ಅತ್ತ ಬಾಲ್ಯವೂ ಅಲ್ಲದ ಇತ್ತ ಯೌವನವೂ ಅಲ್ಲದ ಸರಿಯಾದ ಪ್ರೌಢಾವಸ್ಥೆಯಲ್ಲಿ ನನಗೆ ಬ್ರಹ್ಮೋಪದೇಶವಾಯಿತು. ಬ್ರಹ್ಮನ ಅಸ್ತಿತ್ವದ ಉಪದೇಶ. ಬ್ರಹ್ಮತ್ವದ ಕಡೆಗೆ ಮೊದಲ ಹೆಜ್ಜೆ ಊರುವುದಕ್ಕೆ ಒಂದು ಮಾರ್ಗದರ್ಶನ. ಬಾಲ್ಯ ಕಳೆದ ಮಗುವಿಗೆ ಜನ್ಮಕೊಟ್ಟ ಅಪ್ಪ ಮಾಡುವ ಕರ್ತವ್ಯ. ಈ ಭೂಮಿಯ ಮೇಲೆ ಹುಟ್ಟಿದ ಮನುಷ್ಯ ಜನ್ಮದ ಸಾರ್ಥಕತೆಗೆ ತಂದೆಯಾದವನು ಕೊಡುವ ಮೊದಲ ಉಪದೇಶ ನನಗೂ ಪ್ರದಾನವಾಯಿತು. ಆಗ ಅದರ ಗಂಭೀರತೆಯ ಅರಿವಿರಲಿಲ್ಲ. ಹುಡುಗಾಟದಿಂದ ಕಳಚದ ಅರೆ ಮುಗ್ಧ ಮನಸ್ಸು. ಆಗ ಬ್ರಹ್ಮೋಪದೇಶವನ್ನು ದಯಪಾಲಿಸಿದವರು ಸಂಬಂಧದಲ್ಲಿ ಮಾವನಾದ ಶ್ರೀ ಅನಂತ ಭಟ್ಟರು. ನನ್ನ ತಾಯಿ ಹಿರಿಯ ಸಹೋದರ. ನನ್ನ ಮಡಿಲಲ್ಲಿ ಕೂರಿಸಿ ಬಟ್ಟೆಯ ಮುಸುಕಿನಲ್ಲಿ ಯಾರಿಗೂ ಕಾಣದಂತೆ ಜನ್ಮ ಸಾರ್ಥಕತೆಯ ರಹಸ್ಯವನ್ನು ಬೋಧಿಸಿದರು. ಜ್ಞಾನ ಎಂಬುದು ಕತ್ತಲಿನಿಂದ ಬೆಳಕಿನ ಕಡೆಗೆ ಒಯ್ಯುವ ಸಾಧನ. ಬ್ರಹ್ಮೋಪದೇಶ ಅಥವಾ ಜ್ಞಾನೋಪದೇಶದ ನನಗೆ ಆಗ ಮಾವನವರು ಬೋಧಿಸಿದರು. ಹುಟ್ಟಿದ ಮಗುವಿಗೆ ಮೊದಲ ಗುರು ಎಂದರೆ ಅದು ಜನ್ಮ ನೀಡಿದ ತಂದೆ. ಮೋಕ್ಷ ಪ್ರಾಪ್ತಿಗೆ ತಂದೆಯಾದವನು ತೋರಿಸುವ ಜ್ಞಾನದ ಮಾರ್ಗವೇ ಬ್ರಹ್ಮೋಪದೇಶ. ಮುಸುಕನ್ನು ಎಳೆದು ಮಡಿಲಲ್ಲಿ ಕೂರಿಸಿ ಶ್ರೀ ಗಾಯತ್ರೀ ಮಂತ್ರದ ಒಂದೋಂದೇ ಅಕ್ಷರವನ್ನು ಹೇಳಿಸಿದ ತಂದೆಯ ಸ್ಥಾನದ ಮಾವನ ನೆನಪು ಪ್ರತಿದಿನ ಮಾಡಿಕೊಳ್ಳುತ್ತೇನೆ. ಸಂಧ್ಯಾವಂದನೆಯ ಸಮಯದಲ್ಲಿ ಆರಂಭದಲ್ಲಿ ಗುರುವಿಗೆ ನಮಿಸಿದಾಗ ಒಂದು ಅಜ್ಜನ ನೆನಪಾದರೆ ಜತೆಗೆ ನನ್ನ ಅನಂತ ಮಾವನ ನೆನಪಾಗುತ್ತದೆ. ಕೊನೆಯಲ್ಲಿ ಪ್ರವರ ಹೇಳಿ ಗುರು ಅಭಿವಾದನವನ್ನು ಮಾಡಿದಾಗ ಈಗೀಗ ಭಾವ ಪರವಶನಾಗಿ ಆ ಹಿರಿಯ ಚೇತನ ಸ್ವರೂಪಕ್ಕೆ ಮನಸ್ಸಿನಲ್ಲೇ ಸಾಷ್ಟಾಂಗ ನಮಸ್ಕಾರ ಮಾಡಿ ಬಿಡುತ್ತೇನೆ. ಯಾಕೆಂದರೆ ಆಗ ಅದರ ಮಹತ್ವ ಗೌರವ ಅರಿವಾಗದೇ ಇದ್ದರೂ ಈಗ ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ಧ್ಯಾನಾಸಕ್ತನಾಗಿ ಭಗವಂತನನ್ನು ಪ್ರತ್ಯಕ್ಷಕಾಣುವುದಕ್ಕೆ ಸಾಧ್ಯವಾಗಿದ್ದರೆ ಅದಕ್ಕೆ ಪೂಜ್ಯ ಮಾವ ಉಪದೇಶಿಸಿದ ಬ್ರಹ್ಮೋಪದೇಶವೇ ಕಾರಣ. ಶಿಸ್ತು ಬದ್ಧ ಜೀವನಕ್ಕೆ ಮೊದಲ ಪ್ರೇರಕವೇ ಸಂಧ್ಯಾವಂದನೆ.
ಬಾಲ್ಯ ಕಳೆದು ಪ್ರೌಢಾವಸ್ಥೆಗೆ ಬರುವಾಗ ಮನಸ್ಸೂ ಪ್ರೌಢವಾಗಿ ಜಗತ್ತಿನ ವಿಚಾರಗಳನ್ನು ತಿಳಿಯುವ ಸಾಮಾರ್ಥ್ಯವನ್ನು ಗಳಿಸುತ್ತದೆ. ಪಾಪ ಪುಣ್ಯದ ಬಗ್ಗೆ ಒಂದಷ್ಟು ಅರಿವು ಮತ್ತು ಅದರ ಜವಾಬ್ದಾರಿಯ ಅರಿವಾಗುತ್ತದೆ. ಅದು ವರೆಗೆ ಮಾಡಿದ ತಪ್ಪುಗಳು ಅಪರಾಧಗಳು ಪೂರ್ಣ ಜ್ಞಾನದಿಂದ ಮಾಡಿದವುಗಳಲ್ಲ. ಅದು ತಿಳಿಯದೇ ಮಾಡಿದ ತಪ್ಪುಗಳು. ಅದು ಕ್ಷಮಾರ್ಹ ಅಪರಾಧಗಳು. ಆದರೆ ಪ್ರೌಢಾವಸ್ಥೆ ಎಂಬುದು ಈ ಪರಿಮಿತಿಯನ್ನು ಮೀರಿದ ಒಂದು ಹಂತ.
