ಕೆಲವು ವರ್ಷಗಳ ಹಿಂದೆ ನನ್ನ ಮಿತ್ರರೊಬ್ಬರು ಹೇಳಿದ ಮಾತು ನೆನಪಿಗೆ ಬರುತ್ತದೆ. ಕನ್ನಡ ಭಾಷೆ ಉಳಿಯಬೇಕಾದರೆ ಬೇರೆ ಭಾಷೆ ಉಳಿಯಬೇಕು. ಅದರಲ್ಲೂ ಅಂಗ್ಲ ಭಾಷೆ ಉಳಿದರೆ ಈಗಿನ ಕನ್ನಡ ಜೀವಂತವಾಗಿರುತ್ತದೆ. ಬಹಳ ಮಾರ್ಮಿಕ ಪದ. ಕನ್ನಡ ಬಹಳ ಸ್ವಂತಿಕೆ ಇರುವ ಭಾಷೆ. ಅದರದ್ದೇ ಆದ ಶಬ್ದ ವ್ಯಾಕರಣ ಅದರ ಸೌಂದರ್ಯವನ್ನು ಹೆಚ್ಚಿಸಿವೆ. ಹಾಗಿದ್ದರೂ ಅವರು ಹಾಗೆ ಹೇಳಿದಕಾರಣ ಒಂದೇ ಈಗಿನ ಕನ್ನಡ ಭಾಷೆ ಹೆಚ್ಚು ಬೇರೆ ಭಾಷೆಯನ್ನು ಅವಲಂಬಿಸಿದೆ ಅಂತ ಅರ್ಥ. ಇದರಲ್ಲಿ ಅತಿಶಯ ಏನೂ ಕಾಣುವುದಿಲ್ಲ. ಕನ್ನಡದ ಅಭಿಮಾನಕ್ಕಿಂತಲೂ ಆಂಗ್ಲ ವ್ಯಾಮೋಹ ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗೆ ವೆತ್ಯಾಸವೇ ಇರುವುದಿಲ್ಲ.
ಯಾವುದೋ ವಿಳಾಸ ಹುಡಿಕೊಂಡು ಹೋದರೆ ದಾರಿಯಲ್ಲಿ ತೀರ ಅನಕ್ಷರಸ್ಥನಲ್ಲಿ ಕೇಳೀದರೂ...ಸ್ಟ್ರೈಟ್ ಹೋಗಿ, ಲೆಫ಼್ಟ್ ಕಟ್ ಮಾಡಿ ರೈಟ್ ಟರ್ನ್ ಮಾಡಿ ಅಲ್ಲೇ ಡೆಡ್ ಎಂಡ್ ನಲ್ಲಿ ಇದೆ. ವಿಳಾಸ ಹುಡುಕುವ ಮೊದಲು ಇಲ್ಲಿ ಕನ್ನಡ ಎಲ್ಲಿದೆ ಎಂದು ಹುಡುಕುವ ಅನಿವಾರ್ಯತೆ ಪರ ಊರಿನವರಿಗೆ ಬಂದರೆ ಆಶ್ಚರ್ಯವಿಲ್ಲ. ಇಲ್ಲಿಯ ಅಂಗಡಿ ಇನ್ನಿತರ ಸಂಸ್ಥೆಗಳ ಹೆಸರು ಆಂಗ್ಲ ಪ್ರೇಮದ ಅರಿವಾಗುತ್ತದೆ. ಕೇಕ್ ಚಾಯ್ಸ್, ಬುಸಿನೆಸ್ ಪಾಯಿಂಟ್, ಜೂಸ್ ಜಾಯಿಂಟ್ ಫುಡ್ ಕಾರ್ನರ್...ಬೈಕ್ ಪಾಯಿಂಟ್ ಹೀಗೆ ಹೆಸರುಗಳಲ್ಲಿ ಎಲ್ಲೂ ಕನ್ನಡ ನುಸುಳದಂತಹ ಪರಭಾಷಾ ಪ್ರೇಮ ಅದರಲ್ಲೂ ಇಂಗ್ಲೀಷ್ ಪ್ರೇಮ ಗಾಢವಾಗಿದೆ.
