Sunday, July 14, 2024

ಉಚಿತವೇ ಜೀವಾಳ

         ಯಾವುದೋ ಒಂದು ಸಿನಿಮಾ ಪ್ರದರ್ಶನಕ್ಕೆ ಉಚಿತವಾಗಿ ಸಮೋಸ ಚಹ ಕೊಡುತ್ತಾರೆ ಎಂದು ಕೇಳಿದೆ. ಇನ್ನೊಂದು ಸಿನಿಮಾ ಮಧ್ಯಂತರದವರೆಗೆ ಉಚಿತ ಪ್ರದರ್ಶನ ಅಂತ ಕೇಳಿದೆ. ನಿಜಕ್ಕೂ ಎಂತಹ ಒಂದು ದುರ್ದೆಸೆ ಬಂತು ಎಂದು ಆಶ್ಚರ್ಯವಾಗುತ್ತದೆ. ಹೂರಣವಿಲ್ಲದ ಹೋಳಿಗೆ ಚಪಾತಿಗಿಂತಲೂ ಕಡೆ. ಸ್ವಂತ ಅರ್ಹತೆ ಇಲ್ಲದಾಗ ಮತ್ತೊಂದರ ಆಧಾರ ಅವಶ್ಯಕತೆ ಒದಗುತ್ತದೆ ಎಂಬುದಕ್ಕೆ ಈ ವಿದ್ಯಮಾನಗಳೇ ಸಾಕ್ಷಿ. ಸಿನಿಮಾ ನಿರ್ಮಿಸುವವರಿಗೆ ತಮ್ಮದು ಉತ್ತಮ ಎನ್ನುವ ಸ್ವತಃ ಆತ್ಮ ವಿಶ್ವಾಸ ಇರುವುದಿಲ್ಲ. ಹಾಗಾಗಿ ಹಲವಾರು ಗಿಮಿಕ್ ಗಳನ್ನು ತಂತ್ರಗಾರಿಕೆಯನ್ನು  ಮಾಡುತ್ತಾರೆ. ಇದರಿಂದ  ನೋಡೋಣ ಎನ್ನುವ  ಮೊದಲಿನ ವಿಶ್ವಾಸ ಒದಗಿಬರುತ್ತದೋ ಇಲ್ಲವೋ ಅದು ಕಾಲ ನಿರ್ಣಯಿಸಬೇಕು. ಮೊದಲೆಲ್ಲ ಕೇವಲ ಕಲಾವಿದರ ನಿರ್ದೇಶಕರ ಹೆಸರು ಇದ್ದರೆ ಸಾಕು ಸಿನಿಮಾ ಮಂದಿರ ಭರ್ತಿಯಾಗಿಬಿಡುತ್ತಿತ್ತು. ಈಗ ಸಾಮಾಜಿಕ ಜಾಲತಾಣಗಳು ಇದೆ ಎಂಬ ಕಾರಣ ಒಂದಾದರೆ, ಹೂರಣವಿಲ್ಲದ ಹೋಳಿಗೆಯ ರುಚಿಯಂತಾಗಿದೆ. ಅದರಲ್ಲೂ ಕನ್ನಡ ಸಿನಿಮಾ ಜೀವಂತ ಇದೆ ಎಂದನಿಸುವುದಿಲ್ಲ. ಇದು ಈಗಿನ ಪರಿಣಾಮವಲ್ಲ. ಇದರ ಪ್ರಭಾವ ಹತ್ತಾರು ವರ್ಷಗಳ ಮೊದಲೇ ಆರಂಭವಾಗಿತ್ತು. ಆದರೆ ನಮ್ಮವರು ಬುದ್ಧಿ ಕಲಿಯಲಿಲ್ಲ. 

