Wednesday, June 19, 2024

ಭಿಕ್ಷಾಟನೆ

        ಇತ್ತೀಚೆಗೆ ಒಂದು ಪ್ರಸಿದ್ಧ ಕ್ಷೇತ್ರಕ್ಕೆ ಹೋಗಿದ್ದೆ. ಕ್ಷೇತ್ರ ಯಾವುದು ಎಂಬುದು ಇಲ್ಲಿ ಪ್ರಸ್ತುತವಲ್ಲ. ಅಗಾಗ ಈ ಕ್ಷೇತ್ರಕ್ಕೆ ಹೋಗುತ್ತಿರುತ್ತೇನೆ. ಹಾಗೇ ಹೋದವನು ಮಧ್ಯಾಹ್ನ ಪೂಜೆ ಮುಗಿಸಿ  ಪ್ರಸಾದ ಭೋಜನ  ಸ್ವೀಕರಿಸಿದೆ. ಸಾಮಾನ್ಯವಾಗಿ ಊಟವಾದ ಕೂಡಲೇ ಹೊರಡುವವನು ಆದಿನ ಯಾಕೋ ಕ್ಷೇತ್ರ ಪರಿಸರ ಬಿಟ್ಟು ಬರುವುದಕ್ಕೆ ಮನಸ್ಸಾಗಲಿಲ್ಲ. ಪ್ರಶಾಂತವಾದ ಪರಿಸರದಲ್ಲಿ ಮತ್ತೂ ಒಂದಷ್ಟು ವಿಶ್ರಾಂತಿ ಪಡೆದು ನಿಧಾನವಾಗಿ ಹೊರಟೆ. ಸೇರಿದ ಭಕ್ತರೆಲ್ಲ ನಿರ್ಗಮಿಸಿ ತೆರಳಿದ್ದರು. ಒಂದೆರಡು ಸಿಬ್ಬಂದಿಗಳು ಬಿಟ್ಟರೆ ದೇವಸ್ಥಾನ ನಿರ್ಮಾನುಷ್ಯವಾಗಿತ್ತು. ಹಾಗೆ ದೇವಸ್ಥಾನದ ಹೋರಾಂಗಣದಲ್ಲಿ ಅಡ್ಡಾಡಿ ಹೊರಡುವಾಗ ಒಬ್ಬರು ಪರಿಚಯದ ನಗೆ ನಕ್ಕರು. ನಾನೂ ಪ್ರತಿ ನಗು ಹರಿಸಿದೆ. ಆ ವ್ಯಕ್ತಿಯನ್ನು ದೇವಸ್ಥಾನದಲ್ಲಿ ವಾದ್ಯ ನುಡಿಸುವ ಬಳಗದಲ್ಲಿ ನೋಡಿದ್ದೆ. ಆಗಾಗ ಹೋಗುತ್ತಿರುವುದರಿಂದ ಮುಖ ಪರಿಚಯ ಇತ್ತು. ಆದರೆ ಆ ವ್ಯಕ್ತಿಗತವಾಗಿ ನನಗೆ ಪರಿಚಯವಿಲ್ಲ. ಆದರೆ ನನ್ನ ಪರಿಚಯ ಅವರಿಗೆ ಇದ್ದಂತೆ ಇಲ್ಲ. ನಾನು ಆಗಾಗ ಹೋಗುತ್ತಿರುವುದರಿಂದ ಪರಿಚಯ ಇರಬಹುದು ಎಂದುಕೊಂಡು ನಾನು ನಗು ಹರಿಸಿದ್ದೆ.  ಆದರೆ ಈ  ವ್ಯಕ್ತಿ ನಕ್ಕ ಬಗ್ಗೆ ಒಂದು ಆತಂಕದ ಕುತೂಹಲವಿತ್ತು. ಸಾಮಾನ್ಯವಾಗಿ ಊರಿಗೆ ಹೋದರೆ ಹೀಗೆ ಪರಿಚಯದವರು ಸಿಗುವುದು ಉಂಟು. ಯಾವಾಗಲೂ ಅಷ್ಟೇನೂ ಮಾತನಾಡದವರು ಕೆಲವೊಮ್ಮೆ ಸಿಗುವಾಗ ಬಹಳ ಪರಿಚಯದವರಂತೆ ನಗುತ್ತಾ ಬರುವಾಗ ನನಗೆ ಅನುಮಾನಿಸುವುದಕ್ಕೆ ಕಾರಣ ಇಲ್ಲದಿಲ್ಲ.

