Sunday, May 25, 2025

ಭೂಸುಧಾರಣೆ ಎಂಬ ಸತ್ಯ



ಭೂಸುಧಾರಣೆ ಕಾಯ್ದೆ ಎಪ್ಪತ್ತರ ದಶಕದಲ್ಲಿ ಜಾರಿಯಾಯಿತು. ಭಾರತದ ಸ್ವಾತಂತ್ರ್ಯಾನಂತರ ಬಂದ ಒಂದು ಕ್ರಾಂತಿಕಾರಿ ಕಾನೂನು. ದೇಶದಲ್ಲಿ ಕ್ರಾಂತಿ ತಂದಂತೆ ನಮ್ಮ ಸಂಸಾರದಲ್ಲೂ ಈ ಕಾನೂನು ಒಂದು ವಿಧದ ಕ್ರಾಂತಿಯನ್ನು ತಂದಿತ್ತು. ವಿಪರ್ಯಾಸವೆಂದರೆ ಈ ಕಾನೂನಿಂದಾಗಿ ಹಲವು ಬ್ರಾಹ್ಮಣರು ಸ್ವಂತ ನೆಲವನ್ನು ಕಳೆದು ಕೊಂಡರೆ ಇಲ್ಲಿ ನಮಗೆ ಸಿಗಬೇಕಾದ ಭೂಮಿಗೂ ಒಂದು ಹೋರಾಟ, ಅದೂ ಸಹ ಮೂರು ದಶಕಗಳ ಕಾಲ ನಡೆಯಿತು. ಆದರೂ ಪರಿಪೂರ್ಣ ನ್ಯಾಯ ಸಿಗಲೇ ಇಲ್ಲ. ಕಾನೂನು ಮಾಡಿದ ಇಂದಿರಾಗಾಂಧಿ ಭಕ್ತರೇ ಅದಕ್ಕೆ ವಿರುದ್ದವಾದದ್ದು ಮಾತ್ರವಲ್ಲ ಯಾವ ರಾಜಕೀಯ ಪಕ್ಷವೂ ಸಹಕಾರ ನೀಡದೇ ಇದ್ದದ್ದು ಒಂದು ವಿಪರ್ಯಾಸ. 

          ಎಪ್ಪತ್ತರ ದಶಕದಲ್ಲಿ ನಮ್ಮ ಮಾವನ ಮನೆ ನೆಕ್ಕಿಲಗುಡ್ಡೆಯಲ್ಲಿತ್ತು. ನೆಕ್ಕಿಲ ಗುಡ್ಡೆ ಮಂಗಳೂರಿನ ದೇರೇಬೈಲು ಗ್ರಾಮದಲ್ಲಿದ್ದ ಒಂದು ಗುಡ್ಡದ ಪ್ರದೇಶ. ಈಗ ಈ ಹೆಸರು ಜ್ಞಾಪಕದಲ್ಲೇ ಇರಲಾರದು. ಕೊಂಚಾಡಿಯಲ್ಲಿರುವ ಈಗರ್ಜಿಯ ಹಿಂಭಾಗದ ಪ್ರದೇಶವೇ ನೆಕ್ಕಿಲಗುಡ್ಡೆ. ಕುಂಟಿಕಾನದ ಬಳಿ ಈಗ ಇರುವ ಡಿ ಮಾರ್ಟ್ ಪಕ್ಕದಲ್ಲೇ ರಾಷ್ಟ್ರಿಯ ಹೆದ್ದಾರಿಯಿಂದ ಬಲ ಬದಿಗೆ ಕವಲಾಗಿ ಇಳಿಯುವ ರಸ್ತೆ ಸ್ವಲ್ಪ ಮುಂದಕ್ಕೆ ಹೋದರೆ ಗುಡ್ಡದ ತುದಿಯಲ್ಲಿ ನಮ್ಮ ಮಾವನ ಮನೆ ಇತ್ತು. ಈಗ ಅಲ್ಲೊಂದು ದೊಡ್ಡ ವಸತಿ ಸಮುಚ್ಚಯವಿದೆ. ಆ ಪ್ರದೇಶಕ್ಕೆ ಈಗ ಹೊಸ ಹೆಸರು ಕೂಡ ಬಂದಿದೆ. 

೧೯೬೮ ನೇ ಇಸವಿ ಅಥವಾ ಎಪ್ಪತ್ತರ ದಶಕದ ಆರಂಭದಲ್ಲಿ ಉರ್ವಸ್ಟೋರ್ ನಲ್ಲಿ ನಮ್ಮ ಬಾಡಿಗೆ ಮನೆ ಇತ್ತು. ಕಾರಣಾಂತರದಿಂದ ಅಲ್ಲಿಂದ ನೆಕ್ಕಿಲಗುಡ್ಡೆಗೆ ನಮ್ಮ ವಾಸಸ್ಥಳ ಬದಲಾಯಿತು. ಹೊಸ ಮಾರ್ಗ ಅಂದರೆ ರಾಷ್ಟೀಯ ಹೆದ್ದಾರಿಯನ್ನು ಸ್ಥಳೀಯರು ಕರೆಯುತ್ತಿದ್ದದ್ದು. ಅದರ ಬಳಿಯ ದೊಡ್ಡ ಗುಡ್ಡದ ತುದಿಯಲ್ಲಿ ಒಂದು ಮನೆ ಮತ್ತು ಒಂದೂವರೆ ಎಕರೆ ಜಾಗವಿತ್ತು.  ಒಂದು ಪಾತಾಳದ ಆಳಕ್ಕಿಳಿದ ಬಾವಿ ಮತ್ತು ಎರಡು ತೆಂಗಿನ ಗಿಡ ಇಷ್ಟೇ ಇದ್ದ ಜಾಗದಲ್ಲಿ ಸುತ್ತಮುತ್ತಲು ಬರೀ ಕಾಡು ಗಿಡಗಳು ಇದ್ದವು. ಆಗ ನನ್ನ ನೆನಪಿನಂತೆ  ತಿಂಗಳಿಗೆ  ಎಂಟು ರೂಪಾಯಿ ಗೇಣಿ ಅಧಾರದಲ್ಲಿ ನಾವೆಲ್ಲ ಅಲ್ಲಿ ವಾಸವಾಗಿದ್ದೆವು. ಗೇಣಿ ಎಂದರೆ ಅದು ಬಾಡಿಗೆಯಲ್ಲ. ಅಲ್ಲಿ ಕೃಷಿ ಮಾಡಿ ಬರುವ ಉತ್ಪನದಲ್ಲಿ ಪ್ರತಿ ತಿಂಗಳು ಒಂದಿಷ್ಟು ಮಾಲಿಕರಿಗೆ ಸಲ್ಲಿಸಬೇಕು. ಮೊದಲಿಗೆ ಎಲ್ಲವೂ ಸರಿಯಾಗಿತ್ತು. ಮನೆಯ ಮಾಲಿಕರು ಸುತ್ತಮುತ್ತಲಿನ ಗಣ್ಯ ಧನಿಕರಾಗಿದ್ದು ರಾಷ್ಟ್ರೀಯ ಹೆದ್ದಾರಿ ಪಕ್ಜದಲ್ಲೇ  ಗದ್ದೆ, ತೋಟ, ಆಗಿನ ಕಾಲದಲ್ಲಿ ದೊಡ್ಡ ಮನೆ ಹೀಗೆ ಅನುಕೂಲಸ್ಥ ಬ್ರಾಹ್ಮಣ ಕುಟುಂಬ. ಈಗ ಆ ಮನೆಯೂ ಇಲ್ಲ. ಆ ಗದ್ದೆಯೂ ದೊಡ್ಡ ಬಡಾವಣೆಯಾಗಿ ಬದಲಾಗಿ ಹೋಗಿದೆ. ಬಾಲ್ಯದಲ್ಲಿ ನಾವು ಅದೇ ಮನೆಗೆ ಅಗಾಗ ಹೋಗುತ್ತಿದ್ದೆವು.  