ಕನ್ನಡ ಸಿನಿಮಾ ರಿಮೇಕ್ ಗೆ ಅವಲಂಬಿಸಿದಷ್ಟು ಬೇರೆ ಸಿನಿಮಾರಂಗಗಳು ಅವಲಂಬಿಸಿಲ್ಲ. ಇತರ ಭಾಷಾ ಚಿತ್ರಗಳು ಸ್ವಂತ ಬಲದಿಂದಲೇ ಪ್ರೇಕ್ಷಕ ಲಕ್ಷ್ಯವನ್ನು ಸೆಳೆಯುತ್ತಿದ್ದರೆ,   ಅಲ್ಲಿ ರಿಮೇಕ್ ಮಾಡುವ ಅವಕಾಶವೇ ಇರುವುದಿಲ್ಲ. ಈಗ ಯಾವುದೇ ಭಾಷೆ ಇರಲಿ ಮೂಲದಲ್ಲೇ ನೋಡುವ ಮತ್ತದನ್ನು ಅರ್ಥವಿಸುವ ಅವಕಾಶ ಜಾಲತಾಣಗಳಿಂದ ಸಾಧ್ಯವಾಗುತ್ತದೆ. ಹಾಗಾಗಿ ಕೇವಲ ರಿಮೇಕ್ ನ್ನೇ ಭಂಡವಾಳವಾಗಿಸಿಕೊಂಡ ಕನ್ನಡ ಚಿತ್ರರಂಗ ಬಸವಳಿದಿರುವುದು ಅತಿಶಯವೇನೂ ಅಲ್ಲ. ವಿಚಿತ್ರವೆಂದರೆ ಅದನ್ನು ಒಪ್ಪಿಕೊಳ್ಳುವ ಮನೋಭಾವವೂ ಇಲ್ಲ. ನೆರೆ ಹೊರೆಯ ಚಿತ್ರರಂಗದಲ್ಲಿ ನೋಡಬಹುದು. ಅಲ್ಲಿ ತಾರಾ ಮೌಲ್ಯ ಇರುವ ನಟರು ಕಲಾವಿದರು ನಿರ್ದೆಶಕರು ನಿವೃತ್ತಿಯಾದರೂ ಯಾವುದೇ ಪರಿಣಾಮವಿಲ್ಲದೆ ಮುಂದು ವರಿಯುತ್ತದೆ. ಮೋಹನ್ ಲಾಲ್ ಮಮ್ಮೂಟ್ಟಿ ಜಯರಾಂ ಇತ್ತ ರಜನಿ ಕಮಲ್ ಹಾಸನ್ ಮುಂತಾದವರ ಸಿನಿಮಾಗಳು ಬಹಳ ಕಡಿಮೆಯಾದರೂ ಸಿನಿಮಾರಂಗ ಬಡವಾಗಲಿಲ್ಲ. ಕಾರಣ ಅಲ್ಲಿರುವ ಅಂತಃ ಸತ್ವ. ಅದರಲ್ಲೂ ಮಲಯಾಳಂ ಸಿನಿಮಾಗಳು ಹೊಸ ಹೊಸ ಕಥಾಹಂದರವನ್ನು ತಂತ್ರಜ್ಞಾನಗಳನ್ನು ವರ್ತಮಾನದ ಆಗು ಹೋಗುಗಳನ್ನು ಸಮರ್ಥವಾಗಿ ಬಳಸಿಕೊಂಡು ತನ್ನ ನೈಜತೆಯನ್ನು ಬಳಸಿಕೊಳ್ಳುತ್ತವೆ. ಸೃಜನ ಶೀಲತೆ ಸದಾ ಜೀವಂತವಾಗಿರುತ್ತದೆ. ಆದರೆ ಇಲ್ಲಿ ಎಲ್ಲವೂ ಅನುಕರಣೆ. ನಮ್ಮ ಸಂಸ್ಕೃತಿ ಇವುಗಳನ್ನೆಲ್ಲ ಬದಿಗಿಟ್ಟು ಕಾಲ ಎಂದೋ ಕಳೆದುಹೋಗಿದೆ.  ಈಗಿನ ಸರಕಾರದಂತೆ ಉಚಿತದ ಅನಿವಾರ್ಯತೆ ಚಿತ್ರರಂಗಕ್ಕೂ ಒದಗಿ ಬಂದಿದೆ ಎಂದರೆ ಅದು ದುರವಸ್ಥೆಯಲ್ಲದೆ ಮತ್ತೇನು? 

