Tuesday, July 30, 2024

ದೇವರು ಎಂಬ ಭಾವ

 "ಎಲ್ಲ ಆಶೆಗಳ ಗುರಿ ಭಗವಂತನಾಗಬೇಕು. ಆದರೆ ಭಗವಂತನನ್ನು ಕಾಣುವಾಗ ಯಾವ ಆಶೆಗಳೂ ಇರುವುದಿಲ್ಲ. "  ಹರಿದಾಸ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ ಯಕ್ಷಗಾನದ ಪಾತ್ರ ನಿರ್ವಹಣೆಯಲ್ಲಿ ಹೇಳಿದ ಮಾತು.  

            ದೇವರನ್ನು ಕಾಣುವ ತನಕ, ಆತನ ದರ್ಶನವಾಗುವ ತನಕ ಮನಸ್ಸಿನ ಇಚ್ಛೆಗಳು ಹಲವಿರುತ್ತವೆ. ಪತ್ನಿ ಬೇಕು ಮಕ್ಕಳು ಬೇಕು  ಸಂಸಾರ ಬೇಕು, ಚಿನ್ನ ಬೇಕು, ಭೂಮಿ ಬೇಕು  ಸಂಪತ್ತು ಬೇಕು, ... ಹೀಗೆ ಮನಸ್ಸಿನ ಕಲ್ಪನೆಗೆ ಎಷ್ಟು ಎಟುಕುವುದೋ ಅಲ್ಲಿಯ ತನಕ ಈ ಬೇಕುಗಳು  ಮನಸ್ಸಿನ ಬೇಕುಗಳು ಹಲವು ಇರುವಾಗ ಭಗವಂತನಿಗೂ ಆತಂಕ...ಈತನ ಬೇಕುಗಳನ್ನು ಹೇಗೆ ಪೂರೈಸುವುದು?  ಈ ಬೇಕುಗಳ ನಡುವೆ ನಾನು ಬೇಕು ಎಂಬ ಬಯಕೆ ಈತನಲ್ಲಿ ಇರಬಹುದೇ?  ಭಗವಂತ ಹೀಗೆ ಯೋಚಿಸಿ ಬೇಕುಗಳನ್ನು ಪೂರೈಸುವುದಕ್ಕೆ ಸಾಧ್ಯಾವಿಲ್ಲದೆ....ಮತ್ತೂ ದೂರವಾಗುತ್ತಾನೆ. ನಮ್ಮಲ್ಲಿ ಹಲ್ಲವು ಆಶೆಗಳು ಇರುತ್ತವೆ. ದೇವರ ಮುಂದೆ ನಿಂತು ಬೇಡುವುದೇ ಭಕ್ತಿಯ ಪರಮ ಗುರಿಯಾಗಿರುತ್ತದೆ. ಆದರೆ ಈ ಆಶೆಗಳು ಇರುವ ತನಕ ನಮ್ಮಲ್ಲಿ ದೇವರು ಬೇಕು ಎಂಬ ಬಯಕೆ ಹುಟ್ಟುವುದಿಲ್ಲ. ಆತನೊಡನೆ ನಮ್ಮ ಅಂತರ ಹೆಚ್ಚುತ್ತಾ ಹೋಗುತ್ತದೆ. ನಮ್ಮಲ್ಲಿ ದೇವರ ಬಯಕೆ ಜಾಗೃತವಾಗಬೇಕು. ಆತನ ದರ್ಶನವೇ ಪರಮ ಬಯಕೆಯಾಗಿರಬೇಕು. ಆದರೆ ನಮ್ಮಲ್ಲಿ ಆ ಬಯಕೆ ಇರುವುದಿಲ್ಲ. ಒಂದು ವೇಳೆ ದೇವರ ದರ್ಶನವಾದರೆ ಮಿಕ್ಕ ಎಲ್ಲ ಬಯಕೆಗಳೂ ನೆನಪಿಗೆ ಬರದೆ ದೂರವಾಗುತ್ತವೆ. ಆದರೆ ನಮಗೆ ಅದು ಬೇಕಾಗಿಲ್ಲ. ನಮ್ಮ ಕ್ಷುಲ್ಲಕ ಬಯಕೆಗಳು ಹಿರಿದಾಗುತ್ತವೆ. 

        ದೇವರ ದರ್ಶನವಾಗುವುದು ಹೇಗೆ.? ಜಗತ್ತಿನ ಎಲ್ಲವನ್ನು ನಾವು ಕಣ್ಣು ತೆರೆದು ನೋಡಿದರೆ, ಕಣ್ಣು ಮುಚ್ಚಿ ಭಗವಂತನನ್ನು ಕಾಣುತ್ತೇವೆ. ತೆರೆದ ಕಣ್ಣಿಗೆ ಭಗವಂತ ಕಾಣಲಾರ. ಅಥವಾ ತೆರೆದ ಕಣ್ಣಿನ ದೃಷ್ಟಿಗೆ ಭಗವಂತನನ್ನು ಕಾಣುವ ಶಕ್ತಿ ಇರುವುದಿಲ್ಲ. ಅಂತರಂಗದ ದೃಷ್ಟಿಗೆ ಮಾತ್ರ ದೇವರು ಕಾಣಬಲ್ಲ.   ಬಹಿರಂಗದ ದೃಷ್ಟಿಗೆ  ದೇವರು ಗೋಚರಿಸುವುದಿಲ್ಲ. ದೇವರು ಎಂದಾಕ್ಷಣ ನಮ್ಮ ಕಣ್ಣಾಲಿಗಳು ಭಾರವಾಗುತ್ತವೆ. ಕಣ್ಣು ಮುಚ್ಚಿ ಮೊದಲಿಗೆ ನಮಗೆ ಇಷ್ಟವಾದ ದೇವರನ್ನು ಸ್ಮರಿಸುತ್ತೇವೆ. ಅದು ಕೃಷ್ಣ ರಾಮ ಶಿವ ಗಣಪತಿ ದೇವಿ ಹೀಗೆ ಯಾವುದೂ ಆಗಿರಬಹುದು. ಆದರೆ ಮನಸ್ಸಿನಲ್ಲಿ ಯಾವುದೋ ಒಂದು ರೂಪವೂ ಮೂಡಬಹುದು. ಆದರೆ ಅದೇ ಸ್ಥಿತಿ ಗಾಢವಾಗಿ ಮತ್ತೂ ಒಂದಿಷ್ಟು ಆಳವಾಗಿ ಇಳಿದಾಗ, ರಾಮ ಕೃಷ್ಣ ಶಿವ ಎಲ್ಲದರಲ್ಲೂ ಇರುವ ಅನುಭವ ಒಂದೇ ಆಗಿಬಿಡುತ್ತದೆ. ಅಲ್ಲಿ ದೇವರು ಎಂಬುದು ಮಾತ್ರವೇ ಉಳಿದು ಬಿಡುತ್ತದೆ. ರಾಮ ಕೃಷ್ಣ ಇನ್ನೂ ಭಿನ್ನವಾಗಿ ಅಲ್ಲಾ  ಏಸು ಹೀಗೆ ಧರ್ಮಾನುಸಾರ ಸ್ಮರಿಸಿದಾಗ ಎಲ್ಲವೂ ಒಂದೇ ಅನುಭವವನ್ನು ಕೊಡುತ್ತದೆ. ಅಲ್ಲಿ ಭೇದವಿರುವುದಿಲ್ಲ. ಇದೇ ನಿಜವಾದ ಪರಾತ್ಮನ ರೂಪ. ಅದು ಕೇವಲ ಅನುಭವ ಮಾತ್ರ. ಅದು ಮತ್ತಷ್ಟೂ ಗಾಢವಾಗಿ ಗಾಢವಾಗಿ ಅನುಭವ ಪಕ್ವವಾದಂತೆ....ಅದು ನಮ್ಮೊಳಗಿನ ಚೈತನ್ಯ ಸ್ವರೂಪವನ್ನೇ ತೋರಿಸುತ್ತದೆ. ಆಗ ಅನಿಸುವುದು ದೇವರು ಹೊರಗೆ ಎಲ್ಲೂ ಇಲ್ಲ. ಆತ ನಮ್ಮೊಳಗೇ ಇದ್ದಾನೆ. ನಮ್ಮೊಳಗೆ ದೇವರು ಇದ್ದಾನೆ ಎಂದರೆ ನಾವೂ ದೇವರಾಗಿಬಿಡುತ್ತೇವೆ.ದೇವರು ದೂರ ಎಲ್ಲೂ ಇರುವುದಿಲ್ಲ. ಆತ ನಮ್ಮೊಳಗೇ ಇರುತ್ತಾನೆ ನಾವೇ ಸ್ವತಃ ದೇವರಾಗುವುದು ಎಂದರೆ ನಾವು ಮತ್ತು ದೇವರು ಎರಡು ಒಂದಾಗಿ ಅದೊಂದು ಅದ್ವೈತ ಮನೋಭಾವ ಪ್ರಚೋದನೆಯಾಗುತ್ತದೆ. ಧ್ಯಾನ ಎಂದರೆ ಇಷ್ಟೇ. ಯೋಚಿಸುವುದಕ್ಕೆ ಬಹಳ ಸರಳ. ಇಲ್ಲಿ ಭೇದವಿಲ್ಲ. ಎಲ್ಲವೂ ಒಂದೇ..ಒಂದೇ ಶಕ್ತಿ.  ಇದರಿಂದ ಹೊರಗೆ ಬಂದಾಗ ನಾವು ಭಿನ್ನರಾಗಿಬಿಡುತ್ತೇವೆ. ಕೇವಲ ಮನುಷ್ಯರಾಗಿಬಿಡುತ್ತೇವೆ. ನಂತರ ದೇವರು ಎಂಬುದರ ಜತೆಗೆ ನನ್ನ ದೇವರು ಎಂಬ ಭಾವ ಬೆಳೆಯುತ್ತದೆ. ನನ್ನ ಎಂಬ ಅಹಂ ಪ್ರಚೋದನೆಯಲ್ಲಿ ರಾಗ ದ್ವೇಷಗಳು ಸಹಜವಾಗಿ ಪ್ರಚೋದನೆಯಾಗುತ್ತವೆ.   ಅಲ್ಲಿ ದ್ವೇಷ ವೈಷಮ್ಯ ಎಲ್ಲವೂ ಜಾಗೃತವಾಗುತ್ತದೆ. ಕೇವಲ ಮನುಷ್ಯರಾಗಿದ್ದ ನಾವು ನಂತರ ಅದನ್ನೂ ಕಳೆದು ಅಲ್ಲಿ ತಾಮಸೀ ಸ್ವಭಾವ ಮಾತ್ರ ಉಳಿದು ನಾವು ರಾಕ್ಷಸರಾಗಿಬಿಡುತ್ತೇವೆ. ಧ್ಯಾನ ಅದು ನಿತ್ಯ ಸತ್ಯ  ನಿರಂತರವಾಗಿದ್ದಲ್ಲಿ ದ್ವೇಷ ವೈಷಮ್ಯ ಇರುವುದಿಲ್ಲ. ಅದುವೇ ಸನಾತನ ಧರ್ಮದ ಮೂಲ ತತ್ವ. 


