Saturday, August 9, 2025
ಪುರ್ಸಾದ
Saturday, August 2, 2025
ಮುಖವಾಡ
"ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಮೊದಲ ವ್ಯಕ್ತಿಗಳೆಂದರೆ ಹೆತ್ತ ಅಪ್ಪ ಅಮ್ಮ"
ಒಬ್ಬ ಗಣ್ಯ ಅಪರಾಧಿಗೆ ಶಿಕ್ಷೆಯಾದಾಗ ವಾರ್ತಾ ಮಾಧ್ಯಮಗಳು ಹಲವು ಗಣ್ಯ ವ್ಯಕ್ತಿಗಳ ಅಭಿಪ್ರಾಯ ಕೇಳುವುದು ಸಾಮಾನ್ಯವಾಗಿದೆ. ಅಭಿಪ್ರಾಯ ಏನೇ ವ್ಯಕ್ತವಾಗಲೀ ಇದರಲ್ಲೊಂದು ಅಂತರ್ಗತ ಭಾವವನ್ನು ಹುಡುಕಬಹುದು. ಒಂದಿಷ್ಟು ಗಣ್ಯವ್ಯಕ್ತಿಗಳೂ ಸಹ ಆತ್ಮಾವಲೋಕನ ಮಾಡಿಕೊಳ್ಳಬಹುದಾದ ಸೂಕ್ಷ ಅವಕಾಶ ಇದು. ನಮ್ಮ ವ್ಯವಸ್ಥೆ ಹೇಗಿದೆ ಎಂದರೆ, ಇಲ್ಲಿ ಸಿಕ್ಕಿಬಿದ್ದವನು ಮಾತ್ರಾ ಅಪರಾಧಿ. ಸಿಕ್ಕಿ ಹಾಕದ ಅಪರಾಧಿಗಳು ಮುಖವಾಡ ಹೊತ್ತು ನಮ್ಮ ನಡುವೆ ಸಂಭಾವಿತರಾಗಿಬಿಡುತ್ತಾರೆ. ಒಬ್ಬ ಕಳ್ಳ ಸಿಕ್ಕಿಬಿದ್ದಾಗ ಮತ್ತೊಬ್ಬ ಕಳ್ಳನೂ ಹಿಡಿದು ಬಡಿದಂತೆ ಮುಖವಾಡಗಳು ಬೇಕಾ ಬಿಟ್ಟಿಯಾಗಿ ಬಿಕರಿಯಾಗಿಬಿಡುತ್ತವೆ.
ನಿನ್ನೆ ನಡೆದ ಪ್ರಕರಣ ನಿಜಕ್ಕೂ ಒಂದು ಅವಿಸ್ಮರಣೀಯ ಪ್ರಕರಣ. ಒಬ್ಬನಿಗೆ ಶಿಕ್ಷೆಯಾಯಿತು ಏನೋ ನಿಜ. ಆದರೆ ಅದು ಹಲವು ಚಿಂತನೆಗಳಿಗೆ ಅವಕಾಶ ಕೊಡುತ್ತದೆ. ದೂರು ಕೊಟ್ಟ ಆ ಅವಿದ್ಯಾವಂತ ಹೆಣ್ಣನ್ನು ಇಲ್ಲಿ ಮೊದಲು ಅಭಿನಂದಿಸಬೇಕು. ಅಚಲವಾಗಿ ನಿಂತ ಆಕೆಯ ಎದೆಗಾರಿಕೆಯೊಂದೇ ಈ ಶಿಕ್ಷೆಯ ಪರಿಣಾಮಕ್ಕೆ ಮೂಲ ಕಾರಣ. ಆಕೆ ಅನುಭವಿಸಿದ ನೋವು ಎಂತಹುದಿರಬಹುದು? ಯಾರಾದರೊಬ್ಬರು ನಮ್ಮ ಮೈಯನ್ನು ನಮ್ಮ ಅನುಮತಿಯಿಲ್ಲದೇ ಸ್ಪರ್ಶಿಸಿದರೆ ಹಲವು ಸಲ ನಮಗೆ ಅಸಹ್ಯವಾಗಿಬಿಡುತ್ತದೆ. ನಮ್ಮ ಮೈ ಯಾರು ಮುಟ್ಟಬೇಕೋ ಬೇಡವೋ ಅದನ್ನು ನಿರ್ಧರಿಸುವ ಸ್ವಾತಂತ್ರ್ಯ ನಮ್ಮದೇ ಆಗಿರುವಾಗ , ಒಂದು ಲೈಂಗಿಕ ದೌರ್ಜನ್ಯ ಸಹಿಸಿ ಮತ್ತದನ್ನು ಪ್ರತಿಭಟಿಸುವುದು ನಿಜಕ್ಕೂ ಆತ್ಮಾಭಿಮಾನದ ಪ್ರಶ್ನೆ. ಆಕೆಯ ನೋವು ಅವಮಾನ ಇವುಗಳಿಗೆಲ್ಲ ಈ ಶಿಕ್ಷೆ ತೃಪ್ತಿಯನ್ನಂತೂ ಕೊಡುವುದಕ್ಕೆ ಸಾಧ್ಯವಿಲ್ಲ. ಕೇವಲ ಸಾಂತ್ವನ ಮಾತ್ರ. ಯಾಕೆಂದರೆ ಬದುಕು ಎಂಬುದೇ ಹಾಗೆ. ಅದು ಮುರುಟಿ ಹೋದರೆ ಯಾವ ಧೈರ್ಯ ಸ್ಥಿತ ಪ್ರಜ್ಞತೆ ಇದ್ದರೂ ಸಂತುಲನೆಗೆ ತರುವುದಕ್ಕೆ ಸಾಧ್ಯವಾಗುವುದಿಲ್ಲ. ಕಳೆಯಿತೋ ಹೋಯಿತು ಎನ್ನುವ ಹಾಗೆ ಇರುತ್ತದೆ. ಆದರೆ ಎನೂ ಆಗಲಿಲ್ಲ ಬದುಕು ಅಷ್ಟೇ ಅಲ್ಲ ಎಂಬುದನ್ನು ಪರಿಸರ ತೋರಿಸಿಕೊಡುವ ಅನಿವಾರ್ಯತೆ ಇದೆ.
ಹುಲಿ ಹಸಿವಿನಿಂದ ಒಂದು ಜಿಂಕೆಯ ಮೇಲೆ ಬಿದ್ದಾಗ ಹುಲಿಯ ಹಸಿವಿನ ಬಗ್ಗೆ ಅನುಕಂಪ ಮೂಡುವುದಿಲ್ಲ. ಆದರೆ ಜಿಂಕೆಯ ಅಸಹಾಯಕತೆಯಬಗ್ಗೆ ಮನಸ್ಸು ಮರುಗುತ್ತದೆ. ಆದರೆ ಮನುಷ್ಯನ ಈ ವಿಕೃತಿಯ ಹುಲಿಯಂತೆ ಹಸಿವು ಕಾರಣವಲ್ಲ. ವಿಪರ್ಯಾಸವೆಂದರೆ ಶಿಕ್ಷೆ ಏನೋ ಸಿಕ್ಕಿತು. ನ್ಯಾಯಾಂಗ ಬಲಿಷ್ಠವಾಗಿ ಜಯವನ್ನು ಗಳಿಸಿತೇನೋ ಸತ್ಯ. ಆದರೆ ಇದೇ ನ್ಯಾಯ ಪರ್ಯಾಪ್ತವಲ್ಲ. ಸಿಕ್ಕಿಹಾಕಿಕೊಳ್ಳದ ಇದಕ್ಕಿಂತಲೂ ಕ್ರೂರವಾದ ಅಪರಾಧಿಗಳು ಏಷ್ಟೋ ಇದ್ದಾರೆ. ಇವುಗಳು ಪಾಠ ಅಂತ ನಾವು ತಿಳಿದುಕೊಂಡರೂ ಈ ಪಾಠ ಯಾರು ಕಲಿಯುತ್ತಾರೋ ಎಂಬುದು ಅಷ್ಟೇ ವಿಡಂಬನೆಯಾಗಿಬಿಡುತ್ತದೆ. ಆ ಹೆಣ್ಣು ಧೈರ್ಯದಿಂದ ದೂರು ಕೊಟ್ಟ ಕಾರಣ ಶಿಕ್ಷೆಯ ತನಕ ಪ್ರಕರಣ ಬಂದು ಅಂತ್ಯ ಕಂಡಿತು. ಇಲ್ಲವಾದರೆ? ಹಾಗಾಗಿ ದೂರು ಕೊಡುವ ಅವಕಾಶ ಹಕ್ಕು ಇದ್ದರೂ ಅದನ್ನು ಉಪಯೋಗಿಸುವ ಅರ್ಹತೆ ಮಾತ್ರ ಲಭ್ಯವಾಗುವುದು ಅಪರೂಪ. ನಮ್ಮ ವ್ಯವಸ್ಥೆ ಹಾಗಿದೆ. ಸಿಕ್ಕಿದ ಜಯ, ಸಾಬೀತಾದ ಅಪರಾಧವೂ ಹಲವು ಸಲ ದೌರ್ಜನ್ಯಕ್ಕೆ ಒಳಗಾದವರ ಮುಂದಿನ ಬದುಕನ್ನು ಕಮರಿಸಿಬಿಡುತ್ತದೆ. ಸುತ್ತ ಮುತ್ತಲಿನ ಬಂಧು ಬಳಗವೂ ದೂರವಾಗುವ ಸಂಭವ ಇರುತ್ತದೆ. ಯಾಕೆಂದರೆ ಈ ಮರ್ಯಾದೆ ಎಂಬ ಪ್ರಶ್ನೆಯೇ ಹಾಗೆ , ಆದ ಘಟನೆ ಹತ್ತು ಜನರಿಗೆ ತಿಳಿಯದೇ ಇರಲಿ ಎಂಬ ಆತಂಕದಲ್ಲೇ ಮರೆಯಾಗಿಬಿಡುತ್ತದೆ.
ಅಪರಾಧಿಗೆ ಶಿಕ್ಷೆಯಾಯಿತು. ಒಂದು ಹೆಣ್ಣು ದೌರ್ಜನ್ಯಕ್ಕೆ ಒಳಗಾದರೂ ಅಪರಾಧಿಯ ಪರ ವಾದಿಸಿದ್ದು ಒಂದು ಸುಶಿಕ್ಷಿತ ಹೆಣ್ಣೇ ಎಂದು ತಿಳಿಯುವಾಗ ವಿಚಿತ್ರ ಎನಿಸುತ್ತದೆ. ಇದೇ ದೌರ್ಜನ್ಯ ವಾದಿಸುವವರಿಗೆ ಅಥವ ಅವರ ಸಂಭಂಧಿಕರಿಗೆ ನಡೆದಲ್ಲಿ ಅವರ ಈ ವಾದ ಯಾವ ರೂಪವನ್ನು ಪಡೆಯಬಹುದು. ವಾದ ಗೆಲ್ಲುವುದಕ್ಕೆ ಒದಗಿಸುವ ಸಮರ್ಥನೆ ನೋಡುವಾಗ ಅಯ್ಯೋ ಮನುಷ್ಯ ಯಾವ ವೇಷವನ್ನು ಹಾಕಬಲ್ಲ ಎಂದನಿಸುತ್ತದೆ. ಪ್ರಾಣಿಗಳೂ ಅದೂ ಗೋಸುಂಬೆಯಾದರೂ ರೂಪ ಬದಲಿಸುವುದಿಲ್ಲ. ಆದರೆ ಮನುಷ್ಯ ಮಾತ್ರ ತನ್ನ ರೂಪವನ್ನು ಬದಲಿಸುತ್ತಾ ಇರುತ್ತಾನೆ. ಯಾರಿಗೋ ಒಬ್ಬರಿಗೆ ಶಿಕ್ಷೆಯಾಗುವಾಗ ಆಗುವ ಸಂತೋಷ, ಶಿಕ್ಷೆಯಿಂದ ತಪ್ಪಿಸ್ಕೊಳ್ಳುವ ಮುಖವಾಡ ಧಾರಿಗಳನ್ನು ನೋಡುವಾಗ ಆ ಸಂತೋಷ ಉಳಿಯುವುದಿಲ್ಲ. ನ್ಯಾಯ ಜಯ ಸಾಧಿಸಿದೆ ಎಂದನಿಸುವುದಿಲ್ಲ. ಶಿಕ್ಷೆ ಪ್ರಾಯಶ್ಚಿತ್ತ ಅಂತ ತಿಳಿಯುವವರಿದ್ದಾರೆ. ಆದರೆ ಈ ಅಪರಾಧಿಯ ಮುಖವನ್ನು ನೋಡುವಾಗ ಹಾಗೆ ಅನಿಸುವುದೇ ಇಲ್ಲ. ಸಭ್ಯನಂತೆ ಮುಖವಾಡ ಧರಿಸುವಾಗ ಇವರಿಗೆ ಯಾವ ಶಿಕ್ಷೆ ಸಿಕ್ಕಿದರೂ ಇವರು ಬದಲಾಗುವುದಿಲ್ಲ ಎಂದನಿಸುತ್ತದೆ.
ಒಬ್ಬ ಅಪರಾಧಿ ಹೇಗೆ ಹುಟ್ಟಿಕೊಳ್ಳುತ್ತಾನೋ ಎಂಬುದು ವಿಚಿತ್ರ ಸಂಗತಿ. ಯಾವ ತಾಯಿಯೂ ತಾನು ಅಪರಾಧಿಗೆ ಜನ್ಮ ಕೊಡಬೇಕು ಎಂದು ಬಯಸುವುದಿಲ್ಲ. ಅದು ಮಹಿಷಾಸುರನ ತಾಯಿಯಂಥವರಿಂದ ಮಾತ್ರ ಸಾಧ್ಯ. ಆದರೂ ಹುಟ್ಟಿದ ನಂತರ ಅಪರಾಧಿಗಳಾಗುತ್ತಾರೆ. ತಂದೆ ತಾಯಿ ಕಾರಣವೋ ಪರಿಸರ ಕಾರಣವೋ ಅಂತು ಅಪರಾಧ ಉಳಿದವರ ಬದುಕನ್ನು ನಾಶಮಾಡಿಬಿಡುತ್ತದೆ. ಉಳಿದವರ ಬದುಕು ಮಾತ್ರವಲ್ಲ...ಒಬ್ಬ ಅಪಾರಾಧಿ ಸೆರೆ ಮನೆಯತ್ತ ಮುಖ ಮಾಡಿದಾಗ ಅನಿಸುವುದು ಛೇ ಹೆತ್ತ ಅಪ್ಪ ಅಮ್ಮನಿಗೆ ಹೇಗೆ ಅನಿಸಬಹುದು ಅಂತ ಯೋಚನೆ ಬಂದು ಬಿಡುತ್ತದೆ. ಯಾಕೆಂದರೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಮೊದಲ ವ್ಯಕ್ತಿಗಳೆಂದರೆ ಹೆತ್ತ ಅಪ್ಪ ಅಮ್ಮ. ಇದೇ ಕಾರಣಕ್ಕೆ ಹಲವು ಸಲ ಈ ತಪ್ಪನ್ನು ಮುಚ್ಚಿಡುವುದಕ್ಕೆ ಹೆತ್ತಕರುಳು ಯತ್ನ ಮಾಡುತ್ತದೆ. ಆದರೆ ಒಂದು ಕರುಳಿನ ನೋವು ಮತ್ತೊಂದು ಕರುಳಿನ ನೋವನ್ನು ಅರಿಯುವುದೇ ಇಲ್ಲ.
Tuesday, July 22, 2025
ತೆರಿಗೆ
ಮೊನ್ನೆ ಟಿವಿ ಚರ್ಚೆಯಲ್ಲಿ ಯಾರೋ ಒಬ್ಬರು ಹೇಳಿದ ನೆನಪು " ಯಾವುದೇ ಸರಕಾರ ಇದ್ದರೂ ಯು ಪಿ ಐ ಪಾವತಿ ವಿಧಾನ ಬರುತ್ತಿತ್ತು. ಬದಲಾವಣೆ ಅಭಿವೃದ್ದಿ ಜಗದ ನಿಯಮ. ಇದಕ್ಕೆ ಯಾರೂ ಕಾರಣರಲ್ಲ. ಮೋದಿ ಕಡಿದು ಗುಡ್ಡೆ ಹಾಕಿದ್ದು ಏನೂ ಇಲ್ಲ." ಆಗ ಸರಿ ಅಂತ ತೋಚಿರಬಹುದು. ಹೌದಲ್ವ...ಎಷ್ಟೋ ಬದಲಾಗಿದೆ, ಹಾಗೇ ಇದು..ಆದರೆ ಇವತ್ತು ಅದೇ ಯುಪಿಐ ಬಗ್ಗೆ...ಅದನ್ನು ಬಳಕೆ ತಂದದ್ದೇ ಮೋದಿ. ಅದರಿಂದಲೇ ಹೀಗೆಲ್ಲ ಆಯಿತು ಅಂತ. ಇದರಲ್ಲಿ ವಿಶೇಷವೇನೂ ಇಲ್ಲ.ಯಾವುದೇ ಆದರೂ ನಮಗೆ ಅನುಕೂಲವಾದರೆ ಅದರೆ ಪ್ರಯೋಜನ ಪಡೆಯುತ್ತೇವೆ. ಸಮಸ್ಯೆ ಎದುರಾದಾಗ ಎಲ್ಲ ತಪ್ಪುಗಳನ್ನು ಅದರ ಮೇಲೆ ಹಾಕಿಬಿಡುತ್ತೇವೆ. ಯಾವುದನ್ನೇ ಆದರೂ ಉಪಯೋಗಿಸುವಾಗ ವಿವೇಚನೆ ಎಂಬುದು ಅತೀ ಮುಖ್ಯ. ನಮ್ಮ ನಿರ್ಧಾರಗಳು ನಮ್ಮ ನಡೆಗಳು ವಿವೇಚನ ರಹಿತವಾದರೆ ನಮ್ಮ ತಪ್ಪುಗಳು ಗೋಚರಿಸುವ ಬದಲು ಮತ್ತೊಬ್ಬರು ಅಪರಾಧಿಗಳಾಗಿಬಿಡುತ್ತಾರೆ.
ಮೊದಲಿನಿಂದಲೂ ನಮಗೆ ತೆರಿಗೆ ಕಟ್ಟುವುದೆಂದರೆ ಅದು ನಷ್ಟದ ಬಾಬ್ತು. ನನ್ನ ವೃತ್ತಿಯಲ್ಲಿ ಈಗ ಬಹುಪಾಲು ಜನರು ತೆರಿಗೆ ಕಟ್ಟುವ ಅರಿವಿನಿಂದ ಕಾಳಜಿಯಿಂದ ಬರುವುದಿಲ್ಲ. ತೆರಿಗೆ ಎಂಬ ಭೂತವನ್ನು ಹೇಗೆ ಕಟ್ಟಿಹಾಕಬಹುದು ಎಂಬ ಯೋಚನೆಯಲ್ಲೇ ಬರುತ್ತಾರೆ. ನಾವು ಓಡಾಡುವ ರಸ್ತೆ, ವಿದ್ಯುತ್ ನೀರಾವರಿ ಇವುಗಳೆಲ್ಲ ಕೇವಲ ಉಚಿತವಾಗಿ ಪ್ರಕೃತಿಯಿಂದ ಸಿಗುವುದು ಅಂತ ತಿಳಿಯುತ್ತೇವೆ. ಹೆಚ್ಚೇಕೆ...ಸರಕಾರ ಕೊಡುವ ಉಚಿತ ಯೋಜನೆಗಳು ನಾವು ಕಟ್ಟಿದ ತೆರಿಗೆಯಿಂದಲೇ ಬರುತ್ತದೆ ಎಂಬುದನ್ನೂ ಮರೆತು ಬಿಡುತ್ತೇವೆ. ಹಾಲು ಎಲ್ಲಿಂದಲೂ ಬರಲಿ ಹಸುವಿನ ಪರಿವೆ ನಮಗೇಕೆ?
ಮಾರಾಟ ತೆರಿಗೆ ಅದೇನು ಈಗ ಹೊಸತಲ್ಲ. ಆದರೆ ಈಗ ಅದರೆ ಹರಿತ ಅನುಭವಕ್ಕೆ ಬರುತ್ತದೆ. ಯಾರೋ ಇದ್ದವರು ತೆರಿಗೆ ಕಟ್ಟುತ್ತಾರೆ ಎಂಬ ಅನಾಸಕ್ತಿ ಇದುವರೆಗೆ ಇತ್ತು. ಈಗ ಏಲ್ಲೋ ಬಂದ ಕೊರೋನ ನಮ್ಮ ಮನೆಬಾಗಿಲಿಗೆ ಬಂದಹಾಗೆ ಹೌಹಾರಿ ಬಿಡುತ್ತಾರೆ. ಕೊನೆ ಪಕ್ಷ ನಾವು ತೆರಿಗೆ ಕಟ್ಟುವ ನಮ್ಮಿಂದಲೂ ಸರಕಾರ ತೆರಿಗೆ ಕೇಳುತ್ತದೆ ಎಂಬ ಸ್ಥಿತಿಗೆ ನಾವು ಬಂದೆವಲ್ಲಾ ಎಂದು ತಿಳಿದುಕೊಳ್ಳುವ ಅದರಿಂದ ಒದಗಿದ ಘನತೆಯ ಬಗ್ಗೆ ಯೋಚಿಸುವುದಿಲ್ಲ. ನಮ್ಮ ಘನಗೆಗೆ ವಿನಾಕಾರಣ ಖರ್ಚುಮಾಡುವ ನಮಗೆ ತೆರಿಗೆ ಮಾತ್ರ ನಷ್ಟದ ಬಾಬತ್ತಾಗಿ ಕಾಣುತ್ತದೆ.
