ದೊಡ್ಡಮ್ಮ ಅಕ್ಕ ಹೀಗೆ ಈ ಎರಡು ಶಬ್ದಗಳು ಬಾಲ್ಯದಲ್ಲಿ ನಾನು ಅಮ್ಮ ಎಂದು ಹೇಳುವುದಕ್ಕಿಂತಲೂ ಹೆಚ್ಚು ನನ್ನ ಪಾಲಿಗೆ ಚಿರಪರಿಚಿತ ಶಬ್ದಗಳು. ಬಹುಶಃ ಅಮ್ಮ ಎಂದು ಕರೆಯಲು ಕಲಿಯುವುದಕ್ಕಿಂತಲೂ ಮೊದಲೇ ದೊಡ್ಡಮ್ಮ ಎಂದು ಕರೆಯುವುದನ್ನು ಕಲಿತಿದ್ದೆ ಎನ್ನಬೇಕು. ಯಾಕೆಂದರೆ ಅದೊಂದು ನಮ್ಮ ಸಂಸಾರದ ಹಿರಿಯ ವ್ಯಕ್ತಿಯನ್ನು ಕರೆಯುತ್ತಿದ್ದ ಹೆಸರುಗಳು. ಆ ಹಿರಿಯ ವ್ಯಕ್ತಿ ನಮ್ಮ ಅಮ್ಮನ ತಾಯಿ. ಅಂದರೆ, ನಮ್ಮ ಅಜ್ಜಿ. ನನ್ನಮ್ಮನ ಸಹಿತವಾಗಿ ಅವರ ಮಕ್ಕಳು ಅವರನ್ನು ಅಕ್ಕ ಎಂದು ಕರೆದರೆ ನಾವು ಮೊಮ್ಮಕ್ಕಳು ಅವರನ್ನು ದೊಡ್ಡಮ್ಮ ಎಂದು ಕರೆಯುತ್ತಿದ್ದೆವು. ಯಾಕೆಂದರೆ ಅವರ ಬದುಕಿನಲ್ಲಿ ಅವರೆಂದೂ ಯಾರಿಂದಲೂ ಅಜ್ಜಿ ಎಂದು ಕರೆಸಿಕೊಳ್ಳಲಿಲ್ಲ. ದೈಹಿಕವಾಗಿ ವ್ಯಕ್ತಿತ್ವದಿಂದಲೂ ಅವರೆಂದೂ ಹದಿ ಹರೆಯದ ಚೇತನವಾಗಿದ್ದರು. ಅವರೇ ನನ್ನ ದೊಡ್ಡಮ್ಮ ರತ್ನಾವತಿ ದೇವಿ. ನಮ್ಮ ಅಜ್ಜನ ಮೊದಲ ಪತ್ನಿ. ಅಂದರೆ ಧರ್ಮ ಪತ್ನಿ. ನಮ್ಮ ದೊಡ್ಡಮ್ಮನ ತವರುಮನೆ ಜಾಲ್ಸೂರಿನ ಕೆಮ್ಮಣ ಬಳ್ಳಿ. ದೊಡ್ಡ ಮನೆತನದ ಹೆಣ್ಣು ನಮ್ನಜ್ಜನ ಮೊದಲ ಪತ್ನಿ.
