"ಎಲ್ಲ ಆಶೆಗಳ ಗುರಿ ಭಗವಂತನಾಗಬೇಕು. ಆದರೆ ಭಗವಂತನನ್ನು ಕಾಣುವಾಗ ಯಾವ ಆಶೆಗಳೂ ಇರುವುದಿಲ್ಲ. " ಹರಿದಾಸ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ ಯಕ್ಷಗಾನದ ಪಾತ್ರ ನಿರ್ವಹಣೆಯಲ್ಲಿ ಹೇಳಿದ ಮಾತು.
ದೇವರ ದರ್ಶನವಾಗುವುದು ಹೇಗೆ.? ಜಗತ್ತಿನ ಎಲ್ಲವನ್ನು ನಾವು ಕಣ್ಣು ತೆರೆದು ನೋಡಿದರೆ, ಕಣ್ಣು ಮುಚ್ಚಿ ಭಗವಂತನನ್ನು ಕಾಣುತ್ತೇವೆ. ತೆರೆದ ಕಣ್ಣಿಗೆ ಭಗವಂತ ಕಾಣಲಾರ. ಅಥವಾ ತೆರೆದ ಕಣ್ಣಿನ ದೃಷ್ಟಿಗೆ ಭಗವಂತನನ್ನು ಕಾಣುವ ಶಕ್ತಿ ಇರುವುದಿಲ್ಲ. ಅಂತರಂಗದ ದೃಷ್ಟಿಗೆ ಮಾತ್ರ ದೇವರು ಕಾಣಬಲ್ಲ. ಬಹಿರಂಗದ ದೃಷ್ಟಿಗೆ ದೇವರು ಗೋಚರಿಸುವುದಿಲ್ಲ. ದೇವರು ಎಂದಾಕ್ಷಣ ನಮ್ಮ ಕಣ್ಣಾಲಿಗಳು ಭಾರವಾಗುತ್ತವೆ. ಕಣ್ಣು ಮುಚ್ಚಿ ಮೊದಲಿಗೆ ನಮಗೆ ಇಷ್ಟವಾದ ದೇವರನ್ನು ಸ್ಮರಿಸುತ್ತೇವೆ. ಅದು ಕೃಷ್ಣ ರಾಮ ಶಿವ ಗಣಪತಿ ದೇವಿ ಹೀಗೆ ಯಾವುದೂ ಆಗಿರಬಹುದು. ಆದರೆ ಮನಸ್ಸಿನಲ್ಲಿ ಯಾವುದೋ ಒಂದು ರೂಪವೂ ಮೂಡಬಹುದು. ಆದರೆ ಅದೇ ಸ್ಥಿತಿ ಗಾಢವಾಗಿ ಮತ್ತೂ ಒಂದಿಷ್ಟು ಆಳವಾಗಿ ಇಳಿದಾಗ, ರಾಮ ಕೃಷ್ಣ ಶಿವ ಎಲ್ಲದರಲ್ಲೂ ಇರುವ ಅನುಭವ ಒಂದೇ ಆಗಿಬಿಡುತ್ತದೆ. ಅಲ್ಲಿ ದೇವರು ಎಂಬುದು ಮಾತ್ರವೇ ಉಳಿದು ಬಿಡುತ್ತದೆ. ರಾಮ ಕೃಷ್ಣ ಇನ್ನೂ ಭಿನ್ನವಾಗಿ ಅಲ್ಲಾ ಏಸು ಹೀಗೆ ಧರ್ಮಾನುಸಾರ ಸ್ಮರಿಸಿದಾಗ ಎಲ್ಲವೂ ಒಂದೇ ಅನುಭವವನ್ನು ಕೊಡುತ್ತದೆ. ಅಲ್ಲಿ ಭೇದವಿರುವುದಿಲ್ಲ. ಇದೇ ನಿಜವಾದ ಪರಾತ್ಮನ ರೂಪ. ಅದು ಕೇವಲ ಅನುಭವ ಮಾತ್ರ. ಅದು ಮತ್ತಷ್ಟೂ ಗಾಢವಾಗಿ ಗಾಢವಾಗಿ ಅನುಭವ ಪಕ್ವವಾದಂತೆ....ಅದು ನಮ್ಮೊಳಗಿನ ಚೈತನ್ಯ ಸ್ವರೂಪವನ್ನೇ ತೋರಿಸುತ್ತದೆ. ಆಗ ಅನಿಸುವುದು ದೇವರು ಹೊರಗೆ ಎಲ್ಲೂ ಇಲ್ಲ. ಆತ ನಮ್ಮೊಳಗೇ ಇದ್ದಾನೆ. ನಮ್ಮೊಳಗೆ ದೇವರು ಇದ್ದಾನೆ ಎಂದರೆ ನಾವೂ ದೇವರಾಗಿಬಿಡುತ್ತೇವೆ.ದೇವರು ದೂರ ಎಲ್ಲೂ ಇರುವುದಿಲ್ಲ. ಆತ ನಮ್ಮೊಳಗೇ ಇರುತ್ತಾನೆ ನಾವೇ ಸ್ವತಃ ದೇವರಾಗುವುದು ಎಂದರೆ ನಾವು ಮತ್ತು ದೇವರು ಎರಡು ಒಂದಾಗಿ ಅದೊಂದು ಅದ್ವೈತ ಮನೋಭಾವ ಪ್ರಚೋದನೆಯಾಗುತ್ತದೆ. ಧ್ಯಾನ ಎಂದರೆ ಇಷ್ಟೇ. ಯೋಚಿಸುವುದಕ್ಕೆ ಬಹಳ ಸರಳ. ಇಲ್ಲಿ ಭೇದವಿಲ್ಲ. ಎಲ್ಲವೂ ಒಂದೇ..ಒಂದೇ ಶಕ್ತಿ. ಇದರಿಂದ ಹೊರಗೆ ಬಂದಾಗ ನಾವು ಭಿನ್ನರಾಗಿಬಿಡುತ್ತೇವೆ. ಕೇವಲ ಮನುಷ್ಯರಾಗಿಬಿಡುತ್ತೇವೆ. ನಂತರ ದೇವರು ಎಂಬುದರ ಜತೆಗೆ ನನ್ನ ದೇವರು ಎಂಬ ಭಾವ ಬೆಳೆಯುತ್ತದೆ. ನನ್ನ ಎಂಬ ಅಹಂ ಪ್ರಚೋದನೆಯಲ್ಲಿ ರಾಗ ದ್ವೇಷಗಳು ಸಹಜವಾಗಿ ಪ್ರಚೋದನೆಯಾಗುತ್ತವೆ. ಅಲ್ಲಿ ದ್ವೇಷ ವೈಷಮ್ಯ ಎಲ್ಲವೂ ಜಾಗೃತವಾಗುತ್ತದೆ. ಕೇವಲ ಮನುಷ್ಯರಾಗಿದ್ದ ನಾವು ನಂತರ ಅದನ್ನೂ ಕಳೆದು ಅಲ್ಲಿ ತಾಮಸೀ ಸ್ವಭಾವ ಮಾತ್ರ ಉಳಿದು ನಾವು ರಾಕ್ಷಸರಾಗಿಬಿಡುತ್ತೇವೆ. ಧ್ಯಾನ ಅದು ನಿತ್ಯ ಸತ್ಯ ನಿರಂತರವಾಗಿದ್ದಲ್ಲಿ ದ್ವೇಷ ವೈಷಮ್ಯ ಇರುವುದಿಲ್ಲ. ಅದುವೇ ಸನಾತನ ಧರ್ಮದ ಮೂಲ ತತ್ವ.
No comments:
Post a Comment