Friday, November 29, 2024

ನಮ ತುಳುವೆರ್ ಮಾರಾಯ್ರೆ

            ಮೊನ್ನೆ "ಪಬ್ಲಿಕ್" ರಂಗಣ್ಣ ಯಾವುದೋ ಕಾರ್ಯಕ್ರಮದಲ್ಲಿ ಹೇಳಿದ್ದರು, ದಕ್ಷಿಣ ಕನ್ನಡದವರಿಗೆ  ನಡುವೆ ಒಂದು ಬಾಂಧವ್ಯ ಇರುತ್ತದೆ. ಜಗತ್ತಿನಲ್ಲಿ ಎಲ್ಲೂ ನೋಡುವುದಕ್ಕೆ ಸಿಗದ ಬಾಂಧವ್ಯ ಅದು. ರಂಗಣ್ಣ ಹೇಳಿಕೇಳಿ ದಕ್ಷಿಣ ಕನ್ನಡದವರಲ್ಲ. ಆದರೂ ಅವರು ಹೇಳಿದುದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ನಮ್ಮೂರ ಬಾಂಧವ್ಯದ ರೀತಿಯೇ ಅದು. ಭಿನ್ನಾಭಿಪ್ರಾಯ ಜಗಳ ಎಲ್ಲ ಇದ್ದರೂ ಅದೊಂದು ನಮ್ಮದು ಎಂಬ ಆತ್ಮಾಭಿಮಾನ ಅತ್ಯಂತ ದೊಡ್ಡದು. ಅದಕ್ಕೆ ಒಂದು ಕಾರಣ ತುಳು ಭಾಷೆ. ಇತ್ತೀಚೆಗೆ ಅದು ತುಂಬ ಗಾಢವಾಗಿ ಬೆಳೆದು ಬಾಂಧವ್ಯವನ್ನು ಬೆಸೆದು ಬಿಟ್ಟಿದೆ.

ಮೊನ್ನೆ ಮಂಗಳೂರಿನ ಕೇಂದ್ರ ಮಾರುಕಟ್ಟೆಗೆ ಹೋಗಿದ್ದೆ, ಅಲ್ಲಿ ಯಾವುದೋ ಅಂಗಡಿಯಲ್ಲಿ ಯಾವುದೊ ವಸ್ತುವಿಗೆ " ಕ್ರಯ ಏತ್ ಯೆ?" ಅಂತ ಕೇಳಿದೆ, ಆತ  " ಅವು ನಲ್ಪ ರೂಪಾಯಿ ಅಣ್ಣ"  ಅಣ್ಣ ಎಂಬ ಉಚ್ಚಾರ ಕೇಳುವಾಗಲೇ ಆತ್ಮೀಯತೆಯ ಒಂದು ಭಾವ, ನಾನು ನಮ್ಮದು ಎಂಬ ಆತ್ಮಾಭಿನದ ಅನುಭವವಾಗುತ್ತದೆ. ಇಲ್ಲಿ ಅಣ್ಣ , ಅಕ್ಕ, ಅಮ್ಮ ಅದು ಸಲೀಸಾಗಿ ಹರಿದು ಬರುವುದು ನೋಡುವಾಗ ತುಳುವೆರ ಸಂಸ್ಕಾರ ವಿಶಿಷ್ಟ ಎನಿಸುತ್ತದೆ. ನೀವು ಊರಿನವರು ಎಂದು ತಿಳಿಯುವುದಕ್ಕಿರುವ ಮಾನದಂಡ ಎಂದರೆ ತುಳು ಭಾಷೆ. ಅಲ್ಲಿ ತೇರ್ಗಡೆಯಾದರೆ ನೀವು ಅಣ್ಣನೋ ಅಕ್ಕನೋ ಅಮ್ಮನೋ ಆಗಿಬಿಡುತ್ತೀರಿ. ಮತ್ತೆ ಚೌಕಾಶಿ ಇಲ್ಲದ ಬೆಲೆಯೂ ನಿರ್ಣಯವಾಗಿಬಿಡುತ್ತದೆ. ವಾಸ್ತವದಲ್ಲಿ ಅಲ್ಪಸ್ವಲ್ಪ ಚೌಕಾಶಿ ಇದ್ದರೂ ಹೆಚ್ಚಿನ ಸಂದರ್ಭದಲ್ಲಿ ತುಳುವರು ಚೌಕಾಶಿಯಲ್ಲಿ ತುಂಬ ಹಿಂದೆ. ಹೇಳುವುದು ಒಂದೇ ಬೆಲೆ ಕೊಡುವುದು ಒಂದೇ ಬೆಲೆ. ತುಳುವರು ಎಂದರೆ ಪ್ರಥಮ ಪ್ರಜೆಯ ಮಾನ್ಯತೆ ರಿಯಾಯಿತಿ ಸಿಗುವುದು ತುಳುವಿನ ಭಾಷಾಪ್ರೇಮದ ಸಂಕೇತ, ಹೊರತು ಅದು ಮೋಸ ವಂಚನೆ ಮಾಡುವುದಕ್ಕಿರುವ ಅವಕಾಶವಂತೂ ಖಂಡಿತಾ ಅಲ್ಲ. ಮಂಗಳೂರು ಎಂದಾಕ್ಷಣ ನಂತರ ಎಲ್ಲ ತುಳುವಿನ ಪಾರಮ್ಯ, ಒಂದೋ ಎರಡು ಕನ್ನಡ ಇರಬಹುದು ಅದರಲ್ಲೂ ಮಾರಾಯ್ರೆ ಎಂಬ  ಮಂಗಳೂರಿನ ಮುದ್ರೆ ಇದ್ದೇ ಇರುತ್ತದೆ.  ತುಳು ಭಾಷಾಪ್ರೇಮ ಅದು ಕನ್ನಡಕ್ಕೂ ಯೋಗದಾನವನ್ನು ಪರೋಕ್ಷವಾಗಿ ಸಲ್ಲಿಸುತ್ತದೆ. ಜಗತ್ತಿನ ಬೇರೊಂದು ಭಾಷೆ ಈ ರೀತಿಯಾಗಿ ಇರಲಾರದು. ತಂದೆಗೆ ಗೌರವಿಸಿದರೆ ಹೇಗೆ ಮಗನಿಗೂ ಸಲ್ಲುವುದೋ ಅದೇ ರೀತಿ ಸಂಯುಕ್ತ ಭಾಷಾ ಪ್ರೇಮ. 

ಮೊನ್ನೆ ಮಂಗಳೂರಿನಲ್ಲಿರುವ   ನಮ್ಮ ಸಂಭಂಧಿಗಳು ಒಬ್ಬರು ಮೂಲತಃ ಇವರು ಶಿವಮೊಗ್ಗದವರು. ಅವರ ನೋವನ್ನು ತೋಡಿಕೊಂಡರು. ಅವರಿಗೆ ತುಳು ಬರುತ್ತಿರಲಿಲ್ಲ. ಕನ್ನಡ ಮಾತನಾಡಿದರೆ....ಕೊಂಡುಕೊಳ್ಳುವ ವಸ್ತುವಿನ ಬೆಲೆಯೇ ಬದಲಾಗಿಬಿಡುತ್ತದೆ. ಇದು ಮೋಸ ಮಾಡಿದಂತೆ ಭಾಸವಾಗುತ್ತದೆ. ನಾನು ಹೇಳಿದೆ ಮೋಸಕ್ಕೂ ರಿಯಾಯಿತಿಗೂ ವೆತ್ಯಾಸವಿದೆ. ಆತ್ಮೀಯತೆಯ ಸಂಬಂಧದ ಗಟ್ಟಿತನವೇ ಈ ರಿಯಾಯಿತಿ ಹೊರತು ಅದು ಮೋಸವಾಗುವ ಸಂದರ್ಭ ಬಹಳ ಕಡಿಮೆ.  ಶುದ್ದ ಕನ್ನಡ ಮಾತನಾಡಿದರೂ ಅರ್ಥವಾಗದ ಕನ್ನಡ ಅಭಿಮಾನಿಗಳಿದ್ದಾರೆ. ಸಾರ್ ಎಂದು ಹೇಳದಿದ್ದರೆ ನಾವು ಬೆಂಗಳೂರಿನಲ್ಲಿ ದ್ವಿತೀಯ ಪ್ರಜೆಗಳಾಗುತ್ತೇವೆ. ಆದರೆ ಇಲ್ಲಿ ಯಾವ ರಿಯಾಯಿತಿಗೂ ಕನ್ನಡ ಯೋಗ್ಯತೆಯನ್ನು ಗಿಟ್ಟಿಸುವುದಿಲ್ಲ. ಸಂಬಂಧಗಳು ಗಟ್ಟಿಯಾಗುವುದಿಲ್ಲ. ಗಟ್ಟಿಯಾಗಬೇಕೆಂಬ ಅವಶ್ಯಕತೆಯೂ ಇಲ್ಲ.

  ನಾವು ಬೆಂಗಳೂರಿಗೆ ಬಂದು ಹಲವಾರು ವರ್ಷಗಳಾಯಿತು. ಮನೆಯ ಹತ್ತಿರ ಇರುವ ಕಿರಾಣಿ ಅಂಗಡಿಗೆ ಹೋದರೆ ಅಂದಿನಿಂದ ಇಂದಿನವರೆಗೂ ಅಂಗಡಿಯಾತನ ವರ್ತನೆ ಏನೂ ವೆತ್ಯಾಸವಿಲ್ಲ. ಪ್ರತಿ ನಿತ್ಯ ಬಂದರೂ ಯಾಂತ್ರಿಕವಾಗಿ ಏನು ಬೇಕು? ಇಷ್ಟಾಯಿತು  ವ್ಯವಾಹರ  ಬಿಟ್ಟರೆ ಬೇರೆ ಮಾತುಕತೆ ಇಲ್ಲ.  ಒಂದು ಬಾರಿ ಕೈಯಲ್ಲಿರುವ ಹಣ ಹತ್ತು ರೂಪಾಯಿ ಕಡಿಮೆಯಾಯಿತು. ಅಷ್ಟೇ ಕಟ್ಟಿದ ಸಾಮಾನಿನಲ್ಲಿ ಒಂದಷ್ಟು ಕಡಿಮೆ ಮಾಡಿಕೊಟ್ಟು ಲೆಕ್ಕ ಚುಕ್ತ ಮಾಡಿದ. ಇಷ್ಟು ವರ್ಷದಿಂದ ಹೋಗುತ್ತೇನೆ ಒಂದು ನಗು ಮುಖದ ರಿಯಾಯಿತಿಯೂ ಇಲ್ಲ.  ನಾನು ಊರಲ್ಲಿರುವಾಗ ಮಂಗಳೂರಿನ ಕೇಂದ್ರ  ಮಾರುಕಟ್ಟೆಯಲ್ಲಿ  ಪ್ರತಿ ಸಲ ಹೋಗುವ ದಿನಸಿ ಅಂಗಡಿ ಇತ್ತು. ನನ್ನ ಮನೆ ಎಲ್ಲಿ ನನ್ನ ಹೆಸರೇನೂ ಯಾವುದೂ ಆತನಿಗೆ ತಿಳಿದಿಲ್ಲ. ಅದೆಷ್ಟೊ ಸಲ ಸಾಲ ಕೊಟ್ಟಿದ್ದಾನೆ. ನಾನು ತೀರಿಸಿದ್ದೇನೆ. ಪ್ರತಿ ಸಲ ಹೋದಾಗ ಎಂಚ ಉಲ್ಲರ್? ಅಂತ ಕ್ಷೇಮ ಸಮಾಚಾರ ಕೇಳುತ್ತಾನೆ. ಲೋಕಾಭಿರಾಮ ಮಾತನಾಡುತ್ತಾನೆ. ಸಾಮಾನು ಕಟ್ಟಿ ದುಡ್ಡು ಚುಕ್ತವಾದರೂ ಹೊರಡಬೇಕಿದ್ದರೆ ಒಂದಷ್ಟು ಹರಟದೇ ಇದ್ದರೆ ನಮಗಿಬ್ಬರಿಗೂ ಸಮಾಧಾನವಾಗುತ್ತಿರಲಿಲ್ಲ. ಅಷ್ಟಾಗಿ ಅವನು ಯಾರೋ? ನಾನು ಯಾರೋ? ದೀಪಾವಳಿಯ ಅಂಗಡಿ ಪೂಜೆಗೆ ಹೇಳುತ್ತಾನೆ. ಹೋಗದೇ ಇದ್ದರೆ ಒಂದು ವಾರ ಕಳೆದರೂ ನನಗೆ ಕೊಡುವ ಪ್ರಸಾದ ಸಿಹಿತಿಂಡಿ ಹಾಗೇ ಇಟ್ಟಿರುತ್ತಿದ್ದ. ಖಾಯಂ ಗಿರಾಕಿಗಳಿಗೆ ಅವನ ಕೊಡುಗೆ ಅದು. ಇಲ್ಲಿ ಅಂಗಡಿ ಪೂಜೆಯ ದಿನ ಹೋದರೂ ಒಂದು ನಗು ಮುಖವೂ ಇಲ್ಲ. ಬೆಂಗಳೂರಿಗರು ಹುಟ್ಟುವುದು ವ್ಯವಹಾರದಲ್ಲಿ ಬದುಕುವುದು ವ್ಯವಹಾರದಲ್ಲಿ. ಅದು ಬಿಟ್ಟರೆ ಬೇರೆ ಏನೂ ಇಲ್ಲ.  ಈಗಲೂ ನಾನು ಮಂಗಳೂರಿಗೆ ಹೋದಾಗ ಮಾರುಕಟ್ಟೆಯ ಆ ಅಂಗಡಿ ಹೋಗುತ್ತೇನೆ. ದಾನೆಗೆ ಬೆಂಗಳೂರುಡು ಬರ್ಸ ಉಂಡಾ? ಚಳಿ ಎಂಚ ಉಂಡು? ಬೊಕ್ಕ ಸೌಖ್ಯನ? ಒಣಸ್ ಆಂಡ?  ಹೀಗಿ ಪುಂಖಾನು ಪುಂಖವಾಗಿ ಸಾಮಾನು ಕಟ್ಟುವ ಮೊದಲೆ ವಿಚಾರಿಸುತ್ತಾನೆ. ನಾನು ಊರು ಬಿಟ್ಟು ಬೆಂಗಳೂರಲ್ಲಿರುವುದು ಆತನಿಗೆ ಬಹಳ ನನಪಿರುತ್ತದೆ. 

ಬೆಂಗಳೂರಲ್ಲಿ ಮೊನ್ನೆ ಯಶವಂತ ಪುರ ಹೋಗುವುದಕ್ಕಾಗಿ ಮನೆಯ ಹತ್ತಿರ "ಆಟೋ"  ಕಾಯುತ್ತಿದ್ದೆ. ನಮ್ಮೂರಲ್ಲಿ ರಿಕ್ಷ ಅಂತಲೇ ಹೇಳುವುದು. ಅದು ಯಾವ ಭಾಷೆಯೋ ಗೊತ್ತಿಲ್ಲ. ನವಂಬರ್ ಕನ್ನಡ ಮಾಸ." ನವಂಬರ್"  ಗೆ ಕನ್ನಡ ಪದ ಇನ್ನೂ ಸಿಕ್ಕಿಲ್ಲ. ರಿಕ್ಷಕಿಂತಲೂ ದೊಡ್ಡ ಕನ್ನಡ ಬಾವುಟ ಹಾಕಿಕೊಂಡು ಒಬ್ಬ ಬಂದ. . ಯಶವಂತ ಪುರ ಹೋಗಪ್ಪ ಅಂದೆ. ಹೋಗುತ್ತಿದ್ದಂತೆ ಕೇಳಿದ "ಸ್ಟ್ರೈಟ್ " ಹೋಗ್ಲಾ "ಸಾರ್" ಅಂತ ಹೇಳಿದ. ಈ "ಸಾರ್" ಬೇರೆ ಅದೊಂದು ಬೆಂಗಳೂರಿಗೆ ಕನ್ನಡ ಪದವೇ ಆಗಿ ಹೋಗಿದೆ.  ಇನ್ನು ಇಳಿವಾಗ ಎಷ್ಟಾಯಿತು ಎಂದು ಕೇಳಿದರೆ..."ಸಿಕ್ಸ್ ಟೀ ರೂಪೀಸ್  ಅಂತ ರಾಗ ಎಳೆದ.   

ನಮ್ಮ ಊರಿನ ಭಾಷಾಪ್ರೇಮ ವ್ಯಕ್ತಿ ಬಾಂಧವ್ಯ ಅದು ದ್ವೇಷದಲ್ಲೂ ಸ್ನೇಹದಲ್ಲೂ ಕಾಣಿಸುತ್ತದೆ. ಅದರ ಒಂದಿಷ್ಟು ಭಾಗ ಇಲ್ಲಿದ್ದರೆ ಕನ್ನಡ ಉಳಿಸುವುದಕ್ಕೆ ಹೋರಾಟ ಮಾಡಬೇಕಿಲ್ಲ. ರೌಡಿಸಂ ಹಪ್ತಾ ಮಾಡಬೇಕಿಲ್ಲ. ಕಟೌಟ್ ಕಟ್ಟಿ ಹಾಲಿನ ಅಭಿಷೇಕ ಮಾಡಬೇಕಿಲ್ಲ. ನಮ್ಮ ಕರಾವಳಿಯಲ್ಲಿ ತುಳು ಮಾತಾಡು ಅಂತ ಯಾರು ದೊಣ್ಣೆ ಹಿಡಿದು ಅಪ್ಪಣೆ ಮಾಡುವುದಿಲ್ಲ. ಬ್ಯಾನರ್ ಕಟ್ಟಿ ಭಾಷಣ ಬಿಗಿಯುವುದಿಲ್ಲ. ಪ್ರತಿ ಕ್ಷಣ ತುಳು ತುಳು ಅಂತ ಜಪಮಾಡುವುದಿಲ್ಲ. ಭಾಷೆಯನ್ನು ಹೇಳಿ ದುಡ್ಡು ಮಾಡುವುದಿಲ್ಲ. ಆದರೂ ತುಳು ಹೃದಯದಿಂದ ಹೃದಯಕ್ಕೆ ನಿತ್ಯ ಯೌವನೆಯಂತೆ  ಹರಿದಾಡುತ್ತದೆ. ಕಾಡಿನ ಮರದಂತೆ ಅದರ ಪಾಡಿಗೆ ಅದು ಬೆಳೆಯುತ್ತದೆ. ಅದಕ್ಕೆ ನೀರು ಗೊಬ್ಬರ ಹಾಕುವ ಅವಶ್ಯಕತೆಯಿಲ್ಲ. ಆದರೂ ನಿತ್ಯ ಹಸಿರಾಗಿ ಭಾಷೆಯ ಜೀವ ನೋಡುವಾಗ ನಮ್ಮ ಕನ್ನಡ ಯಾವಾಗ ಹೀಗೆ ಬದಲಾಗಬಹುದು ಎಂದು ಯೋಚಿಸುವಂತಾಗುತ್ತದೆ. ಬೆಂಗಳೂರಲ್ಲೂ ನಮ್ಮೂರವರಿದ್ದಾರೆ. ಕೇವಲ ತುಳು ಮಾತನಾಡುತ್ತೇನೆ ಅಂತ ತಿಳಿದರೆ ಸಾಕು ಊರುದಕ್ಲು ಅಂತ ಸ್ನೇಹದಿಂದ ವ್ಯವರಿಸುತ್ತಾರೆ. ತುಳು ಜನ ಅಂತ ತಿಳಿದು ಎಲ್ಲಿದ್ದರೂ ಹುಡುಕಿ ಬಂದು ವ್ಯವಹಾರ ಮಾಡುತ್ತಾರೆ. ದುಡ್ದು ಕೇಳುವಾಗ ನನಗೆ ಸಂಕೋಚವಾಗುವುದಿಲ್ಲ. ಎಷ್ಟು ಹೇಳಬೇಕೆಂಬ ಯೋಚನೆ ಮಾಡಬೇಕಿಲ್ಲ. ಯಾಕೆಂದರೆ ಚೌಕಾಶಿ ಇಲ್ಲ. ಅದು ನಮ್ಮೂರಿನ ಜನರ ವಿಶ್ವಾಸ. ಕನ್ನಡ ಕನ್ನಡಿಗರು ಹೀಗೆ ಬದಲಾಗಬೇಕು. ನಮ್ಮೂರು ನೋಡಿ ಕಲಿಯಬೇಕು. 





Sunday, November 24, 2024

ತೀರ್ಥ ರೂಪ

          ಅತ್ತ ಬಾಲ್ಯವೂ ಅಲ್ಲದ ಇತ್ತ ಯೌವನವೂ ಅಲ್ಲದ ಸರಿಯಾದ ಪ್ರೌಢಾವಸ್ಥೆಯಲ್ಲಿ ನನಗೆ ಬ್ರಹ್ಮೋಪದೇಶವಾಯಿತು. ಬ್ರಹ್ಮನ ಅಸ್ತಿತ್ವದ ಉಪದೇಶ. ಬ್ರಹ್ಮತ್ವದ ಕಡೆಗೆ ಮೊದಲ ಹೆಜ್ಜೆ ಊರುವುದಕ್ಕೆ ಒಂದು ಮಾರ್ಗದರ್ಶನ. ಬಾಲ್ಯ ಕಳೆದ ಮಗುವಿಗೆ ಜನ್ಮಕೊಟ್ಟ ಅಪ್ಪ ಮಾಡುವ  ಕರ್ತವ್ಯ. ಈ ಭೂಮಿಯ ಮೇಲೆ ಹುಟ್ಟಿದ ಮನುಷ್ಯ ಜನ್ಮದ ಸಾರ್ಥಕತೆಗೆ ತಂದೆಯಾದವನು ಕೊಡುವ ಮೊದಲ ಉಪದೇಶ ನನಗೂ ಪ್ರದಾನವಾಯಿತು. ಆಗ ಅದರ ಗಂಭೀರತೆಯ ಅರಿವಿರಲಿಲ್ಲ. ಹುಡುಗಾಟದಿಂದ ಕಳಚದ ಅರೆ ಮುಗ್ಧ ಮನಸ್ಸು. ಆಗ ಬ್ರಹ್ಮೋಪದೇಶವನ್ನು ದಯಪಾಲಿಸಿದವರು ಸಂಬಂಧದಲ್ಲಿ ಮಾವನಾದ  ಶ್ರೀ ಅನಂತ ಭಟ್ಟರು. ನನ್ನ ತಾಯಿ ಹಿರಿಯ ಸಹೋದರ. ನನ್ನ ಮಡಿಲಲ್ಲಿ ಕೂರಿಸಿ ಬಟ್ಟೆಯ ಮುಸುಕಿನಲ್ಲಿ ಯಾರಿಗೂ ಕಾಣದಂತೆ ಜನ್ಮ ಸಾರ್ಥಕತೆಯ ರಹಸ್ಯವನ್ನು ಬೋಧಿಸಿದರು.  ಜ್ಞಾನ ಎಂಬುದು ಕತ್ತಲಿನಿಂದ ಬೆಳಕಿನ ಕಡೆಗೆ ಒಯ್ಯುವ ಸಾಧನ. ಬ್ರಹ್ಮೋಪದೇಶ ಅಥವಾ ಜ್ಞಾನೋಪದೇಶದ  ನನಗೆ ಆಗ ಮಾವನವರು ಬೋಧಿಸಿದರು.  ಹುಟ್ಟಿದ ಮಗುವಿಗೆ ಮೊದಲ ಗುರು ಎಂದರೆ ಅದು ಜನ್ಮ ನೀಡಿದ ತಂದೆ.  ಮೋಕ್ಷ ಪ್ರಾಪ್ತಿಗೆ ತಂದೆಯಾದವನು ತೋರಿಸುವ ಜ್ಞಾನದ ಮಾರ್ಗವೇ ಬ್ರಹ್ಮೋಪದೇಶ. ಮುಸುಕನ್ನು ಎಳೆದು ಮಡಿಲಲ್ಲಿ ಕೂರಿಸಿ ಶ್ರೀ ಗಾಯತ್ರೀ ಮಂತ್ರದ  ಒಂದೋಂದೇ ಅಕ್ಷರವನ್ನು ಹೇಳಿಸಿದ ತಂದೆಯ ಸ್ಥಾನದ ಮಾವನ ನೆನಪು ಪ್ರತಿದಿನ ಮಾಡಿಕೊಳ್ಳುತ್ತೇನೆ. ಸಂಧ್ಯಾವಂದನೆಯ ಸಮಯದಲ್ಲಿ ಆರಂಭದಲ್ಲಿ ಗುರುವಿಗೆ ನಮಿಸಿದಾಗ ಒಂದು ಅಜ್ಜನ ನೆನಪಾದರೆ ಜತೆಗೆ ನನ್ನ  ಅನಂತ  ಮಾವನ ನೆನಪಾಗುತ್ತದೆ. ಕೊನೆಯಲ್ಲಿ ಪ್ರವರ ಹೇಳಿ ಗುರು ಅಭಿವಾದನವನ್ನು ಮಾಡಿದಾಗ ಈಗೀಗ ಭಾವ ಪರವಶನಾಗಿ ಆ ಹಿರಿಯ ಚೇತನ ಸ್ವರೂಪಕ್ಕೆ ಮನಸ್ಸಿನಲ್ಲೇ  ಸಾಷ್ಟಾಂಗ ನಮಸ್ಕಾರ ಮಾಡಿ ಬಿಡುತ್ತೇನೆ. ಯಾಕೆಂದರೆ ಆಗ ಅದರ ಮಹತ್ವ ಗೌರವ ಅರಿವಾಗದೇ ಇದ್ದರೂ ಈಗ ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ಧ್ಯಾನಾಸಕ್ತನಾಗಿ ಭಗವಂತನನ್ನು ಪ್ರತ್ಯಕ್ಷಕಾಣುವುದಕ್ಕೆ ಸಾಧ್ಯವಾಗಿದ್ದರೆ ಅದಕ್ಕೆ ಪೂಜ್ಯ ಮಾವ ಉಪದೇಶಿಸಿದ ಬ್ರಹ್ಮೋಪದೇಶವೇ ಕಾರಣ. ಶಿಸ್ತು ಬದ್ಧ ಜೀವನಕ್ಕೆ ಮೊದಲ ಪ್ರೇರಕವೇ ಸಂಧ್ಯಾವಂದನೆ. 

ಬಾಲ್ಯ ಕಳೆದು ಪ್ರೌಢಾವಸ್ಥೆಗೆ ಬರುವಾಗ ಮನಸ್ಸೂ ಪ್ರೌಢವಾಗಿ ಜಗತ್ತಿನ ವಿಚಾರಗಳನ್ನು ತಿಳಿಯುವ ಸಾಮಾರ್ಥ್ಯವನ್ನು ಗಳಿಸುತ್ತದೆ. ಪಾಪ ಪುಣ್ಯದ ಬಗ್ಗೆ ಒಂದಷ್ಟು ಅರಿವು ಮತ್ತು ಅದರ ಜವಾಬ್ದಾರಿಯ ಅರಿವಾಗುತ್ತದೆ. ಅದು ವರೆಗೆ ಮಾಡಿದ ತಪ್ಪುಗಳು ಅಪರಾಧಗಳು ಪೂರ್ಣ ಜ್ಞಾನದಿಂದ ಮಾಡಿದವುಗಳಲ್ಲ. ಅದು ತಿಳಿಯದೇ ಮಾಡಿದ ತಪ್ಪುಗಳು. ಅದು ಕ್ಷಮಾರ್ಹ ಅಪರಾಧಗಳು. ಆದರೆ ಪ್ರೌಢಾವಸ್ಥೆ ಎಂಬುದು ಈ ಪರಿಮಿತಿಯನ್ನು ಮೀರಿದ ಒಂದು ಹಂತ. 

