Sunday, November 2, 2025

ದೇವರು ಎಂಬ ವಿಶ್ವಾಸ



 " ದೇವರು ಧರ್ಮವನ್ನು ಏನೆಂದು ತಿಳಿಯದೇ ಅದಕ್ಕೆ ಹೋರಾಡುತ್ತೇವೆ. "


ಮೊನ್ನೆ ನಮ್ಮ ಗ್ರಾಹಕರೊಬ್ಬರನ್ನು, ನಮ್ಮ ವೃತ್ತಿ ರೀತಿಯಲ್ಲಿ ಹೇಳುವುದಾದರೆ ನಮ್ಮ ಕ್ಲೈಂಟ್ (client) , ತಿಂಗಳ ಜಿ ಎಸ್ ಟಿ ಪಾವತಿಸುವಂತೆ ಕರೆ ಮಾಡಿದೆ. ಪ್ರತೀ ತಿಂಗಳು ನಾನು ಹೇಳುವ ಮೊದಲೇ ಕೃತ್ಯ ನಿಷ್ಠೆಯಿಂದ ಪಾವತಿಸುತ್ತಿದ್ದರು. ಮಾತ್ರವಲ್ಲ ಅವರು ಅನ್ಯ ಧರ್ಮಿಯರು.   ಹಿಂದುವಲ್ಲದವರನ್ನು ಅನ್ಯಧರ್ಮಿಯರು ಅಂತ ನನ್ನ ವೈಯಕ್ತಿಕ ನೆಲೆಯಲ್ಲಿ ಕರೆಯಬೇಕು. ಆದರೆ ವಾಡಿಕೆಯಲ್ಲಿ ಹಾಗಿಲ್ಲ ಎಂಬುದು ಮತ್ತೊಂದು ಸಂಗತಿ.  ನಮ್ಮ ಹತ್ತಿಪ್ಪತ್ತು ವರ್ಷಗಳ ವ್ಯಾವಹಾರಿಕ ಸಂಭಂಧ. ಬಹುಶಃ ನಾನು ಬೆಂಗಳೂರಿಗೆ ಬಂದಂದಿನಿಂದ ಇವರು ನನ್ನ ಗ್ರಾಹಕರು. ನನ್ನಿಂದ ಹಲವಾರು ಸರಕಾರಿ ಸಂಬಂಧೀ ಕೆಲಸಗಳನ್ನು ಮಾಡಿಸುತ್ತಾರೆ. ಹಾಗಾಗಿ ಅವರ ಜಿಎಸ್ ಟಿ ಕೆಲಸವನ್ನು ನಾನೇ ಮಾಡುತ್ತಿದ್ದೇನೆ.   ಒಳ್ಳೆಯ ವ್ಯಕ್ತಿ. ಹಾಗಾಗಿಯೇ ಈ ದೀರ್ಘಕಾಲೀನ ವ್ಯವಹಾರ ಮುಂದುವರೆದಿದೆ. ಅವರೇ ಹೇಳುವಂತೆ ನನ್ನ ಮೇಲೆ ಅವರಿಗೆ ಅಪರಿಮಿತ ವಿಶ್ವಾಸವಿದೆ. ನನಗೆ ಕೊಡುವ ಸೇವಾ ಶುಲ್ಕದಲ್ಲಿ ಯಾವುದೇ ಚರ್ಚೆ ತಕರಾರು ಇಲ್ಲದೇ ಪಾವತಿಸುತ್ತಿದ್ದಾರೆ.   ಅವರದೊಂದು ಮಾಂಸಾಹಾರಿ ಹೋಟೆಲು.  ಮೊನ್ನೆ  ಕರೆ ಮಾಡಿದಾಗ ಹೇಳಿದರು, " ಸರ್,  ಹಬ್ಬಗಳ ಸರಣಿ...