ಸಾಂಪ್ರದಾಯಿಕವಾಗಿ , ಕೊಪ್ಪರಿಗೆಯಲ್ಲಿ ತಯಾರಿಸುವ ಇಲ್ಲಿನ ನೈವೇದ್ಯದ ಸುವಾಸನೆಯೇ ಹಸಿವನ್ನು ಕೆರಳಿಸಿ ಬಿಡುತ್ತದೆ. ಉತ್ಸವಾದಿಗಳಲ್ಲಿ ವಿಶೇಷವಾಗಿ ಸಿದ್ದಪಡಿಸುವ ಊಟದ ವೈಶಿಷ್ಟ್ಯತೆ ಒಂದಾದರೆ, ಇಲ್ಲಿನ ನಿತ್ಯದ ಅಡುಗೆಯ ರುಚಿಯೇ ಹಲವು ಸಲ ಅದರ ಸರಳತೆಯಿಂದ ಬೇರೆ ರೀತಿಯಲ್ಲಿ ಇಷ್ಟವಾಗುತ್ತದೆ. ಕೇವಲ ಚಟ್ನಿ ತಂಬುಳಿ ಅಥವಾ ತುಂಬ ಸರಳವಾದ ಸಾರು ಇವುಗಳ ರುಚಿಗೆ ಮಾರು ಹೋಗದವರಿಲ್ಲ. ಆಡಂಬರದ ಭೂರಿ ಭೋಜನಕ್ಕಿಂತಲೂ ಈ ಸರಳ ಸಾತ್ವಿಕ ಆಹಾರವನ್ನು ಸವಿಯುವುದೆಂದರೆ ಅದು ನಿಜವಾಗಿಯೂ ಅನ್ನ ಪೂರ್ಣೆಯ ಪ್ರಸಾದ. ಇದರ ವೈಶಿಷ್ಟವೆಂದರೆ ಹೊಟ್ಟೆ ತುಂಬ ಉಂಡರೂ ದೇವಸ್ಥಾನದ ಹೊರಾವರಣ ದಾಟಿ ಮುಂದೆ ಬರಬೇಕೆಂದರೆ ಅದು ಕರಗಿ ಬಿಟ್ಟಿರುತ್ತದೆ. ಒಂದಿಷ್ಟೂ ಕರುಳಿಗೆ ಶ್ರಮವೆನಿಸದ ಈ ಅನ್ನ ನೈವೇದ್ಯವೂ ಒಂದು ಮಹಿಮಾನ್ವಿಶೇಷವಾಗಿರುತ್ತದೆ.
ದೇವಸ್ಥಾನದಲ್ಲಿ ಬಲಿವಾಡು ಸೇವೆ ಅತ್ಯಂತ ಮಹತ್ವ. ಅಕ್ಕಿ ತೆಂಗಿನಕಾಯಿ ಕಾಣಿಕೆಯನ್ನು ಸಲ್ಲಿಸಿ ಅನ್ನ ಪ್ರಸಾದ ಸ್ವೀಕರಿಸುವುದೆಂದರೆ ಅದೊಂದು ಮಹತ್ವದ ಸರಳ ಸೇವೆ. ಮೊದಲೆಲ್ಲ ದೇವಸ್ಥಾನದ ಪರಿಸರದಲ್ಲಿ ಅಥವಾ ತೋಟದಲ್ಲಿ ಸಿಗುವ ಗೆಡ್ಡೆ ಗೆಣಸು ಸೊಪ್ಪು ತರಕಾರಿಗಳೇ ಇಲ್ಲಿ ಅಡುಗೆಗೆ ಬಳಸುತ್ತಿದ್ದರು. ಹಲವು ಸಲ ಬರುವ ಭಕ್ತರಿಗೆ ಇಂತಹ ಅಡುಗೆ ಮತ್ತು ಅದರ ರುಚಿ ಸ್ವಾದಕ್ಕೆ ಅಚ್ಚರಿಯಾಗುತ್ತಿತ್ತು. ಈ ಗೆಡ್ಡೆಗೆಣಸಿನಲ್ಲೂ ಹಸಿರೆಲೆ ಚಿಗುರಲ್ಲಿ ಈ ಬಗೆಯ ರುಚಿ ಸಾಧ್ಯವಾ ಅಂತ ಅಚ್ಚರಿಪಡುತ್ತಿದ್ದರು. ಮೊದಲೆಲ್ಲ ಇಲ್ಲಿ ಸಾಂಪ್ರದಾಯಿಕ ತರಕಾರಿಗಳೇ ಅಡುಗೆಗೆ ಉಪಯೋಗಿಸುತ್ತಿದ್ದರು. ಇಲ್ಲೇ ಪರಿಸರದಲ್ಲಿ ಅಥವಾ ದೇವಸ್ಥಾನದ ಭಕ್ತರ ಮನೆಗಳಲ್ಲಿ ಬೆಳೆಸುತ್ತಿದ್ದ ಕುಂಬಳ ಬಾಳೆ, ತೊಂಡೆ ಬೆಂಡೆ ಹೀಗೆ ಇವುಗಳನ್ನು ಮೀರಿ ವಾಣಿಜ್ಯ ತರಕಾರಿಗಳಾದ ಬಟಾಟೆ ಟೊಮೆಟೊಗಳನ್ನು ಇಲ್ಲಿ ಕಾಣುವುದಕ್ಕೆ ಸಾಧ್ಯವಿರಲಿಲ್ಲ. ಯಾಕೆಂದರೆ ಆ ಕಾಲದಲ್ಲಿ ಇದು ಸುಲಭದಲ್ಲಿ ಲಭ್ಯವೂ ಇರಲಿಲ್ಲ, ಮತ್ತೊಂದು ಇದಕ್ಕೆ ಅನಾವಶ್ಯಕ ವೆಚ್ಚ. ಮಾತ್ರವಲ್ಲ ಆ ಕಾಲದ ಜನರಿಗೆ ಇದರಲ್ಲಿ ಯಾವ ವೈಶಿಷ್ಟ್ಯವೂ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಹಲವು ಕಾರಣಗಳಿಂದ ಅದು ಅನಿವಾರ್ಯವೂ ಹೌದು. ನವರಾತ್ರಿಯ ಒಂಭತ್ತು ದಿನಗಳಲ್ಲಿ ಬೇರೆ ಬೇರೆ ಮನೆತನದವರು ಆ ಒಂದು ದಿನದ ಖರ್ಚು ವೆಚ್ಚಗಳನ್ನು ನೋಡಿ ಬೇಕಾದ ಅಕ್ಕಿ ತೆಂಗಿನ ಕಾಯಿ ತರಕಾರಿ ಒದಗಿಸುತ್ತಿದ್ದರು. ಈಗಲೂ ಅದೇ ಪದ್ಧತಿ ಅಷ್ಟೋ ಇಷ್ಟು ಇದ್ದರೂ ಈಗ ತರಕಾರಿಗಾಗಿ ಸಾಕಷ್ಟು ಹಣವನ್ನು ವ್ಯಯಿಸುವ ಅನಿವಾರ್ಯತೆ ಇದೆ. ಕಾರಣ ಈಗ ಕೃಷಿ ಮಾಡುವ ಹೊಲ ತೋಟದ ವಿಸ್ತಾರ ಕಡಿಮೆಯಾಗಿದೆ. ಮನೆ ಮನೆಗಳಲ್ಲಿ ತರಕಾರಿ ಬೆಳೆಯುವ ಪರಿಸ್ಥಿತಿ ಎಂದೋ ದೂರಾಗಿದೆ. ಆದರೂ ಇಲ್ಲಿನ ಊಟದ ಮಹತ್ವ ಮೊದಲಿಗಿಂತಲೂ ಅಧಿಕವಾಗಿದೆ. ಹಾಗಾಗಿ ಇಲ್ಲಿ ಬರುವವರ ಭಕ್ತವೃಂದವೇ ಕಾರಣ. ಬಾಲ್ಯದಲ್ಲಿ ಈ ದೇವಸ್ಥಾನಕ್ಕೆ ಹೋಗಬೇಕಾದರೆ ಸುತ್ತಲಿನ ಹೊಲ ಗದ್ದೆ ತೋಟ ಹಾದು ಹೋಗಬೇಕಿತ್ತು. ಆಗ ಈ ಗದ್ದೆಯ ಹಸುರಿನ ನಡುವೆ ಹೆಜ್ಜೆ ಹಾಕಿ ನಡೆದುಕೊಂಡು ಹೋಗುವುದೇ ಒಂದು ಸಂಭ್ರಮ.ಹಸಿವಿನ ಶಮನಕ್ಕೆ ನಮ್ಮಲ್ಲಿ ವಿಶೇಷ ಮಹತ್ವವಿದೆ. ಹಾಗೆ ನೋಡಿದರೆ ನಮಗೆ ಬಾಧಿಸುವ ಪ್ರತೀ ಬಾಧೆಯ ಶಮನವೂ ನಮ್ಮ ಸಂಸ್ಕೃತಿಯಲ್ಲಿ ಪ್ರಾಧಾನ್ಯತೆಯನ್ನು ಪಡೆದಿದೆ. ರೋಗ ಬಾಧೆಯಾಗಿರಬಹುದು, ದಾಹ ಬಾಧೆಯಾಗಿರಬಹುದು ಇವುಗಳನ್ನು ಶಮನ ಮಾಡುವುದನ್ನು ದಾನರೂಪದಲ್ಲಿ ಸೇವಾ ರೂಪದಲ್ಲಿ ಕಂಡುಕೊಂಡ ಸಂಸ್ಕೃತಿ ನಮ್ಮದು. ಮಲಯಾಳಂ ನಲ್ಲಿ ಒಂದು ಮಾತಿದೆ ಅತ್ತಾಯ ಪಟ್ಟಿನಿಕ್ಕಾರ್ ಉಂಡೋ ಅಂತ . ಇದನ್ನು ರಾತ್ರಿ ಮನೆಯ ಹೊರಗಿನ ಬಾಗಿಲು ಹಾಕುವಾಗ ಕೇಳುವ ಸಂಪ್ರದಾಯ. ಅಂದರೆ ಹೊರಗೆ ಯಾರಾದರೂ ಹಸಿವಾದವರು ಇದ್ದಾರೆಯೇ ? ನಮ್ಮ ಹಸಿವನ್ನು ನೀಗಿಸುವ ಮೊದಲು ಬೇರೆ ಹಸಿವಿನಿಂದ ಬಳಲುವವರ ಬಾಧೆಯನ್ನು ಮೊದಲು ಪರಿಹರಿಸಬೇಕು. ಇದು ನಮ್ಮ ನಮ್ಮ ಸಂಸ್ಕಾರ. ಹಾಗಾಗಿಯೇ ನಮ್ಮ ದೇವಸ್ಥಾನಗಳಲ್ಲಿ ಹೊತ್ತು ಹೊತ್ತಿಗೆ ಪ್ರತಿ ನಿತ್ಯವೂ ಭೋಜನ ಪ್ರಸಾದವಿರುತ್ತದೆ. ತೀರಾ ಹಿಂದುಳಿದ ಒಂದು ಸಣ್ಣ ಹಳ್ಳಿಯ ಈ ದೇವಸ್ಥಾನದಲ್ಲೂ ಇದು ಹಿಂದಿನಿಂದಲೂ ಆಚರಣೆಯಲ್ಲಿ ಇದೆ.
ಸುಮಾರು ಅರ್ಧ ಶತಮಾನಗಳ ಕಾಲ ಇಲ್ಲಿನ ಭೋಜನ ಪ್ರಸಾದವನ್ನು ಸ್ವೀಕರಿಸಿದ್ದೇನೆ. ಪ್ರತಿ ಬಾರಿಯೂ ಇಲ್ಲಿ ಒಂದು ಹಿಡಿಯಷ್ಟಾದರೂ ಪ್ರಸಾದವನ್ನು ಸ್ವೀಕರಿಸುವಲ್ಲಿ ಸಿಗುವ ತೃಪ್ತಿಯನ್ನು ಅನುಭವಿಸಿದ್ದೇನೆ. ಬುದ್ದಿ ಬಲಿಯುವ ಮೊದಲಿನ ಬಾಲ್ಯದಲ್ಲಿ ಇಲ್ಲಿ ಉಂಡ ಊಟದಂತೆ ಅದು ಈಗಲೂ ಅದೇ ಅನುಭವನ್ನು ನೀಡುತ್ತ ಬಂದಿದೆ. ಈಗಲೂ ಇಲ್ಲಿನ ನೈವೇದ್ಯವನ್ನು ಉಂಡಮೇಲೆ ಅದೇ ಬಗೆ ತೃಪ್ತಿಯನ್ನು ಅನುಭವಿಸುವಾಗ ಆವಳ ಮಠದ ಊಟ ಗಮ್ಮತ್ತಾಗಿದೆ ಎನ್ನುವಲ್ಲಿ ಯಾವ ಅತಿಶಯವೂ ಇರುವುದಿಲ್ಲ. ಅದು ಇಲ್ಲಿ ಸಹಜವಾದ ಕ್ಷೇತ್ರಗುಣ. ದಿವ್ಯ ಪ್ರಸಾದದ ಮಹಿಮೆ ಅಂದಿನಿಂದ ಇಂದಿನವರೆಗೂ ಅದರ ಅನುಭವ ಅವರ್ಣನೀಯ. ಎಲ್ಲ ವೈಶಿಷ್ಟ್ಯಗಳಂತೆ ಇಲ್ಲಿನ ಅನ್ನ ಪ್ರಸಾದದ ಊಟವೂ ಒಂದು ದೊಡ್ಡ ಆಕರ್ಷಣೆ. ಒಂದು ಹೊತ್ತು ಗೋಪುರದಲ್ಲಿ ಕುಳಿತು ಉಂಡು ತೃಪ್ತರಾಗುವುದೆಂದರೆ ಅದು ಪೂರ್ವ ಜನ್ಮದ ಸುಕೃತದ ಫಲ.