ಮೊದಲೆಲ್ಲ ಪತ್ರ ಬರೆಯುವಾಗ ಒಂದು ಶಿಷ್ಟಾಚಾರವಿತ್ತು. ಅಮ್ಮನಿಗೆ ಮಕ್ಕಳು ಪತ್ರ ಬರೆಯುವುದಾದರೆ ಮಾತೃ ಸ್ವರೂಪ ಎಂದು ಮೊದಲು ಬರೆಯುತ್ತಿದ್ದರು. ಅದರಂತೆ ಅಪ್ಪನಿಗೆ ತೀರ್ಥ ಸ್ವರೂಪ , ಹಾಗೆ ಮಾವನಿಗೆ ಅಥವ ಇನ್ನಿತರ ಹಿರಿಯರಿಗೆ ಬರೆಯುವಾಗ ಪಿತೃ ಸ್ವರೂಪ ಸಮಾನರಾದ , ಮಾತೃ ಸ್ವರೂಪ ಸಮಾನರಾದ,  ಅಂದರೆ ಸ್ಥಾನಕ್ಕೆ ಹೋಲಿಕೆ ಮಾಡಿ ಗೌರವಿಸಿ ಬರೆಯುತ್ತಿದ್ದರು. ಆಪ್ಪ ಅಮ್ಮ ಅಲ್ಲದೇ ಇದ್ದರೂ ಅವರ ಸಮಾನ, ಅದರಂತೆ ಗುರು ಸಮಾನ ಹೀಗೆ ಗೌರವಿಸುವುದು ಪತ್ರಲೇಖನದ ಶಿಷ್ಟಾಚಾರಗಳಲ್ಲಿ ಒಂದು.   ಈಗ ಪತ್ರ ಬರೆಯುವ ಪ್ರಮೇಯವೇ ಇಲ್ಲದಿರುವಾಗ ಈ ಶಬ್ದಗಳ ಪರಿಚಯವೇ ಇಂದಿನ ತಲೆಮಾರಿಗೆ ಇರುವ ಭರವಸೆಯಿಲ್ಲ. ಸಂವಹನ ಮಾಧ್ಯಮ ಬೆಳೆದಂತೆ ಹಳೆಯ ಕ್ರಮಗಳು ಮಾಯವಾಗಿದೆ.  ಅದರೊಂದಿಗೆ ಹಲವು ವಿಚಾರಗಳೂ ಅಪರಿಚಿತವಾಗಿ ಹೋಗಿದೆ. 

ಗೌರವ ಸೂಚಕ ಉಲ್ಲೇಖಗಳಲ್ಲಿ ತೀರ್ಥ ಸ್ವರೂಪ ಎಂಬುದು ಎಲ್ಲದಕ್ಕಿಂತ ವಿಶಿಷ್ಟವಾಗಿ ತೋರುತ್ತದೆ. ತಂದೆಯನ್ನು ತೀರ್ಥ ರೂಪ ಎಂದು ಕರೆದು ಗೌರವಿಸುವ ಅರ್ಥದ ಬಗ್ಗೆ ಯೋಚಿಸಿದಾಗ ಅದು ಅತ್ಯಂತ ಗೌರವ ಪೂರ್ಣ ಸಂಬೋಧನೆ . ಅದು ಕೇವಲ ತಂದೆಯನ್ನು ಸಂಬೋಧಿಸುವುದು ಮಾತ್ರವಲ್ಲ ಅದರ ಜತೆಗೆ ಒಂದು ಆಧ್ಯಾತ್ಮಿಕ ಪ್ರಚೋದನೆ ಜಾಗೃತವಾದಂತೆ ಭಾಸವಾಗುತ್ತದೆ. ತೀರ್ಥ ಎಂದರೆ ಭಗವಂತನ ಪಾದೋದಕ. ಸೂಕ್ಷ್ಮವಾಗಿ ಇದು ಅತ್ಯಂತ ಗಮನಾರ್ಹ. ಭಗವಂತನ ಪಾದೋದಕವನ್ನು ನಾವು ಉದ್ಧರಣೆ ಗಾತ್ರದಲ್ಲಿ ಸ್ವೀಕರಿಸಿ ಸಕಲ ಪಾಪ ಕ್ಷಯವಾದ ತೃಪ್ತಿಯನ್ನು ಅನುಭವಿಸುತ್ತೇವೆ. ಪೂಜ್ಯ ತಂದೆಯನ್ನು ತೀರ್ಥ ಅಂತ ಪರಿಗಣಿಸುವುದರಲ್ಲಿ ಒಂದು ಆಧ್ಯಾತ್ಮಿಕ ಸಂದೇಶವಿದೆ. ತೀರ್ಥ ಎಂದರೆ ಸಕಲ ಪಾಪವನ್ನು ಕಳೆಯುವ ಪವಿತ್ರ ಸಾಧನ.   ಮಗುವಿಗೆ ಹುಟ್ಟಿಸಿದ ತಂದೆಯೇ ಮೋಕ್ಷದ ಹಾದಿ ತೋರಿಸುವ ಮೊದಲ ಗುರು. ಮೋಕ್ಷಕಾರಕ ತೀರ್ಥವನ್ನು ಕರುಣೀಸುತ್ತಾನೆ. ಸಂಧ್ಯಾವಂದನೆಯ ಒಂದೊಂದು ಅಕ್ಷರವೂ ತಂದೆಯಿಂದ ಬೋಧಿಸಲ್ಪಡುತ್ತದೆ.

ಸಂಧ್ಯಾವಂದನೆ, ಪರಮಾತ್ಮನಲ್ಲಿ ಐಕ್ಯವಾಗುವ ಒಂದು ವಿಶಿಷ್ಟವಾದ   ಘಳಿಗೆ. ಕೇವಲ ಮನಸ್ಸು ದೇಹ ಒಟ್ಟುಗೂಡಿ ಯಾವುದೂ ಇಲ್ಲದೆ ಆಚರಿಸುವ ಪರಮಾತ್ಮನನ್ನು ಖಾಸಗಿಯಾಗಿ ಕಾಣಬಲ್ಲ ಅವಕಾಶ. ಇಲ್ಲಿ ಯಾರೂ ಯಾವುದಕ್ಕೂ ಪಾಲುದಾರರಲ್ಲ. ಕೇವಲ ಆಶೀರ್ವದಿಸಿದ ಗುರು, ಕಾಣುವ ಪರಮೇಶ್ವರ ಬೇರೆ ಏನೂ ಇಲ್ಲದ ಒಂದು ಕ್ಷಣ. ಮೂರ್ತಿಯಾಗಲೀ ಪ್ರತಿಮೆಯಾಗಲೀ ಇಲ್ಲದೆ ಪರಮಾತ್ಮನನ್ನು ಕಾಣುವ ಅದ್ಭುತ ಅವಕಾಶ. ಪೂಜೆ ಯಜ್ಞ ಯಾಗಾದಿಗಳಲ್ಲಿ ಇರುವ ಯಾವ ಮಾಧ್ಯಮವೂ ಇಲ್ಲದೆ ಪರಮಾತ್ಮ ದರ್ಶನ ಸಾಧ್ಯವಾಗುತ್ತದೆ. ರೂಪವಿಲ್ಲದ ಗುಣವಿಲ್ಲದ ಭಾವವಿಲ್ಲದ ಈಶ್ವರ ಸ್ವರೂಪವನ್ನು ಮನಸ್ಸಿನಲ್ಲಿ ಕಾಣುವ ಅರ್ಹತೆಯನ್ನು ಗುರು ಕಲ್ಪಿಸಿಕೊಡುತ್ತಾನೆ. ನಮ್ಮದೇ ಭಾವದಲ್ಲಿ ಭಗವಂತನ   ಸ್ವರೂಪವನ್ನು ನಿರ್ಧರಿಸಿ, ಆ ಶ್ರೇಷ್ಠತೆಗೆ ನಮಸ್ಕರಿಸುವ ಉಪದೇಶ ಗುರುವಿನಿಂದ ಲಭ್ಯವಾಗುತ್ತದೆ. ಈ ಮೊದಲ ಗುರುವಿನ ಸ್ಥಾನ ಜನ್ಮ ನೀಡಿದ ಜನಕನಿಗೆ. ಹಾಗಾಗಿಯೇ ಜನಕನೆಂದರೆ ಆತ ತೀರ್ಥ ರೂಪ. 

ಮುಂಜಾನೆಯ ಬ್ರಾಹ್ಮಿ ಮುಹೂರ್ತದಲ್ಲಿ ಪರಿಶುದ್ದನಾಗಿ  ನಿಂತು ಸೂರ್ಯನಿಗೆ ಅರ್ಘ್ಯವನ್ನು ಬಿಡುವಾಗ ಸಕಲವನ್ನು ಭಗವಂತನಿಗೆ ಸಮರ್ಪಿಸಿದ ತೃಪ್ತಿ.   ನೇರ ಕುಳಿತು  ಜಪ ಮಾಡಬೇಕಾದರೆ ಸಪ್ತ ಚಕ್ರಗಳಲ್ಲೂ ಸಂಚರಿಸುವ ಭಗವಂತನ ಚೈತನ್ಯ ಭಗವಂತನ ದರ್ಶನವನ್ನು ಮಾಡಿಸುತ್ತದೆ.  ಆ ಭಗವಂತನ ರೂಪ ಅಂತರಂಗದ ಬೆಳಕಿನಲ್ಲಿ ದರ್ಶನವಾಗುತ್ತದೆ.    ಇದಕ್ಕೆಲ್ಲ ಕಾರಣೀರೂಪ  ಎಂದರೆ ಜನ್ಮ ಕೊಟ್ಟತಂದೆ. ಕೊನೆಯಲ್ಲಿ ಆ ತೀರ್ಥ ರೂಪನಿಗೆ ಅಭಿವಾದನವನ್ನು ಸಲ್ಲಿಸುವಾಗ ಗುರು ಸ್ಮರಣೆಯಿಂದ ಕೃತಜ್ಞತಾ ಭಾವ , ಎಲ್ಲವನ್ನೂ ಪಡೆದ ಆತ್ಮ ತೃಪ್ತಿ ಲಭ್ಯವಾಗುತ್ತದೆ.     

ಅಂದು ಸೋದರ ಮಾವ ತಂದೆಯ ಸ್ಥಾನದಲ್ಲಿದ್ದು ಪವಿತ್ರ ಪಾಣಿಯಾಗಿ ನನ್ನನ್ನು ಮಡಿಲಲ್ಲಿ ಕುಳ್ಳಿರಿಸಿ ಗಾಯತ್ರೀ ಮಂತರದ ಒಂದೋಂದೇ  ಅಕ್ಷರವನ್ನು ಸ್ವರ ಭಾರದ ಸಹಿತ   ಉಪದೇಶ ಮಾಡಿದ್ದು ಪ್ರತಿ ದಿನ ಸಂಧ್ಯಾವಂದನೆ ಮಾಡುವಾಗ ನೆನಪಿಗೆ ಬರುತ್ತದೆ. ಏಕಾಗ್ರತೆಯಲ್ಲಿ ಪರಮೇಶ್ವರನ ಸ್ವರೂಪ ಮನಸ್ಸಿನಲ್ಲೆ ಕಂಡು ಸ್ವತಃ ನಾನೂ ಪರಮೇಶ್ವರನಾಗುವ ಅದ್ಭುತ ಸಮಯ ಅದು ಪ್ರಾತಃ ಕಾಲ. ಇಂತಹ ಅದ್ಭುತ ದರ್ಶನಕ್ಕೆ ಕಾರಣವಾಗುವ ತಂದೆಯ ಉಪದೇಶ ನಿಜಕ್ಕೂ ಪರಮಾತ್ಮನ ಧರ್ಶನವನ್ನು ಮಾಡಿಕೊಡುತ್ತದೆ. ನನ್ನ ಪಾಲಿಗೆ ತೀರ್ಥರೂಪರೆಂದರೆ ಅದೇ ನನ್ನ ಮಾವ.    ಗಾಯತ್ರೀ ಮಂತ್ರೋಪದೇಶದಲ್ಲಿ ತೀರ್ಥ ರೂಪ ಅನ್ವರ್ಥ ಪದವಿಯಾಗಿಬಿಡುತ್ತದೆ.  ಭವದ ಬಂಧನವನ್ನು ಬಿಡಿಸಿ ಮೋಕ್ಷ ಪದವಿಗೇರಿಸುವ ತಂದೆ ಪರಮಾತ್ಮನ ದರ್ಶನ ಭಾಗ್ಯವನ್ನು ಕರುಣಿಸುವ ತಂದೆ ನಿಜಕ್ಕೂ ತೀರ್ಥ ರೂಪ.

ಸಂಧ್ಯಾವಂದನೆ ಎಂದರೆ ಅಲ್ಲಿ ಮೂರ್ತಿ ಇಲ್ಲ, ಪ್ರತಿಮೆ ಇಲ್ಲ. ಪರಿಕರ ಯಾವುದೂ ಇಲ್ಲದೆ, ಲೌಕಿಕ ಬಯಕೆಗಳ ಸಂಕಲ್ಪವಿಲ್ಲದ   ಕೇವಲ ಮನಸ್ಸಿನಿಂದ ಮಾಡುವ ದುರಿತ  ಕ್ಷಯಾರ್ಥದ  ನಿತ್ಯ ಕರ್ಮ.   ಇಲ್ಲಿ ಭಗವಂತನ ನೇರದರ್ಶನ.    ಹೆತ್ತ ತಂದೆಯನ್ನು ಗುರುವನ್ನು ಏಕ ಕಾಲದಲ್ಲಿ ಸ್ಮರಿಸುವ ದಿವ್ಯ ಉಪಾಸನೆ ಸಂಧ್ಯಾವಂದನೆ.                                                                                                                                                                                                                                                                                                                                                                                                                                                                                                                                                                                                        

Monday, November 11, 2024

ನನ್ನ ದೊಡ್ಡಮ್ಮ

ದೊಡ್ಡಮ್ಮ ಅಕ್ಕ ಹೀಗೆ ಈ ಎರಡು ಶಬ್ದಗಳು ಬಾಲ್ಯದಲ್ಲಿ ನಾನು ಅಮ್ಮ ಎಂದು ಹೇಳುವುದಕ್ಕಿಂತಲೂ ಹೆಚ್ಚು  ನನ್ನ ಪಾಲಿಗೆ ಚಿರಪರಿಚಿತ ಶಬ್ದಗಳು. ಬಹುಶಃ ಅಮ್ಮ ಎಂದು ಕರೆಯಲು ಕಲಿಯುವುದಕ್ಕಿಂತಲೂ ಮೊದಲೇ ದೊಡ್ಡಮ್ಮ ಎಂದು ಕರೆಯುವುದನ್ನು ಕಲಿತಿದ್ದೆ ಎನ್ನಬೇಕು. ಯಾಕೆಂದರೆ ಅದೊಂದು ನಮ್ಮ ಸಂಸಾರದ ಹಿರಿಯ ವ್ಯಕ್ತಿಯನ್ನು ಕರೆಯುತ್ತಿದ್ದ ಹೆಸರುಗಳು. ಆ ಹಿರಿಯ ವ್ಯಕ್ತಿ ನಮ್ಮ ಅಮ್ಮನ ತಾಯಿ. ಅಂದರೆ, ನಮ್ಮ ಅಜ್ಜಿ.  ನನ್ನಮ್ಮನ ಸಹಿತವಾಗಿ ಅವರ ಮಕ್ಕಳು ಅವರನ್ನು ಅಕ್ಕ ಎಂದು ಕರೆದರೆ ನಾವು ಮೊಮ್ಮಕ್ಕಳು ಅವರನ್ನು ದೊಡ್ಡಮ್ಮ ಎಂದು ಕರೆಯುತ್ತಿದ್ದೆವು. ಯಾಕೆಂದರೆ ಅವರ ಬದುಕಿನಲ್ಲಿ ಅವರೆಂದೂ ಯಾರಿಂದಲೂ ಅಜ್ಜಿ ಎಂದು ಕರೆಸಿಕೊಳ್ಳಲಿಲ್ಲ. ದೈಹಿಕವಾಗಿ ವ್ಯಕ್ತಿತ್ವದಿಂದಲೂ ಅವರೆಂದೂ ಹದಿ ಹರೆಯದ ಚೇತನವಾಗಿದ್ದರು. ಅವರೇ ನನ್ನ ದೊಡ್ಡಮ್ಮ ರತ್ನಾವತಿ ದೇವಿ. ನಮ್ಮ ಅಜ್ಜನ ಮೊದಲ ಪತ್ನಿ. ಅಂದರೆ ಧರ್ಮ ಪತ್ನಿ. ನಮ್ಮ ದೊಡ್ಡಮ್ಮನ ತವರು‌ಮನೆ ಜಾಲ್ಸೂರಿನ ಕೆಮ್ಮಣ ಬಳ್ಳಿ. ದೊಡ್ಡ ಮನೆತನದ ಹೆಣ್ಣು ನಮ್ನಜ್ಜನ ಮೊದಲ ಪತ್ನಿ.


ದೊಡ್ಡಮ್ಮ  ದೊಡ್ಡ ಅಂತ ಮಾತ್ರ ಬಾಲ್ಯದಲ್ಲಿ ತಿಳಿದು ಕೊಂಡಿದ್ದೆ. ಆದರೆ ಅದು ಬದುಕಿನ ಹಿರಿಯ ಅಮ್ಮನೆಂಬ ಅದ್ಭುತ ವ್ಯಕ್ತಿಯಾಗಬಹುದೆಂಬ ಕಲ್ಪನೆ ಇರಲಿಲ್ಲ. ನಮ್ಮ ಅಜ್ಜನಿಗೆ ಏಳು ಜನ ಮಕ್ಕಳು. ಅದರಲ್ಲಿ ಐದು ಜನ ಗಂಡು ಎರಡು ಹೆಣ್ಣು. ಅದು  ಮೊದಲ ಪತ್ನಿ ದೊಡ್ಡಮ್ಮನಲ್ಲಿ.   ಎರಡು ಜನ ಹೆಮ್ಮಕ್ಕಳಲ್ಲಿ ಹಿರಿಯ ಮಗಳು ನನ್ನಮ್ಮ. ಐದು ಜನ ಗಂಡು ಮಕ್ಕಳು. ಸಂಬಂಧದಲ್ಲಿ ಸೋದರ ಮಾವಂದಿರು. ಈ ಎಳು ಜನ ಮಕ್ಕಳಿಗೂ ಎರಡರಿಂದ ಮೂರು ಮತ್ತೂ ಹೆಚ್ಚು ಮಕ್ಕಳು. ಅಂದರೆ ಅವರೆಲ್ಲರೂ ದೊಡ್ಡಮ್ಮ ಎಂದು ಕರೆಯುವ ಈ ನನ್ನ ದೊಡ್ಡಮ್ಮ. ಇಷ್ಟು ಜನ ಮೊಮ್ಮಕ್ಕಳಲ್ಲಿ ಬಹುಪಾಲು ಜನರ ಬಾಲ್ಯ ,  ಹುಟ್ಟಿನಿಂದ ಅವರ ಆರೈಕೆ ಮಾಡಿದ್ದು ಈ ದೊಡ್ಡಮ್ಮ. ಅಷ್ಟೂ ಜನ ಮೊಮ್ಮಕ್ಕಳನ್ನು  ಮಲ ಮೂತ್ರಾದಿಗಳಿಂದ ಎತ್ತಿ ಆಡಿಸಿದ ಹಿರಿಯ ಕೈ ಇವರದು. ಏಳು ಸೇರಿ ಹದಿನೆಂಟು ಬಾರಿ ಹೆತ್ತಿದ್ದಾರೆ. ಆದರೆ ಹೆತ್ತ ಮಕ್ಕಳಲ್ಲಿ ಬದುಕಿದ ಮಕ್ಕಳು ಏಳು. ಕಾಲು ಜನ್ಮವನ್ನು ಕೇವಲ ಹೆರಿಗೆಯಲ್ಲೇ ಕಳೆದ್ದದ್ದು ಕಲ್ಪಿಸಿದರೆ ಆಶ್ಚರ್ಯವಾಗುತ್ತದೆ. 

ದೊಡ್ಡಮ್ಮ‌ನ ಬಗ್ಗೆ ಬರೆಯದೆ ಇದ್ದರೆ ನನ್ನ ಭಾವನೆಗಳಿಗೆ ಅರ್ಥವೇ ಇಲ್ಲ. ಸರಿ ಸುಮಾರು ಇಪ್ಪತ್ತು ಮೊಮ್ಮಕ್ಕಳ ಪಡೆದ ದೊಡ್ಡ ಮರ ನಮ್ಮ‌ ದೊಡ್ಡಮ್ಮ. ಆಗಿನ  ಸಂಸಾರಗಳ ಲೆಕ್ಕದಲ್ಲಿ ಇದು ದೊಡ್ಡದಲ್ಲ. ಆದರೆ ಜತೆಗೆ ಕಾಡುವ ಬಡತನ ದೊಡ್ಡದು.‌ ಕಷ್ಟ ಬವಣೆಯ ವಿರುದ್ದ ಹೋರಾಡುವುದೇ ಸುಖ ಎಂದುಕೊಂಡ ಮಹಾಮನಸ್ಸಿನ ಜೀವ ಇದು. ಮುಖದಲ್ಲಿ‌ ಮಂದ ಹಾಸ ಇರಬಹುದು ಆದರೆ ಅದಕ್ಕೆ ಪಣವಿಟ್ಟ ಕಷ್ಟ ಅಳತೆಗೆ ಸಿಗುವುದಿಲ್ಲ. ಈಗಿನ ಬದುಕಲ್ಲಿ  ಅದನ್ನು ಕಲ್ಪಿಸಿದರೆ ಅದು ಭಯಾನಕ.  ಬೇಡಿ ಕೊಂಡು ಯಾರೋ ಕರುಣೆಯಿಂದ ಕೊಟ್ಟ ಭತ್ತದ ಕಾಳು ಕುಟ್ಟಿ ಅಕ್ಕಿ ಮಾಡಿ ಅದನ್ನು ಗಂಜಿ‌ಮಾಡಿ ಮೊಮ್ಮಕ್ಕಳ ಹೊಟ್ಟೆ ತಣಿಸುವುದು ಮಾತ್ರವಲ್ಲ ಬತ್ತದ ಹೊಟ್ಟನ್ನು ಸಹ  ಬಿಡದೆ ಕುಟ್ಟಿ ಪುಡಿ ಮಾಡಿ ತೌಡು  ಸೋಸಿ ರೊಟ್ಟಿ ಮಾಡಿ ತಿನಿಸುವುದೆಂದರೆ ಅದೆಂತಹ ಹೋರಾಟ ಇರಬಹುದು. ಬಡತನದಲ್ಲಿ ಮೊಮ್ಮಕ್ಕಳ ಮಲ ಮೂತ್ರಗಳನ್ನಷ್ಟೇ  ಎತ್ತಿ ಒಗೆದದ್ದು. ಬೇರೆ ಎಸೆದದ್ದು ಏನೂ ಇಲ್ಲ.    ಪಾಂಡವರ ತಾಯಿ ಕುಂತಿಯ ನೆನಪಾಗಿ ಬಿಡುತ್ತದೆ. ಪಾಂಡವರಿಗೆ ಭಗವಂತನ ಅಕ್ಷಯ ಪಾತ್ರೆ ಇದ್ದರೆ, ನಮ್ಮ ಸಂಸಾರಕ್ಕೆ ಈ  ಮಹಾತಾಯಿ ಕರಗಳೇ ಅಕ್ಷಯ ಪಾತ್ರೆ. ಹೀಗೆ ಬರೆಯುವಾಗ ಕಣ್ಣು ಮಂಜಾಗಿಬಿಡುತ್ತದೆ. ಅದನ್ನು ಕಾಣುವುದು ಬಿಡಿ ಈಗ ಕಲ್ಪಿಸುವುದಕ್ಕೂ ಭಾವನೆಗಳ ತಡಕಾಟ. 

    ನಮ್ಮಜ್ಜ ದೊಡ್ಡ ಮನೆತನದ ಏಕಮಾತ್ರ ಪುರೋಹಿತ. ಆ ಒಂದು ಪದವಿ ಬಿಟ್ಟರೆ ಮತ್ತೆ ಸ್ವಂತ ಸ್ಥಿರ ವಾಸವು ಇಲ್ಲದ ಅಲೆಮಾರಿ ಪರಿಸ್ಥಿತಿ. ಅವರು ಕಟ್ಟಿದ ಮನೆಗೂ (ಜೋಪಡಿ) ಬದಲಿಸಿದ ಮನೆಗೂ ಲೆಕ್ಕವಿಲ್ಲ. ಆಗ ಪತ್ನಿಯಾಗಿ‌ ಇವರು ಅನುಭವಿಸಿದ  ಬವಣೆಗೂ ಲೆಕ್ಕವಿಲ್ಲ. ಇಷ್ಟು‌ ಮೊಮ್ಮಕ್ಕಳ ಹೆರಿಗೆ ಬಾಣಂತನ ಆರೈಕೆ ಅವರ ಕೈಯಲ್ಲಿ ಮಾಡಿದ್ದಾರೆ .  ಕೆಲವನ್ನು‌ ಕಣ್ಣಾರೆ ಕಂಡಿದ್ದೇನೆ. ಇನ್ನು ನನ್ನ‌ ಮಟ್ಟಿಗೆ ಹೇಳುವುದಾದರೆ  ಇವರ ಆರೈಕೆ  ಬಹುತೇಕ ನನ್ನ ಬಾಲ್ಯದ ಪುಟಗಳನ್ನು ತುಂಬಿಸಿವೆ. 

        ಪುಟ್ಟ ಹಾಳೆಯ ಮಗುವಿನಿಂದ ನನ್ನ ದಿನಗಳು ಅವರ ಜತೆಯೇ ಆರಂಭವಾಗುತ್ತದೆ.  ಶಾಲೆಯಲ್ಲಿ ತಿಳಿದವರು ನನಗೆ ಅಜ್ಜಿ ಸಾಕಿದ ಮಗು ಅಂತ ಹೇಳುತ್ತಿದ್ದರು. ನನ್ನ ಶಿಶುದಿನಗಳನ್ನು ಹೇಳಿದರೆ ನಾನು ಇಂದಿನವರೆಗೂ ಬದುಕಿದ್ದರೆ ಅದಕ್ಕೆ ಅವರ ಯೋಗದಾನ ಸಿಂಹ ಪಾಲು. ಆಗ ನಾನು ರೋಗಗ್ರಸ್ಥ ಶಿಶು. ಒಂದಲ್ಲ ಒಂದು ವ್ಯಾಧಿ ನನ್ನನ್ನು ಬಾಧಿಸುತ್ತಿತ್ತು. ಮಲ‌ಮೂತ್ರಗಳಲ್ಲೇ ಹೊರಳುವ  ನನ್ನನ್ನು ಎತ್ತಿ‌ ಉಪಚರಿಸಿದ ಅವರ ಸುಕ್ಕುಗಟ್ಟಿದ ಕರಸ್ಪರ್ಶ ಇಂದಿಗೂ ನನ್ನ ಶರೀರ ನೆನಪಿಸುತ್ತದೆ.