ಸಹಜವಾಗಿ ನಮಗೆ ವ್ಯಾಪಾರ ಬಹಳ ಕಡಿಮೆ ಇದೆ. ಅದನ್ನು ಹೇಗಾದರೂ ನಿಭಾಯಿಸಬಹುದು, ಆದರೆ ಈ ದೇಣಿಗೆಯ  ಹಾವಳಿ ತುಂಬಾ ಇದೆ ಸರ್, ಗಲ್ಲಿ ಗಲ್ಲಿಯಲ್ಲಿ ಗಣೇಶ ಕೂರಿಸುತ್ತಾರೆ, ದಸರ ದೀಪಾವಳಿ ಅಂತ ಮಾಡುತ್ತಾರೆ. ಬಂದು ಹಣ ಕೇಳುತ್ತಾರೆ. ನನ್ನ ಧರ್ಮ ಬೇರೆ, ಆದರೂ ನನಗೆ ಕೊಡಬಾರದು ಅಂತೇನಿಲ್ಲ. ದೇವರು ಹೇಗಿದ್ದರೂ ಅದು ದೇವರ ಕೆಲಸ ಅಂತ ಕೊಡಬಹುದು. ಆದರೆ, ಅವರು ಐದು ಸಾವಿರ ಹತ್ತು ಸಾವಿರ ಅಂತ ಕೇಳಿದರೆ ನಾನು ಹೇಗೆ ಕೊಡುವುದು.? ಮೊದಲೇ ವ್ಯಾಪಾರ ಕಡಿಮೆ. ನನ್ನ ಸಾಮಾರ್ಥ್ಯಕ್ಕೆ ಅನುಸಾರವಾಗಿ ಅಷ್ಟೋ ಇಷ್ಟೋ ಕೊಟ್ಟರೆ ಹೋಗಲಿ ಅನ್ನಬಹುದು ಆದರೆ ಇಷ್ಟೇ ಕೊಡಬೇಕು ಅಂತ ದೌರ್ಜನ್ಯ ಮಾಡಿದರೆ ಹೇಗೆ? ನೋಡಿ ಜಿಎಸ್ ಟಿ ಕಟ್ಟೋದಕ್ಕೆ ನಾನು ಸಾಲ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಇದೆ. " 

ಗಣೇಶ ಹಬ್ಬಕ್ಕೂ ಇಮಾಂ ಸಾಬಿಗೂ ಎತ್ತಣಿಂದ ಸಂಬಂಧ ಅಂತ ಹಳೆಯ ಮಾತು ಇದೆ. ಇದು ಅದೇ ತರಹ. ನಾವು ಧರ್ಮದಿಂದ ದೂಷಿಸಬಹುದು. ಆದರೆ ನಮ್ಮ ಧರ್ಮಾಚರಣೆಗೆ ಅನ್ಯ ಧರ್ಮೀಯರಿಂದ ದೇಣಿಗೆ ಸಂಗ್ರಹಿಸುವುದು ತಪ್ಪು.  ಹೋಗಲಿ ಕೇಳಿದರೂ..ಇಷ್ಟೇ ಕೊಡಬೇಕು ಎಂದು ದಬ್ಬಾಳಿಕೆ ಮಾಡುವುದು ಎಷ್ಟು ಸರಿಯಲ್ಲ.  