ಆಕರ್ಷಣೆ, ಹಸಿವಿನ ಒತ್ತಡ ಇದಕ್ಕೆ ಪ್ರೇರೆಪಣೆ.
ಹಸಿವಿನ ಅರೆ ಹೊಟ್ಟೆಗೆ ಏನು ಸಿಕ್ಕಿದರೂ ಗಬ ಗಬ ತಿನ್ನುವ ತುಡಿತ. ಸಜ್ಜಿಗೆ ಯಾರು ಮಾಡಿದರೇ ಏನು? ಅಥವ ಅದರಲ್ಲಿ ಏನಿದ್ದರೆ ಏನು? ಮನೆಯವರಿಗೆ ತಿಳಿಯದಂತೆ ಅದನ್ನು ತಿನ್ನುವುದರಲ್ಲೇ ಒಂದು ಆತ್ಮ ತೃಪ್ತಿ. ಜಗಲಿಯಲ್ಲಿ ಕುಳಿತು ತಟ್ಟೆ ಇಟ್ಟು ಎಲ್ಲರ ಜತೆಗೆ ಕುಳಿತು ತಿಂದು ಏಳುವಾಗ ಹಸಿವನ್ನು ಜಯಿಸಿದ ಆ ತೃಪ್ತಿ ಈಗ ಯಾವ ಭೋಜನ ಸವಿದರೂ ಸಿಗುತ್ತಿಲ್ಲ. ಶಾಲಾ ಜೀವನದ ಬಳಿಕ ಒಂದು ಬಾರಿ ಪೈವಳಿಕೆ ಶಾಲೆಗೆ ಹೋಗಿದ್ದೆ. ಆಗ ಸಜ್ಜಿಗೆ ಮಾಡುತ್ತಿದ್ದ ಜಾಗ, ನಾವು ತಿನ್ನಲು ಕುಳಿತುಕೊಳ್ಳುತ್ತಿದ್ದ ಜಗಲಿಯಲ್ಲಿ ಓಡಾಡಿದ್ದೆ. ಆ ಸಜ್ಜಿಗೆಯ ರುಚಿಯ ಸವಿನೆನಪು ಅದು ಎಂದಿಗೂ ಮಾಸದು. ಒಂದೆರಡು ಬಾರಿ ಮನೆಗೆ ಗೋಧಿಯನ್ನು ತಂದು ಪುಡಿಮಾಡಿ ಅದೇ ರೀತಿ ಸಜ್ಜಿಗೆ ಮಾಡಲು ನೋಡಿದ್ದೆ. ಆದರೆ ಆ ರುಚಿ ಮಾತ್ರ ಅನುಭವಿಸುವುದಕ್ಕೆ ಸಾಧ್ಯವಾಗಲಿಲ್ಲ. ಈಗಲೂ ಶಾಲೆಯ ಬಳಿಗೆ ಹೋದಾಗ ಸಜ್ಜಿಗೆಯ ನೆನಪಾಗುತ್ತದೆ. ಆ ಕಾಲದಲ್ಲಿ ಅನ್ನ ತಿನ್ನುವವರು ಭಾಗ್ಯವಂತರು. ನಮಗೋ ಒಂದು ಹೊತ್ತಿಗೆ ಅನ್ನ ಸಿಗುತ್ತಿತ್ತು. ಉಳಿದಂತೆ ಗೋಧಿಯ ದೋಸೆ, ಒಣ ಮರಗೆಣಸನ್ನು ನೆನಸಿ ಅದರಿಂದ ತಯಾರಿಸಿದ ರೊಟ್ಟಿ ಪಲ್ಯ...ಹೀಗಿರುವಾಗ ಶಾಲೆಯ ಉಪ್ಪಿಟ್ಟು ಬಿಡುವುದಕ್ಕೆ ಮಕ್ಕಳಿಗೆ ನಮಗೆ ಮನಸ್ಸಾದರೂ ಹೇಗೆ ಬರಬೇಕು.
ನಮಗೆ ಬೇಕಾದದ್ದು ಬಯಸಿದ್ದೆಲ್ಲವನ್ನೂ ಕೈವಶ ಮಾಡುವ ಈ ಸಮಯದಲ್ಲಿ ಯಾವುದು ಸಿಕ್ಕರೂ ಅಂದು ಹಸಿವಿಗೆ ಎರವಾಗಿ ಒದಗಿ ಬರುತ್ತಿದ್ದ ಈ ಸಜ್ಜಿಗೆಗೆ ಸರಿಮಿಗಿಲು ಎನಿಸುವುದಿಲ್ಲ. ಅದರಲ್ಲೂ ಕಾಗದದ ಚೂರಿನಲ್ಲಿ ಸಜ್ಜಿಗೆ ಹಾಕಿಸಿ ತಿನ್ನುತ್ತಿದ್ದ ಆ ದಿನಗಳು, ಆ ಸವಿನೆನಪನ್ನು ಮತ್ತೊಮ್ಮೆ ಅನುಭವಿಸುವುದಕ್ಕೆ ಆದರೂ ಒದಗಿ ಬರಬಾರದೇ ಅಂತ ಅನ್ನಿಸುವುದುಂಟು.
No comments:
Post a Comment