ಮೊದಲೆಲ್ಲ ಪತ್ರ ಬರೆಯುವಾಗ ಒಂದು ಶಿಷ್ಟಾಚಾರವಿತ್ತು. ಅಮ್ಮನಿಗೆ ಮಕ್ಕಳು ಪತ್ರ ಬರೆಯುವುದಾದರೆ ಮಾತೃ ಸ್ವರೂಪ ಎಂದು ಮೊದಲು ಬರೆಯುತ್ತಿದ್ದರು. ಅದರಂತೆ ಅಪ್ಪನಿಗೆ ತೀರ್ಥ ಸ್ವರೂಪ , ಹಾಗೆ ಮಾವನಿಗೆ ಅಥವ ಇನ್ನಿತರ ಹಿರಿಯರಿಗೆ ಬರೆಯುವಾಗ ಪಿತೃ ಸ್ವರೂಪ ಸಮಾನರಾದ , ಮಾತೃ ಸ್ವರೂಪ ಸಮಾನರಾದ, ಅಂದರೆ ಸ್ಥಾನಕ್ಕೆ ಹೋಲಿಕೆ ಮಾಡಿ ಗೌರವಿಸಿ ಬರೆಯುತ್ತಿದ್ದರು. ಆಪ್ಪ ಅಮ್ಮ ಅಲ್ಲದೇ ಇದ್ದರೂ ಅವರ ಸಮಾನ, ಅದರಂತೆ ಗುರು ಸಮಾನ ಹೀಗೆ ಗೌರವಿಸುವುದು ಪತ್ರಲೇಖನದ ಶಿಷ್ಟಾಚಾರಗಳಲ್ಲಿ ಒಂದು. ಈಗ ಪತ್ರ ಬರೆಯುವ ಪ್ರಮೇಯವೇ ಇಲ್ಲದಿರುವಾಗ ಈ ಶಬ್ದಗಳ ಪರಿಚಯವೇ ಇಂದಿನ ತಲೆಮಾರಿಗೆ ಇರುವ ಭರವಸೆಯಿಲ್ಲ. ಸಂವಹನ ಮಾಧ್ಯಮ ಬೆಳೆದಂತೆ ಹಳೆಯ ಕ್ರಮಗಳು ಮಾಯವಾಗಿದೆ. ಅದರೊಂದಿಗೆ ಹಲವು ವಿಚಾರಗಳೂ ಅಪರಿಚಿತವಾಗಿ ಹೋಗಿದೆ.
ಗೌರವ ಸೂಚಕ ಉಲ್ಲೇಖಗಳಲ್ಲಿ ತೀರ್ಥ ಸ್ವರೂಪ ಎಂಬುದು ಎಲ್ಲದಕ್ಕಿಂತ ವಿಶಿಷ್ಟವಾಗಿ ತೋರುತ್ತದೆ. ತಂದೆಯನ್ನು ತೀರ್ಥ ರೂಪ ಎಂದು ಕರೆದು ಗೌರವಿಸುವ ಅರ್ಥದ ಬಗ್ಗೆ ಯೋಚಿಸಿದಾಗ ಅದು ಅತ್ಯಂತ ಗೌರವ ಪೂರ್ಣ ಸಂಬೋಧನೆ . ಅದು ಕೇವಲ ತಂದೆಯನ್ನು ಸಂಬೋಧಿಸುವುದು ಮಾತ್ರವಲ್ಲ ಅದರ ಜತೆಗೆ ಒಂದು ಆಧ್ಯಾತ್ಮಿಕ ಪ್ರಚೋದನೆ ಜಾಗೃತವಾದಂತೆ ಭಾಸವಾಗುತ್ತದೆ. ತೀರ್ಥ ಎಂದರೆ ಭಗವಂತನ ಪಾದೋದಕ. ಸೂಕ್ಷ್ಮವಾಗಿ ಇದು ಅತ್ಯಂತ ಗಮನಾರ್ಹ. ಭಗವಂತನ ಪಾದೋದಕವನ್ನು ನಾವು ಉದ್ಧರಣೆ ಗಾತ್ರದಲ್ಲಿ ಸ್ವೀಕರಿಸಿ ಸಕಲ ಪಾಪ ಕ್ಷಯವಾದ ತೃಪ್ತಿಯನ್ನು ಅನುಭವಿಸುತ್ತೇವೆ. ಪೂಜ್ಯ ತಂದೆಯನ್ನು ತೀರ್ಥ ಅಂತ ಪರಿಗಣಿಸುವುದರಲ್ಲಿ ಒಂದು ಆಧ್ಯಾತ್ಮಿಕ ಸಂದೇಶವಿದೆ. ತೀರ್ಥ ಎಂದರೆ ಸಕಲ ಪಾಪವನ್ನು ಕಳೆಯುವ ಪವಿತ್ರ ಸಾಧನ. ಮಗುವಿಗೆ ಹುಟ್ಟಿಸಿದ ತಂದೆಯೇ ಮೋಕ್ಷದ ಹಾದಿ ತೋರಿಸುವ ಮೊದಲ ಗುರು. ಮೋಕ್ಷಕಾರಕ ತೀರ್ಥವನ್ನು ಕರುಣೀಸುತ್ತಾನೆ. ಸಂಧ್ಯಾವಂದನೆಯ ಒಂದೊಂದು ಅಕ್ಷರವೂ ತಂದೆಯಿಂದ ಬೋಧಿಸಲ್ಪಡುತ್ತದೆ.