Sunday, July 14, 2024

ಉಚಿತವೇ ಜೀವಾಳ

         ಯಾವುದೋ ಒಂದು ಸಿನಿಮಾ ಪ್ರದರ್ಶನಕ್ಕೆ ಉಚಿತವಾಗಿ ಸಮೋಸ ಚಹ ಕೊಡುತ್ತಾರೆ ಎಂದು ಕೇಳಿದೆ. ಇನ್ನೊಂದು ಸಿನಿಮಾ ಮಧ್ಯಂತರದವರೆಗೆ ಉಚಿತ ಪ್ರದರ್ಶನ ಅಂತ ಕೇಳಿದೆ. ನಿಜಕ್ಕೂ ಎಂತಹ ಒಂದು ದುರ್ದೆಸೆ ಬಂತು ಎಂದು ಆಶ್ಚರ್ಯವಾಗುತ್ತದೆ. ಹೂರಣವಿಲ್ಲದ ಹೋಳಿಗೆ ಚಪಾತಿಗಿಂತಲೂ ಕಡೆ. ಸ್ವಂತ ಅರ್ಹತೆ ಇಲ್ಲದಾಗ ಮತ್ತೊಂದರ ಆಧಾರ ಅವಶ್ಯಕತೆ ಒದಗುತ್ತದೆ ಎಂಬುದಕ್ಕೆ ಈ ವಿದ್ಯಮಾನಗಳೇ ಸಾಕ್ಷಿ. ಸಿನಿಮಾ ನಿರ್ಮಿಸುವವರಿಗೆ ತಮ್ಮದು ಉತ್ತಮ ಎನ್ನುವ ಸ್ವತಃ ಆತ್ಮ ವಿಶ್ವಾಸ ಇರುವುದಿಲ್ಲ. ಹಾಗಾಗಿ ಹಲವಾರು ಗಿಮಿಕ್ ಗಳನ್ನು ತಂತ್ರಗಾರಿಕೆಯನ್ನು  ಮಾಡುತ್ತಾರೆ. ಇದರಿಂದ  ನೋಡೋಣ ಎನ್ನುವ  ಮೊದಲಿನ ವಿಶ್ವಾಸ ಒದಗಿಬರುತ್ತದೋ ಇಲ್ಲವೋ ಅದು ಕಾಲ ನಿರ್ಣಯಿಸಬೇಕು. ಮೊದಲೆಲ್ಲ ಕೇವಲ ಕಲಾವಿದರ ನಿರ್ದೇಶಕರ ಹೆಸರು ಇದ್ದರೆ ಸಾಕು ಸಿನಿಮಾ ಮಂದಿರ ಭರ್ತಿಯಾಗಿಬಿಡುತ್ತಿತ್ತು. ಈಗ ಸಾಮಾಜಿಕ ಜಾಲತಾಣಗಳು ಇದೆ ಎಂಬ ಕಾರಣ ಒಂದಾದರೆ, ಹೂರಣವಿಲ್ಲದ ಹೋಳಿಗೆಯ ರುಚಿಯಂತಾಗಿದೆ. ಅದರಲ್ಲೂ ಕನ್ನಡ ಸಿನಿಮಾ ಜೀವಂತ ಇದೆ ಎಂದನಿಸುವುದಿಲ್ಲ. ಇದು ಈಗಿನ ಪರಿಣಾಮವಲ್ಲ. ಇದರ ಪ್ರಭಾವ ಹತ್ತಾರು ವರ್ಷಗಳ ಮೊದಲೇ ಆರಂಭವಾಗಿತ್ತು. ಆದರೆ ನಮ್ಮವರು ಬುದ್ಧಿ ಕಲಿಯಲಿಲ್ಲ. 

ಕನ್ನಡ ಸಿನಿಮಾ ರಿಮೇಕ್ ಗೆ ಅವಲಂಬಿಸಿದಷ್ಟು ಬೇರೆ ಸಿನಿಮಾರಂಗಗಳು ಅವಲಂಬಿಸಿಲ್ಲ. ಇತರ ಭಾಷಾ ಚಿತ್ರಗಳು ಸ್ವಂತ ಬಲದಿಂದಲೇ ಪ್ರೇಕ್ಷಕ ಲಕ್ಷ್ಯವನ್ನು ಸೆಳೆಯುತ್ತಿದ್ದರೆ,   ಅಲ್ಲಿ ರಿಮೇಕ್ ಮಾಡುವ ಅವಕಾಶವೇ ಇರುವುದಿಲ್ಲ. ಈಗ ಯಾವುದೇ ಭಾಷೆ ಇರಲಿ ಮೂಲದಲ್ಲೇ ನೋಡುವ ಮತ್ತದನ್ನು ಅರ್ಥವಿಸುವ ಅವಕಾಶ ಜಾಲತಾಣಗಳಿಂದ ಸಾಧ್ಯವಾಗುತ್ತದೆ. ಹಾಗಾಗಿ ಕೇವಲ ರಿಮೇಕ್ ನ್ನೇ ಭಂಡವಾಳವಾಗಿಸಿಕೊಂಡ ಕನ್ನಡ ಚಿತ್ರರಂಗ ಬಸವಳಿದಿರುವುದು ಅತಿಶಯವೇನೂ ಅಲ್ಲ. ವಿಚಿತ್ರವೆಂದರೆ ಅದನ್ನು ಒಪ್ಪಿಕೊಳ್ಳುವ ಮನೋಭಾವವೂ ಇಲ್ಲ. ನೆರೆ ಹೊರೆಯ ಚಿತ್ರರಂಗದಲ್ಲಿ ನೋಡಬಹುದು. ಅಲ್ಲಿ ತಾರಾ ಮೌಲ್ಯ ಇರುವ ನಟರು ಕಲಾವಿದರು ನಿರ್ದೆಶಕರು ನಿವೃತ್ತಿಯಾದರೂ ಯಾವುದೇ ಪರಿಣಾಮವಿಲ್ಲದೆ ಮುಂದು ವರಿಯುತ್ತದೆ. ಮೋಹನ್ ಲಾಲ್ ಮಮ್ಮೂಟ್ಟಿ ಜಯರಾಂ ಇತ್ತ ರಜನಿ ಕಮಲ್ ಹಾಸನ್ ಮುಂತಾದವರ ಸಿನಿಮಾಗಳು ಬಹಳ ಕಡಿಮೆಯಾದರೂ ಸಿನಿಮಾರಂಗ ಬಡವಾಗಲಿಲ್ಲ. ಕಾರಣ ಅಲ್ಲಿರುವ ಅಂತಃ ಸತ್ವ. ಅದರಲ್ಲೂ ಮಲಯಾಳಂ ಸಿನಿಮಾಗಳು ಹೊಸ ಹೊಸ ಕಥಾಹಂದರವನ್ನು ತಂತ್ರಜ್ಞಾನಗಳನ್ನು ವರ್ತಮಾನದ ಆಗು ಹೋಗುಗಳನ್ನು ಸಮರ್ಥವಾಗಿ ಬಳಸಿಕೊಂಡು ತನ್ನ ನೈಜತೆಯನ್ನು ಬಳಸಿಕೊಳ್ಳುತ್ತವೆ. ಸೃಜನ ಶೀಲತೆ ಸದಾ ಜೀವಂತವಾಗಿರುತ್ತದೆ. ಆದರೆ ಇಲ್ಲಿ ಎಲ್ಲವೂ ಅನುಕರಣೆ. ನಮ್ಮ ಸಂಸ್ಕೃತಿ ಇವುಗಳನ್ನೆಲ್ಲ ಬದಿಗಿಟ್ಟು ಕಾಲ ಎಂದೋ ಕಳೆದುಹೋಗಿದೆ.  ಈಗಿನ ಸರಕಾರದಂತೆ ಉಚಿತದ ಅನಿವಾರ್ಯತೆ ಚಿತ್ರರಂಗಕ್ಕೂ ಒದಗಿ ಬಂದಿದೆ ಎಂದರೆ ಅದು ದುರವಸ್ಥೆಯಲ್ಲದೆ ಮತ್ತೇನು? 

ಈ ಉಚಿತದ  ತಂತ್ರಗಾರಿಕೆ ಕೇವಲ ಸಿನಿಮಾರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಅತ್ತ ಯಕ್ಷಗಾನ ರಂಗ ಅದನ್ನು ಎಂದೋ ಬಳಕೆಗೆ ತಂದು ತಮ್ಮ ಬುದ್ಧಿವಂತಿಗೆಯನ್ನು ತೋರಿಸಿಯಾಗಿದೆ. ಮೊದಲು ಯಕ್ಷಗಾನ ಬಯಲಾಟವಿರಲಿ ತಾಳ ಮದ್ದಲೆ ಇರಲಿ ಟಿಕೆಟ್ ಕೊಟ್ಟು ಪ್ರೇಕ್ಷಕ ಬರುತ್ತಿದ್ದ. ಅದೂ ಎಂತಹ ಜನಸಂದಣಿ ಎಂದರೆ ಆಸನಗಳನ್ನು ಮೊದಲೇ ಕಾದಿರಿಸುವುದಕ್ಕಾಗಿ ಮಕ್ಕಳನ್ನು ಮೊದಲೇ ಕಳುಹಿಸುತ್ತಿದ್ದರು. ನಾನೂ ಆಸನ ಸ್ಥಳವನ್ನು ಕಾದಿರಿಸುವುದಕ್ಕೆ ರಾತ್ರಿಯ ಆಟಕ್ಕೆ ಸಾಯಂಕಾಲವೇ ಹೋದದ್ದಿದೆ.  ಯಕ್ಷಾಗಾನದ ನಿಜವಾದ ಅಂತಃ ಸತ್ವ ಅದು. ಒಂದು ಯಕ್ಷಗಾನಕ್ಕೆ ಅದೂ ದೂರದ ಊರಾದರೂ ಬಾಡಿಗೆ ವಾಹನ ಮಾಡಿಯೋ ಮೈಲುಗಟ್ಟಲೆ ನಡೆದು ಹೋಗಿ ನೋಡಿ ಬರುತ್ತಿದ್ದ ಪ್ರೇಕ್ಷಕನ ಆಕರ್ಷಣೆ ಯಕ್ಷಗಾನದಲ್ಲಿತ್ತು. ಯಾವುದೋ ಊರಿನವರು ಎಲ್ಲೋ ಹೋಗಿ ನೋಡುವುದು ಈಗಿನ ಸನ್ನಿವೇಶದಲ್ಲಿ ಕಲ್ಪಿಸುವುದಕ್ಕೂ ಸಾಧ್ಯವಿಲ್ಲ. ಅಂದಿನ ಕಲಾವಿದರು ಪ್ರದರ್ಶನ ಎಲ್ಲವೂ ಅದಕ್ಕೆ ಕಾರಣ. ಆಗ ರಂಗ  ಕೇವಲ ಶುದ್ದ ಯಕ್ಷಗಾನಕ್ಕೆ  ಮಾತ್ರ ಸೀಮಿತವಾಗಿತ್ತು. ಆದರೆ ಬರು ಬರುತ್ತಾ ಇತರ ಅನಾವಶ್ಯಕ ಅವಿಷ್ಕಾರಗಳು ಇಂದಿನ ದುಸ್ಥಿತಿಗೆ ಕಾರಣವಾಗಿದೆ.  ಹಾಗಾಗಿ ಈಗ ಯಾವುದೇ ಪ್ರದರ್ಶನವಾಗಲಿ ಅಲ್ಲಿ ಚಹ ಉಪ್ಪಿಟ್ಟು  ಅಂಬಡೆ ತಿಂಡಿ ಊಟದ ವ್ಯವಸ್ಥೆ ಮಾಡುವ ಅನಿವಾರ್ಯತೆ ಒದಗಿ ಬಂದಿದೆ. ಹೀಗಿದ್ದರೂ ಪ್ರೇಕ್ಷಕ ಸಂಖ್ಯೆ ಗಣನೀಯವಾಗಿಲ್ಲ. ಮಾತ್ರವಲ್ಲ ಪ್ರದರ್ಶನದ ಮಟ್ಟವೂ ಉತ್ತಮವಾಗಿಲ್ಲ. ವಿಪರ್ಯಾಸವೆಂದರೆ ಇಷ್ಟೆಲ್ಲಾ ಪರಿಣಾಮವಾದರೂ ಬುದ್ಧಿ ಕಲಿತಿಲ್ಲ. ತಮ್ಮದೇನು ತಪ್ಪಿಲ್ಲ ...ಎಲ್ಲವೂ ಸರಿ ಇದೆ ಎಂದು ಬೆನ್ನುತಟ್ಟಿಕೊಳ್ಳುವವರಿಗೆ  ಈ ಬದಲಾವಣೆಗಳು ಸಹಜ ಅಂತ ಭಾವನೆ. ಆದರೂ ಪ್ರೇಕ್ಷಕನಿಗೆ ಉತ್ತಮವಾದದ್ದು ಕೊಟ್ಟು ಅಂತಃ ಸತ್ವದ ಗುಣಮಟ್ಟವನ್ನು ಹೆಚ್ಚಿಸುವ ಅಧ್ಯಯನವಾಗಲೀ ಅದರ ಬಗೆಗಿನ ಕಾಳಜಿಯಾಗಲೀ ರಂಗದಲ್ಲಿ ಇಲ್ಲ ಎಂಬುದು ಅತ್ಯಂತ ಸತ್ಯ. 

