Friday, November 1, 2024

ಕೊಡಗಿನ ವಸತಿ ವಾಸ.

      ಮುಂಜಾನೆಯ ನಸುಕಿನ ಮಬ್ಬು ಬೆಳಕು. ಅಲ್ಲಲ್ಲಿ ಕೇಳಿಸುವ ಹಕ್ಕಿಗಳ ಕಲರವ. ಮಂಜು ಮುಸುಕಿದ ವಾತಾವರಣ. ಮಾಡಿನಿಂದ ತೊಟ್ಟಿಕ್ಕಿ ಪ್ರಕೃತಿಯ ಮೌನಗಾನಕ್ಕೆ ತಾಳ ಹಾಕುವ ಮಾಡಿನ ನೀರ ಹನಿ, ಇನ್ನೇನು ಸೂರ್ಯೋದಯದ ಮಧುರ ಘಳಿಗೆಗಾಗಿ ಮೊಗ್ಗಾಗಿ ಮುದುರಿ ಕುಳಿತ ಬಣ್ಣ ಬಣ್ಣದ ಹೂವು...ಹಚ್ಚ ಹಸುರಿನ ಅಂಗಳಕ್ಕೆ ಬಣ್ಣದ ರಂಗೋಲಿ ಇಟ್ಟ ಅಂದಈ ವರ್ಣನೆ ಯಾವುದೋ ಕಾದಂಬರಿಯ ದೃಶ್ಯವರ್ಣನೆಯಲ್ಲ. ಕೊಡಗಿನ ದಟ್ಟ ಕಾನನದ ನಡುವೆ ಇದನ್ನು ಅನುಭವಿಸುವುದೆಂದರೆ ಅದೊಂದು ಭಾಗ್ಯಇದನ್ನು ಅನುಭವಿಸುವುದಕ್ಕೆ ಯಾರ ಮನಸ್ಸು ತವಕಿಸುವುದಿಲ್ಲ? ನನ್ನ ಬಹಳ ದಿನದ ಕನಸಾಗಿತ್ತು. ಅದು ಇಂದು ನನಸಾಯಿತು.


















ಎಂದಿನಂತೆ ನಾನು ಮುಂಜಾನೆ ಬೇಗ ಏಳುವವನು. ಮೊದಲ ದಿನವೇ ಮರುದಿನದ ಯೋಗಾಭ್ಯಾಸದ ಘಳಿಗೆಯನ್ನು ನಿರೀಕ್ಷಿಸುತ್ತಿದ್ದೆ.ರಾತ್ರಿ ಕಳೆದು ಎಚ್ಚರವಾದಾಗ ಮುಂಜಾನೆ ನಸುಕಿನ ಮೂರುವರೆ ಘಂಟೆಯ ಸಮಯ. ಎದ್ದು ಹೊರಬಂದೆ. ನಿನ್ನೆ ಜತೆಯಲ್ಲಿ ಬಂದ ಹೆಂಡತಿ ಮಕ್ಕಳು ಎಲ್ಲರೂ ಗಾಢ ನಿದ್ದೆಯಲ್ಲಿದ್ದರು. ನಿನ್ನೆಯ ದಿನದ ಪ್ರಯಾಣ ಪ್ರಯಾಣದ ಆಯಾಸ, ಆನಂತರ ಹೊಸ ಪರಿಸರದಲ್ಲಿ ರಾತ್ರಿ ತಡವಾಗಿ ಮಲಗಿದ್ದರು. ಏಳುವುದಕ್ಕೆ ಇನ್ನೂ ತಡವಿದೆ.

ನಾವೆಲ್ಲ ನಿನ್ನೆ ತಾನೆ ಕೊಡಗಿನ ಒಂದು ದಿನದ ವಸತಿ ವಾಸಕ್ಕೆ ಬಂದಿದ್ದೆವು.  ಸುತ್ತಲು ನೀರವ ಮೌನ ಬೇರೆ ಹೇಳಬೇಕಿಲ್ಲ. ಅಬ್ಬಾ ಏನು ಮೌನ? ಮೈ ಪರಚಿದರೂ ಅದು ದೂರಕ್ಕೆ ಕೇಳುವ ಗಾಢ ಮೌನ.  ಹಾಗೆ ಎದುರಿನ ಅಂಗಳದಲ್ಲಿನ ಹುಲ್ಲಿನ ಮೇಲೆ ಹೆಜ್ಜೆ ಊರಿದೆ. ತಲೆ ಎತ್ತಿ ಮೇಲೆ ನೋಡಿದೆ ಆಕಾಶದಲ್ಲಿ ನಕ್ಷತ್ರಗಳು ವಿದಾಯ ಹೇಳುವುದಕ್ಕೆ ಸಜ್ಜಾಗಿದ್ದವು. ಎಂದು ಸೂರ್ಯ ಉದಯಿಸುವುದೋ ಎಂಬ ನಿರೀಕ್ಷೆಯಲ್ಲಿ ಬಾನು ಕಣ್ಣು ಮಿಟುಕಿಸುವಂತೆ ನಕ್ಷತ್ರಗಳು ಮಿನುಗುತ್ತಿದ್ದವು. ಕೈಯಗಲಿಸಿ ಬಾನಿನತ್ತ ಕೈ ಚಾಚಿ ಆಹಾ ಎಂದು ಸಂತೋಷದಿಂದ ಉದ್ಗರಿಸಿದೆ. ಸುತ್ತಲಿನ ಕಾಫಿ ತೋಟದ ಕಾಡು, ದೊಡ್ಡ ದೊಡ್ಡ ಮರಗಳು, ಶ್ವೇತಕುಮಾರನಿಗೆ ಒಲಿದ ಮೂರು ಘಳಿಗೆಯ ಸ್ವರ್ಗ ಸುಖದಂತೆ ನನಗೆ ಒಂದು ದಿನದ ಸ್ವರ್ಗದ ಸುಖ.

