ಮೊನ್ನೆ "ಪಬ್ಲಿಕ್" ರಂಗಣ್ಣ ಯಾವುದೋ ಕಾರ್ಯಕ್ರಮದಲ್ಲಿ ಹೇಳಿದ್ದರು, ದಕ್ಷಿಣ ಕನ್ನಡದವರಿಗೆ ನಡುವೆ ಒಂದು ಬಾಂಧವ್ಯ ಇರುತ್ತದೆ. ಜಗತ್ತಿನಲ್ಲಿ ಎಲ್ಲೂ ನೋಡುವುದಕ್ಕೆ ಸಿಗದ ಬಾಂಧವ್ಯ ಅದು. ರಂಗಣ್ಣ ಹೇಳಿಕೇಳಿ ದಕ್ಷಿಣ ಕನ್ನಡದವರಲ್ಲ. ಆದರೂ ಅವರು ಹೇಳಿದುದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ನಮ್ಮೂರ ಬಾಂಧವ್ಯದ ರೀತಿಯೇ ಅದು. ಭಿನ್ನಾಭಿಪ್ರಾಯ ಜಗಳ ಎಲ್ಲ ಇದ್ದರೂ ಅದೊಂದು ನಮ್ಮದು ಎಂಬ ಆತ್ಮಾಭಿಮಾನ ಅತ್ಯಂತ ದೊಡ್ಡದು. ಅದಕ್ಕೆ ಒಂದು ಕಾರಣ ತುಳು ಭಾಷೆ. ಇತ್ತೀಚೆಗೆ ಅದು ತುಂಬ ಗಾಢವಾಗಿ ಬೆಳೆದು ಬಾಂಧವ್ಯವನ್ನು ಬೆಸೆದು ಬಿಟ್ಟಿದೆ.
ಮೊನ್ನೆ ಮಂಗಳೂರಿನ ಕೇಂದ್ರ ಮಾರುಕಟ್ಟೆಗೆ ಹೋಗಿದ್ದೆ, ಅಲ್ಲಿ ಯಾವುದೋ ಅಂಗಡಿಯಲ್ಲಿ ಯಾವುದೊ ವಸ್ತುವಿಗೆ " ಕ್ರಯ ಏತ್ ಯೆ?" ಅಂತ ಕೇಳಿದೆ, ಆತ " ಅವು ನಲ್ಪ ರೂಪಾಯಿ ಅಣ್ಣ" ಅಣ್ಣ ಎಂಬ ಉಚ್ಚಾರ ಕೇಳುವಾಗಲೇ ಆತ್ಮೀಯತೆಯ ಒಂದು ಭಾವ, ನಾನು ನಮ್ಮದು ಎಂಬ ಆತ್ಮಾಭಿನದ ಅನುಭವವಾಗುತ್ತದೆ. ಇಲ್ಲಿ ಅಣ್ಣ , ಅಕ್ಕ, ಅಮ್ಮ ಅದು ಸಲೀಸಾಗಿ ಹರಿದು ಬರುವುದು ನೋಡುವಾಗ ತುಳುವೆರ ಸಂಸ್ಕಾರ ವಿಶಿಷ್ಟ ಎನಿಸುತ್ತದೆ. ನೀವು ಊರಿನವರು ಎಂದು ತಿಳಿಯುವುದಕ್ಕಿರುವ ಮಾನದಂಡ ಎಂದರೆ ತುಳು ಭಾಷೆ. ಅಲ್ಲಿ ತೇರ್ಗಡೆಯಾದರೆ ನೀವು ಅಣ್ಣನೋ ಅಕ್ಕನೋ ಅಮ್ಮನೋ ಆಗಿಬಿಡುತ್ತೀರಿ. ಮತ್ತೆ ಚೌಕಾಶಿ ಇಲ್ಲದ ಬೆಲೆಯೂ ನಿರ್ಣಯವಾಗಿಬಿಡುತ್ತದೆ. ವಾಸ್ತವದಲ್ಲಿ ಅಲ್ಪಸ್ವಲ್ಪ ಚೌಕಾಶಿ ಇದ್ದರೂ ಹೆಚ್ಚಿನ ಸಂದರ್ಭದಲ್ಲಿ ತುಳುವರು ಚೌಕಾಶಿಯಲ್ಲಿ ತುಂಬ ಹಿಂದೆ. ಹೇಳುವುದು