ಮಾರಾಟ ತೆರಿಗೆ ಒಂದು ಇಪ್ಪತ್ತು ವರ್ಷದ ಹಿಂದಕ್ಕೆ ಹೋಗಿ ನೋಡಿದರೆ ಆಗಲೂ ಇತ್ತು , ಎಳು ಲಕ್ಷ ವ್ಯಾಪಾರವಹಿಟು ಮಾಡಿದರೆ ಮಾರಾಟ ತೆರಿಗೆಯ ವ್ಯಾಪ್ತಿಯಲ್ಲಿ ಖಡ್ಡಾಯ ನೊಂದನಿ ಮಡಿಸಿ ಸರಕಾರಕ್ಕೆ ತೆರಿಗೆ ಪಾವತಿಸಬೇಕು ಈಗ ಅದೇ ಪರಿಮಿತಿ 40 ಲಕ್ಷ ತಲುಪಿದೆ.
ನಾಣ್ಯ ರಾಶಿಹಾಕಿ ಕೈಗೆ ಸಿಕ್ಕಿದ ಹಣವನ್ನು ಬಾಚಿಕೊಳ್ಳಿ ಎಂದರೆ ನಾವು ನಮ್ಮ ಹತ್ತೂ ಬೆರಳುಗಳನ್ನು ಎಷ್ಟು ಸಾಧ್ಯವೋ ಅಷ್ಟು ನಾಣ್ಯವನ್ನು ವಶಪಡಿಸಿಕೊಳ್ಳುತ್ತೇವೆ. ಕೈಬೆರಳ ಸಂಧಿಯಿಂದಿ ನಾಣ್ಯ ಹೊರಬರದಂತೆ ಪ್ರಯತ್ನ ಮಾಡುತ್ತೇವೆ. ತೆರಿಗೆ ಸಂಗ್ರಹ ಎಂದರೆ ಹೆಚ್ಚು ಕಮ್ಮಿ ಇದೇ ವಿಧಾನವನ್ನು ಹೋಲುತ್ತದೆ. ಸರಕಾರ ತನ್ನ ಬೆರಳುಗಳನ್ನು ಅರಳಿಸಿ ಎಷ್ಟು ಅಷ್ಟು ತೆರಿಗೆ ಸಂಗ್ರಹಿಸುವುದಕ್ಕೆ ನೋಡುತ್ತದೆ. ಅದನ್ನು ತಪ್ಪು ಎನ್ನುವುದಕ್ಕೆ ಸಾಧ್ಯವೆ? ಅದು ಸಂವಿಧಾನದ ಗೌರವ ಇದ್ದವರಿಗೆ ಇಂತಹ ಮಾತುಗಳು ಬರುವುದಿಲ್ಲ. ತೆರಿಗೆ ಎಂಬುದು ಸುಮ್ಮನೇ ಬರುವುದಿಲ್ಲ. ಅದರೆ ಹಿಂದೆ ಹಲವರ ಪರಿಶ್ರಮ ಇರುತ್ತದೆ. ಅದು ಸಂವಿಧಾನಕ್ಕೆ ಅನುಗುಣವಾಗಿ ಇರುತ್ತದೆ. ಕೇಂದ್ರ ಅಥವಾ ರಾಜ್ಯ ಸರಕಾರವನ್ನು ದೂರುವಾಗ ಈ ಸಂವಿಧಾನವನ್ನು ತಿಳಿದಿರಬೇಕು.
ಈ ವರ್ಷ ಆದಾಯ ತೆರಿಗೆ ಮಿತಿ ಹನ್ನೆರಡು ಲಕ್ಷ ಇದೆ. ಹಾಗಂತ ನಾವು ಮಿತಿ ಮೀರಿ ಆದಾಯ ತೋರಿಸಿದರೆ ಈವರೆಗೆ ನಾವು ಏನು ಮಾಡುತ್ತಿದ್ದೀರಿ ಅಂತ ಸರಕಾರ ಕೇಳುವುದಿಲ್ಲ ಎಂದು ಏನು ಭರವಸೆ ಇದೆ. ಇಲ್ಲಿ ವಿವೇಚನೆ ಅತೀ ಮುಖ್ಯ. ತೆರಿಗೆ ಕಟ್ಟುವುದಕ್ಕೆ ಹಿಂಜರಿಯುವಾಗ ನಲ್ವತ್ತು ಲಕ್ಷ ಕೇವಲ ಸಣ್ಣ ಮೊತ್ತ ಎಂದಾಗುವುದಿಲ್ಲ. ಆಷ್ಟು ಸಂಪಾದಿಸುವವನು ತೆರೆಯ ಮರೆಗೆ ಹೇಗೆ ಸರಿದು ಹೋಗಬಲ್ಲ. ತೆರಿಗೆ ಕಟ್ಟುವುದನ್ನು ಕಟ್ಟಲೇ ಬೇಕು. ಅದನ್ನೆಂದೂ ಕಳಚಿ ಹಾಕುವುದಕ್ಕೆ ಸಾಧ್ಯವಿಲ್ಲ. ಆದರೆ ಒಂದು ಇಷ್ಟು ಕಷ್ಟ ಪಟ್ಟು ತೆರಿಗೆ ಕಟ್ಟುವಾಗ, ಅದೇ ತೆರಿಗೆ ಹಣವನ್ನು ಯಾವುದೇ ನಾಚಿಕೆ ಮರ್ಯಾದೆ ಇಲ್ಲದೆ ದುಂದು ವೆಚ್ಚ ಮಾಡುವ ಮಂತ್ರಿ ಹಾಸಕರನ್ನು ಕಾಣಬಹುದು. ಈ ತೆರಿಗೆ ಹಣ ಜನಸಾಮಾನ್ಯರನ್ನು ಹಿಂಡಿ ಬಂದ ಹಣ ಎಂಬ ಸಾಮಾನ್ಯ ಪ್ರಜ್ಞೆಯನ್ನಾದರೂ ಈ ಸರಕಾರದ ಅಂಗಗಳು ಅರಿಯಬೇಕಿದೆ.
Sunday, July 6, 2025
ಪ್ರೇಮ ಪ್ರಣಯ
ಕಛೇರಿಗೆ ಹೋಗಿ ಕೆಲಸದಲ್ಲಿ
ನಿರತನಾದರೂ ಅತ್ತಿಗೆಯ ಕರೆಯ ಬಗ್ಗೆ ಮನಸ್ಸು ಯೋಚಿಸುತ್ತಿತ್ತು. ಕಛೇರಿಯ ಕೆಲಸದ ಒತ್ತಡದ ನಡುವೆ
ಒಂದು ಸಲ ಅಲ್ಲಿಗೆ ಹೋಗೋಣವೆಂದರೂ ಸಾಧ್ಯವಾಗದು. ದಿವಾಕರ ಆತಿಗೆಯ ಬಗ್ಗೆ ಯೋಚಿಸಿದ. ಆತ ಇಂದು ಈ
ನೆಲೆಗೆ ಬರಬೇಕಾದರೆ ಮೊದಲ ಮೆಟ್ಟಿಲಿಗೆ ಆಧಾರವಾದದ್ದು ಅತ್ತಿಗೆಯ ಹೆಗಲು. ದಿವಾಕರನ ಅಪ್ಪ ಅಮ್ಮನಿಗೆ ಎರಡು ಮಕ್ಕಳು. ದಿವಾಕರನ
ಅಣ್ಣ ಶಂಕರ ವಿದ್ಯಾಭ್ಯಾಸ ಮುಗಿಸಿ ಬ್ಯಾಂಕ್
ನಲ್ಲಿ ಕೆಲಸಗಳಿಸಿಕೊಂಡ. ಕೆಲಸದಲ್ಲಿ
ಬೆಂಗಳೂರಿಗೆ ಸೇರಿದನಂತರ ಆತನಿಗೆ ಮದುವೆಯಾಯಿತು.
ಮದುವೆಯಾಗಿ ಬೆಂಗಳೂರಿಗೆ ಸೇರಿಕೊಂಡನಂತರ ಶಂಕರ, ದಿವಾಕರನನ್ನು
ಬೆಂಗಳೂರಿಗೆ ಕರೆಸಿದ. ಕಾಲೇಜು ವಿದ್ಯಾಭ್ಯಾಸದಿಂದ ತೊಡಗಿ ಎಲ್ಲವನ್ನೂ ಅಣ್ಣ ನಿಭಾಯಿಸಿದ್ದು
ಅತ್ತಿಗೆಯ ಸಂಪೂರ್ಣ ಸಹಕಾರದಿಂದ. ಹಾಗಾಗಿ ಅತ್ತಿಗೆ ಎಂದರೆ ಮಾತೃಸಮಾನವಾಗಿ ಆಕೆ ಏನು ಹೇಳಿದರೂ
ಶಿರಸಾವಹಿಸುವ ದಿವಾಕರನಿಗೆ ಅತ್ತಿಗೆಯ ಕರೆ ನಿಜಕ್ಕೂ ಗಾಬರಿಯನ್ನು ತಂದಿತ್ತು. ಸದ್ಭಾವನೆ
ಸಚ್ಚಿಂತನೆ ಸನ್ಮನಸ್ಸು ಇವುಗಳಿಗೆ ಮನುಷ್ಯ ರೂಪದಲ್ಲಿ ದೇವರು ಅನುಗ್ರಹಿಸುತ್ತಾನೆ
ಎನ್ನುವುದಕ್ಕೆ ಅತ್ತಿಗೆ ಪ್ರತಿರೂಪವಾಗಿ ಎದುರು ನಿಂತುಬಿಡುತ್ತಾಳೆ. ಆಕೆ ನಮ್ಮ ಮನೆಗೆ ಆಗಮಿಸುವ
ಮೊದಲು ನಿರೀಕ್ಷೆಗಿಂತಲೂ ಆತಂಕ ಹೆಚ್ಚಾಗಿತ್ತು. ಮದುವೆ ಮಕ್ಕಳು ಸಂಸಾರ ಪ್ರಸ್ತುತ ಸಮಯದಲ್ಲಿ
ಸಮಸ್ಯೆಗಳನ್ನು ತಂದರೂ ಮನುಷ್ಯ ಅದರಿಂದ ವಿಮುಖನಾಗಲಾರ. ಇವುಗಳು ಬದುಕಿನ ಅನಿವಾರ್ಯ ಘಟಕ. ಅಲ್ಲಿ
ಯಶಸ್ಸು ಕಾಣುವಲ್ಲಿ ನಿಜಕ್ಕೂ ಭಗವಂತನಿಗೆ ಶರಣಾಗುತ್ತಾನೆ. ಬದುಕಿನಲ್ಲಿ ಬೆಳೆ ಬೆಳೆಯುತ್ತದೋ
ಗೊತ್ತಿಲ್ಲ ಆದರೆ ಕಳೆ ಹುಟ್ಟದೇ ಇರಲಿ ಎಂಬುದು ಹಾರೈಕೆ. ಅತ್ತಿಗೆಯ ಪ್ರವೇಶ, ಆನಂತರ ಬೆಂಗಳೂರಲ್ಲಿ ಸಿಕ್ಕಿದ ಆಶ್ರಯ ದಿವಾಕರನಿಗಿಂತ ಹೆಚ್ಚು
ನಿರಾಳವಾದದ್ದು ಅಮ್ಮ. ಹಾಗಾಗಿಯೇ ಇಂದಿಗೂ ಅಮ್ಮ
ಊರಿನ ಮನೆಯನ್ನು ಬಿಟ್ಟು ಅತ್ತಿಗೆಯ ಜತೆಯಲ್ಲೇ ಇರುವುದಕ್ಕೆ ಬಯಸುತ್ತಾರೆ. ಪ್ರಸ್ತುತ ಇದು
ಅಚ್ಚರಿಯೆನಿಸಬಹುದು. ಆದರೆ ಇದು ವಾಸ್ತವದ ಅನುಭವ ದಿವಾಕರನಿಗೆ.
ವ್ಯಾಸಂಗ ಉದ್ಯೋಗದ ನಡುವಿನ ಪಯಣ
ಅತ್ಯಂತ ಕಠಿಣ. ಪ್ರವಾಹ ಸೆಳೆಯುವ ಭರದಲ್ಲಿ
ಗುರಿಯ ಅರಿವೇ ಇರುವುದಿಲ್ಲ.ಆಣ್ಣ ಅತ್ತಿಗೆಯ ಆಸರೆ ಗುರಿಯನ್ನು ಕಾಣುವ ವಿಶ್ವಾಸ ತರಬೇಕಿದ್ದರೆ
ಅತ್ತಿಗೆಯ ಸನ್ಮನಸ್ಸು ಹಿರಿದಾಗಿತ್ತು. ಶಿಕ್ಷಣದ ನಂತರ ಖಾಸಗೀ ಬ್ಯಾಂಕ್ ಒಂದರಲ್ಲಿ ಕೆಲಸ ಸಿಕ್ಕಿದಾಗ
ಬದುಕಿನಲ್ಲಿ ಇದು ಧಾರಾಳವೆನಿಸಿ ದಿವಾಕರ ಬೇರೆ ಮನೆ ಮಾಡಿದ. ಬೆಂಗಳೂರಿನ ಜೀವನವೇ ಹಾಗೆ ಅಕ್ಕ ಪಕ್ಕದಲ್ಲಿದ್ದರೂ
ಅಪರಿಚಿತರಾಗುತ್ತೇವೆ. ಇಲ್ಲ ಅಪರೂಪದ ಅತಿಥಿಗಳಾಗಿಬಿಡುತ್ತೇವೆ.
ಎರಡು ದಿನ ಬಿಡುವು ಸಿಗದೆ
ಇದ್ದರೂ ಇಂದು ತುಸು ಬೇಗನೆ ಬ್ಯಾಂಕ್ ಸಮಯವಾದ ಕೂಡಲೇ ಮನೆಗೆ ಹೋಗದೇ ಬನಶಂಕರಿಯಿಂದ ಮದಾವಾರಕ್ಕೆ
ಹೋಗುವ ಮೆಟ್ರೋ ಹತ್ತಿದ. ಮೆಟ್ರೋದಲ್ಲಿ ಸೀಟು
ಸಿಗದೆ ನಿಂತುಕೊಂಡು ಆಕಡೆ ಈಕಡೆ ನೋಡಿದ. ಪ್ರಯಾಣಿಸುವ ನೂರರಲ್ಲಿ ತೊಂಭತ್ತೈದು ಮಂದಿಯೂ ಮೊಬೈಲ್
ನೋಡುವುದರಲ್ಲೇ ಮಗ್ನವಾಗಿದ್ದರು. ಮನುಷ್ಯನಿಗೆ ಬದುಕುವುದಕ್ಕೆ ಸಮಯದ ಕೊರತೆ ಇದೆ. ಇನ್ನೂ
ಹೆಚ್ಚು ವರ್ಷ ಬದುಕಬೇಕೆಂಬ ಹಂಬಲದಲ್ಲಿ ಇದ್ದ ಸಮಯವೇ ಸಾಲದು ಎಂಬ ಬಯಕೆ ಇರುತ್ತದೆ. ಆದರೆ ಅದೇ
ಬದುಕಿನಲ್ಲಿ ಇರುವ ಸಮಯದ ಬೆಲೆ ತಿಳಿದಿರುವುದಿಲ್ಲ. ಸಮಯ ಕಳೆಯುವುದು ಹೇಗೆ ಟೈಂ ಪಾಸ್
ಆಗುವುದಿಲ್ಲ ಎಂಬ ತುಡಿತದಲ್ಲೇ ಪ್ರತೀ
ಕ್ಷಣವನ್ನು ಕಳೆದು ಬಿಡುತ್ತಾನೆ. ಅದಕ್ಕೆ ಹೊಸ ಅವಕಾಶ ಎಂದರೆ ಈ ಮೊಬೈಲ್. ಹಾಗಾಗಿ ಮೆಟ್ರೋದಲ್ಲಿ
ಬಹುತೇಕ ಮಂದಿ ಈ ಟೈಂ ಪಾಸ್ ಗೆ ಮೊಬೈಲ್ ತಿಕ್ಕಿ ತಿಕ್ಕಿ ನೋಡುವುದಕ್ಕೆ ತೊಡಗಿಬಿಡುತ್ತಾರೆ.
ಹತ್ತಿರ ಕುಳಿತವರು ನಿಂತವರ ಬಗ್ಗೆ ಪ್ರಜ್ಞೆ ಇರುವುದಿಲ್ಲ. ಅಶಕ್ತರಿಗೆ ಅಂತ ಆಸನ ಮೀಸಲು
ಇರುತ್ತದೆ. ಆದರೆ ಅಶಕ್ತರು ವಯಸ್ಕರು ಹತ್ತಿರ
ಹೋಗಿ ತಡವಿ ಗೋಗರೆ ಎಚ್ಚರಿಸುವ ವರೆಗೆ ಇಹಲೋಕದ ಪರಿವೆಯೇ ಇರುವುದಿಲ್ಲ. ಕೃಷ್ಣ ರಾಜೇಂದ್ರ ಮಾರುಕಟ್ಟೆಗೆ ತಲುಪಿದಾಗ ಒಂದು ಕಡೆ
ಕುಳಿತುಕೊಳ್ಳುವುದಕ್ಕೆ ಅವಕಾಶ ಸಿಕ್ಕಿತು. ಕುಳಿತು ತುಸು ಹೊತ್ತಿನಲ್ಲೇ ತೂಕಡಿಕೆ ಆರಂಭವಾಯಿತು.
ಮೆಟ್ರೋ ರಾಜಾಜೀನಗರ ತಲುಪಿದ್ದೇ
ತಿಳಿಯಲಿಲ್ಲ. ಗಡಬಡಿಸಿ ಎದ್ದವನಿಗೆ ರಾಜಾಜಿನಗರ ದಾಟಿ ರೈಲು ಮುಂದಕ್ಕೆ ಬಂದು ಇಸ್ಕಾನ್
ದೊಡ್ಡದಾಗಿ ಕಂಡಿತು. ಛೇ ಅಂತ ಅನಿಸಿತು. ಇನ್ನೇನು ಮೈಸೂರ್ ಸ್ಯಾಂಡಲ್ ನಿಲ್ದಾಣದಲ್ಲಿ ಇಳಿದು
ಪಕ್ಕದ ಪ್ಲ್ಯಾಟ್ ಫಾರಂ ಗೆ ಬಂದು ಹಿಂತಿರುಗಿ ಹೋಗುವ ರೈಲಿಗೆ ಕಾದು ಕುಳಿತ. ಛೇ ಎಚ್ಚರವಿದ್ದರೆ
ಇಷ್ಟೊತ್ತಿಗೆ ಅಣ್ಣನ ಮನೆಯಲ್ಲಿರುತ್ತಿದ್ದೆ. ಅದೇ ಅತ್ತಿಗೆಯ ಸ್ಪೆಷಲ್ ಕಾಫಿ ಕುಡಿಯುತ್ತಾ ಹರಟೆ
ಶುರುವಾಗುತ್ತಿತ್ತು. ನಿದ್ದೆಯನ್ನು ಶಪಿಸಿಕೊಂಡು ಯಾವುದೋ ಲೋಕದಲ್ಲಿ ಇದ್ದವನಿಗೆ ಬೆನ್ನಿಗೆ
ಒಂದು ಬಲವಾದ ಗುದ್ದು ಬಿದ್ದಾಗ ಗಾಬರಿಯಲ್ಲಿ ಹಿಂದೆ ತಿರುಗಿ ನೋಡಿದ.
ನೋಡಿದರೆ ಹಾಯ್ ಚಿಕ್ಕಪ್ಪ ಎಂದು
ಲಾವಣ್ಯ ಸಲುಗೆಯಿಂದ ನಗುತ್ತಾ ನಿಂತಿದ್ದಳು. ಜತೆಗೆ ಇನ್ನೊಬ್ಬಾಕೆ ಹುಡುಗಿ ಇದ್ದಳು. ಲಾವಣ್ಯ
ಅಣ್ಣನ ಮಗಳು. ಬ್ಯಾಲ್ಯದಿಂದಲೇ ದಿವಾಕರನ ಹೆಗಲು ಹತ್ತಿ ಬೆಳೆದವಳು. ಅದೊಂದು ಸಮಯ ಆತನ ಬದುಕಿನ
ಸುವರ್ಣ ಯುಗದಂತೆ. ಲಾವಣ್ಯ ಪುಟ್ಟ ಮಗುವಾದಂದಿನಿಂದ ದಿವಾಕರ ದಿನದ ಬಹಳಷ್ಟು ಸಮಯವನ್ನು ಆಕೆಯೊಂದಿಗೆ ಕಳೆದಿದ್ದ.
ಪುಟ್ಟ ಮಗುವನ್ನು ತಾನೇ ಸ್ವತಃ ಸ್ನಾನ ಮಾಡಿಸಿ ಊಟಮಾಡಿಸಿ ಆಕೆಯ ಉಡುಪು ಶೃಂಗಾರ ಎಲ್ಲವನ್ನು
ಮಾಡಿಸುತ್ತಿದ್ದ ದಿನಗಳು. ಆಕೆಯೂ ಹಾಗೆ ಚಿಕ್ಕಪ್ಪ ಎನ್ನುವ ಪ್ರೀತಿ ಸಲುಗೆ ಈಗಲೂ ಇತ್ತು. ಹಲವು
ಸಲ ಈಕೆಯನ್ನು ಅಗಲಿರಲಾಗದೇ ಆಗಾಗ ಬರುತ್ತಿದ್ದ.