        ಬಾಲ್ಯದಲ್ಲಿ ನನ್ನ ಆರೈಕೆಯಲ್ಲಿ ಹೆತ್ತಮ್ಮ‌ ಹೈರಾಣಾಗುತ್ತಿದ್ದರು. ಕಷಾಯ ಲೇಹ್ಯಕ್ಕಾಗಿ ಗುಡ್ಡ ತೋಟ ಅಲೆದು ಬರುತ್ತಿದ್ದರು. ಅದು ಒಂದು ಆರೈಕೆಯಾದರೆ, ದೊಡ್ಡಮ್ಮನ  ಆರೈಕೆ ಇನ್ನೊಂದು ಬಗೆ. ಹಾಳೆ ಮಗುವಿಂದ ತೊಡಗಿ ಪ್ರಾಥಮಿಕ ಶಾಲೆಯ ತನಕವೂ ದೊಡ್ಡಮ್ಮ ಸ್ನಾನಾದಿಗಳನ್ನು ಮಾಡುಸುತ್ತಿದ್ದದ್ದು ಈಗಲೂ ನೆನಪಿದೆ. ಮಡಿಲಲ್ಲಿ ಕೂರಿಸಿ ತುತ್ತು ಅನ್ನ ಬಾಯಿಗೆ ಇಡುತ್ತಿದ್ದರು. ಹತ್ತನೇ ವಯಸ್ಸಿನ ತನಕವೂ ಪಕ್ಕದಲ್ಲೇ ಮಲಗಿಸುತ್ತದ್ದರು. ಬಿಗಿಯಾದ ಅವರ ಅಪ್ಪುಗೆಯ ಬಿಸಿ, ಆ ಬಿಸಿ ಉಸಿರು ನರನಾಡಿಯ ರಕ್ತ ಆ ಬಿಸಿಯನ್ನು ಇಂದಿಗೂ ಕಾಪಿಟ್ಟಿದೆ.  

ಬಾಲ್ಯದಲ್ಲಿ ಜ್ವರ ಬಿಡದೆ ಕಾಡುತ್ತಿದ್ದ ವ್ಯಾಧಿಯಲ್ಲಿ ಒಂದು.   ಜ್ವರದಲ್ಲಿ ರಾತ್ರಿ ಮಲಗಿದ್ದ ನನ್ನನ್ನು ಎಬ್ಬಿಸಿ, ಅನ್ನ ಮಜ್ಜಿಗೆ ಈರುಳ್ಳಿ ಚೂರು ಕಲಸಿ ತಿನ್ನಿಸುತ್ತಿದ್ದರು.  ದೊಡ್ಡಮ್ಮನ‌  ಆ ಕೈರುಚಿಯ ನೆನಪಿಗಾಗಿ ಈಗಲೂ ನಾನು ಹಾಗೆ ಉಣ್ಣುತ್ತೇನೆ. ಅನ್ನ ಮಜ್ಜಿಗೆ ಈರುಳ್ಳಿಯ ಜತೆಗಾರಿಕೆ,    ಅದೊಂದು ಅದ್ಬುತ ಸ್ವಾದಾನುಭವ. ಹಲವು ರೋಗದ ಚಿಕಿತ್ಸೆ ಔಷಧ ಆರೈಕೆಯಲ್ಲಿದ್ದ ನನಗೆ ಸಹಜವಾಗಿ ಕಠಿಣ ಪಥ್ಯ ಇರುತ್ತಿತ್ತು. ಅನ್ನ ಹೆಸರು ಬೇಳೆ ನೀರು ಬಿಟ್ಟು ಏನನ್ನು ತಿನ್ನುವಂತಿರಲಿಲ್ಲ. ಆಗ ಉಳಿದವರ ಕಣ್ಣು ಮರೆಸಿ ಮಾಡಿದ ವಿಶೇಷ ತಿಂಡಿ ತಂದು ಕೊಡುತ್ತಿದ್ದರು. ಆ‌ ಮಾತೃ ಹೃದಯದ ವೇದನೆ ಸಂವೇದನೆ ಮರೆಯುವುದಕ್ಕಿಲ್ಲ. ಅಮ್ಮ ನಿಜವಾಗಿ ದೊಡ್ಡಮ್ಮನಾಗುವ ಬಗೆ ಅದು. 

ಬಹಳ ಕೃಶ ದೇಹದ ನಿತ್ರಾಣಿ ನಾನಾಗಿದ್ದೆ. ಆಗ ಮವನೊಂದಿಗೆ ದುಡಿಯುತ್ತಿದ್ದ ದಿನಗಳು. ಅಲ್ಲಿ  ಕೃಶವಾಗಿದ್ದ ನನಗೆ ಬೆಳಗ್ಗೆ ಮೊದಲ ದಿನದ  ಕುಚ್ಚಿಲಕ್ಕಿ ಗಂಜಿ, ಲೋಟತುಂಬ  ಎಮ್ಮೆಯ ಗಟ್ಟಿ ಮೊಸರು ಇದನ್ನು  ತಂದು ಹತ್ತಿರವಿಡುತ್ತಿದ್ದರು. ಅದನ್ನು ತಿಂದು ಒಂದಷ್ಟು ದಷ್ಟ ಪುಷ್ಟನಾಗಿದ್ದೆ.ಈಗಲೂ ನನ್ನ ದೇಹದಲ್ಲಿ ರಕ್ತ ಸಂಚಾರವಿದ್ದರೆ ಅದು ಅವರ ಅನುಗ್ರಹ. ಅದೆಂತಹ ಆರೈಕೆ? ಬಾಲ್ಯದ ಸಕಲ ಚಾಕರಿಯನ್ನು ಮಾಡುತ್ತಿದ್ದ ಅವರು ರಾತ್ರಿ ಜತೆಗೆ ಮಲಗಿಸುತ್ತಿದ್ದರು. ಹಲವಾರು ಕಥೆಗಳನ್ನು ಹೇಳುತ್ತಿದ್ದರು. ಇಪ್ಪತ್ತು ಜನ ಮೊಮ್ಮಕ್ಕಳಲ್ಲಿ ಹೀಗೆ ಹತ್ತಿರ ಮಲಗಿಸುತ್ತಿದ್ದದ್ದು ಒಂದು ನನ್ನನ್ನು ಮತ್ತು ನನ್ನ ನಂತರ ಮಾವನ ಮಗನನ್ನು ಮಾತ್ರ ಮಲಗಿಸಿದ್ದಾರೆ. 

ನಾನು ಬಾಲ್ಯ ಕಳೆದು ದೊಡ್ಡವನಾದಾಗ, ಏನು ಬೇಕಿದ್ದರೂ ನನ್ನ ಬಳಿ ಹೇಳುತ್ತಿದ್ದರು. ತಾಂಬೂಲ ಚರ್ವಣ ಮಾಡುತ್ತಿದ್ದ ದೊಡ್ಡಮ್ಮನಿಗೆ ಕುಣಿಯ ಹೊಗೆಸೊಪ್ಪು ನೆನಪಿನಲ್ಲಿ ತಂದು ಕೊಡುತ್ತಿದ್ದೆ. ಅವರನ್ನು ಪೇಟೆಗೆ ಕರೆದು ಕೊಂಡು ಹೋದರೆ ಹೋಟೇಲಿಗೆ ಕರೆದೊಯ್ದು ಚಹ ತಿಂಡಿ ತಿನ್ನಿಸುತ್ತಿದ್ದೆ. ಹೋಟೆಲಿಗೆ ಹೋಗಿ ತಿನ್ನುವುದನ್ನು ದೊಡ್ಡಮ್ಮ ಬಹಳ ಇಷ್ಟ ಪಡುತ್ತಿದ್ದರು. ಹೀಗೆ ತಿಂದರೆ ಅದನ್ನು ಬಹು ಕಾಲ ನೆನಪಿನಲ್ಲಿಟ್ಟು ಪದೇ ಪದೇ ಹೇಳುತ್ತಿದ್ದರು. ನಾಲ್ಕಾಣೆಯ ತಿಂಡಿಯ ಸ್ಮರಣೆ ನಾವು ಮರೆತರು ದೊಡ್ಡಮ್ಮ ಮರೆಯಲಾರರು. 

ಬಾಲ್ಯ ಕಳೆದು ಯೌವನಾವಸ್ಥೆಯಲ್ಲಿ ನನಗೆ ವಿವಾಹವಾಯಿತು. ಅವರನ್ನು ಕರೆದೊಯ್ಯುವಷ್ಟು ಸೌಕರ್ಯ ನನ್ನಲ್ಲಿರಲಿಲ್ಲ. ಆಗ ಅವರೇ ಸಾಂತ್ವನ ಹೇಳಿ ಹರಸಿದ್ದರು. ಮದುವೆ ಯಾಗಿ ಪತ್ನಿಯನ್ನು ಕರೆದುಕೊಂಡು ಅವರ ಬಳಿಗೆ ಹೋಗಿದ್ದೆ. ನನ್ನ ಪತ್ನಿಯನ್ನು ಬಳಿಯಲ್ಲಿ ಕುಳ್ಳಿರಿಸಿ, ಆಕೆಯ ಕೈಯನ್ನು ತನ್ನ ಸುಕ್ಕುಗಟ್ಟಿದ ಕೈಯಲ್ಲಿ ಬಿಗಿಯಾಗಿ ಹಿಡಿದು ಕೊಂಡು ಸಂತಸದಿಂದ ಕಂಬನಿ ಮಿಡಿದಿದ್ದರು. ಆಕೆಯ ಮಂದಲೆಯನ್ನು ನೇವರಿಸಿ ಎದೆಗೊತ್ತಿ ಆಶೀರ್ವದಿಸಿದ್ದರು. ಈ ರೀತಿ ಪ್ರೀತಿಯನ್ನು ಅನ್ಯರಿಗೆ ತೋರಿಸಿದ್ದನ್ನು ನಾನು ಕಂಡವನಲ್ಲ. ಕೇವಲ ನನ್ನ ಹೆಂಡತಿ ಎಂಬ ಅವರ ಅಭಿಮಾನ ಪ್ರೀತಿ ಅದರ ಆಳ ಕಲ್ಪಿಸುವುದಕ್ಕೆ ಸಾಧ್ಯವಿಲ್ಲ.  ನನಗೆ ಸೇರಿದ್ದ ಎಲ್ಲವನ್ನು ಪ್ರೀತಿಸುವ ಅವರ ಪರಿಯಲ್ಲಿ ಮಿಂದೆದ್ದವನು ನಾನು. 

ಸಾಮಾನ್ಯವಾಗಿ  ನೆನಪುಗಳನ್ನು ಹೊತ್ತು ಬರುವ ಕಂಬನಿಗಳನ್ನು ತಡೆಯುವುದು ಬಹಳ ಕಷ್ಟದ ಕೆಲಸ. ಒಂದೊಂದು ಅಲುಗಾಟದಲ್ಲಿ ಗಂಟೆ ಸೃಷ್ಟಿಸುವ ಧ್ವನಿ ತರಂಗಗಳಂತೆ ಹೃದಯದಲ್ಲಿ ಭಾವನೆಗಳು ಸೃಷ್ಟಿ ಸುವ  ನೆನಪಿನ ತರಂಗಗಳು ಅಂತರ್ಮುಖದ ಚಿಂತೆಗೆ ಎಳೆಯುತ್ತವೆ. ದೊಡ್ಡಮ್ಮ ಕಟ್ಟಿದ ಆ ಘಂಟೆಯ ಧ್ವನಿ ತರಂಗಗಳು ಬದುಕಿನ ತುಂಬ ನಿತ್ಯ ಚೇತನದಂತೆ ಮಾರ್ದನಿಸುತ್ತಾ ಇರುತ್ತವೆ. ಹೆತ್ತಮ್ಮನಿಂದಲೂ ಒಂದು ತೂಕ ಹೆಚ್ಚು ಎನ್ನುವ ಅವರ ಮಮತೆಯನ್ನು ಮರೆಯುವುದಕ್ಕಿಲ್ಲ. 

Friday, November 1, 2024

ಕೊಡಗಿನ ವಸತಿ ವಾಸ.

      ಮುಂಜಾನೆಯ ನಸುಕಿನ ಮಬ್ಬು ಬೆಳಕು. ಅಲ್ಲಲ್ಲಿ ಕೇಳಿಸುವ ಹಕ್ಕಿಗಳ ಕಲರವ. ಮಂಜು ಮುಸುಕಿದ ವಾತಾವರಣ. ಮಾಡಿನಿಂದ ತೊಟ್ಟಿಕ್ಕಿ ಪ್ರಕೃತಿಯ ಮೌನಗಾನಕ್ಕೆ ತಾಳ ಹಾಕುವ ಮಾಡಿನ ನೀರ ಹನಿ, ಇನ್ನೇನು ಸೂರ್ಯೋದಯದ ಮಧುರ ಘಳಿಗೆಗಾಗಿ ಮೊಗ್ಗಾಗಿ ಮುದುರಿ ಕುಳಿತ ಬಣ್ಣ ಬಣ್ಣದ ಹೂವು...ಹಚ್ಚ ಹಸುರಿನ ಅಂಗಳಕ್ಕೆ ಬಣ್ಣದ ರಂಗೋಲಿ ಇಟ್ಟ ಅಂದಈ ವರ್ಣನೆ ಯಾವುದೋ ಕಾದಂಬರಿಯ ದೃಶ್ಯವರ್ಣನೆಯಲ್ಲ. ಕೊಡಗಿನ ದಟ್ಟ ಕಾನನದ ನಡುವೆ ಇದನ್ನು ಅನುಭವಿಸುವುದೆಂದರೆ ಅದೊಂದು ಭಾಗ್ಯಇದನ್ನು ಅನುಭವಿಸುವುದಕ್ಕೆ ಯಾರ ಮನಸ್ಸು ತವಕಿಸುವುದಿಲ್ಲ? ನನ್ನ ಬಹಳ ದಿನದ ಕನಸಾಗಿತ್ತು. ಅದು ಇಂದು ನನಸಾಯಿತು.


















