ಗೋವಾ ಹೋಗುತ್ತೇನೆ ಎಂದರೆ ಸಾಕು ನಮ್ಮಲ್ಲಿ ಈಗಲೂ ಒಂದು ವಕ್ರ ಮಾತು ವಕ್ರ ಕಲ್ಪನೆ ಇದೆ. ಮಂಗಳೂರಲ್ಲಿ ಇದ್ದಾಗ ಅದೊಂದು ಟಾಕೀಸ್ ಇತ್ತು. ಅಲ್ಲಿ ಸಿನಿಮಾಕ್ಕೆ ಹೋಗಿದ್ದೇನೆ ಎಂದರೆ ಸಾಕು ಹಲವರ ಕಿವಿ ನೆಟ್ಟಗಾಗಿ ಕಣ್ಣು ಚೂಪಾಗಿ ಹುಬ್ಬು ಗಂಟಿಕ್ಕಿಬಿಡುತ್ತಿತ್ತು. ವಿಷಯ ಇಷ್ಟೆ...ಆ ಕಾಲದಲ್ಲಿ ಅಲ್ಲಿ ಹೆಚ್ಚಾಗಿ ಮಲ್ಲೂ ಸಿನಿಮಾಗಳೇ ಬರುತ್ತಿತ್ತು. ಮಡಿವಂತರು ದೂರದಿಂದ ಸಿನಿಮಾ ಪೋಸ್ಟರ್ ನ್ನು ನೋಡುವುದಕ್ಕೂ ಸಂಕೋಚ ಪಡುತ್ತಿದ್ದರು. ಮಲಯಾಳಂ ಸಿನಿಮಾ ಎಂದರೆ ಇಷ್ಟೇ ಎಂಬ ಕಲ್ಪನೆಯಂತೆ ಆ ಟಾಕೀಸಿಗೆ ಸಿನಿಮಾಕ್ಕೆ ಹೋಗುವುದರಲ್ಲೂ ಒಂದು ರೀತಿಯ ವಕ್ರದೃಷ್ಟಿ ಇರುತ್ತಿತ್ತು. ಮಲಯಾಳಂ ಸಿನಿಮ ಎಂದರೆ ಅಷ್ಟೇ ಅಲ್ಲ ಅದರಿಂದಾಚೆಗೆ ಅದಕ್ಕೆ ವಿಶಿಷ್ಟವಾದ ಸ್ಥಾನವಿದೆ ಎಂದರೆ ಹಳಬರಿಗೆ ಈಗಲೂ ವಿಶ್ವಾಸ ಬರುವುದಿಲ್ಲ. ಭಾರತದ ಚಲನ ಚಿತ್ರ ಚರಿತ್ರೆಯಲ್ಲಿ ಅಂದಿನಿಂದ ಇಂದಿನವರೆಗೆ ಮಲಯಾಳಂ ಸಿನಿಮಾಗಳಿಗೆ ವಿಶಿಷ್ಟ ಸ್ಥಾನವಿದೆ. ನನ್ನ ಊಹೆಯಂತೆ ಅತ್ಯಂತ ಹೆಚ್ಚು ದೇಶೀಯ ಪ್ರಶಸ್ತಿಗಳನ್ನು ಬಾಚಿಕೊಂಡ ಚಿತ್ರರಂಗ ವಿದು. ಬಹಳಷ್ಟು ಪ್ರತಿಭಾವಂತರು ಆಗಿನಿಂದ ಈಗಿನವರೆಗೂ ಇದ್ದಾರೆ. ಆದರೆ ವಕ್ರವಾಗಿ ಚಿಂತಿಸುವವರಿಗೆ ಹೇಗಿದ್ದರೆ ಏನು, ತಮಗೆ ಕಂಡದ್ದು ತಮ್ಮ ಕಲ್ಪನೆ ಇವಿಷ್ಟೇ ಸತ್ಯ. ಮಂಗಳೂರಿನ ಆ ಟಾಕೀಸ್ ನಲ್ಲಿ ಮಲಯಾಳಂ ಸಿನಿಮಾ ಎಂದು ಕೊಂಡು ಆ ಟಾಕೀಸಿನ ಹೆಸರೂ ಉಚ್ಚರಿಸದಿರುವ ಮಡಿವಂತಿಗೆಯಲ್ಲಿ ಅದೇ ಟಾಕೀಸಿನಲ್ಲಿ ರಾಜ್ ಕುಮಾರ್ ಅಭಿನಯ
