ಮೊನ್ನೆ ಮೊನ್ನೆ ಕನ್ಯಾ ಕುಮಾರಿಯ ಸಾಗರದ ತಟದಲ್ಲಿ ಮಾನ್ಯ ಪ್ರಧಾನಿಯವರು ಧ್ಯಾನದಲ್ಲಿ ಮಗ್ನರಾಗುವುದಕ್ಕೆ ನಿಶ್ಚೈಯಿಸಿದರು. ಪ್ರಧಾನಿ ಯೊಬ್ಬರು ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ ಎಂದಾಕ್ಷಣ ’ಧ್ಯಾನ’ ಒಂದು ಮಹತ್ವದ ವಿಷಯವಾಗುತ್ತದೆ. ಹಾಗಾಗಿ ಪರ ವಿರೋಧ ಚರ್ಚೆಗಳು ಆರಂಭವಾಗುತ್ತದೆ. ಇಲ್ಲಿ ಚರ್ಚೆ ಮಾಡುವುದಕ್ಕೆ ಅರ್ಹತೆಯ ಯಾವ ಮಾನದಂಡವೂ ಇರುವುದಿಲ್ಲ. ಪ್ರಧಾನಿ ಒಬ್ಬರು ಮಾಡುತ್ತಾರೆ ಎಂಬುದೇ ಮುಖ್ಯವಾಗುತ್ತದೆ. ಯಾರೋ ಒಬ್ಬ ಪುಣ್ಯಾತ್ಮ ಬರೆದಿದ್ದ, ಸಂವಿಧಾನ ಬದ್ದ ಅಧಿಕಾರದಲ್ಲಿರುವವರು ಇದನ್ನು ಮಾಡಬಾರದು. ಯಾವ ಅರ್ಥದಲ್ಲಿ ಹೇಳಿದನೋ ದೇವರೇ ಬಲ್ಲ. ಪ್ರಧಾನಿಯಾದವರು ವೈಯಕ್ತಿಕ ವಿಚಾರಗಳಿಗೆ ಅತೀತರಾಗಿರಬೇಕು ಎಂದು ತಿಳಿದಹಾಗುಂಟು. ಧ್ಯಾನಕ್ಕೆ ಕುಳಿತುಕೊಳ್ಳಬಾರದು. ಆದರೆ ಪಂಚೆ ಉಟ್ಟು ಶಾಲು ಹೊದ್ದು ಪರಮ ಭಕ್ತರ ಹಾಗೆ ದೇವಸ್ಥಾನಕ್ಕೆ ಹೋಗಬಹುದು. ಹಾಗಾಗಿ ಇಲ್ಲಿ ಯಾವುದು ಸರಿ ತಪ್ಪು ಎಂದು ವಿಶ್ಲೇಷಣೆ ಮಾಡುವುದು ಮೂರ್ಖತನವಾಗುತ್ತದೆ. ಧ್ಯಾನದ ಬಗ್ಗೆ ತಿಳಿಯದವರು, ತಿಳಿದವರು ಇದರ ನಡುವೆ ಅಲ್ಪಸ್ವಲ್ಪತಿಳಿದು ಅದನ್ನೇ ತಿಳಿದವರಂತೆ ಮಾತನಾಡುವವರು ಚರ್ಚಿಸುತ್ತಾರೆ. ಇಲ್ಲಿ ಪಂಚೆ ಸುತ್ತಿ ಶಲ್ಯಹೊದ್ದು ದೇವಸ್ಥಾನಕ್ಕೆ ಹೋದರೆ ಅದು ಚರ್ಚೆಯಾಗುವುದಿಲ್ಲ. ಆದರೆ ಧ್ಯಾನಕ್ಕೆ ಕುಳಿತರೆ ಅದು ಚರ್ಚೆಯಾಗುತ್ತದೆ ಇನ್ನೂ ಮುಂದಕ್ಕೆ ಅದು ವರ್ಗೀಯ ವಿಷಯವಾಗುತ್ತದೆ. ಹುಚ್ಚರ ಸಂತೆಯಲ್ಲಿ ವಿವೇಕಕ್ಕೆ ಬೆಲೆ ಇರುವುದಿಲ್ಲ. ಅದು ಮೌಲ್ಯ ಇಲ್ಲದ ವಸ್ತುವಾಗುತ್ತದೆ. ಹಾಗಾಗಿ ಇಲ್ಲಿಯೂ...ಧ್ಯಾನದ ಬಗ್ಗೆ ಏನೇನೋ ಅಭಿಪ್ರಾಯಗಳು ವ್ಯಕ್ತವಾಗುತ್ತದೆ.