ಮೊದಲೆಲ್ಲ ಪತ್ರಿಕೆಗಳ ಪ್ರತಿಗಳನ್ನು ಮೊದಲೇ ಹೇಳಿ ಕಾದಿರಿಸುವ ಅವಶ್ಯಕತೆ ಇರುತ್ತಿತ್ತು.  ಎಷ್ಟೋ ಪತ್ರಿಕೆಗಳನ್ನು ಓದುವುದಕ್ಕಾಗಿ ನಾನೇ ಯಾರದೋ ಮನೆಗೆ ಹೋಗಿದ್ದ ನೆನಪು. ಪ್ರಜಾಮತ ಎಂಬ ಪತ್ರಿಕೆ  ಓದುವುದಕ್ಕಾಗಿ ತಿಂಗಳ ಮೊದಲವಾರದಲ್ಲೇ ಗುಡ್ಡ ಹತ್ತಿ ಇಳಿದು ಸಂಭಂದಿಕರ ಮನೆಗೆ ಹೋದದ್ದು ನೆನಪಿದೆ. ಚಂದಮಾಮ ಬಾಲಮಿತ್ರ ಓದದೇ ಇದ್ದರೆ ಯಾವುದೋ ರೋಗ ಬಡಿದ ಅನುಭವವಾಗುತ್ತಿತ್ತು. ಈಗ ಅಂತಹ ವಾತಾವರಣ ಇಲ್ಲ ಎಂಬುದೇನೋ ಸತ್ಯ...ಆದರೆ ಒಂದು ದಿನ ನಿತ್ಯದ ಪತ್ರಿಕೆಯನ್ನು ಖರೀದಿಸಿ ನೋಡಿ ಅದರಲ್ಲಿ ಸುದ್ದಿಗಿಂತಲೂ ಹೆಚ್ಚು ಜಾಹೀ ರಾತು ಇರುತ್ತದೆ. ಸಿಕ್ಕ ಸಿಕ್ಕಲ್ಲಿ ಜಾಹೀರಾತು. ಅದು ಸಾಲದು ಎಂಬಂತೆ ಹತ್ತಿರದ ಮಳಿಗೆಯ ಕರಪತ್ರ ಕೂಡ ಇರಿಸಿಬಿಡುತ್ತಾರೆ.  ಪತ್ರಿಕೆಯಲ್ಲಿ ಹೂರಣ ಇಲ್ಲದಾಗ ಜಾಹೀರಾತಿನ ಮೊರೆ ಹೋಗಬೇಕಾಗಿ ಬರುವುದು ಅನಿವಾರ್ಯ. ಕೆಲವು ಪತ್ರಿಕೆಗಳಂತು ಉಚಿತವಾಗಿ ಕೊಡುವುದಿಲ್ಲ ಯಾಕೆಂದರೆ, ಪತ್ರಿಕೆ ಎಷ್ಟು ಜನರು ಕೊಂಡುಕೊಂಡು ಓದುತ್ತಾರೆ ಎಂದು ಅರಿವಿಗೆ ಬರುವುದಿಲ್ಲ. ಇಲ್ಲವಾದರೆ ಉಚಿತವಾಗಿ ಪತ್ರಿಕೆಗಳನ್ನು ಕೊಟ್ಟು ಬಿಡುತ್ತಿದ್ದರು. ಬೀದಿ ಬದಿಯಲ್ಲಿ ಕೊಡುವ ಕರಪತ್ರದಂತೆ ಪತ್ರಿಕೆ ಸಿಗುತ್ತಿತ್ತು. ಮುಂದೆ ಅಂತಹ ದಿನ ಬಂದರೂ ಅಚ್ಚರಿ ಇಲ್ಲ. ಯಾವಾಗ ಸತ್ವದ ಕೊರತೆಯಾಗುತ್ತದೋ ಅದನ್ನು ತುಂಬಿಕೊಳ್ಳುವುದಕ್ಕೆ ಉಚಿತ ಎಂಬುದು ಅನಿವಾರ್ಯ ಸಾಧನ. ಈಗಿನ ಸರಕಾರವೂ ಅದನ್ನು ಚೆನ್ನಾಗಿ ಬಳಸಿಕೊಳ್ಳುತ್ತದೆ. ಒಟ್ಟಿನಲ್ಲಿ ಚಲಾವಣೆಯಲ್ಲಿ ಇರಬೇಕು ಮರ್ಮ ಅಷ್ಟೇ. ಉಚಿತ ಉಚಿತ...ಎಲ್ಲವೂ ಉಚಿತ...ಇನ್ನು ಸಿನಿಮಾ ಮಂದಿರದಲ್ಲಿ ಚಹ ತಿಂಡಿಯ ಜತೆಗೆ ಮಲಗುವುದಕ್ಕೆ ಹಾಸಿಗೆ ಚಾದರ ಇಟ್ಟರೂ ಅಡ್ಡಿ ಇಲ್ಲ. ಸಿನಿಮಾ ನೋಡಿ ನಿದ್ದೆ ಬಂದರೆ ಮಲಗಿಬಿಡಬಹುದು. 


Saturday, July 13, 2024

ಸನಾತನ ಧ್ಯಾನ

        ಮೊನ್ನೆ ಮೊನ್ನೆ ಕನ್ಯಾ ಕುಮಾರಿಯ ಸಾಗರದ ತಟದಲ್ಲಿ ಮಾನ್ಯ ಪ್ರಧಾನಿಯವರು ಧ್ಯಾನದಲ್ಲಿ ಮಗ್ನರಾಗುವುದಕ್ಕೆ ನಿಶ್ಚೈಯಿಸಿದರು.  ಪ್ರಧಾನಿ ಯೊಬ್ಬರು ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ ಎಂದಾಕ್ಷಣ ’ಧ್ಯಾನ’ ಒಂದು ಮಹತ್ವದ ವಿಷಯವಾಗುತ್ತದೆ. ಹಾಗಾಗಿ ಪರ ವಿರೋಧ ಚರ್ಚೆಗಳು ಆರಂಭವಾಗುತ್ತದೆ.  ಇಲ್ಲಿ  ಚರ್ಚೆ ಮಾಡುವುದಕ್ಕೆ ಅರ್ಹತೆಯ ಯಾವ ಮಾನದಂಡವೂ ಇರುವುದಿಲ್ಲ. ಪ್ರಧಾನಿ ಒಬ್ಬರು ಮಾಡುತ್ತಾರೆ ಎಂಬುದೇ ಮುಖ್ಯವಾಗುತ್ತದೆ. ಯಾರೋ ಒಬ್ಬ ಪುಣ್ಯಾತ್ಮ ಬರೆದಿದ್ದ, ಸಂವಿಧಾನ ಬದ್ದ ಅಧಿಕಾರದಲ್ಲಿರುವವರು ಇದನ್ನು ಮಾಡಬಾರದು. ಯಾವ ಅರ್ಥದಲ್ಲಿ ಹೇಳಿದನೋ ದೇವರೇ ಬಲ್ಲ. ಪ್ರಧಾನಿಯಾದವರು ವೈಯಕ್ತಿಕ ವಿಚಾರಗಳಿಗೆ ಅತೀತರಾಗಿರಬೇಕು ಎಂದು ತಿಳಿದಹಾಗುಂಟು. ಧ್ಯಾನಕ್ಕೆ ಕುಳಿತುಕೊಳ್ಳಬಾರದು. ಆದರೆ ಪಂಚೆ ಉಟ್ಟು ಶಾಲು ಹೊದ್ದು ಪರಮ ಭಕ್ತರ ಹಾಗೆ ದೇವಸ್ಥಾನಕ್ಕೆ ಹೋಗಬಹುದು. ಹಾಗಾಗಿ ಇಲ್ಲಿ ಯಾವುದು ಸರಿ ತಪ್ಪು ಎಂದು ವಿಶ್ಲೇಷಣೆ ಮಾಡುವುದು ಮೂರ್ಖತನವಾಗುತ್ತದೆ.  ಧ್ಯಾನದ ಬಗ್ಗೆ ತಿಳಿಯದವರು, ತಿಳಿದವರು ಇದರ ನಡುವೆ ಅಲ್ಪಸ್ವಲ್ಪತಿಳಿದು ಅದನ್ನೇ ತಿಳಿದವರಂತೆ ಮಾತನಾಡುವವರು ಚರ್ಚಿಸುತ್ತಾರೆ. ಇಲ್ಲಿ  ಪಂಚೆ ಸುತ್ತಿ ಶಲ್ಯಹೊದ್ದು ದೇವಸ್ಥಾನಕ್ಕೆ ಹೋದರೆ ಅದು ಚರ್ಚೆಯಾಗುವುದಿಲ್ಲ. ಆದರೆ ಧ್ಯಾನಕ್ಕೆ ಕುಳಿತರೆ ಅದು ಚರ್ಚೆಯಾಗುತ್ತದೆ ಇನ್ನೂ ಮುಂದಕ್ಕೆ ಅದು ವರ್ಗೀಯ ವಿಷಯವಾಗುತ್ತದೆ. ಹುಚ್ಚರ ಸಂತೆಯಲ್ಲಿ ವಿವೇಕಕ್ಕೆ ಬೆಲೆ ಇರುವುದಿಲ್ಲ. ಅದು ಮೌಲ್ಯ ಇಲ್ಲದ ವಸ್ತುವಾಗುತ್ತದೆ. ಹಾಗಾಗಿ ಇಲ್ಲಿಯೂ...ಧ್ಯಾನದ ಬಗ್ಗೆ ಏನೇನೋ ಅಭಿಪ್ರಾಯಗಳು ವ್ಯಕ್ತವಾಗುತ್ತದೆ. 