ನೆಕ್ಕಿಲಗುಡ್ಡೆಯ ಆ ಸ್ಥಳ ಯಾವುದೇ ಜನ ಸಂಚಾರ ಇಲ್ಲದ ಕಾಡು ಪ್ರದೇಶವದು. ಅಲ್ಲಿ ಹಲವಾರು ತೆಂಗಿನ ಗಿಡ, ಮತ್ತು ತರಕಾರಿ ಬೆಳೆಯುತ್ತಿದ್ದದ್ದು ಮಾತ್ರವಲ್ಲ ಮಾವನಿಗೆ  ಚಕ್ಕುಲಿ ತಯಾರಿಸಿ ಮಾರಾಟಮಾಡುವ ವ್ಯಾಪಾರವೂ ಇತ್ತು.  ಬರೀ ಗುಡ್ಡ ಕಾಡಿನ ಪ್ರದೇಶವನ್ನು ಸ್ವಂತ ಪರಿಶ್ರಮದಿಂದ ಮಾವ ಸುಂದರ ತೆಂಗಿನ ತೋಟವನ್ನಾಗಿ ಪರಿವರ್ತಿಸಿದ್ದರು. ಆಳವಾದ ಬಾವಿಯಿಂದ ನೀರು ಸೇದಿ ಕೃಷಿಯನ್ನು ಮಾಡುವುದೆಂದರೆ ಕಲ್ಪಿಸುವುದಕ್ಕೂ ಸಾಧ್ಯವಾಗದ ಸಾಧನೆ


ನಮ್ಮ ಮನೆಯ ಸುತ್ತ ಮುತ್ತ ಹೆಚ್ಚು ಕ್ರಿಶ್ಚನ್ ಮನೆಗಳೇ ಇದ್ದವು. ಎಲ್ಲಾ ಮನೆಯವರೂ ಕಾಂಗ್ರೆಸ್ ಅನುಯಾಯಿಗಳು ಮಾತ್ರವಲ್ಲಿ ಇಂದಿರಾಗಾಂಧಿಯ ಪರಮ ಭಕ್ತರಾಗಿದ್ದರು. ಇಂದಿರಾ ಹತ್ಯೆಯ ಸಮಯದಲ್ಲಿ ಹಲವರು ಕೇಶ ಮಂಡನ ಅಂದರೆ ಬೋಳು ತಲೆಯನ್ನು ಮಾಡಿದ್ದರು. ಅಂತಹ ಭಕ್ತಿ. ಆಗ ಭೂಸುಧಾರಣೆ ಕಾಯಿದೆ ಬಂದ ಕಾಲ. ಹೆಚ್ಚಿನವರಿಗೆ ಆ ಕಾನೂನಿನ ಅರಿವೂ ಇಲ್ಲ. ಅದರ ಮಹತ್ವವೂ ಗೊತ್ತಿಲ್ಲ. ನಮ್ಮ ಮಾವನಿಗೂ ಅದರ ಅರಿವು ಇರಲಿಲ್ಲ. ಕೊನೆಗೆ ಯಾರೋ ಹೇಳಿ ಕಾನೂನಿನ ಬಗ್ಗೆ ತಿಳಿದು ಬಂತು. ಇದರ ನಡುವೆ ನಮ್ಮ ಮನೆಯ ಜಾಗದ ಮಾಲಿಕರು ಒಂದು ದಿನ ಮಾವನನ್ನು ಪುಸಲಾಯಿಸಿ ಒಂದು ಬಾಡಿಗೆ ಚೀಟಿ ಮಾಡಿ ಸಹಿ ಪಡೆದರು. ಒಂದು ರೀತಿಯ ವಂಚನೆ ಅದು. ಆದರೆ ಮಾವನಿಗೆ ಆನಂತರ  ಉಳುವವನೇ  ಹೊಲದೊಡೆಯ ಎಂಬ ಕಾನೂನಿನ ಬಗ್ಗೆ ತಿಳಿದು ಮಾಲಿಕರ ಮೇಲೆ ಮೊಕದ್ದಮೆ ಹಾಕಿದರು. ಇದು ಬಹಳ ದೊಡ್ಡ ಗಲಾಟೆಗೆ ಕಾರಣವಾಯಿತು. ನಮ್ಮ ವಕ್ಕಲೆಬ್ಬಿಸುವುದಕ್ಕೆ ಹಲವು ಪ್ರಯತ್ನಗಳು ನಡೆದವು. ಹಲವಾರು ಜನ ಬಂದು ಬೆಳೆದ ತೆಂಗಿನ ಮರ ಗಿಡಗಳನ್ನು ಕಡಿ ಹಾಕಿದರು. ಆಗೆಲ್ಲ ಸುತ್ತಮುತ್ತಲಿನವರು ಯಾರೂ ಸಹಾಯಕ್ಕೆ ಬರಲಿಲ್ಲ. ಸುತ್ತ ಮುತ್ತಲಿನ ಇಂದಿರಾ ಭಕ್ತರು ಮಾಲಿಕರ ಪರವಾಗಿಯೇ ನಿಂತು ಬಿಟ್ಟರು. ಅವರ ದೃಷ್ಟಿಯಲ್ಲಿ ಮಾವ ದೊಡ್ಡ ವಂಚಕ ಮೊಸಗಾರರಾಗಿಬಿಟ್ಟರು. 

