Saturday, June 29, 2024

ಕೊಹ್ಲಿ ಎಂಬ ಶ(ತ)ಕ ಪುರುಷ

   ಒಂದು ದೊಡ್ಡ ಅಧ್ಯಾಯ ಮುಗಿಸಿದಾಗ ಲೇಖಕ ಕೂಡ ನಿಟ್ಟುಸಿರು ಬಿಟ್ಟು ಬೆರಳ ನಟಿಕೆ ಮುರಿದು ನಿರಾಳನಾಗಿ ಬಿಡುತ್ತಾನೆ. ಹಾಗೆ... ವಿರಾಟ್ ಕೊಹಿಲಿ ಎಂಬ ಒಂದು ಅಧ್ಯಾಯ ಮುಗಿಸುವಾಗ ಒಂದು ನಿಟ್ಟುಸಿರು ಕ್ರಿಕೆಟ್ ಪರಮಾತ್ಮನ ಉಸಿರಿಂದ ಬಂದಿರಬೇಕು. ಕ್ರಿಕೆಟ್ ಚರಿತ್ರೆಯ ಅದ್ಭುತ ಅಧ್ಯಾಯ ಮುಗಿದ ಅಚ್ಚರಿ ಎಂದರೆ ಸ್ವತಃ ಲೇಖಕನ ನಿರೀಕ್ಷೆಯೂ ಇದನ್ನು ಮುಗಿಸುವುದಕ್ಕೆ ಯೋಚಿಸಿರಲಾರದು. ಹಾಗೆ ಅನಿರೀಕ್ಷಿತ ಉಪಸಂಹಾರವಿದು. 
ಜಗತ್ತಿನಲ್ಲಿ ಶಿಲೆಯೂ ಶಾಶ್ವತವಲ್ಲ...ಇನ್ನು‌ಮನುಷ್ಯ ಮಾತ್ರ ಹೇಗೆ ಶಾಶ್ವತವಾಗಬಲ್ಲ? ಆದರೂ ಒಂದು ಬೇಸರ ಛೇ ಮುಗಿದು ಹೋಯಿತೇ? 
ವಿರಾಟ್ ಕೊಹಿಲಿ...ಆಧುನಿಕ ಜಗತ್ತಿನ
ಅದ್ಭುತ ಎನಿಸುವ ಗಣಕಯಂತ್ರದ ಎದುರು ಒಂದು  ಪರಿಪೂರ್ಣ ಕ್ರಿಕೆಟ್  ದಾಂಡಿಗನನ್ನು ಸೃಷ್ಟಿ ಮಾಡುವುದಕ್ಕೆ  ಹೇಳಿದರೆ ಸಂಶಯ ಬೇಡ ಅದು ವಿರಾಟ್ ಕೊಹ್ಲಿ ಎಂಬ ಯಂತ್ರ ಮಾನವನನ್ನು ಸೃಷ್ಟಿ ಮಾಡಿಬಿಡುತ್ತದೆ. 
ಗವಾಸ್ಕಾರ್ ವೆಂಗ್ ಸರ್ಕಾರ್ ಹೆಚ್ಚೇಕೆ ಸಚಿನ್ ದ್ರಾವಿಡ್ ಗಂಗೂಲಿ ತನಕವೂ,    ಒಂದು ಶತಕ ಹೇಳಿದರೆ ಚಿಲ್ಲರೆ ಅಂಗಡಿಯಲ್ಲಿ ಒಂದೋ ಎರಡೋ ಬಿಕರಿಯಾಗುವ ವಸ್ತುವಾಗಿತ್ತು. ಆದರೆ ಈ ಯಂತ್ರ ಮಾನವನ ಅವತಾರ ಯಾವಾಗ ಆರಂಭವಾಯಿತೋ ಶತಕ ಎಂಬುದು ಹೋಲ್ ಸೇಲ್ ಅಂಗಡಿಯಂತೆ  ಬಿಕರಿಯಾಗತೊಡಗಿತು. ಯಬ್ಬಾ ಅದೆಷ್ಟು ಸೆಂಚುರಿಗಳು? ವೈರಿ ಪಡೆಯೂ ಶ್ಲಾಘಿಸುವ ಶತಕಗಳು. ಆದರೆ ಅದಕ್ಕೂ ಒಂದು ವಿರಾಮ ಈಗ ಎಳೆದಾಯಿತು.
ಕ್ರೀಡೆ ಎಂಬುದು ಕೇವಲ ಕ್ರೀಡೆ ಎಂದು ಬಿಟ್ಟು ಬಿಡುವುದಲ್ಲ. ಅದರಲ್ಲೂ ಒಂದು ಮಾನಸಿಕತೆ ಇದೆ. ಸಾಧನೆ ತಪಸ್ಸಿನ ಹಾದಿ ಇದೆ. ಇದೆಲ್ಲವನ್ನೂ ಕೊಹಿಲಿಯಲ್ಲಿ ಕಾಣಬಹುದು. ಅದು ಸೋಲನ್ನು ಸುಲಭದಲ್ಲಿ ಅಂಗೀಕರಿಸದ ಹಟಮಾರಿತನ. 
ಕೊಹ್ಲಿಯಲ್ಲಿ  ಇನ್ನೂ ಆಟದ ಕಸುವಿದೆ.. ಕೊನೆಯ ಪಂದ್ಯ ಅದಕ್ಕೆ ಸಾಕ್ಷಿ. ಕೊಹ್ಲಿಯಂತಹ ವ್ಯಕ್ತಿಯಲ್ಲಿ ಅದು ಸುಮ್ಮನೇ ಮುಗಿಯು‌ವಂತಹುದಲ್ಲ. ಆದರೂ ಕೊಹ್ಲಿಗೆ ಇನ್ನು ಸಾಕು ಎನಿಸುವುದಕ್ಕೆ ಆತನ ಮನದಾಳದ ಕ್ರೀಡಾ ಸ್ಪೂರ್ತಿಯೇ ಕಾರಣ. ಅತನನ್ನು‌ ಮಾದರಿಯಾಗಿಸಿ ಬರುವ ಹೊಸ ಹುಡುಗರ ದಂಡೇ ಇದೆ. ಆ ಹೊಸ ಚಿಗುರು ಇನ್ನೂ ಅರಳುವುದಕ್ಕೆ ಅವಕಾಶದ ಅಗತ್ಯವಿದೆ. ತನ್ನ ಶತಕದ ದಾಹವನ್ನು ಅದೆಂದೋ ತಣಿಸಿ ಸತತ ತಿಂದು ತೇಗಿದವನಿಗೆ ವಿರಾಮ ಬೇಕೆಂದು ಕಂಡರೆ ಅದು ಅಚ್ಚರಿಯೇನಲ್ಲ. ಆದರೂ ಅಪ್ಪಟ ಕ್ರೀಡಾ ಪ್ರೇಮಿಗಳ ಬಯಕೆ ಒಂದೇ ಇನ್ನೂ  ಈತರದ ವಿರಾಟ್ ಶಕ್ತಿ ನಮ್ಮ. ಭಾರತದಿಂದ ಉದಿಸಿ ಬರಲಿ. ಕೊಹ್ಲಿ ಎಂಬ ವಿರಾಟ್ ಸ್ವರೂಪಕ್ಕೆ ಹಾರ್ದಿಕ ವಿದಾಯ.







