ಬ್ಯಾಂಕ್ ಒಂದರ ಲೆಕ್ಕ ಪರಿಶೋಧನೆಗೆ ಹೋಗುತ್ತಿರುವಾಗ ಒಂದು ಕಡೆಯಲ್ಲಿ ಬ್ಯಾಂಕ್ ಅಧಿಕಾರಿಯೊಬ್ಬರು ನನ್ನ ಜತೆಗೆ ಇರುತ್ತಿದ್ದರು. ಮಧ್ಯ ವಯಸ್ಸಿನ ವ್ಯಕ್ತಿ. ಊರಿಂದ ಊರಿಗೆ ಹೋಗುವ ವೃತ್ತಿಯಲ್ಲಿ ಅವರ ಜೀವನಾನುಭವ ಬಹಳಷ್ಟು ಇತ್ತು. ಸ್ವತಃ ಬ್ರಾಹ್ಮಣರಾದ ಅವರು ನನಗೆ ಬಹಳಷ್ಟು ಅತ್ಮೀಯರಾಗಿಬಿಟ್ಟರು. ವಾಚಾಳಿಯಾಗಿ ಏನಾದರೊಂದು ವಿಷಯ ಮಾತನಾಡುತ್ತಲೇ ಇರುವ ನಾನು ಅವರಿಗೆ ಇಷ್ಟವಾದ ಬಗೆ ಹೇಗೋ ಗೊತ್ತಿಲ್ಲ. ಹಲವು ಸಲ ನನ್ನ ಅಧಿಕ ಮಾತುಗಳು ನನಗೆ ಅಧಿಕ ಪ್ರಸಂಗವಾಗಬಹುದೇ ಎಂಬ ಆತಂಕ ನನಗೆ ಇರುತ್ತಿತ್ತು. ಎಷ್ಟು ಕಡಿಮೆ ಎಂದರೂ ಕೆಲವೊಮ್ಮೆ ಮಾತಿಗೆ ಮಾತು ಬೆಸೆಯುತ್ತಾ ಇರುವುದು ನನ್ನ ಜೀವನೋತ್ಸಾಹದ ಒಂದು ಕಾರಣ. ಹಾಗಾಗಿ ಉಳಿದವರು ಏನು ತಿಳಿಯುತ್ತಾರೋ ಎನ್ನುವುದಕ್ಕಿಂತ ನನ್ನ ಮನಸ್ಸು ನಿರಾಳವಾಗುತ್ತದಲ್ಲಾ ಎಂಬ ಧೋರಣೆಯಲ್ಲಿ ಮಾತನಾಡುತ್ತಾ ಇರುವುದು ನನ್ನ ಸ್ವಭಾವ. ಇದೇ ಸ್ವಭಾವ ಅವರಿಗೆ ಇಷ್ಟವಾಗಿಬಿಟ್ಟಿತು. ಕೆಲಸದ ನಡುವೆ ನಾವು ಮಾತನಾಡದ ವಿಷಯಗಳೇ ಇರುತ್ತಿರಲಿಲ್ಲ. ಸ್ವತಃ ಬ್ರಾಹ್ಮಣರಾದ ಕಾರಣ ಅತೀ ಹೆಚ್ಚು ವೈದಿಕ ವಿಚಾರಗಳೇ ನಮ್ಮ ನಡುವೆ ಹರಿದಾಡುತ್ತಿತ್ತು.
ಮೊನ್ನೆ ಒಂದು ದಿನ ಅವರಲ್ಲಿ ಹಾಸ್ಯಕ್ಕಾಗಿ ಕೇಳಿದೆ. "ಮತ್ತೊಂದು ಜನ್ಮ ಎಂದು ನಿಮಗೆ ಇದ್ದರೆ, ನೀವು ಬ್ರಾಹ್ಮಣರಾಗಿ ಹುಟ್ಟಲು ಬಯಸುತ್ತಿರಾ? " ಇದು ಕೇವಲ ಹಾಸ್ಯವಲ್ಲ ಎಂದು ಅವರು ನೀಡಿದ ಉತ್ತರದಲ್ಲೇ ವ್ಯಕ್ತವಾಗುತ್ತಿತ್ತು. ಅವರೇ ಹೇಳಿದರು ಬಹಳ ಗಂಭೀರ ಪ್ರಶ್ನೆ ಮಾರಾಯರೆ ಎಂದ ಅವರು ಹೇಳಿದ ಸಾರಾಂಶ ಹೀಗಿತ್ತು.