ಪ್ರಧಾನಿಯವರ ಕಾರ್ಯ ಯಾವುದೇ ಇರಲಿ ಅದು ಅವರ ವೈಯಕ್ತಿಕ. ಅವರು ಕುಳಿತುಕೊಂಡ ಬಗೆ ಅದು ವಿಮರ್ಶೆ ಬೇಕೋ ಬೇಡವೋ ಅದು ಮುಖ್ಯವಲ್ಲ. ಅವರ ಧ್ಯಾನದ ಉದ್ದೆಶ ಯಾವುದು? ಅವರು ಧ್ಯಾನ ಹೇಗೆ ಮಾಡಿದರು? ಅದು ಧ್ಯಾನವಲ್ಲ? ಧ್ಯಾನ ಅಂದರೆ ಹೀಗೆ....ಇನ್ನೂ ಏನೇನೋ ಚರ್ಚೆ ಮಾಡುವುದಕ್ಕೆ ಅವಕಾಶವಿದೆ. ಆದರೆ ನಿಜಕ್ಕೂ ಧ್ಯಾನದ ಬಗ್ಗೆ ಒಂದೆರಡು ಅಕ್ಷರ ಹೇಳಬೇಕಿದ್ದರೂ ಅದರ ಬಗ್ಗೆ ತಿಳಿದಿರುವುದು ಅವಶ್ಯಕ. ಆದರೆ ಧ್ಯಾನದ ಬಗ್ಗೆ ಸಂಪೂರ್ಣ ತಿಳುವಳಿಕೆ ಇಲ್ಲದವರೂ ಅದಕ್ಕೆ ಪರಮ ಜ್ಞಾನಿಗಳಂತೆ ಸರಿ ತಪ್ಪುಗಳ ನಿರ್ಣಯ ಮಾಡುವಾಗ ಅದು ಮೂರ್ಖತನ ಎನಿಸುತ್ತದೆ. ಧ್ಯಾನದ ಬಗ್ಗೆ ನಿರ್ದಿಷ್ಟವಾಗಿ ತಿಳಿಯದೇ ಇದ್ದವರೂ ಕೇವಲ ಊಹನೆಯಿಂದ ಅದಕ್ಕೆ ಪ್ರತಿಕ್ರಿಯೆ ಕೊಡುವುದು ನಿಜಕ್ಕೂ ಅದು ಅಜ್ಞಾನವಾಗುತ್ತದೆ. ಕಾರ್ಕೋಟಕ ವಿಷದ ರುಚಿ ಹೇಗೆ ಇರುತ್ತದೆ ಎಂದು ಹೇಳುವುದಕ್ಕೆ ಹೇಗೆ ಸಾಧ್ಯವಿಲ್ಲವೋ ಹಾಗೆ ಧ್ಯಾನದ ಅನುಭವವನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಅದು ಕೇವಲ ಅನುಭವಕ್ಕೆ ಮಾತ್ರ ಸೀಮಿತವಾಗಿರುತ್ತದೆ, ಮಾತ್ರವಲ್ಲ ಅದು ಅನುಭವಿಸಿದರೆ ಮಾತ್ರ ಅರಿವಾಗುತ್ತದೆ.