Sunday, June 23, 2024

ಜೀವನ ಶೈಲಿ

        ಸಾಮಾನ್ಯವಾಗಿ ಅಲೂ ಗಡ್ಡೆ ಗೆಣಸು ಕಡಲೇ ಬೇಳೆ ಎಂದರೆ ಎಲ್ಲರೂ ಹೌ ಹಾರುತ್ತಾರೆ. ಅದು ವಾಯುದೋಷಕ್ಕೆ (gas trouble) ಕಾರಣ ಅಂತ ತಿನ್ನದೇ ಉಳಿಯುತ್ತಾರೆ. ಆದರೆ ವಾಸ್ತವದಲ್ಲಿ ಬದಲಾಗಬೇಕಾಗಿರುವುದು ಜೀವನ ಶೈಲಿ. ಅಸಮರ್ಪಕ ಆಹಾರ ಶೈಲಿ ಹೆಚ್ಚು ವಾಯುದೋಷಕ್ಕೆ ಕಾರಣವಾಗುತ್ತದೆ. ಹಲವರು ಪೌಷ್ಟಿಕ ಅಂತ ಕೆಲವು ಆಹಾರವನ್ನು ತೀರ ಅಸಮರ್ಪಕ ರೀತಿಯಲ್ಲೇ ಸೇವಿಸುತ್ತಾರೆ, ಇನ್ನು ತಿನ್ನುವ ಕ್ರಮಗಳು ಕೂಡ ಅಸಮರ್ಪಕವಾಗಿರುತ್ತದೆ. ಚಹ ಕಾಫಿ ಇತರ ಪಾನೀಯ ಸೇವನೆಯೂ ಅಲೂಗಡ್ಡೆಗಿಂತ ಹೆಚ್ಚು ವಾಯು ಸಮಸ್ಯೆಯನ್ನು ತರಬಲ್ಲುದು. ಹಣ್ಣುಗಳನ್ನು ತಿನ್ನಬೇಕಾದರೆ ಮಧ್ಯಾಹ್ನದ ನಂತರ ತಿನ್ನುವುದನ್ನು ದೂರ ಮಾಡಬೇಕು. ಊಟದ ನಂತರ ಹಣ್ಣು ಹಣ್ಣಿನ ರಸ ಐಸ್ ಕ್ರೀಮ್ ನಂತಹ ಆಹಾರ ಪಾನೀಯವನ್ನು ತಿನ್ನುವುದು ಅತ್ಯಂತ ಹೆಚ್ಚು ವಾಯುದೋಷಕ್ಕೆ ಕಾರಣವಾಗುತ್ತದೆ. ಹಣ್ಣು ಪಾನೀಯಗಳು ಬೇಗನೇ ಕರಗುವುದರಿಂದ ಆಹಾರದ ನಂತರ ಇದನ್ನು ಸೇವಿಸಿದರೆ ತಿಂದ ಆಹಾರ ಕರಗುವುದಕ್ಕೆ ಇದು ಬಿಡುವುದಿಲ್ಲ. ಹಾಗಾಗಿ ಇವುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅತ್ಯುತ್ತಮ. ಇನ್ನು ಆಹಾರದ ಮಧ್ಯೆ ನೀರು ಸೇವಿಸುವುದು ಇದು ಅತ್ಯಂತ ಮಾರಕ. ಚಹಕಾಫಿ ಸೇವನೆಯೂ ಜೀರ್ಣಾಂಗದ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ.  ಇನ್ನು ವ್ಯಾಯಾಮ ಬೇಕಾಬಿಟ್ಟಿ ತೋಚಿದಂತೆ ವ್ಯಾಯಾಮ ಮಾಡುವುದು, ಸರಿಯಾದ ಉಸಿರಾಟದ ಕ್ರಮ ಅನುಸರಿಸದೆ  ಇರುವುದು ದೀರ್ಘಾವಧಿಯಲ್ಲಿ ಜೀರ್ಣಾಂಗದ ಮೇಲೆ ಪರಿಣಾಮ ಬೀರಿ ವಾಯು ಸಮಸ್ಯೆ ಉಂಟಾಗುತ್ತದೆ. ಮುಖ್ಯವಾಗಿ ಈಗ ಆಲೂಗಡ್ಡೆ ತಿಂದರೆ ಕರಗುವುದಿಲ್ಲ ಎಂದಿದ್ದರೆ ನಾವು