ಈ ಉಚಿತದ  ತಂತ್ರಗಾರಿಕೆ ಕೇವಲ ಸಿನಿಮಾರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಅತ್ತ ಯಕ್ಷಗಾನ ರಂಗ ಅದನ್ನು ಎಂದೋ ಬಳಕೆಗೆ ತಂದು ತಮ್ಮ ಬುದ್ಧಿವಂತಿಗೆಯನ್ನು ತೋರಿಸಿಯಾಗಿದೆ. ಮೊದಲು ಯಕ್ಷಗಾನ ಬಯಲಾಟವಿರಲಿ ತಾಳ ಮದ್ದಲೆ ಇರಲಿ ಟಿಕೆಟ್ ಕೊಟ್ಟು ಪ್ರೇಕ್ಷಕ ಬರುತ್ತಿದ್ದ. ಅದೂ ಎಂತಹ ಜನಸಂದಣಿ ಎಂದರೆ ಆಸನಗಳನ್ನು ಮೊದಲೇ ಕಾದಿರಿಸುವುದಕ್ಕಾಗಿ ಮಕ್ಕಳನ್ನು ಮೊದಲೇ ಕಳುಹಿಸುತ್ತಿದ್ದರು. ನಾನೂ ಆಸನ ಸ್ಥಳವನ್ನು ಕಾದಿರಿಸುವುದಕ್ಕೆ ರಾತ್ರಿಯ ಆಟಕ್ಕೆ ಸಾಯಂಕಾಲವೇ ಹೋದದ್ದಿದೆ.  ಯಕ್ಷಾಗಾನದ ನಿಜವಾದ ಅಂತಃ ಸತ್ವ ಅದು. ಒಂದು ಯಕ್ಷಗಾನಕ್ಕೆ ಅದೂ ದೂರದ ಊರಾದರೂ ಬಾಡಿಗೆ ವಾಹನ ಮಾಡಿಯೋ ಮೈಲುಗಟ್ಟಲೆ ನಡೆದು ಹೋಗಿ ನೋಡಿ ಬರುತ್ತಿದ್ದ ಪ್ರೇಕ್ಷಕನ ಆಕರ್ಷಣೆ ಯಕ್ಷಗಾನದಲ್ಲಿತ್ತು. ಯಾವುದೋ ಊರಿನವರು ಎಲ್ಲೋ ಹೋಗಿ ನೋಡುವುದು ಈಗಿನ ಸನ್ನಿವೇಶದಲ್ಲಿ ಕಲ್ಪಿಸುವುದಕ್ಕೂ ಸಾಧ್ಯವಿಲ್ಲ. ಅಂದಿನ ಕಲಾವಿದರು ಪ್ರದರ್ಶನ ಎಲ್ಲವೂ ಅದಕ್ಕೆ ಕಾರಣ. ಆಗ ರಂಗ  ಕೇವಲ ಶುದ್ದ ಯಕ್ಷಗಾನಕ್ಕೆ  ಮಾತ್ರ ಸೀಮಿತವಾಗಿತ್ತು. ಆದರೆ ಬರು ಬರುತ್ತಾ ಇತರ ಅನಾವಶ್ಯಕ ಅವಿಷ್ಕಾರಗಳು ಇಂದಿನ ದುಸ್ಥಿತಿಗೆ ಕಾರಣವಾಗಿದೆ.  ಹಾಗಾಗಿ ಈಗ ಯಾವುದೇ ಪ್ರದರ್ಶನವಾಗಲಿ ಅಲ್ಲಿ ಚಹ ಉಪ್ಪಿಟ್ಟು  ಅಂಬಡೆ ತಿಂಡಿ ಊಟದ ವ್ಯವಸ್ಥೆ ಮಾಡುವ ಅನಿವಾರ್ಯತೆ ಒದಗಿ ಬಂದಿದೆ. ಹೀಗಿದ್ದರೂ ಪ್ರೇಕ್ಷಕ ಸಂಖ್ಯೆ ಗಣನೀಯವಾಗಿಲ್ಲ. ಮಾತ್ರವಲ್ಲ ಪ್ರದರ್ಶನದ ಮಟ್ಟವೂ ಉತ್ತಮವಾಗಿಲ್ಲ. ವಿಪರ್ಯಾಸವೆಂದರೆ ಇಷ್ಟೆಲ್ಲಾ ಪರಿಣಾಮವಾದರೂ ಬುದ್ಧಿ ಕಲಿತಿಲ್ಲ. ತಮ್ಮದೇನು ತಪ್ಪಿಲ್ಲ ...ಎಲ್ಲವೂ ಸರಿ ಇದೆ ಎಂದು ಬೆನ್ನುತಟ್ಟಿಕೊಳ್ಳುವವರಿಗೆ  ಈ ಬದಲಾವಣೆಗಳು ಸಹಜ ಅಂತ ಭಾವನೆ. ಆದರೂ ಪ್ರೇಕ್ಷಕನಿಗೆ ಉತ್ತಮವಾದದ್ದು ಕೊಟ್ಟು ಅಂತಃ ಸತ್ವದ ಗುಣಮಟ್ಟವನ್ನು ಹೆಚ್ಚಿಸುವ ಅಧ್ಯಯನವಾಗಲೀ ಅದರ ಬಗೆಗಿನ ಕಾಳಜಿಯಾಗಲೀ ರಂಗದಲ್ಲಿ ಇಲ್ಲ ಎಂಬುದು ಅತ್ಯಂತ ಸತ್ಯ. 