ಧ್ಯಾನ ಎಂಬುದು ಅದು ಬಹಿರಂಗ ಅಥವಾ ಸಾಮೂಹಿಕ ಕ್ರಿಯೆಯಲ್ಲ. ಒಬ್ಬ ನಿದ್ರಾವಶನಾಗಿ ಹೇಗೆ ಅನುಭವಗಳನ್ನು ವೈಯಕ್ತಿಕವಾಗಿ ಪಡೆದುಕೊಳ್ಳುತ್ತಾನೋ ಧ್ಯಾನವೂ ಅದೇ ರೀತಿಯದಾಗಿರುತ್ತದೆ. ನಿದ್ರೆಯಲ್ಲಿ ಪ್ರಜ್ಚೆ ಜಾಗೃತವಾಗಿರುವುದಿಲ್ಲ. ಅಲ್ಲಿ ಯಾವುದೂ ನಿಯಂತ್ರಣದಲ್ಲಿರುವುದಿಲ್ಲ. ಆದರೆ ಧ್ಯಾನದಲ್ಲಿ ಎಲ್ಲವೂ ನಮ್ಮ ನಿಯಂತ್ರಣದಲ್ಲಿರುತ್ತವೆ. ನಮ್ಮ ದೇಹ ಮತ್ತು ಮನಸ್ಸಿನ ಸ್ಥಿತಿ ಯಾವ ಬಗೆಯಲ್ಲಿರುತ್ತದೋ ಅದೇ ಬಗೆಯಲ್ಲಿ ಸಿಗುವ ಅನುಭವಗಳು ಇರುತ್ತವೆ. ಇಲ್ಲಿ ಪ್ರಕೃತಿ ಸಹಜವಾದ ಪಂಚ ಪ್ರಾಣಗಳನ್ನು, ಷಡ್ವೈರಗಳನ್ನು ತನ್ನ ನಿಯಂತ್ರಣದಲ್ಲಿರಿಸಿ ಮನಸ್ಸು ದೇಹ ಎಲ್ಲವನ್ನೂ ಒಂದಾಗಿಸಿ ಸ್ಥಿತಪ್ರಜ್ಞತೆಗೆ ಜಾರುವುದು ಒಂದು ಧ್ಯಾನದ ಮೂಲ ಸ್ವರೂಪ. ಇವುಗಳೆಲ್ಲ ಮನುಷ್ಯನ ಅಂತರಂಗಕ್ಕೆ ಸಂಭಂದಿಸಿದವುಗಳು ಹೊರತು ಬಹಿರಂಗದ ಅಭಿನಯ ಕ್ರಿಯೆಯಲ್ಲ. ಉದಾಹರಣೆ : ನಮಸ್ಕರಿಸುತ್ತೇನೆ ಎಂದರೆ ಅಡ್ಡಬಿದ್ದು ನಮಸ್ಕರಿಸಬೇಕೇಂದೇನೂ ಇಲ್ಲ. ಶರಣಾಗುತ್ತೇನೆ ಎಂದರೆ ತಲೆ ನಡು ಬಗ್ಗಿಸಿಕೊಳ್ಳುವುದಲ್ಲ. ಎಲ್ಲವೂ ಮನಸ್ಸಿನ ಸ್ವರೂಪಗಳೂ. ಹಾಗಾಗಿ ಅದನ್ನು ಅದು ಸರಿ ತಪ್ಪು ಎಂದು ನಿರ್ಧರಿಸುವುದಕ್ಕೆ ಸಾಧ್ಯವಾಗುವುದಿಲ್ಲ.