ಇನ್ನು ಸಮಯ ಕಳೆಯುವುದು ಸರಿಯಲ್ಲ. ಇರುವ ಕೆಲವು ಘಳಿಗೆಯಲ್ಲಿ ಎಲ್ಲವನ್ನು ಸವಿಯಬೇಕು. ನೇರ ಸ್ನಾನದ ಮನೆಗೆ ತೆರಳಿದೆ. ದೊಡ್ಡ ತಾಮ್ರದ ಮಾತ್ರೆಯಲ್ಲಿ ತಣ್ಣನೆಯ ನೀರು ತುಂಬಿತ್ತು. ಮೊಗೆ ಮೊಗೆದು ಸುರಿದು ಯಥೇಚ್ಛವಾಗಿ ಸ್ನಾನ ಮಾಡಿದ. ಮೈಮನ ಎಲ್ಲ ಅರಳಿತು. ಸ್ನಾನ ಮುಗಿಸಿ ಮನೆಯ ಎದುರಿನ ಜಗಲಿಯಲ್ಲಿ ಸೂರ್ಯನಿಗೆ ಅರ್ಘ್ಯವನ್ನು ಸಲ್ಲಿಸಿ ಜಪಾನುಷ್ಠಾನಕ್ಕೆ ಅಣಿಯಾಗಿ ಹಾಗೇ ಕಣ್ಣು ಮುಚ್ಚಿ ಧ್ಯಾನಾಸಕ್ತನಾದೆ. ಏಕಾಂತ ಧ್ಯಾನದ ಸುಖ ಅದೂ ಈ ನಿರ್ಜನ ಪ್ರದೇಶದಲ್ಲಿ ಅದರ ಅನುಭವ ವಿವರಿಸುವುದಕ್ಕೆ ಶಬ್ದಗಳು ಸಿಗುತ್ತಿಲ್ಲ. ದೀರ್ಘ ಉಸಿರು ಘಾಢವಾದಂತೆ ನಾನು ನನ್ನ ದೇಹ ಎಲ್ಲವನ್ನೂ ಮರೆತು ಪ್ರಕೃತಿಯಲ್ಲಿ ಒಂದಾದ ಅನುಭವ. ನಾನೆಲ್ಲಿದ್ದೇನೆ ಹೇಗಿದ್ದೇನೆ ಎಲ್ಲವನ್ನೂ ಮರೆತು ಅಂತರಂಗದ ಕಣ್ಣಿಗೆ ಕಾಣುವ ದೃಶ್ಯಗಳು ಅದನ್ನು ಸವಿಯುತ್ತಾ ತಲ್ಲೀನನಾಗಿಬಿಟ್ಟೆ. ಪದ್ಮಾಸನ ಹಾಕಿ ನೇರವಾಗಿ ಕುಳಿತು ಚಕ್ರಧ್ಯಾನದಲ್ಲಿ ಏಳು ಚಕ್ರಗಳೂ ಸ್ಪಂದಿಸಬೇಕಾದರೆ ಆ ಪರಶಿವನೇ ನಾವಾದಂತೆ ಆ ಅದ್ವೈತ ಅನುಭವಕ್ಕೆ ಮನಸ್ಸು ಶರೀರ ಮರೆತು ಅದೆಷ್ಟು ಹೊತ್ತು ಕುಳಿತುಕೊಂಡೆನೋ ಪರಿವಿಲ್ಲ. ಅದೆಲ್ಲೋ ದೂರದಲ್ಲಿ ಮುಂಜಾವಿನ ಕೋಳಿ ಕೊಕ್ಕೊ...ಅಂತ ಕೂಗಿದಾಗ ಇಹಲೋಕದ ಸ್ಪಂದನೆ ಉಂಟಾಯಿತು. ಎಂತಹ ಪ್ರಕೃತಿ ವೈವಿಧ್ಯ? ಹೀಗೆ ಕೋಳಿ ಕೂಗಿದ್ದನ್ನು ಕೇಳದೆ ಕಾಲ ಬಹಳವಾಗಿತ್ತು. ನಮ್ಮ ಬೆಂಗಳೂರಿನ ಮನೆಯ ಬೀದಿಯ ತುದಿಯಲ್ಲಿ ಕೋಳಿ ಮಾಂಸದ ಅಂಗಡಿ ಇದೆ.   ವಾರಾಂತ್ಯದ ದಿನ ಈ ಕೋಳಿ ಅಂಗಡಿಯಲ್ಲಿ ಮರಣ ಆಕ್ರಂದನವನ್ನು ಇಡುವ ಕೋಳಿಯ ಆರ್ತನಾದವೆಲ್ಲಿ? ಪ್ರಕೃತಿಯನ್ನು ಎಬ್ಬಿಸುವ ಈ ಸುಮಧುರ ಸುಪ್ರಭಾತವೆಲ್ಲಿ? ಅಚ್ಚರಿಯಾಗುತ್ತದೆ.           