ದೈವ ವಿಶ್ವಾಸ  ನಂಬಿಕೆ ಎಂಬುದು ತೀರ ವೈಯಕ್ತಿಕ ವಿಚಾರ. ಒಬ್ಬನನ್ನು ಅವನ ವೈಯಕ್ತಿಕ ವಿಚಾರವನ್ನು ಹೇಳಿ ಅವನನ್ನು ಅಪರಾಧಿಯನ್ನಾಗಿಯೋ ಅಥವಾ ದೂರೀಕರಿಸುವುದು ಸರಿಯಲ್ಲ. ಇದು ನನ್ನ ಅಭಿಮತ. ವ್ಯಕ್ತಿಗತ ವಿಚಾರಗಳು ಸ್ವಭಾವಗಳು ಪರ ಪೀಡನೆಯಾಗದೇ ಇದ್ದರೆ ಅವರನ್ನು ದೂರ ಮಾಡುವುದರಲ್ಲಿ ಅರ್ಥವಿಲ್ಲ. ವೈಯಕ್ತಿಕ ವಿಚಾರ ಭಿನ್ನತೆ ಹಲವು ಇರುತ್ತದೆ. ಒಂದು ಮರ ಹಣ್ಣೇ ಕೊಡುವುದಿಲ್ಲ ಎಂದು ಅದನ್ನು ಕಡಿಯುವುದು ಸರಿಯೇ? ಏನು ಮಾಡೋಣ ಇದು ಪ್ರಕೃತಿ. ನಾವೂ ಅದರ ಅಂಗ. ಒಬ್ಬ ಕಳ್ಲನೋ ಕಾಮುಕನೋ ಅದು ಆತನ ವ್ಯಕ್ತಿಗತವಾಗಿದ್ದರೂ ಅದು ಪರಪೀಡನೆಯಾಗುತ್ತದೆ. ಅಂಥವರನ್ನು ದೂರ ಮಾಡಬೇಕು ಸರಿ.  ಅದರೆ ಒಬ್ಬ ವೈಯಕ್ತಿಕವಾಗಿ ಹಲವು ದೌರ್ಬಲ್ಯಗಳನ್ನು ಅನುಭವಿಸಬಹುದು. ಆತನ ವಿಶ್ವಾಸಗಳು ನಂಬಿಕೆಗಳು ನಡವಳಿಕೆಗಳು ಬೇರೆಯೇ ಇರಬಹುದು. ಅದನ್ನು ಆಕ್ಷೇಪಿಸುವುದು ಸರಿಯಲ್ಲ.  ವೈಚಾರಿಕ ಭಿನ್ನತೇ ದ್ವೇಷಕ್ಕೆ ಕಾರಣವಾಗಬಾರದು. ದೇವರು ಧರ್ಮ ಏನೆಂದು ತಿಳಿಯದೇ ಅದಕ್ಕಾಗಿ ಹೋರಾಡುತ್ತಾರೆ.  ಆ ಅಜ್ಞಾನವೇ ದ್ವೇಷಕ್ಕೆ ಕಾರಣವಾಗುತ್ತದೆ.  ದೇವರನ್ನು ನಂಬಿದಷ್ಟು ಅದು ಏನೆಂಬುದನ್ನು ನಂಬುವುದಿಲ್ಲ. ದೇವರಿಗಿಂತಲೂ ನಮ್ಮ ಅಹಂಭಾವವೇ ಮುಖ್ಯವಾಗುತ್ತದೆ ಹೊರತು ದೇವರು ಧರ್ಮ ಮುಖ್ಯವಾಗುವುದಿಲ್ಲ. ಅಹಂಕಾರವನ್ನು ತ್ಯಜಿಸಿದಲ್ಲಿ ಮಾತ್ರವೇ ಭಗವಂತನನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಭಗವದ್ಗೀತೆಯ ತತ್ವಮಸಿ ಎಂಬ ತತ್ವ ಅದು. ನಮ್ಮಲ್ಲಿರುವ ಉದಾತ್ತ ತತ್ವಗಳು  ಗ್ರಂಥದಿಂದ ಹೊರಗೆ ಬರುವುದಿಲ್ಲ.