ಎಂದಿನಂತೆ ನಾನು ಮುಂಜಾನೆ ಬೇಗ ಏಳುವವನು. ಮೊದಲ ದಿನವೇ ಮರುದಿನದ ಯೋಗಾಭ್ಯಾಸದ ಘಳಿಗೆಯನ್ನು ನಿರೀಕ್ಷಿಸುತ್ತಿದ್ದೆ.ರಾತ್ರಿ ಕಳೆದು ಎಚ್ಚರವಾದಾಗ ಮುಂಜಾನೆ ನಸುಕಿನ ಮೂರುವರೆ ಘಂಟೆಯ ಸಮಯ. ಎದ್ದು ಹೊರಬಂದೆ. ನಿನ್ನೆ ಜತೆಯಲ್ಲಿ ಬಂದ ಹೆಂಡತಿ ಮಕ್ಕಳು ಎಲ್ಲರೂ ಗಾಢ ನಿದ್ದೆಯಲ್ಲಿದ್ದರು. ನಿನ್ನೆಯ ದಿನದ ಪ್ರಯಾಣ ಪ್ರಯಾಣದ ಆಯಾಸ, ಆನಂತರ ಹೊಸ ಪರಿಸರದಲ್ಲಿ ರಾತ್ರಿ ತಡವಾಗಿ ಮಲಗಿದ್ದರು. ಏಳುವುದಕ್ಕೆ ಇನ್ನೂ ತಡವಿದೆ.

ನಾವೆಲ್ಲ ನಿನ್ನೆ ತಾನೆ ಕೊಡಗಿನ ಒಂದು ದಿನದ ವಸತಿ ವಾಸಕ್ಕೆ ಬಂದಿದ್ದೆವು.  ಸುತ್ತಲು ನೀರವ ಮೌನ ಬೇರೆ ಹೇಳಬೇಕಿಲ್ಲ. ಅಬ್ಬಾ ಏನು ಮೌನ? ಮೈ ಪರಚಿದರೂ ಅದು ದೂರಕ್ಕೆ ಕೇಳುವ ಗಾಢ ಮೌನ.  ಹಾಗೆ ಎದುರಿನ ಅಂಗಳದಲ್ಲಿನ ಹುಲ್ಲಿನ ಮೇಲೆ ಹೆಜ್ಜೆ ಊರಿದೆ. ತಲೆ ಎತ್ತಿ ಮೇಲೆ ನೋಡಿದೆ ಆಕಾಶದಲ್ಲಿ ನಕ್ಷತ್ರಗಳು ವಿದಾಯ ಹೇಳುವುದಕ್ಕೆ ಸಜ್ಜಾಗಿದ್ದವು. ಎಂದು ಸೂರ್ಯ ಉದಯಿಸುವುದೋ ಎಂಬ ನಿರೀಕ್ಷೆಯಲ್ಲಿ ಬಾನು ಕಣ್ಣು ಮಿಟುಕಿಸುವಂತೆ ನಕ್ಷತ್ರಗಳು ಮಿನುಗುತ್ತಿದ್ದವು. ಕೈಯಗಲಿಸಿ ಬಾನಿನತ್ತ ಕೈ ಚಾಚಿ ಆಹಾ ಎಂದು ಸಂತೋಷದಿಂದ ಉದ್ಗರಿಸಿದೆ. ಸುತ್ತಲಿನ ಕಾಫಿ ತೋಟದ ಕಾಡು, ದೊಡ್ಡ ದೊಡ್ಡ ಮರಗಳು, ಶ್ವೇತಕುಮಾರನಿಗೆ ಒಲಿದ ಮೂರು ಘಳಿಗೆಯ ಸ್ವರ್ಗ ಸುಖದಂತೆ ನನಗೆ ಒಂದು ದಿನದ ಸ್ವರ್ಗದ ಸುಖ.

ಇನ್ನು ಸಮಯ ಕಳೆಯುವುದು ಸರಿಯಲ್ಲ. ಇರುವ ಕೆಲವು ಘಳಿಗೆಯಲ್ಲಿ ಎಲ್ಲವನ್ನು ಸವಿಯಬೇಕು. ನೇರ ಸ್ನಾನದ ಮನೆಗೆ ತೆರಳಿದೆ. ದೊಡ್ಡ ತಾಮ್ರದ ಮಾತ್ರೆಯಲ್ಲಿ ತಣ್ಣನೆಯ ನೀರು ತುಂಬಿತ್ತು. ಮೊಗೆ ಮೊಗೆದು ಸುರಿದು ಯಥೇಚ್ಛವಾಗಿ ಸ್ನಾನ ಮಾಡಿದ. ಮೈಮನ ಎಲ್ಲ ಅರಳಿತು. ಸ್ನಾನ ಮುಗಿಸಿ ಮನೆಯ ಎದುರಿನ ಜಗಲಿಯಲ್ಲಿ ಸೂರ್ಯನಿಗೆ ಅರ್ಘ್ಯವನ್ನು ಸಲ್ಲಿಸಿ ಜಪಾನುಷ್ಠಾನಕ್ಕೆ ಅಣಿಯಾಗಿ ಹಾಗೇ ಕಣ್ಣು ಮುಚ್ಚಿ ಧ್ಯಾನಾಸಕ್ತನಾದೆ. ಏಕಾಂತ ಧ್ಯಾನದ ಸುಖ ಅದೂ ಈ ನಿರ್ಜನ ಪ್ರದೇಶದಲ್ಲಿ ಅದರ ಅನುಭವ ವಿವರಿಸುವುದಕ್ಕೆ ಶಬ್ದಗಳು ಸಿಗುತ್ತಿಲ್ಲ. ದೀರ್ಘ ಉಸಿರು ಘಾಢವಾದಂತೆ ನಾನು ನನ್ನ ದೇಹ ಎಲ್ಲವನ್ನೂ ಮರೆತು ಪ್ರಕೃತಿಯಲ್ಲಿ ಒಂದಾದ ಅನುಭವ. ನಾನೆಲ್ಲಿದ್ದೇನೆ ಹೇಗಿದ್ದೇನೆ ಎಲ್ಲವನ್ನೂ ಮರೆತು ಅಂತರಂಗದ ಕಣ್ಣಿಗೆ ಕಾಣುವ ದೃಶ್ಯಗಳು ಅದನ್ನು ಸವಿಯುತ್ತಾ ತಲ್ಲೀನನಾಗಿಬಿಟ್ಟೆ. ಪದ್ಮಾಸನ ಹಾಕಿ ನೇರವಾಗಿ ಕುಳಿತು ಚಕ್ರಧ್ಯಾನದಲ್ಲಿ ಏಳು ಚಕ್ರಗಳೂ ಸ್ಪಂದಿಸಬೇಕಾದರೆ ಆ ಪರಶಿವನೇ ನಾವಾದಂತೆ ಆ ಅದ್ವೈತ ಅನುಭವಕ್ಕೆ ಮನಸ್ಸು ಶರೀರ ಮರೆತು ಅದೆಷ್ಟು ಹೊತ್ತು ಕುಳಿತುಕೊಂಡೆನೋ ಪರಿವಿಲ್ಲ. ಅದೆಲ್ಲೋ ದೂರದಲ್ಲಿ ಮುಂಜಾವಿನ ಕೋಳಿ ಕೊಕ್ಕೊ...ಅಂತ ಕೂಗಿದಾಗ ಇಹಲೋಕದ ಸ್ಪಂದನೆ ಉಂಟಾಯಿತು. ಎಂತಹ ಪ್ರಕೃತಿ ವೈವಿಧ್ಯ? ಹೀಗೆ ಕೋಳಿ ಕೂಗಿದ್ದನ್ನು ಕೇಳದೆ ಕಾಲ ಬಹಳವಾಗಿತ್ತು. ನಮ್ಮ ಬೆಂಗಳೂರಿನ ಮನೆಯ ಬೀದಿಯ ತುದಿಯಲ್ಲಿ ಕೋಳಿ ಮಾಂಸದ ಅಂಗಡಿ ಇದೆ.   ವಾರಾಂತ್ಯದ ದಿನ ಈ ಕೋಳಿ ಅಂಗಡಿಯಲ್ಲಿ ಮರಣ ಆಕ್ರಂದನವನ್ನು ಇಡುವ ಕೋಳಿಯ ಆರ್ತನಾದವೆಲ್ಲಿ? ಪ್ರಕೃತಿಯನ್ನು ಎಬ್ಬಿಸುವ ಈ ಸುಮಧುರ ಸುಪ್ರಭಾತವೆಲ್ಲಿ? ಅಚ್ಚರಿಯಾಗುತ್ತದೆ.           

ಈ ಮೌನ ಬೆಂಗಳೂರಿನಲ್ಲಿ ಸಿಗುವುದಕ್ಕೆ ಸಾಧ್ಯವಿಲ್ಲ. ಏಕಾಂತ ಧ್ಯಾನದ ಹಂಬಲದಲ್ಲಿ ಎಷ್ಟೇ ಬೇಗ ಎದ್ದರೂ ನಮ್ಮ ಬೀದಿಯಲ್ಲಿ ಯಾರಾದರೋಬ್ಬರು ಎದ್ದಿರುತ್ತಾರೆ. ಬೀದಿಯಲ್ಲಿ ಯಾರಾದರೂ ಒಬ್ಬ,  ಕಫ ಕಟ್ಟಿದ ನಿಲ್ಲದ ಖೆಮ್ಮು, ಕ್ಯಾಕರಿಸಿ ಉಗಿಯುವುದು, ಪಕ್ಕದಮನೆಯವನ ಗೋಡೆಯನ್ನು ಭೇದಿಸಿ ಬರುವ ಆತನ ಗೊರಕೆ, ನಾಯಿಗಳ ಬೊಗಳುವಿಕೆ, ಮುಂಜಾನೆ ಕೆಲಸಕ್ಕೆ ತೆರಳುವವನ ಸ್ಟಾರ್ಟ್ ಆಗದ ದ್ವಿಚಕ್ರವಾಹನ, ಕಫ ಕಟ್ಟಿದ ಖೆಮ್ಮಿನಂತೆ ವಾಹನದ ಸದ್ದು....ಧ್ಯಾನ ಮಾಡಬೇಕಿದ್ದರೆ ಸತ್ವ ಪರೀಕ್ಷೆಯಾಗಿಬಿಡುತ್ತದೆ. ಪಂಚೇದ್ರಿಯಗಳನ್ನು ಸ್ತಬ್ಧ ಗೊಳಿಸಿದಾಗ ಅಂತರಂಗದ ಇಂದ್ರಿಯ ಜಾಗ್ರತವಾಗುತ್ತದೆ. ಆದರೆ ಇಲ್ಲಿ ಪಂಚೇದ್ರಿಯಗಳು ಸುಪ್ತವಾಗುವುದೇ ಇಲ್ಲ. ಕಣ್ಣು ಕಿವಿ ಮೈ ಮನ ಎಲ್ಲವೂ ಕೆರಳಿ ಇನ್ನೇನು ಇದೆ ಎಂದು ಅರಸುವಾಗ ಏಕಾಂತದ ಏಕಾಗ್ರತೆ ಸಾಧ್ಯವಾಗುವುದಿಲ್ಲ. ನಮ್ಮ ಮನೆಯಲ್ಲೇ ಆದರೂ ಯಾರಾದರೋಬ್ಬರು ಏಳುತ್ತಾರೆ. ಶೌಚಾಲಯದ ಬಾಗಿಲು ತೆರೆಯುವುದು, ಬಕೆಟ್ ಕ್ಲೋಸೆಟ್ ನಳ್ಳಿಯ ನೀರಿನ ಸದ್ದು....ಬೆಂಗಳೂರು ಇರುವುದೇ ಸದ್ದಿನ ಜತೆಗೆ. ಒಂದು ದಿನ ಎಲ್ಲಾದರೂ ಹೋಗಬೇಕು. ಯಾರೂ ಇಲ್ಲದಲ್ಲಿ ಮೈಮರೆತು ಚಕ್ರಧ್ಯಾನದಲ್ಲಿ ಸಪ್ತ ಚಕ್ರಗಳನ್ನು ಮುಟ್ಟಿ ತಡವಬೇಕು, ಇದು ಬಹುದಿನದ ಆಶೆ.  ಇಂದು ಅದು ನನಸಾಗಿದೆ. ಧ್ಯಾನದಿಂದ ಎಚ್ಚತ್ತು ಕಣ್ಣು ತೆರೆದಾಗ ಮಳೆ ಹನಿಯುತ್ತಾ ಇದೆ. ನಿನ್ನೆ ರಾತ್ರಿ ಅಂಗಳದಲ್ಲಿ ಹಾಕಿದ ಬೆಂಕಿಗೆ ಮಳೆ ನೀರು ಬೀಳುವಾಗ ಹೊಗೆ ಏಳುತ್ತದೆ. ಕೊಡಗಿನ ಮಳೆ ಎಂದ್ರೆ ಕೇಳಬೇಕೇ? ಅದೇನು ಮಳೆ. ನಾನು ಬಂದಿದ್ದೇನೆ ಎಂದು ನನ್ನ ನೋಡುವುದಕ್ಕೆ ಇದು ಸುರಿಯುತ್ತಿರುವಂತೆ ಭಾಸವಾಯಿತು. ಕೆಲವು ವರ್ಷಗಳ ಹಿಂದೆ ಉಜಿರೆಯ ಸಮೀಪ ನೇತ್ರಾವತಿ ನದಿಯ ತಟದ ದಿಡುಪೆಯಲ್ಲಿ ನನ್ನ ಮಾವನ ಮಗಳ ಮನೆಯಲ್ಲಿ ಇದೇ ರೀತಿ ತಂಗಿದ್ದೆ. ಮುಂಜಾನೆ ಅದ್ಬುತ ಯೋಗಾಭ್ಯಾಸದ ಘಳಿಗೆಯನ್ನು ಕಳೆದಿದ್ದೆ. ಬದುಕಿನಲ್ಲಿ ಇನ್ನು ಅಂತಹ ದಿನ ಬರಲಾರದು ಎಂದು ಭಾವಿಸಿದ್ದೆ. ಆ ದಿನವನ್ನು ಮತ್ತೆ ನೆನಪು ಮಾಡುವಂತೆ ಕೊಡಗಿನಲ್ಲಿ ಕಳೆದ ಘಳಿಗೆ ಇದು.