ಈ ಮೌನ ಬೆಂಗಳೂರಿನಲ್ಲಿ ಸಿಗುವುದಕ್ಕೆ ಸಾಧ್ಯವಿಲ್ಲ. ಏಕಾಂತ ಧ್ಯಾನದ ಹಂಬಲದಲ್ಲಿ ಎಷ್ಟೇ ಬೇಗ ಎದ್ದರೂ ನಮ್ಮ ಬೀದಿಯಲ್ಲಿ ಯಾರಾದರೋಬ್ಬರು ಎದ್ದಿರುತ್ತಾರೆ. ಬೀದಿಯಲ್ಲಿ ಯಾರಾದರೂ ಒಬ್ಬ,  ಕಫ ಕಟ್ಟಿದ ನಿಲ್ಲದ ಖೆಮ್ಮು, ಕ್ಯಾಕರಿಸಿ ಉಗಿಯುವುದು, ಪಕ್ಕದಮನೆಯವನ ಗೋಡೆಯನ್ನು ಭೇದಿಸಿ ಬರುವ ಆತನ ಗೊರಕೆ, ನಾಯಿಗಳ ಬೊಗಳುವಿಕೆ, ಮುಂಜಾನೆ ಕೆಲಸಕ್ಕೆ ತೆರಳುವವನ ಸ್ಟಾರ್ಟ್ ಆಗದ ದ್ವಿಚಕ್ರವಾಹನ, ಕಫ ಕಟ್ಟಿದ ಖೆಮ್ಮಿನಂತೆ ವಾಹನದ ಸದ್ದು....ಧ್ಯಾನ ಮಾಡಬೇಕಿದ್ದರೆ ಸತ್ವ ಪರೀಕ್ಷೆಯಾಗಿಬಿಡುತ್ತದೆ. ಪಂಚೇದ್ರಿಯಗಳನ್ನು ಸ್ತಬ್ಧ ಗೊಳಿಸಿದಾಗ ಅಂತರಂಗದ ಇಂದ್ರಿಯ ಜಾಗ್ರತವಾಗುತ್ತದೆ. ಆದರೆ ಇಲ್ಲಿ ಪಂಚೇದ್ರಿಯಗಳು ಸುಪ್ತವಾಗುವುದೇ ಇಲ್ಲ. ಕಣ್ಣು ಕಿವಿ ಮೈ ಮನ ಎಲ್ಲವೂ ಕೆರಳಿ ಇನ್ನೇನು ಇದೆ ಎಂದು ಅರಸುವಾಗ ಏಕಾಂತದ ಏಕಾಗ್ರತೆ ಸಾಧ್ಯವಾಗುವುದಿಲ್ಲ. ನಮ್ಮ ಮನೆಯಲ್ಲೇ ಆದರೂ ಯಾರಾದರೋಬ್ಬರು ಏಳುತ್ತಾರೆ. ಶೌಚಾಲಯದ ಬಾಗಿಲು ತೆರೆಯುವುದು, ಬಕೆಟ್ ಕ್ಲೋಸೆಟ್ ನಳ್ಳಿಯ ನೀರಿನ ಸದ್ದು....ಬೆಂಗಳೂರು ಇರುವುದೇ ಸದ್ದಿನ ಜತೆಗೆ. ಒಂದು ದಿನ ಎಲ್ಲಾದರೂ ಹೋಗಬೇಕು. ಯಾರೂ ಇಲ್ಲದಲ್ಲಿ ಮೈಮರೆತು ಚಕ್ರಧ್ಯಾನದಲ್ಲಿ ಸಪ್ತ ಚಕ್ರಗಳನ್ನು ಮುಟ್ಟಿ ತಡವಬೇಕು, ಇದು ಬಹುದಿನದ ಆಶೆ.  ಇಂದು ಅದು ನನಸಾಗಿದೆ. ಧ್ಯಾನದಿಂದ ಎಚ್ಚತ್ತು ಕಣ್ಣು ತೆರೆದಾಗ ಮಳೆ ಹನಿಯುತ್ತಾ ಇದೆ. ನಿನ್ನೆ ರಾತ್ರಿ ಅಂಗಳದಲ್ಲಿ ಹಾಕಿದ ಬೆಂಕಿಗೆ ಮಳೆ ನೀರು ಬೀಳುವಾಗ ಹೊಗೆ ಏಳುತ್ತದೆ. ಕೊಡಗಿನ ಮಳೆ ಎಂದ್ರೆ ಕೇಳಬೇಕೇ? ಅದೇನು ಮಳೆ. ನಾನು ಬಂದಿದ್ದೇನೆ ಎಂದು ನನ್ನ ನೋಡುವುದಕ್ಕೆ ಇದು ಸುರಿಯುತ್ತಿರುವಂತೆ ಭಾಸವಾಯಿತು. ಕೆಲವು ವರ್ಷಗಳ ಹಿಂದೆ ಉಜಿರೆಯ ಸಮೀಪ ನೇತ್ರಾವತಿ ನದಿಯ ತಟದ ದಿಡುಪೆಯಲ್ಲಿ ನನ್ನ ಮಾವನ ಮಗಳ ಮನೆಯಲ್ಲಿ ಇದೇ ರೀತಿ ತಂಗಿದ್ದೆ. ಮುಂಜಾನೆ ಅದ್ಬುತ ಯೋಗಾಭ್ಯಾಸದ ಘಳಿಗೆಯನ್ನು ಕಳೆದಿದ್ದೆ. ಬದುಕಿನಲ್ಲಿ ಇನ್ನು ಅಂತಹ ದಿನ ಬರಲಾರದು ಎಂದು ಭಾವಿಸಿದ್ದೆ. ಆ ದಿನವನ್ನು ಮತ್ತೆ ನೆನಪು ಮಾಡುವಂತೆ ಕೊಡಗಿನಲ್ಲಿ ಕಳೆದ ಘಳಿಗೆ ಇದು.