ದಿನ ಬೆಳಾಗಾದರೆ ಕನ್ನಡ ಪರ ಹೋರಾಟ ಕಾಣಬಹುದು. ಪ್ರತಿಯೊಂದು ವಿಷಯದಲ್ಲೂ ಕನ್ನಡ ಪರ ಕಾಳಜಿಗೆ ಹೋರಾಟದ ಮನಸ್ಥಿತಿ ಗೋಚರವಾಗುತ್ತದೆ. ಹೋರಾಟ ಅತ್ಯವಶ್ಯ. ಒಬ್ಬ ಯಾವುದೋ ಒಂದು ಊರಿಗೆ ಹೋಗಿ ವ್ಯಾಪಾರ ವ್ಯವಹಾರ ಮಾಡಬೇಕಾದರೆ ಮೊದಲು ಅಲ್ಲಿನ ಭಾಷೆಯನ್ನು ಅರಿಯಬೇಕು. ಯಾಕೆಂದರೆ ಒಂದು ವ್ಯಾಪಾರದ ಹಿತದೃಷ್ಟಿ. ಇನ್ನೊಂದು ಅವನು ಯಾವುದೋ ತಿಳಿಯದ ಭಾಷೆಯಲ್ಲಿ ಮಾತಾನಾಡುತ್ತಾನೆ ಎಂದರೆ ಆತನ ಪ್ರಾಮಾಣಿಕತೆಯ ಬಗ್ಗೆ ಅನುಮಾನ ಮೂಡುತ್ತದೆ. ತಿಳಿಯದ ಬಾಷೆಯಲ್ಲಿ ಏನೋ ಹೇಳಿ ವಂಚಿಸುವುದಕ್ಕೆ ಅವಕಾಶ ಇರುತ್ತದೆ. ಪರವೂರಿಗೆ ಹೋದಾಗ ಅಲ್ಲಿನ ಸ್ಥಳೀಯ ಭಾಷೆ ತಿಳಿಯದೇ ಇದ್ದರೂ ಆ ಭಾಷೆಗೆ ಗೌರವ ಕೊಡಬೇಕು. ಆಗ ನಮ್ಮ ಸ್ವಂತ ಭಾಷೆಗೆ ಸಹಜವಾಗಿ ಗೌರವ ಪ್ರಾಪ್ತಿಯಾಗುತ್ತದೆ.
ನಾವು ಕೆಲವರು ಒಟ್ಟು ಸೇರುವಾಗ ಕೆಲವು ಗಹನವಾದ ರಹಸ್ಯ ವಿಷಯ ಹೇಳುವುದಕ್ಕೆ ಇದ್ದರೆ, ಆವರೆಗೆ ಎಲ್ಲರೂ ಕನ್ನಡ ಮಾತನಾಡುತ್ತಿದ್ದರೆ, ಉಳಿದವರಿಗೆ ತಿಳಿಯದಂತೆ ನಮ್ಮ ಮನೆ ಭಾಷೆಯಲ್ಲಿ ಒಂದೆರಡು ವಾಕ್ಯವಾದರೂ ಉದುರಿಸಿ ಬಿಡುತ್ತೇವೆ. ಎಲ್ಲರೂ ಒಟ್ಟು ಸೇರಿದರೆ ಕೆಲವು ಸಂಗತಿಗಳು ಬಂದಾಗ... ಪಕ್ಕನೆ ಉಳಿದವರಿಗೆ ತಿಳಿಯ ಭಾಷೆಗೆ ಜಾರಿ ನಮಗೆ ಹೇಳಬೇಕಾದ ರಹಸ್ಯ ಸಂದೇಶವನ್ನು ಮುಟ್ಟಿಸಿ ಬಿಡುತ್ತೇವೆ. ಯಾಕೆಂದರೆ ನಾವು ಹೇಳುವ ವಿಷಯ ಗಹನವಾಗಿದೆ ಮತ್ತು ಅಲ್ಲಿ ಉಳಿದವರಿಗೆ ಅರ್ಥವಾಗಬಾರದು ಎಂಬ ಕಾಳಜಿ ಇರುತ್ತದೆ. ಇದೊಂದು ರೀತಿಯ ಬುದ್ದಿವಂತಿಗೆ ಎಲ್ಲಾ ಭಾಷೆ ಜನಾಂಗದಲ್ಲೂ ಇದೆ.