ಹಲವು ದಿನಗಳಿಂದ ಅನುಸರಿಸಿದ ಜೀವನ ಶೈಲಿಯೇ ಕಾರಣವಾಗುತ್ತದೆ ಹೊರತು ಆಲೂಗಡ್ಡೆಯಲ್ಲ. ನಮ್ಮ ಜೀವನ ಶೈಲಿಯಿಂದ ಹೆಚ್ಚು ಕರುಳಿನ ಸಾಮಾರ್ಥ್ಯ ಕಡಿಮೆಯಾಗುವುದರಿಂದ ಈ ಎಲ್ಲ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಸರಿಯಾಗಿ ರಾತ್ರಿ ನಿದ್ರೆ ಮಾಡದೇ ಇರುವುದು, ಹಗಲು ಹೊತ್ತಿನಲ್ಲಿ ಗಾಢ ನಿದ್ದೆ ಮಾಡುವುದು ಸಹ ಅಜೀರ್ಣ ಬಾಧೆಗೆ ಕಾರಣವಾಗುತ್ತದೆ.  ಇಂದು ಮಲಬದ್ಧತೆಯಿಂದ ನರಳದವರು ಯಾರೂ ಇಲ್ಲ. ಅದಕ್ಕೆ ಕಾರಣ ಅಸಮರ್ಪಕ ಜೀವನ ಶೈಲಿಯೇ ಹೊರತು ಆಹಾರಗಳಲ್ಲ. ಆದರೆ ನಾವು ಆಹಾರವನ್ನು ಬದಲಿಸುತ್ತೇವೆ, ಆದರೆ ಜೀವನ ಶೈಲಿಯನ್ನು ಬದಲಿಸುವುದಿಲ್ಲ. 

ಮಧ್ಯರಾತ್ರಿ ದೇಹಕ್ಕೆ ದೀರ್ಘವಾದ ಉಸಿರಾಟದ ಅವಶ್ಯಕತೆ ಇರುತ್ತದೆ. ಆಗ ಖಡ್ಡಾಯವಾಗಿ ಗಾಢ ನಿದ್ರೆಯನ್ನು ಶರೀರಕ್ಕೆ ಒದಗಿಸಬೇಕು. ಅದಿಲ್ಲದಿದ್ದರೆ ಹಲವು ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ. ವ್ಯಾಯಾಮ ಶರೀರಕ್ಕೆ ಬೇಕು. ಆದರೆ ಅದು ಅಸಮರ್ಪಕ ರೀತಿಯಲ್ಲಿ ಇರಬಾರದು.  ಯಾವುದೇ ಘನವಾದ ಆಹಾರ ತಿಂದನಂತರ ಆರುಘಂಟೆಯ ಅವಧಿಗೆ ವ್ಯಾಯಾಮ ಮಾಡುವುದ್ ದೇಹಕ್ಕೆ ಗಾಢವಾದ ವಿಪರೀತ ಪರಿಣಾಮವನ್ನುಉಂಟು ಮಾಡುತ್ತದೆ. ಹಾಗಾಗಿ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು. ಮಾಡಬೇಕಾದ ಕೆಲಸಕ್ಕಿಂತಲೂ ಮಾಡಲೇ ಬಾರದ ತಪ್ಪು ಕೆಲಸ ಪ್ರವೃತ್ತಿಯಿಂದ ದೂರವಿದ್ದರೆ ಆಲುಗಡ್ಡೆ ಎಂದೇನು ಕಲ್ಲು ತಿಂದರೂ ಕರಗಿಸುವ ಸಾಮಾರ್ಥ್ಯ ಕರುಳಿಗೆ ಒದಗಿಬರುತ್ತದೆ. ಆಜೀರ್ಣ ಸಮಸ್ಯೆಯೇ ದೇಹತೂಕ ಅಧಿಕವಾಗುವುದಕ್ಕೆ ಮೂಲ ಕಾರಣ. ಹೊರತು ವ್ಯಾಯಾಮದ ಕೊರತೆಯಲ್ಲ. ಹಾಗಾಗಿ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿರುತ್ತದೆ. 