ಈಗ ಬೆಳೆದು ದೊಡ್ಡವಳಾಗಿದ್ದಾಳೆ. ಕಾಲೇಜು ಮೆಟ್ಟಲು ಹತ್ತಿದ್ದಾಳೆ. ಆದರೆ ದಿವಾಕರನಿಗೆ
ಆಕೆ ಇನ್ನೂ ಚಿಕ್ಕ ಮಗಳಂತೆ ಭಾಸವಾಗುತ್ತದೆ. ಮಕ್ಕಳು ಬೆಳೆದು ದೊಡ್ಡ ಆದಂತೆ ಅಂತರ ಹೆಚ್ಚುತ್ತಾ
ಹೋಗುತ್ತದೆ. ಮಕ್ಕಳ ಪ್ರಪಂಚ ಮನೆಯಿಂದ ವಿಸ್ತಾರವಾಗಿ ಬೆಳೆದಂತೆ ನಮ್ಮ ಅಸ್ತಿತ್ವ ಸಣ್ಣದಾಗುತ್ತಾ
ಹೋಗುವುದು ಸಹಜ. ಈಗ ತನ್ನ ಮಗುವಿಗೆ ಕೊಡದ
ಪ್ರೀತಿಯನ್ನು ಆಗ ಆಕೆಗೆ ಕೊಟ್ಟಿದ್ದ. ಆತನ ಸಂಸಾರದಲ್ಲಿ ಬಹಳ ದಿನದಿಂದ ನಂತರ ಮೊದಲಿಗೆ ಬಂದ
ಪುಟ್ಟ ಅತಿಥಿ ಆಕೆ. ಹಾಗಾಗಿ ಆ ಅಕ್ಕರೆ ಪ್ರೀತಿ ಸಲುಗೆ ಬದುಕಿನ ವಿಶಿಷ್ಟ ಅನುಭವಾಗಿತ್ತು
ಲಾವಣ್ಯ, ಮುದ್ದಿನ ಹುಡುಗಿ. ಚಿಕ್ಕಪ್ಪ ಎಂದರೆ ಸಲುಗೆ ಮಾತ್ರವಲ್ಲ ಅದಕ್ಕಿಂತ
ಹೆಚ್ಚು ಗೌರವ. ತುಲನೆಗೆ ಸಿಗದ ಪ್ರೀತಿ, ಏನಿದ್ದರೂ ಚಿಕ್ಕಪ್ಪನೊಂದಿಗೆ ಹಂಚಿಕೊಳ್ಳುವ ನಿರ್ಭೆಡೆಯ
ಆತ್ಮೀಯತೆ. ಲಾವಣ್ಯ ಮನೆಯಲ್ಲಿ ಎಲ್ಲರ ಜತೆಯೂ
ಪ್ರೀತಿ ಸಲುಗೆಯಿಂದ ಬೆರೆಯುವವಳು. ನೇರ ನಡೆ. ದಿಟ್ಟತನ ಇದಕ್ಕಿಂತ ಹೆಚ್ಚಾಗಿ ಮನೆಯವರೊಂದಿಗೆ
ಬೆರೆಯುವ ಆತ್ಮೀಯತೆ ಆಕೆಯನ್ನು ಪ್ರತೀ ಕ್ಷಣ ಸ್ಮರಿಸುವಂತೆ ಮಾಡುತ್ತದೆ. ಸದಾ ನಗುತ್ತಾ
ಗೆಲುವಾಗಿ ಇರುವುದು ಮಾತ್ರವಲ್ಲ ಮನೆಯ ಪ್ರತಿಯೊಬ್ಬರಿಂದಲೂ ಅದನ್ನು ನಿರೀಕ್ಷೆ
ಮಾಡಿಬಿಡುತ್ತಾಳೆ. ಜಗಳದಲ್ಲೂ ಆತ್ಮೀಯತೆ ಅಳುವಿನಲ್ಲೂ ಆತ್ಮೀಯತೆ. ಪ್ರೀತಿಸುವ ಪರಿ ಉಳಿದವರಿಗೆ
ಪಾಠವಾಗಿ ಬಿಡುತ್ತದೆ. ಹಿರಿಯರಲ್ಲಿ ಹಲವು ಭಿನ್ನಾಭಿಪ್ರಾಯ ಕಲಹ ಇದ್ದರೂ ಈಕೆಯ ಅಸ್ತಿತ್ವ
ಎಲ್ಲರನ್ನೂ ಒಂದು ಗೂಡಿಸುತ್ತದೆ. ಮಕ್ಕಳು
ಸಂಸಾರದ ಸಮೃದ್ಧಿಯ ಸಂಕೇತ. ಸಂಸಾರದಲ್ಲಿ ಆತ್ಮಿಯತೆ ಪ್ರೀತಿ ಐಕ್ಯತೆ ಇವುಗಳೆಲ್ಲ ಒದಗಿ
ಬರಬೇಕಾದರೆ ಅಲ್ಲಿ ಉತ್ತಮ ಮಕ್ಕಳು ಅನಿವಾರ್ಯ. ಹಲವು ಸಲ ಅವರನ್ನು ನೋಡಿ ಕಲಿಯುವ ಅವರಿಗಾಗಿ
ಎಲ್ಲವನ್ನು ಮರೆಯುವ ಅನಿವಾರ್ಯತೆ ಸಂಸಾರ ಬಂಧನವನ್ನು ಬಿಗಿಯಾಗಿಸುತ್ತದೆ. ಲಾವಣ್ಯ ಇರುವಲ್ಲಿ
ಇದೆಲ್ಲವೂ ಸಹಜ ಎಂಬಂತೆ ಭಾಸವಾಗುತ್ತದೆ.
ಲಾವಣ್ಯನನ್ನು ಕಂಡ ಕೂಡಲೇ
ದೀವಾಕರ ನಗುತ್ತಾ ಒಂದು ಕೈಯನ್ನು ಭುಜದ ಮೇಲೆ ಹಾಕಿ ಆಕೆಯನ್ನು ಬರಸೆಳೆದು ಎದೆಗೆ
ಒತ್ತಿಕೊಂಡ. ಒಂದು ತೊಟ್ಟು ಕಂಬನಿ ಆಕೆಯ ಅರಳಿದ
ಕೇಶಾರಾಶಿಯ ಮೇಲೆ ಬಿದ್ದು ಮುತ್ತಿನಂತೆ ಪ್ರತಿಫಲಿಸಿತು.
ಎನು ಲವ್ವಿ? ಲವ್ವಿ...! ಒಂದು
ಕರೆಸಾಕು ಆಕೆ ಮುದುಡಿ ಮೊಗ್ಗಾಗಿ ತೋಳಿನಾಳಕ್ಕೆ ಸೇರಿ ಬಿಡುತ್ತಾಳೆ. ಚಿಕ್ಕಪ್ಪ ಎಂದರೆ ಆಕೆಗೆ
ಎಲ್ಲಿಲ್ಲದ ಸಲುಗೆ. ಯಾವ ಸಮಯದಲ್ಲೂ ತನ್ನ ಪರವಾಗಿ ಒದಗಿ ಬರುವ ವ್ಯಕ್ತಿ ಅಂತ ಇದ್ದರೆ ಅದು
ಚಿಕ್ಕಪ್ಪ ಎಂಬ ಅಭಿಮಾನ. ಮೊದಲು ಮನೆಯಲ್ಲಿ ಎಲ್ಲರೂ ಆಕೆಯನ್ನು ಬೈಯುವುದೊ ಅಥವಾ ನೋಯಿಸುವುದೋ
ಮಾಡಿದರೆ ಚಿಕ್ಕಪ್ಪನ ಬಳಿಯಲ್ಲಿ ಎಲ್ಲದಕ್ಕೂ ಸಾಂತ್ವನ ಸಿಕ್ಕಿಬಿಡುತ್ತದೆ. ದಿವಾಕರನೂ ಅಷ್ಟೇ,
ಆಕೆ ಎಂದರೆ ಭಾವನೆಗಳಿಗೆ ಶರಣಾಗುತ್ತಾನೆ. ಪ್ರತಿ ಸಲ
ತಬ್ಬಿ ಹಿಡಿಯುವಾಗ ತೊಟ್ಟು ಕಂಬನಿ ಒಸರದೇ ಇದ್ದರೆ ಅದು ಅಪ್ಪುಗೆಯೇ ಆಗುವುದಿಲ್ಲ. ಅಲ್ಲಿ ಕಂಬನಿ ಎಂಬುದು ತೃಪ್ತಿಯ ಸಂಕೇತ. ಆಕೆಯ ಎಲ್ಲ ದೌರ್ಬಲ್ಯಗಳನ್ನು ದಿವಾಕರ ಒಪ್ಪಿಕೊಳ್ಳುವುದು
ಆಕೆಯ ಮೇಲಿನ ಪ್ರೀತಿಗಾಗಿ. ದೌರ್ಬಲ್ಯಗಳನ್ನು
ಒಪ್ಪಿಕೊಂಡು ಜತೆಗಿದ್ದರೆ ಅಲ್ಲಿ ಪ್ರೀತಿ ಇದೆ ಎಂದು ಅರ್ಥ. ಯಾವ ಸಮಸ್ಯೆಯಾದರೂ ಕ್ಷಣ ಮಾತ್ರದ ಪರಿಹಾರ ದಿವಾಕರನ
ಬಳಿ ಇರುತ್ತದೆ. ಎಷ್ಟೇ ಕೆಲಸದ ಒತ್ತಡವಿದ್ದರೂ, ಯಾವುದೇ ದುಗುಡ
ದುಮ್ಮಾನದಲ್ಲಿದ್ದರೂ ಆಕೆ ಬಂದು ಚಿಕ್ಕಪ್ಪಾ ಇಂಥದ್ದು ಬೇಕು ಎಂದರೆ ಇಲ್ಲ ಎನ್ನದೇ ಮಾಡುವ
ವ್ಯಕ್ತಿ ಎಂದರೆ ಅದು ದಿವಾಕರ. ಹಲವು ಸಲ ಆಕೆ ಹೇಳುತ್ತಿರುತ್ತಾಳೆ-
ಎಲ್ಲರ ಜತೆಯಲ್ಲೂ ಒಂದಲ್ಲ
ಒಂದು ಸಮಸ್ಯೆ ಅಥವಾ ಹಿಂಸೆಯನ್ನು
ಸೂಕ್ಷ್ಮವಾಗಿಯಾದರೂ ಅನುಭವಿಸಿದ್ದೇನೆ. ಆದರೆ ಚಿಕ್ಕಪ್ಪನ ಜತೆಯಲ್ಲಿ ಇಂತಹ ಯಾವುದೇ ಅನುಭವ
ಆಗುವುದಿಲ್ಲ. ಎಲ್ಲಾ ಮುಕ್ತವಾಗಿರುತ್ತದೆ. ಯಾಕೆಂದರೆ ಚಿಕ್ಕಪ್ಪ ಬೈದದ್ದೇ ಇಲ್ಲ. ಎಂದೂ ಸಿಟ್ಟು
ತೋರಿಸದ ಚಿಕ್ಕಪ್ಪನಲ್ಲಿ ಸಲುಗೆ ಸಹಜವಾಗಿ ಬೆಸೆದಿರುತ್ತದೆ.
ಅದೇಕೋ ದಿವಾಕರನಿಗೆ ಎಂದಿಗೂ ಆಕೆಯನ್ನು ಬೈಯಬೇಕು
ಎಂದನಿಸುವುದಿಲ್ಲ. ಅಕೆಯ ಮೇಲೆ ಸಿಟ್ಟಾಗುವುದಿಲ್ಲ. ಎಲ್ಲವನ್ನು ಮಗಳು ಎಂದುಕೊಂಡು
ನಿರ್ವಿಕಾರವಾಗಿ ಸ್ವೀಕರಿಸಿ ಬಿಡುತ್ತಾನೆ.
ಹಾಗಾಗಿಯೇ ಚಿಕ್ಕಪ್ಪನ ಮಾತು ಆಕೆಗೆ ವೇದವಾಕ್ಯವಾಗುತ್ತದೆ. ಎನಿದ್ದರೂ ಆಕೆಗೆ ಎನಾದರೂ
ಹೇಳಬೇಕಿದ್ದರೆ...ಆಗ ಎಲ್ಲರ ದೃಷ್ಟಿ ದಿವಾಕರನ
ಚಿಕ್ಕಪ್ಪ ಸ್ಥಾನದತ್ತ ಬರುತ್ತದೆ.
ಎಲ್ಲಾ ಕಡೆ ಸಂಗ್ರಹವಾಗುವ ಆಕೆಯ ನೋವುಗಳು ಚಿಕ್ಕಪ್ಪನ ಬಳಿಯಲ್ಲಿ ಕರಗಿಬಿಡುತ್ತವೆ.
ಹೀಗೆ ಹೊರಗೆ ಸಿಕ್ಕಿದರೆ
ಚಿಕ್ಕಪ್ಪನಲ್ಲಿ ಏನಾದರೂ ಒಂದಕ್ಕೆ ದುಂಬಾಲು ಬೀಳುತ್ತಾಳೆ. ಅದು ಐಸ್ಕ್ರೀಂ ಪಿಜಾ ಅಥವಾ
ಕೊನೆಯಲ್ಲಿ ಒಂದು ತುಂಡು ಕ್ಯಾಡ್ ಬರಿಯಾದರೂ ಪ್ರಸಾದವಾಗದಿದ್ದರೆ ಚಿಕ್ಕಪ್ಪನ ಸಮಾಗಮ
ಅಪೂರ್ಣವಾಗುತ್ತದೆ. ಇಂದೂ ಹಾಗೇ ಇರಬಹುದೋ ಎನೋ ಅಂದುಕೊಂಡು ಕೈ ಬ್ಯಾಗ್ ನಲ್ಲಿ ಮೊದಲೇ
ತೆಗೆದಿರಿಸಿದ್ದ ಕ್ಯಾಡ್ ಬರಿಯನ್ನು ಕೈಯಲ್ಲಿರಿಸುತ್ತಾನೆ. ಮುಖವರಳಿಸಿ ಥ್ಯಾಂಕ್ಸ್ ಎನ್ನುತ್ತಾ
ಚಿಕ್ಕಪ್ಪನನ್ನು ತಬ್ಬಿ ಹಿಡಿವಾಗ ದಿವಾಕರ ಪರಿಸರವನ್ನು ಮರೆತು ಬಿಡುತ್ತಾನೆ.
ಈಕೆ ಲಲ್ಲೆ ಹೊಡೆಯುತ್ತಿದ್ದರೆ
ಜತೆಗಿದ್ದ ಗೆಳತಿ ಕಂಬ ನುಂಗಿದಂತೆ ಸುಮ್ಮನೇ ನಿಂತುಬಿಡುತ್ತಾಳೆ. ದಿವಾಕರ ಆಕೆಯನ್ನು ನೋಡುವಾಗ .
ಈಕೆ ಭವಂತಿ ನನ್ನ ಗೆಳತಿ ಅಂತ ಪರಿಚಯಿಸುತ್ತಾಳೆ. ದಿವಾಕರನಿಗೆ ಎಲ್ಲೋ ನೋಡಿದ ನೆನಪು. ಮತ್ತೆ
ಮೊದಲು ನಮ್ಮ ಬೀದಿಯಲ್ಲೇ ಇದ್ದ ಹುಡುಗಿ ಅವಳು. ಲಾವಣ್ಯನೊಂದಿಗೆ ಕಾನ್ವೆಂಟ್ ನಿಂದ ಹೈಸ್ಕೂಲ್
ವರೆಗೂ ಸಹಪಾಠಿಯಾಗಿದ್ದವಳು. ಆಕೆಯನ್ನು ನೋಡದೆ ಬಹಳ ಸಮಯವಾಗಿತ್ತು. ದೀರ್ಘ ಕಾಲದ ಸ್ನೇಹವನ್ನು
ಕಣ್ಣಾರೆ ಕಾಣುತ್ತಾನೆ.
" ಎಲ್ಲಿಗೆ ಹೊಗಿದ್ದು ಅಂತ ಕೇಳುತ್ತಾನೆ."
" ಚಿಕ್ಕಪ್ಪ ಅವಳಿಗೆ
ಬೋರ್ ಆಯ್ತು ಅಂತ ಮಾಲ್ ಗೆ ಒಂದು ಸುತ್ತು ಹೋಗೋಣ ಅಂತ ಬಂದೆವು. ಈಗ ವಾಪಾಸ್ ಹೋಗುತ್ತಿದ್ದೇವೆ.
ಇವಳನ್ನು ಬಿಟ್ಟು ಮನೆಗೆ ಹೋಗುವ ಅಂತ ಇದ್ದೆ. ಅಷ್ಟ್ರಲ್ಲಿ ನಿಮ್ಮನ್ನು ನೋಡಿದೆ."
ಹಾಗೆ ದೊಡ್ಡದಾಗಿ ಮಾತನಾಡುತ್ತಾ
ಮೇಟ್ರೋ ಹತ್ತಿ ರಾಜಾಜಿನಗರದಲ್ಲಿ ಇಳಿದು ಬಿಡುತ್ತಾರೆ. ಅಲ್ಲಿ ಗೆಳತಿಗೆ ವಿದಾಯ ಹೇಳಿ ಮನೆಯ
ಕಡೆಗೆ ಇಬ್ಬರೂ ಹೆಜ್ಜೆ ಹಾಕುತ್ತಾರೆ. ಆಗಲೇ ಸಾಯಂಕಾಲ ಕಳೆದು ಕತ್ತಲಾವರಿಸುತ್ತದೆ. ದಾರಿಯುದ್ದಕ್ಕೂ
ಗೆಳತಿ ಭವಂತಿಯ ಕಥೆ ವಟ ವಟ ಅಂತ
ಹೇಳುತ್ತಾಳೆ. ಭವಂತಿ ಮೊದಲು ನಮ್ಮ ಮನೆಯ ರಸ್ತೆಯಲ್ಲೇ
ಮನೆ. ತಾಯಿ ಇಲ್ಲದೇ ತಂದೆಯ ಆರೈಕೆಯಲ್ಲಿ
ಬೆಳೆದ ಹೆಣ್ಣು ಮಗಳು. ಹರಯಕ್ಕೆ ಬರುತ್ತಾ ತಾಯಿಯನ್ನು ಕಳೆದುಕೊಂಡ ಭವಂತಿಗೆ ಸರಿಯಾದ ಸಮಯದಲ್ಲೇ
ತಾಯಿಯ ಅವಶ್ಯಕತೆ ಇರುವ ಸಮಯದಲ್ಲೇ ತಾಯಿಯ ಅಗಲಿಕೆ ಅನುಭವಿಸುವಂತಾಗುತ್ತದೆ. ಬುದ್ಧಿ ಹೇಳುವುದಕ್ಕೆ ನಿಯಂತ್ರಿಸುವುದಕ್ಕೆ ತಾಯಿಯ
ಸ್ಥಾನ ಅತ್ಯಂತ ಅನಿವಾರ್ಯ ಎಂಬಂತಹ ಸಮಯ ಹದಿ ಹರಯ.
ಹೆಚ್ಚು ಕಮ್ಮಿ ಮನೆಯಲ್ಲಿ ಆಕೆ ಓರ್ವಳೇ ಇರುತ್ತಾಳೆ. ದುಡಿಯುವುದಕ್ಕೆ ಮನೆಯಿಂದ ಹೊರ
ಹೋಗುವ ಅಪ್ಪ ಮನೆಗೆ ಬರುವಾಗ ತಡವಾಗಿರುತ್ತದೆ. ಇರುವ ಅಲ್ಪ ಸ್ವಲ್ಪ ಸಮಯದಲ್ಲಿ ತಂದೆ
ಯಾವುದನ್ನೆಲ್ಲ ಗಮನಿಸಬಹುದು? ಅಪ್ಪ ಅಮ್ಮನ ನಿಯಂತ್ರಣ ಇಲ್ಲದೇ ಇದ್ದರೂ ಭವಂತಿ ಬಹಳ ಬುದ್ದಿವಂತೆ.
ವಯಸ್ಸಿನಲ್ಲಿ ಇರುವ ಚಂಚಲತೆ ಇವುಗಳಿಂದ ದೂರವಾಗಿದ್ದಳು. ಆದರೂ ಹೊರಜಗತ್ತು ಆಕೆಗೆ
ಪರೀಕ್ಷೆಯನ್ನು ಒಡ್ಡುತ್ತಿತ್ತು.
ಭವಂತಿಯ ಕಥೆಯನ್ನು
ಕೇಳುತ್ತಿದ್ದಂತೆ ಮನೆ ಸಮೀಪಿಸುತ್ತದೆ. ಮನೆಯ ಒಳಗೆ ಬರುತ್ತಿದ್ದಂತೆ ಟೀವಿ ಸದ್ದು ಜೋರಾಗಿ
ಕೇಳುತ್ತಿರುತ್ತದೆ. ಅಮ್ಮ ಧಾರವಾಹಿ ನೋಡುತ್ತಿದ್ದರು.
ಸಾಯಂಕಾಲ ಒಂದಷ್ಟು ದ್ವೇಷ ಕಲಹವನ್ನು ನೋಡದೆ ಇದ್ದರೆ ಅಮ್ಮನಿಗೆ ಏನೋ ಕಳೆದು ಹೋದ
ಅನುಭವ. ಅಮ್ಮನ ಬಳಿ ಕುಳಿತು ಎಂದಿನಂತೆ ಅದೂ ಇದೂ ಮಾತನಾಡಿದ. ಆದರೆ ಅಂತಹ ಆತಂಕದ ವಿಚಾರ
ಯಾವುದನ್ನೂ ಅಮ್ಮ ಹೇಳದಿರುವಾಗ ಅತ್ತಿಗೆ ಕರೆದ ಉದ್ದೇಶವಾದರೂ ಏನು ಎಂದು ಅಚ್ಚರಿಯಾಗಿತ್ತು .
ಅತ್ತಿಗೆ ಯಾವುದೋ ಕೆಲಸದಲ್ಲಿ ಮಗ್ನವಾಗಿದ್ದರು. ಬಟ್ಟ ಬದಲಿಸಿ ಬಂದ ಲಾವಣ್ಯ ಚಿಕ್ಕಪ್ಪನೊಂದಿಗೆ
ಮತ್ತೆ ಹರಟೆಗೆ ತೊಡಗಿದಳು.