ದ ಸಂಪತ್ತಿಗೆ ಸವಾಲ್ ಸಿನಿಮಾ ಶತದಿನ ಆಚರಿಸಿತ್ತು. ಕೆಲವೊಮ್ಮೆ ಚರಿತ್ರೆಗಳು ತಮಸ್ಸಿನಲ್ಲೇ ಹರಿದಾಡುತ್ತವೆ. ಆದು ಕಾಲದ ಮಹಿಮೆ. ಆದರೆ ವಿವೇಚನೆಯಿಂದ ಕಾಣುವವನು ಅಲ್ಲಿ ಬೆಳಕನ್ನೂ ಕಾಣುತ್ತಾನೆ. ಗೋವ ಮತ್ತು ಮಲಯಾಳಂ ಸಿನಿಮ ಇದಕ್ಕೆ ಎಲ್ಲಿ ಹೋಲಿಕೆ ಎಂದು ಕೇಳಬಹುದು. ಈ ಬಾರಿ ಗೋವಕ್ಕೆ ಹೋದಾಗ ನನ್ನ ತಂಗಿಯ ಮಗಳು, ಮಲಯಾಳಂ ಕಲಿಯಬೇಕು ಎಂದು ನನಗೆ ದುಂಬಾಲು ಬಿದ್ದಳು. ಕೇವಲ ಮರಾಠಿ ಹಿಂದಿ ಇಂಗ್ಲೀಷ್ ಮಾತನಾಡುವ ಆಕೆಗೆ ಮಲಯಾಳಂ ಆಸಕ್ತಿ ಉಂಟಾಗುವುದಕ್ಕೆ ಕಾರಣ ಮಲಯಾಳಂ ಸಿನಿಮಾಗಳು.
ಮಂಗಳೂರಿನ ಆ ಟಾಕೀಸಿನಂತೆ, ಈಗಲೂ ಗೋವಕ್ಕೆ ಹೋಗುತ್ತೇನೆ ಎಂದರೆ ಕೆಲವರಿಗೆ ಕಿವಿ ನೆಟ್ಟಗಾಗುತ್ತದೆ. ಗೋವಾ ಅಂತ ಹುಬ್ಬೇರಿಸಿಬಿಡುತ್ತಾರೆ. ಮೊನ್ನೆ ಲೆಕ್ಕ ಪರಿಶೋಧನೆಗೆ ಒಂದು ಸಂಸ್ಥೆಗೆ ಹೋಗಿದ್ದೆ. ಗೋವ ಹೋಗುವುದರಿಂದ ಸ್ವಲ್ಪ ತರಾತುರಿಯಲ್ಲಿ ಕೆಲಸ ಮುಗಿಸಬೇಕಿತ್ತು. ಅಲ್ಲಿನ ನಿರ್ವಾಹಕರಿಗೆ ಹೇಳಿದೆ, ಬೇಗನೆ ಮುಗಿಸಬೇಕು. ನಾಲ್ಕೈದು ದಿನ ನಾನು ಸಿಗುವುದಿಲ್ಲ. ಗೋವ ಹೋಗುತ್ತಿದ್ದೇನೆ ಎಂದು ಹೇಳಿದಾಕ್ಷಣ, ಅವರ ಹುಬ್ಬು ಮೇಲೇರಿತು. ಹುಬ್ಬು ಗಂಟಿಕ್ಕಿತು. " ಏನ್ ಸಾರ್ ಗೋವಾ ಹೊರಟಿದ್ದೀರಿ?" ಒಂದು ವಕ್ರ ಧ್ವನಿ ಈ ಪ್ರಶ್ನೆಯಲ್ಲಿತ್ತು. ನಾನು ಜಪತಪ ಯೋಗ ಅಂತ ಮಾತನಾಡುವವನು ಗೋವಕ್ಕೆ ಹೋಗುತ್ತೇನೆ ಎಂಬುದೇ ಅವರ ಕುತೂಹಲ. ಸಮುದ್ರ ಕಿನಾರೆ ಮತ್ತು ಮದ್ಯ....