ಒಂದೇ ಬೆಲೆ ಕೊಡುವುದು ಒಂದೇ ಬೆಲೆ. ತುಳುವರು ಎಂದರೆ ಪ್ರಥಮ ಪ್ರಜೆಯ ಮಾನ್ಯತೆ ರಿಯಾಯಿತಿ ಸಿಗುವುದು ತುಳುವಿನ ಭಾಷಾಪ್ರೇಮದ ಸಂಕೇತ, ಹೊರತು ಅದು ಮೋಸ ವಂಚನೆ ಮಾಡುವುದಕ್ಕಿರುವ ಅವಕಾಶವಂತೂ ಖಂಡಿತಾ ಅಲ್ಲ. ಮಂಗಳೂರು ಎಂದಾಕ್ಷಣ ನಂತರ ಎಲ್ಲ ತುಳುವಿನ ಪಾರಮ್ಯ, ಒಂದೋ ಎರಡು ಕನ್ನಡ ಇರಬಹುದು ಅದರಲ್ಲೂ ಮಾರಾಯ್ರೆ ಎಂಬ ಮಂಗಳೂರಿನ ಮುದ್ರೆ ಇದ್ದೇ ಇರುತ್ತದೆ. ತುಳು ಭಾಷಾಪ್ರೇಮ ಅದು ಕನ್ನಡಕ್ಕೂ ಯೋಗದಾನವನ್ನು ಪರೋಕ್ಷವಾಗಿ ಸಲ್ಲಿಸುತ್ತದೆ. ಜಗತ್ತಿನ ಬೇರೊಂದು ಭಾಷೆ ಈ ರೀತಿಯಾಗಿ ಇರಲಾರದು. ತಂದೆಗೆ ಗೌರವಿಸಿದರೆ ಹೇಗೆ ಮಗನಿಗೂ ಸಲ್ಲುವುದೋ ಅದೇ ರೀತಿ ಸಂಯುಕ್ತ ಭಾಷಾ ಪ್ರೇಮ.
ಮೊನ್ನೆ ಮಂಗಳೂರಿನಲ್ಲಿರುವ ನಮ್ಮ ಸಂಭಂಧಿಗಳು ಒಬ್ಬರು ಮೂಲತಃ ಇವರು ಶಿವಮೊಗ್ಗದವರು. ಅವರ ನೋವನ್ನು ತೋಡಿಕೊಂಡರು. ಅವರಿಗೆ ತುಳು ಬರುತ್ತಿರಲಿಲ್ಲ. ಕನ್ನಡ ಮಾತನಾಡಿದರೆ....ಕೊಂಡುಕೊಳ್ಳುವ ವಸ್ತುವಿನ ಬೆಲೆಯೇ ಬದಲಾಗಿಬಿಡುತ್ತದೆ. ಇದು ಮೋಸ ಮಾಡಿದಂತೆ ಭಾಸವಾಗುತ್ತದೆ. ನಾನು ಹೇಳಿದೆ ಮೋಸಕ್ಕೂ ರಿಯಾಯಿತಿಗೂ ವೆತ್ಯಾಸವಿದೆ. ಆತ್ಮೀಯತೆಯ ಸಂಬಂಧದ ಗಟ್ಟಿತನವೇ ಈ ರಿಯಾಯಿತಿ ಹೊರತು ಅದು ಮೋಸವಾಗುವ ಸಂದರ್ಭ ಬಹಳ ಕಡಿಮೆ. ಶುದ್ದ ಕನ್ನಡ ಮಾತನಾಡಿದರೂ ಅರ್ಥವಾಗದ ಕನ್ನಡ ಅಭಿಮಾನಿಗಳಿದ್ದಾರೆ. ಸಾರ್ ಎಂದು ಹೇಳದಿದ್ದರೆ ನಾವು ಬೆಂಗಳೂರಿನಲ್ಲಿ ದ್ವಿತೀಯ ಪ್ರಜೆಗಳಾಗುತ್ತೇವೆ. ಆದರೆ ಇಲ್ಲಿ ಯಾವ ರಿಯಾಯಿತಿಗೂ ಕನ್ನಡ ಯೋಗ್ಯತೆಯನ್ನು ಗಿಟ್ಟಿಸುವುದಿಲ್ಲ. ಸಂಬಂಧಗಳು ಗಟ್ಟಿಯಾಗುವುದಿಲ್ಲ. ಗಟ್ಟಿಯಾಗಬೇಕೆಂಬ ಅವಶ್ಯಕತೆಯೂ ಇಲ್ಲ.