ಅತ್ತಿಗೆಯಲ್ಲೇ
ಕೇಳೋಣವೆಂದುಕೊಂಡು ಅಡುಗೆ ಮನೆಯತ್ತ ಹೋದ. ಜತೆಯಲ್ಲೇ ಲಾವಣ್ಯ ಕೂಡ ಹೆಗಲಿಗೆ ಜೋತುಬಿದ್ದುಕೊಂಡು
ಬಂದಳು. ಚಿಕ್ಕಪ್ಪನಿಗೆ ಇಷ್ಟವಾದ ಆಡುಗೆಯನ್ನು ಮಾಡುವಂತೆ ಅಮ್ಮನಿಗೆ ದುಂಬಾಲು ಬಿದ್ದಳು.
ಚಿಕ್ಕಪ್ಪನೊಂದಿಗೆ ಊಟ ಮಾಡದೇ ಬಹಳ ದಿನವಾಗಿತ್ತು. ಹಾಗೆ ಹರಟುತ್ತಿರ ಬೇಕಾದರೆ ಊಟದ ಸಮಯವಾಗಿ
ಬಿಟ್ಟಿತು. ಅಣ್ಣನೂ ಕೆಲಸ ಮುಗಿಸಿ ಬಂದು ಬಿಟ್ಟರೆ ಎಲ್ಲರೂ ಕುಳಿತು ಊಟ ಮಾಡಿದರು. ಮರುದಿನ
ಕಛೇರಿಯಲ್ಲಿ ಕೆಲಸವಿದ್ದುದರಿಂದ ದಿವಾಕರನಿಗೆ ಹೊರಡಲೇ ಬೇಕಿತ್ತು. ಹಾಗೆ ಹೊರಡುವಾಗ ಅತ್ತಿಗೆ
ಬಳಿಗೆ ಬಮ್ದು ಕೇಳಿದ ಏನು ಸಂಗತಿ?
ಅತ್ತಿಗೆ ಪಿಸುಗುಡುತ್ತಾ
ಹೇಳಿದಳು, " ಹಾಗೆಲ್ಲ
ಹೇಳುವಂಥದ್ದು ಅಲ್ಲ ಮಾರಾಯ. ಹೀಗೆ ಗಡಿಬಿಡಿಯಲ್ಲಿ ಬಂದರೆ ಹೇಗೆ? "
ದಿವಾಕರನಿಗೆ ಮತ್ತೂ ಆತಂಕ
ಹೆಚ್ಚಿತು. ಇಂದು ಹೋಗಲೇ ಬೇಕಿತ್ತು, ಹೊರಡುವಾಗ ಹೇಳಿದ " ನಾಡಿದ್ದು ಬೆಳಗ್ಗೆ ಬರುತ್ತೇನೆ. ಆದರೂ
ವಿಷಯ ಎಂತದ್ದು ಅತ್ತಿಗೆ?"
ಅತ್ತಿಗೆ ಆಗಲೂ ಹೇಳಲಿಲ್ಲ. " ನಾಡಿದ್ದು ಬಾ ಕುಳಿತುಕೊಂಡು ಮಾತನಾಡೋಣ" ಅಂತ ಸಾಗ ಹಾಕಿದರು
ದಿವಾಕರನಿಗೆ ಆತಂಕ ಹಾಗೇ ಉಳಿದು
ಬಿಟ್ಟಿತು. ಆದರೂ ಹೊರಡುವಾಗ ಅಮ್ಮನಲ್ಲಿ ಮೆತ್ತಗೆ ಕೇಳಿದ. ಅಮ್ಮ ಯಾರಿಗೂ ಕೇಳದಂತೆ ಹೇಳಿದರು
" ಅದೆಂತದೋ ಲವ್ ಲೆಟರ್ ."
ದಿವಾಕರ ನಿಜಕ್ಕೂ ಯೋಚನೆಯಲ್ಲಿ
ಬಿದ್ದ. ಮನಸ್ಸು ತಳಮಳಿಸಿತು. ಛೆ ಕೆಲಸದ ಒತ್ತಡ ಇಲ್ಲದೇ ಇರುತ್ತಿದ್ದರೆ ಇಂದು ಉಳಿದು
ಬಿಡುತ್ತಿದ್ದ. ಒಂದಷ್ಟು ಗಂಭೀರದ ವಿಷಯವಾಗಿದ್ದುದರಿಂದಲೇ ಅತ್ತಿಗೆ ಮಾತನಾಡಲಿಲ್ಲ. ಕೊನೆಯಲ್ಲಿ
ಹೊರಡಬೇಕಿದ್ದರೆ ಮನೆಗೆ ಕೊಡುವುದಕ್ಕೆ ತಿಂಡಿಯನ್ನು ಕೊಟ್ಟು ಅದರ ಜತೆಗೆ ಒಂದು ಹಳದಿ ಬಣ್ಣದ ಕಾಗದವನ್ನು
ಯಾರಿಗೂ ತಿಳಿಯದಂತೆ ಇಟ್ಟುಬಿಟ್ಟರು.
ದಿವಾಕರನ ಅರ್ಧ ಕುತೂಹಲ ಇಳಿದರೂ
ಆತಂಕ ಮಾತ್ರ ಮತ್ತೂ ಹೆಚ್ಚಿತು. ಬೀಳ್ಕೊಟ್ಟು ರಾಜಾಜಿನಗರ ಮೆಟ್ರೋ ಬಳಿಗೆ ವೇಗವಾಗಿ ನಡೆಯುತ್ತಾ
ಬಂದ ದಿವಾಕರ. ಜೇಪಲ್ಲಿದ್ದ ಹಳದಿ ಬಣ್ಣ ಕಂಪನವನ್ನು ಸೃಷ್ಟಿ ಮಾಡುತ್ತ ಹೋಯಿತು. ಮೆಟ್ರೋ
ಸ್ಟೇಶನ್ ಪ್ಲಾಟ್ ಫಾರಂ ನ ಕಟ್ಟೆಯ ಮೇಲೆ ಕುಳಿತುಕೊಂಡವನೇ ಮೊಬೈಲ್ ಸದ್ದು ಮಾಡಿತು. ಮನೆಯಾಕೆಯ
ಕರೆ. ಆಕೆಗೆ ಬರುತ್ತಾ ಇದ್ದೇನೆ ಎಂದು ತಿಳಿಸಿ ಜೇಬಲ್ಲಿಡಬೇಕಾದರೆ ವಾಟ್ಸಾಪ್ ಹೊಸ ಸಂದೇಶವನ್ನು
ಸ್ವೀಕರಿಸಿದ ಸದ್ದು ಮಾಡಿತು. ಅತ್ತಿಗೆಯ ಸಂದೇಶವಿತ್ತು.
ಆ ಪತ್ರ ಲಾವಣ್ಯನ ಪುಸ್ತಕದ ನಡುವಿನಿಂದ ಸಿಕ್ಕಿದ್ದನ್ನು ಹೇಳಿದ್ದರು.
ಸಿಕ್ಕಿ ಅದಾಗಲೇ ಎರಡು ದಿನ ಕಳೆದಿತ್ತು. ಇನ್ನು ಆ ಪತ್ರ ಬರೆದು ಎಷ್ಟು ದಿನವಾಗಿತ್ತೋ
ತಿಳಿಯದು. ಆಕೆಯ ಕೋಣೆ ಸ್ವಚ್ಚಗೊಳಿಸಬೇಕಾದರೆ
ಆಕೆಯ ಪುಸ್ತಕದ ನಡುವಿನಿಂದ ಜಾರಿದ ಪತ್ರ ಅತ್ತಿಗೆಯ ಗಮನ ಸೆಳೆದು ಇನ್ನಿಲ್ಲದ ತಳಮಳವನ್ನು
ಸೃಷ್ಟಿ ಮಾಡಿತ್ತು. ಪತ್ರ ಓದಿದ ನಂತರ ದಿವಾಕರನ ಅಣ್ಣನಿಗೂ ತಾಯಿಗೂ ವಿಷಯ ತಿಳಿಸಿದರೂ ಯಾರಿಗೂ
ಆಕೆಯಲ್ಲಿ ವಿಚಾರಿಸುವುದಕ್ಕೆ ಧೈರ್ಯ ಸಾಲದಾಯಿತು. ಹೇಗೆ ಕೇಳುವುದು? ಇನ್ನು ಕೇಳಿದ ಪ್ರಶ್ನೆಗೆ ಅವಳ ಉತ್ತರ ಹೇಗಿರಬಹುದು? ಯಾವ ಉತ್ತರ ಆಕೆ ನೀಡಬಹುದು? ಇನ್ನು ಆ ಉತ್ತರಕ್ಕೆ ಅಪ್ಪ
ಹೇಗೆ ಪ್ರತಿಕ್ರಿಯೆ ಕೊಡಬಹುದು?
ಸ್ವಭಾವತಃ ದಿವಾಕರನ ಅಣ್ಣ ಒಂದಿಷ್ಟು ಉದ್ರಿಕ್ತ ಸ್ವಭಾವದವನು. ಮಗಳು
ಲಾವಣ್ಯ ಒಳ್ಳೆಯ ವಿದ್ಯಾವಂತೆಯಾಗಬೇಕೆಂದು ಎಲ್ಲ ಅಪ್ಪಂದಿರಂತೆ ಬಯಸಿದವನು. ಹಲವಾರು ನಿರೀಕ್ಷೆ
ಇಟ್ಟುಕೊಂಡವನು. ಇನ್ನೂ ಕಾಲೇಜಿನ ಪ್ರಥಮ ವರ್ಷದಲ್ಲಿರುವ ಎಳೆಪ್ರಾಯದ ಹುಡುಗಿ ಹೀಗೆ ಪ್ರೇಮದ
ಸೆಳೆತಕ್ಕೆ ಸಿಲುಕುತ್ತಾಳೆ ಎಂದು ನಿರೀಕ್ಷೆ ಇರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಲಾವಣ್ಯ
ಹಾಗೆ ಮಾಡಲಾರಳು ಎಂಬು ಅತಿಯಾದ ವಿಶ್ವಾಸ ಇತ್ತು. ಯಾಕೆಂದರೆ ಲಾವಣ್ಯ ಮನೆಯವರೊಂದಿಗೆ ಅಪ್ಪ ಅಮ್ಮ
ಅಜ್ಜಿ ಹೀಗೆ ಎಲ್ಲರೊಂದಿಗೂ ಯಾವುದೇ ಮುಚ್ಚು ಮರೆ ಇಲ್ಲದೆ ವ್ಯವಹರಿಸುತ್ತಿದ್ದಳು ಇದನ್ನು
ಬಚ್ಚಿಡುತ್ತಾಳೆ ಎಂದರೆ ನಮ್ಮ ಮಕ್ಕಳು ನಮಗರಿವೆ ಇಲ್ಲದೆ
ನಮ್ಮ ವೃತ್ತದ ಪರಿಧಿಯಿಂದ ಹೊರಗೆ ಜಿಗಿದು ಬಿಟ್ಟಳೇ ಎಂಬ ಆತಂಕ. ಆಕೆಯ ಉತ್ತರ ಯಾವುದಾದರೂ
ಅದನ್ನು ಅರಗಿಸಿಕೊಳ್ಳದ ಪರಿಸ್ಥಿತಿ. ಯಾರು ಹೇಗೆ ಆಕೆಯನ್ನು ವಿಚಾರಿಸಬಹುದು. ಈ ಆತಂಕದಿಂದಲೇ
ಆಕೆಯಲ್ಲಿ ಇದನ್ನು ವಿಚಾರಿಸದೇ ಎಂದಿನಂತೆ ವ್ಯವಹರಿಸಿದ್ದರು. ಆದರೆ ಎರಡು ಮೂರು ದಿನ...ಅತ್ತಿಗೆ
ನಿದ್ದೆಯಿಲ್ಲದೆ ತಳಮಳಿಸಿದ್ದು ಆ ಒಂದು ಸಂದೇಶದಿಂದ ಸ್ಪಷ್ಟವಾಯಿತು.
ಮೆಟ್ರೋದಲ್ಲಿ
ಹತ್ತಿಕುಳಿತವನಿಗೆ ಹೆಚ್ಚು ಜನ ಇಲ್ಲದೇ ಇದ್ದುದರಿಂದ ಕುಳಿತುಕೊಳ್ಳುವುದಕ್ಕೆ ಜಾಗ ಸಿಕ್ಕಿತು.
ಹಾಗಾಗಿ ಮೆಲ್ಲಗೆ ಹಳದಿ ಕಾಗದ ಕೈಗೆತ್ತಿಕೊಂಡು ನೋಡಿದ. ಆ ಹಳದಿ ಕಾಗದ....ಗೊತ್ತಿದೆ
ಮನೆಯಲ್ಲಿದ್ದ ಪ್ಯಾಡ್ ನಿಂದ ಕಿತ್ತು ತೆಗೆಯಲಾಗಿತ್ತು.
ಸಾಮಾನ್ಯವಾಗಿ ಮನೆಯಲ್ಲಿ ಅದು ಇದೂ ಅಂತ ಗೀಚುವುದಕ್ಕೆ ಒಂದು ಪ್ಯಾಡ್ ಇಟ್ಟಿದ್ದರು.
ಅದರಿಂದಲೇ ಹರಿದು ಕಾಗದವನ್ನು ಬರೆದಿದ್ದಳು. ನಿಧಾನವಾಗಿ ತೆಗೆದು ನೋಡಿದ.
ಅವಸರವಸರದಲ್ಲಿ ಬರೆದಂತೆ ಕೈ
ಬರಹವಿತ್ತು. ಸೊಟ್ಟಗೆ ವಕ್ರವಾಗಿ ಎಲ್ಲೇಲ್ಲಿಯೋ ಅಕ್ಷರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಂತೆ
ಕಂಡಿತು. ಮುಖ್ಯವಾಗಿ ಇಂದಿನ ಮಕ್ಕಳಂತೆ ಕನ್ನಡ ಬರಹದಲ್ಲಿ ಲಾವಣ್ಯ ಸ್ವಲ್ಪ ಹಿಂದೆ. ಆಕೆಗೆ
ಆಂಗ್ಲದಷ್ಟು ಸಲೀಸಾಗಿ ಕನ್ನಡ ಬರೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಅಕ್ಷರ ಮಾತ್ರವಲ್ಲ
ಬೆರೆದ ಒಕ್ಕಣೆಯೂ ವ್ಯಾಕರಣ ಬದ್ದವಾಗಿರಲಿಲ್ಲ. ಸಾಮಾನ್ಯವಾಗಿ ಈ ರೀತಿಯ ಪತ್ರಗಳು ಮುದ್ದಾಗಿ
ಸುಂದರವಾಗಿ ಇರುತ್ತವೆ. ಸುಂದರ ಅಕ್ಷರಗಳು ಆಸಕ್ತಿಯಿಂದ ಬರೆಯುತ್ತಾರೆ. ಆದರೆ ಇದು ತೀರಾ
ಆನಾಸಕ್ತಿಯಿಂದ ಗೀಚಿದಂತೆ ಇತ್ತು. ಬರೆಯುವಾಗ ಇದ್ದ ಭಯ ಆತಂಕ ಅಲ್ಲಿನ ಒಕ್ಕಣಿಗೆಯಲ್ಲೂ ಬರೆದ
ಶೈಲಿಯಲ್ಲೂ ವ್ಯಕ್ತವಾಗುತ್ತಿತ್ತು.
ಪತ್ರದಲ್ಲಿ ಹೇಳಿದ್ದನ್ನೇ ಪದೇ
ಪದೇ ಬರೆಯಲಾಗಿತ್ತು. ಒಂದೇ , ಯಾರೋ ಹುಡಗನಿಗೆ ಬರೆದ ಪತ್ರವದು ಎಂದು ಮೇಲ್ನೋಟಕ್ಕೆ ತಿಳಿದು
ಬಿಡುತ್ತಿತ್ತು. ಎಲ್ಲೂ ಹೆಸರು ಹಾಕಿರಲಿಲ್ಲ. ಎಲ್ಲೂ ಹೆಸರನ್ನಾಗಲೀ ವ್ಯಕ್ತಿಯನ್ನಾಗಲಿ
ಉಲ್ಲೇಖಿಸಲಿಲ್ಲ.ನೇರ ವಿಷಯವನ್ನು ಬರೆದಿದ್ದಳು. ...ನನಗೆ ಈಗ ಯೋಚಿಸುವುದಕ್ಕೆ ಆಗುತ್ತಿಲ್ಲ.
ಮನೆಯಲ್ಲಿ ತಿಳಿದರೆ ಗಲಾಟೆಯೆ ಆಗಿಬಿಡುತ್ತದೆ. ನೀನು ತುಂಬ ಇಷ್ಟ ಆದರೆ...ಅದನ್ನು ಹೇಳುವುದಕ್ಕೆ
ಆಕೆಯಲ್ಲಿ ಒಂದು ಭಯವಿದ್ದಂತೆ ಭಾಸವಾಗಿತ್ತು. ಹೀಗೆ ಹೇಳಿದ್ದನ್ನೇ ಪದೇ ಪದೇ ಹೇಳಿದ್ದನ್ನು
ನೋಡಿದರೆ ಲಾವಣ್ಯ....ತನ್ನ ಲವ್ವಿ...ನಿಜಕ್ಕೂ ಲವ್ ನಲ್ಲಿ ಸಿಕ್ಕಿಕೊಂಡಳೇ ಎಂದು ದಿವಾಕರನಿಗೆ
ಅಚ್ಚರಿಯಾಗಿಬಿಟ್ಟಿತು. ಆದರೂ ಇಂದು ಅಷ್ಟು ಮಾತನಾಡಿದ ಲಾವಣ್ಯ ಇದರ ಒಂದು ವಿಷಯವನ್ನೂ ಯಾಕೆ ಹೇಳಿಲ್ಲ? ತನ್ನಲ್ಲಿ ಎಲ್ಲವನ್ನು ಹೇಳುತ್ತಿದ್ದ ಲವ್ವಿ ಈಗ ಮುಚ್ಚಿಡುವ
ಹಂತವನ್ನು ದಾಟಿಬಿಟ್ಟಳೇ? ಯಾಕೋ ಮನಸ್ಸು ಹಿಂಡಿದಂತಾಯಿತು. ಇನ್ನೂ ಆಕೆ ಪುಟ್ಟ ಬಾಲೆ ಅಂತ
ತಿಳಿದಿದ್ದ ಅದೇ ಭಾವನೆಯಲ್ಲಿದ್ದ ದಿವಾಕರನಿಗೆ ಆಕೆ ದೂರವಾದಂತೆ ಭಾಸವಾಗಿ ಅದನ್ನು
ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಈಗ
ಆತನಿಗಿದ್ದ ಆತಂಕ ಒಂದೇ ....ತಾನೀಗ ಏನು ಮಾಡಬಹುದು? ಇಷ್ಟಾದರೂ...ಅತ್ತಿಗೆ ಈ ಪತ್ರ
ಎತ್ತಿ ಮೂರುದಿನವಾದರೂ ಲಾವಣ್ಯನಿಗೆ ಪತ್ರ ಕಳೆದು ಹೋದ ಬಗ್ಗೆ ಯಾಕೆ ಆತಂಕವಿಲ್ಲ? ಆಕೆ ಅದನ್ನು ಹುಡುಕುವ ಪ್ರಯತ್ನ ಮಾಡಲಿಲ್ಲವೇಕೆ? ಅಮ್ಮನಲ್ಲಿ ಕೇಳಬೇಕಿತ್ತಲ್ಲ?
ಮನೆಗೆ ಬಂದು ಇನ್ನೇನು ಮಲಗುವ
ಸನ್ನಾಹ ಆಗಬೇಕಾದರೆ ಮೊಬೈಲ್ ಸದ್ದು ಮಾಡಿತು. ನೋಡಿದರೆ ಅತ್ತಿಗೆಯ ಕರೆ. ಕರೆ ಎತ್ತಿಕೊಂಡಾಗ
ಅತ್ತಿಗೆಯದು ಮತ್ತದೇ ಆತಂಕದ ಧ್ವನಿ. ಏನಾದರೂ ಮಾಡೋಣ ಅಂತ ಸಾಂತ್ವನ ಮಾಡಿ ಆರಾಮದಲ್ಲಿ ನಿದ್ದೆ
ಮಾಡಿ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ. ಮಲಗಿದರೂ ಮತ್ತದೇ ಯೋಚನೆ. ಅತ್ತಿಗೆ ಒತ್ತಿ ಒತ್ತಿ
ಹೇಳಿದ ಮಾತು. ದಿವಾಕರನಲ್ಲದೇ ಬೇರೆ ಯಾರೂ ಅವಳಲ್ಲಿ ಮುಕ್ತವಾಗಿ ಕೇಳುವ ಹಾಗಿಲ್ಲ. ಸಮಾಧಾನದಲ್ಲಿ
ಮಾತನಾಡುವುದಿದ್ದರೆ ಅದು ದಿವಾಕರ ಮಾತ್ರ. ಹಾಗಾಗಿ ಕೊನೆಯ ಅವಕಾಶ ಎಂದರೆ ಅದು ದಿವಾಕರ ಮಾತ್ರ. ಈ
ಮಾತು ಅಕ್ಷರಶಃ ಸತ್ಯ. ಆತನಿಗೆ ಲಾವಣ್ಯನ ಮೇಲೆ ಅಪರಿಮಿತ ವಿಶ್ವಾಸ. ಏನಿದ್ದರೂ ಆಕೆ
ಇವುಗಳನ್ನೆಲ್ಲ ಮುಚ್ಚಿಡುವ ಸ್ವಭಾವದವಳಲ್ಲ. ಅಥವಾ ಆಕೆಯಲ್ಲಿ ಮುಕ್ತವಾಗಿ ಕೇಳುವುದಕ್ಕೆ
ದಿವಾಕರನಲ್ಲೂ ಅಂಜಿಕೆ ಇರಲಿಲ್ಲ. ಏನು ಎಂದು ಕೇಳಿಬಿಡಬಹುದು. ಅದರೂ ಕೊನೆಯಲ್ಲಿ ಎಷ್ಟೇ
ವಿಶ್ವಾಸವಿದ್ದರೂ...ಒಂದು ಸಣ್ಣ ಆತಂಕವಿಲ್ಲದೇ ಇರಲಿಲ್ಲ.