             ಮನುಷ್ಯ ಪ್ರಾಣಿಗಳು ಎಲ್ಲಿಯೂ ಸಂಚರಿಸಬಲ್ಲವು. ಆದರೆ ಮರ ಗಿರಿ ಶಿಖರಗಳು ಚಲಿಸಲಾರವು. ಮರ ಗಿಡಗಳು ಜೀವ ಇದ್ದರೂ ನಿಂತಲ್ಲೇ ನಿಲ್ಲಬೇಕಾಗುತ್ತದೆ.ತಲೆ ಎತ್ತಿ ಕಂಡಷ್ಟು ಜಗವನ್ನು ಕಂಡು ಗಾಳಿ ನೀರನ್ನು ಸೇವಿಸುತ್ತಿದ್ದರೆ, ಅದಕ್ಕೂ ಜಗತ್ತು ನೋಡಬೇಕು ಎಂದು ಆಶೆ ಬರಬಾರದೇ.? ಹಾಗಾಗಿ ಮನುಷ್ಯ ಮರ ಗಿಡಗಳ ಬಳಿ ಹೋಗಬೇಕು. ಗಿರಿ ಶಿಖರ ಹತ್ತಿ ಸುಳಿಯಬೇಕು.  ಮರ ಗಿಡಗಳು ಮನುಷ್ಯನನ್ನು ಕಾಣುವ ಬಗೆಯದು. ಹಾಗಾಗಿ ನಾವೂ ಈ ಗಿರಿ ಶಿಖರ ಕಾನನ ಸುತ್ತಬೇಕು. ಅವುಗಳ ಉಸಿರ ಜತೆ ನಮ್ಮ ಉಸಿರು ಬೆಸೆಯಬೇಕು. ಈ ಪ್ರಕೃತಿಯಲ್ಲಿ ಒಂದಾಗಿ ಬೆರೆಯಬೇಕು.  ನಾವಿದ್ದಲ್ಲಿ ಮರ ಬರಲಾರವು. ಅವುಗಳಿದ್ದಲ್ಲಿಗೆ ನಮ್ಮ ಹೆಜ್ಜೆ ಸಾಗಬೇಕು.  ಹಾಗಾಗಿ ಈ ಬಾರಿ ಕೊಡಗಿಗೆ ನಮ್ಮ ಪ್ರಯಾಣ.    

      ಮಳೆಗಾಲದಲ್ಲಿ  ಒಂದು ಇರುಳು ಕೊಡಗಿನ  ಮನೆಯಲ್ಲಿ ಅತಿಥಿಯಾಗಿ ಕಳೆಯಬೇಕು ಎಂದು ಬಹಳ ದಿನಗಳಿಂದ ಬಯಸಿದ್ದೆ. ನನ್ನ ಬಯಕೆಯನ್ನು ಮಗನಲ್ಲಿ ಹಲವು ಸಲ ವ್ಯಕ್ತ ಪಡಿಸಿದ್ದೆ. ಒಂದು ದಿನ ಸಮಯಾವಕಾಶ ಮಾಡಿ ಹೋಗುವ. ಮಡಿಕೇರಿಯಲ್ಲಿ ಈಗ ವಸತಿ ವಾಸ (home stay) ಬಹಳಷ್ಟು ಇದೆ. ಎಲ್ಲವನ್ನು ಮರೆತು ಒಂದು ದಿನ ಇದ್ದು ಬರೋಣ ಅಂತ ಲ್ಲಾ  ಸಿದ್ದತೆ ಮಾಡಿದೆವು. ನವರಾತ್ರಿಗೆ ನಮ್ಮೂರಿನ ಆವಳ ಮಠ ದುರ್ಗಾ ಪರಮೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವ ಮುಗಿಸಿ ಬರುವಾಗ ಕೊಡಗಿನಲ್ಲಿ ತಂಗಿ ಬರಬೇಕು ಎಂದು ಬಯಸಿದ್ದೆವು. ಆದರೆ ಕಾರಣಾಂತರದಿಂದ ದೇವಸ್ಥಾನಕ್ಕೆ ಹೋಗುವುದು ಸಾಧ್ಯವಾಗಲಿಲ್ಲ. ಹೋಂ ಸ್ಟೇಗೆ ಮೊದಲೇ ಮುಂಗಡ ಪಾವತಿ ಮಾಡಿ ಕಾದಿರಿಸಿದ್ದನ್ನು ಬಿಡುವಂತಿರಲಿಲ್ಲ. ಅಂತೂ ಅದನ್ನು ಒಂದು ವಾರಕ್ಕೆ ಮುಂದಕ್ಕೆ ಹಾಕಿ ವಾರಾಂತ್ಯದಲ್ಲಿ ಹೊರಟು ಬಿಟ್ಟೆವು.

