Saturday, June 29, 2024

ಕೊಹ್ಲಿ ಎಂಬ ಶ(ತ)ಕ ಪುರುಷ

   ಒಂದು ದೊಡ್ಡ ಅಧ್ಯಾಯ ಮುಗಿಸಿದಾಗ ಲೇಖಕ ಕೂಡ ನಿಟ್ಟುಸಿರು ಬಿಟ್ಟು ಬೆರಳ ನಟಿಕೆ ಮುರಿದು ನಿರಾಳನಾಗಿ ಬಿಡುತ್ತಾನೆ. ಹಾಗೆ... ವಿರಾಟ್ ಕೊಹಿಲಿ ಎಂಬ ಒಂದು ಅಧ್ಯಾಯ ಮುಗಿಸುವಾಗ ಒಂದು ನಿಟ್ಟುಸಿರು ಕ್ರಿಕೆಟ್ ಪರಮಾತ್ಮನ ಉಸಿರಿಂದ ಬಂದಿರಬೇಕು. ಕ್ರಿಕೆಟ್ ಚರಿತ್ರೆಯ ಅದ್ಭುತ ಅಧ್ಯಾಯ ಮುಗಿದ ಅಚ್ಚರಿ ಎಂದರೆ ಸ್ವತಃ ಲೇಖಕನ ನಿರೀಕ್ಷೆಯೂ ಇದನ್ನು ಮುಗಿಸುವುದಕ್ಕೆ ಯೋಚಿಸಿರಲಾರದು. ಹಾಗೆ ಅನಿರೀಕ್ಷಿತ ಉಪಸಂಹಾರವಿದು. 
ಜಗತ್ತಿನಲ್ಲಿ ಶಿಲೆಯೂ ಶಾಶ್ವತವಲ್ಲ...ಇನ್ನು‌ಮನುಷ್ಯ ಮಾತ್ರ ಹೇಗೆ ಶಾಶ್ವತವಾಗಬಲ್ಲ? ಆದರೂ ಒಂದು ಬೇಸರ ಛೇ ಮುಗಿದು ಹೋಯಿತೇ? 
ವಿರಾಟ್ ಕೊಹಿಲಿ...ಆಧುನಿಕ ಜಗತ್ತಿನ
ಅದ್ಭುತ ಎನಿಸುವ ಗಣಕಯಂತ್ರದ ಎದುರು ಒಂದು  ಪರಿಪೂರ್ಣ ಕ್ರಿಕೆಟ್  ದಾಂಡಿಗನನ್ನು ಸೃಷ್ಟಿ ಮಾಡುವುದಕ್ಕೆ  ಹೇಳಿದರೆ ಸಂಶಯ ಬೇಡ ಅದು ವಿರಾಟ್ ಕೊಹ್ಲಿ ಎಂಬ ಯಂತ್ರ ಮಾನವನನ್ನು ಸೃಷ್ಟಿ ಮಾಡಿಬಿಡುತ್ತದೆ. 
ಗವಾಸ್ಕಾರ್ ವೆಂಗ್ ಸರ್ಕಾರ್ ಹೆಚ್ಚೇಕೆ ಸಚಿನ್ ದ್ರಾವಿಡ್ ಗಂಗೂಲಿ ತನಕವೂ,    ಒಂದು ಶತಕ ಹೇಳಿದರೆ ಚಿಲ್ಲರೆ ಅಂಗಡಿಯಲ್ಲಿ ಒಂದೋ ಎರಡೋ ಬಿಕರಿಯಾಗುವ ವಸ್ತುವಾಗಿತ್ತು. ಆದರೆ ಈ ಯಂತ್ರ ಮಾನವನ ಅವತಾರ ಯಾವಾಗ ಆರಂಭವಾಯಿತೋ ಶತಕ ಎಂಬುದು ಹೋಲ್ ಸೇಲ್ ಅಂಗಡಿಯಂತೆ  ಬಿಕರಿಯಾಗತೊಡಗಿತು. ಯಬ್ಬಾ ಅದೆಷ್ಟು ಸೆಂಚುರಿಗಳು? ವೈರಿ ಪಡೆಯೂ ಶ್ಲಾಘಿಸುವ ಶತಕಗಳು. ಆದರೆ ಅದಕ್ಕೂ ಒಂದು ವಿರಾಮ ಈಗ ಎಳೆದಾಯಿತು.
ಕ್ರೀಡೆ ಎಂಬುದು ಕೇವಲ ಕ್ರೀಡೆ ಎಂದು ಬಿಟ್ಟು ಬಿಡುವುದಲ್ಲ. ಅದರಲ್ಲೂ ಒಂದು ಮಾನಸಿಕತೆ ಇದೆ. ಸಾಧನೆ ತಪಸ್ಸಿನ ಹಾದಿ ಇದೆ. ಇದೆಲ್ಲವನ್ನೂ ಕೊಹಿಲಿಯಲ್ಲಿ ಕಾಣಬಹುದು. ಅದು ಸೋಲನ್ನು ಸುಲಭದಲ್ಲಿ ಅಂಗೀಕರಿಸದ ಹಟಮಾರಿತನ. 
ಕೊಹ್ಲಿಯಲ್ಲಿ  ಇನ್ನೂ ಆಟದ ಕಸುವಿದೆ.. ಕೊನೆಯ ಪಂದ್ಯ ಅದಕ್ಕೆ ಸಾಕ್ಷಿ. ಕೊಹ್ಲಿಯಂತಹ ವ್ಯಕ್ತಿಯಲ್ಲಿ ಅದು ಸುಮ್ಮನೇ ಮುಗಿಯು‌ವಂತಹುದಲ್ಲ. ಆದರೂ ಕೊಹ್ಲಿಗೆ ಇನ್ನು ಸಾಕು ಎನಿಸುವುದಕ್ಕೆ ಆತನ ಮನದಾಳದ ಕ್ರೀಡಾ ಸ್ಪೂರ್ತಿಯೇ ಕಾರಣ. ಅತನನ್ನು‌ ಮಾದರಿಯಾಗಿಸಿ ಬರುವ ಹೊಸ ಹುಡುಗರ ದಂಡೇ ಇದೆ. ಆ ಹೊಸ ಚಿಗುರು ಇನ್ನೂ ಅರಳುವುದಕ್ಕೆ ಅವಕಾಶದ ಅಗತ್ಯವಿದೆ. ತನ್ನ ಶತಕದ ದಾಹವನ್ನು ಅದೆಂದೋ ತಣಿಸಿ ಸತತ ತಿಂದು ತೇಗಿದವನಿಗೆ ವಿರಾಮ ಬೇಕೆಂದು ಕಂಡರೆ ಅದು ಅಚ್ಚರಿಯೇನಲ್ಲ. ಆದರೂ ಅಪ್ಪಟ ಕ್ರೀಡಾ ಪ್ರೇಮಿಗಳ ಬಯಕೆ ಒಂದೇ ಇನ್ನೂ  ಈತರದ ವಿರಾಟ್ ಶಕ್ತಿ ನಮ್ಮ. ಭಾರತದಿಂದ ಉದಿಸಿ ಬರಲಿ. ಕೊಹ್ಲಿ ಎಂಬ ವಿರಾಟ್ ಸ್ವರೂಪಕ್ಕೆ ಹಾರ್ದಿಕ ವಿದಾಯ.







No comments:

Post a Comment