ಪ್ರಧಾನಿಯವರ ಕಾರ್ಯ ಯಾವುದೇ ಇರಲಿ ಅದು ಅವರ ವೈಯಕ್ತಿಕ. ಅವರು ಕುಳಿತುಕೊಂಡ ಬಗೆ ಅದು ವಿಮರ್ಶೆ ಬೇಕೋ ಬೇಡವೋ ಅದು ಮುಖ್ಯವಲ್ಲ.  ಅವರ ಧ್ಯಾನದ ಉದ್ದೆಶ ಯಾವುದು? ಅವರು ಧ್ಯಾನ ಹೇಗೆ ಮಾಡಿದರು?  ಅದು ಧ್ಯಾನವಲ್ಲ? ಧ್ಯಾನ ಅಂದರೆ ಹೀಗೆ....ಇನ್ನೂ ಏನೇನೋ ಚರ್ಚೆ ಮಾಡುವುದಕ್ಕೆ ಅವಕಾಶವಿದೆ. ಆದರೆ ನಿಜಕ್ಕೂ ಧ್ಯಾನದ ಬಗ್ಗೆ ಒಂದೆರಡು ಅಕ್ಷರ ಹೇಳಬೇಕಿದ್ದರೂ ಅದರ ಬಗ್ಗೆ ತಿಳಿದಿರುವುದು ಅವಶ್ಯಕ.  ಆದರೆ ಧ್ಯಾನದ ಬಗ್ಗೆ ಸಂಪೂರ್ಣ ತಿಳುವಳಿಕೆ ಇಲ್ಲದವರೂ ಅದಕ್ಕೆ ಪರಮ ಜ್ಞಾನಿಗಳಂತೆ ಸರಿ ತಪ್ಪುಗಳ ನಿರ್ಣಯ ಮಾಡುವಾಗ ಅದು ಮೂರ್ಖತನ ಎನಿಸುತ್ತದೆ. ಧ್ಯಾನದ ಬಗ್ಗೆ ನಿರ್ದಿಷ್ಟವಾಗಿ ತಿಳಿಯದೇ ಇದ್ದವರೂ ಕೇವಲ ಊಹನೆಯಿಂದ ಅದಕ್ಕೆ ಪ್ರತಿಕ್ರಿಯೆ ಕೊಡುವುದು ನಿಜಕ್ಕೂ ಅದು ಅಜ್ಞಾನವಾಗುತ್ತದೆ. ಕಾರ್ಕೋಟಕ ವಿಷದ ರುಚಿ ಹೇಗೆ ಇರುತ್ತದೆ ಎಂದು ಹೇಳುವುದಕ್ಕೆ ಹೇಗೆ ಸಾಧ್ಯವಿಲ್ಲವೋ ಹಾಗೆ ಧ್ಯಾನದ ಅನುಭವವನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಅದು ಕೇವಲ ಅನುಭವಕ್ಕೆ ಮಾತ್ರ ಸೀಮಿತವಾಗಿರುತ್ತದೆ, ಮಾತ್ರವಲ್ಲ ಅದು ಅನುಭವಿಸಿದರೆ ಮಾತ್ರ ಅರಿವಾಗುತ್ತದೆ. 

ಧ್ಯಾನ ಎಂಬುದು ಅದು ಬಹಿರಂಗ ಅಥವಾ ಸಾಮೂಹಿಕ ಕ್ರಿಯೆಯಲ್ಲ. ಒಬ್ಬ ನಿದ್ರಾವಶನಾಗಿ ಹೇಗೆ ಅನುಭವಗಳನ್ನು ವೈಯಕ್ತಿಕವಾಗಿ ಪಡೆದುಕೊಳ್ಳುತ್ತಾನೋ ಧ್ಯಾನವೂ ಅದೇ ರೀತಿಯದಾಗಿರುತ್ತದೆ. ನಿದ್ರೆಯಲ್ಲಿ ಪ್ರಜ್ಚೆ ಜಾಗೃತವಾಗಿರುವುದಿಲ್ಲ. ಅಲ್ಲಿ ಯಾವುದೂ ನಿಯಂತ್ರಣದಲ್ಲಿರುವುದಿಲ್ಲ. ಆದರೆ ಧ್ಯಾನದಲ್ಲಿ ಎಲ್ಲವೂ ನಮ್ಮ ನಿಯಂತ್ರಣದಲ್ಲಿರುತ್ತವೆ. ನಮ್ಮ ದೇಹ ಮತ್ತು ಮನಸ್ಸಿನ ಸ್ಥಿತಿ ಯಾವ ಬಗೆಯಲ್ಲಿರುತ್ತದೋ ಅದೇ ಬಗೆಯಲ್ಲಿ ಸಿಗುವ ಅನುಭವಗಳು ಇರುತ್ತವೆ. ಇಲ್ಲಿ ಪ್ರಕೃತಿ ಸಹಜವಾದ ಪಂಚ ಪ್ರಾಣಗಳನ್ನು, ಷಡ್ವೈರಗಳನ್ನು ತನ್ನ ನಿಯಂತ್ರಣದಲ್ಲಿರಿಸಿ ಮನಸ್ಸು ದೇಹ ಎಲ್ಲವನ್ನೂ ಒಂದಾಗಿಸಿ ಸ್ಥಿತಪ್ರಜ್ಞತೆಗೆ ಜಾರುವುದು ಒಂದು ಧ್ಯಾನದ ಮೂಲ ಸ್ವರೂಪ. ಇವುಗಳೆಲ್ಲ ಮನುಷ್ಯನ ಅಂತರಂಗಕ್ಕೆ ಸಂಭಂದಿಸಿದವುಗಳು ಹೊರತು ಬಹಿರಂಗದ ಅಭಿನಯ ಕ್ರಿಯೆಯಲ್ಲ. ಉದಾಹರಣೆ : ನಮಸ್ಕರಿಸುತ್ತೇನೆ ಎಂದರೆ ಅಡ್ಡಬಿದ್ದು ನಮಸ್ಕರಿಸಬೇಕೇಂದೇನೂ ಇಲ್ಲ. ಶರಣಾಗುತ್ತೇನೆ ಎಂದರೆ ತಲೆ ನಡು ಬಗ್ಗಿಸಿಕೊಳ್ಳುವುದಲ್ಲ. ಎಲ್ಲವೂ ಮನಸ್ಸಿನ ಸ್ವರೂಪಗಳೂ. ಹಾಗಾಗಿ ಅದನ್ನು ಅದು ಸರಿ ತಪ್ಪು ಎಂದು ನಿರ್ಧರಿಸುವುದಕ್ಕೆ ಸಾಧ್ಯವಾಗುವುದಿಲ್ಲ. 

ಧ್ಯಾನ ತನ್ನಲ್ಲಿ ತಾನು ತಲ್ಲೀನನಾಗಿ ಅಂತರ್ಮುಖಿಯಾಗುವುದು ಹೌದಾದರೂ ಅದಕ್ಕೆ ಅವಿರತ ಸಾಧನೆ ಬೇಕು. ಸುಮ್ಮನೇ ನಮ್ಮ ಮನೋವಿಕಾರಗಳಿಂದ ನಮಗೆ ಹೊರಬರುವುದಕ್ಕೆ ಸಾಧ್ಯವಾಗುವುದಿಲ್ಲ.  ದೈಹಿಕ ಮತ್ತು ಮಾನಸಿಕ ಅರ್ಹತೆಗಳಿರಬೇಕು. ಇಲ್ಲವಾದರೆ ಅದು ಕೇವಲ ಅಭಿನಯವಾಗುತ್ತದೆ. ಅದೊಂದು ದೇಹದಿಂದ ಮನಸ್ಸಿಗೆ ನಂತರ ಮನಸ್ಸಿನಿಂದ ಮತ್ತೂ ಆಚೆಗೆ ಸಾಗುವ ಪಯಣ. ಅದರ ಗುರಿ ಎಲ್ಲಿ ಎಂದು ಸ್ಪಷ್ಟವಿರುವುದಿಲ್ಲ. ಒಂದು ರೀತಿಯಲ್ಲಿ ಹಿಮಾಲಯ ಹತ್ತಿದಂತೆ. ಹಿಮಾಲಯ ಹತ್ತುತ್ತಾ ಹೋದಂತೆ...ಓ ಅಲ್ಲಿ ಹಿಮಾಲಯದ ಶಿಖರ ಅಂತ ಗೋಚರಿಸಿದರೂ...ಅಲ್ಲಿ ಮುಟ್ಟುವಾಗ ಮತ್ತೊಂದು ಶಿಖರ ಹಿಮಗುಡ್ಡೆಯಾಗಿ ಕಾಣಬಹುದು. ಹೇಗೆ ಹಿಮಾಲಯ ಆರೋಹಣದ ಅನುಭವವನ್ನು ಸುಮ್ಮನೆ ಕಲ್ಪನೆ ಮಾಡಿ ಹೇಳುವುದಕ್ಕೆ ಸಾಧ್ಯವಿಲ್ಲವೋ ಹಾಗೆ ಧ್ಯಾನದ ಅನುಭವಗಳನ್ನು ಕಲ್ಪಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಧ್ಯಾನದ ಬಗ್ಗೆ ಹೇಳಬೇಕಾದರೆ ಅದರ ಸರಿ ತಪ್ಪು ವಿಶ್ಲೇಷಣೆ ಮಾಡಬೇಕಾದರೆ ಧ್ಯಾನದ ಪಯಣದಲ್ಲಿ ಒಂದೆರಡು ಹೆಜ್ಜೆಯಾದರೂ ಇಟ್ಟ ಅನುಭವ ಇರಬೇಕು. 

ಕಲ್ಲಂಗಡಿ ಹಣ್ಣು...ಹೊರಭಾಗದಿಂದ ನೋಡುವುದಕ್ಕೆ ಹಚ್ಚ ಹಸುರಾಗಿ ಇರುತ್ತದೆ. ಹಣ್ಣಾಗಿದ್ದರೂ ಇದು ಕಾಯಿಯಂತೆ ಗೋಚರಿಸುತ್ತದೆ. ಸಾಮಾನ್ಯವಾಗಿ ನಾವು ತಿನ್ನುವಾಗ ಇದನ್ನು ಹೆಚ್ಚಿ ಮಧ್ಯಭಾಗವನ್ನು ಮಾತ್ರ ಗಮನಿಸಿ ತಿಂದು ಬಿಡುತ್ತೇವೆ. ಆದರೆ ಹಣ್ಣನ್ನು ಹೊರಗಿನಿಂದ ಕೊರೆಯುತ್ತಾ ಹೋದರೆ ಮೊದಲು ದಪ್ಪಗಿನ ತೊಗಟೆ, ಆನಂತರ ಬಿಳಿಯಾದ ಪದರು ಇದು ಸಪ್ಪೆಯಾಗಿರುತ್ತದೆ.  ಇದರ ರುಚಿ ತಿಳಿಯಬೇಕಾದರೆ ಮತ್ತೂ ಕೊರೆಯುತ್ತಾ ಒಳಗೆ ಹೊಗಬೇಕು. ಇದರ ಅಂತರಂಗ ಭೇದಿಸಿದಂತೆ ಹಣ್ಣಿನ ನಿಜವಾದ ರುಚಿ ಅನುಭವಕ್ಕೆ ಬರುತ್ತದೆ. ಅದರ ನಡುವೆ ಬೀಜಗಳು ತೊಂದರೆ ಕೊಡಬಹುದು. ಧ್ಯಾನದ ಪ್ರಕ್ರಿಯೆ ಕಲ್ಲಂಗಡಿ ಹಣ್ಣಿನಂತೆ, ಮೊದಲಿಗೆ ದಪ್ಪ ತೊಗಟೆಯನ್ನು ಭೇದಿಸುವುದೇ ಶ್ರಮದಾಯಕ. ಅದೊಂದು ತಪಸ್ಸಿದ್ದಂತೆ. ಆರಂಭದಲ್ಲಿ ಇದರ ರುಚಿಯನ್ನು ಅನುಭವಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಅಂತರಂಗದೊಳಗೆ ಪ್ರವೇಶಿಸಿದಂತೇ ಕಲ್ಲಂಗಡಿಯ ಹಣ್ಣಿನ ರುಚಿಯಂತೆ ಅದರ ನೀರಿನ ಅಮೃತ ಧಾರೆಯಂತೆ ರುಚಿ ಅನುಭವಕ್ಕೆ ಬರುತ್ತದೆ. ನಡುವೆ ಹೊರಗಿನ ಅಡೆ ತಡೆಗಳು ನಮ್ಮ ಏಕಾಗ್ರತೆಗೆ ಭಂಗ ತರುತ್ತವೆ. ಇದನ್ನೆಲ್ಲವನ್ನು ಹೋಗಲಾಡಿಸಿ ಧ್ಯಾನ ಎಂಬ ಹಣ್ಣಿನ ರುಚಿಯನ್ನು ಅನುಭವಿಸಿದರೆ ಮಾತ್ರ ಧ್ಯಾನದ ಅರಿವಾಗುವುದಕ್ಕೆ ಸಾಧ್ಯ. 