ಈಗ ಕೇಳಬೇಕು. ಆದರೆ ಅದಕ್ಕೆ ಒಂದು ಸಂದರ್ಭ ಒದಗಿಬರಬೇಕು. ಅದು ಆದಷ್ಟು ಬೇಗ
ಒದಗಿಬರಬೇಕು. ಯಾಕೆಂದರೆ ಇಂತಹ ವಿಚಾರಗಳು ಸಮಯ ಕಳೆದಂತೆ ಹಲವು ಆಯಾಮಗಳನ್ನು ಪಡೆಯುತ್ತವೆ.
ವಾರಾಂತ್ಯ ಶನಿವಾರ
ರಾತ್ರಿಯನ್ನು ಇದಕ್ಕೆ ಮೀಸಲಾಗಿರಿಸಿ ದಿವಾಕರ ಏನೋ ಒಂದು ನಿರ್ಧಾರ ಮಾಡಿ ಹೊರಟ. ಎಂದಿನಂತೆ
ರಾಜಾಜಿನಗರ ಮೆಟ್ರೋದಲ್ಲಿ ಇಳಿದು ಮನೆಗೆ ಬಂದರೆ ಆತ್ತಿಗೆ ಮತ್ತು ಅಮ್ಮ ಮಾತ್ರ ಇದ್ದರು.
ಅತ್ತಿಗೆಯದ್ದು ಮತ್ತದೇ ಆತಂಕದ ಮಾತುಗಳು. ಅಮ್ಮನದ್ದು ಅದೇ ಹಳೆಯ ವರಸೆ. ಮಕ್ಕಳಿಗೆ ಸದರ ಸಲುಗೆ
ಹೆಚ್ಚಾಯಿತು. ಹಾಗಾಗಿ ಇಂತಹವುಗಳೆಲ್ಲಾ ಸಹಜ ಎನ್ನುವಂತೆ ನಡೆಯುತ್ತದೆ. ಕೇವಲ ಒಂದೆರಡು ಗೆರೆ ಬರೆದ ಒಂದು ಕಾಗದದ ತುಂಡು
ಇಷ್ಟೆಲ್ಲಾ ಕೋಲಾಹಲಕ್ಕೆ ಕಾರಣವಾಗುತ್ತದಲ್ಲಾ ಎಂದು ದಿವಾಕರನಿಗೆ ಆಶ್ಚರ್ಯ. ಕೊನೆಗೆ
ಅತ್ತಿಗೆಯಲ್ಲಿ ಅಮ್ಮನಲ್ಲಿ ಹೇಳಿದ,
. " ಲಾವಣ್ಯ ನಮ್ಮ ಮಗಳು. ಆಕೆಯಲ್ಲಿ ಮೊದಲು ನಾವು ವಿಶ್ವಾಸ ಇಡಬೇಕು. ಹೀಗೆ
ವಿಶ್ವಾಸವೇ ಇಲ್ಲದಂತೆ ವ್ಯವಹರಿಸಿದರೆ ಅವರ ಮನಸ್ಸಿಗೂ ಒಂದು ಆತಂಕ ಇದ್ದೇ ಇರುತ್ತದಲ್ವಾ? ನಾವು ಬೆಳೆಸಿದ ಮಗಳು ನಮ್ಮ ಮನಸ್ಸಿಗೆ ನೋವು ಕೊಡಬಹುದೇ? ಆಕೆಗೂ ಇದೆಲ್ಲ ಅರಿವಿದೆ? ನಮ್ಮ ಬಗ್ಗೆ ಯೋಚನೆ ಮಾಡದೆ
ಇರಲಾರಳು. ಅಂತಹ ಸ್ವಭಾವ ಆಕೆಯದಲ್ಲ. ಏನಿದ್ದರೂ ಅದನ್ನು ಸರಿಪಡಿಸುವ ತಾಳ್ಮೆಯನ್ನು ನಾವು
ಮೈಗೂಡಿಸಿಕೊಳ್ಳಬೇಕು. ಲಾವಣ್ಯನ ಬಗ್ಗೆ ನನಗೆ ವಿಶ್ವಾಸವಿದೆ. ನೋಡೋಣ"
ರಾತ್ರಿ ಟ್ಯೂಷನ್ ಮುಗಿಸಿ
ಲಾವಣ್ಯ ಬಂದಳು. ಮೊನ್ನೆ ತಾನೆ ಬಂದು ಹೋದ ಚಿಕ್ಕಪ್ಪ ಪುನಃ ಯಾಕೆ ಬಂದುಬಿಟ್ಟರು ಎಂದು ಆಕೆಗೆ
ಅಚ್ಚರಿ. ಅದೂ ಮನೆಯಲ್ಲಿನುಳಿದುಕೊಳ್ಳುವ ಸನ್ನಾಹ ನೋಡಿ ತುಂಬ ಸಂಭ್ರಮಿಸಿದಳು. ಮರುದಿನ ಹೇಗೂ
ರಜಾದಿನ.
ರಾತ್ರಿಯ ಊಟವಾದನಂತರ ದಿವಾಕರ ಲಾವಣ್ಯನನ್ನು ಕರೆದುಕೊಂಡು ಮನೆಯ ಮೇಲಿನ ಟೇರೆಸ್ ಗೆ ಹೋದ. ಮೊದಲೆಲ್ಲ...ರಾತ್ರಿಯ
ಹೊತ್ತು ಅಕೆಯೊಂದಿಗೆ ಅಲ್ಲಿ ಕಳೆಯುತ್ತಿದ್ದ. ಅದು ಇದೂ ಹರಟೆ ಹೊಡೆದುಕೊಂಡು ಇರುತ್ತಿದ್ದರು.
ಇಂದೂ ಹಾಗೆ. ಮೇಲೆ ಹೋಗಿ ಕೊನೆಯಲ್ಲಿ ಕೇಳಿದ..." ಲವ್ವಿ ಒಂದು ಮಾತು ಕೇಳಲಾ? ಇದು ಎಂತದು...?" ಎಂದು..ಹಳದಿ
ಕಾಗದ ತೆರೆದು ತೋರಿಸಿದ.
" ಆಕೆ ..ಓ ಇದು
ನಿಮಗೆಲ್ಲಿ ಸಿಕ್ಕಿತು ಚಿಕ್ಕಪ್ಪಾ?" ಏನೂ ಆಗಿಲ್ಲ ಎಂಬಂತೆ ಇತ್ತು
ಆಕೆಯ ಧ್ವನಿ. ಏನಾದರೂ ಒಂದು ಆತಂಕವನ್ನು ನಿರೀಕ್ಷೆಮಾಡಿದ ದಿವಾಕರನಿಗೆ ದೊಡ್ಡ ಅಚ್ಚರಿ .
"ನಿನ್ನ ಅಮ್ಮನೇ ಕೊಟ್ಟರು
ಮಾರಾಯ್ತಿ. ಎಂತ ಸಂಗತಿ ಇದು ಹೇಳು. ನೀನು ಹಾಗೆಲ್ಲ ಮುಚ್ಚಿಡುವ ಜನ ಅಲ್ಲ. ನನ್ನಲ್ಲಿ ಹೇಳು. ಯಾವ ಆತಂಕವೂ ಬೇಡ"
" ಏ ಚಿಕ್ಕಪ್ಪ ಎಂತ
ನೀವು. ನಿಮಗೆ ಗೊತ್ತಿಲ್ಲವ. ನನ್ನನ್ನು. "
ಎಂದು ತಿವಿದು ಕೇಳಿದಾಗ ಒಂದು ಆತ್ಮಿಯತೆ ಮತ್ತೊಂದು ನಿರಾತಂಕದ ಸ್ಪರ್ಶ ಸುಖ.
" ನನಗೆ ಗೊತ್ತುಂಟು
ಲವ್ವಿ. ಆದರೂ ನಾನು ಕೇಳಬೇಕಲ್ಲ?
ಇದು ಏನು ಹೇಳು?"
"ನೀವೆಂತ ಚಿಕ್ಕಪ್ಪ..
ತಲೆ ಬಿಸಿ ಆಯ್ತ? ಇದು ನನ್ನದು ಅಂತ ಅನ್ನಿಸ್ತದ? ನನ್ನ ಕೈ ಬರಹ
ಹಾಗೆ ಉಂಟಾ? ಅದು ನಾನು ಬರೆದದ್ದಲ್ಲ. ಅಮ್ಮನಿಗೆ ಅದು ಎಲ್ಲಿ ಸಿಕ್ಕಿತು? " ದಿವಾಕರ
ಅಮ್ಮನಿಗೆ ಸಿಕ್ಕಿದ ಬಗೆಯನ್ನು. ಹೇಳಿದ. ವಾಸ್ತವದಲ್ಲಿ ಆಕೆಗೆ ಅದರ ಬಗ್ಗೆ ಎಂದೋ ಮರೆತು
ಹೋಗಿತ್ತು. ನಂತರ ಆಕೆ ಅದರ ಕಥೆಯನ್ನು ಹೇಳತೊಡಗಿದಳು.
ಅದು ಆಕೆಯ ಗೆಳತಿ ಭವಂತಿ ಬರೆದ
ಕಾಗದ. ಕಳೆದ ವಾರ ಆಕೆ ಓದುವುದಕ್ಕಾಗಿ ಇಲ್ಲಿ ಮನೆಗೆ ಬಂದಿದ್ದಳು. ಇವರಿಬ್ಬರೇ ಕೋಣೆಯಲ್ಲಿರುವಾಗ
ಈ ಕಾಗದ ಬರೆದಿದ್ದಳು. ಭವಂತಿಗೆ ಒಬ್ಬ ಹುಡುಗನ ಸ್ನೇಹವಿತ್ತು. ಸ್ನೇಹವೆಂದರೆ ಈಕೆಯ ಲೆಕ್ಕದಲ್ಲಿ
ಅದು ಕೇವಲ ಸ್ನೇಹವಾದರೂ ಹುಡುಗ ಮಾತ್ರ ವಿಪರೀತವಾಗಿ ಪ್ರೇಮಿಸುತ್ತಿದ್ದ. ಪ್ರತಿ ಬಾರಿಯೂ
ಭವಂತಿಗೆ ಪ್ರೇಮಿಸುವಂತೆ ಒತ್ತಾಯ ಮಾಡುತ್ತಿದ್ದ. ಆತನ ಒತ್ತಾಯ ಪ್ರೀತಿ ನೋಡಿ ಆಕೆಯೂ ಅದೇ
ವಯಸ್ಸಿನವಳಲ್ವ...ಒಂದಿಷ್ಟು ಮೆತ್ತಗಾಗಿ ಆತನ ಬಗ್ಗೆ ಕ್ರಶ್ ಆದರೂ ಆಕೆಗೆ ಇನ್ನೂ ಓದಬೇಕು, ಇಂತಹುದರಲ್ಲಿ ಸಿಲುಕಬಾರದೆಂಬ ಭಯ ಆತಂಕವಿತ್ತು. ಎಲ್ಲಕ್ಕಿಂತ ಮೇಲಾಗಿ
ಅಪ್ಪ...ಅಪ್ಪನಿಗೆ ನೋವು ಕೊಡುವುದಕ್ಕೆ ಆಕೆಗೆ ಇಷ್ಟವಿರಲಿಲ್ಲ. ಅಮ್ಮನ ಅಗಲಿಕೆಯ ನಂತರ ಅಪ್ಪ
ಬಹಳಷ್ಟು ನೋವು ಅನುಭವಿಸಿ ನಿಜ ಬದುಕಿಗೆ ಮರಳಿದ್ದಾರೆ. ಇನ್ನೂ ಅಪ್ಪ ಆ ನೋವಿನಿಂದ
ಚೇತರಿಸಿಕೊಂಡಿಲ್ಲ. ತಾನು ಬಿಟ್ಟರೆ ಅಪ್ಪ ಮತ್ತೆ ಏಕಾಂಗಿ. ಅಂತಹ ಅಪ್ಪನಿಗೆ , ಆ ಅಪ್ಪನ ಪ್ರೀತಿಗೆ ದ್ರೋಹ ಮಾಡುವುದು ಆಕೆಗೆ ಇಷ್ಟವಿಲ್ಲ. ಆದರೂ..
ಆದರೂ ಮನಸ್ಸಿನ ಒಂದು ಮೂಲೆಯಲ್ಲಿ ಒಂದಿಷ್ಟು ಪ್ರೇಮವಿತ್ತು. ಏನು ಮಾಡುವುದು ಎಂದು ಅದರ ಬಗ್ಗೆಯೇ
ಯೋಚಿಸುತ್ತಿದ್ದಳು. ಅದನ್ನೆ ಲಾವಣ್ಯನಲ್ಲಿ ಹೇಳಿಕೊಂಡಿದ್ದಳು. ಹಾಗಾಗಿ ಆ ಕಾಗದವನ್ನು ಅವಳು
ಹೇಳಿದಂತೆ ಬರೆದಿದ್ದಳು.
ದಿವಾಕರನಿಗೆ ದೊಡ್ಡ ಹೊರೆ
ಕೆಳಗಿಳಿಸಿದ ಅನುಭವವಾದರೆ, ಲಾವಣ್ಯನ ಮೇಲಿಟ್ಟ ವಿಶ್ವಾಸ ಹುಸಿಯಾಗಲಿಲ್ಲವಲ್ಲ ಎಂಬ ಸಂತೋಷ
ಮತ್ತೊಂದೆಡೆ. ಇಷ್ಟು ಸಣ್ಣ ವಿಷಯವನ್ನು ಅತ್ತಿಗೆ ಕೇಳಬಹುದಿತ್ತು. ಆದರೆ ...ಅತ್ತಿಗೆಗೆ ತನ್ನ
ಮೇಲೆ ವಿಶ್ವಾಸ. ತಾನಲ್ಲದೇ ಇದನ್ನು ಪ್ರಸ್ತಾಪ ಮಾಡುವ ವ್ಯಕ್ತಿ ಬೇರೆ ಇಲ್ಲ ಎಂದೇ ದಿವಾಕರನಲ್ಲಿ ಹೇಳಿದ್ದರು.
ದಿವಾಕರ ನಿಟ್ಟುಸಿರು ಬಿಟ್ಟು
ಹೇಳಿದ " ನಿನಗೆ ಗೊತ್ತಾ ಲವ್ವಿ...ನಿನ್ನಮ್ಮ ಮೂರು ದಿನ ಆಯ್ತು ನಿದ್ದೆ ಮಾಡದೆ?"
ಆಕೆ ಉದಾಸೀನತೆಯಿಂದ ಹೇಳಿದಳು
" ಬಿಟ್ಟುಬಿಡಿ ಚಿಕ್ಕಪ್ಪ...ಅಮ್ಮ ಅಲ್ವ...ಇರಲಿ. ಈಗ ಭವಂತಿಯ ಕಥೆಗೆ ಏನು ಮಾಡುವ ಹೇಳಿ? ಆಕೆಗೆ ಏನು ಮಾಡಬೇಕು ಎಂದು ಗೊತ್ತಿಲ್ಲ. ಅದೇ ಯೋಚನೆಯಲ್ಲಿದ್ದಾಳೆ.
ಮನೆಯಲ್ಲಿದ್ದರೆ ಅವನು ಪದೇ ಪದೇ ಕಾಲ್ ಮಾಡ್ತಾನೆ. ಅಪ್ಪ ಇಲ್ಲದಾಗ ಬರಬೇಕಾ ಅಂತ
ಕೇಳುತ್ತಿದ್ದಾನೆ."
ಇಂತಹ ಕಥೆಗಳೆಲ್ಲ ಇದೆ ತರಹ
ಸಂಭವಿಸುತ್ತದೆ. " ನೋಡು ಲವ್ವಿ...ಮೊದಲು ನೀನು ಇಂತಹ ವಿಚಾರಗಳಿಗೆ ತಲೆ ಹಾಕಬೇಡ. ನೀನು
ಇದ್ದಿ ಎಂದು ತಿಳಿದರೆ, ಅವನು ನಿನ್ನ
ಹಿಂದೆ ಬಿದ್ದಾನು. ಅಲ್ಲಿಗೆ ಬಿಟ್ಟು ಬಿಡು. ಅವಳಿಗೆ ಮೊದಲು ಓದುವುದಕ್ಕೆ ಕಾನ್ಸಂಟ್ರೇಟ್
ಮಾಡುವುದಕ್ಕೆ ಹೇಳು."
"ಚಿಕ್ಕಪ್ಪ...ಅದೆಲ್ಲ
ನಾನು ಹಲವು ಸಲ ಹೇಳಿ ಆಯ್ತು. ಆದರೆ ಅದ್ಯಾಕೋ ಆಕೆ ಆಚೆಗೆ ಹೆಚ್ಚು ವಾಲುತ್ತಾ ಇದ್ದಾಳೆ. ಲವ್
ಮಾಡುವುದು ತಪ್ಪು ಹೇಗಾಗುತ್ತದೆ ಚಿಕ್ಕಪ್ಪ. ಅಷ್ಟಕ್ಕೂ ಅದನ್ನು ಕೇವಲ ಪ್ರೆಂಡ್ ಶಿಪ್ ಅಂತ
ಮಾಡಿದರೆ ತಪ್ಪುಂಟಾ. ಯಾರನ್ನು ಯಾರೂ ಪ್ರೆಂಡ್ ಶಿಪ್ ಮಾಡಿಕೊಳ್ಲಬಹುದು. ಅದರಲ್ಲಿ ತಪ್ಪಿಲ್ಲ. ಇದು
ಪರಿಶುದ್ದ ಪ್ರೇಮ ಅಂತ ತಿಳಿಯಬೇಕು. "
"ಅದೆಲ್ಲ ವಿಚಾರ
ಅಲ್ಲಮ್ಮ. ಈಗ ಈ ಪ್ರಂಡ್ ಶಿಪ್ ಎಂಬುದೇ ತಪ್ಪು. ಅದು ಆರಂಭವಾಗುವುದು ಹೀಗೆ. ನಂತರ ಅದು ಕವಲು
ಬದಲಾಗಿಬಿಡುತ್ತದೆ. ಪ್ರೆಂಡ್ ಶಿಪ್ ನಲ್ಲಿ ಕಾಮ ಇಲ್ಲ. ಆದರೆ..ಯೋಚಿಸು, ಪರಿಶುದ್ದ ಪ್ರೇಮದಲ್ಲು ಕಾಮ ಇಲ್ಲ. ಆದರೆ ಇದರಲ್ಲಿ ಕಾಮ ಇಲ್ಲ ಅಂತ
ಹೇಗೆ ಹೇಳುತ್ತಿಯ.? ಮೊದಲಿಗೆ ಇದು ಪರಿಶುದ್ದ ಪ್ರೇಮದ ಲೇಬಲ್ ಅಂಟಿಸಿಕೊಂಡೇ ಇರುತ್ತದೆ. ಆ
ಲೇಬಲ್ ಎಷ್ಟು ದಿನ ಇರುತ್ತದೆ ಹೇಳು? ಒಂದು ದಿನ ಅದೂ ಕಿತ್ತುಕೊಂಡು
ಬರುತ್ತದೆ. "
" ಇದು ಹಾಗಲ್ಲ ಚಿಕ್ಕಪ್ಪ. ಆ ಹುಡುಗ ನನಗೂ ಗೊತ್ತು ಒಳ್ಳೆಯ ಹುಡುಗ. "
" ಅದು ಹೇಗೆ ಹೇಳ್ತಿಯಾ ಲವ್ವಿ? ಎಂತಹ ಪರಿಶುದ್ದ ಪ್ರೇಮವಾದರೂ
ಅಲ್ಲಿ ಕಾಮ ಇದ್ದೇ ಇರುತ್ತದೆ. ಅರೋಗ್ಯ ಪೂರ್ಣ ಹಾರ್ಲಿಕ್ಸ್, ಬೋರ್ನ್ ವಿಟಾ
ಇದ್ದ ಹಾಗೆ ಅದರಲ್ಲೂ ಸಕ್ಕರೆ ಇರಲ್ವ..ಅದು
ಆರೋಗ್ಯಕ್ಕೆ ಹಾನಿಕಾರಕ. ಹಾಗೇ ಈ ಪ್ರೇಮ. ಅದರಲ್ಲಿ ಒಂದಿಷ್ಟಾದರೂ ಕಾಮ ಇದ್ದೇ ಇರಬೇಕು. ಕಾಮ
ಎಂದು ಇಲ್ಲದೇ ಇದ್ದರೆ ಪ್ರೇಮ ಹುಟ್ಟಿಕೊಳ್ಳುವುದಿಲ್ಲ. ಪ್ರೇಮಕ್ಕೆ ಮೂಲಭೂತವಾದ ಯಾವ ಗುಣಗಳೂ
ಇರುವುದಿಲ್ಲ. ಆಕೆಗೆ ಬರೀ ಪ್ರೇಮ ಎಂದಾದರೆ...ಯಾವುದೋ ಹುಡುಗಿಯ ಮೇಲೆ ಹುಟ್ಟಬಹುದಿತ್ತು. ಆ
ಹುಡುಗನಿಗೂ ಹಾಗೆ ಪ್ರೇಮ ಎಂದರೆ ಯಾವುದೋ ಹುಡುಗನ ಮೇಲೂ ಆ ಭಾವನೆ ಬರಬಹುದಿತ್ತು. ಅಲ್ಲಿ
ಒಂದಿಷ್ಟಾದರೂ ಕಾಮ ಅದು ವಯೋಸಹಜವಾದರೂ ಇರಲೇ ಬೇಕು. ಕಾಮ ಎಂಬುದು ಇಂದ್ರಿಯ ಸಂವೇದನೆ. ಅದು
ಹೃದಯದ ಸಂವೇದನೆಯಲ್ಲ. ಇಂದ್ರಿಯವನ್ನು ಮೀರಿ ನಿಲ್ಲುವುದೇ ಜೀವನ. ಹಾಗಾಗಿ ಭವಂತಿಗೆ ಹೇಳು...ಆ
ಭಾವನೆ ಏನಿದ್ದರೂ ಅದು ತಪ್ಪಲ್ಲ. ಆದರೆ ಅದು ಅಕಾಲಿಕವಾದರೆ ತಪ್ಪು. ಮಳೆ ಬರಬೇಕು. ಆದರೆ ಅದು
ಯಾವಾಗಲೋ ಬಂದರೆ ಅನಾಹುತಕ್ಕೆ ಕಾರಣವಾಗುತ್ತದೆ. "
ಲಾವಣ್ಯನಿಗೆ ಒಂದಿಷ್ಟು
ಸಮಾಧಾನವಾದ ಹಾಗೆ ಇತ್ತು. ನಿಜವಾಗಿಯು ಅಲ್ಲಿ ನಿರಾಳವಾದದ್ದು ದಿವಾಕರ. ಒಂದು ಹಳದಿ ಕಾಗದ ಏನೆಲ್ಲ ಆತಂಕವನ್ನು ಸೃಷ್ಟಿ
ಮಾಡಿತ್ತು. ಒಂದು ವೇಳೆ ಲಾವಣ್ಯನಿಗೆ ಆರೀತಿಯ ಒಂದು ಭಾವನೆ ಇರುತ್ತಿದ್ದರೆ....ಆದರೆ
ಲಾವಣ್ಯನನ್ನು ಸಂಪೂರ್ಣ ತಿಳಿದಿದ್ದಲ್ಲಿ ಆ ಆತಂಕಕ್ಕೆ ಅವಕಾಶವಿರುತ್ತಿರಲಿಲ್ಲ. ಆಕೆಯ ಅಪ್ಪ
ಅಮ್ಮನಲ್ಲಿ ಸೂಕ್ಷ್ಮವಾಗಿ ಇದ್ದ ಅವಿಶ್ವಾಸವೇ ಈ ಎಲ್ಲ ಆತಂಕಗಳಿಗೂ ಮೂಲ ಕಾರಣ. ಮೊದಲಿಗೆ ನಾವು
ನಮ್ಮ ಮಕ್ಕಳಲ್ಲಿ ವಿಶ್ವಾಸ ಇರಿಸಬೇಕು. ನಮ್ಮಲ್ಲಿ ಆ ವಿಶ್ವಾಸ ಅವರೂ ಇಡುವಂತೆ ನಾವು
ವ್ಯವಹರಿಸಬೇಕು. ಬಹಳಷ್ಟು ಸಂದರ್ಭಗಳಲ್ಲಿ ಈ ಅವಿಶ್ವಾಸವೇ ಎಲ್ಲ ಗೊಂದಲಗಳಿಗೂ
ಕಾರಣವಾಗಿಬಿಡುತ್ತವೆ. ಲಾವಣ್ಯನ ಮೇಲೆ ವಿಶ್ವಾಸ ಇದ್ದುದರಿಂದ...ದಿವಾಕರ ಮುಕ್ತವಾಗಿ ಅವಳಲ್ಲಿ ಕೇಳುವಂತಾಯಿತು.