ಜಾಗತಿಕವಾಗಿ ಅಂಗ್ಲ ಭಾಷೆಯ ಅವಶ್ಯಕತೆ ಇರಬಹುದು. ಆದರೆ ನಮ್ಮ ಬಾಷೆ ಇರುವಲ್ಲಿ ಬೇರೆ ಭಾಷೆಯ ಪಯಣದ ಅಗತ್ಯ ಇರುವುದಿಲ್ಲ. ಭಾಷೆ ಯಾವುದಾದರೂ ಅದು ಜೀವಂತವಾಗಿ ಅಥವಾ ಅದರ ವ್ಯಾಪ್ತಿ ಬೆಳೆಯುವುದು ಸೌಹಾರ್ದ ವಾತಾವರಣದಲ್ಲಿ. ಅದರ ಉಪಯೋಗದ ವ್ಯಾಪ್ತಿ ವಿಸ್ತಾರವಾದ ಹಾಗೇ ಭಾಷೆ ಬೆಳೆಯುತ್ತದೆ. ಒಂದು ಭಾಷೆ ಸ್ವತಃ ತಾನು ಬೆಳೆದುಕೊಂಡು ಇನ್ನೊಂದು ಭಾಷೆಯನ್ನು ಬೆಳೆಸಬೇಕು.
ಮೊನ್ನೆ ಮೊನ್ನೆ ಐ ಪಿ ಎಲ್ ಕ್ರಿಕೆಟ್ ಪಂದ್ಯ ಬೆಂಗಳೂರಲ್ಲಿ ನಡೆಯಿತು. ಇದರ ವೈಶಿಷ್ಟ್ಯವೆಂದರೆ ಇದು ಭಾರತ ಪಾಕಿಸ್ಥಾನದ ನಡುವಿನ ಪಂದ್ಯದ ಕಿಚ್ಚಿನಂತೆ ಬಿಸಿಯನ್ನು ಹತ್ತಿಸಿಕೊಂಡಿತ್ತು. ಆರ್ ಸಿ ಬಿ ಮತ್ತು ಸಿ ಎಸ್ ಕೆ ನಡುವಿನ ಪಂದ್ಯ. ಪಂದ್ಯದಲ್ಲಿ ಆರ್ ಸಿ ಬಿ ಗೆದ್ದಿತು. ಪಂದ್ಯದ ನಂತರ ಸಿ ಎಸ್ ಕೆ ತಂಡದ ಧೋನಿ ಮುಂತಾದವರ ಮನೆಯವರ ಮೇಲೆ ಗೇಲಿ ಮಾಡಿ ಕೇಕೆ ಹಾಕಿ ಸಂಭ್ರಮಿಸಲಾಯಿತು. ಗೆಲುವಿನ ಸಂಭ್ರಮವೇನೋ ಪ್ರತಿಯೊಂದು ಪಂದ್ಯದ ಕೊನೆಯ ಭಾಗದಲ್ಲಿ ಇದ್ದೇ ಇರುತ್ತದೆ. ಆದರೆ ಇಲ್ಲಿ ಕೇವಲ ಸಂಭ್ರಮವಲ್ಲ ಚೆನ್ನೈ ತಂಡದವರ ಮೇಲೆ ಗೇಲಿ ಮಾಡಿ ನಿಂದಿಸುವಂತೆ ವರ್ತಿಸುವುದು ನಿಜಕ್ಕೂ ಖೇದನೀಯ. ಹೀಗೆ ನಿಂದಿಸುವಾಗ ಇದೇ ಧೋನಿ ಕೆಲವು ವರ್ಷಗಳ ಹಿಂದೆ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಎಂಬುದನ್ನೂ ಮರೆತರು. ಇದೇ ದೋನಿಯ ಬಗ್ಗೆ ದೇಶಾದ್ಯಂತ ಸಂಭ್ರಮಿಸಿದ್ದನ್ನು ಕೇವಲ ಭಾಷೆಯ ವೆತ್ಯಾಸದಲ್ಲಿ ಗೇಲಿ ಮಾಡಿ ಸಂಭ್ರಮಿಸುವ ಮನೋಭಾವ ಇದೆಯಲ್ಲ ಅದು ಯಾವ ಭಾಷಿಕರಿಗೂ ಶೋಭೆ ತರುವುದಿಲ್ಲ. ನಮ್ಮ ಭಾರತದ ಒಳಗೇ ಈ ಬಗೆಯ ಮನೋಭಾವ ಇದ್ದರೆ ದೂರದ ಪಾಕಿಸ್ಥಾನವನ್ನು ಹೇಳುವ ಹಕ್ಕು ನಮ್ಮಲ್ಲಿ ಉಳಿದಿರಬಹುದೇ ಎಂದು ಅನುಮಾನ ಬರುತ್ತದೆ. ಭಾಷೆ ದ್ವೇಷಕ್ಕೆ ಕಾರಣವಾಗುವಾಗ ನಾವು ಪ್ರಾಣಿಗಳಂತೆ ಮೂಕರಾಗಿ ಹುಟ್ಟಬೇಕಿತ್ತು ಎಂದನಿಸುತ್ತದೆ. ಮೂಗನಿಗೆ ಯಾವ ಭಾಷೆ?
ನಮಗೆ ನಮ್ಮ ಕನ್ನಡ ದೊಡ್ಡದು. ಅದು ಗೌರವಯುತವಾಗಿ ಇರಬೇಕು. ಅದು ನೆಲಜಲದ ಸಂಸ್ಕೃತಿ. ನಾವು ಯಾವುದೇ ಭಾಷೆಯ ವಿರೋಧಿಗಳಲ್ಲ. ನದಿಯ ನೀರಿನಂತೆ ಎಲ್ಲವನ್ನು ಕರಗಿಸಿ ಒಂದಾಗಿಬಿಡುವ ಸಂಸ್ಕಾರ ಕನ್ನಡಿಗರಿಗೆ ಜನ್ಮದಿಂದ ಬರುತ್ತದೆ. ಆದರೆ ದ್ವೇಷ ಎಂಬುದು ಇವುಗಳನ್ನು ನಾಶ ಮಾಡಿಬಿಡುತ್ತದೆ. ಭಾಷೆಯ ಬಗ್ಗೆ ಅಭಿಮಾನ ಬೇಕು. ಅದು ಬಹಳ ಪರಿಶುದ್ಧವಾಗಿರಬೇಕು. ಹೇಗೆ ಭಗವಂತನ ಮೇಲಿನ ಪ್ರೀತಿ ಪವಿತ್ರವಾಗಿರಬೇಕೆಂದು ಬಯಸುತ್ತೇವೋ ಅದೇ ರೀತಿ ನಮ್ಮ ಅಭಿಮಾನವೂ ಪವಿತ್ರವಾಗಿರಬೇಕು. ಅಲ್ಲಿ ದ್ವೇಷ ಅಸೂಯೆಗೆ ಅವಕಾಶ ಇರಬಾರದು. ಭಾಷೆಯ ಬಗ್ಗೆ ಅಭಿಮಾನ ಎಂದರೆ, ಅದು ಕೇವಲ ಕನ್ನಡ ಸಿನಿಮ, ಕನ್ನಡ ನಟರು ಹೀಗೆ ಅವರಿಗೆ ಮಾತ್ರ ಸೀಮಿತವಾಗಿಬಿಡುತ್ತದೆ. ಸಿನಿಮಾವನ್ನು ಬಿಟ್ಟು ಕನ್ನಡದ ಬಗ್ಗೆ ಯೋಚಿಸಬೇಕು. ಸಿನಿಮಾ ಎಂಬುದು ಅತ್ಯಂತ ಪ್ರಭಾವೀ ಕ್ಷೇತ್ರವಾದರೂ ಅದನ್ನುಳಿದು ಕನ್ನಡದ ಶ್ರೇಷ್ಠತೆಯನ್ನು ಸಾರುವ ಹಲವು ಪ್ರಾಕಾರಗಳಿವೆ. ಜಗತ್ಪ್ರಸಿದ್ದ ವಿದ್ವಾಂಸರು ಸಾಹಿತಿಗಳು ಇವರ ಚರಿತ್ರೆಗಳಿವೆ. ಆದರೆ ಅದರ ಬಗ್ಗೆ ಕಾಳಜಿ ಇಲ್ಲ.ಕೇವಲ ಸಿನಿಮಾದ ಬಗೆಗಿನ ಅಂಧಾಭಿಮಾನ ಇವತ್ತು ಹಲವು ರೀತಿಯಲ್ಲಿ ದ್ವೇಷಕ್ಕೆ ಕಾರಣವಾಗುತ್ತದೆ. ಇನ್ನು ಸಾಹಿತ್ಯ ಸಾಹಿತಿಗಳು ಕೂಡ ಧರ್ಮಾಧರಿತವಾಗಿ ಮನ್ನಣೆ ಗಳಿಸುವ ಹಂತಕ್ಕೂ ಹೋಗಿಬಿಡುತ್ತವೆ. ಇದೆಲ್ಲ ಪರಸ್ಪರ ಸ್ಪರ್ಧೆಗೆ ಕಾರಣವಾಗಿ ಹತಾಶೆ ನೋವಿಗೂ ಕಾರಣವಾಗಿ ದ್ವೇಷದ ರೂಪ ತಳೆಯುತ್ತದೆ. ಭಾಷೆ ಉಳಿಯಬೇಕಾದರೆ ಸಾಹಿತ್ಯವೋ ಸಿನಿಮಾವೋ ಅಥವಾ ಇನ್ನಾವುದೋ ಕಲೆಯೋ ಇದರಿಂದ ಮಾತ್ರ ಉಳಿಯುವುದಲ್ಲ, ಅದನ್ನು ಪರಿಶುದ್ದವಾಗಿ ಮಾತನಾಡಿ ಪರಸ್ಪರ ಸಂವಹನದಿಂದ ಉಳಿಯಬೇಕು. ಇಂದು ಬೆಂಗಳೂರಲ್ಲಿ ಪರಿಶುದ್ದವಾಗಿ ಕನ್ನಡ ಮಾತನಾಡಬಲ್ಲವರು ಎಷ್ಟು ಮಂದಿ? ಇನ್ನು ಸಿನಿಮಾದವರು...ಕನ್ನಡ ಹೊರತಾಗಿ ಅವರ ಮಾತುಗಳು ಇಂಗ್ಲೀಷಲ್ಲೇ ಇರುತ್ತವೆ. ಇಂಗ್ಲೀಷ್ ಮಾಧ್ಯಮದಲ್ಲೆ ಕಲಿತು ಹೆಸರು ಹಣಕ್ಕೆ ಸಿನಿಮಾವನ್ನು ಅಂಗೀಕರಿಸಿದವರಿಂದ ಭಾಷೆಗೆ ಸುಂದರ ಅಸ್ತಿತ್ವ ಬರುವುದಕ್ಕೆ ಸಾಧ್ಯವೆ?