ಧ್ಯಾನ ಎಂಬ ಕ್ರಿಯೆಯ ಅನ್ವೇಷಣೆ ಯಾರಿಂದ ಯಾವಾಗ ಆಯಿತೋ ಅದು ಬೇರೆ. ಆದರೆ ಸನಾತನ ಧರ್ಮದಲ್ಲಿ ಇದಕ್ಕೆ ಪ್ರಮುಖ ಸ್ಥಾನ. ದೈವ ಸರೂಪವನ್ನು ಕಂಡುಕೊಂಡದ್ದೇ ಈ ಧ್ಯಾನ ಸ್ವರೂಪದಲ್ಲಿ. ಎಲ್ಲ ದೇವರ ಕಲ್ಪನೆ ವ್ಯಕ್ತವಾಗುವುದು ಧ್ಯಾನ ಸ್ವರೂಪದಲ್ಲಿ. ಹಾಗಾಗಿ ಧ್ಯಾನ ಎಂದಾಕ್ಷಣ ಅದು ಹಿಂದೂ ದರ್ಮಕ್ಕೆ ಸಂಬಂಧಿಸಿದ್ದು ಅಂತ ಅದಕ್ಕೆ ವರ್ಗೀಯ ಲಕ್ಷಣವನ್ನು ಆರೋಪಿಸಿ ತಮಗೆ ತೋಚಿದಂತೆ ವ್ಯಾಖ್ಯಾನಿಸುವುದು ಮೂರ್ಖತನವಲ್ಲದೆ ಬೇರೇನೂ ಅಲ್ಲ. ಇಷ್ಟು ಪ್ರಾಮುಖ್ಯತೆ ಇದ್ದರೂ ಬಹು ಸಂಖ್ಯಾತ ಜನ ಧ್ಯಾನವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಅದರ ಮೂಲ ಸ್ವರೂಪವನ್ನು ಅರಿತಿಲ್ಲ. ಧ್ಯಾನವವನ್ನು ಆಚರಿಸುವವರು ಕೆಲವೇ ಕೆಲವು ಮಂದಿ. ಇಷ್ಟಿದ್ದರೂ ಧ್ಯಾನ ಎಂಬ ವಿಷಯ ಬರುವಾಗ ಅದರ ಬಗ್ಗೆ ಅಭಿಪ್ರಾಯ ಮಂಡಿಸುವುದಕ್ಕೆ ಬಹು ಸಂಖ್ಯೆಯಲ್ಲಿರುತ್ತಾರೆ. 

ನಮ್ಮ ಆರಾಧನಾ ಕ್ರಮಗಳು ಧ್ಯಾನದ ಕವಲಾದರೂ ಧ್ಯಾನದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಶಿಸ್ತು ಬದ್ಧವಾಗಿ ಅದನ್ನು ಆಚರಿಸಿದರೆ ಆರಾಧನಾ ಕ್ರಮಕ್ಕೂ ಅದಕ್ಕೂ ಬಹಳ ವೆತ್ಯಾಸವಿದೆ. ಇಲ್ಲಿ ಕೇವಲ ಹೊರಾವರಣವನ್ನು ದರ್ಶಿಸುವುದಲ್ಲ. ಅಂತರಂಗದ ಒಳಗೆ ನೋಡುವುದೇ ಧ್ಯಾನ. ದೇಹ ದಿಂದ ಮನಸ್ಸಿನ ಪಯಣ ಅಂತರಂಗದ ಕಡೆಗೆ ಇರುತ್ತದೆ. ಇಲ್ಲಿ ಭಗವಂತನ ಜ್ಞಾನ ಮಾತ್ರ ಒದಗಿ ಭಗವಂತ ಜ್ಞಾನ ಸ್ವರೂಪಿಯಾಗಿರುತ್ತಾನೆ. ಆ ಜ್ಞಾನ ತನ್ನ ಆಂತರ್ಯದಲ್ಲೇ ಇರುವುದರಿಂದ ಅದನ್ನು ದರ್ಶಿಸುವುದೇ ಧ್ಯಾನವಾಗುತ್ತದೆ. ಆದರೆ ಇವುಗಳನ್ನು ಅನುಭವಿಸದೇ ಅದರ ಬಗ್ಗೆ ತೋಚಿದಂತೆ ಅಭಿಪ್ರಾಯ ಸೂಚಿಸುವುದು ಸಾಧ್ಯವಿಲ್ಲ. 

ಉಸಿರಾಟ ಎಂಬುದು ಮನುಷ್ಯನ ಜೀವದ ಸಂಕೇತ. ಅದು ಜನ್ಮ ಜಾತ ದೈಹಿಕ ಕ್ರಿಯೆ.  ಅದು ಬಹಿರಂಗದಿಂದ ನಮ್ಮ ಅಂತರಂಗದ ಒಳಗಿರುವ ಸಂಭಂಧದ ಮಾಧ್ಯಮ. ಅದರ ಮೂಲಕವೇ ಅಂತರಂಗವನ್ನು ಗಮನಿಸುತ್ತಾ ಅಂತರಂಗಕ್ಕೆ ಇಳಿದು ಹೋಗುವುದೇ ಧ್ಯಾನ. ಧ್ಯಾನ ಎಂಬುದು ಅದೊಂದು ಪ್ರಯಾಣ. ದೇಹದಿಂದ ಮನಸ್ಸಿಗೆ ಇರುವ ಪ್ರಯಾಣ. ನಮ್ಮದೇ ದೇಹವಾದರೂ, ನಮ್ಮದೇ ಮನಸ್ಸಾದರೂ ಅದರ ಸಂಪೂರ್ಣ ಜ್ಞಾನ ನಮಗಿರುವುದಿಲ್ಲ. ಆ ಜ್ಞಾನದ ಅರಿವನ್ನು ಗಳಿಸುವುದೇ ಧ್ಯಾನ.  ಅದು ನೋಡಿದಷ್ಟು ಸುಲಭವಲ್ಲ. ಹಾಗಾಗಿ ಅದರ ಬಗ್ಗೆ ವ್ಯಾಖ್ಯಾನಿಸುವಾಗ ಆ ಮಾಧ್ಯಮದಲ್ಲಿ ಸಂಚರಿಸಿದವನಿಗೆ ಮಾತ್ರವೇ ಸಾಧ್ಯವಿರುತ್ತದೆ.

ವಿಶ್ವಾಮಿತ್ರನ ಕಥೆ ಗೊತ್ತಿರಬಹುದು. ಕೌಶಿಕ ಮಹಾರಾಜ ಕ್ಷತ್ರಿಯನಾಗಿ ನಂತರ ಬ್ರಹ್ಮಋಷಿಯಾಗುವ  ಆತನ ಹಾದಿ ಏಳು ಬೀಳುಗಳಿಂದ ಕೂಡಿರುತ್ತದೆ.  ವಾಸ್ತವದಲ್ಲಿ ಸೂರ್ಯನನ್ನು ವಿಶ್ವಾಮಿತ್ರ ಎಂದರೆ, ಆನಂತರ ಸೂರ್ಯಗಾಯತ್ರಿಯ ದೃಷ್ಠಾರನಾಗಿ ಕೌಶಿಕ ವಿಶ್ವಾಮಿತ್ರ ಮಹರ್ಷಿಯಾದ. ವಿಶ್ವಾಮಿತ್ರ ಮೇನಕೆಯಿಂದ ತಪೋಭಂಗವನ್ನು ಅನುಭವಿಸಿದವನು. ಆದರೂ ಆತ ಎದೆಗುಂದದೆ  ಭಗ್ನವಾದ ಹಾದಿಯನ್ನು ಮತ್ತೆ ಒಂದಾಗಿಸಿ ತನ್ನ ಸಾಧನೆಯನ್ನು ಮುಂದುವರಿಸಿವನು. ಒಂದು ರೀತಿಯಲ್ಲಿ ಮೇನಕೆಯ ಪ್ರವೇಶ ವಿಧಿ ಬರೆದ  ಆತನ ಇಚ್ಛಾ ಶಕ್ತಿಯ ಪರೀಕ್ಷೆಯಾಗಿತ್ತು.  ವಿಶ್ವಾಮಿತ್ರನಿಗೆ ಗಾಯತ್ರಿ ಮಂತ್ರದ ದೃಷ್ಠಾರನಾಗುವಲ್ಲಿ ವಿಧಿ ಮೊದಲೇ ನಿರ್ಣಯಿಸಿತ್ತು. ಗಾಯತ್ರೀ ಮಂತ್ರದ ದೃಷ್ಟಾರನಾಗುವಲ್ಲಿ ಆತನಿಗೂ ಒಂದು ಪಾವಿತ್ರ್ಯತೆ ಒದಗಿ ಬರಬೇಕಲ್ಲ?  ಹಾಗಾಗಿ  ಮೇನಕೆಯ ಮುಖಾಂತರ ವಿಶ್ವಾಮಿತ್ರನ ಪರಿಶುದ್ದತೆ ಪರೀಕ್ಷೆಗೆ ಒಳಗಾಯಿತು. ವಿಶ್ವಾಮಿತ್ರ ಮೇನಕೆಗೆ ಮನಸೋತು ತಪಸ್ಸಿನಿಂದ ವಿಚಲಿತನಾದರೂ ಕೊನೆಗೂ ತನ್ನ ಅಂತಃ ಸತ್ವದಿಂದ ಅದನ್ನು ಮೆಟ್ಟಿನಿಂತು ಸಾಧನೆಯ ಗುರಿಶಿಖರವನ್ನು ತಲುಪಿದ. ಮೇನಕೆಯ ಪ್ರಸಂಗವೆಂದರೆ ಅದು ವಿಶ್ವಾಮಿತ್ರನ ಯೋಗ್ಯತೆಯ ಪರೀಕ್ಷೆ.  ಅದರಂತೆ ಧ್ಯಾನದ ಹಾದಿ ನಮ್ಮನ್ನು ಹಲವು ಪರೀಕ್ಷೆಗೆ ಒಳ ಪಡಿಸುತ್ತದೆ. ಹಲವು ಸಲ ನಾವು ವಿಮುಖರಾಗಿ ಸೋತು ಹೋದರೂ ನಮ್ಮ ಅಂತಃ ಸತ್ವವನ್ನು ಧ್ಯಾನ ಎಚ್ಚರಿಸುತ್ತದೆ. 