       ತಣ್ಣಗಿನ ತಂಗಾಳಿ ಬೀಸುತ್ತಿದ್ದರೆ ಕೊಡಗಿನ ಪ್ರಯಾಣ ಅದ್ಭುತವಾಗಿರುತ್ತದೆ. ಸಾಯಂಕಾಲದ ಹೊತ್ತಿಗ ಶುಂಠಿ ಕೊಪ್ಪದ ಗರಗಂದೂರಿನಲ್ಲಿರುವ ಸಿಲ್ವರ್ ಕ್ರೀಕ್ ಹೋಂ ಸ್ಟೇಗೆ ತಲುಪಿದೆವು. ವಸತಿಯ ಮಾಲಿಕ ಶ್ರೀಕೃಷ್ಣ ಅವರು ನಮಗಾಗಿ ಕಾದಿದ್ದರು. ಅತ್ಯಂತ ಶುಚಿಯಾದ ಮನೆ ಪರಿಸರ. ಎಲ್ಲ ಅಚ್ಚುಕಟ್ಟಾಗ ಆಕರ್ಷಣೀಯವಾಗಿತ್ತು. ಸಾಯಂಕಾಲ, ಪರಿಸರ ಬಹಳ ಶಾಂತವಾಗತ್ತು.  ಸುತ್ತಮುತ್ತಲೂ ಕಾಡು, ಕಾಫಿ ತೋಟ ಮಣ್ಣಿನ ರಸ್ತೆ. ಪಕ್ಕಾ ಹಳ್ಳಿಯ ಪರಿಸರ. ಬಳಿಯಲ್ಲೇ ಕಾವೇರಿ ನದಿ ತುಂಬಿ ಹರಿಯುತ್ತಿತ್ತು. ಪಾನೀಯ ಉಪಹಾರ ಸೇವನೆಯ ನಂತರ ನಮ್ಮನ್ನು ನದೀ ತಟಕ್ಕೆ ಕರೆದು ಕೊಂಡು ಹೋದರು. ಅಲ್ಲಿ ಪಾರ್ಮ್ ಹೌಸ್ ತರಹ ಜೋಪಡಿ ಇತ್ತು. ವಾಲಿ ಬಾಲ್ ಆಡುವುದಕ್ಕಾಗಿ ಒಂದು ಕೆಸರು ಗದ್ದೆ ನಿರ್ಮಿಸಿದ್ದರು. ಇನ್ನೊಂದು ಕಡೆ ಮಳೆ ಸ್ನಾನಕ್ಕೆ ವ್ಯವಸ್ಥೆ. ತುಂಬಿ ಹರಿಯುವ ಕಾವೇರಿನದಿಯ ಪ್ರದೇಶ ನೋಡುವುದಕ್ಕೆ ಬಹಳ ಸುಂದರವಾಗಿತ್ತು. ಶುಭ್ರವಾದ ಗಾಳಿ ಸೇವಿಸುತ್ತಿದ್ದಂತೆ ಬೆಳಗಿನಿಂದ ಸುತ್ತಾಡಿದ ದಣಿವು ಕ್ಷಣಮಾತ್ರದಲ್ಲಿ ಮಾಯವಾಗಿತ್ತು.

ಕತ್ತಲೆಯಾಗುತ್ತಿದ್ದಂತೆ ಮೌನ ಮತ್ತಷ್ಟು ಗಾಢವಾಯಿತು. ಜೀರುಂಡೆಗಳ ಸದ್ದು ಆಕಾಶದಲ್ಲಿ ನಕ್ಷತ್ರ...ಅಬ್ಬಾ ಇವುಗಳನ್ನು ಅನುಭವಿಸದೇ ದಿನಗಳು ಬಹಳಷ್ಟು ಕಳೆದಿತ್ತು. ಕತ್ತಲು ಕವಿಯುತ್ತಿದ್ದಂತೆ ಅಂಗಳದಲ್ಲಿ ದೊಡ್ಡ ಬೆಂಕಿಯನ್ನು ಉರಿಸಿದರು. ಬಹಳ ಚಳಿಇದ್ದುದರಿಂದ ಅದರ ಸುತ್ತಲೂ ಕುರ್ಚಿ ಹಾಕಿ ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ದರು.ಶ್ರೀಕೃಷ್ಣ ಬಹಳ ಮಾತುಗಾರರು. ಎನಾದರೂ ಒಂದು ವಿಷಯ ತೆಗೆದು ಮಾತನಾಡುತ್ತಲೇ ಇರುತ್ತಿದ್ದರು. ಮಡಿಕೇರಿಯ ಚರಿತ್ರೆಯ ಬಗ್ಗೆ ಹೇಳಿದರು ಮೊದಲು ಈ ಪ್ರದೇಶ ಮುದ್ದುಕೇರಿಯಾಗಿತ್ತು. ಟಿಪ್ಪುವಿನ ಕಾಲದಲ್ಲಿ ಗೇರಿಲ್ಲ ಯುದ್ದಕ್ಕೆ ಇದು ಪ್ರಸಿದ್ದಿಯಾಗಿತ್ತು. ಇಲ್ಲಿನ ಜನರು ಸ್ವ ರಕ್ಷಣೆಗಾಗಿ ಗೇರಿಲ್ಲ ಯುದ್ದದಿಂದ ಧಾಳಿಯಿಡುತ್ತಿದ್ದ ಟಿಪ್ಪುವಿರುದ್ದ ಹೋರಾಡಿದ್ದರು. ಮುದ್ದುನಾಯಕ ಎಂಬವನು ಇಲ್ಲಿ ಹೊಸತಾಗಿ ಊರನ್ನು ನಿರ್ಮಿಸಿದ್ದ. ಅದನ್ನು ನಂತರ ಮುದ್ದು ಕೇರಿ ಎಂದು ಕರೆಯುತ್ತಿದ್ದರು. ಮುದ್ದುಕೇರಿ ನಂತರ ಮಡಿಕೇರಿಯಾಗಿ ಕರೆಯಲ್ಪಟ್ಟ್ಟಿತು. ಇಂಗ್ಲೀಷರಿಗೆ ಮಡಿಕೇರಿ ಎಂದು ಕರೆಯುವುದು ಕಷ್ಟ ಅಗಿ ಮರ್ಕೇರ ಎಂದು ಕರೆಯುತ್ತಿದ್ದರು. ಟಿಪ್ಪುವಿನ ಧಾಳಿ, ಬಳಿಕ ನರಮೇಧ ಹೀಗೆ ಕೊಡಗಿನ ಚರಿತ್ರೆಯನ್ನು ಮನಮುಟ್ತುವಂತೆ ವಿವರಿಸಿದರು. ಇಂದಿಗೂ ಕೊಡಗಿನ ಜನ ಟಿಪ್ಪುವಿನ ಬಗ್ಗೆ ವಿರೋಧವನ್ನೆ ವ್ಯಕ್ತ ಪಡಿಸುತ್ತಾರೆ.