ಧ್ಯಾನ ತನ್ನಲ್ಲಿ ತಾನು ತಲ್ಲೀನನಾಗಿ ಅಂತರ್ಮುಖಿಯಾಗುವುದು ಹೌದಾದರೂ ಅದಕ್ಕೆ ಅವಿರತ ಸಾಧನೆ ಬೇಕು. ಸುಮ್ಮನೇ ನಮ್ಮ ಮನೋವಿಕಾರಗಳಿಂದ ನಮಗೆ ಹೊರಬರುವುದಕ್ಕೆ ಸಾಧ್ಯವಾಗುವುದಿಲ್ಲ. ದೈಹಿಕ ಮತ್ತು ಮಾನಸಿಕ ಅರ್ಹತೆಗಳಿರಬೇಕು. ಇಲ್ಲವಾದರೆ ಅದು ಕೇವಲ ಅಭಿನಯವಾಗುತ್ತದೆ. ಅದೊಂದು ದೇಹದಿಂದ ಮನಸ್ಸಿಗೆ ನಂತರ ಮನಸ್ಸಿನಿಂದ ಮತ್ತೂ ಆಚೆಗೆ ಸಾಗುವ ಪಯಣ. ಅದರ ಗುರಿ ಎಲ್ಲಿ ಎಂದು ಸ್ಪಷ್ಟವಿರುವುದಿಲ್ಲ. ಒಂದು ರೀತಿಯಲ್ಲಿ ಹಿಮಾಲಯ ಹತ್ತಿದಂತೆ. ಹಿಮಾಲಯ ಹತ್ತುತ್ತಾ ಹೋದಂತೆ...ಓ ಅಲ್ಲಿ ಹಿಮಾಲಯದ ಶಿಖರ ಅಂತ ಗೋಚರಿಸಿದರೂ...ಅಲ್ಲಿ ಮುಟ್ಟುವಾಗ ಮತ್ತೊಂದು ಶಿಖರ ಹಿಮಗುಡ್ಡೆಯಾಗಿ ಕಾಣಬಹುದು. ಹೇಗೆ ಹಿಮಾಲಯ ಆರೋಹಣದ ಅನುಭವವನ್ನು ಸುಮ್ಮನೆ ಕಲ್ಪನೆ ಮಾಡಿ ಹೇಳುವುದಕ್ಕೆ ಸಾಧ್ಯವಿಲ್ಲವೋ ಹಾಗೆ ಧ್ಯಾನದ ಅನುಭವಗಳನ್ನು ಕಲ್ಪಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಧ್ಯಾನದ ಬಗ್ಗೆ ಹೇಳಬೇಕಾದರೆ ಅದರ ಸರಿ ತಪ್ಪು ವಿಶ್ಲೇಷಣೆ ಮಾಡಬೇಕಾದರೆ ಧ್ಯಾನದ ಪಯಣದಲ್ಲಿ ಒಂದೆರಡು ಹೆಜ್ಜೆಯಾದರೂ ಇಟ್ಟ ಅನುಭವ ಇರಬೇಕು.
ಕಲ್ಲಂಗಡಿ ಹಣ್ಣು...ಹೊರಭಾಗದಿಂದ ನೋಡುವುದಕ್ಕೆ ಹಚ್ಚ ಹಸುರಾಗಿ ಇರುತ್ತದೆ. ಹಣ್ಣಾಗಿದ್ದರೂ ಇದು ಕಾಯಿಯಂತೆ ಗೋಚರಿಸುತ್ತದೆ. ಸಾಮಾನ್ಯವಾಗಿ ನಾವು ತಿನ್ನುವಾಗ ಇದನ್ನು ಹೆಚ್ಚಿ ಮಧ್ಯಭಾಗವನ್ನು ಮಾತ್ರ ಗಮನಿಸಿ ತಿಂದು ಬಿಡುತ್ತೇವೆ. ಆದರೆ ಹಣ್ಣನ್ನು ಹೊರಗಿನಿಂದ ಕೊರೆಯುತ್ತಾ ಹೋದರೆ ಮೊದಲು ದಪ್ಪಗಿನ ತೊಗಟೆ, ಆನಂತರ ಬಿಳಿಯಾದ ಪದರು ಇದು ಸಪ್ಪೆಯಾಗಿರುತ್ತದೆ. ಇದರ ರುಚಿ ತಿಳಿಯಬೇಕಾದರೆ ಮತ್ತೂ ಕೊರೆಯುತ್ತಾ ಒಳಗೆ ಹೊಗಬೇಕು. ಇದರ ಅಂತರಂಗ ಭೇದಿಸಿದಂತೆ ಹಣ್ಣಿನ ನಿಜವಾದ ರುಚಿ ಅನುಭವಕ್ಕೆ ಬರುತ್ತದೆ. ಅದರ ನಡುವೆ ಬೀಜಗಳು ತೊಂದರೆ ಕೊಡಬಹುದು. ಧ್ಯಾನದ ಪ್ರಕ್ರಿಯೆ ಕಲ್ಲಂಗಡಿ ಹಣ್ಣಿನಂತೆ, ಮೊದಲಿಗೆ ದಪ್ಪ ತೊಗಟೆಯನ್ನು ಭೇದಿಸುವುದೇ ಶ್ರಮದಾಯಕ. ಅದೊಂದು ತಪಸ್ಸಿದ್ದಂತೆ. ಆರಂಭದಲ್ಲಿ ಇದರ ರುಚಿಯನ್ನು ಅನುಭವಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಅಂತರಂಗದೊಳಗೆ ಪ್ರವೇಶಿಸಿದಂತೇ ಕಲ್ಲಂಗಡಿಯ ಹಣ್ಣಿನ ರುಚಿಯಂತೆ ಅದರ ನೀರಿನ ಅಮೃತ ಧಾರೆಯಂತೆ ರುಚಿ ಅನುಭವಕ್ಕೆ ಬರುತ್ತದೆ. ನಡುವೆ ಹೊರಗಿನ ಅಡೆ ತಡೆಗಳು ನಮ್ಮ ಏಕಾಗ್ರತೆಗೆ ಭಂಗ ತರುತ್ತವೆ. ಇದನ್ನೆಲ್ಲವನ್ನು ಹೋಗಲಾಡಿಸಿ ಧ್ಯಾನ ಎಂಬ ಹಣ್ಣಿನ ರುಚಿಯನ್ನು ಅನುಭವಿಸಿದರೆ ಮಾತ್ರ ಧ್ಯಾನದ ಅರಿವಾಗುವುದಕ್ಕೆ ಸಾಧ್ಯ.
ಧ್ಯಾನ ಎಂಬ ಕ್ರಿಯೆಯ ಅನ್ವೇಷಣೆ ಯಾರಿಂದ ಯಾವಾಗ ಆಯಿತೋ ಅದು ಬೇರೆ. ಆದರೆ ಸನಾತನ ಧರ್ಮದಲ್ಲಿ ಇದಕ್ಕೆ ಪ್ರಮುಖ ಸ್ಥಾನ. ದೈವ ಸರೂಪವನ್ನು ಕಂಡುಕೊಂಡದ್ದೇ ಈ ಧ್ಯಾನ ಸ್ವರೂಪದಲ್ಲಿ. ಎಲ್ಲ ದೇವರ ಕಲ್ಪನೆ ವ್ಯಕ್ತವಾಗುವುದು ಧ್ಯಾನ ಸ್ವರೂಪದಲ್ಲಿ. ಹಾಗಾಗಿ ಧ್ಯಾನ ಎಂದಾಕ್ಷಣ ಅದು ಹಿಂದೂ ದರ್ಮಕ್ಕೆ ಸಂಬಂಧಿಸಿದ್ದು ಅಂತ ಅದಕ್ಕೆ ವರ್ಗೀಯ ಲಕ್ಷಣವನ್ನು ಆರೋಪಿಸಿ ತಮಗೆ ತೋಚಿದಂತೆ ವ್ಯಾಖ್ಯಾನಿಸುವುದು ಮೂರ್ಖತನವಲ್ಲದೆ ಬೇರೇನೂ ಅಲ್ಲ. ಇಷ್ಟು ಪ್ರಾಮುಖ್ಯತೆ ಇದ್ದರೂ ಬಹು ಸಂಖ್ಯಾತ ಜನ ಧ್ಯಾನವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಅದರ ಮೂಲ ಸ್ವರೂಪವನ್ನು ಅರಿತಿಲ್ಲ. ಧ್ಯಾನವವನ್ನು ಆಚರಿಸುವವರು ಕೆಲವೇ ಕೆಲವು ಮಂದಿ. ಇಷ್ಟಿದ್ದರೂ ಧ್ಯಾನ ಎಂಬ ವಿಷಯ ಬರುವಾಗ ಅದರ ಬಗ್ಗೆ ಅಭಿಪ್ರಾಯ ಮಂಡಿಸುವುದಕ್ಕೆ ಬಹು ಸಂಖ್ಯೆಯಲ್ಲಿರುತ್ತಾರೆ.