ನಿರಾತಂಕವಿಲ್ಲದೆ ಆಕೆಯಲ್ಲಿ ಕೇಳಿದ. ಒಂದು ವೇಳೆ
ಅಂತಹ ಭಾವನೆ ಇರುತ್ತಿದ್ದರೆ....ಎಂಬ ಪ್ರಶ್ನೆ ಬರಬಹುದು. ಆದರೆ ದಿವಾಕರನಿಗೆ ಅಲ್ಲಿಯೂ ಅದಕ್ಕೆ
ವಿಪುಲವಾದ ಅವಕಾಶಗಳನ್ನು ಆ ಮನೋಭಾವವೇ ಸೃಷ್ಟಿ
ಮಾಡಿಕೊಡುತ್ತಿತ್ತು.
ಕೊನೆಯಲ್ಲಿ ಲಾವಣ್ಯ ಹೇಳಿದಳು, " ಚಿಕ್ಕಪ್ಪ ನನಗೂ ಇದೇ ಬಗೆಯ ಸಂದೇಹಗಳು ಇತ್ತು.
ಪ್ರೇಮದಲ್ಲಿ ಸಕ್ಕರೆಯಂತೆ ಒಂದಿಷ್ಟಾದರೂ ಕಾಮ ಇದ್ದೇ ಇರುತ್ತದೆ. ಯಾವಾಗಲೂ ಚಿಕ್ಕಪ್ಪ ಈ
ಸಂದೇಹ ಒಳ್ಳೆಯ ಉತ್ತರ ಹೇಳಿದ್ದೀರಿ. ಅದನ್ನೇ ಭವಂತಿಗೆ ಹೇಳುತ್ತೇನೆ. ಮೊದಲು ಆಕೆ ವಿದ್ಯಾಭ್ಯಾಸ
ಪೂರ್ಣ ಗೊಳಿಸಬೇಕು. ಈಗ ಅವಕಾಶ ಎಂಬುದು ಇದ್ದರೆ ಅದು ವಿದ್ಯಾಭ್ಯಾಸಕ್ಕೆ. ಅದನ್ನು ಅವಳು
ಉಪಯೋಗಿಸಬೇಕು. ನಂತರ ಪ್ರೇಮವೋ ಕಾಮವೋ...ಆಯ್ಕೆಗೆ ಸಂದರ್ಭಗಳೂ ಇವೆ. ಸಮಯವೂ ಇದೆ. ಅದೇ ಅಲ್ವಾ
ಸರಿ ಚಿಕ್ಕಪ್ಪಾ?"
"ಹೌದು ಲವ್ವಿ....ನಿನಗೆ ಇದೆಲ್ಲ ಸರಿಯಾಗಿ ಅರ್ಥವಾಗುತ್ತದೆ. ಹಾಗಾಗಿಯೇ ನಿನ್ನ ಮೇಲೆ
ನನಗೆ ವಿಶ್ವಾಸ. ಮುಂದೆಯೂ ಹಾಗೆ. ಈ ವಿಶ್ವಾಸವೇ ನೀನು ನನಗೆ ಲವ್ವಿ....ಯಾಗುವುದಕ್ಕೆ
ಕಾರಣ."
"ಥ್ಯಾಂಕ್ಸ್ ಚಿಕ್ಕಪ್ಪಾ" ಅಂತ ಎಂದಿನಂತೆ ಲಾವಣ್ಯ ನಗುತ್ತಾ ಹೇಳಿದಾಗ....ಈಕೆ
ನನ್ನ ಲವ್ವಿ ಎಂದುಕೊಂಡು ದಿವಾಕರ ಎದೆಯ ಮೇಲೆ ಕೈ
ಇಟ್ಟು ದೀರ್ಘ ಉಸಿರನ್ನು ಎಳೆದ.
Monday, June 30, 2025
ಅಸ್ಪೃಶ್ಯರು
ಮುಂಜಾನೆ ಬೀದಿಯ ದೂರದಲ್ಲಿ ಸೀಟಿಯ ಧ್ವನಿ ಕೇಳಿಸಿದರೆ ಕಸದ ಗಾಡಿ ತಳ್ಳಿಕೊಂಡು ಆಕೆ ಎಂದಿನಂತೆ ಬಂದಳು ಎಂದು ತಿಳಿಯಬೇಕು. ಓಡುತ್ತಿರುವ ಬಸ್ಸಿನಲ್ಲಿ ನಿರ್ವಾಕ ಸೀಟಿ (ವಿಸಿಲ್) ಊದಿದರೆ ಓಡುತ್ತಿರುವ ಬಸ್ಸು ನಿಂತು ಬಿಡುತ್ತದೆ. ಆದರೆ ಆಕೆಯ ಸೀಟಿ ಕೇಳಿದೊಡನೆ ಬೀದಿಯ ಓಟ ಆರಂಭವಾಗಿ, ಮನೆಯ ಬಾಗಿಲು ತೆರೆದು ಒಬ್ಬೊಬ್ಬರಾಗಿ ಕಸದ ಬುಟ್ಟಿ ಹಿಡಿದುಕೊಂಡು ಪದ್ದಕ್ಕನ ಬಳಿಗೆ ದೌಡಾಯಿಸುವುದನ್ನು ಕಾಣಬಹುದು. ಪದ್ದಕ್ಕ ನಗರ ಪಾಲಿಕೆಯ ನೌಕರಿಣಿ. ಎಲ್ಲರೂ ಕಸದ ಗಾಡಿಯಿಂದ ಒಂದಷ್ಟು ದೂರ ನಿಂತು ಕೊಂಡು ಕಸದ ಬುಟ್ಟಿಯಿಂದ ಕಸ ಗಾಡಿಗೆ ಸುರಿದು ಅಲ್ಲಿ ನಿಲ್ಲಲಾಗದೇ ಓಡಿ ಬಂದು ಬಿಡುತ್ತಾರೆ. ಏನೇನೋ ಕಸದ ವಾಸನೆ ಕಳೆಯುವುದೆಂದರೆ ಒಂದು ರೀತಿಯ ಹಿಂಸೆ. ಕೆಲವರಂತೂ ಆ ಒಂದು ಘಳಿಗೆ ಮೂಗು ಮುಚ್ಚಿಕೊಂಡು, ಮಾಸ್ಕ್ ಹಾಕಿಕೊಂಡು ಕಸ ಸುರಿಯುವುದಕ್ಕೆ ಹೋಗುತ್ತಾರೆ. ನಾವೆಷ್ಟು ಅಸಹ್ಯ ಪಟ್ಟುಕೊಂಡರೂ ಆಕೆ ಏನೂ ಆಗಿಲ್ಲ ಎಂಬಂತೆ ಗಾಡಿಯ ಬಳಿಯಲ್ಲೇ ನಿಂತುಕೊಂಡು ತಂದವರ ಕಸವನ್ನು ಗಾಡಿಗೆ ತುಂಬಿಸಿಕೊಳ್ಳುತ್ತಾಳೆ. ಸುರಿಯುವುದು ಮಾತ್ರವಲ್ಲ ಆ ಕಸವನ್ನು ಜಾಲಾಡಿ ಅದರಲ್ಲಿ ಕಬ್ಬಿಣ ಪ್ಲಾಸ್ಟಿ ಕ್ ಇದೆಯೋ ಎಂದು ಹುಡುಕುತ್ತಾಳೆ. ಎನೂ ಅಲ್ಲದ ಏನೂ ಇಲ್ಲದ ಆಕೆಯೆಂಬ ಶೂನ್ಯ ಸ್ಥಾನ ಕೂಡ ಹಲವು ಸಲ ಬಹಳ ಅವಶ್ಯಕವೆನಿಸುತ್ತದೆ. ಒಂದೆರಡು ದಿನ ಆಕೆ ಬಂದಿಲ್ಲ, ಸೀಟಿಯ ಧ್ವನಿ ಕೇಳಲಿಲ್ಲ ಎಂದರೆ ಮನೆ ಮನೆಯಲ್ಲೂ ದುರ್ಗಂಧ ನೆಲೆಯಾಗುತ್ತದೆ. ಏನೂ ಇಲ್ಲದ ಆಕೆ ಬಂದಿಲ್ಲವೆಂಬುದು ಮುಖ್ಯವಾಗುತ್ತದೆ. ಯಾವುದೋ ಸದ್ದಿನಲ್ಲಿ ಆಕೆಯ ಸೀಟಿಯ ಸದ್ದನ್ನು ಕಿವಿ ಅರಸುತ್ತದೆ.
ಆಕೆ ಮಹಾನಗರ ಪಾಲಿಕೆ ಕೆಲಸಕ್ಕೆ ತನ್ನ ಯೌವನದಲ್ಲೇ ಸೇರಿದ್ದಳು. ಬೆಂಗಳೂರಿನ ಹಲವಾರು ಬೀದಿ ಸ್ವಚ್ಚ ಮಾಡಿದ ಚರಿತ್ರೆ ಇವಳದು. ನಮ್ಮ ಬೀದಿಯ ಆ ತುದಿಯಿಂದ ಈ ತುದಿ ತನಕವೂ ಸ್ವಚ್ಛ ಮಾಡುತ್ತಾಳೆ. ಪ್ರತಿಮನೆಯವರೂ ತಮ್ಮ ಮನೆ ಎದುರು ಗುಡಿಸಿ ತೊಳೆದು ರಂಗೋಲಿ ಹಾಕಿದರೂ ಈಕೆ ಒಂದಿಷ್ಟು ಪೊರಕೆ ಮುಟ್ಟಿಸುವುದು ಇದ್ದೇ ಇರುತ್ತದೆ.ಆಕೆಯದು ಮಾಸಲು ಉಡುಪು. ಮೈ ಮೇಲೆಲ್ಲ ಕಸದ ತುಣುಕುಗಳು. ಹತ್ತಿರ ಬಂದರೆ ಸಾಕು ದುರ್ವಾಸನೆ. ಆಕೆಗದು ವೃತ್ತಿ. ಹಸಿವು ನೀಗುವ ವೃತ್ತಿ.
ಆಕೆಯ ಜಾತಿ ಯಾವುದೋ ಧರ್ಮ ಯಾವುದೋ ನಮ್ಮ ಬೀದಿಯವರಂತೂ ತಲೆಕೆಡಿಸಿಕೊಂಡಿಲ್ಲ. ಆದರೆ ಆಕೆಯ ಮೈಗಂಟಿದ ಕೊಳೆ, ಮೈಲಿಗೆಯಾದ ಬಟ್ಟೆ ಹತ್ತಿರ ಬಂದರೆ ಕಸದ ದುರ್ವಾಸನೆ ಇಷ್ಟು ಮಾತ್ರ ಆಕೆಯಿಂದ ದೂರವಿರುವಂತೆ ಮಾಡಿದೆ. ಹಳ್ಳಿಯಲ್ಲಾದರೆ ಇದನ್ನೇ ಅಸ್ಪೃಶ್ಯತೆ ಎನ್ನಬಹುದು. ಆದರೆ ಇಲ್ಲಿ ಆಕೆಯ ಜಾತಿ ಧರ್ಮ ಯಾರಿಗೂ ತಿಳಿಯದೇ ಇರುವಾಗ ಆ ಸಮಸ್ಯೆಯಂತು ಅಲ್ಲವೇ ಅಲ್ಲ. ಆದರೂ ಬೀದಿ ಮನೆಯವರೆಲ್ಲರೂ ರಸ್ತೆಯ ಒಂದು ಬದಿ ಆಕೆ ಬಂದರೆ ಇವರೊಂದು ಬದಿಯಲ್ಲಿ ಮೂಗು ಮುಚ್ಚಿ ನಡೆಯುತ್ತಾರೆ. ಆಕೆ ಎದುರು ಬಂದರೆ ಕಣ್ಣು ಮುಚ್ಚಿಕೊಳ್ಳುವವರೂ ಇರಬಹುದು. ದೃಷ್ಟಿ ಅಪವಿತ್ರವಾಗಬಹುದು ಎಂಬ ಭ್ರಮೆ. ಕೇವಲ ದುರ್ಗಂಧದಿಂದ ಅಂತರ ಕಾದುಕೊಂಡುಬಿಡುತ್ತಾರೆ. ಇಷ್ಟೆಲ್ಲಾ ಅದರೂ ಹಲವು ಮನೆಯಲ್ಲಿ ಆಗುವ ವಿಶೇಷ ದಿನಗಳಲ್ಲಿ ಒಂದಷ್ಟು ವಿಶೇಷ ತಿನಿಸುಗಳನ್ನು ಇವಳಿಗೆ ಮೀಸಲಾಗಿರಿಸಿ, ತೆಗೆದು ಇಟ್ಟು ಮರುದಿನ ಆಕೆಗೆ ಕೊಟ್ಟು ಬಿಡುತ್ತಾರೆ. ಮನೆಯ ಹೊರಗೆ ಒಂದು ಚಿಕ್ಕ ಡಬ್ಬದಲ್ಲೋ ಚೀಲದಲ್ಲೋ ತುಂಬಿಸಿಡುತ್ತಾರೆ. ಕೆಲವರು ಆಕೆ ಬರುವ ಮೊದಲೇ ಮನೆಯ ಹೊರಗೆ ಇಟ್ಟಿರುತ್ತಾರೆ. ಕೆಲವರಂತೂ ಆಕೆ ಬರುವಾಗ ದೂರ ನಿಂತು ಆಕೆಯ ಕೈಗೆ ಎಸೆದು ಬಿಡುತ್ತಾರೆ. ಆಕೆ ಬರುವಾಗ ಮೊದಲ ಮಹಡಿಯಲ್ಲಿ ನಿಂತು ಕೆಳಗೆ ಆಕಾಶದಿಂದ ಧರೆಗೆಸೆದು ಅನುಗ್ರಹಿಸಿದಂತೆ ಮಾಡಿಬಿಡುತ್ತಾರೆ. ಆದರೆ ತನ್ನ ಮಾಲಿನ್ಯವನ್ನು ಚಿಂತಿಸದ ನಿರ್ಮಲ ಕಾಯಕ ಆಕೆಯದು.
ಸದಾ ಮಲಿನ ಬಟ್ಟೆ ಆದರೂ ಈಗ ಉತ್ತಮವಾದ ಸಮವಸ್ತ್ರ ಸರಕಾರ ಒದಗಿಸಿದೆ. ಯಾವ ಸಮ ವಸ್ತ್ರವಿದ್ದರೂ ಆಕೆ ಕಸದ ಗಾಡಿ ತಳ್ಳುತ್ತ ಬರಬೇಕಾದರೆ ಆಕೆಯಿಂದ ಅಂತರ ಕಾದುಕೊಳ್ಳುತ್ತಾರೆ. ಹೀಗಿದ್ದ ಆಕೆಯನ್ನು ಒಂದು ದಿನ ಮೆಟ್ರೋ ರೈಲಿನಲ್ಲಿ ನೋಡುತ್ತೇನೆ. . ಆಕೆಯೇ ಈಕೆಯಾ ಎಂದು ನನಗೆ ಅಚ್ಚರಿಯಾಗುತ್ತದೆ ಶುಭ್ರವಾದ ಬಟ್ಟೆ. ಅಲಂಕಾರ, ಆ ನಡಿಗೆ ನೋಡಿದರೆ ಆಕೆಯ ಬಳಿಯಿಂದ ಯಾರೂ ದೂರ ಸರಿಯುವುದಿಲ್ಲ. ತಮ್ಮ ಬಳಿಯಲ್ಲಿ ಜಾಗವಾದ ತಕ್ಷಣ ಆಕೆಯನ್ನು ಕುಳಿತುಕೊಳ್ಳುವಂತೆ ಹೇಳುತ್ತಾರೆ. ಅದು ಉದಾರತೆಯಲ್ಲ. ಎಲ್ಲಲ್ಲೂ ವರ್ತಿಸುವ ಸಾಮಾನ್ಯ ವರ್ತನೆ. ಆಕೆಯ ಕಸದಗಾಡಿ, ಆಕೆಯ ವೃತ್ತಿ ಯಾವುದೂ ಪರಿಗಣಿಸಲ್ಪಡುವುದಿಲ್ಲ. ಹಾಗಾದರೆ ಉಳಿದ ದಿನಗಳಲ್ಲಿ ಆಕೆ ಅಸ್ಪೃಶ್ಯಳಾಗುವುದು ಯಾಕೆ? ಸ್ಪರ್ಶ ಅಸ್ಪರ್ಶ ಎಲ್ಲವೂ ಇಂದ್ರಿಯ ಕ್ರಿಯೆಗಳು. ಮತ್ತು ಮನಸ್ಸಿನ ಭಾವನೆಗಳು.
ಒಂದು ಉತ್ತಮ ಇಂಪಾದ ಶೃತಿ ಬದ್ದವಾದ ಹಾಡು ಕೇಳುವಾಗ ನಡುವೆ ಕರ್ಕಶ ಅಪಸ್ವರ ಬಂದರೆ...ನಮ್ಮ ಕಿವಿಯೂ ಸ್ವೀಕರಿಸುವುದಕ್ಕೆ ಒಪ್ಪಿಕೊಳ್ಳುವುದಿಲ್ಲ. ಮನಸ್ಸೂ ಬಯಸುವುದಿಲ್ಲ. ಅದೇ ರೀತಿ ಕರ್ಕಶ ಸದ್ದುಗಳೇ ತುಂಬಿರುವಲ್ಲಿ ಒಂದು ಇಂಪಾದ ಹಾಡು ಕೇಳಿದರೂ ಅದನ್ನು ಸ್ವೀಕರಿಸುವುದಕ್ಕೆ ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಸ್ಪರ್ಶ ಅಸ್ಪರ್ಶದ ವೆತ್ಯಾಸ ಇಷ್ಟೇ. ಈ ಅಸ್ಪೃಶ್ಯತೆ ಹುಟ್ಟಿಕೊಂಡು ಆನಂತರ ಅದು ಅನರ್ಥದ ಪರಂಪರೆ ಸೃಷ್ಟಿಸಿ ಮೂಲ ಭಾವನೆಯನ್ನೇ ಬದಲಿಸಿಬಿಟ್ಟಿತೇ ಅಂತ ಅನ್ನಿಸುತ್ತದೆ. ಪಾವಿತ್ರ್ಯ ಮತ್ತು ಅಸ್ಪೃಶ್ಯ ಆಧ್ಯಾತ್ಮಿಕಕ್ಕೆ ಸಂಭಂಧಿಸಿ ಅರ್ಥಮಾಡಿಕೊಳ್ಳುವುದಕ್ಕೆಅಸಮರ್ಥರಾದದ್ದು ಮಾತ್ರವಲ್ಲ ಅದರ ಅನುಷ್ಠಾನವನ್ನು ವಿಪರೀತವಾಗಿ ಬಳಸಿಕೊಂಡು ಒಂದು ಪಿಡುಗಿಗೆ ಕಾರಣರಾಗಿ ಹೋದದ್ದು ಒಂದು ದುರಂತ.
