ಸಿನಿಮಾ ಎಂಬುದು ಭ್ರಮಾಧೀನಕ್ಕೆ ಪ್ರೇರಕವಾಗುವಂತಹುದು. ಬಹುಶಃ ಈಗ ಅದು ಉಂಟು ಮಾಡುವ ಭ್ರಮೆಯನ್ನು ಬೇರೆಯಾವುದೂ ಉಂಟು ಮಾಡುವುದಿಲ್ಲ. ಭ್ರಮೆ ಎಂಬುದು ವಾಸ್ತವದ ವಿಪರೀತ ಸ್ಥಿತಿ. ಅಲ್ಲಿ ಸತ್ಯ ಹುಡುಕಿದರೂ ಸಿಗುವುದಕ್ಕೆ ಸಾಧ್ಯವಿಲ್ಲ. ಈ ಮಾತು ಪದೇ ಪದೇ ಸತ್ಯವಾದರೂ ಮನುಷ್ಯ ಈ ಭ್ರಮೆಗೆ ದಾಸನಾಗುವುದು ವಾಸ್ತವದ ಸತ್ಯ.
ಮಲಯಾಳಂ ಚಿತ್ರರಂಗ ಈ ಲೈಂಗಿಕ ದೌರ್ಜನ್ಯದ ಸುಂಟರಗಾಳಿಯಲ್ಲಿ ಸಿಕ್ಕಿದೆ ಎನ್ನಬೇಕು. ಒಂದು ಕಾಲದಲ್ಲಿ ಮಲಯಾಳಂ ಸಿನಿಮಾ ಮಡಿವಂತಿಕೆಯನ್ನು ಬಿಟ್ಟ ಚಿತ್ರಗಳಿಗೆ ಕುಖ್ಯಾತಿಯನ್ನು ಪಡೆದಿತ್ತು. ಅದರ ಪ್ರೇಕ್ಷಕ ಹೆಂಡದಂಗಡಿಗೆ ಹೋಗುವಂತೆ ಕದ್ದು ಮುಚ್ಚಿ ಹೋಗುವ ಪರಿಪಾಠವಿತ್ತು. ಈಗ ಸಿನಿಮಾದ ಅಂತರಂಗದ ವಿಚಾರಗಳೂ ಸಹ ಇದೇ ಮಡಿವಂತಿಕೆಯಿಂದ ದೂರಾಗಿರುವುದು ವಿಪರ್ಯಾಸ. ಮಲಯಾಳಂ ಸಿನಿಮಾರಂಗ ಈ ರೀತಿಯಲ್ಲಿ ಭ್ರಮೆಯನ್ನು ಕಳಚಿ ಕುಳಿತರೆ ಕನ್ನಡ ಸಿನಿಮಾ ಕೊಲೆಯ ಪಾತಕ ಲೋಕದ ವಿವಾದದಲ್ಲಿ ಜರ್ಝರಿತವಾಗಿದೆ. ಒಂದರ್ಥದಲ್ಲಿ ಸಿನಿಮಾ ಎಂಬುದು ಭ್ರಮೆ ಎಂಬ ಸತ್ಯ ಬಹಿರಂಗವಾಗುತ್ತದೆ. ಎದುರು ಎನಿದೆಯೋ ಅ ನಿಜದಲ್ಲಿ ಅದು ಇಲ್ಲ. ಒಳಗೆ ಏನೋ ಇದೆ ಎಂಬ ಭ್ರಮೆಯಲ್ಲಿ ಇದ್ದರೆ ಊಹನೆಗೆ ನಿಲಕಲಾರದ್ದು ಅಲ್ಲಿರುತ್ತದೆ. ಸಿನಿಮಾ ಹೇಗೆ ಭ್ರಮೆಯನ್ನು ಸೃಷ್ಟಿ ಮಾಡುತ್ತದೆ ಎಂದರೆ, ಬಾಲ್ಯದಲ್ಲಿ ಉಪ್ಪಳದ ಸಫಾಯರ್ ಥಿಯೇಟರ್ ನಲ್ಲಿ ನಾನು ಮೊದಲ ಸಿನಿಮಾ ನೋಡಿದಾಗ ಅಲ್ಲಿನ ತೆರೆಯ ಹಿಂದಿದ್ದ ಬಾಗಿಲಲ್ಲಿ ಇಣುಕಿ ನೋಡಿದ್ದೆ, ಒಳಗೆ ಯಾರಾದರೂ ಇರಬಹುದೇ ಅಂತ? ಅದು ಅಮಾಯಕ ಭ್ರಮೆಯಾದರೆ, ಈಗ ಭ್ರಮೆ ಅಂತ ಗೊತ್ತಿದ್ದರೂ ಅದಕ್ಕೆ ಶರಣಾಗುತ್ತಿದ್ದೇವೆ.
ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ಹೊಸತು. ಒಬ್ಬರು ಸಿನಿಮಾ ನಟಿಯ ಆದಾಯ ತೆರಿಗೆ ಹಾಗು ಇನ್ನಿತರ ಕಛೇರಿ ಕೆಲಸಗಳಿಗೆ ಅವರನ್ನು ಭೇಟಿಯಾಗಬೇಕಿತ್ತು. ಅವರು ಶೂಟಿಂಗ್ ನಡೆಯುವ ಸ್ಥಳಕ್ಕೆ ಬರಹೇಳಿದರು. ನನಗೂ ಬೆಂಗಳೂರಿಗೆ ಬಂದು ಸಮಯವಾಗಿದ್ದರೂ ಒಂದು ಸಿನಿಮಾ ನಟನಟಿಯರನ್ನಾಗಲೀ ಸಿನಿಮಾ ಶೂಟಿಂಗ್ ಆಗಲಿ ನಾನು ನೋಡಿರಲಿಲ್ಲ. ಸಹಜವಾಗಿ ಕುತೂಹಲದಿಂದ ಉತ್ಸಾಹದಲ್ಲಿ ಹೋದೆ. ಅದೊಂದು ಮನೆಯಲ್ಲಿ ಟೀ ವಿ ಸೀರಿಯಲ್ ಚಿತ್ರೀಕರಣ ಆಗುತ್ತಿತ್ತು. ದೊಡ್ಡ ಮನೆ. ಬಹಳ ಜನ ಇದ್ದರು. ಆಗತಾನೆ ಟಿವಿಯಲ್ಲಿ ಸೀರಿಯಲ್ ಆರಂಭವಾಗುವ ಕಾಲ ಅದು. ಟಿವಿಯಲ್ಲಿ ನೋಡುವ ಕಲಾವಿದರು ಹಲವರು ಮೇಕಪ್ ಇಲ್ಲದೇ ಇದ್ದರು. ಅವರನ್ನು ನೋಡುವಾಗ ನಾವೆಂತಹ ಭ್ರಮೆಯಲ್ಲಿ ಇದ್ದೇವೆ ಎಂದು ಆಶ್ಚರ್ಯವಾಯಿತು. ಅವರು ಹೇಗಿದ್ದರೂ ಎಂದು ವಿವರಿಸಿ ಹೇಳುವುದಕ್ಕಿಂತ ನಾವು ವಾಸ್ತವದಲ್ಲಿ ಏನು ನೋಡುತ್ತಿದ್ದೇವೆಯೋ ಅದಕ್ಕಿಂತ ವಿಪರೀತವಾಗಿತ್ತು ಎಂದು ಹೇಳಿದರೆ ಸಾಕು. ಯಾಕೆಂದರೆ ಒಂದು ರಂಗವನ್ನು ಹೀನಾಯವಾಗಿ ಚಿತ್ರಿಸುವುದು ತಪ್ಪು. ಹೇಗೂ ಇರಲಿ ಅದು ಅವರ ಸ್ವಾತಂತ್ರ್ಯ.