ಧ್ಯಾನ ಪರಿಶುದ್ದ ಮನಸ್ಸಿನ ಸಂಕೇತ. ಕಲ್ಮಶವಿದ್ದರೆ ಒಂದೋ ಅದು ದೂರಾಗಬೇಕು. ಧ್ಯಾನ ಪರಿಪೂರ್ಣವಾಗುವುದೇ ಪರಿಶುದ್ದತೆಯಿಂದ. ಹಿಂಸೆ ದ್ವೇಷ ಅಸೂಯೆ ಈ ಎಲ್ಲವನ್ನು ಮೆಟ್ಟಿನಿಲ್ಲುವ ಶಕ್ತಿಯನ್ನು ಒದಗಿಸುತ್ತದೆ.  ಸನಾತನ ಧರ್ಮದಲ್ಲಿ ಧ್ಯಾನ ಪದ್ದತಿಗೆ ಬಹಳ ಮಹತ್ವವಿದೆ.  ಜಗತ್ತಿನ ದ್ವೇಷ ಅಸೂಯೆ ವೈಷಮ್ಯಗಳನ್ನು ದೂರ ಮಾಡುವಲ್ಲಿ ಧ್ಯಾನದಿಂದ ಮಾತ್ರ ಸಾಧ್ಯ.ಹಾಗಾಗಿ ಭಾರತ ವಿಶ್ವಗುರುವಾಗಿ ಬೆಳಗುವುದಕ್ಕೆ ಸಾಧ್ಯ. ಪರಿಪೂರ್ಣವಾಗಿ ಧ್ಯಾನದ ಹಾದಿಯಲ್ಲಿ ಸಾಗಬೇಕಾದರೆ ಯಮ ನಿಯಮಗಳು ಪರಿಪೂರ್ಣವಾಗಿ ಅನುಷ್ಠಾನವಾಗಬೇಕು. ಯಮ  ಎಂದರೆ ಸಾರ್ವತ್ರಿಕವಾಗಿ ಇರಬೇಕಾದ ಗುಣಗಳು. ಮನುಷ್ಯನ ನೈತಿಕತೆಯನ್ನು ಸಂಭಂಧಿಸಿದ ಗುಣಗಳು. ನಿಯಮ ಎಂದರೆ ಅದು ವೈಯಕ್ತಿಕವಾದ ಗುಣಗಳು.ಪರಿಶುದ್ದಿ ತಪಸ್ಸು ಪರಮಾತ್ಮನ ಚಿಂತನೆ.  ಇವುಗಳ ಪರಿಪೂರ್ಣ ಅಳವಡಿಕೆಯಾದಲ್ಲಿ ಮಾತ್ರವೇ ಧ್ಯಾನದ ಪರಾಕಷ್ಠೆಗೆ ತಲುಪುವುದಕ್ಕೆ ಸಾಧ್ಯ. ಇದಕ್ಕೆ ವಿಹಿತವಾಗಿ ಧ್ಯಾನ ಮಾಡಿದರೆ ಅದು ಧ್ಯಾನವಾಗುವುದಕ್ಕೆ ಸಾಧ್ಯವಿಲ್ಲ.  ಪ್ರಧಾನಿಯವರು ಇದೇ ಕಾರಣಕ್ಕೆ ಧ್ಯಾನದ ಹಾದಿಯನ್ನು ಹಿಡಿದವರು. ಮನುಷ್ಯ ತಾನು ಎಸೆಯುವುದನ್ನು ಅಂದರೆ ಕಸ ಕಲ್ಮಷಗಳನ್ನು  ಅಧಿಕವಾಗಿಸಿದಂತೆ ಪ್ರಕೃತಿಯ ಸಂಭಂಧವನ್ನು ಕಳಚಿಕೊಳ್ಳುತ್ತಾನೆ. ನಮ್ಮಲ್ಲಿ ಎಸೆಯುವ ವಸ್ತುಗಳು ಕಡಿಮೆಯಾದಷ್ಟು ನಾವು ಹೆಚ್ಚು ಪರಿಶುದ್ದರಾಗುತ್ತೇವೆ. 


Sunday, July 7, 2024

ಗೋವಾ ಪ್ರವಾಸ

     ಗೋವಾ ಹೋಗುತ್ತೇನೆ ಎಂದರೆ ಸಾಕು ನಮ್ಮಲ್ಲಿ ಈಗಲೂ ಒಂದು ವಕ್ರ ಮಾತು ವಕ್ರ ಕಲ್ಪನೆ ಇದೆ.  ಮಂಗಳೂರಲ್ಲಿ ಇದ್ದಾಗ ಅದೊಂದು ಟಾಕೀಸ್ ಇತ್ತು. ಅಲ್ಲಿ ಸಿನಿಮಾಕ್ಕೆ ಹೋಗಿದ್ದೇನೆ ಎಂದರೆ ಸಾಕು ಹಲವರ ಕಿವಿ ನೆಟ್ಟಗಾಗಿ ಕಣ್ಣು ಚೂಪಾಗಿ ಹುಬ್ಬು ಗಂಟಿಕ್ಕಿಬಿಡುತ್ತಿತ್ತು. ವಿಷಯ ಇಷ್ಟೆ...ಆ ಕಾಲದಲ್ಲಿ ಅಲ್ಲಿ ಹೆಚ್ಚಾಗಿ ಮಲ್ಲೂ ಸಿನಿಮಾಗಳೇ ಬರುತ್ತಿತ್ತು. ಮಡಿವಂತರು ದೂರದಿಂದ ಸಿನಿಮಾ ಪೋಸ್ಟರ್ ನ್ನು ನೋಡುವುದಕ್ಕೂ ಸಂಕೋಚ ಪಡುತ್ತಿದ್ದರು. ಮಲಯಾಳಂ ಸಿನಿಮಾ ಎಂದರೆ ಇಷ್ಟೇ ಎಂಬ ಕಲ್ಪನೆಯಂತೆ ಆ ಟಾಕೀಸಿಗೆ ಸಿನಿಮಾಕ್ಕೆ ಹೋಗುವುದರಲ್ಲೂ ಒಂದು ರೀತಿಯ ವಕ್ರದೃಷ್ಟಿ ಇರುತ್ತಿತ್ತು. ಮಲಯಾಳಂ ಸಿನಿಮ ಎಂದರೆ ಅಷ್ಟೇ ಅಲ್ಲ ಅದರಿಂದಾಚೆಗೆ ಅದಕ್ಕೆ ವಿಶಿಷ್ಟವಾದ ಸ್ಥಾನವಿದೆ ಎಂದರೆ ಹಳಬರಿಗೆ ಈಗಲೂ ವಿಶ್ವಾಸ ಬರುವುದಿಲ್ಲ. ಭಾರತದ ಚಲನ ಚಿತ್ರ ಚರಿತ್ರೆಯಲ್ಲಿ ಅಂದಿನಿಂದ ಇಂದಿನವರೆಗೆ ಮಲಯಾಳಂ ಸಿನಿಮಾಗಳಿಗೆ ವಿಶಿಷ್ಟ ಸ್ಥಾನವಿದೆ. ನನ್ನ ಊಹೆಯಂತೆ ಅತ್ಯಂತ ಹೆಚ್ಚು ದೇಶೀಯ ಪ್ರಶಸ್ತಿಗಳನ್ನು ಬಾಚಿಕೊಂಡ ಚಿತ್ರರಂಗ ವಿದು. ಬಹಳಷ್ಟು ಪ್ರತಿಭಾವಂತರು ಆಗಿನಿಂದ ಈಗಿನವರೆಗೂ ಇದ್ದಾರೆ. ಆದರೆ ವಕ್ರವಾಗಿ ಚಿಂತಿಸುವವರಿಗೆ ಹೇಗಿದ್ದರೆ ಏನು, ತಮಗೆ ಕಂಡದ್ದು ತಮ್ಮ ಕಲ್ಪನೆ ಇವಿಷ್ಟೇ ಸತ್ಯ. ಮಂಗಳೂರಿನ ಆ ಟಾಕೀಸ್ ನಲ್ಲಿ ಮಲಯಾಳಂ ಸಿನಿಮಾ ಎಂದು ಕೊಂಡು ಆ ಟಾಕೀಸಿನ ಹೆಸರೂ ಉಚ್ಚರಿಸದಿರುವ ಮಡಿವಂತಿಗೆಯಲ್ಲಿ ಅದೇ ಟಾಕೀಸಿನಲ್ಲಿ ರಾಜ್ ಕುಮಾರ್ ಅಭಿನಯ


















ದ ಸಂಪತ್ತಿಗೆ ಸವಾಲ್ ಸಿನಿಮಾ ಶತದಿನ ಆಚರಿಸಿತ್ತು.  ಕೆಲವೊಮ್ಮೆ ಚರಿತ್ರೆಗಳು ತಮಸ್ಸಿನಲ್ಲೇ ಹರಿದಾಡುತ್ತವೆ. ಆದು ಕಾಲದ ಮಹಿಮೆ. ಆದರೆ ವಿವೇಚನೆಯಿಂದ ಕಾಣುವವನು ಅಲ್ಲಿ ಬೆಳಕನ್ನೂ ಕಾಣುತ್ತಾನೆ. ಗೋವ ಮತ್ತು ಮಲಯಾಳಂ ಸಿನಿಮ ಇದಕ್ಕೆ ಎಲ್ಲಿ ಹೋಲಿಕೆ ಎಂದು ಕೇಳಬಹುದು. ಈ ಬಾರಿ ಗೋವಕ್ಕೆ ಹೋದಾಗ ನನ್ನ ತಂಗಿಯ ಮಗಳು, ಮಲಯಾಳಂ ಕಲಿಯಬೇಕು ಎಂದು ನನಗೆ ದುಂಬಾಲು ಬಿದ್ದಳು. ಕೇವಲ ಮರಾಠಿ ಹಿಂದಿ ಇಂಗ್ಲೀಷ್ ಮಾತನಾಡುವ ಆಕೆಗೆ ಮಲಯಾಳಂ ಆಸಕ್ತಿ ಉಂಟಾಗುವುದಕ್ಕೆ ಕಾರಣ ಮಲಯಾಳಂ ಸಿನಿಮಾಗಳು. 

ಮಂಗಳೂರಿನ ಆ ಟಾಕೀಸಿನಂತೆ, ಈಗಲೂ ಗೋವಕ್ಕೆ ಹೋಗುತ್ತೇನೆ ಎಂದರೆ ಕೆಲವರಿಗೆ ಕಿವಿ ನೆಟ್ಟಗಾಗುತ್ತದೆ. ಗೋವಾ ಅಂತ ಹುಬ್ಬೇರಿಸಿಬಿಡುತ್ತಾರೆ. ಮೊನ್ನೆ ಲೆಕ್ಕ ಪರಿಶೋಧನೆಗೆ ಒಂದು ಸಂಸ್ಥೆಗೆ ಹೋಗಿದ್ದೆ. ಗೋವ ಹೋಗುವುದರಿಂದ ಸ್ವಲ್ಪ ತರಾತುರಿಯಲ್ಲಿ ಕೆಲಸ ಮುಗಿಸಬೇಕಿತ್ತು. ಅಲ್ಲಿನ ನಿರ್ವಾಹಕರಿಗೆ ಹೇಳಿದೆ, ಬೇಗನೆ ಮುಗಿಸಬೇಕು. ನಾಲ್ಕೈದು ದಿನ ನಾನು ಸಿಗುವುದಿಲ್ಲ. ಗೋವ ಹೋಗುತ್ತಿದ್ದೇನೆ ಎಂದು ಹೇಳಿದಾಕ್ಷಣ, ಅವರ ಹುಬ್ಬು ಮೇಲೇರಿತು. ಹುಬ್ಬು ಗಂಟಿಕ್ಕಿತು. " ಏನ್ ಸಾರ್ ಗೋವಾ ಹೊರಟಿದ್ದೀರಿ?" ಒಂದು ವಕ್ರ ಧ್ವನಿ  ಈ ಪ್ರಶ್ನೆಯಲ್ಲಿತ್ತು. ನಾನು ಜಪತಪ ಯೋಗ ಅಂತ ಮಾತನಾಡುವವನು ಗೋವಕ್ಕೆ ಹೋಗುತ್ತೇನೆ ಎಂಬುದೇ ಅವರ ಕುತೂಹಲ. ಸಮುದ್ರ ಕಿನಾರೆ ಮತ್ತು ಮದ್ಯ....ಮೇಲ್ನೋಟಕ್ಕೆ ಇವುಗಳಿಗೆ ಗೋವ ಪ್ರಸಿದ್ಧಿ. ಅವರೂ ಹತ್ತಿರ ಬಂದು ಕಿವಿಯಲ್ಲಿ ಹೇಳಿದರು. " ಸಾರ್ ಬರುವಾಗ ಒಂದು ಬಾಟಲ್ ತನ್ನಿ"  ಈ ಬಾರಿ ನನ್ನ ವಕ್ರದೃಷ್ಟಿ ಅವರ ಮೇಲೆ ಹರಿಸಿದೆ. ಅದಕ್ಕೆ ಅವರು ಹೇಳಿದರು " ಎನಿಲ್ಲ ಸಾರ್, ಯಾರೋ ಸ್ನೆಹಿತರಿಗೆ ಕೊಡಬೇಕು" ಹೀಗೆ ಏನೆನೋ ಕಾರಣ ಹೇಳಿದರು. ಆದರೆ ನನಗೆ ಅದರ ಅಸಲೀ ಸತ್ಯ ಗೊತ್ತಿತ್ತು. ಹೀಗೆ ತೀರ್ಥ ಯಾಚನೆ ಮಾಡುವವರು ತಮಗಲ್ಲ ಅಂತ ಹಲುಬುವುದು ಎಷ್ಟೋ ಬಾರಿ ನೋಡಿದ್ದೇನೆ. 