ದೊಡ್ಡಮ್ಮ ದೊಡ್ಡ ಅಂತ ಮಾತ್ರ ಬಾಲ್ಯದಲ್ಲಿ ತಿಳಿದು ಕೊಂಡಿದ್ದೆ. ಆದರೆ ಅದು ಬದುಕಿನ ಹಿರಿಯ ಅಮ್ಮನೆಂಬ ಅದ್ಭುತ ವ್ಯಕ್ತಿಯಾಗಬಹುದೆಂಬ ಕಲ್ಪನೆ ಇರಲಿಲ್ಲ. ನಮ್ಮ ಅಜ್ಜನಿಗೆ ಏಳು ಜನ ಮಕ್ಕಳು. ಅದರಲ್ಲಿ ಐದು ಜನ ಗಂಡು ಎರಡು ಹೆಣ್ಣು. ಅದು ಮೊದಲ ಪತ್ನಿ ದೊಡ್ಡಮ್ಮನಲ್ಲಿ. ಎರಡು ಜನ ಹೆಮ್ಮಕ್ಕಳಲ್ಲಿ ಹಿರಿಯ ಮಗಳು ನನ್ನಮ್ಮ. ಐದು ಜನ ಗಂಡು ಮಕ್ಕಳು. ಸಂಬಂಧದಲ್ಲಿ ಸೋದರ ಮಾವಂದಿರು. ಈ ಎಳು ಜನ ಮಕ್ಕಳಿಗೂ ಎರಡರಿಂದ ಮೂರು ಮತ್ತೂ ಹೆಚ್ಚು ಮಕ್ಕಳು. ಅಂದರೆ ಅವರೆಲ್ಲರೂ ದೊಡ್ಡಮ್ಮ ಎಂದು ಕರೆಯುವ ಈ ನನ್ನ ದೊಡ್ಡಮ್ಮ. ಇಷ್ಟು ಜನ ಮೊಮ್ಮಕ್ಕಳಲ್ಲಿ ಬಹುಪಾಲು ಜನರ ಬಾಲ್ಯ , ಹುಟ್ಟಿನಿಂದ ಅವರ ಆರೈಕೆ ಮಾಡಿದ್ದು ಈ ದೊಡ್ಡಮ್ಮ. ಅಷ್ಟೂ ಜನ ಮೊಮ್ಮಕ್ಕಳನ್ನು ಮಲ ಮೂತ್ರಾದಿಗಳಿಂದ ಎತ್ತಿ ಆಡಿಸಿದ ಹಿರಿಯ ಕೈ ಇವರದು. ಏಳು ಸೇರಿ ಹದಿನೆಂಟು ಬಾರಿ ಹೆತ್ತಿದ್ದಾರೆ. ಆದರೆ ಹೆತ್ತ ಮಕ್ಕಳಲ್ಲಿ ಬದುಕಿದ ಮಕ್ಕಳು ಏಳು. ಕಾಲು ಜನ್ಮವನ್ನು ಕೇವಲ ಹೆರಿಗೆಯಲ್ಲೇ ಕಳೆದ್ದದ್ದು ಕಲ್ಪಿಸಿದರೆ ಆಶ್ಚರ್ಯವಾಗುತ್ತದೆ.
ದೊಡ್ಡಮ್ಮನ ಬಗ್ಗೆ ಬರೆಯದೆ ಇದ್ದರೆ ನನ್ನ ಭಾವನೆಗಳಿಗೆ ಅರ್ಥವೇ ಇಲ್ಲ. ಸರಿ ಸುಮಾರು ಇಪ್ಪತ್ತು ಮೊಮ್ಮಕ್ಕಳ ಪಡೆದ ದೊಡ್ಡ ಮರ ನಮ್ಮ ದೊಡ್ಡಮ್ಮ. ಆಗಿನ ಸಂಸಾರಗಳ ಲೆಕ್ಕದಲ್ಲಿ ಇದು ದೊಡ್ಡದಲ್ಲ. ಆದರೆ ಜತೆಗೆ ಕಾಡುವ ಬಡತನ ದೊಡ್ಡದು. ಕಷ್ಟ ಬವಣೆಯ ವಿರುದ್ದ ಹೋರಾಡುವುದೇ ಸುಖ ಎಂದುಕೊಂಡ ಮಹಾಮನಸ್ಸಿನ ಜೀವ ಇದು. ಮುಖದಲ್ಲಿ ಮಂದ ಹಾಸ ಇರಬಹುದು ಆದರೆ ಅದಕ್ಕೆ ಪಣವಿಟ್ಟ ಕಷ್ಟ ಅಳತೆಗೆ ಸಿಗುವುದಿಲ್ಲ. ಈಗಿನ ಬದುಕಲ್ಲಿ ಅದನ್ನು ಕಲ್ಪಿಸಿದರೆ ಅದು ಭಯಾನಕ. ಬೇಡಿ ಕೊಂಡು ಯಾರೋ ಕರುಣೆಯಿಂದ ಕೊಟ್ಟ ಭತ್ತದ ಕಾಳು ಕುಟ್ಟಿ ಅಕ್ಕಿ ಮಾಡಿ ಅದನ್ನು ಗಂಜಿಮಾಡಿ ಮೊಮ್ಮಕ್ಕಳ ಹೊಟ್ಟೆ ತಣಿಸುವುದು ಮಾತ್ರವಲ್ಲ ಬತ್ತದ ಹೊಟ್ಟನ್ನು ಸಹ ಬಿಡದೆ ಕುಟ್ಟಿ ಪುಡಿ ಮಾಡಿ ತೌಡು ಸೋಸಿ ರೊಟ್ಟಿ ಮಾಡಿ ತಿನಿಸುವುದೆಂದರೆ ಅದೆಂತಹ ಹೋರಾಟ ಇರಬಹುದು. ಬಡತನದಲ್ಲಿ ಮೊಮ್ಮಕ್ಕಳ ಮಲ ಮೂತ್ರಗಳನ್ನಷ್ಟೇ ಎತ್ತಿ ಒಗೆದದ್ದು. ಬೇರೆ ಎಸೆದದ್ದು ಏನೂ ಇಲ್ಲ. ಪಾಂಡವರ ತಾಯಿ ಕುಂತಿಯ ನೆನಪಾಗಿ ಬಿಡುತ್ತದೆ. ಪಾಂಡವರಿಗೆ ಭಗವಂತನ ಅಕ್ಷಯ ಪಾತ್ರೆ ಇದ್ದರೆ, ನಮ್ಮ ಸಂಸಾರಕ್ಕೆ ಈ ಮಹಾತಾಯಿ ಕರಗಳೇ ಅಕ್ಷಯ ಪಾತ್ರೆ. ಹೀಗೆ ಬರೆಯುವಾಗ ಕಣ್ಣು ಮಂಜಾಗಿಬಿಡುತ್ತದೆ. ಅದನ್ನು ಕಾಣುವುದು ಬಿಡಿ ಈಗ ಕಲ್ಪಿಸುವುದಕ್ಕೂ ಭಾವನೆಗಳ ತಡಕಾಟ.
ನಮ್ಮಜ್ಜ ದೊಡ್ಡ ಮನೆತನದ ಏಕಮಾತ್ರ ಪುರೋಹಿತ. ಆ ಒಂದು ಪದವಿ ಬಿಟ್ಟರೆ ಮತ್ತೆ ಸ್ವಂತ ಸ್ಥಿರ ವಾಸವು ಇಲ್ಲದ ಅಲೆಮಾರಿ ಪರಿಸ್ಥಿತಿ. ಅವರು ಕಟ್ಟಿದ ಮನೆಗೂ (ಜೋಪಡಿ) ಬದಲಿಸಿದ ಮನೆಗೂ ಲೆಕ್ಕವಿಲ್ಲ. ಆಗ ಪತ್ನಿಯಾಗಿ ಇವರು ಅನುಭವಿಸಿದ ಬವಣೆಗೂ ಲೆಕ್ಕವಿಲ್ಲ. ಇಷ್ಟು ಮೊಮ್ಮಕ್ಕಳ ಹೆರಿಗೆ ಬಾಣಂತನ ಆರೈಕೆ ಅವರ ಕೈಯಲ್ಲಿ ಮಾಡಿದ್ದಾರೆ . ಕೆಲವನ್ನು ಕಣ್ಣಾರೆ ಕಂಡಿದ್ದೇನೆ. ಇನ್ನು ನನ್ನ ಮಟ್ಟಿಗೆ ಹೇಳುವುದಾದರೆ ಇವರ ಆರೈಕೆ ಬಹುತೇಕ ನನ್ನ ಬಾಲ್ಯದ ಪುಟಗಳನ್ನು ತುಂಬಿಸಿವೆ.
ಪುಟ್ಟ ಹಾಳೆಯ ಮಗುವಿನಿಂದ ನನ್ನ ದಿನಗಳು ಅವರ ಜತೆಯೇ ಆರಂಭವಾಗುತ್ತದೆ. ಶಾಲೆಯಲ್ಲಿ ತಿಳಿದವರು ನನಗೆ ಅಜ್ಜಿ ಸಾಕಿದ ಮಗು ಅಂತ ಹೇಳುತ್ತಿದ್ದರು. ನನ್ನ ಶಿಶುದಿನಗಳನ್ನು ಹೇಳಿದರೆ ನಾನು ಇಂದಿನವರೆಗೂ ಬದುಕಿದ್ದರೆ ಅದಕ್ಕೆ ಅವರ ಯೋಗದಾನ ಸಿಂಹ ಪಾಲು. ಆಗ ನಾನು ರೋಗಗ್ರಸ್ಥ ಶಿಶು. ಒಂದಲ್ಲ ಒಂದು ವ್ಯಾಧಿ ನನ್ನನ್ನು ಬಾಧಿಸುತ್ತಿತ್ತು. ಮಲಮೂತ್ರಗಳಲ್ಲೇ ಹೊರಳುವ ನನ್ನನ್ನು ಎತ್ತಿ ಉಪಚರಿಸಿದ ಅವರ ಸುಕ್ಕುಗಟ್ಟಿದ ಕರಸ್ಪರ್ಶ ಇಂದಿಗೂ ನನ್ನ ಶರೀರ ನೆನಪಿಸುತ್ತದೆ.