ಬಂದ ವ್ಯಕ್ತಿ ಮೊದಲಿಗೆ ಅದೂ ಇದು ಮಾತನಾಡಿ ನಾನು ಎಲ್ಲಿದ್ದೇನೆ ಎಂದು ತಿಳಿದುಕೊಂಡು ಲೋಕಾಭಿರಾಮವಾಗಿ ಮಾತನಾಡಿ ಕೊನೆಯಲ್ಲಿ " ಚಹ ಕುಡಿಯಲಿಕ್ಕೆ ಏನಾದರೂ ಕೊಡಿ. ಇಲ್ಲಿ ವಾದ್ಯಕ್ಕೆ ಇದ್ದೇನೆ. ಖರ್ಚಿಗೆ ಕಷ್ಟ" ಮತ್ತೂ ಏನೇನೋ ಹೇಳಿದ. ಸಾಮಾನ್ಯವಾಗಿ ಹಲವು ಕಡೆಯಲ್ಲಿ ಈ ಅನುಭವ ಸಹಜ. ಪರಿಚಯ ಇಲ್ಲದೇ ಇದ್ದರೂ ನಗುತ್ತಾ  ಬಹಳ ಪರಿಚಯದವರಂತೆ  ವರ್ತಿಸುತ್ತಾರೆ. ಕೊನೆಯಲ್ಲಿ ಹೀಗೆ ಹಣ ಕೇಳುವುದು ನನ್ನ ಅನುಮಾನ ಆತಂಕಕ್ಕೆ ಕಾರಣವಾಗುತ್ತದೆ. ಕದಿಯುವುದಕ್ಕಿಂದ ಬೇಡಿ ತಿನ್ನುವುದು ಉತ್ತಮವಾದರೂ ಕೆಲವರಿಗೆ ಈ ಬೇಡಿ ತಿನ್ನುವುದರಲ್ಲೇ ಏನೋ ಸಂತೋಷವಿದ್ದಂತೆ ಭಾಸವಾಗುತ್ತದೆ.  

ಮನುಷ್ಯ ದುಡಿದು ತಿನ್ನುವುದಕ್ಕೆ ಸಾಧ್ಯವಿರುವಾಗ ದುಡಿದು ತಿನ್ನುವ ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ತೀರ ಅಸಹಾಯಕ ಪರಿಸ್ಥಿತಿಯಾದರೆ ಏನೋ ಅಂತ ಒಪ್ಪಿಕೊಳ್ಳಬಹುದಾದರೆ, ಅಂತಹ ಅಸಹಾಯಕತೆ ಕೆಲವರಿಗಷ್ಟೇ ಇರುತ್ತದೆ ಎಂಬುದು ಸತ್ಯ.    ಹಾಗೆ ಅಸಹಾಯಕತೆ ಇದ್ದರೆ ಪರಿಚಯದವರಲ್ಲಿ ಮಾತ್ರವೇ ಬೇಡುವುದು ಒಂದು ವಿಧದಲ್ಲಿ ಸರಿ ಎನ್ನಬಹುದಾದರೂ ಹಲವು ಸಲ ಪರಿಚಯದವರೂ ಯಾವಾಗಲೂ ಸಿಕ್ಕರೆ ಮಾತನಾಡದೇ ಇದ್ದವರು ಮಾತನಾಡಿಕೊಂಡು ಬಂದು ದುಡ್ದು ಕೇಳುವುದು ಇದೆ.   ಇನ್ನು ಒಂದು ಪ್ರಸಿದ್ಧ ಕ್ಷೇತ್ರದಲ್ಲಿದ್ದುಕೊಂಡು ಹೀಗೆ ಬಂದವರಲ್ಲಿ ದುಡ್ದು ಕೇಳುವುದು ಹೊರಗೆ ಭಿಕ್ಷಾಟನೆ ಮಾಡುವವರಿಗಿಂತ ಹೀನ ಅಂತ ಅನ್ನಿಸುತ್ತದೆ. ದೇವರು ಪ್ರತಿಯೊಬ್ಬನಿಗೂ ಯೋಗ್ಯತೆಗೆ ಅನುಸಾರವಾಗಿ ಕರುಣಿಸಿರುತ್ತಾನೆ. ಆ ದೇವಸ್ಥಾನದಲ್ಲೂ ಅಷ್ಟೇ ಅಷ್ಟೋ ಇಷ್ಟೋ ಇರಬಹುದು. ಇನ್ನು ಕೆಲವರು ಅವರಾಗಿಯೇ ದಾನ ಬುದ್ಧಿಯಿಂದ ಕೊಡಲೂ ಬಹುದು. ಆದರೆ ಹೀಗೆ ಭಿಕ್ಷಾಟನೆಗೆ ಇಳಿದರೆ ದೇವರು ಕೊಟ್ಟದ್ದರಲ್ಲಿ ನಾವು ತೃಪ್ತರಲ್ಲ ಎಂದು ಆ ದೇವರನ್ನು ಮತ್ತು ಕ್ಷೇತ್ರವನ್ನು ಅವಮಾನಿಸಿದಂತೆ.   ಬಡತನ, ಅಸಹಾಯಕತೆ ಇರಬಹುದು ಆದರೆ ಅದಕ್ಕೆ ಕೇವಲ ಹೀಗೆ ಸಿಕ್ಕವರಲ್ಲಿ ಬೇಡುವುದಲ್ಲ. ಇನ್ನು ಕ್ಷೇತ್ರದಲ್ಲಿಉಳಿದವರೂ ಇದರ ಬಗ್ಗೆ ಗಮನ ಹರಿಸಬೇಕು. ಆರ್ತರು ಇದ್ದರೆ ಅದರ ಬಗ್ಗೆ ಜತೆಗೆ ದುಡಿಯುವವರು ಒಂದಷ್ಟು ಸ್ಪಂದಿಸಬಹುದು. ಸಾಮಾನ್ಯವಾಗಿ ದೇವಸ್ಥಾನದಲ್ಲಿ ತಟ್ಟೆಯ ಸಂಗ್ರಹ ಅರ್ಚಕರಿಗೇ ಸೇರಿರುತ್ತದೆ. ಇದು ವಾಡಿಕೆ. ಹಾಗಿರುವ ಇದರಲ್ಲಿ ಒಂದಷ್ಟು ಚಿಕ್ಕ ಪಾಲು  ಹೀಗೆ ಸಹವರ್ತಿ ಆರ್ತರಿಗೆ ಕೊಡಬೇಕು. ಇದು ಧರ್ಮ. 

ಸಾಮಾನ್ಯವಾಗಿ ನಾನು ಯಾವುದೇ ರೀತಿಯ ಭಿಕ್ಷಾಟನೆಗೆ ಸ್ಪಂದಿಸುವವನಲ್ಲ. ಅದಕ್ಕೆ ಹಲವು ಕಾರಣಗಳಿವೆ. ಬಾಲ್ಯದಲ್ಲಿ ತೀವ್ರ ಬಡತನದಲ್ಲಿ ಬದುಕಿದ ಜೀವನ, ಆದರೂ ಯಾರಲ್ಲೂ ಬೇಡುವುದಕ್ಕೆ ಸ್ವಾಭಿಮಾನ ಅಡ್ಡ ಬರುತ್ತಿತ್ತು. ತೀರ ಅಸಹಾಯಕ ಪರಿಸ್ಥಿತಿಯಲ್ಲೂ ಆಶೆಗಳನ್ನೇಲ್ಲ ಹತ್ತಿಕ್ಕಿಕೊಂಡು ತೃಪ್ತರಾದದ್ದು ಇದೆ. ಹಾಗಾಗಿ ಭಿಕ್ಷೆ ಎತ್ತುವವರನ್ನು ಕಂಡಾಗ ಅನುಕಂಪಕ್ಕಿಂತಲೂ ಇದು ಅಪರಾಧ ಎಂಬ ಮನೋಭಾವ ಅದೇಕೋ ಬಂದು ಬಿಟ್ಟಿದೆ. 