ಮೇಲ್ನೋಟಕ್ಕೆ ಇವುಗಳಿಗೆ ಗೋವ ಪ್ರಸಿದ್ಧಿ. ಅವರೂ ಹತ್ತಿರ ಬಂದು ಕಿವಿಯಲ್ಲಿ ಹೇಳಿದರು. " ಸಾರ್ ಬರುವಾಗ ಒಂದು ಬಾಟಲ್ ತನ್ನಿ" ಈ ಬಾರಿ ನನ್ನ ವಕ್ರದೃಷ್ಟಿ ಅವರ ಮೇಲೆ ಹರಿಸಿದೆ. ಅದಕ್ಕೆ ಅವರು ಹೇಳಿದರು " ಎನಿಲ್ಲ ಸಾರ್, ಯಾರೋ ಸ್ನೆಹಿತರಿಗೆ ಕೊಡಬೇಕು" ಹೀಗೆ ಏನೆನೋ ಕಾರಣ ಹೇಳಿದರು. ಆದರೆ ನನಗೆ ಅದರ ಅಸಲೀ ಸತ್ಯ ಗೊತ್ತಿತ್ತು. ಹೀಗೆ ತೀರ್ಥ ಯಾಚನೆ ಮಾಡುವವರು ತಮಗಲ್ಲ ಅಂತ ಹಲುಬುವುದು ಎಷ್ಟೋ ಬಾರಿ ನೋಡಿದ್ದೇನೆ.
ಗೋವ ಎಂದರೆ ಅದೊಂದು ತಪ್ಪು ಕಲ್ಪನೆ. ಆದರೆ ವಾಸ್ತವ ಬೇರೆ ಇದೆ. ಆದರೆ ಅದನ್ನು ಗಮನಿಸುವ ವಿವೇಚನೆ ನಾಶವಾಗಿದೆ. ಗೋವದಲ್ಲೂ ಒಂದು ಶುದ್ದವಾದ ಭಾರತೀಯ ಸಂಸ್ಕೃತಿ ಈಗಲೂ ಗಟ್ಟಿಯಾಗಿದೆ. ಅದರಲ್ಲೂ ಕೆಲವು ಸಂಪ್ರದಾಯಬದ್ದ ಬ್ರಾಹ್ಮಣ ಅಗ್ರಹಾರಗಳಿವೆ. ಕೆಲವು ಹಳ್ಳಿಗಳು ಅದೇ ನೆಲಗಟ್ಟಿನಲ್ಲಿ ಈಗಲೂ ನಮ್ಮ ಸಂಸ್ಕೃತಿಯನ್ನು ಜೀವಂತವಾಗಿರಿಸಿವೆ. ಅದು ಇಲ್ಲಿಗಿಂತಲೂ ಅಧಿಕ ಎಂದರೆ ಸೂಕ್ತ. ಅದನ್ನು ಗಮನಿಸುವ ದೃಷ್ಟಿ ನಮ್ಮಲ್ಲಿ ಇದ್ದರೆ ಅರಿವಾಗಬಹುದು. ಆದರೆ ಅದು ಅರಿವಾಗುವುದಿಲ್ಲ. ಕರ್ನಾಟಕದ ಗಡಿ ದಾಟಿದ ಕೂಡಲೇ ಮದ್ಯದ ಅಮಲು ತಲೆಗೆ ಏರಿಸಿಕೊಂಡರೆ ಅದು ಗೋವದಲ್ಲಿ ತಿರುಗಿ ಪುನಃ ಮನೆಗೆ ಬಂದು ಎರಡು ದಿನ ಕಳೆದರೂ ಇಳಿಯುವುದಿಲ್ಲ. ಕಣ್ಣು