ಬಾಲ್ಯದಲ್ಲಿ ನನ್ನ ಆರೈಕೆಯಲ್ಲಿ ಹೆತ್ತಮ್ಮ ಹೈರಾಣಾಗುತ್ತಿದ್ದರು. ಕಷಾಯ ಲೇಹ್ಯಕ್ಕಾಗಿ ಗುಡ್ಡ ತೋಟ ಅಲೆದು ಬರುತ್ತಿದ್ದರು. ಅದು ಒಂದು ಆರೈಕೆಯಾದರೆ, ದೊಡ್ಡಮ್ಮನ ಆರೈಕೆ ಇನ್ನೊಂದು ಬಗೆ. ಹಾಳೆ ಮಗುವಿಂದ ತೊಡಗಿ ಪ್ರಾಥಮಿಕ ಶಾಲೆಯ ತನಕವೂ ದೊಡ್ಡಮ್ಮ ಸ್ನಾನಾದಿಗಳನ್ನು ಮಾಡುಸುತ್ತಿದ್ದದ್ದು ಈಗಲೂ ನೆನಪಿದೆ. ಮಡಿಲಲ್ಲಿ ಕೂರಿಸಿ ತುತ್ತು ಅನ್ನ ಬಾಯಿಗೆ ಇಡುತ್ತಿದ್ದರು. ಹತ್ತನೇ ವಯಸ್ಸಿನ ತನಕವೂ ಪಕ್ಕದಲ್ಲೇ ಮಲಗಿಸುತ್ತದ್ದರು. ಬಿಗಿಯಾದ ಅವರ ಅಪ್ಪುಗೆಯ ಬಿಸಿ, ಆ ಬಿಸಿ ಉಸಿರು ನರನಾಡಿಯ ರಕ್ತ ಆ ಬಿಸಿಯನ್ನು ಇಂದಿಗೂ ಕಾಪಿಟ್ಟಿದೆ.
ಬಾಲ್ಯದಲ್ಲಿ ಜ್ವರ ಬಿಡದೆ ಕಾಡುತ್ತಿದ್ದ ವ್ಯಾಧಿಯಲ್ಲಿ ಒಂದು. ಜ್ವರದಲ್ಲಿ ರಾತ್ರಿ ಮಲಗಿದ್ದ ನನ್ನನ್ನು ಎಬ್ಬಿಸಿ, ಅನ್ನ ಮಜ್ಜಿಗೆ ಈರುಳ್ಳಿ ಚೂರು ಕಲಸಿ ತಿನ್ನಿಸುತ್ತಿದ್ದರು. ದೊಡ್ಡಮ್ಮನ ಆ ಕೈರುಚಿಯ ನೆನಪಿಗಾಗಿ ಈಗಲೂ ನಾನು ಹಾಗೆ ಉಣ್ಣುತ್ತೇನೆ. ಅನ್ನ ಮಜ್ಜಿಗೆ ಈರುಳ್ಳಿಯ ಜತೆಗಾರಿಕೆ, ಅದೊಂದು ಅದ್ಬುತ ಸ್ವಾದಾನುಭವ. ಹಲವು ರೋಗದ ಚಿಕಿತ್ಸೆ ಔಷಧ ಆರೈಕೆಯಲ್ಲಿದ್ದ ನನಗೆ ಸಹಜವಾಗಿ ಕಠಿಣ ಪಥ್ಯ ಇರುತ್ತಿತ್ತು. ಅನ್ನ ಹೆಸರು ಬೇಳೆ ನೀರು ಬಿಟ್ಟು ಏನನ್ನು ತಿನ್ನುವಂತಿರಲಿಲ್ಲ. ಆಗ ಉಳಿದವರ ಕಣ್ಣು ಮರೆಸಿ ಮಾಡಿದ ವಿಶೇಷ ತಿಂಡಿ ತಂದು ಕೊಡುತ್ತಿದ್ದರು. ಆ ಮಾತೃ ಹೃದಯದ ವೇದನೆ ಸಂವೇದನೆ ಮರೆಯುವುದಕ್ಕಿಲ್ಲ. ಅಮ್ಮ ನಿಜವಾಗಿ ದೊಡ್ಡಮ್ಮನಾಗುವ ಬಗೆ ಅದು.