ಇನ್ನು ನಮ್ಮ ಸಾಮಾಜಿಕ ರೀತಿ ನೀತಿಗಳು. ಸರಕಾರ  ಐವತ್ತು ವರ್ಷಗಳ ಹಿಂದೆ ಗರೀಭಿ ಹಠಾವೋ ಅಂತ ಘೋಷಣೆ ಕೂಗಿತ್ತು. ನಮ್ಮ ಬಾಲ್ಯದಲ್ಲಿ ಇದೊಂದು ಭ್ರಮೆಯಾಗಿ ನಮ್ಮ ಬಡತನ ಎಲ್ಲ ಪರಿಹಾರವಾಗಬಹುದು ಎಂದುಕೊಂಡಿದ್ದೆವು. ಆದರೆ ಈಗ ಬಡವರಿಗೆ ಉಚಿತ ಕೊಡುಗೆಗಳನ್ನು ಕೊಡಬೇಕಾದ ಅಸಹಾಯಕತೆ ದಯನೀಯ ಪರಿಸ್ಥಿತಿ ಸರಕಾರಕ್ಕಿದೆ.  ಅದಕ್ಕಾಗಿ ಮಧ್ಯಮ ವರ್ಗದ ಎದುರು ಸರಕಾರವೇ ಭಿಕ್ಷಾಟನೆಗೆ ಇಳಿದಿದೆ ಎಂದರೂ ತಪ್ಪಾಗಲಾರದು. ಹಾಗಾದರೆ ಹಿಂದೆ ಹೇಳಿದ ಗರೀಭಿ ಹಠಾವೋ ಎಂಬುದು ಮಾಡಿದ ವಂಚನೆ ಅಂತ ಅನ್ನಿಸಬಹುದು.  ಬಡತನದ ಬಗ್ಗೆ ಚಿಂತನೆ ಪ್ರಾಮಾಣಿಕವಾಗಿಲ್ಲ ಎಂಬುದರ ದ್ಯೋತಕವಿದು. ಆದರೇನು ಸಾಮಾಜಿಕ ನಿಯಮಗಳಿಗೆ ನಾವು ಬಾಧ್ಯಸ್ಥರು. ಹಾಗಿರುವಾಗ ಈ ನಡುವೆ ಹೀಗೆ ಭಿಕ್ಷೆ ಎತ್ತುವವರಿಗೆ ಭಿಕ್ಷೆ ಹಾಕಬೇಕಾದ  ಅನಿವಾರ್ಯತೆ ನಮಗೆ ಬೇಕಿಲ್ಲ. 

ಈಗೀಗ ಇಂತಹ ಕ್ಷೇತ್ರಗಳಿಗೆ ಹೋಗುವುದಕ್ಕೆ ಮತ್ತೊಮ್ಮೆ ಯೋಚಸಬೇಕಾಗುತ್ತದೆ. ವಾಸ್ತವದಲ್ಲಿ ಮನೆಯೊಳಗಿನ ಮನದೊಳಗಿನ ಆರಾಧನೆಗೆ ಹೆಚ್ಚು ಒತ್ತುಕೊಡುವವನು ನಾನು. ದೇವರು ಎಂಬ ಚಿಂತನೆಗೆ ವಿಶಾಲವಾಗಿಯೂ ಸಂಕುಚಿತವಾಗಿಯೂ ಚಿಂತಿಸಬಲ್ಲ ಬುದ್ದಿಮತ್ತೆ ನಮಗಿದೆ. ಅದನ್ನು ಅನುಸರಿಸುವುದೇ ಸೂಕ್ತ ಅಂತ ಅನ್ನಿಸುತ್ತದೆ. 






No comments:

Post a Comment