ಮೊದಲೆಲ್ಲ ಪತ್ರಿಕೆಗಳ ಪ್ರತಿಗಳನ್ನು ಮೊದಲೇ ಹೇಳಿ ಕಾದಿರಿಸುವ ಅವಶ್ಯಕತೆ ಇರುತ್ತಿತ್ತು.  ಎಷ್ಟೋ ಪತ್ರಿಕೆಗಳನ್ನು ಓದುವುದಕ್ಕಾಗಿ ನಾನೇ ಯಾರದೋ ಮನೆಗೆ ಹೋಗಿದ್ದ ನೆನಪು. ಪ್ರಜಾಮತ ಎಂಬ ಪತ್ರಿಕೆ  ಓದುವುದಕ್ಕಾಗಿ ತಿಂಗಳ ಮೊದಲವಾರದಲ್ಲೇ ಗುಡ್ಡ ಹತ್ತಿ ಇಳಿದು ಸಂಭಂದಿಕರ ಮನೆಗೆ ಹೋದದ್ದು ನೆನಪಿದೆ. ಚಂದಮಾಮ ಬಾಲಮಿತ್ರ ಓದದೇ ಇದ್ದರೆ ಯಾವುದೋ ರೋಗ ಬಡಿದ ಅನುಭವವಾಗುತ್ತಿತ್ತು. ಈಗ ಅಂತಹ ವಾತಾವರಣ ಇಲ್ಲ ಎಂಬುದೇನೋ ಸತ್ಯ...ಆದರೆ ಒಂದು ದಿನ ನಿತ್ಯದ ಪತ್ರಿಕೆಯನ್ನು ಖರೀದಿಸಿ ನೋಡಿ ಅದರಲ್ಲಿ ಸುದ್ದಿಗಿಂತಲೂ ಹೆಚ್ಚು ಜಾಹೀ ರಾತು ಇರುತ್ತದೆ. ಸಿಕ್ಕ ಸಿಕ್ಕಲ್ಲಿ ಜಾಹೀರಾತು. ಅದು ಸಾಲದು ಎಂಬಂತೆ ಹತ್ತಿರದ ಮಳಿಗೆಯ ಕರಪತ್ರ ಕೂಡ ಇರಿಸಿಬಿಡುತ್ತಾರೆ.  ಪತ್ರಿಕೆಯಲ್ಲಿ ಹೂರಣ ಇಲ್ಲದಾಗ ಜಾಹೀರಾತಿನ ಮೊರೆ ಹೋಗಬೇಕಾಗಿ ಬರುವುದು ಅನಿವಾರ್ಯ. ಕೆಲವು ಪತ್ರಿಕೆಗಳಂತು ಉಚಿತವಾಗಿ ಕೊಡುವುದಿಲ್ಲ ಯಾಕೆಂದರೆ, ಪತ್ರಿಕೆ ಎಷ್ಟು ಜನರು ಕೊಂಡುಕೊಂಡು ಓದುತ್ತಾರೆ ಎಂದು ಅರಿವಿಗೆ ಬರುವುದಿಲ್ಲ. ಇಲ್ಲವಾದರೆ ಉಚಿತವಾಗಿ ಪತ್ರಿಕೆಗಳನ್ನು ಕೊಟ್ಟು ಬಿಡುತ್ತಿದ್ದರು. ಬೀದಿ ಬದಿಯಲ್ಲಿ ಕೊಡುವ ಕರಪತ್ರದಂತೆ ಪತ್ರಿಕೆ ಸಿಗುತ್ತಿತ್ತು. ಮುಂದೆ ಅಂತಹ ದಿನ ಬಂದರೂ ಅಚ್ಚರಿ ಇಲ್ಲ. ಯಾವಾಗ ಸತ್ವದ ಕೊರತೆಯಾಗುತ್ತದೋ ಅದನ್ನು ತುಂಬಿಕೊಳ್ಳುವುದಕ್ಕೆ ಉಚಿತ ಎಂಬುದು ಅನಿವಾರ್ಯ ಸಾಧನ. ಈಗಿನ ಸರಕಾರವೂ ಅದನ್ನು ಚೆನ್ನಾಗಿ ಬಳಸಿಕೊಳ್ಳುತ್ತದೆ. ಒಟ್ಟಿನಲ್ಲಿ ಚಲಾವಣೆಯಲ್ಲಿ ಇರಬೇಕು ಮರ್ಮ ಅಷ್ಟೇ. ಉಚಿತ ಉಚಿತ...ಎಲ್ಲವೂ ಉಚಿತ...ಇನ್ನು ಸಿನಿಮಾ ಮಂದಿರದಲ್ಲಿ ಚಹ ತಿಂಡಿಯ ಜತೆಗೆ ಮಲಗುವುದಕ್ಕೆ ಹಾಸಿಗೆ ಚಾದರ ಇಟ್ಟರೂ ಅಡ್ಡಿ ಇಲ್ಲ. ಸಿನಿಮಾ ನೋಡಿ ನಿದ್ದೆ ಬಂದರೆ ಮಲಗಿಬಿಡಬಹುದು. 


No comments:

Post a Comment