ನಿಜಕ್ಕಾದರೆ ಬ್ರಾಹ್ಮಣನಾದವನು ಮತ್ತೊಂದು ಜನ್ಮದ ಬಗ್ಗೆ ಯೋಚಿಸುವುದಿಲ್ಲ. ಇನ್ನು ಮತ್ತೊಂದು ಜನ್ಮವೆತ್ತುವ ವಿಷಯವೇ ಉದ್ಭವಿಸುವುದಿಲ್ಲ. ಜನ್ಮ ಎತ್ತುವುದೆಂದರೆ ದುರಿತಗಳು ಅಂದರೆ ಪಾಪ ಪರಿಹಾರವಾಗದೆ ಉಳಿದಿದೆ. ಆ ದುರಿತ ಕ್ಷಯಕ್ಕೆ ಮತ್ತೊಂದು ಜನ್ಮ ಎತ್ತಿ ಅದನ್ನು ಪರಿಹರಿಸಿಬಿಡಬೇಕು. ವಾಸ್ತವದಲ್ಲಿ ಬ್ರಾಹ್ಮಣನಾಗುವುದೆಂದರೆ ಮತ್ತೊಮ್ಮೆ ಹುಟ್ಟುವ ಪ್ರಮೇಯವೇ ಉದಿಸುವುದಿಲ್ಲ. ತಾತ್ವಿಕವಾಗಿ ಬ್ರಾಹ್ಮಣನಾಗುವುದು ಎಂದರೆ ಮತ್ತೊಮ್ಮೆ ಹುಟ್ಟಿ ಬರದ ಲೋಕಕ್ಕೆ ಹೋಗುವುದು. ಭಗವಂತನಲ್ಲಿ ಐಕ್ಯವಾಗಿ ಸಾಯುಜ್ಯ ಪದವಿಯನ್ನು ಏರುವುದೆಂದರೆ ಅಲ್ಲಿ ಮತ್ತೆ ಹುಟ್ಟುವ ಪ್ರೆಮೇಯವೂ ಇರುವುದಿಲ್ಲ.
ಅವರು ತಿಳಿದಂತೆ ನಾನು ಆ ಪಾರಮಾರ್ಥಿಕ ಅರ್ಥದಿಂದ ಕೇಳಲಿಲ್ಲ. ಬದಲಿಗೆ ವ್ಯಾವಹಾರಿಕ ಪ್ರಪಂಚದಲ್ಲಿನ ವಾಸ್ತವಿಕ ವಿಚಾರದಲ್ಲಿ ಕೇಳಿದ್ದೆ. ಅವರು ಹೇಳಿದರು ಮತ್ತೆ ಹುಟ್ಟುವ ಬಯಕೆ ಇಲ್ಲ. ಹಾಗೊಂದು ವೇಳೆ ಬ್ರಾಹ್ಮಣನಾಗಿ ಹುಟ್ಟಬೇಕೆ? ಹಲವು ಸಲ ಅನ್ನಿಸುತ್ತದೆ , ಹುಟ್ಟುವುದೇ ಬೇಡ ಹುಟ್ಟಿದರೂ ಬ್ರಾಹ್ಮಣನಾಗಿ ಹುಟ್ಟಿಸಬೇಡ. ಬದುಕಿನ ಪ್ರತೀ ಹಂತದಲ್ಲೂ ಅವರಿಗಾದ ಅನುಭವದ ವ್ಯತಿರಿಕ್ತ ಪರಿಣಾಮವೇ ಇದಕ್ಕೆ ಕಾರಣ. ದೇವರೆ ಮತ್ತೆ ಹುಟ್ಟು ಬೇಡ, ಹುಟ್ಟಿಸಿದರೂ ಬ್ರಾಹ್ಮಣನಾಗಿ ಬೇಡ. ಬಾಲ್ಯದಲ್ಲೇ ಜನಿವಾರವನ್ನು ಹಾಕಿದ ಉಡುಪಿನ ಮರೆಯಲ್ಲೇ ಇರಿಸುವಂತಹ ಘಟನೆಗಳು. ಅಂಗಿಯೊಳಗಿನ ಜನಿವಾರ ಮತ್ತೂ ಮತ್ತೂ ಚುಚ್ಚುತ್ತಾ ಇರುವ ಸನ್ನಿವೇಶಗಳು ನೆನಸುವಾಗ ಛೇ ಹುಟ್ಟಿದೆವಲ್ಲಾ ಅಂತ ಅನಿಸುತ್ತದೆ. ಈಗೀಗ ಬನಿಯನು, ಅಂಗಿ ಅದರ ಮೇಲೆ ಕೋಟು ಶಲ್ಯ ಹೀಗೆಲ್ಲ ಇದ್ದರೂ ಒಳಗೆ ಮರೆಯಲ್ಲಿದ್ದ ಜನಿವಾರ ಯಾರಿಗೋ ಚುಚ್ಚಿ ಬಿಡುತ್ತದೆ. ಈತನಿಗೆ ಒಳಗೆ ಜನಿವಾರ ಇದೆ ಎನ್ನುವುದೇ ಅಸಹನೆಗೆ ಕಾರಣವಾಗುತ್ತದೆ. ಅದಕ್ಕಿರುವ ಕ್ಷುಲ್ಲಕ ಕಾರಣ ಕೇಳುವಾಗ, ಚೂಡಿ ದಾರದ ಶಾಲು ದುಪ್ಪಟ್ಟ ಕಿಂತಲೂ ಈ ಮೂರೆಳೆ ಜನಿವಾರ ಗಂಭೀರವೆನಿಸುತ್ತದೆ.
ಅವರ ಜೀವನಾನುಭವ ಬಹಳಷ್ಟು ದೊಡ್ಡದು. ಸದಾ ಊರಿಂದ ಊರಿಗೆ ಸಂಚರಿಸಬೇಕಾದ ಅನಿವಾರ್ಯತೆ. ಒಂದೊಂದು ಊರಲ್ಲಿ ಒಂದೊಂದು ಬಗೆಯ ಅನುಭವವಾದರೆ, ವೃತ್ತಿಯಲ್ಲಿ ಯೋಗ್ಯತೆ ಇದ್ದರೂ ಸಿಗಬೇಕಾದ ಮಾನ್ಯತೆ ಕೇವಲ ಜನಿವಾರದ ದೆಸೆಯಿಂದ ಸಿಗದಂತೆ ಆಗುವಾಗ ಹೀಗೆ ಹುಟ್ಟಬಾರದಿತ್ತು ಎಂದು ಹಲವು ಸಲ ಅವರಿಗೆ ಅನಿಸಿತ್ತು. ಬ್ಯಾಂಕ್ ನ ಕೇಂದ್ರ ಅಥವಾ ವಿಭಾಗಿಯ ಕಛೇರಿಯ ಉನ್ನತ ಸ್ಥಾನದಲ್ಲಿರಬೇಕಾದವರು, ಇಂದು ಒಂದು ಶಾಖೆಯಲ್ಲಿ ಸಾಮಾನ್ಯ ಅಧಿಕಾರಿಯಾಗಿ ನಿರಂತರ ವೃತ್ತಿ ಮಾಡುವ ಅನಿವಾರ್ಯತೆ ಬಂದರೆ ಅದಕ್ಕೆ ಕಾರಣ ಅಂತರಂಗದ ಯಜ್ಞೋಪವೀತವಾದರೂ ಅದು ಬಹಿರಂಗದ ಸತ್ಯ.