ಕೊಡಗಿನಲ್ಲಿ ರಾತ್ರೆ ಕಳೆಯುವುದು ಒಂದು ಮಧುರವಾದ ಅನುಭವ. ಎಲ್ಲದಕ್ಕಿಂತಲು ಆ ಶಾಂತವಾದ ಪರಿಸರ. ವಾಹನದ ಸದ್ದು ಗದ್ದಲವಿಲ್ಲ. ಜನರ ಸಂಚಾರವಿಲ್ಲ. ನನ್ನ ಬಹಳ ದಿನದ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದೆ. ರಾತ್ರಿಗೆ ರುಚಿಯಾದ ಬಿಸಿಯಾದ ಚಪಾತಿ ಪಾಲಕ್ ಮಸಾಲ, ಅನ್ನ ಸಾರು ಪಲ್ಯ ಮಾಡಿದ್ದರು. ಬಹಳ ರುಚಿಯಾಗಿತ್ತು. ನಾನು ಬೇಗನೇ ರಾತ್ರಿ ಊಟ ಮಾಡುವ ಅಭ್ಯಾಸದವನು. ಸಾಯಂಕಾಲವೇ ಊಟ ಮುಗಿಸಿದೆ. ತಣ್ಣೀರ ಸ್ನಾನ ಮಾಡಿ ಅಂಗಳದಲ್ಲಿನ ಬಡಬಾಗ್ನಿಯ ಉರಿಯ ಬಳಿಯಲ್ಲಿ ಕೊಡಗಿನ ಚರಿತ್ರೆ ಕೇಳುತ್ತಿದ್ದಂತೆ ಯಾವುದೋ ಕಾದಂಬರಿಯ ದೃಶ್ಯ ಓದಿದ್ದು ನೆನಪಿಗೆ ಬಂತು.


ನಮಗಾಗಿ ಬೆಚ್ಚಗಿನ ಶುಭ್ರವಾದ ಹಾಸಿಗೆ ಮಂಚ ವ್ಯವಸ್ತೆ ಮಾಡಲಾಗಿತ್ತು.  ತಣ್ಣಗಿನ ವಾತಾವರಣದಲ್ಲಿ ಬೆಚ್ಚಗೆ ಹೊದ್ದು ಮಲಗಿದವನಿಗೆ ಬಹಳ ಹೊತ್ತು ಆ ಆನುಭವ ಸವಿಯುವುದಕ್ಕೆ ನಿದ್ದೆ ಬಿಡಲಿಲ್ಲ. ಗಾಢವಾದ ನಿದ್ದೆ ಆವರಿಸಿತು. ಹಾಗೆ ಮಲಗಿದವನು ನಿದ್ದೆಯಲ್ಲಿ ಕಂಡ ಕನಸಿಗಿಂತ ಮಿಗಿಲಾಗಿ ನನಸನ್ನು ಅನುಭವಿಸುತ್ತಿದ್ದೆ. ಪ್ರಕೃತಿಯ ಮಡಿಲಲ್ಲಿ ಯೋಗಾಭ್ಯಾಸ ಎಂದರೆ ಅದೊಂದು ದಿವ್ಯ ಅನುಭವ. ಅದೂ ಏಕಾಂಗಿಯಾಗಿದ್ದರೆ ಸ್ವರ್ಗ ಸುಖ.ಅಂತೂ ಬಹಳ ದಿನದ ಬಯಕೆ ಈಡೇರಿತ್ತು.

 

ಸೂರ್ಯೋದಯವಾಗಿ ಹೊತ್ತು ಕಳೆದಾಗ ಮನೆ ಮಂದಿ ಎದ್ದರು. ಸುತ್ತಲಿನ ಕಾಡಿನಲ್ಲಿ ಮಂಜಿನ ಮುಸುಕಿನಲ್ಲಿ ಒಂದೆರಡು ಹೆಜ್ಜೆ ಇಟ್ಟು ಆ ಸುಖವನ್ನು ಅನುಭವಿಸಿದೆವು. ವಸತಿ ವಾಸದ ಶ್ರೀಕೃಷ್ಣಮತ್ತವರ ಸಹಾಯಕರು  ಉಪಾಹಾರಕ್ಕೆ ಸಿದ್ದತೆ ಮಾಡುತ್ತಿದ್ದರು. ಸುತ್ತಲೂ ಯಾವ ಪ್ರದೇಶ ನೋಡುವುದಿದೆ ಎಂದು ಲೆಕ್ಕ ಹಾಕುವಾಗ ಅವರೇ ಹೇಳಿದರು, ಹತ್ತಿರದಲ್ಲೇ ಕೋಟೇಗುಡ್ಡ ಇದೆ. ಅಲ್ಲಿಗೆ ಹೋಗಬಹುದು. ಸರಿ ಉಪಾಹಾರಕ್ಕಿಂತ ಮೊದಲು ಕೋಟೆಗುಡ್ಡ ನೋಡುವುದಕ್ಕೆ ಕಾರನ್ನೇರಿ ಹೊರಟೆವು. ಮಳೆ ಹನಿಯುತ್ತಾ ಇತ್ತು. ಕೊಡಗಿನ ರಸ್ತೆಯಲ್ಲಿ ಮಳೆ ಹನಿಯ ಪ್ರಯಾಣದ ಅನುಭವ. 