ಇದೆಲ್ಲಕ್ಕಿಂತ ಮುಖ್ಯವಾಗಿ ಉತ್ತಮ ಒತ್ತಡ ಉದ್ವೇಗ ಭರಿತ ಮನಸ್ಸನ್ನು ಹೊಂದಿಕೊಳ್ಳಬೇಕು. ಸದಾ ಉದ್ವಿಗ್ನವಾಗಿರುವುದು ದೇಹದ ಜೀರ್ಣದ ವ್ಯವಸ್ಥೆಯಲ್ಲಿ ವಿಪರೀತ ಪರಿಣಾಮವನ್ನು ಬೀರುವುದರಿಂದ ಆಲುಗಡ್ಡೆ ಕಡಲೆ ಬೇಳೆಗೆ ದೂರುವುದಕಿಂತ ಎಲ್ಲ ದೌರ್ಬಲ್ಯಗಳನ್ನು ಆಭಾಸಗಳನ್ನು ದೂರ ಮಾಡುವುದು ಉತ್ತಮ ಜೀವನಕ್ಕೆ ಕಾರಣವಾಗುತ್ತದೆ. 


Wednesday, June 19, 2024

ಭಿಕ್ಷಾಟನೆ

        ಇತ್ತೀಚೆಗೆ ಒಂದು ಪ್ರಸಿದ್ಧ ಕ್ಷೇತ್ರಕ್ಕೆ ಹೋಗಿದ್ದೆ. ಕ್ಷೇತ್ರ ಯಾವುದು ಎಂಬುದು ಇಲ್ಲಿ ಪ್ರಸ್ತುತವಲ್ಲ. ಅಗಾಗ ಈ ಕ್ಷೇತ್ರಕ್ಕೆ ಹೋಗುತ್ತಿರುತ್ತೇನೆ. ಹಾಗೇ ಹೋದವನು ಮಧ್ಯಾಹ್ನ ಪೂಜೆ ಮುಗಿಸಿ  ಪ್ರಸಾದ ಭೋಜನ  ಸ್ವೀಕರಿಸಿದೆ. ಸಾಮಾನ್ಯವಾಗಿ ಊಟವಾದ ಕೂಡಲೇ ಹೊರಡುವವನು ಆದಿನ ಯಾಕೋ ಕ್ಷೇತ್ರ ಪರಿಸರ ಬಿಟ್ಟು ಬರುವುದಕ್ಕೆ ಮನಸ್ಸಾಗಲಿಲ್ಲ. ಪ್ರಶಾಂತವಾದ ಪರಿಸರದಲ್ಲಿ ಮತ್ತೂ ಒಂದಷ್ಟು ವಿಶ್ರಾಂತಿ ಪಡೆದು ನಿಧಾನವಾಗಿ ಹೊರಟೆ. ಸೇರಿದ ಭಕ್ತರೆಲ್ಲ ನಿರ್ಗಮಿಸಿ ತೆರಳಿದ್ದರು. ಒಂದೆರಡು ಸಿಬ್ಬಂದಿಗಳು ಬಿಟ್ಟರೆ ದೇವಸ್ಥಾನ ನಿರ್ಮಾನುಷ್ಯವಾಗಿತ್ತು. ಹಾಗೆ ದೇವಸ್ಥಾನದ ಹೋರಾಂಗಣದಲ್ಲಿ ಅಡ್ಡಾಡಿ ಹೊರಡುವಾಗ ಒಬ್ಬರು ಪರಿಚಯದ ನಗೆ ನಕ್ಕರು. ನಾನೂ ಪ್ರತಿ ನಗು ಹರಿಸಿದೆ. ಆ ವ್ಯಕ್ತಿಯನ್ನು ದೇವಸ್ಥಾನದಲ್ಲಿ ವಾದ್ಯ ನುಡಿಸುವ ಬಳಗದಲ್ಲಿ ನೋಡಿದ್ದೆ. ಆಗಾಗ ಹೋಗುತ್ತಿರುವುದರಿಂದ ಮುಖ ಪರಿಚಯ ಇತ್ತು. ಆದರೆ ಆ ವ್ಯಕ್ತಿಗತವಾಗಿ ನನಗೆ ಪರಿಚಯವಿಲ್ಲ. ಆದರೆ ನನ್ನ ಪರಿಚಯ ಅವರಿಗೆ ಇದ್ದಂತೆ ಇಲ್ಲ. ನಾನು ಆಗಾಗ ಹೋಗುತ್ತಿರುವುದರಿಂದ ಪರಿಚಯ ಇರಬಹುದು ಎಂದುಕೊಂಡು ನಾನು ನಗು ಹರಿಸಿದ್ದೆ.  ಆದರೆ ಈ  ವ್ಯಕ್ತಿ ನಕ್ಕ ಬಗ್ಗೆ ಒಂದು ಆತಂಕದ ಕುತೂಹಲವಿತ್ತು. ಸಾಮಾನ್ಯವಾಗಿ ಊರಿಗೆ ಹೋದರೆ ಹೀಗೆ ಪರಿಚಯದವರು ಸಿಗುವುದು ಉಂಟು. ಯಾವಾಗಲೂ ಅಷ್ಟೇನೂ ಮಾತನಾಡದವರು ಕೆಲವೊಮ್ಮೆ ಸಿಗುವಾಗ ಬಹಳ ಪರಿಚಯದವರಂತೆ ನಗುತ್ತಾ ಬರುವಾಗ ನನಗೆ ಅನುಮಾನಿಸುವುದಕ್ಕೆ ಕಾರಣ ಇಲ್ಲದಿಲ್ಲ.

ಬಂದ ವ್ಯಕ್ತಿ ಮೊದಲಿಗೆ ಅದೂ ಇದು ಮಾತನಾಡಿ ನಾನು ಎಲ್ಲಿದ್ದೇನೆ ಎಂದು ತಿಳಿದುಕೊಂಡು ಲೋಕಾಭಿರಾಮವಾಗಿ ಮಾತನಾಡಿ ಕೊನೆಯಲ್ಲಿ " ಚಹ ಕುಡಿಯಲಿಕ್ಕೆ ಏನಾದರೂ ಕೊಡಿ. ಇಲ್ಲಿ ವಾದ್ಯಕ್ಕೆ ಇದ್ದೇನೆ. ಖರ್ಚಿಗೆ ಕಷ್ಟ" ಮತ್ತೂ ಏನೇನೋ ಹೇಳಿದ. ಸಾಮಾನ್ಯವಾಗಿ ಹಲವು ಕಡೆಯಲ್ಲಿ ಈ ಅನುಭವ ಸಹಜ. ಪರಿಚಯ ಇಲ್ಲದೇ ಇದ್ದರೂ ನಗುತ್ತಾ  ಬಹಳ ಪರಿಚಯದವರಂತೆ  ವರ್ತಿಸುತ್ತಾರೆ. ಕೊನೆಯಲ್ಲಿ ಹೀಗೆ ಹಣ ಕೇಳುವುದು ನನ್ನ ಅನುಮಾನ ಆತಂಕಕ್ಕೆ ಕಾರಣವಾಗುತ್ತದೆ. ಕದಿಯುವುದಕ್ಕಿಂದ ಬೇಡಿ ತಿನ್ನುವುದು ಉತ್ತಮವಾದರೂ ಕೆಲವರಿಗೆ ಈ ಬೇಡಿ ತಿನ್ನುವುದರಲ್ಲೇ ಏನೋ ಸಂತೋಷವಿದ್ದಂತೆ ಭಾಸವಾಗುತ್ತದೆ.  