ಗೋವ ಎಂದರೆ ಅದೊಂದು  ತಪ್ಪು ಕಲ್ಪನೆ. ಆದರೆ ವಾಸ್ತವ ಬೇರೆ ಇದೆ. ಆದರೆ ಅದನ್ನು ಗಮನಿಸುವ ವಿವೇಚನೆ ನಾಶವಾಗಿದೆ. ಗೋವದಲ್ಲೂ ಒಂದು ಶುದ್ದವಾದ ಭಾರತೀಯ ಸಂಸ್ಕೃತಿ ಈಗಲೂ ಗಟ್ಟಿಯಾಗಿದೆ. ಅದರಲ್ಲೂ ಕೆಲವು ಸಂಪ್ರದಾಯಬದ್ದ ಬ್ರಾಹ್ಮಣ ಅಗ್ರಹಾರಗಳಿವೆ. ಕೆಲವು ಹಳ್ಳಿಗಳು ಅದೇ ನೆಲಗಟ್ಟಿನಲ್ಲಿ ಈಗಲೂ ನಮ್ಮ ಸಂಸ್ಕೃತಿಯನ್ನು ಜೀವಂತವಾಗಿರಿಸಿವೆ. ಅದು ಇಲ್ಲಿಗಿಂತಲೂ ಅಧಿಕ ಎಂದರೆ ಸೂಕ್ತ.  ಅದನ್ನು ಗಮನಿಸುವ ದೃಷ್ಟಿ ನಮ್ಮಲ್ಲಿ ಇದ್ದರೆ ಅರಿವಾಗಬಹುದು. ಆದರೆ ಅದು ಅರಿವಾಗುವುದಿಲ್ಲ. ಕರ್ನಾಟಕದ ಗಡಿ ದಾಟಿದ ಕೂಡಲೇ ಮದ್ಯದ ಅಮಲು ತಲೆಗೆ ಏರಿಸಿಕೊಂಡರೆ ಅದು ಗೋವದಲ್ಲಿ  ತಿರುಗಿ ಪುನಃ ಮನೆಗೆ ಬಂದು ಎರಡು ದಿನ ಕಳೆದರೂ ಇಳಿಯುವುದಿಲ್ಲ.  ಕಣ್ಣು ಮಂಜಾಗುವಂತೆ ನಶೆ ಎರಿಸಿಕೊಂಡು ಇದ್ದರೆ, ಗೋವಾದ ಅಂತರಂಗ ತಿಳಿಯುವುದೇ ಇಲ್ಲ.  ಒಂದು ಬಾರಿ ಮದುವೆಗೆ ಗೋವಕ್ಕೆ ಹೋದಾಗ ಮದುವೆ ಮನೆಯ ಸಂಬಂಧಿಗಳ ಒಂದು ತಂಡ ಕರ್ನಾಟಕದಿಂದ ಬಂದಿತ್ತು. ಬಂದ ಘಳಿಗೆಯಿಂದ ತೊಡಗಿ ಮದ್ಯ ಏರಿಸಿಕೊಂಡವರು ಮದುವೆ ಕಳೆದರೂ ಅವರ ನಶೆ ಇಳಿಯಲಿಲ್ಲ ಮಾತ್ರವಲ್ಲ, ಮದುವೆಗೆ ಅಂತ ಬಂದವರು ಕಲ್ಯಾಣ ಮಂಟಪದ ಒಳಗೆ ಕಾಲಿಡಲೇ ಇಲ್ಲ. ಅಮಲಿನಲ್ಲೇ ಕಾರಲ್ಲಿ ಕುಳಿತುಕೊಂಡೆ  ಇದ್ದರು. ಈ ಬಗೆಯ ಜನಗಳ ಕಲ್ಪನೆಯಲ್ಲಿ ಗೋವ ಎಂದರೆ, ಮದ್ಯ,  ಸಮುದ್ರದ ಮರಳ ದಂಡೇ ತುಂಡು ಬಟ್ಟೆ, ಬರ್ಮುಡ ಚಡ್ಡಿ ಇಷ್ಟೇ ಗೊತ್ತಿರುವುದು. ಪಾಶ್ಚಾತ್ಯ ಸಂಸ್ಕೃತಿ ಗೋವದಲ್ಲಿ ಈಗಲೂ ಹಲವು ಕಡೆ ಗಾಢವಾಗಿ ಕಾಣಬಹುದು. ಬರ್ಮುಡ್ ಚಡ್ಡಿ ಇಲ್ಲಿಂದಲೇ ಬಳಕೆಗೆ ಬಂದು ಈಗ ಊರಿಗೆ ಹೋದರೆ ಅಲ್ಲೂ ಇದನ್ನೆ ಕಾಣಬಹುದು. ಪೌರೋಹಿತ್ಯದ ಭಟ್ಟರೂ ಅದನ್ನು ಧರಿಸಿಕೊಂಡು ಬಂದು ಆನಂತರ ಕಚ್ಚೆ ಉಡುವುದನ್ನು ಕಾಣಬಹುದು. ಆದರೆ ಗೋವದ ಬಗ್ಗೆ ತಿಳಿಯಬೇಕಾದರೆ ಸ್ವಲ್ಪ ಕಡಲ ಕಿನಾರೆ ಬಿಟ್ಟು ಒಳಗೆ ಹಳ್ಳೀಯತ್ತ ಹೆಜ್ಜೆ ಇಡಬೇಕು. ಪಣಜಿ ವಾಸ್ಕೋ ನಗರದಲ್ಲಿ ಸುತ್ತಾಡಿದರೆ, ಅದು ಭಾರತದಲ್ಲಿ ಇದೆ ಎಂಬ ಕಲ್ಪನೆಯೇ ಬರುವುದಿಲ್ಲ. ಗೋವಾದ ಚರ್ಚ್ ಸುತ್ತ ಮುತ್ತ ಪೋರ್ಚುಗೀಸರು ಬಿಟ್ಟು ಹೋದ ಬೇರು ಇನ್ನೂ ಇದ್ದು ಅದು ಭಾರತದಲ್ಲಿದೆ ಎಂದನಿಸುವುದಿಲ್ಲ. ಆದರೆ ಅಲ್ಲಿನ ಹಳ್ಳಿಗಳ ಚಿತ್ರಣವೇ ಬೇರೆ. 

ಗೋವಾ ಆ ಹೆಸರಿಗೆ ಹಲವಾರು ಅರ್ಥಗಳಿವೆ. ಹಸುವಿಗೆ ಗಾಯ್ ಅಂತ ಹೇಳುತ್ತಾರೆ, ಅದರಿಂದಲೂ ಗೋವಾ ಸೃಷ್ಟಿಯಾಯಿತು ಎಂದು ಕೆಲವರು ಹೇಳಿದರೆ, ಗಾವ್ ಎಂದರೆ ಊರು ಅದರಿಂದಲೂ ಗೋವಾ ಹೆಸರು ಬಳಕೆಗೆ ಬಂದಿರಬಹುದು ಅಂತ ವಾದಿಸುವವರು ಇದ್ದಾರೆ. ಆದರೂ ಗೋ...ವಾ ವಿದೇಶಿಗರು ಹೇಳುವಾಗ ಗೋ...ಅಂದರೆ ಹೋಗುವುದು ಎಂಬರ್ಥವೂ ಕೆಲವೊಮ್ಮೆ ಈ ನಾಡಿಗೆ ಅನ್ವರ್ಥವಾಗುವುದುಂಟು. ಪರಶುರಾಮ ಸೃಷ್ಟಿಯ ಆರಂಭ ಇಲ್ಲಿಂದಲೇ ಅಂತ ಅಲ್ಲಿ ಹೇಳುವವರು ಇದ್ದಾರೆ. ಅದೆಂತಿದ್ದರೂ ಗೋವಾ ತನ್ನದೇ ಸಂಸ್ಕೃತಿಯಿಂದ ಇರುವ ಒಂದು ವಿಶಿಷ್ಟ ಪ್ರದೇಶ.  

ಈ ಬಾರಿ ಹೋದಾಗ ಇಂತಹ ಹಲವು ಕಡೆಗಳಿಗೆ  ಹೋಗುವ ಅವಕಾಶ ಒದಗಿಬಂತು.   ವೆರ್ನಾ ದ ಬಳಿಯಿರುವ ಶ್ರೀ ಮಹಾಲಸ ನಾರಾಯಣಿ ದೇವಸ್ಥಾನಕ್ಕೆ ಹೋದೆವು. ಬಹಳ ಸುಂದರವಾದ ಪರಿಸರ. ಹತ್ತಿರವೇ ವೆರ್ನಾದ ಕೈಗಾರಿಕ ಪ್ರದೇಶ ಇದ್ದರೂ ಈ ದೇವಸ್ಥಾನದ ಪರಿಸರ ಶುದ್ದ ಹಳ್ಳಿ ಸಂಸ್ಕೃತಿಯನ್ನು ಹೊಂದಿದೆ. ಬಹಳ ಶಾಂತವಾದ ಪರಿಸರ. ದೇವಸ್ಥಾನದ ಬಳಿಯಲ್ಲೆ ಪ್ರಾಥಮಿಕ ಶಾಲೆ ಇದೆ. ವೇದ ಪಾಠಶಾಲೆ ಇದೆ. ಬಹಳ ಪ್ರಾಚೀನ ಕಾಲದ ದೇವಿಯ ದೇವಾಲಯ ಇದು. ಇಲ್ಲಿನವರು ಹೆಚ್ಚಾಗಿ ದುರ್ಗೆಯನ್ನು ಆರಾಧಿಸುವುದರ ದ್ಯೋತಕ ಈ ದೇವಸ್ಥಾನ. ಪೋರ್ಚುಗೀಸರ ಧಾಳಿಯಿಂದ ಅವರ ಉಪಟಳ ತಾಳಲಾರದೆ ಈ ದೇವಸ್ಥಾನವೇ ವಲಸೆ ಹೋಗಿ ಮಾರ್ದೋಲ್ ಎಂಬ ಬ್ರಾಹ್ಮಣರೆ ವಾಸಿಸುವ ಊರಿಗೆ ಹೋಗಿ ಅಲ್ಲಿ ಹೊಸ ದೇವಸ್ಥಾನವನ್ನು ಕಟ್ಟಿಕೊಂಡು ಆ ದೇವಸ್ಥಾನವೂ ಈಗ ಪ್ರಸಿದ್ಧವಾಗಿದೆ. ಆದರೆ ಮೂಲದಲ್ಲಿರುವ ಈ ದೇವಸ್ಥಾನಕ್ಕೆ ಇತ್ತೀಚೆಗೆ ಶ್ರಿಂಗೇರಿ ಜಗದ್ಗುರುಗಳು ಬಂದು ಇದರ ಪುನರುತ್ಥಾನಕ್ಕೆ ಸಹಾಯವನ್ನು ಮಾಡಿ ಈಗ ಸುಂದರವಾದ ದೇವಾಲಯ ಮತ್ತೆ ತಲೆ ಎತ್ತಿ ನಿಂತಿದೆ. ಆದರೆ ದೇವಾಲಯದ ಒತ್ತಿಗೆ, ಪೋರ್ಚುಗೀಸರ ಸಮಾಧಿ ಒಂದರ  ಶಿಲುಬೆ ಈಗಲೂ ಇದೆ. ಪ್ರಸಿದ್ದ ಪುರಾತನ ದೇವಾಲಯದ ಪಕ್ಕದಲ್ಲೇ ಇದು ಇರುವುದು ಒಂದು ಜಿಜ್ಞಾಸೆಯ ವಿಷಯ. 