ನಮ್ಮ ಆರಾಧನಾ ಕ್ರಮಗಳು ಧ್ಯಾನದ ಕವಲಾದರೂ ಧ್ಯಾನದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಶಿಸ್ತು ಬದ್ಧವಾಗಿ ಅದನ್ನು ಆಚರಿಸಿದರೆ ಆರಾಧನಾ ಕ್ರಮಕ್ಕೂ ಅದಕ್ಕೂ ಬಹಳ ವೆತ್ಯಾಸವಿದೆ. ಇಲ್ಲಿ ಕೇವಲ ಹೊರಾವರಣವನ್ನು ದರ್ಶಿಸುವುದಲ್ಲ. ಅಂತರಂಗದ ಒಳಗೆ ನೋಡುವುದೇ ಧ್ಯಾನ. ದೇಹ ದಿಂದ ಮನಸ್ಸಿನ ಪಯಣ ಅಂತರಂಗದ ಕಡೆಗೆ ಇರುತ್ತದೆ. ಇಲ್ಲಿ ಭಗವಂತನ ಜ್ಞಾನ ಮಾತ್ರ ಒದಗಿ ಭಗವಂತ ಜ್ಞಾನ ಸ್ವರೂಪಿಯಾಗಿರುತ್ತಾನೆ. ಆ ಜ್ಞಾನ ತನ್ನ ಆಂತರ್ಯದಲ್ಲೇ ಇರುವುದರಿಂದ ಅದನ್ನು ದರ್ಶಿಸುವುದೇ ಧ್ಯಾನವಾಗುತ್ತದೆ. ಆದರೆ ಇವುಗಳನ್ನು ಅನುಭವಿಸದೇ ಅದರ ಬಗ್ಗೆ ತೋಚಿದಂತೆ ಅಭಿಪ್ರಾಯ ಸೂಚಿಸುವುದು ಸಾಧ್ಯವಿಲ್ಲ.
ಉಸಿರಾಟ ಎಂಬುದು ಮನುಷ್ಯನ ಜೀವದ ಸಂಕೇತ. ಅದು ಜನ್ಮ ಜಾತ ದೈಹಿಕ ಕ್ರಿಯೆ. ಅದು ಬಹಿರಂಗದಿಂದ ನಮ್ಮ ಅಂತರಂಗದ ಒಳಗಿರುವ ಸಂಭಂಧದ ಮಾಧ್ಯಮ. ಅದರ ಮೂಲಕವೇ ಅಂತರಂಗವನ್ನು ಗಮನಿಸುತ್ತಾ ಅಂತರಂಗಕ್ಕೆ ಇಳಿದು ಹೋಗುವುದೇ ಧ್ಯಾನ. ಧ್ಯಾನ ಎಂಬುದು ಅದೊಂದು ಪ್ರಯಾಣ. ದೇಹದಿಂದ ಮನಸ್ಸಿಗೆ ಇರುವ ಪ್ರಯಾಣ. ನಮ್ಮದೇ ದೇಹವಾದರೂ, ನಮ್ಮದೇ ಮನಸ್ಸಾದರೂ ಅದರ ಸಂಪೂರ್ಣ ಜ್ಞಾನ ನಮಗಿರುವುದಿಲ್ಲ. ಆ ಜ್ಞಾನದ ಅರಿವನ್ನು ಗಳಿಸುವುದೇ ಧ್ಯಾನ. ಅದು ನೋಡಿದಷ್ಟು ಸುಲಭವಲ್ಲ. ಹಾಗಾಗಿ ಅದರ ಬಗ್ಗೆ ವ್ಯಾಖ್ಯಾನಿಸುವಾಗ ಆ ಮಾಧ್ಯಮದಲ್ಲಿ ಸಂಚರಿಸಿದವನಿಗೆ ಮಾತ್ರವೇ ಸಾಧ್ಯವಿರುತ್ತದೆ.