ಮನುಷ್ಯ ದುಡಿದು ತಿನ್ನುವುದಕ್ಕೆ ಸಾಧ್ಯವಿರುವಾಗ ದುಡಿದು ತಿನ್ನುವ ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ತೀರ ಅಸಹಾಯಕ ಪರಿಸ್ಥಿತಿಯಾದರೆ ಏನೋ ಅಂತ ಒಪ್ಪಿಕೊಳ್ಳಬಹುದಾದರೆ, ಅಂತಹ ಅಸಹಾಯಕತೆ ಕೆಲವರಿಗಷ್ಟೇ ಇರುತ್ತದೆ ಎಂಬುದು ಸತ್ಯ.    ಹಾಗೆ ಅಸಹಾಯಕತೆ ಇದ್ದರೆ ಪರಿಚಯದವರಲ್ಲಿ ಮಾತ್ರವೇ ಬೇಡುವುದು ಒಂದು ವಿಧದಲ್ಲಿ ಸರಿ ಎನ್ನಬಹುದಾದರೂ ಹಲವು ಸಲ ಪರಿಚಯದವರೂ ಯಾವಾಗಲೂ ಸಿಕ್ಕರೆ ಮಾತನಾಡದೇ ಇದ್ದವರು ಮಾತನಾಡಿಕೊಂಡು ಬಂದು ದುಡ್ದು ಕೇಳುವುದು ಇದೆ.   ಇನ್ನು ಒಂದು ಪ್ರಸಿದ್ಧ ಕ್ಷೇತ್ರದಲ್ಲಿದ್ದುಕೊಂಡು ಹೀಗೆ ಬಂದವರಲ್ಲಿ ದುಡ್ದು ಕೇಳುವುದು ಹೊರಗೆ ಭಿಕ್ಷಾಟನೆ ಮಾಡುವವರಿಗಿಂತ ಹೀನ ಅಂತ ಅನ್ನಿಸುತ್ತದೆ. ದೇವರು ಪ್ರತಿಯೊಬ್ಬನಿಗೂ ಯೋಗ್ಯತೆಗೆ ಅನುಸಾರವಾಗಿ ಕರುಣಿಸಿರುತ್ತಾನೆ. ಆ ದೇವಸ್ಥಾನದಲ್ಲೂ ಅಷ್ಟೇ ಅಷ್ಟೋ ಇಷ್ಟೋ ಇರಬಹುದು. ಇನ್ನು ಕೆಲವರು ಅವರಾಗಿಯೇ ದಾನ ಬುದ್ಧಿಯಿಂದ ಕೊಡಲೂ ಬಹುದು. ಆದರೆ ಹೀಗೆ ಭಿಕ್ಷಾಟನೆಗೆ ಇಳಿದರೆ ದೇವರು ಕೊಟ್ಟದ್ದರಲ್ಲಿ ನಾವು ತೃಪ್ತರಲ್ಲ ಎಂದು ಆ ದೇವರನ್ನು ಮತ್ತು ಕ್ಷೇತ್ರವನ್ನು ಅವಮಾನಿಸಿದಂತೆ.   ಬಡತನ, ಅಸಹಾಯಕತೆ ಇರಬಹುದು ಆದರೆ ಅದಕ್ಕೆ ಕೇವಲ ಹೀಗೆ ಸಿಕ್ಕವರಲ್ಲಿ ಬೇಡುವುದಲ್ಲ. ಇನ್ನು ಕ್ಷೇತ್ರದಲ್ಲಿಉಳಿದವರೂ ಇದರ ಬಗ್ಗೆ ಗಮನ ಹರಿಸಬೇಕು. ಆರ್ತರು ಇದ್ದರೆ ಅದರ ಬಗ್ಗೆ ಜತೆಗೆ ದುಡಿಯುವವರು ಒಂದಷ್ಟು ಸ್ಪಂದಿಸಬಹುದು. ಸಾಮಾನ್ಯವಾಗಿ ದೇವಸ್ಥಾನದಲ್ಲಿ ತಟ್ಟೆಯ ಸಂಗ್ರಹ ಅರ್ಚಕರಿಗೇ ಸೇರಿರುತ್ತದೆ. ಇದು ವಾಡಿಕೆ. ಹಾಗಿರುವ ಇದರಲ್ಲಿ ಒಂದಷ್ಟು ಚಿಕ್ಕ ಪಾಲು  ಹೀಗೆ ಸಹವರ್ತಿ ಆರ್ತರಿಗೆ ಕೊಡಬೇಕು. ಇದು ಧರ್ಮ. 

ಸಾಮಾನ್ಯವಾಗಿ ನಾನು ಯಾವುದೇ ರೀತಿಯ ಭಿಕ್ಷಾಟನೆಗೆ ಸ್ಪಂದಿಸುವವನಲ್ಲ. ಅದಕ್ಕೆ ಹಲವು ಕಾರಣಗಳಿವೆ. ಬಾಲ್ಯದಲ್ಲಿ ತೀವ್ರ ಬಡತನದಲ್ಲಿ ಬದುಕಿದ ಜೀವನ, ಆದರೂ ಯಾರಲ್ಲೂ ಬೇಡುವುದಕ್ಕೆ ಸ್ವಾಭಿಮಾನ ಅಡ್ಡ ಬರುತ್ತಿತ್ತು. ತೀರ ಅಸಹಾಯಕ ಪರಿಸ್ಥಿತಿಯಲ್ಲೂ ಆಶೆಗಳನ್ನೇಲ್ಲ ಹತ್ತಿಕ್ಕಿಕೊಂಡು ತೃಪ್ತರಾದದ್ದು ಇದೆ. ಹಾಗಾಗಿ ಭಿಕ್ಷೆ ಎತ್ತುವವರನ್ನು ಕಂಡಾಗ ಅನುಕಂಪಕ್ಕಿಂತಲೂ ಇದು ಅಪರಾಧ ಎಂಬ ಮನೋಭಾವ ಅದೇಕೋ ಬಂದು ಬಿಟ್ಟಿದೆ. 

ಇನ್ನು ನಮ್ಮ ಸಾಮಾಜಿಕ ರೀತಿ ನೀತಿಗಳು. ಸರಕಾರ  ಐವತ್ತು ವರ್ಷಗಳ ಹಿಂದೆ ಗರೀಭಿ ಹಠಾವೋ ಅಂತ ಘೋಷಣೆ ಕೂಗಿತ್ತು. ನಮ್ಮ ಬಾಲ್ಯದಲ್ಲಿ ಇದೊಂದು ಭ್ರಮೆಯಾಗಿ ನಮ್ಮ ಬಡತನ ಎಲ್ಲ ಪರಿಹಾರವಾಗಬಹುದು ಎಂದುಕೊಂಡಿದ್ದೆವು. ಆದರೆ ಈಗ ಬಡವರಿಗೆ ಉಚಿತ ಕೊಡುಗೆಗಳನ್ನು ಕೊಡಬೇಕಾದ ಅಸಹಾಯಕತೆ ದಯನೀಯ ಪರಿಸ್ಥಿತಿ ಸರಕಾರಕ್ಕಿದೆ.  ಅದಕ್ಕಾಗಿ ಮಧ್ಯಮ ವರ್ಗದ ಎದುರು ಸರಕಾರವೇ ಭಿಕ್ಷಾಟನೆಗೆ ಇಳಿದಿದೆ ಎಂದರೂ ತಪ್ಪಾಗಲಾರದು. ಹಾಗಾದರೆ ಹಿಂದೆ ಹೇಳಿದ ಗರೀಭಿ ಹಠಾವೋ ಎಂಬುದು ಮಾಡಿದ ವಂಚನೆ ಅಂತ ಅನ್ನಿಸಬಹುದು.  ಬಡತನದ ಬಗ್ಗೆ ಚಿಂತನೆ ಪ್ರಾಮಾಣಿಕವಾಗಿಲ್ಲ ಎಂಬುದರ ದ್ಯೋತಕವಿದು. ಆದರೇನು ಸಾಮಾಜಿಕ ನಿಯಮಗಳಿಗೆ ನಾವು ಬಾಧ್ಯಸ್ಥರು. ಹಾಗಿರುವಾಗ ಈ ನಡುವೆ ಹೀಗೆ ಭಿಕ್ಷೆ ಎತ್ತುವವರಿಗೆ ಭಿಕ್ಷೆ ಹಾಕಬೇಕಾದ  ಅನಿವಾರ್ಯತೆ ನಮಗೆ ಬೇಕಿಲ್ಲ. 

ಈಗೀಗ ಇಂತಹ ಕ್ಷೇತ್ರಗಳಿಗೆ ಹೋಗುವುದಕ್ಕೆ ಮತ್ತೊಮ್ಮೆ ಯೋಚಸಬೇಕಾಗುತ್ತದೆ. ವಾಸ್ತವದಲ್ಲಿ ಮನೆಯೊಳಗಿನ ಮನದೊಳಗಿನ ಆರಾಧನೆಗೆ ಹೆಚ್ಚು ಒತ್ತುಕೊಡುವವನು ನಾನು. ದೇವರು ಎಂಬ ಚಿಂತನೆಗೆ ವಿಶಾಲವಾಗಿಯೂ ಸಂಕುಚಿತವಾಗಿಯೂ ಚಿಂತಿಸಬಲ್ಲ ಬುದ್ದಿಮತ್ತೆ ನಮಗಿದೆ. ಅದನ್ನು ಅನುಸರಿಸುವುದೇ ಸೂಕ್ತ ಅಂತ ಅನ್ನಿಸುತ್ತದೆ. 