ಮೊದಲಿಗೆ ಅವರು ಹಾಗೆಂದರೂ ಕೊನೆಯಲ್ಲಿ ಅವರು ಹೇಳಿದರು, ವ್ಯಾವಹಾರಿಕ ಸತ್ಯಗಳು ಏನೇ ಇರಲಿ...ಆದರೆ ಸಾರ್ಥಕತೆಯ ವಿಚಾರ ಬರುವಾಗ ಈ ಜನ್ಮವೇ ಅತ್ಯಂತ ಶ್ರೇಷ್ಠ ಎನಿಸುತ್ತದೆ. ಯಾರಿಗೂ ದ್ರೋಹವೆಸಗದ, ಯಾರಿಂದಲೂ ಕಿತ್ತು ತಿನ್ನದ ಜೀವನ, ಮತ್ತೊಬ್ಬರ ಭಡ್ತಿಗೆ ಅಡ್ಡಿಯಾಗದ ವೃತ್ತಿ ಜೀವನ ಎಲ್ಲವೂ ಒಂದು ಬಗೆಯಲ್ಲಿ ತೃಪ್ತಿ ತಂದಿದೆ. ಭಗವಂತ ಅಂದರೆ ಏನು ಎಂದು ದರ್ಶನ ಒದಗಿಸುವ ನಿತ್ಯ ಧಾರ್ಮಿಕ ವಿಧಿಗಳು ಎಲ್ಲವೂ ತೃಪ್ತಿ ಒದಗಿಸಿದೆ. ಸಹಜವಾದ ಸರಳ ಬ್ರಾಹ್ಮಣ್ಯ ಸ್ಥಾನ ಹೆಚ್ಚಿಗೆ ಏನನ್ನು ಬಯಸದೆ ಇರುವಾಗ ಅಲ್ಲಿ ಸಿಗುವ ತೃಪ್ತಿ ಎಲ್ಲವೂ ಸಮಾಧಾನ ತಂದಿದೆ. ಸಾರ್ವಜನಿಕವಾಗಿ ಎದುರಾಗುವ ಪರಿಸ್ಥಿತಿಗಳು ಸಹಜವಾಗಿ ಕೀಳರಿಮೆಯನ್ನು ಹುಟ್ಟು ಹಾಕಿದರೂ, ಸಮಾನವಾಗಿ ಅಂತರಂಗದಲ್ಲಿ ಸ್ವಾಭಿಮಾನದ ಪ್ರಚೋದನೆಯನ್ನು ಜಾಗೃತವಾಗಿಸುತ್ತದೆ.
ನೈಷ್ಠಿಕವಾಗಿ ಪರಿಶುದ್ದ ಜೀವನ ನಡೆಸುವ ಬ್ರಾಹ್ಮಣನಿಗೆ ಮತ್ತೆ ಹುಟ್ಟುವ ಪ್ರಮೇಯವೇ ಇರುವುದಿಲ್ಲ. ಬದುಕಿನ ಪ್ರತಿ ಹೆಜ್ಜೆಯಲ್ಲೂ ಎಲ್ಲವನ್ನು ಕಳೆದುಕೊಂಡು ಮುಕ್ತವಾಗಿ ಮುಕ್ತಿ ಪದಕ್ಕೆ ಸೇರುವಾಗ ಮತ್ತೊಂದು ಜನ್ಮವಿದ್ದರೆ ಬ್ರಾಹ್ಮಣನಾಗಿ ಗಳಿಸುವುದಕ್ಕೆ ಏನೂ ಇರುವುದಿಲ್ಲ. ಹಾಗಾಗಿ ಆ ಬಯಕೆಯ ಅಸ್ತಿತ್ವವೇ ಇರುವುದಿಲ್ಲವಾದ ಕಾರಣ ನನ್ನ ಪ್ರಶ್ನೆ ಅವರ ಎದುರು ಅರ್ಥವನ್ನು ಕಳೆದುಕೊಂಡದ್ದು ಸತ್ಯ.