ನಾವು ಬೆಂಗಳೂರಿಗೆ ಬಂದು ಹಲವಾರು ವರ್ಷಗಳಾಯಿತು. ಮನೆಯ ಹತ್ತಿರ ಇರುವ ಕಿರಾಣಿ ಅಂಗಡಿಗೆ ಹೋದರೆ ಅಂದಿನಿಂದ ಇಂದಿನವರೆಗೂ ಅಂಗಡಿಯಾತನ ವರ್ತನೆ ಏನೂ ವೆತ್ಯಾಸವಿಲ್ಲ. ಪ್ರತಿ ನಿತ್ಯ ಬಂದರೂ ಯಾಂತ್ರಿಕವಾಗಿ ಏನು ಬೇಕು? ಇಷ್ಟಾಯಿತು ವ್ಯವಾಹರ ಬಿಟ್ಟರೆ ಬೇರೆ ಮಾತುಕತೆ ಇಲ್ಲ. ಒಂದು ಬಾರಿ ಕೈಯಲ್ಲಿರುವ ಹಣ ಹತ್ತು ರೂಪಾಯಿ ಕಡಿಮೆಯಾಯಿತು. ಅಷ್ಟೇ ಕಟ್ಟಿದ ಸಾಮಾನಿನಲ್ಲಿ ಒಂದಷ್ಟು ಕಡಿಮೆ ಮಾಡಿಕೊಟ್ಟು ಲೆಕ್ಕ ಚುಕ್ತ ಮಾಡಿದ. ಇಷ್ಟು ವರ್ಷದಿಂದ ಹೋಗುತ್ತೇನೆ ಒಂದು ನಗು ಮುಖದ ರಿಯಾಯಿತಿಯೂ ಇಲ್ಲ. ನಾನು ಊರಲ್ಲಿರುವಾಗ ಮಂಗಳೂರಿನ ಕೇಂದ್ರ ಮಾರುಕಟ್ಟೆಯಲ್ಲಿ ಪ್ರತಿ ಸಲ ಹೋಗುವ ದಿನಸಿ ಅಂಗಡಿ ಇತ್ತು. ನನ್ನ ಮನೆ ಎಲ್ಲಿ ನನ್ನ ಹೆಸರೇನೂ ಯಾವುದೂ ಆತನಿಗೆ ತಿಳಿದಿಲ್ಲ. ಅದೆಷ್ಟೊ ಸಲ ಸಾಲ ಕೊಟ್ಟಿದ್ದಾನೆ. ನಾನು ತೀರಿಸಿದ್ದೇನೆ. ಪ್ರತಿ ಸಲ ಹೋದಾಗ ಎಂಚ ಉಲ್ಲರ್? ಅಂತ ಕ್ಷೇಮ ಸಮಾಚಾರ ಕೇಳುತ್ತಾನೆ. ಲೋಕಾಭಿರಾಮ ಮಾತನಾಡುತ್ತಾನೆ. ಸಾಮಾನು ಕಟ್ಟಿ ದುಡ್ಡು ಚುಕ್ತವಾದರೂ ಹೊರಡಬೇಕಿದ್ದರೆ ಒಂದಷ್ಟು ಹರಟದೇ ಇದ್ದರೆ ನಮಗಿಬ್ಬರಿಗೂ ಸಮಾಧಾನವಾಗುತ್ತಿರಲಿಲ್ಲ. ಅಷ್ಟಾಗಿ ಅವನು ಯಾರೋ? ನಾನು ಯಾರೋ? ದೀಪಾವಳಿಯ ಅಂಗಡಿ ಪೂಜೆಗೆ ಹೇಳುತ್ತಾನೆ. ಹೋಗದೇ ಇದ್ದರೆ ಒಂದು ವಾರ ಕಳೆದರೂ ನನಗೆ ಕೊಡುವ ಪ್ರಸಾದ ಸಿಹಿತಿಂಡಿ ಹಾಗೇ ಇಟ್ಟಿರುತ್ತಿದ್ದ. ಖಾಯಂ ಗಿರಾಕಿಗಳಿಗೆ ಅವನ ಕೊಡುಗೆ ಅದು. ಇಲ್ಲಿ ಅಂಗಡಿ ಪೂಜೆಯ ದಿನ ಹೋದರೂ ಒಂದು ನಗು ಮುಖವೂ ಇಲ್ಲ. ಬೆಂಗಳೂರಿಗರು ಹುಟ್ಟುವುದು ವ್ಯವಹಾರದಲ್ಲಿ ಬದುಕುವುದು ವ್ಯವಹಾರದಲ್ಲಿ. ಅದು ಬಿಟ್ಟರೆ ಬೇರೆ ಏನೂ ಇಲ್ಲ. ಈಗಲೂ ನಾನು ಮಂಗಳೂರಿಗೆ ಹೋದಾಗ ಮಾರುಕಟ್ಟೆಯ ಆ ಅಂಗಡಿ ಹೋಗುತ್ತೇನೆ. ದಾನೆಗೆ ಬೆಂಗಳೂರುಡು ಬರ್ಸ ಉಂಡಾ? ಚಳಿ ಎಂಚ ಉಂಡು? ಬೊಕ್ಕ ಸೌಖ್ಯನ? ಒಣಸ್ ಆಂಡ? ಹೀಗಿ ಪುಂಖಾನು ಪುಂಖವಾಗಿ ಸಾಮಾನು ಕಟ್ಟುವ ಮೊದಲೆ ವಿಚಾರಿಸುತ್ತಾನೆ. ನಾನು ಊರು ಬಿಟ್ಟು ಬೆಂಗಳೂರಲ್ಲಿರುವುದು ಆತನಿಗೆ ಬಹಳ ನನಪಿರುತ್ತದೆ.
ಬೆಂಗಳೂರಲ್ಲಿ ಮೊನ್ನೆ ಯಶವಂತ ಪುರ ಹೋಗುವುದಕ್ಕಾಗಿ ಮನೆಯ ಹತ್ತಿರ "ಆಟೋ" ಕಾಯುತ್ತಿದ್ದೆ. ನಮ್ಮೂರಲ್ಲಿ ರಿಕ್ಷ ಅಂತಲೇ ಹೇಳುವುದು. ಅದು ಯಾವ ಭಾಷೆಯೋ ಗೊತ್ತಿಲ್ಲ. ನವಂಬರ್ ಕನ್ನಡ ಮಾಸ." ನವಂಬರ್" ಗೆ ಕನ್ನಡ ಪದ ಇನ್ನೂ ಸಿಕ್ಕಿಲ್ಲ. ರಿಕ್ಷಕಿಂತಲೂ ದೊಡ್ಡ ಕನ್ನಡ ಬಾವುಟ ಹಾಕಿಕೊಂಡು ಒಬ್ಬ ಬಂದ. . ಯಶವಂತ ಪುರ ಹೋಗಪ್ಪ ಅಂದೆ. ಹೋಗುತ್ತಿದ್ದಂತೆ ಕೇಳಿದ "ಸ್ಟ್ರೈಟ್ " ಹೋಗ್ಲಾ "ಸಾರ್" ಅಂತ ಹೇಳಿದ. ಈ "ಸಾರ್" ಬೇರೆ ಅದೊಂದು ಬೆಂಗಳೂರಿಗೆ ಕನ್ನಡ ಪದವೇ ಆಗಿ ಹೋಗಿದೆ. ಇನ್ನು ಇಳಿವಾಗ ಎಷ್ಟಾಯಿತು ಎಂದು ಕೇಳಿದರೆ..."ಸಿಕ್ಸ್ ಟೀ ರೂಪೀಸ್ ಅಂತ ರಾಗ ಎಳೆದ.