ನಾನು ನಟಿಯೇ ಕರೆದು ಹೋಗಿದ್ದುದರಿಂದ ಅವರೇ ಒಂದು ಕಡೆಯಲ್ಲಿ ಕರೆದು ಕೂರಿಸಿದರು. ಒಂದಷ್ಟು ಆತಿಥ್ಯ ವಿಶೇಷವಾಗಿ ಸಿಕ್ಕಿತ್ತು. ನಟಿಯೂ ಹಾಗೆ ತುಂಬ ಸ್ನೇಹದಿಂದ ಮಾತನಾಡಿದರು. ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಒಳ್ಳೆ ಗೌರವಯುತವಾಗಿ ನನ್ನನ್ನು ಕಂಡರು. ಮನೆಯ ಒಳಗೆ ಶೂಟಿಂಗ್ ಆಗುತ್ತಿತ್ತು. ಪ್ರಖರವಾದ ಲೈಟ್..ಯಾವುದೋ ಮನೆಯ ದೃಶ್ಯ ಚಿತ್ರೀಕರಣವಾಗುತ್ತಿತ್ತು. ಸುತ್ತಲೂ ಬಹಳಷ್ಟು ಮಂದಿ ನೋಡುತ್ತಿದ್ದರು. ನಾನೂ ಕುತೂಹಲದಿಂದ ಹೋಗಿ ಆ ಜನಗಳ ನಡುವೆ ನಿಂತು ನೋಡುತ್ತಿದ್ದೆ. ಸಿನಿಮಾ ಅಥವಾ ಸೀರಿಯಲ್ ಎಷ್ಟು ಆಸಕ್ತಿದಾಯಕವಾಗಿರಬಹುದೋ ಅದಕ್ಕೆ ತೀರ ತದ್ವಿರುದ್ಧವಾಗಿತ್ತು. ಅದೂ ಒಂದು ಭ್ರಮೆ. ಹತ್ತು ಹದಿನೈದು ನಿಮಿಷ ನೋಡಿದೆ. ಇಷ್ಟೇನಾ ಅಂತ ಅನ್ನಿಸಿದರೂ, ತೆರೆಯ ಮೇಲಿನ ಕಸರತ್ತಿಗೆ ಎಷ್ಟು ಶ್ರಮ ಪಡುತ್ತಿದ್ದಾರೆ ಎಂದು ಅಚ್ಚರಿಯಾಯಿತು. ಹಾಗೇ ಜನರ ನಡುವೆ ನಿಂತು ನೋಡುತ್ತಿರಬೇಕಾದರೆ ನನ್ನ ಹೆಗಲ ಮೇಲೆ ಭಾರವಾದ ಕೈ ಬಂದು ಬಿತ್ತು. ಹತ್ತಿರದ ಪರಿಚಯದವರಂತೆ ಹೆಗಲಿಗೆ ಯಾರು ಕೈ ಹಾಕಿದರೂ ಎಂದು ಗಾಬರಿಯಿಂದ ನೋಡಿದರೆ ಸೀರಿಯಲ್ ನಟಿ ಒಬ್ಬರು ನಗುತ್ತಾ ನಿಂತು ಏನೂ ಕಲ್ಪನೆಯಿಲ್ಲದೆ ಮುಜುಗರವಿಲ್ಲದೆ ಸಹಜವಾಗಿ ಚಿತ್ರೀಕರಣ ನೋಡುತ್ತಿದ್ದರು. ನನಗೇ ಒಂದಷ್ಟು ಮುಜುಗರವಾಗಿ ನಾನು ನಿಧಾನವಾಗಿ ಅಲ್ಲಿಂದ ಜಾಗ ಖಾಲಿ ಮಾಡಿದೆ. ಅವರ ನಡುವೆ ಅಂತಹುದೆಲ್ಲ ಸಹಜ. ಅದರಲ್ಲಿ ತಪ್ಪೇನೂ ಇಲ್ಲ. ಹೆಗಲಿಗೆ ಕೈ ಹಾಕುವುದು, ಕೈ ಕುಲುಕುವುದು ತಬ್ಬಿಕೊಳ್ಳುವುದು ಇದೆಲ್ಲ ಮಡಿವಂತಿಕೆಯನ್ನು ಬಿಟ್ಟು ಬಹಳ ಗೌರವದಿಂದಲೇ ನಡೆಯುವ ವರ್ತನೆಗಳು. ಅದರಲ್ಲಿ ತಪ್ಪೇನು ಇದೆ? ಒಂದೇ ಮನೆಯವರಂತೆ ಈ ವ್ಯವಹಾರ. ನಾವು ಮಾತ್ರ ಭ್ರಮಾಧೀನರಾಗಿ ಯಾವುದೋ ಕಲ್ಪನೆಯಿಂದ ಇದ್ದು ಬಿಡುತ್ತೇವೆ. ತೆರೆಯ ಮೇಲೆ ದೊಡ್ಡ ಕರಿಮಣಿ ಹಾಕಿ ತಲೆತುಂಬಾ ಹೂ ಮುಡಿದು ರೇಷ್ಮೆ ಸೀರೆ ಉಟ್ಟ ಗರತಿ ಅಲ್ಲಿ ಯಾರದೋ ಹೆಗಲಿಗೆ ಕೈಹಾಕಿಯೋ ಅಥವಾ ಹೇಗೋ ಇರುವುದು ನೋಡಿ ನನ್ನ ಭ್ರಮೆಯೂ ಒಂದಷ್ಟು ಕಳಚಿಬಿತ್ತು.
ಇದೊಂದು ಘಟನೆಯಾದರೆ, ಒಂದು ಸಲ ನಾನು ಯಾವುದೋ ಸರಕಾರಿ ಕಛೇರಿಗೆ ಹೋಗಿದ್ದೆ. ಅಲ್ಲಿಗೆ ಯಾರೋ ಒಬ್ಬ ಸಿನಿಮಾ ನಟಿ ಬಂದಿದ್ದರು. ನಾನು ಅಲ್ಲಿ ಸಂದರ್ಶಕರಿಗಿದ್ದ ಬೆಂಚ್ ಮೇಲೆ ಕುಳಿತಿದ್ದೆ. ಸ್ವಲ್ಪ ಹೊತ್ತು ಕಳೆದಾಗ ಯಾರೋ ನನ್ನ ಹತ್ತಿರ ಕುಳಿತಂತೆ ಭಾಸವಾಯಿತು. ಅಷ್ಟೆ ರಪ್ಪ್ ಅಂತ ಕೂದಲು ನನ್ನ ಮುಖಕ್ಕೆ ಬಡಿಯಿತು. ಯಾವುದೋ ಯೋಚನೆಯಲ್ಲಿ ಎಲ್ಲೋ ನೋಡುತ್ತಿದ್ದ ನಾನು ಗಾಬರಿಯಿಂದ ನೋಡಿದರೆ ಸಿನಿಮಾ ನಟಿ ನನ್ನ ಪಕ್ಕದಲ್ಲೇ ಕುಳಿತು ಜಡೆಯನ್ನು ಬೀಸಿ ಹಿಂದಕ್ಕೆ ಮಾಡುವಾಗ ನನ್ನ ಮುಖಕ್ಕೆ ಬಡಿದಿತ್ತು. ನನಗೆ ನಿಜಕ್ಕೂ ಮುಜುಗರವಾಯಿತು. ಔಚಿತ್ಯ ಸಭ್ಯತೆ ಮೀರಿದ ವರ್ತನೆ ಅಂತ ಅನ್ನಿಸಿ ಅವರನ್ನು ನೋಡಿದೆ. ಅವರು ಕಿರುನಗೆಯಿಂದಲೇ ಸಾರಿ ಅಂತ ಸಹಜವಾಗಿ ಹೇಳಿದರು. ಅವರಿಗೆಲ್ಲ ಇದು ಸಾಮಾನ್ಯ.
ಇದು ಸಿನಿಮಾ ಲೋಕ. ಇಲ್ಲಿ ನಮ್ಮ ಕಲ್ಪನೆಯಂತೆ ಯಾವುದೂ ಇರುವುದಿಲ್ಲ. ನಾವು ಮಡಿವಂತಿಕೆ ಎಂದು ಯಾವುದರಿಂದ ದೂರವಿರುತ್ತೇವೆಯೋ ಅಲ್ಲಿ ಅದು ಸಹಜ. ಟಿವಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಅತಿಥಿಗಳನ್ನು ಬರ ಮಾಡಿಕೊಳ್ಳುವ ದೃಶ್ಯ ವಿದ್ದರೆ, ಅಲ್ಲಿ ಪುರುಷರನ್ನು ಕೈ ಕುಲುಕಿ ಕರೆದರೆ ಮಹಿಳೆಯರನ್ನು ತಬ್ಬಿಯೇ ಸ್ವಾಗತಿಸುವುದು. ಅದೇನು ವಿಪರೀತ ಎಂದು ಕಾಣುವುದಲ್ಲ. ಅದೆಲ್ಲ ಸಹಜ. ಹಾಗಿರುವಾಗ ಈಗ ಲೈಂಗಿಕ ದೌರ್ಜನ್ಯ ಎನ್ನುವುದಕ್ಕೆ ಪರಿಧಿ ಯಾವುದು ಎಂದು ಅಚ್ಚರಿಯಾಗುತ್ತದೆ. ಅದನ್ನು ಅನುಭವಿಸುವವರ ಮತ್ತು ವರ್ತಿಸುವವರ ಮನೋಭಾವದಲ್ಲಿರುತ್ತದೆ ಅಂತ ನನ್ನ ಅನಿಸಿಕೆ. ಕೆಲವೊಮ್ಮೆ ಇಂತಹ ವರ್ತನೆಗಳೂ ಎನೂ ನಡೆದಿಲ್ಲ ಎಂಬಂತೆ ಕ್ಷಮಾರ್ಹವಾಗಿರುವಾಗ, ಇನ್ನೊಮ್ಮೆ ಅದು ದೊಡ್ಡ ಅಪರಾಧವೆಂಬಂತೆ ಬದಲಾಗಿಬಿಡಬಹುದು. ಯಾವುದು ತಪ್ಪು ಯಾವುದು ಸರಿ ಅಂತ ನಿರ್ಣಯಿಸುವುದು ಕಷ್ಟ. ಹಾಗಿದ್ದರೂ ಲೈಂಗಿಕ ದೌರ್ಜನ್ಯ ಮಾನವೀಯತೆಯನ್ನು ಮೀರಿದ್ದು. ಅಂತಹ ಮಾನಸೀಕತೆ ಅಕ್ಷಮ್ಯ ಅಪರಾಧ. ಮತ್ತೊಬ್ಬನ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯಾವ ವರ್ತನೆಯಾದರೂ ಅದು ಮಹಾಪರಾಧ. ಈ ದೌರ್ಜನ್ಯ ಮೇಲು ನೋಟಕ್ಕೆ ಮಹಿಳೆಯರಿಗೆ ಮಾತ್ರ ಸೀಮೀತವಾದರೂ ಹಲವು ಸಲ ಪುರುಷರಿಗೂ ಅನ್ಯಾಯವಾಗಿ ತಟ್ಟುವುದಿದೆ. ಹಲವು ಸಲ ಇದು ಮಹಿಳೆಯರಿಗೆ ಅಸ್ತ್ರವಾಗಿ ಪರಿಣಮಿಸಿದ್ದೂ ಇದೆ. ಹಲವು ಘಟನೆಗಳಲ್ಲಿ ವಾಸ್ತವಾದ ಸತ್ಯ ಏನು ಅಂತ ಕೊನೆಯವರೆಗೂ ತಿಳಿದಿರುವುದಿಲ್ಲ. ನಾವು ಭ್ರಮೆಯಲ್ಲಿ ಏನೋ ಒಂದು ತಿಳಿದಿರುತ್ತೇವೆ. ಅಲ್ಲಿ ಇನ್ನೇನೋ ಸತ್ಯವಿರುತ್ತದೆ.
ಸತ್ಯ ಸುಳ್ಳು ಇದರೆ ವಿವೇಚನೆಗೆ ಹೋಗದೆ ಸಿನಿಮಾ ಎಂಬ ಭ್ರಮೆಯಿಂದ ಹೊರಗೆ ಬಂದು ಯೋಚಿಸುವುದು ಉತ್ತಮೆ. ಸಿನಿಮಾ ನೋಡಿದ ನಂತರ ಅದನ್ನು ಕೇವಲ ಸಿನಿಮಾಕ್ಕೆ ಮಾತ್ರ ಸೀಮಿತ ಗೊಳಿಸಬೇಕು. ನಮ್ಮ ನೈಜ ಬದುಕಿಗೆ ಅದನ್ನು ಎಳೆದು ತರುವುದು ಅತ್ಯಂತ ಮೂರ್ಖತನ. ಸಿನಿಮಾ ನಟ ನಟಿಯರ ಖಾಸಗೀ ಬದುಕು ಹೇಗಿದ್ದರೂ ಅದನ್ನು ಅಲ್ಲಿಗೇ ಬಿಟ್ಟು ಬಿಡಬೇಕು. ನಾವು ವಾಸ್ತವವನ್ನು ಒಪ್ಪಿಕೊಂಡು ಬದುಕಬೇಕು. ಮೂರ್ಖರಂತೆ ಭ್ರಮಾಧೀನರಾಗಿ ಮನುಷ್ಯರನ್ನು ದೇವರಂತೆ ಕಾಣುವುದು ನಮ್ಮ ಮಾನಸಿಕ ದೌರ್ಬಲ್ಯವಾಗುತ್ತದೆ. ಸಿನಿಮಾ ಪ್ರಪಂಚ ಕೇವಲ ಸಿನಿಮಾಕ್ಕೆ ಮಾತ್ರ ಸೀಮಿತವಾಗಬೇಕು.
No comments:
Post a Comment