ಸಂಧ್ಯಾವಂದನೆ, ಪರಮಾತ್ಮನಲ್ಲಿ ಐಕ್ಯವಾಗುವ ಒಂದು ವಿಶಿಷ್ಟವಾದ ಘಳಿಗೆ. ಕೇವಲ ಮನಸ್ಸು ದೇಹ ಒಟ್ಟುಗೂಡಿ ಯಾವುದೂ ಇಲ್ಲದೆ ಆಚರಿಸುವ ಪರಮಾತ್ಮನನ್ನು ಖಾಸಗಿಯಾಗಿ ಕಾಣಬಲ್ಲ ಅವಕಾಶ. ಇಲ್ಲಿ ಯಾರೂ ಯಾವುದಕ್ಕೂ ಪಾಲುದಾರರಲ್ಲ. ಕೇವಲ ಆಶೀರ್ವದಿಸಿದ ಗುರು, ಕಾಣುವ ಪರಮೇಶ್ವರ ಬೇರೆ ಏನೂ ಇಲ್ಲದ ಒಂದು ಕ್ಷಣ. ಮೂರ್ತಿಯಾಗಲೀ ಪ್ರತಿಮೆಯಾಗಲೀ ಇಲ್ಲದೆ ಪರಮಾತ್ಮನನ್ನು ಕಾಣುವ ಅದ್ಭುತ ಅವಕಾಶ. ಪೂಜೆ ಯಜ್ಞ ಯಾಗಾದಿಗಳಲ್ಲಿ ಇರುವ ಯಾವ ಮಾಧ್ಯಮವೂ ಇಲ್ಲದೆ ಪರಮಾತ್ಮ ದರ್ಶನ ಸಾಧ್ಯವಾಗುತ್ತದೆ. ರೂಪವಿಲ್ಲದ ಗುಣವಿಲ್ಲದ ಭಾವವಿಲ್ಲದ ಈಶ್ವರ ಸ್ವರೂಪವನ್ನು ಮನಸ್ಸಿನಲ್ಲಿ ಕಾಣುವ ಅರ್ಹತೆಯನ್ನು ಗುರು ಕಲ್ಪಿಸಿಕೊಡುತ್ತಾನೆ. ನಮ್ಮದೇ ಭಾವದಲ್ಲಿ ಭಗವಂತನ ಸ್ವರೂಪವನ್ನು ನಿರ್ಧರಿಸಿ, ಆ ಶ್ರೇಷ್ಠತೆಗೆ ನಮಸ್ಕರಿಸುವ ಉಪದೇಶ ಗುರುವಿನಿಂದ ಲಭ್ಯವಾಗುತ್ತದೆ. ಈ ಮೊದಲ ಗುರುವಿನ ಸ್ಥಾನ ಜನ್ಮ ನೀಡಿದ ಜನಕನಿಗೆ. ಹಾಗಾಗಿಯೇ ಜನಕನೆಂದರೆ ಆತ ತೀರ್ಥ ರೂಪ.
ಮುಂಜಾನೆಯ ಬ್ರಾಹ್ಮಿ ಮುಹೂರ್ತದಲ್ಲಿ ಪರಿಶುದ್ದನಾಗಿ ನಿಂತು ಸೂರ್ಯನಿಗೆ ಅರ್ಘ್ಯವನ್ನು ಬಿಡುವಾಗ ಸಕಲವನ್ನು ಭಗವಂತನಿಗೆ ಸಮರ್ಪಿಸಿದ ತೃಪ್ತಿ. ನೇರ ಕುಳಿತು ಜಪ ಮಾಡಬೇಕಾದರೆ ಸಪ್ತ ಚಕ್ರಗಳಲ್ಲೂ ಸಂಚರಿಸುವ ಭಗವಂತನ ಚೈತನ್ಯ ಭಗವಂತನ ದರ್ಶನವನ್ನು ಮಾಡಿಸುತ್ತದೆ. ಆ ಭಗವಂತನ ರೂಪ ಅಂತರಂಗದ ಬೆಳಕಿನಲ್ಲಿ ದರ್ಶನವಾಗುತ್ತದೆ. ಇದಕ್ಕೆಲ್ಲ ಕಾರಣೀರೂಪ ಎಂದರೆ ಜನ್ಮ ಕೊಟ್ಟತಂದೆ. ಕೊನೆಯಲ್ಲಿ ಆ ತೀರ್ಥ ರೂಪನಿಗೆ ಅಭಿವಾದನವನ್ನು ಸಲ್ಲಿಸುವಾಗ ಗುರು ಸ್ಮರಣೆಯಿಂದ ಕೃತಜ್ಞತಾ ಭಾವ , ಎಲ್ಲವನ್ನೂ ಪಡೆದ ಆತ್ಮ ತೃಪ್ತಿ ಲಭ್ಯವಾಗುತ್ತದೆ.
ಅಂದು ಸೋದರ ಮಾವ ತಂದೆಯ ಸ್ಥಾನದಲ್ಲಿದ್ದು ಪವಿತ್ರ ಪಾಣಿಯಾಗಿ ನನ್ನನ್ನು ಮಡಿಲಲ್ಲಿ ಕುಳ್ಳಿರಿಸಿ ಗಾಯತ್ರೀ ಮಂತರದ ಒಂದೋಂದೇ ಅಕ್ಷರವನ್ನು ಸ್ವರ ಭಾರದ ಸಹಿತ ಉಪದೇಶ ಮಾಡಿದ್ದು ಪ್ರತಿ ದಿನ ಸಂಧ್ಯಾವಂದನೆ ಮಾಡುವಾಗ ನೆನಪಿಗೆ ಬರುತ್ತದೆ. ಏಕಾಗ್ರತೆಯಲ್ಲಿ ಪರಮೇಶ್ವರನ ಸ್ವರೂಪ ಮನಸ್ಸಿನಲ್ಲೆ ಕಂಡು ಸ್ವತಃ ನಾನೂ ಪರಮೇಶ್ವರನಾಗುವ ಅದ್ಭುತ ಸಮಯ ಅದು ಪ್ರಾತಃ ಕಾಲ. ಇಂತಹ ಅದ್ಭುತ ದರ್ಶನಕ್ಕೆ ಕಾರಣವಾಗುವ ತಂದೆಯ ಉಪದೇಶ ನಿಜಕ್ಕೂ ಪರಮಾತ್ಮನ ಧರ್ಶನವನ್ನು ಮಾಡಿಕೊಡುತ್ತದೆ. ನನ್ನ ಪಾಲಿಗೆ ತೀರ್ಥರೂಪರೆಂದರೆ ಅದೇ ನನ್ನ ಮಾವ. ಗಾಯತ್ರೀ ಮಂತ್ರೋಪದೇಶದಲ್ಲಿ ತೀರ್ಥ ರೂಪ ಅನ್ವರ್ಥ ಪದವಿಯಾಗಿಬಿಡುತ್ತದೆ. ಭವದ ಬಂಧನವನ್ನು ಬಿಡಿಸಿ ಮೋಕ್ಷ ಪದವಿಗೇರಿಸುವ ತಂದೆ ಪರಮಾತ್ಮನ ದರ್ಶನ ಭಾಗ್ಯವನ್ನು ಕರುಣಿಸುವ ತಂದೆ ನಿಜಕ್ಕೂ ತೀರ್ಥ ರೂಪ.
ಸಂಧ್ಯಾವಂದನೆ ಎಂದರೆ ಅಲ್ಲಿ ಮೂರ್ತಿ ಇಲ್ಲ, ಪ್ರತಿಮೆ ಇಲ್ಲ. ಪರಿಕರ ಯಾವುದೂ ಇಲ್ಲದೆ, ಲೌಕಿಕ ಬಯಕೆಗಳ ಸಂಕಲ್ಪವಿಲ್ಲದ ಕೇವಲ ಮನಸ್ಸಿನಿಂದ ಮಾಡುವ ದುರಿತ ಕ್ಷಯಾರ್ಥದ ನಿತ್ಯ ಕರ್ಮ. ಇಲ್ಲಿ ಭಗವಂತನ ನೇರದರ್ಶನ. ಹೆತ್ತ ತಂದೆಯನ್ನು ಗುರುವನ್ನು ಏಕ ಕಾಲದಲ್ಲಿ ಸ್ಮರಿಸುವ ದಿವ್ಯ ಉಪಾಸನೆ ಸಂಧ್ಯಾವಂದನೆ.
No comments:
Post a Comment