ಪಾವಿತ್ರ್ಯತೆ ಎಂಬುದು ಮನುಷ್ಯ ಜನ್ಮಕ್ಕೆ ಹೊಂದಿಕೊಂಡು ಬಳಕೆಯಾಗಬೇಕಾದದ್ದು ಧರ್ಮದ ನೆರಳಲ್ಲಿ ಅದು ವಿರೂಪಕ್ಕೆ ಕಾರಣವಾಗಿಬಿಟ್ಟಿತು. ಕಸ ಹೆಕ್ಕುವವಳು ಉಳಿದವರಂತೆ ಸ್ವಚ್ಛ ಸ್ಥಿತಿಯಲ್ಲಿ ಬಂದಾಗ ಎಲ್ಲರೂ ಸೇರಿಸಿಕೊಳ್ಳುವಂತೆ ಪಾವಿತ್ರ್ಯ ಎಂಬುದು ಅನುಸರಿಸುವ ಪ್ರವೃತ್ತಿಯಲ್ಲಿದೆ. ಪರಿಶುದ್ದತೆಯ ಭಾವ ಎಂಬುದು ಅಸ್ಪೃಶ್ಯತೆಗಿಂತಲೂ ಪರಿಶುದ್ದನಾಗುವುದಕ್ಕೆ ಹೆಚ್ಚು ಒತ್ತುಕೊಡುತ್ತದೆ. ತಾನು ಅಪವಿತ್ರ ಎಂದು ತಿಳಿದುಕೊಂಡರೆ ಅಲ್ಲಿ ಪಾವಿತ್ರ್ಯದ ಅರಿವು ಉಂಟಾಗುತ್ತದೆ. ಜೀವ ಭಾವತೊರೆದು ಪರಮಾತ್ಮನಲ್ಲಿ ಐಕ್ಯವಾಗುವುದಕ್ಕೆ ಪಾವಿತ್ರ್ಯತೆ ಅತ್ಯಂತ ಅವಶ್ಯಕ. ಪರಮಾತ್ಮನ ಎದುರು ಎಲ್ಲರೂ ಅಪವಿತ್ರರು ಮತ್ತು ಅಸ್ಪೃಶ್ಯರು. ನಾಮ ರೂಪ ಕ್ರಿಯೆ ಇವುಗಳು ಮನುಷ್ಯನ ಅಸಮಾನತೆಯ ಮೂರು ವೆತ್ಯಾಸಗಳು. ಹೆಸರಿನಿಂದ ರೂಪದಿಂದ ಮತ್ತು ಮಾಡುವ ಕ್ರಿಯೆಯಿಂದ ಮಾತ್ರ ಮನುಷ್ಯ ಪ್ರತ್ಯೇಕಿಸಲ್ಪಡುತ್ತಾನೆ. ಹೆಸರು ಹಲವು ಇರಬಹುದು. ರೂಪ ಪ್ರತಿಯೊಬ್ಬರದೂ ವೆತ್ಯಾಸವಿರಬಹುದು. ಇನ್ನು ವೃತ್ತಿಯೂ ಬೇರೆ ಬೇರೆ ಇರಬಹುದು. ಇದಲ್ಲದೇ ಮನುಷ್ಯರಲ್ಲಿ ಬೇರೆ ಯಾವ ಬಗೆಯ ವೆತ್ಯಾಸ ಅಸಮಾನತೆ ಇರುವುದಕ್ಕೆ ಸಾಧ್ಯವಿಲ್ಲ. ಆದರೆ ಇಂದು ಪ್ರತ್ಯೇಕಿಸುವುದಕ್ಕೆ ಹಲವು ವಿಷಯಗಳು ಅರ್ಹತೆಗಳು ಇರುತ್ತವೆ. ಈ ಅಸಮಾನತೆಯ ಅಜ್ಞಾನ ಹಲವನ್ನು ಅಪಾರ್ಥಕ್ಕೆ ಎಡೆಮಾಡಿಕೊಟ್ಟಿದೆ.
ಬ್ರಹ್ಮಚರ್ಯ ಮತ್ತೊಂದು ಅಹಿಂಸ ಈ ಎರಡು ವಿಷಯಗಳು ಸಾರ್ವತ್ರಿಕ ಆಚರಣೆಗೆ ಸಂಬಂಧಿಸಿ ಅಷ್ಟಾಂಗ ಯೋಗದ ನಿಯಮಗಳಲ್ಲಿ ವಿಧಿಸಿದೆ. ಬ್ರಹ್ಮಚರ್ಯ ಎಂದರೆ ಮದುವೆಯಾಗದೇ ಇರುವುದು ಎಂದು ತಿಳಿದುಕೊಂಡಿದ್ದಾರೆ. ಆದರೆ ಬ್ರಹ್ಮ ಚರ್ಯ...ಎಂದರೆ ಬ್ರಹ್ಮನನ್ನು ಅಂದರೆ ಪರಬ್ರಹ್ಮನ ಅಸ್ತಿತ್ವವನ್ನು ತಿಳಿದುಕೊಳ್ಳುವುದು. ಪರಬ್ರಹ್ಮದ ಅರಿವಿನಲ್ಲೇ ಸಂಚರಿಸುತ್ತಿರುವುದು. ಆದನ್ನು ತಿಳಿದುಕೊಂಡವನೇ ಬ್ರಹ್ಮ ಚರ್ಯದ ಹಾದಿಯಲಿ ನಡೆದು ಬ್ರಹ್ಮಚಾರಿ ಎಂದಾಗುತ್ತಾನೆ. ಆದರೆ ವಾಸ್ತವದಲ್ಲಿ ಅದರ ಅರ್ಥ ಬೇರೆಯೇ ಆಗಿ ಬಳಸಿಯಾಗಿದೆ. ಬ್ರಹ್ಮ ಚರ್ಯ ಎಂದರೆ ಅವಿವಾಹಿತ. ಇನ್ನು ಅಹಿಂಸೆ. ಕೇವಲ ಸಸ್ಯಾಹಾರ ಎಂದರೆ ಅಹಿಂಸೆ ಎಂಬ ಭಾವನೆ ಇದೆ. ಆದರೆ ವಾಸ್ತವದಲ್ಲಿ ಒಬ್ಬ ಮಾಂಸಾಹಾರಿಯೂ ಅಂಹಿಸಾವಾದಿಯಾಗಬಲ್ಲ. ಅಹಿಂಸೆ ಎಂಬುದು ಮನಸ್ಸಿನ ಭಾವನೆಯಲ್ಲಿದೆ. ಹೊರತು ಆಹಾರದಲ್ಲಿ ಇಲ್ಲ. ಇಲ್ಲಿ ಮನಸ್ಸಿನ ಪ್ರವೃತ್ತಿಯೇ ಮುಖ್ಯವಾಗುತ್ತದೆ. ಅಹಿಂಸೆ ಅದು ಕೇವಲ ದೈಹಿಕವಾಗಿ ಮಾತ್ರವಲ್ಲ. ಮಾನಸಿಕವಾಗಿ ಹಿಂಸಿಸುವುದು ಹಿಂಸೆಯಾಗುತ್ತದೆ. ನಮ್ಮಲ್ಲಿ ಸನಾತನದಿಂದ ಬಂದ ಹಲವು ವಿಚಾರಗಳೂ ಹೀಗೆ ಅವುಗಳನ್ನು ಅರ್ಥವಿಸುವುದರಲ್ಲಿ ಮನುಷ್ಯ ಎಡವಿದ್ದೆ ಹೆಚ್ಚು. ಹಲವು ಅಧ್ಯಾತ್ಮ ತತ್ವಗಳು ಇಂದು ಇದೇ ಬಗೆಯಲ್ಲಿ ನಂಬಿಕೆಯನ್ನು ಕಳೆದುಕೊಂಡಿವೆ. ಕಳೆದು ಕೊಂಡದ್ದು ಅಲ್ಲ ಅಜ್ಞಾನದಿಂದ ಅದನ್ನು ಕಳೆಯಲಾಗಿದೆ. ಯಾಕೆಂದರೆ ಅರ್ಥವಿಸುವುದಕ್ಕೆ ಆಧ್ಯಯನ ಬೇಕು. ಅದಕ್ಕಿಂತಲೂ ಬದ್ದತೆ ಬೇಕು. ಸನಾತನ ಧರ್ಮದ ಆಳ ಅಗಲವನ್ನು ಅರಿಯುವುದಕ್ಕೆ ಕೇವಲ ಒಂದು ಜನ್ಮದಿಂದ ಸಾಧ್ಯವಾಗುವುದಿಲ್ಲ. ಯಾವುದನ್ನು ನಮಗೆ ಅರ್ಥಮಾಡಿಕೊಳ್ಳುವುದಕ್ಕೆ ಅಸಾಧ್ಯವೋ ಅದರ ಬಗ್ಗೆ ಔದಾಸಿನ್ಯವನ್ನು ತಾಳುವುದೇ ಹೆಚ್ಚು. ಅಜ್ಞಾನ ನಮ್ಮ ಅಸಮರ್ಥತೆಯನ್ನು ಮುಚ್ಚಿಹಾಕುತ್ತದೆ.
ಅಸ್ಪೃಶ್ಯತೆ ದೈಹಿಕವಾಗಿ ಮಾತ್ರವಲ್ಲ. ಮಾನಸಿಕವಾಗಿ. ಎಲ್ಲ ಸ್ಪರ್ಶದಿಂದಲೂ ದೂರವಾಗಿರುವುದು ಎಂದರೆ ಅದು ಪರಮ ಪವಿತ್ರದ ಹಾದಿ. ಅದು ಸುಲಭದಲ್ಲಿ ಸಾಧ್ಯವಾಗುವಂತಹುದಲ್ಲ. ಉಲಿದೆಲ್ಲವನ್ನು ಮನಸ್ಸಿಗೆ ಅಂಟಿಸಿಕೊಂಡು ಕೇವಲ ದೇಹದಿಂದ ಅಸ್ಪ್ರುಶ್ಯನಾಗಿದ್ದರೆ ಪವಿತ್ರನಾದೆ ಎಂಬುದಕ್ಕೆ ಅರ್ಥವಿಲ್ಲ. ಪಾಪ ಅಥವ ದುರಿತ ವಿದ್ಯುತ್ ತಂತಿಯಲ್ಲಿ ಹರಿವ ವಿದ್ಯುತ್ ನಂತೆ ಅದು ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಸ್ಪರ್ಶವಾದರೆ ಅದು ಅನುಭವಕ್ಕೆ ಬರುತ್ತದೆ. ಪವಿತ್ರತೆ ಇರುವುದು ಈ ಪಾಪಗಳಿಂದ ದೂರವಾಗುವುದರಲ್ಲಿದೆ.
Saturday, June 21, 2025
ಯೋಗದಿನ ಒಂದು ಪ್ರದರ್ಶನ
ಯೋಗ ಅಂದರೆ ಒಂದನ್ನು ಒಂದು ಬೆಸೆಯುವುದು ಅಂದರೆ ಸಂಯೋಗ. ಆದರೆ ಯೋಗ ದಿನಾಚರಣೆಯ ಕಾರ್ಯಕ್ರಮಗಳನ್ನು ನೋಡುವಾಗ ಈ ಭಾವನೆ ಹುಟ್ಟುವುದಿಲ್ಲ. ನದಿ ಹರಿದು ಸಮುದ್ರವನ್ನು ಸೇರುವಂತೆ ಅದು ನದಿಯ ಯೋಗ. ಮನುಷ್ಯ ಪ್ರಾಣಿ ಸಂಕುಲಗಳೂ ಜೀವಾತ್ಮ ಪರಮಾತ್ಮನಲ್ಲಿ ಸೇರುವುದೇ ಯೋಗ. ಈ ಅರ್ಥದಲ್ಲಿ ಯೋಗದಿನವನ್ನು ಸಂಭ್ರಮಿಸಿದರೆ ಅದು ನಿಜವಾದ ಯೋಗ ದಿನದ ಯಶಸ್ಸು ಎನ್ನಬೇಕು. ಆದರೆ ಇದನ್ನು ಈ ಬಗೆಯಲ್ಲಿ ಅರ್ಥೈಸುವುದಕ್ಕೆ ಮನಸ್ಸು ಕಠಿಣವಾಗಿರಬೇಕು. ಬದುಕು ಅನುಭವದಿಂದ ಪಕ್ವವಾಗಬೇಕು. ಇವೆರಡೂ ಇಲ್ಲದಿರುವಾಗ ಯೋಗದ ಬಗ್ತೆ ತಿಳಿಯುವ ಅದರ ಅಂತರಾಳಕ್ಕೆ ಇಳಿಯುವ ಆಸಕ್ತಿ ಇರಬೇಕು. ಯೋಗ ದಿನಾಚರಣೆಯಿಂದ ಒಂದಷ್ಟು ಪ್ರೇರಣೆಯಾದರೂ ಹುಟ್ಟಿಕೊಳ್ಳಬಹುದು ಎಂಬ ಆಶಾಭಾವ ಇದ್ದರೆ ಈಗಿನ ಆಚರಣೆಗಳನ್ನು , ಆ ಆಡಂಬರವನ್ನು ನೋಡಿದರೆ ಆಶಾಭಾವ ಉಳಿಯುವುದಿಲ್ಲ.
ನಮ್ಮಲ್ಲಿ ಒಂದು ವಿಚಿತ್ರವಾದ ಸ್ವಭಾವ ಅಥವಾ ವಾಡಿಕೆಯೋ ಗೊತ್ತಿಲ್ಲ. ಯಾವುದೇ ದಿನಾಚರಣೆಯಾದರೂ ಅದಕ್ಕೊಂದು ಆಡಂಬರ ಇದ್ದೇ ಇರುತ್ತದೆ. ಅದರ ಹೆಸರಲ್ಲಿ ಒಂದಷ್ಟು ಅರ್ಥವಿಲ್ಲದ ಆಚರಣೆಗಳು ಕಾಣಬಹುದು. ಯೋಗದಿನವು ಅದೇ ಹಾದಿಯಲ್ಲಿ ಸಾಗುವುದು ದುರ್ದೈವ.
ಪ್ರತಿವರ್ಷವೂ ಯೋಗ ದಿನ ಬರುತ್ತದೆ. ಇನ್ನೇನು ಎಲ್ಲವೂ ಬದಲಾಗುತ್ತದೆ ಎಂಬ ನಿರೀಕ್ಷೆ ಇಡುವುದು ಸರಿಯಲ್ಲ. ಆದರೆ ಯೋಗದ ಬಗ್ಗೆ ತಿಳಿಯುವುದಕ್ಕೆ ಈ ನಿರೀಕ್ಷೆ ಸಹಕಾರಿಯಾಗಬೇಕು. ಇಂದು ಬಹಳ ಸಡಗರದಿಂದ ಯೋಗ ದಿನ ಆಚರಿಸಿದ ವರದಿಯನ್ನು ಕಾಣುತ್ತಿದ್ದೇವೆ. ಅದನ್ನು ನೋಡುವಾಗ ಈ ಯೋಗ ಸಂಯೋಗದ ಬಗ್ಗೆ ಯಾರೂ ಗಂಭೀರವಾಗಿಲ್ಲ ಅಂತ ಅನ್ನಿಸುತ್ತದೆ. ಕೆಲವು ಯೋಗ ದಿನಾಚರಣೆಗಳು ಅರ್ಥವತ್ತಾಗಿ ನಡೆದರೂ ಇನ್ನು ಕೆಲವು ಯೋಗ ಅಂದರೆ ಇದುವಾ ಅಂತ ಅನ್ನಿಸುವಷ್ಟರ ಮಟ್ಟಿಗೆ ಅರ್ಥಹೀನವಾಗಿ ಕಂಡಿತ್ತು. ನಾವು ಯಾವ ದಿನವನ್ನಾದರೂ ಸಂಭ್ರಮಿಸಿ ಆಚರಿಸುತ್ತೇವೆ. ಆದರೆ ಅದರ ಮೂಲ ಉದ್ದೇಶದ ಗಂಭೀರವಾಗಿ ಯೋಚಿಸುವುದಿಲ್ಲ. ಹಾಡುವುದು ಕುಣಿಯುವುದು ತಿನ್ನುವುದು ಈ ಸಂಭ್ರಮದಲ್ಲಿ ಅತೀ ಮುಖ್ಯವಾಗುತ್ತದೆ. ಹಾಗೆ ನೋಡಿದರೆ ಯಾವುದರ ಮೂಲಕವೂ ಸಂಯೋಗವನ್ನು ಸಾಧಿಸಬಹುದೇನೋ ಸತ್ಯ. ಆದರೆ ಅದು ನಿಜವಾದ ಯೋಗ ಅನ್ನಿಸಬಹುದೇ? ಎಲ್ಲ ಸಂಭ್ರಮದಂತೆ ಇಲ್ಲೂ ಹಾಡುವುದು ತಿನ್ನುವುದು ಕುಣಿಯುವುದು ಪ್ರಧಾನವಾದರೆ ಅದು ಯೋಗ ಹೇಗಾಗುತ್ತದೆ?
ಯೋಗ ಅಂದರೆ ಚಿತ್ತವೃತ್ತಿಯಿಂದ ದೂರುವವಿರುವುದು. ಚಿತ್ತವೃತ್ತಿ ಎಂದರೆ ಮನಸ್ಸು ಇಂದ್ರಿಯಗಳ ಮೂಲಕ ಗ್ರಹಿಸಿ ಅದಕ್ಕೆ ತಕ್ಕಂತೆ ವರ್ತಿಸುವುದು. ಇಷ್ಟೆಲ್ಲ ಆಳಕ್ಕೆ ಯೋಚಿಸುವುದು ಬಹಳ ಕಷ್ಟವಾಗುತ್ತದೆ. ಆದರೆ ಯೋಗ ಎಂಬುದನ್ನು ತಿಳಿಯುವ ಉದ್ದೇಶವಾದರೂ ನಮ್ಮ ಕೃತಿಯಲ್ಲಿರಬೇಕು. ಯೋಗ ದಿನಾಚರಣೆ ಸಾರ್ಥಕವಾಗಬೇಕಾದರೆ ಇದು ಅತೀ ಅವಶ್ಯ. ಇಲ್ಲವಾದರೆ ಆಸನ ಪ್ರಾಣಾಯಾಮ ಇಷ್ಟನ್ನೇ ಯೋಗ ಅಂತ ತಿಳಿದು ಸನಾತನ ಪದ್ದತಿಗೆ ಮತ್ತೊಂದು ಅರ್ಥವನ್ನು ಕಲ್ಪಿಸುವ ಸಂಭವವಿದೆ. ಯೋಗವನ್ನು ಕೇವಲ ಆಸನ ಪ್ರಾಣಾಯಾಮಕ್ಕೆ ಸೀಮಿತಗೊಳ್ಳಬಾರದು. ಸನಾತನ ಧರ್ಮಾಚರಣೆಗಳು, ಮನುವಾದ ಇವುಗಳೆಲ್ಲ ಅಪಾರ್ಥವನ್ನು ಹುಟ್ಟು ಹಾಕಿದಂತೆ ಯೋಗಾಭ್ಯಾಸವೂ ಅದೇ ಸಾಲಿಗೆ ಸೇರಿಬಿಡುತ್ತದೆ. ಯೋಗಾಭ್ಯಾಸದಲ್ಲಿ ಆಸನಗಳಿಗೇ ಹೆಚ್ಚು ಪ್ರಾಧಾನ್ಯ ಕೊಟ್ಟುಉಳಿದವುಗಳನ್ನೆಲ್ಲ ನಿರ್ಲಕ್ಷಿಸಲಾಗುತ್ತದೆ. ಒಂದು ರೀತಿಯಲ್ಲಿ ಯೋಗಾಭ್ಯಾಸ ಹಾದಿ ತಪ್ಪುವ ಎಲ್ಲ ಸಂಭವಗಳು ಕಣ್ಣ ಮುಂದಿದೆ. ಯಾರೋ ಹೇಳಿದ್ದಾರೆ ಅಂತ ಆಚರಿಸಿ ವರ್ಷದ ಒಂದು ದಿನಕ್ಕೆ ಸೀಮಿತಗೊಳಿಸಿ ನಂತರ ಅದಕ್ಕೆ ಸಂಭಂಧವಿಲ್ಲದಂತೆ ಜೀವಿಸುವುದು ಯೋಗ ಜೀವನವನ್ನು ಅವಮಾನಿಸಿದಂತೆ. ಯೋಗಾಭ್ಯಾಸದಲ್ಲಿ ಧ್ಯಾನ ಶವಾಸನ ಇವುಗಳಿಗೆಲ್ಲ ಮಹತ್ವವೇ ಇಲ್ಲದಂತೆ ಮಾಡುವುದನ್ನು ಕಾಣಬಹುದು. ಇವುಗಳೆಲ್ಲ ಮಾಡುವುದಕ್ಕೆ ಬದ್ಧತೆ ಬೇಕು.
ಯೋಗಾಭ್ಯಾಸದಲ್ಲಿ ಅದರ ಕೃತಿಗಿಂತ ಅದರ ಮೂಲಭೂತವಾದ ನಿಯಮಗಳನ್ನು ಗಮನಿಸಬೇಕು. ಯೋಗ ದಿನ ಕೇವಲ ಪ್ರದರ್ಶನಕ್ಕೆ ಸೀಮಿತವಾಗಿದೆ. ವರ್ಷಕ್ಕೆ ಒಂದು ಸಲ ಉತ್ಸವದಂತೆ ಆಚರಿಸಿದರೆ ಮುಗಿಯಿತು. ಆನಂತರ ಎಲ್ಲವನ್ನೂ ಮರೆತುಬಿಡುತ್ತೇವೆ. ಮತ್ತೆ ಮುಂದಿನ ವರ್ಷ...ಎಲ್ಲೋ ಮೂಲೆ ಸೇರಿದ ವಸ್ತುಗಳನ್ನು ಕೊಡವಿ ಮತ್ತೆ ಪುನಃ ಢಂಬಾಚಾರಕ್ಕೆ ತೊಡಗುತ್ತೇವೆ. ಬಿಳಿ ಅಂಗಿ ಏಲ್ಲೋ ಬಿದ್ದಿರುತ್ತದೆ ಅದನ್ನು ಕೊಡವಿ ಮತ್ತೆ ಅಣಿಯಾಗುತ್ತೇವೆ. ಎಲ್ಲದರಂತೆ ಯೋಗವೂ ಅರ್ಥವನ್ನು ಕಳೆಯುವುದನ್ನು ಕಾಣಬಹುದು. ನಮಗೆ ಯೋಗದ ಬಗ್ಗೆ ಆಸಕ್ತಿ ಇಲ್ಲದಿದ್ದರೂ ಕೊನೆ ಪಕ್ಷ ಇದನ್ನು ಆಚರಿಸುವುದಕ್ಕೆ ಕಾರಣವನ್ನು ತಿಳಿಯಬೇಕು. ಮತ್ತು ಅದು ನಮ್ಮ ಪ್ರವೃತ್ತಿಯಿಂದ ಪ್ರಯೋಜನ ಸಿಗುವಂತಾಗಬೇಕು.