ಮಂಜಾಗುವಂತೆ ನಶೆ ಎರಿಸಿಕೊಂಡು ಇದ್ದರೆ, ಗೋವಾದ ಅಂತರಂಗ ತಿಳಿಯುವುದೇ ಇಲ್ಲ. ಒಂದು ಬಾರಿ ಮದುವೆಗೆ ಗೋವಕ್ಕೆ ಹೋದಾಗ ಮದುವೆ ಮನೆಯ ಸಂಬಂಧಿಗಳ ಒಂದು ತಂಡ ಕರ್ನಾಟಕದಿಂದ ಬಂದಿತ್ತು. ಬಂದ ಘಳಿಗೆಯಿಂದ ತೊಡಗಿ ಮದ್ಯ ಏರಿಸಿಕೊಂಡವರು ಮದುವೆ ಕಳೆದರೂ ಅವರ ನಶೆ ಇಳಿಯಲಿಲ್ಲ ಮಾತ್ರವಲ್ಲ, ಮದುವೆಗೆ ಅಂತ ಬಂದವರು ಕಲ್ಯಾಣ ಮಂಟಪದ ಒಳಗೆ ಕಾಲಿಡಲೇ ಇಲ್ಲ. ಅಮಲಿನಲ್ಲೇ ಕಾರಲ್ಲಿ ಕುಳಿತುಕೊಂಡೆ ಇದ್ದರು. ಈ ಬಗೆಯ ಜನಗಳ ಕಲ್ಪನೆಯಲ್ಲಿ ಗೋವ ಎಂದರೆ, ಮದ್ಯ, ಸಮುದ್ರದ ಮರಳ ದಂಡೇ ತುಂಡು ಬಟ್ಟೆ, ಬರ್ಮುಡ ಚಡ್ಡಿ ಇಷ್ಟೇ ಗೊತ್ತಿರುವುದು. ಪಾಶ್ಚಾತ್ಯ ಸಂಸ್ಕೃತಿ ಗೋವದಲ್ಲಿ ಈಗಲೂ ಹಲವು ಕಡೆ ಗಾಢವಾಗಿ ಕಾಣಬಹುದು. ಬರ್ಮುಡ್ ಚಡ್ಡಿ ಇಲ್ಲಿಂದಲೇ ಬಳಕೆಗೆ ಬಂದು ಈಗ ಊರಿಗೆ ಹೋದರೆ ಅಲ್ಲೂ ಇದನ್ನೆ ಕಾಣಬಹುದು. ಪೌರೋಹಿತ್ಯದ ಭಟ್ಟರೂ ಅದನ್ನು ಧರಿಸಿಕೊಂಡು ಬಂದು ಆನಂತರ ಕಚ್ಚೆ ಉಡುವುದನ್ನು ಕಾಣಬಹುದು. ಆದರೆ ಗೋವದ ಬಗ್ಗೆ ತಿಳಿಯಬೇಕಾದರೆ ಸ್ವಲ್ಪ ಕಡಲ ಕಿನಾರೆ ಬಿಟ್ಟು ಒಳಗೆ ಹಳ್ಳೀಯತ್ತ ಹೆಜ್ಜೆ ಇಡಬೇಕು. ಪಣಜಿ ವಾಸ್ಕೋ ನಗರದಲ್ಲಿ ಸುತ್ತಾಡಿದರೆ, ಅದು ಭಾರತದಲ್ಲಿ ಇದೆ ಎಂಬ ಕಲ್ಪನೆಯೇ ಬರುವುದಿಲ್ಲ. ಗೋವಾದ ಚರ್ಚ್ ಸುತ್ತ ಮುತ್ತ ಪೋರ್ಚುಗೀಸರು ಬಿಟ್ಟು ಹೋದ ಬೇರು ಇನ್ನೂ ಇದ್ದು ಅದು ಭಾರತದಲ್ಲಿದೆ ಎಂದನಿಸುವುದಿಲ್ಲ. ಆದರೆ ಅಲ್ಲಿನ ಹಳ್ಳಿಗಳ ಚಿತ್ರಣವೇ ಬೇರೆ.
ಗೋವಾ ಆ ಹೆಸರಿಗೆ ಹಲವಾರು ಅರ್ಥಗಳಿವೆ. ಹಸುವಿಗೆ ಗಾಯ್ ಅಂತ ಹೇಳುತ್ತಾರೆ, ಅದರಿಂದಲೂ ಗೋವಾ ಸೃಷ್ಟಿಯಾಯಿತು ಎಂದು ಕೆಲವರು ಹೇಳಿದರೆ, ಗಾವ್ ಎಂದರೆ ಊರು ಅದರಿಂದಲೂ ಗೋವಾ ಹೆಸರು ಬಳಕೆಗೆ ಬಂದಿರಬಹುದು ಅಂತ ವಾದಿಸುವವರು ಇದ್ದಾರೆ. ಆದರೂ ಗೋ...ವಾ ವಿದೇಶಿಗರು ಹೇಳುವಾಗ ಗೋ...ಅಂದರೆ ಹೋಗುವುದು ಎಂಬರ್ಥವೂ ಕೆಲವೊಮ್ಮೆ ಈ ನಾಡಿಗೆ ಅನ್ವರ್ಥವಾಗುವುದುಂಟು. ಪರಶುರಾಮ ಸೃಷ್ಟಿಯ ಆರಂಭ ಇಲ್ಲಿಂದಲೇ ಅಂತ ಅಲ್ಲಿ ಹೇಳುವವರು ಇದ್ದಾರೆ. ಅದೆಂತಿದ್ದರೂ ಗೋವಾ ತನ್ನದೇ ಸಂಸ್ಕೃತಿಯಿಂದ ಇರುವ ಒಂದು ವಿಶಿಷ್ಟ ಪ್ರದೇಶ.
ಈ ಬಾರಿ ಹೋದಾಗ ಇಂತಹ ಹಲವು ಕಡೆಗಳಿಗೆ ಹೋಗುವ ಅವಕಾಶ ಒದಗಿಬಂತು. ವೆರ್ನಾ ದ ಬಳಿಯಿರುವ ಶ್ರೀ ಮಹಾಲಸ ನಾರಾಯಣಿ ದೇವಸ್ಥಾನಕ್ಕೆ ಹೋದೆವು. ಬಹಳ ಸುಂದರವಾದ ಪರಿಸರ. ಹತ್ತಿರವೇ ವೆರ್ನಾದ ಕೈಗಾರಿಕ ಪ್ರದೇಶ ಇದ್ದರೂ ಈ ದೇವಸ್ಥಾನದ ಪರಿಸರ ಶುದ್ದ ಹಳ್ಳಿ ಸಂಸ್ಕೃತಿಯನ್ನು ಹೊಂದಿದೆ. ಬಹಳ ಶಾಂತವಾದ ಪರಿಸರ. ದೇವಸ್ಥಾನದ ಬಳಿಯಲ್ಲೆ ಪ್ರಾಥಮಿಕ ಶಾಲೆ ಇದೆ. ವೇದ ಪಾಠಶಾಲೆ ಇದೆ. ಬಹಳ ಪ್ರಾಚೀನ ಕಾಲದ ದೇವಿಯ ದೇವಾಲಯ ಇದು. ಇಲ್ಲಿನವರು ಹೆಚ್ಚಾಗಿ ದುರ್ಗೆಯನ್ನು ಆರಾಧಿಸುವುದರ ದ್ಯೋತಕ ಈ ದೇವಸ್ಥಾನ. ಪೋರ್ಚುಗೀಸರ ಧಾಳಿಯಿಂದ ಅವರ ಉಪಟಳ ತಾಳಲಾರದೆ ಈ ದೇವಸ್ಥಾನವೇ ವಲಸೆ ಹೋಗಿ ಮಾರ್ದೋಲ್ ಎಂಬ ಬ್ರಾಹ್ಮಣರೆ ವಾಸಿಸುವ ಊರಿಗೆ ಹೋಗಿ ಅಲ್ಲಿ ಹೊಸ ದೇವಸ್ಥಾನವನ್ನು ಕಟ್ಟಿಕೊಂಡು ಆ ದೇವಸ್ಥಾನವೂ ಈಗ ಪ್ರಸಿದ್ಧವಾಗಿದೆ. ಆದರೆ ಮೂಲದಲ್ಲಿರುವ ಈ ದೇವಸ್ಥಾನಕ್ಕೆ ಇತ್ತೀಚೆಗೆ ಶ್ರಿಂಗೇರಿ ಜಗದ್ಗುರುಗಳು ಬಂದು ಇದರ ಪುನರುತ್ಥಾನಕ್ಕೆ ಸಹಾಯವನ್ನು ಮಾಡಿ ಈಗ ಸುಂದರವಾದ ದೇವಾಲಯ ಮತ್ತೆ ತಲೆ ಎತ್ತಿ ನಿಂತಿದೆ. ಆದರೆ ದೇವಾಲಯದ ಒತ್ತಿಗೆ, ಪೋರ್ಚುಗೀಸರ ಸಮಾಧಿ ಒಂದರ ಶಿಲುಬೆ ಈಗಲೂ ಇದೆ. ಪ್ರಸಿದ್ದ ಪುರಾತನ ದೇವಾಲಯದ ಪಕ್ಕದಲ್ಲೇ ಇದು ಇರುವುದು ಒಂದು ಜಿಜ್ಞಾಸೆಯ ವಿಷಯ.
ಸಾವೈ ವೇರ್ ನಲ್ಲಿರುವ ಅನಂತ ದೇವಸ್ಥಾನ ಸುಂದರ ಪರಿಸರದಿಂದ ಕೂಡಿದೆ. ಇಲ್ಲೆ ಹತ್ತಿರ ಬೃಹತ್ ವಿದೇಶಿ ಕಂಪೆನಿ ತನ್ನ ಕಾರ್ಖಾನೆಯನ್ನು ಆರಂಭಿಸುವುದಕ್ಕಿತ್ತು. ಆದರೆ ಇಲ್ಲಿನ ಊರ ವಾಸಿಗಳು ತೀವ್ರವಾಗಿ ಪ್ರತಿಭಟಿಸಿದರು. ಕಾರಣ ಇಷ್ಟೇ ಅಭಿವೃದ್ಧಿಯ ಹೆಸರಿನಲ್ಲಿ ಇಲ್ಲಿಯ ಅರಣ್ಯ, ಹಳ್ಳಿ ನಾಶವಾಗುವುದು ಅವರಿಗೆ ಬೇಕಿರಲಿಲ್ಲ. ಹಾಗಾಗಿ ಇಲ್ಲಿ ಈಗಲೂ ಹಳ್ಳಿಯ ವಾತಾವರಣ ಇದೆ. ದೇವಲಯದ ತಳ ಭಾಗದಲ್ಲಿ ಸುತ್ತಲೂ ನೀರು ತುಂಬಿದೆ. ಅದು ಒರತೆ ನೀರು. ದೇವಾಲಯ ಅದರ ಮೇಲೆಯೇ ನಿಂತಿದೆ.