ಭಾಷೆಗೆ ಸಂಬಂಧಿಸಿ ಪ್ರತಿ ದಿನ ಒಂದಲ್ಲ ಒಂದು ವಿವಾದ ಹುಟ್ಟಿಕೊಳ್ಳುತ್ತದೆ. ಯಾರೋ ಕನ್ನಡವನ್ನು ಅವಮಾನಿಸಿದರು ಅಂತ ಇಲ್ಲಿ ಹೋರಾಟ ಶುರು ಹಚ್ಚಿಕೊಳ್ಳುತ್ತದೆ. ಹೋರಾಟವೇನೋ ಇರಬೇಕು. ಆದರೆ ಆ ಹೋರಾಟ ಮತ್ತೊಂದು ಬಗೆಯಲ್ಲಿ ದ್ವೇಷವನ್ನು ಹುಟ್ಟಿಸುತ್ತದೆ. ಅವಮಾನ ಮಾಡಿದವರು ಮತ್ತೆ ಕ್ಷಮೆ ಕೇಳಬಹುದು. ಆಗ ನಾವು ಗೆದ್ದೆವು ಅಂತ ತಿಳಿಯಬಹುದು. ಆದರೆ ಅಲ್ಲಿ ಸೋತು ಕ್ಷಮೆ ಕೇಳಿದವರು ಮನಸ್ಸಿನ ಒಳಗೆ ರೋಷಾಗ್ನಿಯನ್ನು ಹತ್ತಿಸಿಕೊಳ್ಳೂತ್ತಾರೆ. ತಮಗಾದ ಅವಮಾನಕ್ಕೆ ಯಾವುದೇ ಬಗೆಯಲ್ಲಾದರೂ ಪ್ರತಿಕಾರಕ್ಕೆ ಕಾದು ಕುಳಿತುಬಿಡುತ್ತಾರೆ. ಯಾರೋ ಒಬ್ಬ ಅವಮಾನಿಸಿದ...ಆತ ಕೇವಲ ಒಂದು ಕ್ಷಮೆಯನ್ನು ಕೇಳಿದರೆ ಸಾಕೆ? ಅದು ತೋರಿಕೆಗೆ ಎಂದಾದರೆ ಆ ಕ್ಷಮೆಯಿಂದ ಯಾವ ತೃಪ್ತಿ ಸಮಾಧಾನ ಸಿಗಬಹುದು? ನಮ್ಮ ಬುಡಕ್ಕೆ ನಾವು ಬೆಂಕಿ ಕೊಳ್ಳಿ ಇರಿಸಿ ನಾವು ನೆಮ್ಮದಿಯಿಂದ ನಮ್ಮ ಭಾಷೆ ಉಳಿಯಿತು ಎಂದು ಇರುವುದಕ್ಕೆ ಸಾಧ್ಯವಿದೆಯೇ? ಹಾಗಾಗಿ ಇಲ್ಲಿ ಕೇವಲ ಕ್ಷಮೆಯೊಂದು ಸಾಲದು. ಅದು ಮನಸ್ಸಿನಿಂದ ಬರಬೇಕು. ಆ ಮನಸ್ಸು ನಮ್ಮ ವರ್ತನೆಯಿಂದ ಪ್ರಚೋದಿಸಲ್ಪಡುತ್ತದೆ ಎಂಬುದು ಸತ್ಯ. ಈ ಸತ್ಯವನ್ನು ಅರಿಯುವಲ್ಲಿ ನಮ್ಮ ಕನ್ನಡ ಉಳಿವಿದೆ.
No comments:
Post a Comment