ಕೋಟೇ ಗುಡ್ಡ ಸಾಕಷ್ಟು ಎತ್ತರದ ಪ್ರದೇಶ. ಜನಸಂಚಾರ ಅಷ್ಟೇನೂ ಇಲ್ಲ.  ಅಲ್ಲೊಂದು ದೊಡ್ಡ ಬಂಡೆಗಲ್ಲು. ಅದರ ಬುಡದಲ್ಲೇ ಗುಡಿ. ಗುಡಿ ಎಂದು ಹೇಳುವುದಕ್ಕೇನು ಇಲ್ಲ,ಒಂದಷ್ಟು ಮೆಟ್ಟಲು, ತಡೆ ಬೇಲಿ ಅಷ್ಟೇ. ಅಲ್ಲಿ ಬಂಡೆಗಲ್ಲಿಗೇ ಪೂಜೆ. ಬಂಡೆಗಲ್ಲಿನ ಬುಡದಲ್ಲಿ ಒಂದು ಗುಹೆ ಇದೆ. ಅಲ್ಲಿಗೆ ಹೋಗದಂತೆ ಗೇಟ್ ಗೆ ಬೀಗ ಹಾಕಿದ್ದರು. ದೂರದಿಂದಲೇ ನೋಡಿದೆವು. ಸುತ್ತಲೂ ಹಸುರು ಹಾಸಿದಂತೆ. ನಡುವೆ ಈ ಬಂಡೆಗಲ್ಲು ಅಲ್ಲಿಂದ ಕೆಳಗಿಳಿಯುವುದಕ್ಕೇ ಮನಸ್ಸಿಲ್ಲ. ಯಾರೂ ಇಲ್ಲದೇ ಇದ್ದುದರಿಂದ ನಾವು ಐದು ಜನ ಆ ಪ್ರಕೃತಿಯ ಸೊಬಗನ್ನು ಆಸ್ವಾದಿಸಿದೆವು. ಗುಡ್ಡದ ಸುತ್ತೆಲ್ಲ ಓಡಾಡಿದೆವು. ಹೊತ್ತು ಕಳೆದದ್ದೇ ಗೊತ್ತಿಲ್ಲ.  ಜನ ಸಂಚಾರ ಇಲ್ಲ ಎಂದರೂ ಹಲವು ಕಡೆ ಮದ್ಯದ ಬಾಟಲಿ ನೀರಿನ ಬಾಟಲ್ ಎಸೆದಿದ್ದರು. ಹೇಳುವುದಕ್ಕೆ ಅದು ಬೋಟ್ಲಪ್ಪ ಈಶ್ವರ ದೇವಾಲಯ. ಆದರೆ ಹಲವು ಕಡೆ ಬಾಟಲ್ ಗಳೇ ತುಂಬಿದ್ದದ್ದು ವಿಪರ್ಯಾಸ. ಅದೂ ದೊಡ್ಡ ದೊಡ್ಡ ಐದು ಲೀಟರ್ ನ ಬಾಟಲ್ ಗಳು. ಅದನ್ನು ನೋಡಿದಾಗ ಬಹಳ ಖೇದವೆನಿಸಿತು. ಪಶ್ಚಿಮ ಘಟ್ಟದಲ್ಲಿ ಎಲ್ಲೇ ಹೋಗಲಿ, ಚಿಕ್ಕ ಮಗಳೂರು ಶ್ರಿಂಗೇರಿಯ ಎಲ್ಲ ರಸ್ತೆಯ ಇಕ್ಕೆಲಗಳಲ್ಲೂ ಬಾಟಲಿಗಳು ಇರುವಂತೆ ಇಲ್ಲೂ ಬಾಟಲಿಗಳು. ಇದನ್ನು ನಿಯಂತ್ರಿಸುವುದು ಯಾರು? ನಗರದ ನಾಗರೀಕರೆನಿಸಿಕೊಂಡವರ ವಿದ್ಯಾವಂತರ  ಕೃತ್ಯ ಇದು.
