Wednesday, June 5, 2024

ಮೂರು ಮಂಗಗಳು

ಚಿತ್ರ ಕೃಪೆ ಅಂತರ್ಜಾಲಕ್ಕೆ ಧನ್ಯವಾದಗಳು

ಚಿತ್ರ ಕೃಪೆ  :ಅಂತರ್ಜಾಲಕ್ಕೆ ಧನ್ಯವಾದಗಳು

ಒಂದು ಊರಿನ ಅಂಚಿನಲ್ಲಿದ್ದ ಮರದ ಮೇಲೆ ಮೂರು ಮಂಗಗಳು ಇದ್ದವು. ಊರವರಿಗೆ ಆ ಮಂಗಗಳ ಮೇಲೆ ಅತೀವ ಅಭಿಮಾನ. ಯಾಕೆಂದರೆ ಆ ಮಂಗಗಳು ಹಲವು ಸಲ ಸುಮ್ಮನೆ ಕುಳಿತು ಬಿಡುತ್ತಿದ್ದವು. ಆಗ ಒಂದು ಮಂಗ ಕೆಟ್ಟದ್ದನ್ನು ನೋಡಲಾರೆ ಎಂದು ಕೊಂಡು ಕಣ್ಣು ಮುಚ್ಚಿದರೆ, ಇನ್ನೊಂದು ಕೆಟ್ಟದ್ದನ್ನು ಕೇಳಲಾರೆ ಅಂತ ಕಿವಿಯನ್ನೂ ಮತ್ತೊಂದು ಮಂಗ ಕೆಟ್ಟದ್ದನ್ನು ನುಡಿಯಲಾರೆ ಎಂದುಕೊಂಡು ಬಾಯಿಯನ್ನು ಮುಚ್ಚಿಕೊಳ್ಳುತ್ತಿದ್ದವು. ಹೀಗಾಗಿ ಊರವರಿಗೆ  ಅವುಗಳು ಸಾರುವ ಸಂದೇಶಕ್ಕೆ ಅದರ ಮೇಲೆ ಅತೀವ ಅಭಿಮಾನ. ಒಂದು ದಿನ ಕಣ್ಣು ಮುಚ್ಚಿದ ಮಂಗ ಹೇಳಿತು, ನಾನು ಕೆಟ್ಟದ್ದನ್ನು ಕೇಳುತ್ತೇನೆ, ಆಗ ಕೆಟ್ಟದ್ದನ್ನು ಮಾತನಾಡಿಬಿಡುತ್ತೇನೆ. ಆಗ ಮನಸ್ಸಿಗೆ ಅದೊಂದು ರೀತಿಯ ಸಮಾಧಾನ ಸಿಗುತ್ತದೆ. ಆಗ ಕಿವಿಯನ್ನು ಮುಚ್ಚಿದ ಮಂಗ ನನಗೂ ಹಾಗೆ ಕೆಟ್ಟದ್ದನ್ನು ನೋಡಿಬಿಡುತ್ತೇನೆ, ಆಗ ಕೆಟ್ಟದ್ದು ಮಾತನಾಡಿ ಬಿಡುತ್ತೇನೆ. ಮನಸ್ಸಿಗೆ ಸಮಾಧಾನವಾಗುತ್ತದೆ. ಇನ್ನೊಂದು ಮಂಗ ಸುಮ್ಮನಿರಬೇಕೆ? ಇಲ್ಲ, ಅದು ಹೇಳಿತು ನಾನೂ ಕೆಟ್ಟದ್ದನ್ನು ಕೇಳುತ್ತೇನೆ ಆಗ ಕಣ್ಣಿಂದ ನೋಡುವ ಆಶೆಯಾಗಿ ಕೆಟ್ಟದ್ದು ನೋಡುತ್ತೇನೆ ಸಮಾಧಾನವಾಗುತ್ತದೆ. ಆದರೆ ಮಂಗಗಳು ಹೀಗೆ ಮಾತನಾಡುವುದು ಊರವರಿಗೆ ತಿಳಿಯುವುದಿಲ್ಲ. ಅವರ ಅಭಿಮಾನ ಹಾಗೇ ಇರುತ್ತದೆ. ಯಾವುದನ್ನೋ ಮಾಡಬಾರದೋ ಅವೆಲ್ಲವನ್ನೂ ಆ ಮಂಗಗಳು ಮಾಡುತ್ತವೆ. ಆದರೆ ಊರವರಿಗೆ ಅಭಿಮಾನ ಕಡಿಮೆಯಾಗುವುದಿಲ್ಲ. ಸಂದೇಶ ಇಷ್ಟೇ ,ಯಾವುದನ್ನೇ ಕೇಳಲಿ, ನೋಡಲಿ, ಅಥವಾ ಮಾತನಾಡಲಿ ಮನಸ್ಸು ಚಿಂತಿಸುವುದರಲ್ಲಿ ಅವುಗಗಳ ಪರಿಣಾಮಗಳು ಇರುತ್ತವೆ. ಪ್ರಪಂಚ ಎಂದ ಮೇಲೆ ಅಲ್ಲಿ ಕೇವಲ ಒಳ್ಳೆಯದು ಮಾತ್ರ ಇರುವುದಿಲ್ಲ. ಕೆಟ್ಟದ್ದು ಇದ್ದೇ ಇರಬೇಕು. ಅದನ್ನು ಸ್ವೀಕರಿಸುವ ರೀತಿಯಲ್ಲಿ ಅದರ  ಒಳ್ಳೆಯದು ಮತ್ತು ಕೆಟ್ಟದರ ಪರಿಣಾಮವಿರುತ್ತದೆ. ಸನ್ಮನಸ್ಸು ಎಲ್ಲವನ್ನೂ ಗಮನಿಸುತ್ತದೆ. ಆದರೆ ಅದು ಕೆಡುವುದಿಲ್ಲ. ಒಂದುವೇಳೆ ಮನಸ್ಸನ್ನು ಕೆಡಿಸಿದರೆ ನಮ್ಮ ಚಿಂತನೆ ಕೆಟ್ಟಿದೆ ಎಂದು ಅರ್ಥ. ಕ್ರಿಯೆಗಿಂತಲೂ ಮನಸ್ಸಿನ ಚಿಂತನೆ ಮುಖ್ಯವಾಗುತ್ತದೆ. ಅದು ಪರಿಶುದ್ದವಾಗಿದ್ದರೆ ಮಾಡುವ ಕೆಟ್ಟದ್ದರಲ್ಲೂ ಒಳ್ಳೆಯದು ಇದ್ದೇ ಇರುತ್ತದೆ.