ಮಾರ್ದೋಲ್ ನಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಪರಿಸರವಂತು ಅದ್ಭುತವಾಗಿದೆ. ಹಳ್ಳಿಯ ಶಾಂತವಾದ ವಾತಾವರಣ ವಿದೆ. ಗೋವಾದಲ್ಲಿ ಪ್ರತೀ ದೇವಸ್ಥಾನದ ಹತ್ತಿರ ಒಂದು ಕೊಳ ಇದ್ದೇ ಇರುತ್ತದೆ. ಅದರಂತೆ ಮಾರ್ದೋಲ್ ನ ಈ ದೇವಸ್ಥಾನದಲ್ಲಿ ಒಂದು ಕೊಳವಿದೆ. ಸುತ್ತಲೂ ಹಸಿರಿನ ತೋಟ. ಪ್ರವಾಸಿಗರೂ ಯಾರೂ ಇಲ್ಲಿಗೆ ಬರುವುದಿಲ್ಲ. ಹಾಗೆ ಪ್ರವಾಸಿಗರು ಬರುವುದನ್ನು ಇಲ್ಲಿನವರು ಬಯಸುವುದೂ ಇಲ್ಲ. ಹಾಗಾಗಿ ಇದಕ್ಕೆ ಹೆಚ್ಚಿನ ಪ್ರಚಾರವನ್ನು ಕೊಡುವುದಿಲ್ಲ.ಗೂಗಲ್ ನಲ್ಲಿ ಅಥವಾ ಇನ್ನಿತರ ಅಂತರ್ಜಾಲದ ಮಾಧ್ಯಮಗಳಲ್ಲಿ ಇಲ್ಲಿನ ಫೋಟೋ ಹಾಕುವುದಿಲ್ಲ. ಯಾಕೆಂದರೆ ಇಲ್ಲಿಗೆ ಆದಷ್ಟು ಯಾರೂ ಬಾರದರಿಲಿ, ಕೇವಲ ಊರವರಿಗಷ್ಟೇ ಈ ದೇವಸ್ಥಾನ ಮೀಸಲಾದಂತಿದೆ. ಕೆರೆಯ ಸುತ್ತಲೂ ಸಾಕಷ್ಟು ಔಷಧೀಯ ಸಸ್ಯಗಳು ತೆಂಗು ಕಂಗಿನ ತೋಟವಿದ್ದು ಕಣ್ಮನ ಸೆಳೆಯುತ್ತದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಇಲ್ಲಿನ ದಿವ್ಯ ಮೌನದ ಶಾಂತ ವಾತಾವರಣ, ಇಲ್ಲಿಂದ ವಾಪಾಸು ಬರದಂತೆ ತಡೆ ಹಿಡಿಯುತ್ತದೆ. ನಾವು ಹೋದಾಗ ದೇವಸ್ಥಾನದಲ್ಲಿ ಒಬ್ಬರು ಅರ್ಚಕರು ಬಿಟ್ಟು ಬೇರೆ ಯಾರೂ ಇರಲಿಲ್ಲ. ನಿಜಕ್ಕೂ ಇದೊಂದು ಅದ್ಭುತ ಕ್ಷೇತ್ರ.
ಇನ್ನು ಕೆರಿ ಎಂಬ ಹಳ್ಳಿಯಿದೆ. ಅಲ್ಲಿಯ ಶ್ರೀ ವಿಜಯ ದುರ್ಗ ದೇವಸ್ಥಾನವೂ ಸುಂದರ ಪರಿಸರದಲ್ಲಿದೆ. ಸುತ್ತಲೂ ಬೆಟ್ಟ ಕಾಡು ನಡುವೆ ಈ ದೇವಸ್ಥಾನ. ಇಲ್ಲಿ ಯಾವ ಮೊಬೈಲ್ ಟವರ್ ಇಲ್ಲದೇ ಇರುವುದರಿಂದ ಇಲ್ಲಿ ಮೊಬೈಲ್ ಕೆಲಸಕ್ಕೆ ಬರುವುದಿಲ್ಲ. ಗೋವದಲ್ಲಿ ಇಂತಹ ಒಂದು ಊರು ಇದೆ ಎಂದರೆ ಆಶ್ಚರ್ಯವಾಗುತ್ತದೆ. ಮೊಬೈಲ್ ಟವರ್ ಹಾಕುವುದಕ್ಕೆ ಊರವರ ವಿರೋಧವಿದೆ ಎಂದು ಕೇಳಿದೆ. ಹಾಗಾಗಿ ಅಧುನಿಕತೆಯಿಂದ ಈ ಹಳ್ಳಿ ದೂರವಿದೆ. ಉತ್ತಮ ರಸ್ತೆ ಯಿದ್ದು ಪಣಜಿಗೆ ಅನತಿ ದೂರದಲ್ಲೇ ಈ ಊರಿದೆ. ಈ ದೇವಸ್ಥಾನಕ್ಕೂ ಶ್ರೀಂಗೇರಿ ಜಗದ್ಗುರುಗಳ ಸನ್ನಿಧಾನ ಆಗಮಿಸಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಮಾತ್ರವಲ್ಲ ಈ ದೇವಾಲಯಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ.