ಬಾಲ್ಯದ ದಿನಗಳಲ್ಲಿ ದೇವಸ್ಥಾನ ಎಂದು ಕಲ್ಪನೆಗೆ ಬಂದರೆ ಚಿತ್ತಭಿತ್ತಿಯಲಿ ಮೊದಲು ಚಿತ್ರಣವಾಗುವುದು ನಮ್ಮ ಆವಳ ಮಠ. ದೇವಸ್ಥಾನ ಎಂದು ಹಿರಿಯರು ತೋರಿಸಿದ್ದೇ ಇಲ್ಲಿಯ ಗರ್ಭಗುಡಿ ಗೋಪುರಗಳನ್ನು. ಪ್ರಸಾದವೆಂದರೆ ಇಲ್ಲಿನ ಸರಳ ಸಾತ್ವಿಕ ಅನ್ನ ನೈವೇದ್ಯವನ್ನು. ಇಂದಿಗೂ ಆ ಪಾವಿತ್ರ್ಯತೆ ಆ ಗೌರವ ಹಾಗೇ ಉಳಿದುಕೊಂಡಿದೆ ಎಂದರೆ ಅದು ನಡೆದುಕೊಂಡು ಬಂದ ರೀತಿಯಲ್ಲಿದೆ. ತಲೆ ಮಾರು ಬದಲಾಗಿರಬಹುದು. ಇಲ್ಲಿನ ವ್ಯವಸ್ಥೆಗಳು ಹಾಗೆ ಹೀಗೆ ಅಂತ ಬದಲಾಗಿರಬಹುದು. ಆದರೆ ಅನ್ನ ಪ್ರಸಾದದ ಪಾವಿತ್ರ್ಯತೆ ಅದು ಬದಲಾಗಿಲ್ಲ.
ಈಗ ಕಾಲ ಬಹಳಷ್ಟು ಬದಲಾಗಿದೆ. ನಮ್ಮ ಕಣ್ಣೆದುರೇ ಎರೆಡೆರಡು ತಲೆ ಮಾರು ಸಂದು ಹೋಗಿದೆ. ಹಾಗಂತ ಸಂದು ಹೋದವರು ಬಿಂಬಿಸಿ ಹೋದ ನೆನಪುಗಳು ಹಾಗೇ ಉಳಿದಿವೆ. ಅನ್ನ ಪ್ರಸಾದದ ಮುಷ್ಠಿಯೊಳಗಿನ ತುತ್ತುಗಳಂತೆ ಅವುಗಳೂ ಅಸಂಖ್ಯ. ತಿನ್ನುವ ಪ್ರತಿ ಧಾನ್ಯದಲ್ಲೂ ತಿನ್ನುವಾತನ ಹೆಸರು ಇರುತ್ತದೆಂಬ ನುಡಿಯಂತೆ, ಇಲ್ಲಿ ತಿನ್ನುವ ಪ್ರತಿ ತುತ್ತಿನಲ್ಲಿ ಸಂದು ಹೋದ ನೆನಪುಗಳು ಬರೆಯಲ್ಪಟ್ಟಿದೆ. ತಿಂದ ಅನ್ನ ಕರಗಿ ಹೋದರೂ ನೆನಪು ಅದೆಂದಿಗೂ ಮಾಸುವುದಿಲ್ಲ. ಮೊದಲು ಒಂದು ಹೊತ್ತಿನ ಊಟ ಮಾಡುವುದಕ್ಕೂ ತತ್ವಾರ ಇತ್ತು. ಆಗ ಇಂತಹ ದೇವಾಲಯಗಳು ಅಷ್ಟೋ ಇಷ್ಟೋ ಹಸಿವನ್ನು ನೀಗಿಸುತ್ತಿತ್ತು. ಇಂದು ಅಂತಹ ಪರಿಸ್ಥಿತಿ ಬಹಳ ಕಡಿಮೆ. ಆದರೆ ವಿಪರ್ಯಾಸವೆಂದರೆ ಇಂದು ದೇವಸ್ಥಾನದ ಇಂತಹ ವ್ಯವಸ್ಥೆಗಳ ವ್ಯವಹಾರ ಬಹಳ ಪರಿಶ್ರಮದಿಂದ ಕೂಡಿರುತ್ತದೆ. ನಿತ್ಯ ಪೂಜೆ ಅಥವಾ ಇನ್ನಿತರ ಕೆಲಸಗಳ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದೆಂದರೆ ಹಲವಾರು ತ್ಯಾಗಗಳಿಗೆ ಸಿದ್ದರಾಗಬೇಕಾಗಿದೆ. ನಿತ್ಯ ಪೂಜೆಯನ್ನು ಒಪ್ಪಿಕೊಂಡ ಅರ್ಚಕನಿಗೆ ತನ್ನ ಸ್ವಂತ ಕುಟುಂಬದ ಹಲವು ಕಾರ್ಯಗಳಿಗೆ ಗಮನಹರಿಸುವುದಕ್ಕೆ ಅದಕ್ಕೆ ಸಮಯವನ್ನು ವಿನಿಯೋಗಿಸುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಇದಕ್ಕೆ ರಜೆ ಇಲ್ಲ. ಮೂರು ಹೊತ್ತು ಪೂಜೆ ಅದಕ್ಕೆ ಹೊಂದಿಕೊಂಡ ಕಾರ್ಯಗಳು ನಡೆಯಬೇಕಾಗಿರುವುದು ದೇವತಾ ಕಾರ್ಯದ ಅಗತ್ಯವಾಗಿರುತ್ತದೆ. ಹಾಗಾಗಿ ಇದನ್ನು ಒಪ್ಪಿಕೊಳ್ಳುವವರೂ ಇರುವುದಿಲ್ಲ. ಯಾವುದೋ ಸಂಬಂಧಗಳಿಂದ ಶ್ರಧ್ದಾ ಭಕ್ತಿಯಿಂದ ಅದನ್ನು ಕರ್ತವ್ಯ ಎಂಬಂತೆ ನಿರ್ವಹಿಸುವ ಕಾರಣ ಸೂಕ್ತವಾಗಿ ಇವುಗಳು ನಿರಂತರ ನಡೆದುಕೊಂಡು ಹೋಗುತ್ತವೆ. ಇದು ಆದಾಯದ ಮೂಲವಾಗಿ ಪರಿಗಣಿಸಲ್ಪಡುವುದೇ ಇಲ್ಲ. ಹೆಚ್ಚಿನ ಕಡೆಗಳಲ್ಲಿ ತಟ್ಟೆಕಾಸು ಎಂಬ ಪ್ರತೀತಿ ಇದೆ. ಅದು ಅರ್ಚಕರ ಆದಾಯ. ಆದರೆ ಇಲ್ಲಿ ಬರುವ ಎಲ್ಲಾ ಸಂಗ್ರಹವೂ ನಿಷ್ಕಾಮ ಕರ್ಮದ ಪ್ರತೀಕವಾಗಿ ದೇವಸ್ಥಾನದ ಭಂಡಾರವನ್ನು ಸೇರುತ್ತದೆ. ಈ ಕ್ಷೇತ್ರದ ವೈಶಿಷ್ಟ್ಯತೆಗಳಲ್ಲಿ ಇದೂ ಒಂದು. ಎಲ್ಲರೂ ಸೇರಿಕೊಂಡು ಎಲ್ಲರೂ ಒಂದಾಗಿ ಕೇವಲ ದೈವಾನುಗ್ರಹದ ಫಲಾಪೇಕ್ಷೆಯನ್ನು ಮಾತ್ರ ಬಯಸಿ ನಡೆಸಿಕೊಡುವ ಸೇವೆಯಲ್ಲಿ ಒಂದು ಧನ್ಯತೆ ಇದೆ. ಈ ಧನ್ಯತೆಗೆ ಒಂದು ಬಳಗವೇ ಇದೆ.



No comments:
Post a Comment