             ಮನುಷ್ಯ ಪ್ರಾಣಿಗಳು ಎಲ್ಲಿಯೂ ಸಂಚರಿಸಬಲ್ಲವು. ಆದರೆ ಮರ ಗಿರಿ ಶಿಖರಗಳು ಚಲಿಸಲಾರವು. ಮರ ಗಿಡಗಳು ಜೀವ ಇದ್ದರೂ ನಿಂತಲ್ಲೇ ನಿಲ್ಲಬೇಕಾಗುತ್ತದೆ.ತಲೆ ಎತ್ತಿ ಕಂಡಷ್ಟು ಜಗವನ್ನು ಕಂಡು ಗಾಳಿ ನೀರನ್ನು ಸೇವಿಸುತ್ತಿದ್ದರೆ, ಅದಕ್ಕೂ ಜಗತ್ತು ನೋಡಬೇಕು ಎಂದು ಆಶೆ ಬರಬಾರದೇ.? ಹಾಗಾಗಿ ಮನುಷ್ಯ ಮರ ಗಿಡಗಳ ಬಳಿ ಹೋಗಬೇಕು. ಗಿರಿ ಶಿಖರ ಹತ್ತಿ ಸುಳಿಯಬೇಕು.  ಮರ ಗಿಡಗಳು ಮನುಷ್ಯನನ್ನು ಕಾಣುವ ಬಗೆಯದು. ಹಾಗಾಗಿ ನಾವೂ ಈ ಗಿರಿ ಶಿಖರ ಕಾನನ ಸುತ್ತಬೇಕು. ಅವುಗಳ ಉಸಿರ ಜತೆ ನಮ್ಮ ಉಸಿರು ಬೆಸೆಯಬೇಕು. ಈ ಪ್ರಕೃತಿಯಲ್ಲಿ ಒಂದಾಗಿ ಬೆರೆಯಬೇಕು.  ನಾವಿದ್ದಲ್ಲಿ ಮರ ಬರಲಾರವು. ಅವುಗಳಿದ್ದಲ್ಲಿಗೆ ನಮ್ಮ ಹೆಜ್ಜೆ ಸಾಗಬೇಕು.  ಹಾಗಾಗಿ ಈ ಬಾರಿ ಕೊಡಗಿಗೆ ನಮ್ಮ ಪ್ರಯಾಣ.    

      ಮಳೆಗಾಲದಲ್ಲಿ  ಒಂದು ಇರುಳು ಕೊಡಗಿನ  ಮನೆಯಲ್ಲಿ ಅತಿಥಿಯಾಗಿ ಕಳೆಯಬೇಕು ಎಂದು ಬಹಳ ದಿನಗಳಿಂದ ಬಯಸಿದ್ದೆ. ನನ್ನ ಬಯಕೆಯನ್ನು ಮಗನಲ್ಲಿ ಹಲವು ಸಲ ವ್ಯಕ್ತ ಪಡಿಸಿದ್ದೆ. ಒಂದು ದಿನ ಸಮಯಾವಕಾಶ ಮಾಡಿ ಹೋಗುವ. ಮಡಿಕೇರಿಯಲ್ಲಿ ಈಗ ವಸತಿ ವಾಸ (home stay) ಬಹಳಷ್ಟು ಇದೆ. ಎಲ್ಲವನ್ನು ಮರೆತು ಒಂದು ದಿನ ಇದ್ದು ಬರೋಣ ಅಂತ ಲ್ಲಾ  ಸಿದ್ದತೆ ಮಾಡಿದೆವು. ನವರಾತ್ರಿಗೆ ನಮ್ಮೂರಿನ ಆವಳ ಮಠ ದುರ್ಗಾ ಪರಮೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವ ಮುಗಿಸಿ ಬರುವಾಗ ಕೊಡಗಿನಲ್ಲಿ ತಂಗಿ ಬರಬೇಕು ಎಂದು ಬಯಸಿದ್ದೆವು. ಆದರೆ ಕಾರಣಾಂತರದಿಂದ ದೇವಸ್ಥಾನಕ್ಕೆ ಹೋಗುವುದು ಸಾಧ್ಯವಾಗಲಿಲ್ಲ. ಹೋಂ ಸ್ಟೇಗೆ ಮೊದಲೇ ಮುಂಗಡ ಪಾವತಿ ಮಾಡಿ ಕಾದಿರಿಸಿದ್ದನ್ನು ಬಿಡುವಂತಿರಲಿಲ್ಲ. ಅಂತೂ ಅದನ್ನು ಒಂದು ವಾರಕ್ಕೆ ಮುಂದಕ್ಕೆ ಹಾಕಿ ವಾರಾಂತ್ಯದಲ್ಲಿ ಹೊರಟು ಬಿಟ್ಟೆವು.

       ತಣ್ಣಗಿನ ತಂಗಾಳಿ ಬೀಸುತ್ತಿದ್ದರೆ ಕೊಡಗಿನ ಪ್ರಯಾಣ ಅದ್ಭುತವಾಗಿರುತ್ತದೆ. ಸಾಯಂಕಾಲದ ಹೊತ್ತಿಗ ಶುಂಠಿ ಕೊಪ್ಪದ ಗರಗಂದೂರಿನಲ್ಲಿರುವ ಸಿಲ್ವರ್ ಕ್ರೀಕ್ ಹೋಂ ಸ್ಟೇಗೆ ತಲುಪಿದೆವು. ವಸತಿಯ ಮಾಲಿಕ ಶ್ರೀಕೃಷ್ಣ ಅವರು ನಮಗಾಗಿ ಕಾದಿದ್ದರು. ಅತ್ಯಂತ ಶುಚಿಯಾದ ಮನೆ ಪರಿಸರ. ಎಲ್ಲ ಅಚ್ಚುಕಟ್ಟಾಗ ಆಕರ್ಷಣೀಯವಾಗಿತ್ತು. ಸಾಯಂಕಾಲ, ಪರಿಸರ ಬಹಳ ಶಾಂತವಾಗತ್ತು.  ಸುತ್ತಮುತ್ತಲೂ ಕಾಡು, ಕಾಫಿ ತೋಟ ಮಣ್ಣಿನ ರಸ್ತೆ. ಪಕ್ಕಾ ಹಳ್ಳಿಯ ಪರಿಸರ. ಬಳಿಯಲ್ಲೇ ಕಾವೇರಿ ನದಿ ತುಂಬಿ ಹರಿಯುತ್ತಿತ್ತು. ಪಾನೀಯ ಉಪಹಾರ ಸೇವನೆಯ ನಂತರ ನಮ್ಮನ್ನು ನದೀ ತಟಕ್ಕೆ ಕರೆದು ಕೊಂಡು ಹೋದರು. ಅಲ್ಲಿ ಪಾರ್ಮ್ ಹೌಸ್ ತರಹ ಜೋಪಡಿ ಇತ್ತು. ವಾಲಿ ಬಾಲ್ ಆಡುವುದಕ್ಕಾಗಿ ಒಂದು ಕೆಸರು ಗದ್ದೆ ನಿರ್ಮಿಸಿದ್ದರು. ಇನ್ನೊಂದು ಕಡೆ ಮಳೆ ಸ್ನಾನಕ್ಕೆ ವ್ಯವಸ್ಥೆ. ತುಂಬಿ ಹರಿಯುವ ಕಾವೇರಿನದಿಯ ಪ್ರದೇಶ ನೋಡುವುದಕ್ಕೆ ಬಹಳ ಸುಂದರವಾಗಿತ್ತು. ಶುಭ್ರವಾದ ಗಾಳಿ ಸೇವಿಸುತ್ತಿದ್ದಂತೆ ಬೆಳಗಿನಿಂದ ಸುತ್ತಾಡಿದ ದಣಿವು ಕ್ಷಣಮಾತ್ರದಲ್ಲಿ ಮಾಯವಾಗಿತ್ತು.

ಕತ್ತಲೆಯಾಗುತ್ತಿದ್ದಂತೆ ಮೌನ ಮತ್ತಷ್ಟು ಗಾಢವಾಯಿತು. ಜೀರುಂಡೆಗಳ ಸದ್ದು ಆಕಾಶದಲ್ಲಿ ನಕ್ಷತ್ರ...ಅಬ್ಬಾ ಇವುಗಳನ್ನು ಅನುಭವಿಸದೇ ದಿನಗಳು ಬಹಳಷ್ಟು ಕಳೆದಿತ್ತು. ಕತ್ತಲು ಕವಿಯುತ್ತಿದ್ದಂತೆ ಅಂಗಳದಲ್ಲಿ ದೊಡ್ಡ ಬೆಂಕಿಯನ್ನು ಉರಿಸಿದರು. ಬಹಳ ಚಳಿಇದ್ದುದರಿಂದ ಅದರ ಸುತ್ತಲೂ ಕುರ್ಚಿ ಹಾಕಿ ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ದರು.ಶ್ರೀಕೃಷ್ಣ ಬಹಳ ಮಾತುಗಾರರು. ಎನಾದರೂ ಒಂದು ವಿಷಯ ತೆಗೆದು ಮಾತನಾಡುತ್ತಲೇ ಇರುತ್ತಿದ್ದರು. ಮಡಿಕೇರಿಯ ಚರಿತ್ರೆಯ ಬಗ್ಗೆ ಹೇಳಿದರು ಮೊದಲು ಈ ಪ್ರದೇಶ ಮುದ್ದುಕೇರಿಯಾಗಿತ್ತು. ಟಿಪ್ಪುವಿನ ಕಾಲದಲ್ಲಿ ಗೇರಿಲ್ಲ ಯುದ್ದಕ್ಕೆ ಇದು ಪ್ರಸಿದ್ದಿಯಾಗಿತ್ತು. ಇಲ್ಲಿನ ಜನರು ಸ್ವ ರಕ್ಷಣೆಗಾಗಿ ಗೇರಿಲ್ಲ ಯುದ್ದದಿಂದ ಧಾಳಿಯಿಡುತ್ತಿದ್ದ ಟಿಪ್ಪುವಿರುದ್ದ ಹೋರಾಡಿದ್ದರು. ಮುದ್ದುನಾಯಕ ಎಂಬವನು ಇಲ್ಲಿ ಹೊಸತಾಗಿ ಊರನ್ನು ನಿರ್ಮಿಸಿದ್ದ. ಅದನ್ನು ನಂತರ ಮುದ್ದು ಕೇರಿ ಎಂದು ಕರೆಯುತ್ತಿದ್ದರು. ಮುದ್ದುಕೇರಿ ನಂತರ ಮಡಿಕೇರಿಯಾಗಿ ಕರೆಯಲ್ಪಟ್ಟ್ಟಿತು. ಇಂಗ್ಲೀಷರಿಗೆ ಮಡಿಕೇರಿ ಎಂದು ಕರೆಯುವುದು ಕಷ್ಟ ಅಗಿ ಮರ್ಕೇರ ಎಂದು ಕರೆಯುತ್ತಿದ್ದರು. ಟಿಪ್ಪುವಿನ ಧಾಳಿ, ಬಳಿಕ ನರಮೇಧ ಹೀಗೆ ಕೊಡಗಿನ ಚರಿತ್ರೆಯನ್ನು ಮನಮುಟ್ತುವಂತೆ ವಿವರಿಸಿದರು. ಇಂದಿಗೂ ಕೊಡಗಿನ ಜನ ಟಿಪ್ಪುವಿನ ಬಗ್ಗೆ ವಿರೋಧವನ್ನೆ ವ್ಯಕ್ತ ಪಡಿಸುತ್ತಾರೆ.

ಕೊಡಗಿನಲ್ಲಿ ರಾತ್ರೆ ಕಳೆಯುವುದು ಒಂದು ಮಧುರವಾದ ಅನುಭವ. ಎಲ್ಲದಕ್ಕಿಂತಲು ಆ ಶಾಂತವಾದ ಪರಿಸರ. ವಾಹನದ ಸದ್ದು ಗದ್ದಲವಿಲ್ಲ. ಜನರ ಸಂಚಾರವಿಲ್ಲ. ನನ್ನ ಬಹಳ ದಿನದ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದೆ. ರಾತ್ರಿಗೆ ರುಚಿಯಾದ ಬಿಸಿಯಾದ ಚಪಾತಿ ಪಾಲಕ್ ಮಸಾಲ, ಅನ್ನ ಸಾರು ಪಲ್ಯ ಮಾಡಿದ್ದರು. ಬಹಳ ರುಚಿಯಾಗಿತ್ತು. ನಾನು ಬೇಗನೇ ರಾತ್ರಿ ಊಟ ಮಾಡುವ ಅಭ್ಯಾಸದವನು. ಸಾಯಂಕಾಲವೇ ಊಟ ಮುಗಿಸಿದೆ. ತಣ್ಣೀರ ಸ್ನಾನ ಮಾಡಿ ಅಂಗಳದಲ್ಲಿನ ಬಡಬಾಗ್ನಿಯ ಉರಿಯ ಬಳಿಯಲ್ಲಿ ಕೊಡಗಿನ ಚರಿತ್ರೆ ಕೇಳುತ್ತಿದ್ದಂತೆ ಯಾವುದೋ ಕಾದಂಬರಿಯ ದೃಶ್ಯ ಓದಿದ್ದು ನೆನಪಿಗೆ ಬಂತು.