ಗೋವಾದ ಹಳ್ಳಿಯ ದೇವಸ್ಥಾನಗಳು ಸಾಕಷ್ಟು ಪ್ರಸಿದ್ಧಿ ಇಲ್ಲದೇ ಹಲವು ಕಾರಣಗಳಿಂದ ಜನ ಸಂಪರ್ಕಕ್ಕೆ ಒದಗಿ ಬಂದಿಲ್ಲ. ಇಲ್ಲಿನ ಮಂದಿಗೆ ಅದರ ಅವಶ್ಯಕತೆಯೂ ಇರುವುದಿಲ್ಲ. ಹೊರಗಿನ ಪ್ರವಾಸಿಗರು ಬರದೇ ಇರುವುದರಿಂದ ಇಲ್ಲಿನ ದೇವಸ್ಥಾನಗಲ ಪರಿಸರ ಇಂದಿಗೂ ಸ್ವಚ್ಛವಾಗಿದೆ. ಲೋಕಮುಖಕ್ಕೆ ಕ್ಷೇತ್ರ ತೆರೆದುಕೊಂಡರೆ ಅಲ್ಲಿನ ಪರಿಸರ ಕೆಡುವುದಕ್ಕೆ ನಮ್ಮೂರಿನ ದೇವಸ್ಥಾನಗಳು ಸಾಕ್ಷಿಯಾಗಬಹುದು. ಯಾವ ನದಿ ಕೊಳ್ಳಗಳನ್ನು ನೋಡಿದರು ಉಟ್ಟ ಚಿಂದಿ ವಸ್ತ್ರಗಳು ಇತರ ಕಸಗಳನ್ನು ಎಸೆದು ಪ್ರತೀ ದೇವಸ್ಥಾನದ ಆಡಳಿತ ವರ್ಗಕ್ಕೆ ಅದನ್ನು ಸ್ವಚ್ಛಗೊಳಿಸುವುದು ದೊಡ್ಡ ಪರಿಶ್ರಮದ ಕೆಲಸವಾಗಿ ಅದು ಸಾಧ್ಯವಾಗದೇ ಪರಿಸರ ಕೆಡುತ್ತಾ ಇದೆ. ಯಾವ ನದಿಯೂ ಇದಕ್ಕೆ ಭಿನ್ನವಾಗಿಲ್ಲ.
ಗೋವಾದ ಸೌಂದರ್ಯವನ್ನು ಆಸ್ವಾದಿಸಬೇಕಾದರೆ ಕಡಲತಡಿಯನ್ನು ಬಿಟ್ಟು ಮದ್ಯಸೇವನೆಯನ್ನು ದೂರಮಾಡಿ ಹಳ್ಳಿಯ ಕಡೆಗೆ ತಿರುಗಿ ನೋಡಬೇಕು. ಇಲ್ಲಿನ ಹಳ್ಳಿಜನರ ಸಂಸ್ಕೃತಿ ಸಂಪ್ರದಾಯ ಇಂದಿಗೂ ಅತ್ಯಂತ ಉತ್ಕೃಷ್ಟ ಸ್ಥಿತಿಯಲ್ಲಿದೆ.
No comments:
Post a Comment