ಬಹಳ ಕೃಶ ದೇಹದ ನಿತ್ರಾಣಿ ನಾನಾಗಿದ್ದೆ. ಆಗ ಮವನೊಂದಿಗೆ ದುಡಿಯುತ್ತಿದ್ದ ದಿನಗಳು. ಅಲ್ಲಿ ಕೃಶವಾಗಿದ್ದ ನನಗೆ ಬೆಳಗ್ಗೆ ಮೊದಲ ದಿನದ ಕುಚ್ಚಿಲಕ್ಕಿ ಗಂಜಿ, ಲೋಟತುಂಬ ಎಮ್ಮೆಯ ಗಟ್ಟಿ ಮೊಸರು ಇದನ್ನು ತಂದು ಹತ್ತಿರವಿಡುತ್ತಿದ್ದರು. ಅದನ್ನು ತಿಂದು ಒಂದಷ್ಟು ದಷ್ಟ ಪುಷ್ಟನಾಗಿದ್ದೆ.ಈಗಲೂ ನನ್ನ ದೇಹದಲ್ಲಿ ರಕ್ತ ಸಂಚಾರವಿದ್ದರೆ ಅದು ಅವರ ಅನುಗ್ರಹ. ಅದೆಂತಹ ಆರೈಕೆ? ಬಾಲ್ಯದ ಸಕಲ ಚಾಕರಿಯನ್ನು ಮಾಡುತ್ತಿದ್ದ ಅವರು ರಾತ್ರಿ ಜತೆಗೆ ಮಲಗಿಸುತ್ತಿದ್ದರು. ಹಲವಾರು ಕಥೆಗಳನ್ನು ಹೇಳುತ್ತಿದ್ದರು. ಇಪ್ಪತ್ತು ಜನ ಮೊಮ್ಮಕ್ಕಳಲ್ಲಿ ಹೀಗೆ ಹತ್ತಿರ ಮಲಗಿಸುತ್ತಿದ್ದದ್ದು ಒಂದು ನನ್ನನ್ನು ಮತ್ತು ನನ್ನ ನಂತರ ಮಾವನ ಮಗನನ್ನು ಮಾತ್ರ ಮಲಗಿಸಿದ್ದಾರೆ.
ನಾನು ಬಾಲ್ಯ ಕಳೆದು ದೊಡ್ಡವನಾದಾಗ, ಏನು ಬೇಕಿದ್ದರೂ ನನ್ನ ಬಳಿ ಹೇಳುತ್ತಿದ್ದರು. ತಾಂಬೂಲ ಚರ್ವಣ ಮಾಡುತ್ತಿದ್ದ ದೊಡ್ಡಮ್ಮನಿಗೆ ಕುಣಿಯ ಹೊಗೆಸೊಪ್ಪು ನೆನಪಿನಲ್ಲಿ ತಂದು ಕೊಡುತ್ತಿದ್ದೆ. ಅವರನ್ನು ಪೇಟೆಗೆ ಕರೆದು ಕೊಂಡು ಹೋದರೆ ಹೋಟೇಲಿಗೆ ಕರೆದೊಯ್ದು ಚಹ ತಿಂಡಿ ತಿನ್ನಿಸುತ್ತಿದ್ದೆ. ಹೋಟೆಲಿಗೆ ಹೋಗಿ ತಿನ್ನುವುದನ್ನು ದೊಡ್ಡಮ್ಮ ಬಹಳ ಇಷ್ಟ ಪಡುತ್ತಿದ್ದರು. ಹೀಗೆ ತಿಂದರೆ ಅದನ್ನು ಬಹು ಕಾಲ ನೆನಪಿನಲ್ಲಿಟ್ಟು ಪದೇ ಪದೇ ಹೇಳುತ್ತಿದ್ದರು. ನಾಲ್ಕಾಣೆಯ ತಿಂಡಿಯ ಸ್ಮರಣೆ ನಾವು ಮರೆತರು ದೊಡ್ಡಮ್ಮ ಮರೆಯಲಾರರು.