ನಮಗಾಗಿ ಬೆಚ್ಚಗಿನ ಶುಭ್ರವಾದ ಹಾಸಿಗೆ ಮಂಚ ವ್ಯವಸ್ತೆ ಮಾಡಲಾಗಿತ್ತು.  ತಣ್ಣಗಿನ ವಾತಾವರಣದಲ್ಲಿ ಬೆಚ್ಚಗೆ ಹೊದ್ದು ಮಲಗಿದವನಿಗೆ ಬಹಳ ಹೊತ್ತು ಆ ಆನುಭವ ಸವಿಯುವುದಕ್ಕೆ ನಿದ್ದೆ ಬಿಡಲಿಲ್ಲ. ಗಾಢವಾದ ನಿದ್ದೆ ಆವರಿಸಿತು. ಹಾಗೆ ಮಲಗಿದವನು ನಿದ್ದೆಯಲ್ಲಿ ಕಂಡ ಕನಸಿಗಿಂತ ಮಿಗಿಲಾಗಿ ನನಸನ್ನು ಅನುಭವಿಸುತ್ತಿದ್ದೆ. ಪ್ರಕೃತಿಯ ಮಡಿಲಲ್ಲಿ ಯೋಗಾಭ್ಯಾಸ ಎಂದರೆ ಅದೊಂದು ದಿವ್ಯ ಅನುಭವ. ಅದೂ ಏಕಾಂಗಿಯಾಗಿದ್ದರೆ ಸ್ವರ್ಗ ಸುಖ.ಅಂತೂ ಬಹಳ ದಿನದ ಬಯಕೆ ಈಡೇರಿತ್ತು.

 

ಸೂರ್ಯೋದಯವಾಗಿ ಹೊತ್ತು ಕಳೆದಾಗ ಮನೆ ಮಂದಿ ಎದ್ದರು. ಸುತ್ತಲಿನ ಕಾಡಿನಲ್ಲಿ ಮಂಜಿನ ಮುಸುಕಿನಲ್ಲಿ ಒಂದೆರಡು ಹೆಜ್ಜೆ ಇಟ್ಟು ಆ ಸುಖವನ್ನು ಅನುಭವಿಸಿದೆವು. ವಸತಿ ವಾಸದ ಶ್ರೀಕೃಷ್ಣಮತ್ತವರ ಸಹಾಯಕರು  ಉಪಾಹಾರಕ್ಕೆ ಸಿದ್ದತೆ ಮಾಡುತ್ತಿದ್ದರು. ಸುತ್ತಲೂ ಯಾವ ಪ್ರದೇಶ ನೋಡುವುದಿದೆ ಎಂದು ಲೆಕ್ಕ ಹಾಕುವಾಗ ಅವರೇ ಹೇಳಿದರು, ಹತ್ತಿರದಲ್ಲೇ ಕೋಟೇಗುಡ್ಡ ಇದೆ. ಅಲ್ಲಿಗೆ ಹೋಗಬಹುದು. ಸರಿ ಉಪಾಹಾರಕ್ಕಿಂತ ಮೊದಲು ಕೋಟೆಗುಡ್ಡ ನೋಡುವುದಕ್ಕೆ ಕಾರನ್ನೇರಿ ಹೊರಟೆವು. ಮಳೆ ಹನಿಯುತ್ತಾ ಇತ್ತು. ಕೊಡಗಿನ ರಸ್ತೆಯಲ್ಲಿ ಮಳೆ ಹನಿಯ ಪ್ರಯಾಣದ ಅನುಭವ. 

ಕೋಟೇ ಗುಡ್ಡ ಸಾಕಷ್ಟು ಎತ್ತರದ ಪ್ರದೇಶ. ಜನಸಂಚಾರ ಅಷ್ಟೇನೂ ಇಲ್ಲ.  ಅಲ್ಲೊಂದು ದೊಡ್ಡ ಬಂಡೆಗಲ್ಲು. ಅದರ ಬುಡದಲ್ಲೇ ಗುಡಿ. ಗುಡಿ ಎಂದು ಹೇಳುವುದಕ್ಕೇನು ಇಲ್ಲ,ಒಂದಷ್ಟು ಮೆಟ್ಟಲು, ತಡೆ ಬೇಲಿ ಅಷ್ಟೇ. ಅಲ್ಲಿ ಬಂಡೆಗಲ್ಲಿಗೇ ಪೂಜೆ. ಬಂಡೆಗಲ್ಲಿನ ಬುಡದಲ್ಲಿ ಒಂದು ಗುಹೆ ಇದೆ. ಅಲ್ಲಿಗೆ ಹೋಗದಂತೆ ಗೇಟ್ ಗೆ ಬೀಗ ಹಾಕಿದ್ದರು. ದೂರದಿಂದಲೇ ನೋಡಿದೆವು. ಸುತ್ತಲೂ ಹಸುರು ಹಾಸಿದಂತೆ. ನಡುವೆ ಈ ಬಂಡೆಗಲ್ಲು ಅಲ್ಲಿಂದ ಕೆಳಗಿಳಿಯುವುದಕ್ಕೇ ಮನಸ್ಸಿಲ್ಲ. ಯಾರೂ ಇಲ್ಲದೇ ಇದ್ದುದರಿಂದ ನಾವು ಐದು ಜನ ಆ ಪ್ರಕೃತಿಯ ಸೊಬಗನ್ನು ಆಸ್ವಾದಿಸಿದೆವು. ಗುಡ್ಡದ ಸುತ್ತೆಲ್ಲ ಓಡಾಡಿದೆವು. ಹೊತ್ತು ಕಳೆದದ್ದೇ ಗೊತ್ತಿಲ್ಲ.  ಜನ ಸಂಚಾರ ಇಲ್ಲ ಎಂದರೂ ಹಲವು ಕಡೆ ಮದ್ಯದ ಬಾಟಲಿ ನೀರಿನ ಬಾಟಲ್ ಎಸೆದಿದ್ದರು. ಹೇಳುವುದಕ್ಕೆ ಅದು ಬೋಟ್ಲಪ್ಪ ಈಶ್ವರ ದೇವಾಲಯ. ಆದರೆ ಹಲವು ಕಡೆ ಬಾಟಲ್ ಗಳೇ ತುಂಬಿದ್ದದ್ದು ವಿಪರ್ಯಾಸ. ಅದೂ ದೊಡ್ಡ ದೊಡ್ಡ ಐದು ಲೀಟರ್ ನ ಬಾಟಲ್ ಗಳು. ಅದನ್ನು ನೋಡಿದಾಗ ಬಹಳ ಖೇದವೆನಿಸಿತು. ಪಶ್ಚಿಮ ಘಟ್ಟದಲ್ಲಿ ಎಲ್ಲೇ ಹೋಗಲಿ, ಚಿಕ್ಕ ಮಗಳೂರು ಶ್ರಿಂಗೇರಿಯ ಎಲ್ಲ ರಸ್ತೆಯ ಇಕ್ಕೆಲಗಳಲ್ಲೂ ಬಾಟಲಿಗಳು ಇರುವಂತೆ ಇಲ್ಲೂ ಬಾಟಲಿಗಳು. ಇದನ್ನು ನಿಯಂತ್ರಿಸುವುದು ಯಾರು? ನಗರದ ನಾಗರೀಕರೆನಿಸಿಕೊಂಡವರ ವಿದ್ಯಾವಂತರ  ಕೃತ್ಯ ಇದು.
















ಕೊಡಗು ಸೇರಿದಂತೆ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಎಲ್ಲವೂ ಪ್ರವಾಸೀ ಸ್ಥಳಗಳು. ಗುಡ್ಡ ಕಾನನ ತೀರ್ಥ ಕ್ಷೇತ್ರಗಳು ಒಂದಕ್ಕಿಂತ ಒಂದು ಮಿಗಿಲು. ಪ್ರತಿಯೊಬ್ಬರಿಗೂ ಅಲ್ಲಿ ಹೋಗಿ ನೋಡುವ ತವಕ ಇರುತ್ತದೆ. ಹಳ್ಳಿ ಜೀವನ ದೂರಾಗಿ ನಗರ ಜೀವನದಲ್ಲಿ ಬದುಕು ಕಂಡುಕೊಂಡವರ ಸಂಖ್ಯೆಯೇ ಅಧಿಕ. ಹಾಗಾಗಿ ಇಲ್ಲಿಗೆ ಪ್ರವಾಸ ಬರುವವರ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಕೊಡಗು ಮಲೆನಾಡಿನಾದ್ಯಂತ ವಸತಿ ವಾಸ (ಹೋಂ ಸ್ಟೇ)ಗಳು ಇದೇ ಕಾರಣಕ್ಕೆ  ಹೆಚ್ಚಾಗುತ್ತಿವೆ. ಈ ಪ್ರವಾಸೀ ಸ್ಥಳಗಳನ್ನು ಕೇವಲ ನಾವು ಮಾತ್ರ ನೋಡಿದರೆ ಸಾಲದು. ಇಲ್ಲಿಗೆ ಭೇಟಿ ಕೊಡುವಾಗ ಈ ಪ್ರಜ್ಞೆ ನಮಗಿರಬೇಕು. ಅಥವಾ ನಾವೇ ಮತ್ತೊಮ್ಮೆ ಹೋಗುವಂತೆ ಇದನ್ನು ಉಳಿಸಿಕೊಳ್ಳಬೇಕು. ಹಳ್ಳಿಯಲ್ಲಿ ಗುಡ್ಡಕ್ಕೆ ಶೌಚಕ್ಕೆ ಹೋದಂತೆ ಇವತ್ತು ಇಲ್ಲಿಗೆ ನಾಳೆ ಅಲ್ಲಿಗೆ ಅಂತ ನಾವೇ ಸ್ಥಳವನ್ನು ಬದಲಿಸಿ ನಮ್ಮ ಕರ್ಮವನ್ನು ನಾವೇ ಅನುಭವಿಸಬೇಕು. ಹೋಂ ಸ್ಟೇ ಗಳು ಇದೇ ಬಗೆಯಲ್ಲಿ ಈ ಪ್ರದೇಶವನ್ನು ಕಾಪಾಡಬೇಕು. ಆಯಾಯ ಪ್ರದೇಶ ಆಚಾರ ಸಂಸ್ಕೃತಿಗಳು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ನಾವು ಉಳಿದು ಕೊಂಡ ಸಿಲ್ವರ್ ಕ್ರೀಕ್ ಹೋಂ ಸ್ಟೇ ಚೆನಾಗಿತ್ತು. ಇದರ ಮಾಲಿಕರಿಗೆ ಇದರ ಬಗ್ಗೆ ಕಾಳಜಿ ಇರುವುದು ಈ ಪರಿಸರವನ್ನು ಕಾಣುವಾಗ ಅರಿವಿಗೆ ಬಂತು. ಎಲ್ಲವನ್ನು ಹಾಗೇ ಉಳಿಸಿಕೊಂಡು ಇದ್ದುದರಲ್ಲೇ ಸುಸಜ್ಜಿತ ವಸತಿ ಸೌಕರ್ಯವನ್ನು ಒದಗಿಸುತ್ತಿದ್ದಾರೆ. ಉತ್ತಮ ಉಪಚಾರ ಮಾತುಕತೆ ಎಲ್ಲವೂ ಮತ್ತೊಮ್ಮೆ ಭೇಟಿಕೊಡುವಂತೆ ಪ್ರೇರೇಪಿಸುತ್ತದೆ. 

            ಹೆಚ್ಚಿನ ಹೋಂ ಸ್ಟೇಗಳು ಮಾಂಸಾಹಾರಕ್ಕೆ ಆದ್ಯತೆಯನ್ನು ಕೊಡುತ್ತವೆ. ಬರುವ ಪ್ರವಾಸಿಗಳ ಅಭಿರುಚಿಯೂ ಇದಕ್ಕೆ ಕಾರಣ, ಮದ್ಯ ಮಾಂಸ ಇನ್ನೂ ಏನೇನೋ ಅಭಿರುಚಿಗೆ ತಕ್ಕಂತೆ ವ್ಯವಸ್ಥೆಯಾಗುವುದು ಸಾಮಾನ್ಯ. ಹಾಗಾಗಿ  ಇದೆಲ್ಲದಕ್ಕೆ ಪರ್ಯಾಯವಾಗಿ ಉತ್ತಮ  ಸುಸಂಸ್ಕೃತ ವಸತಿ ಸೌಕರ್ಯಗಳೂ ಸಿಗುವಂತಾಗಬೇಕು. 

            ಒಂದು ಉತ್ತಮ ಅನುಭವಕ್ಕೆ ಕಾರಣವಾಗಿ ಜತೆಗೆ ಉತ್ತಮ ವಸತಿ ಆಹಾರ ಮತ್ತು ಎಲ್ಲಕ್ಕಿಂತ ಉತ್ತಮ ಪರಿಸರವನ್ನು ಒದಗಿಸಿದ ಸಿಲ್ವರ್ ಕ್ರೀಕ್ ಮಾಲಿಕ ಮತ್ತು ಸಿಬ್ಬಂದಿಗಳಿಗೆ ವಿಶೇಷ ಧನ್ಯವಾದವನ್ನು ಸಲ್ಲಿಸಿದೆವು. ಒಂದು ದಿನದ ಸ್ವರ್ಗ ಸುಖದ  ಕೊಡಗಿನ ಪ್ರವಾಸದ ಸುಖಾನುಭವ ಮರೆಯಲಾಗುವುದಿಲ್ಲ.