ನಮ್ಮ ಊರಿನ ಭಾಷಾಪ್ರೇಮ ವ್ಯಕ್ತಿ ಬಾಂಧವ್ಯ ಅದು ದ್ವೇಷದಲ್ಲೂ ಸ್ನೇಹದಲ್ಲೂ ಕಾಣಿಸುತ್ತದೆ. ಅದರ ಒಂದಿಷ್ಟು ಭಾಗ ಇಲ್ಲಿದ್ದರೆ ಕನ್ನಡ ಉಳಿಸುವುದಕ್ಕೆ ಹೋರಾಟ ಮಾಡಬೇಕಿಲ್ಲ. ರೌಡಿಸಂ ಹಪ್ತಾ ಮಾಡಬೇಕಿಲ್ಲ. ಕಟೌಟ್ ಕಟ್ಟಿ ಹಾಲಿನ ಅಭಿಷೇಕ ಮಾಡಬೇಕಿಲ್ಲ. ನಮ್ಮ ಕರಾವಳಿಯಲ್ಲಿ ತುಳು ಮಾತಾಡು ಅಂತ ಯಾರು ದೊಣ್ಣೆ ಹಿಡಿದು ಅಪ್ಪಣೆ ಮಾಡುವುದಿಲ್ಲ. ಬ್ಯಾನರ್ ಕಟ್ಟಿ ಭಾಷಣ ಬಿಗಿಯುವುದಿಲ್ಲ. ಪ್ರತಿ ಕ್ಷಣ ತುಳು ತುಳು ಅಂತ ಜಪಮಾಡುವುದಿಲ್ಲ. ಭಾಷೆಯನ್ನು ಹೇಳಿ ದುಡ್ಡು ಮಾಡುವುದಿಲ್ಲ. ಆದರೂ ತುಳು ಹೃದಯದಿಂದ ಹೃದಯಕ್ಕೆ ನಿತ್ಯ ಯೌವನೆಯಂತೆ ಹರಿದಾಡುತ್ತದೆ. ಕಾಡಿನ ಮರದಂತೆ ಅದರ ಪಾಡಿಗೆ ಅದು ಬೆಳೆಯುತ್ತದೆ. ಅದಕ್ಕೆ ನೀರು ಗೊಬ್ಬರ ಹಾಕುವ ಅವಶ್ಯಕತೆಯಿಲ್ಲ. ಆದರೂ ನಿತ್ಯ ಹಸಿರಾಗಿ ಭಾಷೆಯ ಜೀವ ನೋಡುವಾಗ ನಮ್ಮ ಕನ್ನಡ ಯಾವಾಗ ಹೀಗೆ ಬದಲಾಗಬಹುದು ಎಂದು ಯೋಚಿಸುವಂತಾಗುತ್ತದೆ. ಬೆಂಗಳೂರಲ್ಲೂ ನಮ್ಮೂರವರಿದ್ದಾರೆ. ಕೇವಲ ತುಳು ಮಾತನಾಡುತ್ತೇನೆ ಅಂತ ತಿಳಿದರೆ ಸಾಕು ಊರುದಕ್ಲು ಅಂತ ಸ್ನೇಹದಿಂದ ವ್ಯವರಿಸುತ್ತಾರೆ. ತುಳು ಜನ ಅಂತ ತಿಳಿದು ಎಲ್ಲಿದ್ದರೂ ಹುಡುಕಿ ಬಂದು ವ್ಯವಹಾರ ಮಾಡುತ್ತಾರೆ. ದುಡ್ದು ಕೇಳುವಾಗ ನನಗೆ ಸಂಕೋಚವಾಗುವುದಿಲ್ಲ. ಎಷ್ಟು ಹೇಳಬೇಕೆಂಬ ಯೋಚನೆ ಮಾಡಬೇಕಿಲ್ಲ. ಯಾಕೆಂದರೆ ಚೌಕಾಶಿ ಇಲ್ಲ. ಅದು ನಮ್ಮೂರಿನ ಜನರ ವಿಶ್ವಾಸ. ಕನ್ನಡ ಕನ್ನಡಿಗರು ಹೀಗೆ ಬದಲಾಗಬೇಕು. ನಮ್ಮೂರು ನೋಡಿ ಕಲಿಯಬೇಕು.
No comments:
Post a Comment