ಬಾಲ್ಯ ಕಳೆದು ಯೌವನಾವಸ್ಥೆಯಲ್ಲಿ ನನಗೆ ವಿವಾಹವಾಯಿತು. ಅವರನ್ನು ಕರೆದೊಯ್ಯುವಷ್ಟು ಸೌಕರ್ಯ ನನ್ನಲ್ಲಿರಲಿಲ್ಲ. ಆಗ ಅವರೇ ಸಾಂತ್ವನ ಹೇಳಿ ಹರಸಿದ್ದರು. ಮದುವೆ ಯಾಗಿ ಪತ್ನಿಯನ್ನು ಕರೆದುಕೊಂಡು ಅವರ ಬಳಿಗೆ ಹೋಗಿದ್ದೆ. ನನ್ನ ಪತ್ನಿಯನ್ನು ಬಳಿಯಲ್ಲಿ ಕುಳ್ಳಿರಿಸಿ, ಆಕೆಯ ಕೈಯನ್ನು ತನ್ನ ಸುಕ್ಕುಗಟ್ಟಿದ ಕೈಯಲ್ಲಿ ಬಿಗಿಯಾಗಿ ಹಿಡಿದು ಕೊಂಡು ಸಂತಸದಿಂದ ಕಂಬನಿ ಮಿಡಿದಿದ್ದರು. ಆಕೆಯ ಮಂದಲೆಯನ್ನು ನೇವರಿಸಿ ಎದೆಗೊತ್ತಿ ಆಶೀರ್ವದಿಸಿದ್ದರು. ಈ ರೀತಿ ಪ್ರೀತಿಯನ್ನು ಅನ್ಯರಿಗೆ ತೋರಿಸಿದ್ದನ್ನು ನಾನು ಕಂಡವನಲ್ಲ. ಕೇವಲ ನನ್ನ ಹೆಂಡತಿ ಎಂಬ ಅವರ ಅಭಿಮಾನ ಪ್ರೀತಿ ಅದರ ಆಳ ಕಲ್ಪಿಸುವುದಕ್ಕೆ ಸಾಧ್ಯವಿಲ್ಲ. ನನಗೆ ಸೇರಿದ್ದ ಎಲ್ಲವನ್ನು ಪ್ರೀತಿಸುವ ಅವರ ಪರಿಯಲ್ಲಿ ಮಿಂದೆದ್ದವನು ನಾನು.
ಸಾಮಾನ್ಯವಾಗಿ ನೆನಪುಗಳನ್ನು ಹೊತ್ತು ಬರುವ ಕಂಬನಿಗಳನ್ನು ತಡೆಯುವುದು ಬಹಳ ಕಷ್ಟದ ಕೆಲಸ. ಒಂದೊಂದು ಅಲುಗಾಟದಲ್ಲಿ ಗಂಟೆ ಸೃಷ್ಟಿಸುವ ಧ್ವನಿ ತರಂಗಗಳಂತೆ ಹೃದಯದಲ್ಲಿ ಭಾವನೆಗಳು ಸೃಷ್ಟಿ ಸುವ ನೆನಪಿನ ತರಂಗಗಳು ಅಂತರ್ಮುಖದ ಚಿಂತೆಗೆ ಎಳೆಯುತ್ತವೆ. ದೊಡ್ಡಮ್ಮ ಕಟ್ಟಿದ ಆ ಘಂಟೆಯ ಧ್ವನಿ ತರಂಗಗಳು ಬದುಕಿನ ತುಂಬ ನಿತ್ಯ ಚೇತನದಂತೆ ಮಾರ್ದನಿಸುತ್ತಾ ಇರುತ್ತವೆ. ಹೆತ್ತಮ್ಮನಿಂದಲೂ ಒಂದು ತೂಕ ಹೆಚ್ಚು ಎನ್ನುವ ಅವರ ಮಮತೆಯನ್ನು ಮರೆಯುವುದಕ್ಕಿಲ್ಲ.
No comments:
Post a Comment