ವಿಶ್ವಾಮಿತ್ರನ ಕಥೆ ಗೊತ್ತಿರಬಹುದು. ಕೌಶಿಕ ಮಹಾರಾಜ ಕ್ಷತ್ರಿಯನಾಗಿ ನಂತರ ಬ್ರಹ್ಮಋಷಿಯಾಗುವ ಆತನ ಹಾದಿ ಏಳು ಬೀಳುಗಳಿಂದ ಕೂಡಿರುತ್ತದೆ. ವಾಸ್ತವದಲ್ಲಿ ಸೂರ್ಯನನ್ನು ವಿಶ್ವಾಮಿತ್ರ ಎಂದರೆ, ಆನಂತರ ಸೂರ್ಯಗಾಯತ್ರಿಯ ದೃಷ್ಠಾರನಾಗಿ ಕೌಶಿಕ ವಿಶ್ವಾಮಿತ್ರ ಮಹರ್ಷಿಯಾದ. ವಿಶ್ವಾಮಿತ್ರ ಮೇನಕೆಯಿಂದ ತಪೋಭಂಗವನ್ನು ಅನುಭವಿಸಿದವನು. ಆದರೂ ಆತ ಎದೆಗುಂದದೆ ಭಗ್ನವಾದ ಹಾದಿಯನ್ನು ಮತ್ತೆ ಒಂದಾಗಿಸಿ ತನ್ನ ಸಾಧನೆಯನ್ನು ಮುಂದುವರಿಸಿವನು. ಒಂದು ರೀತಿಯಲ್ಲಿ ಮೇನಕೆಯ ಪ್ರವೇಶ ವಿಧಿ ಬರೆದ ಆತನ ಇಚ್ಛಾ ಶಕ್ತಿಯ ಪರೀಕ್ಷೆಯಾಗಿತ್ತು. ವಿಶ್ವಾಮಿತ್ರನಿಗೆ ಗಾಯತ್ರಿ ಮಂತ್ರದ ದೃಷ್ಠಾರನಾಗುವಲ್ಲಿ ವಿಧಿ ಮೊದಲೇ ನಿರ್ಣಯಿಸಿತ್ತು. ಗಾಯತ್ರೀ ಮಂತ್ರದ ದೃಷ್ಟಾರನಾಗುವಲ್ಲಿ ಆತನಿಗೂ ಒಂದು ಪಾವಿತ್ರ್ಯತೆ ಒದಗಿ ಬರಬೇಕಲ್ಲ? ಹಾಗಾಗಿ ಮೇನಕೆಯ ಮುಖಾಂತರ ವಿಶ್ವಾಮಿತ್ರನ ಪರಿಶುದ್ದತೆ ಪರೀಕ್ಷೆಗೆ ಒಳಗಾಯಿತು. ವಿಶ್ವಾಮಿತ್ರ ಮೇನಕೆಗೆ ಮನಸೋತು ತಪಸ್ಸಿನಿಂದ ವಿಚಲಿತನಾದರೂ ಕೊನೆಗೂ ತನ್ನ ಅಂತಃ ಸತ್ವದಿಂದ ಅದನ್ನು ಮೆಟ್ಟಿನಿಂತು ಸಾಧನೆಯ ಗುರಿಶಿಖರವನ್ನು ತಲುಪಿದ. ಮೇನಕೆಯ ಪ್ರಸಂಗವೆಂದರೆ ಅದು ವಿಶ್ವಾಮಿತ್ರನ ಯೋಗ್ಯತೆಯ ಪರೀಕ್ಷೆ. ಅದರಂತೆ ಧ್ಯಾನದ ಹಾದಿ ನಮ್ಮನ್ನು ಹಲವು ಪರೀಕ್ಷೆಗೆ ಒಳ ಪಡಿಸುತ್ತದೆ. ಹಲವು ಸಲ ನಾವು ವಿಮುಖರಾಗಿ ಸೋತು ಹೋದರೂ ನಮ್ಮ ಅಂತಃ ಸತ್ವವನ್ನು ಧ್ಯಾನ ಎಚ್ಚರಿಸುತ್ತದೆ.