ಇತ್ತೀಚೆಗೆ ನಮ್ಮ ಬೀದಿಯಲ್ಲಿ ಗಣೇಶನನ್ನು ಕೂರಿಸುವುದಕ್ಕೆ ದೇಣಿಗೆ ಸಂಗ್ರಹಕ್ಕೆ ಹುಡುಗರು ಬಂದಿದ್ದರು. ನಾನು ಹೇಳಿದೆ,  ಹೀಗೆ ರಸ್ತೆಯಲ್ಲಿ ದೇವರನ್ನು ಕೂರಿಸುವುದರಲ್ಲಿ ನನಗೆ ನಂಬಿಕೆ ಇಲ್ಲ. ನನ್ನನ್ನು ವಿಚಿತ್ರವಾಗಿ ನೋಡಿದರು. ಒಬ್ಬ ದೈವ ದ್ವೇಷಿಯಂತೆ ಕಂಡಿತು. ಧರ್ಮ ವಿರೋಧಿ ಅನ್ನಿಸಿದರೂ ಅನ್ನಿಸಿರಬಹುದು. ಮನೆಯಲ್ಲಿ ಎರಡು ಹೊತ್ತು ನೂರೆಂಟು ಗಾಯತ್ರೀ ಜಪ ಮಾಡುವವನು ನಾನು ಅದು ಅವರಿಗೆಲ್ಲಿ ಆರಿವಾಗಬೇಕು? ಅವರವರ ಚಿಂತನೆಯ ರೀತಿಯಲ್ಲಿ ನಂಬಿದರೆ ಮಾತ್ರ ಅವರು ದೈವ ಭಕ್ತರು ಎನಿಸಿಕೊಳ್ಳುತ್ತಾರೆ.  ಇಲ್ಲಿ ದೇವರನ್ನು ನಂಬುವುದು ಎಂದರೆ ಅದು ಪ್ರದರ್ಶನಕ್ಕೆ ಯೋಗ್ಯವಾಗಿರಬೇಕು. ಯಾರದರೂ ನಮ್ಮನ್ನು ಗಮನಿಸುತ್ತಾರೆ ಎಂದಿದ್ದರೆ, ನಮ್ಮದು ಒಂದೆರಡು ನಮಸ್ಕಾರ ಪ್ರದಕ್ಷಿಣೆ ಹೆಚ್ಚಿರುತ್ತದೆ. ನಮ್ಮ ದಾನ ಧರ್ಮಗಳು ದೊಡ್ಡದಾಗಿರುತ್ತದೆ. ಯಾರೋ ನೊಡುತ್ತಾರೆ ಎಂದು ನಾವು ನಮಸ್ಕಾರ ಮಾಡಿದರೆ, ಆ ನಮಸ್ಕಾರದ ಪುಣ್ಯ ಫಲ ಯಾರಿಗೆ ಸಲ್ಲಬೇಕು?  ಮಾಡುವವನಿಗೋ ನೋಡುವವನಿಗೋ? ಈ ಸೂಕ್ಷ್ಮ ಅರ್ಥವಾಗಬೇಕಾದರೆ ತಲೆಯಲ್ಲಿ ಬುದ್ದಿಯ ವಾಸವಿರಬೇಕು. 

ದೇವರ ಬಗ್ಗೆ ಹೇಳಿದರೆ ದೇವರು ಶಾಪ ಕೊಟ್ಟುಬಿಡುತ್ತಾನೆ ಎಂದು ಭಯ ಹುಟ್ಟಿಸಿಬಿಡುತ್ತಾರೆ. ಭಯದಿಂದ ದೇವರ ಭಕ್ತಿ ಪ್ರಚೋದನೆಗೊಂಡರೆ ಅದು ಭಕ್ತಿ ಹೇಗಾಗುತ್ತದೆ. ಭಯ ಎಂಬುದು ತಾತ್ಕಾಲಿಕ.  ಭಯ ಕರಗಿದಾಗ ನಂಬಿಕೆಯೂ ಕಳೆದು ಹೋಗಬಹುದು. ನಾವು ಯಾವುದೋ ಭ್ರಮೆಗೊಳಗಾಗಿ ಯಾವುದನ್ನೂ ಮಾಡಬರದು. ಭ್ರಮೆ ಕರಗಿದಾಗ ಆ ಕಾರ್ಯದ ಮಹತ್ವವೂ ಹೋಗಿಬಿಡುತ್ತದೆ.  ಉದಾಹರಣೆಗೆ ನಾಳೆ ರೋಗಬರುತ್ತದೆ ಸಾಯುತ್ತೇನೆ ಅಂತ ಭ್ರಮೆಯಲ್ಲಿ ಯೋಗಾಭ್ಯಾಸ ಮಾಡಬಾರದು.  ಯೋಗಾಭ್ಯಾಸ ಅದು ಭ್ರಮಾತ್ಮಕ ಕ್ರಿಯೆಯಲ್ಲ. ಅದು ದೇಹದ ಹಸಿವನ್ನು ನೀಗಿಸುವಂತೆ ಜೀವನದ ಸಹಜ ಕ್ರಿಯೆಯಾಗಬೇಕು. ಹಾಗಾಗಿ ಅದನ್ನು ಸಹಜಯೋಗ ಎನ್ನುವುದು. ಬದುಕಿನ ಪ್ರತಿಯೊಂದು ಕರ್ಮವೂ ಭ್ರಮೆಯಿಂದ ಮಾಡಬಾರದು. 