ಇಂದಿರಾಗಾಂಧಿಯ ಅನುಯಾಯಿಗಳೇ ಈ ಕಾನೂನಿಗೆ ವಿರುದ್ಧವಾಗುವಾಗ ನಾವು ನಂಬುವ ತತ್ವಗಳಿಗೆ ಬೆಲೆ ಎಲ್ಲಿ ಉಳಿಯುವುದಕ್ಕೆ ಸಾಧ್ಯ.? ಆದರ್ಶಗಳು ಎಷ್ಟು ಉಜ್ವಲವಾಗಿದ್ದರೂ ಅದು ಅನುಸರಿಸಿದೇ ಇದ್ದರೆ ಅದಕ್ಕೆ ಮೌಲ್ಯ ಒದಗಿ ಬರುವುದಿಲ್ಲ. ಮಾಲಿಕರು ಜನಗಳನ್ನು ತಂದು ಧಾಳಿ ಮಾಡಿದಾಗ ಆತ್ಮೀಯವಾಗಿ ವರ್ತಿಸಿದ  ಸುತ್ತಮುತ್ತಲಿನವರೆಲ್ಲ      ಕೈಗೆ ಸಿಕ್ಕಷ್ಟು ಕಿತ್ತುಕೊಂಡು ಹೋಗಿ ಮುಖವಾಡವನ್ನು ಬಯಲು ಮಾಡಿದರು. ಇಂದು ಇಂದಿರಾಗಾಂಧಿ ಭೂಸುಧಾರಣೆ ಜಾರಿಗೆ ತಂದರು, ನಮ್ಮ ಪಕ್ಷ ಕ್ರಾಂತಿ ಮಾಡಿತು ಅಂತ ಬೆನ್ನು ತಟ್ಟುವಾಗ ನಮ್ಮ ಬೆನ್ನೆಲುಬು ಮುರಿಯುವಂತಾದದ್ದು, ನಮಗಾದ ವಂಚನೆ ಎಲ್ಲವೂ ನೆನಪಿಗೆ ಬರುತ್ತದೆ. ಹೇಳುವುದಕ್ಕೆ ಬ್ರಾಹ್ಮಣರು ಮೋಸ ಮಾಡಿದರು ದಬ್ಬಾಳಿಕೆ ಮಾಡಿದರು ಹೀಗೆ ಹೇಳುವುದುಂಟು..ಆದರೆ ಸ್ವತಃ ನಮಗಾದ ಅನ್ಯಾಯಕ್ಕೆ ಕೇವಲ ಒಂದು ಧರ್ಮ ಕಾರಣವಾಗಲಿಲ್ಲ. ವಾಸ್ತವದ ಸತ್ಯವೇ ಕಾರಣವಾಗಿತ್ತು.  

ಆಂದು ನಿಶ್ಚಯಿಸಿದ ಗರೀಭಿ ಹಠಾವೋ ಎಂಬ ಘೋಷವಾಕ್ಯ ಇಂದಿಗೂ ಅದು ಮಹಾ ಸುಳ್ಳಾಗಿ , ಗರೀಬಿ ಎನ್ನುವ ಶತ್ರು ಇನ್ನೂ ಬದುಕಿದ್ದರೆ ಅದಕ್ಕೆ ಕಾರಣ ನಮ್ಮ ವ್ಯವಸ್ಥೆ. ಇಲ್ಲವಾದರೆ ಇಂದಿಗೂ ನಮಗೆ ಸಮಾಜ ಉದ್ದಾರಕ್ಕೆ ಧರ್ಮಾಧರಿತ ಮೀಸಲಾತಿಯ ಅವಶ್ಯಕತೆ ಇದೆ. ಬಡತನ ಧರ್ಮದಿಂದ ಅಳೆಯುವ ಅವಶ್ಯಕತೆ ಇದೆ ಎಂದರೆ ಅದಕ್ಕೆ ಕಾರಣರು ಯಾರು ಎಂಬುದು ಉತ್ತರವಿದ್ದರೂ ಹೇಳಲಾಗದ ಅಸಹಾಯಕತೆ ಇದೆ. 

No comments:

Post a Comment