ಕೊಡಗು ಸೇರಿದಂತೆ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಎಲ್ಲವೂ ಪ್ರವಾಸೀ ಸ್ಥಳಗಳು. ಗುಡ್ಡ ಕಾನನ ತೀರ್ಥ ಕ್ಷೇತ್ರಗಳು ಒಂದಕ್ಕಿಂತ ಒಂದು ಮಿಗಿಲು. ಪ್ರತಿಯೊಬ್ಬರಿಗೂ ಅಲ್ಲಿ ಹೋಗಿ ನೋಡುವ ತವಕ ಇರುತ್ತದೆ. ಹಳ್ಳಿ ಜೀವನ ದೂರಾಗಿ ನಗರ ಜೀವನದಲ್ಲಿ ಬದುಕು ಕಂಡುಕೊಂಡವರ ಸಂಖ್ಯೆಯೇ ಅಧಿಕ. ಹಾಗಾಗಿ ಇಲ್ಲಿಗೆ ಪ್ರವಾಸ ಬರುವವರ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಕೊಡಗು ಮಲೆನಾಡಿನಾದ್ಯಂತ ವಸತಿ ವಾಸ (ಹೋಂ ಸ್ಟೇ)ಗಳು ಇದೇ ಕಾರಣಕ್ಕೆ  ಹೆಚ್ಚಾಗುತ್ತಿವೆ. ಈ ಪ್ರವಾಸೀ ಸ್ಥಳಗಳನ್ನು ಕೇವಲ ನಾವು ಮಾತ್ರ ನೋಡಿದರೆ ಸಾಲದು. ಇಲ್ಲಿಗೆ ಭೇಟಿ ಕೊಡುವಾಗ ಈ ಪ್ರಜ್ಞೆ ನಮಗಿರಬೇಕು. ಅಥವಾ ನಾವೇ ಮತ್ತೊಮ್ಮೆ ಹೋಗುವಂತೆ ಇದನ್ನು ಉಳಿಸಿಕೊಳ್ಳಬೇಕು. ಹಳ್ಳಿಯಲ್ಲಿ ಗುಡ್ಡಕ್ಕೆ ಶೌಚಕ್ಕೆ ಹೋದಂತೆ ಇವತ್ತು ಇಲ್ಲಿಗೆ ನಾಳೆ ಅಲ್ಲಿಗೆ ಅಂತ ನಾವೇ ಸ್ಥಳವನ್ನು ಬದಲಿಸಿ ನಮ್ಮ ಕರ್ಮವನ್ನು ನಾವೇ ಅನುಭವಿಸಬೇಕು. ಹೋಂ ಸ್ಟೇ ಗಳು ಇದೇ ಬಗೆಯಲ್ಲಿ ಈ ಪ್ರದೇಶವನ್ನು ಕಾಪಾಡಬೇಕು. ಆಯಾಯ ಪ್ರದೇಶ ಆಚಾರ ಸಂಸ್ಕೃತಿಗಳು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ನಾವು ಉಳಿದು ಕೊಂಡ ಸಿಲ್ವರ್ ಕ್ರೀಕ್ ಹೋಂ ಸ್ಟೇ ಚೆನಾಗಿತ್ತು. ಇದರ ಮಾಲಿಕರಿಗೆ ಇದರ ಬಗ್ಗೆ ಕಾಳಜಿ ಇರುವುದು ಈ ಪರಿಸರವನ್ನು ಕಾಣುವಾಗ ಅರಿವಿಗೆ ಬಂತು. ಎಲ್ಲವನ್ನು ಹಾಗೇ ಉಳಿಸಿಕೊಂಡು ಇದ್ದುದರಲ್ಲೇ ಸುಸಜ್ಜಿತ ವಸತಿ ಸೌಕರ್ಯವನ್ನು ಒದಗಿಸುತ್ತಿದ್ದಾರೆ. ಉತ್ತಮ ಉಪಚಾರ ಮಾತುಕತೆ ಎಲ್ಲವೂ ಮತ್ತೊಮ್ಮೆ ಭೇಟಿಕೊಡುವಂತೆ ಪ್ರೇರೇಪಿಸುತ್ತದೆ. 

            ಹೆಚ್ಚಿನ ಹೋಂ ಸ್ಟೇಗಳು ಮಾಂಸಾಹಾರಕ್ಕೆ ಆದ್ಯತೆಯನ್ನು ಕೊಡುತ್ತವೆ. ಬರುವ ಪ್ರವಾಸಿಗಳ ಅಭಿರುಚಿಯೂ ಇದಕ್ಕೆ ಕಾರಣ, ಮದ್ಯ ಮಾಂಸ ಇನ್ನೂ ಏನೇನೋ ಅಭಿರುಚಿಗೆ ತಕ್ಕಂತೆ ವ್ಯವಸ್ಥೆಯಾಗುವುದು ಸಾಮಾನ್ಯ. ಹಾಗಾಗಿ  ಇದೆಲ್ಲದಕ್ಕೆ ಪರ್ಯಾಯವಾಗಿ ಉತ್ತಮ  ಸುಸಂಸ್ಕೃತ ವಸತಿ ಸೌಕರ್ಯಗಳೂ ಸಿಗುವಂತಾಗಬೇಕು. 

            ಒಂದು ಉತ್ತಮ ಅನುಭವಕ್ಕೆ ಕಾರಣವಾಗಿ ಜತೆಗೆ ಉತ್ತಮ ವಸತಿ ಆಹಾರ ಮತ್ತು ಎಲ್ಲಕ್ಕಿಂತ ಉತ್ತಮ ಪರಿಸರವನ್ನು ಒದಗಿಸಿದ ಸಿಲ್ವರ್ ಕ್ರೀಕ್ ಮಾಲಿಕ ಮತ್ತು ಸಿಬ್ಬಂದಿಗಳಿಗೆ ವಿಶೇಷ ಧನ್ಯವಾದವನ್ನು ಸಲ್ಲಿಸಿದೆವು. ಒಂದು ದಿನದ ಸ್ವರ್ಗ ಸುಖದ  ಕೊಡಗಿನ ಪ್ರವಾಸದ ಸುಖಾನುಭವ ಮರೆಯಲಾಗುವುದಿಲ್ಲ.

No comments:

Post a Comment