ಯೋಗ ದಿನಾಚರಣೆ ಕೇವಲ ಪ್ರದರ್ಶನಕ್ಕೆ ಸೀಮಿತವಾಗಿದೆ.
Friday, June 6, 2025
ಮತ್ತೆ ಬರುವುದೇ?
ಈ ಲೇಖನ ಬರೆಯುವುದಿಲ್ಲ ಎಂದು ಹಲವು ಸಲ ಅಂದುಕೊಂಡರೂ, ಕೆಲವು ಅನಿಸಿಕೆಗಳನ್ನು ಹೇಳದೇ ಇರುವುದಕ್ಕೆ ಸಾಧ್ಯವಾಗುವುದಿಲ್ಲ.
ನನ್ನ ಪರಿಚಯಸ್ಥ ಮಹಿಳೆಯೊಬ್ಬರು ಇದ್ದಾರೆ. ಬೆಂಗಳೂರಿಗೆ ಬಂದು ಐದಾರು ವರ್ಷ ಕಳೆದಿರಬೇಕು. ವೃತ್ತಿಯಿಂದ ಅವರು ಬೆಂಗಳೂರಿಗರೇ ಆದರೂ ಅವರು ಮೂಲತಃ ಕೇರಳದ ಕಾಸರಗೋಡಿನವರು. ಅವರ ಎಲ್ಲಾ ವೈಯಕ್ತಿಕ ದಾಖಲೆಗಳೂ ಅಲ್ಲಿನ ವಿಳಾಸದಲ್ಲಿದೆ. ಬದಲಿಸಬಹುದಿತ್ತು. ಆದರೆ ಅವರೇ ಹೇಳುವಂತೆ ಎಲ್ಲಿಯಾದರೇನೂ ಭೂಮಿ ಮೇಲೆ ಉಸಿರಾಡುತ್ತಿದ್ದೇನಲ್ಲ, ಮಾತ್ರವಲ್ಲ ಕೇರಳವಾದರೇನು ಕರ್ನಾಟಕವಾದರೇನು ನಾನು ಭಾರತೀಯಳು ಅಷ್ಟು ಸಾಕು. ಈ ಅನಿಸಿಕೆಯನ್ನು ಪೂರ್ಣವಾಗಿ ಸರಿ ಎನ್ನುವುದಕ್ಕೆ ಸಾಧ್ಯವಿಲ್ಲದೇ ಇದ್ದರೂ ಅದರಲ್ಲಿ ಸತ್ಯಾಂಶ ಇಲ್ಲದೇ ಇರುವುದಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ.
ಅವರ ಆಧಾರ್ ಚುನಾವಣಾ ಗುರುತು ಎಲ್ಲವೂ ಕೇರಳದಲ್ಲಿರುವುದರಿಂದ ಅವರಿಗೆ ಯಾವುದೇ ಉಚಿತ ಸೌಲಭ್ಯ ಇರುವುದಿಲ್ಲ. ಅವರಂತೆ ಕರ್ನಾಟಕದಲ್ಲಿ ಹಲವರಿದ್ದಾರೆ. ಈ ಒಂದು ಕಾರಣಕ್ಕೆ ತೀರ ಅನಿವಾರ್ಯ ಎನಿಸುವ ಸೌಲಭ್ಯ ಸಿಗದೇ ಇರುವವರು... ಈ ನಿಯಮ ವೆತ್ಯಾಸ ತಾರತಮ್ಯ ಅದೇನು ಈಗಿನ ಸಮಸ್ಯೆಯಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಅದು ಒಂದಲ್ಲ ಒಂದು ವಿಧದಲ್ಲಿ ನಮ್ಮ ನಡುವೆ ಇದೆ. ಅದು ಸರಿಯೋ ತಪ್ಪೋ ಬೇರೆ ವಿಚಾರ. ಆದರೆ ಒಂದು ಸೌಲಭ್ಯ ಅದು ಮೀಸಲಾತಿಯಾಗಲಿ ಇನ್ನಿತರವೇ ಆಗಲಿ ಧರ್ಮ ಭಾಷೆಯನ್ನು ಹೊಂದಿಕೊಂಡು ನಮಗೆ ಲಭ್ಯವಾಗುವುದಾದರೆ ಅದನ್ನು ಉಪಯೋಗಿಸುವಲ್ಲೂ ಒಂದು ಕೀಳರಿಮೆ ಹಲವರಿಗೆ ಬಾಧಿಸುತ್ತದೆ. ಅದಕ್ಕೆ ಕಾರಣ ಅವ್ಯಕ್ತವಾದ ಒಂದು ಆತ್ಮ ಗೌರವ. ಸೌಲಭ್ಯವನ್ನು ಅನುಭವಿಸುವಲ್ಲಿ...ಈ ಅರ್ಹತೆಯೂ ಇಲ್ಲದವರು ಇದ್ದಾರಲ್ಲಾ ಎಂದು ತಿಳಿವಾಗ...ಹೊಟ್ಟೆ ತುಂಬಿದವನಿಗೆ ಆಹಾರ ತಂದಿಟ್ಟರೆ ಆಗುವ ಸಂಕಟ ..ಛೇ ಹೊರಗೆ ಹಸಿವಿನಿಂದ ಬಳಲುವವರ ಮುಖ ಸ್ಮರಣೆಗೆ ಬರುತ್ತಿದ್ದರೆ ಅದೇ ಆತ್ಮ ಗೌರವ. ನನಗೆಷ್ಟು ಅರ್ಹತೆ ಇದೆಯೋ ಅದು ಬೇರೆ ಆದರೆ ಈ ಅರ್ಹತೆ ಇಲ್ಲದೇ ಸೌಲಭ್ಯದ ಅನಿವಾರ್ಯತೆ ಇರುವವರು ಹಲವರಿದ್ದಾರೆ, ಅವರ ಹಸಿವಿನ ಮೇಲೆ ನನ್ನ ಅರ್ಹತೆ ಕೇಕೆ ಹಾಕುತ್ತದೆ ಎಂದು ಅನ್ನಿಸಿಬಿಡುತ್ತದೆ. ಹೊರಗೆ ದುಡಿಯುವುದಕ್ಕೆ ಹೋದ ಅಮ್ಮ ಮನೆಯಲ್ಲಿದ್ದ ಮಕ್ಕಳ ಹಸಿವನ್ನು ನೆನೆದು ಹೋದಕಡೆ ಆಹಾರ ಸಿಕ್ಕಿದರೂ ಹಸಿವಿನಿಂದ ಇರುವಂತೆ ಆ ಭಾವನೆ ಅನುಭವದಲ್ಲಿ ಮಾತ್ರ ಅರ್ಥವಾಗಬಲ್ಲುದು.
ಹೀಗೆ ಒಂದು ಸೌಲಭ್ಯ ಅವಕಾಶ ಒಂದು ಭಾಷೆಗೆ ರಾಜ್ಯಕ್ಕೆ ಸೀಮಿತವಾಗಿ ಮೀಸಲಾಗುವಾಗ, ಮೊನ್ನೆ ಮೊನ್ನೆ ನಡೆದ, ದೊಡ್ಡ ದುರಂತಕ್ಕೆ ಕಾರಣವಾದ ವಿಜಯೋತ್ಸವದ ವಿಡಂಬನೆ ಕಣ್ಣೆದುರು ಬರುತ್ತದೆ. ಯೋಚಿಸಿ...ಸರಕಾರ ಕರೆದು ಸನ್ಮಾನಿಸಿದವರಲ್ಲಿ ಕರ್ನಾಟಕದ ಆಧಾರ್ ಕಾರ್ಡು ಚುನಾವಣಾ ಚೀಟಿ ಇದ್ದವರೆಷ್ಟು ಮಂದಿ ಇದ್ದಾರೆ? ಕರ್ನಾಟಕ ಸರಕಾರಕ್ಕೆ ಮತ ಚಲಾಯಿಸುವವರು ಎಷ್ಟಿದ್ದಾರೆ? ಎಲ್ಲದರಲ್ಲೂ ಭಾಷೆ ಧರ್ಮವನ್ನು ನೋಡುವ ನಾವು ನಮಗೆ ಬೇಕಾದ ಕಡೆಗೆ ಇದು ಗಮನಾರ್ಹವೆನಿಸುವುದಿಲ್ಲ. ಆದರೆ ಸಾವು ಈ ಮೀಸಲಾತಿಯನ್ನು ಹುಡುಕಿಕೊಂಡು ಬರುವುದಿಲ್ಲ. ಹನ್ನೊಂದು ಮಂದಿ ಪ್ರಾಣ ಕಳೆದುಕೊಂಡ ನಂತರ ಎಡವಿದ್ದು ಎಲ್ಲಿ ಎಂದು ಅರಿವಾಗದೇ ಇದ್ದರೆ ಈ ದುರಂತ ಪಾಠವಾಗುವುದಿಲ್ಲ.
ಇಲ್ಲಿ ಅಪರಾಧಗಳು ತಪ್ಪುಗಳು ಹೋಲಿಕೆಯಲ್ಲಿ ತುಲನೆ ಮಾಡಿ ಸಮರ್ಥಿಸುವ ಹೀನ ಮನಸ್ಥಿತಿ ಇರುತ್ತದೆ. ನಮ್ಮ ತಪ್ಪನ್ನು ಒಪ್ಪಿಕೊಳ್ಳುವುದಕ್ಕೆ ಇನ್ನೊಬ್ಬರ ತಪ್ಪು ಗುರಾಣಿಯಾಗುತ್ತದೆ. ಯಾರೋ ದಾರಿಯ ಕಲ್ಲನ್ನು ನೋಡದೇ ಎಡವಿ ಬೀಳುತ್ತಾರೆ. ಆವರು ಬಿದ್ದಕಾರಣ ನಾವೂ ಉಳಿದವರೂ ಬೀಳಬಹುದು ಎನ್ನುವ ಸಮರ್ಥನೆ ಇದೆಯಲ್ಲ ಅದು ಮೂರ್ಖತನ. ಹನ್ನೊಂದು ಜನರು...ಕಾಲ ಕೆಳಗೆ ಮರಣವನ್ನು ಕಂಡರು. ಆಗ ಕುಂಭಮೇಳದ ನೂಕು ನುಗ್ಗಲಿನಲ್ಲಿ ಸತ್ತವರ ತುಲನೆಯನ್ನು ಮಾಡಿ ಸಮರ್ಥಿಸುವುದಕ್ಕೆ ತೊಡಗುತ್ತಾರೆ. ಕುಂಭಮೇಳದಲ್ಲಿ ಹಾಗಾಗಬಾರದಿತ್ತು. ಅದೂ ಅಜಾಗರೂಕತೆ. ಇಲ್ಲಿ ಒಂದನ್ನೊಂದು ಹೋಲಿಸಿದರೆ ಅದಕ್ಕೆ ಅರ್ಥವಿರುವುದಿಲ್ಲ. ಕುಂಭ ಮೇಳದಲ್ಲಿ ಆರಂಭದ ದಿನದಲ್ಲಿ ಆಗಿ ಹೋದ ದುರಂತ. ಆದರೆ ಆನಂತರ ಅದನ್ನು ಯಶಸ್ವಿಯಾಗಿ ಕೋಟಿ ಕೋಟಿ ಸಂಖ್ಯೆಯಲ್ಲಿ ಜನ ಬಂದರೂ ಅದನ್ನು ಯಶಸ್ವಿಯಾಗಿ ನಿರ್ವಹಿಸಿದ ಉದಾಹರಣೆ ನಮ್ಮ ಮುಂದೆ ಇದೆ. ನಿಜಕ್ಕೂ ಕುಂಭಮೇಳದ ಘಟನೆ ಪಾಠವಾಗಬೇಕಿತ್ತು. ಆದರೆ ಅದಕ್ಕೆ ನಮ್ಮ ಅಹಂ ಬಿಡುವುದಿಲ್ಲ. ನಮ್ಮ ತಪ್ಪಿಗೆ ಕ್ಷುಲ್ಲಕ ಕಾರಣಗಳು ಸಿಗುತ್ತವೆ. ಕುಂಭ ಮೇಳಕ್ಕೋ ಕಾಶಿಗೋ ಅಥವಾ ಶಬರಿಮಲೆ ಹತ್ತುವುದಕ್ಕೋ ಯಾರಾದರೂ ಹೋದರೆ ಅವರು ಮನೆಗೆ ಬರುತ್ತೇನೆ ಎಂದು ಹೇಳುವ ಹಾಗಿಲ್ಲ. ದೂರದ ಹಜ್ ಯಾತ್ರೆಗೆ ಹೋಗುವಾಗಲೂ ಮತ್ತೆ ಬರುವ ಆಶೆ ಇರಕೂಡದು. ಅದು ಬದುಕಿನ ಚರಮ ಸ್ಥಾನ. ಒಂದು ವೇಳೆ ಸತ್ತರೂ ಸಾಯುಜ್ಯ ಪದವಿ ಸೇರುವ ತೃಪ್ತಿ ಇರಬಹುದು. ಆದರೆ ಈ ಐಪಿಲ್ ವಿಜಯೋತ್ಸವ....ಸಾಯುಜ್ಯ ಪದವಿಯಾಗಬಹುದೇ? ಹೋಲಿಕೆ ಎಷ್ಟು ಮೂರ್ಖತನ ಅನ್ನಿಸುವುದಿಲ್ಲವೆ? ಪ್ರಾಣ ಭೀತಿ ಇಲ್ಲದೇ ಹೋಗುವವರನ್ನು ನಿಯಂತ್ರಿಸುವುದು ಕಷ್ಟ. ಹಾಗಾಗಿ ಮೆಕ್ಕಾದಲ್ಲೋ ಶಬರಿಮಲೆಯಲ್ಲೋ ಕಾಶಿಯಲ್ಲೋ ಕಾಲ್ತುತುಳಿತವಾದರೆ ಅದರ ಅರ್ಥವೇ ಬೇರೆ. ಅದು ಸರಿ ಎಂಬ ವಾದವಲ್ಲ. ಆದರೆ ತುಲನೆಗೆ ಒಂದಿಷ್ಟು ಚಿಂತನೆ ಅತ್ಯವಶ್ಯ.
ಮೊನ್ನೆ ಹನ್ನೊಂದು ಜನ ಅಸುನೀಗಿದರು. ಯೋಚಿಸಿ ಇದರಲ್ಲಿ ಎಲ್ಲರೂ ಜನ ಸಾಮಾನ್ಯರು. ಒಂದು ವೇಳೆ ಯಾರದರೂ ಒಬ್ಬ ಶಾಸಕನ ಮಂತ್ರಿಯ ಅಥವ ಒಬ್ಬ ಜನಪ್ರತಿನಿಧಿಯ ಮಕ್ಕಳೋ ಸಂಭಂದಿಕರೋ ಪ್ರಾಣ ಕಳೆದುಕೊಂಡರೆ ಹೇಗಿರುತ್ತಿತ್ತು. ಕಾಲವೇ ಹೀಗೆ, ಇಲ್ಲಿ ಜಲಪ್ರವಾಹದಲ್ಲಿ ನೆರೆಬಂದರೆ, ನೀರು ನುಗ್ಗಿದರೆ ಅದು ಬಡವರ ಮನೆಯನ್ನಷ್ಟೇ ಗುರಿಯಾಗಿಸಿ ಅಪೋಶನ ತೆಗೆದುಕೊಳ್ಳುತ್ತದೆ. ಎಲ್ಲಿಯೂ ಶಾಸಕರ ಮಂತ್ರಿಯ ಮನೆ ಮುಳಿಗಿದ ನಿದರ್ಶನ ಸಿಗುವುದು ದುರ್ಲಭ. ಪ್ರಕೃತಿಯೂ ಒಂದು ವಿ ಐ ಪಿ ಸ್ಥಾನವನ್ನು ಮೀಸಲಾಗಿರಿಸುವುದು ವಿಚಿತ್ರ. ಮೊನ್ನೆ ವೇದಿಕೆಯಲ್ಲಿ ಸೇರಿದ ಕುಟುಂಬ ವರ್ಗದಲ್ಲಿರುವ ಒಬ್ಬಿಬ್ಬರನ್ನಾದರೂ ಕ್ರೀಡಾಂಗಣದ ಬಳಿಗೆ ಕಳುಹಿಸುವ ಧೈರ್ಯಯಾರಿಗಾದರೂ ಇತ್ತೇ ಎಂಬುದು ವಿಷಯ. ಯಾಕೆಂದರೆ ಇಲ್ಲಿ ಸೌಲಭ್ಯಗಳು ತುಳಿತಗಳು ವರ್ಗವನ್ನು ಅರಸಿಕೊಂಡು ಬರುತ್ತವೆ.
ದುರಂತ ನಡೆದ ನಂತರ ಅಲ್ಲಿ ರಾಶಿಯಾದ ಚಪ್ಪಲಿಗಳನ್ನು ನೋಡಿ ಅನ್ನಿಸುತ್ತದೆ, ಇಲ್ಲಿ ಬರಿದಾದ ಪಾದಗಳೆಷ್ಟೋ ಬರಿದಾದ ಪ್ರಾಣಗಳೆಷ್ಟೋ....ಆದರೂ ಯಾವ ದುರಂತವೂ ನಮಗೆ ಪಾಠವನ್ನು ಕಲಿಸುವುದಿಲ್ಲ. ಇಲ್ಲವಾದರೆ ...ಆ ಜನಜಂಗುಳಿ ನೋಡಿ ಬುದ್ದಿ ಇದ್ದವರಿಗೆ ಅರ್ಥವಾದೀತು. ಆದರೆ ಇದನ್ನೆ ಕಾಶಿ ಶಬರಿ ಮಲೆ ಎಂದು ತಿಳಿದರೆ ಅದಕ್ಕೆ ಎನು ಹೇಳಬೇಕು? ಮೊದಲಿಗೆ ನಮ್ಮ ಹಪ ಹಪಿಕೆಯನ್ನು ನಿಯಂತ್ರಿಸಬೇಕು. ಸುಖ ಎಂಬುದು ನಮ್ಮ ನಿಯಂತ್ರಣದ ಮನೋಭಾವದಲ್ಲಿ ಇದೆ ಎಂದು ತಿಳಿಯಬೇಕು.
ಈಗ ಹಲವು ಸಮರ್ಥನೆಗಳು ಹಲವು ಕಾರಣಗಳು ಸುಲಭದಲ್ಲಿ ಸಿಗಬಹುದು. ಆದರೆ ಹೋದ ಪ್ರಾಣಗಳು ಬಿಟ್ಟು ಹೋದ ಕಥೆಗಳು ಪಾಠವಾಗುತ್ತದೆ. ಆಗಲೂ ಪಶ್ಚಾತ್ತಾಪ ಮೂಡದೇ ಇದ್ದರೆ ನಮ್ಮಲ್ಲಿ ಮಾನವೀಯತೆ ಇದೆ ಎಂದರೆ ಮೂರ್ಖತನವಾಗುತ್ತದೆ. ಈಗ ಸನ್ಮಾನಿಸಿದ ಕ್ರೀಡಾಳುಗಳನ್ನು ಕೇಳಿ. ಮತ್ತೊಮ್ಮೆ ಸನ್ಮಾನಿಸುತ್ತೇವೆ ಬನ್ನಿ ಎಂದರೆ...ಅವರು ಬರಬಹುದೇ? ಅವರ ತಪ್ಪು ಇರದೇ ಇರಬಹುದು. ಆದರೆ ಅವರಿಗೂ ಕಾಡಿ ಬಿಡುತ್ತದೆ..ಎಲ್ಲೋ ಒಂದು ಕಡೆ ಇದಕ್ಕೆ ನಾವೂ ಕಾರಣರಾಗಿಬಿಟ್ಟೆವು. ಈ ಪಾಪ ಪ್ರಜ್ಞೆ ಅವರನ್ನೂ ಕಾಡಬಹುದು. ಹೀಗಾಯಿತಲ್ಲಾ ಎಂದು ಮರುಗಬಹುದು. ಆದರೆ....ಆದರೆ ಮರುಗಲಾರದ ಪಶ್ಚಾತ್ತಾಪ ಪಡದ ಆತ್ಮಗಳು ಇನ್ನೂ ಇವೆ. ಅವುಗಳು ಈತಪ್ಪುಗಳನ್ನು ಸಮರ್ಥಿಸುತ್ತವೆ. ಹೋಲಿಕೆ ಮಾಡುತ್ತವೆ.....ಇಲ್ಲಿ ಒಂದೇ ಒಂದು ಬೇಡಿಕೆ...ಯಾವ ಪರಿಹಾರವೂ ಬೇಡ ಯಾವ ಸನ್ಮಾನವೂ ಬೇಡ...ಆ ಹನ್ನೊಂದು ಮಂದಿಯ ಪ್ರಾಣವನ್ನು ಪುನಃ ತಂದು ಬಿಡಿ. ಅದು ಸಾಧ್ಯವಾಗಬಹುದೇ? ಆ ಪ್ರಾಣ ಮತ್ತೆ ಬರುವುದೇ?