ಧ್ಯಾನ ಪರಿಶುದ್ದ ಮನಸ್ಸಿನ ಸಂಕೇತ. ಕಲ್ಮಶವಿದ್ದರೆ ಒಂದೋ ಅದು ದೂರಾಗಬೇಕು. ಧ್ಯಾನ ಪರಿಪೂರ್ಣವಾಗುವುದೇ ಪರಿಶುದ್ದತೆಯಿಂದ. ಹಿಂಸೆ ದ್ವೇಷ ಅಸೂಯೆ ಈ ಎಲ್ಲವನ್ನು ಮೆಟ್ಟಿನಿಲ್ಲುವ ಶಕ್ತಿಯನ್ನು ಒದಗಿಸುತ್ತದೆ. ಸನಾತನ ಧರ್ಮದಲ್ಲಿ ಧ್ಯಾನ ಪದ್ದತಿಗೆ ಬಹಳ ಮಹತ್ವವಿದೆ. ಜಗತ್ತಿನ ದ್ವೇಷ ಅಸೂಯೆ ವೈಷಮ್ಯಗಳನ್ನು ದೂರ ಮಾಡುವಲ್ಲಿ ಧ್ಯಾನದಿಂದ ಮಾತ್ರ ಸಾಧ್ಯ.ಹಾಗಾಗಿ ಭಾರತ ವಿಶ್ವಗುರುವಾಗಿ ಬೆಳಗುವುದಕ್ಕೆ ಸಾಧ್ಯ. ಪರಿಪೂರ್ಣವಾಗಿ ಧ್ಯಾನದ ಹಾದಿಯಲ್ಲಿ ಸಾಗಬೇಕಾದರೆ ಯಮ ನಿಯಮಗಳು ಪರಿಪೂರ್ಣವಾಗಿ ಅನುಷ್ಠಾನವಾಗಬೇಕು. ಯಮ ಎಂದರೆ ಸಾರ್ವತ್ರಿಕವಾಗಿ ಇರಬೇಕಾದ ಗುಣಗಳು. ಮನುಷ್ಯನ ನೈತಿಕತೆಯನ್ನು ಸಂಭಂಧಿಸಿದ ಗುಣಗಳು. ನಿಯಮ ಎಂದರೆ ಅದು ವೈಯಕ್ತಿಕವಾದ ಗುಣಗಳು.ಪರಿಶುದ್ದಿ ತಪಸ್ಸು ಪರಮಾತ್ಮನ ಚಿಂತನೆ. ಇವುಗಳ ಪರಿಪೂರ್ಣ ಅಳವಡಿಕೆಯಾದಲ್ಲಿ ಮಾತ್ರವೇ ಧ್ಯಾನದ ಪರಾಕಷ್ಠೆಗೆ ತಲುಪುವುದಕ್ಕೆ ಸಾಧ್ಯ. ಇದಕ್ಕೆ ವಿಹಿತವಾಗಿ ಧ್ಯಾನ ಮಾಡಿದರೆ ಅದು ಧ್ಯಾನವಾಗುವುದಕ್ಕೆ ಸಾಧ್ಯವಿಲ್ಲ. ಪ್ರಧಾನಿಯವರು ಇದೇ ಕಾರಣಕ್ಕೆ ಧ್ಯಾನದ ಹಾದಿಯನ್ನು ಹಿಡಿದವರು. ಮನುಷ್ಯ ತಾನು ಎಸೆಯುವುದನ್ನು ಅಂದರೆ ಕಸ ಕಲ್ಮಷಗಳನ್ನು ಅಧಿಕವಾಗಿಸಿದಂತೆ ಪ್ರಕೃತಿಯ ಸಂಭಂಧವನ್ನು ಕಳಚಿಕೊಳ್ಳುತ್ತಾನೆ. ನಮ್ಮಲ್ಲಿ ಎಸೆಯುವ ವಸ್ತುಗಳು ಕಡಿಮೆಯಾದಷ್ಟು ನಾವು ಹೆಚ್ಚು ಪರಿಶುದ್ದರಾಗುತ್ತೇವೆ.
No comments:
Post a Comment