ಸಾವೈ ವೇರ್ ನಲ್ಲಿರುವ ಅನಂತ ದೇವಸ್ಥಾನ ಸುಂದರ ಪರಿಸರದಿಂದ ಕೂಡಿದೆ. ಇಲ್ಲೆ ಹತ್ತಿರ ಬೃಹತ್ ವಿದೇಶಿ ಕಂಪೆನಿ ತನ್ನ ಕಾರ್ಖಾನೆಯನ್ನು ಆರಂಭಿಸುವುದಕ್ಕಿತ್ತು. ಆದರೆ ಇಲ್ಲಿನ ಊರ ವಾಸಿಗಳು ತೀವ್ರವಾಗಿ ಪ್ರತಿಭಟಿಸಿದರು. ಕಾರಣ ಇಷ್ಟೇ ಅಭಿವೃದ್ಧಿಯ ಹೆಸರಿನಲ್ಲಿ ಇಲ್ಲಿಯ ಅರಣ್ಯ, ಹಳ್ಳಿ ನಾಶವಾಗುವುದು ಅವರಿಗೆ ಬೇಕಿರಲಿಲ್ಲ. ಹಾಗಾಗಿ ಇಲ್ಲಿ ಈಗಲೂ ಹಳ್ಳಿಯ ವಾತಾವರಣ ಇದೆ.  ದೇವಲಯದ ತಳ ಭಾಗದಲ್ಲಿ ಸುತ್ತಲೂ ನೀರು ತುಂಬಿದೆ. ಅದು ಒರತೆ ನೀರು. ದೇವಾಲಯ ಅದರ ಮೇಲೆಯೇ ನಿಂತಿದೆ.  

ಮಾರ್ದೋಲ್ ನಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಪರಿಸರವಂತು ಅದ್ಭುತವಾಗಿದೆ.  ಹಳ್ಳಿಯ ಶಾಂತವಾದ ವಾತಾವರಣ ವಿದೆ.  ಗೋವಾದಲ್ಲಿ ಪ್ರತೀ ದೇವಸ್ಥಾನದ ಹತ್ತಿರ ಒಂದು ಕೊಳ ಇದ್ದೇ ಇರುತ್ತದೆ. ಅದರಂತೆ ಮಾರ್ದೋಲ್ ನ ಈ ದೇವಸ್ಥಾನದಲ್ಲಿ ಒಂದು ಕೊಳವಿದೆ. ಸುತ್ತಲೂ ಹಸಿರಿನ ತೋಟ. ಪ್ರವಾಸಿಗರೂ ಯಾರೂ ಇಲ್ಲಿಗೆ ಬರುವುದಿಲ್ಲ. ಹಾಗೆ ಪ್ರವಾಸಿಗರು ಬರುವುದನ್ನು ಇಲ್ಲಿನವರು ಬಯಸುವುದೂ ಇಲ್ಲ. ಹಾಗಾಗಿ ಇದಕ್ಕೆ ಹೆಚ್ಚಿನ ಪ್ರಚಾರವನ್ನು ಕೊಡುವುದಿಲ್ಲ.ಗೂಗಲ್ ನಲ್ಲಿ ಅಥವಾ ಇನ್ನಿತರ ಅಂತರ್ಜಾಲದ ಮಾಧ್ಯಮಗಳಲ್ಲಿ ಇಲ್ಲಿನ ಫೋಟೋ ಹಾಕುವುದಿಲ್ಲ. ಯಾಕೆಂದರೆ ಇಲ್ಲಿಗೆ ಆದಷ್ಟು ಯಾರೂ ಬಾರದರಿಲಿ, ಕೇವಲ ಊರವರಿಗಷ್ಟೇ ಈ ದೇವಸ್ಥಾನ ಮೀಸಲಾದಂತಿದೆ.  ಕೆರೆಯ ಸುತ್ತಲೂ ಸಾಕಷ್ಟು ಔಷಧೀಯ ಸಸ್ಯಗಳು ತೆಂಗು ಕಂಗಿನ ತೋಟವಿದ್ದು ಕಣ್ಮನ ಸೆಳೆಯುತ್ತದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಇಲ್ಲಿನ ದಿವ್ಯ ಮೌನದ ಶಾಂತ ವಾತಾವರಣ, ಇಲ್ಲಿಂದ ವಾಪಾಸು ಬರದಂತೆ ತಡೆ ಹಿಡಿಯುತ್ತದೆ.  ನಾವು ಹೋದಾಗ ದೇವಸ್ಥಾನದಲ್ಲಿ ಒಬ್ಬರು ಅರ್ಚಕರು ಬಿಟ್ಟು ಬೇರೆ ಯಾರೂ ಇರಲಿಲ್ಲ. ನಿಜಕ್ಕೂ ಇದೊಂದು ಅದ್ಭುತ ಕ್ಷೇತ್ರ. 

ಇನ್ನು ಕೆರಿ ಎಂಬ ಹಳ್ಳಿಯಿದೆ. ಅಲ್ಲಿಯ ಶ್ರೀ ವಿಜಯ ದುರ್ಗ ದೇವಸ್ಥಾನವೂ ಸುಂದರ ಪರಿಸರದಲ್ಲಿದೆ. ಸುತ್ತಲೂ ಬೆಟ್ಟ ಕಾಡು ನಡುವೆ ಈ ದೇವಸ್ಥಾನ. ಇಲ್ಲಿ ಯಾವ ಮೊಬೈಲ್ ಟವರ್ ಇಲ್ಲದೇ ಇರುವುದರಿಂದ ಇಲ್ಲಿ ಮೊಬೈಲ್ ಕೆಲಸಕ್ಕೆ ಬರುವುದಿಲ್ಲ. ಗೋವದಲ್ಲಿ ಇಂತಹ ಒಂದು ಊರು ಇದೆ ಎಂದರೆ ಆಶ್ಚರ್ಯವಾಗುತ್ತದೆ. ಮೊಬೈಲ್ ಟವರ್ ಹಾಕುವುದಕ್ಕೆ ಊರವರ ವಿರೋಧವಿದೆ ಎಂದು ಕೇಳಿದೆ. ಹಾಗಾಗಿ ಅಧುನಿಕತೆಯಿಂದ ಈ ಹಳ್ಳಿ ದೂರವಿದೆ. ಉತ್ತಮ ರಸ್ತೆ  ಯಿದ್ದು ಪಣಜಿಗೆ ಅನತಿ ದೂರದಲ್ಲೇ ಈ ಊರಿದೆ. ಈ ದೇವಸ್ಥಾನಕ್ಕೂ ಶ್ರೀಂಗೇರಿ  ಜಗದ್ಗುರುಗಳ ಸನ್ನಿಧಾನ ಆಗಮಿಸಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಮಾತ್ರವಲ್ಲ ಈ ದೇವಾಲಯಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. 

ಗೋವಾದ ಹಳ್ಳಿಯ ದೇವಸ್ಥಾನಗಳು ಸಾಕಷ್ಟು ಪ್ರಸಿದ್ಧಿ ಇಲ್ಲದೇ   ಹಲವು ಕಾರಣಗಳಿಂದ ಜನ ಸಂಪರ್ಕಕ್ಕೆ ಒದಗಿ ಬಂದಿಲ್ಲ. ಇಲ್ಲಿನ ಮಂದಿಗೆ ಅದರ ಅವಶ್ಯಕತೆಯೂ ಇರುವುದಿಲ್ಲ. ಹೊರಗಿನ ಪ್ರವಾಸಿಗರು ಬರದೇ ಇರುವುದರಿಂದ ಇಲ್ಲಿನ ದೇವಸ್ಥಾನಗಲ ಪರಿಸರ ಇಂದಿಗೂ ಸ್ವಚ್ಛವಾಗಿದೆ.  ಲೋಕಮುಖಕ್ಕೆ ಕ್ಷೇತ್ರ ತೆರೆದುಕೊಂಡರೆ ಅಲ್ಲಿನ ಪರಿಸರ ಕೆಡುವುದಕ್ಕೆ ನಮ್ಮೂರಿನ ದೇವಸ್ಥಾನಗಳು ಸಾಕ್ಷಿಯಾಗಬಹುದು. ಯಾವ ನದಿ ಕೊಳ್ಳಗಳನ್ನು ನೋಡಿದರು ಉಟ್ಟ ಚಿಂದಿ ವಸ್ತ್ರಗಳು ಇತರ ಕಸಗಳನ್ನು ಎಸೆದು ಪ್ರತೀ ದೇವಸ್ಥಾನದ ಆಡಳಿತ ವರ್ಗಕ್ಕೆ ಅದನ್ನು ಸ್ವಚ್ಛಗೊಳಿಸುವುದು ದೊಡ್ಡ ಪರಿಶ್ರಮದ ಕೆಲಸವಾಗಿ ಅದು ಸಾಧ್ಯವಾಗದೇ ಪರಿಸರ ಕೆಡುತ್ತಾ ಇದೆ. ಯಾವ ನದಿಯೂ ಇದಕ್ಕೆ ಭಿನ್ನವಾಗಿಲ್ಲ. 

ಗೋವಾದ ಸೌಂದರ್ಯವನ್ನು ಆಸ್ವಾದಿಸಬೇಕಾದರೆ ಕಡಲತಡಿಯನ್ನು ಬಿಟ್ಟು ಮದ್ಯಸೇವನೆಯನ್ನು ದೂರಮಾಡಿ ಹಳ್ಳಿಯ ಕಡೆಗೆ ತಿರುಗಿ ನೋಡಬೇಕು. ಇಲ್ಲಿನ ಹಳ್ಳಿಜನರ ಸಂಸ್ಕೃತಿ ಸಂಪ್ರದಾಯ ಇಂದಿಗೂ ಅತ್ಯಂತ ಉತ್ಕೃಷ್ಟ ಸ್ಥಿತಿಯಲ್ಲಿದೆ.