ದೇವರು ಎಂಬುದು ಒಂದು ದಿವ್ಯ ಅನುಭವ. ಆ ದೇವರು ಎಲ್ಲೂ ಕಾಣುವುದಿಲ್ಲ. ನಾವು ಕಾಣಬೇಕು. ವಿವೇಕಾನಂದರು ಹೇಳಿದ್ದಾರೆ, ದೇವರು ಎಲ್ಲೂ ವ್ಯಕ್ತವಾಗುವುದಿಲ್ಲ. ನಾವು ಈ ಪ್ರಕೃತಿಯನ್ನು ಸೇವಿಸುವುದರಲ್ಲಿ ಎಲ್ಲರ ಸೇವೆ ಮಾಡುವುದರಲ್ಲಿ ಭಗವಂತನಿದ್ದಾನೆ. ಪ್ರತಿಯೊಬ್ಬರಲ್ಲು ಆತ್ಮ ರೂಪದಲ್ಲಿ ದೇವರು ಇರುತ್ತಾನೆ. ಆತನ ಸೇವೆ ಮಾಡುವುದೆಂದರೆ ದೇವರ ಸೇವೆ ಮಾಡಿದಂತೆ. ಇಂತಹ ಉದಾತ್ತ ತತ್ವಗಳನ್ನು ಪ್ರತಿಪಾದಿಸುವ ನಮ್ಮ ಧರ್ಮದಲ್ಲಿ ಹೀಗೆ ನಮ್ಮ ಆಚರಣೆಗೆ ಪರಧರ್ಮೀಯರನ್ನು ಪೀಡಿಸುವುದೆಂದರೆ ಅದು ಅಕ್ಷಮ್ಯ.  ಅಹಂ ಬ್ರಹ್ಮಾಸ್ಮಿ ಅಂತ ಶಂಕರಾಚಾರ್ಯರು ಬೋಧಿಸಿದರೂ ಎಲ್ಲರಲ್ಲು ಬಹ್ಮನ ಅಸ್ತಿತ್ವವನ್ನು ಕಾಣದೇ ಶಂಕರಾಚಾರ್ಯರನ್ನು ಗುರು ಅಂತ ಪೂಜಿಸುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲೋಂದು ಭಾವವಿದೆ, ಯಾರಿಗೋ ವಂಚನೆ ಮಾಡಿದ್ದು, ಅಥವಾ ಕಸಿದು ಕಿತ್ತು ಪಡೆದ ಅಪರಾಧಗಳ  ಪ್ರಾಯಶ್ಚಿತ್ತ ಅದನ್ನು ದೇವರಿಗೆ ಅರ್ಪಿಸಿವುದರಲ್ಲಿದೆ. ಹೇಗೋ ಅನ್ಯಾಯದಿಂದ ಸಂಪತ್ತನ್ನು ಸಂಪಾದಿಸಿ ದೇವರ ಹುಂಡಿಗೆ ಹಾಕಿದರೆ ನಾವು ಪಾಪದಿಂದ ಮುಕ್ತರಾಗುತ್ತೇವೆ. ಆದರೆ ದೇವರಿಗೆ ಅರ್ಪಿಸುವುದು ಪವಿತ್ರವಾಗಿರಬೇಕಾದರೆ ಅದು ಯಾರನ್ನೂ ಹಿಂಸಿಸದೆ, ಸತ್ಯ ನ್ಯಾಯದಿಂದ ಸಂಪಾದಿಸಿರಬೇಕು. ಈ ಪರಿಜ್ಜಾನ ಮೂಡುವ ತನಕ ಎಷ್ಟು ದೊಡ್ಡ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದರೂ ಮೂರ್ತಿಯ ಗಾತ್ರದಷ್ಟೇ ನಮ್ಮ ಪಾಪವೂ ಬೆಳೆಯಬಹುದೇ ಹೊರತು ಪುಣ್ಯ ಸಂಚಯನ ಸಾಧ್ಯವಿಲ್ಲ.